Category: ಜಿಲ್ಲಾ‌ಸುದ್ದಿ

  • ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಇಬ್ಬರು ಮಹಿಳೆಯರು.!

    ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಇಬ್ಬರು ಮಹಿಳೆಯರು.!

    ಕೋಲಾರ: ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಕೋಲಾರ ಹೊರವಲಯದ ಅರಹಳ್ಳಿ ಕೆರೆಯಲ್ಲಿ ನಡೆದಿದೆ.

    ಮೃತರನ್ನು ಕೋಲಾರ ನಗರದ ನಿಸಾರ್ ನಗರದ ಮೊಹಮದಿ (25) ಹಾಗೂ ಬೆಂಗಳೂರಿನ ಸಲ್ಮಾ (26) ಎಂದು ಗುರುತಿಸಲಾಗಿದೆ. ಮಕ್ಕಳೊಂದಿಗೆ ಕೆರೆಗೆ ಬಟ್ಟೆ ತೊಳೆಯಲು ಮಹಿಳೆಯರು ಬಂದಿದ್ದರು. ಈ ವೇಳೆ ಆಟವಾಡುತ್ತಾ ಮಕ್ಕಳು ನೀರಿನಲ್ಲಿ ಮುಳುಗುವ ಹಂತದಲ್ಲಿದ್ದರು. ತಕ್ಷಣ ನೀರಿಗಿಳಿದ ಮೊಹಮದಿ ಮಕ್ಕಳನ್ನು ರಕ್ಷಿಸಿದ್ದಾಳೆ.

    ಮಕ್ಕಳನ್ನು ರಕ್ಷಿಸಿದ ಬಳಿಕ ಆಕೆ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಆಗ ರಕ್ಷಣೆಗೆ ತೆರಳಿದ ಸಲ್ಮಾ ಸಹ ನೀರಿನಲ್ಲಿ ಮುಳುಗಿದ್ದಾಳೆ. ಇದನ್ನು ಕಂಡ ಸ್ಥಳೀಯರು ರಕ್ಷಣೆಗೆ ಬರುವುದರೊಳಗೆ ಇಬ್ಬರು ಜಲಸಮಾಧಿಯಾಗಿದ್ದಾರೆ.

    ಮೊಹಮದಿ ಮನೆಯಲ್ಲಿ ಮದುವೆ ಇದ್ದ ಕಾರಣ ಸಲ್ಮಾ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ

  • ಗಂಡ ಮತ್ತು 7 ವರ್ಷದ ಮಗುವನ್ನು ಬಿಟ್ಟು ಥಾರ್ ಕಾರಿನಲ್ಲಿ ಪ್ರಿಯಕರನ ಜೊತೆ ತಾಳಿ ಕಟ್ಟಿಸಿಕೊಂಡ ಮಹಿಳೆ.!

    ಗಂಡ ಮತ್ತು 7 ವರ್ಷದ ಮಗುವನ್ನು ಬಿಟ್ಟು ಥಾರ್ ಕಾರಿನಲ್ಲಿ ಪ್ರಿಯಕರನ ಜೊತೆ ತಾಳಿ ಕಟ್ಟಿಸಿಕೊಂಡ ಮಹಿಳೆ.!

    ಹಾಸನದ ಮುಕಂದೂರು ಗ್ರಾಮದ ಹರ್ಷಿತಾ ಎಂಬಾಕೆ ಎಂಟು ವರ್ಷದ ದಾಂಪತ್ಯ ಹಾಗೂ ಏಳು ವರ್ಷದ ಮಗನನ್ನು ಬಿಟ್ಟು ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ಮದುವೆಯಾಗಿದ್ದಾರೆ. ಆಸ್ಪತ್ರೆಗೆ ಹೋಗುವ ನೆಪದಲ್ಲಿ ಸಾಂತ್ವನ ಕೇಂದ್ರದಿಂದ ಹೊರಬಂದ ಆಕೆ, ಪ್ರಿಯಕರನ ಜೊತೆ ಪರಾರಿಯಾಗಿ ಕಾರಿನಲ್ಲೇ ಮದುವೆಯಾಗಿರುವ ವಿಚಿತ್ರ ಪ್ರಕರಣ ಹಾಸನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಎಂಟು ವರ್ಷಗಳ ಕಾಲ ಪತಿಯೊಂದಿಗೆ ಸಂಸಾರ ನಡೆಸಿದ್ದ ಗೃಹಿಣಿಯೊಬ್ಬರು, ಈಗ ತನ್ನ ಏಳು ವರ್ಷದ ಮಗ ಹಾಗೂ ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಕಾರಿನಲ್ಲೇ ವಿವಾಹವಾಗಿರುವ ವಿಚಿತ್ರ ಘಟನೆ ಹಾಸನದಲ್ಲಿ ನಡೆದಿದೆ.

    ಒಂದು ಬಾರಿ ಓಡಿಹೋಗಲು ಯತ್ನಿಸಿದ್ದಾಗ ಪೋಷಕರ ದೂರಿನ ಮೇರೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಮನವೊಲಿಸಿ ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು ಎಂಬುದು ತಿಳಿದುಬಂದಿದೆ. ಆದರೆ, ನಂತರ ಅಲ್ಲಿಂದಲೂ ಹೇಗೋ ತಪ್ಪಿಸಿಕೊಂಡ ಆಕೆ, ಪ್ರಿಯಕರನ ಜತೆ ಓಡಿಹೋಗಿ ಕಾರಿನಲ್ಲೇ ಮದುವೆಯಾಗಿದ್ದಾರೆ!

    ಘಟನೆಯ ವಿವರ:

    ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮುಂಡಗೋಡು ಗ್ರಾಮದ ಹರ್ಷಿತಾಗೆ 2017ರಲ್ಲಿ ಹಾಸನ ತಾಲೂಕಿನ ಮುಕಂದೂರು ಗ್ರಾಮದ ಪ್ರಕಾಶ್ ಅವರೊಂದಿಗೆ ವಿವಾಹವಾಗಿತ್ತು. ಪ್ರಕಾಶ್ ಅವರು ಹರ್ಷಿತಾ ಅವರ ಅತ್ತೆಯ ಮಗನಾಗಿದ್ದು, ದಂಪತಿಗೆ ಏಳು ವರ್ಷದ ಗಂಡು ಮಗನಿದ್ದಾನೆ. ಮಾರ್ಚ್ 30ರಂದು ‘ಆಸ್ಪತ್ರೆಗೆ ಹೋಗಿ ಬರುತ್ತೇನೆ’ ಎಂದು ಮನೆಯಿಂದ ಹೋದ ಹರ್ಷಿತಾ ವಾಪಸ್ ಬಂದಿರಲಿಲ್ಲ.

    ಪೊಲೀಸ್ ಠಾಣೆಯಲ್ಲಿಯೇ ಹಠ!

    ಮಗಳು ಕಾಣೆಯಾಗಿರುವ ಬಗ್ಗೆ ಹರ್ಷಿತಾ ಪೋಷಕರು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹರ್ಷಿತಾಳನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು. ಈ ವೇಳೆ ಪತಿ ಪ್ರಕಾಶ್ ಜೊತೆ ಹೋಗಲು ನಿರಾಕರಿಸಿದ ಹರ್ಷಿತಾ, ತನ್ನ ಪ್ರಿಯಕರ ಸಚಿನ್ ಜೊತೆಗೇ ಹೋಗುವುದಾಗಿ ಹಠ ಹಿಡಿದಿದ್ದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದರು.

    ಆಸ್ಪತ್ರೆಗೆ ಹೋಗುವ ನೆಪದಲ್ಲಿ ಮತ್ತೆ ಪರಾರಿ:

    ಸಾಂತ್ವನ ಕೇಂದ್ರದಲ್ಲಿದ್ದ ಹರ್ಷಿತಾ, ತನಗೆ ಆರೋಗ್ಯ ಸರಿಯಿಲ್ಲ ಎಂದು ನಾಟಕವಾಡಿ ಆಸ್ಪತ್ರೆಗೆ ಹೋಗುವ ನೆಪದಲ್ಲಿ ಹೊರಬಂದಿದ್ದಾರೆ. ಬಳಿಕ ಅಲ್ಲಿಂದಲೇ ತನ್ನ ಪ್ರಿಯಕರ ಸಚಿನ್ ಜೊತೆ ಕಾರಿನಲ್ಲಿ ತೆರಳಿ ವಿವಾಹವಾಗಿದ್ದಾರೆ.

    ಮಗ ಹಾಗೂ ಪತಿಯನ್ನು ತೊರೆದು ಪ್ರಿಯಕರನ ಜೊತೆ ಹೋದ ಹರ್ಷಿತಾಳ ಕೃತ್ಯಕ್ಕೆ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಗಳ ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದಿಂದ 5 ಜೀವಗಳಿಗೆ ಬೆಳಕು ನೀಡಿದ ಪೋಷಕರು!

    ಮಗಳ ಸಾವಿನಲ್ಲೂ ಸಾರ್ಥಕತೆ: ಅಂಗಾಂಗ ದಾನದಿಂದ 5 ಜೀವಗಳಿಗೆ ಬೆಳಕು ನೀಡಿದ ಪೋಷಕರು!

    ಹಾಸನ: ಅಪಘಾತದಿಂದ ಮೆದುಳು ನಿಷ್ಕ್ರಿಯವಾಗಿದ್ದ ಮಗಳ ಅಂಗಾಂಗ ದಾನ ಮಾಡಿ ಪೋಷಕರು ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

    ಅರಸೀಕೆರೆ ತಾಲ್ಲೂಕಿನ, ಕಾರೇಹಳ್ಳಿ ಗ್ರಾಮದ ನಿವಾಸಿ ಮೋನಿಕಾ (18) ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದರು.

    ಏ.5ರಂದು ಗೀಜಿಹಳ್ಳಿ ಎಪಿಎಂಸಿ ಉಪ ಪ್ರಾಂಗಣದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯನ್ನು ಕರೆದುಕೊಂಡು ಬರಲು ಸ್ಕೂಟರ್‌ನಲ್ಲಿ ಹೋಗಿದ್ದ ವೇಳೆ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿತ್ತು. ತೀವ್ರವಾಗಿ ಗಾಯಗೊಂಡ ಮೋನಿಕಾಳನ್ನು ತಕ್ಷಣ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ತೀವ್ರ ಪೆಟ್ಟಾಗಿದ್ದರಿಂದ ಯುವತಿ ಸ್ಥಿತಿ ಗಂಭೀರವಾಗಿದ್ದು ನಂತರ ಮೆದುಳು ನಿಷ್ಕ್ರಿಯವಾಗಿತ್ತು. ವೈದ್ಯರು ಮೋನಿಕಾಳ ಪೋಷಕರಿಗೆ ಈ ವಿಷಯ ತಿಳಿಸಿದ್ದಾರೆ. ಪೋಷಕರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ನಂತರ ಮಗಳ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದು, 5 ಜೀವಗಳಿಗೆ ಹೊಸ ಬೆಳಕು ನೀಡಿದ್ದಾರೆ.

    ನೂರಾರು ಆಸೆ, ಕನಸುಗಳೊಂದಿಗೆ ಬದುಕು ಸಾಗಿಸಬೇಕಾಗಿದ್ದ ಯುವತಿ, ವಿಧಿಯ ಆಟಕ್ಕೆ ಬಲಿಯಾಗಿದ್ದಾರೆ. ತನ್ನ ಜೀವನದ ಕೊನೆಯ ಕ್ಷಣದಲ್ಲಿಯೇ ಮಾನವೀಯತೆಯ ಮಹತ್ತರ ಸಂದೇಶವೊಂದನ್ನು ಬಿಟ್ಟು ಹೋಗುವ ಮೂಲಕ ಮೋನಿಕಾ ಅನೇಕ ಹೃದಯಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾಳೆ.

  • ಬೆಟ್ಟಿಂಗ್‌ ಆಟದಲ್ಲಿ ಭಾರಿ ನಷ್ಟ; ಸಾಲಗಾರರ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

    ಬೆಟ್ಟಿಂಗ್‌ ಆಟದಲ್ಲಿ ಭಾರಿ ನಷ್ಟ; ಸಾಲಗಾರರ ಬಾಧೆ ತಾಳದೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

    ಕಲಬುರಗಿ: ರಾಜ್ಯದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುತ್ತಿದ್ದು, ಬೆಟ್ಟಿಂಗ್ ಹೆಚ್ಚಾಗುತ್ತಿದೆ. ಬೆಟ್ಟಿಂಗ್‌ನಲ್ಲಿ ಭಾರಿ ನಷ್ಟವಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಡ್ಯಾಂಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ನಾಗೂರ ಬಳಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದ ವ್ಯಕ್ತಿಯನ್ನು ಕಾಳಗಿ ತಾಲೂಕಿನ ರುಮ್ಮನಗೂಡ್ ನಿವಾಸಿ ಚಂದ್ರಕಾಂತ ದೇಸಾಯಿ(40) ಎಂದು ಗುರುತಿಸಲಾಗಿದೆ.

    ಚಂದ್ರಕಾಂತ ದೇಸಾಯಿ ಅವರು ಐಪಿಎಲ್ ಬೆಟ್ಟಿಂಗ್ ಆಡಿ ಸಿಕ್ಕಾಪಟ್ಟೆ ಹಣ ಕಳೆದುಕೊಂಡಿದ್ದರು ಮತ್ತು ಸಾಲ ಮಾಡಿ, ಸಾಲಗಾರರ ಕಿರುಕುಳಕ್ಕೆ ಬೇಸತ್ತು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

    ಬೆಟ್ಟಿಂಗ್ ಚಟಕ್ಕೆ ಬಿದ್ದಿದ್ದ ಚಂದ್ರಕಾಂತ ತನ್ನ ಬಳಿಯಿದ್ದ ಹಣವನ್ನೆಲ್ಲಾ ಕಳೆದುಕೊಂಡಿದ್ದಲ್ಲದೆ, ಜೂಜಿಗಾಗಿ ಹಲವರಿಂದ ದೊಡ್ಡ ಮೊತ್ತದ ಸಾಲವನ್ನೂ ಮಾಡಿದ್ದರು. ಬೆಟ್ಟಿಂಗ್‌ನಲ್ಲಿ ಹಣ ಕೈಕೊಟ್ಟಿದ್ದರಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇತ್ತ ಸಾಲಗಾರರು ಹಣ ವಾಪಸ್ ನೀಡುವಂತೆ ಒತ್ತಡ ಹೇರುತ್ತಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

    ನಾಗೂರ ಸೇತುವೆ ಬಳಿ ತಲುಪಿದ ಚಂದ್ರಕಾಂತ ಅವರು, ತಮ್ಮ ಬೈಕ್ ಮತ್ತು ಮೊಬೈಲ್ ಫೋನ್ ಅನ್ನು ಸೇತುವೆ ಮೇಲೆ ಇಟ್ಟು, ಬೆಣ್ಣೆತೊರಾ ಜಲಾಶಯದ ಹಿನ್ನೀರಿಗೆ ಜಿಗಿದಿದ್ದಾರೆ. ಸ್ಥಳದಲ್ಲಿ ಬೈಕ್ ಮತ್ತು ಮೊಬೈಲ್ ಪತ್ತೆಯಾದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ಸ್ಥಳಕ್ಕೆ ಬೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಾವೇರಿಯಲ್ಲಿ ಹೂಳು ತೆಗೆಯುವಾಗ ಪುರಾತನ ಬಸವಣ್ಣ ಮೂರ್ತಿ ಪತ್ತೆ

    ಹಾವೇರಿಯಲ್ಲಿ ಹೂಳು ತೆಗೆಯುವಾಗ ಪುರಾತನ ಬಸವಣ್ಣ ಮೂರ್ತಿ ಪತ್ತೆ

    ಹಾವೇರಿ : ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಗ್ರಾಮದ ಬಳಿಯಿರುವ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಪುರಾತನ ಕಾಲದ ಬಸವಣ್ಣನ ಮೂರ್ತಿಯೊಂದು ಪತ್ತೆಯಾಗಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಅಪಾರ ಸಂಭ್ರಮ ಮನೆ ಮಾಡಿದೆ.

    ಯಾವ ರೀತಿ ಪತ್ತೆಯಾಯಿತು?
    ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಫಲವತ್ತಾದ ಮಣ್ಣನ್ನು ಸಾಗಿಸಲು ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ಆರಂಭಿಸಿದ್ದರು. ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆಯುತ್ತಿರುವಾಗ, ಯಂತ್ರಕ್ಕೆ ದೊಡ್ಡ ಕಲ್ಲು ಅಡ್ಡಲಾಯಿತು. ಮಣ್ಣು ಹೊರಗೆ ಬರದಿದ್ದಾಗ ಕಾರ್ಮಿಕರು ಕೈಯಿಂದ ಅಗೆದು ನೋಡಿದಾಗ, ಸುಮಾರು 3 ಅಡಿ ಎತ್ತರದ ಪುರಾತನ ಬಸವಣ್ಣ ಮೂರ್ತಿ ಕಂಡುಬಂದಿದೆ. ಮುಂದೆ ಮಣ್ಣು ತೆಗೆಯುವುದನ್ನು ಮುಂದುವರಿಸಿದಾಗ, ಬಸವಣ್ಣನ ವಾಹನವಾದ ನಂದಿ ಮೂರ್ತಿಯೂ ಪತ್ತೆಯಾಗಿದೆ.

    ಮೂರ್ತಿಯ ವಿಶೇಷತೆ
    ಕಲ್ಲಿನಲ್ಲಿ ಕೆತ್ತಲಾದ ಈ ಮೂರ್ತಿಯು ಅಂದಿನ ಶಿಲ್ಪಕಲೆಯ ಸೊಬಗನ್ನು ಪ್ರತಿಬಿಂಬಿಸುತ್ತದೆ. ಬಸವಣ್ಣನ ಮೂರ್ತಿಯಲ್ಲಿ ಲಿಂಗ ಧಾರಣೆ, ಜಪಮಾಲೆ ಮತ್ತು ವಿಶಿಷ್ಟ ಕಿರೀಟದ ವಿನ್ಯಾಸವನ್ನು ಕಾಣಬಹುದು. ನಂದಿ ಮೂರ್ತಿಯೂ ಸಹ ಅಂದವಾಗಿ ಕೆತ್ತಲ್ಪಟ್ಟಿದೆ.

    ಭಕ್ತರ ಪ್ರತಿಕ್ರಿಯೆ
    ಸುದ್ದಿ ಕೇಳಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಕೆರೆಯ ಬಳಿಗೆ ಆಗಮಿಸಿದರು. ಮೂರ್ತಿಯನ್ನು ಸ್ವಚ್ಛಗೊಳಿಸಿ, ಹಾಲು, ಹಣ್ಣು, ಹೂವುಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮಸ್ಥರು ಈ ಮೂರ್ತಿಯನ್ನು ಗ್ರಾಮದ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡಲು ನಿರ್ಧರಿಸಿದ್ದಾರೆ.

    ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯವನ್ನು ಮತ್ತೆ ಆರಂಭಿಸಲಾಗಿದೆ. ಮತ್ತಷ್ಟು ಪುರಾತನ ವಿಗ್ರಹಗಳು ಅಥವಾ ಐತಿಹಾಸಿಕ ಅವಶೇಷಗಳು ಸಿಗುವ ಸಾಧ್ಯತೆಯಿರುವುದರಿಂದ, ಗ್ರಾಮಸ್ಥರು ಎಚ್ಚರಿಕೆಯಿಂದ ಅಗೆಯುವ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

  • ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್‌ ಸ್ಥಳದಲ್ಲೇ ಸಾವು

    ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್‌ ಸ್ಥಳದಲ್ಲೇ ಸಾವು

    ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್ (40) ದಾರುಣವಾಗಿ ಮೃತಪಟ್ಟಿದ್ದಾರೆ.

    ನಿನ್ನೆ ಕೆಲಸ ಮುಗಿಸಿಕೊಂಡು ಕುಶಾಲನಗರದಿಂದ ತಮ್ಮ ಸ್ವಗ್ರಾಮ ಹೊಸಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಹರೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹರೀಶ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಕೊಡಗಿನ ಸುಂದರ ಪರಿಸರದ ನಡುವೆ ನಡೆದ ಈ ದುರಂತವು ಎಲ್ಲರಲ್ಲೂ ವಿಷಾದ ಮೂಡಿಸಿದೆ

  • ಮನ ಕಲಕುವ ಘಟನೆ : ಕಾಫಿ ತೋಟದಲ್ಲಿ ನವಜಾತ ಶಿಶು ಪತ್ತೆ.!

    ಮನ ಕಲಕುವ ಘಟನೆ : ಕಾಫಿ ತೋಟದಲ್ಲಿ ನವಜಾತ ಶಿಶು ಪತ್ತೆ.!

    ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಅಡಿಕೆ ಹಾಳೆಯಲ್ಲಿ ಸುತ್ತಿಡಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸ್ಥಳೀಯರ ಮಾಹಿತಿ ಮೇರೆಗೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.

    ಅಸ್ವಸ್ಥಗೊಂಡಿದ್ದ ಮಗುವಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಗುವನ್ನು ಬಿಟ್ಟು ಹೋದ ಪೋಷಕರಿಗಾಗಿ ತನಿಖೆ ನಡೆಸುತ್ತಿದ್ದಾರೆ.

    ಜನ್ಮ ನೀಡಿದ ಹೆತ್ತವರೇ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಕರುಣಾಜನಕ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟವೊಂದರಲ್ಲಿ ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.

    ಇಂದು (ಏಪ್ರಿಲ್ 11) ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಶಿಶು ಕಂಡುಬಂದಿದೆ.

    ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವು ಸ್ವಲ್ಪ ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಮಡಿಕೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದ್ದು, ಶಿಶುವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವಜಾತ ಶಿಶುವನ್ನು ಕಾಫಿ ತೋಟದಲ್ಲಿ ಬಿಟ್ಟು ಹೋದ ಪಾಪಿ ಪೋಷಕರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಹೆರಿಗೆಯಾದವರ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

  • ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳ ರಕ್ಷಣಾ ಘಟಕದಲ್ಲಿದ್ದ ವಿದ್ಯಾರ್ಥಿನಿ ಲಾವಣ್ಯ ಸಾಧನೆ.!

    ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳ ರಕ್ಷಣಾ ಘಟಕದಲ್ಲಿದ್ದ ವಿದ್ಯಾರ್ಥಿನಿ ಲಾವಣ್ಯ ಸಾಧನೆ.!

    ಚಿಕ್ಕಬಳ್ಳಾಪುರ : ತಂದೆ-ತಾಯಿಯನ್ನು ಕಳೆದುಕೊಂಡು ತನ್ನ 12ರ ವಯಸ್ಸಿನಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದ ಅನಾಥ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾಳೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿಯ ಲಾವಣ್ಯ ಎಂಬ ಹುಡುಗಿಯ ತಂದೆ ಶ್ರೀನಿವಾಸ್ 2019ರಲ್ಲಿ ಮೃತಪಟ್ಟಿದ್ದು, 2021ರಲ್ಲಿ ತಾಯಿ ಚಂದ್ರಕಲಾ ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಈಕೆಯ ತಾಯಿಯ ಅಂತ್ಯಸಂಸ್ಕಾರಕ್ಕೆ ಯಾರು ಬರದಿದ್ದಾಗ ಜೆಸಿಬಿ ಬಕೆಟ್‌ನಲ್ಲಿ ಶವ ಸಾಗಿಸಲಾಗಿತ್ತು.

    ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದ ಲಾವಣ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದಳು. ಇಲ್ಲಿಂದಲೇ ಚಿಕ್ಕಬಳ್ಳಾಪುರದ ವಿಶ್ವವಿವೇಕ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ 600ಕ್ಕೆ 541 ಅಂಕ ಪಡೆದು ಸಾಧನೆ ಮಾಡಿದ್ದಾಳೆ.

    ಲಾವಣ್ಯಳಿಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನೀಡಿದ ಮಾರ್ಗದರ್ಶನ ಸಹಕರಿಯಾಗಿದೆ. ಜೊತೆಗೆ ಬಾಲ್ಯದಲ್ಲಿ ಎದುರಾದ ಕಷ್ಟಗಳು ಆಕೆಯನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ ಎಂದು ಹೇಳಬಹುದು.

  • ಅಪ್ರಾಪ್ತ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಕಾಮುಕ ಶಿಕ್ಷಕ!ಗರ್ಭಪಾತಕ್ಕೆ ನೆರವಾದ ವೈದ್ಯೆಯೂ ಅರೆಸ್ಟ್!

    ಅಪ್ರಾಪ್ತ ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ ಕಾಮುಕ ಶಿಕ್ಷಕ!ಗರ್ಭಪಾತಕ್ಕೆ ನೆರವಾದ ವೈದ್ಯೆಯೂ ಅರೆಸ್ಟ್!

    ಚಿತ್ರದುರ್ಗ: ದೈವ ಸ್ವರೂಪಿ ಎನಿಸಿದ್ದ ಶಿಕ್ಷಕರು ಶಿಶುಗಳ ಮುಂದೆ ಕಾಮುಕರಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಕರೇ ಬಾಲಕಿಯರ ಮೇಲೆ ಬಲತ್ಕಾರಕ್ಕೆ ಯತ್ನಿಸುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ಪಡುವಂತಾಗಿದೆ. ಒಂದು ಕಾಲದಲ್ಲಿ ಮಕ್ಕಳು ಶಾಲೆಗೆ ಹೋದರೆ ಸುರಕ್ಷಿತವಾಗಿರುತ್ತಾರೆ ಎಂಬ ಭಾವನೆಯಿತ್ತು. ಇದೀಗ ಶಾಲಾ ವಿದ್ಯಾರ್ಥಿನಿಯರ ಮೇಲೆ ಶಾಲಾ ಕೊಠಡಿಯೊಳಗೆ ಶಿಕ್ಷಕರಿಂದಲೇ ಬಲತ್ಕಾರ ನಡೆಯುತ್ತಿರುವುದು ಆಘಾತಕಾರಿಯಾಗಿದೆ. ಅದಕ್ಕೆ ಇಂಬು ಕೊಡುವಂತೆ ಚಿತ್ರದುರ್ಗದಲ್ಲಿ ಮತ್ತೊಂದು ಪೋಕ್ಸೊ ಪ್ರಕರಣ ಬೆಳಕಿಗೆ ಬಂದಿದೆ.

    ವಿದ್ಯೆ ಕಲಿಸಬೇಕಾದ ಗುರುವೇ ಕಾಮಪಿಶಾಚಿ:

    ವಿದ್ಯೆ ಕಲಿಸಬೇಕಾದ ಗುರುವೇ ಕಾಮಪಿಶಾಚಿಯಾದ ಘನಘೋರ ಘಟನೆಯೊಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಬೆಳಕಿಗೆ ಬಂದಿದೆ. 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಗೆ ಪುಸಲಾಯಿಸಿ ಅದೇ ಶಾಲೆಯ ಶಿಕ್ಷಕನೊಬ್ಬ ಬಲತ್ಕಾರ ಎಸಗಿದ್ದು ಇದರ ಪರಿಣಾಮ ವಿದ್ಯಾರ್ಥಿನಿ ಗರ್ಭವತಿಯಾಗಿದ್ದಾಳೆ ಪ್ರಕರಣ ಈಗ ಪೊಲೀಸ್ ಮೆಟ್ಟಿಲೇರಿದೆ.

    ವಿದ್ಯಾರ್ಥಿನಿಯೊಂದಿಗೆ ಗಣಿತ ಶಿಕ್ಷಕನ ಕಾಮದಾಟ:
    ಚಳ್ಳಕೆರೆ ವ್ಯಾಪ್ತಿಯಲ್ಲಿ ಬರುವ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕ ಹೆಚ್.ಓ. ರಾಜಣ್ಣ ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಶಾಲಾ ಕೊಠಡಿಯೊಳಗೆ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದರಿಂದ ಬಾಲಕಿ ಗರ್ಭ ಧರಿಸಿದ್ದಳು ಎನ್ನಲಾಗಿದೆ. ಪೋಷಕರಿಗೆ ತಿಳಿದರೆ ಸಮಸ್ಯೆ ಎಂದರಿತು ಎಂದು ಆರೋಪಿ ಶಿಕ್ಷಕ ವಿದ್ಯಾರ್ಥಿನಿಗೆ ಗರ್ಭಪಾತ ಮಾಡಿಸಿದ್ದಾನೆಂದು ಆರೋಪಿಸಲಾಗಿದೆ.

    ಬಾಲಕಿ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆಯೇ ವಿಷಯ ಮುಚ್ಚಿಹಾಕಲು ಆರೋಪಿ ಶಿಕ್ಷಕ ಯತ್ನಿಸಿದ್ದಾನೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಹೋಮ್‌ನ ವೈದ್ಯೆ ಶಂಕರಲಕ್ಷ್ಮೀ ಎಂಬುವವರ ಬಳಿ ಈ ವಿಷಯ ಮಾತಾಡಿ ಬಾಲಕಿಗೆ ಅಕ್ರಮವಾಗಿ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

    ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು:
    ವಿಷಯ ತಿಳಿದ ಮಕ್ಕಳ ರಕ್ಷಣಾಧಿಕಾರಿ ರೇಖಾ ಅವರು ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕಾಮುಕ ಶಿಕ್ಷಕ ರಾಜಣ್ಣ ಹಾಗೂ ಸಹಕರಿಸಿದ ವೈದ್ಯೆ ಶಂಕರಲಕ್ಷ್ಮೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

    ಸದ್ಯ ಪೊಲೀಸರು ಕಾಮುಕ ಶಿಕ್ಷಕ ರಾಜಣ್ಣ ಹಾಗೂ ಆತನಿಗೆ ಸಾಥ್ ನೀಡಿದ ವೈದ್ಯೆ ಶಂಕರಲಕ್ಷ್ಮೀ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಶಾಲೆಯ ಆವರಣದಲ್ಲೇ ವಿದ್ಯಾರ್ಥಿನಿಯ ಮೇಲೆ ಇಂತಹ ದೌರ್ಜನ್ಯ ನಡೆದಿರುವುದು ಪೋಷಕರಲ್ಲಿ ಭೀತಿ ಮೂಡಿಸಿದ್ದು, ಜಿಲ್ಲೆಯಾದ್ಯಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಗುವಿನಂತೆ ನೋಡಿಕೊಳ್ಳಬೇಕಾದ ಶಿಕ್ಷಕನೇ ಈ ರೀತಿ ನಡೆದುಕೊಂಡಿರುವುದು ಸಮಾಜ ತಲೆತಗ್ಗಿಸುವಂತಿದೆ.

  • ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ.

    ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟ: ರಾಜ್ಯಕ್ಕೆ ಉಡುಪಿ ಪ್ರಥಮ.

    ಬೆಂಗಳೂರು: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಇಂದು (ಏಪ್ರಿಲ್ 09) ಪ್ರಕಟವಾಗಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಫಲಿತಾಂಶ ಲಭ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ವೀಕ್ಷಿಸಬಹುದಾಗಿದೆ.

    2025 26ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇದೀಗ ಪ್ರಕಟವಾಗಿದ್ದು ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ವಾಣಿಜ್ಯ ವಿಭಾಗದಲ್ಲಿ ದಿಶಾ ರಾಜ್ಯಕ್ಕೆ ಟಾಪರ್ ಹೊರಹೊಮ್ಮಿದ್ದಾರೆ.
    ಇನ್ನು ಕಲಾ ವಿಭಾಗದಲ್ಲಿ ಸಂಗೀತ ಎನ್ನುವ ವಿದ್ಯಾರ್ಥಿನಿ 600 ಕ್ಕೆ 598 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಅದೇ ರೀತಿಯಾಗಿ ತುಮಕೂರು ವಿದ್ಯಾವಾಹಿನಿ ಕಾಲೇಜ್, ವಿದ್ಯಾರ್ಥಿಯಾಗಿರುವ ರೋಹನ್ ಎಂಬ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 597 ಪಡೆದು ಎರಡನೇ ಸ್ಥಾನ ಪಡೆದಿದ್ದಾನೆ. ವಿಜ್ಞಾನ ವಿಷಯದಲ್ಲಿ 600 ಕ್ಕೆ 593 ಅಂಕ ಗಳಿಸಿ ಕೋಲಾರದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿ ಶ್ರೀಲಯ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.ವಿಜ್ಞಾನ ವಿಷಯದಲ್ಲಿ ಶೇಕಡಾ 98 ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾರೆ.

    9 ವಿದ್ಯಾರ್ಥಿಗಳಿಗೆ 590ಕ್ಕಿಂತ ಅಧಿಕ ಅಂಕ
    ವಾಣಿಜ್ಯ ವಿಭಾಗದಲ್ಲಿ 9 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಒಂದೇ ಕಾಲೇಜಿನ 9 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.
    ಬೆಂಗಳೂರಿನ ರಾಜಾಜಿನಗರದ ASC ಕಾಲೇಜಿನ 9 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
    ಉಡುಪಿಗೆ ಮೊದಲ ಸ್ಥಾನ
    ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಸ್ಥಾನ ಪಡೆದಿವೆ. ಈ ಬಾರಿಯೂ ಈ ಎರಡು ಜಿಲ್ಲೆಗಳು ಅತ್ಯಧಿಕ ಪಾಸ್ ಪ್ರಮಾಣ ದಾಖಲಿಸಿವೆ.
    ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳೂ ಉತ್ತಮ ಸಾಧನೆ ತೋರಿದ್ದು, ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
    ಅತಿ ಹೆಚ್ಚು ಅಂಕ ಪಡೆದ ಟಾಪರ್ ಗಳು
    ವಾಣಿಜ್ಯ‌ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅವರು 600 ಅಂಕಗಳಿಗೆ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
    ಇನ್ನು ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಇಂದು ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರಾದ ಅರ್ಚನಾ ಮತ್ತು ಸಂಗೀತ ಅವರು 600 ಅಂಕಗಳಿಗೆ 598 ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
    ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಮನ್ಯು ಎಸ್. ಶೆಟ್ಟಿ ಅವರು 600 ಅಂಕಗಳಿಗೆ 598 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.