Category: ಜಿಲ್ಲಾ‌ಸುದ್ದಿ

  • ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು : ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ.

    ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು : ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ.

    ತುಮಕೂರು:- ಡಿವೋರ್ಸ್‌ ಕೊಡು ಎಂದು ಕೇಳುತ್ತಿದ್ದ ಪತ್ನಿಗೆ ಗಂಡ ಮಚ್ಚಿನೇಟು ಕೊಟ್ಟು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಟೆಯಲ್ಲಿ ನಡೆದಿದೆ.

    ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ನಾಗಮಣಿ ಹಾಗೂ ಮಾರುತಿ ಕಳೆದ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮೊದಲೆಲ್ಲಾ ಸಂಸಾರ ಚೆನ್ನಾಗಿಯೇ ಇತ್ತು. ಮದುವೆ ವೇಳೆ ನಾಗವೇಣಿಗೆ ಯಾವುದೇ ಕೆಲಸ ಇರಲಿಲ್ಲ. ಇವರಿಬ್ಬರ ದಾಂಪತ್ಯದ ಫಲವಾಗಿ ಇಬ್ಬರು ಮುದ್ದಾದ ಮಕ್ಕಳೂ ಇವೆ. ಗಂಡ ಗಾರೆ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ದ. ಈ ಮಧ್ಯೆ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಸಿಕ್ಕಿತ್ತು. ಈ ಕೆಲಸ ಸಿಕ್ಕ ನಂತರ ಗಂಡ ಹೆಂಡತಿ ಮಧ್ಯೆ ಬಿರುಗಾಳಿ ಶುರುವಾಗಿದ್ದು.

    ಯಾವಾಗ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಒಲಿದು ಬಂತೋ ಅಂದಿನಿಂದ ಆಕೆಯ ಜೀವನ ಶೈಲಿಯೇ ಬದಲಾಗಿತ್ತು ಎಂಬ ಆರೋಪವಿದೆ. ಗಂಡನಿಂದ ವಿಚ್ಛೇದನ ಪಡೆಯೋದಕ್ಕೆ ನಾಗವೇಣಿ ಮುಂದಾಗಿದ್ದಳು ಎಂದು ಆರೋಪಿಸಲಾಗಿದೆ‌. ಈ ಮಧ್ಯೆ ಗಂಡ ಮಾರುತಿ ತನ್ನ ಪತ್ನಿ ಯಾರದ್ದೋ ಜೊತೆಗೆ ಸಂಬಂಧ ಇಟ್ಕೊಂಡಿದ್ದಾಳೆ ಅನ್ನೋ ಅನುಮಾನಕ್ಕೆ ಬಿದ್ದಿದ್ದ. ಹೀಗಾಗಿ ಜಗಳ ಶುರುವಾಗ್ತಿದ್ದಂತೆ ಪೊಲೀಸ್‌ ಠಾಣೆ ಮೆಟ್ಟಿಲನ್ನೂ ಏರಿದ್ರು.

    ಮೊನ್ನೆ ಗಂಡನ ಜೊತೆಗಿದ್ದ ಮಕ್ಕಳನ್ನು ನೋಡೋದಕ್ಕೆ ನಾಗವೇಣಿ ಹೋಗಿದ್ದಾಳೆ. ಈ ವೇಳೆ ಗಂಡ ಹೆಂಡ್ತಿ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಸಿಟ್ಟಿಗೆದ್ದು ಪತ್ನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

  • ಲೋಕಾಯುಕ್ತ ದಾಳಿ : ಬಳ್ಳಾರಿ ಮೀನುಗಾರಿಕೆ ಅಧಿಕಾರಿ ಶಿವಣ್ಣ ಮನೆಯಲ್ಲಿ ಸೈಟ್, ಜಮೀನು, ಚಿನ್ನ ಪತ್ತೆ

    ಲೋಕಾಯುಕ್ತ ದಾಳಿ : ಬಳ್ಳಾರಿ ಮೀನುಗಾರಿಕೆ ಅಧಿಕಾರಿ ಶಿವಣ್ಣ ಮನೆಯಲ್ಲಿ ಸೈಟ್, ಜಮೀನು, ಚಿನ್ನ ಪತ್ತೆ

    ಬಳ್ಳಾರಿ:-ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

    ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ, ಕಚೇರಿ ಮತ್ತು ಸರ್ಕಾರಿ ಬೊಲೆರೋ ವಾಹನದ ಮೇಲೆ ಏಪ್ರಿಲ್ 7ರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

    ಪತ್ತೆಯಾದ ಅಕ್ರಮ ಆಸ್ತಿಗಳ ವಿವರ:
    ಜಮೀನು: ವಿವಿಧೆಡೆ ಒಟ್ಟು 44 ಎಕರೆ ಕೃಷಿ ಭೂಮಿ
    ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್‍ಗಳು
    ಮನೆಗಳು: ಬಳ್ಳಾರಿ ನಗರದಲ್ಲಿ 3 ಸುಸಜ್ಜಿತ ಮನೆಗಳು
    ನಗದು: ಮನೆಯಲ್ಲಿ 8.5 ಲಕ್ಷ ರೂಪಾಯಿ + ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂಪಾಯಿ
    ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ
    ವಾಹನಗಳು: 3 ದ್ವಿಚಕ್ರ ವಾಹನಗಳು

    ಇದಲ್ಲದೆ, ಬೊಲೆರೋ ವಾಹನದಲ್ಲಿ ರಹಸ್ಯ ಕಡತಗಳು ಮತ್ತು ಬೇನಾಮಿ ಆಸ್ತಿಗಳ ಸಂಬಂಧಿ ದಾಖಲೆಗಳು ಸಿಕ್ಕಿವೆ.

    ಲೋಕಾಯುಕ್ತ ತಂಡವು ಹೆಚ್ಚಿನ ತನಿಖೆಯನ್ನು ಮುಂದುವರಿಸಿದೆ.
    ಭ್ರಷ್ಟಾಚಾರದ ಆರೋಪ ಶಿವಣ್ಣ ಅವರು ತಮ್ಮ ಅಧಿಕಾರದ ದುರ್ಬಳಕೆ ಮಾಡಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳು ದೂರುಗಳಲ್ಲಿ ಇದ್ದವು. ಲೋಕಾಯುಕ್ತ ಅಧಿಕಾರಿಗಳು ಈ ಆಸ್ತಿಗಳ ಮೂಲವನ್ನು ಪತ್ತೆಹಚ್ಚುವ ಕೆಲಸವನ್ನು ತೀವ್ರಗೊಳಿಸಿದ್ದಾರೆ.

  • 19ನೇ ವಯಸ್ಸಿಗೆ_ರೌಡಿಶೀಟರ್ ಪಟ್ಟ :  ಕೊನೆಗೆ ಸ್ನೇಹಿತರಿಂದಲೇ ಚಟ್ಟ..

    19ನೇ ವಯಸ್ಸಿಗೆ_ರೌಡಿಶೀಟರ್ ಪಟ್ಟ : ಕೊನೆಗೆ ಸ್ನೇಹಿತರಿಂದಲೇ ಚಟ್ಟ..

    ಮದ್ದೂರು:- ಇಂತಾದ್ದೊಂದು ಬರ್ಬ ಹತ್ಯೆ ನಡೆದಿರೋದು ಮಂಡ್ಯದ ಮದ್ದೂರಿನಲ್ಲಿ.
    ನಿನ್ನೆ ತಡರಾತ್ರಿ ಮದ್ದೂರಿನ ಕೊಲ್ಲಿ ವೃತ್ತದ ಬಳಿ ಸೌದೆ ಡಿಪೋ ಒಂದರ ಬಳಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಟಾಪಟಿ ಏರ್ಪಟ್ಟಿದೆ. ಈ ವೇಳೆ ಯಶ್ವಂತ್, ಸಚಿನ್ ಹಾಗೂ ದರ್ಶನ್ ಎಂಬ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.

    ಈ ವೇಳೆ ಯಶ್ವಂತ್ ಸ್ಥಳದಲ್ಲೆ ಸಾವನ್ನಪ್ಪಿದ್ರೆ, ಉಳಿದ ಸಚಿನ್ ಹಾಗೂ ದರ್ಶನ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಅಂದ ಹಾಗೆ ಈ ದೃಶ್ಯದಲ್ಲಿ ಕಾಣ್ತಿರೋ ಈತನ ಹೆಸರು ಯಶ್ವಂತ್ ಅಂತ. ಮದ್ದೂರಿನ ಮರಳಿಗ ಗ್ರಾಮದವನು. ಈತನಿಗೆ ವಯಸ್ಸಿನ್ನು 19 ವರ್ಷ ಅಷ್ಟೆ. ವಯಸ್ಸು ಚಿಕ್ಕದಾದ್ರೂ ಫೀಲ್ಡಲ್ಲಿ ಹವಾ ಸೃಷ್ಟಿ ಮಾಡೋ ಕನಸ್ಸು ಕಂಡಿದ್ದ ಯಶ್ವಂತ್ ರೌಡಿ ಶೀಟರ್ ಆಗಿದ್ದ. ಅಪ್ಪ ಅಮ್ಮ ಎಷ್ಟು ಹೇಳಿದ್ರು ಕೇಳದೆ ಪುಂಡರ ಸಹವಾಸ ಮಾಡಿದ್ದ.

    ಇನ್ನು ಯಶ್ವಂತ್ ಉಪಟಳ ಹೆಚ್ಚಾಗ್ತಿದ್ದಂತೆ ಮದ್ದೂರು ಪೊಲೀಸರು ಯಶ್ವಂತ್ ನನ್ನ ಗಡಿಪಾರು ಮಾಡಿದ್ದರು. ಬಳಿಕ ಯಶ್ವಂತ್ ಮದ್ದೂರು ತೊರೆದು 6 ತಿಂಗಳ ಕಾಲ ಬೆಂಗಳೂರು ಸೇರಿದ್ದ. ಆದ್ರೆ ಈ ನಡುವೆ ಸಂಬಂಧಿಕರೊಬ್ಬರ ಮದುವೆ ಇದ್ದ ಹಿನ್ನೆಲೆ ಗ್ರಾಮಕ್ಕೆ ಮರಳಿ ಇಲ್ಲೆ ಓಡಾಟ ಮಾಡಿದ್ದ. ಹೀಗಿರುವಾಗ್ಲೆ ನಿನ್ನೆ ಹಳೆ ಗಲಾಟೆಯ ರಾಜಿ ಪಂಚಾಯ್ತಿಯ ಬುಲಾವ್ ಬಂದಿತ್ತು. ಇದರ ರಾಜಿಗೆ ಹೋದ ಯಶ್ವಂತ್ ಹೆಣವಾಗಿದ್ದಾನೆ.

    ಇನ್ನು ಘಟನೆ ಬಳಿಕ ಸ್ಥಳಕ್ಕೆ ತೆರಳಿದ ಮದ್ದೂರು ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.

    ಇತ್ತ ಮಂಡ್ಯ ಮಿಮ್ಸ್ ನಲ್ಲಿ ಯಶ್ವಂತ್ ಮರೋಣೋತ್ತರ ಪರೀಕ್ಷೆ ನಡೆಸಿದ್ದು, ಮೃತ ದೇಹವನ್ನ ಕುಟುಂಬಸ್ಥರಿಗೆ ನೀಡಿದ್ದಾರೆ.ಆದರೆ ಮಗನ ಸಾವಿಗೆ ಯಶ್ವಂತ್ ಕುಟುಂಬ ಕಣ್ಣೀರು ಹಾಕುತ್ತಿದೆ.

  • ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು:  ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

    ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು: ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

    ಕೋಲಾರ: :- ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಮಲಗಿದ್ದವನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಡೆದಿದೆ.

    ವೆಂಕಟೇಶ್ (50) ಕೊಲೆಯಾದ ವ್ಯಕ್ತಿ. ರಘು ಕೊಲೆಗೈದ ಆರೋಪಿ. ಕುಡಿಯಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ವೆಂಕಟೇಶ್‌ನನ್ನು ಆರೋಪಿ ರಘು ಕೊಲೆಗೈದಿದ್ದಾನೆ.

    ಸಂಜೆಯಾದ್ರೆ ಕುಡಿದು ಕೈಯಲ್ಲಿ ದೊಣ್ಣೆ ಹಿಡಿದು ಆರೋಪಿ ರಘು ಓಡಾಡ್ತಿದ್ದ. ಆರೋಪಿಯ ವರ್ತನೆಯಿಂದ ದೇವರಾಯಸಮುದ್ರ ಗ್ರಾಮಸ್ಥರು ಬೇಸತ್ತಿದ್ದರು ಎಂದು ಹೇಳಲಾಗಿದೆ.

    ವೆಂಕಟೇಶ್ ಕೊಲೆಗೈದ ನಂತರ ದೊಣ್ಣೆಕೋಲು ಬಿಸಾಡಿ ಆರೋಪಿ ರಘು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

  • ಸ್ನೇಹಿತನ ಮದುವೆಗೆ ಹೋದಾಗಲೇ: ನದಿ ನೀರಿನಲ್ಲಿ ಮುಳುಗಿ ಐಟಿ ಉದ್ಯೋಗಿ ಸಾವು

    ಸ್ನೇಹಿತನ ಮದುವೆಗೆ ಹೋದಾಗಲೇ: ನದಿ ನೀರಿನಲ್ಲಿ ಮುಳುಗಿ ಐಟಿ ಉದ್ಯೋಗಿ ಸಾವು

    ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತ ಯುವಕನನ್ನು ಗದಗ ಮೂಲದ, ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ (27) ಎಂದು ಗುರುತಿಸಲಾಗಿದೆ.

    ಅಭಿಷೇಕ್ ಅವರು ತಮ್ಮ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಸ್ನೇಹಿತರ ಜತೆ ಸೇರಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸ್ಥಳೀಯ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಇವರು, ಇಂದು ಬೆಳಿಗ್ಗೆ ಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ನಾಪತ್ತೆಯಾಗಿದ್ದರು.

    ಯುವಕ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ನಂತರ, ಬನ್ನೂರು ಗ್ರಾಮದ ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ. ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ಈ ಘಟನೆ ತೀವ್ರ ಶೋಕವನ್ನುಂಟು ಮಾಡಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಒಂದೇ ದಿನ ಮೃತಪಟ್ಟ ಪತಿ-ಪತ್ನಿ : ಅನಾಥರಾದ ಮೂವರು ಮಕ್ಕಳು ; ಶೋಕ ಸಾಗರದಲ್ಲಿ ಮುಳುಗಿದ ಇಡೀ ಗ್ರಾಮ

    ಒಂದೇ ದಿನ ಮೃತಪಟ್ಟ ಪತಿ-ಪತ್ನಿ : ಅನಾಥರಾದ ಮೂವರು ಮಕ್ಕಳು ; ಶೋಕ ಸಾಗರದಲ್ಲಿ ಮುಳುಗಿದ ಇಡೀ ಗ್ರಾಮ

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವ ದಾರುಣ ಘಟನೆ ಸಂಭವಿಸಿದ್ದು, ಪತಿ, ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ.

    ಮಧುರಾ ಕರೆಪ್ಪ ಮಾದರ (30) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಇನ್ನೊಂದೆಡೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆತಂಕಗೊಂಡ ಪತಿ ಕರೆಪ್ಪ ಗಂಗಪ್ಪ ಮಾದರ (36) ಅವರು ತಕ್ಷಣ ಆಸ್ಪತ್ರೆಗೆ ತೆರಳಲು ಹೊರಟಿದ್ದರು. ಆದರೆ ವಿಧಿಯಾಟವೆನ್ನುವಂತೆ, ಮಾರ್ಗಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಪತಿ, ಪತ್ನಿ ಇಬ್ಬರೂ ಸಾವಿಗೀಡಾದ ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

    ಈ ದಂಪತಿಗಳು ಕಳೆದ 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಪೋಷಕರನ್ನು ಒಂದೇ ದಿನ ಕಳೆದುಕೊಂಡಿರುವ ಈ ಮೂವರು ಮಕ್ಕಳ ಸ್ಥಿತಿ ಕರುಣಾಜನಕವಾಗಿದ್ದು, ಕುಟುಂಬದವರಲ್ಲದೇ ಗ್ರಾಮಸ್ಥರ ಮನಸ್ಸನ್ನೂ ಮಿಡಿಯುವಂತಾಗಿದೆ.

    ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ದುರಂತ ಘಟನೆ ಅರವಳ್ಳಿ ಗ್ರಾಮದಲ್ಲಿ ಗಂಭೀರ ಶೋಕದ ವಾತಾವರಣ ನಿರ್ಮಾಣ ಮಾಡಿದ್ದು, ಮೃತರ ಕುಟುಂಬಕ್ಕೆ ಗ್ರಾಮಸ್ಥರು ಸಂತಾಪ ಸೂಚಿಸುತ್ತಿದ್ದಾರೆ.

  • ಸಿಗರೇಟ್‌ ವಿಚಾರಕ್ಕೆ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹ*ತ್ಯೆ

    ಸಿಗರೇಟ್‌ ವಿಚಾರಕ್ಕೆ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹ*ತ್ಯೆ

    ಮಂಡ್ಯ:-ಕ್ಷುಲ್ಲಕ ವಿಚಾರಕ್ಕೆ ಎರಡು ಯುವಕರ ಗುಂಪುಗಳ ನಡುವೆ ನಡೆದ ಗಲಾಟೆ ಓರ್ವನ ಕೊ*ಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಆಂಜನೇಯ ರಸ್ತೆಯ ಪಟೇಲ್ ಸಾಮಿಲ್ ಬಳಿ ನಡೆದಿದೆ.

    ಕ್ಷುಲ್ಲಕ ಕಾರಣಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸಿಗರೇಟ್‌ ವಿಚಾರವಾಗಿ ಎದ್ದ ತಗಾದೆ ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿದ್ದು, ಇದರಲ್ಲಿ ರೌಡಿ ಶೀಟರ್, ಮರಳಿಗ ಗ್ರಾಮದ ಯಶ್ವಂತ್ @ಕಜ್ಜಿ ಅಭಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಗೊರವನಹಳ್ಳಿ ಗ್ರಾಮದ ದರ್ಶನ್, ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
    ಇಬ್ಬರಿಗೂ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ಬಳಿಕ ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ, ಪರಿಶೀಲನೆ ನಡೆದಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಕೆಎಸ್ಆರ್ಟಿಸಿ ಮತ್ತು-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 40 ಮಂದಿಗೆ ಗಾಯ.!

    ಕೆಎಸ್ಆರ್ಟಿಸಿ ಮತ್ತು-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 40 ಮಂದಿಗೆ ಗಾಯ.!

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಳಗಿಬೀಸ್ ಎಂಬಲ್ಲಿ ಎರಡು ಬಸ್‌ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಬಸ್ಸಿನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ.

    ಎಲ್ಲಿ ಅಪಘಾತ ಆಗಿದ್ದು..?

    ಶಿರಸಿ-ಕುಮಟಾ ರಸ್ತೆಯ ಕೊಳಗಿಬೀಸ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಭಟ್ಕಳದಿಂದ ಬಾಗಲಕೋಟೆ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಶಿರಸಿಯಿಂದ ಕುಮಟಾ ಕಡೆಗೆ ಹೊರಟಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದವು. ರಸ್ತೆಯ ತಿರುವಿನಲ್ಲೇ ಈ ಅಪಘಾತ ಸಂಭವಿಸಿದೆ.

    ಎರಡೂ ಬಸ್‌ಗಳು ವೇಗವಾಗಿ ಬಂದಿದ್ದು, ಬಸ್‌ಗಳ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಗಾಜುಗಳು ಚೂರುಚೂರಾಗಿ ರಸ್ತೆಯ ಮೇಲೆ ಬಿದ್ದಿವೆ. ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಚೀರಾಡುತ್ತಿದ್ದರು.

    ರಕ್ಷಣಾ ಕಾರ್ಯಾಚರಣೆ

    ಘಟನೆ ನಡೆದ ತಕ್ಷಣ ಸ್ಥಳೀಯರು ಓಡಿಬಂದು ಗಾಯಾಳುಗಳ ರಕ್ಷಣೆಗೆ ಮುಂದಾದರು. ತಕ್ಷಣವೇ ಆಂಬ್ಯುಲೆನ್ಸ್ ಮತ್ತು ಖಾಸಗಿ ವಾಹನಗಳ ಮೂಲಕ ಎಲ್ಲಾ ಗಾಯಾಳುಗಳನ್ನು ಶಿರಸಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಕೆಲವು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಉತ್ತರ ಕನ್ನಡದ ದೊಡ್ಡ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

    ಸಂಚಾರ ಅಸ್ತವ್ಯಸ್ತ

    ರಸ್ತೆಯ ಮಧ್ಯದಲ್ಲೇ ಎರಡೂ ಬಸ್‌ಗಳು ಸಿಲುಕಿಕೊಂಡಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದರು.

    ಅಪಘಾತಕ್ಕೆ ಕಾರಣವೇನು?

    ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

    ಗಾಯಾಳುಗಳ ವಿವರ

    ಗಾಯಾಳುಗಳಲ್ಲಿ ಹೆಚ್ಚಿನವರು ಸ್ಥಳೀಯ ಪ್ರಯಾಣಿಕರು. ಕೆಲವರು ಪ್ರವಾಸಿಗರು. ಇಬ್ಬರು ಬಸ್ ಚಾಲಕರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರ ಕುಟುಂಬದವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

  • ಬಿಜೆಪಿ ಅಭ್ಯಾರ್ಥಿ ವೀರಣ್ಣ ಚರಂತಿಮಠ ಪರ ಅರವಿಂದ ಲಿಂಬಾವಳಿ ಮತಯಾಚನೆ.

    ಬಿಜೆಪಿ ಅಭ್ಯಾರ್ಥಿ ವೀರಣ್ಣ ಚರಂತಿಮಠ ಪರ ಅರವಿಂದ ಲಿಂಬಾವಳಿ ಮತಯಾಚನೆ.

    ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಮ್ಮ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ನವನಗರದ ವಾರ್ಡ್ ನಂ.25 ಹಾಗೂ 26ರಲ್ಲಿ ಸಾರ್ವಜನಿಕರೊಂದಿಗೆ ಸಭೆ ನಡೆಸಿ ,ಮನೆ ಮನೆಗೆ ತೆರಳಿ ತಮ್ಮ ಅಭ್ಯಾರ್ಥಿ ಪರ ಮತಯಾಚನೆ ನಡೆಸಿದರು.

    ನಂತರ ಮಾಧ್ಯಮ ಒಳಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಎಲ್ಲ ಸಮುದಾಯಗಳಲ್ಲೂ ಆಕ್ರೋಶ ಹೆಚ್ಚುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆರೋಪಿಸಿದ್ದಾರೆ. ಈ ಆಕ್ರೋಶವು ಮುಂದಿನ ಚುನಾವಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಳ್ಳಲಿದೆ ಎಂದು ಅವರು ಹೇಳಿದರು.

    ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಜನರನ್ನು ಗೊಂದಲಕ್ಕೆ ದೂಡಿದೆ ಎಂದು ಟೀಕಿಸಿದರು. ಸರ್ಕಾರದ ನೀತಿಗಳ ವಿರುದ್ಧ ವಿವಿಧ ಸಮುದಾಯಗಳಲ್ಲಿ ಅಸಮಾಧಾನ ಹೆಚ್ಚುತ್ತಿರುವುದು ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಲಿದೆ ಎಂದು ಅಭಿಪ್ರಾಯಪಟ್ಟರು.

    ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಮೇಶ್ ಮೇಟಿ ಅವರಿಗೆ ಮತ ಹಾಕಿದರೆ ಮೇಟಿ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ” ಎಂದು ಹೇಳಿರುವ ಹೇಳಿಕೆಗೆ ವ್ಯಂಗ್ಯವಾಡಿದ ಲಿಂಬಾವಳಿ, ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಬದಲು ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಹೇಳಿದರು.
    ರಾಜ್ಯ ಸರ್ಕಾರದ ನೀತಿಗಳ ವಿರುದ್ಧ ಜನರಲ್ಲಿ ಅಸಮಾಧಾನ ಹೆಚ್ಚಿದ್ದು, ಬಾಗಲಕೋಟೆ ಉಪಚುನಾವಣೆಯಲ್ಲಿ ಅದರ ಪ್ರತಿಫಲ ಕಾಣಲಿದೆ ಎಂದು ಅವರು ಹೇಳಿದರು.

    ಈ ಸರಕಾರ ಅಭಿವೃದ್ಧಿಶೂನ್ಯವಾಗಿದೆ ಎಂದು ಜನರು ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅಹಿಂದ ನಾಯಕ ಎಂದು ಪದೇ ಪದೇ ಹೇಳಿಕೊಳ್ಳುತ್ತಾರೆ. ಅಹಿಂದ ಸಮುದಾಯಕ್ಕೆ, ದಲಿತ ಸಮುದಾಯಗಳಿಗೆ ಅನ್ಯಾಯ ಆಗಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಿಳಿಸಿದ್ದಾರೆ.

    ಬಿಜೆಪಿ ಅಧಿಕಾರದ ಅವಧಿಯಲ್ಲಿ ನಾವು ಎಸ್‍ಸಿ, ಎಸ್‍ಟಿ ಸಮುದಾಯಗಳ ಮೀಸಲಾತಿಯನ್ನು ಹೆಚ್ಚಿಸಿದ್ದೆವು. ಅದನ್ನು ಈ ಸರಕಾರ ಕಡಿಮೆ ಮಾಡಿದೆ. ಈ ದೊಡ್ಡ ಕೊಡುಗೆಯನ್ನು ಸಿದ್ದರಾಮಯ್ಯನವರ ಸರಕಾರ ನೀಡಿದೆ ಎಂದು ವ್ಯಂಗ್ಯವಾಡಿದರು. ಈ ಸಮಾಜವನ್ನು ತ್ರಿಶಂಕು ಸ್ಥಿತಿಗೆ ತಳ್ಳಿದ್ದಾರೆ ಎಂದು ಟೀಕಿಸಿದರು.

    ಎಸ್‍ಸಿ, ಎಸ್‍ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲು ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುತ್ತಿದ್ದಾರೆ. ಉಚಿತ ಯೋಜನೆಗಳಿಗೆ ಹಣ ಬಳಸಿಕೊಳ್ಳಲು ಆರಂಭಿಸಿದ್ದಾರೆ ಎಂದು ದೂರಿದರು. ಒಳ ಮೀಸಲಾತಿಯಲ್ಲೂ ಗೊಂದಲ ಸೃಷ್ಟಿಸಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ಸಿನ ಜನವಿರೋಧಿ, ದಲಿತ ವಿರೋಧಿ ನೀತಿಗೆ ಜನತೆ ಎರಡೂ ಕಡೆಗಳಲ್ಲಿ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು. ಯುವಜನರ ಹಿತದೃಷ್ಟಿಯಿಂದ ತಕ್ಷಣವೇ ಖಾಲಿ ಹುದ್ದೆ ಭರ್ತಿ ಮಾಡಲು ಆಗ್ರಹಿಸಿದರು.

  • ಕಾರು-ಲಾರಿ ಡಿಕ್ಕಿ, ನವವಿವಾಹಿತೆ ಸ್ಥಳದಲ್ಲೇ ಸಾ*ವು

    ಕಾರು-ಲಾರಿ ಡಿಕ್ಕಿ, ನವವಿವಾಹಿತೆ ಸ್ಥಳದಲ್ಲೇ ಸಾ*ವು

    ಚಿಕ್ಕಬಳ್ಳಾಪುರ: ಕಾರು-ಲಾರಿ ಡಿಕ್ಕಿಯಾದ ಪರಿಣಾಮ ನವವಿವಾಹಿತೆ ಹಾಗೂ ಸಂಬಂಧಿ ಸ್ಥಳದಲ್ಲಿಯೇ ಸಾ*ವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಶೆಟ್ಟಿಗೆರೆ ಕ್ರಾಸ್ ಬಳಿ ನಡೆದಿದೆ.

    ಮಾಹಿತಿ ಪ್ರಕಾರ, ಈ ಅಪಘಾತದಲ್ಲಿ ಪತಿ ಸ್ಥಿತಿ ಗಂಭೀರವಾಗಿದೆ. ಇನ್ನು ಮೃ*ತ ನವವಿವಾಹಿತೆಯನ್ನ 23 ವರ್ಷದ ರಕ್ಷಿತಾ ರೆಡ್ಡಿ ಹಾಗೂ ಸಂಬಂಧಿಯನ್ನ 30 ವರ್ಷದ ಪವನ್ ರೆಡ್ಡಿ ಗುರುತಿಸಲಾಗಿದೆ. ಇನ್ನು ರಕ್ಷಿತಾ ಪತಿ ರಾಜಶೇಖರ್ ರೆಡ್ಡಿ ಗಂಭೀರವಾಗಿ ಗಾಯಗೊಂಡಿದ್ದು, ರಕ್ಷಿತಾ ಹಾಗೂ ರಾಜಶೇಖರ್ ದಂಪತಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಇಂಜನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ನವೆಂಬರ್‌ನಲ್ಲಿ ಮದುವೆ ಆಗಿದ್ದ ರಕ್ಷಿತಾ ಹಾಗೂ ರಾಜಶೇಖರ್‌ ಕಳೆದ ನವೆಂಬರ್‌ ತಿಂಗಳಿನಲ್ಲಿ ಮದುವೆ ಆಗಿದ್ದರು. ಈ ಜೋಡಿ ತಮ್ಮ ಸಂಬಂಧಿ ಪವನ್‌ ರೆಡ್ಡಿ ಜೊತೆಗೆ ಅನಂತಪುರದ ಅವರ ಊರಿಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಮುಂದೆ ಹೋಗುತ್ತಿದ್ದ ಕಂಟೇನರ್ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ರಕ್ಷಿತಾ ಹಾಗೂ ಪವನ್ ಸ್ಥಳದಲ್ಲಿ ಸಾ*ವಿಗೀಡಾಗಿದ್ದಾರೆ.

    ಇನ್ನು ಗಂಭೀರವಾಗಿ ಗಾಯಗೊಂಡಿರುವ ಪತಿ ರಾಜಶೇಖರ್ ಅವರನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.