Category: ಜಿಲ್ಲಾ‌ಸುದ್ದಿ

  • ಪತ್ನಿ ಮೇಲಿನ ಕೋಪಕ್ಕೆ 4 ವರ್ಷದ ಮಗುವನ್ನು ನದಿಗೆ ಎಸೆದು ಕೊಲೆಗೈದ ತಂದೆ.

    ಪತ್ನಿ ಮೇಲಿನ ಕೋಪಕ್ಕೆ 4 ವರ್ಷದ ಮಗುವನ್ನು ನದಿಗೆ ಎಸೆದು ಕೊಲೆಗೈದ ತಂದೆ.

    ಕಲಬುರಗಿ: ಪತಿ ಮೇಲಿನ ಕೋಪಕ್ಕೆ ವ್ಯಕ್ತಿಯೊಬ್ಬ 4 ವರ್ಷದ ಮಗುವನ್ನು ನದಿಗೆ ಎಸೆದು ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ.

    ಸೋಮರಾವ್ ಹೂಗಾರ್ ಎಂಬಾತ ಮಗುವನ್ನು ಹತ್ಯೆಗೈದ ಆರೋಪಿ. ಪತ್ನಿ ಕಲ್ಪನಾ ಜೊತೆ ಗಲಾಟೆ ಮಾಡಿಕೊಂಡಿದ್ದ
    ಇದೇ ಕೋಪದಲ್ಲಿ ಮಗು ಗುಂಡೇಶ್‌ನನ್ನು ಎತ್ತಿಕೊಂಡು ಆಟವಾಡಿಸುತ್ತಾ ಕರೆದುಕೊಂಡು ಹೋಗಿ ನಾಗರಾಳ ಜಲಾಶಯಕ್ಕೆ ಎಸೆದಿದ್ದಾನೆ.

    ಈ ವಿಷಯ ತಿಳಿದ ಬಳಿಕ ಗಂಡನ ವಿರುದ್ಧ ಪತ್ನಿ ಕಲ್ಪನಾ ದೂರು ದಾಖಲಿಸಿದ್ದಾಳೆ. ಬಳಿಕ ಪೊಲೀಸರು ಮಗುವಿನ ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಈ ಕುರಿತು ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

  • 105 ಅಡಿಗೆ ತಲುಪಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ:ಮಂಡ್ಯ ರೈತರಲ್ಲಿ ಹೆಚ್ಚಿದ ನಿರೀಕ್ಷೆ

    105 ಅಡಿಗೆ ತಲುಪಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ:ಮಂಡ್ಯ ರೈತರಲ್ಲಿ ಹೆಚ್ಚಿದ ನಿರೀಕ್ಷೆ

    ಮಂಡ್ಯ:ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು,ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದು, ಕಾವೇರಿ ಕೊಳ್ಳದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಡ್ಯಾಂಗಳಲ್ಲಿಯೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದೆ.

    ಸದ್ಯ ಕಾವೇರಿ ಕೊಳ್ಳದ ಪ್ರಮುಖ ಡ್ಯಾಂ ಕೆಆರ್‌ಎಸ್‌ನಲ್ಲಿ ಇಂದಿನ ನೀರಿನ ಮಟ್ಟ 105.10 ಅಡಿಯಷ್ಟಿದೆ (ಗರಿಷ್ಠ ಮಟ್ಟ: 124.80 ಅಡಿ). 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 27.077 ಟಿಎಂಸಿ ನೀರು ಸಂಗ್ರಹವಿದ್ದು, 19,275 ಕ್ಯೂಸೆಕ್ ಒಳಹರಿವು ಮತ್ತು 1,985 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

    ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದ್ದಾಗ, ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ಕಠಿಣ ಸೂಚನೆಯೊಂದನ್ನು ನೀಡಿತ್ತು. ಯಾವುದೇ ಹೊಸ ಬೆಳೆ ಬಿತ್ತನೆ ಮಾಡಬೇಡಿ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗಿದೆ ಎಂದು ರೈತರನ್ನು ಕೈ ಕಟ್ಟಿ ಹಾಕಿತ್ತು. ಆದರೆ ಈಗ ಜಲಾನಯನ ಪ್ರದೇಶ ಹಾಗೂ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ.

    ಕೆಆರ್‌ಎಸ್‌ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರ ಪರಿಣಾಮ ಡ್ಯಾಂ ನೀರಿನ ಮಟ್ಟ ಭರಪೂರ 105 ಅಡಿ ತಲುಪಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಸದ್ಯ ಮಳೆ ಚುರುಕುಗೊಂಡ ಬೆನ್ನಲ್ಲೇ, ಸಕ್ಕರೆ ನಾಡು ಮಂಡ್ಯದ ರೈತರ ಮೊಗದಲ್ಲಿ ಹೊಸ ಭರವಸೆ ಮೂಡಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಈಗ 105 ಅಡಿಗೆ ಏರಿಕೆಯಾಗಿದ್ದು, ಮುಂಗಾರು ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಡ್ಯಾಂನ ನೀರಿನ ಮಟ್ಟ 105 ಅಡಿಗೆ ಏರಿಕೆಯಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗೆ ಸಜ್ಜಾಗುತ್ತಿದ್ದಾರೆ. ಮುಂಗಾರು ಹಂಗಾಮಿನ ಹೊಸ ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

    ಬಿತ್ತನೆಗೆ ಇದು ಸೂಕ್ತ ಸಮಯವಾಗಿದ್ದು, ಸರ್ಕಾರ ತಡ ಮಾಡಿದರೆ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗುತ್ತದೆ ಎಂಬುದು ರೈತರ ಆತಂಕವಾಗಿದೆ.

    ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ

    ಕೆಆರ್‌ಎಸ್ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80 ಇಂದಿನ ಮಟ್ಟ: 102.09, ಒಳಹರಿವು: 32,048, ಹೊರಹರಿವು: 1,821 ಕ್ಯೂಸೆಕ್

    ಹಾರಂಗಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859, 20໖ : 2,857.01, 20: 11,645, ಹೊರಹರಿವು: 10,750 ಕ್ಯೂಸೆಕ್

    ಕಬಿನಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00, ໖ : 2282.59, : 31,746, ಹೊರಹರಿವು: 27000 ಕ್ಯೂಸೆಕ್

    ಹೇಮಾವತಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922, ಇಂದಿನ ಮಟ್ಟ: 2911.75, ಒಳಹರಿವು: 12,859, ಹೊರಹರಿವು: 500 ಕ್ಯೂಸೆಕ್

    ಲಿಂಗನಮಕ್ಕಿ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819, ໖ : 1,784.70, 0): 59,203, ಹೊರಹರಿವು: 761 ಕ್ಯೂಸೆಕ್

    ಸೂಪಾ ಜಲಾಶಯ:- ಗರಿಷ್ಠ ಮಟ್ಟ (ಮೀ.ಗಳಲ್ಲಿ): 564, ಇಂದಿನ ಮಟ್ಟ: 540.30, ಒಳಹರಿವು: 44,062, ಹೊರಹರಿವು: 0 ಕ್ಯೂಸೆಕ್

    ಮಾಣಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 595, ಇಂದಿನ ಮಟ್ಟ: 582.78, ಒಳಹರಿವು: 10,003, ಹೊರಹರಿವು: 0

    ತುಂಗಭದ್ರಾ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633,  ಇಂದಿನ ಮಟ್ಟ: 1,613.16, 2: 57,785, ಹೊರಹರಿವು: 1,390

    ಮಲಪ್ರಭಾ ಜಲಾಶಯ:– ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50, ಇಂದಿನ ಮಟ್ಟ: 2,060.60, 20: 11,703, ಹೊರಹರಿವು: 1,194,

    ಘಟಪ್ರಭಾ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175, ಇಂದಿನ ಮಟ್ಟ: 2,158.33, 2: 20,782, ಹೊರಹರಿವು: 1,765

    ತುಂಗಾ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24, 2 : 586.83, 2: 86,123, ಹೊರಹರಿವು: 89,503

    ಭದ್ರಾ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 186,ಇಂದಿನ ಮಟ್ಟ: 163.6, : 36,103, ಹೊರಹರಿವು: 189

    ಆಲಮಟ್ಟಿ ಜಲಾಶಯ:- ಗರಿಷ್ಠ ಮಟ್ಟ (ಮೀ.ಗಳಲ್ಲಿ): 519,60, ಇಂದಿನ ಮಟ್ಟ: 518.94, : 1,25,855, : 1,50,000

    ನಾರಾಯಣಪುರ ಜಲಾಶಯ:- ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25,ಇಂದಿನ ಮಟ್ಟ:491.40, 2: 1,30,000, : 1,55,144

  • ಹೊಸ ಬೈಕ್ ಖರೀದಿಸಿದ ಕೆಲವೇ ಗಂಟೆಗಳಲ್ಲೇ ಯುವಕನ ದಾರುಣ ಸಾವು: ಟಿಪ್ಪರ್ ಡಿಕ್ಕಿಗೆ 19 ವರ್ಷದ ಯುವಕ ಬಲಿ

    ಹೊಸ ಬೈಕ್ ಖರೀದಿಸಿದ ಕೆಲವೇ ಗಂಟೆಗಳಲ್ಲೇ ಯುವಕನ ದಾರುಣ ಸಾವು: ಟಿಪ್ಪರ್ ಡಿಕ್ಕಿಗೆ 19 ವರ್ಷದ ಯುವಕ ಬಲಿ

    ತುಮಕೂರು: ಹೊಸ ಬೈಕ್ ಖರೀದಿಸಿದ ಸಂತಸ ಕೇವಲ ಒಂದು ದಿನಕ್ಕೂ ಉಳಿಯಲಿಲ್ಲ. ಬೈಕ್ ಖರೀದಿಸಿದ ಮರುದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ 19 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದಿದೆ.

    ಮೃತನನ್ನು ಪಾವಗಡ ತಾಲೂಕಿನ ದೊಡ್ಡಹಳ್ಳಿ ನಿವಾಸಿ ನಂದೀಶ್ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆಯಷ್ಟೇ ಹೊಸ ಬೈಕ್ ಖರೀದಿಸಿದ್ದ ನಂದೀಶ್, ಸ್ನೇಹಿತನೊಂದಿಗೆ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ನಂದೀಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ಸಂಬಂಧ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
    ಇದೇ ವೇಳೆ ಧಾರವಾಡ ಜಿಲ್ಲೆಯಲ್ಲೂ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ನಡೆದ ಈ ಅಪಘಾತದಲ್ಲಿ ಹಳೇ ತೇಗೂರು ನಿವಾಸಿ ಷಣ್ಮುಖ ಜೋಗಿ (28) ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ (30) ಮೃತಪಟ್ಟಿದ್ದಾರೆ.

    ಟೈರ್ ಬ್ಲಾಸ್ಟ್ ಆಗಿದ್ದ ಕಾರಣ ಲಾರಿ ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೈರ್ ಬದಲಿಸುತ್ತಿದ್ದ ವೇಳೆ, ಅದೇ ಮಾರ್ಗದಲ್ಲಿ ಬಂದ ಕ್ಯಾಂಟರ್ ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮಾಹಿತಿ ತಿಳಿದ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

  • ಆಟವಾಡುತ್ತಿದ್ದ 1ನೇ ತರಗತಿ ಬಾಲಕ  ಕುಸಿದು ಬಿದ್ದು  ಸಾ*ವು!

    ಆಟವಾಡುತ್ತಿದ್ದ 1ನೇ ತರಗತಿ ಬಾಲಕ ಕುಸಿದು ಬಿದ್ದು ಸಾ*ವು!

    ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದ್ದು, ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಆರು ವರ್ಷದ ಪುಟಾಣಿ ಬಾಲಕನೊಬ್ಬ ಹೃದಯಾಘಾತದಿಂದ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
    ಜಿಲ್ಲೆಯ ಕರೂರು ಹೋಬಳಿಯ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರ್ದೈವಿ ಘಟನೆ ನಡೆದಿದೆ. ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಮತ್ತು ಶಿಲ್ಪಾ ದಂಪತಿಯ ಪ್ರೀತಿಯ ಪುತ್ರ ತ್ರಿಲೋಕ್ ಜೈನ್ (6) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ.

    ಶನಿವಾರ ಎಂದಿನಂತೆ ಉತ್ಸಾಹದಿಂದಲೇ ಶಾಲೆಗೆ ಬಂದಿದ್ದ ಒಂದನೇ ತರಗತಿಯ ವಿದ್ಯಾರ್ಥಿ ತ್ರಿಲೋಕ್, ದಿನವಿಡೀ ಸಹಪಾಠಿಗಳೊಂದಿಗೆ ಸಕ್ರಿಯನಾಗಿ ಆಟವಾಡಿಕೊಂಡಿದ್ದನು. ಆದರೆ ಮಧ್ಯಾಹ್ನ ಶಾಲಾ ಅವಧಿ ಮುಗಿಯುವ ಕೆಲವೇ ನಿಮಿಷಗಳ ಮೊದಲು, ಶಾಲಾ ಆವರಣದಲ್ಲಿ ಗೆಳೆಯರೊಂದಿಗೆ ಇರುವಾಗ ಆತ ಏಕಾಏಕಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ.

    ಬಾಲಕ ತಕ್ಷಣವೇ ನೆಲಕ್ಕೆ ಬಿದ್ದದ್ದನ್ನು ನೋಡಿ ಆತಂಕಗೊಂಡ ಸಹಪಾಠಿಗಳು ತಕ್ಷಣವೇ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಗಾಬರಿಗೊಂಡ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ತಕ್ಷಣವೇ ಬಾಲಕನ ಬಳಿ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲೇ ಆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ.

    ಆಸ್ಪತ್ರೆಗೆ ತಲುಪಿದಾಗ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದ್ದು, ಮಗುವಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆಯಷ್ಟೇ ಆರೋಗ್ಯವಾಗಿ, ಹಸನ್ಮುಖಿಯಾಗಿ ಶಾಲೆಗೆ ಕಳುಹಿಸಿದ್ದ ಮಗ ಹೆಣವಾಗಿ ಮರಳಿರುವುದನ್ನು ಕಂಡು ಪೋಷಕರು ಜರ್ಜರಿತರಾಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

    ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಮಕ್ಕಳಲ್ಲಿಯೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದ ಬೆನ್ನಲ್ಲೇ, ಈಗ ಕೇವಲ 6 ವರ್ಷದ ಶಾಲಾ ಬಾಲಕನೂ ಹೃದಯಾಘಾತದಂತಹ ಲಕ್ಷಣಗಳಿಂದ ಸಾವನ್ನಪ್ಪಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಮತ್ತು ಭೀತಿಯನ್ನು ಮೂಡಿಸಿದೆ. ತರಗತಿಯಲ್ಲಿ ಎಲ್ಲರ ಮುದ್ದಿನ ವಿದ್ಯಾರ್ಥಿಯಾಗಿದ್ದ ತ್ರಿಲೋಕ್ ಜೈನ್ ಸಾವಿಗೆ ಹಾಳಸಸಿ ಹಾಗೂ ಕೊಡನವಳ್ಳಿ ಗ್ರಾಮಸ್ಥರು, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಪದಾಧಿಕಾರಿಗಳು ಹಾಗೂ ಶಾಲೆಯ ಶಿಕ್ಷಕ ವೃಂದ ತೀವ್ರ ಸಂತಾಪ ಸೂಚಿಸಿದ್ದಾರೆ.

  • ಹಲಸಿನ ಹಣ್ಣಿನ ಆಸೆಗೆ ಬಲಿಯಾಯ್ತು ರಾಷ್ಟ್ರಪತಿ ಪ್ರಶಸ್ತಿ ವಿಜೇತ ಕೃಷಿ ವಿದ್ಯಾರ್ಥಿಯ ಜೀವ!

    ಹಲಸಿನ ಹಣ್ಣಿನ ಆಸೆಗೆ ಬಲಿಯಾಯ್ತು ರಾಷ್ಟ್ರಪತಿ ಪ್ರಶಸ್ತಿ ವಿಜೇತ ಕೃಷಿ ವಿದ್ಯಾರ್ಥಿಯ ಜೀವ!

    ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಮಧ್ಯರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ಎಂ.ಎಸ್ಸಿ ಕೃಷಿ (M.Sc Agriculture) ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

    ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಆಕಾಶ್ (23) ಮೃತಪಟ್ಟ ದುರ್ದೈವಿ. ರೈತಾಪಿ ಕುಟುಂಬದಿಂದ ಬಂದು, ಕಷ್ಟಪಟ್ಟು ಓದಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರತಿಭಾವಂತ ಯುವಕನ ಅಕಾಲಿಕ ಮರಣ ಇಡೀ ಕ್ಯಾಂಪಸ್ ಅನ್ನು ಕಣ್ಣೀರಲ್ಲಿ ಮುಳುಗಿಸಿದೆ.

    ಮಧ್ಯರಾತ್ರಿ ನಡೆದಿದ್ದೇನು?

    ಮೂಲಗಳ ಪ್ರಕಾರ, ಈ ಘಟನೆಯು ರಾತ್ರಿ 12:00 ರಿಂದ 1:00 ಗಂಟೆಯ ಅವಧಿಯಲ್ಲಿ ಜಿಕೆವಿಕೆ ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿ ಆಕಾಶ್ ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳುವ ಆಸೆಯಿಂದ ದೊಡ್ಡ ಮರವನ್ನು ಹತ್ತಿದ್ದ ಎನ್ನಲಾಗಿದೆ.
    ಆದರೆ, ಮಧ್ಯರಾತ್ರಿಯ ಕತ್ತಲಿನಲ್ಲಿ ಆಯತಪ್ಪಿ ಮರದ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ.ಕೆಳಗೆ ಬಿದ್ದ ರಭಸಕ್ಕೆ ಆಕಾಶ್ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರವಾದ ಪೆಟ್ಟಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಆಕಾಶ್ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಸಹಪಾಠಿಗಳು ತಕ್ಷಣವೇ ಆತನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಸಾವನ್ನಪ್ಪಿದ್ದಾನೆ.

    ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪ್ರತಿಭಾವಂತ ಯುವಕ!

    ಮೃತ ಆಕಾಶ್ ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರೆ ಚಟುವಟಿಕೆಗಳಲ್ಲೂ ಅತ್ಯಂತ ಮುಂಚೂಣಿಯಲ್ಲಿದ್ದ ಕೃಷಿ ವಿಶ್ವವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿಯಾಗಿದ್ದನು.

    ಸಾಧನೆಯ ಶಿಖರ ಏರಿದ್ದ ಆಕಾಶ್:

    ಕಾಲೇಜಿನ ಎನ್.ಎಸ್.ಎಸ್ (NSS) ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಈತನಿಗೆ ರಾಷ್ಟ್ರಪತಿಯವರಿಂದ “ಉತ್ತಮ ಸ್ವಯಂಸೇವಕ” ಪ್ರಶಸ್ತಿ ಲಭಿಸಿತ್ತು.

    2024 ರ ಗಣರಾಜ್ಯೋತ್ಸವದ (Republic Day Parade) ಪರೇಡ್‌ನಲ್ಲಿ ಕರ್ನಾಟಕ ರಾಜ್ಯವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಕೀರ್ತಿ ತಂದಿದ್ದನು.

    ಬಡತನದ ಹಿನ್ನೆಲೆಯುಳ್ಳ ರೈತ ಕುಟುಂಬದಿಂದ ಬಂದಿದ್ದ ಆಕಾಶ್, ಇಡೀ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಆಸರೆಯಾಗಬೇಕಿದ್ದನು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಹಲಸಿನ ಹಣ್ಣಿನ ಸಣ್ಣ ಆಸೆಗೆ ಸಿಲುಕಿ ಈ ಯುವಕ ಪ್ರಾಣ ಕಳೆದುಕೊಂಡಿರುವುದು ಹೆತ್ತವರಿಗೆ ಹಾಗೂ ಸ್ನೇಹಿತರಿಗೆ ಅರಗಿಸಿಕೊಳ್ಳಲಾಗದ ತೀವ್ರ ಆಘಾತವನ್ನುಂಟು ಮಾಡಿದೆ.

    ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು

    ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಯಲಹಂಕ ಪೊಲೀಸ್ ಠಾಣೆಯ ಅಧಿಕಾರಿಗಳು ಜಿಕೆವಿಕೆ ಆವರಣದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಮೃತರ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

  • ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು….!

    ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು….!

    ಬಾಗಲಕೋಟೆ : ಹೆತ್ತ ತಾಯಿಯ ಮಮತೆ ಹಾಗೂ ಮಗಳ ಜನ್ಮಜನ್ಮಾಂತರದ ಅನುಬಂಧಕ್ಕೆ ಸಾಕ್ಷಿಯಾದ ಹೃದಯ ವಿದ್ರಾವಕ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಸಂಭವಿಸಿದೆ. ನೂರು ವಸಂತಗಳನ್ನು ಕಂಡು ಇಹಲೋಕ ತ್ಯಜಿಸಿದ ಶತಾಯುಷಿ ತಾಯಿಯ ಸಾವಿನ ಆಘಾತಕ್ಕೆ ಒಳಗಾಗಿ 76 ವರ್ಷದ ವೃದ್ಧ ಮಗಳು ಕೂಡ ಕೊನೆಯುಸಿರೆಳೆದ ಕರುಣಾಜನಕ ಘಟನೆ ತೋದಲಬಾಗಿ ಗ್ರಾಮದಲ್ಲಿ ನಡೆದಿದೆ..

    ಅಥಣಿ ತಾಲೂಕಿನ ಪಾರ್ಥನಹಳ್ಳಿಯ ನಿವಾಸಿಯಾದ ಗಂಗವ್ವ ಚನ್ನಬಸಪ್ಪ ಪಾರ್ಥನಹಳ್ಳಿ (101 ವರ್ಷ) ಎಂಬ ಶತಾಯುಷಿ ಮಾತೆ ಕಳೆದ ಶುಕ್ರವಾರ ವಯೋಸಹಜ ಕಾರಣಗಳಿಂದಾಗಿ ನಿಧನರಾಗಿದ್ದರು. ತಾಯಿಯ ಸಾವಿನ ವಾರ್ತೆ ತಿಳಿಯುತ್ತಿದ್ದಂತೆಯೇ, ಅಥಣಿಯ ಪಾರ್ಥನಹಳ್ಳಿಯಲ್ಲೇ ವಾಸವಿದ್ದ ಅವರ ಮಗಳು ಹಣಮವ್ವ ರಾಮು ಮುಜ ಗೋಣಿ (76 ವರ್ಷ) ತೀವ್ರ ಆಘಾತಕ್ಕೆ ಒಳಗಾಗಿದ್ದರು.

    ತಮ್ಮ ಹೆತ್ತ ತಾಯಿಯ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಣಮವ್ವ ಅವರು ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮಕ್ಕೆ ಧಾವಿಸಿದ್ದರು. ಆದರೆ ಅಲ್ಲಿಗೆ ತಲುಪಿದಾಗ ತಾಯಿಯ ಪಾರ್ಥಿವ ಶರೀರವನ್ನು ಕಂಡು ಅವರ ದುಃಖ ಆಣೆಕಟ್ಟೆ ಒಡೆದಂತೆ ಉಕ್ಕಿ ಹರಿದಿದೆ. ತೀವ್ರ ಮಾನಸಿಕ ಆಘಾತ ಹಾಗೂ ಶೋಕವನ್ನು ತಡೆಯಲಾಗದೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಸುನೀಗಿದ ಹಣಮವ್ವ ಅವರ ಈ ಸಾವು ನೆರೆದಿದ್ದ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

  • ಸೇತುವೆ ಮೇಲಿಂದ ಟ್ರ್ಯಾಕ್ಟರ್ ಬಿದ್ದು ಒಂದೇ ಕುಟುಂಬದ 7 ಜನರ ದುರ್ಮರಣ…!!

    ಸೇತುವೆ ಮೇಲಿಂದ ಟ್ರ್ಯಾಕ್ಟರ್ ಬಿದ್ದು ಒಂದೇ ಕುಟುಂಬದ 7 ಜನರ ದುರ್ಮರಣ…!!

    ಕೊಪ್ಪಳ : ತುಂಗಭದ್ರಾ ಸೇತುವೆಯ ಮೇಲಿಂದ ಟ್ರ್ಯಾಕ್ಟರ್ ಕೆಳಗೆ ಬಿದ್ದು ಒಂದೇ ಕುಟುಂಬದ 7 ಜನರು ಮೃತಪಟ್ಟಿರುವ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ. ಈ ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ಟಿಬಿ ಡ್ಯಾಂ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಈ ದುರಂತ ಸಂಭವಿಸಿದೆ.

    ಮೃತರೆಲ್ಲರೂ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಹಾಗೂ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯಶವಂತ ನಗರ ನಿವಾಸಿಗಳಾಗಿದ್ದಾರೆ. ಕುಟುಂಬಸ್ಥರು ಹುಲಿಗೆಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

    ಟ್ರ್ಯಾಕ್ಟರ್‌ನಲ್ಲಿ ಸುಮಾರು 16 ಜನರು ಪ್ರಯಾಣಿಸುತ್ತಿದ್ದರು. ಇದೇ ವೇಳೆ ಹಿಂದಿನಿಂದ ವೇಗವಾಗಿ ಬಂದ ಟ್ಯಾಂಕರ್ ಲಾರಿ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗಾಯಾಳುಗಳ ಕಿರುಚಾಟ ಕೇಳಿ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ರಕ್ಷಣೆಗೆ ಮುಂದಾದರು.. ಗಾಯಾಳುಗಳನ್ನು ಅಂಬ್ಯುಲೆನ್ಸ್ ಮೂಲಕ ಹೊಸಪೇಟೆ ಮತ್ತು ಕೊಪ್ಪಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

    ದುರಂತದಲ್ಲಿ ಮೃತಪಟ್ಟವರಲ್ಲಿ ಕೆಂಚಪ್ಪ (35), ಮಹಾಂತೇಶ್ (18), ಒಂದು ವರ್ಷದ ಮಗು ಭರತ್, 12 ವರ್ಷದ ಸವಿತಾ, ಮಾರೇಶ್ ಹಾಗೂ ಗೌರಮ್ಮ ಸೇರಿದ್ದಾರೆ. ಇನ್ನು ಕೆಲ ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.

    ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಗೂ ಹೊಸಪೇಟೆ ಡಿವೈಎಸ್ಪಿ ಕೆಪಿ ಮುರುಳಿಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಪ್ಪಳ ಎಸ್‌ಪಿ ಎಲ್. ಅರಸಿದ್ದಿ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಹೊಸಪೇಟೆ ಸರ್ಕಾರಿ ಆಸ್ಪತ್ರೆ ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

  • ಮಹೀಂದ್ರಾ ಥಾರ್ ಹರಿದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು.!!!

    ಮಹೀಂದ್ರಾ ಥಾರ್ ಹರಿದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು.!!!

    ರಾಯಚೂರು: ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ಘಟನೆ ನಡೆದಿದೆ.

    ಅರಗಿನಮರ ಕ್ಯಾಂಪ್‌ನ ವಿದ್ಯಾರ್ಥಿನಿ ಭೂಮಿಕಾ (17) ಮೃತ ದುರ್ದೈವಿ. ಮೇಘನಾ, ಮಹೇಶ್ವರಿ, ಜಹೀದಾ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯರು.

    ಕಾಲೇಜು ಮುಗಿದು ವಿದ್ಯಾರ್ಥಿನಿಯರು ಮನೆಗೆ ತೆರಳುತ್ತಿದ್ದರು, ಈ ವೇಳೆ ರಿವರ್ಸ್ ತೆಗೆದುಕೊಳ್ಳುವಾಗ ಚಾಲಕನ ಅಜಾಗೂರಕತೆಯಿಂದ ವಾಹನ ವಿದ್ಯಾರ್ಥಿನಿಯರ ಮೇಲೆ ಹರಿದಿದೆ. ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇನ್ನೂ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸದ್ಯ ಸಿಂಧನೂರು ಸಂಚಾರ ಠಾಣೆ ಪೊಲೀಸರು ವಾಹನ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರಿಗೆ ಖಾಸಗಿ ಆಸ್ಪತ್ರೆ ಚಿಕಿತ್ಸೆ ಮುಂದುವರಿದಿದೆ. ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ಬಿಎಸ್ ವೈ ರನ್ನ ಕೆಳಗಿಳಿಸಿದವರೇ ಅವರ ಅಭಿಮಾನೋತ್ಸವ ಮಾಡುತ್ತಿದ್ದಾರೆಂದ ಸಚಿವ ಸತೀಶ್‌ ಜಾರಕಿಹೊಳಿ

    ಬಿಎಸ್ ವೈ ರನ್ನ ಕೆಳಗಿಳಿಸಿದವರೇ ಅವರ ಅಭಿಮಾನೋತ್ಸವ ಮಾಡುತ್ತಿದ್ದಾರೆಂದ ಸಚಿವ ಸತೀಶ್‌ ಜಾರಕಿಹೊಳಿ

    ದಾವಣಗೆರೆ: ರಾಜ್ಯ ರಾಜಕಾರಣದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿರುವ ‘ಅಭಿಮಾನೋತ್ಸವ’ ಕಾರ್ಯಕ್ರಮದ ಕುರಿತು ಸಚಿವ ಸತೀಶ್ ಜಾರಕಿಹೊಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

    ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದವರೇ ಇಂದು ಅವರ ಅಭಿಮಾನೋತ್ಸವ ಮಾಡುತ್ತಿರುವುದು ರಾಜಕೀಯ ವಿಪರ್ಯಾಸ ಎಂದು ಅವರು ಲೇವಡಿ ಮಾಡಿದ್ದಾರೆ. “ಬಿಜೆಪಿಯಲ್ಲಿ ಬಿಎಸ್‌ವೈ ಅವರನ್ನು ಮೂಲೆಗುಂಪು ಮಾಡಿದವರು ಮತ್ತು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದವರೇ ಇಂದು ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಕೇವಲ ಚುನಾವಣಾ ಗಿಮಿಕ್” ಎಂದು ಟೀಕಿಸಿದ್ದಾರೆ.

    ಹೈಕಮಾಂಡ್ ಹೇಳಿದರೆ ಐದು ವರ್ಷವೂ ನಾನೇ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯನವರ ಹೆಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯನವರು ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪದೇ ಪದೇ ಚರ್ಚೆ ಮಾಡುವ ಅಗತ್ಯವಿಲ್ಲ.ಹೈಕಮಾಂಡ್ ನಿರ್ಧಾರವೇ ಅಂತಿಮ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ

  • ಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ: 20 ಪ್ರಯಾಣಿಕರ ಜೀವ ಉಳಿಸಿ ಪ್ರಾಣ ಬಿಟ್ಟ ಚಾಲಕ.

    ಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ: 20 ಪ್ರಯಾಣಿಕರ ಜೀವ ಉಳಿಸಿ ಪ್ರಾಣ ಬಿಟ್ಟ ಚಾಲಕ.

    ಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೃತರನ್ನು ಬೆಂಗಳೂರು ಮೂಲದ ಶಿವಕುಮಾರ್ (50) ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಇಂದು ಮುಂಜಾನೆ 4:45ರ ಸುಮಾರಿಗೆ ತಾಳತ್ತಮನೆ ತಲುಪಿದಾಗ ಈ ಘಟನೆ ಸಂಭವಿಸಿದೆ. ಚಾಲನೆ ಮಾಡುತ್ತಿದ್ದಾಗಲೇ ಶಿವಕುಮಾರ್ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯ ಬಲಬದಿಯ ದರೆಗೆ (ಗುಡ್ಡದ ಅಂಚು) ಢಿಕ್ಕಿ ಹೊಡೆದು ವಾಲಿ ನಿಂತಿದೆ.ಬಸ್ ವೇಗವಾಗಿ ಚಲಿಸುತ್ತಿದ್ದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸದೆ, ದರೆಗೆ ತಾಗಿ ನಿಂತಿದ್ದರಿಂದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಶಿವಕುಮಾರ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.