Category: ಜಿಲ್ಲಾ‌ಸುದ್ದಿ

  • ಚಾಮರಾಜನಗರ : ಹೇರ್ ಕಟಿಂಗ್ ಸಲೂನ್‌ನಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!

    ಚಾಮರಾಜನಗರ : ಹೇರ್ ಕಟಿಂಗ್ ಸಲೂನ್‌ನಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!

    ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಗ್ರಾಮದಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಇಲ್ಲಿನ ದೇವರಾಜ್ ಎಂಬುವವರ ಸಲೂನ್‌ಗೆ ಮಂಗವೊಂದು ಬಂದು, ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

    ದಿನನಿತ್ಯ ಸಲೂನ್ ಬಳಿ ಬರುತ್ತಿದ್ದ ಈ ಮಂಗ, ಒಳಗೆ ಬಂದು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿತ್ತು. ಎಷ್ಟೇ ಗದರಿಸಿದರೂ ಕ್ಷೌರಿಕನ ಕೆಲಸ ಮುಗಿಯುವ ವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ಮಂಗನ ಈ ನಡೆ ಗಮನಿಸಿದ ಸಲೂನ್ ಮಾಲೀಕ ದೇವರಾಜ್, ಪ್ರೀತಿಯಿಂದ ಅದರ ತಲೆ ಬಾಚಿದ್ದಾರೆ.

    ಬಳಿಕ ಕೇಶ ವಿನ್ಯಾಸ ಮಾಡುವಂತೆ ನಟಿಸಿ ತಲೆ ಬಾಚಿದಾಗ, ಮಂಗ ಯಾವುದೇ ಗಲಾಟೆ ಮಾಡದೆ ಗಂಭೀರವಾಗಿ ಕುಳಿತು ಕೇಶ ವಿನ್ಯಾಸ ಮಾಡಿಸಿಕೊಂಡಿದೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಅಪರೂಪದ ಸ್ನೇಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ರೈಲಿನಲ್ಲಿ ಸೀಟಿಗಾಗಿ ಜಗಳ : ಇಬ್ಬರಿಗೆ ಚಾಕು ಇರಿತ.!!

    ರೈಲಿನಲ್ಲಿ ಸೀಟಿಗಾಗಿ ಜಗಳ : ಇಬ್ಬರಿಗೆ ಚಾಕು ಇರಿತ.!!

    ಮಂಡ್ಯ: ರೈಲಿನಲ್ಲಿ ಕೇವಲ ಸೀಟಿನ ವಿಚಾರಕ್ಕೆ ಗಲಾಟೆ ನಡೆದಿದ್ದು,ಈ ವೇಳೆ ಇಬ್ಬರಿಗೆ ಚಾಕುವಿನಿಂದ ಇರಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ-ರಾಣಿ ರೈಲಿನಲ್ಲಿ ಸೀಟಿಗಾಗಿ ನಡೆದ ಗಲಾಟೆ ನಡೆದಿದೆ. ನಂತರ ಇಬ್ಬರಿಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ.

    ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ನಡುವೆ ಸೀಟಿನ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ತುಮಕೂರು ಮೂಲದ ಶಿವಕುಮಾರ್ ಎಂಬುವರು “ಏಕೆ ಜಗಳ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದು, ಈ ಮಾತು ಆರೋಪಿಗಳ ಕೋಪಕ್ಕೆ ಕಾರಣವಾಗಿದೆ.
    ಆರೋಪಿಗಳಾದ ಸುಭಾನ್ ಖುರೇಶಿ, ಶೋಯಬ್ ಮತ್ತು ವಾಸೀಂ ಎಂಬುವರು ಶಿವಕುಮಾರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಮೊದಲು ಸುಭಾನ್ ಖುರೇಶಿ ಚಾಕುವಿನಿಂದ ಶಿವಕುಮಾರ್‌ಗೆ ಇರಿದಿದ್ದು, ನಂತರ ಶೋಯಬ್ ಕೂಡ ಮತ್ತೆ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಈ ಹಲ್ಲೆಯಿಂದ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜೀವ ಉಳಿಸಿಕೊಳ್ಳಲು ಶಿವಕುಮಾರ್ ತಕ್ಷಣ ರೈಲಿನ ಎಮರ್ಜೆನ್ಸಿ ಚೈನ್ ಎಳೆದಿದ್ದಾರೆ. ಇದರಿಂದ ರೈಲು ಮದ್ದೂರು ಸಮೀಪ ನಿಂತಿದೆ. ರೈಲು ನಿಂತ ಕೂಡಲೇ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಅಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಅವರನ್ನು ಹಿಡಿಯಲು ಮುಂದಾಗಿದ್ದಾರೆ.

    ಆರೋಪಿಗಳನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ, ಅವರಿಗೂ ಸಹ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಕುಮಾರ್ ಕೂಡ ಗಾಯಗೊಂಡಿದ್ದಾರೆ. ಈ ದೃಶ್ಯವನ್ನು ಕಂಡು ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

    ನಂತರ ಸ್ಥಳೀಯರು ಮತ್ತು ಪ್ರಯಾಣಿಕರು ಸೇರಿ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಶಿವಕುಮಾರ್ ಮತ್ತು ಕುಮಾರ್ ಅವರನ್ನು ತಕ್ಷಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.

  • ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಉದ್ಘಾಟನೆ.

    ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಉದ್ಘಾಟನೆ.

    ಬೆಂ.ಗ್ರಾ. ಜಿಲ್ಲೆ: ಶ್ರಮಿಕ ವರ್ಗದವರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಇಎಸ್ಐಸಿ ಆಸ್ಪತ್ರೆಯು ವರದಾನವಾಗಲಿದೆ. ಎಲ್ಲಾ ಕಾರ್ಮಿಕರು ವೈದ್ಯಕೀಯ ಸೇವೆಯ ಸದುಪಯೋಗ ಪಡೆಯಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ಹೇಳಿದರು.

    ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 100 ಹಾಸಿಗೆ ಸಾಮರ್ಥ್ಯದ ಇಎಸ್ಐಸಿ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

    ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯೇ ಕೇಂದ್ರ ಸರ್ಕಾರದ ಮೂಲಮಂತ್ರವಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಸುಮಾರು 101 ಕೋಟಿ ರೂ. ವೆಚ್ಚದಲ್ಲಿ ಇಎಸ್ಐಸಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಜತೆಗೆ ಬಳ್ಳಾರಿಯಲ್ಲಿ ಸುಮಾರು 1.5 ಲಕ್ಷ ಜವಳಿ ಕಾರ್ಮಿಕರಿಗಾಗಿ ₹150 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಇಎಸ್‌ಐಸಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಕಾರ್ಮಿಕರ ಘನತೆ ಮತ್ತು ಅವರಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಅಚಲ ಬದ್ಧತೆಯನ್ನು ಹೊಂದಿದೆ ಎಂದರು.

    ಕೇಂದ್ರ ಸರ್ಕಾರವು ಇಎಸ್‌ಐಸಿ ಆಸ್ಪತ್ರೆ ಮೂಲಕ
    ಕಾರ್ಮಿಕರಿಗೆ ಆರ್ಥಿಕ ಹೊರೆ ತಗ್ಗಿಸಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಹಾಗೂ ಹೊಸ ಕಾರ್ಮಿಕ ಸಂಹಿತೆಯಡಿ ಲಿಂಗ ತಾರತಮ್ಯವಿಲ್ಲದೇ ಸಮಾನ ಕೆಲಸಕ್ಕೆ ಸಮಾನ ವೇತನ ಸಹ‌ ನೀಡುತ್ತಿದ್ದೇವೆ ತಿಳಿಸಿದರು.

    *ದೇಶಾದಲ್ಲಿ 20 ಇಎಸ್ಐಸಿ ಮೆಡಿಕಲ್ ಕಾಲೇಜು ಸ್ಥಾಪನೆ*

    ದೇಶಾದ್ಯಂತ 20 ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಕಾರ್ಮಿಕರ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಚಿಕಿತ್ಸೆಯ ಭರವಸೆ ನೀಡಲಾಗಿದೆ.
    ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಜಾರಿಗೆ ತರಲಾಗಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಖಾಸಗಿ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಮತ್ತು ನೇಮಕಾತಿ ಪತ್ರದ ಖಾತರಿ ಒದಗಿಸುತ್ತವೆ. ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ 40 ವರ್ಷ ದಾಟಿದ ಪ್ರತಿಯೊಬ್ಬ ಕಾರ್ಮಿಕನಿಗೂ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಇದರ ಉದ್ದೇಶ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಕಾರ್ಮಿಕರ ಜೀವ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಸಚಿವರು ಹೇಳಿದರು.

    ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಇಂದು ಸುಮಾರು 101 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಇಎಸ್ಐಸಿ ಆಸ್ಪತ್ರೆ ನಿರ್ಮಿಸಲಾಗಿದ್ದು, ದೊಡ್ಡಬಳ್ಳಾಪುರ ಭಾಗದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಈ ಹಿಂದೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಈಗ ಕಾರ್ಮಿಕರಿಗೆ ಇಲ್ಲಿಯೇ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯಲಿದೆ. ಪ್ರಸ್ತುತ ಈ ಆಸ್ಪತ್ರೆಗೆ 9 ಜನ ತಜ್ಞ ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸದ್ಯಕ್ಕೆ ಇದು ರಾಜಾಜಿನಗರ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದರು.

    ದೇಶಾದ್ಯಂತ ಇರುವ 15 ಕೋಟಿ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ ಇಎಸ್ಐಸಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸ್ತುತ 1,550 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ವಿಶೇಷವಾಗಿ ಕಾರ್ಮಿಕರ ಮಕ್ಕಳಿಗಾಗಿ 702 ಸೀಟುಗಳನ್ನು ಮೀಸಲಿಡಲಾಗಿದೆ. ಮುಂಬರುವ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ಇಂತಹ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಸಚಿವರು ತಿಳಿಸಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಮತಕ್ಷೇತದ ಸಂಸದರಾದ ಡಾ. ಕೆ.ಸುಧಾಕರ ಅವರು ಮಾತನಾಡಿ, ಇಎಸ್ಐಸಿ ಆಸ್ಪತ್ರೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ. ದೊಡ್ಡಬಳ್ಳಾಪುರದ ಇಎಸ್ಐಸಿ ಆಸ್ಪತ್ರೆಯು ಐದು ಎಕರೆ ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿದ್ದು, ಕಾರ್ಮಿಕರಿಗೆ ಗುಣಮಟ್ಟದ ವೈದ್ಯಕೀಯ ಒದಗಿಸಲಿದೆ. ಈ ಭಾಗದಲ್ಲಿ 5 ಲಕ್ಷ ಕಾರ್ಮಿಕರು ಇದ್ದು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಯ ಕಾರ್ಮಿಕರು ಸಹ ವೈದ್ಯಕೀಯ ಸೇವೆ ಪಡೆಯಲು ಸಹಕಾರಿಯಾಗಲಿದೆ ಎಂದರು.

    ವೈದ್ಯರು ದಯಾ ಶಕ್ತಿಯಿಂದ ಕಾರ್ಮಿಕ ವರ್ಗಕ್ಕೆ ಅನಾರೋಗ್ಯ ವಾಸಿ ಮಾಡಿ ಆರೋಗ್ಯ ಸೇವೆ ಒದಗಿಸುವ ಮೂಲಕ ಕಾರ್ಮಿಕರ
    ಕಣ್ಣಿರು ಒರೆಸುವ ಒಳ್ಳೆಯ ಸೇವಾ ಕೆಲಸ ಆಗಬೇಕು ಎಂದು ಹೇಳಿದರು.

    ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ಇಲ್ಲಿ ನೂರಾರು ಕಾರ್ಖಾನೆಗಳು, ಕಂಪನಿ ಸ್ಥಾಪನೆಯಾಗಿದ್ದು, ಅವುಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಇಎಸ್ಐಸಿ ಆಸ್ಪತ್ರೆಯು ವೈದ್ಯಕೀಯ ಸೇವೆಗೆ ಅನುಕೂಲವಾಗಲಿದೆ. ಅದರಲ್ಲೂ ದೂರದ ರಾಜ್ಯಗಳು, ಜಿಲ್ಲೆಗಳಿಂದ ವಲಸೆ ಕಾರ್ಮಿಕರಿಗಂತು ಸಹಕಾರಿಯಾಗಲಿದೆ ಎಂದು ಹೇಳಿದರು.

    ಇದೇ ವೇಳೆ ವರ್ಚುವಲ್ ಮೂಲಕ ಬಳ್ಳಾರಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು‌.

    ಕಾರ್ಯಕ್ರಮದಲ್ಲಿ ಇ.ಎಸ್.ಐ.ಸಿ. ಯೋಜನೆಯಡಿ ಅವಲಂಬಿತ ಭತ್ಯೆ, ಶಾಶ್ವತ ಅಂಗವೈಕಲ್ಯ ಭತ್ಯೆ, ಮಾತೃತ್ವ ಭತ್ಯೆಯ ಫಲಾನುಭವಿಗಳಿಗೆ ನಗದು ಸೌಲಭ್ಯದ ಚೆಕ್ ಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ವೈದ್ಯಕೀಯ ಆಯುಕ್ತರಾದ ಡಾ.ಆರ್ ಶ್ರೀನಿವಾಸ್, ಬಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ ಕುಮಾರ್, ಇಎಸ್ಐಸಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.

  • ಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

    ಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಅಕ್ಕನ ಮಗನನ್ನೇ ಮಗನಂತೆ ಸಾಕಿದ ಮಾವನಿಗೆ ಆತ ಕೊಟ್ಟ ದ್ರೋಹ ಮತ್ತು ಪತ್ನಿಯ ಅನೈತಿಕ ಸಂಬಂಧ, ಕೊನೆಗೆ ಇಬ್ಬರು ಹಸುಗೂಸುಗಳು ಸೇರಿದಂತೆ ಒಟ್ಟು ಮೂವರ ಬಲಿಗೆ ಕಾರಣವಾಗಿದೆ.

    ಮಗನಂತಿದ್ದ ಅಕ್ಕನ ಮಗನೇ ವಿಲನ್!

    ಮೃತ ಶಿವಣ್ಣ ಅವರ ಅಕ್ಕ ಮರಣ ಹೊಂದಿದಾಗ, ಅನಾಥನಾಗಿದ್ದ ಅಕ್ಕನ ಮಗ ಹೇಮಂತ್‌ನನ್ನು ಶಿವಣ್ಣ ತನ್ನ ಮನೆಗೆ ಕರೆತಂದಿದ್ದರು. ಸ್ವಂತ ಮಗನಿಗಿಂತ ಮಿಗಿಲಾಗಿ ಪ್ರೀತಿ ನೀಡಿ, ಆಶ್ರಯ ನೀಡಿ ಸಾಕಿದ್ದರು. ಆದರೆ ಹೇಮಂತ್ ಬೆಳೆಯುತ್ತಾ ತನ್ನನ್ನು ಸಾಕಿದ ಮಾವನ ಸಂಸಾರಕ್ಕೇ ಕೊಳ್ಳಿ ಇಡಲು ಮುಂದಾದ. ಮಾವನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿ, ಆಕೆಯ ಮನಸ್ಸನ್ನು ಪೂರ್ತಿಯಾಗಿ ಬದಲಿಸಿದ್ದ.

    ಹಲವು ಬಾರಿ ನಡೆದ ಸಂಧಾನ:

    ಶಿವಣ್ಣನಿಗೆ ಪತ್ನಿ ಮತ್ತು ಅಕ್ಕನ ಮಗನ ನಡುವಿನ ಅಕ್ರಮ ಸಂಬಂಧದ ವಿಷಯ ತಿಳಿಯುತ್ತಿದ್ದಂತೆ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಒಮ್ಮೆ ಈ ವಿಚಾರವಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆಗ ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿ, ಹೇಮಂತನನ್ನು ಮನೆಯಿಂದ ಹೊರಹಾಕುವಂತೆ ತಿಳಿಸಿ, “ಇನ್ನಾದರೂ ಮಕ್ಕಳಿಗಾಗಿ ಅನ್ಯೋನ್ಯವಾಗಿ ಬದುಕಿ” ಎಂದು ದಂಪತಿಗಳಿಗೆ ಬುದ್ಧಿ ಹೇಳಿ ಒಂದಾಗಿಸಿದ್ದರು.

    ಕ್ಷಮೆ ಕೇಳಿ ನಾಟಕವಾಡಿದ ಪತ್ನಿ:

    ಕೆಲ ದಿನಗಳ ಹಿಂದೆ ಕಾವ್ಯ ತನ್ನ ಪ್ರಿಯಕರ ಹೇಮಂತ್ ಜೊತೆ ಓಡಿ ಹೋಗಿದ್ದಳು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಕರೆತಂದಾಗ, ಪೊಲೀಸರ ಮುಂದೆ ಕಣ್ಣೀರು ಹಾಕಿ, “ನನ್ನಿಂದ ತಪ್ಪಾಗಿದೆ, ಇನ್ನು ಮುಂದೆ ಗಂಡ-ಮಕ್ಕಳ ಜೊತೆ ಚೆನ್ನಾಗಿರುತ್ತೇನೆ” ಎಂದು ನಾಟಕವಾಡಿ ಮನೆಗೆ ಮರಳಿದ್ದಳು. ಪತ್ನಿ ಸುಧಾರಿಸಿಕೊಂಡಳು ಎಂದು ನಂಬಿದ ಶಿವಣ್ಣ ಆಕೆಯನ್ನು ಪ್ರೀತಿಯಿಂದಲೇ ಬರಮಾಡಿಕೊಂಡಿದ್ದರು.

    ಮನೆ ದೋಚಿ ಪರಾರಿಯಾದ ‘ಕಿಲ್ಲರ್’ ಪತ್ನಿ

    ಮನೆಗೆ ಮರಳಿದ ಕಾವ್ಯಳ ಉದ್ದೇಶ ಸುಧಾರಿಸುವುದಾಗಿರಲಿಲ್ಲ. ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ಸಾಧಿಸಿದ ಆಕೆ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತ್ ಜೊತೆ ಓಡಿ ಹೋದಳು. ಸಂಜೆ ಮನೆಗೆ ಬಂದ ಶಿವಣ್ಣನಿಗೆ ಪತ್ನಿಯ ಈ ಎರಡನೇ ದ್ರೋಹ ಅರಗಿಸಿಕೊಳ್ಳಲಾಗಲಿಲ್ಲ.

    ಮಕ್ಕಳನ್ನು ಕೊಂದು ಸಾವಿಗೆ ಶರಣಾದ ತಂದೆ:

    ನಂಬಿದ ಅಕ್ಕನ ಮಗನಿಂದ ದ್ರೋಹ, ಪತ್ನಿಯಿಂದ ಅವಮಾನ ಹಾಗೂ ತಾನು ಮಗನಂತೆ ಸಾಕಿದವನಿಂದಲೇ ಸಂಸಾರ ಹಾಳಾದ ನೋವು ಶಿವಣ್ಣನನ್ನು ಕ್ರೂರ ನಿರ್ಧಾರಕ್ಕೆ ದೂಡಿತು. ತನ್ನಿಬ್ಬರು ಮುದ್ದಾದ ಗಂಡು ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಅವರನ್ನು ಕೈಯಾರೆ ಉಸಿರುಗಟ್ಟಿಸಿ ಸಾಯಿಸಿದರು.
    ಮಕ್ಕಳ ಮೃತದೇಹದ ಪಕ್ಕದಲ್ಲೇ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

    ಗ್ರಾಮದಲ್ಲಿ ಶೋಕಸಾಗರ:

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಅಕ್ರಮ ಸಂಬಂಧ ಮತ್ತು ನಂಬಿಕೆ ದ್ರೋಹವು ಒಂದು ಸುಂದರ ಸಂಸಾರವನ್ನು ಹೇಗೆ ಸ್ಮಶಾನವಾಗಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪರಾರಿಯಾಗಿರುವ ಕಾವ್ಯ ಮತ್ತು ಹೇಮಂತ್‌ಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

  • ತಳ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯ – ಸ್ವಾಮೀಜಿಗಳ ಅಭಿಪ್ರಾಯ

    ತಳ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯ – ಸ್ವಾಮೀಜಿಗಳ ಅಭಿಪ್ರಾಯ

    ದಾವಣಗೆರೆ : ದೇವಾಲಯ ಪ್ರವೇಶದಂತಹ ಮೂಲಭೂತ ಹಕ್ಕುಗಳಿಗೂ ತಡೆ ಎದುರಾಗಿ ದೌರ್ಜನ್ಯಗಳು ನಡೆಯುವಾಗ ತಳ ಸಮುದಾಯಗಳು ಸಹಜವಾಗಿ ಮತಾಂತರದ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತವೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.

    ಪ್ರಬಲ ವರ್ಗಗಳು ತಳ ಸಮುದಾಯಗಳನ್ನು ಸಮಾನವಾಗಿ ಅಪ್ಪಿಕೊಂಡಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸದೇ ಇರ್ತಿತ್ತೇ ಎಂದು ಅವರು ಅಭಿಪ್ರಾಯಪಟ್ಟರು.

    ಯರಗುಂಟೆ ಗ್ರಾಮದಲ್ಲಿ ಕುಂಚಿಟಿಗ ಸಮಾಜದಿಂದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಪೂರ್ವಾಶ್ರಮದ ಪಾಲಕರಿಗೆ ಮನೆ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮತಾಂತರವು ಸೂಕ್ಷ್ಮ ವಿಚಾರವಾಗಿದ್ದು, ಅದರ ಹಿಂದೆ ಇರುವ ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ದೌರ್ಜನ್ಯವನ್ನೇ ನೆಪವನ್ನಾಗಿ ಮಾಡಿಕೊಂಡು ಕೆಲವರು ಮತಾಂತರಗೊಳ್ಳುತ್ತಿರುವುದೂ ಇದೆ; ಆದರೆ ಆಸೆ-ಆಮಿಷಗಳು ಸೇರಿದಂತೆ ಹಲವು ಕಾರಣಗಳು ಇದಕ್ಕೆ ಕಾರಣವಾಗುತ್ತಿವೆ. ಮುಖ್ಯವಾಹಿನಿಯಲ್ಲಿರುವವರು ತಳ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸಾಗಿದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅವರು ಹೇಳಿದರು.

    ಹಿಂದಿನ ದಿನಗಳಲ್ಲಿ ತಳ ಸಮುದಾಯದವರಿಗೆ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯಲ್ಲಿ ಅವಕಾಶ ದೊರಕಿದ್ದರೆ, ಇಂದಿನ ಮತಾಂತರದ ಸಮಸ್ಯೆ ಇಷ್ಟು ತೀವ್ರವಾಗಿರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಯಾವುದೇ ಸಮಸ್ಯೆ ಎದುರಾದರೂ ಭಾರತೀಯ ಮೌಲ್ಯಗಳನ್ನು ಬಿಟ್ಟು ಹೋಗಬಾರದು ಎಂಬುದು ಮಠಾಧೀಶರ ಆಶಯವೆಂದು ಹೇಳಿದರು.ಸನಾತನ ಧರ್ಮಕ್ಕೆ ಹೊರಗಿನ ಧರ್ಮಗಳಿಂದ ಅಪಾಯವಿಲ್ಲ, ಆದರೆ ಧಾರ್ಮಿಕ ಅಸಮತೋಲನವೇ ದೊಡ್ಡ ಸವಾಲು ಎಂದು ಪತ್ರಕರ್ತ ರವಿ ಹೆಗಡೆ ಕಳವಳ ವ್ಯಕ್ತಪಡಿಸಿದರು. ಮೇಲು-ಕೀಳು ಎಂಬ ಭೇದಭಾವ ಮುಂದುವರಿದರೆ ಧರ್ಮಕ್ಕೆ ಅಪಾಯ ಹೆಚ್ಚುತ್ತದೆ ಎಂದರು.

    ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಎಲ್ಲ ಮಠಾಧೀಶರು ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

    ಜಾತಿ ವ್ಯವಸ್ಥೆಯೇ ಹಿಂದೂ ಧರ್ಮಕ್ಕೆ ದೊಡ್ಡ ಸವಾಲಾಗಿದ್ದು, ರಾಜಕೀಯದಲ್ಲಿಯೂ ಅದರ ದುರುಪಯೋಗವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.ಜಾತೀಯತೆಯ ಅನುಭವಗಳನ್ನು ಸ್ವತಃ ನಾವು ಎದುರಿಸಿದ್ದೇವೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿ, ಇಂತಹ ಸ್ಥಿತಿ ಯಾರಿಗೂ ಎದುರಾಗಬಾರದು ಎಂದರು.

    ಕಾರ್ಯಕ್ರಮದಲ್ಲಿ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

  • ಹಸೆಮಣೆ ಏರಬೇಕಿದ್ದ ಯುವಕ ಅಪಘಾತದಲ್ಲಿ ಬಲಿ: ಮದುವೆ ಮನೆಯಲ್ಲಿ ಮೌನ ಆವರಿಸಿದೆ.

    ಹಸೆಮಣೆ ಏರಬೇಕಿದ್ದ ಯುವಕ ಅಪಘಾತದಲ್ಲಿ ಬಲಿ: ಮದುವೆ ಮನೆಯಲ್ಲಿ ಮೌನ ಆವರಿಸಿದೆ.

    ಹಾಸನ: ವಿಧಿ ಎಂಬುದು ಎಷ್ಟು ಕ್ರೂರ ಎಂಬುದಕ್ಕೆ ಹಾಸನ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇನ್ನೇನು ಐದಾರು ದಿನಗಳಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಯುವಕನೊಬ್ಬ, ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಮೂಗಲಿ ಎಂಬಲ್ಲಿ ನಡೆದಿದೆ. ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋಗುವ ಆಸೆಯೇ ಕೊನೆಯಾಯಿತು

    ಮೃತ ಯುವಕನನ್ನು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆ ನಿವಾಸಿ ಮನು ಎಲ್‌ಎನ್ ಎಂದು ಗುರುತಿಸಲಾಗಿದೆ. ಮನು ಅವರ ಮದುವೆಯು ಮುಂದಿನ ತಿಂಗಳು ಮೇ 10, 2026 ರಂದು ನಿಶ್ಚಯವಾಗಿತ್ತು. ಮದುವೆಗೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿತ್ತಿದ್ದವು. ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ತನ್ನ ಮದುವೆಯ ಸವಿನೆನಪಿಗಾಗಿ ‘ಪ್ರೀ ವೆಡ್ಡಿಂಗ್ ಶೂಟ್’ (Pre-wedding shoot) ಮಾಡಿಸಿಕೊಳ್ಳಬೇಕೆಂಬ ಹಂಬಲ ಮನುವಿಗಿತ್ತು. ಈ ಕಾರಣಕ್ಕಾಗಿ ಹುಡುಗಿಯನ್ನು ಕರೆತರಲು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವಿಧಿ ಮನುವಿನ ಜೀವನಕ್ಕೆ ಅಂತ್ಯಾವಾಡಿದೆ.

    ಸಕಲೇಶಪುರ ತಾಲ್ಲೂಕಿನ ಮೂಗಲಿ ಎಂಬಲ್ಲಿ ಮನು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ವೇಗವಾಗಿ ಅಪ್ಪಳಿಸಿದೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ, ಮನು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸುಂದರ ಕನಸುಗಳನ್ನು ಹೊತ್ತು ಮದುವೆಯ ತಯಾರಿಯಲ್ಲಿದ್ದ ಯುವಕ ಹೀಗೆ ಅಕಾಲಿಕವಾಗಿ ಸಾವನ್ನಪ್ಪಿರುವುದು ಇಡೀ ಜಿಲ್ಲೆಯನ್ನು ಕಣ್ಣೀರಿಡುವಂತೆ ಮಾಡಿದೆ.

    ಯಾವ ಮನೆಯಲ್ಲಿ ಮದುವೆ ಮಂತ್ರಗಳು ಮೊಳಗಬೇಕಿತ್ತೋ, ಅಲ್ಲಿಂದು ಮಗನನ್ನು ಕಳೆದುಕೊಂಡ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.ಮಧು ಮಗಳನ್ನ ಕರೆತರಲು ಹೋದ ಮಗ ಬಾರದ ಲೋಕಕ್ಕೆ ತೆರಳಿದ್ದಾನೆ ಎಂಬ ಸುದ್ದಿ ಕೇಳಿ ಲಕ್ಕುಂದ ಗ್ರಾಮದ ದರ್ಬಾರ್ ಪೇಟೆಯಲ್ಲಿ ಮೌನ ಆವರಿಸಿದೆ. ಇತ್ತ ತನ್ನ ಬಾಳ ಸಂಗಾತಿಯಾಗಬೇಕಿದ್ದವನನ್ನು ಕಳೆದುಕೊಂಡ ವಧುವಿನ ಸ್ಥಿತಿ ವರ್ಣನಾತೀತವಾಗಿದೆ.

    “ವಿಧಿಯ ಆಟ ಬಲ್ಲವರಾರು? ಮದುವೆಯ ಆಮಂತ್ರಣ ಪತ್ರಿಕೆ ಹಂಚಿ ಎಲ್ಲರನ್ನೂ ಕರೆಯುತ್ತಿದ್ದ ಕೈಗಳು, ಇಂದು ಆತನ ಚಿತೆಗೆ ಅಗ್ನಿ ಸ್ಪರ್ಶ ಮಾಡುವಂತಾಗಿರುವುದು ದೌರ್ಭಾಗ್ಯ.”ಮೃತ ಮನು ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸೋಣ.

  • ಹೆಂಡತಿ ತವರು ಮನೆಗೆ ಹೋದರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

    ಹೆಂಡತಿ ತವರು ಮನೆಗೆ ಹೋದರೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

    ಚಾಮರಾಜನಗರ: ಪ್ರೀತಿ ಎನ್ನುವುದು ಎಷ್ಟೋ ಬಾರಿ ಮನುಷ್ಯನನ್ನು ಮೃದುವಾಗಿಸುತ್ತದೆ, ಆದರೆ ಅದೇ ಪ್ರೀತಿ ಅತಿಯಾದಾಗ ಅನಾಹುತಕ್ಕೂ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪತ್ನಿ ತನ್ನ ತವರು ಮನೆಗೆ ಹೋಗಿದ್ದಾಳೆ ಎಂಬ ಸಣ್ಣ ಕಾರಣಕ್ಕೆ ಮನನೊಂದ ಪತಿಯೊಬ್ಬ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

    ನಡೆದಿದ್ದೇನು?
    ಜಿಲ್ಲೆಯ ಬಿದರಹಳ್ಳಿ ಗ್ರಾಮದ ನಿವಾಸಿಯಾದ ಮೋಹನ್‌ ಕುಮಾರ್‌ (38) ಎಂಬುವವರೇ ಮೃತ ದುರ್ದೈವಿ. ಇವರ ಪತ್ನಿ ಕೇವಲ ಮೂರು ದಿನಗಳ ಹಿಂದಷ್ಟೇ ತನ್ನ ತವರು ಮನೆಗೆ ತೆರಳಿದ್ದರು. ಆದರೆ, ಪತ್ನಿ ಹೋದ ಮೇಲೆ ಒಂಟಿತನ ಅನುಭವಿಸಿದ ಮೋಹನ್, ಆಕೆ ಮರಳಿ ಬಾರದಿದ್ದಕ್ಕೆ ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ.

    ಮದ್ಯದೊಂದಿಗೆ ಲಾರಿ ಕೂಲಂಟ್ ಸೇವನೆ!
    ಮನಸ್ಸಿನ ನೋವನ್ನು ತಾಳಲಾರದೆ ಮೋಹನ್ ಕುಮಾರ್ ಅವರು ಮದ್ಯದ ಜೊತೆಗೆ ಲಾರಿಯ ಕೂಲಂಟ್ (Coolant) ಮಿಶ್ರಣ ಮಾಡಿ ಸೇವಿಸಿದ್ದಾರೆ. ಇದರಿಂದಾಗಿ ಅವರ ಸ್ಥಿತಿ ಗಂಭೀರಗೊಂಡಿದೆ. ಕೂಡಲೇ ಸ್ಥಳೀಯರು ಮತ್ತು ಅಕ್ಕಪಕ್ಕದವರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರಾದರೂ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ದಾರಿಯಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.

    ಪೊಲೀಸರ ಭೇಟಿ
    ಈ ಕುರಿತು ಮಾಹಿತಿ ತಿಳಿದ ಕೂಡಲೇ ರಾಮಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

    ಗಮನಿಸಿ: ಜೀವನದಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಕ್ಷಣಿಕ ಭಾವೋದ್ವೇಗಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವ ಮುನ್ನ ನಿಮ್ಮನ್ನು ನಂಬಿರುವ ಕುಟುಂಬದ ಬಗ್ಗೆ ಯೋಚಿಸಿ.

  • ಮಿತಿಮೀರಿದ ಯುವಜೋಡಿಯ ಅಸಭ್ಯ ವರ್ತನೆ: ನಡುರಸ್ತೆಯಲ್ಲೇ ರೋಮ್ಯಾನ್ಸ್, ಪ್ರಶ್ನಿಸಿದವರಿಗೆ ಅವಾಜ್‌.!

    ಮಿತಿಮೀರಿದ ಯುವಜೋಡಿಯ ಅಸಭ್ಯ ವರ್ತನೆ: ನಡುರಸ್ತೆಯಲ್ಲೇ ರೋಮ್ಯಾನ್ಸ್, ಪ್ರಶ್ನಿಸಿದವರಿಗೆ ಅವಾಜ್‌.!

    ಮಣಿಪಾಲ: ವಿದ್ಯಾಕಾಶಿ, ಸುಶಿಕ್ಷಿತರ ನಾಡು ಎಂದೇ ಕರೆಸಿಕೊಳ್ಳುವ ಉಡುಪಿಯ ಮಣಿಪಾಲದಲ್ಲಿ ಯುವಜೋಡಿಯೊಂದು ನಡುರಸ್ತೆಯಲ್ಲೇ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಘಟನೆ ನಡೆದಿದೆ.

    ಮಣಿಪಾಲದ ಜನನಿಬಿಡ ರಸ್ತೆಯಲ್ಲಿ ತಡರಾತ್ರಿ ಯುವಕ ಮತ್ತು ಯುವತಿಯೊಬ್ಬರು ಸಾರ್ವಜನಿಕವಾಗಿ ಪರಸ್ಪರ ಆಲಂಗಿಸಿಕೊಂಡು ರೋಮ್ಯಾನ್ಸ್ ಮಾಡುತ್ತಿದ್ದರು. ವಿದೇಶಿ ಸಂಸ್ಕೃತಿಗೆ ಮಾರುಹೋಗಿರುವ ಈ ಯುವಜನತೆ, ಸಾರ್ವಜನಿಕ ಸ್ಥಳ ಎಂಬ ಪರಿಜ್ಞಾನವೇ ಇಲ್ಲದೆ ವರ್ತಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

    ರಸ್ತೆಯಲ್ಲಿ ಹೋಗುತ್ತಿದ್ದ ನಾಗರಿಕರೊಬ್ಬರು ಈ ಅಸಭ್ಯ ವರ್ತನೆಯನ್ನು ಪ್ರಶ್ನಿಸಿದಾಗ, ತಪ್ಪು ಒಪ್ಪಿಕೊಳ್ಳುವ ಬದಲು ಯುವಕ ಆಕ್ರೋಶಗೊಂಡು ಮರು ಪ್ರಶ್ನೆ ಮಾಡಿದ್ದಾನೆ. ನಾಗರಿಕರ ತರಾಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಜೋಡಿ ಅಲ್ಲಿಂದ ಜಾಗ ಖಾಲಿ ಮಾಡಿದೆ.

    ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ನೆಟ್ಟಿಗರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಇದು ಶಿಕ್ಷಣ ಪಡೆಯುವ ಜಾಗವೋ ಅಥವಾ ಇಂತಹ ಅಸಭ್ಯ ಕೆಲಸ ಮಾಡುವ ಜಾಗವೋ?” ಎಂದು ಹಲವರು ಪ್ರಶ್ನಿಸಿದ್ದಾರೆ.

    ಮಣಿಪಾಲದಂತಹ ಶೈಕ್ಷಣಿಕ ಕೇಂದ್ರದಲ್ಲಿ ಇಂತಹ ಘಟನೆಗಳು ಸಂಸ್ಕೃತಿಯ ಅಧಃಪತನಕ್ಕೆ ಸಾಕ್ಷಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪತ್ನಿಯ ನಡತೆಯ ಮೇಲೆ ಸಂಶಯ.. ನಡು ರಸ್ತೆಯಲ್ಲೇ ಹಂಡತಿಯ ರಕ್ತ ಹರಿಸಿದ ಗಂಡ.!

    ಪತ್ನಿಯ ನಡತೆಯ ಮೇಲೆ ಸಂಶಯ.. ನಡು ರಸ್ತೆಯಲ್ಲೇ ಹಂಡತಿಯ ರಕ್ತ ಹರಿಸಿದ ಗಂಡ.!

    ಕೆ.ಜಿ.ಎಫ್: ಒಂದು ಕ್ಷಣದ ಕೋಪ ಮತ್ತೆ ಅನುಮಾನ ಏನೆಲ್ಲಾ ಮಾಡುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..

    ಕೋಲಾರದಲ್ಲಿ ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿದ ಪತಿ ತನ್ನ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಬ*ರ್ಬರವಾಗಿ ಕೊ*ಲೆ ಮಾಡಿದ್ದಾನೆ. ಘಟನೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದ ಬಳಿ ನಡೆದಿದೆ.

    ಮೃತರನ್ನು ಈಶ್ವರಮ್ಮ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಆಂಧ್ರಪ್ರದೇಶದ ಪೆದ್ದೂರು ಮೂಲದ ಗೋಪಿನಾಥ ಎಂದು ಗುರುತಿಸಲಾಗಿದೆ. ಈ ದಂಪತಿ ಇತ್ತೀಚೆಗೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.

    ಸಂಬಂಧಿಕರ ಭೇಟಿ ಮಾಡಿ ವಾಪಸ್ ಆಗುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ದಂಪತಿಗಳು ಜಗಳ ಮಾಡಿಕೊಂಡೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ಪತ್ನಿಯ ಶೀಲದ ಮೇಲೆ ಮೊದಲೇ ಶಂಕೆ ಹೊಂದಿದ್ದ ಗೋಪಿನಾಥ, ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡಿದ್ದಾನೆ. ತನ್ನೊಂದಿಗೆ ತಂದಿದ್ದ ಮಚ್ಚಿನಿಂದ ಈಶ್ವರಮ್ಮ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಈಶ್ವರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಆರೋಪಿ ಗೋಪಿನಾಥ್ ವೃತ್ತಿಯಲ್ಲಿ ಟೈಲರ್ ಆಗಿದ್ದು, ಆರೋಪಿಯಿಂದ ಒಂದು ದ್ವಿಚಕ್ರ ವಾಹನ ಹಾಗೂ ಹರಿತವಾದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ.

  • ತಂಗಿ ತಂಗಿ ಎಂದವ ಜೊತೆ ಸ್ನೇಹಿತನ ಹೆಂಡತಿ ಜೊತೆ ಪರಾರಿ : ಮಂಡ್ಯದಲ್ಲಿ ವಿಚಿತ್ರ ಪ್ರೇಮ ಪುರಾಣ!

    ತಂಗಿ ತಂಗಿ ಎಂದವ ಜೊತೆ ಸ್ನೇಹಿತನ ಹೆಂಡತಿ ಜೊತೆ ಪರಾರಿ : ಮಂಡ್ಯದಲ್ಲಿ ವಿಚಿತ್ರ ಪ್ರೇಮ ಪುರಾಣ!

    ಮಂಡ್ಯ: ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಪತ್ನಿಯೊಬ್ಬಳು ತನ್ನ ಗಂಡನಿಗೆ ಕೈ ಕೊಟ್ಟು, ಆತನ ಆಪ್ತ ಸ್ನೇಹಿತನ ಜೊತೆಯೇ ಓಡಿ ಹೋಗಿ ಎರಡನೇ ಮದುವೆಯಾಗಿರುವ ವಿಲಕ್ಷಣ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ.

    ನಡೆದಿದ್ದೇನು?
    ಬನ್ನಂಗಾಡಿಯ ಆಟೋ ಚಾಲಕ ಸಾಗರ್ ಮತ್ತು ಹರವು ಗ್ರಾಮದ ರಕ್ಷಿತಾ ಕಳೆದ 4-5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೂ ರಕ್ಷಿತಾ ಪಟ್ಟು ಹಿಡಿದು ಸಾಗರ್‌ನನ್ನು ಮದುವೆಯಾಗಿದ್ದಳು. ಆದರೆ, ಈ ಸುಂದರ ಸಂಸಾರಕ್ಕೆ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದು ಸಾಗರ್‌ನ ಬೆಸ್ಟ್ ಫ್ರೆಂಡ್ ಇಂದ್ರ.

    ‘ತಂಗಿ’ ತಂಗಿ ಎಂದವನೇ ತಾಳಿ ಕಟ್ಟಿದ!

    ಇಂದ್ರ ಕೂಡ ಆಟೋ ಚಾಲಕನಾಗಿದ್ದು, ಸಾಗರ್‌ನ ಆತ್ಮೀಯ ಗೆಳೆಯನಾಗಿದ್ದ. ಸಾಗರ್ ಮನೆಗೆ ಹೋದಾಗಲೆಲ್ಲ ರಕ್ಷಿತಾಳನ್ನು “ನನಗೆ ತಂಗಿ ಇಲ್ಲ, ಇವಳೇ ನನ್ನ ತಂಗಿ” ಎಂದು ಎಲ್ಲರ ಮುಂದೆ ನಾಟಕವಾಡುತ್ತಿದ್ದ. ಕಳೆದ ರಕ್ಷಾಬಂಧನದಂದು ಶುಭಕೋರಿ ಅಣ್ಣ-ತಂಗಿಯ ಸಂಬಂಧದ ನಟನೆ ಮಾಡಿದ್ದ ಇಂದ್ರ, ಅಸಲಿಗೆ ರಕ್ಷಿತಾಳೊಂದಿಗೆ ಒಳಗೊಳಗೆ ಪ್ರೇಮ ಸಲ್ಲಾಪ ನಡೆಸುತ್ತಿದ್ದ.

    ಒಡವೆ, ಹಣದೊಂದಿಗೆ ಪರಾರಿ…

    ಇತ್ತೀಚೆಗೆ ರಕ್ಷಿತಾ ಮನೆಯಲ್ಲಿದ್ದ 22 ಗ್ರಾಂ ಚಿನ್ನದ ಒಡವೆ ಮತ್ತು 1 ಲಕ್ಷ ರೂಪಾಯಿ ನಗದು ಹಣವನ್ನು ತೆಗೆದುಕೊಂಡು ಇಂದ್ರನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಅಷ್ಟೇ ಅಲ್ಲದೆ, ಅವರಿಬ್ಬರು ಮದುವೆಯಾಗಿರುವ ಫೋಟೋ ಕಂಡು ಸಾಗರ್ ಕಂಗಾಲಾಗಿದ್ದಾನೆ.

    “ಪ್ರೀತಿಸಿ ಮದುವೆಯಾದವಳು ಹೀಗೆ ದ್ರೋಹ ಮಾಡ್ತಾಳೆ ಅಂದುಕೊಂಡಿರಲಿಲ್ಲ. ನನಗೆ ನ್ಯಾಯ ಬೇಕು, ಅವಳಿಂದ ವಿಚ್ಛೇದನ ಕೊಡಿಸಿ ಮತ್ತು ನನ್ನ ಹಣ-ಒಡವೆ ವಾಪಸ್ ಕೊಡಿಸಿ” ಎಂದು ಸಾಗರ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಬಾಟಮ್ ಲೈನ್: ಕಷ್ಟ ಕಾಲದಲ್ಲಿ ಜೊತೆಗಿರಬೇಕಾದ ಸ್ನೇಹಿತನೇ ಬೆನ್ನಿಗೆ ಚೂರಿ ಹಾಕಿದ್ದು, ಅಣ್ಣ-ತಂಗಿ ಸಂಬಂಧಕ್ಕೂ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.