Category: ಜಿಲ್ಲಾ‌ಸುದ್ದಿ

  • ಉಪ ಚುನಾವಣೆ: ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32.50 ಲಕ್ಷ ಹಣ ವಶ..!

    ಉಪ ಚುನಾವಣೆ: ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32.50 ಲಕ್ಷ ಹಣ ವಶ..!

    ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟ ತಡೆಯಲು ಸ್ಥಾಪಿಸಲಾಗಿರುವ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

    ವಾಹನ ತಪಾಸಣೆಯ ಸಮಯದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 32.50 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹಣವು ರಾಯಚೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಇದನ್ನು ರಾಯಚೂರಿನಿಂದ ಬೆಳಗಾವಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

    ಚೆಕ್‌ಪೋಸ್ಟ್‌ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳು ಅಥವಾ ಸಮರ್ಥನೀಯ ಪುರಾವೆಗಳು ಇಲ್ಲದಿರುವುದು ಕಂಡುಬಂದಿದೆ.

    ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಸಂಪೂರ್ಣ ಹಣವನ್ನು ಜಪ್ತಿ ಮಾಡಿದ್ದು ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

  • ಬಯಸಿದ ಹೆಣ್ಣಿಗಾಗಿ ಒಡಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ ಅಣ್ಣ.!

    ಬಯಸಿದ ಹೆಣ್ಣಿಗಾಗಿ ಒಡಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ ಅಣ್ಣ.!

    ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹಿರೆಕೊಪ್ಪ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಒಂದು ಹೆಣ್ಣಿಗಾಗಿ ಒಡ ಹುಟ್ಟಿದ ಸಹೋದರನನ್ನೆ ಅಣ್ಣನು ಕೊಲೆ ಮಾಡಿದ ಘಟನೆ ಕಳೆದ ಮಾ.17 ರಂದು ಮಂಗಳವಾರ ಬೆಳಗಿನ ಜಾವದಲ್ಲಿ ನಡೆದಿದೆ.

    ಫಕ್ಕೀರಪ್ಪ ಎಂಬ ಯುವಕನು ಕೊಲೆಗೀಡಾದ ದುರ್ಧೈವಿಯಾಗಿದ್ದು ಈತನ ಸಹೋದರ ಅಶೋಕ ಎಂಬಾತನು ಕೊಲೆ ಮಾಡಿದ ಪಾಪಿ ಅಣ್ಣನಾಗಿದ್ದಾನೆ.

    ಮನೆಯಲ್ಲಿ ಇವರ ತಂದೆ-ತಾಯಿಗಳು ಈ ಇಬ್ಬರು ಮಕ್ಕಳ ಮದುವೆ ಮಾಡಬೇಕು ಎಂದು ಕನಸು ಹೊಂದಿರುತ್ತಾರೆ.ಪೋಷಕರ ಇಚ್ಚೆಯಂತೆ ಅಣ್ಣ-ತಮ್ಮ ಈ ಇಬ್ಬರೂ ಯುವಕರು ಕನ್ಯಾ ನೋಡಿ ಬಂದಿದ್ದಾರೆ.

    ಅಣ್ಣನಿಗೆ ತಮ್ಮನು ನೋಡಿ ಬಂದ ಹುಡುಗಿಯ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಆ ಹುಡುಗಿಯನ್ನು ಮದುವೆ ಆಗಲು ತಮ್ಮನು ಅಡ್ಡಿ ಆಗುತ್ತಾನೆ ಎಂದು ತಿಳಿದು ಪಾಪಿ ಅಶೋಕನು ತನ್ನ ಒಡ ಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

    ತದನಂತರ ಈತನೆ ಸ್ವತ: ಪೋಲೀಸರಿಗೆ ಕರೆ ಮಾಡಿ ಯಾರೋ ಕಿಡಿಗೇಡಿಗಳು ನನ್ನ ತಮ್ಮನನ್ನು ಹೊಡೆದು ಸಾಯಿಸಿದ್ದಾರೆ ಎಂದು ಮಾಹಿತಿ ನೀಡುವ ಮೂಲಕ ಸುಳ್ಳು ಕಥೆಯನ್ನು ಕಟ್ಟಿದ್ದಾನೆ.

    ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೋಲೀಸರು ಡಾಗ್ ಸ್ಕ್ವಾಡ್ ಜೊತೆ ಘಟನೆಯ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ನಾಯಿಯು ನೇರವಾಗಿ ಅಶೋಕನ ಬಳಿ ಬಂದು ನಿಂತಿದೆ.ಈ ಹಿನ್ನಲೆಯಲ್ಲಿ ಪೋಲೀಸರು ಕೂಡಲೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

    ಪೋಲೀಸರ ತನಿಖೆಯ ಸಂದರ್ಭದಲ್ಲಿ ಹುಡುಗಿಯ ವಿಚಾರವಾಗಿ ಫಕ್ಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಆರೋಪಿ ಅಶೋಕನು ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

  • ತ್ಯಾವರೆಕೊಪ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ: ವೈದ್ಯೆ ಸಾವು

    ತ್ಯಾವರೆಕೊಪ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ನೀರಾನೆ ದಾಳಿ: ವೈದ್ಯೆ ಸಾವು

    ಶಿವಮೊಗ್ಗ: ಇಲ್ಲಿನ ತಾವರೆಕೊಪ್ಪ ಹುಲಿ ಸಿಂಹ ಧಾಮದಲ್ಲಿ ಗುರುವಾರ ತಡರಾತ್ರಿ ಚಿಕಿತ್ಸೆ‌ ನೀಡಲು ತೆರಳಿದ್ದ ವೇಳೆ ನೀರಾನೆ (Hippopotamus) ದಾಳಿಯಿಂದ ತೀವ್ರ ಗಾಯಗೊಂಡಿದ್ದ ವನ್ಯಜೀವಿ ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಿಗ್ಗೆ‌ ನಿಧನರಾಗಿದ್ದಾರೆ.

    ಸಮೀಕ್ಷಾ ರೆಡ್ಡಿ (26) ಮೂಲತಃ ಬೆಂಗಳೂರಿನ ಬನ್ನೇರುಘಟ್ಟ ನಿವಾಸಿ. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿ (ಜಿಕೆವಿಕೆ) ಪದವಿ ಮುಗಿಸಿದ್ದ ಅವರು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿನ ಹುಲಿ ಸಿಂಹ ಧಾಮಕ್ಕೆ ತರಬೇತಿಗೆ ನೇಮಕಗೊಂಡಿದ್ದರು.
    ಗರ್ಭಿಣಿ ಆಗಿದ್ದ ನೀರಾನೆ‌ ಇನ್ಜು ನಾಲ್ಕು ದಿನಗಳಲ್ಲಿ ಅದರ ಹೆರಿಗೆಗೆ ದಿನ ನಿಗದಿಯಾಗಿತ್ತು. ಅದು ರಾತ್ರಿ ಆಹಾರ ಸೇವಿಸಿರದ ಕಾರಣ ಪರಿಶೀಲನೆಗೆ ಡಾ.ಸಮೀಕ್ಷಾ ಅದರ ನೆಲೆಯತ್ತ ತೆರಳಿದ್ದಾರೆ. ಈ ವೇಳೆ ಆ ನೀರಾನೆ ದಾಳಿ ಮಾಡಿದೆ. ತೀವ್ರ ರಕ್ತ ಸ್ರಾವದಿಂದ ಪ್ರಜ್ಞಾಹೀನರಾಗಿದ್ದ ಅವರನ್ನು ಮೃಗಾಲಯ ಸಿಬ್ಬಂದಿ ಇಲ್ಲಿನ‌ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ.

    ನೀರಾನೆ ದಾಳಿಯಿಂದ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ, ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ (inquiry) ಆದೇಶಿಸಿದ್ದಾರೆ.

    ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ತಂಡವು ಕೂಲಂಕಷವಾಗಿ ತನಿಖೆ ನಡೆಸಲಿದೆ. ಘಟನೆ ಸಂಭವಿಸಲು ಕಾರಣಗಳೇನು ಮತ್ತು ಸುರಕ್ಷತಾ ಲೋಪಗಳಿವೆಯೇ ಎಂಬ ಬಗ್ಗೆ ಪರಾಮರ್ಶಿಸಿ, ಮುಂದಿನ 7 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ.