Blog

  • ವಿಕಸಿತ್ ಭಾರತ್ ರೋಜ್ಗಾರ್ ಯೋಜನೆಯಿಂದ ಯುವಕರಿಗೆ ಹೊಸ ಉದ್ಯೋಗ ಅವಕಾಶಗಳು: ಮಂಜುಳಾ ಲಿಂಬಾವಳಿ

    ವಿಕಸಿತ್ ಭಾರತ್ ರೋಜ್ಗಾರ್ ಯೋಜನೆಯಿಂದ ಯುವಕರಿಗೆ ಹೊಸ ಉದ್ಯೋಗ ಅವಕಾಶಗಳು: ಮಂಜುಳಾ ಲಿಂಬಾವಳಿ

    ಮಹದೇವಪುರ: ದೇಶದ ಆರ್ಥಿಕ ಪ್ರಗತಿ ಮತ್ತು ವಿಕಸಿತ ಭಾರತ ನಿರ್ಮಾಣದ ಗುರಿ ಸಾಧಿಸಲು ಯುವಕರಿಗೆ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಅತ್ಯಗತ್ಯವಾಗಿದ್ದು, ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಕ್ಷೇತ್ರದ ಶಾಸಕಿ ಮಂಜುಳಾ ಎಸ್. ಅರವಿಂದ ಲಿಂಬಾವಳಿ ಹೇಳಿದರು.

    ಮಹದೇವಪುರದಲ್ಲಿ ನಡೆದ ಪಿಎಂ-ವಿಬಿಆರ್‌ವೈ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಪ್ರೋತ್ಸಾಹಧನ ವಿತರಿಸಿ ಮಾತನಾಡಿದರು.

    ಭಾರತ ಇಂದು ಅಭಿವೃದ್ಧಿಯ ಪಥದಲ್ಲಿ ಐತಿಹಾಸಿಕ ಘಟ್ಟವನ್ನು ತಲುಪಿದ್ದು, ಯುವಜನತೆ ದೇಶದ ಅತ್ಯಂತ ದೊಡ್ಡ ಶಕ್ತಿಯಾಗಿದೆ. ಈ ಯುವಶಕ್ತಿಗೆ ಸೂಕ್ತ ಉದ್ಯೋಗಾವಕಾಶ, ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಮೂಲಕ ದೇಶವನ್ನು ವಿಶ್ವದ ಮುಂಚೂಣಿ ರಾಷ್ಟ್ರವನ್ನಾಗಿ ರೂಪಿಸುವ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದರು.

    ಪಿಎಂ-ವಿಬಿಆರ್‌ವೈ ಯೋಜನೆಯಡಿ ಮೊದಲ ಬಾರಿಗೆ ಔಪಚಾರಿಕ ಉದ್ಯೋಗಕ್ಕೆ ಸೇರ್ಪಡೆಯಾಗುವ ಯುವಕರಿಗೆ ₹15,000 ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇ-ಪಿಎಫ್‌ಒ ನಲ್ಲಿ ನೋಂದಾಯಿತ ಉದ್ಯೋಗಿಗಳಿಗೆ ನೇರ ಪ್ರಯೋಜನ ದೊರೆಯಲಿದೆ. ಇದರ ಜೊತೆಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸುವ ಸಂಸ್ಥೆಗಳು ಮತ್ತು ಉದ್ಯೋಗದಾತರಿಗೂ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಉದ್ಯೋಗ ಸೃಷ್ಟಿಗೆ ಉತ್ತೇಜನ ಸಿಗಲಿದೆ ಎಂದು ಹೇಳಿದರು.

    ದೇಶಾದ್ಯಂತ ಕೋಟ್ಯಂತರ ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಯೋಜನೆ ಹೊಂದಿದ್ದು, ಮೊದಲ ಬಾರಿಗೆ ಉದ್ಯೋಗ ಕ್ಷೇತ್ರಕ್ಕೆ ಕಾಲಿಡುವ ಯುವಜನರ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ. ಉದ್ಯೋಗವು ಕೇವಲ ಆದಾಯದ ಮೂಲವಲ್ಲ, ಅದು ವ್ಯಕ್ತಿಯ ಜೀವನಮಟ್ಟ ಸುಧಾರಣೆ, ಸಾಮಾಜಿಕ ಭದ್ರತೆ ಮತ್ತು ಕುಟುಂಬದ ಅಭಿವೃದ್ಧಿಗೆ ಕಾರಣವಾಗುತ್ತದೆ. ಯುವಕರು ಸ್ವಾವಲಂಬಿಗಳಾಗಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಇಂತಹ ಯೋಜನೆಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

    ಮಹದೇವಪುರ ಕ್ಷೇತ್ರವು ರಾಜ್ಯದ ಪ್ರಮುಖ ಐಟಿ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗಿದ್ದು, ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಸಾಮರ್ಥ್ಯ ಹೊಂದಿದೆ. ಮಾಹಿತಿ ತಂತ್ರಜ್ಞಾನ, ಉತ್ಪಾದನೆ, ಸ್ಟಾರ್ಟ್‌ಅಪ್ ಮತ್ತು ಸೇವಾ ವಲಯಗಳಲ್ಲಿ ನಿರಂತರ ಹೂಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಈ ಯೋಜನೆ ಸ್ಥಳೀಯ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅಭಿಪ್ರಾಯಪಟ್ಟರು.

    ಉದ್ಯೋಗ ಸೃಷ್ಟಿ ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಕೈಗಾರಿಕೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಮಾಜದ ಎಲ್ಲ ವರ್ಗಗಳ ಸಹಕಾರದಿಂದ ಮಾತ್ರ ಉದ್ಯೋಗ ವೃದ್ಧಿ ಸಾಧ್ಯ. ಯುವಕರಿಗೆ ಅವಕಾಶ ನೀಡುವ ಮೂಲಕ ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕೈಗಾರಿಕೆಗಳು ಮಹತ್ವದ ಕೊಡುಗೆ ನೀಡುತ್ತಿವೆ. ಈ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಪಾಲ್ಗೊಂಡಿರುವ ಉದ್ಯೋಗದಾತರು ಹಾಗೂ ಕೈಗಾರಿಕಾ ವಲಯದ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು.

    ಯುವಕರು ಸರ್ಕಾರದ ವಿವಿಧ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು. ವಿಕಸಿತ ಭಾರತ-2047 ಕನಸನ್ನು ಸಾಕಾರಗೊಳಿಸಲು ಕೌಶಲ್ಯಯುತ, ಉತ್ಪಾದಕ ಮತ್ತು ಆತ್ಮವಿಶ್ವಾಸಿ ಯುವಪಡೆಯ ಅಗತ್ಯವಿದ್ದು, ಪಿಎಂ-ವಿಬಿಆರ್‌ವೈ ಯೋಜನೆಯ ಗುರಿ ಸಾಧನೆಗೆ ನೆರವಾಗಲಿದೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಇಪಿಎಫ್‌ಒ ವಲಯ ಆಯುಕ್ತೆ ಇಂದಿರಾ ತಿರುಮಲರಾಜು, ವಾಸಿಯಾ ಅಧ್ಯಕ್ಷ ಚಂದ್ರಶೇಖರ್, ವಾಸಿಯಾ ಪ್ರತಿನಿಧಿ ಶ್ರೀನಿವಾಸ ರಾಜು, ಪ್ರಾದೇಶಿಕ ಸಮಿತಿ ಸದಸ್ಯ ನಾಗನಾಥ್, ಇಎಸ್‌ಐ ಆಸ್ಪತ್ರೆಯ ಉಪ ನಿರ್ದೇಶಕ ರಾಮರಾಜ್ ಮೀನಾ, ಕೈಗಾರಿಕಾ ವಲಯದ ಪ್ರತಿನಿಧಿಗಳು, ಉದ್ಯೋಗದಾತರು, ಫಲಾನುಭವಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

  • ಕೆ.ಆರ್.ಪುರ  ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆಗೆ ಶಾಸಕ ಬೈರತಿ ಬಸವರಾಜ್ ಚಾಲನೆ.

    ಕೆ.ಆರ್.ಪುರ ಅಂಡರ್ ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆಗೆ ಶಾಸಕ ಬೈರತಿ ಬಸವರಾಜ್ ಚಾಲನೆ.


    ಕೆ.ಆರ್ ಪುರ:ವಿದ್ಯುತ್ ವ್ಯತ್ಯಯ ಹಾಗೂ ವಿದ್ಯುತ್ ಅವಘಡಗಳನ್ನು ತಪ್ಪಿಸುವ ಉದ್ದೇಶದಿಂದ ಬೆಸ್ಕಂ ಈ ಯೋಜನೆಯನ್ನ ಕಾರ್ಯಗತಗೊಳಿಸುತ್ತಿದೆ.ಈ ಮೂಲಕ ನಗರದಾದ್ಯಂತ ಸುರಕ್ಷಿತ ಹಾಗೂ ಹೆಚ್ಚು ವಿಶ್ವಾಸಾರ್ಹ ವಿದ್ಯುತ್‌ ಸರಬರಾಜು ಖಚಿತಪಡಿಸಿಕೊಳ್ಳಲು ಭೂಗತ ಕೇಬಲ್ ಅಳವಡಿಸಲಾಗುತ್ತಿದೆ ಎಂದು ಶಾಸಕ ಬೈರತಿ ಬಸವರಾಜ್ ತಿಳಿಸಿದರು.

    ಆನಂದಪುರದಲ್ಲಿ ಐಟಿಐ ವಿದ್ಯುತ್ ಉಪ ಕೇಂದ್ರದಿಂದ ಹೊಸ ಫೀಡರ್ ಭೂಗತ ಕೇಬಲ್ ಅಳವಡಿಸುವ ಕಾಮಗಾರಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ಆನಂದಪುರ,ಟಿಸಿಪಾಳ್ಯ ರಸ್ತೆ, ಸಾಯಿಗಾರ್ಡನ್, ಕೆ.ವಿ.ಬಡಾವಣೆ, ಮನ್ನಮ್ ನಗರ, ಗೆದ್ದಲಹಳ್ಳಿ ಸ್ಪರ್ಷ ಆಸತ್ರೆ, ಕೆ.ಆರ್ ಪುರ ರಸ್ತೆ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಹೆಚ್ಚು ವಿದ್ಯುತ್ ಸಮಸ್ಯೆ ಆಗುತ್ತಿತ್ತು . ಈ ಕಾಮಗಾರಿ ಮುಗಿದ ಕೂಡಲೇ ವಿದ್ಯುತ್‌ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.

    ಹವಾಮಾನ ಪರಿಸ್ಥಿತಿಗಳು ಹಾಗೂ ತಾಂತ್ರಿಕ ದೋಷಗಳಿಂದ ಉಂಟಾಗುವ ವಿದ್ಯುತ್ ಅಡಚಣೆ ಗಳನ್ನು ಗಮನಾರ್ಹ ವಾಗಿ ಕಡಿಮೆ ಮಾಡಬಹುದು ಎಂದರು.

    ಕಾಮಗಾರಿ ವೇಳೆ ಯಾವುದೇ ಕಾರಣಕ್ಕೂ ವಿದ್ಯುತ್ ವ್ಯತ್ಯಯವಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಹೇಳಿದರು.

    ಕಾಮಗಾರಿಗಳು ನಡೆಯುವ ವೇಳೆ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮುಖಂಡರ ಮೇಲಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ವಾರ್ಡ್ ಅಧ್ಯಕ್ಷರಾದ ಯುವರಾಜ್, ಶಿವಪ್ಪ, ಪ್ರ.ಕಾರ್ಯದರ್ಶಿಗಳಾದ ಮೋಹನ್ , ರಾಜುಸಿಂಗ್, ಮುಖಂಡರಾದ ಪ್ರವೀಣ್ ರೆಡ್ಡಿ, ಹೇಮಂತ್, ಮುರುಳಿಸ್ವಾಮಿ, ಗಿರೀಶ್, ಜೆಸಿಬಿ ಆಂತೋಣಿ, ಉಮಾಶಂಕರ್, ಸೇರಿದಂತೆ ಬೆಸ್ಕಾಂ ಸಿಬ್ಬಂದಿ, ಮತ್ತಿತರರಿದ್ದರು.

  • ಬಿಜೆಪಿ ಪಕ್ಷ ನಮ್ಮ ತಾಯಿಯಿದ್ದಂತೆ, ಪಕ್ಷಕ್ಕೆ ದ್ರೋಹ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ:ಬೈರತಿ ಬಸವರಾಜ್

    ಬಿಜೆಪಿ ಪಕ್ಷ ನಮ್ಮ ತಾಯಿಯಿದ್ದಂತೆ, ಪಕ್ಷಕ್ಕೆ ದ್ರೋಹ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ:ಬೈರತಿ ಬಸವರಾಜ್

    ಕೆ.ಆರ್ ಪುರ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಆರೋಪಗಳನ್ನು ಕೆಆರ್ ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ತಳ್ಳಿಹಾಕಿದ್ದು, ತಾನು ಪಕ್ಷದ ಆದೇಶದಂತೆ ಅಧಿಕೃತ ಅಭ್ಯರ್ಥಿಗೆ ಮತದಾನ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕೆಆರ್ ಪುರಂನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜೀವನದಲ್ಲಿ ಯಾವ ಪಕ್ಷದಲ್ಲಿರುತ್ತೇನೋ ಆ ಪಕ್ಷಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ

    ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲ ಬಿಜೆಪಿ ಶಾಸಕರು ಅಡ್ಡ ಮತದಾನ ಮಾಡಿದ್ದು ಬೈರತಿ ಬಸವರಾಜ್ ಅವರ ಹೆಸರು ಮಾದ್ಯಮದಲ್ಲಿ ಬಂದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಯಾವುದೇ ಸಂಪೂರ್ಣ ಮಾಹಿತಿ ಇಲ್ಲದೇ ತಮ್ಮ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.

    ಬಿಜೆಪಿ ಪಕ್ಷ ನಮ್ಮ ತಾಯಿಯಿದ್ದಂತೆ. ಅಂತಹ ಪಕ್ಷಕ್ಕೆ ದ್ರೋಹ ಮಾಡುವ ಕೆಲಸವನ್ನು ನಾನು ಎಂದಿಗೂ ಮಾಡುವುದಿಲ್ಲ ಎಂದು ಹೇಳಿದರು.

    ನನ್ನ ಹೆಸರಿಗೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದ ಕೆಲ ಕಾಣದ ಕೈಗಳು ಕೆಲಸ ಮಾಡುತ್ತಿವೆ. ನಾನು ಯಾವುದೇ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷದ ಸೂಚನೆಯಂತೆ ಮತದಾನ ಮಾಡಿದ್ದೇನೆ ಎಂದು ಹೇಳಿದರು.

    ಕಾಯ, ವಾಚ, ಮನಸಾ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಅಡ್ಡ ಮತದಾನ ಮಾಡಿದ್ದೇನೆ ಎಂಬ ಆರೋಪಗಳು ಸಂಪೂರ್ಣ ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.

    ಇದೇ ವೇಳೆ, ತಮ್ಮ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ನಾನು ಅಡ್ಡ ಮತದಾನ ಮಾಡಿದ್ದೇನೆ ಎಂದು ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಮಾನಹಾನಿ ಮೊಕದ್ದಮೆ (ಡಿಫಮೇಷನ್ ಕೇಸ್) ದಾಖಲಿಸುತ್ತೇನೆ ಎಂದರು.

    ಇನ್ನೂ ಆ ದಿನ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ನನ್ನನ್ನು ಕರೆದಿದ್ದರು. ಆದರೆ ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಯಾವುದೇ ಸಭೆಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದೆ ಎಂದು ಹೇಳಿದರು.

    ನಾನು ಯಾರಿಗೂ ಹೆದರಿ ಅಥವಾ ಒತ್ತಡಕ್ಕೆ ಮಣಿದು ಮತದಾನ ಮಾಡಿಲ್ಲ. ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ಪಕ್ಷದ ಪರವಾಗಿ ಮತದಾನ ಮಾಡಿದ್ದೇನೆ ಎಂದು ಬೈರತಿ ಬಸವರಾಜ್ ಪುನರುಚ್ಚರಿಸಿದರು.

  • ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 56 ಅಂಗನವಾಡಿ ಕಾರ್ಯಕರ್ತೆಯರು ಮತ್ತು 293 ಸಹಾಯಕಿಯರ ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ ಭರ್ತಿ ಮಾಡಲು ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಆಸಕ್ತ ಸ್ಥಳೀಯ ಅರ್ಹ ಮಹಿಳಾ ಅಭ್ಯರ್ಥಿಗಳು ಮತ್ತು ಲಿಂಗತ್ವ ಅಲ್ಪಸಂಖ್ಯಾತರ ಅಭ್ಯರ್ಥಿಗಳು ಆಯಾ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ಅಗತ್ಯ ದಾಖಲಾತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗೆ ಜೂ.30ರ ಸಂಜೆ 5:30 ರೊಳಗೆ ಸಲ್ಲಿಸಬಹುದಾಗಿದೆ.

    ಖಾಲಿ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಇತ್ಯಾದಿ ಹೆಚ್ಚಿನ ವಿವರಗಳಿಗಾಗಿ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

  • ಜೂನ್ 21 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ!

    ಜೂನ್ 21 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವೆಡೆ ವಿದ್ಯುತ್ ವ್ಯತ್ಯಯ!

    ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F21-KVN Infocity ಫೀಡರ್‌ನಲ್ಲಿ ನಿರ್ವಹಣಾ ಕಾರ್ಯ  ಹಮ್ಮಿಕೊಂಡಿರುವುದರಿಂದ ಈ ಮಾರ್ಗಗಳಲ್ಲಿ ಜೂನ್ 21ರಂದು ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 04:00 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ನಾಗದೇನಹಳ್ಳಿ, ರಘುನಾಥಪುರ, ಮೋಪರಹಳ್ಳಿ, ಆದಿನಾರಾಯಣಹೊಸಹಳ್ಳಿ, ಆದಿನಾರಾಯಣಹೊಸಹಳ್ಳಿ ಫೇಸ್-2 ಕೈಗಾರಿಕಾ ಪ್ರದೇಶ ಹಾಗೂ ಇನ್ ಫೋ ಸಿಟಿ ಸುತ್ತಮುತ್ತಲಿನ ಪ್ರದೇಶಗಳು.

  • ದೊಡ್ಡಬಳ್ಳಾಪುರ; ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಆನಂದ್ ರಾಜೀನಾಮೆ, ಜಿಲ್ಲಾಧಿಕಾರಿಗಳಿಂದ ಅಂಗೀಕಾರ

    ದೊಡ್ಡಬಳ್ಳಾಪುರ; ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಆನಂದ್ ರಾಜೀನಾಮೆ, ಜಿಲ್ಲಾಧಿಕಾರಿಗಳಿಂದ ಅಂಗೀಕಾರ

    ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಆನಂದ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಜಿಲ್ಲಾಧಿಕಾರಿಗಳು ಅಂಗೀಕರಿಸಿದ್ದಾರೆ.

    ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷೆಯಾಗಿ ಮುಂದುವರಿದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ, ಯಾವುದೇ ಒತ್ತಡಕ್ಕೆ ಮಣಿಯದೆ ಸ್ವಇಚ್ಛೆಯಿಂದ ಜೂನ್ 1ರಂದು ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸಲ್ಲಿಸಿದ ದಿನಾಂಕದಿಂದ ಹತ್ತು ದಿನಗಳ ಅವಧಿಯೊಳಗೆ ಅದನ್ನು ಹಿಂಪಡೆಯುವ ಅವಕಾಶವಿದ್ದು, ಜೂನ್ 10ರೊಳಗೆ ಸುಮಿತ್ರಾ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆಯದ ಹಿನ್ನೆಲೆ ಜಿಲ್ಲಾಧಿಕಾರಿಗಳಾದ ಡಾ.ಕೆ.ಅನುರಾಧ ಅವರು ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

  • ಅನುಮಾನದ ಹುತ್ತಕ್ಕೆ ಮತ್ತೊಂದು ಬಲಿ : ಲಿವ್-ಇನ್ ಪಾರ್ಟ್‌ನರ್‌ನಿಂದ ಯುವತಿಯ ಬರ್ಬರ ಕೊ*ಲೆ.

    ಅನುಮಾನದ ಹುತ್ತಕ್ಕೆ ಮತ್ತೊಂದು ಬಲಿ : ಲಿವ್-ಇನ್ ಪಾರ್ಟ್‌ನರ್‌ನಿಂದ ಯುವತಿಯ ಬರ್ಬರ ಕೊ*ಲೆ.

    ಬೆಂಗಳೂರು: ರಾಜಧಾನಿಯ ಐಟಿ ಹಬ್ ವಲಯದಲ್ಲಿ ಮತ್ತೊಂದು ಭೀಕರ ಕೊ# ಪ್ರಕರಣ ಬೆಳಕಿಗೆ ಬಂದಿದೆ. ಪ್ರೇಯಸಿಯ ನಡತೆಯ ಮೇಲೆ ಅನುಮಾನಗೊಂಡ ಪ್ರಿಯಕರ ಆಕೆಯನ್ನು ಚಾಕುವಿನಿಂದ ಇರಿದು, ಗಂಟಲು ಕೊಯ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

    ಸಿಕ್ಕಿಂ ಮೂಲದ 22 ವರ್ಷದ ಅತಿ ಹಂಗ್ಮಾ ಕೊಲೆಯಾದ ದುರ್ದೈವಿ. ಈಕೆ ನಗರದ ಖಾಸಗಿ ಸಲೂನ್ ಒಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಪುರ್ಬಾ ಲೆಪ್ಚಾ ಎಂಬಾತನೇ ಕೊಲೆಗಡುಕ ಪ್ರಿಯಕರನಾಗಿದ್ದು, ಈತ ಖಾಸಗಿ ಹೋಟೆಲ್ ಒಂದರಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದನು.

    ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದರು ಜೋಡಿ
    ಪರಸ್ಪರ ಪ್ರೀತಿಸುತ್ತಿದ್ದ ಅತಿ ಹಂಗ್ಮಾ ಮತ್ತು ಪುರ್ಬಾ ಲೆಪ್ಚಾ ಕಳೆದ ಒಂದು ತಿಂಗಳಿನಿಂದ ಬೆಳ್ಳಂದೂರು ಸಮೀಪದ ದೊಡ್ಡಕನ್ನಹಳ್ಳಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು, ಒಟ್ಟಿಗೆ ವಾಸಿಸುತ್ತಿದ್ದರು (ಲಿವ್-ಇನ್ ರಿಲೇಷನ್‌ಶಿಪ್). ಎಲ್ಲವೂ ಚೆನ್ನಾಗಿಯೇ ಇತ್ತು ಎನ್ನುವಷ್ಟರಲ್ಲಿ ಇಬ್ಬರ ನಡುವೆ ಮೂರನೇ ವ್ಯಕ್ತಿಯ ಪ್ರವೇಶವಾಗಿದೆ.

    ಸ್ನೇಹಿತನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
    ಮೃತ ಯುವತಿಗೆ ಇನ್ನೊಬ್ಬ ಯುವಕನೊಂದಿಗೆ ಇದ್ದ ಸ್ನೇಹವೇ ಈ ಕೊಲೆಗೆ ಮುಖ್ಯ ಕಾರಣ ಎನ್ನಲಾಗಿದೆ. ಈ ವಿಚಾರವಾಗಿ ನಿನ್ನೆ ಬೆಳಿಗ್ಗೆಯಿಂದಲೇ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ರಾತ್ರಿಯಾದರೂ ಜಗಳ ಶಮನವಾಗದೆ ವಿಕೋಪಕ್ಕೆ ತಿರುಗಿದೆ. ಇದರಿಂದ ತೀವ್ರ ಕೋಪೋದ್ರಿಕ್ತನಾದ ಪುರ್ಬಾ ಲೆಪ್ಚಾ, ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಅತಿ ಹಂಗ್ಮಾ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ತದನಂತರ ಆಕೆಯ ಗಂಟಲು ಕೊಯ್ದು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದಾನೆ.

    ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಬೆಳ್ಳಂದೂರು ಪೊಲೀಸರು ತಡರಾತ್ರಿಯೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿ ಪುರ್ಬಾ ಲೆಪ್ಚಾನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

    ಮಾಲಿನ್ಯ ರಹಿತವಾಗಿದ್ದ ಪ್ರೇಮದ ಗೂಡಿನಲ್ಲಿ ಅನುಮಾನದ ಹುತ್ತ ಬೆಳೆದು, ಕೊನೆಯಲ್ಲಿ ಯುವತಿಯ ಜೀವವನ್ನೇ ಬಲಿಪಡೆದಿರುವುದು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ

  • ಆಟವಾಡುತ್ತಿದ್ದ 1ನೇ ತರಗತಿ ಬಾಲಕ  ಕುಸಿದು ಬಿದ್ದು  ಸಾ*ವು!

    ಆಟವಾಡುತ್ತಿದ್ದ 1ನೇ ತರಗತಿ ಬಾಲಕ ಕುಸಿದು ಬಿದ್ದು ಸಾ*ವು!

    ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದ್ದು, ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಆರು ವರ್ಷದ ಪುಟಾಣಿ ಬಾಲಕನೊಬ್ಬ ಹೃದಯಾಘಾತದಿಂದ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
    ಜಿಲ್ಲೆಯ ಕರೂರು ಹೋಬಳಿಯ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದುರ್ದೈವಿ ಘಟನೆ ನಡೆದಿದೆ. ಕೊಡನವಳ್ಳಿ ಗ್ರಾಮದ ನಿವಾಸಿಗಳಾದ ಗೌತಮ್ ಜೈನ್ ಮತ್ತು ಶಿಲ್ಪಾ ದಂಪತಿಯ ಪ್ರೀತಿಯ ಪುತ್ರ ತ್ರಿಲೋಕ್ ಜೈನ್ (6) ಮೃತಪಟ್ಟ ದುರ್ದೈವಿ ಬಾಲಕನಾಗಿದ್ದಾನೆ.

    ಶನಿವಾರ ಎಂದಿನಂತೆ ಉತ್ಸಾಹದಿಂದಲೇ ಶಾಲೆಗೆ ಬಂದಿದ್ದ ಒಂದನೇ ತರಗತಿಯ ವಿದ್ಯಾರ್ಥಿ ತ್ರಿಲೋಕ್, ದಿನವಿಡೀ ಸಹಪಾಠಿಗಳೊಂದಿಗೆ ಸಕ್ರಿಯನಾಗಿ ಆಟವಾಡಿಕೊಂಡಿದ್ದನು. ಆದರೆ ಮಧ್ಯಾಹ್ನ ಶಾಲಾ ಅವಧಿ ಮುಗಿಯುವ ಕೆಲವೇ ನಿಮಿಷಗಳ ಮೊದಲು, ಶಾಲಾ ಆವರಣದಲ್ಲಿ ಗೆಳೆಯರೊಂದಿಗೆ ಇರುವಾಗ ಆತ ಏಕಾಏಕಿ ನೆಲಕ್ಕೆ ಕುಸಿದು ಬಿದ್ದಿದ್ದಾನೆ.

    ಬಾಲಕ ತಕ್ಷಣವೇ ನೆಲಕ್ಕೆ ಬಿದ್ದದ್ದನ್ನು ನೋಡಿ ಆತಂಕಗೊಂಡ ಸಹಪಾಠಿಗಳು ತಕ್ಷಣವೇ ಶಿಕ್ಷಕರಿಗೆ ವಿಷಯ ತಿಳಿಸಿದ್ದಾರೆ. ಗಾಬರಿಗೊಂಡ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ತಕ್ಷಣವೇ ಬಾಲಕನ ಬಳಿ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗ ಮಧ್ಯದಲ್ಲೇ ಆ ಪುಟ್ಟ ಕಂದಮ್ಮ ಕೊನೆಯುಸಿರೆಳೆದಿದ್ದಾನೆ.

    ಆಸ್ಪತ್ರೆಗೆ ತಲುಪಿದಾಗ ವೈದ್ಯರು ಬಾಲಕ ಅದಾಗಲೇ ಮೃತಪಟ್ಟಿರುವುದನ್ನು ದೃಢೀಕರಿಸಿದ್ದು, ಮಗುವಿಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆಯಷ್ಟೇ ಆರೋಗ್ಯವಾಗಿ, ಹಸನ್ಮುಖಿಯಾಗಿ ಶಾಲೆಗೆ ಕಳುಹಿಸಿದ್ದ ಮಗ ಹೆಣವಾಗಿ ಮರಳಿರುವುದನ್ನು ಕಂಡು ಪೋಷಕರು ಜರ್ಜರಿತರಾಗಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

    ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಮಕ್ಕಳಲ್ಲಿಯೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದ ಬೆನ್ನಲ್ಲೇ, ಈಗ ಕೇವಲ 6 ವರ್ಷದ ಶಾಲಾ ಬಾಲಕನೂ ಹೃದಯಾಘಾತದಂತಹ ಲಕ್ಷಣಗಳಿಂದ ಸಾವನ್ನಪ್ಪಿರುವುದು ಪೋಷಕರಲ್ಲಿ ಮತ್ತಷ್ಟು ಆತಂಕ ಮತ್ತು ಭೀತಿಯನ್ನು ಮೂಡಿಸಿದೆ. ತರಗತಿಯಲ್ಲಿ ಎಲ್ಲರ ಮುದ್ದಿನ ವಿದ್ಯಾರ್ಥಿಯಾಗಿದ್ದ ತ್ರಿಲೋಕ್ ಜೈನ್ ಸಾವಿಗೆ ಹಾಳಸಸಿ ಹಾಗೂ ಕೊಡನವಳ್ಳಿ ಗ್ರಾಮಸ್ಥರು, ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಪದಾಧಿಕಾರಿಗಳು ಹಾಗೂ ಶಾಲೆಯ ಶಿಕ್ಷಕ ವೃಂದ ತೀವ್ರ ಸಂತಾಪ ಸೂಚಿಸಿದ್ದಾರೆ.

  • ಖ್ಯಾತ ಪತ್ರಕರ್ತ ಪಿ.ಲಂಕೇಶ್ ಪತ್ನಿ, ಹಿರಿಯ ಲೇಖಕಿ ‘ಇಂದಿರಾ ಲಂಕೇಶ್’ ಇನ್ನಿಲ್ಲ

    ಖ್ಯಾತ ಪತ್ರಕರ್ತ ಪಿ.ಲಂಕೇಶ್ ಪತ್ನಿ, ಹಿರಿಯ ಲೇಖಕಿ ‘ಇಂದಿರಾ ಲಂಕೇಶ್’ ಇನ್ನಿಲ್ಲ

    ಬೆಂಗಳೂರು: ಖ್ಯಾತ ಸಾಹಿತಿ, ಪತ್ರಕರ್ತ ಹಾಗೂ ಚಲನಚಿತ್ರ ನಿರ್ದೇಶಕ ಪಿ.ಲಂಕೇಶ್ ಅವರ ಪತ್ನಿ, ಹಿರಿಯ ಲೇಖಕಿ ಇಂದಿರಾ ಲಂಕೇಶ್ ಅವರು 84ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.
    ಖ್ಯಾತ ಸಾಹಿತಿ ಪಿ. ಲಂಕೇಶ್ ಅವರ ಪತ್ನಿ ಹಾಗೂ ಹಿರಿಯ ಲೇಖಕಿ ಇಂದಿರಾ ಲಂಕೇಶ್ (84) ಬೆಂಗಳೂರಿನಲ್ಲಿ ನಿಧನರಾಗಿದ್ದು, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ.
    ಇಂದಿರಾ ಲಂಕೇಶ್ ಅವರು ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಕೇವಲ ಲಂಕೇಶ್ ಕುಟುಂಬದ ಪ್ರಮುಖ ಸದಸ್ಯೆಯಷ್ಟೇ ಅಲ್ಲದೆ, ಹಲವಾರು ಸಾಹಿತ್ಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
    ಅವರು ಪುತ್ರಿ ಕವಿತಾ ಲಂಕೇಶ್ , ಪುತ್ರ ಇಂದ್ರಜಿತ್ ಲಂಕೇಶ್ ಸೇರಿದಂತೆ ವಿಶಾಲ ಕುಟುಂಬವನ್ನು ಅಗಲಿದ್ದಾರೆ. ಲಂಕೇಶ್ ಕುಟುಂಬ ಕನ್ನಡ ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಚಿತ್ರರಂಗದಲ್ಲಿ ಮಹತ್ವದ ಕೊಡುಗೆ ನೀಡಿರುವ ಕುಟುಂಬವೆಂದು ಪರಿಗಣಿಸಲಾಗಿದೆ.
    ಇಂದಿರಾ ಲಂಕೇಶ್ ಅವರ ನಿಧನಕ್ಕೆ ಸಾಹಿತ್ಯಿಕರು, ರಾಜಕೀಯ ಮುಖಂಡರು, ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದು, ಕನ್ನಡ ಸಾಂಸ್ಕೃತಿಕ ವಲಯವು ಒಬ್ಬ ಮಹತ್ವದ ವ್ಯಕ್ತಿತ್ವವನ್ನು ಕಳೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  • ಸಂತ ಅಂತೋಣಿಯವರ 124 ನೇ ವಾರ್ಷಿಕ ಮಹೋತ್ಸವ.

    ಸಂತ ಅಂತೋಣಿಯವರ 124 ನೇ ವಾರ್ಷಿಕ ಮಹೋತ್ಸವ.

    ಕೆ.ಆರ್ .ಪುರ: ಸಂತ ಅಂತೋಣಿಯವರ 124 ನೇ ವಾರ್ಷಿಕೋತ್ಸವ 9 ದಿನಗಳವರೆಗೆ ಆಧ್ಯಾತ್ಮಿಕವಾಗಿ ಆಚರಿಸಲಾಯಿತು.ವಾರ್ಷಿಕೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ್ದ ಶಾಸಕ ಬೈರತಿ ಬಸವರಾಜ ಅವರನ್ನು ಟಿ.ಸಿ.ಪಾಳ್ಯ ಪ್ರವೀಣ್ ರೆಡ್ಡಿಯವರು ಸ್ವಾಗತಿಸಿದರು.
    ಬಳಿಕ ಟಿ.ಸಿ.ಪಾಳ್ಯ ಚರ್ಚ್‌ನಲ್ಲಿ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಸಮಾಜದ ಒಳತಿಗಾಗಿ ಪ್ರಾರ್ಥಿಸಿದರು.

    ಫಾದರ್ ಫ್ರಾನ್ಸಿಸ್ ಅವರು ಸಂತ ಅಂತೋಣಿಯವರ ಹಬ್ಬದ ಆಡಂಬರ ಗಾಯನ, ದಿವ್ಯ ಬಲಿಪೂಜೆ, ದೃಢೀಕರಣ, ಸಂಸ್ಕಾರ ನೆರವೇರಿಸಿಕೊಟ್ಟರು.

    ಸಂತ ಅಂತೋಣಿಯವರ ಹಬ್ಬದ ಹಿನ್ನಲ್ಲೆ ಚರ್ಚ್ ನ ಆಟದ ಮೈದಾನದಲ್ಲಿ ಜಾತ್ರ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಸಾವಿರಾರು ಜನ ಸಂತ ಅಂತೋಣಿಯವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿ ಜಾತ್ರೆಯಲ್ಲಿ ಪಾಲ್ಗೊಂಡರು.

    ಸಂತ ಅಂತೋಣಿ ದೇವಾಲಯದ ವಾರ್ಷಿಕೋತ್ಸವದ ಅಂಗವಾಗಿ ವಿದ್ಯುತ್ ದೀಪ, ಬಂಟಿಂಗ್ಸ್ ಹಾಗೂ ಬಾವುಟಗಳಿಂದ ಅಲಂಕರಿಸಲಾಗಿತ್ತು.

    ಶತಮಾನ ಇತಿಹಾಸ ಹೊಂದಿರುವ ಈ ಜಾತ್ರೆಗೆ ಟಿ ಸಿ ಪಾಳ್ಯದ ಸುತ್ತಮುತ್ತಲಿನ ಆನಂದಪುರ,ಗ್ರಾಮಗಳಾದ ಬಾಸ್ಕೋ ನಗರ,ಭಟ್ಟರಹಳ್ಳಿ, ಜ್ಯೋತಿನಗರ, ಸೀಗೆಹಳ್ಳಿ, ಲೂರ್ದು‌ನಗರ, ಬಸವನಪುರ,ಸ್ವತಂತ್ರ ನಗರ, ಹಳೆಹಳ್ಳಿ,ಕಿತ್ತಗನೂರು, ಮೇಡಹಳ್ಳಿ ಮುಂತಾದ ಗ್ರಾಮಗಳಿಂದ ಬಂದು ಭಕ್ತಿಯಿಂದ ದೇವರ ಕೃಪೆಗೆ ಪಾತ್ರರಾಗುತ್ತಾರೆ.


    ಸಂಜೆ ಆರು ಗಂಟೆಗೆ ಸಂತ ಅಂತೋಣಿಯವರ ತೇರಿನ ಮೆರವಣಿಗೆ ಟಿ.ಸಿ ಪಾಳ್ಯದ ಚರ್ಚ್ ಆವರಣದಿಂದ ಆನಂದಪುರ ಸರ್ಕಲ್ ನವರೆಗೆ ಅದ್ದೂರಿಯಾಗಿ ಸಾಗಿತು. ತೇರು ಸಾಗುತ್ತಿದ್ದಂತೆ ನೂರಾರು ಜನ ಕ್ರೈಸ್ತ ಭಕ್ತರು ಕ್ಯಾಂಡಲ್ ಹಿಡಿದು ಬೈಬಲ್ ಪಠಣ ಮಾಡುತ್ತಾ ಸಾಗಿದರು.ಸಂತ ಅಂತೋಣಿಯವರ ಹಾಡುಗಳು ರಸ್ತೆಯುದ್ದಕ್ಕೂ ಪಠಿಸಿದರು.ಮೆರವಣಿಗೆಯ ನಂತರ ಧರ್ಮಗುರುಗಳಿಂದ ಪರಮ ಪ್ರಸಾದ ಆಶೀರ್ವಾದ ನೆರವೇರಿತು.

    ಸಂತ ಅಂತೋಣಿಯವರ ಹಬ್ಬಕ್ಕೆ ರಾಜ್ಯ ಯೋಜನಾ ನಿರ್ದೇಶಕಿ ಡಾ.ಕೆ.ವಿದ್ಯಾಕುಮಾರಿ, ಬೆ.ವಿವಿಯ ಉತ್ತರ ವಿಭಾಗದ ರಿಜಿಸ್ಟ್ರಾರ್ ಪ್ರೊ.ಡಾ.ಡಾಮಿನಿಕ್ ಅವರು ಭಾಗವಹಿಸಲಿದ್ದಾರೆ ಎಂದು ಚರ್ಚ್ ನ ಧರ್ಮ ಗುರು ಹೇಳಿದರು.

    ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್, ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಮುಖಂಡರಾದ ಟಿ.ಸಿ.ಪಾಳ್ಯ ಪ್ರವೀಣ್, ಚಿಟ್ಟಿ, ಜೆಸಿಬಿ ಅಂತೋಣಿ, ವಿನೋದ್ ರೈ ಮತ್ತಿತರರು ಹಾಜರಿದ್ದರು.