Blog

  • ದಿನಕ್ಕೆ ₹2,000 ಸಂಪಾದನೆ ಕೇಳಿ ಫಿದಾ ಆದ ಯುವತಿ ; ಆಟೋ ಚಾಲಕನನ್ನೇ ಮದುವೆಯಾಗಲು ನಿರ್ಧಾರ.!

    ದಿನಕ್ಕೆ ₹2,000 ಸಂಪಾದನೆ ಕೇಳಿ ಫಿದಾ ಆದ ಯುವತಿ ; ಆಟೋ ಚಾಲಕನನ್ನೇ ಮದುವೆಯಾಗಲು ನಿರ್ಧಾರ.!

    ಬೆಂಗಳೂರು: ಜಿವನದಲ್ಲಿ ನಾವು ಯಾರನ್ನು ಮದುವೆಯಾಗುತ್ತೇವೆ ಎಂಬುದು ಮುಂಚಿತವಾಗಿ ಯಾರಿಗೂ ತಿಳಿದಿರುವುದಿಲ್ಲ. ಹಿರಿಯರು ಹೇಳುವಂತೆ, “ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ.” ಕೆಲವೊಮ್ಮೆ ವಿಧಿ ಮತ್ತು ಭವಿಷ್ಯ ನಮ್ಮ ಕಲ್ಪನೆಗೂ ಮೀರಿದ ರೀತಿಯಲ್ಲಿ ತಿರುವು ಪಡೆಯುತ್ತವೆ.

    ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಘಟನೆ ಅದಕ್ಕೆ ಉತ್ತಮ ಉದಾಹರಣೆ.

    ಸಾಮಾನ್ಯವಾಗಿ ಮದುವೆಯ ವಿಷಯ ಬಂದಾಗ ಅನೇಕ ಹುಡುಗಿಯರು ಸಾಫ್ಟ್‌ವೇರ್ ಇಂಜಿನಿಯರ್, ದೊಡ್ಡ ಉದ್ಯಮಿ ಅಥವಾ ಸರ್ಕಾರಿ ಉದ್ಯೋಗಿಯನ್ನೇ ಜೀವನ ಸಂಗಾತಿಯಾಗಿ ಆಯ್ಕೆ ಮಾಡಲು ಬಯಸುತ್ತಾರೆ. ಆದರೆ ಬೆಂಗಳೂರಿನ ಒಬ್ಬ ಯುವತಿ, ಆಟೋ ಪ್ರಯಾಣದ ವೇಳೆ ನಡೆದ ಒಂದು ಚಿಕ್ಕ ಸಂಭಾಷಣೆಯಿಂದ ಪ್ರಭಾವಿತರಾಗಿ ಆಟೋ ಚಾಲಕನನ್ನೇ ತನ್ನ ಪತಿಯಾಗಿ ಆಯ್ಕೆ ಮಾಡಿಕೊಂಡಿದ್ದಾಳೆ!

    ಆಟೋ ಚಾಲಕ ಮತ್ತು ಯುವತಿಯ ಪರಿಚಯ
    • ಹುಡುಗಿಯ ಹೆಸರು: ಕಾವ್ಯ (ಖಾಸಗಿ ಕಂಪನಿಯ ಉದ್ಯೋಗಿ)
    • ಆಟೋ ಚಾಲಕನ ಹೆಸರು: ಮಂಜುನಾಥ್
    • ವಾಸಸ್ಥಳ: ಇಬ್ಬರೂ ಮೂಲತಃ ಕರ್ನಾಟಕದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಐಟಿ ಕೇಂದ್ರವೆಂದು ಪ್ರಸಿದ್ಧವಾದ ಮಾರತಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

    ಮಂಜುನಾಥ್ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಚಾಲನೆ ಮಾಡಿ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿದ್ದಾರೆ.

    ಆಟೋದಲ್ಲಿ ನಡೆದ ಆ ಕುತೂಹಲಕಾರಿ ಮಾತುಕತೆ:
    ಒಂದು ದಿನ ಕಾವ್ಯ ಮಂಜುನಾಥ್ ಅವರ ಆಟೋದಲ್ಲಿ ಪ್ರಯಾಣಿಸಿದರು. ಗಮ್ಯಸ್ಥಾನ ತಲುಪಿದ ನಂತರ ಮಂಜುನಾಥ್ ಪ್ರಯಾಣದ ಬಾಡಿಗೆಯಾಗಿ 200 ರೂಪಾಯಿ ಕೇಳಿದರು. ಹಣ ನೀಡುವಾಗ ಕಾವ್ಯ ಕುತೂಹಲದಿಂದ ಕೇಳಿದರು:

    “ಆಟೋ ಓಡಿಸಿ ದಿನಕ್ಕೆ ಎಷ್ಟು ಸಂಪಾದಿಸುತ್ತೀರಿ?”

    ಇದಕ್ಕೆ ಮಂಜುನಾಥ್ ಪ್ರಾಮಾಣಿಕವಾಗಿ ಉತ್ತರಿಸಿದರು:

    “ರಜೆ ದಿನಗಳು ಮತ್ತು ಇತರೆ ಖರ್ಚುಗಳನ್ನು ಬಿಟ್ಟು ನೋಡಿದರೆ ದಿನಕ್ಕೆ ಸುಮಾರು 2,000 ರೂಪಾಯಿ ಸಂಪಾದಿಸುತ್ತೇನೆ.”

    ಕಾವ್ಯ ಮಾಡಿದ ಲೆಕ್ಕಾಚಾರ

    ಮಂಜುನಾಥ್ ಅವರ ಉತ್ತರ ಕೇಳಿದ ಕಾವ್ಯ ತಕ್ಷಣ ಮನಸ್ಸಿನಲ್ಲಿ ಲೆಕ್ಕ ಹಾಕಲು ಆರಂಭಿಸಿದರು.

    • ದಿನದ ಆದಾಯ: ₹2,000

    • ತಿಂಗಳ ಆದಾಯ (30 ದಿನಗಳಿಗೆ): ಸುಮಾರು ₹60,000

    ಇಂದಿನ ಕಾಲದಲ್ಲಿ ಅನೇಕರು ಇಂಜಿನಿಯರಿಂಗ್ ಅಥವಾ ಪದವಿ ಮುಗಿಸಿ ಕಂಪನಿಗಳಲ್ಲಿ ದಿನರಾತ್ರಿ ದುಡಿದರೂ ₹30,000-₹40,000 ಗಳಿಸಲು ಕಷ್ಟಪಡುತ್ತಾರೆ. ಆದರೆ ಒಬ್ಬ ಆಟೋ ಚಾಲಕ ಸ್ವಂತ ಪರಿಶ್ರಮದಿಂದ ತಿಂಗಳಿಗೆ ₹60,000 ಗಳಿಸುತ್ತಿರುವುದು ಕಾವ್ಯ ಅವರಿಗೆ ತುಂಬಾ ಇಷ್ಟವಾಯಿತು. ಅವರ ಪರಿಶ್ರಮ, ಸ್ವಾವಲಂಬನೆ ಮತ್ತು ಹಣಕಾಸಿನ ಶಿಸ್ತು ಕಾವ್ಯ ಅವರನ್ನು ಆಕರ್ಷಿಸಿತು.

    “ಅಮ್ಮಾ, ನನಗೆ ನನ್ನ ಗಂಡ ಸಿಕ್ಕಿದ್ದಾನೆ!”

    ಆಟೋದಿಂದ ಇಳಿದ ತಕ್ಷಣ ಕಾವ್ಯ ತಮ್ಮ ತಾಯಿಗೆ ಕರೆ ಮಾಡಿ ಹೀಗೆ ಹೇಳಿದರು:

    “ಅಮ್ಮಾ, ಇನ್ನು ನನಗಾಗಿ ವರ ಹುಡುಕುವ ಅಗತ್ಯವಿಲ್ಲ. ನನಗೆ ನನ್ನ ಗಂಡ ಸಿಕ್ಕಿದ್ದಾನೆ!”

    ಮಗಳ ಮಾತು ಕೇಳಿ ತಾಯಿ ಕ್ಷಣಕಾಲ ಆಶ್ಚರ್ಯಚಕಿತರಾದರು. ನಂತರ ಕಾವ್ಯ ಸಂಪೂರ್ಣ ಘಟನೆಯನ್ನು ವಿವರಿಸಿದರು. ಮಂಜುನಾಥ್ ಅವರ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಕೆಲಸದ ಮೇಲಿನ ಗೌರವದ ಬಗ್ಗೆ ಹೇಳಿದರು.

    ಕಾವ್ಯ ಅವರ ಅಭಿಪ್ರಾಯವೇನೆಂದರೆ:

    “ಸ್ವಂತ ಕಾಲಿನ ಮೇಲೆ ನಿಂತು ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿ, ದೊಡ್ಡ ಕನಸುಗಳನ್ನು ಕಾಣುವ ಆದರೆ ಸಾಲದ ಬದುಕು ನಡೆಸುವ ವ್ಯಕ್ತಿಗಿಂತ ಉತ್ತಮ.”

    ಕೆಲಸಕ್ಕೆ ಗೌರವ ಎಂಬ ಸಂದೇಶ

    ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನೇಕರು ಕಾವ್ಯ ಅವರ ಚಿಂತನೆ ಮತ್ತು ನಿರ್ಧಾರವನ್ನು ಪ್ರಶಂಸಿಸಿದ್ದಾರೆ.

    ನೆಟ್ಟಿಗರು ಹೀಗೆ ಪ್ರತಿಕ್ರಿಯಿಸಿದ್ದಾರೆ:

    “ಯಾವುದೇ ಕೆಲಸಕ್ಕೂ ತನ್ನದೇ ಆದ ಗೌರವವಿದೆ. ಸಾಫ್ಟ್‌ವೇರ್ ಉದ್ಯೋಗಿಗಳಷ್ಟೇ ಅಲ್ಲ, ಸ್ವಯಂ ಉದ್ಯೋಗ ಮಾಡುತ್ತಿರುವ ಆಟೋ ಚಾಲಕರೂ ಗೌರವದಿಂದ ಬದುಕಬಹುದು. ಮಂಜುನಾಥ್ ಅದಕ್ಕೆ ಉತ್ತಮ ಉದಾಹರಣೆ.”

    ವಿಧಿ ಯಾವ ರೂಪದಲ್ಲಿ ನಮ್ಮ ಮುಂದೆ ಬರುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಕೇವಲ ₹200 ಬಾಡಿಗೆಯಿಂದ ಆರಂಭವಾದ ಒಂದು ಸಾಮಾನ್ಯ ಮಾತುಕತೆ, ಈಗ ಇಬ್ಬರ ಜೀವನವನ್ನು ಒಂದಾಗಿಸುವ ಸುಂದರ ಕಥೆಯಾಗಿ ಮಾರ್ಪಟ್ಟಿದೆ.ಮಂಜುನಾಥ್ ಮತ್ತು ಕಾವ್ಯ ಅವರ ಈ ಕಥೆ, ಪ್ರಾಮಾಣಿಕ ಪರಿಶ್ರಮಕ್ಕೆ ಸದಾ ಮೌಲ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಈ ಜೋಡಿಯ ಭವಿಷ್ಯ ಸುಖಮಯವಾಗಿರಲಿ ಎಂಬುದು ಎಲ್ಲರ ಆಶಯ

  • ಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

    ಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

    ಕೆ.ಆರ್.ಪುರ : ಮೋದಿ ಅಂತಹ ಅಗ್ರಗಣ್ಯನಾಯಕ ಭಾರತಕ್ಕೆ ಸಿಕ್ಕಿರುವುದು ಭಾರತೀಯರ ಪುಣ್ಯ , ದಶಕಗಳೇ ಕಳೆದರೂ ಮೋದಿ ಆಡಳಿತ ಮುಂದಿನ ಪೀಳಿಗೆಗೆ ಭದ್ರ ಬುನಾದಿ ಎಂದು ಶಾಸಕ‌ ಬೈರತಿ ಬಸವರಾಜ ಅವರು ತಿಳಿಸಿದರು .

    ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12ವರ್ಷ ಪೂರ್ಣ ಗೊಳಿಸಿದ ಹಿನ್ನಲೆಯಲ್ಲಿ ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ರಾಮಮೂರ್ತಿ ನಗರದ ಆಂಜನೇಯ ಸ್ವಾಮಿಗೆ ವಿಷೇಶ ಪೂಜೆ ಸಲ್ಲಿಸಿ, ನಂತರ ದೇವಾಲಯದ ಬಳಿ ಸಂಭ್ರಮಾಚರಣೆ ಮಾಡಿ ಸಾರ್ವಜನಿಕರಿಗೆ ಸಿಹಿ‌ ವಿತರಿಸಿ ಮಾತನಾಡಿದ ಅವರು

    ವಿಶ್ವದಲ್ಲೇ ಭಾರತ ದೇಶವನ್ನು ಅಗ್ರಮಟ್ಟಕ್ಕೆ ತಲುಪಿಸುವಲಿ ದೇಶವನ್ನು ಅಭಿವೃದ್ಧಿಯೆಡೆಗೆ ದಿಟ್ಟ ಹೆಜ್ಜೆ ಇರಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು , ದೇಶದ ಸೈನ್ಯಕ್ಕೆ ಹೊಸ ಸ್ಪರ್ಶನೀಡಿ ವಿಶ್ವದ ಮಟ್ಟದಲ್ಲಿ ಗೌರವ ತಂದುಕೊಟ್ಟು ಬಲಿಷ್ಠವನ್ನಾಗಿ ಮಾಡಿದ ಏಕೈಕ ನಾಯಕರಾಗಿದ್ದಾರೆ ಎಂದು ಹೇಳಿದರು.

    ಶ್ರೀರಾಮನ ಕಾಣುವ ಹಿಂಗಿತ ,ಆತ್ಮನಿರ್ಭರ ಭಾರತ,ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ, ಡಿಜಿಟಲ್ ಇಂಡಿಯಾ ಮುಖಾಂತರ ವಿಶ್ವದಲ್ಲಿ ಕ್ರಾಂತಿ ವಿಶ್ವಮಟ್ಟದಲ್ಲಿ ಸಾಮರಸ್ಯ ನಾಯಕತ್ವ ಹೊಂದಿದ ವಿಶ್ವಗುರು , ನರೇಂದ್ರ ದಾಮೋದರ ದಾಸ್ ಮೋದಿ ಎಂದು ಗುಣಗಾನ ಮಾಡಿದರು.

    ಈ ಸಂದರ್ಭದಲ್ಲಿ ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ,ಎಂಎಲ್ ಡಿಸಿ ಮುನಿರಾಜು, ವಾರ್ಡ್ ನ ಅಧ್ಯಕ್ಷ ರಮೇಶ್ ಗೌಡ,ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಜಿಮ್ ರಮೇಶ್ ಗೌಡ,ಮುಖಂಡರಾದ ಬಾಕ್ಸರ್ ನಾಗರಾಜ್, ನಾಗೇನಹಳ್ಳಿ ಲೋಕೆಶ್,ಸುಗುಮಾರ್,ಶ್ರೀರಾಮ್, ರಾಮು ಮತ್ತಿತರರು ಇದ್ದರು.

  • ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

    ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

    ಬೆಂಗಳೂರು: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಉದ್ದೇಶದಿಂದ 2026 ರ ಜೂನ್ 28 ರ ಭಾನುವಾರದಂದು ‘ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತ್ವಿಕ್ ಪಾಂಡೆ ಅವರು ತಿಳಿಸಿದ್ದಾರೆ.

    ಭಾರತವು ಕಳೆದ 14 ವರ್ಷಗಳಿಗೂ ಮೇಲ್ಪಟ್ಟು ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ಭಾರತದ ನೆರೆ ರಾಷ್ಟ್ರಗಳಲ್ಲಿ *ವೈಲ್ಡ್ ಪೋಲಿಯೋ ವೈರಸ್* (Wild Polio Virus) ಹರಡುವಿಕೆ ಇನ್ನೂ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿದೆ. ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    *ಮೊದಲನೇ ದಿನ ಜೂನ್ 28 ರಂದು ಪೋಲಿಯೋ ಬೂತ್‍ಗಳಲ್ಲಿ ಲಸಿಕೆ ನೀಡಲಾಗುವುದು*. ನಂತರದ *2 ರಿಂದ 3 ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ*. ವಲಸಿಗ ಸಮುದಾಯದ ಮಕ್ಕಳು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

    ಎಲ್ಲಾ ಇಲಾಖೆಗಳ ಸಹಕಾರಕ್ಕೆ ಮನವಿ

    ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರವನ್ನು ಬಯಸಿರುವ ಆರೋಗ್ಯ ಇಲಾಖೆಯು, ಹೆಚ್ಚಿನ ಪ್ರಚಾರ ನೀಡಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಎಲ್ಲಾ ಮಾಧ್ಯಮಗಳು, ಆಕಾಶವಾಣಿ ಹಾಗೂ ಎಫ್.ಎಮ್ ವಾಹಿನಿಗಳಲ್ಲಿ ಜಿಂಗಲ್ಸ್ ಮೂಲಕ ಈ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

    ಸಾರ್ವಜನಿಕರು ಹಾಗೂ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಿ ಸಹಕರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

  • ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ಪರಿಶೀಲನೆ ನಡೆಸಿದ ಶಾಸಕ‌ ಬೈರತಿ ಬಸವರಾಜ್.

    ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ಪರಿಶೀಲನೆ ನಡೆಸಿದ ಶಾಸಕ‌ ಬೈರತಿ ಬಸವರಾಜ್.

    ಕೆ.ಆರ್ ಪುರ: ಕೆ.ಆರ್‌.ಪುರ ಸರ್ಕಾರಿ ಆಸ್ಪತ್ರೆಗೆ ಶಾಸಕ ಬೈರತಿ ಬಸವರಾಜ್ ಭೇಟಿ ನೀಡಿ ಎಲ್ಲಾ ವಾರ್ಡ್ ನ ರೋಗಿಗಳ ಸಮಸ್ಯೆ ಆಲಿಸಿ‌, ಆಸ್ಪತ್ರೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

    ಬಳಿಕ ಮಾತನಾಡಿದ ಅವರು, ಬಡವರು ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿ ತಿಳಿಯಲು ಖುದ್ದಾಗಿ ಭೇಟಿ ಕೊಟ್ಟಿದ್ದೇನೆ. ಈ ಆಸ್ಪತ್ರೆಯಲ್ಲಿ ಜನರ ಆರೋಗ್ಯ ಸುಧಾರಿಸಲು ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಬೇಕಿದೆ. ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಬೇಕು ಎಂದರು.

    ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ಹಾಗೆ ಕೆ.ಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಹೇಳಿದರು.

    100 ಹಾಸಿಗೆಯ ಆಸ್ಪತ್ರೆ ಸಿದ್ಧವಾಗಿ ವರ್ಷಗಳೇ ಕಳೆದರೂ ಜನರ ಉಪಯೋಗಕ್ಕೆ ಬಾರದೇ ಇರುವುದು ಮಾತ್ರ ದುರಾದೃಷ್ಟಕರ ವಿಷಯ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಮಾಜಿ ನಗರಸಭೆ ಸದಸ್ಯ ಕೇಶವ, ವಾರ್ಡ್ ಅಧ್ಯಕ್ಷ ಶಿವಪ್ಪ ಮುಖಂಡರಾದ ,ಕೆ.ಪಿ ಕೃಷ್ಣ, ರಾಜುಸಿಂಗ್,ಆಸ್ಪತ್ರೆಯ ವೈದ್ಯರು ಮತ್ತಿತರರಿದ್ದರು.

  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ₹3.57 ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

    ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕ ಅಕ್ರಮವಾಗಿ ಗಾಂಜಾ ಸಾಗಿಸಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾನೆ.

    ಚೆಕ್-ಇನ್ ಬ್ಯಾಗೇಜ್ ತಪಾಸಣೆ ನಡೆಸಿದಾಗ ಆರೋಪಿಯ ಬ್ಯಾಗ್‌ನಲ್ಲಿ ಹೈಡೋಪೋನಿಕ್ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಸಿಎಂ ಡಿಕೆಶಿ ಮನೆಯ ಬಳಿ ನಿಂಬೆಹಣ್ಣು, ನಾಟಿ ಕೋಳಿ ಕತ್ತು ಕೊಯ್ದು ವಾಮಾಚಾರ ಶಂಕೆ!

    ಸಿಎಂ ಡಿಕೆಶಿ ಮನೆಯ ಬಳಿ ನಿಂಬೆಹಣ್ಣು, ನಾಟಿ ಕೋಳಿ ಕತ್ತು ಕೊಯ್ದು ವಾಮಾಚಾರ ಶಂಕೆ!

    ಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಯ ಬಳಿ ಮೂರು ನಿಂಬೆಹಣ್ಣು ಹಾಗೂ ನಾಟಿ ಕೋಳಿಯ ಕತ್ತು ಕೊಯ್ದು ಹಾಕಿರುವುದು ಭಾನುವಾರ ಮಧ್ಯಾಹ್ನ ಪತ್ತೆಯಾಗಿತ್ತು ವಾಮಾಚಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಮುಖ್ಯಮಂತ್ರಿ ಮನೆಯ ಬಳಿ ಕೂಡು ರಸ್ತೆಯಿದ್ದು (ಜಿಬಿಎ ಮೈದಾನದ ಎದುರು) ಆ ರಸ್ತೆಯ ಬದಿಯಲ್ಲಿ ವೃತ್ತಾಕಾರ ಹಾಕಿ ನಾಟಿ ಕೋಳಿಯೊಂದನ್ನು ಕೊಯ್ದು ಹಾಕಲಾಗಿತ್ತು. ಅದರ ಪಕ್ಕದಲ್ಲೇ ನಿಂಬೆಹಣ್ಣನ್ನು ಹಾಕಲಾಗಿತ್ತು. ಕೋಳಿ ತಲೆಯನ್ನು ನಾಯಿ ಎತ್ತಿಕೊಂಡು ಹೋಗಿದೆ. ಆ ಮಾರ್ಗದಲ್ಲಿ ತೆರಳಿದ ವಾಹನ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ಕುತೂಹಲದಿಂದ ವೀಕ್ಷಿಸಿ ಹೋಗುತ್ತಿದ್ದರು.

    ‘ವಾಮಾಚಾರ ನಡೆಸಲಾಗಿದೆ’ ಎಂದು ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಕೋಳಿಯನ್ನು ಸ್ಥಳದಿಂದ ತೆಗೆದು ಹಾಕಲಾಗಿದೆ. ಶನಿವಾರ ತಡರಾತ್ರಿ ಕಿಡಿಗೇಡಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆ ಮಾರ್ಗದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದೇವೆ. ಕೃತ್ಯ ಎಸಗಿದವರ ಸುಳಿವು ಇನ್ನೂ ಪತ್ತೆಯಾಗಿಲ್ಲ’ ಎಂದು ಪೊಲೀಸರು ಹೇಳಿದರು.

  • ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ಪೌಜಿಯಾ ತರನ್ನುಮ್

    ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ಪೌಜಿಯಾ ತರನ್ನುಮ್

    ಬೆಂ.ಗ್ರಾ.ಜಿಲ್ಲೆ: ನಮ್ಮ ಪರಿಸರವನ್ನು ಸಂರಕ್ಷಿಸುವುದು ಮತ್ತು ಸ್ವಚ್ಛವಾಗಿಡುವುದು ಕೇವಲ ಒಂದು ದಿನದ ಕೆಲಸವಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತೆ ಬಿ. ಪೌಜಿಯಾ ತರನ್ನುಮ್ ಅವರು ಹೇಳಿದರು.

    ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಪ್ರತಿಯೊಬ್ಬರು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡು ಸ್ವಚ್ಛ ಮತ್ತು ಸಮೃದ್ಧ ಪರಿಸರ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆಯನ್ನು ಆಚರಿಸೋಣ ಎಂದು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಿಇಒ ಡಾ. ವಾಸಂತಿ ಅಮರ್ ಅವರು ಮಾತನಾಡಿ, ಈ ಬಾರಿ “ಪ್ರಕೃತಿಯಿಂದ ಪ್ರೇರಣೆ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ.” ಎಂಬ ಘೋಷ ವಾಕ್ಯದೊಂದಿಗೆ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಅತ್ಯುತ್ತಮ ಪರಿಹಾರಗಳನ್ನು ನೀಡುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾಧಿಕಾರಿ ವಿಠಲ್ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ತಾಲೂಕು ಪಂಚಾಯಿತಿ ಇಒ ಎನ್. ಮುನಿರಾಜು, ಮಾಜಿ ಸದಸ್ಯರಾದ ಕೆ.ವಿ.ಸ್ವಾಮಿ, ಕ್ಯಾತೇಗೌಡ, ವಿ.ನಾರಾಯಣಸ್ವಾಮಿ, ಅರಣ್ಯ ಉಪ ನಿರ್ದೇಶಕರು, ಕಾರ್ಯ ಪಾಲಕ ಅಧಿಕಾರಿ ಅಭಿಯಂತರರು, ಪಿಡಿಒ ಕುಮಾರ್, ಕಾರ್ಯದರ್ಶಿ ನರೇಶ್, ಸಮಾಜ ಸೇವಕ ಎನ್.ಸಿ.ಪ್ರಕಾಶ್, ಗ್ರಾಪಂ ಮಾಜಿ ಸದಸ್ಯರು, ಮುಖಂಡರು, ವಸತಿ ಶಾಲೆ ಮಕ್ಕಳು ಹಾಗೂ ಗ್ರಾಮಸ್ಥರು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

  • ಮಾವು-ಹಲಸು ಮೇಳದಲ್ಲಿ ಗ್ರಾಹಕರನ್ನು ಕಣ್ಮನ ಸೆಳೆಯುವ ವಿವಿಧ ತಳಿಯ ಮಾವು

    ಮಾವು-ಹಲಸು ಮೇಳದಲ್ಲಿ ಗ್ರಾಹಕರನ್ನು ಕಣ್ಮನ ಸೆಳೆಯುವ ವಿವಿಧ ತಳಿಯ ಮಾವು

    ಬೆಂ.ಗ್ರಾ.ಜಿಲ್ಲೆ: ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ದೃಷ್ಟಿಯಿಂದ ಮಾವು-ಹಲಸು ಮೇಳ ಆಯೋಜಿಸಲಾಗಿದೆ. ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹಣ್ಣುಗಳು ಲಭ್ಯವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಖರೀದಿಸಿ ಎಂದು ಸಂಪುಟ ದರ್ಜೆ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಟೌನ್ ನ ರಾಣಿ ಕ್ರಾಸ್ ಬಳಿ ಆಯೋಜಿಸಿದ್ದ ಮೂರು ದಿನಗಳ ಜಿಲ್ಲಾ ಮಟ್ಟದ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಜಿಲ್ಲೆಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಮಾರುಕಟ್ಟೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣುಗಳು ಸಿಗುವಂತೆ ಮಾಡಲು ಮೇಳ ಆಯೋಜನೆ ಮಾಡಲಾಗಿದೆ.

    ವಿವಿಧ ತಳಿಯ ಮಾವು, ಹಲಸು, ನೇರಳೆ ಹಾಗೂ ಇತರೆ ಹಣ್ಣುಗಳ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯಲ್ಲಿ ರಿಯಾಯಿತಿ ದರದಲ್ಲಿ ಗ್ರಾಹಕರು ಹಣ್ಣುಗಳನ್ನು ಖರೀದಿ ಮಾಡಬಹುದಾಗಿದೆ ಎಂದರು.

    ಮೇಳವು ಜೂನ್ 07 ವರೆಗೆ ಅಂದರೆ ಭಾನುವಾರದವರೆಗೆ ಇರಲಿದ್ದು, ಶನಿವಾರ, ಭಾನುವಾರ ರಜಾ ದಿನ ಸಂಧರ್ಭದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ರೈತರಿಂದ ನೇರವಾಗಿ ಹಣ್ಣುಗಳ ಖರೀದಿ ಮಾಡಲು ಉತ್ತಮ ಅವಕಾಶ ಇದಾಗಿದೆ ಎಂದು ಹೇಳಿದರು.

    ಮಾವು ಒಂದು ಮಳೆಯಾಶ್ರಿತ ಬೆಳೆ. ಮಾವು ಫಸಲು ಆರಂಭವಾಗುವ ಸಂದರ್ಭದಲ್ಲಿ ರೈತರ ತೋಟಗಳಿಗೆ ತೋಟಗಾರಿಕೆ ಅಧಿಕಾರಿಗಳು ಖುದ್ದು ಭೇಟಿ ನೀಡಿ ಯಾವ ರೀತಿಯ ಔಷಧಿ ಸ್ಪ್ರೇ ಮಾಡಬೇಕು, ರೋಗ ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಸಲಹೆ ಸೂಚನೆ ನೀಡಬೇಕು. ಉತ್ತಮ ಇಳುವರಿ ಬಂದು ಒಳ್ಳೆಯ ಬೆಲೆ ಸಿಕ್ಕರೆ ರೈತರಿಗೂ ಅನುಕೂಲ. ಹಾಗಾಗಿ ಅಧಿಕಾರಿಗಳು ಮಾವು ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದು ಹೇಳಿದರು.

    ನಂತರ ಎಲ್ಲಾ ಮಳಿಗೆಗೆಳಿಗೆ ಸಚಿವರು ಭೇಟಿ ನೀಡಿ ರೈತರ ರೊಟ್ಟಿಗೆ ಸಮಾಲೋಚಿಸಿ ವಿವಿಧ ತಳಿಯ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಬಗ್ಗೆ ಮಾಹಿತಿ ಪಡೆದುಕೊಂಡು, ಅವುಗಳ ರುಚಿ ಸವಿದರು.

    *ಸಸ್ಯ ಸಂತೆ*
    ಮೇಳದಲ್ಲಿ ಸಸ್ಯ ಸಂತೆ ಏರ್ಪಡಿಸಿದ್ದು ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ/ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗಧಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ. ಸಸ್ಯ ಸಂತೆ ಯಲ್ಲಿ ಮಾವು, ಸೀಬೆ, ತೆಂಗು, ನೆರಳೆ, ಕರಿಬೇವು, ನಿಂಬೆ, ಸಪೋಟ, ಮಲ್ಲಿಗೆ ಹಾಗೂ ಇತ್ಯಾದಿ ಕಸಿ/ಸಸಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ.

    *ಮೇಳದಲ್ಲಿ ಕಂಡು ಬಂದ ಬಗೆ ಬಗೆಯ ಮಾವು-ಹಲಸು ಹಣ್ಣುಗಳು*
    ಮಿಯಾ ಜಾಕಿ, ತೋತಾಪುರಿ, ಸೇಂದೂರ, ಬಂಗನಪಲ್ಲಿ, ಬಾದಾಮಿ, ರಸಪೂರಿ, ಮಲ್ಲಿಕಾ, ಕೇಸರ್, ದಶೇರಿ, ಕುಲ್ ಪಂದ್, ಹಿಮಾಪಸಂದ್,ಮಲಗೋವ, ಸಕ್ಕರೆಗುತ್ತಿ, ಡ್ರಾಗನ್ ಪ್ರೋಟ್ಸ್, ಸೀಬೆ, ಹಲಸು (ತೂಬಗೆರೆ), ನೇರಳೆ.

    ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ, ಸಿಇಓ ಡಾ. ವಾಸಂತಿ ಅಮರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಗುಣವಂತ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕಲಾವತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಪುರಸಭೆ ಅಧ್ಯಕ್ಷ ಮುನಿಕೃಷ್ಣ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು,ಗ್ರಾಹಕರು ಇದ್ದರು.


  • ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಿಸಿದ ಸಮಾಜ ಸೇವಕ ಹೇಮಂತ್

    ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಿಸಿದ ಸಮಾಜ ಸೇವಕ ಹೇಮಂತ್

    ಕೆ ಆರ್ ಪುರ: ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಸಮಾಜ ಸೇವಕ ಆನಂದಪುರ ವಾರ್ಡ್ ಮುಖಂಡ ಹೇಮಂತ್ ತಿಳಿಸಿದರು.

    ಆನಂದಪುರದ ನಮ್ಮೂರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಬ್ಯಾಗ್ , ನೋಟ್ ಪುಸ್ತುಕ, ಪೆನ್ಸಿಲ್ , ರಬ್ಬರ್ ಮುಂತಾದ ಕಲಿಕಾ ಸಾಮಾಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.

    ವಿದ್ಯೆ ಕಲಿಯಬೇಕೆಂಬ ಹಂಬಲ ಹಲವು ಮಕ್ಕಳಿಗಿದ್ದರೂ ಅವರು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಇದರಿಂದ ಎಷ್ಟೋ ಮಕ್ಕಳು ವಿದ್ಯೆಯಿಂದ ದೂರ‌ ಉಳಿದು ಸಮಾಜಕ್ಕೆ ಒಳ್ಳೆಯ ಪ್ರಜೆಗಳು ಮೂಲೆ ಗುಂಪಾಗುತ್ತಿರುತ್ತಾರೆ ಎಂದು‌ ಹೇಳಿದರು.

    ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ಈ ಸಮಾಜ ಸೇವೆ ಕಾರ್ಯ ಮಾಡಿಕೊಳ್ಳುತ್ತಾ ಬರುತ್ತಿದ್ದು ಅವರು ನಮಗೆ ಮಾರ್ಗದರ್ಶಕರಾಗಿದ್ದಾರೆ ಎಂದು ಹೇಳಿದರು.

    ಉಳ್ಳವರು ತಮಗೆ ಬೇಕಾದಷ್ಟು ಇಟ್ಟುಕೊಂಡು ಉಳಿದನ್ನು ಬಡವರಿಗೆ ದಾನ ಮಾಡಿದರೆ ಬಡತನ ಸಮಾಜದಲ್ಲಿ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಆನಂದ ಪುರ ಸರ್ಕಾರಿ ಶಾಲೆಯಲ್ಲಿ 125 ಮಕ್ಕಳಿದ್ದು ಎಲ್ಲಾ ಮಕ್ಕಳಿಗೆ ಇಂದು ನೋಟ್ ಪುಸ್ತುಕ , ಬ್ಯಾಗ್ ಸೇರಿದಂತೆ ಹಲವು ಕಲಿಕಾ ಸಾಮಾಗ್ರಿಗಳನ್ನು ನೀಡಿದ್ದೇವೆ ಎಂದು ಹೇಳಿದರು.

    ಈ‌ ಸಂದರ್ಭದಲ್ಲಿ ಮಾಜಿ‌ನಗರಸಭಾ ಸದಸ್ಯರಾದ ಉಮಾಶಂಕರ್, ಭಾಗ್ಯಮ್ಮ, ಗಿರೀಶ್, ಮುಖ್ಯೊಪದ್ಯಾಯರಾದ ನಾಗೇಶ್ , ಭಾನುಮೂರ್ತಿ, ಆರ್.ನಾರಾಯಣಪ್ಪ, ಹೇಮಂತ್ (ಹರಿ) , ನವೀನ್, ಮೋಹನ್, ಶಂಕರ್ , ಮತ್ತಿತರರಿದ್ದರು

  • ವಾರಿಜಾಶ್ರೀ ವೇಣುಗೋಪಾಲ್ ಜೊತೆ ‘ಜ್ಯಾಮಿಂಗ್’ ಕಲಿಕೆ: ಪರಮ್ ಕಲ್ಚರ್ ನಿಂದ ಬೆಂಗಳೂರಿನಲ್ಲಿ ಅಪೂರ್ವ ವರ್ಕ್‌ಶಾಪ್!

    ವಾರಿಜಾಶ್ರೀ ವೇಣುಗೋಪಾಲ್ ಜೊತೆ ‘ಜ್ಯಾಮಿಂಗ್’ ಕಲಿಕೆ: ಪರಮ್ ಕಲ್ಚರ್ ನಿಂದ ಬೆಂಗಳೂರಿನಲ್ಲಿ ಅಪೂರ್ವ ವರ್ಕ್‌ಶಾಪ್!

    • ಗ್ರ್ಯಾಮಿ ನಾಮಿನಿ ವಾರಿಜಾಶ್ರೀ ಅವರಿಂದ ತರಬೇತಿ
    • ಪರಮ್‌ ಸಂಸ್ಥೆ ಸಹಯೋಗದಲ್ಲಿ ಜೂ. 7ರಂದು ವಿಶಿಷ್ಟ ಕಾರ್ಯಾಗಾರ
    • ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸ್ಟುಡಿಯೋ’

    ಬೆಂಗಳೂರು: ಕಲೆ ಮತ್ತು ಸಂಗೀತದ ನವೀನ ಪ್ರಯೋಗಗಳಿಗೆ ಹೆಸರಾಗಿರುವ ‘ಪರಮ್’ ಸಂಸ್ಥೆಯು ಬೆಂಗಳೂರಿನ ಹೆಮ್ಮೆಯ ಅಂತಾರಾಷ್ಟ್ರೀಯ ಖ್ಯಾತಿಯ, ಗ್ರ್ಯಾಮಿ ನಾಮಿನಿ (Grammy nominee) ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ ವೇಣುಗೋಪಾಲ್ ಅವರ ನೇತೃತ್ವದಲ್ಲಿ “ಲೆಟ್ಸ್ ಜ್ಯಾಮ್” (Let’s Jam) ಎಂಬ ವಿಶಿಷ್ಟ ಮತ್ತು ಪ್ರಾಯೋಗಿಕ ಸಂಗೀತ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಅಪೂರ್ವ ವರ್ಕ್‌ಶಾಪ್ ಇದೇ ಜೂನ್ 7ರ ಭಾನುವಾರದಂದು ಬೆಂಗಳೂರಿನ ಪ್ರತಿಷ್ಠಿತ ‘ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ಸ್ಟುಡಿಯೋ ಆವರಣದಲ್ಲಿ ನಡೆಯಲಿದೆ.

    ವಿಶಿಷ್ಟ ಜ್ಯಾಮಿಂಗ್ (ಆಶುಪ್ರಸ್ತುತಿ) ಕಾರ್ಯಾಗಾರದ ಅವಲೋಕನ ಈ ಕಾರ್ಯಾಗಾರವು ಗಾಯಕರು (Vocalists) ಮತ್ತು ವಾದ್ಯಗಾರರು (Instrumentalists) ಇಬ್ಬರಿಗೂ ಜ್ಯಾಮಿಂಗ್ ಕಲೆಯ ಸೂಕ್ಷ್ಮಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡಲಿದೆ. ಒಂದು ಜುಗಲ್‌ಬಂದಿ ಅಥವಾ ಸಂಗೀತ ಕಚೇರಿಯಲ್ಲಿ ಸಹ-ಕಲಾವಿದರೊಂದಿಗೆ ಹೇಗೆ ಹೊಂದಿಕೊಳ್ಳಬೇಕು? ಅತ್ಯಂತ ಸೂಕ್ಷ್ಮವಾಗಿ ಮತ್ತು ಆಕರ್ಷಕವಾಗಿ ರಾಗ ಸಂಯೋಜನೆಗಳನ್ನು ಹೇಗೆ ಪ್ರಸ್ತುತಪಡಿಸಬೇಕು? ಎಂಬುದರ ಬಗ್ಗೆ ಇಲ್ಲಿ ತರಬೇತಿ ನೀಡಲಾಗುತ್ತದೆ. ಇದರಲ್ಲಿ ಕೇವಲ ಸಂಗೀತ ಪ್ರದರ್ಶನ ಮಾತ್ರವಲ್ಲದೆ, ಸಹ-ಕಲಾವಿದರ ಧ್ವನಿ ಅಥವಾ ವಾದ್ಯಕ್ಕೆ ಗೌರವಯುತವಾಗಿ ಸಮಯಾವಕಾಶ ನೀಡುವುದು (Making space), ಸೂಕ್ಷ್ಮ ಆಲಿಸುವಿಕೆ ಹಾಗೂ ಇಡೀ ತಂಡ ಒಂದೇ ಜೀವವಾಗಿ ಹೇಗೆ ಬೆಸೆಯಬೇಕು ಎಂಬ ತಂತ್ರಗಳನ್ನು ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ.

    ಕರ್ನಾಟಕ ಶಾಸ್ತ್ರೀಯ ಸಂಗೀತ (Carnatic), ಪಾಶ್ಚಾತ್ಯ ಜ್ಯಾಸ್ (jazz) ಹಾಗೂ ಸಮಕಾಲೀನ ಸಂಗೀತ ಲೋಕದ ದಿಗ್ಗಜರೊಂದಿಗೆ ವಾರಿಜಾಶ್ರೀ ಅವರು ಹೊಂದಿರುವ ಸುದೀರ್ಘ ಪ್ರದರ್ಶನಗಳ ಅನುಭವವೇ ಈ ಕಾರ್ಯಾಗಾರದ ಪ್ರಮುಖಾಂಶವಾಗಿದೆ.
    *ಈ ವರ್ಕ್‌ಶಾಪ್‌ನ ಪ್ರಮುಖ ಕಲಿಕಾ ಉದ್ದೇಶಗಳು:*

    • ಜ್ಯಾಮಿಂಗ್ ಸಮಯದಲ್ಲಿ ರಾಗ ಮತ್ತು ಸ್ವರಗಳನ್ನು ಕಲಾತ್ಮಕವಾಗಿ ಬಳಸುವ ವಿಧಾನಗಳ ಕಲಿಕೆ.

    • ಸಹ-ಕಲಾವಿದರ ಜ್ಞಾನವನ್ನು ಗೌರವಿಸುತ್ತಾ, ಸೂಕ್ಷ್ಮವಾಗಿ ಆಲಿಸುವ ಕಲೆ ಹಾಗೂ ಜುಗಲ್‌ಬಂದಿಯಲ್ಲಿ ಕಲಾತ್ಮಕವಾಗಿ ಭಾಗಿಯಾಗುವ ತಂತ್ರಗಳು.

    • ಇಡೀ ಸಂಗೀತ ತಂಡವು ಒಂದೇ ಸಮೂಹವಾಗಿ ಒಟ್ಟಿಗೆ ಸಾಗಲು ಮತ್ತು ಪ್ರತಿಯೊಬ್ಬ ಕಲಾವಿದನ ಧ್ವನಿಯೂ ಸ್ಪಷ್ಟವಾಗಿ ಕೇಳುವಂತೆ ಹೆಣೆಯುವ ಕಲೆ.

    • ವಿವಿಧ ಜಾನಪದ, ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಸಂಗೀತ ಶೈಲಿಗಳಲ್ಲಿ ಸುಧಾರಿತ ಆಶುಗಾಯನ (Improvisation) ಮತ್ತು ಸಂವಾದ ತಂತ್ರಗಳ ಅಳವಡಿಕೆ.

    *ಬಾಲ್ಯದ ಪ್ರತಿಭೆ, ಗ್ಲೋಬಲ್ ಐಕಾನ್:*

    ವಾರಿಜಶ್ರೀ ವೇಣುಗೋಪಾಲ್ ಅವರು ಅತ್ಯುತ್ತಮ ಗಾಯಕರು ಹಾಗೂ ಕೊಳಲು ವಾದಕರು. ಇವರು ತಮ್ಮ 18 ತಿಂಗಳ ಅಂದರೆ ಒಂದೂವರೆ ವರ್ಷದಷ್ಟು ವಯಸ್ಸಿನಲ್ಲಿಯೇ ಕರ್ನಾಟಕ ಸಂಗೀತದ 100 ರಾಗಗಳನ್ನು ಗುರುತಿಸಬಲ್ಲ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. 4ನೇ ವಯಸ್ಸಿನಲ್ಲಿ ಕರ್ನಾಟಕ ಸಂಗೀತ ಕಚೇರಿಗಳನ್ನು ನೀಡಲು ಪ್ರಾರಂಭಿಸಿ ಮನೆ ಮಾತಾಗಿದ್ದಾರೆ.

    ಜಾಗತಿಕ ಸಂಗೀತ ಪ್ರದರ್ಶನಗಳ ವೇಳೆ ಭಾರತೀಯ ಗಾಯನದ ಪಟ್ಟುಗಳ ಸಹಿತ ಮೂಲ ಅಂಶಗಳೊಂದಿಗೆ ಅಂತರಾತ್ಮದಿಂದ ಹಾಡುವ ಕಲಾವಿದರಲ್ಲಿ ವಾರಿಜಶ್ರೀ ಒಬ್ಬರಾಗಿದ್ದಾರೆ. ಜೇಕಬ್ ಕೊಲಿಯರ್ ಅವರ ‘ಎ ರಾಕ್ ಸಮ್‌ವೇರ್’ (A Rock SomeWhere) ಗಾಯನದಲ್ಲಿ ಪ್ರಸಿದ್ಧ ಸಿತಾರ್‌ ವಾದಕರಾದ ಅನುಷ್ಕಾ ಶಂಕರ್ ಅವರೊಂದಿಗೆ ‘ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನದಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ 67 ನೇ ಗ್ರ್ಯಾಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ. ವಿಶ್ವವಿಖ್ಯಾತ ಸಂಗೀತಗಾರರಾದ ಬಾಬಿ ಮೆಕ್‌ಫೆರಿನ್ (Bobby McFerrin), ಮೈಕೆಲ್ ಲೀಗ್ (Michael League), ಜಾಕೋಬ್ ಕೊಲಿಯರ್ (Jacob Collier), ಅನುಷ್ಕಾ ಶಂಕರ್ ಮತ್ತು ಪ್ರವೀಣ್ ಡಿ.ರಾವ್ ಅವರಂತಹ ಅಂತಾರಾಷ್ಟ್ರೀಯ ದಿಗ್ಗಜರೊಂದಿಗೆ ಜಾಗತಿಕ ವೇದಿಕೆಗಳಲ್ಲಿ ಸಹಯೋಗ ಹೊಂದಿದ ಹೆಮ್ಮೆ ಇವರದ್ದಾಗಿದೆ.

    *ಕಾರ್ಯಕ್ರಮದ ಸಮಯ*
    • ಸೆಷನ್ 1: ಬೆಳಗ್ಗೆ 11:00 ರಿಂದ ಮಧ್ಯಾಹ್ನ 1:00 ರವರೆಗೆ

    • ಸೆಷನ್ 2 (ವಿಸ್ತರಿತ ಅವಧಿ): ಮಧ್ಯಾಹ್ನ 2:00 ರಿಂದ ಸಂಜೆ 4:00 ರವರೆಗೆ

    ಸಂಗೀತ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಬಯಸುವ ಉದಯೋನ್ಮುಖ ಗಾಯಕರು, ವಾದ್ಯಗಾರರು ಮತ್ತು ಕಲಾ ಆಸಕ್ತರಿಗೆ ಇದೊಂದು ಸುವರ್ಣಾವಕಾಶ. ಹೆಚ್ಚಿನ ವಿವರಗಳಿಗಾಗಿ 9035034725 ಸಂಪರ್ಕಿಸಿ.