Blog

  • ಕೆಂಪೇಗೌಡರು ಸುಂದರ ಬೆಂಗಳೂರು ನಿರ್ಮಿಸಿದ ಮಹಾನ್ ನಾಯಕ

    ಕೆಂಪೇಗೌಡರು ಸುಂದರ ಬೆಂಗಳೂರು ನಿರ್ಮಿಸಿದ ಮಹಾನ್ ನಾಯಕ


    ಮಹದೇವಪುರ: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ನಾಲ್ಕು ಗೋಪುರಗಳ ಪರಿಧಿಯಿಂದ ಹೊರಗೂ ಇಂದು ಬೆಂಗಳೂರು ನಗರ ವಿಸ್ತರಿಸಿದೆ. ಅವರ ದೂರದೃಷ್ಟಿ, ಅಭಿವೃದ್ಧಿ ಪರಿಕಲ್ಪನೆ ಮತ್ತು ಆದರ್ಶಗಳನ್ನು ಅನುಸರಿಸಿಕೊಂಡೇ ಮಹದೇವಪುರ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

    ಕ್ಷೇತ್ರದ ಹೂಡಿ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಯ ಎರಡು ಮಂಡಲಗಳ ವತಿಯಿಂದ ಆಯೋಜಿಸಿದ್ದ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರೊಂದಿಗೆ ಭಾಗವಹಿಸಿ, ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

    ಶಿಕ್ಷಣ, ಹೋರಾಟ ಮತ್ತು ಅಭಿವೃದ್ಧಿಗೆ ಮತ್ತೊಂದು ಹೆಸರೇ ನಾಡಪ್ರಭು ಕೆಂಪೇಗೌಡರು. ಬೆಂಗಳೂರಿನ ಅಭಿವೃದ್ಧಿಯ ಜೊತೆಗೆ ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಕೆರೆಗಳನ್ನು ನಿರ್ಮಿಸಿದ ಅವರ ದೂರದೃಷ್ಟಿ ಇಂದಿಗೂ ಎಲ್ಲರಿಗೂ ಆದರ್ಶವಾಗಿದೆ ಎಂದು ಹೇಳಿದರು.

    ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, “ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಆಡಳಿತ ಕೌಶಲ್ಯ ಹಾಗೂ ಜನಪರ ಚಿಂತನೆಗಳು ಇಂದಿಗೂ ಪ್ರತಿಯೊಬ್ಬ ಜನಪ್ರತಿನಿಧಿಗೂ ಮಾರ್ಗದರ್ಶಕವಾಗಿವೆ. ಕೇವಲ ವ್ಯಾಪಾರ ಮತ್ತು ನಗರಾಭಿವೃದ್ಧಿಗೆ ಮಾತ್ರವಲ್ಲದೆ, ಪರಿಸರ ಸಂರಕ್ಷಣೆಗೂ ಮಹತ್ವ ನೀಡಿ, ನಗರದ ನೀರಿನ ಅಗತ್ಯವನ್ನು ಪೂರೈಸಲು ಬೃಹತ್ ಕೆರೆಗಳನ್ನು ನಿರ್ಮಿಸಿದ್ದರು. ಅವರ ದೂರದೃಷ್ಟಿಯೇ ಇಂದಿನ ಬೆಂಗಳೂರಿನ ಬೆಳವಣಿಗೆಗೆ ಭದ್ರ ಅಡಿಪಾಯವಾಗಿದೆ” ಎಂದು ತಿಳಿಸಿದರು.
    “ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ, ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.”

    ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಮಾಜಿ ಅಧ್ಯಕ್ಷರಾದ ಮನೋಹರ್ ರೆಡ್ಡಿ ಹಾಗೂ ಪಾಪಣ್ಣ, ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ಮಹೇಂದ್ರ ಮೋದಿ,ವರ್ತೂರು ಶ್ರೀಧರ್,ಬಿ.ಜಿ.ರಾಜೇಶ್,ಜೋತಿಪುರ ವೇಣು, ಕೆ.ಎಂ. ಎಂ.ಮಂಜುನಾಥ್, ಕಣ್ಣೂರು ಅಶೋಕ್, ಗುಂಜೂರು ಚರಣ್, ಸಿದ್ದಾಪುರ ಹನುಮಂತೇಗೌಡ, ಕೆ.ವಿ.ನಾಗರಾಜ್ ಸೇರಿದಂತೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

  • ಕೆ.ಚನ್ನಸಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಮಾಡಿದ ಡಿ.ಕೆ.ಮೋಹನ್ ಬಾಬು

    ಕೆ.ಚನ್ನಸಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಮಾಡಿದ ಡಿ.ಕೆ.ಮೋಹನ್ ಬಾಬು

    ಕೆ.ಆರ್ ಪುರ, ಜೂ.28 – ಜಿಬಿಎ ಚುನಾವಣೆಗೆ ಸಂಘಟನೆ ಮಾಡುವ ಉದ್ದೇಶದಿಂದ ಕಚೇರಿಗಳನ್ನು ತೆರೆಯಲಾಗಿದೆ ಎಂದು ಜಿಬಿಎ ಬೆಂಗಳೂರು ಪೂರ್ವ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್ ಬಾಬು ತಿಳಿಸಿದರು.

    ಕೆ.ಚನ್ನಸಂದ್ರದಲ್ಲಿ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ವಾರ್ಡ್ ಗಳಲ್ಲಿ ಕಾಂಗ್ರೆಸ್ ಕಚೇರಿಗಳನ್ನ ತೆರೆಯುವುದರಿಂದ ಸಾರ್ವಜನಿಕರಿಗೆ ತಮ್ಮ ಸಮಸ್ಯೆಗಳನ್ನ ಕುಂದು ಕೊರತೆಗಳನ್ನ ನಮ್ಮ ಮುಖಂಡರ ಬಳಿ ಹೇಳಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

    ಈ ಕಚೇರಿಗೆ ಬಂದು ಅಹವಾಲು ಹೇಳಬಹುದು, ಗ್ಯಾರೆಂಟಿ ಯೋಜನೆಗಳ‌ ಬಗ್ಗೆ, ಎಸ್‌ಐಆರ್ ಬಗ್ಗೆ ಜನರಿಗೆ ತಿಳುವಳಿಕೆ ತಿಳಿಸಲು ಸಹ ಇದು ಉಪಯೋಗವಾಗಲಿದೆ. ಜಿಬಿಎ ಚುನಾವಣೆಯಲ್ಲಿ ಪ್ರತಿಯೊಂದು ವಾರ್ಡ್ ಸಹ ಗೆಲ್ಲಬೇಕು. ಇದಕ್ಕೆ ಕಾರ್ಯಕರ್ತರೆಲ್ಲಾ ಸಜ್ಜಾಗಬೇಕು ಕೆರೆ ನೀಡಿದರು.

    ವಾರ್ಡ್ ಅಧ್ಯಕ್ಷ ಗಂಗಾಧರ್ ಮಾತನಾಡಿ, ಕಳೆದ 13 ವರ್ಷಗಳಿಂದ ರಸ್ತೆ ಸಮಸ್ಯೆಯನ್ನು ಈ ಭಾಗದಲ್ಲಿ ಎದುರಿಸುತ್ತಿದ್ದೇವೆ. ಧೂಳು ಹಿಡಿದ ದೀಪಗಳು ಇಲ್ಲಿ ಕಾಣಿಸುತ್ತದೆ. ಇನ್ನು ಹಲವು ಸಮಸ್ಯೆಗಳಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.

    ಜಿಬಿಎ ಪ್ರಬಲ ಆಕಾಂಕ್ಷಿ ರವಿಯವರು ತಮ್ಮ ಸ್ವಂತ ಇಚ್ಛೆಯಿಂದ
    ಆಟೋ ಗ್ಯಾಸ್ ಸಮಸ್ಯೆ ಎದುರಿಸುತ್ತಿರುವ ಆಟೋ ಚಾಲಕರಿಗೆ
    ಸಮವಸ್ತ್ರ ಮತ್ತು ಸಹಾಯ ಧನ ನೀಡಿ ಗೌರವಿಸಿದರು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸಿ.ವೆಂಕಟೇಶ್, ಭೂ ನ್ಯಾಯ ಮಂಡಳಿ ಸದಸ್ಯ ಸುನೀಲ್, ಕೆ.ಚನ್ನಸಂದ್ರ ವಾರ್ಡ್ ಆಕಾಂಕ್ಷಿ ರವಿ, ವಾರ್ಡ್ ಅಧ್ಯಕ್ಷರಾದ ಗಂಗಾಧರ್ ಸುಧನ್ವ, ಪ್ರಸನ್ನ, ಮುಖಂಡರಾದ ಅಗರ ಪ್ರಕಾಶ್, ಕೌದೇನಹಳ್ಳಿಬೀರಪ್ಪ, ಮುನಿರಾಜು, ಪವನ್ ಮತ್ತಿತರರಿದ್ದರು.

  • ಮೆಡಿಕವರ್ ಆಸ್ಪತ್ರೆಯಲ್ಲಿ  40 ಸೆಂ.ಮೀ. ಬೃಹತ್ ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆ.

    ಮೆಡಿಕವರ್ ಆಸ್ಪತ್ರೆಯಲ್ಲಿ 40 ಸೆಂ.ಮೀ. ಬೃಹತ್ ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆ.

    ಬೆಂಗಳೂರು: ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿದ್ದಾರೆ. 47 ವರ್ಷದ ರೋಗಿಯ ಎರಡೂ ಅಸಾಮಾನ್ಯವಾಗಿ ದೊಡ್ಡದಾಗಿದ್ದ ಮೂತ್ರಪಿಂಡಗಳನ್ನು (Kidneys) ಸುರಕ್ಷಿತವಾಗಿ ತೆರವುಗೊಳಿಸಿದೆ.
    ರೋಗಿಯು ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ (ADPKD) ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಕಳೆದ 12 ವರ್ಷಗಳಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷಗಳಿಂದ ಅಂತಿಮ ಹಂತದ ಮೂತ್ರಪಿಂಡ ವೈಫಲ್ಯ (End Stage Renal Disease) ಕಾರಣ ನಿಯಮಿತ ಹೀಮೋಡಯಾಲಿಸಿಸ್ ಪಡೆಯುತ್ತಿದ್ದರು. ಕುಟುಂಬದಲ್ಲಿಯೂ ಈ ಕಾಯಿಲೆಯ ಹಿನ್ನೆಲೆ ಇದ್ದು, ರೋಗಿಯ ಸಹೋದರ ಇದೇ ಕಾಯಿಲೆಯಿಂದ ಮೃತಪಟ್ಟಿದ್ದರು.

    ಕಳೆದ ಕೆಲವು ತಿಂಗಳುಗಳಿಂದ ರೋಗಿಗೆ ಮರುಕಳಿಸುವ ಕಿಡ್ನಿ ಸಿಸ್ಟ್ ಸೋಂಕು, ಸಿಸ್ಟ್‌ಗಳಲ್ಲಿ ರಕ್ತಸ್ರಾವ ಹಾಗೂ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹಲವು ಔಷಧಿಗಳ ಚಿಕಿತ್ಸೆಯ ಬಳಿಕವೂ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು.

    ಮೆಡಿಕವರ್ ಆಸ್ಪತ್ರೆಯ ಯೂರಾಲಜಿ ವಿಭಾಗದ ಡಾ. ದಿಲೀಪ್ ಮತ್ತು ಅವರ ತಂಡ ಅತ್ಯಂತ ಸಂಕೀರ್ಣವಾದ ದ್ವಿಪಕ್ಷೀಯ ನೆಫ್ರೆಕ್ಟಮಿ (Bilateral Nephrectomy) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

    ಶಸ್ತ್ರಚಿಕಿತ್ಸೆಯ ವೇಳೆ ಮೂತ್ರಪಿಂಡಗಳನ್ನು ತೆರವುಗೊಳಿಸಿದ ನಂತರ ರೋಗಿಯಲ್ಲಿ ತೀವ್ರ ರಕ್ತದೊತ್ತಡ ಕುಸಿತ (Severe Hypotension) ಉಂಟಾದರೂ, ವೈದ್ಯರ ತಂಡ ಮುನ್ನೆಚ್ಚರಿಕೆಯ ಸಿದ್ಧತೆಯೊಂದಿಗೆ ಅದನ್ನು ಸಮರ್ಥವಾಗಿ ನಿರ್ವಹಿಸಿದೆ. ರೋಗಿಗೆ ದೊಡ್ಡ ಪ್ರಮಾಣದ ರಕ್ತ ವರ್ಗಾವಣೆ (Multiple Blood Transfusions) ಹಾಗೂ ಮೂರು ವಿಧದ ವಾಸೋಪ್ರೆಸರ್ ಔಷಧಿಗಳ ಸಹಾಯದಿಂದ ಸ್ಥಿರ ಸ್ಥಿತಿಗೆ ತರಲಾಯಿತು.

    ಶಸ್ತ್ರಚಿಕಿತ್ಸೆಯಲ್ಲಿ ತೆರವುಗೊಳಿಸಿದ ಪ್ರತಿಯೊಂದು ಮೂತ್ರಪಿಂಡವು ಸುಮಾರು 40 ಸೆಂ.ಮೀ. ಉದ್ದ ಹಾಗೂ 4.5 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿದ್ದು, ಸಾಮಾನ್ಯ ಮೂತ್ರಪಿಂಡದ ಗಾತ್ರ (9–12 ಸೆಂ.ಮೀ.) ಮತ್ತು ತೂಕ (125–175 ಗ್ರಾಂ)ಕ್ಕೆ ಹೋಲಿಸಿದರೆ ಹಲವು ಪಟ್ಟು ದೊಡ್ಡದಾಗಿತ್ತು.

    ಮೂತ್ರಪಿಂಡಗಳ ಒಳಭಾಗವು ಅನೇಕ ಸಿಸ್ಟ್‌ಗಳಿಂದ ಸಂಪೂರ್ಣ ಆವರಿಸಿಕೊಂಡಿದ್ದು, ಅವುಗಳಲ್ಲಿ ರಕ್ತಸ್ರಾವವೂ ಕಂಡುಬಂದಿತ್ತು.

    ಈ ಕುರಿತು ಮಾತನಾಡಿದ ಡಾ. ಮಾಧವ ದೇಸಾಯಿ ಅವರು, “ADPKD ರೋಗಿಗಳಲ್ಲಿ ಸೋಂಕು, ರಕ್ತಸ್ರಾವ ಅಥವಾ ತೀವ್ರ ನೋವಿನಂತಹ ತೊಂದರೆಗಳು ಕಾಣಿಸಿಕೊಂಡಾಗ ಸಮಯೋಚಿತ ಚಿಕಿತ್ಸೆ ಹಾಗೂ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆ ಜೀವ ಉಳಿಸಲು ಅತ್ಯಂತ ಮುಖ್ಯವಾಗುತ್ತದೆ. ಇಂತಹ ಅಪರೂಪದ ಹಾಗೂ ಸಂಕೀರ್ಣ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಬಹುಶಾಖಾ ತಜ್ಞರ ಸಮನ್ವಯ ಅತ್ಯಗತ್ಯ,” ಎಂದು ಹೇಳಿದರು.
    ಡಾ.ದಿಲೀಪ್ ಮಾತನಾಡಿ ನನ್ನ ವೃತ್ತಿಜೀವನದಲ್ಲೆ ಈ ತರ ಪ್ರಕರಣ ಮೊದಲನೆಯದು. ಜೊತೆಗೆ ಒಬ್ಬ ವೈದ್ಯರಿಗೆ ವೃತ್ತಿ ಜೀವನಲ್ಲಿ ಒಂದು ಬಾರಿ ಮಾತ್ರ ಈ ರೀತಿಯ ಪ್ರಕರಣ ಸಿಗೋದು, ಅದನ್ನ ಮೆಡಿಕವರ್ ಆಸ್ಪತ್ರೆಯ ತಂಡ ಯಶಸ್ವಿಯಾಗಿ ನಡೆಸಿದೆ. ಈ ಯಶಸ್ವಿ ಶಸ್ತ್ರಚಿಕಿತ್ಸೆಯು ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಹಾಗೂ ತಜ್ಞ ವೈದ್ಯರ ಅನುಭವಕ್ಕೆ ಮತ್ತೊಂದು ಮೈಲಿಗಲ್ಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

  • ಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ : ಶಾಸಕ ಬೈರತಿ ಬಸವರಾಜ

    ಕೆಂಪೇಗೌಡರ ದೂರದೃಷ್ಟಿ ಆಡಳಿತಗಾರರಿಗೆ ಆದರ್ಶ : ಶಾಸಕ ಬೈರತಿ ಬಸವರಾಜ

    ಕೆ.ಆರ್ ಪುರ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಟಿ ಹಾಗೂ ವ್ಯವಸ್ಥಿತ ಆಡಳಿತ ವೈಖರಿಯನ್ನು ಇಂದಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬಿ.ಎ.ಬಸವರಾಜ ತಿಳಿಸಿದರು.
    ಕ್ಷೇತ್ರದ ವಿಜಿನಾಪುರದಲ್ಲಿ ಶ್ರೀ ಭುವನೇಶ್ವರಿ ಒಕ್ಕಲಿಗರ ಸಂಘ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತೊತ್ಸವದಲ್ಲಿ ಅವರು ಮಾತನಾಡಿದರು.

    ಇಡೀ ಮನುಕುಲಕ್ಕೆ ದಾರಿದೀಪವಾದ ಮತ್ತು ಶಕ್ತಿ ತುಂಬಿದ ಕೆಂಪೇಗೌಡರನ್ನು ನಾವು ಒಂದು ಜಾತಿಗೆ ಸೀಮಿತಗೊಳಿಸಬಾರದು,ನಗರದ ಪ್ರತಿಯೊಂದು ಜಾಗದಲ್ಲೂ ಕೆಂಪೇಗೌಡರ ಅಸ್ತಿತ್ವವಿದೆ, 7 ಸಾವಿರಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ ಕೀರ್ತಿ , ಮಣ್ಣಿನ ಅರಮನೆಗಳನ್ನು ನಿರ್ಮಿಸಿ ಇಸ್ಲಾಮಿಕ್ ವಾಸ್ತುಶಿಲ್ಪವನ್ನು ನಾಚಿಸುವಂತೆ ನಿರ್ಮಾಣ ಮಾಡಿದ್ದು ಕೂಡಾ ಕೆಂಪೇಗೌಡರ ಚಾಣಾಕ್ಷತನಕ್ಕೆ ಸಾಕ್ಷಿ ಎಂದರು.
    ಕೆಂಪೇಗೌಡರು ಅಂದು ಬೆಂಗಳೂರನ್ನು ಕಟ್ಟುವಾಗ ರೂಪಿಸಿದ ನೀಲನಕ್ಷೆ ಹಾಗೂ ಯೋಜನಾಬದ್ಧ ವಿನ್ಯಾಸ ಇಂದಿಗೂ ನಮಗೆಲ್ಲ ದಾರಿದೀಪವಾಗಿದೆ. ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಸಿಲಿಕಾನ್ ಸಿಟಿ ಎಂದು ಹೆಮ್ಮೆಯಿಂದ ಕರೆಯಲ್ಪಡುವ ಬೆಂಗಳೂರಿಗೆ ಅವರೇ ಭದ್ರವಾದ ಅಡಿಪಾಯ ಹಾಕಿದವರು.
    ಪ್ರತಿಯೊಂದು ವ್ಯಾಪಾರ-ವಹಿವಾಟಿಗೂ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

    ಕೇವಲ ವ್ಯಾಪಾರವಷ್ಟೇ ಅಲ್ಲದೆ ಪರಿಸರ ಸಂರಕ್ಷಣೆಗೂ ಒತ್ತು ನೀಡಿ, ನಗರದ ನೀರಿನ ದಾಹ ನೀಗಿಸಲು ಬೃಹತ್ ಕೆರೆಗಳನ್ನೂ ನಿರ್ಮಿಸಿದ್ದರು ಎಂದು ತಿಳಿಸಿದರು.

    ಪ್ರತಿ ಮನೆಯಲ್ಲಿ ಮಕ್ಕಳಿಗೆ ನಾಡಿನ ಮಹನೀಯರ ಸಾಧನೆ, ಜೀವನವನ್ನು ತಿಳಿಸಿಕೊಡಬೇಕು, ಮುಂದಿನ‌ ಪೀಳಿಗೆಗೂ ಮಹಾತ್ಮರನ್ನು‌ ಕೊಂಡೊಯ್ಯಬೇಕು, ಸೂರ್ಯ ಚಂದ್ರ ಇರುವವರಿಗೂ ಅವರನ್ನು ಜೀವಂತವಾಗಿರಿಸಬೇಕು ಎಂದು ತಿಳಿಸಿದರು

    ದೂರವಾಣಿನಗರ ಬಿಜೆಪಿ ಮುಖಂಡ ಪ್ರದೀಪ್ ಗೌಡ ಮಾತನಾಡಿ, ದೇಶದ ಇತರ ಭಾಗಗಳಿಗೆ ಹೋಲಿಸಿದರೆ, ನಮ್ಮ ಬೆಂಗಳೂರಿನಲ್ಲಿ ಯಾವಾಗಲೂ ಅನುಕೂಲಕರ ವಾತಾವರಣ ಇರುತ್ತದೆ. ಇದಕ್ಕೆ ಮೂಲ ಕಾರಣ ದೂರದೃಷ್ಟಿ ಇಟ್ಟುಕೊಂಡು ನಾಡಪ್ರಭು ಶ್ರೀ ಕೆಂಪೇಗೌಡರು ಬೆಂಗಳೂರು ನಗರವನ್ನು ಕಟ್ಟಿದ್ದು. ಅಂದು ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗೋಪುರವನ್ನು ಕಟ್ಟಿ ನಗರವನ್ನು ಕಟ್ಟಿದ್ದರು. ಎಲ್ಲಾ ಸಮಾಜದವರಿಗೂ ಹಾಗೂ ವ್ಯಾಪಾರದ ದೃಷ್ಟಿಯಿಂದ ಎಲ್ಲಾ ಪೇಟೆಗಳನ್ನು ನಿರ್ಮಿಸಿದ್ದರು, ಉತ್ತಮ ಪರಿಸರ ಹಾಗೂ ಜನ ಜೀವನಕ್ಕಾಗಿ ಅಂದಿನ ಕಾಲದಲ್ಲಿಯೆ ಕೆರೆಗಳನ್ನು ಅಭಿವೃದ್ಧಿಪಡೆಸಿದವರು. ಆದರೆ ಇಂದು ಆ ಗಡಿಯನ್ನು ಮೀರಿ ನಗರ ಬೆಳೆದಿದೆ ಎಂದರು.

    ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಮುನೇಗೌಡ, ವಾರ್ಡ್ ಅಧ್ಯಕ್ಷ ರಮೇಶ್ ಗೌಡ, ಪಾಲಿಕೆ ಮಾಜಿ ಸದಸ್ಯ ಶ್ರೀಕಾಂತ್ ಗೌಡ, ಮುಖಂಡರಾದ ಗೋಪಾಲಣ್ಣ, ಎಂಎಲ್ ಡಿಸಿ ಮುನಿರಾಜು, ಎಸ್ ಎಲ್ ವಿ.ಶೇಖರ್, ಮಲ್ಲಣ್ಣ, ಗಂಗಾಧರ್, ಗಂಗಣ್ಣ, ಶಿವಣ್ಣ, ಆನಂದ್, ಅಯ್ಯಪ್ಪ, ಸಂದೀಪ್, ಬಾಬು ಸೆಲ್ವಂ, , ರಮೇಶ್, ಕಪಿನಿಗೌಡ, ಪ್ರೇಮಗೌಡ ಪೂರಕರಿದ್ದರು.

  • ಹೊಸ ಬೈಕ್ ಖರೀದಿಸಿದ ಕೆಲವೇ ಗಂಟೆಗಳಲ್ಲೇ ಯುವಕನ ದಾರುಣ ಸಾವು: ಟಿಪ್ಪರ್ ಡಿಕ್ಕಿಗೆ 19 ವರ್ಷದ ಯುವಕ ಬಲಿ

    ಹೊಸ ಬೈಕ್ ಖರೀದಿಸಿದ ಕೆಲವೇ ಗಂಟೆಗಳಲ್ಲೇ ಯುವಕನ ದಾರುಣ ಸಾವು: ಟಿಪ್ಪರ್ ಡಿಕ್ಕಿಗೆ 19 ವರ್ಷದ ಯುವಕ ಬಲಿ

    ತುಮಕೂರು: ಹೊಸ ಬೈಕ್ ಖರೀದಿಸಿದ ಸಂತಸ ಕೇವಲ ಒಂದು ದಿನಕ್ಕೂ ಉಳಿಯಲಿಲ್ಲ. ಬೈಕ್ ಖರೀದಿಸಿದ ಮರುದಿನವೇ ಸಂಭವಿಸಿದ ಭೀಕರ ಅಪಘಾತದಲ್ಲಿ 19 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಗಂಗಸಾಗರ ಕ್ರಾಸ್ ಬಳಿ ನಡೆದಿದೆ.

    ಮೃತನನ್ನು ಪಾವಗಡ ತಾಲೂಕಿನ ದೊಡ್ಡಹಳ್ಳಿ ನಿವಾಸಿ ನಂದೀಶ್ ಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆಯಷ್ಟೇ ಹೊಸ ಬೈಕ್ ಖರೀದಿಸಿದ್ದ ನಂದೀಶ್, ಸ್ನೇಹಿತನೊಂದಿಗೆ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ವೈಎನ್ ಹೊಸಕೋಟೆ ಕಡೆಯಿಂದ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.

    ಡಿಕ್ಕಿಯ ರಭಸಕ್ಕೆ ನಂದೀಶ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ಸಂಬಂಧ ಪಾವಗಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
    ಇದೇ ವೇಳೆ ಧಾರವಾಡ ಜಿಲ್ಲೆಯಲ್ಲೂ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ನಡೆದ ಈ ಅಪಘಾತದಲ್ಲಿ ಹಳೇ ತೇಗೂರು ನಿವಾಸಿ ಷಣ್ಮುಖ ಜೋಗಿ (28) ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ (30) ಮೃತಪಟ್ಟಿದ್ದಾರೆ.

    ಟೈರ್ ಬ್ಲಾಸ್ಟ್ ಆಗಿದ್ದ ಕಾರಣ ಲಾರಿ ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೈರ್ ಬದಲಿಸುತ್ತಿದ್ದ ವೇಳೆ, ಅದೇ ಮಾರ್ಗದಲ್ಲಿ ಬಂದ ಕ್ಯಾಂಟರ್ ನಿಯಂತ್ರಣ ತಪ್ಪಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಮಾಹಿತಿ ತಿಳಿದ ಗರಗ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

  • ಬನಶಂಕರಿಯಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಿನಾದ: ‘ಪರಮ್ ವಿಹಾರ’ ವೇದಿಕೆಯಲ್ಲಿ ಸುಗಮ ಸಂಗೀತ-ನೃತ್ಯ ಸಂಗಮ

    ಬನಶಂಕರಿಯಲ್ಲಿ ಮತ್ತೊಮ್ಮೆ ಸಾಂಸ್ಕೃತಿಕ ನಿನಾದ: ‘ಪರಮ್ ವಿಹಾರ’ ವೇದಿಕೆಯಲ್ಲಿ ಸುಗಮ ಸಂಗೀತ-ನೃತ್ಯ ಸಂಗಮ

    • ಸುಚಿತ್ರಾ ಸಿನೆಮಾ ಅಕಾಡೆಮಿಯಲ್ಲಿ ಸಾಂಸ್ಕೃತಿಕ ಸೌರಭ

    • ನಿಕಿತಾ ಭಾರದ್ವಾಜ್‌ರಿಂದ ಸುಶ್ರಾವ್ಯ ಸುಗಮ ಸಂಗೀತ

    • ಪ್ರಮೋದ್, ರಮೇಶ್ ಅವರ ಅದ್ಭುತ ವಾದ್ಯಸಂಗೀತ

    • ಸಂಗೀತ ದೀಪಕ್ ಶಿಷ್ಯರಿಂದ ಭರತನಾಟ್ಯ ವೈಭವ

    • ಮೋನಿಷಾ ಕಾಂತರಾಜು ಶಿಷ್ಯರಿಂದ ನೃತ್ಯ ನಮನ
    ಬೆಂಗಳೂರು: ರಾಜಧಾನಿಯ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಬನಶಂಕರಿಯ ‘ಸುಚಿತ್ರಾ ಸಿನೆಮಾ ಮತ್ತು ಕಲ್ಚರಲ್ ಅಕಾಡೆಮಿ’ಯಲ್ಲಿ ಮತ್ತೊಂದು ಆಕರ್ಷಕ ಕಲಾ ಸಂಜೆ ಅನಾವರಣಗೊಳ್ಳಲು ಸಿದ್ಧವಾಗಿದೆ. ‘ಪರಮ್ ಫೌಂಡೇಶನ್’ ವತಿಯಿಂದ ಆಯೋಜಿಸಲಾಗುತ್ತಿರುವ ‘ಪರಮ್ ವಿಹಾರ’ ಸಾಂಸ್ಕೃತಿಕ ಸರಣಿ ಕಾರ್ಯಕ್ರಮವು ಇದೇ ಜೂನ್ 28ರ ಭಾನುವಾರ ಸಂಜೆ 6 ಗಂಟೆಯಿಂದ ಜರುಗಲಿದೆ. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಈ ಅಪರೂಪದ ಗಾನ-ನೃತ್ಯ ಜುಗಲ್ಬಂದಿಗೆ ಬೆಂಗಳೂರಿನ ಕಲಾಪ್ರೇಮಿಗಳು ಸಾಕ್ಷಿಯಾಗಲಿದ್ದಾರೆ.

    ಸುಶ್ರಾವ್ಯ ಕಂಠದಲ್ಲಿ ಮೂಡಲಿರುವ ಸುಗಮ ಸಂಗೀತ ಲಹರಿ

    ಕಾರ್ಯಕ್ರಮದ ಆರಂಭದಲ್ಲಿ ಗಾಯಕಿ ನಿಕಿತಾ ಭಾರದ್ವಾಜ್ ಅವರ ಸುಗಮ ಸಂಗೀತ ಗಾಯನ ಪ್ರಸ್ತುತಿ ನಡೆಯಲಿದೆ. ಹಿತವಾದ ಸಾಹಿತ್ಯ ಮತ್ತು ಮಧುರ ನಾದದ ಮೂಲಕ ಶ್ರೋತೃಗಳನ್ನು ರಂಜಿಸಲಿರುವ ಈ ಕಛೇರಿಗೆ ತಬಲಾದಲ್ಲಿ ಪ್ರಮೋದ್ ಗಬ್ಬೂರ್ ಹಾಗೂ ಕೀಬೋರ್ಡ್‌ನಲ್ಲಿ ರಮೇಶ್ ಟಿ.ಎಸ್. ಸಾಥ್ ನೀಡಲಿದ್ದಾರೆ.




    ನಯನಮನೋಹರ ಭರತನಾಟ್ಯ ವೈಭವ

    ಗಾಯನದ ನಾದಲಹರಿಯ ನಂತರ ಶಾಸ್ತ್ರೀಯ ನೃತ್ಯದ ಅದ್ಭುತ ಪ್ರದರ್ಶನಗಳು ಸಭಿಕರನ್ನು ಕಣ್ಮನ ಸೆಳೆಯಲಿವೆ. ಮೊದಲಿಗೆ ‘ಸಂಗೀತ ನಾಟ್ಯ ಕಲಾಲಯ’ ಸಂಸ್ಥೆಯ ನಿರ್ದೇಶಕರಾದ ಗುರು ಶ್ರೀಮತಿ ಸಂಗೀತ ದೀಪಕ್ ಅವರ ಶಿಷ್ಯವೃಂದದಿಂದ ಆಕರ್ಷಕ ಭರತನಾಟ್ಯ ಪ್ರದರ್ಶನ ಮೂಡಿಬರಲಿದೆ. ಇದರ ಬೆನ್ನಲ್ಲೇ ‘ಈಷಾ ನಾಟ್ಯಶಾಲಾ’ ಸಂಸ್ಥೆಯ ನಿರ್ದೇಶಕರಾದ ಗುರು ಶ್ರೀಮತಿ ಮೋನಿಷಾ ಕಾಂತರಾಜು ಅವರ ಶಿಷ್ಯರಿಂದ ಭರತನಾಟ್ಯ ಶೈಲಿಯಲ್ಲಿ ಸಮೂಹ ನೃತ್ಯ ಪ್ರದರ್ಶನಗಳು ರಂಗದ ಮೇಲೆ ಅನಾವರಣಗೊಳ್ಳಲಿವೆ.

    ಹೊಸ ತಲೆಮಾರಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಪರಮ್ ಫೌಂಡೇಶನ್‌ನ ಈ ಅಪರೂಪದ ಸಾಂಸ್ಕೃತಿಕ ಸಂಜೆಗೆ ಬೆಂಗಳೂರಿನ ಸಂಗೀತ ಮತ್ತು ನೃತ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಹುರಿದುಂಬಿಸಬೇಕಾಗಿ ಸಂಘಟಕರು ಕೋರಿದ್ದಾರೆ

  • ಬೆಂಗಳೂರಲ್ಲಿ ತ್ರಿವಳಿ ಕೊಲೆ ಕೇಸ್ ; ಪರಾರಿಯಾಗಿದ್ದ ಶ್ವೇತಾ ಪ್ರಿಯಕರ ಆರೋಪಿ ಕೆನತ್ ಅರೆಸ್ಟ್.!

    ಬೆಂಗಳೂರಲ್ಲಿ ತ್ರಿವಳಿ ಕೊಲೆ ಕೇಸ್ ; ಪರಾರಿಯಾಗಿದ್ದ ಶ್ವೇತಾ ಪ್ರಿಯಕರ ಆರೋಪಿ ಕೆನತ್ ಅರೆಸ್ಟ್.!

    ಬೆಂಗಳೂರು: ರಾಜಧಾನಿಯ ಕೆಆರ್ ಪುರಂ ವ್ಯಾಪ್ತಿಯ ಸೀಗೇಹಳ್ಳಿಯಲ್ಲಿ ನಡೆದಿದ್ದ ಭೀಕರ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಶ್ವೇತಾಳ ಪ್ರಿಯಕರ ಕೆನತ್ ಅನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದಾರೆ. ಈ ಹಿಂದೆ ಬಂಧಿತರಾಗಿದ್ದ ಶ್ವೇತಾಳನ್ನು 47ನೇ ಎಸಿಜೆಎಂ ನ್ಯಾಯಾಲಯವು 7 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದು, ಇದೀಗ ಕೆನತ್ ಬಂಧನದೊಂದಿಗೆ ತನಿಖೆಗೆ ಮತ್ತಷ್ಟು ವೇಗ ಸಿಕ್ಕಿದೆ.

    ಒಂದೇ ಕುಟುಂಬದ ಮೂವರ ಹತ್ಯೆ
    ಪ್ರಕರಣದಲ್ಲಿ ಶ್ವೇತಾ ತನ್ನ ಪ್ರಿಯಕರ ಕೆನತ್ ಜೊತೆ ಸೇರಿ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನು ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ. ಈ ಅಮಾನವೀಯ ಘಟನೆ ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸಿದ್ದು, ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಹಣಕಾಸಿನ ಒತ್ತಡವೇ ಕೊಲೆಗೆ ಕಾರಣ?
    ಪ್ರಾಥಮಿಕ ತನಿಖೆಯಲ್ಲಿ ಶ್ವೇತಾಳ ಮೇಲೆ ಸುಮಾರು ₹30 ಲಕ್ಷ ಸಾಲದ ಒತ್ತಡ ಇದ್ದ ಮಾಹಿತಿ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಕುಟುಂಬದ ಆಸ್ತಿಯಲ್ಲಿ ತನ್ನ ಪಾಲು ನೀಡುವಂತೆ ಆಕೆ ಪೋಷಕರ ಮೇಲೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ಆದರೆ ಕುಟುಂಬದವರು ಇದಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಿದ್ದು, ಘಟನೆ ನಡೆದ ದಿನವೂ ಇದೇ ವಿಚಾರವಾಗಿ ತೀವ್ರ ವಾಗ್ವಾದ ನಡೆದಿರುವ ಶಂಕೆ ವ್ಯಕ್ತವಾಗಿದೆ.ಪೊಲೀಸರ ಪ್ರಕಾರ, ಪ್ರೇಮ ಸಂಬಂಧ, ಹಣಕಾಸಿನ ಸಂಕಷ್ಟ ಹಾಗೂ ಆಸ್ತಿ ವಿವಾದ ಈ ಭೀಕರ ಕೃತ್ಯಕ್ಕೆ ಕಾರಣವಾಗಿರಬಹುದೆಂಬ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ.

    ಮೃತರ ವಿವರ
    • ಸೋಮಸುಂದರ (55) – ತಂದೆ
    • ಮುತ್ತುಲಕ್ಷ್ಮಿ (48) – ತಾಯಿ
    • ಸುಪ್ರಿಯಾ (20) – ಸಹೋದರಿ
    ಮೂರು ಮಂದಿಯ ಮೃತದೇಹಗಳು ಮನೆಯೊಳಗೆ ಪತ್ತೆಯಾಗಿದ್ದು, ಸ್ಥಳದಲ್ಲಿ ರಕ್ತದ ಕಲೆಗಳು ಹಾಗೂ ಹೋರಾಟ ನಡೆದಿರುವ ಗುರುತುಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ತಾಂತ್ರಿಕ ಸಾಕ್ಷ್ಯಗಳ ಪರಿಶೀಲನೆ
    ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆಗಳ ವಿವರಗಳು, ಡಿಜಿಟಲ್ ಡೇಟಾ, ಹಣಕಾಸು ವ್ಯವಹಾರಗಳು ಹಾಗೂ ಆಸ್ತಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಜೊತೆಗೆ ಶ್ವೇತಾ ಮತ್ತು ಕೆನತ್ ನಡುವಿನ ಸಂಪರ್ಕ, ಅವರ ಚಲನವಲನ ಹಾಗೂ ಘಟನೆಯ ಹಿಂದಿನ ಸಂಚಿನ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ.
    ಪ್ರಕರಣದ ಎಲ್ಲ ಆಯಾಮಗಳನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಮುಂದಿನ ತನಿಖೆಯಿಂದ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.

  • ಪ್ರಿಯಕರನ ಜೊತೆ ಸೇರಿ ಅಪ್ಪ,ಅಮ್ಮ, ತಂಗಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವತಿ!

    ಪ್ರಿಯಕರನ ಜೊತೆ ಸೇರಿ ಅಪ್ಪ,ಅಮ್ಮ, ತಂಗಿಯನ್ನು ಬರ್ಬರವಾಗಿ ಕೊಲೆ ಮಾಡಿದ ಯುವತಿ!

    ಕೆ.ಆರ್.ಪುರ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪ್ರಿಯಕರನ ಜೊತೆ ಸೇರಿ ಮಗಳೇ ಅಪ್ಪ, ಅಮ್ಮ ಹಾಗೂ ತಂಗಿಯನ್ನು ಭೀಕರವಾಗಿ ಕೊಲೆ ಮಾಡಿ ಪ್ರಿಯಕರನೊಂದಿಗೆ ಪರಾರಿಯಾಗಿರುವ ಹೃದಯವಿದ್ರಾವಕ ಘಟನೆ ಕೆಆರ್‌ಪುರಂ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಿನ್ನೆರಾತ್ರಿ ನಡೆದಿದೆ.
    ಸೋಮಸುಂದರ್‌(52),ಅವರ ಪತ್ನಿ ಮುತ್ತುಲಕ್ಷ್ಮೀ(48) ಹಾಗೂ ಪುತ್ರಿ ಸುಪ್ರಿಯಾ(19) ಕೊಲೆಯಾದವರು ಎಂದು ಗುರುತಿಸಲಾಗಿದೆ.

    ಈ ಮೂವರನ್ನು ಹಿರಿಯ ಮಗಳು ಶ್ವೇತಾ ಮತ್ತು ಆಕೆಯ ಪ್ರಿಯಕರ ಕೇತನ್‌ ಸೇರಿಕೊಂಡು ಹತ್ಯೆ ಮಾಡಿದ್ದಾರೆಂದು ಪೊಲೀಸರು ಶಂಕಿಸಿದ್ದಾರೆ.

    ಹಿರಿಯ ಮಗಳು ಶ್ವೇತಾ ತನ್ನ ಪ್ರಿಯಕರ ಕೇತನ್‌ ಜೊತೆ ಕೆ.ಆರ್.ಪುರದ ಆರ್ ಟಿಓ ಕಚೇರಿಯ ಪಕ್ಕದ ರಸ್ತೆ ಶ್ರೀ ಶಿರಡಿ ಸಾಯಿ ಬಡಾವಣೆ ಎರಡನೇ ಮುಖ್ಯ ರಸ್ತೆಯ ಸಾಯಿ ಗ್ರೀನ್‌ ಅಪಾರ್ಟ್‌ಮಂಟ್‌ನಲ್ಲಿ ಲಿವ್‌ಇನ್‌ ರಿಲೇಶನ್‌ನಲ್ಲಿದ್ದರು. ಇವರ ಸಂಬಂಧಕ್ಕೆ ಶ್ವೇತಾ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹಲವಾರು ಬಾರಿ ಮಗಳಿಗೆ ಬುದ್ದಿ ಹೇಳಿದರೂ ಕೇಳಿರಲಿಲ್ಲ. ಪೋಷಕರು ಹಾಗೂ ಕಿರಿಯ ಮಗಳು ಸುಪ್ರಿಯಾ ಕಳೆದ ರಾತ್ರಿ ಸುಮಾರು 9.30 ರಿಂದ 10 ಗಂಟೆ ಸುಮಾರಿನಲ್ಲಿ ಹಿರಿಯ ಮಗಳು ವಾಸವಿದ್ದ ಸಾಯಿ ಗ್ರೀನ್‌ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಾರೆ.

    ಆ ಸಂದರ್ಭದಲ್ಲಿ ಮನೆಗೆ ಬಂದಿದ್ದ ಪೋಷಕರ ಜೊತೆ ಮಗಳು ಹಾಗೂ ಆಕೆಯ ಪ್ರಿಯಕರ ಕೇತನ್‌ ಸೇರಿಕೊಂಡು ಜಗಳವಾಡಿದ್ದಾರೆ.ಇವರ ಮನೆಯಲ್ಲಿ ಜೋರು ಗಲಾಟೆ ನಡೆಯುತ್ತಿದ್ದ ಹಿನ್ನಲೆಯಲ್ಲಿ ಅಕ್ಕಪಕ್ಕದವರು ಪ್ರತಿದಿನ ಇದು ನಡೆಯುತ್ತಿರುತ್ತದೆ ಎಂದು ಸುಮನಾಗಿದ್ದಾರೆ.

    ಆದರೆ ಕೆಲ ಸಮಯದ ಬಳಿಕ ಗಾಬರಿಯಿಂದ ಅಪಾರ್ಟ್‌ಮೆಂಟ್‌ನಿಂದ ಶ್ವೇತಾ ಮತ್ತು ಯುವಕ ಓಡಿ ಹೋಗುತ್ತಿರುವುದನ್ನು ನೋಡಿ ಸ್ಥಳೀಯರು ಏನಾಗಿದೆ ಎಂದು ತಿಳಿಯದೇ ಪೊಲೀಸರಿಗೆ ಕರೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಕೆಆರ್‌ಪುರಂ ಠಾಣೆ ಪೊಲೀಸರು ಮನೆಯೊಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಮೂವರು ಕೊಲೆಯಾಗಿ ಬಿದ್ದಿರುವುದನ್ನು ಕಂಡು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

    ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್‌‍ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಳೆದ ಹಲವು ದಿನಗಳಿಂದ ಕೇತನ್‌ನನ್ನು ಪ್ರೀತಿಸುತ್ತಿದ್ದ ಶ್ವೇತಾ ನಮಗೆ ಮದುವೆ ಮಾಡುವಂತೆ ಹಾಗೂ ಆಸ್ತಿಯಲ್ಲಿ ಭಾಗ ಕೊಡಬೇಕೆಂದು ಪೋಷಕರಿಗೆ ಪೀಡಿಸುತ್ತಿದ್ದರು. ಈ ವಿಚಾರವಾಗಿ ತಂದೆ ಸೋಮಸುಂದರ್‌ ನಿರಾಕರಿಸಿ ಮನೆಯಿಂದ ಅವರನ್ನು ಹೊರಗೆ ಹೋಗುವಂತೆ ಎಚ್ಚರಿಕೆ ನೀಡಿದ್ದರು ಎಂದು ತಿಳಿದುಬಂದಿದೆ.

    ಇದೇ ಕೋಪದಿಂದ ಅವರು ಸಂಚು ಮಾಡಿಕೊಂಡು ನಿನ್ನೆ ರಾತ್ರಿ ಇದೇ ವಿಚಾರವಾಗಿ ಪೋಷಕರೊಂದಿಗೆ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೇತನ್‌ ಚಾಕುವಿನಿಂದ ಮೊದಲು ಸೋಮಸುಂದರ್‌ ಅವರಿಗೆ ಹಲವು ಬಾರಿ ಇರಿದಿದ್ದಾನೆ. ಇದನ್ನು ಕಂಡ ಪತ್ನಿ ಮುತ್ತುಲಕ್ಷ್ಮೀ ತಡೆಯಲು ಮಧ್ಯೆ ಹೋದಾಗ ಅವರ ಮೇಲೆಯೂ ಕೂಡ ಚಾಕುವಿನಿಂದ ಮನಬಂದಂತೆ ಹಲ್ಲೆ ನಡೆಸಿದಾಗ ತೀವ್ರರಕ್ತಸ್ರಾವವಾಗಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

    ಏನಾಗುತ್ತಿದೆ ಎಂದು ನೋಡಲು ಕೋಣೆಯಿಂದ ಬಂದ ಮತ್ತೊಬ್ಬ ಪುತ್ರಿ ಸುಪ್ರಿಯಾ ಕಣ್ಣಮುಂದೆ ಅಪ್ಪ, ಅಮ ಕುಸಿದು ಬಿದ್ದಿದ್ದನ್ನು ನೋಡಿ ಕೂಗಿಕೊಂಡಿದ್ದಾಳೆ. ಈ ವೇಳೆ ಒಡಹುಟ್ಟಿದವಳೇ ಆಕೆಯ ಮೇಲೂ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗುವ ವೇಳೆ ಕೇತನ್‌ ಆಕೆಗೂ ಸಹ ಚಾಕುವಿನಿಂದ ಇರಿದಿದ್ದರಿಂದ ಆಕೆಯೂ ಸಾವನ್ನಪ್ಪಿದ್ದಾರೆ.

    ರಕ್ತದ ಮಡುವಿನಲ್ಲಿ ಬಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆಯಿಂದ ಅಪಾರ್ಟ್‌ಮೆಂಟ್‌ನ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ.ಪ್ರಿಯಕರನ ಜೊತೆ ಸೇರಿ ಹೆತ್ತ ತಂದೆ, ತಾಯಿ ಹಾಗೂ ಒಡಹುಟ್ಟಿದ ಸಹೋದರಿಯನ್ನೇ ದಾರುಣವಾಗಿ ಕೊಲೆ ಮಾಡಿ ಇಡೀ ಕುಟುಂಬವೇ ಸರ್ವನಾಶ ಮಾಡಿಬಿಟ್ಟಳಾ ಹಿರಿಯ ಮಗಳು ಎಂದು ಜನರು ಹಿಡಿ ಶಾಪ ಹಾಕಿದ್ದಾರೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ ಎಂದು ಕಂಬನಿ ಮಿಡಿದಿದ್ದಾರೆ.

    ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ಬೀರ್ ಬಹಾದೂರ್ ನೀಡಿದ ಮಾಹಿತಿಯಂತೆ, ಮೃತರು ಭಾನುವಾರ ಸಂಜೆ ಅಪಾರ್ಟ್‌ಮೆಂಟ್‌ಗೆ ಆಗಮಿಸಿದ್ದು, ನಂತರ ನಡೆದ ಘಟನೆ ಕುರಿತು ರಾತ್ರಿ ವೇಳೆ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ

    ಸದ್ಯಕ್ಕೆ ಕೆ.ಆರ್. ಪುರಂ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಂಕಿತ ಆರೋಪಿಗಳಾದ ಶ್ವೇತಾ ಮತ್ತು ಕೆನತ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಇಬ್ಬರ ಮೊಬೈಲ್ ಕರೆಗಳ ವಿವರ (CDR) ಹಾಗೂ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಲಾಗುತ್ತಿದ್ದಾರೆ.

  • ದೊಡ್ಡಬಳ್ಳಾಪದಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪದಲ್ಲಿ ಇಂದು ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ನಡೆಯುತ್ತಿರುವದರಿಂದ ಇಂದು ಬೆಳಿಗ್ಗೆ 10ರಿಂದ ಸಂಜೆ 6 ವರೆಗೆ ಉಪಕೇಂದ್ರ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮೇಲಿನ ಸ್ಥಗಿತ ಆಗುವ ಪ್ರದೇಶ: ದೊಡ್ಡಬಳ್ಳಾಪುರ ನಗರ ಪ್ರದೇಶದ ಎಲ್ಲಾ ವಾರ್ಡ್ಗಳು, ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ತಳಗವಾರ, ಮಾದಗೊಂಡನಹಳ್ಳಿ, ಹಸನ್ನಟ್ಟ, ಕೋಳೂರು, ಕಂಟನಕುಂಟೆ, ಆಳ್ಳಾಲಸಂದ್ರ, ಅಂತರಹಳ್ಳಿ ಗೊಲ್ಲಹಳ್ಳಿ, ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್.ನಾಗೇನಹಳ್ಳಿ. ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟ, ತಿಮ್ಮಸಂದ್ರ, ಪಿಂಡಕೂರು ತಿಮ್ಮನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹೀರೆಗುಡ್ಡದಹಳ್ಳಿ, ಕುರುವಿಗೆರೆ, ನಂದಿಮೋರಿ, ರಾಜಘಟ್ಟ ಕಂಚಿಗನಾಳ, ತಿಪ್ಪರು ಮತ್ತು ಸುತ್ತಮುತ್ತಲಿನ ಪ್ರದೇಶಗಳು.

  • ದೊಡ್ಡಬಳ್ಳಾಪುರ; ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ.

    ದೊಡ್ಡಬಳ್ಳಾಪುರ; ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಗಳ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ.

    ದೊಡ್ಡಬಳ್ಳಾಪುರ: ಡಿವೈಎಸ್‌ಪಿ ಉಪವಿಭಾಗ ವ್ಯಾಪ್ತಿಯಲ್ಲಿನ  45ಕ್ಕೂ ಹೆಚ್ಚು ರೌಡಿ ಶೀಟರ್‌ಗಳ ಮನೆಗಳ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿ ತಪಾಸಣೆ ನಡೆಸಿದರು.

    ಡಿವೈಎಸ್‌ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ಹೊಸಹಳ್ಳಿ, ದೊಡ್ಡಬೆಳವಂಗಲ, ವಿಶ್ವನಾಥಪುರ, ಚೆನ್ನರಾಯಪಟ್ಟಣ ಹಾಗೂ ವಿಜಯಪುರ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

    ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಕ್ರಿಯ ರೌಡಿ ಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಆಯುಧಗಳು ಹಾಗೂ ಅಪರಾಧ ಚಟುವಟಿಕೆಗಳಿಗೆ ಬಳಸುವ ವಸ್ತುಗಳಿಗಾಗಿ ಶೋಧ ನಡೆಸಲಾಯಿತು.

    ತಪಾಸಣೆ ವೇಳೆ ಯಾವುದೇ ಮನೆಗಳಲ್ಲಿ ಆಯುಧಗಳು ಅಥವಾ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.