Blog

  • ಪ್ರಗತಿ ಪಥ ಯಾತ್ರೆ ದರ್ಶನ’ ಕಾರ್ಯಕ್ರಮ

    ಪ್ರಗತಿ ಪಥ ಯಾತ್ರೆ ದರ್ಶನ’ ಕಾರ್ಯಕ್ರಮ

    ಬೆಂ.ಗ್ರಾ.ಜಿಲ್ಲೆ: ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ದೇವನಹಳ್ಳಿ ಪಟ್ಟಣಕ್ಕೆ ಭೇಟಿ ನೀಡಿ, ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಸ್ಟ್ರ್ಯಾಟೆಜಿಕ್ ಟೌನ್ ರಿಂಗ್ ರಸ್ತೆ (ಎಸ್.ಟಿ.ಆರ್.ಆರ್) ಕಾಮಗಾರಿಯ ಪರಿಶೀಲನೆ ನಡೆಸಿದರು.

    ಬಳಿಕ ರಾಣಿ ಕ್ರಾಸ್ ನಿಂದ ಜಿಲ್ಲಾಡಳಿತ ಕಛೇರಿ ವರೆಗೆ ವಾಹನದಲ್ಲಿ ಸಂಚರಿಸಿ, ಡಿಸಿ ಕಛೇರಿ ಸಮೀಪದಿಂದ ಸಚಿವೆ ನಿರ್ಮಲಾ ಸೀತಾರಾಮನ್ ಅವರು 100 ಮೀಟರ್ ಗಳಷ್ಟು ಕಾಲ್ನಡಿಗೆಯಲ್ಲಿ ಹೆದ್ದಾರಿ ರಸ್ತೆಯನ್ನು ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಸಂಸದರಾದ ಡಾ. ಕೆ.ಸುಧಾಕರ, ಮುಖಂಡರಾದ ವಿಜಯೇಂದ್ರ, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

  • ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

    ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

    ಕೆ.ಆರ್.ಪುರ-ಕ್ಷೇತ್ರದ ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಉದ್ಘಾಟಿಸಿದರು.

    ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮಾಡುವುದರಿಂದ ಬಡ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ
    ಕ್ಯಾಲಸನಹಳ್ಳಿಯ ಸರ್ಕಾರಿ ಶಾಲೆಗೆ ಕಾಂಗ್ರೆಸ್ ಹಿರಿಯ ಮುಖಂಡ ಅಗರ ಆರ್.ಪ್ರಕಾಶ್ ಅವರು ಶುದ್ಧ ನೀರಿನ ಘಟಕವನ್ನು ಕೋಡುಗೆ ನೀಡಿದ್ದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

    ಗ್ರೀನ್ ಹೊರಮಾವು ಅಭಿಯಾನದ ಹಿನ್ನಲೆಯಲ್ಲಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯ ಮಾಡಲಾಗಿದ್ದು,ಹಸಿರು ಹೊರಮಾವು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್, ಹಿರಿಯ ಮುಖಂಡ ಅಗರ ಆರ್.ಪ್ರಕಾಶ್,ಹೇಮಾವತಿ ಸುರೇಶ್,ವಾರ್ಡನ ಅಧ್ಯಕ್ಷ ಪ್ರಸನ್ನ,ಗೆದ್ದಲಹಳ್ಳಿ ಮುನಿರಾಜು,ಸುಧನ್ವ ಮುಖಂಡರಾದ ಸುನೀಲ್,ರವಿ ಲಕ್ಷ್ಮಣರೆಡ್ಡಿ ಇದ್ದರು.


  • ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ: ಸರ್ಕಾರ

    ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ: ಸರ್ಕಾರ

    ಗೃಹಲಕ್ಷ್ಮಿ ಯೋಜನೆಯ ನೂರಾರು ಕೋಟಿ ರು. ಅನರ್ಹರ ಖಾತೆಗೆ ಹೋಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಆಹ್ವಾನಿಸುತ್ತಿದ್ದು, ಇದೇ ರೀತಿ ‘ಗೃಹ ಜ್ಯೋತಿ’ ದುರ್ಬಳಕೆ ತಡೆಯಲು ಮತ್ತೊಮ್ಮೆ ಅರ್ಜಿ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಶನಿವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ರಾಜ್ಯ ಮಟ್ಟದ ಪ್ರಗತಿ ಪರಿಶೀಲನೆ ಸಭೆನಡೆಸಿದ ಅವರು, ಗ್ಯಾರಂಟಿಗಳ ದುರ್ಬಳಕೆ ತಡೆಯುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಪಂಚ ಗ್ಯಾರಂಟಿಗಳಲ್ಲೂ ದುರ್ಬಳಕೆ, ಸೋರಿಕೆ ತಡೆಯಬೇಕು. ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಎರಡೂ ಯೋಜನೆಗಳಿಗೂ ಹೊಸದಾಗಿ ಅರ್ಜಿ ಪಡೆಯಬೇಕು. ಆ ಮೂಲಕ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದ್ದಾರೆ.

    ಗೃಹಬಳಕೆ ಹೆಸರಿನಲ್ಲಿ ಪಡೆದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಅದನ್ನು ಅಂಗಡಿಗಳ ಬಳಕೆಗೂ ಪಡೆಯುತ್ತಿದ್ದಾರೆ, ಇನ್ನು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಹಲವರು ಸಾವನ್ನಪ್ಪಿದ್ದರು ಅವರ ಖಾತೆಗೆ ಹಣ ಜಮೆಯಾಗುತ್ತಿದೆ. ಈ ಎಲ್ಲಾ ಗೊಂದಲಗಳನ್ನು ಸರಿಪಡಿಸುವ ಬಗ್ಗೆ ಕ್ರಮಕ್ಕೆ ಸೂಚಿಸಿದರು.

    ಗೃಹಲಕ್ಷ್ಮಿ ನಿಲ್ಲಿಸಲ್ಲ;

    ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಲ್ಲಿ ಕೆಲವರು ನಿಧನರಾಗಿದ್ದಾರೆ. ಅವರ ಹೆಸರಲ್ಲಿ ಬೇರೆಯವರು 100 ಕೋಟಿ ರು.ಗೂ ಹೆಚ್ಚು ಹಣ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅರ್ಹ ಫಲಾನು ಭವಿಗಳಿಗೆ ಯೋಜನೆ ತಲುಪುತ್ತಿದೆಯೇ, ಇಲ್ಲವೇ ಎಂದು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.

    ಮತದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಇಲ್ಲ;

    ಮತದಾನದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ, ಪಿಂಚಣಿ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಎಸ್‌ಐಆರ್‌ ಪ್ರಕ್ರಿಯ ವೇಳೆ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಹೋಗಿ ಮತದಾರರಿಗೆ ಮಾರ್ಗದರ್ಶನ ನೀಡುವ ಜತೆಗೆ ಮತದಾನದ ಹಕ್ಕು ಪಡೆಯಲು ಅಗತ್ಯರುವ ಎಲ್ಲಾ ದಾಖಲೆಗಳನ್ನು ಜನರಿಗೆ ಒದಗಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶನಿವಾರ ಅವರು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯಲ್ಲಿ ಈ ಮಾತು ಹೇಳಿದರು.

  • ದೊಡ್ಡಬಳ್ಳಾಪುರ; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು, ಜಮೀನು ಮಾಲೀಕನ ವಿರುದ್ದ ಎಫ್ ಐಆರ್ ದಾಖಲು

    ದೊಡ್ಡಬಳ್ಳಾಪುರ; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು, ಜಮೀನು ಮಾಲೀಕನ ವಿರುದ್ದ ಎಫ್ ಐಆರ್ ದಾಖಲು

    ದೊಡ್ಡಬಳ್ಳಾಪುರ; ತಾಲ್ಲೂಕು ತೊಗರೀಘಟ್ಟ ಗ್ರಾಮದಲ್ಲಿನ ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಧಾರುಣ ಘಟನೆ ಇಂದು ನಡೆದಿದೆ.

    ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಸವಿತಾ ಮತ್ತು ಮುನಿರಾಜು ದಂಪತಿಯ ಮಗಳು 11ವರ್ಷದ ದಕ್ಷ, ಹಾಗೂ ಆಶಾ ಮತ್ತು ಪ್ರದೀಪ್ ದಂಪತಿಯ ಮಗ 4 ವರ್ಷದ ಧನುಷ್ ಎಂದು ಗುರುತಿಸಲಾಗಿದೆ. ಗುರುಮೂರ್ತಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿದ ಕೃಷಿ ಹೋಂಡದಲ್ಲಿ ಈ ಘಟನೆ ನಡೆದಿದೆ.

    ಕೃಷಿ ಹೊಂಡಕ್ಕೆ ಸರಿಯಾಗಿ ಭದ್ರತೆ ಮಾಡದೆ ಇಬ್ಬರು ಮಕ್ಕಳ ಸಾವಿಗೆ ಕಾರಣರಾದ ಗುರುಮೂರ್ತಿ ವಿರುದ್ಧ 106 BNS ರೀತಿಯ ಪ್ರಕರಣ ದಾಖಲಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಡಾ.ಎಂ.ಬಿ ನವೀನ್ ಕುಮಾರ್ ರವರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  • ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ: ಐವರು ಯೋಧರು ಹುತಾತ್ಮಆಘಾತವಾಗಿದೆ.

    ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ: ಐವರು ಯೋಧರು ಹುತಾತ್ಮಆಘಾತವಾಗಿದೆ.

    ಅಸ್ಸಾಂ:ಭಾರತೀಯ ವಾಯುಪಡೆಯ ಎ ಎನ್-32 ಸಾರಿಗೆ ವಿಮಾನ ಪತನಗೊಂಡು ಬೆಂಕಿಗಾಹುತಿಯಾಗಿರುವ ಘಟನೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

    ಅಸ್ಸಾಂನ ಜೋರ್ಹತ್ ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಏಕಾಏಕಿ ವಿಮಾನ ಪತನಗೊಂಡು ಬೆಂಕಿಗಾಹುತಿಯಾಗಿದೆ. ಈ ದುರಂತದಲ್ಲಿ ಐವರು ಯೋಧರು ಸಾವನ್ನಪ್ಪಿದ್ದಾರೆ. ಓರ್ವ ಸಹಪೈಲಟ್ ಬದುಕುಳಿದಿದ್ದಾಅರೆ.

    ವಾಯುಪಡೆ ನಿಲ್ದಾಣದ ಆವರಣದಲ್ಲಿಯೇ ವಿಮಾನ ಪತನಗೊಂಡಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ದುರಂತದಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ. ವಿಮಾನ ದುರಂತದ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗಿದೆ.

    ಈ ದುರ್ಘಟನೆಯಲ್ಲಿ ಮೃತಪಟ್ಟ ಐವರು ಸಿಬ್ಬಂದಿ:
    Prashant Singh (ಸ್ಕ್ವಾಡ್ರನ್ ಲೀಡರ್)
    Shubham Kumar (ಫ್ಲೈಟ್ ಲೆಫ್ಟಿನೆಂಟ್)
    Jitendra Sharma (ಸಾರ್ಜೆಂಟ್)
    Khemaram Kumawat (ಅಗ್ನಿವೀರ್ ವಾಯು)
    Danish Alam (ಅಗ್ನಿವೀರ್ ವಾಯು)

    AN-32 ಒಂದು ಸೋವಿಯತ್ ಯುಗದ ಸಾರಿಗೆ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಪ್ರಮುಖ ಲಾಜಿಸ್ಟಿಕ್ಸ್ ಹಾಗೂ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 1986ರಿಂದ ಭಾರತದಲ್ಲಿ ಸುಮಾರು 22 AN-32 ವಿಮಾನ ಅಪಘಾತಗಳು ಸಂಭವಿಸಿವೆ. 2025ರಲ್ಲಿಯೂ ಇದೇ ಮಾದರಿಯ ವಿಮಾನ ಅಪಘಾತಕ್ಕೀಡಾಗಿತ್ತು. ಆದಾಗ್ಯೂ, ದೇಶದಾದ್ಯಂತ ಸೇನಾ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಿಗೆ ಈ ವಿಮಾನವನ್ನು ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಘಟನೆ, ಕೆಲವು ತಿಂಗಳ ಹಿಂದೆ Sukhoi Su-30MKI ಯುದ್ಧ ವಿಮಾನವು ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಹಾರಾಟದ ವೇಳೆ ಪತನಗೊಂಡಿದ್ದ ಘಟನೆಯ ನಂತರ ಸಂಭವಿಸಿರುವ ಮತ್ತೊಂದು ದೊಡ್ಡ ಆಘಾತವಾಗಿದೆ

    ರಾಜನಾಥ್ ಸಿಂಗ್ ಸಂತಾಪ
    Rajnath Singh ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    “ಜೋರ್ಹಾಟ್‌ನಲ್ಲಿ ಸಂಭವಿಸಿದ AN-32 ವಿಮಾನ ದುರಂತದಲ್ಲಿ ಐವರು ವಾಯುಯೋಧರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಕರ್ತವ್ಯ ನಿರ್ವಹಣೆಯ ವೇಳೆ ಅವರು ನೀಡಿದ ಅತ್ಯುನ್ನತ ತ್ಯಾಗವನ್ನು ದೇಶ ಸದಾ ಹೆಮ್ಮೆಯಿಂದ ಸ್ಮರಿಸಲಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು” ಎಂದು ಅವರು ತಿಳಿಸಿದ್ದಾರೆ.ವಾಯುಪಡೆ ಕೇಂದ್ರದ ಸಮೀಪ ವಾಸಿಸುವ ಸ್ಥಳೀಯ ನಿವಾಸಿಯೊಬ್ಬರು, “ವಿಮಾನದ ಹಿಂಭಾಗ ಕಾಣುತ್ತಿತ್ತು ಮತ್ತು ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿತ್ತು. ವಿಮಾನವು ನಿಶ್ಚಲವಾಗಿತ್ತು. ನಾನು ಅಲ್ಲಿಂದ ದೂರ ಸರಿಯಲು ಆರಂಭಿಸಿದಾಗ ಭಾರೀ ಸ್ಫೋಟ ಸಂಭವಿಸಿತು. ಅದರ ಪ್ರಭಾವದಿಂದ ಇಡೀ ಪ್ರದೇಶವೇ ನಡುಗಿತು” ಎಂದು ಹೇಳಿದ್ದಾರೆ

  • ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ ಡಿವೈಡರ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು

    ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ ಡಿವೈಡರ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು

    ಹೊಸಕೋಟೆ :- ಅತಿ ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.


    ನಗರದ ಅರೆಬಿಕ್ ಕಾಲೇಜು ಸಮೀಪದ ಪಿಎನ್‌ಟಿ ಕಾಲೋನಿ ನಿವಾಸಿ ಸಾಜೀಯಾ (28) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಕಮ್ಮನಹಳ್ಳಿಯ ನಿವಾಸಿ ರಿಜ್ವಾನ್ (34) ಮೃತಪಟ್ಟವರು.

    ರಿಜ್ವಾನ್ ತನ್ನ ಬೆಂಜ್ ಕಾರಿನಲ್ಲಿ ಸ್ನೇಹಿತೆ ಸಾಜೀಯ ಅವರನ್ನು
    ಕರೆದುಕೊಂಡು ಹೋಟೆಲ್‌ನಲ್ಲಿ ಊಟ ಮಾಡಲು ದೇವನಹಳ್ಳಿ ಕಡೆಗೆ ರಾತ್ರಿ ಹೋಗಿದ್ದಾರೆ.

    ಊಟ ಮುಗಿಸಿಕೊಂಡು ವಾಪಸ್ ತಡರಾತ್ರಿ 12.45 ರ ಸುಮಾರಿನಲ್ಲಿ ನಗರಕ್ಕೆ ಬರುತ್ತಿದ್ದಾಗ ಹೊಸಕೋಟೆ ಸಮೀಪದ ದೊಡ್ಡ ಹುಲ್ಲೂರು ಬಳಿಯ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಅಪ್ಪಳಿಸಿದೆ.

    ಪರಿಣಾಮ ಕಾರಿನೊಳಗಿದ್ದ ಸ್ನೇಹಿತೆ ಸಾಜೀಯಾ ಎಂಬುವವರು ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ರಿಜ್ವಾನ್ ಸೇತುವೆಯಿಂದ 20ಕೈಗೊಂಡಿದ್ದಾರೆ
    ಬಿದ್ದಿದ್ದಾನೆ.

    ಕೆಳಗೆ ನೀರು ಇದ್ದುದ್ದರಿಂದ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ರಿಜ್ವಾನ್ ಶವ ಪತ್ತೆಯಾಗಿದೆ.

    ಸುದ್ದಿ ತಿಳಿದು ಹೊಸಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

    ಅತಿ ವೇಗ ಹಾಗೂ ಬೇಜವಾಬ್ದಾರಿ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಅಪಘಾತದ ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರಿದಿದೆ.


     

  • ದೊಡ್ಡಬಳ್ಳಾಪುರ; ಗಾಂಜಾ ಮಾರಾಟಗಾರನ ಬಂಧನ, 6 ಕೆಜಿ 126 ಗ್ರಾಂ ಗಾಂಜಾ ವಶಕ್ಕೆ ಪಡೆದ ಪೊಲೀಸ್

    ದೊಡ್ಡಬಳ್ಳಾಪುರ; ಗಾಂಜಾ ಮಾರಾಟಗಾರನ ಬಂಧನ, 6 ಕೆಜಿ 126 ಗ್ರಾಂ ಗಾಂಜಾ ವಶಕ್ಕೆ ಪಡೆದ ಪೊಲೀಸ್

    ದೊಡ್ಡಬಳ್ಳಾಪುರ: 6 ಕೆಜಿ 126 ಗ್ರಾಂ ಒಣ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಯುವಕನೊಬ್ಬನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಉತ್ತರಪ್ರದೇಶ ಮುರಾಬಾದ್ ಮೂಲದ 23 ವರ್ಷದ ಮುಷರಫ್ ಅಲಿ ಎಂದು ಗುರುತಿಸಲಾಗಿದ್ದು, ದೊಡ್ಡಬಳ್ಳಾಪುರ ನಗರದ ಅರ್ಕಾವತಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು ಎನ್ನಲಾಗಿದೆ.

    ಆರೋಪಿಯು ನಗರದಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶದಿಂದ ದೊಡ್ಡಬಳ್ಳಾಪುರಕ್ಕೆ ಒಣ ಗಾಂಜಾವನ್ನು ತಂದು ತನ್ನ ಮನೆಯಲ್ಲಿ ಶೇಖರಿಸಿಟ್ಟಿದ್ದ, ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿತನಿಂದ 6 ಕೆಜಿ 126 ಗ್ರಾಂ ಅಕ್ರಮ ಒಣ ಗಾಂಜಾ ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ದೊಡ್ಡಬಳ್ಳಾಪುರ ಮಾಜಿ ಶಾಸಕ ಆರ್.ಜಿ ವೆಂಕಟಾಚಲಯ್ಯ ವಿಧಿವಶ

    ದೊಡ್ಡಬಳ್ಳಾಪುರ ಮಾಜಿ ಶಾಸಕ ಆರ್.ಜಿ ವೆಂಕಟಾಚಲಯ್ಯ ವಿಧಿವಶ

    ದೊಡ್ಡಬಳ್ಳಾಪುರ; ಮಾಜಿ ಶಾಸಕ, ಹಿರಿಯ ರಾಜಕಾರಣಿ ಆರ್.ಜಿ ವೆಂಕಟಚಲಯ್ಯ ರವರು ಇಂದು ಮುಂಜಾನೆ ವಯೋಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದಿದ್ದಾರೆ. ಮೃತರಿಗೆ 90ವರ್ಷ ವಯಸ್ಸಾಗಿತ್ತು,

    ಮೃತರ ಅಂತ್ಯಕ್ರಿಯೆಗೂ ಮುನ್ನ ಇವರ ಪಾರ್ಥಿವ ಶರೀರವನ್ನು ದೊಡ್ಡಬಳ್ಳಾಪುರ ತೇರದ ವಾಹನ ಮುಖಾಂತರ 11 ಗಂಟೆಗೆ ಬಾಶೆಟ್ಟಿಹಳ್ಳಿ, ರೈಲ್ವೇಸ್ಟೆಷನ್, ರಂಗಪ್ಪ ಸರ್ಕಲ್, ತೇರಿನ ಬೀದಿ, ಕೊಂಗಾಡಿಯಪ್ಪ ಕಾಲೇಜು ಮುಖ್ಯ ರಸ್ತೆ, ಇಸ್ಲಾಂಪುರ, ತಾಲೂಕ್ ಆಫೀಸ್ ಸರ್ಕಲ್, ಮಾರ್ಕೆಟ್ (ಬಸ್ ಸ್ಟಾಂಡ್ ) ಡಿಕ್ರಾಸ್, ಟಿ.ಬಿ. ಸರ್ಕಲ್,ಬಸವ ಭವನ ಮಾರ್ಗವಾಗಿ ಅವರ ಸ್ವಗ್ರಾಮ ಹಣಬೆ ಗ್ರಾಮದಲ್ಲಿ ಸಂಜೆ ಅವರ ಪಾರ್ಥಿವ ಶರಿವರವನ್ನು ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿದೆ.

  • ಜಯನಗರದಲ್ಲಿ ಸೂರ್ಯಗಾಯತ್ರಿ ಅವರಿಂದ ಸಂಗೀತ ಕಾರ್ಯಾಗಾರ: ಜೂ.12ರಿಂದ 2 ದಿನಗಳ ಅಪೂರ್ವ ಅವಕಾಶ!

    ಜಯನಗರದಲ್ಲಿ ಸೂರ್ಯಗಾಯತ್ರಿ ಅವರಿಂದ ಸಂಗೀತ ಕಾರ್ಯಾಗಾರ: ಜೂ.12ರಿಂದ 2 ದಿನಗಳ ಅಪೂರ್ವ ಅವಕಾಶ!

    • ಸೂರ್ಯಗಾಯತ್ರಿ ಅವರಿಂದ ನೇರ ಸಂಗೀತ ಕಲಿಕೆ

    • ಜೂನ್ 14ರಂದು ವೇದಿಕೆ ಹಂಚಿಕೊಳ್ಳುವ ಅವಕಾಶ

    • ಪರಮ್ ಕಲ್ಚರ್ ಹಾಗೂ ಹರಿವಂಶ ಗ್ರೂಪ್‌ ಸಹಯೋಗ

    • ಪ್ರವೇಶ ದರದಲ್ಲಿ ಉಚಿತ ಕನ್ಸರ್ಟ್ ಪಾಸ್

    ಬೆಂಗಳೂರು: ಕಲಾಭಿಮಾನಿಗಳಿಗೆ ಮತ್ತು ಉದಯೋನ್ಮುಖ ಗಾಯಕರಿಗೆ ಇಲ್ಲೊಂದು ಸುವರ್ಣಾವಕಾಶ ಎದುರಾಗಿದೆ. ‘ಪರಮ್ ಕಲ್ಚರ್’ ಹಾಗೂ ‘ಹರಿವಂಶ ಗ್ರೂಪ್’ ಸಹಯೋಗದೊಂದಿಗೆ ಜಯನಗರದ ಯುವಕ ಸಂಘದಲ್ಲಿ ಜೂನ್ 12 ಮತ್ತು 13ರಂದು ಸಂಜೆ 6 ರಿಂದ 8 ಗಂಟೆಯವರೆಗೆ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನ’ವನ್ನು (Pre-Concert workshop) ಹಮ್ಮಿಕೊಳ್ಳಲಾಗಿದೆ. ಜಾಗತಿಕ ಮಟ್ಟದಲ್ಲಿ ಭಕ್ತಿ ಸಂಗೀತದ ಮೂಲಕ ಸನ್ಸೇಷನ್ ಸೃಷ್ಟಿಸಿರುವ ಖ್ಯಾತ ಯುವ ಶಾಸ್ತ್ರೀಯ ಗಾಯಕಿ ಸೂರ್ಯಗಾಯತ್ರಿ ಅವರು ಈ ಕಾರ್ಯಾಗಾರವನ್ನು ಮುನ್ನಡೆಸಲಿದ್ದಾರೆ.


    ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತರಿಗೆ ಸೂರ್ಯಗಾಯತ್ರಿ ಅವರಿಂದ ನೇರವಾಗಿ ಭಜನೆಗಳು, ದಾಸರಪದಗಳು ಮತ್ತು ಅಭಂಗ್‌ಗಳನ್ನು ಕಲಿಯುವ ಅಪೂರ್ವ ಅವಕಾಶ ಸಿಗಲಿದೆ. ಜೊತೆಗೆ, ಅವರ ಕಲಾ ಜರ್ನಿ ಮತ್ತು ಭಕ್ತಿ ಸಂಗೀತದ ಅನುಭವಗಳನ್ನು ನೇರವಾಗಿ ಅವರಿಂದಲೇ ಕೇಳಿ ತಿಳಿಯಬಹುದು. ಒಟ್ಟು 4 ಗಂಟೆಗಳ ಕಾಲ ನೇರ ಕಲಿಕೆ ಇರಲಿದ್ದು, ಕಲಿಕೆಗೆ ಅಗತ್ಯವಿರುವ ವಿಶೇಷ ಸಾಹಿತ್ಯ ಹಾಗೂ ನೋಟ್ಸ್‌ಗಳನ್ನೂ ಇಲ್ಲಿ ಪಡೆಯಬಹುದಾಗಿದೆ.

    ವೇದಿಕೆ ಹಂಚಿಕೊಳ್ಳುವ ಸುವರ್ಣಾವಕಾಶ:

    ಕಾರ್ಯಾಗಾರವು ಕೇವಲ ಕಲಿಕೆಗೆ ಸೀಮಿತವಾಗಿರದೆ, ಪ್ರದರ್ಶನಕ್ಕೂ ದಾರಿ ಮಾಡಿಕೊಡಲಿದೆ. ಇಲ್ಲಿ ಭಾಗವಹಿಸುವ ಪ್ರತಿಭಾವಂತ ಕಲಾಭಿಮಾನಿಗಳನ್ನು ಜೂನ್ 14ರಂದು ಸಂಜೆ 5 ಗಂಟೆಯಿಂದ ಮೀನಾಕ್ಷಿ ರಂಗಮಂಚದಲ್ಲಿ ನಡೆಯಲಿರುವ ಭವ್ಯ ಲೈವ್ ಕನ್ಸರ್ಟ್‌ನಲ್ಲಿ ಸೂರ್ಯಗಾಯತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡಲು ಪರಿಗಣಿಸುವ ಬಂಪರ್ ಚಾನ್ಸ್ ಇರಲಿದೆ.

    ಉಚಿತ ಕನ್ಸರ್ಟ್ ಪಾಸ್ ಲಭ್ಯ:

    ಈ ಕಾರ್ಯಾಗಾರದಲ್ಲಿ ಕೇವಲ ಕಲಿಕೆ ಮಾತ್ರವಲ್ಲದೆ ಹೆಚ್ಚುವರಿ ಸೌಲಭ್ಯಗಳೂ ಸೇರಿವೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಉಚಿತ ಕಲಿಕಾ ಸಾಮಗ್ರಿಗಳ ಜೊತೆಗೆ ಜೂನ್ 14ರಂದು ನಡೆಯಲಿರುವ ಸೂರ್ಯಗಾಯತ್ರಿ ಅವರ ಭವ್ಯ ಲೈವ್ ಕನ್ಸರ್ಟ್‌ನ ಕಂಪ್ಲಿಮೆಂಟರಿ ಪಾಸ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು.

    ಜಾಗತಿಕ ತಾರೆಯ ಮಾರ್ಗದರ್ಶನ:

    ಸೂರ್ಯಗಾಯತ್ರಿ ಅವರು ಮುಂಬೈನ ಷಣ್ಮುಖಾನಂದ ಸಭಾದಿಂದ ಕಿರಿಯ ವಯಸ್ಸಿನಲ್ಲೇ ಪ್ರತಿಷ್ಠಿತ ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತರಾಗಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ 29 ನಗರಗಳ ಯಶಸ್ವಿ ಪ್ರವಾಸ ಮುಗಿಸಿ ಬಂದಿರುವ ಹಾಗೂ ದೇಶ-ವಿದೇಶಗಳಲ್ಲಿ 500ಕ್ಕೂ ಹೆಚ್ಚು ಲೈವ್ ಪ್ರದರ್ಶನಗಳನ್ನು ನೀಡಿದ್ದಾರೆ.

  • ಬೆಳ್ಳಂಬೆಳಗ್ಗೆ ಹೆಬ್ಬಗೋಡಿಯಲ್ಲಿ ಪೊಲೀಸ್ ಫೈರಿಂಗ್: ರೌಡಿಶೀಟರ್ ಕಾಲಿಗೆ ಗುಂಡೇಟು!

    ಬೆಳ್ಳಂಬೆಳಗ್ಗೆ ಹೆಬ್ಬಗೋಡಿಯಲ್ಲಿ ಪೊಲೀಸ್ ಫೈರಿಂಗ್: ರೌಡಿಶೀಟರ್ ಕಾಲಿಗೆ ಗುಂಡೇಟು!

    ಬೆಂಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಕಾರ್ಯಾಚರಣೆಯ ವೇಳೆ ರೌಡಿಶೀಟರ್ ಒಬ್ಬನಿಗೆ ಕಾಲಿಗೆ ಗುಂಡು ಬಿದ್ದ ಘಟನೆ ನಡೆದಿದೆ.

    ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜೀವ (19) ಎಂಬ ರೌಡಿಶೀಟರ್‌ಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಗಾಯಗೊಂಡ ಆರೋಪಿ ಜೀವ (19) ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರ ಪ್ರಕಾರ, ಕೊ*ಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಕಳೆದ ವಾರ ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ನಡೆದ ದರೋಡೆ ಪ್ರಕರಣಗಳಲ್ಲೂ ಈತನ ವಿರುದ್ಧ ಆರೋಪಗಳು ದಾಖಲಾಗಿದ್ದವು.

    ಖಚಿತ ಮಾಹಿತಿಯ ಪಡೆದು ಹೆಬ್ಬಗೋಡಿ ಪೊಲೀಸರು ಬಂಧಿಸಲು ಹೋದ ವೇಳೆ ಆರೋಪಿ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ

    ಈ ಸಂದರ್ಭದಲ್ಲಿ ಸಿಬ್ಬಂದಿ ನಾಗೇಶ್ ಅವರ ಮೇಲೆ ದಾಳಿ ಯತ್ನ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ.

    ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.