Blog

  • ಹಲಸಿನ ಹಣ್ಣಿನ ಆಸೆಗೆ ಬಲಿಯಾಯ್ತು ರಾಷ್ಟ್ರಪತಿ ಪ್ರಶಸ್ತಿ ವಿಜೇತ ಕೃಷಿ ವಿದ್ಯಾರ್ಥಿಯ ಜೀವ!

    ಹಲಸಿನ ಹಣ್ಣಿನ ಆಸೆಗೆ ಬಲಿಯಾಯ್ತು ರಾಷ್ಟ್ರಪತಿ ಪ್ರಶಸ್ತಿ ವಿಜೇತ ಕೃಷಿ ವಿದ್ಯಾರ್ಥಿಯ ಜೀವ!

    ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಆವರಣದಲ್ಲಿ ಮಧ್ಯರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳಲು ಹೋಗಿ ಆಯತಪ್ಪಿ ಕೆಳಗೆ ಬಿದ್ದ ಎಂ.ಎಸ್ಸಿ ಕೃಷಿ (M.Sc Agriculture) ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

    ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನವರಾದ ಆಕಾಶ್ (23) ಮೃತಪಟ್ಟ ದುರ್ದೈವಿ. ರೈತಾಪಿ ಕುಟುಂಬದಿಂದ ಬಂದು, ಕಷ್ಟಪಟ್ಟು ಓದಿ ಉನ್ನತ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರತಿಭಾವಂತ ಯುವಕನ ಅಕಾಲಿಕ ಮರಣ ಇಡೀ ಕ್ಯಾಂಪಸ್ ಅನ್ನು ಕಣ್ಣೀರಲ್ಲಿ ಮುಳುಗಿಸಿದೆ.

    ಮಧ್ಯರಾತ್ರಿ ನಡೆದಿದ್ದೇನು?

    ಮೂಲಗಳ ಪ್ರಕಾರ, ಈ ಘಟನೆಯು ರಾತ್ರಿ 12:00 ರಿಂದ 1:00 ಗಂಟೆಯ ಅವಧಿಯಲ್ಲಿ ಜಿಕೆವಿಕೆ ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿ ಆಕಾಶ್ ಮರದಲ್ಲಿದ್ದ ಹಲಸಿನ ಹಣ್ಣನ್ನು ಕೀಳುವ ಆಸೆಯಿಂದ ದೊಡ್ಡ ಮರವನ್ನು ಹತ್ತಿದ್ದ ಎನ್ನಲಾಗಿದೆ.
    ಆದರೆ, ಮಧ್ಯರಾತ್ರಿಯ ಕತ್ತಲಿನಲ್ಲಿ ಆಯತಪ್ಪಿ ಮರದ ಮೇಲಿಂದ ನೇರವಾಗಿ ಕೆಳಗೆ ಬಿದ್ದಿದ್ದಾನೆ.ಕೆಳಗೆ ಬಿದ್ದ ರಭಸಕ್ಕೆ ಆಕಾಶ್ ತಲೆ ಹಾಗೂ ದೇಹದ ಭಾಗಗಳಿಗೆ ಗಂಭೀರವಾದ ಪೆಟ್ಟಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಆಕಾಶ್ ಜೊತೆಯಲ್ಲಿದ್ದ ಸ್ನೇಹಿತರು ಮತ್ತು ಸಹಪಾಠಿಗಳು ತಕ್ಷಣವೇ ಆತನನ್ನು ರಕ್ಷಿಸಿ, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕಾಶ್ ಸಾವನ್ನಪ್ಪಿದ್ದಾನೆ.

    ರಾಷ್ಟ್ರಪತಿ ಪ್ರಶಸ್ತಿ ವಿಜೇತ ಪ್ರತಿಭಾವಂತ ಯುವಕ!

    ಮೃತ ಆಕಾಶ್ ಕೇವಲ ಓದಿನಲ್ಲಿ ಮಾತ್ರವಲ್ಲದೆ ಇತರೆ ಚಟುವಟಿಕೆಗಳಲ್ಲೂ ಅತ್ಯಂತ ಮುಂಚೂಣಿಯಲ್ಲಿದ್ದ ಕೃಷಿ ವಿಶ್ವವಿದ್ಯಾಲಯದ ಹೆಮ್ಮೆಯ ವಿದ್ಯಾರ್ಥಿಯಾಗಿದ್ದನು.

    ಸಾಧನೆಯ ಶಿಖರ ಏರಿದ್ದ ಆಕಾಶ್:

    ಕಾಲೇಜಿನ ಎನ್.ಎಸ್.ಎಸ್ (NSS) ವಿಭಾಗದಲ್ಲಿ ಅತ್ಯುತ್ತಮ ಸ್ವಯಂಸೇವಕನಾಗಿ ಗುರುತಿಸಿಕೊಂಡಿದ್ದ ಈತನಿಗೆ ರಾಷ್ಟ್ರಪತಿಯವರಿಂದ “ಉತ್ತಮ ಸ್ವಯಂಸೇವಕ” ಪ್ರಶಸ್ತಿ ಲಭಿಸಿತ್ತು.

    2024 ರ ಗಣರಾಜ್ಯೋತ್ಸವದ (Republic Day Parade) ಪರೇಡ್‌ನಲ್ಲಿ ಕರ್ನಾಟಕ ರಾಜ್ಯವನ್ನು ಹೆಮ್ಮೆಯಿಂದ ಪ್ರತಿನಿಧಿಸಿ ಕೀರ್ತಿ ತಂದಿದ್ದನು.

    ಬಡತನದ ಹಿನ್ನೆಲೆಯುಳ್ಳ ರೈತ ಕುಟುಂಬದಿಂದ ಬಂದಿದ್ದ ಆಕಾಶ್, ಇಡೀ ಗ್ರಾಮಕ್ಕೆ ಹಾಗೂ ಕಾಲೇಜಿಗೆ ಆಸರೆಯಾಗಬೇಕಿದ್ದನು. ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಹಲಸಿನ ಹಣ್ಣಿನ ಸಣ್ಣ ಆಸೆಗೆ ಸಿಲುಕಿ ಈ ಯುವಕ ಪ್ರಾಣ ಕಳೆದುಕೊಂಡಿರುವುದು ಹೆತ್ತವರಿಗೆ ಹಾಗೂ ಸ್ನೇಹಿತರಿಗೆ ಅರಗಿಸಿಕೊಳ್ಳಲಾಗದ ತೀವ್ರ ಆಘಾತವನ್ನುಂಟು ಮಾಡಿದೆ.

    ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು

    ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಯಲಹಂಕ ಪೊಲೀಸ್ ಠಾಣೆಯ ಅಧಿಕಾರಿಗಳು ಜಿಕೆವಿಕೆ ಆವರಣದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ಪರಿಶೀಲನೆ ನಡೆಸಿದ್ದಾರೆ. ಮೃತರ ಪೋಷಕರಿಗೆ ಮತ್ತು ಕುಟುಂಬಸ್ಥರಿಗೆ ಮಾಹಿತಿ ರವಾನಿಸಲಾಗಿದೆ. ಈ ದುರಂತ ಘಟನೆಗೆ ಸಂಬಂಧಿಸಿದಂತೆ ಸದ್ಯ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

  • ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಜನರೆ ಎಚ್ಚರ. ನಿಮ್ಮ ಶ್ವಾಸಕೋಶದ ಮೇಲೆ ಬೀರುತ್ತಿರುವ ಪರಿಣಾಮ ನಿಮಗೆ ಗೊತ್ತಾ?

    ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಜನರೆ ಎಚ್ಚರ. ನಿಮ್ಮ ಶ್ವಾಸಕೋಶದ ಮೇಲೆ ಬೀರುತ್ತಿರುವ ಪರಿಣಾಮ ನಿಮಗೆ ಗೊತ್ತಾ?

    ಬೆಂಗಳೂರು: ಒಂದು ಕಾಲದಲ್ಲಿ ‘ಉದ್ಯಾನ ನಗರಿ’ ಎಂದು ಕರೆಯಲ್ಪಡುತ್ತಿದ್ದ ಬೆಂಗಳೂರು, ತನ್ನ ಹಸಿರು ಮತ್ತು ಆಹ್ಲಾದಕರ ವಾತಾವರಣದ ಖ್ಯಾತಿಯನ್ನು ಕಳೆದುಕೊಳ್ಳುತ್ತಿದೆ. ಪ್ರತಿದಿನ ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಸರ್ಜಾಪುರ ರಸ್ತೆ ಮತ್ತು ಔಟರ್ ರಿಂಗ್ ರೋಡ್ ಕಾರಿಡಾರ್‌ಗಳಲ್ಲಿ ಪ್ರಯಾಣಿಸುವ ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿಗೆ, ಅವರು ಉಸಿರಾಡುವ ಗಾಳಿಯು ಗಂಭೀರ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ.

    ಬೆಳಗ್ಗೆ 8 ಗಂಟೆಯ ಪೀಕ್ ಅವರ್‌ಗಳಲ್ಲಿ ಎಲೆಕ್ಟ್ರಾನಿಕ್ ಸಿಟಿ ಫೇಸ್-1 ರಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 188 ರಷ್ಟನ್ನು (ಅನಾರೋಗ್ಯಕರ ಮಟ್ಟ) ತಲುಪುತ್ತದೆ. ಸಂಜೆಯ ಟ್ರಾಫಿಕ್ ಸಮಯದಲ್ಲಿ ವೈಟ್‌ಫೀಲ್ಡ್‌ನಲ್ಲೂ ಇದೇ ಪರಿಸ್ಥಿತಿ ಇರುತ್ತದೆ. ಐಟಿ ಪಾರ್ಕ್‌ಗಳ ನಿರ್ಮಾಣ ಕಾರ್ಯ, ಭಾರಿ ವಾಹನಗಳ ಸಂಚಾರ, ಮತ್ತು ದ್ವಿಚಕ್ರ ವಾಹನಗಳು ಹಾಗೂ ಕ್ಯಾಬ್‌ಗಳ ದಟ್ಟಣೆಯು ಈ ಕಾರಿಡಾರ್‌ಗಳನ್ನು ಸ್ಥಳೀಯ ಮಾಲಿನ್ಯದ ಕೇಂದ್ರಬಿಂದುಗಳನ್ನಾಗಿ ಮಾಡಿವೆ.

    ಪ್ರಯಾಣದ ವಿಧಾನದ ಅಪಾಯ:

    ದ್ವಿಚಕ್ರ ವಾಹನ ಸವಾರರು ಮತ್ತು ಆಟೋ ಪ್ರಯಾಣಿಕರು ನೇರವಾಗಿ ಮುಂದಿನ ವಾಹನದ ಹೊಗೆಯನ್ನು ಸೇವಿಸುತ್ತಾರೆ. ಹವಾನಿಯಂತ್ರಿತ (AC) ಕ್ಯಾಬ್‌ಗಳಲ್ಲಿ ಕುಳಿತುಕೊಳ್ಳುವವರು ಕೂಡ ಸುರಕ್ಷಿತರಲ್ಲ; ಏಕೆಂದರೆ ಸಾಮಾನ್ಯ ವಾಹನ ಫಿಲ್ಟರ್‌ಗಳು PM2.5 ಸೂಕ್ಷ್ಮ ಕಣಗಳನ್ನು ತಡೆಯಲು ಸಮರ್ಥವಾಗಿರುವುದಿಲ್ಲ.

    ಆರೋಗ್ಯದ ಮೇಲೆ ನೇರ ಪರಿಣಾಮ:

    2025 ರ ಅಧ್ಯಯನವೊಂದು, ಟ್ರಕ್ ದಟ್ಟಣೆಯು ಅಸ್ತಮಾಗೆ ಪ್ರಮುಖ ಕಾರಣವಾಗಬಲ್ಲದು ಎಂದು ದೃಢಪಡಿಸಿದೆ. ಮನೆಯ ಪರಿಸರ ಅಥವಾ ಕೌಟುಂಬಿಕ ಹಿನ್ನೆಲೆಯ ಹೊರತಾಗಿಯೂ, ಟ್ರಾಫಿಕ್‌ಗೆ ಹತ್ತಿರವಿರುವುದು ಸ್ವತಃ ಒಂದು ದೊಡ್ಡ ಆರೋಗ್ಯ ಅಪಾಯವಾಗಿದೆ.

    ತಜ್ಞರ ಎಚ್ಚರಿಕೆ

    ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಬೆಂಗಳೂರಿನ ಹಿರಿಯ ಪಲ್ಮನಾಲಜಿಸ್ಟ್ (ಶ್ವಾಸಕೋಶ ತಜ್ಞ) ಡಾ. ಮಂಜುನಾಥ್ ರವರು ಕೆಲ ವಿಚಾರ ಹಂಚಿಕೊಂಡಿದ್ದಾರೆ.

    “ನನಗೆ ಅತೀ ಹೆಚ್ಚು ಕಾಳಜಿಯಿರುವುದು ದೀರ್ಘಕಾಲದಿಂದ ಪ್ರಯಾಣಿಸುತ್ತಿರುವವರ ಬಗ್ಗೆ. ನಾಲ್ಕೈದು ವರ್ಷಗಳಿಂದ ಪ್ರತಿದಿನ ಸಂಚರಿಸುವ ಅನೇಕರು, ಬೆಳಿಗ್ಗೆ ಎದೆಯಲ್ಲಿ ಬಿಗಿತ ಮತ್ತು ಒಣ ಕೆಮ್ಮು ಸಾಮಾನ್ಯ ಎಂದು ಪರಿಗಣಿಸುತ್ತಾರೆ. ಆದರೆ, ಕೊನೆ ಹಂತಕ್ಕೆ ಸಮಸ್ಯೆ ತಲುಪಿದಾಗ ಮಾತ್ರ ಅವರು ನಮ್ಮ ಬಳಿ ಬರುತ್ತಾರೆ. ಅಷ್ಟೊತ್ತಿಗಾಗಲೇ ಶ್ವಾಸಕೋಶದಲ್ಲಿ ಬದಲಾವಣೆಗಳು ಆರಂಭವಾಗಿರುತ್ತವೆ. ದೀರ್ಘಕಾಲ ಪ್ರಯಾಣಿಸುವವರು ಮುಂಜಾಗ್ರತಾ ಕ್ರಮವಾಗಿ ಆರಂಭಿಕ ಶ್ವಾಸಕೋಶದ ಪರೀಕ್ಷೆ (Spirometry) ಮಾಡಿಸಿಕೊಳ್ಳುವುದು ಅವಶ್ಯಕ.”

    ಪರಿಹಾರದ ದಾರಿ

    2025 ರ ಮಧ್ಯಭಾಗದಿಂದ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಾನಿಕ್ ಸಿಟಿಯ ಮೆಟ್ರೋ ಹಳದಿ ಮಾರ್ಗವು ಉತ್ತಮ ಹೆಜ್ಜೆಯಾಗಿದೆ. ಆದಾಗ್ಯೂ, ಮೆಟ್ರೋ ನಿಲ್ದಾಣದಿಂದ ಐಟಿ ಪಾರ್ಕ್‌ವರೆಗೆ ಅಂತಿಮ ಹಂತದ ಸಂಪರ್ಕ (Last-mile connectivity) ಮತ್ತು ಅಲ್ಲಿನ ಧೂಳು ತುಂಬಿದ ರಸ್ತೆಗಳ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

    ಮುಂದೇನು?
    ಬೆಂಗಳೂರಿನ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ಆರೋಗ್ಯ ರಕ್ಷಣೆಗಾಗಿ ಸಕ್ರಿಯವಾಗಿ ಭಾಗವಹಿಸಬೇಕಿದೆ.

    ಕಚೇರಿ ಸಮಯಗಳಲ್ಲಿ ಬದಲಾವಣೆ:

    ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಶಿಫ್ಟ್ ಸಮಯವನ್ನು ಹಂಚಿಕೆ ಮಾಡುವುದು.ಮೆಟ್ರೋ ಪ್ರೋತ್ಸಾಹ: ಸಬ್ಸಿಡಿ ದರದಲ್ಲಿ ಮೆಟ್ರೋ ಪಾಸ್‌ಗಳನ್ನು ಒದಗಿಸುವುದು.

    ಆರೋಗ್ಯ ತಪಾಸಣೆ: ಕಂಪನಿಗಳ ಕ್ಯಾಂಪಸ್‌ನಲ್ಲೇ ನಿಯಮಿತವಾಗಿ ಉಸಿರಾಟದ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವುದು.

    ಬೆಂಗಳೂರಿನ ಐಟಿ ಆರ್ಥಿಕತೆಯು ವಿಶ್ವದರ್ಜೆಯದ್ದಾಗಿದೆ, ಆದರೆ ನಮ್ಮ ದೈನಂದಿನ ಸಂಚಾರ ಮತ್ತು ಉದ್ಯೋಗಿಗಳ ಶ್ವಾಸಕೋಶದ ಆರೋಗ್ಯದ ನೀತಿಗಳು ಇನ್ನೂ ಸುಧಾರಿಸಬೇಕಿದೆ

  • ಆತ್ಮಸಾಕ್ಷಿಗೆ ಧಕ್ಕೆಯಾಗಿರುವುದರಿಂದ ರಾಜೀನಾಮೆ ನೀಡಿದ್ದೇನೆ : ರಾಮಲಿಂಗಾರೆಡ್ಡಿ

    ಆತ್ಮಸಾಕ್ಷಿಗೆ ಧಕ್ಕೆಯಾಗಿರುವುದರಿಂದ ರಾಜೀನಾಮೆ ನೀಡಿದ್ದೇನೆ : ರಾಮಲಿಂಗಾರೆಡ್ಡಿ

    ಬೆಂಗಳೂರು:ರಾಜ್ಯದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಡಿಕೆ ಶಿವಕುಮಾರ್ ತಮ್ಮ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಸರ್ಕಾರಕ್ಕೆ ಮೊದಲ ರಾಜಕೀಯ ಹಿನ್ನಡೆ ಎದುರಾಗಿದೆ.

    ತಮಗೆ ನಿರೀಕ್ಷಿಸಿದ್ದ ಬೆಂಗಳೂರು ಅಭಿವೃದ್ಧಿ ಸಂಬಂಧಿತ ಖಾತೆ ನೀಡದಿರುವುದರಿಂದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾತೆ ಹಂಚಿಕೆ ಕುರಿತು ಅಸಮಾಧಾನಗೊಂಡ ಅವರು ಇಂದು ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಯಾದ ತಕ್ಷಣವೇ ಪ್ರಮುಖ ಸಚಿವರೊಬ್ಬರು ರಾಜೀನಾಮೆ ಘೋಷಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಸರ್ಕಾರದ ಮುಂದಿನ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

  • ಬೆಂಗಳೂರಲ್ಲಿ ಕಸ ಆಯುವ ವ್ಯಕ್ತಿಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ಅರೆಸ್ಟ್!

    ಬೆಂಗಳೂರಲ್ಲಿ ಕಸ ಆಯುವ ವ್ಯಕ್ತಿಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ಅರೆಸ್ಟ್!

    ವೈಟ್ ಫೀಲ್ಡ್ : ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲಿದೆ ಎಂಬ ಆತಂಕವನ್ನು ಮೂಡಿಸುವಂತಹ ಘಟನೆಯೊಂದು ವರದಿಯಾಗಿದೆ. ಬೆಳ್ಳಂಬೆಳಗ್ಗೆಯೇ ಯುವತಿಯೊಬ್ಬಳ ಮೇಲೆ ಕಾಮುಕನೊಬ್ಬ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿರುವ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

    ಮೂಲಗಳ ಪ್ರಕಾರ, ಸಂತ್ರಸ್ತ ಯುವತಿ ಬೆಂಗಳೂರಿನ ವೈಟ್‌ಫೀಲ್ಡ್ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ (PG) ಒಂದರಲ್ಲಿ ವಾಸವಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಎಂದಿನಂತೆ ಘಟನೆ ನಡೆದ ದಿನದಂದು ಬೆಳಗಿನ ಜಾವ ವಿದ್ಯಾರ್ಥಿನಿ ಟೀ ಕುಡಿಯಲೆಂದು ಪಿಜಿಯಿಂದ ಹೊರಗೆ ಬಂದು, ಹತ್ತಿರದಲ್ಲೇ ಇದ್ದ ಟೀ ಅಂಗಡಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು.
    ಬೆಳಗಿನ ಜಾವ ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿದ್ದ ಸಮಯವನ್ನು ಹೊಂಚು ಹಾಕಿ ಕಾಯುತ್ತಿದ್ದ ಕಾಮುಕನೊಬ್ಬ, ಯುವತಿ ಒಂಟಿಯಾಗಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಏಕಾಏಕಿ ಆಕೆಯ ಮೇಲೆ ಮುಗಿಬಿದ್ದ ಆತ, ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ನಿರ್ಜನ ಪ್ರದೇಶದ ಕಡೆಗೆ ಒಯ್ದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ಹಠಾತ್ ದಾಳಿಯಿಂದ ಯುವತಿ ತೀವ್ರ ಗಾಬರಿಗೊಂಡಿದ್ದಾಳೆ.ಆದರೆ, ಕಂಗಾಲಾಗದೆ ಧೈರ್ಯ ಪ್ರದರ್ಶಿಸಿದ ವಿದ್ಯಾರ್ಥಿನಿ, ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ಜೋರಾಗಿ ಕಿರುಚಾಡಲು ಪ್ರಾರಂಭಿಸಿದ್ದಾಳೆ. ಯುವತಿಯ ಆಕ್ರಂದನ ಮತ್ತು ಕಿರುಚಾಟದ ಧ್ವನಿ ಕೇಳಿ ಎಚ್ಚೆತ್ತ ಸುತ್ತಮುತ್ತಲಿನ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದಿದ್ದಾರೆ. ಜನರು ಜಮಾಯಿಸುತ್ತಿರುವುದನ್ನು ಕಂಡು ಗಾಬರಿಗೊಂಡ ಕಾಮುಕ, ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಯುವತಿ ತಕ್ಷಣವೇ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ‘ಸೈಬುಲ್’ ಎಂದು ಗುರುತಿಸಲಾಗಿದ್ದು, ಈತ ರಸ್ತೆ ಬದಿಯಲ್ಲಿ ಕಸ ಆಯುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

    ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿ ಸೈಬುಲ್ ರಸ್ತೆ ಬದಿಯಲ್ಲಿ ಬಿದ್ದಿರುವ ಕಸದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಕಬ್ಬಿಣದ ವಸ್ತುಗಳನ್ನು ಆಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮುಂಜಾನೆ ವೇಳೆ ಒಂಟಿ ಯುವತಿ ರಸ್ತೆಯಲ್ಲಿ ಹೋಗುತ್ತಿರುವುದನ್ನು ಕಂಡು ವಿಕೃತ ಬುದ್ಧಿಯಿಂದ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ವೈಟ್‌ಫೀಲ್ಡ್ ಪೊಲೀಸರು ಆತನ ಹಿನ್ನೆಲೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

  • ಎನ್‌ಬಿಸಿ ನಿಯಮದಂತೆ ಅನುಮತಿಸಲಾದ ಎತ್ತರಕ್ಕಿಂತ ಹೆಚ್ಚಿನ ಎತ್ತರದ ಕಾಂಪೌಂಡ್ ಗೋಡೆ ಕಟ್ಟಡಗಳಿಗೆ ನೋಟಿಸ್ ನೀಡಿ – ಡಿ.ಎಸ್. ರಮೇಶ್

    ಎನ್‌ಬಿಸಿ ನಿಯಮದಂತೆ ಅನುಮತಿಸಲಾದ ಎತ್ತರಕ್ಕಿಂತ ಹೆಚ್ಚಿನ ಎತ್ತರದ ಕಾಂಪೌಂಡ್ ಗೋಡೆ ಕಟ್ಟಡಗಳಿಗೆ ನೋಟಿಸ್ ನೀಡಿ – ಡಿ.ಎಸ್. ರಮೇಶ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು  ವಿವಿಧ ಅಭಿವೃದ್ಧಿ  ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಂಜಿನಿಯರಿಂಗ್ ವಿಭಾಗದ  ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು. ಸಭೆಯಲ್ಲಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಂಡಿರುವ ಸಮಗ್ರ ರಸ್ತೆ ಅಭಿವೃದ್ಧಿ, ಮಳೆನೀರು ಕಾಲುವೆ ಹೂಳೆತ್ತುವುದು, ಜಂಕ್ಷನ್ ಅಭಿವೃದ್ಧಿ, ರಸ್ತೆ ಪುನಃಸ್ಥಾಪನೆ, ಕಟ್ಟಡ ಸುರಕ್ಷತೆ, ಸಕಾಲ ದೂರುಗಳ ವಿಲೇವಾರಿ ಇನ್ನಿತರೆ ಕಾಮಗಾರಿ ವಿಭಾಗಕ್ಕೆ ಸಂಬಂಧಿಸಿದ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದರು.

    *ಸಿಎಂಐಡಿಪಿ ಮತ್ತು ಎಸ್‌ಎಸ್‌ಐಪಿ ಕಾಮಗಾರಿಗಳ ಡಾಂಬರೀಕರಣ ಪೂರ್ಣಗೊಳಿಸಿ*

    ಸಿಎಂಐಡಿಪಿ (CMIDP) ಮತ್ತು ಎಸ್‌ಎಸ್‌ಐಪಿ (SSIP) ಯೋಜನೆಗಳಡಿ ಕೈಗೊಂಡಿರುವ ಸಮಗ್ರ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೈಕಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿರುವ ಪ್ಯಾಕೇಜುಗಳಲ್ಲಿನ ರಸ್ತೆಗಳನ್ನು ಜೂನ್  9ರೊಳಗೆ ಡಾಂಬರೀಕರಣ  ಮಾಡುವಂತೆ ಹಾಗೂ ಇನ್ನುಳಿದ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸುವಂತೆ  ಕಾರ್ಯಪಾಲಕ ಅಭಿಯಂತರರಿಗೆ ನಿರ್ದೇಶನ ನೀಡಿದರು.

    *ಸುರಕ್ಷಾ-75 ಯೋಜನೆಯಡಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ*

    ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿರುವ ಸುರಕ್ಷಾ-75 ಯೋಜನೆ ಅಡಿಯಲ್ಲಿ ಪ್ರಸ್ತಾಪಿತ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳ ವಿನ್ಯಾಸಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಿ, ಕಾಮಗಾರಿಗಳ ಅನುಷ್ಠಾನವನ್ನು ವಿಳಂಬವಿಲ್ಲದೆ ಆರಂಭಿಸುವಂತೆ ಮುಖ್ಯ ಅಭಿಯಂತರಿಗೆ ಸೂಚಿಸಿದರು.

    *ಎಎಂಸಿ ಮೂಲಕ ಮಳೆ ನೀರು ಕಾಲುವೆಗಳ ಸಮರ್ಪಕ ನಿರ್ವಹಣೆ*

    ಪಾಲಿಕೆ ವ್ಯಾಪ್ತಿಯ ಕಾಂಕ್ರೀಟ್ ಮತ್ತು ಕಚ್ಚಾ ಮಳೆ ನೀರು ಕಾಲುವೆಗಳ ಹೂಳು ತೆರವು ಕಾಮಗಾರಿಗಳನ್ನು ಎಎಂಸಿ ಮೂಲಕ ತುರ್ತಾಗಿ ಕೈಗೊಳ್ಳುವಂತೆ, ಕಾಲುವೆಗಳಲ್ಲಿ ಸಂಗ್ರಹವಾಗಿರುವ ಹೂಳು, ಕಸ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಕಳೆಗಿಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಕಾಲುವೆಗಳಲ್ಲಿ ಮಳೆ ನೀರು ಹರಿಯುವ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆಯುಕ್ತರು ನಿರ್ದೇಶನ ನೀಡಿದರು.

    *ಟ್ರಾಫಿಕ್ ಪೊಲೀಸ್ ಗುರುತಿಸಿರುವ ಚೋಕ್ ಪಾಯಿಂಟ್‌ಗಳಲ್ಲಿ ತುರ್ತು ಕ್ರಮ*

    ಮಳೆಗಾಲದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗುತ್ತಿರುವ ಪ್ರದೇಶಗಳನ್ನು ಸಂಚಾರ ಪೊಲೀಸರು ಗುರುತಿಸಿದ್ದು, ಅಂತಹ ಎಲ್ಲಾ ಚೋಕ್ ಪಾಯಿಂಟ್‌ಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡು ಆದ್ಯತೆ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ  ಅಧಿಕಾರಿಗಳಿಗೆ ಸೂಚಿಸಿದರು.

    *ಕತ್ತರಿಸಿರುವ ರಸ್ತೆ  ಪುನಃಸ್ಥಾಪನೆ ಕಾಮಗಾರಿ ಕೈಗೊಳ್ಳಿ*

    ವಿವಿಧ ನಾಗರಿಕ ಸೇವಾ ಪೂರೈಕೆದಾರ ಸಂಸ್ಥೆಗಳು ರಸ್ತೆ ಕಟ್ ಮಾಡಿರುವ ಸ್ಥಳಗಳನ್ನು ಪರಿಶೀಲಿಸಿ ಅಗತ್ಯವಿರುವ ಕಡೆ ರಸ್ತೆ ಪುನಃಸ್ಥಾಪನೆ ಕಾಮಗಾರಿಗಳನ್ನು  ನಗರ ಪಾಲಿಕೆಯಿಂದ ಕೈಗೊಳ್ಳುವಂತೆ ಸೂಚಿಸಿದರು. ಈ ಕಾಮಗಾರಿಗಳಿಗೆ ತಗಲುವ ವೆಚ್ಚವನ್ನು ಸಂಬಂಧಿತ ಸಂಸ್ಥೆಗಳಿಂದ ಬೇಡಿಕೆ ನೋಟಿಸ್ ಮೂಲಕ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    *ರಸ್ತೆಗುಂಡಿ ಮುಚ್ಚುವ ಕಾಮಗಾರಿಗೆ  ಕಾರ್ಯಯೋಜನೆ ರೂಪಿಸಿ*

    ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಉಂಟಾಗಿರುವ ಹಾಗೂ ಉಂಟಾಗಬಹುದಾದ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸುವಂತೆ ಸೂಚಿಸಿದ ಆಯುಕ್ತರು, ಅಗತ್ಯ ಟೆಂಡರ್ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ತಿಳಿಸಿದರು.

    *ಎನ್‌ಬಿಸಿ ನಿಯಮ ಉಲ್ಲಂಘಿಸಿರುವ ಕಾಂಪೌಂಡ್ ಗೋಡೆಗಳಿಗೆ ನೋಟಿಸ್ ನೀಡಿ*

    ರಾಷ್ಟ್ರೀಯ ಕಟ್ಟಡ ಸಂಹಿತೆ ನಿಯಮಗಳ ಪ್ರಕಾರ ಅನುಮತಿಸಲಾದ ಎತ್ತರಕ್ಕಿಂತ ಹೆಚ್ಚಿನ ಎತ್ತರದಲ್ಲಿ ಕಾಂಪೌಂಡ್ ಗೋಡೆಗಳನ್ನು ನಿರ್ಮಿಸಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳನ್ನು ಗುರುತಿಸಿ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    *ಶಿಥಿಲಾವಸ್ಥೆಯ ಕಟ್ಟಡಗಳ ವಿರುದ್ಧ ತಕ್ಷಣ ಕ್ರಮ*

    ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಅಪಾಯ ಉಂಟುಮಾಡುವ ಶಿಥಿಲಾವಸ್ಥೆಯ ಹಾಗೂ ಅಪಾಯಕಾರಿ ಕಟ್ಟಡಗಳನ್ನು ಗುರುತಿಸಿ ಅಗತ್ಯ  ಕ್ರಮಗಳನ್ನು ಕೈಗೊಂಡು ಅವುಗಳನ್ನು ತೆರವುಗೊಳಿಸುವಂತೆ ಆಯುಕ್ತರು ಸೂಚಿಸಿದರು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ವಾರದ ಪ್ರಗತಿ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದರು.

    *ಸಹಾಯ ವೇದಿಕೆಯ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ*

    ಸಹಾಯ ಆಪ್ ನಲ್ಲಿ ಸ್ವೀಕರಿಸಲಾಗಿರುವ ಎಲ್ಲಾ ಬಾಕಿ ದೂರುಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಿ ನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರಿಂದ ಬಂದಿರುವ ದೂರುಗಳಿಗೆ ಸ್ಪಂದನಾತ್ಮಕ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

    *ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಸಮಗ್ರ ಸ್ವಚ್ಛತಾ ಕಾರ್ಯಕ್ಕೆ ಕ್ರಿಯಾ ಯೋಜನೆ*

    ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಲಯಕ್ಕೆ ಒಂದರಂತೆ 2 ವಾರ್ಡ ಗಳಲ್ಲಿ ಎಲ್ಲಾ ಪೌರ ಕಾರ್ಮಿಕರು, ಗ್ಯಾಂಗ್ ಮ್ಯಾನ್ , ಆಟೋ ಟಿಪ್ಪರ್, ಸ್ವಚ್ಛತಾ ಕಾರ್ಮಿಕರನ್ನು ನೇಮಿಸಿಕೊಂಡು ಸಂಪೂರ್ಣ ವಾರ್ಡನ್ನು ಸ್ವಚ್ಛಗೊಳಿಸಲು, ಸರ್ಕಾರಿ ಕಟ್ಟಡಗಳನ್ನು ಬಣ್ಣ ಬಳಿಯುವ ಮೂಲಕ ಸಿಂಗರಿಸಲು ಒಟ್ಟಾರೆಯಾಗಿ ಸಮಗ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಕ್ರಿಯಾ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚಿಸಿದರು.

    *ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ*

    ಮಳೆಗಾಲದ ಪೂರ್ವಸಿದ್ಧತೆ ಹಾಗೂ ಸಾರ್ವಜನಿಕ ಮೂಲಸೌಕರ್ಯಗಳ ಸುಧಾರಣೆ ಸಂಬಂಧ ಕೈಗೊಳ್ಳಲಾಗುತ್ತಿರುವ ಎಲ್ಲಾ ಕಾಮಗಾರಿಗಳ ಪ್ರಗತಿಯನ್ನು ಹಿರಿಯ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ಮಾಡಿ, ಯಾವುದೇ ವಿಳಂಬವಾಗದಂತೆ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಮುಖ್ಯ ಅಭಿಯಂತರರು ಎಂ ಲೋಕೇಶ್, ಉಪ ಆಯುಕ್ತರಾದ ಶಶಿಕುಮಾರ್ ಮತ್ತು ಮುರಳೀಧರ, ಆರೋಗ್ಯಾಧಿಕಾರಿ ಡಾ. ಸವಿತಾ, ಎಲ್ಲಾ ವಿಭಾಗೀಯ ಕಾರ್ಯಪಾಲಕ ಅಭಿಯಂತರರು, ಆರೋಗ್ಯ ವೈದ್ಯಾಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

  • ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟ‌ರ್ ಅಪಘಾತದಲ್ಲಿ ಕೇರಳ ಮೂಲದ ನವವರ ಸಾವು, ವಧು ಪಾರು!

    ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟ‌ರ್ ಅಪಘಾತದಲ್ಲಿ ಕೇರಳ ಮೂಲದ ನವವರ ಸಾವು, ವಧು ಪಾರು!

    ಅಮೆರಿಕದ ಜಾರ್ಜಿಯಾದಲ್ಲಿ, ಕೇರಳ ಮೂಲದ ನವದಂಪತಿ ಜೆಸ್ನಿ ಮತ್ತು ಡೇವ್ ಫಿಜಿ ಅವರ ವಿವಾಹದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಮಳೆ ಮತ್ತು ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟ‌ರ್ ಪತನಗೊಂಡ ಪರಿಣಾಮ 25 ವರ್ಷದ ವರ ಡೇವ್ ಫಿಜಿ ಮತ್ತು ಹೆಲಿಕಾಪ್ಟ‌ರ್ ಪೈಲಟ್ ಮೃತಪಟ್ಟಿದ್ದಾರೆ.

    ತೀವ್ರ ಗಾಯಗಳಾಗಿದ್ದರೂ, ನವವಧು ಜೆಸ್ನಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ಐದು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಅವರನ್ನು ಹೊರತೆಗೆಯಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕೇರಳ ಮೂಲದ ಈ ದಂಪತಿ ವಿವಾಹವು ಡಾಸನ್‌ವಿಲ್ಲೆಯ ದಿ ರೆವೆರೆ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್‌ ಡಾಸನ್‌ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.
    ದಟ್ಟವಾದ ಕಾಡಿನ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಾಗಿತ್ತು. ಸುಮಾರು ಐದು ಗಂಟೆಗಳ ಕಾಲ ಅವಶೇಷಗಳು ಮತ್ತು ಬಿದ್ದ ಮರಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ನವವಧು ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಆಫ್‌‍-ರೋಡ್‌ ವಾಹನಗಳ ಸಹಾಯದಿಂದ ಅತ್ಯಂತ ಶ್ರಮಪಟ್ಟು ಹೊರತೆಗೆದಿದ್ದಾರೆ.

    ವೃತ್ತಿಯಲ್ಲಿ ನರ್ಸ್‌ ಆಗಿರುವ ಜೆಸ್ನಿಗೆ ದೇಹದಾದ್ಯಂತ ತೀವ್ರ ಗಾಯಗಳಾಗಿದ್ದರೂ, ಯಾವುದೇ ಮೂಳೆ ಮುರಿತ ಸಂಭವಿಸದೆ ಬದುಕುಳಿದಿರುವುದು ವೈದ್ಯಕೀಯ ಪವಾಡವೇ ಸರಿ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ತನಿಖೆ ಆರಂಭ ನಾಲ್ಕು ದಶಕಗಳಿಂದ ಅತ್ಯುತ್ತಮ ಸುರಕ್ಷತಾ ದಾಖಲೆ ಹೊಂದಿದ್ದ ಪ್ರೆಸ್ಟೀಜ್‌ ಹೆಲಿಕಾಪ್ಟರ್ಸ್‌ ಸಂಸ್ಥೆಗೆ ಸೇರಿದ ರಾಬಿನ್ಸನ್‌ 66 ಹೆಲಿಕಾಪ್ಟರ್‌ ಇದಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ಆರಂಭಿಸಿದೆ. ಇನ್ನು 30 ದಿನಗಳಲ್ಲಿ ಇದರ ಪ್ರಾಥಮಿಕ ವರದಿ ಹೊರಬರಲಿದೆ.

    ಈ ಭೀಕರ ಹೆಲಿಕಾಪ್ಟರ್‌ ಅಪಘಾತದಲ್ಲಿ ಡೆಲ್ಟಾ ಏರ್‌ಲೈನ್ಸ್ ನಲ್ಲಿ ಪೈಲಟ್‌ ಆಗಿದ್ದ ಡೇವ್‌ ಫಿಜಿ ಮೃತಪಟ್ಟಿದ್ದರೆ, ನವವಧು ಜೆಸ್ನಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕೇರಳ ಮೂಲದ ಈ ದಂಪತಿ ವಿವಾಹವು ಡಾಸನ್‌ವಿಲ್ಲೆಯ ದಿ ರೆವೆರೆ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್‌ ಡಾಸನ್‌ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.

  • ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು..!

    ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು..!


    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಇಂದು ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಯಿತು. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಸುಮಾರು 21 ಮಂದಿ ಸ್ವಾಮೀಜಿಗಳು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

    ಸ್ವಾಮೀಜಿಗಳ ದಂಡು, ರಾಜಕೀಯ ಚರ್ಚೆ: ಬೆಂಗಳೂರಿನ ಸತೀಶ್ ಜಾರಕಿಹೊಳಿ ಅವರ ಅಧಿಕೃತ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಬೋವಿ ಮಠ, ವಾಲ್ಮೀಕಿ ಪೀಠ, ಕುರುಬ ಮತ್ತು ಮಡಿವಾಳ ಸಮುದಾಯ ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳ 21 ಮಠಾಧೀಶರು, ಸಚಿವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಭೇಟಿಯು ಕೇವಲ ಸೌಜನ್ಯದ ಭೇಟಿಯಾಗಿರದೆ, ರಾಜ್ಯ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಕುರಿತಾದ ಗಂಭೀರ ಚರ್ಚೆಯಾಗಿತ್ತು ಎಂದು ತಿಳಿದುಬಂದಿದೆ.

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಗ್ರಹ: ಮೂಲಗಳ ಪ್ರಕಾರ, ಈ ಬಾರಿಯ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದ ಪ್ರಭಾವಿ ನಾಯಕರಿಗೆ ನೀಡಬೇಕು ಎಂಬ ಒಕ್ಕೊರಲ ಒತ್ತಾಯವನ್ನು ಸ್ವಾಮೀಜಿಗಳು ಸಚಿವರ ಮುಂದಿಟ್ಟಿದ್ದಾರೆ. ಅದರಲ್ಲೂ ಸತೀಶ್ ಜಾರಕಿಹೊಳಿ ಅವರು ಈ ಸ್ಥಾನಕ್ಕೆ ಅರ್ಹರಾಗಿದ್ದು, ಅವರಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಬೆಂಬಲ ನೀಡುವುದಾಗಿ ಸ್ವಾಮೀಜಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಸಕರಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪ್ರಮುಖ ಖಾತೆಗಳನ್ನು ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.

    ಸಿದ್ದರಾಮಯ್ಯ ಭೇಟಿಗೆ ತೆರಳಿದ ಮಠಾಧೀಶರು: ಸತೀಶ್ ಜಾರಕಿಹೊಳಿ ಅವರೊಂದಿಗೆ ಪ್ರಾಥಮಿಕ ಚರ್ಚೆ ಮುಗಿಸಿದ ಸ್ವಾಮೀಜಿಗಳ ತಂಡ, ಅಲ್ಲಿಂದ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಲು ತೆರಳಿದೆ.

    ಸಿದ್ದರಾಮಯ್ಯ ಅವರ ಮುಂದೆಯೂ ಇದೇ ಬೇಡಿಕೆಗಳನ್ನು ಮಂಡಿಸಲು ಸ್ವಾಮೀಜಿಗಳು ಸಜ್ಜಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಆಂತರಿಕ ರಾಜಕೀಯದಲ್ಲಿ ಸಂಚಲನ ಮೂಡಿದ್ದು, ಕೆಪಿಸಿಸಿ ಅಧ್ಯಕ್ಷ ಪಟ್ಟದ ರೇಸ್ ಮತ್ತಷ್ಟು ಕುತೂಹಲ ಕೆರಳಿಸಿದೆ. ಒಟ್ಟಾರೆಯಾಗಿ, ಸತೀಶ್ ಜಾರಕಿಹೊಳಿ ಅವರ ಹಿಂದೆ ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧೀಶರು ಒಗ್ಗಟ್ಟಾಗಿ ನಿಂತಿರುವುದು, ಪಕ್ಷದ ಹೈಕಮಾಂಡ್‌ಗೆ ಒಂದು ಬಲವಾದ ಸಂದೇಶ ರವಾನಿಸಿದಂತಾಗಿದೆ.

  • ಮೆಡಿಕವರ್ ಆಸ್ಪತ್ರೆಯಲ್ಲಿ 61 ವಯಸ್ಸಿನ ವ್ಯಕ್ತಿಗೆ ಯಶಸ್ವಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಶಸ್ತ್ರಚಿಕಿತ್ಸೆ

    ಮೆಡಿಕವರ್ ಆಸ್ಪತ್ರೆಯಲ್ಲಿ 61 ವಯಸ್ಸಿನ ವ್ಯಕ್ತಿಗೆ ಯಶಸ್ವಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಶಸ್ತ್ರಚಿಕಿತ್ಸೆ

    ಬೆಂಗಳೂರು: ಹಲವು ತಿಂಗಳುಗಳಿಂದ ಎಡಗೈ ನೋವು ಹಾಗೂ ಜಂಜಳಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ 61 ವರ್ಷದ ಶ್ರೀ ಗೋಪಾಲ್ ರೆಡ್ಡಿ ಅವರಿಗೆ ಮೆಡಿಕವರ್ ಆಸ್ಪತ್ರೆಯ ನ್ಯೂರೋಸರ್ಜರಿ ತಜ್ಞರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಬದುಕು ನೀಡಿದ್ದಾರೆ.

    ರೋಗಿ ಎಡಗೈ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಗತ್ಯ ವೈದ್ಯಕೀಯ ಪರೀಕ್ಷೆಗಳು ಹಾಗೂ ಸ್ಕ್ಯಾನಿಂಗ್ ಬಳಿಕ, ಅವರ ಕುತ್ತಿಗೆ ಮತ್ತು ಮೇಲ್ಭಾಗದ ಮೆದುಳುರಜ್ಜುವಿನ (C6-D1) ಭಾಗದಲ್ಲಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಈ ಹಿನ್ನೆಲೆಯಲ್ಲಿ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸಲಹೆ ನೀಡಿ ವಾಸ್ತವ ವಿಚಾರ ವಿವರಿಸಿದರು.

    ನಂತರ ಮೆಡಿಕವರ್ ಆಸ್ಪತ್ರೆಯ ಹಿರಿಯ ನ್ಯೂರೋಸರ್ಜನ್ ಮತ್ತು ಸ್ಪೈನ್ ಸರ್ಜನ್ ಡಾ. ಆನಂದ್ ವಿಕೆ ಅವರ ನೇತೃತ್ವದಲ್ಲಿ ಡಾ ಯಶವಂತ್ ಜೊತೆಗೂಡಿ “C6-D1 ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಎಕ್ಸಿಷನ್” ಎಂಬ ಸೂಕ್ಷ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು.

    ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಅಗತ್ಯ ಚಿಕಿತ್ಸೆ, ಆಂಟಿಬಯೋಟಿಕ್ಸ್ ಮತ್ತು ಬೆಂಬಲಕಾರಿ ಔಷಧೋಪಚಾರ ನೀಡಲಾಗಿದ್ದು, ಅವರ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂದಿದೆ. ಪ್ರಸ್ತುತ ರೋಗಿ ಸ್ಥಿರ ಆರೋಗ್ಯ ಸ್ಥಿತಿಯಲ್ಲಿದ್ದು, ವೈದ್ಯರು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

    ಈ ಕುರಿತು ಮಾತನಾಡಿದ ಡಾ. ಆನಂದ್ ವಿಕೆ, “ಸ್ಪೈನಲ್ ಕಾರ್ಡ್ ಟ್ಯೂಮರ್‌ಗಳು ಆರಂಭಿಕ ಹಂತದಲ್ಲೇ ಪತ್ತೆಯಾದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಾಧ್ಯ. ಕೈಗಳಲ್ಲಿ ನೋವು, ಜಂಜಳಿಕೆ, ದುರ್ಬಲತೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ” ಎಂದು ತಿಳಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ರಿಜನಲ್ ಮುಖ್ಯಸ್ಥರಾದ ಕೆ ಸಿದ್ದಾರೆಡ್ಡಿ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿ ಜಿ ಕೃಷ್ಣಮೂರ್ತಿಯವರು ಸಂತಸ ವ್ಯಕ್ತಪಡಿಸಿದರು

  • ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು….!

    ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು….!

    ಬಾಗಲಕೋಟೆ : ಹೆತ್ತ ತಾಯಿಯ ಮಮತೆ ಹಾಗೂ ಮಗಳ ಜನ್ಮಜನ್ಮಾಂತರದ ಅನುಬಂಧಕ್ಕೆ ಸಾಕ್ಷಿಯಾದ ಹೃದಯ ವಿದ್ರಾವಕ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಸಂಭವಿಸಿದೆ. ನೂರು ವಸಂತಗಳನ್ನು ಕಂಡು ಇಹಲೋಕ ತ್ಯಜಿಸಿದ ಶತಾಯುಷಿ ತಾಯಿಯ ಸಾವಿನ ಆಘಾತಕ್ಕೆ ಒಳಗಾಗಿ 76 ವರ್ಷದ ವೃದ್ಧ ಮಗಳು ಕೂಡ ಕೊನೆಯುಸಿರೆಳೆದ ಕರುಣಾಜನಕ ಘಟನೆ ತೋದಲಬಾಗಿ ಗ್ರಾಮದಲ್ಲಿ ನಡೆದಿದೆ..

    ಅಥಣಿ ತಾಲೂಕಿನ ಪಾರ್ಥನಹಳ್ಳಿಯ ನಿವಾಸಿಯಾದ ಗಂಗವ್ವ ಚನ್ನಬಸಪ್ಪ ಪಾರ್ಥನಹಳ್ಳಿ (101 ವರ್ಷ) ಎಂಬ ಶತಾಯುಷಿ ಮಾತೆ ಕಳೆದ ಶುಕ್ರವಾರ ವಯೋಸಹಜ ಕಾರಣಗಳಿಂದಾಗಿ ನಿಧನರಾಗಿದ್ದರು. ತಾಯಿಯ ಸಾವಿನ ವಾರ್ತೆ ತಿಳಿಯುತ್ತಿದ್ದಂತೆಯೇ, ಅಥಣಿಯ ಪಾರ್ಥನಹಳ್ಳಿಯಲ್ಲೇ ವಾಸವಿದ್ದ ಅವರ ಮಗಳು ಹಣಮವ್ವ ರಾಮು ಮುಜ ಗೋಣಿ (76 ವರ್ಷ) ತೀವ್ರ ಆಘಾತಕ್ಕೆ ಒಳಗಾಗಿದ್ದರು.

    ತಮ್ಮ ಹೆತ್ತ ತಾಯಿಯ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಣಮವ್ವ ಅವರು ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮಕ್ಕೆ ಧಾವಿಸಿದ್ದರು. ಆದರೆ ಅಲ್ಲಿಗೆ ತಲುಪಿದಾಗ ತಾಯಿಯ ಪಾರ್ಥಿವ ಶರೀರವನ್ನು ಕಂಡು ಅವರ ದುಃಖ ಆಣೆಕಟ್ಟೆ ಒಡೆದಂತೆ ಉಕ್ಕಿ ಹರಿದಿದೆ. ತೀವ್ರ ಮಾನಸಿಕ ಆಘಾತ ಹಾಗೂ ಶೋಕವನ್ನು ತಡೆಯಲಾಗದೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಸುನೀಗಿದ ಹಣಮವ್ವ ಅವರ ಈ ಸಾವು ನೆರೆದಿದ್ದ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

  • ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ 6 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು.

    ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ 6 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು.

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಘನತ್ಯಾಜ್ಯವನ್ನು ಸಾಗಿಸಿ ಖಾಲಿ ಜಾಗಗಳಲ್ಲಿ ಸುರಿಯುತ್ತಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 6 ವಾಹನಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ತಿಳಿಸಿದರು.

    ಪ್ರಕರಣದ ಹಿನ್ನೆಲೆ

    ಪೂರ್ವ ನಗರ ಪಾಲಿಕೆಯ ವಿವಿಧ ಪ್ರದೇಶಗಳ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿಂದ ಬಲ್ಕ್ ವೇಸ್ಟ್ ಸಂಗ್ರಹಿಸಿ ವಿಲೇವಾರಿ ಮಾಡಲು ಇಕೋ ಸ್ಪೀಯರ್ ವೆಸ್ಟ್ ಸೆಲ್ಯೂಷನ್ ಕಂಪನಿಗೆ ಕಾರ್ಯದೇಶ ನೀಡಿದ್ದು, ನೌಶಾದ್ ಮತ್ತು ಇತರರ ತಂಡ ಕಂಪನಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ವಿವಿಧ ಪ್ರದೇಶಗಳಿಂದ ಅನಧಿಕೃತವಾಗಿ ಬಲ್ಕ್ ತ್ಯಾಜ್ಯವನ್ನು ಸಂಗ್ರಹಿಸಿ ಕಾಡುಗೋಡಿ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ಸಮೀಪದ ಸರ್ವೇ ನಂ.130, 131 ಹಾಗೂ 142ಕ್ಕೆ ಹೊಂದಿಕೊಂಡಿರುವ ದಕ್ಷಿಣ ಪಿನಾಕಿನಿ ನದಿಗೆ ಅಕ್ರಮವಾಗಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾರ್ಯಾಚರಣೆ ಕೈಗೊಂಡಿರುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.

    ಕಾರ್ಯಾಚರಣೆಯಲ್ಲಿ 6-ವಾಹನಗಳು ವಶಕ್ಕೆ

    ಸಾರ್ವಜನಿಕ ದೂರಿನ ಆಧಾರದ ಮೇಲೆ ಇದೇ ಮೇ 29ರಂದು ನಗರ ಪಾಲಿಕೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯಲು ಸ್ಥಳಕ್ಕೆ ಆಗಮಿಸಿದ್ದ ತ್ಯಾಜ್ಯ ತುಂಬಿರುವ 5 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು, ವಾಹನ ಚಾಲಕರು ಸ್ಥಳದಿಂದ ಪರಾರಿಯಾಗಿರುತ್ತಾರೆ ಹಾಗೂ ಇದೇ ಸ್ಥಳದಲ್ಲಿ ಮೇ 30ರಂದು ಮತ್ತೊಂದು ವಾಹನವನ್ನು ವಶಕ್ಕೆ ಪಡೆದುಕೊಂಡಿರಲಾಗಿರುತ್ತದೆ.

    ವಶಪಡಿಸಿಕೊಂಡ ವಾಹನಗಳ ಸಂಖ್ಯೆ

    ನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ವಾಹನಗಳ ಸಂಖ್ಯೆ;
    * KA-07-A-398
    * KA-52-B-8275
    * KA-53-A-4649
    * AP-39-VB-6604
    * KA-18-C-6915
    * KA-40-A-4837

    *ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು*

    ನಗರ ಪಾಲಿಕೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಿಂದ ನೀಡಲಾದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ವಾಹನಗಳ ಮಾಲೀಕರು, ಚಾಲಕರು, ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ತ್ಯಾಜ್ಯ ಸುರಿಯಲು ಅವಕಾಶ ನೀಡಿದ ಭೂ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಕಾಡುಗೋಡಿ ಆರಕ್ಷಕ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

    ಅಕ್ರಮ ತ್ಯಾಜ್ಯ ವಿಲೇವಾರಿಯ ವಿರುದ್ಧ ಶೂನ್ಯ ಸಹಿಷ್ಣುತೆ

    ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರಾದ ಡಿ.ಎಸ್. ರಮೇಶ್ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಧಕ್ಕೆಯುಂಟುಮಾಡುವ ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ತ್ಯಾಜ್ಯವನ್ನು ಅನಧಿಕೃತ ಸ್ಥಳಗಳಲ್ಲಿ ಸುರಿಯುವುದು, ಖಾಲಿ ಜಾಗಗಳನ್ನು ಕಸದ ತೊಟ್ಟಿಗಳಾಗಿ ಬಳಸುವುದು ಹಾಗೂ ಅಕ್ರಮ ಸಾಗಣೆ ನಡೆಸುವವರ ವಿರುದ್ಧ ದಂಡಾತ್ಮಕ ಹಾಗೂ ಕ್ರಿಮಿನಲ್ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

    ಸಾರ್ವಜನಿಕರ ಸಹಕಾರಕ್ಕೆ ಮನವಿ

    ನಗರವನ್ನು ಸ್ವಚ್ಛ ಹಾಗೂ ಆರೋಗ್ಯಯುತವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ ಆಯುಕ್ತರು, ಅಕ್ರಮವಾಗಿ ತ್ಯಾಜ್ಯ ಸುರಿಯುವ ವಾಹನಗಳು ಅಥವಾ ವ್ಯಕ್ತಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ನಗರ ಪಾಲಿಕೆಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

    ಕಾರ್ಯಾಚರಣೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಸಹಾಯ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಸೂಪರ್ವೈಸರ್, ವಾರ್ಡ್ ಮಾರ್ಷಲ್ , ಆರೋಗ್ಯ ಪರಿವೀಕ್ಷಕರು ಹಾಗೂ ಇನ್ನಿತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.