Category: ಬೆಂಗಳೂರು ನಗರ

  • ವಿಜೃಂಭಣೆಯಿಂದ ಜರುಗಿದ ಪಂಚಮುಖಿ ಶ್ರೀ ಗಾಯತ್ರಿ ದೇವಿಯ ಅದ್ದೂರಿ ಬ್ರಹ್ಮರಥೋತ್ಸವ.

    ವಿಜೃಂಭಣೆಯಿಂದ ಜರುಗಿದ ಪಂಚಮುಖಿ ಶ್ರೀ ಗಾಯತ್ರಿ ದೇವಿಯ ಅದ್ದೂರಿ ಬ್ರಹ್ಮರಥೋತ್ಸವ.

    ಕೆ.ಆರ್.ಪುರ: ಬಸವನಪುರದ ಗಾಯತ್ರಿ ಬಡಾವಣೆಯ ಶ್ರೀ
    ಗಾಯತ್ರಿ ಮಹಾ ಸಂಸ್ಥಾನ ದೇವಪುರಿದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

    ಗಾಯತ್ರಿ ದೇವಿಯ 32ನೇ ವರ್ಷದ ಬ್ರಹ್ಮರಥೋತ್ಸವವು ಪ್ರತಿವರ್ಷದಂತೆ ಈ ವರ್ಷವು ಅತ್ಯಂತ ವೈಭವದಿಂದ ನಡೆಯಿತು. 11ದಿನಗಳು ನಡೆಯುವ ಈ ಉತ್ಸವದಲ್ಲಿ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಹೋಮ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12.30ಕ್ಕೆ ಭಕ್ತರ ಘೋಷಣೆಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಆಗಮಿಸಿದ್ದ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿ ಭಾವ ಪರವಶರಾದರಾಗಿದ್ದಾರೆ.

    ನೂರಾರು ಭಕ್ತರು ಪಂಚಮುಖಿ ಶ್ರೀ ಗಾಯತ್ರಿ ದೇವಿ ಅಮ್ಮನವರ ದರ್ಶನ ಪಡೆದರು. ರಥೋತ್ಸವದಲ್ಲಿ ಡೊಳ್ಳು ಕುಣಿತ, ವೀರಗಾಸೆ ನೃತ್ಯವು ಬ್ರಹ್ಮ ರಥೋತ್ಸವಕ್ಕೆ ಮೆರಗು ನೀಡಿದವು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ಇಡೇರಿಸಿಕೊಂಡರು.

    ಬಸವನಪುರ,ದೇವಸಂದ್ರ,ಕೆ.ಆರ್.ಪುರ,ಕೃಷ್ಣನಗರ,ಅಯ್ಯಪ್ಪ
    ನಗರ,ಟಿ.ಸಿ.ಪಾಳ್ಯ,ರಾಮಮೂರ್ತಿನಗರ,ಮೇಡಹಳ್ಳಿ,ಹೊರಮಾವು,ವಿಜ್ಞಾನನಗರ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

    ರಥೋತ್ಸವದ ಸಮಯದಲ್ಲಿ ಬಿಸಿಲಿನ ಬೇಗೆಯನ್ನ ನಿವಾರಿಸಲು ರಸ್ತೆಯುದ್ದಕ್ಕೂ ಪಾನಕ ಮಜ್ಜಿಗೆ ನೀಡಲಾಯಿತು.ದೇವಸ್ಥಾನದ ವತಿಯಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಲಾಗಿತ್ತು,ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಬ್ರಹ್ಮರಥೋತ್ಸದಲ್ಲಿ ಭಾಗವಹಿಸಿ, ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು, ಕಾಯಿ, ಜವನ ಅರ್ಪಿಸಿದರು ಎಂದು ಪ್ರಧಾನ ಆರ್ಚಕ ಸುಂದರ ಗಣಪಾಟಿ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್,
    ಡಿ.ಕೆ.ಮೋಹನ್, ಮುಖಂಡರಾದ ಶಿವಕುಮಾರ್,ಉದಯ್ ಕುಮಾರ್, ಕೇಬರ್ ರಾಜು,ಜಾನಿ, ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿದ್ದರು.

  • ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳ ಆಗಮನ.

    ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳ ಆಗಮನ.

    ಬನ್ನೇರುಘಟ್ಟ: ದಕ್ಷಿಣ ಆಫ್ರಿಕಾದಿಂದ‌ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ನಾಲ್ಕು ಅಪರೂಪದ ಚೀತಾಗಳನ್ನ ತರೆಸುವಲ್ಲಿ ಅಧಿಕಾರಿ ವರ್ಗ ಯಶಸ್ವಿಯಾಗಿದೆ. ಆಫ್ರಿಕಾದಲ್ಲಿನ ಇಂಡುನಾ ಪ್ರೈಮೇಟ್ ಮತ್ತು ಪ್ಯಾರೆಟ್ ಪಾರ್ಕಿನಿಂದ ಎರಡು ಗಂಡು – ಎರಡು ಹೆಣ್ಣು ಚೀತಾಗಳನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮುಖಾಂತರ ಕರೆಸಲಾಗಿದೆ.

    ಪ್ರಾಣಿಗಳ ಅನುವಂಶಿಕ ವೈವಿಧ್ಯತೆ ಹೆಚ್ಚಳಕ್ಕೆ, ಪ್ರವಾಸಿಗರಲ್ಲಿ ಪ್ರಾಣಿಗಳ ಜಾಗೃತಿ ಮೂಡಿಸಿ ಮತ್ತು ಸಂಶೋಧನೆಯನ್ನು ಕೈಗೊಳ್ಳುವ ಉದ್ದೇಶದಿಂದ ಈ ಚೀತಾಗಳನ್ನು ತರಿಸಲಾಗಿದೆ ಎಂದು ನಂಬಲಾಗಿದೆ.
    4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಶುಕ್ರವಾರ ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ಆಗಮಿಸಿರುವ ಈ ವಿದೇಶೀ ಅತಿಥಿಗಳನ್ನು ಬರಮಾಡಿಕೊಂಡರು.

    ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿರುವ ಚೀತಾಗಳಿಗೆ ವಾತಾವರಣ, ಹವಾಮಾನ ಬದಲಾವಣೆಯಾಗುವ ವನ್ಯಜೀವಿಗಳಿಗೆ ಸೋಂಕು ಇದೆಯೇ ಎಂದು ಪರಿಶೀಲಿಸಲು ಕ್ವಾರಂಟೈನಲ್ಲಿಡಬೇಕಿದ್ದು, 30ದಿನಗಳ ಕಾಲ ನಿಗಧಿತ ಆಹಾರ ನೀಡಬೇಕೆಂದು ಅರಣ್ಯ ಸಚಿವರು ಪಶುವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
    ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿಯೇ ಸಿವಂಗಿ ಎಂದು ಕರೆಸಿಕೊಳ್ಳುವ ಚೀತಾಗಳಿದ್ದವು. ಆದರೆ ರಾಜ್ಯದ ಕಾಡಿನಲ್ಲಿ ಇವು ನಾಮಾವಶೇಷ ಆಗಿವೆ. ಹೀಗಾಗಿ ಮೃಗಾಲಯಗಳಲ್ಲಾದರೂ ಇವುಗಳನ್ನು ನೋಡಲು ಅವಕಾಶ ಆಗಬೇಕು. ಈ ನಿಟ್ಟಿನಲ್ಲಿ ಅವುಗಳ ಸುರಕ್ಷತೆಗೆ ಆದ್ಯ ಗಮನ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಸುನೀಲ್ ಪನ್ವಾರ್ ರಿಗೆ ಸೂಚನೆ ನೀಡಿದರು..

    ಪ್ರಾಣಿ ವಿನಿಮಯದ ಮೊದಲು ಪಶು ಸಂಗೋಪನೆ ಇಲಾಖೆಯ ಮಾರ್ಗಸೂಚಿಗಳಂತೆ ದಕ್ಷಿಣ ಆಫ್ರಿಕಾದಲ್ಲಿ ಚೀತಾಗಳನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿರುತ್ತದೆ. ಜೊತೆಗೆ ಪ್ರಾಣಿಗಳನ್ನು ಆಮದು ಮಾಡುವ ಮೊದಲು ಪ್ರಾಣಿ ಕ್ವಾರಂಟೈನ್ ಸೇವೆಗಳಿಂದ (AQCS, Bangalore) ಮುಂಗಡ NoC ಪಡೆಯಲಾಗಿದೆ. ಆಗಮನದ ನಂತರ ಪ್ರಾಣಿಗಳನ್ನು ನಿಗದಿತ ಕ್ವಾರಂಟೈನ್ ಸೌಲಭ್ಯದಲ್ಲಿ ಇಡಲಾಗಿದೆ ಹಾಗೂ ಆರೋಗ್ಯ ತಪಾಸಣೆಗಳ ನಂತರ ಸಾರ್ವಜನಿಕರ ವೀಕ್ಷಣೆಗೆ ಮೃಗಾಲಯಕ್ಕೆ ಸ್ಥಳಾಂತರಿಸಲಾಗುತ್ತದೆ.

    ದಕ್ಷಿಣ ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರೆಟ್ ಪಾರ್ಕಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಕೃತಜ್ಞತೆಯನ್ನು ಸಲ್ಲಿಸಿದೆ..

  • ಜಯನಗರದಲ್ಲಿ ಪರಮ್‌ ‘ವಿಹಾರ’ ಸಾಂಸ್ಕೃತಿಕ ಹಬ್ಬ

    ಜಯನಗರದಲ್ಲಿ ಪರಮ್‌ ‘ವಿಹಾರ’ ಸಾಂಸ್ಕೃತಿಕ ಹಬ್ಬ

    • ನೃತ್ಯ-ಸಂಗೀತದ ಅಪೂರ್ವ ಸಂಗಮ
    • ಪರಮ್‌ ಫೌಂಡೇಶನ್‌ನಿಂದ ಕಾರ್ಯಕ್ರಮ ಆಯೋಜನೆ
    • ಕುಮಾರಿ ಚಿನ್ಮಯಿ ನಾಗೇಂದ್ರ, ಕುಮಾರಿ ಮಹತಿ ನಾಗೇಂದ್ರರಿಂದ ಗಾಯನ ಸುಧೆ
    • ವಿದ್ಯಾರ್ಥಿಗಳಿಂದ ನಯನಮನೋಹರ ಭರತನಾಟ್ಯ ಪ್ರದರ್ಶನ

    ಬೆಂಗಳೂರು: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಕಲಾವಿದರ ಮೂಲಕ ಪಸರಿಸುವ ನಿಟ್ಟಿನಲ್ಲಿ ‘ಪರಮ್ ಫೌಂಡೇಶನ್’ ಆಯೋಜಿಸಿರುವ ‘ವಿಹಾರ-11’ ಸಾಂಸ್ಕೃತಿಕ ಕಾರ್ಯಕ್ರಮವು ಏಪ್ರಿಲ್ 19ರಂದು ಜಯನಗರದಲ್ಲಿ ಜರುಗಲಿದೆ.

    ನಗರದ ಜಯನಗರದಲ್ಲಿರುವ ಸನಾತನ ಕಲಾಕ್ಷೇತ್ರದಲ್ಲಿ ಅಂದು ಸಂಜೆ 6 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಉಚಿತ ಪ್ರವೇಶವಿರುತ್ತದೆ. ಈ ಬಾರಿಯ 11ನೇ ಆವೃತ್ತಿಯಲ್ಲಿ ಸಂಗೀತ ಮತ್ತು ನೃತ್ಯ ಲೋಕದ ಉದಯೋನ್ಮುಖ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

    ಕರ್ನಾಟಕ ಶಾಸ್ತ್ರೀಯ ಸಂಗೀತ: ಅವಳಿ ಸಹೋದರಿಯರಾದ ಕುಮಾರಿ ಚಿನ್ಮಯಿ ನಾಗೇಂದ್ರ ಮತ್ತು ಕುಮಾರಿ ಮಹತಿ ನಾಗೇಂದ್ರ ಅವರಿಂದ ಗಾಯನ ಸುಧೆ ಹರಿಯಲಿದೆ. ಇವರಿಗೆ ವಿದ್ವಾನ್ ವೆಂಕಟೇಶ್ ಜೋಸ್ಯರ್ (ಪಿಟೀಲು) ಹಾಗೂ ವಿದ್ವಾನ್ ಎ.ಎಸ್.ಎನ್. ಸ್ವಾಮಿ (ಮೃದಂಗ) ಸಾಥ್ ನೀಡಲಿದ್ದಾರೆ.

    ಭರತನಾಟ್ಯ ವೈಭವ: ಗುರು ವಿದ್ವಾನ್ ಮಂಜುಶ್ರೀ ಸಂತೋಷ್ ಅವರ ಮಾರ್ಗದರ್ಶನದ ‘ನಾಟ್ಯ ಸಿಂಚನ ಸಂಗೀತ ಮತ್ತು ನೃತ್ಯ ಶಾಲೆ’ಯ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ ಪ್ರದರ್ಶನವೂ ಈ ವೇಳೆ ನಡೆಯಲಿದೆ. ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ಈ ಅಪರೂಪದ ಸಂಜೆಗಾಗಿ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.: 9035034725 ಸಂಖ್ಯೆಯನ್ನು ಸಂಪರ್ಕಿಸಬಹುದು.

  • ಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

    ಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

    ಬೆಂಗಳೂರು: ಪಿಯುಸಿ ಓದುತ್ತಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾಗಿ ಎರಡೂವರೆ ತಿಂಗಳು ಕಳೆದರೂ ಯಾವುದೇ ಸುಳಿವು ಸಿಗದೆ ಪೋಷಕರು ಕಂಗಾಲಾದ ಘಟನೆಯೊಂದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ಸೆಕೆಂಡ್ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ನಾಪತ್ತೆಯಾದ ಅಪ್ರಾಪ್ತೆಯರು. ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ನಾಪತ್ತೆಯಾದ ಈ ಇಬ್ಬರು ಬಾಲಕಿಯರಲ್ಲಿ ಮೊಬೈಲ್ ಇರಲಿಲ್ಲ. ಎಟಿಎಂ ಕಾರ್ಡ್ ಗಳನ್ನು ಬಳಸುತ್ತಿಲ್ಲ. ಯಾವುದೇ ಸ್ನೇಹಿತರ ಅಥವಾ ಕುಟುಂಬಸ್ಥರ ಮನೆಗೂ ಹೋಗಿಲ್ಲ. ಮನೆಯಿಂದ ಹೋಗುವಾಗ ಇಬ್ಬರು ಕೇವಲ 3 ಸಾವಿರ ರೂ ತೆಗೆದುಕೊಂಡು ಹೋಗಿದ್ದಾರೆ. ಅದೇ ಹಣದಲ್ಲಿ ಸುಮಾರು 75 ದಿನ ಹೀಗೇ ಇರಲು ಹೇಗೆ ಸಾಧ್ಯ ಎಂಬ ಯಕ್ಷ ಪ್ರಶ್ನೆ ಕುಟುಂಬಸ್ಥರದ್ದು.

    ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದ್ರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿಯೇ ಬಾಲಕಿಯರ ಎಲ್ಲಾ ಇಷ್ಟದ ಜಾಗಗಳಲ್ಲಿ ಪೊಲೀಸರು ಪತ್ತೆ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿನಿಯರು ಮನೆ ಬಿಟ್ಟು ಹೋಗೋದಕ್ಕೆ ಕೂಡಾ ನಿಖರವಾದ ಕಾರಣ ತಿಳಿದುಬಂದಿಲ್ಲ.

    ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಇರೋದ್ರಿಂದ ಇವರು ಕೈಯಲ್ಲಿ ಆಧಾರ್ ಕಾರ್ಡ್‌ ಇದ್ದು, ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಜನವರಿ 31 ರಂದು ಇಬ್ಬರು ಕೂಡಾ ಮನೆ ಬಿಟ್ಟು ಹೋಗಿದ್ದು, ಬರೋಬ್ಬರಿ ಎರಡೂವರೆ ತಿಂಗಳುಗಳೇ ಕಳೆದಿವೆ. ಹೀಗಾಗಿ ಯುವತಿಯರ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರನ್ನು ಹುಡುಕಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು ಈ ಗಡುವು ಮುಗಿದು ಒಂದು ತಿಂಗಳೇ ಕಳೆದಿದೆ. ಆದರೂ ಈ ಬಾಲಕಿಯರ ಸುಳಿವು ಪತ್ತೆಯಾಗದೇ ಇರೋದು ಪೋಷಕರನ್ನು ಆತಂಕಕ್ಕೆ ತಳ್ಳಿದೆ.

  • ಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

    ಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

    ಮಹದೇವಪುರ: ಕ್ಷೇತ್ರದಲ್ಲಿ ರಸ್ತೆ,ಚರಂಡಿ ಮೂಲಭೂತ ಸೌಕರ್ಯಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ಹೇಳಿದರು

    ಕ್ಷೇತ್ರದ ಭೈರತಿ,ಭೈರತಿ ಬಂಡೆ, ಬೆಳೇಶಿವಾಲೆ, ಬೆಳತೂರು ಕಾಲೋನಿ, ಕುಂಬೇನ ಅಗ್ರಹಾರ ಕೊಡುಗೆಹಳ್ಳಿ , ಅಯ್ಯಪ್ಪ ನಗರ, ಹೂಡಿ,ತಿಗಳರಪಾಳ್ಯದಲ್ಲಿ ರಸ್ತೆ, ಚರಂಡಿ ಸೇರಿ ವಿವಿಧ ಮೂಲಭೂತ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು,

    ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಅನುದಾನ ನೀಡದೆ ಧೋರಣೆಯನ್ನು ಮಾಡುತ್ತಿದ್ದು ಬಂದಿರುವ ಅಲ್ಪಸ್ವಲ್ಪ
    ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.
    ಸಾರ್ವಜನಿಕರಿಗೆ ಬಹುಮುಖ್ಯವಾಗಿ ಬೇಕಿರುವ ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಲ್ಪಿಸುತ್ತೇವೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮನವಿ ಮಾಡಿ ಅನುದಾನ ತಂದು ಕ್ಷೇತ್ರದ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಗುತ್ತಿದಾರರು ಸಾರ್ವಜನಿಕರಿಗೆ ತೊಂದರೆ ಆಗದಂತೆ,ಮಳೆಗಾಲ ಆರಂಭಕ್ಕೂ ಮೊದಲೆ ಕಾಮಗಾರಿ ಪೂರ್ಣಗೊಳಿಸಿ,ಸರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದರು.
    ಶೀಘ್ರ ಕಾಮಗಾರಿಯನ್ನು ಆರಂಭಿಸಿ ಯಾವುದೇ ಲೋಪ ದೋಷಗಳು ಬರದಂತೆ ಪೂರ್ಣಗೊಳಿಸಬೇಕೆಂದು ತಿಳಿಸಿದರು .

    ಈ ವೇಳೆ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮುಖಂಡರಾದ ಆರ್ ರಾಮಾಂಜನೇಯ, ವಾರ್ಡ್ ಅಧ್ಯಕ್ಷರು ಕಾರ್ಯಕರ್ತರು ಇದ್ದರು.

  • ಪರಮ್ ಫೌಂಡೇಶನ್‌ನಿಂದ ನಾಳೆ ಬೆಂಗಳೂರಿನಲ್ಲಿ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಭ್ರಮ

    ಪರಮ್ ಫೌಂಡೇಶನ್‌ನಿಂದ ನಾಳೆ ಬೆಂಗಳೂರಿನಲ್ಲಿ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಭ್ರಮ

    ಪರಮ್ ಫೌಂಡೇಶನ್ ಸಂಸ್ಥೆಯಿಂದ ಅದ್ಧೂರಿ ಆಯೋಜನೆ
    – ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ
    – ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡದ ಪ್ರಸ್ತುತಿ
    – ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಭಾಗಿ
    – ಸಮಕಾಲೀನ ಶೈಲಿಯಲ್ಲಿ ಆಧ್ಯಾತ್ಮಿಕ ಪರಂಪರೆಯ ಗಾಯನ ಸುಧೆ
    – ಜನಪದ, ಶಾಸ್ತ್ರೀಯ ಸಂಗೀತದ ರಸದೌತಣ

    ಬೆಂಗಳೂರು: ರಾಜಧಾನಿಯ ಸಂಗೀತ ಪ್ರಿಯರಿಗಾಗಿ ‘ಪರಮ್ ಫೌಂಡೇಶನ್’ ವತಿಯಿಂದ ‘ತತ್ವ’ ಎಂಬ ವಿಶಿಷ್ಟ ಭಕ್ತಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರಸಿದ್ಧ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 17ರಂದು ಸಂಜೆ 6.15ಕ್ಕೆ ಈ ಸಂಗೀತ ಸಂಜೆ ಆಯೋಜಿಸಲಾಗಿದೆ.

    ‘ನಾದದ ಲಯದಿಂದ ಆನಂದದತ್ತ ಪಯಣ’ (A Journey from Breath to Bliss) ಎಂಬ ಪರಿಕಲ್ಪನೆಯಡಿ ಮೂಡಿಬರುತ್ತಿರುವ ಈ ಗಾಯನ ಸುಧೆಯನ್ನು ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡವು ನಡೆಸಿಕೊಡಲಿದೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಸಮಕಾಲೀನ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ. ವೇದಘೋಷಗಳು, ಶಾಸ್ತ್ರೀಯ ಪ್ರಭಾವ ಹಾಗೂ ಜನಪದ ಧಾಟಿಯನ್ನು ಆಧುನಿಕ ಸಂಗೀತ ಉಪಕರಣಗಳೊಂದಿಗೆ ಇಲ್ಲಿ ಬೆಸೆಯಲಾಗಿದೆ.

    ಉಮೇಶ್ ವಾರ್ಭುವನ್, ಪ್ರದ್ಯುಮ್ನ ಸೊರಬ ಸೇರಿದಂತೆ 15ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಹಾಗೂ ವಾದ್ಯವೃಂದದ ಜೊತೆಗೆ 8 ಮಂದಿಯ ಗಾಯಕ ತಂಡವು ಈ ಸಂಜೆಯ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದೆ. ವಿಶೇಷವಾಗಿ ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಭಾಗವಹಿಸಲಿದ್ದಾರೆ. ಮನಸ್ಸಿಗೆ ನೆಮ್ಮದಿ ಹಾಗೂ ಹೊಸ ಚೈತನ್ಯ ತುಂಬುವ ಈ ಕಲಾ ಸಂಗಮವು, ಪ್ರೇಕ್ಷಕರ ಕಣ್ಮನ ಸೆಳೆಯುವ ಜೊತೆಗೆ ಒಂದು ವಿಶಿಷ್ಟ ಆಧ್ಯಾತ್ಮಿಕ ಅನುಭವವನ್ನು ಉಣಬಡಿಸಲಿದೆ.

    ಏನಿದು ಪರಂಪರಾ?
    “ಪರಮ್ ಕಲ್ಚರ್” ಪ್ರಸ್ತುತಪಡಿಸುವ ‘ಪರಂಪರಾ’ ಸರಣಿ ಬಹು ಜನಪ್ರಿಯವಾಗಿರುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ನಡೆದಿರುವ ಪ್ರತಿಯೊಂದರ ವಿಷಯವಸ್ತುವೂ ವಿಭಿನ್ನವಾಗಿದ್ದು, ಪ್ರೇಕ್ಷಕರಿಂದ ಹಾಗೂ ಕಲಾವಿದರಿಂದ ಪ್ರಶಂಸೆಗೊಳಪಟ್ಟಿದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸೇರಿ ಭರತನಾಟ್ಯ, ಚಿತ್ರಕಲಾ ಪ್ರದರ್ಶನ ಇವೆಲ್ಲ ಕಾರ್ಯಕ್ರಮಗಳ ಜೊತೆಗೆ, ‘ವೀರ ಸಂನ್ಯಾಸಿಯ ಆತ್ಮಗೀತೆ’ ಎಂಬ ಅದ್ಭುತವಾದ ಮಲ್ಟಿಮೀಡಿಯಾ ಪ್ರೊಡಕ್ಷನ್ ಹಾಗೂ ದಾಸವಾಣಿ – ಸಂತವಾಣಿ ಎಂಬ ಸಂಗೀತ ಕಾರ್ಯಾಗಾರವನ್ನೂ ಕೂಡ ಪರಂಪರಾ ಸರಣಿಯಲ್ಲಿ ಪ್ರದರ್ಶಿಸಲ್ಪಟ್ಟಿದೆ.

  • ಇಂದಿನಿಂದ 15 ದಿನ ರಾಜ್ಯದ ಹಲವೆಡೆ ಬಿಸಿ ಗಾಳಿ; ಹವಾಮಾನ ಇಲಾಖೆ ಮುನ್ಸೂಚನೆ

    ಇಂದಿನಿಂದ 15 ದಿನ ರಾಜ್ಯದ ಹಲವೆಡೆ ಬಿಸಿ ಗಾಳಿ; ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರದಿಂದ ಐದು ದಿನ ತಾಪಮಾನ ಮತ್ತಷ್ಟು ಏರಿಕೆಯಾಗುವ ಜತೆಗೆ, ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಒಳನಾಡಿನ ಬೀದ‌ರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಐದು ದಿನಗಳು ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಂಭವವಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಬಿಸಿ ಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಒಂದೆರಡು ಕಡೆ ಗುರುವಾರದಿಂದ ಐದು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

    ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ (44 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಅಲ್ಲಿ ಸಾಮಾನ್ಯಕ್ಕಿಂತ 4.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ. ವಿಜಯಪುರದಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದೆ.

    ಬೆಂಗಳೂರಿನಲ್ಲಿ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮುಂದಿನ 2 ದಿನಗಳಲ್ಲಿ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದಿದೆ.

  • ಮಹದೇವಪುರ ಗ್ರಾಮಾಂತರ ಮಂಡಲ ವತಿಯಿಂದ ಅಂಬೇಡ್ಕ‌ರ್ ಅವರ 135 ನೇ ಜಯಂತಿ ಆಚರಣೆ.

    ಮಹದೇವಪುರ ಗ್ರಾಮಾಂತರ ಮಂಡಲ ವತಿಯಿಂದ ಅಂಬೇಡ್ಕ‌ರ್ ಅವರ 135 ನೇ ಜಯಂತಿ ಆಚರಣೆ.

    ಮಹದೇವಪುರ: ಅಸ್ಪೃಶ್ಯತೆ, ಅಸಮಾನತೆ, ಶೋಷಣೆಗಳನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರಂತರವಾಗಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಗ್ರಾಮಾಂತರ ಮಂಡಲ ವತಿಯಿಂದ ನಡೆದ ಅಂಬೇಡ್ಕ‌ರ್ ಅವರ 135 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನವೆಂಬ ಶ್ರೇಷ್ಠ ಗ್ರಂಥವನ್ನು ನೀಡಿದ ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲರಿಗೂ ಆದರ್ಶ ಮತ್ತು ಮಾದರಿ. ಅಂಬೇಡ್ಕರ್ ಕಂಡ ಕನಸು ಸಮಾನ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಕೈಜೋಡಿಸೋಣ ಎಂದರು.

    ಬಾಲ್ಯದಲ್ಲಿಯೇ ಶೋಷಣೆ, ಅಸ್ಪೃಶ್ಯತೆ, ಅವಮಾನ, ಹಿಂಸೆ, ಸಂಕಟಗಳನ್ನು ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣದಿಂದ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯ ಎನ್ನುವುದನ್ನು ಮನಗಂಡು ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ನೀಡಿದ್ದಾರೆಂದು ತಿಳಿಸಿದರು.

    ರಾಷ್ಟ್ರ ಕಂಡ ಶ್ರೇಷ್ಠ ವ್ಯಕ್ತಿತ್ವ ಅಂಬೇಡ್ಕರ್ ಅವರ ಹಾಗೂ ಬಾಬು ಜಗಜೀವನ್ ರಾವ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದೇವೆ. ಬಾಬಾ ಸಾಹೇಬರು ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಧೀಮಂತ ನಾಯಕರು ಎಂದರು.

    ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮಾಜಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಎಸ್ ಸಿ ಮೋರ್ಚಾ ಅಧ್ಯಕ್ಷ ಆದೂರು ಮುನಿರಾಜು, ಮುಖಂಡರಾದ ಮಾರಪ್ಪ, ಜ್ಯೋತಿಪುರ ವೇಣು, ಕಣ್ಣೂರು ಅಶೋಕ್, ಎಲ್.ರಾಜೇಶ್, ಬಿದರಹಳ್ಳಿ ರಾಜೇಶ್, ಕೆ.ವಿ. ನಾಗರಾಜ್, ಬೈರತಿ ರಮೇಶ್, ಕೆಂಪೇಗೌಡ, ಕೆ.ಡಿ.ವೆಂಕಟೇಶ್ ಮತ್ತಿತರರಿದ್ದರು.

  • 14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾಯಿ ಆತ್ಮಹತ್ಯೆಗೆ ಶರಣು!

    14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾಯಿ ಆತ್ಮಹತ್ಯೆಗೆ ಶರಣು!

    14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾಯಿ ಆತ್ಮಹತ್ಯೆಗೆ ಶರಣು!

    ವೈಟ್ ಫೀಲ್ಡ್: ಮಹಿಳೆಯೊಬ್ಬರು ತನ್ನ 14 ವರ್ಷದ ಮುದ್ದಾದ ಮಗಳನ್ನು ಉಸಿರು ಕಟ್ಟಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.

    ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. 14 ವರ್ಷದ ಮಗಳು ಕಾರುಣ್ಯಳನ್ನು ತಾಯಿ ಸುವರ್ಣ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗೆ ತಾಯಿ-ಮಗಳ ಮೃತದೇಹ ರವಾನಿಸಲಾಗಿದೆ.

    ಮೃತ ಸುವರ್ಣ ಗಂಡ ಚಂದ್ರಶೇಖರ್ಗೆ ಇತ್ತೀಚೆಗೆ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಆಗಿತ್ತು, ಖರ್ಚು ವೆಚ್ಚಕ್ಕೆ ಹಣಕಾಸು ಕೊರತೆ ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದ ಸುವರ್ಣ ಮಗಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಬಗ್ಗೆ ಮೃತ ಸುವರ್ಣ ಅಕ್ಕ ಉಷಾ ಅವರು ಈ ಬಗ್ಗೆ ಮಾತನಾಡಿ, ಹಣಕಾಸು ವಿಚಾರಕ್ಕೆ ಸುವರ್ಣ ಬೇಜಾರಾಗಿ ಖಿನ್ನತೆಗೆ ಒಳಗಾಗಿದ್ದಳು, ನಮ್ಮ ಮನೆ ಅತ್ತಿಬೆಲೆಗೆ ಫ್ರೀ ಬಸ್ಸ್ ಟಿಕೆಟ್‌ನಲ್ಲಿ ಬರುತ್ತಿದ್ದಳು. ಹಣಕಾಸು ಬಗ್ಗೆ ನನಗೆ ಆಗಾಗ್ಗೆ ಹೇಳುತ್ತಿದ್ದಳು, ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಮಗಳನ್ನು ಸಾಯಿಸಿದ್ದು ತುಂಬಾ ಬೇಜಾರಾಗಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಮೃತ ಸುವರ್ಣ ಅಕ್ಕ ಉಷಾ ಆಗ್ರಹಿಸಿದ್ದಾರೆ.

  • ಪಿಯುಸಿ ಫಲಿತಾಂಶ ದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ: ತಾಯಿಯ ವಿರುದ್ಧ ಸಂಬಂಧಿಕರ ಆರೋಪ!

    ಪಿಯುಸಿ ಫಲಿತಾಂಶ ದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ: ತಾಯಿಯ ವಿರುದ್ಧ ಸಂಬಂಧಿಕರ ಆರೋಪ!

    ಬೆಂಗಳೂರು: ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಮನನೊಂದ 17 ವರ್ಷದ ವಿದ್ಯಾರ್ಥಿನಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಾಳದ ಮನೋರಾಯನಪಾಳ್ಯದಲ್ಲಿರುವ ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ತನುಶ್ರೀ ಎಂದು ಗುರುತಿಸಲಾಗಿದೆ.
    ಈಕೆ ನಗರದ ಖಾಸಗಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು.ಮೃತ ತನುಶ್ರೀ ಖಾಸಗಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದರು. ಗುರುವಾರ ಫಲಿತಾಂಶ ಬಂದಾಗ ತನುಶ್ರೀ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಅವರ ತಾಯಿ ಆಶಾ ಕೆಲಸಕ್ಕೆ ಹೋಗಿದ್ದರಿಂದ ತನುಶ್ರೀ ಒಬ್ಬರೇ ಇದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಅವರು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

    ಫಲಿತಾಂಶದ ವಿಚಾರವಾಗಿ ತನುಶ್ರೀ ತನ್ನ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದ್ದರು. ಅವರು ಒಬ್ಬರೇ ಇದ್ದಿದ್ದರಿಂದ ಸ್ನೇಹಿತರು ತಮ್ಮ ಬಳಿ ಬರುವಂತೆ ಒತ್ತಾಯಿಸಿದ್ದರು. ಆದರೆ, ಬಳಿಕ ತನುಶ್ರೀ ಕರೆ ಹಾಗೂ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಿಲ್ಲ. ಅನುಮಾನಗೊಂಡ ಸ್ನೇಹಿತರು ಮನೆಗೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ತನುಶ್ರೀ ಸಾವಿನ ಹಿಂದೆ ಅನುಮಾನ:
    ತನುಶ್ರೀ ಸಾವು ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ತಾಯಿಯ ಅನೈತಿಕ ಸಂಬಂಧಕ್ಕೆ ಅಪ್ರಾಪ್ತ ಮಗಳ ಬಲಿಯಾಗಿದ್ದಾಳೆ. ಪಿಯುಸಿ ರಿಸಲ್ಟ್ ದಿನವೇ ಮಗಳಿಗೆ ಮುಹೂರ್ತವಿಟ್ಟು ಕೊಲೆ ಮಾಡಿದ್ದಾರೆ ಎಂದು ತನುಶ್ರೀ ತಂದೆಯ ಕಡೆಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಹಿಂದೆ ತನುಶ್ರೀ ತಂದೆ ಕೂಡ ಹೆಂಡ್ತಿಯ ಅನೈತಿಕ ಸಂಬಂಧ ಗೊತ್ತಾಗಿಯೇ ಮೃತಪಟ್ಟಿದ್ದರು ಎಂದು ಆರೋಪಿಸಲಾಗಿದೆ.

    ತನುಶ್ರೀ ತಂದೆ 2 ವರ್ಷದ ಹಿಂದೆ ಮೃತಪಟ್ಟಿದ್ದರು. ತನುಶ್ರೀ ತನ್ನ ತಾಯಿಯೊಂದಿಗೆ ವಾಸವಾಗಿದ್ದಳು.ಮಗಳ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಂದೆ ಸಂಬಂಧಿಕರು, ಇದೊಂದು ಆತ್ಮಹತ್ಯೆಯಲ್ಲ, ಇದರಲ್ಲಿ ತಾಯಿಯ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಬಾಲಕಿಯ ದೇಹದ ಮೇಲೆ ಗಾಯದ ಗುರುತುಗಳಿವೆಯೆಂದು ಸಂಬಂಧಿಕರು ದೂರಿದ್ದಾರೆ.ಫಲಿತಾಂಶ ಬಂದ ನಂತರ ತಾಯಿ ಮತ್ತು ಮಗಳ ನಡುವೆ ಜಗಳ ನಡೆದಿರಬಹುದು ಅಥವಾ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆಯ ನಾಟಕವಾಡಲಾಗುತ್ತಿದೆ ಎಂಬುದು ತಂದೆಯ ಕಡೆಯವರ ಗಂಭೀರ ಆರೋಪವಾಗಿದೆ.

    ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕಿಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ನಂತರವಷ್ಟೇ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಸತ್ಯಾಂಶ ಹೊರಬರಬೇಕಿದೆ.