Category: ಬೆಂಗಳೂರು ನಗರ

  • ಕಾಂಕ್ರೀಟ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ ಚಾಲನೆ.

    ಕಾಂಕ್ರೀಟ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ ಚಾಲನೆ.

    ಕೆ.ಆರ್.ಪುರ: – ರಾಮಮೂರ್ತಿನಗರದ ನಾಗಪ್ಪರೆಡ್ಡಿ ಮತ್ತು ಶರಾವತಿಯ ಬಡಾವಣೆ ಕಾಂಕ್ರೀಟ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ಬೈರತಿ ಬಸವರಾಜ ಚಾಲನೆ ನೀಡಿದರು.

    ನಂತರ ಮಾತನಾಡಿದ ಬೈರತಿ ಬಸವರಾಜ ಅವರು ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಗುಣಮಟ್ಟದಿಂದ ಮಾಡುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಅನುದಾನದ ಕೊರತೆಯಿಂದ ಹಲವು ಕಾಮಗಾರಿಗಳಿಗೆ ತೊಡಕಾಗಿದೆ ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು ಎಂದು ನುಡಿದರು.

    ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು,ಜನರ ಸೇವೆಗಾಗಿ ಅಗತ್ಯ ಯೊಇಜನೆಗಳನ್ನು ರೂಪಿಸಲಾಗಿದೆ ಎಂದು ನುಡಿದರು.

    ಈ ಸಂದರ್ಭದಲ್ಲಿ ಮುಖಂಡರಾದ ಇಟಾಚಿ ಮಂಜುನಾಥ, ಮಧುಗೌಡ,ದೇವರಾಜ,ಭಕ್ತವತ್ಸಲ,ಆನಂದ್,ಮೋಹನ್,
    ಜಯಂತಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

  • ಅಪ್ಪು ನಮ್ಮನ್ನು ಅಗಲಿ ಇಂದಿಗೆ ಐದು ವರ್ಷ.. ಪುಣ್ಯಸ್ಮರಣೆ : ಸಮಾಧಿ ಬಳಿ ಹರಿದುಬಂದ ಜನಸಾಗರ.

    ಅಪ್ಪು ನಮ್ಮನ್ನು ಅಗಲಿ ಇಂದಿಗೆ ಐದು ವರ್ಷ.. ಪುಣ್ಯಸ್ಮರಣೆ : ಸಮಾಧಿ ಬಳಿ ಹರಿದುಬಂದ ಜನಸಾಗರ.

    ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ನೋವು ಅಭಿಮಾನಿಗಳ (Fans) ಮನಸ್ಸಿನಲ್ಲಿ ಇಂದಿಗೂ ಹಸಿರಾಗಿದೆ. 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ (Heart Arrack) ಅವರು ಅಕಾಲಿಕವಾಗಿ ಮೃತಪಟ್ಟ ಸುದ್ದಿ ಇಡೀ ಕರ್ನಾಟಕವನ್ನು ದಿಗ್ಭ್ರಮೆಗೊಳಿಸಿತ್ತು.

    ಅಂದು ಬೆಳಗ್ಗೆ ಎಂದಿನಂತೆ ವ್ಯಾಯಾಮಕ್ಕೆ ತೆರಳಿದ್ದ ಅಪ್ಪು, ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದರು. ಆರೋಗ್ಯವಾಗಿದ್ದಂತೆ ಕಾಣುತ್ತಿದ್ದ ಪುನೀತ್ ಅವರಿಗೆ ಅಂದು ಏನಾಗಿತ್ತು? ಅವರ ಕೊನೆಯ ದಿನದ ಘಟನೆಗಳು ಹೇಗೆ ನಡೆದಿದ್ದವು? ಪುನೀತ್ ರಾಜ್‌ಕುಮಾರ್ ಅವರ ಕೊನೆಯ ದಿನದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಮೆಲುಕು ಹಾಕಿದರೆ, ಅಂದು ನಡೆದ ಬೆಳವಣಿಗೆಗಳು ಎಷ್ಟು ವೇಗವಾಗಿ ಸಾಗಿದ್ದವು ಎಂಬುದು ತಿಳಿಯುತ್ತದೆ.

    2021ರ ಅಕ್ಟೋಬರ್ 29ರಂದು ಬೆಳಗ್ಗೆ ಪುನೀತ್ ರಾಜ್‌ಕುಮಾರ್ ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮ ಮಾಡಿದ್ದರು. ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಅವರು, ವ್ಯಾಯಾಮದ ಬಳಿಕ ಅಸ್ವಸ್ಥತೆ ಅನುಭವಿಸಿದ್ದರು. ಬಳಿಕ ತಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯ ಲಕ್ಷಣಗಳು ಕಂಡುಬಂದಿದ್ದವು. ತಕ್ಷಣ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು.

    ಇದಾದ ಬಳಿಕ ಪುನೀತ್ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬೆಳಗ್ಗೆ ಸುಮಾರು 11.40ಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯಕೀಯ ತಂಡ ತಕ್ಷಣ ತುರ್ತು ಚಿಕಿತ್ಸೆ ಆರಂಭಿಸಿ, ಅವರ ಜೀವ ಉಳಿಸಲು ಸತತ ಪ್ರಯತ್ನ ನಡೆಸಿತು.

    ಆದರೆ, ವೈದ್ಯರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪುನೀತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಅಂದು ಮಧ್ಯಾಹ್ನ 2.30ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಘೋಷಿಸಿತು. ಕೇವಲ 46ನೇ ವಯಸ್ಸಿನಲ್ಲಿ ಅಪ್ಪು ಅಗಲಿದ ಸುದ್ದಿ ಕನ್ನಡಿಗರಿಗೆ ನಂಬಲಾಗದ ಆಘಾತ ನೀಡಿತ್ತು.

    ಪುನೀತ್ ನಿಧನದ ಸುದ್ದಿ ಹರಡುತ್ತಿದ್ದಂತೆ ಆಸ್ಪತ್ರೆಯ ಬಳಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದರು. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.

    ನಟನೆಯ ಮೂಲಕ ಜನರ ಮನಗೆದ್ದಿದ್ದ ಪುನೀತ್ ರಾಜ್‌ಕುಮಾರ್, ಸರಳ ವ್ಯಕ್ತಿತ್ವ ಮತ್ತು ಸಮಾಜಮುಖಿ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ವರ್ಷಗಳು ಕಳೆದರೂ ಅವರ ಸಿನಿಮಾಗಳು, ಹಾಡುಗಳು ಮತ್ತು ಜನಪರ ಕಾರ್ಯಗಳು ಅಭಿಮಾನಿಗಳ ಮನಸ್ಸಿನಲ್ಲಿ ಅವರನ್ನು ಜೀವಂತವಾಗಿರಿಸಿವೆ.

    ಅಂದು ಬೆಳಗ್ಗೆ ವ್ಯಾಯಾಮಕ್ಕೆ ತೆರಳಿದ್ದ ಅಪ್ಪು, ಮಧ್ಯಾಹ್ನದ ವೇಳೆಗೆ ನಮ್ಮನ್ನೆಲ್ಲ ಅಗಲುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದಕ್ಕಾಗಿಯೇ ಅಕ್ಟೋಬರ್ 29 ಕನ್ನಡಿಗರ ಪಾಲಿಗೆ ಮರೆಯಲಾಗದ ದಿನವಾಗಿ ಉಳಿದಿದೆ.

  • ರೇಣುಕಾಸ್ವಾಮಿ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್: ಶೆಡ್ ಬಳಿ ದರ್ಶನ್, ಪವಿತ್ರಾ ಗೌಡ ಬಂದಿರಲಿಲ್ಲ; ಉಲ್ಟಾ ಹೊಡೆದ ಐ ವಿಟ್ನೆಸ್‌ ಪುನೀತ್.

    ರೇಣುಕಾಸ್ವಾಮಿ ಕೊಲೆ ಕೇಸಿಗೆ ಬಿಗ್ ಟ್ವಿಸ್ಟ್: ಶೆಡ್ ಬಳಿ ದರ್ಶನ್, ಪವಿತ್ರಾ ಗೌಡ ಬಂದಿರಲಿಲ್ಲ; ಉಲ್ಟಾ ಹೊಡೆದ ಐ ವಿಟ್ನೆಸ್‌ ಪುನೀತ್.

    ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ವಿಚಾರಣೆಯಲ್ಲಿ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ (Eye Witness) ಪುನೀತ್, ನ್ಯಾಯಾಲಯದ ಮುಂದೆ ಸಾಕ್ಷ್ಯ ನುಡಿಯುವ ವೇಳೆ ತನ್ನ ಈ ಹಿಂದಿನ ಹೇಳಿಕೆಯಿಂದ ಸಂಪೂರ್ಣವಾಗಿ ಹಿಂದೆ ಸರಿದು ಉಲ್ಟಾ ಹೇಳಿಕೆ ನೀಡಿದ್ದಾನೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿಗಳಾದ ಕಿರಣ್ ಹಾಗೂ ಪುನೀತ್‌ ಅವರಿಗೆ ಸಾಕ್ಷ್ಯ ನುಡಿಯುವಂತೆ ನಗರದ 59ನೇ ಸೆಷನ್ಸ್ ನ್ಯಾಯಾಲಯವು ಸಮನ್ಸ್ ಜಾರಿಗೊಳಿಸಿತ್ತು. ಆದರೆ ಮಂಗಳವಾರ ನಡೆದ ವಿಚಾರಣೆಗೆ ಪುನೀತ್ ಗೈರುಹಾಜರಾಗಿದ್ದ ಹಿನ್ನೆಲೆಯಲ್ಲಿ, ನ್ಯಾಯಾಲಯವು ಆತನ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ (NBW) ಹೊರಡಿಸಿತ್ತು. ಈ ಬೆಳವಣಿಗೆಯ ನಂತರ ಆತ ಬುಧವಾರ 59ನೇ ಸಿಸಿಹೆಚ್ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ.

    ವಿಚಾರಣೆ ವೇಳೆ ಸಾಕ್ಷ್ಯ ನುಡಿದ ಪುನೀತ್, “ಹಲ್ಲೆ ನಡೆದ ಪಟ್ಟಣಗೆರೆ ಶೆಡ್ ಬಳಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಯಾವುದೇ ಆರೋಪಿಗಳು ಬಂದಿರಲಿಲ್ಲ. ನಾನಂತೂ ಘಟನಾ ಸ್ಥಳದಲ್ಲಿ ಅವರನ್ನು ನೋಡಿಯೇ ಇಲ್ಲ” ಎಂದು ಹೇಳುವ ಮೂಲಕ ತನಿಖಾಧಿಕಾರಿಗಳಿಗೆ ಭಾರಿ ಆಘಾತ ನೀಡಿದ್ದಾನೆ.

    ತನಿಖೆಯ ಆರಂಭಿಕ ಹಂತದಲ್ಲಿ ಇದೇ ಪುನೀತ್ ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಅಧಿಕೃತ ಹೇಳಿಕೆ ದಾಖಲಿಸಿದ್ದ. ಆಗ ಘಟನಾ ಸ್ಥಳದಲ್ಲಿ ಆರೋಪಿಗಳ ಉಪಸ್ಥಿತಿ ಹಾಗೂ ಕೃತ್ಯದ ವಿವರಗಳನ್ನು ವಿವರಿಸಿದ್ದ ಎನ್ನಲಾಗಿತ್ತು. ಆದರೆ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುವ ಸಂದರ್ಭದಲ್ಲಿ ಆತ ತನ್ನ ಹಳೆಯ ಹೇಳಿಕೆಗೆ ವ್ಯತಿರಿಕ್ತವಾಗಿ ಮಾತನಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ‘ಪ್ರತಿಕೂಲ ಸಾಕ್ಷಿ’ (Hostile Witness) ಎಂದು ಪರಿಗಣಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕರು (SPP) ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

  • ವಾರ್ಡ್ ಒನ್’ ಅಭಿಯಾನದಡಿ ಮಾದರಿ ವಾರ್ಡ್ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಆಯುಕ್ತ ಡಿ.ಎಸ್. ರಮೇಶ್

    ವಾರ್ಡ್ ಒನ್’ ಅಭಿಯಾನದಡಿ ಮಾದರಿ ವಾರ್ಡ್ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಿ: ಆಯುಕ್ತ ಡಿ.ಎಸ್. ರಮೇಶ್

    ಮಹದೇವಪುರ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ‘ವಾರ್ಡ್ ಒನ್’ ಅಭಿಯಾನದ ಉದ್ದೇಶದಂತೆ ನಾಗರಿಕ ಸೌಲಭ್ಯಗಳ ಸುಧಾರಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ, ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಬೆನ್ನಿಗಾನಹಳ್ಳಿಯಿಂದ ಕೆ.ಆರ್. ಪುರಂ ಮೆಟ್ರೋ ನಿಲ್ದಾಣದವರೆಗೆ ಆಯುಕ್ತರಾದ ಡಿ.ಎಸ್. ರಮೇಶ್ ಅವರು ಸ್ಥಳ ಪರಿಶೀಲನೆ ನಡೆಸಿ, ರಸ್ತೆ ಅಭಿವೃದ್ಧಿ, ಪಾದಚಾರಿ ಮಾರ್ಗ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ, ಒಳಚರಂಡಿ ಸ್ವಚ್ಛತೆ, ಕಲ್ವರ್ಟ್ಗಳಲ್ಲಿನ ಹೂಳು ತೆರವು ಮತ್ತು ರಸ್ತೆ ಬದಿಯ ಸ್ವಚ್ಛತಾ ಕಾರ್ಯಗಳನ್ನು ಪರಿಶೀಲಿಸಿದರು.

    ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ, ರಸ್ತೆ ಬದಿಯ ನಿರ್ಮಾಣ ತ್ಯಾಜ್ಯ ತೆರವು, ಮಳೆನೀರು ನಿಲುಗಡೆ ಸಮಸ್ಯೆ ನಿವಾರಣೆ ಹಾಗೂ ರಸ್ತೆ ಗುಂಡಿಗಳ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಅಕ್ಟೋಬರ್ 31ರ ಶನಿವಾರದಂದು ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿ, ಈಗಾಗಲೇ ಗುರುತಿಸಲಾದ ಸಮಸ್ಯೆಗಳನ್ನು ಪರಿಹರಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವುದಾಗಿ ತಿಳಿಸಿದರು.

    ಪಾದಚಾರಿ ಮಾರ್ಗ ಮತ್ತು ಸರ್ವೀಸ್ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿ

    ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ವಹಿಸಬೇಕು. ಪಾದಚಾರಿ ಮಾರ್ಗ ಹಾಗೂ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸ್ಥಳದಲ್ಲಿನ ಗಡಿ ಗುರುತುಗಳನ್ನು ಪರಿಶೀಲಿಸಿ, ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಆಯುಕ್ತರು ಸೂಚಿಸಿದರು.

    ಬ್ಲಾಕ್ ಸ್ಪಾಟ್ಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿ

    ರಸ್ತೆ ಬದಿಗಳಲ್ಲಿ ಸಂಗ್ರಹವಾಗಿರುವ ಡೆಬ್ರಿಸ್, ಸಿಲ್ಟ್ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸಬೇಕು. ಗುರುತಿಸಲಾದ ಬ್ಲಾಕ್ ಸ್ಪಾಟ್ಗಳನ್ನು ಸ್ವಚ್ಛಗೊಳಿಸಿ, ಮತ್ತೆ ತ್ಯಾಜ್ಯ ಸಂಗ್ರಹವಾಗದಂತೆ ಕ್ರಮ ವಹಿಸಬೇಕು. ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ತಡೆಯಲು ಮಾರ್ಷಲ್ಗಳು ನಿರಂತರ ನಿಗಾ ವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಮಳೆನೀರು ನಿಲುಗಡೆ ಸಮಸ್ಯೆ ನಿವಾರಿಸಿ

    ಮಳೆಗಾಲದಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ, ಮಳೆನೀರು ಸರಾಗವಾಗಿ ಹರಿಯುವಂತೆ ವ್ಯವಸ್ಥೆ ಮಾಡಬೇಕು. ಕಲ್ವರ್ಟ್ಗಳಲ್ಲಿನ ಹೂಳನ್ನು ತೆರವುಗೊಳಿಸಿ, ಅಗತ್ಯವಿರುವ ಸ್ಥಳಗಳಲ್ಲಿ ಗ್ರೇಟಿಂಗ್ಗಳನ್ನು ಅಳವಡಿಸಬೇಕು. ಹಾನಿಗೊಳಗಾದ ಕಲ್ವರ್ಟ್ಗಳ ಪುನರ್ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಿ, ಸಂಬಂಧಿತ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಿ

    ರಸ್ತೆ ಮಧ್ಯದಲ್ಲಿರುವ ಖಾಲಿ ಜಾಗಗಳನ್ನು ಪರಿಶೀಲಿಸಿ, ಅಗತ್ಯವಿರುವ ಸ್ಥಳಗಳಲ್ಲಿ ಸಾರ್ಜನಿಕ ಉಪಯೋಗಿ ಬಯಲು ಪ್ರದೇಶವಾಗಿ ನಿರ್ಮಾಣಕ್ಕೆ ಕಾರ್ಯಯೋಜನೆ ರೂಪಿಸಬೇಕು. ಫ್ರೀ ಲೆಫ್ಟ್ ವ್ಯವಸ್ಥೆ ಕಲ್ಪಿಸಿ, ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಿ, ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ರಸ್ತೆ ಬದಿಯಲ್ಲಿ ಅನಧಿಕೃತವಾಗಿ ನಿಲ್ಲಿಸಿರುವ ವಾಹನಗಳನ್ನು ತೆರವುಗೊಳಿಸಲು ಮಾಲೀಕರಿಗೆ ಸೂಚನೆ ನೀಡಿ, ಸೂಚನೆ ಪಾಲಿಸದವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

    ಬೆಸ್ಕಾಂ ಟ್ರಾನ್ಸ್ಫಾರ್ಮರ್ ಅನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ

    ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗುತ್ತಿರುವ ಬೆಸ್ಕಾಂ ಟ್ರಾನ್ಸ್ಫಾರ್ಮರ್ ಅನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಬೆಸ್ಕಾಂ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಸ್ಥಳಾಂತರಕ್ಕೆ ಇರುವ ಅಡಚಣೆಗಳನ್ನು ನಿವಾರಿಸಬೇಕು. ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಆಯುಕ್ತರು ಸೂಚಿಸಿದರು.

    ಖಾಲಿ ಜಾಗದಲ್ಲಿ ವೆಂಡಿಂಗ್ ಜೋನ್ ನಿರ್ಮಿಸಲು ಕಾರ್ಯಯೋಜನೆ ರೂಪಿಸಿದೆ

    ರಸ್ತೆ ಬದಿಯಲ್ಲಿರುವ ಖಾಲಿ ಜಾಗಗಳನ್ನು ಪರಿಶೀಲಿಸಿ, ಅಗತ್ಯವಿರುವ ಸ್ಥಳಗಳಲ್ಲಿ ವೆಂಡಿಂಗ್ ಜೋನ್ ನಿರ್ಮಿಸಲು ಕಾರ್ಯಯೋಜನೆ ರೂಪಿಸಿ . ಲಭ್ಯವಿರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು, ಸಂಚಾರಕ್ಕೆ ಅಡಚಣೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಯುಕ್ತರು ಸೂಚಿಸಿದರು.

    ಸ್ಥಳ ಪರಿಶೀಲನೆ ವೇಳೆ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಕೆ.ಆರ್. ಪುರಂ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಬಿಎಂಆರ್ಸಿಎಲ್, ಬಿಡಬ್ಲ್ಯುಎಸ್ಎಸ್ಬಿ ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

  • ಬಾಬುಸಾಪಾಳ್ಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಸಂಭ್ರಮ, ಪೌರಕಾರ್ಮಿಕರಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಸನ್ಮಾನ

    ಬಾಬುಸಾಪಾಳ್ಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಸಂಭ್ರಮ, ಪೌರಕಾರ್ಮಿಕರಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ನಾಯಕರಿಗೆ ಸನ್ಮಾನ

    ಕೆ.ಆರ್.ಪುರ: ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಕ್ಷೇತ್ರದ ಬಾಬುಸಾಪಾಳ್ಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

    ನಂತರ ಮಾತನಾಡಿದ ಶಾಸಕ ಬೈರತಿ ಬಸವರಾಜ ಅವರು ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಶ್ರೇಷ್ಠ ಸಮಾಜದ ನಿರ್ಮಾಣಕ್ಕಾಗಿ ಮಹಾನ್ ಕಾವ್ಯವಾದ ರಾಮಾಯಣವನ್ನು ನೀಡಿದ್ದು, ಅದರ ಸಾರವನ್ನು ಅರಿತು ಜೀವನವನ್ನು ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

    ಸಮಾಜದಲ್ಲಿ ಸಮಾನತೆ ಸೇರಿದಂತೆ ಸ್ವಸ್ಥ ಜೀವನಕ್ಕೆ ಅವರ ತತ್ವ ಆದರ್ಶಗಳು ಹೆಚ್ಚು ಪ್ರಸ್ತುತ ವಾಗಿದ್ದು ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವಂತೆ ಸಲಹೆ ನೀಡಿದರು.

    ಶ್ರೀ ವಾಲ್ಮೀಕಿ ಬ್ರಹ್ಮಾನಂದ ಗುರೂಜಿ ಅವರು ಮಾತನಾಡಿ ತಮ್ಮ ಕೇಲಸ ಕಾರ್ಯಗಳನ್ನು ನಿಷ್ಠೆಯಿಂದ ಮಾಡುವ ಮೂಲಕ ಸಮಾಜದ ಏಳಿಗೆಗೆ ಕೊಡುಗೆ ನೀಡುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು ಎಂದು ನುಡಿದರು.

    ತಾಂತ್ರಿಕ ಯುಗದಲ್ಲಿ ಶಿಕ್ಷಣ ಅತ್ಯಂತ ಅವಶ್ಯವಾಗಿದ್ದು, ವಾಲ್ಮೀಕಿ ಸಮಾಜದ ಮಕ್ಕಳು ಉತ್ತಮ ಶಿಕ್ಷಣ, ಕೌಶಲ ಪಡೆಯಬೇಕು. ಸಮಾಜವನ್ನು ಸಂಘಟಿಸಿದಾಗ ಮಾತ್ರ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದರು.

    ರಾಮಾಯಣ ಎಂಬುದು ವ್ಯಕ್ತಿತ್ವದ ಅನಾವರಣ. ಪ್ರತಿಯೊಬ್ಬರು ಜೀವನದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಈ ಮಹಾಕಾವ್ಯದಿಂದ ತಿಳಿದುಕೊಳ್ಳಬಹುದು. ಪ್ರತಿಯೊಬ್ಬ ವ್ಯಕ್ತಿಯಲ್ಲಿ ರಾಮ-ರಾವಣ ಎಂಬ ವ್ಯಕ್ತಿತ್ವ ಇರುತ್ತದೆ. ಪ್ರತಿಯೊಬ್ಬರು ಉತ್ತಮ ವ್ಯಕ್ತಿಗಳಾಗಲು ಎಲ್ಲರೂ ಪ್ರಯತ್ನಿಸಿ ಎಂದರು.

    ಈ ಸಂದರ್ಭದಲ್ಲಿ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ನಾಯಕರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದಲ್ಲಿ ಮುಖಂಡರಾದ ಮುನಿರಾಜು, ಡಿವಿಎನ್ ಮಂಜುನಾಥ, ನರಸಿಂಹ ಮೂರ್ತಿ,ಶಾಂತರಾಜ ರೆಡ್ಡಿ ,
    ಮುನಿಸ್ವಾಮಿ, ಈಶ್ವರ್ ಮೂರ್ತಿ,ಮಂಜುನಾಥ್
    ಲೋಕೇಶ್, ಲಕ್ಷ್ಮಣ,ಜೆ.ಕೃಷ್ಣಮೂರ್ತಿ,ವೇಣುಗೋಪಾಲ್
    ಎಲ್ ಅಶ್ವತ್ ಇದ್ದರು.

  • ಮಹದೇವಪುರ: ಸ್ಮಶಾನಕ್ಕಾಗಿ ಪಣತ್ತೂರಿನಲ್ಲಿ ಶವವಿಟ್ಟು ಪ್ರತಿಭಟನೆ

    ಮಹದೇವಪುರ: ಸ್ಮಶಾನಕ್ಕಾಗಿ ಪಣತ್ತೂರಿನಲ್ಲಿ ಶವವಿಟ್ಟು ಪ್ರತಿಭಟನೆ

    ಮಹದೇವಪುರ: ಶವಸಂಸ್ಕಾರಕ್ಕೆ ಸೂಕ್ತ ಸ್ಮಶಾನವಿಲ್ಲದ ಕಾರಣ ಬೆಂಗಳೂರು ಪೂರ್ವ ತಾಲ್ಲೂಕಿನ ಪಣತ್ತೂರು ದಿನ್ನೆಯ ಸ್ಥಳೀಯರು ಪಣತ್ತೂರು ಟ್ರೀಪಾರ್ಕ್ ಮುಂಭಾಗದಲ್ಲೇ ಶವವನ್ನಿಟ್ಟು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

    ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಪಣತ್ತೂರು ಗ್ರಾಮದ ಸರ್ವೆ ನಂ. 52 ರಲ್ಲಿ ಒಟ್ಟು 33.12 ಎಕರೆ ಸರ್ಕಾರಿ ಗೋಮಾಳವಿದ್ದು, ಇದರಲ್ಲಿ ಆದಿಪರಾಶಕ್ತಿ ದೇವಸ್ಥಾನಕ್ಕೆ, ಆಟದ ಮೈದಾನಕ್ಕೆ ಹಾಗೂ ಸಾರ್ವಜನಿಕ ರಸ್ತೆ ಬಳಕೆಗೆ ಜಮೀನು ಮೀಸಲಿಡಲಾಗಿದೆ.

    ಆದರೆ ನೂರಾರು ವರ್ಷಗಳಿಂದ ಪೂರ್ವಜರು ಶವಸಂಸ್ಕಾರಕ್ಕಾಗಿ ಬಳಸುತ್ತಿದ್ದ ಜಾಗದಲ್ಲಿ ಕನಿಷ್ಠ 2-3 ಎಕರೆ ಜಾಗವನ್ನು ರುದ್ರಭೂಮಿಗಾಗಿ ಮೀಸಲಿಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ನಗರ ಜಿಲ್ಲಾ ಸಂಚಾಲಕ ಗೋವಿಂದ್ ಕುಮಾರ್ ಅವರು ಆಗ್ರಹಿಸಿದರು.

    “ಅನೇಕ ಕಡೆಗಳಲ್ಲಿ ದಲಿತ ಸಮುದಾಯದವರಿಗೆ ಅಂತ್ಯಸಂಸ್ಕಾರ ಮಾಡಲು ಸೂಕ್ತ ಜಾಗವಿಲ್ಲ. ಇದ್ದ ಅಲ್ಪ ಜಾಗವನ್ನೂ ಅರಣ್ಯ ಇಲಾಖೆ ಆಕ್ರಮಿಸಿಕೊಂಡು ಅಂತ್ಯಕ್ರಿಯೆಗೆ ಅವಕಾಶ ನೀಡುತ್ತಿಲ್ಲ” ಎಂದು ಅವರು ಆರೋಪಿಸಿದರು.

    ಪಾರ್ಕ್ ಲೋಕಾರ್ಪಣೆ ಆದಾಗಲೂ ಸಹ ನಾಲ್ಕೈದು ಜನ ಬಂಡವಾಳಶಾಹಿಗಳ ಶವ ಸಂಸ್ಕಾರ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಿದರು. ಆದರೇ ಬಡವರು, ದಿನದಲಿತರಂಬ ಕಾರಣಕ್ಕೆ ಶವಸಂಸ್ಕಾರಕ್ಕೆ ಅಡ್ಡಿಪಡಿಸಿ ಸಂಜೆವರಿಗೂ ಶವವನ್ನಿಟ್ಟು ಪ್ರತಿಭಟಿಸಿದರು, ಮನವಿ ಮಾಡಿದರು, ಸತ್ತವರ ಕುಟುಂಬದವರ ದುಃಖವನ್ನು ಸಹ ಅರ್ಥಮಾಡಿಕೊಳ್ಳದೆ, ಶವವನ್ನು ಒಳಗೆ ಬಿಡದೆ ಪಕ್ಕದ ಊರಿಗೆ ಹೋಗಿ ಶವಸಂಸ್ಕಾರ ಮಾಡುವಂತಹ ಪರಿಸ್ಥಿತಿ ಎದುರಾಯಿತು. ‌

    ಈ ಸಂಬಂಧ ಜಿಲ್ಲಾಧಿಕಾರಿಗಳು, ಕಂದಾಯ ಮತ್ತು ಅರಣ್ಯಾಧಿಕಾರಿಗಳು, ಸಚಿವರು, ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ತಹಶೀಲ್ದಾರ್ ಅಥವಾ ಜಿಲ್ಲಾಡಳಿತದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರುದ್ರಭೂಮಿಗೆ ಜಾಗ ನಿಗದಿಪಡಿಸಬೇಕು ಅಥವಾ ಹೊಸ ಜಾಗ ಮಂಜೂರು ಮಾಡುವ ಭರವಸೆ ನೀಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

    ಈ ಸಂದರ್ಭದಲ್ಲಿ ಬೆಂ. ಪೂ ತಾ ಸಂಘಟನಾ ಸಂಚಾಲಕರು, ಪಣತ್ತೂರು ದಿನ್ನೆ ಕೆ. ಮಂಜು,‌ ಬಳಗೆರೆ ಪಾಪಣ್ಣ, ಸ್ಥಳೀಯರಾದ ಗಂಗಧಾರ್, ಬಳಗೆರೆ ಶಿವರಾಜ್, ರಮೇಶ್, ವರ್ತೂರು ಮಾದೇಶ್, ಮೋಹನ್ ಗೌಡ, ಮೂರ್ತಿ ಗೌಡ, ಮುನೇಶ್, ಜಿ ಎಸ್.ಎಂ ಮುನಿರಾಜು, ವೆಂಕಟಸ್ವಾಮಿ, ಗ್ರಾಮಸ್ಥರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

  • ಹೊಸದಾಗಿ ಡಾಂಬರೀಕರಣಗೊಂಡ ರಸ್ತೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ: ಲೋಖಂಡೆ ಸ್ನೇಹಲ್ ಸುಧಾಕರ್

    ಹೊಸದಾಗಿ ಡಾಂಬರೀಕರಣಗೊಂಡ ರಸ್ತೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ: ಲೋಖಂಡೆ ಸ್ನೇಹಲ್ ಸುಧಾಕರ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ಕುಸಿತ, ರಸ್ತೆ ಗುಂಡಿಗಳ ದುರಸ್ತಿ, ಮಳೆನೀರು ಚರಂಡಿ, ಒಳಚರಂಡಿ ವ್ಯವಸ್ಥೆ, ಮ್ಯಾನ್‌ಹೋಲ್‌ಗಳ ಅಳವಡಿಕೆ ಮತ್ತು ಮ್ಯಾನ್‌ಹೋಲ್‌ಗಳ ಮಟ್ಟ ಸರಿಪಡಿಸುವಿಕೆ ಹಾಗೂ ಜಲಮಂಡಳಿ, ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಕುರಿತು ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ರಸ್ತೆ ಪುನಃಸ್ಥಾಪನೆ ಸಭೆ ನಡೆಯಿತು.

    ಸಭೆಯಲ್ಲಿ ಈ ಹಿಂದೆ ನೀಡಿದ್ದ ನಿರ್ದೇಶನಗಳ ಅನುಷ್ಠಾನ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಅಪರ ಆಯುಕ್ತರು, ಸೂಚನೆಗಳ ಪಾಲನೆಯಲ್ಲಿ ವಿಳಂಬ ತೋರಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಎಲ್ಲಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


    ರಸ್ತೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ

    ಹೊಸದಾಗಿ ಡಾಂಬರೀಕರಣಗೊಂಡ ರಸ್ತೆಗಳನ್ನು ಕನಿಷ್ಠ ಒಂದು ವರ್ಷದವರೆಗೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಸೀಗೆಹಳ್ಳಿ, ಬಸವನಪುರ ಹಾಗೂ ಹೊರವರ್ತುಲ ರಸ್ತೆ (ಉಡುಪಿ ಸನ್ನಿಧಿ ಹೋಟೆಲ್ ಬಳಿ), ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು ಮುಖ್ಯ ರಸ್ತೆ, ದೇವರಬೀಸನಹಳ್ಳಿಯಲ್ಲಿ ಜಲಮಂಡಳಿಯಿಂದ ರಸ್ತೆ ಅಗೆದಿರುವ ಸ್ಥಳಗಳನ್ನು ತಕ್ಷಣವೇ ದುರಸ್ತಿಪಡಿಸಿ ಪಾಲಿಕೆಗೆ ವರದಿ ಸಲ್ಲಿಸಲು ಸೂಚಿಸಲಾಯಿತು. ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳು ಹಾಗೂ ರಸ್ತೆ ಕುಸಿತದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ರಸ್ತೆ ಅಗೆತದಿಂದ ಹಾನಿಗೊಳಗಾಗಿರುವ ಸ್ಥಳಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ರಸ್ತೆ ಮರುಸ್ಥಾಪನೆ ಕಾರ್ಯ ಕೈಗೊಳ್ಳಬೇಕು. ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದರ ಜೊತೆಗೆ, ಕಾಮಗಾರಿ ಪೂರ್ಣಗೊಂಡ ನಂತರ ಮತ್ತೆ ರಸ್ತೆ ಕುಸಿಯದಂತೆ ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಏಜೆನ್ಸಿಯಿಂದ ವೆಚ್ಚ ವಸೂಲಿ ಮಾಡಿ ರಸ್ತೆ ಪುನಃಸ್ಥಾಪಿಸಿ*

    ನೆಕ್ಸಸ್ ಮಾಲ್ ಮುಂಭಾಗದಲ್ಲಿ ಚರಂಡಿ ಸಂಪರ್ಕದಿಂದ ನೀರು ಹಿಮ್ಮುಖವಾಗಿ ಹರಿಯುತ್ತಿದ್ದು, ಸೂಕ್ತ ಇಳಿಜಾರಿನೊಂದಿಗೆ ಮರುಸಂಪರ್ಕ ಕಲ್ಪಿಸಲು ಸೂಚಿಸಲಾಯಿತು. ಕಳಪೆ ಕಾಮಗಾರಿ ನಡೆಸಿದ ಏಜೆನ್ಸಿಯಿಂದ ವೆಚ್ಚ ವಸೂಲಿ ಮಾಡಿ ಪಾಲಿಕೆಯಿಂದಲೇ ರಸ್ತೆ ಪುನಃಸ್ಥಾಪಿಸುವಂತೆ ಅಪರ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ವಿರುದ್ಧ ಕಾನೂನು ಕ್ರಮ

    ಕೆಪಿಟಿಸಿಎಲ್‌ 220 ಕೆ.ವಿ ಟ್ರಾನ್ಸ್ ಮಿಷನ್ ಲೈನ್ ಕಾರಿಡಾರ್‌ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳ ವಿರುದ್ಧ ಜಂಟಿ ತಂಡದಿಂದ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬೆಸ್ಕಾಂ ಕೇಬಲ್ ಅಳವಡಿಕೆ ವೇಳೆ ಜಲಮಂಡಳಿ ಕೊಳವೆ ಮಾರ್ಗಗಳಿಗೆ ಹಾನಿಯಾಗದಂತೆ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳು ಜಂಟಿ ಸಮನ್ವಯ ಸಾಧಿಸಬೇಕು. ವರ್ತೂರು ಕೋಡಿ ರಸ್ತೆಯಲ್ಲಿ ರಸ್ತೆ ಕುಸಿತ ತಡೆಯಲು ಹಾಗೂ ಡಾಂಬರೀಕರಣದ ನಂತರ ರಸ್ತೆ ಅಗೆಯುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆನೀರು ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ

    ಕಾಮಧೇನು ನಗರ ಹಾಗೂ ಹೈಡ್ರೋಸೈಟ್ ಕಾರಿಡಾರ್ – ವರ್ತೂರು ರಸ್ತೆ ಜಂಕ್ಷನ್‌ನಲ್ಲಿ ಪದೇ ಪದೆ ಮಳೆನೀರು ನಿಲುಗಡೆ ಸಮಸ್ಯೆ ಎದುರಾಗುತ್ತಿದೆ. ಜಲಮಂಡಳಿ, ಬಿ-ಸ್ಮೈಲ್ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಜಂಟಿ ಪರಿಶೀಲನೆ ನಡೆಸಿ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು. ಪ್ರಿಕಾಸ್ಟ್ ಮ್ಯಾನ್‌ಹೋಲ್‌ಗಳ ಅಳವಡಿಕೆ, ಮ್ಯಾನ್‌ಹೋಲ್‌ಗಳ ಮಟ್ಟ ಸರಿಪಡಿಸುವುದು ಮತ್ತು ರಸ್ತೆ ಮೇಲ್ಮೈಗೆ ಸಮನಾಗಿ ಅಳವಡಿಸುವ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ವರ್ತೂರು ಕೋಡಿ – ಬಳಗೆರೆ ಸಿವೇಜ್ ಟ್ರೀಟ್‌ಮೆಂಟ್ ಪ್ಲಾಂಟ್ (STP) ಬಳಿ ರಾಜಕಾಲುವೆ ಗಡಿಯನ್ನು ಗುರುತಿಸಬೇಕು. ಮಳೆನೀರು ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

    ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ

    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ರಸ್ತೆ ಕಟಿಂಗ್, ನೀರು ಸೋರಿಕೆ, ಒಳಚರಂಡಿ ಹಾಗೂ ರಸ್ತೆ ಮರುಸ್ಥಾಪನೆಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳಿಗೆ ಅಗತ್ಯವಿರುವ ಅನುಮತಿಗಳು, ತಾಂತ್ರಿಕ ಪರಿಶೀಲನೆ ಹಾಗೂ ಇತರೆ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಕಾಮಗಾರಿಗಳ ಪ್ರಗತಿ ವರದಿ ಸಲ್ಲಿಸಲು ಸೂಚನೆ

    ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ, ಕಾಮಗಾರಿಗಳ ಅನುಷ್ಠಾನದಲ್ಲಿನ ಅಡಚಣೆಗಳನ್ನು ನಿವಾರಿಸಬೇಕು. ಬಾಕಿ ಇರುವ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಶೀಲನೆಯಲ್ಲಿ ಗುರುತಿಸಲಾದ ಸಮಸ್ಯೆಗಳ ಕುರಿತು ಕೈಗೊಂಡ ಕ್ರಮಗಳು, ಬಾಕಿ ಉಳಿದಿರುವ ಕೆಲಸಗಳು ಹಾಗೂ ಅವುಗಳ ಪೂರ್ಣಗೊಳಿಸುವಿಕೆಯ ಕಾಲಮಿತಿಯ ವಿವರಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಬೇಕು ಎಂದು ಅಪರ ಆಯುಕ್ತರು ನಿರ್ದೇಶನ ನೀಡಿದರು.

    ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಕ್ರಮ

    ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸುವ ಪ್ರಸ್ತಾವನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕರ ಅನುಕೂಲ, ಸುಗಮ ಸಂಚಾರ, ರಸ್ತೆ ಸಂಪರ್ಕ ಸುಧಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಖಾಸಗಿ ರಸ್ತೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪರ್ಯಾಯ ಸಂಪರ್ಕ ರಸ್ತೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದು, ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸುವ ಮೊದಲು ನಗರ ಯೋಜನಾ ಇಲಾಖೆಯ ಪೂರ್ವಾನುಮತಿ ಪಡೆಯುವುದು ಹಾಗೂ ತಾಂತ್ರಿಕ ಪರಿಶೀಲನೆ ನಡೆಸಿ ನಿಯಮಗಳು ಮತ್ತು ಮಾರ್ಗಸೂಚಿಗಳಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಅಪರ ಆಯುಕ್ತರು ಸೂಚಿಸಿದರು.

    ಬಾಕಿ ಇರುವ ಸಿಸಿಎಂಎಸ್ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ

    ಇದೇ ವೇಳೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಸಿಎಂಎಸ್ ತಂತ್ರಾಂಶದಲ್ಲಿ ದಾಖಲಾಗಿರುವ ನ್ಯಾಯಾಲಯದ ಪ್ರಕರಣಗಳ ಪ್ರಗತಿ, ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಸೂಕ್ತ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಅಧಿಕಾರಿಗಳ ಲಾಗಿನ್‌ನಲ್ಲಿ ಬಾಕಿ ಇರುವ ದೂರುಗಳು, ವಿವಿಧ ಇಲಾಖೆಗಳ ನ್ಯಾಯಾಲಯದ ಪ್ರಕರಣಗಳ ಪ್ರಸ್ತುತ ಸ್ಥಿತಿ, ಪ್ರಕರಣಗಳ ಹಂತವಾರು ಪ್ರಗತಿ, ಪ್ಯಾರಾವಾರು ಟಿಪ್ಪಣಿಗಳ ಸಿದ್ಧತೆ ಹಾಗೂ ಅಗತ್ಯ ದಾಖಲೆಗಳನ್ನು ವಕೀಲರಿಗೆ ಸಲ್ಲಿಸುವ ಕುರಿತು ಚರ್ಚಿಸಿ, ಪ್ರಕರಣಗಳ ನಿರ್ವಹಣೆಯಲ್ಲಿ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ, ಕೆಪಿಟಿಸಿಎಲ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ವಿಭಾಗ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  • ವಾಲ್ಮೀಕಿ ಅವರು ಆದರ್ಶ ಬದುಕಿನ ಸಂದೇಶ ಸಾರಿದ ಮಹಾನ್ ಋಷಿಗಳು: ಶಾಸಕ ಬೈರತಿ ಬಸವರಾಜ

    ಕೆ.ಆರ್.ಪುರ: ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಅವರು ಜಗತ್ತಿಗೆ ಸಾರಿದ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬೈರತಿ ಬಸವರಾಜ ಅವರು ತಿಳಿಸಿದರು.

    ಕ್ಷೇತ್ರದ ತಾಲ್ಲೂಕು ಕಚೇರಿ ಆವರಣದಲ್ಲಿ ಪೂರ್ವ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದರು.ಜನಾಂಗದವರು ಒಟ್ಟಿಗೆ ಇದ್ದು ಕಾರ್ಯಕ್ರಮವನ್ನು ದೊಡ್ಡದಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.

    ಮಹರ್ಷಿ ವಾಲ್ಮೀಕಿ ಅವರು ಕೇವಲ ರಾಮಾಯಣದ ಕರ್ತೃಗಳಲ್ಲ, ಮಾನವೀಯ ಮೌಲ್ಯಗಳು, ಧರ್ಮ, ನ್ಯಾಯ, ತ್ಯಾಗ, ಕರ್ತವ್ಯ ಪ್ರಜ್ಞೆ ಹಾಗೂ ಆದರ್ಶ ಬದುಕಿನ ಸಂದೇಶ ಸಾರಿದ ಮಹಾನ್ ಋಷಿಗಳು. ಅವರ ಜೀವನ ಮತ್ತು ಸಾಹಿತ್ಯ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ರಾಮಾಯಣದ ಮೂಲಕ ಮಾನವ ಸಂಬಂಧಗಳ ಮಹತ್ವ, ಕುಟುಂಬದ ಮೌಲ್ಯಗಳು, ಸತ್ಯನಿಷ್ಠೆ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವ ಪ್ರೇರಣೆಯನ್ನು ಅವರು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು.

    ಮಹರ್ಷಿ ವಾಲ್ಮೀಕಿ ಅವರ ಬದುಕು ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಬದಲಾವಣೆ ಮತ್ತು ಆತ್ಮಪರಿವರ್ತನೆಯ ಮೂಲಕ ಪ್ರತಿಯೊಬ್ಬರೂ ಉನ್ನತ ಸಾಧನೆ ಮಾಡಬಹುದು ಎಂದರು.

    ವಾಲ್ಮೀಕಿ ಭವನಕ್ಕೆ ಹಾಗೂ ಪುತ್ಥಳಿ ನಿರ್ಮಾನಕ್ಕೆ ಜಾಗ ಗುರುತಿಸಿಕೊಡಿ ಎಂದು ಜನಾಂಗದ ಮುಖಂಡರು ಮನವಿ ಮಾಡಿಕೊಂಡಾಗ ನಮ್ಮ ಬಿಜೆಪಿ ಸರ್ಕಾರ ಬಂದ ಕೂಡಲೇ ನಿಮಗೆ ಜಾಗ ಗುರುತಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ನಂತರ ಮುಂದಿನ ವರ್ಷದೊಳಗೆ ವಾಲ್ಮೀಕಿ ಜನಾಂಗಕ್ಕೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಸಮೂದಾಯ ಭವನಕ್ಕೆ ಜಾಗ ಗುರ್ತಿಸಿಕೊಡುವಂತೆ ತಹಶಿಲ್ದಾರ ಬಳಿ ಮನವಿ ಮಾಡಿದರು.ಸಾಕಷ್ಟು ಬಾರಿ ಪತ್ರಗಳನ್ನ ನೀಡಲಾಗಿದೆ.ಮುಂದಿನ ವರ್ಷದೊಳಗೆ ಜಾಗ ನಿಗಧಿಯಾಗಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಆಂತೋಣಿಸ್ವಾಮಿ ವಾರ್ಡ್ ಅಧ್ಯಕ್ಷ ಶಿವಪ್ಪ, ಶಂಕರ್, ಬೆಂಗಳೂರು ಪೂರ್ವ ತಾಲ್ಲೂಕು ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ನಾಗರಾಜ್, ಸಮಾಜದ ಮುಖಂಡರಾದ ಕಟ್ಟು ಗೊಲ್ಲಹಳ್ಳಿ ಶಿವಕುಮಾ‌ರ್, ಎಂ. ಮಂಜುನಾಥ್, ಈಶ್ವರಾನಂದ ಸ್ವಾಮೀಜಿ, ಉಪಾಧ್ಯಕ್ಷ ಅಜಯ್, ಕಾರ್ಯದರ್ಶಿ ಶಾಂತಕುಮಾ‌ರ್, ಯತೀಶ್ ಕುಮಾರ್, ಮುಖಂಡರಾದ ದುಶ್ಯಂತ್, ದೇವರಾಜ್, ಎಲ್. ಮಂಜುನಾಥ್, ಡೀಸಲ್ ಮಂಜುನಾಥ್, ಪೊಲೀಸ್ ನಾರಾಯಣಪ್ಪ ಮಾಜಿ ಅಧ್ಯಕ್ಷ ವೆಂಕಟೇಶ್, ಶೈಲ, ಗೋಪಿನಾಥ್, ಸಿ.ನಾಗೇಶ್ ಮತ್ತಿತರರು ಹಾಜರಿದ್ದರು.



  • ಈ ಡಿಜಿಟಲ್ ದಸರಾ ಉತ್ಸವಕ್ಕೆ ಚಾಲನೆ.

    ಈ ಡಿಜಿಟಲ್ ದಸರಾ ಉತ್ಸವಕ್ಕೆ ಚಾಲನೆ.

    ಬೆಂಗಳೂರು: ಯುವ ದಸರ ಅಂಗವಾಗಿ ಜಯ ನಗರ ಯುವಪಥದಲ್ಲಿ ಭಾನುವಾರ ಅಣ್ಣಯ್ಯ ಹಾಲ್ ನಲ್ಲಿ ಶಕ್ತಿ ಉತ್ಸವ ಉದ್ಘಾಟನೆಗೊಂಡಿತು.

    ಪರಮ್ ಹಿಸ್ಟರಿ ಪ್ರಸ್ತುತ ಪಡಿಸುತ್ತಿರುವ ಈ ಡಿಜಿಟಲ್ ದಸರಾ ಉತ್ಸವವನ್ನು ಮೈಸೂರು ರಾಜಮನೆತನದ ಕಾಮಾಕ್ಷಿ ದೇವಿ ವಡೆಯರ್ ಹಾಗೂ ದಾರ್ಶಿಕ ಕುಮಾರಿ ಉದ್ಘಾಟಿಸಿದರು. ಪರಮ್ ಹಿಸ್ಟರಿ ನಿರ್ದೇಶಕ ಸಂತೋಷ್ ಜಿ ಆರ್ ಉಪಸ್ಥಿತರಿದ್ದರು.

    ಡಿಜಿಟಲ್ ರೂಪದಲ್ಲಿ ಭಾರತದ ಕ್ಷಾತ್ರ ವನ್ನು ವಿವಿಧ ರೂಪಗಳಲ್ಲಿ ಪ್ರಸ್ತುತ ಪಡಿಸಿರುವ ರೀತಿಯನ್ನು ರಾಜಕುಮಾರಿ ಪ್ರಶಂಸಿಸಿದರು. ಭಾರತದ ಪರಂಪರೆಯನ್ನು ಯುವ ಜನಕ್ಕೆ ಆಸಕ್ತಿಕರ ವಾಗಿ ತಲುಪಿಸುವುದಕ್ಕೆ ಇದೇ ಸೂಕ್ತ ಮಾರ್ಗ ಎಂದು ಹೇಳಿದರು. ಮಹಾನವಮಿ ದಿಬ್ಬ ದ ಮರುಸೃಷ್ಟಿ ಯನ್ನು ವಿಶೇಷವಾಗಿ ಪ್ರಶಂಸಿದ ಅವರು, ಮೈಸೂರು ದಸರಾ ಮೂಲ ಇದೇ ಆಗಿದೆ ಎಂದು ನೆನಪಿಸಿಕೊಂಡರು.

    ಭಾರತದ ಕ್ಷಾತ್ರ ವನ್ನು ಇಮ್ಮೆರ್ಸಿವ್ ಮತ್ತು ಸಂದರ್ಶಕರೇ ಮಾಡಿ ನೋಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುವ ಈ ಡಿಜಿಟಲ್ ದಸರಾ ಈ ತಿಂಗಳ 21ರ ವರೆಗೆ ಸಾರ್ವಜನಿಕ ಮುಕ್ತವಾಗಿದೆ

  • ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಿಸಿ ರಾಷ್ಟ್ರಪತಿ ಆದೇಶ

    ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಿಸಿ ರಾಷ್ಟ್ರಪತಿ ಆದೇಶ

    ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಾಜಿ ಸಂಸದೆ ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.

    ಇದರೊಂದಿಗೆ ಸುಧಾ ಯಾದವ್ ಅವರು ಕರ್ನಾಟಕದ ಇತಿಹಾಸದಲ್ಲಿ ರಾಜ್ಯಪಾಲ ಹುದ್ದೆಗೇರಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಈ ಹಿಂದೆ 1999ರ ಡಿಸೆಂಬರ್‌ನಿಂದ 2002ರ ಆಗಸ್ಟ್‌ವರೆಗೆ ವಿ.ಎಸ್. ರಮಾದೇವಿ ಅವರು ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ರಾಜ್ಯಪಾಲರಾಗಿರುವ ಥಾವರ್‌ಚಂದ್ ಗೆಹಲೋತ್ ಅವರು 2021ರ ಜುಲೈ 11ರಂದು ಅಧಿಕಾರ ವಹಿಸಿಕೊಂಡಿದ್ದರು.
    ಸುಧಾ ಯಾದವ್ ಅವರ ಹಿನ್ನೆಲೆ:
    ಹರಿಯಾಣ ಮೂಲದ 60 ವರ್ಷದ ಸುಧಾ ಯಾದವ್ ಅವರು ರಸಾಯನವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಅದೇ ವಿಷಯದಲ್ಲಿ ರೂರ್ಕಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇವರು ಬಿಎಸ್‌ಎಫ್‌ನ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಸುಖ್‌ಬೀರ್ ಸಿಂಗ್ ಯಾದವ್ ಅವರ ಧರ್ಮಪತ್ನಿ. ಸುಖ್‌ಬೀರ್ ಸಿಂಗ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು.
    ಇತರ ರಾಜ್ಯಗಳಿಗೂ ನೂತನ ರಾಜ್ಯಪಾಲರ ನೇಮಕ:
    ಕರ್ನಾಟಕದ ಜೊತೆಗೆ ಇತರ ಐದು ರಾಜ್ಯಗಳಿಗೂ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ಭವನ ನೇಮಿಸಿದೆ. ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿಗೆ, ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳಕ್ಕೆ ಹಾಗೂ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಸಿಕ್ಕಿಂನ ನೂತನ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.

    ಜಾರ್ಖಂಡ್ ಹಿರಿಯ ನಾಯಕ ಬೃಜ್ ಮೋಹನ್ ರಾಮ್ ಅವರನ್ನು ಒಡಿಶಾ ರಾಜ್ಯಪಾಲರನ್ನಾಗಿ ಹಾಗೂ ಧರ್ಮಸಿಂಗ್ ರಾವತ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ನೇಮಕಾತಿಗಳು ಅವರು ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.