Category: ಬೆಂಗಳೂರು ನಗರ

  • 3,889 ಕೋಟಿ ರೂ.ಗಳ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯವ್ಯಯ ಮಂಡನೆ.

    3,889 ಕೋಟಿ ರೂ.ಗಳ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯವ್ಯಯ ಮಂಡನೆ.

    ಮಹದೇವಪುರ : ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಯಾದ ನಂತರ ಮೊದಲ ಬಾರಿಗೆ ಪ್ರತ್ಯೇಕವಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯವ್ಯಯವನ್ನು ಪಾಲಿಕೆಯ ಆಯುಕ್ತ ಡಿ.ಎಸ್.ರಮೇಶ್ ಮಂಡಿಸಿದ್ದು, 2026-27ನೆ ವರ್ಷದ ಪಾಲಿಕೆಯ ಆಯವ್ಯಯದ ಗಾತ್ರ ಸುಮಾರು 3,889 ಕೋಟಿ ರೂ.ಗಳಾಗಿವೆ.

    2026-27ನೇ ವರ್ಷದಲ್ಲಿ ಪೂರ್ವ ನಗರ ಪಾಲಿಕೆಯ ಆದಾಯವು ಪ್ರಾರಂಭಿಕ ಶಿಲ್ಕು ಸೇರಿ ಒಟ್ಟು ಸ್ವೀಕೃತಿ 3890 ಕೋಟಿಗಳಷ್ಟು ಇದ್ದು, ಒಟ್ಟು 3889.98 ಕೋಟಿ ಇರಲಿದೆ.

    2026-27ನೇ ಸಾಲಿನಲ್ಲಿ 1500 ಕೋಟಿ ಆದಾಯ ಗುರಿ ಹೊಂದಲಾಗಿದ್ದು, ಹೆಚ್ಚುವರಿ ತೆರಿಗೆ ವಿಧಿಸದೆ SOP ಜಾರಿ, ಜಿಬಿಎ ಕಾಯ್ದೆ 2024 ಅನುಸರಣೆ, ಆಸ್ತಿ ತೆರಿಗೆ ಮೌಲ್ಯಮಾಪನ-ವಸೂಲಾತಿ ಬಲಪಡಿಸುವುದು ಹಾಗೂ ತೆರಿಗೆ ಜಾಲದಿಂದ ಹೊರಗಿನ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಮೂಲಕ ಗುರಿಯನ್ನು ಸಾಧಿಸಲಾಗುವುದು.

    ಕಲ್ಯಾಣಕ್ಕೆ 221 ಕೋಟಿ ಮೀಸಲು

    ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ 221 ಕೋಟಿ ಮೀಸಲು ಮಾಡಲಾಗಿದೆ.
    1BHK ಮನೆ ಖರೀದಿಗೆ 5 ಲಕ್ಷ ಸಹಾಯಧನ.
    ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ವಿದೇಶಿ ವಿದ್ಯಾಭ್ಯಾಸ ಪ್ರೋತ್ಸಾಹ.
    ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ.
    ಉಚಿತ ಲ್ಯಾಪ್‌ಟಾಪ್‌ ವಿತರಣೆ (2026-27 ವಿದ್ಯಾರ್ಥಿಗಳಿಗೆ).

    ಪೌರ ಕಾರ್ಮಿಕರು & ಮಹಿಳೆಯರಿಗೆ ವಿಶೇಷ ಯೋಜನೆ
    1605 ಪೌರ ಕಾರ್ಮಿಕರಿಗೆ ಆರೋಗ್ಯ ಯೋಜನೆ
    1330 ಮಂದಿಗೆ ಖಾಯಂ ನೇಮಕ
    ಉದ್ಯೋಗಸ್ಥ ಮಹಿಳೆಯರಿಗೆ ಉಚಿತ ಇ-ಸ್ಕೂಟರ್‌
    ಉಚಿತ ಹೊಲಿಗೆ ತರಬೇತಿ & ಯಂತ್ರ ವಿತರಣೆ

    ವಿಶೇಷ ಚೇತನ & ಬೀದಿ ವ್ಯಾಪಾರಿಗಳಿಗೆ ನೆರವು
    ಎಲೆಕ್ಟ್ರಿಕ್ ವೀಲ್‌ಚೇರ್‌, ವಿಶೇಷ ದ್ವಿಚಕ್ರ ವಾಹನ
    ಬೀದಿ ವ್ಯಾಪಾರಿಗಳಿಗೆ ಇ-ವೆಂಡಿಂಗ್ ವಾಹನ

    ಮೂಲಸೌಕರ್ಯಕ್ಕೆ ದೊಡ್ಡ ಒತ್ತು
    ರಸ್ತೆ, ಟನಲ್, ಫ್ಲೈಓವರ್ ಅಭಿವೃದ್ಧಿಗೆ 450 ಕೋಟಿ
    100 ಕಿಮೀ ಪಾದಚಾರಿ ಮಾರ್ಗ ನಿರ್ಮಾಣ
    ಕೆರೆ, ಉದ್ಯಾನ ಅಭಿವೃದ್ಧಿಗೆ ಆದ್ಯತೆ
    14 ಎಕರೆ ಭೂಸ್ವಾಧೀನ – ರಸ್ತೆ ವಿಸ್ತರಣೆಗಾಗಿ 510 ಕೋಟಿ ಮೌಲ್ಯ

    ಡಿಜಿಟಲ್ ಆಡಳಿತಕ್ಕೆ ಒತ್ತು
    4.5 ಲಕ್ಷ ಖಾತೆಗಳ ಡಿಜಿಟಲೀಕರಣ
    ಇ-ಖಾತಾ, ಜಿಯೋ ಟ್ಯಾಗಿಂಗ್, ಬ್ಲಾಕ್‌ಚೈನ್ ಬಳಕೆ
    ಆನ್‌ಲೈನ್ ಕಟ್ಟಡ ಅನುಮತಿ ವ್ಯವಸ್ಥೆ
    AI ಆಧಾರಿತ ಸಿಬ್ಬಂದಿ ಹಾಜರಕ್ರಮ

    ಆದಾಯ ವೃದ್ಧಿಗೆ ಕ್ರಮ:
    ಆಸ್ತಿ ತೆರಿಗೆ ಬಲಪಡಿಸಿ 150 ಕೋಟಿ ಹೆಚ್ಚುವರಿ ಗುರಿ
    ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ – 225 ಕೋಟಿ ನಿರೀಕ್ಷೆ
    ಜಾಹೀರಾತುಗಳಿಂದ 68 ಕೋಟಿ ಆದಾಯ ಗುರಿ

    ವೆಚ್ಚದ ವಿವರ (3889 ಕೋಟಿ)
    ಸಿಬ್ಬಂದಿ ವೆಚ್ಚ – 302 ಕೋಟಿ
    ಆಡಳಿತ ವೆಚ್ಚ – 82 ಕೋಟಿ
    ಕಸ ವಿಲೇವಾರಿ – 300 ಕೋಟಿ
    ನಿರ್ವಹಣೆ – 342 ಕೋಟಿ
    ಆರೋಗ್ಯ & ಶಿಕ್ಷಣ – 267 ಕೋಟಿ
    ಅಭಿವೃದ್ಧಿ ಕಾಮಗಾರಿಗಳು – 2400 ಕೋಟಿ
    ಸಾಲ ಮರುಪಾವತಿ – 193 ಕೋಟಿ

    ಈ ವೇಳೆ ಶಾಸಕಿ ಮಂಜುಳ ಲಿಂಬಾವಳಿ ಮಾತನಾಡಿ, ಪೂರ್ವ ವಲಯದಲ್ಲಿ ವಾಹನ ಸಂಚಾರ ಹೆಚ್ಚಿರುವುದರಿಂದ ರಸ್ತೆ ಹಾಳಾಗುತ್ತಿವೆ. ವರ್ತೂರು, ಬೆಳ್ಳಂದೂರು ಕೆರೆ ಅಭಿವೃದ್ಧಿ ವೇಗಗೊಳ್ಳಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಅಗತ್ಯ ಎಂದು ಒತ್ತಾಯಿಸಿದರು.

    ಇನ್ನು ಆಯುಕ್ತ ರಮೇಶ್ ಪ್ರತಿಕ್ರಿಯೆ ನೀಡಿ, ಪೂರ್ವ ನಗರ ಪಾಲಿಕೆ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ ರಸ್ತೆ ಸಂಪರ್ಕ, ಮೂಲಸೌಕರ್ಯ ಹಾಗೂ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ ಎಂದು ತಿಳಿಸಿದ್ದಾರೆ.
    ಒಟ್ಟಾರೆ, ಈ ಬಜೆಟ್‌ನಲ್ಲಿ ಮೂಲಸೌಕರ್ಯ ಕಲ್ಯಾಣ ಯೋಜನೆಗಳ ಸಮತೋಲನ ಕಾಣಿಸಿಕೊಂಡಿದ್ದು, ಪೂರ್ವ ಬೆಂಗಳೂರಿನ ವೇಗದ ಅಭಿವೃದ್ಧಿಗೆ ದಿಕ್ಕು ತೋರಿಸುವ ಪ್ರಯತ್ನವಾಗಿದೆ ಎಂದರು.

    ವಿಶೇಷ ಮೂಲಸೌಕರ್ಯ ಯೋಜನೆಯಡಿ ರಸ್ತೆಗಳಿಗೆ ಮೀಸಲಿಟ್ಟಿರುವ ಅನುದಾನ ಇಂತಿದೆ…
    ಮಾರತಹಳ್ಳಿ ವಿಭಾಗ – ರೂ,30 ಕೋಟಿ
    ದೊಡ್ಡನೆಕ್ಕುಂಡಿ- ರೂ.32.50 ಕೋಟಿ
    ವೈಟ್‌ಫೀಲ್ಡ್ – ರೂ.17 ಕೋಟಿ
    ಕಾಡುಗೋಡಿ – ರೂ.0.15 ಕೋಟಿ
    ರಾಮಮೂರ್ತಿನಗರ – ರೂ.27.40 ಕೋಟಿ
    ಕೆ.ಆರ್. ಪುರಂ – ರೂ.20.50 ಕೋಟಿ
    ಹೊರಮಾವು – ರೂ.9 ಕೋಟಿ
    ಎಚ್‌ಎಎಲ್ ವಿಮಾನ ನಿಲ್ದಾಣ ವಿಭಾಗ – ರೂ.3.10 ಕೋಟಿ

  • ಜನ ಸಹಯೋಗ್ ಸಂಘಟನೆ ವತಿಯಿಂದ ಶ್ರೀರಾಮ ನವಮಿ ರಥಯಾತ್ರೆ.. ಬೀದಿ ಬೀದಿಗಳಲ್ಲಿ ಜೈ ಶ್ರೀರಾಮ್ ಘೋಷಣೆ.

    ಮಹದೇವಪುರ: ಮಹದೇವಪುರ: ಶ್ರೀ ರಾಮನವಮಿ ಅಂಗವಾಗಿ ಹೂಡಿ ಗ್ರಾಮದಲ್ಲಿ ಜನ ಸಹಯೋಗ ಸಂಘಟನೆ ಕಾರ್ಯಕರ್ತರು ಶ್ರೀ ರಾಮನ ಮೂರ್ತಿಯನ್ನು ತೆರೆದ ಪಲ್ಲಕ್ಕಿ ವಾಹನದಲ್ಲಿಟ್ಟುಕೊಂಡು ಶ್ರೀ ರಾಮನಿಗೆ ಜೈ ಕಾರ ಹಾಕುತ್ತಾ ಸಾವಿರಾರು ಯುವಕರು ಬೈಕ್ ರ್ಯಾಲಿ ಕೈಗೊಳ್ಳುವ ಮೂಲಕ ಅದ್ದೂರಿಯಾಗಿ ಶ್ರೀ ರಾಮನ ರಥಯಾತ್ರೆ ನಡೆಸಿದರು.

    ಮೊದಲಿಗೆ ಹೂಡಿ ಸ್ಪೋರ್ಟ್ಸ್ ಕ್ಲಬ್ ಬಳಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ವಿಷೇಶ ಪೂಜೆ ಸಲ್ಲಿಸಿ ಶ್ರೀ ರಾಮನ ರಥಯಾತ್ರೆಗೆ ಚಾಲನೆ ನೀಡಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು, ಮರ್ಯಾದೆ ಪುರುಷೋತ್ತಮ ಶ್ರೀರಾಮಚಂದ್ರರ ಆದರ್ಶಗಳು ಸಮಾಜಕ್ಕೆ ದಾರಿ ತೋರಿಸುವಂತಿವೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಜನ ಸಹಯೋಗ್ ಸಂಘಟನ್ ಅಧ್ಯಕ್ಷ ಬೀರ್ ಬಹದ್ದೂರ್ ಸಿಂಗ್, ಕಳೆದ ಎಂಟು ವರ್ಷಗಳಿಂದ ಶ್ರೀರಾಮನವಮಿ ಆಚರಣೆಯನ್ನು ಭವ್ಯವಾಗಿ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದರು.

    ಶೋಭಾಯಾತ್ರೆಯು ಹೂಡಿ ಪ್ರದೇಶದಿಂದ ಪ್ರಾರಂಭವಾಗಿ ತಿಗಳರಪಾಳ್ಯ, ರಾಜಪಾಳ್ಯ, ಐಟಿಪಿಎಲ್, ವೈಟ್‌ಫೀಲ್ಡ್, ವರ್ತೂರು ಕೊಡಿ, ಕುಂದಲಹಳ್ಳಿ ಗೇಟ್,ಮಾರತಹಳ್ಳಿ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿತು.

    ಈ ವೇಳೆ ನೂರಾರು ಯುವಕರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಭಕ್ತಿಪೂರ್ವಕವಾಗಿ ಪಾಲ್ಗೊಂಡರು.
    ಅಲ್ಲಲ್ಲಿ ಮಜ್ಜಿಗೆ, ಪಾನಕ, ಕಮೂಲಕರಿ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಮಹದೇವಪುರ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ ಗ್ರಾಮಾಂತರ ಅಧ್ಯಕ್ಷ ಹೂಡಿ ಪಿಳ್ಳಪ್ಪ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಎಲ್. ರಾಜೇಶ್
    ಸಂಘದ ಉಪಾಧ್ಯಕ್ಷರಾದ ರಾಜೇಶ್ ಕುಮಾರ್,
    ಸುನೀಲ್ ಸಿಂಗ್, ಪ್ರಭಾರಿ ಸಂತೋಷ್ ಚೌಧರಿ, ಪಂಕಜ್ ಠಾಕೂರ್, ಹಾಗೂ ಸಂಘಟನೆಯ ಇತರೆ ಸದಸ್ಯರು ಹಾಜರಿದ್ದರು.

  • ಪೂರ್ವ ತಾಲೂಕು ಪತ್ರಕರ್ತರ ಭವನಕ್ಕೆ ಒತ್ತಾಯ: ಆಯುಕ್ತರಿಂದ ಭರವಸೆ.

    ಮಹದೇವಪುರ :- ಬೆಂಗಳೂರು ಈಸ್ಟ್ ತಾಲೂಕು ಮೀಡಿಯಾ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಬೆಂಗಳೂರು ಪೂರ್ವ ತಾಲೂಕಿನ ಪತ್ರಕರ್ತರು ಕಳೆದ 20 ವರ್ಷಗಳಿಂದ ದಿನಪತ್ರಿಕೆ, ಸಂಜೆ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ನಿಧಿ ಮೀಸಲಿಡುವಂತೆ ಒತ್ತಾಯಿಸಿದರು.

    ಆರೋಗ್ಯ ಚಿಕಿತ್ಸಾ ವೆಚ್ಚ, ಪತ್ರಕರ್ತರ ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 1 ಕೋಟಿ ರೂ. ನಿಧಿ ಮೀಸಲಿಡಬೇಕೆಂದು ಮನವಿ ಸಲ್ಲಿಸಿದರು.

    ಇದಲ್ಲದೆ, ಈ ಭಾಗದಲ್ಲಿ ಪತ್ರಕರ್ತರಿಗಾಗಿ ಪತ್ರಕರ್ತರ ಭವನ ಇಲ್ಲದಿರುವುದರಿಂದ ಕೆ.ಆರ್ ಪುರಂ ವಲಯ ಕಚೇರಿ ಆವರಣದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

    ಮನವಿಗೆ ಸ್ಪಂದಿಸಿದ ಗ್ರೇಟರ್ ಬೆಂಗಳೂರು ಅಥಾರಿಟಿ ಪೂರ್ವ ಆಯುಕ್ತ ಡಿ.ಎಸ್. ರಮೇಶ್ ಅವರು, ಪತ್ರಕರ್ತರ ಭವನ ನಿರ್ಮಾಣಕ್ಕಾಗಿ ಸೂಕ್ತ ಸ್ಥಳ ಗುರುತಿಸಿ ಕಟ್ಟಡ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ, ಪತ್ರಕರ್ತರ ಆರೋಗ್ಯ ರಕ್ಷಣೆಗೆ ನಿಧಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲೂಕು ಪತ್ರಕರ್ತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • The All Karnataka Farmers and Traders’ Federation has continued its campaign to stop roll call at the fair and make way for vehicles

    ಕೆ.ಆರ್.ಪುರ: ಸಂತೆ ಪ್ರದೇಶದ ರಸ್ತೆಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದರಿಂದ ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ತಕ್ಷಣವೇ ರಸ್ತೆ ತೆರವುಗೊಳಿಸಿ ಸಂಚಾರ ಸುಗಮಗೊಳಿಸುವಂತೆ ರೈತ ಸಂಘದ ಮುಖಂಡ ಎಲೆ ಶ್ರೀನಿವಾಸ್ ಆಗ್ರಹಿಸಿದ್ದಾರೆ.

    ಕೆ.ಆರ್.ಪುರ ಸಂತೆಯಲ್ಲಿ ವ್ಯಾಪಾರಿಗಳೊಂದಿಗೆ ಗೋಣಿಚೀಲಗಳನ್ನು ವಸ್ತ್ರದಂತೆ ಧರಿಸಿ ವಿಭಿನ್ನ ಪ್ರತಿಭಟನೆ ಹಮ್ಮಿಕೊಂಡಿದ್ದರು.

    ಈ ಕುರಿತು ಮಾತನಾಡಿದ ಅವರು, ಎಂ.ಎಸ್. ಬಿಲ್ಡಿಂಗ್ ಬಳಿಯ ಸಂಚಾರಿ ವಿಭಾಗದ ಜಂಟಿ ಆಯುಕ್ತರಿಗೆ ಕಾಲ್ನಡಿಗೆ ಮೂಲಕ ತೆರಳಿ ಮನವಿ ಸಲ್ಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

    ಸಂತೆ ಮುಂದೆ ರಸ್ತೆಯನ್ನು ಅರ್ಧಕ್ಕೆ ಮುಚ್ಚಿ ಸುಂಕದ ಹೆಸರಿನಲ್ಲಿ ದಿನಕ್ಕೆ ಸುಮಾರು 50,000 ರಿಂದ 60,000 ವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಈ ಆಕ್ರಮಣದಿಂದ ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆ ವಾಹನಗಳಿಗೂ ಸರಿಯಾಗಿ ದಾರಿ ಬಿಡುತ್ತಿಲ್ಲ. ಬೆಳಗಿನ ಸಮಯದಲ್ಲಿ ಕೇವಲ 500-600 ಮೀಟರ್ ದೂರ ಸಾಗಲು
    10 ರಿಂದ 15 ನಿಮಿಷ ಸಮಯ ಬೇಕಾಗುತ್ತಿದೆ ಎಂದು ವ್ಯಕ್ತಪಡಿಸಿದರು.

    ಮಾರ್ಕೆಟ್ ವ್ಯಾಪಾರಿಗಳು ರಸ್ತೆ ಬ್ಲಾಕ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು , ಈ ಸಮಸ್ಯೆ ಕುರಿತು ಕಳೆದ ಎರಡು ತಿಂಗಳಿನಿಂದ ಕೆಳಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲಧಿಕಾರಿಗಳವರೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ಮಾಧ್ಯಮದ ಗಮನಕ್ಕೆ ವಿಷಯ ಬಂದ ನಂತರ ಸಂಚಾರಿ ಹಿರಿಯ ಅಧಿಕಾರಿಗಳು ಬಂದು ಪರಿಶೀಲನೆ ನಂತರ ಸ್ವಲ್ಪ ಮಟ್ಟಿಗೆ ರಸ್ತೆ ಸ್ವಚ್ಛವಾಗಿರುವುದು ಗಮನಾರ್ಹವಾದರೂ, ಇದನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

    ರಸ್ತೆ ಸಂಚಾರದ ಜವಾಬ್ದಾರಿ ಟ್ರಾಫಿಕ್ ಇಲಾಖೆಗೆ ಸೇರಿದ್ದು, ಯಾವುದೇ ಕಾರಣಕ್ಕೂ ರಸ್ತೆ ಮೇಲೆ ಅಂಗಡಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಹೇಳಿದರು.
    ಬಿಬಿಎಂಪಿ ಅಧಿಕಾರಿಗಳು ಕೂಡ ಅಂಗಡಿಗಳನ್ನು ಒಳಭಾಗಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

    ಸಾರ್ವಜನಿಕರು ಸಹ ಸಹಕಾರ ನೀಡಿ ಮುಕ್ತ ಸಂಚಾರಕ್ಕೆ ಸಹಕರಿಸಬೇಕು ಎಂದು ಕೋರಿದರು.
    ಇನ್ನೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿದ್ದಲ್ಲಿ, ಮುಂದಿನ ಒಂದು ವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದರು.

  • ಕೆ.ಆರ್.ಪುರ ಸಂತೆಯಲ್ಲಿ ರೋಲ್ ಕಾಲ್ ವಸೂಲಿ: ಗೋಣಿ ಚೀಲ ತೊಟ್ಟು ಕಾಲ್ನಡಿಗೆ ಜಾಥಾ

    ಕೆ.ಆರ್.ಪುರ ಸಂತೆಯಲ್ಲಿ ರೋಲ್ ಕಾಲ್ ವಸೂಲಿ: ಗೋಣಿ ಚೀಲ ತೊಟ್ಟು ಕಾಲ್ನಡಿಗೆ ಜಾಥಾ

    ಕೆ.ಆರ್.ಪುರ: ರೋಲ್ ಕಾಲ್ ವಸೂಲಿ ತಡೆಗಟ್ಟಿ, ಒತ್ತುವರಿಯಾದ ರಸ್ತೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಕಾರ್ಯಕರ್ತರು ಗೋಣಿಚೀಲ ತೊಟ್ಟು ಕೆ.ಆರ್.ಪುರದ ಸಂತೆ ಮೈದಾನದಿಂದ ಸಂಚಾರಿ ಉಪ ಆಯುಕ್ತರ ಕಚೇರಿವರೆಗೂ ಕಾಲ್ನಡಿಗೆ ಜಾಥಾ ನಡೆಸಿದರು.

    ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ ಶ್ರೀನಿವಾಸ್ ಅವರು ಕೆಆರ್ ಪುರ ಸಂತೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಒಂದು ಗಂಟೆಯಿಂದ ಬೆಳಗಿನ ಜಾವ ಎಂಟು ಗಂಟೆವರೆಗೂ ಹಲವು ರೈತರು ಹಾಗೂ ವ್ಯಾಪಾರಿಗಳು ರಾಷ್ಟ್ರೀಯ ಹೆದ್ದಾರಿಯನ್ನ ಮುಕ್ಕಾಲು ಭಾಗ ವ್ಯಾಪರಕ್ಕೆ ಉಪಯೋಗಿಸುಕೊಳ್ಳುತ್ತಿದ್ದಾರೆ ಸಂಚಾರ ದಟ್ಟಣೆ ಉಂಟಾಗುತ್ತಿದೆ ಎಂದು ಆರೋಪಿಸಿದರು.

    ಆಂಬ್ಯೂಲೆನ್ಸ್ ವಾಹನಗಳು ಮತ್ತು ಶಾಲಾ ಮಕ್ಕಳ ವಾಹನಗಳಿಗೂ ಸಹ ರಸ್ತೆಯನ್ನು ಬಿಡುವುದಿಲ್ಲ ಎಂದು ವ್ಯಾಪಾರಿಗಳು ಆರೋಪಿಸಿದರು.

    ಸಂತೆ ಪ್ರದೇಶದಿಂದ 1.5 ಕಿಮೀ ದೂರದಲ್ಲಿರುವ ಅಂಗಡಿಗಳಿಂದಲೂ ಅಕ್ರಮವಾಗಿ ಸುಂಕ ವಸೂಲಿ ಮಾಡಲಾಗುತ್ತಿದೆ ಅಲ್ಲದೆ ರಸ್ತೆಯಲ್ಲಿ ನಿಲ್ಲಿಸಿರುವ ವಾಹನಗಳಿಗೆ ₹1000 ರೂಗಳು ಹಾಗೂ ಅಂಗಡಿ ಹಾಕಿಕೊಂಡವರ ಬಳಿ ₹300 ರೂಗಳಿಂದ ₹400 ರೂಗಳ ವರೆಗೂ ಹಣವನ್ನು ಅಕ್ರಮವಾಗಿ ವಸೂಲಿ ಮಾಡುತ್ತಿದ್ದು ಇದನ್ನು ತಡೆಗಟ್ಟಲು ಸಂತೆಯ ಗಡಿ ಗುರುತಿಸುವಂತೆ ಒತ್ತಾಯಿಸಿದರು.

    ಪೊಲಿಸರಿಗೆ ದುಡ್ಡು ನೀಡುತ್ತಿದ್ದೇವೆ ನಮ್ಮನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿಕೊಂಡು ಕಿಡಿಗೇಡಿಗಳು ಓಡಾಡುತ್ತಿದ್ದಾರೆ. ಇಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

    ಸಂಬಂಧ ಪಟ್ಟ ಇಲಾಖೆಗಳು, ಸಂಚಾರಿ, ಹಾಗೂ ಕಾನೂನು ಸುವ್ಯವಸ್ಥೆ ಠಾಣೆಯಲ್ಲಿ ದೂರು ದಾಖಲಿಸಿದ್ದರು ಯಾವುದೇ ಪ್ರಯೋಜವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಮನವಿಗೆ ಸ್ಪಂದಿಸಿದ ಆಯುಕ್ತ ರಮೇಶ್ ಶೀಘ್ರವಾಗಿ ಸಂತೆ ಗಡಿ‌ ಗುರುತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ವಿ ಶಿವಶಂಕರ್, ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಪದಾಧಿಕಾರಿಗಳಾದ‌‌ ಆರ್, ಕುಮಾರ್, ವಿನೋದ್ ಕುಮಾರ್, ‌ಶ್ರೀನಿವಾಸ್ ಮತ್ತಿತರರು ಇದ್ದರು.

  • ಜಯನಗರದಲ್ಲಿ ಸಾಂಸ್ಕೃತಿಕ ಸೌರಭ: ‘ಪರಮ್ ವಿಹಾರ’ ವೇದಿಕೆಯಲ್ಲಿ ಮೇಳೈಸಿದ ಗಾನ-ನೃತ್ಯ ವೈಭವ

    ಜಯನಗರದಲ್ಲಿ ಸಾಂಸ್ಕೃತಿಕ ಸೌರಭ: ‘ಪರಮ್ ವಿಹಾರ’ ವೇದಿಕೆಯಲ್ಲಿ ಮೇಳೈಸಿದ ಗಾನ-ನೃತ್ಯ ವೈಭವ


    • ಪರಮ್ ವಿಹಾರದಲ್ಲಿ ಉದಯೋನ್ಮುಖ ಕಲಾವಿದರ ಅನಾವರಣ
    • ಮಾನ್ಯ ಮಂಜುನಾಥ್ ಗಾಯನಕ್ಕೆ ಶ್ರೋತೃಗಳು ಫಿದಾ
    • ಮನಸೂರೆಗೊಂಡ ಶ್ರೀನಿಧಿ ರಾಮಸ್ವಾಮಿ ನೃತ್ಯ ಪ್ರದರ್ಶನ
    • ಪಟ್ಟಾಭಿರಾಮ ಸೇವಾ ಮಂಡಳಿಯಲ್ಲಿ ಮೇಳೈಸಿದ ಶಾಸ್ತ್ರೀಯ ನಾದ
    • ಗಾನ-ನೃತ್ಯ ಸಂಗಮಕ್ಕೆ ಬೆಂಗಳೂರು ಕಲಾಪ್ರೇಮಿಗಳ ಸಾಕ್ಷಿ
    • ಪರಮ್ ಫೌಂಡೇಶನ್‌ನ ಪರಮ್‌ ವಿಹಾರ ಹತ್ತನೇ ಸರಣಿ ಯಶಸ್ವಿ

    ಬೆಂಗಳೂರು: ಇಲ್ಲಿನ ಜಯನಗರದಲ್ಲಿರುವ ಪಟ್ಟಾಭಿರಾಮ ಸೇವಾ ಮಂಡಳಿಯ ಸಭಾಂಗಣವು ಭಾನುವಾರ ಸಂಜೆ ಒಂದು ಅಪರೂಪದ ಕಲಾ ದರ್ಶನಕ್ಕೆ ಸಾಕ್ಷಿಯಾಯಿತು. ‘ಪರಮ್ ಫೌಂಡೇಶನ್’ ವತಿಯಿಂದ ಆಯೋಜಿಸಲಾಗಿದ್ದ ‘ಪರಮ್ ವಿಹಾರ-10’ ಕಾರ್ಯಕ್ರಮವು ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಘಮವನ್ನು ಪಸರಿಸಿ, ಸೇರಿದ್ದ ಕಲಾಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಈ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

    *ಮನಸೂರೆಗೊಂಡ ಮಾನ್ಯ ಮಂಜುನಾಥ್ ಕಂಠಸಿರಿ*
    ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಮಾನ್ಯ ಮಂಜುನಾಥ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ತಮ್ಮ ಸುಶ್ರಾವ್ಯ ಕಂಠದಿಂದ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದ ಅವರು, ಲಯಬದ್ಧ ಗಾಯನದ ಮೂಲಕ ಗಮನ ಸೆಳೆದರು. ಇವರಿಗೆ ಮೃದಂಗದಲ್ಲಿ ವಿದ್ವಾನ್ ಸುಮಧುರ್ ಅನೂರ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ರಾಘವೇಂದ್ರ ಡಿ.ಆರ್. ಅವರು ಅತ್ಯುತ್ತಮ ಸಾಥ್ ನೀಡುವ ಮೂಲಕ ಸಂಗೀತ ಕಛೇರಿಯ ರಂಗನ್ನು ಹೆಚ್ಚಿಸಿದರು. ವಾದ್ಯಗಳ ನಾದ ಮತ್ತು ಗಾಯನದ ಸಮನ್ವಯವು ಶ್ರೋತೃಗಳಿಗೆ ಹಿತವಾದ ಅನುಭವ ನೀಡಿತು.

    *ಶ್ರೀನಿಧಿ ರಾಮಸ್ವಾಮಿ ಅವರ ನೃತ್ಯ ವೈಭವ*
    ಗಾಯನದ ನಂತರ ನಡೆದ ಕುಮಾರಿ ಶ್ರೀನಿಧಿ ರಾಮಸ್ವಾಮಿ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವು ಸಭೆಯ ಕಣ್ಮಣಿಯಾಯಿತು. ಸಾಂಪ್ರದಾಯಿಕ ನೃತ್ಯ ಪ್ರಕಾರದ ಘನತೆ ಮತ್ತು ಲಾಸ್ಯವನ್ನು ತಮ್ಮ ಅಭಿನಯದ ಮೂಲಕ ಶ್ರೀನಿಧಿಯವರು ತೆರೆದಿಟ್ಟರು. ಅವರ ಹಾವಭಾವಗಳು ಹಾಗೂ ಪಾದಚಲನೆಯು ಶಾಸ್ತ್ರೀಯ ನೃತ್ಯದ ಶಿಸ್ತನ್ನು ಸಾರುತ್ತಿತ್ತು. ರಂಗದ ಮೇಲಿನ ಅವರ ಪ್ರತಿಯೊಂದು ಭಂಗಿಯೂ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.

    *ಪರಮ್‌ನಿಂದ 10ನೇ ಆವೃತ್ತಿ ಕಾರ್ಯಕ್ರಮ*
    ಪರಮ್ ಫೌಂಡೇಶನ್‌ನ ಈ 10ನೇ ಆವೃತ್ತಿಯು ಹೊಸ ತಲೆಮಾರಿನ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ದೊಡ್ಡ ಯಶಸ್ಸು ಕಂಡಿದೆ. ಸಂಜೆ 6 ಗಂಟೆಯಿಂದ ಆರಂಭವಾದ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ನಾನಾ ಭಾಗಗಳಿಂದ ಬಂದಿದ್ದ ಸಂಗೀತ ಮತ್ತು ನೃತ್ಯ ಆಸಕ್ತರು ಕಲಾವಿದರನ್ನು ಹುರಿದುಂಬಿಸಿದರು.

  • ಕುದುರೆಮುಖ ಕಾಡ್ಗಿಚ್ಚು, ಪಶುವೈದ್ಯೆ ಸಾವು: ಅರಣ್ಯ ಸಚಿವರಿಂದ ತುರ್ತು ಸಭೆ: ತನಿಖೆಗೆ ಆದೇಶ, 30 ಲಕ್ಷ ಪರಿಹಾರ ಘೋಷಣೆ

    ಕುದುರೆಮುಖ ಕಾಡ್ಗಿಚ್ಚು, ಪಶುವೈದ್ಯೆ ಸಾವು: ಅರಣ್ಯ ಸಚಿವರಿಂದ ತುರ್ತು ಸಭೆ: ತನಿಖೆಗೆ ಆದೇಶ, 30 ಲಕ್ಷ ಪರಿಹಾರ ಘೋಷಣೆ

    ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ 25ಕ್ಕೂ ಹೆಚ್ಚು ಕಡೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಮಂಗಳೂರು ವಿಭಾಗದ ಅರಣ್ಯಾಧಿಕಾರಿ ಮರಿಯಪ್ಪ ಕರಿಕಳನ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ.

    ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಕೆಲವರು ಮೂಢನಂಬಿಕೆಯಿಂದ ಮತ್ತು ಕೆಲವು ಕಿಡಿಗೇಡಿಗಳು ಕಾಡಿಗೆ ಬೆಂಕಿ ಕೊಟ್ಟಿದ್ದಾರೆ ಮತ್ತು ಕಾಡ್ಗಿಚ್ಚು ವೀಕ್ಷಕರ(Fire watchers) ಕೊರತೆಯೂ ಈ ಅನಾಹುತಕ್ಕೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು.

    ಕುದುರೆಮುಖ ಅರಣ್ಯದೊಳಗಿರುವ ಕೆಲವು ನಿವಾಸಿಗಳು ಸ್ವಯಂ ಪ್ರೇರಿತವಾಗಿ ಹೊರಬರಲು ಇಚ್ಛಿಸಿದ್ದು, ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ, ಕಾಂಪಾ ನಿಧಿಯಿಂದ ಅರಣ್ಯ ವಾಸಿಗಳ ಸ್ಥಳಾಂತರ ಕುರಿತಂತೆ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಿ ತಕ್ಷಣವೇ ಕಡತದಲ್ಲಿ ಸಲ್ಲಿಸುವಂತೆಯೂ ಸೂಚಿಸಿದರು.

    ಯಾರಾದರೂ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದ್ದರೆ ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ಈಶ್ವರ ಖಂಡ್ರೆ, ಅಧಿಕಾರಿ ಮತ್ತು ಸಿಬ್ಬಂದಿಯ ಲೋಪವಿದ್ದರೆ ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡುವಂತೆ ತಿಳಿಸಿದರು.

    ಯುವ ವೈದ್ಯೆ ಸಾವಿಗೆ ಸಂತಾಪ:

    ಶಿವಮೊಗ್ಗದ ಮೃಗಾಲಯದಲ್ಲಿ 27 ವರ್ಷದ ಯುವ ಪಶುವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಿದ ಸಚಿವರು, ಯಾವುದೇ ಸಿಬ್ಬಂದಿ ಅಥವಾ ಪಶುವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಪ್ರಮಾಣಿತ ಮಾನದಂಡ(SOP) ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡಲು ತಿಳಿಸಿದರು.

    ಈ ಸಾವು ಅತ್ಯಂತ ನೋವು ತಂದಿದೆ. ಈ ದುಃಖದ ಸಮಯದಲ್ಲಿ ಸರ್ಕಾರ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. 30 ಲಕ್ಷ ರೂ. ಪರಿಹಾರ ನೀಡಲು ಸಚಿವರು ಸೂಚಿಸಿದರು.

    ಪ್ರಕರಣ ಕುರಿತಂತೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ಮಾಡಿಸಿ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು.

    ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಪಾಲ್ಗೊಂಡಿದ್ದರು.

  • ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

    ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

    ಕೆ.ಆರ್.ಪುರ:- ಬಡವರ ಸಮಗ್ರ ಬೆಳವಣಿಗೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹೆಚ್ಚು ಸಹಕಾರಿಯಾಗಿದೆ ಎಂದು
    ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ‌.ಮೋಹನ್ ಅವರು ತಿಳಿಸಿದರು.

    ಕೆ.ಆರ್.ಪುರ ಕ್ಷೇತ್ರದ ಕೃಷ್ಣನಗರ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಅವಕಾಶ ದೊರೆತಿದೆ ಅಲ್ಲದೆ,ಮೂಲಭೂತ ಸೌಕರ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ನುಡಿದರು.

    ಯುವ ನಾಯಕರು ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ತನ್ನದೆ ಆದ ಕೊಡುಗೆ ನೀಡುವಂತೆ ಸಲಹೆ ನೀಡಿದರು. ಕೃಷ್ಣನಗರ ವಾರ್ಡನ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರು ಮಾತನಾಡಿ ಯುಗಾದಿ ಹಾಗೂ ರಂಜಾನ್ ಗಾಗಿ ಬಡವರಿಗೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಸೇವಾ ಕಾರ್ಯಗಳತ್ತ ಗಮನ ಹರಿಸಿದ್ದೆನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಆಯೋಜಕ ಡಿ.ಕೆ.ಹರೀಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಳಪ್ಪ, ಮುಖಂಡರಾದ ಚನ್ನಕೇಶವ, ಬಾಲಕೃಷ್ಣ, ಆಂಜಿನಪ್ಪ, ಎಸ್ ಎಲ್ .ವಿ.ವೆಂಕಟೇಶ್, ಭರತ್, ರಾಜಹಂಸ, ಪ್ರವೀಣ್,ಸಂತೋಷ್  ಮತ್ತಿತರರಿದ್ದರು.

  • ಜನೋಪಯೋಗಿ ಕೆಲಸಗಳ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ರಾಜ್ಯ ಪರಿಷತ್ ಸದಸ್ಯ  ಎಲ್.ರಾಜೇಶ್.

    ಜನೋಪಯೋಗಿ ಕೆಲಸಗಳ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಲ್.ರಾಜೇಶ್.

    ಮಹದೇವಪುರ: ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಹಾಗೂ ಮಹದೇವಪುರ ಕ್ಷೇತ್ರ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಎಲ್.ರಾಜೇಶ್ ಅವರು ತಮ್ಮ ಹುಟ್ಟು ಹಬ್ಬವನ್ನು ವೈಟ್ ಫೀಲ್ಡ್ ನ ಇನ್ನರ್ ಸರ್ಕಲ್ ಮೈದಾನದಲ್ಲಿ ಕ್ಷೇತ್ರದ ಶಾಸಕಿ ಮಂಜುಳ ಲಿಂಬಾವಳಿಯವರ ಕ್ಷೇತ್ರದ ಮುಖಂಡರ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡರು.

    ನೂರಾರು ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಕೇಕ್ ಕತ್ತರಿಸಿ, ಸನ್ಮಾನಿಸುವ ಮೂಲಕ ಶುಭಾಶಯ ಕೋರಿದರು. ಜೊತೆಗೆ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ಶಿಬಿರ, ಬಡವರಿಗೆ ದಿನಸಿ ಕಿಟ್, ಸೀರೆ ವಿತರಣೆ, ಆಟೋ ಚಾಲಕರಿಗೆ ಸಮವಸ್ತ್ರ,ಅಂಗವಿಕಲರಿಗೆ ವೀಲ್ ಚೇರ್, ಬೀದಿ ವ್ಯಾಪಾರಿಗಳಿಗೆ ತಲ್ಲು ಗಾಡಿ, ಅನಾಥ ಆಶ್ರಮಗಳಿಗೆ ಸಹಾಯ ಊಟದ ವ್ಯವಸ್ಥೆ ಹೀಗೆ ಹಲವಾರು ಸೇವಾಕಾರ್ಯಗಳನ್ನು ಆಯೋಜಿಸಿದ್ದು, ಕ್ಷೇತ್ರದ ಜನತೆ ಸದುಪಯೋಗ ಪಡೆದುಕೊಂಡರು.

    ಕಾರ್ಯಕ್ರಮ ಕುರಿತು ಮತನಾಡಿ ಎಲ್.ರಾಜೇಶ್ ಅವರು. ಮಾಜಿ ಸಚಿವರಾದ ಅರವಿಂದ ಲಿಂಬಾವಳಿ ಅವರ ಆದರ್ಶ, ಮಾರ್ಗದರ್ಶನದಂತೆ ಅವರ ಹಾದಿಯಲ್ಲಿ ಸಾಗುತ್ತಿದ್ದೇನೆ. ನನ್ನ ಜನ್ಮದಿನದಂದು ಅನಗತ್ಯವಾಗಿ ದುಂದು ವೆಚ್ಚ ಮಾಡದೆ, ಬಡವರಿಗೆ ಅನುಕೂಲವಾಗುವಂತೆ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಅನಾಥಾಶ್ರಮಗಳಲ್ಲಿ ಮಕ್ಕಳು, ವೃದ್ಧರಿಗೆ ಹಣ್ಣು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳಲಾ ಗುತ್ತಿದೆ ಎಂದು ತಿಳಿಸಿದರು.

    ಕ್ಷೇತ್ರದಲ್ಲಿ ಸರಳತೆ, ಜನಸ್ನೇಹಿ ಆಡಳಿತ ನಡೆಸುತ್ತಿರುವ ಅರವಿಂದ ಲಿಂಬಾವಳಿ ಅವರ ಆದರ್ಶಗಳನ್ನು ಪಾಲಿಸಬೇಕಾದುದು ಅವರ ಅಭಿಮಾನಿಯಾದ ನಮ್ಮ ಕರ್ತವ್ಯವಾಗಿದ್ದು, ಅವರ ಪಾಲನೆಯಂತೆ ಇಂದು ನಮ್ಮ ಶಾಸಕರ ಸಮ್ಮುಖದಲ್ಲಿ ಬಡವರಿಗೆ ದಿನಸಿ ಕಿಟ್. ಅಂಗವಿಕಲರಿಗೆ ವೀಲ್ ಚೇರ್. ಹೂರುಗೋಲು ಆರೋಗ್ಯ ಶಿಬಿರ, ಸೀರೆ ವಿತರಣೆ, ಮಕ್ಕಳ ಶಿಕ್ಷಣಕ್ಕಾಗಿ ಪ್ರೋತ್ಸಾಹ.ಬಿಬಿಎಂಪಿ ಪೌರ ಕಾರ್ಮಿಕರಿಗೆ ದಿನಸಿ ಕಿಟ್ಟು ಬಟ್ಟೆ, ಆಟೋ ಚಾಲಕರಿಗೆ ಬಟ್ಟೆ,ಬುದ್ದಿ ಮಾಂದ್ಯ ಮಕ್ಕಳಿಗೆ ಊಟ ಹಣ್ಣು ವಿತರಣೆ ಹೀಗೆ ಹಲವಾರು ಸೇವ ಕಾರ್ಯಕ್ರಮ ನೀಡುತ್ತಿದೇನೆ. ಇದರಿಂದ ನನ್ನ ಮನಸ್ಸಿಗೂ ಸಂತೋಷ ತಂದಿದೆ ಎಂದರು.

    ಈ ಸಂದರ್ಭದಲ್ಲಿ ಕ್ಷೇತ್ರ ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮಾಜಿ ಅಧ್ಯಕ್ಷ ಮನೋಹರ್ ರೆಡ್ಡಿ, ಮುಖಂಡರಾದ ಮಾರಪ್ಪ, ಹೂಡಿ ಮಂಜುನಾಥ್ ವರ್ತೂರು ಶ್ರೀಧರ್,ವಿಪಿ ರಕ್ಷಿತ್, ಮಧುಗೌಡ, ರವಿ ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

    ಬಡವರಿಗೆ ಸಹಾಯಹಸ್ತ ನೀಡಿದ ಬಿಜೆಪಿ ಯುವ ಮುಖಂಡ ಎಲ್ ರಾಜೇಶ್.