Category: ಬೆಂಗಳೂರು ನಗರ

  • ಇನ್‌ಸ್ಟಾಗ್ರಾಮ್ ನಲ್ಲಿ ಅರಳಿದ ಪ್ರೀತಿ, ಲಿವ್-ಇನ್ ಬದುಕು.. ಹೆಣವಾದ ಯುವಕ: ಪರಾರಿಯಾದ ಇಬ್ಬರು ಮಕ್ಕಳ ತಾಯಿ!

    ಇನ್‌ಸ್ಟಾಗ್ರಾಮ್ ನಲ್ಲಿ ಅರಳಿದ ಪ್ರೀತಿ, ಲಿವ್-ಇನ್ ಬದುಕು.. ಹೆಣವಾದ ಯುವಕ: ಪರಾರಿಯಾದ ಇಬ್ಬರು ಮಕ್ಕಳ ತಾಯಿ!

    ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿದೆ. ಸಂಸಾರ, ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಲಿವ್-ಇನ್‌ನಲ್ಲಿದ್ದ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ದುರ್ದೈವಿ. ಈತ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ದಾವಣಗೆರೆ ಮೂಲದ ಮಹಿಳೆಯ ಪರಿಚಯವಾಗಿತ್ತು. ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಇನ್‌ಸ್ಟಾಗ್ರಾಮ್ ಪ್ರೇಮದ ಅಮಲಿನಲ್ಲಿ ಪತಿ ಮತ್ತು ಮಕ್ಕಳನ್ನು ತೊರೆದು ತಿಪ್ಪೇಸ್ವಾಮಿ ಜೊತೆ ಬೆಂಗಳೂರಿಗೆ ಬಂದಿದ್ದಳು.

    ಕಳೆದ ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ ಈ ಜೋಡಿ, ತಾವು ಗಂಡ-ಹೆಂಡತಿ ಎಂದು ನಂಬಿಸಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ, ಸುಂದರವಾಗಿದ್ದ ಈ ಸಂಬಂಧದಲ್ಲಿ ಕೆಲವೇ ದಿನಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.

    ಪತಿ-ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆ, ಇತ್ತೀಚೆಗೆ ತಿಪ್ಪೇಸ್ವಾಮಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದಳಂತೆ. “ನಿನ್ನಿಂದ ನನ್ನ ಮೆಂಟೇನೆನ್ಸ್ (ಖರ್ಚು) ಭರಿಸಲು ಸಾಧ್ಯವಿಲ್ಲ, ನನ್ನನ್ನು ಬಿಟ್ಟುಬಿಡು” ಎಂದು ಆಕೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ.

    ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಗಾಬರಿಯಾದ ಮಹಿಳೆ ನಾಪತ್ತೆಯಾಗಿದ್ದಾಳೆ. ಮಗನ ಸಾವಿಗೆ ಈ ಮಹಿಳೆಯೇ ಕಾರಣ ಎಂದು ತಿಪ್ಪೇಸ್ವಾಮಿ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಕ್ಷಣಿಕ ಸುಖದ ಪ್ರೀತಿ ಮತ್ತು ಸೋಶಿಯಲ್ ಮೀಡಿಯಾ ಮೋಹದ ಹಿಂದೆ ಬಿದ್ದಾಗ ಸುಂದರ ಬದುಕುಗಳು ಹೇಗೆ ಹಳಿ ತಪ್ಪುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

  • ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ. ಕ್ಷೇತ್ರದಲ್ಲಿ ಪೂರ್ವಸಿದ್ಧತಾ ಸಭೆ

    ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ. ಕ್ಷೇತ್ರದಲ್ಲಿ ಪೂರ್ವಸಿದ್ಧತಾ ಸಭೆ

    ಮಹದೇವಪುರ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ವತಿಯಿಂದ ಮಾರತ್ತಹಳ್ಳಿಯ ಎಸ್‌.ಬಿ.ಆರ್. ಪ್ಯಾಲೆಸ್‌ನಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

    ಈ ವೇಳೆ ಮಾತನಾಡಿದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಅವರು, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಇದೇ ಮೇ 10ರಂದು ನಡೆಯಲಿರುವ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ರವಿಶಂಕರ್ ಗುರೂಜಿಯ ವರ 70ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


    ಪ್ರಧಾನಮಂತ್ರಿಯವರ ಭೇಟಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ವಾರ್ಡ್ ಮಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲ ಎರಡೂ ಮಂಡಲಗಳ
    ವಾರ್ಡ್ ಅಧ್ಯಕ್ಷರುಗಳು ಹಾಗೂ ಎಲ್ಲಾ ಮುಖಂಡರುಗಳು ಜನರನ್ನು ಸೇರಿಸುವ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಬೇಕು ಎಂದರು.

    ಸಮರ್ಪಕವಾಗಿ ಪ್ರತಿಯೊಬ್ಬರೂ ತಮಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

    ನಗರ ಮಂಡಲ ಅಧ್ಯಕ್ಷ ಎನ್.ಆರ್. ಶ್ರೀಧರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಎಸ್. ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ಲೋಕನಾಥ್ ರೆಡ್ಡಿ, ಯಮಲೂರು ಲೋಕೇಶ್, ಬೈರತಿ ಕುಮಾರ್, ನಾಗೇಶ್ ರೆಡ್ಡಿ, ಕೆ.ವಿ. ನಾಗರಾಜ್, ಮಂಜುನಾಥ್, ಇತರರು ಉಪಸ್ಥಿತರಿದ್ದರು

  • ಸಾಲ ಕೊಟ್ಟ ವೃದ್ಧೆಗೆ ಅಪಘಾತ : ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು.!

    ಸಾಲ ಕೊಟ್ಟ ವೃದ್ಧೆಗೆ ಅಪಘಾತ : ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು.!

    ಬೆಂಗಳೂರು: ಹಣಕ್ಕಾಗಿ ಸಾಲ ಕೊಟ್ಟ ಮಹಿಳೆಯನ್ನ ಆಕ್ಸಿಡೆಂಟ್ ಮಾಡಿ ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಮನೆ ಕೀ ಪಡೆದು ಹಣಕ್ಕಾಗಿ ಮನೆಯೆಲ್ಲಾ ಹುಡುಕಾಟ ಮಾಡಿದ ಗ್ಯಾಂಗ್. ಇತ್ತ ಆಕ್ಸಿಡೆಂಟ್ ಆದ ಮಹಿಳೆ ಸಾವನ್ನಪ್ಪಿದ ಬಳಿಕ ಇದು ಆಕ್ಸಿಡೆಂಟ್ ಅಲ್ಲ ಕೊಲೆ ಅಂತಾ ಕನ್ಫರ್ಮ್ ಆಗಿ ಐವರ ಬಂಧನ ಮಾಡಲಾಗಿತ್ತು. ವಿಧಿಯಾಟ ಅಂದ್ರೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ ವೃದ್ದೆಯ ಪೋಸ್ಟ್ ಮಾರ್ಟಂ ದಿನವೇ ಆರೋಪಿ ಪೊಲೀಸ್ ವಶದಲ್ಲಿದ್ದಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

    ಹೌದು. ಕಷ್ಟ ಅಂತ ಹೇಳಿ ಕಾಡಿ ಬೇಡಿ ವೃದ್ಧೆಯ ಬಳಿ ಆತ ಸಾಲ ಪಡೆದಿದ್ದ. ಆದರೆ, ಹಣ ವಾಪಸ್ ನೀಡಿರಲಿಲ್ಲ. ಹಣ ವಾಪಸ್ ಕೊಡುವಂತೆ ಪೀಡಿಸಿದಾಗ ಆತ ಮಾಡಿದ ಕೆಲಸ ನಿಜಕ್ಕೂ ಆಘಾತಾಕಾರಿ. ವೃದ್ಧೆಗೆ ಅಪಘಾತವೆಸಗಿ ಆಕೆಯ ಮನೆಯಲ್ಲೇ ಮತ್ತೆ ಹಣ ದೋಚೋ ಪ್ಲ್ಯಾನ್‌ ಮಾಡಿ ಜೈಲು ಸೇರಿದ ಕಿರಾತಕರ ಕತೆ ಇದು.

    ಆಕೆ ಹೇಳಿ ಕೇಳಿ ಒಂಟಿ ಮಹಿಳೆ. ಜೀವನಕ್ಕೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಒಂದಷ್ಟು ಹಣ ಕೂಡಿಸಿ ಜೀವನ ನಡೆಸ್ತಿದ್ಲು. ಆದ್ರೆ ಹಣಕ್ಕಾಗಿ ಕಿರಾತಕರು ಭರ್ಜರಿ ಪ್ಲಾನ್ ಮಾಡಿ ವೃದ್ಧೆಗೆ ಅಪಘಾತವೆಸಗಿ ಕೊಲೆ ಮಾಡಿದ್ರು. ಪೊಲೀಸರ ತನಿಖೆಯಲ್ಲಿ ಐದು ಮಂದಿ ಗ್ಯಾಂಗ್ ನ ಘನಘೋರ ಕೃತ್ಯ ಬಟಾಬಯಲಾಗಿದೆ.

    ಹಣಕ್ಕಾಗಿ ಮಹಿಳೆಯ ಜೀವವನ್ನೇ ತೆಗೆದು ಐವರು ಕಿರಾತಕರನ್ನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಏಪ್ರಿಲ್‌ 21ರಂದು ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದು ಮಹಿಳೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದರು. ಆದರೆ ಇದು ಕೇವಲ ಅಪಘಾತವಲ್ಲ ಉದ್ದೇಶಪೂರ್ವಕ ಕೊಲೆ ಅಂತಾ ಐವರು ಆರೋಪಿಗಳಾದ ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್, ಯೋಹಾನ್ ನನ್ನ ಬಂಧನ ಮಾಡಲಾಗಿದೆ..

       ಆಕ್ಸಿಡೆಂಟ್, ಕಳ್ಳತನ, ಕೊಲೆ – ತ್ರಿಕೋನ ಕಥೆ

    ರಸ್ತೆಯಲ್ಲಿ ನಡೆದು ಹೋಗ್ತಿದ್ದ ವಿಜಯಲಕ್ಷ್ಮಿಗೆ ರಾಕೇಶ್ ಬೈಕ್ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಅದೇ ವೇಳೆಗೆ ಆಟೋದಲ್ಲಿ ಬಂದ ಪ್ರದೀಪ್, ಯೋಹಾನ್, ಮಂಜುನಾಥ್ ಎಲ್ಲರು ಸೇರಿ ವಿಜಯಲಕ್ಷ್ಮಿಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಈ ವೇಳೆ ಮಂಜುನಾಥ್ ವಿಜಯಲಕ್ಷ್ಮಿ ಪರ್ಸ್ ನಲ್ಲಿದ್ದ ಮನೆ ಕೀ ತೆಗೆದುಕೊಂಡು ನೇರವಾಗಿ ಆಕೆಯ ಮನೆಗೆ ಬಂದು ಹಣ, ಚಿನ್ನಾಭರಣ ಹುಡುಕುತ್ತಿದ್ನಂತೆ. ಅನುಮಾನ ಬಂದ ಅಕ್ಕಪಕ್ಕದ ಮನೆಯವರು ಪ್ರಶ್ನೆ ಮಾಡಿದಾಗ, ವಿಜಯಲಕ್ಷ್ಮಿಗೆ ಆಕ್ಸಿಡೆಂಟ್ ಆಗಿದೆ, ಹೀಗಾಗಿ ಆಕೆ ಆಧಾರ್ ಕಾರ್ಡ್ ಬೇಕಿತ್ತು ಎಂದು ಸುಳ್ಳು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರು ಹೆಚ್ಚು ಪ್ರಶ್ನೆ ಮಾಡಿದಾಗ ಮಂಜುನಾಥ ಅಲ್ಲಿಂದ ಪರಾರಿಯಾಗಿದ್ದಾನೆ.

    ಅತ್ತ ವಿಜಯಲಕ್ಷ್ಮಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿದ್ದು, ಈ ವೇಳೆ ಆರೋಪಿ ರಾಕೇಶ್ ತಾನೇ ವಿಜಯನಗರ ಸಂಚಾರಿ ಪೊಲೀಸರಿಗೆ ದೂರು ಕೊಟ್ಟು, ಪರಿಚಯಸ್ಥ ವಿಜಯಲಕ್ಷ್ಮಿಯನ್ನ ತಾನೇ ಕಾಪಾಡಿದ್ದೇನೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಕ್ರಮ ತೆಗೆದುಕೊಳ್ಳಿ ಅಂತಾ ದೂರು ನೀಡಿದ್ದಾನೆ.

    ಇತ್ತ 2 ದಿನದ ಬಳಿಕ ಘಟನೆಯಲ್ಲಿ ಪೊಲೀಸರಿಗೆ ಅನುಮಾನ ಬಂದಿದ್ದು, ವಿಜಯಲಕ್ಷ್ಮೀ ಮನೆ ಮಾಲೀಕ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಳ್ಳತನ ಯತ್ನದ ದೂರು ನೀಡಿದ್ದಾರೆ. ಈ ಕೇಸ್ ತನಿಖೆಗೆ ಇಳಿದ ಪೊಲೀಸರಿಂದ ಅಸಲಿ ಕಥೆ ಬಯಲಾಗಿದ್ದು, ತನಿಖೆ ವೇಳೆ ಉದ್ದೇಶಪೂರ್ವಕವಾಗಿ ಕೊಲೆ ಎಂಬುದು ಪತ್ತೆಯಾಗಿದೆ‌.

    ಆರೋಪಿ ಚೇತನ್, ವಿಜಯಲಕ್ಷ್ಮಿ ಬಳಿ ಹಣ ಸಾಲ ಪಡೆದಿದ್ದು, ಆಕೆ ಬಳಿ ಇನ್ನು ಹಣ ಇದೆ ಅಂತ ಕಳ್ಳತನಕ್ಕೆ ಸ್ಕೆಚ್ ಹಾಕಿದ್ನಂತೆ. ಇದಕ್ಕಾಗಿ ಪರಿಚಯಸ್ಥ ಮಂಜುನಾಥ್, ಇತರರನ್ನ ಸೇರಿಸಿಕೊಂಡು ಪ್ಲಾನ್ ಮಾಡಿದ್ದಾರೆ. ಪ್ಲಾನ್ ನಂತೆ ಡಿಕ್ಕಿ ಹೊಡೆದು ವಿಜಯಲಕ್ಷ್ಮಿಯನ್ನ ಕೊಲೆ‌ ಮಾಡಿರೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮಹಿಳೆ ಮೃತಳಾದ ಎರಡೇ ದಿನಕ್ಕೆ ಆರೋಪಿ ಮಂಜುನಾಥ್ ಕೂಡ ಅನಾರೋಗ್ಯದಿಂದ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಸಾವನ್ನಪ್ಪಿದ್ದಾನೆ.

    ಸದ್ಯ ಕೊಲೆ ಕೇಸ್ ದಾಖಲಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದು, ವೃದ್ಧೆ ಪೋಸ್ಟ್ ಮಾರ್ಟಂ ದಿನವೇ ಆರೋಪಿಯೊಬ್ಬ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

    ಸಾರಾಂಶ :ಅದಕ್ಕೇ ಹೇಳೋದು ಕರ್ಮ ರಿಟರ್ನ್ಸ್ ಅಂತಾ.. ಒಳ್ಳೇದು ಮಾಡಿದ್ರೆ ಒಳ್ಳೆದು ಬರುತ್ತೆ.. ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ ಸಿಗುತ್ತೆ.

  • ಮಕ್ಕಳಿಗಾಗಿ ಇತಿಹಾಸದ ವಿಸ್ಮಯ ಲೋಕ: ‘ಅನ್ವೇಷಣ 2026’ರಲ್ಲಿ ಪರಂಪರೆಯ ಅನಾವರಣ!

    ಮಕ್ಕಳಿಗಾಗಿ ಇತಿಹಾಸದ ವಿಸ್ಮಯ ಲೋಕ: ‘ಅನ್ವೇಷಣ 2026’ರಲ್ಲಿ ಪರಂಪರೆಯ ಅನಾವರಣ!

    • ಪಠ್ಯದ ಮಿತಿಯಾಚೆ ಇತಿಹಾಸ ಅರಿಯಲು ಮಕ್ಕಳಿಗೊಂದು ಸುವರ್ಣಾವಕಾಶ
    • ಜಯನಗರದ ಯುವಪಥದಲ್ಲಿ ಮೇ 11ರಿಂದ ಬೇಸಿಗೆಯ ಸಂಭ್ರಮ
    • ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಹಾಗೂ ಕುತೂಹಲ ಮೂಡಿಸುವ ಗುರಿ
    • ಪ್ರಾಯೋಗಿಕ ಕಲಿಕೆಯ ಮೂಲಕ ಇತಿಹಾಸದ ದಂತಕಥೆಗಳ ಪರಿಚಯ
    • 6 ರಿಂದ 16 ವರ್ಷದ ಪುಟಾಣಿಗಳ ಜ್ಞಾನದಾಹಕ್ಕೆ ಇಲ್ಲಿದೆ ವೇದಿಕೆ

    ಬೆಂಗಳೂರು : ಪುಟಾಣಿಗಳ ಜ್ಞಾನದಾಹವನ್ನು ತಣಿಸಲು ಮತ್ತು ನಮ್ಮ ಭವ್ಯ ಇತಿಹಾಸದ ಬಗ್ಗೆ ಕುತೂಹಲ ಮೂಡಿಸಲು ಪರಮ್ ಹಿಸ್ಟರಿ ಸೆಂಟರ್ ಅದ್ಭುತ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಯುವಕ ಸಂಘದ ಸಹಯೋಗದೊಂದಿಗೆ ನಡೆಯುತ್ತಿರುವ’ಅನ್ವೇಷಣ 2026′ ಎಂಬ ಈ ವಿಶಿಷ್ಟ ಕಾರ್ಯಕ್ರಮವು ಮೇ 11 ರಿಂದ ಮೇ 17 ರವರೆಗೆ ಜಯನಗರದ 4ನೇ ಬ್ಲಾಕ್‌ನಲ್ಲಿರುವ ‘ಯುವಪಥ’ದಲ್ಲಿ ನಡೆಯಲಿದೆ.

    ವಿಭಿನ್ನ ಮತ್ತು ಆಕರ್ಷಕ ಕಾರ್ಯಚಟುವಟಿಕೆ, ರೋಚಕ ಕಥೆಗಳು ಹಾಗೂ ನೈಜ ಅನುಭವದ ಮಾಧ್ಯಮಗಳ ಮೂಲಕ ಮಕ್ಕಳನ್ನು ನಮ್ಮ ಇತಿಹಾಸದ ಕಾಲಗರ್ಭಕ್ಕೆ ಕರೆದೊಯ್ಯುವುದು ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಬರೀ ಪುಸ್ತಕದ ಪಾಠಗಳಿಗೆ ಸೀಮಿತವಾಗದೆ, ಇತಿಹಾಸವನ್ನು ಸ್ಪರ್ಶಿಸಿ, ಅನುಭವಿಸಿ ಕಲಿಯುವ ವಿನೂತನ ಮಾದರಿಯನ್ನು ಇಲ್ಲಿ ರೂಪಿಸಲಾಗಿದೆ.

    ಇತಿಹಾಸದೊಂದಿಗೆ ಮುಖಾಮುಖಿ: ಇಲ್ಲಿದೆ ಹತ್ತು ಹಲವು ವಿಶೇಷತೆ!

    ಈ ಬಾರಿ ಶಿಬಿರದಲ್ಲಿ ಇತಿಹಾಸದ ಗಂಭೀರ ವಿಷಯಗಳನ್ನು ಮಕ್ಕಳಿಗೆ ಮೋಜಿನ ರೂಪದಲ್ಲಿ ಹೇಳಿಕೊಡಲು ಈ ಕೆಳಗಿನ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿದೆ:

    • ಪುರಾತತ್ವ ಉತ್ಖನನ (Archaeology Simulation): ಭೂಮಿಯ ಅಡಿಯಲ್ಲಿ ಅಡಗಿರುವ ಇತಿಹಾಸವನ್ನು ಹೊರತೆಗೆಯುವ ನೈಜ ಅನುಭವ.
    • ಪ್ರಾಚೀನ ಕಲೆ ಮತ್ತು ಕರಕುಶಲ: ಹಳೆಯ ಕಾಲದ ಆಭರಣಗಳ ತಯಾರಿಕೆ ಮತ್ತು ನೈಜವಾಗಿ ಮಣ್ಣಿನಲ್ಲಿ ಮಡಿಕೆ ಮಾಡುವ ಕಲೆ.
    • ಕಾಲಯಾನದ ಕಥೆಗಳು: ನಮ್ಮ ನಾಡಿನ ವೀರರ ದಂತಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಕಥಾ ಸೆಷನ್‌ಗಳು.
    • ಡಿಜಿಟಲ್ ಪರಿಶೋಧನೆ: ಆಧುನಿಕ ತಂತ್ರಜ್ಞಾನದ ಮೂಲಕ ಐತಿಹಾಸಿಕ ತಾಣಗಳ ವರ್ಚುವಲ್ ಭೇಟಿ.
    • ಮೋಜಿನ ಆಟಗಳು: ಇತಿಹಾಸ ಪ್ರಜ್ಞೆ ಮೂಡಿಸುವ ಒಳಾಂಗಣ ಕ್ರೀಡೆಗಳು ಹಾಗೂ ಸೃಜನಶೀಲ ಕಲೆಗಳ ಬಗ್ಗೆ ಇಲ್ಲಿ ಕಲಿಯಬಹುದಾಗಿದೆ.

    ಶಿಬಿರದ ಸಮಯ ಮತ್ತು ವಯೋಮಿತಿ

    ಈ ಅನ್ವೇಷಣ ಶಿಬಿರವು ಪ್ರತಿದಿನ ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:20ರವರೆಗೆ ನಡೆಯಲಿದ್ದು, 6 ರಿಂದ 16 ವರ್ಷ ವಯಸ್ಸಿನ ಮಕ್ಕಳು ಈ ಜ್ಞಾನಯಜ್ಞದಲ್ಲಿ ಪಾಲ್ಗೊಳ್ಳಬಹುದು. ಮಕ್ಕಳಿಗೆ ಅತ್ಯುತ್ತಮ ಸಾಂಸ್ಕೃತಿಕ ಬುನಾದಿ ಹಾಕಲು ಇದೊಂದು ಸುಸಮಯವಾಗಿದೆ.
    ಹೆಚ್ಚಿನ ವಿವರಕ್ಕಾಗಿ ಇಲ್ಲಿ ಸಂಪರ್ಕಿಸಿ

    “ಅನ್ವೇಷಣ 2026” – ಆಡುತ್ತಾ, ಕಲಿಯುತ್ತಾ ನಮ್ಮ ಇತಿಹಾಸದ ದಂತಕಥೆಗಳನ್ನು ಅನ್ವೇಷಿಸಿ!
    ನಿಮ್ಮ ಮಕ್ಕಳ ಬೇಸಿಗೆಯ ರಜೆಯನ್ನು ಅರ್ಥಪೂರ್ಣವಾಗಿಸಲು ಇಂದೇ ಹೆಸರನ್ನು ನೋಂದಾಯಿಸಿ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ದೂರವಾಣಿ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಸಂಪರ್ಕಿಸಿ:
    • ದೂರವಾಣಿ ಸಂಖ್ಯೆ: 9035034728
    • ಇಮೇಲ್: events@paramexp.org
    • ಸ್ಥಳ: ಯುವಪಥ, ನಂ. 4, 31ನೇ ಕ್ರಾಸ್, 11ನೇ ಮೇನ್, 4ನೇ ಬ್ಲಾಕ್, ಜಯನಗರ, ಬೆಂಗಳೂರು.

  • ವಿಜೃಂಭಣೆಯಿಂದ ನಡೆದ ಹೂಡಿ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ.

    ವಿಜೃಂಭಣೆಯಿಂದ ನಡೆದ ಹೂಡಿ ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ.

    ಮಹದೇವಪುರ:- ಹೂಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ ಪ್ರಯುಕ್ತ ಶನಿವಾರ ನಡೆದ ಪಲ್ಲಕಿ ಉತ್ಸವ ಹಾಗೂ ಶ್ರೀ ದ್ರೌಪದಮ್ಮ ಹೂವಿನ ಕರಗ ಅದ್ದೂರಿಯಾಗಿ ಜರಗಿತು. ಈ ಸಂದರ್ಭದಲ್ಲಿ 14 ಗ್ರಾಮ ದೇವತೆಗಳ ಪಲ್ಲಕ್ಕಿ ಮೆರವಣಿಗೆ ಗ್ರಾಮದೆಲ್ಲೆಡೆ ಸಂಭ್ರಮ ಮೂಡಿಸಿತು.

    ಈ ಸಂದರ್ಭದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಗ್ರಾಮ ದೇವತೆಗಳ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

    ಶ್ರೀ ಮಹಾಗಣಪತಿ, ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ, ಶ್ರೀ ಭೈರವೇಶ್ವರ ಸ್ವಾಮಿ , ಶ್ರೀ ಬಸವೇಶ್ವರ ,ಶ್ರೀ ಸುಬ್ರಹ್ಮಣ್ಯ ಸ್ವಾಮಿ , ಶ್ರೀ ಆಂಜನೇಯ ಸ್ವಾಮಿ, ಶ್ರೀ ವೆಂಕಟರಮಣ ಸ್ವಾಮಿ, ಶ್ರೀ ಅಣ್ಣಮ್ಮ ಮತ್ತು ಮದ್ದೂರಮ್ಮ ದೇವಿ ಸೇರಿದಂತೆ ಇತರೆ ಗ್ರಾಮ ದೇವತೆಗಳ ಪಲ್ಲಕ್ಕಿಗಳು ವಿಶೇಷ ಅಲಂಕಾರಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

    ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕಿಗಳ ಮೆರವಣಿಗೆ ಭಕ್ತಿ ಭಾವದಿಂದ ಸಾಗಿದ್ದು, ನಾದಸ್ವರ, ಗಾರಡಿ ಬೊಂಬೆ ಹಾಗೂ ಡೊಳ್ಳುಗಳ ಸದ್ದಿನ ನಡುವೆ ಭಕ್ತರು ಹಾಡುತ್ತಾ ಉತ್ಸವವನ್ನು ಮತ್ತಷ್ಟು ವೈಭವಮಯಗೊಳಿಸಿದರು.

     ಪಲ್ಲಕ್ಕಿ ಸಾಗುವ ದಾರಿಯಲ್ಲಿ ಗ್ರಾಮದ ಪ್ರತಿ ಮನೆಗಳಿಂದ ದೇವರಿಗೆ ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

    ಪಲ್ಲಕಿ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವರುಗಳ ದರ್ಶನ ಪಡೆದು ಆಶೀರ್ವಾದ ಪಡೆದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನೆಲೆಸಿದ್ದು, ಎಲ್ಲೆಡೆ ಭಕ್ತಿಭಾವದ ಸಂಭ್ರಮ ಕಣ್ಣಿಗೆ ಕಂಡಿತು.

    ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಹೆಚ್ ಎಸ್ ಪಿಳ್ಳಪ್ಪ, ಮಂಜುನಾಥ್, ಅನೂಪ್ ಕುಮಾರ್, ಅಂಜಿನಪ್ಪ, ನರೇಂದ್ರ ಬಾಬು, ವಿಜಯ್ ಗೌಡ, ಮಹೇಶ್ ಗೌಡ, ಪವನ್ ಶೆಟ್ಟಿ, ಪವನ್ ರೆಡ್ಡಿ ಸೇರಿದಂತೆ ಹಲವಾರು ಹಾಜರಿದ್ದರು.

  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ಮಹಿಳಾ ಪೊಲೀಸ್ ಅಧಿಕಾರಿ ಎಸ್ಪಿ ಲಾವಣ್ಯ ಸಾವು.!!!

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಎಸ್ಪಿ ಲಾವಣ್ಯ ಸಾವು.!!!

    ಬೆಂಗಳೂರು: ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಎಸ್ಪಿ ಲಾವಣ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

    ಬೆಸ್ಕಾಂ ವಿಜಿಲೆನ್ಸ್ ನಲ್ಲಿ ಎಸ್ಪಿಯಾಗಿದ್ದ ಲಾವಣ್ಯಅವರು ಕೊಲೊನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು,ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಮೃತರು 10 ವರ್ಷದ ಗಂಡು ಮಗು ಹಾಗೂ 3 ವರ್ಷದ ಹೆಣ್ಣುವನ್ನು ಅಗಲಿದ್ದಾರೆ.

    ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದವರಾದ ಲಾವಣ್ಯ ಅವರು 2010 ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿಯಾಗಿದ್ದರು 2023 ರಿಂದ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ..

    ಮಂಡ್ಯ ಮತ್ತು ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಇಂಟಲಿಜೆನ್ಸ್ ಮತ್ತು ಡಿಸಿಆರ್‌ಇ ಎಸ್ಪಿ ಆಗಿ ಕೆಲಸ ಮಾಡಿದ್ದಾರೆ.

    ಇತ್ತೀಚೆಗಷ್ಟೇ ವಿದ್ಯಾರಣ್ಯಪುರದಲ್ಲಿರುವ ನಿವಾಸಕ್ಕೆ ಎರಡು ತಿಂಗಳ ಹಿಂದೆ DG&IGP ಡಾ. ಎಂ.ಎ ಸಲೀಂ ಭೇಟಿ ನೀಡಿ ಧೈರ್ಯ ತುಂಬಿದ್ದರು. ಚೇತರಿಸಿಕೊಳ್ಳುವಂತೆ ಹಾರೈಸಿ ಕುಟುಂಬದವರಿಗೂ ಸಹ ಧೈರ್ಯ ತುಂಬಿ ಬಂದಿದ್ದರು.

    ಮೃತರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ದೊಡ್ಡಗಂಜೂರಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಯುವ ಅಧಿಕಾರಿಯ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ದಕ್ಷ ಅಧಿಕಾರಿಯ ಅಗಲಿಕೆಯಿಂದ ಪೊಲೀಸ್ ಇಲಾಖೆಗೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ

  • ಸಂಭ್ರಮ ಸಡಗರದಿಂದ ಜರುಗಿದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ.

    ಸಂಭ್ರಮ ಸಡಗರದಿಂದ ಜರುಗಿದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ.

    ಮಹದೇವಪುರ: ಹೂಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ ಭಕ್ತರ ಜಯ ಘೋಷದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

    ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

    ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಮೆರವಣಿಗೆಯಲ್ಲಿ ತಂದು ಅಲಂಕೃತ ರಥದಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಪೂಜಾರಿಗಳು ರಥದಲ್ಲಿ ಮತ್ತೊಮ್ಮೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸೇವಾ ಮಂಡಳಿ ಸದಸ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ಹೂಡಿ ಗ್ರಾಮದ ಪ್ರಮುಖ ಬೀದಿಯಲ್ಲಿ ರಥವನ್ನ ಗ್ರಾಮಸ್ಥರು ಭಕ್ತಿಭಾವದಿಂದ ಎಳೆದರು.

    ರಥಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣು, ದವನ, ಹೂ ಮುಂತಾದ ಮಂಗಳಕರ ವಸ್ತುಗಳನ್ನು ಅರ್ಪಿಸಿ ಹರಕೆ ತೀರಿಸಿದರು.
    ರಥದ ಮುಂದೆ ಸಿಂಗಾರಗೊಂಡ ಎತ್ತುಗಳ ಬಂಡಿ, ಕಂಸಾಳೆ, ಡೊಳ್ಳು ಕುಣಿತ, ತಮಟೆ ಹಾಗೂ ಮಂಗಳವಾದ್ಯಗಳ ನಾದ ರಥೋತ್ಸವಕ್ಕೆ ಮೆರೆಗನ್ನು‌ ನೀಡಿತು.

    ಹೂಡಿ, ತಿಗಳರಪಾಳ್ಯ, ರಾಜಪಾಳ್ಯ, ಅಯ್ಯಪ್ಪನಗರ, ಕಾವೇರಿ ನಗರ, ಗರುಡಾಚಾರ್ ಪಾಳ್ಯ, ಮಹದೇವಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.

    ಭಕ್ತರಿಗಾಗಿ ಅನ್ನದಾಸೋಹ, ಪಾನಕ ಹಾಗೂ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಅದನ್ನು ಸವಿದು ಧಾರ್ಮಿಕ ಉತ್ಸವವನ್ನು ಸಾರ್ಥಕಗೊಳಿಸಿದರು.

    ಐದು ದಿನಗಳ ಕಾಲ ನಡೆಯುವ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಜನರಲ್ಲಿ ಸಂತಸ ಮತ್ತು ಉತ್ಸಾಹ ತುಂಬಿದವು. ಗ್ರಾಮಸ್ಥರು ಹಾಗೂ ಭಕ್ತರು ಉತ್ಸವವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದರು.

    ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಹೆಚ್.ಟಿ. ಶ್ರೀನಿವಾಸ್ ರೆಡ್ಡಿ, ಹೆಚ್.ಎಸ್. ಪಿಳ್ಳಪ್ಪ, ಮಂಜುನಾಥ್, ಹೆಚ್.ಎನ್. ಮೋಹನ್ ರೆಡ್ಡಿ, ಅನೂಪ್ ಕುಮಾರ್, ಓಂ ಶಕ್ತಿ ಶ್ರೀನಿವಾಸ್ ರೆಡ್ಡಿ, ವಿಶ್ವನಾಥ್ ರೆಡ್ಡಿ,ಆಂಜಿನಪ್ಪ, ನರೇಂದ್ರ ಬಾಬು, ವಿಜಯ್ ಗೌಡ, ಮಹೇಶ್ ಗೌಡ, ಪವನ್ ಶೆಟ್ಟಿ, ಪವನ್ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

  • 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ‘ಕಾಮಪಿಶಾಚಿ’ ಅರೆಸ್ಟ್!

    20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ‘ಕಾಮಪಿಶಾಚಿ’ ಅರೆಸ್ಟ್!

    ಬೆಂಗಳೂರು: ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು, ರಕ್ಷಣೆ ನೀಡಬೇಕಾದ ವ್ಯಕ್ತಿಯೇ ಭಕ್ಷಕನಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಸದಸ್ಯ ಚಂದ್ರೇಗೌಡ ಎಂಬಾತನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈತನ ಮೊಬೈಲ್ ಕೆದಕಿದ ಪೊಲೀಸರಿಗೇ ಶಾಕ್ ಕಾದಿತ್ತು!
    ಆರೋಪಿ ಚಂದ್ರೇಗೌಡ ಕೇವಲ ಒಬ್ಬ ವ್ಯಕ್ತಿಯಲ್ಲ, ಈತ ನಕಲಿ ಐಡಿ ಕಾರ್ಡ್‌ಗಳ ಸರದಾರ. ತಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಹಾಗೂ ಉಪನ್ಯಾಸಕ ಎಂದು ಸುಳ್ಳು ಹೇಳಿ ಮಹಿಳೆಯರನ್ನು ನಂಬಿಸುತ್ತಿದ್ದ. ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರಿಗೆ ಮದುವೆಯಾಗುವ ನಾಟಕವಾಡಿ, ಆಕೆಯ ಕೊರಳಿಗೆ ಅರಿಶಿನದ ಕೊಂಬು ಕಟ್ಟಿ ನಂಬಿಸಿದ್ದ.

    ಮೊಬೈಲ್‌ನಲ್ಲಿತ್ತು 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋ!
    ಸಂತ್ರಸ್ತ ಮಹಿಳೆ ಚಂದ್ರೇಗೌಡನ ಮೊಬೈಲ್ ನೋಡಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ. ಮೊಬೈಲ್‌ನಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ಫೋಟೋ ಮತ್ತು ವಿಡಿಯೋಗಳಿದ್ದವು. ಇವುಗಳನ್ನು ಇಟ್ಟುಕೊಂಡು ಮಹಿಳೆಯರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ದೂರು ನೀಡಿದ ಮಹಿಳೆಯಿಂದಲೇ ಈತ ಸುಮಾರು 5 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ.

    ಆರೋಪಿಯ ವಿಚಿತ್ರ ವಂಚನೆ ಜಾಲ:
    ದಾಖಲೆ ತಿದ್ದುಪಡಿ: ಸಂತ್ರಸ್ತೆಯ ಮಗಳ ಶಾಲಾ ದಾಖಲೆಗಳಲ್ಲಿ ತನ್ನ ಹೆಸರನ್ನೇ ತಂದೆಯ ಸ್ಥಾನಕ್ಕೆ ಸೇರಿಸಲು ಪ್ರಯತ್ನಿಸಿದ್ದ.
    ನಕಲಿ ಗಂಡ: ಮನೆಯ ಕರಾರು ಪತ್ರದಲ್ಲಿ ತಾನೇ ಗಂಡ ಎಂದು ಬಿಂಬಿಸಿಕೊಂಡಿದ್ದ.
    ತಾಯಿಯ ಬಳಕೆ: ತನ್ನ ತಾಯಿಯನ್ನು ಸಂತ್ರಸ್ತೆಯ ಮನೆಯಲ್ಲೇ ಬಿಟ್ಟು ವರ್ಷಗಟ್ಟಲೆ ಸೇವೆ ಮಾಡಿಸಿಕೊಂಡಿದ್ದ.

    ಮಹಿಳೆಯ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಹನಿ ಟ್ರ್ಯಾಪ್ ಪ್ರಕರಣದಡಿ ಚಂದ್ರೇಗೌಡನನ್ನು ಬಂಧಿಸಿದ್ದಾರೆ.ಆರೋಪಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದು, ಅದರಲ್ಲಿರುವ ಸಾಕ್ಷ್ಯಗಳು ಕಂಡು ಪೊಲೀಸರೇ ದಂಗಾಗಿದ್ದಾರೆ. ಈತ ಸಿನಿಮಾ ಒಂದರಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದನಂತೆ. ಅದೇ ಫೋಟೋ ಇಟ್ಕೊಂಡು ಮಹಿಳೆಯರಿಗೆ ತಾನೊಬ್ಬ ಪೊಲೀಸ್ ಅಂತಾ ನಂಬಿಸಿ ಮೋಸ ಮಾಡಿದ್ದಾನೆ. ಸದ್ಯ ಈತನಿಂದ ಇನ್ಯಾರಾದರೂ ವಂಚನೆಗೆ ಒಳಗಾಗಿದ್ದಾರಾ ಅನ್ನೋ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.ಒಟ್ಟಿನಲ್ಲಿ ಮಕ್ಕಳ ರಕ್ಷಣೆ ಮಾಡಬೇಕಾದವರೇ ಮಹಿಳೆಯರ ಶೋಷಣೆಗೆ ಇಳಿದಿರೋದು ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ

  • ಬೌರಿಂಗ್ ಆಸ್ಪತ್ರೆ: ಗೋಡೆ ಕುಸಿತದಲ್ಲಿ 7 ಸಾವು ;  24 ತಾಸಿನಲ್ಲೇ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ

    ಬೌರಿಂಗ್ ಆಸ್ಪತ್ರೆ: ಗೋಡೆ ಕುಸಿತದಲ್ಲಿ 7 ಸಾವು ; 24 ತಾಸಿನಲ್ಲೇ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ

    ಬೆಂಗಳೂರಲ್ಲಿ ಸುರಿದ ಭಾರೀ ಮಳೆಯಿಂದ ಸಂಭವಿಸಿದ ದುರಂತದಲ್ಲಿ ಬೌರಿಂಗ್ ಆಸ್ಪತ್ರೆ ಹಿಂಭಾಗದ ಕಾಂಪೌಂಡ್ ಗೋಡೆ ಕುಸಿದು ಏಳು ಜನರು ಸಾ*ವನ್ನಪ್ಪಿದ್ದರು.

    ಈ ದುರ್ಘಟನೆ ಹಿನ್ನೆಲೆಯಲ್ಲಿ ಮೃ*ತರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರವನ್ನು ಘೋಷಿಸಲಾಗಿದ್ದು, ಜಿಬಿಎ ವತಿಯಿಂದ ಪರಿಹಾರ ಚೆಕ್‌ಗಳನ್ನು ವಿತರಿಸಲಾಗಿದೆ.

    ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಅವರು ಚೆಕ್‌ಗಳನ್ನು ವಿತರಿಸಿ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಾನವೀಯ ನೆರವು ಒದಗಿಸಿದರು.

    ಸಿಎಂ ಮತ್ತು ಡಿಸಿಎಂ ಸೂಚನೆಯಂತೆ ತಕ್ಷಣ ಕ್ರಮ ಕೈಗೊಳ್ಳಲಾಗಿದ್ದು, ಅಭಿವೃದ್ಧಿ ಅಪರ ಆಯುಕ್ತ ದಲ್ಜಿತ್ ಕುಮಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಅಧಿಕಾರಿಗಳು ಸಾಂತ್ವನ ವ್ಯಕ್ತಪಡಿಸಿದ್ದಾರೆ.

  • ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂತರ ರೂ.ಮೌಲ್ಯದ ಬೆಳ್ಳಿ ಲೂಟಿ!

    ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂತರ ರೂ.ಮೌಲ್ಯದ ಬೆಳ್ಳಿ ಲೂಟಿ!

    ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯದರ ಏರಿಕೆಯಾಗುತ್ತಿದ್ದಂತೆ ಕಳ್ಳರು ಮತ್ತೆ ತಮ್ಮ ಕೈಚಳಕ ತೋರಿಸಲು ಶುರುಮಾಡಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯ ಎಂಟನೇ ಮೈಲಿ ಬಳಿಯ ಹಾವನೂರಿನಲ್ಲಿರುವ ಎಂಬಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಭೀಕರ ಕಳ್ಳತನ ನಡೆದಿದ್ದು, ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕದೀಮರು ದೋಚಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅತ್ಯಂತ ಯೋಜಿತವಾಗಿ ಕಳ್ಳತನ ಮಾಡಲಾಗಿದೆ. ಜ್ಯುವೆಲ್ಲರಿ ಶಾಪ್‌ನ ಹಿಂಭಾಗದ ರೂಮ್‌ನ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ನಂತರ ಗೋಡೆಯನ್ನು ಕೊರೆದು ಮಳಿಗೆಯೊಳಗೆ ಪ್ರವೇಶಿಸಿ ಸುಮಾರು 70 ಕೆಜಿ ಬೆಳ್ಳಿ ವಸ್ತುಗಳ್ಳನ್ನು ಕದ್ದಿದ್ದಾರೆ.

    ಕಳ್ಳತನದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಳಿಗೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಕಳ್ಳರು ಗೋಡೆ ಕೊರೆಯಲು ಬಳಸಿದ ವಿಧಾನಗಳನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

    ಸದ್ಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ನಗರದಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿರುವುದು ವ್ಯಾಪಾರಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.