Category: ಬೆಂಗಳೂರು ನಗರ

  • ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ 6 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು.

    ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ 6 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು.

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಘನತ್ಯಾಜ್ಯವನ್ನು ಸಾಗಿಸಿ ಖಾಲಿ ಜಾಗಗಳಲ್ಲಿ ಸುರಿಯುತ್ತಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 6 ವಾಹನಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ತಿಳಿಸಿದರು.

    ಪ್ರಕರಣದ ಹಿನ್ನೆಲೆ

    ಪೂರ್ವ ನಗರ ಪಾಲಿಕೆಯ ವಿವಿಧ ಪ್ರದೇಶಗಳ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿಂದ ಬಲ್ಕ್ ವೇಸ್ಟ್ ಸಂಗ್ರಹಿಸಿ ವಿಲೇವಾರಿ ಮಾಡಲು ಇಕೋ ಸ್ಪೀಯರ್ ವೆಸ್ಟ್ ಸೆಲ್ಯೂಷನ್ ಕಂಪನಿಗೆ ಕಾರ್ಯದೇಶ ನೀಡಿದ್ದು, ನೌಶಾದ್ ಮತ್ತು ಇತರರ ತಂಡ ಕಂಪನಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ವಿವಿಧ ಪ್ರದೇಶಗಳಿಂದ ಅನಧಿಕೃತವಾಗಿ ಬಲ್ಕ್ ತ್ಯಾಜ್ಯವನ್ನು ಸಂಗ್ರಹಿಸಿ ಕಾಡುಗೋಡಿ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ಸಮೀಪದ ಸರ್ವೇ ನಂ.130, 131 ಹಾಗೂ 142ಕ್ಕೆ ಹೊಂದಿಕೊಂಡಿರುವ ದಕ್ಷಿಣ ಪಿನಾಕಿನಿ ನದಿಗೆ ಅಕ್ರಮವಾಗಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾರ್ಯಾಚರಣೆ ಕೈಗೊಂಡಿರುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.

    ಕಾರ್ಯಾಚರಣೆಯಲ್ಲಿ 6-ವಾಹನಗಳು ವಶಕ್ಕೆ

    ಸಾರ್ವಜನಿಕ ದೂರಿನ ಆಧಾರದ ಮೇಲೆ ಇದೇ ಮೇ 29ರಂದು ನಗರ ಪಾಲಿಕೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯಲು ಸ್ಥಳಕ್ಕೆ ಆಗಮಿಸಿದ್ದ ತ್ಯಾಜ್ಯ ತುಂಬಿರುವ 5 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು, ವಾಹನ ಚಾಲಕರು ಸ್ಥಳದಿಂದ ಪರಾರಿಯಾಗಿರುತ್ತಾರೆ ಹಾಗೂ ಇದೇ ಸ್ಥಳದಲ್ಲಿ ಮೇ 30ರಂದು ಮತ್ತೊಂದು ವಾಹನವನ್ನು ವಶಕ್ಕೆ ಪಡೆದುಕೊಂಡಿರಲಾಗಿರುತ್ತದೆ.

    ವಶಪಡಿಸಿಕೊಂಡ ವಾಹನಗಳ ಸಂಖ್ಯೆ

    ನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ವಾಹನಗಳ ಸಂಖ್ಯೆ;
    * KA-07-A-398
    * KA-52-B-8275
    * KA-53-A-4649
    * AP-39-VB-6604
    * KA-18-C-6915
    * KA-40-A-4837

    *ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು*

    ನಗರ ಪಾಲಿಕೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಿಂದ ನೀಡಲಾದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ವಾಹನಗಳ ಮಾಲೀಕರು, ಚಾಲಕರು, ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ತ್ಯಾಜ್ಯ ಸುರಿಯಲು ಅವಕಾಶ ನೀಡಿದ ಭೂ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಕಾಡುಗೋಡಿ ಆರಕ್ಷಕ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

    ಅಕ್ರಮ ತ್ಯಾಜ್ಯ ವಿಲೇವಾರಿಯ ವಿರುದ್ಧ ಶೂನ್ಯ ಸಹಿಷ್ಣುತೆ

    ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರಾದ ಡಿ.ಎಸ್. ರಮೇಶ್ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಧಕ್ಕೆಯುಂಟುಮಾಡುವ ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ತ್ಯಾಜ್ಯವನ್ನು ಅನಧಿಕೃತ ಸ್ಥಳಗಳಲ್ಲಿ ಸುರಿಯುವುದು, ಖಾಲಿ ಜಾಗಗಳನ್ನು ಕಸದ ತೊಟ್ಟಿಗಳಾಗಿ ಬಳಸುವುದು ಹಾಗೂ ಅಕ್ರಮ ಸಾಗಣೆ ನಡೆಸುವವರ ವಿರುದ್ಧ ದಂಡಾತ್ಮಕ ಹಾಗೂ ಕ್ರಿಮಿನಲ್ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

    ಸಾರ್ವಜನಿಕರ ಸಹಕಾರಕ್ಕೆ ಮನವಿ

    ನಗರವನ್ನು ಸ್ವಚ್ಛ ಹಾಗೂ ಆರೋಗ್ಯಯುತವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ ಆಯುಕ್ತರು, ಅಕ್ರಮವಾಗಿ ತ್ಯಾಜ್ಯ ಸುರಿಯುವ ವಾಹನಗಳು ಅಥವಾ ವ್ಯಕ್ತಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ನಗರ ಪಾಲಿಕೆಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

    ಕಾರ್ಯಾಚರಣೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಸಹಾಯ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಸೂಪರ್ವೈಸರ್, ವಾರ್ಡ್ ಮಾರ್ಷಲ್ , ಆರೋಗ್ಯ ಪರಿವೀಕ್ಷಕರು ಹಾಗೂ ಇನ್ನಿತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

  • ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.

    ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಕ್ಷರಶಃ ರೌದ್ರಾವತಾರ ತಾಳಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರಕ್ಕೆ ಜನಜೀವನ ತತ್ತರಿಸಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮತ್ತೊಂದು ಪ್ರಮುಖ ಎಚ್ಚರಿಕೆಯನ್ನು ನೀಡಿದ್ದು, ಮೇ 30ರ ತನಕ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

    ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಗಾಳಿ ಜೊತೆಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಮೇ 27 ರಂದು ಹಲವು ಜಿಲ್ಲೆಗಳಲ್ಲಿ ‘ಯೆಲ್ಲೋ’ ಮತ್ತು ‘ಆರೆಂಜ್’ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಓಡಾಡದಂತೆ ಹಾಗೂ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.

    ಮೇ 28ರ ವರೆಗೆ ಉತ್ತರ ಒಳನಾಡಿನ ಹಲವೆಡೆ ಭೀಕರ ಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ ಬರೋಬ್ಬರಿ 50 ರಿಂದ 60 ಕಿಲೋಮೀಟರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಮೇ 27 ರಂದು ಇಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು, ‘ಆರೆಂಜ್ ಅಲರ್ಟ್’ ಜಾರಿಯಲ್ಲಿದೆ.ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಸುಂಟರಗಾಳಿ ಬೀಸಲಿದ್ದು, ಮೇ 27 ರಂದು ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

    ಇತ್ತ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಮುಂದುವರಿಯಲಿದೆ. ಮೇ 26 ರಿಂದ ಮೇ 30ರ ವರೆಗೆ ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಜೋರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

    ಇಂದು ಸಂಜೆಯ ವೇಳೆಗೆ ವಾತಾವರಣದಲ್ಲಿ ಭಾಗಶಃ ಮೋಡ ಕವಿಯಲಿದ್ದು, ತಣ್ಣನೆಯ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ತಿಳಿಸಲಾಗಿದೆ.

  • ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

    ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿ ಹಾಗೂ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ  ಪ್ರಗತಿ ಕುರಿತು ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್.ಡಿ.ಎಸ್  ರವರು ಸ್ಥಳ ಪರಿಶೀಲನೆ ನಡೆಸಿದರು.

    ರೈಲ್ವೆ ವೆಂಟ್ ಬಾಕಿ 12 ಮೀಟರ್ ಬಾಕ್ಸ್ ಪುಶಿಂಗ್   ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ

    ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿಯ ಭಾಗವಾಗಿ ಬಾಕಿ ಇರುವ ಸುಮಾರು 12 ಮೀಟರ್ ಬಾಕ್ಸ್ ಪುಶಿಂಗ್ ಕಾಮಗಾರಿಯನ್ನು ಮೇ 31ರೊಳಗೆ ಪೂರ್ಣಗೊಳಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಕಾಮಗಾರಿ ಶೀಘ್ರ ಪೂರ್ಣಗೊಂಡಲ್ಲಿ ತಕ್ಷಣವೇ ರಿಟೈನಿಂಗ್ ವಾಲ್ ನಿರ್ಮಾಣ ಕೈಗೊಂಡು, ರೈಲ್ವೆ ವೆಂಟ್ ಮೂಲಕ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದರೊಂದಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಟಾಗುತ್ತಿದ ನೆರೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.

    ಮಳೆ ನೀರು ಕಾಲುವೆಗಳ ಹೂಳು ತೆರವು ಕಾಮಗಾರಿಗಳ ಪರಿಶೀಲನೆ

    ಗೆದ್ದಲಹಳ್ಳಿ ಬಳಿ ರಾಜಕಾಲುವೆಯಲ್ಲಿ  ವಾರ್ಷಿಕ ನಿರ್ವಹಣಾ ಕಾಮಗಾರಿಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮಳೆ ನೀರು ಕಾಲುವೆಗಳ ಹೂಳು ತೆರವು ಮತ್ತು ಸ್ವಚ್ಛತಾ ಕಾಮಗಾರಿಗಳ ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿ ಯುದ್ದೋಪಾದಿಯಲ್ಲಿ ಕಾಲುವೆ ನಿರ್ವಹಣಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.

    ಮಳೆಗಾಲದ ಸಂದರ್ಭದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗದಂತೆ ಪ್ರಮುಖ ರಸ್ತೆಗಳ ಎರಡೂ ಬದಿಗಳಿಂದ ಮಳೆ ನೀರು ಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸರ್ವಜ್ಞನಗರ ಗಡಿಭಾಗದಲ್ಲಿನ ಕಾಮಗಾರಿಗಳ ಪರಿಶೀಲನೆ

    ಪೂರ್ವ ನಗರ ಪಾಲಿಕೆಗೆ ಹೊಂದಿಕೊಂಡಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಗಡಿಯ ಮೇಲ್ಭಾಗದ ಕಾಲುವೆಯಿಂದ ಗೆದ್ದಲಹಳ್ಳಿ ಕಾಲುವೆಗೆ ಸಂಪರ್ಕವಿದ್ದು ಮೇಲ್ಭಾಗದಲ್ಲಿರುವ ಕಾಲುವೆ ಹೂಳು ಕೆಳಭಾಗಕ್ಕೆ ಹರಿದು ಬರುವುದರಿಂದ ನೆರೆ ಪರಿಸ್ಥಿತಿ ಉಂಟಾಗಬಹುದಾಗಿದ್ದು ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾಲುವೆ ನಿರ್ವಹಣಾ ಕಾಮಗಾರಿಗಳನ್ನೂ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

    ಮಳೆಗಾಲದ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿನ ಹೂಳು ತೆರವು, ಕಾಲುವೆ ಸ್ವಚ್ಛತೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ

    ಮಳೆಗಾಲ ಆರಂಭಕ್ಕೂ ಮುನ್ನ ಪ್ರವಾಹ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಮೂಲಕ ಕಾಲುವೆಗಳಲ್ಲಿನ ಹೂಳು, ತ್ಯಾಜ್ಯ, ಕಳೆ ಗಿಡಗಳನ್ನು ತೆರವು ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಸ್ಥಳ ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಬಿ.ಎನ್., ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

  • ಗುಣಮಟ್ಟದ ಶಿಕ್ಷಣಕ್ಕೆ ಹೊಸ ಭಾಷ್ಯ: ಕೋಗೀಲುನಲ್ಲಿ ನ್ಯೂ ಬಾಲ್ಡ್ ವಿನ್ ಶಾಲೆ ಪ್ರಾರಂಭ

    ಗುಣಮಟ್ಟದ ಶಿಕ್ಷಣಕ್ಕೆ ಹೊಸ ಭಾಷ್ಯ: ಕೋಗೀಲುನಲ್ಲಿ ನ್ಯೂ ಬಾಲ್ಡ್ ವಿನ್ ಶಾಲೆ ಪ್ರಾರಂಭ

    ಬೆಂಗಳೂರು: ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ನ್ಯೂ ಬಾಲ್ಡ್ ವಿನ್ ಶಿಕ್ಷಣ ಸಮೂಹ ಸಂಸ್ಥೆಗಳ 10ನೇ ಶಾಖೆ ಕೋಗೀಲುವಿನಲ್ಲಿ ಪ್ರಾರಂಭಗೊಂಡಿದೆ.

    ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಲೋಕಾರ್ಪಣೆ ಗೊಳಿಸಿ ಪೋಷಕರನ್ನುದ್ದೇಶಿಸಿ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ಟಿ.ವೇಣುಗೋಪಾಲ್ ಮಾತನಾಡಿದರು.
    ವಿದ್ಯೆ ಎಂದಿಗೂ ಸೇವೆಯಾಗಬೇಕೆ ಹೊರತು ವ್ಯಾಪಾರವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ನಾವು ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಕೋಗೀಲುವಿನಲ್ಲಿ ಪ್ರಾರಂಭಿಸಿದ್ದೇವೆ.
    ಮಕ್ಕಳಿಗೆ ಹಸಿರಿನಿಂದ ಕೂಡಿದ ವಿಶಾಲವಾದ ಪರಿಸರ, ಅತ್ಯಾಧುನಿಕ ಕಟ್ಟಡ, ಜಾಗತಿಕ ಪಠ್ಯಕ್ರಮ, ನುರಿತ ಶಿಕ್ಷಕ ವೃಂದ, ಸುಸಜ್ಜಿತ ಕ್ರೀಡಾಂಗಣ,ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಕ್ಲಾಸ್ ರೂಮ್ಸ್, ಸುಸಜ್ಜಿತ ಪ್ರಯೋಗಾಲಯ, ಸ್ಕೂಲ್ ಬಸ್ ಸೌಲಭ್ಯ ಜೊತೆಗೆ ಓದಿನ ಜೊತೆಗೆ ಕ್ರೀಡೆ ಮತ್ತು ಕಲೆಗೂ ಇಲ್ಲಿ ಸಮಾನ ಆದ್ಯತೆ ನೀಡುತ್ತೇವೆ ಎಂದರು.

    ಈ ವೇಳೆ ನ್ಯೂ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಫೈನಾನ್ಸ್ ಡೈರೆಕ್ಟರ್ ಶ್ರೀಮತಿ ಸೌಭಾಗ್ಯವತಿ ವೇಣುಗೋಪಾಲ್, ಮ್ಯಾನೇಜಿಂಗ್ ಡೈರೆಕ್ಟರ್ ಹಂಸ ಕೆ.ವೇಣುಗೋಪಾಲ್, ಸಿಇಒ ಕೀರ್ತಿ ಮಹರಾಜ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.

  • ಅನುಮತಿಯಿಲ್ಲದೆ ರಸ್ತೆ ಅಗೆದರೆ ದೂರು ದಾಖಲಿಸಿ: ಡಿ.ಎಸ್. ರಮೇಶ್

    ಅನುಮತಿಯಿಲ್ಲದೆ ರಸ್ತೆ ಅಗೆದರೆ ದೂರು ದಾಖಲಿಸಿ: ಡಿ.ಎಸ್. ರಮೇಶ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವಸಿದ್ಧತೆ, ಕೆರೆಗಳ ಸಂರಕ್ಷಣೆ, ರಾಜಕಾಲುವೆಗಳ ನಿರ್ವಹಣೆ, ಒಳಚರಂಡಿ ಸಮಸ್ಯೆಗಳ ಪರಿಹಾರ, ಪ್ರವಾಹ ನಿಯಂತ್ರಣ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆಗಳ ಕುರಿತು ಪ್ರಗತಿ ಪರಿಶೀಲಿಸಲು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆಯನ್ನು ನಡೆಸಿದರು.

    ಸಭೆಯಲ್ಲಿ ಚರ್ಚಿಸಲಾದ ವಿಷಯಗಳು

    ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು

    ಬೆಂಗಳೂರು ಜಲಮಂಡಳಿಯ ಎಸ್.ಟಿ.ಪಿ ಯಿಂದ ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು ಹರಿಸುವ ಸಂಬಂಧ ಈಗಾಗಲೇ ಪೈಪ್ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ರಸ್ತೆ ಹಾನಿಯಾಗದಂತೆ ಓಪನ್ ಕಟಿಂಗ್ ಬದಲಿಗೆ ಟ್ರೆಂಚ್ಲೆಸ್ ಟೆಕ್ನಾಲಜಿ ಬಳಸಿಕೊಂಡು ಕಾಮಗಾರಿ ಕೈಗೊಳ್ಳುವುದಾಗಿ ಜಲಮಂಡಳಿ ತಿಳಿಸಿದ್ದು, ವಿಭಾಗ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರಿಂದ ಅನುಮತಿ ಪಡೆದು ಮುಂದಿನ 20 ದಿನಗಳೊಳಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ಸಂಸ್ಕರಿತ ನೀರು ಹರಿಸಲು ಕ್ರಮವಹಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

    ವೆಂಗಯ್ಯನ ಕೆರೆಗೆ ಎಸ್.ಟಿ. ಪಿಯಿಂದ ಸಂಸ್ಕರಿಸಿದ ನೀರು

    ವೆಂಗಯ್ಯನ ಕೆರೆ ಪ್ರದೇಶದಲ್ಲಿ ತಲಾ 30 ಎಂಎಲ್ಡಿ ಸಾಮರ್ಥ್ಯದ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಎಸ್ಟಿಪಿ ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿದ್ದರೆ ಮತ್ತೊಂದು ನವೀಕರಣ ಹಂತದಲ್ಲಿರುತ್ತದೆ. ಪ್ರಸ್ತುತ ಸಂಸ್ಕರಿತ ನೀರು ಹಾಗೂ ರಾಜಕಾಲುವೆಯಿಂದ ಬರುವ ಅಶುದ್ಧ ನೀರು ಒಂದೇ ಮಾರ್ಗದಲ್ಲಿ ಮಿಶ್ರಣಗೊಂಡು ಕೆರೆಗೆ ಸೇರುತ್ತಿರುವುದರಿಂದ ಮಾಲಿನ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

    ಈ ಹಿನ್ನೆಲೆಯಲ್ಲಿ ಪೈಪ್ಲೈನ್ ಅಳವಡಿಸಲು ಅನುಮತಿ ಪಡೆದು ಸಂಸ್ಕರಿತ ನೀರಿಗೆ ಪ್ರತ್ಯೇಕ ಪೈಪ್ಲೈನ್ ವ್ಯವಸ್ಥೆ ಮಾಡಿ, ಅಶುದ್ಧ ನೀರನ್ನು ಡೈವರ್ಷನ್ ಮೂಲಕ ಹರಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಇನ್ನೂ 20 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

    ದೇವರಬೀಸನಹಳ್ಳಿ ಕೆರೆ ಮತ್ತು ಎಸ್ಟಿಪಿ ನಿರ್ವಹಣೆ

    ದೇವರಬೀಸನಹಳ್ಳಿ ಪ್ರದೇಶದಲ್ಲಿ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, 1.3 ಎಂಎಲ್ಡಿ ಸಾಮರ್ಥ್ಯದ ಘಟಕವನ್ನು ಆದರ್ಶ ವಸತಿ ಸಮುಚ್ಚಯ ಸಂಸ್ಥೆಯು ಸರ್ಕಾರದ ಅನುಮತಿಯೊಂದಿಗೆ ಸರ್ಕಾರಿ ಜಾಗದಲ್ಲಿ ನಿರ್ವಹಿಸಲಾಗುತ್ತಿದೆ. ಮತ್ತೊಂದು 900 ಕೆಎಲ್ಡಿ ಸಾಮರ್ಥ್ಯದ ಎಸ್ಟಿಪಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆ ಅನುಮತಿ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದು, ಪ್ರಮಾಣಪತ್ರ ದೊರೆತ ಬಳಿಕ ವಸತಿ ಸಮುಚ್ಚಯದ ಒಳಚರಂಡಿ ನೀರನ್ನು 900 ಕೆಎಲ್ಡಿ ಘಟಕಕ್ಕೆ ವರ್ಗಾಯಿಸಲಾಗುವುದು. ಇದರಿಂದ ದೇವರಬೀಸನಹಳ್ಳಿ ಗ್ರಾಮದಿಂದ ಕೆರೆಗೆ ಸೇರುತ್ತಿರುವ ಅಶುದ್ಧ ನೀರನ್ನು ಹಾಲಿ ಇರುವ 1.3 ಎಂ.ಎಲ್.ಡಿ ಸಾಮರ್ಥ್ಯದ ಎಸ್.ಟಿ.ಪಿಗೆ ವರ್ಗಾಯಿಸಿ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ರಿಯಲ್ ಟೈಮ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಿ

    ಅಪಾರ್ಟ್ಮೆಂಟ್ಗಳಿಂದ ಸಂಸ್ಕರಿಸಲ್ಪಟ್ಟ ನೀರು ಪ್ರತ್ಯೇಕ ಪೈಪ್ಲೈನ್ ಮೂಲಕ ಕೆರೆಗಳಿಗೆ ಹರಿಯುವಂತೆ ವ್ಯವಸ್ಥೆ ಸಂಬಂಧ ಈಗಾಗಲೇ ಜಲಮಂಡಳಿ ವತಿಯಿದ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದು, ಕೆರೆಗಳಿಗೆ ಹರಿಯುವ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ರಿಯಲ್ ಟೈಮ್ ಸೆನ್ಸರ್ ಆಧಾರಿತ ಮಾನಿಟರಿಂಗ್ ವ್ಯವಸ್ಥೆ ಅಳವಡಿಸುವ ಮೂಲಕ ಕೆರೆಗಳಿಗೆ ಸೇರುವ ನೀರಿನ ಪ್ರಮಾಣ, ಹರಿವು ಹಾಗೂ ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ಒದಗಿಸುವುದು ಮುಖ್ಯ ಎಂದು ಆಯುಕ್ತರು ಸೂಚಿಸಿದರು.

    ಅನಧಿಕೃತ ರಸ್ತೆ ಅಗೆತಕ್ಕೆ ಕಠಿಣ ಎಚ್ಚರಿಕೆ

    ಐಟಿಪಿಎಲ್ ರಸ್ತೆ, ದೇವಸಂದ್ರ ರಸ್ತೆ, ಸರ್ಜಾಪುರ ರಸ್ತೆ ಹಾಗೂ ದೇವರಬೀಸನಹಳ್ಳಿ ಪ್ರದೇಶಗಳಲ್ಲಿ ನಗರ ಪಾಲಿಕೆ ಅನುಮತಿ ಪಡೆಯದೆ ಅನಧಿಕೃತ ರಸ್ತೆ ಅಗೆತ ಪ್ರಕರಣಗಳು ಕಂಡುಬಂದಿದ್ದು, ಹೊಸತಾಗಿ ಡಾಂಬರೀಕರಣಗೊಂಡ ರಸ್ತೆಗಳ ಮಧ್ಯಭಾಗದಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ತಡೆಯಲು ಸೂಚಿಸಿದರು.

    ನಗರ ಪಾಲಿಕೆ ವಿಭಾಗೀಯ ಕಾರ್ಯಪಾಲಕ ಇಂಜಿನಿಯರಿಂದ ಅನುಮತಿ ಪಡೆಯದೆ ರಸ್ತೆ ಅಗೆದು ಕಾಮಗಾರಿ ನಡೆಸುತ್ತಿರುವ ವಿವಿಧ ಇಲಾಖೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಯುಕ್ತರು ಸೂಚಿಸಿದರು. ಇಂತಹ ಪ್ರಕರಣಗಳು ಮುಂದುವರಿದರೆ ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

    ದೇವಸಂದ್ರ ಬಡಾವಣೆ ಪೈಪ್ಲೈನ್ ಅಲೈನ್ಮೆಂಟ್ ಪರಿಶೀಲನೆ

    ದೇವಸಂದ್ರ ಬಡಾವಣೆ ಸಮೀಪದ 900 ಮಿಮೀ ಎಸ್ ಟಿ ಪಿ ಪೈಪ್ಲೈನ್ ಕಾಮಗಾರಿಗೆ ಸಂಬಂಧಿಸಿದ ಭೂಮಾಪನ ಹಾಗೂ ಸರ್ವೆ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಯಿತು.
    ಮಳೆ ನೀರು ಕಾಲುವೆ ಸುಸ್ಥಿಯಲ್ಲಿಡಿ

    ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 225 ಕಿಲೋಮೀಟರ್ ವ್ಯಾಪ್ತಿಯ ಮಳೆ ನೀರು ಕಾಲುವೆ ಜಾಲವಿದ್ದು,125 ಕಿ.ಮೀ ಈಗಾಗಲೇ ಕಾಂಕ್ರೀಟ್ ಕಾಲುವೆ ನಿರ್ಮಿಸಲಾಗಿದೆ. ಬಾಕಿ 100 ಕಿ.ಮೀ ಕಚ್ಚಾ ಕಾಲುವೆಗಳನ್ನು ವಿಶ್ವಬ್ಯಾಂಕ್ ಹಾಗೂ ಸರ್ಕಾರದ ಅನುದಾನದ ಅಡಿಯಲ್ಲಿ ಕಾಲುವೆಗಳ ಅಭಿವೃದ್ಧಿಗ ಬಾಕಿ ಇರುತ್ತದೆ. ಕಾಲುವೆಗಳ ನಿರ್ವಹಣೆ ಕಾಮಗಾರಿಗಳ ಪ್ರಗತಿ ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಕಾಂಕ್ರೀಟ್ ರಾಜಕಾಲುವೆ ಹಾಗೂ ಕಚ್ಚಾ ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಪ್ರತಿದಿನದ ನಿರ್ವಹಣಾ ಕಾಮಗಾರಿ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಅಂಡರ್ ಪಾಸ್ ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ

    ತೂಬರಹಳ್ಳಿ, ಕುಂದಲಹಳ್ಳಿ, ದೇವರಬೀಸನಹಳ್ಳಿ, ಲೌರಿ ಜಂಕ್ಷನ್, ದೊಡ್ಡನೆಕ್ಕುಂದಿ ಹಾಗೂ ಪಣತ್ತೂರು ಅಂಡರ್ಪಾಸ್ ಪ್ರದೇಶಗಳಲ್ಲಿ ನೀರು ನಿಲುಗಡೆ ಉಂಟಾಗಿ ಸಂಚಾರ ಸಮಸ್ಯೆ ಉಂಟಾಗದಂತೆ ಕ್ರಮವಹಿಸುವ ಸಲುವಾಗಿ ಕ್ಯಾಚ್ಪಿಟ್ಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ತೆರವುಗೊಳಿಸಲು ವಿಶೇಷ ತಂಡಗಳನ್ನು ನಿಯೋಜಿಸಿ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು.

    ತುರ್ತು ಸ್ಪಂದನಾ ತಂಡಗಳು ಮತ್ತು ಮಳೆಗಾಲ ಪೂರ್ವಸಿದ್ಧತೆ

    ಮಳೆಗಾಲದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗುವ ಪ್ರದೇಶಗಳಲ್ಲಿ ಉಪವಿಭಾಗ ಮಟ್ಟದ ತುರ್ತು ಸ್ಪಂದನಾ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲು ಹಾಗೂ ಕಂಟ್ರೋಲ್ ರೂಂನಿಂದ ದೂರು ಬಂದ 10 ರಿಂದ 15 ನಿಮಿಷಗಳೊಳಗೆ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

    ತುರ್ತು ಪರಿಸ್ಥಿತಿಗಳಿಗೆ ಅಗತ್ಯವಾದ ಪಂಪ್ಸೆಟ್, ಜೆಸಿಬಿ, ಡಿ-ವಾಟರಿಂಗ್ ಪಂಪ್, ಟಿಪ್ಪರ್, ಟೋಯಿಂಗ್ ರೋಪ್, ಟಾರ್ಪಲಿನ್ ಹಾಗೂ ಇನ್ನಿತರೆ ವಿಪತ್ತು ನಿರ್ವಹಣೆ ಯಂತ್ರೋಪಕರಣಗಳನ್ನು ಸದಾ ಸಿದ್ಧವಾಗಿಡಲು ಕಾರ್ಯಪಾಲಕ ಅಭಿಯಂತರರು ಹಾಗೂ ಅಗ್ನಿ ಶಾಮಕ ಸೂಚಿಸಲಾಯಿತು.

    ರಸ್ತೆ ಬದಿ ತ್ಯಾಜ್ಯ, ಕಟ್ಟಡ ಭಗ್ನಾವಶೇಷ ಹಾಗೂ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆdoor

    ರಸ್ತೆ ಬದಿ ಕಸ ಹಾಗೂ ನಿರ್ಮಾಣ ತ್ಯಾಜ್ಯ ಎಸೆಯುವುದರಿಂದ ಮಳೆ ನೀರು ಹರಿವಿಗೆ ಅಡ್ಡಿಯಾಗುತ್ತಿದ್ದು, ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಸಂಚಾರಿ ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ರಾತ್ರಿ ವೇಳೆ ಗಸ್ತು ಹೆಚ್ಚಿಸಲು ಸೂಚಿಸಿದರು. ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ರಸ್ತೆ ಬದಿ ಹಾಗೂ ಕಾಲುವೆ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಮಳೆಗಾಲಕ್ಕೂ ಮುನ್ನ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಕೊಂಬೆಗಳನ್ನು ಗುರುತಿಸಿ ತಕ್ಷಣವೇ ತೆರವುಗೊಳಿಸುವಂತೆ, ಕತ್ತರಿಸಿದ ಮರಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಬಾರದು ಎಂದು ಆಯುಕ್ತರು ಸೂಚಿಸಿದರು.

    ಬೀದಿ ದೀಪಗಳ ನಿರ್ವಹಣೆ

    ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ಜಂಕ್ಷನ್ಗಳು, ಮುಖ್ಯರಸ್ತೆಗಳು, ಅಂಡರ್ಪಾಸ್ ಗಳು, ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ಹಿಸುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಗತ್ಯವಿರುವ ಕಡೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.

    ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಂಚಾರಿ ಪೊಲೀಸ್ ಇಲಾಖೆ, ಬೆಸ್ಕಾಂ, ಜಲಮಂಡಳಿ, ವಿಪತ್ತು ನಿರ್ವಹಣಾ ವಿಭಾಗ, ಅಗ್ನಿಶಾಮಕ ಇಲಾಖೆ, ಘನ ತ್ಯಾಜ್ಯ ನಿರ್ವಹಣೆ ವಿಭಾಗ, , ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು

  • ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ ಬೈರತಿ ಬಸವರಾಜ್.

    ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ ಬೈರತಿ ಬಸವರಾಜ್.

    ಕೆ.ಆರ್.ಪುರ: ಬಡಮಕ್ಕಳ ಶಿಕ್ಷಣಕ್ಕೆ ಪ್ರತಿಭಾ ಪುರಸ್ಕಾರದ ಮೂಲಕ ಆರ್ಥಿಕ ಸಹಾಯ ಮಾಡುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.

    ಕೆ.ಆರ್.ಪುರ ಹಾಗೂ ಆನಂದ ಪುರ ವಾರ್ಡನ ಪ್ರತಿಭಾನ್ವಿತ ಮಕ್ಕಳಿಗೆ ಸಮಾಜ ಸೇವಕ ಕೆ.ಹೆಂಮತ್( ಚಿನ್ನಿ) ಅವರ ತಾಯಿ ಸರಸ್ವತಮ್ಮ ಅವರ 65ನೇ‌ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಅಗತ್ಯ ಎಂದರು.

    ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 15 ಸಾವಿರ,ಶೇ.90ಅಂಕ ಪಡೆದವರಿಗೆ 10ಸಾವಿರ ನೀಡುವ ಮೂಲಕ ಮುಂದಿನ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದಾರೆ ಎಂದು ತಿಳಿಸಿದರು.

    ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜಕ್ಕೆ ಸೇವೆ ಮಾಡುತ್ತಿರುವ ಹೆಂಮತ್ ಕಾರ್ಯ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

    ಆಯೋಜಕ ಕೆ.ಹೆಂಮತ್ ಅವರು ಮಾತನಾಡಿ ನನ್ನ ತಾಯಿ ಸರಸ್ವತಮ್ಮ ಅವರ ಹುಟ್ಟುಹಬ್ಬ ವನ್ನು ಜನೋಪಕಾರಿ ಆಚರಣೆ ಮಾಡುವ ಉದ್ದೇಶದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 15 ಸಾವಿರ,ಶೇ.90ಅಂಕ ಪಡೆದವರಿಗೆ 10ಸಾವಿರ ಅಂತೆ 82 ಮಕ್ಕಳಿಗೆ ವಿತರಣೆ ಮಾಡಲಾಗಿದೆ,ಸರ್ಕಾರಿ ಶಾಲೆಯ ಮಕ್ಕಳಿಗೆ 600 ಬ್ಯಾಗ್ ನೋಟ್ ಪುಸ್ತಕ ಹಾಗೂ 7ನೇ ತರಗತಿ ಮಕ್ಕಳಿಗೂ ಪ್ರತಿಭಾಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

    ಕೆ.ಆರ್.ಪುರ ಸುತ್ತ ಮುತ್ತ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲೆ ಆರಂಭವಾದ ಬಳಿಕ 1 ಸಾವಿರ ಬ್ಯಾಗ್ ಗಳನ್ನ ನೀಡಲಾಗುವುದು ಎಂದು ತಿಳಿಸಿದರು.

    ಈ ಕಾರ್ಯಕ್ರಮದಲ್ಲಿ ನ್ಯೂಬಾಲ್ಡ್ ವಿನ್ ಶಾಲೆಯ ಅಧ್ಯಕ್ಷ ವೇಣುಗೋಪಾಲ, ಬ್ರಹ್ಮನ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ,ಮಾಜಿ ಪಾಲಿಕೆ ಸದಸ್ಯರಾದ ಗೀತಾವಿವೇಕಾನಂದ,ಎಸ್.ಜಿ.ನಾಗರಾಜ್, ಎಸ್.ಎಸ್.ಪ್ರಸಾದ್,ಮಂಜುಳಾದೇವಿ ಮುಖಂಡರಾದ ಮೋಹನ್,ಗೌರಮ್ಮ, ಶ್ರೀರಾಮುಲು,ಉಮಾಶಂಕರ್,ಶಿವಪ್ಪ,ಗಿರೀಶ್ ಬಾಬು,ಜಗದೀಶ್ ಇದ್ದರು.

  • ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ, ಇಂದಿನಿಂದಲೇ ಜಾರಿ

    ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ, ಇಂದಿನಿಂದಲೇ ಜಾರಿ

    ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಖಾಸಗಿ ಬಸ್ ಪ್ರಯಾಣಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಇಂಧನ ವೆಚ್ಚ ಹೆಚ್ಚಳದಿಂದ ಕಾರ್ಯಾಚರಣೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ, ಖಾಸಗಿ ಬಸ್ ಟಿಕೆಟ್ ದರವನ್ನು ಇಂದಿನ ಮಧ್ಯರಾತ್ರಿಯಿಂದಲೇ ಶೇ.20ರಿಂದ 30ರಷ್ಟು ಹೆಚ್ಚಿಸಲು ಬಸ್ ಮಾಲೀಕರು ತೀರ್ಮಾನಿಸಿದ್ದಾರೆ.

    ಇದರಿಂದ ರಾಜ್ಯದಾದ್ಯಂತ ಲಕ್ಷಾಂತರ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀಳಲಿದ್ದು, ದಿನನಿತ್ಯ ಪ್ರಯಾಣಿಸುವ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

    ಇತ್ತೀಚಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಲೇ ಜನಸಾಮಾನ್ಯರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ, ಇದೀಗ ಸಾರಿಗೆ ವೆಚ್ಚವೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡೀಸೆಲ್ ದರ ನಿರಂತರ ಏರಿಕೆಯಿಂದ ಬಸ್‌ಗಳ ನಿರ್ವಹಣೆ, ಚಾಲಕರ ಹಾಗೂ ಸಿಬ್ಬಂದಿಗಳ ವೇತನ ಸೇರಿದಂತೆ ವಿವಿಧ ಕಾರ್ಯಾಚರಣಾ ವೆಚ್ಚಗಳು ಹೆಚ್ಚಾಗಿರುವುದರಿಂದ ಟಿಕೆಟ್ ದರ ಏರಿಕೆ ಅನಿವಾರ್ಯವಾಗಿದೆ ಎಂದು ಖಾಸಗಿ ಬಸ್ ಮಾಲೀಕರು ತಿಳಿಸಿದ್ದಾರೆ.

    ಇಂದು ಬೆಳಿಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರ ಪರಿಷ್ಕರಣೆ ಮಾಡಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 3.27 ರೂಪಾಯಿ ಹಾಗೂ ಡೀಸೆಲ್ ದರ 3.12 ರೂಪಾಯಿ ಏರಿಕೆಯಾಗಿದೆ. ಇದೇ ವೇಳೆ ದೇಶಾದ್ಯಂತ ಸಿಎನ್‌ಜಿ ದರವನ್ನೂ ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಹಾರ್ಮುಜ್ ಜಲಸಂಧಿ ದಿಗ್ಬಂಧನದಿಂದ ಇಂಧನ ಪೂರೈಕೆಯಲ್ಲಿ ಉಂಟಾದ ವ್ಯತ್ಯಯವೇ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.

    ಟಿಕೆಟ್ ದರ ಏರಿಕೆಯಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ದೂರ ಪ್ರಯಾಣ ಮಾಡುವ ಸಾಮಾನ್ಯ ಜನರಿಗೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಬೆಲೆ ಏರಿಕೆ ಅಬ್ಬರದ ನಡುವೆ ಖಾಸಗಿ ಬಸ್ ದರ ಏರಿಕೆ ಸಾರ್ವಜನಿಕರಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.

  • ಪುಟ್ಟ ಕೈಗಳಲ್ಲಿ ಅರಳಿದ ಅನಿಮೇಷನ್ ಲೋಕ: ಪರಮ್ ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ

    ಪುಟ್ಟ ಕೈಗಳಲ್ಲಿ ಅರಳಿದ ಅನಿಮೇಷನ್ ಲೋಕ: ಪರಮ್ ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ

    • ಸೃಜನಶೀಲತೆಗೆ ಸಾಕ್ಷಿಯಾದ ‘ಸ್ಟಾಪ್ ಮೋಷನ್ ಶೋಕೇಸ್’
    • ಪಂಚತಂತ್ರ ಕಥೆಗಳಿಗೆ ಸ್ಮಾರ್ಟ್‌ಫೋನ್ ಸ್ಪರ್ಶ
    • ರಘು ದೀಕ್ಷಿತ್, ಎಂ.ಡಿ. ಪಲ್ಲವಿ, ಕಾರ್ತಿಕ್ ಸರಗೂರು, ಸಿದ್ಧಾರ್ಥ್ ಭರತ್ ಮಾರ್ಗದರ್ಶನ
    • ಮೂರು ವಾರಗಳ ವಿಶಿಷ್ಟ ಸಿನಿಮಾ ಪಯಣ
    • ಬೃಹತ್ ಪರದೆಯ ಮೇಲೆ ಮೂಡಿದ ಮಕ್ಕಳ ಅನಿಮೇಟೆಡ್‌ ಚಿತ್ರಗಳು
    • ಬೇಸಿಗೆ ಶಿಬಿರಕ್ಕೆ ಅದ್ಧೂರಿ ತೆರೆ, ಮಕ್ಕಳಿಗೆ ಪ್ರಮಾಣಪತ್ರ ವಿತರಣೆ

    *ಬೆಂಗಳೂರು:* ಬೇಸಿಗೆ ರಜೆಯನ್ನು ಕೇವಲ ಆಟಕ್ಕಷ್ಟೇ ಸೀಮಿತಗೊಳಿಸದೆ, ತಮ್ಮ ಕಲ್ಪನಾ ಲೋಕದ ಕಥೆಗಳಿಗೆ ಅನಿಮೇಷನ್ ರೂಪ ನೀಡಿದ ಪುಟಾಣಿ ವಿಜ್ಞಾನಿಗಳು ಮತ್ತು ಕಲಾವಿದರ ಶ್ರಮಕ್ಕೆ ಶನಿವಾರ ರಾತ್ರಿ ಸಾಕ್ಷಿಯಾಯಿತು. ಪರಮ್ ಫೌಂಡೇಶನ್ ಆಯೋಜಿಸಿದ್ದ ‘ಸ್ಟಾಪ್ ಮೋಷನ್ ಅನಿಮೇಷನ್’ ಬೇಸಿಗೆ ಶಿಬಿರವು ಮೇ 9ರಂದು ಜಯನಗರದ ‘ಯುವಪಥ’ದ ವಿವೇಕ್ ಸಭಾಂಗಣದಲ್ಲಿ ಅದ್ಧೂರಿಯಾಗಿ ಮುಕ್ತಾಯವಾಯಿತು.

    ಏಪ್ರಿಲ್ 20ರಿಂದ ಆರಂಭವಾದ ಈ ಶಿಬಿರವು ಒಟ್ಟು ಮೂರು ವಾರಗಳ ಕಾಲ ನಡೆಯಿತು. 6ರಿಂದ 16 ವರ್ಷದವರೆಗಿನ ಮಕ್ಕಳು ಎರಡು ಪ್ರತ್ಯೇಕ ಹಂತಗಳಲ್ಲಿ ಅನಿಮೇಷನ್‌ನ ಅತೀ ಸೂಕ್ಷ್ಮ ತಂತ್ರಗಳನ್ನು ಕರಗತ ಮಾಡಿಕೊಂಡರು. ಮೊದಲ ವಾರದಲ್ಲಿ ಅನಿಮೇಷನ್‌ನ ಮೂಲ ತತ್ವಗಳಾದ ಫ್ಲಿಪ್‌ಬುಕ್ ಮತ್ತು ಜೂಯೆಟ್ರೋಪ್‌ಗಳ ಮೂಲಕ ಚಿತ್ರಕ್ಕೆ ಚಲನೆ ನೀಡುವ ಕಲೆ ಅಭ್ಯಸಿಸಿದರೆ, ನಂತರದ ದಿನಗಳಲ್ಲಿ ತಾವೇ ಸ್ವತಃ ‘ಡಿಐವೈ (DIY) ಸ್ಟುಡಿಯೋ’ ನಿರ್ಮಿಸಿ ಸ್ಮಾರ್ಟ್‌ಫೋನ್ ಬಳಸಿ ವೃತ್ತಿಪರ ಗುಣಮಟ್ಟದ ಕಿರುಚಿತ್ರಗಳನ್ನು ತಯಾರಿಸಿದರು. ಕೇವಲ ತಾಂತ್ರಿಕತೆಯಷ್ಟೇ ಅಲ್ಲದೆ, ಕಥೆಯ ಸ್ಟೋರಿಬೋರ್ಡಿಂಗ್ ಸಿದ್ಧಪಡಿಸುವುದು, ಪಾತ್ರಗಳಿಗೆ ಧ್ವನಿ ಸಂಯೋಜನೆ ಮಾಡುವುದು ಹಾಗೂ ನೂರಾರು ಫ್ರೇಮ್‌ಗಳನ್ನು ಒಟ್ಟುಗೂಡಿಸಿ ಸಂಕಲಿಸುವ (Editing) ಮೂಲಕ ಒಂದು ಕಲ್ಪನೆಗೆ ಪರಿಪೂರ್ಣ ಸಿನಿಮಾ ರೂಪ ನೀಡುವ ಕೌಶಲವನ್ನು ಮಕ್ಕಳು ಇಲ್ಲಿ ಮೈಗೂಡಿಸಿಕೊಂಡರು.

    *ಸಿನಿಮಾ ದಿಗ್ಗಜರ ಮಾರ್ಗದರ್ಶನ:* ಈ ಶಿಬಿರದ ವಿಶೇಷತೆಯೆಂದರೆ ಚಿತ್ರರಂಗದ ಖ್ಯಾತನಾಮರು ಮಕ್ಕಳಿಗೆ ನೇರವಾಗಿ ಪಾಠ ಮಾಡಿದ್ದು. *ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್* ಅವರು ಸಿನೆಮಾದಲ್ಲಿ ಶಬ್ದ ಮತ್ತು ಭಾವನೆಗಳ (Sound & Mood) ಮಹತ್ವವನ್ನು ತಿಳಿಸಿಕೊಟ್ಟರೆ, *ಗಾಯಕಿ ಎಂ.ಡಿ. ಪಲ್ಲವಿ ಮತ್ತು ಶ್ವೇತಾ* ಅವರು ಪಾತ್ರಗಳಿಗೆ ಜೀವ ತುಂಬುವ ಧ್ವನಿ ಸಂಯೋಜನೆಯ ಬಗ್ಗೆ ತರಬೇತಿ ನೀಡಿದರು. *ನಿರ್ದೇಶಕ ಕಾರ್ತಿಕ್ ಸರಗೂರು* ದೃಶ್ಯಕಾವ್ಯದ ಬಗ್ಗೆ ಹಾಗೂ ಸಿದ್ಧಾರ್ಥ್ ಭರತ್ ಕಲೆ ಮತ್ತು ವಿಜ್ಞಾನದ ಸಮಾಗಮದ ಬಗ್ಗೆ ಮಕ್ಕಳಿಗೆ ಪ್ರೇರಣೆ ನೀಡಿದರು.

    *ಕಿರುಚಿತ್ರಗಳ ಪ್ರದರ್ಶನ:* ಶನಿವಾರ ನಡೆದ ‘ಸ್ಟಾಪ್ ಮೋಷನ್ ಶೋಕೇಸ್-2026’ ಕಾರ್ಯಕ್ರಮದಲ್ಲಿ ಸುಮಾರು 150 ರಿಂದ 200 ಪ್ರೇಕ್ಷಕರ ಸಮ್ಮುಖದಲ್ಲಿ ಮಕ್ಕಳು ಸಿದ್ಧಪಡಿಸಿದ ಚಿತ್ರಗಳು ಪ್ರದರ್ಶನಗೊಂಡವು. ಹಳೆಯ ಕಾಲದ ಅನಿಮೇಷನ್ ತಂತ್ರಗಳಾದ ಜೂಯೆಟ್ರೋಪ್ (Zoetrope) ಮತ್ತು ಫ್ಲಿಪ್‌ಬುಕ್‌ಗಳನ್ನು ಬಳಸಿ ಚಿತ್ರಕ್ಕೆ ವೇಗ ನೀಡುವ ಕಲೆಯನ್ನು ಮಕ್ಕಳು ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಪಂಚತಂತ್ರದ ಹಳೆಯ ಕಥೆಗಳಿಗೆ ಆಧುನಿಕ ಸಮಸ್ಯೆಗಳಾದ ‘ತಪ್ಪು ಮಾಹಿತಿ’ (Disinformation) ಮತ್ತು ‘ಜಲ ಮಾಲಿನ್ಯ’ದಂತಹ ವಿಷಯಗಳನ್ನು ಬೆರೆಸಿ ಮಕ್ಕಳು ನೀಡಿದ ಟ್ವಿಸ್ಟ್‌ಗಳಿಗೆ ಸಭಿಕರು ಮಾರುಹೋದರು. ಕೇವಲ ಡಿಜಿಟಲ್ ತಂತ್ರಜ್ಞಾನವಷ್ಟೇ ಅಲ್ಲದೆ, ಕ್ಲೇ ಅನಿಮೇಷನ್ (Clay Animation) ಮತ್ತು ಪಿಕ್ಸಲೇಷನ್ (Pixilation) ನಂತಹ ಸಂಕೀರ್ಣ ಪ್ರಕ್ರಿಯೆಗಳ ಮೂಲಕ ಮಕ್ಕಳು ಸೃಜಿಸಿದ ಕಲ್ಪನಾ ಲೋಕ ಬೃಹತ್ ಪರದೆಯ ಮೇಲೆ ಅದ್ಭುತವಾಗಿ ಮೂಡಿಬಂತು.

    *ಪ್ರಮಾಣಪತ್ರ ವಿತರಣೆ:* ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ *ಖ್ಯಾತ ಹರ್ಪಟಾಲಜಿಸ್ಟ್ ಹಾಗೂ ಕಳಿಂಗ ಫೌಂಡೇಶನ್ ಸಂಸ್ಥಾಪಕ ಡಾ. ಪಿ. ಗೌರಿ ಶಂಕರ್* ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, “ಮಕ್ಕಳಲ್ಲಿರುವ ಸೃಜನಶೀಲತೆಯನ್ನು ತಂತ್ರಜ್ಞಾನದ ಜೊತೆ ಬೆರೆಸಿ ಕಥೆ ಹೇಳುವ ಈ ಪ್ರಯತ್ನ ನಿಜಕ್ಕೂ ಅದ್ಭುತ” ಎಂದು ಶ್ಲಾಘಿಸಿದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ತಾವೇ ನಿರ್ಮಿಸಿದ ಡಿಐವೈ ( DIY ) ಸ್ಟುಡಿಯೋ ಮತ್ತು ಅನಿಮೇಷನ್ ಕಿರುಚಿತ್ರಗಳನ್ನು ಪೋಷಕರಿಗೆ ತೋರಿಸಿ ಸಂಭ್ರಮಿಸಿದರು.

    *ಕಿರುಚಿತ್ರಗಳ ಪ್ರದರ್ಶನ:* ಶನಿವಾರ ನಡೆದ ‘ಸ್ಟಾಪ್ ಮೋಷನ್ ಶೋಕೇಸ್-2026’ ಕಾರ್ಯಕ್ರಮದಲ್ಲಿ ಮಕ್ಕಳು ತಯಾರಿಸಿದ ಮೂಲ ಅನಿಮೇಷನ್ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಪಂಚತಂತ್ರದ ಹಳೆಯ ಕಥೆಗಳಿಗೆ ಇಂದಿನ ಆಧುನಿಕ ಸಮಸ್ಯೆಗಳಾದ ‘ತಪ್ಪು ಮಾಹಿತಿ’ (Disinformation) ಮತ್ತು ‘ಜಲ ಮಾಲಿನ್ಯ’ದಂತಹ ವಿಷಯಗಳನ್ನು ಬೆರೆಸಿ ಮಕ್ಕಳು ನೀಡಿದ ಟ್ವಿಸ್ಟ್‌ಗಳಿಗೆ ಪ್ರೇಕ್ಷಕರು ಮಾರುಹೋದರು.

  • ಕನ್ನಡ ಚಿತ್ರರಂಗದ ನಟ ದಿಲೀಪ್ ರಾಜ್ ನಿಧನ

    ಕನ್ನಡ ಚಿತ್ರರಂಗದ ನಟ ದಿಲೀಪ್ ರಾಜ್ ನಿಧನ

    ಕನ್ನಡ ಚಿತ್ರರಂಗದ ನಟ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನಹೊಂದಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತವಾಗಿದ್ದು, ನಟ ಹಾಗೂ ನಿರ್ಮಾಪಕ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ ದಿಲೀಪ್‌ ರಾಜ್‌ ಅವರಿಗೆ ಹೃದಯಾಘಾತ (Heart Attack) ಸಂಭವಿಸಿದ್ದು, ತಕ್ಷಣ ಆಸ್ಪತ್ರೆಗೆ (Hospital) ದಾಖಲಿಸಿದರೂ ಚಿಕಿತ್ಸೆ ಫಲಿಸದೇ ದಿಲೀಪ್‌ ರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಕನ್ನಡ ಚಿತ್ರರಂಗ ಪ್ರತಿಭಾನ್ವಿತ ನಟ, ನಿರ್ಮಾಪಕನನ್ನು ಕಳೆದುಕೊಂಡಿದೆ.

  • ಮೆಡಿಕವರ್ ಆಸ್ಪತ್ರೆಯ ನೂತನ ಮಹಿಳಾ ಮತ್ತು ಮಕ್ಕಳ ಘಟಕವನ್ನ ಉದ್ಘಾಟಿಸಿದ ನಟಿ ರುಕ್ಮಿಣಿ ವಸಂತ.

    ಮೆಡಿಕವರ್ ಆಸ್ಪತ್ರೆಯ ನೂತನ ಮಹಿಳಾ ಮತ್ತು ಮಕ್ಕಳ ಘಟಕವನ್ನ ಉದ್ಘಾಟಿಸಿದ ನಟಿ ರುಕ್ಮಿಣಿ ವಸಂತ.

    ಬೆಂಗಳೂರು (ವೈಟ್ ಫೀಲ್ಡ್): ತಾಯಂದಿರ ದಿನಾಚರಣೆಯಂದು ವೈಟ್ ಫೀಲ್ಡ್ ನ ಹೂಡಿಯ ಮೆಡಿಕವರ್ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣವಾದ ಮಹಿಳಾ ಮತ್ತು ಮಕ್ಕಳ 100 ಹಾಸಿಗೆಗಳ ಘಟಕವನ್ನ ಖ್ಯಾತ ನಟಿ ರುಕ್ಮಿಣಿ ವಸಂತ ಉದ್ಘಾಟಿಸಿದರು.

    ಗರ್ಭಧಾರಣೆ, ನವಜಾತ ಶಿಶುವಿನ ತೀವ್ರ ನಿಗಾ ಘಟಕ, ಮಕ್ಕಳ ತುರ್ತು ಚಿಕಿತ್ಸೆ ಸೇವೆ ಒದಗಿಸಲಾಗುತ್ತದೆ. ಲೆವೆಲ್-3 ಎನ್‌ಐಸಿಯು, ಪಿಐಸಿಯು, ಮೆಟರ್ನಲ್ ಐಸಿಯು, ರೊಬೋಟಿಕ್ ಶಸ್ತ್ರಚಿಕಿತ್ಸೆ ಹಾಗೂ 24×7 ಮಕ್ಕಳ ತುರ್ತು ಚಿಕಿತ್ಸಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿದೆ.

    ತಾಯಿ-ಮಗು ಆರೋಗ್ಯ ಸೇವೆಗಳಿಗೆ ಸಮಗ್ರ ಮತ್ತು ಉನ್ನತ ಮಟ್ಟದ ಚಿಕಿತ್ಸಾ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಆಸ್ಪತ್ರೆಯನ್ನು ಆರಂಭಿಸಲಾಗಿದೆ.

    ಆಸ್ಪತ್ರೆ ಉದ್ಘಾಟನೆಯ ಹಿನ್ನಲೆ ತಾಯಂದಿರಿಗಾಗಿ ವಿಶೇಷ ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. ಈ ಸೀಮಿತ ಉದ್ಘಾಟನಾ ಕೊಡುಗೆಯ ಭಾಗವಾಗಿ, ಮೊದಲ 100 ನೋಂದಣಿದಾರರು ಸಾಮಾನ್ಯ ಹೆರಿಗೆಗೆ ₹45,000 ಮತ್ತು  ಕ್ಕೆ ಸಿ-ಸೆಕ್ಷನ್ ಗೆ ₹65,000 ಪ್ಯಾಕೇಜ್‌ಗಳನ್ನು ಪಡೆಯಬಹುದು. ತಜ್ಞ ಪ್ರಸೂತಿ ಆರೈಕೆ, ಸುಧಾರಿತ ಸೌಲಭ್ಯಗಳು, ನವಜಾತ ಶಿಶುಗಳ ಬೆಂಬಲ ಮತ್ತು ಸಹಾನುಭೂತಿಯ ಆರೈಕೆ ಸೇವೆಗಳೊಂದಿಗೆ ವಿಶೇಷ ಕೊಡುಗೆಗಳನ್ನ ನೀಡಿದೆ.

    ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ನಟಿ ರುಕ್ಮಿಣಿ ವಸಂತ, ತಾಯಿಯ ಪ್ರೀತಿ ಪ್ರತಿಯೊಂದು ಮನೆಯ ಹೃದಯ ಬಡಿತದಂತಿದೆ. ಆ ಹೃದಯವನ್ನು ಕಾಪಾಡುವ ಈ ರೀತಿಯ ಆಸ್ಪತ್ರೆಯನ್ನು ತಾಯಂದಿರ ದಿನದಂದು ನಮ್ಮ ನಗರದಲ್ಲಿ ಉದ್ಘಾಟಿಸುವ ಅವಕಾಶ ಸಿಕ್ಕಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಾ.ಜಿ ಅನೀಲ್ ಕೃಷ್ಣ, . ತಾಯಂದಿರು ಮತ್ತು ಮಕ್ಕಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪುಗೊಂಡ ಆಸ್ಪತ್ರೆಯನ್ನು ನಗರಕ್ಕೆ ನೀಡುತ್ತಿರುವುದು ಸಂತೋಷದ ವಿಷಯ. ಗುಣಮಟ್ಟ, ಸುಲಭ ಲಭ್ಯತೆ ಮತ್ತು ವಿಶ್ವಾಸಾರ್ಹ ಚಿಕಿತ್ಸಾ ಫಲಿತಾಂಶಗಳಿಗೆ ನಾವು ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

    ಪಿ ಹರಿಕೃಷ್ಣ ಮಾತನಾಡಿ, ವೈಟ್‌ಫೀಲ್ಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಿಳೆ ಮತ್ತು ಮಕ್ಕಳ ವಿಶೇಷ ಆರೋಗ್ಯ ಸೇವೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಈ ಆಸ್ಪತ್ರೆ ಆ ಪ್ರದೇಶದ ಜನರಿಗೆ ದೀರ್ಘಕಾಲಿಕ ಆರೋಗ್ಯ ಸೇವಾ ಬದ್ಧತೆಯಾಗಿದೆ ಎಂದರು.

    ಉದ್ಘಾಟನೆಯ ಅಂಗವಾಗಿ ಬೆಂಗಳೂರಿನ ತಾಯಂದಿರು ಬರೆದ ನೂರು ಹಸ್ತಲಿಖಿತ ಶುಭಾಶಯ ಸಂದೇಶಗಳನ್ನು ಒಳಗೊಂಡ ‘ವಾಲ್ ಆಫ್ ವಿಶಸ್’ ಅನಾವರಣಗೊಳಿಸಲಾಯಿತು. ರುಕ್ಮಿಣಿ ವಸಂತ ಅವರು 101ನೇ ಸಂದೇಶವನ್ನು ಸೇರಿಸಿದರು.

    ಆಸ್ಪತ್ರೆಯ ವೈದ್ಯಕೀಯ ತಂಡವನ್ನು ಡಾ.ಪ್ರವೀಣ್ ವೆಂಕಟಗಿರಿ, ಡಾ.ಲತೀಶ್ ಕಂಬಂ, ಡಾ.ಶಿವಶಂಕರ ಡಿಗ್ಗಿಕರ್, ಡಾ.ತೇಜಿ ದಾವಣೆ ಹಾಗೂ ಡಾ.ವೇಣುಗೋಪಾಲ್ ರೆಡ್ಡಿ ನೇತೃತ್ವ ವಹಿಸಿದ್ದಾರೆ.