Blog

  • ದೇಶಾದ್ಯಂತ ಮತ್ತೆ ಪೆಟ್ರೋಲ್, ಡೀಸೆಲ್ ದರ ₹2.5ಕ್ಕೂ ಹೆಚ್ಚು ಏರಿಕೆ: 10 ದಿನಗಳಲ್ಲಿ 4ನೇ ಬಾರಿ ಶಾಕ್.

    ದೇಶಾದ್ಯಂತ ಮತ್ತೆ ಪೆಟ್ರೋಲ್, ಡೀಸೆಲ್ ದರ ₹2.5ಕ್ಕೂ ಹೆಚ್ಚು ಏರಿಕೆ: 10 ದಿನಗಳಲ್ಲಿ 4ನೇ ಬಾರಿ ಶಾಕ್.

    ಎರಡು ವಾರಗಳ ಅಂತರದಲ್ಲಿ ಸತತವಾಗಿ ಮೂರು ಬಾರಿ ತೈಲ ಬೆಲೆಗಳು ಏರಿಕೆಯಾಗಿ ಜನ ಹೈರಾಣಾಗಿದ್ದು, ಇಂದು ಮತ್ತೆ ಏರಿಕೆ ಆಗುವ ಮೂಲಕ ಜನರಿಗೆ ಮತ್ತೊಮ್ಮೆ ಶಾಕ್ ನೀಡಿದೆ.

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ದರಗಳು ಮತ್ತೆ ದುಬಾರಿಯಾಗಿವೆ.

    ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2.61 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 2.71 ರೂಪಾಯಿಯಷ್ಟು ಹೆಚ್ಚಳ ಮಾಡಿವೆ.
    ಕಳೆದ ಎರಡು ವಾರಗಳಲ್ಲಿ ತೈಲ ದರ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

    ಬೆಲೆ ಏರಿಕೆಯ ನಂತರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.12 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ದರ ಲೀಟರ್‌ಗೆ 95.20 ರೂಪಾಯಿಗೆ ಏರಿಕೆಯಾಗಿದೆ.

    ಎಷ್ಟು ಏರಿಕೆಯಾಯಿತು?

    ಹೊಸ ದರಗಳ ಪ್ರಕಾರ

    ಪೆಟ್ರೋಲ್:ಪ್ರತಿ ಲೀಟರ್ಗೆ ಸುಮಾರು ₹3 (ನಗರಾನುಸಾರ ₹2.46 – ₹2.87)

    ಡೀಸೆಲ್:ಪ್ರತಿ ಲೀಟರ್ಗೆ ಸುಮಾರು ₹3 (₹2.57 – ₹2.81)

    CNG:ಪ್ರತಿ ಕೆಜಿಗೆ ₹1 ಏರಿಕೆ (ಇತ್ತೀಚಿನ ದಿನಗಳಲ್ಲಿ 3ನೇ ಬಾರಿ ಏರಿಕೆ, ಒಟ್ಟು ₹4 ಏರಿಕೆ)

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿರುವುದೇ ಈ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದ ತೈಲ ಆಮದು ವೆಚ್ಚ ಹೆಚ್ಚಾಗಿ, ಸರ್ಕಾರಿ ತೈಲ ಕಂಪನಿಗಳಿಗೆ ಆರ್ಥಿಕ ಒತ್ತಡ ಉಂಟಾಗಿದೆ. ಈ ಹಿನ್ನೆಲೆ ಬೆಲೆ ಏರಿಕೆ ಅನಿವಾರ್ಯವಾಗಿತ್ತು ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

    ಇಂಧನ ದರ ಏರಿಕೆಯ ಪರಿಣಾಮ ಕೇವಲ ವಾಹನ ಸವಾರರ ಮೇಲಷ್ಟೇ ಅಲ್ಲ, ಅಗತ್ಯ ವಸ್ತುಗಳ ಬೆಲೆಯ ಮೇಲೂ ಬೀಳುವ ಸಾಧ್ಯತೆ ಇದೆ. ಸಾರಿಗೆ ವೆಚ್ಚ ಹೆಚ್ಚಾದರೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಬಹುದು.

  • ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ, ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆ

    ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ, ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆ

    ಮುಂಗಾರು ಆರಂಭದ ಮುನ್ಸೂಚನೆಯಾಗಿ ಕೇರಳದಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ (Yellow Alert) ಘೋಷಿಸಿದೆ.

    ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರವಾಹ ಅಥವಾ ನೀರು ನಿಲ್ಲುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಲು ಹೇಳಲಾಗಿದೆ. ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.

    ಭಾರತೀಯ ಹವಾಮಾನ ಇಲಾಖೆಯ (IMD) ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಮುಂಗಾರು ಮಾರುತಗಳು ಮೇ 26ರ ಸುಮಾರಿಗೆ ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಮುಂಗಾರು ಜೂನ್ 1 ರಂದು ಕೇರಳಕ್ಕೆ ಆಗಮಿಸುವುದು ವಾಡಿಕೆ. ಆದರೆ ಈ ಬಾರಿ ಸುಮಾರು ಒಂದು ವಾರ ಮುಂಚಿತವಾಗಿಯೇ ಆಗಮಿಸುತ್ತಿದೆ.

    ಮುಂಗಾರು ಮಾರುತಗಳು ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಆಗ್ನೆಯ ಅರಬ್ಬಿ ಸಮುದ್ರದ ಭಾಗಗಳನ್ನು ಆವರಿಸಿಕೊಂಡಿವೆ. ಕೇರಳದತ್ತ ವೇಗವಾಗಿ ಮುನ್ನುಗ್ಗುತ್ತಿವೆ.

    ಪ್ರಸ್ತುತ ಕೇರಳದಾದ್ಯಂತ ವ್ಯಾಪಕವಾಗಿ ಗುಡುಗು ಸಹಿತ ಮಳೆಯಾಗುತ್ತಿದೆ. ಮುಂದಿನ 5 ದಿನಗಳ ಕಾಲ ಭಾರಿ ಮಳೆ (7 ರಿಂದ 11 ಸೆಂ.ಮೀ) ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD ) ತಿಳಿಸಿದೆ. ಲಕ್ಷದ್ವೀಪ ಮತ್ತು ಕೇರಳದ ಕರಾವಳಿ ತೀರಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಕಡಲು ಆರ್ಭಟಿಸುತ್ತಿದೆ. ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    ಮುಂಗಾರು ಬೇಗನೇ ಆರಂಭವಾಗುತ್ತಿದ್ದರೂ, ಈ ವರ್ಷ ‘ಎಲ್ ನಿನೋ’ (El Nino) ಪ್ರಭಾವದ ಸಾಧ್ಯತೆ ಇರುವುದರಿಂದ ದೇಶದಲ್ಲಿ ಒಟ್ಟಾರೆ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕೊಂಚ ಕಡಿಮೆ (ದೀರ್ಘಾವಧಿ ಸರಾಸರಿಯ ಶೇ. 92 ರಿಂದ 94 ರಷ್ಟು) ಇರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

  • ಪೊಲೀಸ್ ವಸತಿ ಗೃಹದಲ್ಲಿ ಯುವತಿ ಆತ್ಮಹತ್ಯೆ: ಪತಿ ಹಾಗೂ ಕುಟುಂಬದ ವಿರುದ್ಧ ದೂರು!

    ಪೊಲೀಸ್ ವಸತಿ ಗೃಹದಲ್ಲಿ ಯುವತಿ ಆತ್ಮಹತ್ಯೆ: ಪತಿ ಹಾಗೂ ಕುಟುಂಬದ ವಿರುದ್ಧ ದೂರು!

    ಕೆ.ಆರ್.ಪುರ ಪೊಲೀಸ್ ವಸತಿ ಗೃಹದಲ್ಲಿ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಜೇಶ್ ಆರಾಧ್ಯ ಅವರ ಪತ್ನಿ ಲಕ್ಷ್ಮೀಪ್ರಿಯಾ (27) ಮೃತ ಮಹಿಳೆ.

    ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ ಅವರಿಗೆ 2023ರಲ್ಲಿ ಮೈಸೂರಿನಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಸದ್ಯ 8 ತಿಂಗಳ ಹಸುಗೂಸಿದೆ.

    ಕೆ.ಆರ್.ಪುರಂನಲ್ಲಿರುವ ಪೊಲೀಸ್ ಕ್ವಾಟ್ರಸ್ನಲ್ಲಿ ಈ ಕುಟುಂಬ ವಾಸವಾಗಿತ್ತು. ನಿನ್ನೆ (ಮೇ 22) ಬೆಳಿಗ್ಗೆ ದಂಪತಿ ನಡುವೆ ಕೌಟುಂಬಿಕ ವಿಷಯಕ್ಕೆ ದೊಡ್ಡ ಜಗಳ ಉಂಟಾಗಿದೆ. “ನನ್ನ ತಂದೆ-ತಾಯಿಗೆ ನೀನು ಸರಿಯಾಗಿ ಮರ್ಯಾದೆ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಗೆ ಬೈದಿದ್ದರು. ಇದೇ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದ ಲಕ್ಷ್ಮೀಪ್ರಿಯಾ, ನಿನ್ನೆ ರಾತ್ರಿ ರಾಜೇಶ್ ರಾತ್ರಿ ಕೆಲಸಕ್ಕೆ ತೆರಳಿದ್ದಾಗ ಇತ್ತ ಕ್ವಾಟ್ರಸ್ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

    ಇನ್ನು ಘಟನೆ ನಡೆದ ಬೆನ್ನಲ್ಲೇ ಮೃತ ಲಕ್ಷ್ಮೀಪ್ರಿಯಾ ಪೋಷಕರು, ರಾಜೇಶ್ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದಾಗಿನಿಂದಲೂ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬ ಸದಸ್ಯರು ಲಕ್ಷ್ಮೀಪ್ರಿಯಾಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು. ನಿನ್ನೆ ನಡೆದ ಜಗಳ ಹಾಗೂ ಈ ಹಿಂದಿನ ಕಿರುಕುಳವೇ ಮಗಳ ಆತ್ಮಹತ್ಯೆಗೆ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

    ಮೃತ ಲಕ್ಷ್ಮೀಪ್ರಿಯಾ ಪೋಷಕರು ನೀಡಿದ ದೂರಿನ ಅನ್ವಯ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ತನಿಖೆ ನಡೆಸಿದ್ದಾರೆ.

  • ಪಾಕಿಸ್ತಾನ : ಚಲಿಸುತ್ತಿದ್ದ ರೈಲಿನಲ್ಲಿ ಆತಾಹುತಿ ಬಾಂಬ್‌ ದಾಳಿ : 24 ಮಂದಿ ಸಾ*ವು

    ಪಾಕಿಸ್ತಾನ : ಚಲಿಸುತ್ತಿದ್ದ ರೈಲಿನಲ್ಲಿ ಆತಾಹುತಿ ಬಾಂಬ್‌ ದಾಳಿ : 24 ಮಂದಿ ಸಾ*ವು

    ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 24 ಜನರು ಸಾ*ವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಯ ದೃಶ್ಯಗಳು ಮತ್ತು ವರದಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿವೆ.

    ರೈಲು ಕಂಟೋನ್ಮೆಂಟ್‌ನಿಂದ ಹೊರಟು ಕ್ವೆಟ್ಟಾದ ‘ಚೆಮನ್ ಫಾಟಕ್’ (Chaman Phatak) ಪ್ರದೇಶದ ಬಳಿ ಚಲಿಸುತ್ತಿದ್ದಾಗ ಈ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.

    ಹಳಿತಪ್ಪಿದ ಬೋಗಿಗಳು: ಸ್ಫೋಟದ ತೀವ್ರತೆಗೆ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.

    ಸುತ್ತಮುತ್ತಲಿನ ಹಾನಿ: ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದ ಮನೆಗಳ ಕಿಟಕಿಗಳು ಪುಡಿಯಾಗಿದ್ದು, ಅಲ್ಲಿ ಪಾರ್ಕ್ ಮಾಡಲಾಗಿದ್ದ ಹತ್ತಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ದಾಳಿಯ ಹೊಣೆ ಹೊತ್ತ ಬಿಎಲ್‌ಎ (BLA)
    ಸ್ಫೋಟದ ಬೆನ್ನಲ್ಲೇ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಪಾಕಿಸ್ತಾನದ ಮಿಲಿಟರಿ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಸಂಘಟನೆ ಹೇಳಿಕೊಂಡಿದೆ. ಸ್ಫೋಟದ ನಂತರ ಸ್ಥಳದಲ್ಲಿ ಭಾರಿ ಗುಂಡಿನ ಸದ್ದು ಕೂಡ ಕೇಳಿಬಂದಿದೆ.

    ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ರೈಲ್ವೆ ಸಿಬ್ಬಂದಿ ಮತ್ತು ಪಾಕಿಸ್ತಾನಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

  • ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

    ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿ ಹಾಗೂ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ  ಪ್ರಗತಿ ಕುರಿತು ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್.ಡಿ.ಎಸ್  ರವರು ಸ್ಥಳ ಪರಿಶೀಲನೆ ನಡೆಸಿದರು.

    ರೈಲ್ವೆ ವೆಂಟ್ ಬಾಕಿ 12 ಮೀಟರ್ ಬಾಕ್ಸ್ ಪುಶಿಂಗ್   ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ

    ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿಯ ಭಾಗವಾಗಿ ಬಾಕಿ ಇರುವ ಸುಮಾರು 12 ಮೀಟರ್ ಬಾಕ್ಸ್ ಪುಶಿಂಗ್ ಕಾಮಗಾರಿಯನ್ನು ಮೇ 31ರೊಳಗೆ ಪೂರ್ಣಗೊಳಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಕಾಮಗಾರಿ ಶೀಘ್ರ ಪೂರ್ಣಗೊಂಡಲ್ಲಿ ತಕ್ಷಣವೇ ರಿಟೈನಿಂಗ್ ವಾಲ್ ನಿರ್ಮಾಣ ಕೈಗೊಂಡು, ರೈಲ್ವೆ ವೆಂಟ್ ಮೂಲಕ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದರೊಂದಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಟಾಗುತ್ತಿದ ನೆರೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.

    ಮಳೆ ನೀರು ಕಾಲುವೆಗಳ ಹೂಳು ತೆರವು ಕಾಮಗಾರಿಗಳ ಪರಿಶೀಲನೆ

    ಗೆದ್ದಲಹಳ್ಳಿ ಬಳಿ ರಾಜಕಾಲುವೆಯಲ್ಲಿ  ವಾರ್ಷಿಕ ನಿರ್ವಹಣಾ ಕಾಮಗಾರಿಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮಳೆ ನೀರು ಕಾಲುವೆಗಳ ಹೂಳು ತೆರವು ಮತ್ತು ಸ್ವಚ್ಛತಾ ಕಾಮಗಾರಿಗಳ ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿ ಯುದ್ದೋಪಾದಿಯಲ್ಲಿ ಕಾಲುವೆ ನಿರ್ವಹಣಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.

    ಮಳೆಗಾಲದ ಸಂದರ್ಭದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗದಂತೆ ಪ್ರಮುಖ ರಸ್ತೆಗಳ ಎರಡೂ ಬದಿಗಳಿಂದ ಮಳೆ ನೀರು ಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸರ್ವಜ್ಞನಗರ ಗಡಿಭಾಗದಲ್ಲಿನ ಕಾಮಗಾರಿಗಳ ಪರಿಶೀಲನೆ

    ಪೂರ್ವ ನಗರ ಪಾಲಿಕೆಗೆ ಹೊಂದಿಕೊಂಡಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಗಡಿಯ ಮೇಲ್ಭಾಗದ ಕಾಲುವೆಯಿಂದ ಗೆದ್ದಲಹಳ್ಳಿ ಕಾಲುವೆಗೆ ಸಂಪರ್ಕವಿದ್ದು ಮೇಲ್ಭಾಗದಲ್ಲಿರುವ ಕಾಲುವೆ ಹೂಳು ಕೆಳಭಾಗಕ್ಕೆ ಹರಿದು ಬರುವುದರಿಂದ ನೆರೆ ಪರಿಸ್ಥಿತಿ ಉಂಟಾಗಬಹುದಾಗಿದ್ದು ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾಲುವೆ ನಿರ್ವಹಣಾ ಕಾಮಗಾರಿಗಳನ್ನೂ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

    ಮಳೆಗಾಲದ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿನ ಹೂಳು ತೆರವು, ಕಾಲುವೆ ಸ್ವಚ್ಛತೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ

    ಮಳೆಗಾಲ ಆರಂಭಕ್ಕೂ ಮುನ್ನ ಪ್ರವಾಹ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಮೂಲಕ ಕಾಲುವೆಗಳಲ್ಲಿನ ಹೂಳು, ತ್ಯಾಜ್ಯ, ಕಳೆ ಗಿಡಗಳನ್ನು ತೆರವು ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಸ್ಥಳ ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಬಿ.ಎನ್., ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

  • ಗುಣಮಟ್ಟದ ಶಿಕ್ಷಣಕ್ಕೆ ಹೊಸ ಭಾಷ್ಯ: ಕೋಗೀಲುನಲ್ಲಿ ನ್ಯೂ ಬಾಲ್ಡ್ ವಿನ್ ಶಾಲೆ ಪ್ರಾರಂಭ

    ಗುಣಮಟ್ಟದ ಶಿಕ್ಷಣಕ್ಕೆ ಹೊಸ ಭಾಷ್ಯ: ಕೋಗೀಲುನಲ್ಲಿ ನ್ಯೂ ಬಾಲ್ಡ್ ವಿನ್ ಶಾಲೆ ಪ್ರಾರಂಭ

    ಬೆಂಗಳೂರು: ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ನ್ಯೂ ಬಾಲ್ಡ್ ವಿನ್ ಶಿಕ್ಷಣ ಸಮೂಹ ಸಂಸ್ಥೆಗಳ 10ನೇ ಶಾಖೆ ಕೋಗೀಲುವಿನಲ್ಲಿ ಪ್ರಾರಂಭಗೊಂಡಿದೆ.

    ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಲೋಕಾರ್ಪಣೆ ಗೊಳಿಸಿ ಪೋಷಕರನ್ನುದ್ದೇಶಿಸಿ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ಟಿ.ವೇಣುಗೋಪಾಲ್ ಮಾತನಾಡಿದರು.
    ವಿದ್ಯೆ ಎಂದಿಗೂ ಸೇವೆಯಾಗಬೇಕೆ ಹೊರತು ವ್ಯಾಪಾರವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ನಾವು ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಕೋಗೀಲುವಿನಲ್ಲಿ ಪ್ರಾರಂಭಿಸಿದ್ದೇವೆ.
    ಮಕ್ಕಳಿಗೆ ಹಸಿರಿನಿಂದ ಕೂಡಿದ ವಿಶಾಲವಾದ ಪರಿಸರ, ಅತ್ಯಾಧುನಿಕ ಕಟ್ಟಡ, ಜಾಗತಿಕ ಪಠ್ಯಕ್ರಮ, ನುರಿತ ಶಿಕ್ಷಕ ವೃಂದ, ಸುಸಜ್ಜಿತ ಕ್ರೀಡಾಂಗಣ,ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಕ್ಲಾಸ್ ರೂಮ್ಸ್, ಸುಸಜ್ಜಿತ ಪ್ರಯೋಗಾಲಯ, ಸ್ಕೂಲ್ ಬಸ್ ಸೌಲಭ್ಯ ಜೊತೆಗೆ ಓದಿನ ಜೊತೆಗೆ ಕ್ರೀಡೆ ಮತ್ತು ಕಲೆಗೂ ಇಲ್ಲಿ ಸಮಾನ ಆದ್ಯತೆ ನೀಡುತ್ತೇವೆ ಎಂದರು.

    ಈ ವೇಳೆ ನ್ಯೂ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಫೈನಾನ್ಸ್ ಡೈರೆಕ್ಟರ್ ಶ್ರೀಮತಿ ಸೌಭಾಗ್ಯವತಿ ವೇಣುಗೋಪಾಲ್, ಮ್ಯಾನೇಜಿಂಗ್ ಡೈರೆಕ್ಟರ್ ಹಂಸ ಕೆ.ವೇಣುಗೋಪಾಲ್, ಸಿಇಒ ಕೀರ್ತಿ ಮಹರಾಜ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.

  • ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ: ಪ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ನಗರದ ಚೈತನ್ಯನಗರದಲ್ಲಿ ನಡೆದಿದೆ. ಮೃತರನ್ನು ಚೈತನ್ಯನಗರ ನಿವಾಸಿ ಮೀನಾಕ್ಷಿ ಎಂ ಎಂದು ಗುರುತಿಸಲಾಗಿದೆ.

    ಮೇ 22ರಂದು ಸಂಜೆ ಸುಮಾರು 6:30ರ ವೇಳೆಗೆ ಮೀನಾಕ್ಷಿಯವರು ತಮ್ಮ ಮನೆಯಲ್ಲಿ ಫ್ರಿಡ್ಜ್ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

    ತಕ್ಷಣ ಕುಟುಂಬಸ್ಥರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ದೊಡ್ಡಬಳ್ಳಾಪುರ; ನೆಚ್ಚಿನ ನಾಯಕನ ಜನ್ಮದಿನ, ಗೆಳೆಯರಿಂದ ಅನ್ನಸಂತರ್ಪಣೆ

    ದೊಡ್ಡಬಳ್ಳಾಪುರ; ನೆಚ್ಚಿನ ನಾಯಕನ ಜನ್ಮದಿನ, ಗೆಳೆಯರಿಂದ ಅನ್ನಸಂತರ್ಪಣೆ

    ದೊಡ್ಡಬಳ್ಳಾಪುರ; ನಗರದ ಕಾಂಗ್ರೆಸ್ ಮುಖಂಡರಾದ ಟಿ. ಮಂಜುನಾಥ್ ರವರ 46ನೇ ಜನ್ಮದಿನದ ಹಿನ್ನೆಲೆ ಶುಕ್ರವಾರ ಗೆಳೆಯರ ಬಳಗದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ನಗರದ ತಾಲ್ಲೂಕು ಕಚೇರಿ ವೃತ್ತದಲ್ಲಿ ಮಂಜುನಾಥ್ ರವರು 46 ವರ್ಷ ಪೂರೈಸಿದ ಹಿನ್ನೆಲೆ ಅವರ ಸಮಾಜಮುಖಿ ಕಾರ್ಯಕ್ರಮಗಳ ಮೆಚ್ಚಿ ಗೆಳೆಯರ ಬಳಗದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಅನ್ನಸಂತರ್ಪಣೆ ಮಾಡಿ ಸಂಭ್ರಮಿಸಿದರು.

    ಈ ವೇಳೆ ಮಾತನಾಡಿದ ಗೆಳೆಯರ ಬಳಗದ ತಂಡವು ಮಂಜುನಾಥ್ ರವರು ಕಚೇರಿಪಾಳ್ಯ ವಾರ್ಡ್ ಗೆ ಈಗಾಗಲೇ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ವ್ಯಕ್ತಿತ್ವ ಮತ್ತು ರಾಜಕೀಯ ಜೀವನ ಅನೇಕ ಮಂದಿಗೆ ಪ್ರೇರಣೆಯಾಗಿದೆ. ಮುಂದೆ ವಾರ್ಡ್ ನಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸಿದರು.

     ಈ ವೇಳೆ ಗಂಗಾಧರ್, ಆದಪ್ಪ, ಮಂಜುನಾಥ್, ಶ್ರೀನಿವಾಸ್, ರವಿ, ಅನಂತ್, ಕುಮಾರ್, ತಮ್ಮಯ್ಯ, ನಂದೀಶ್, ನಾಗಣ್ಣ ಸೇರಿದಂತೆ ಹಲವರು ಭಾಗಿಯಾಗಿದ್ದರು.

  • ಅನುಮತಿಯಿಲ್ಲದೆ ರಸ್ತೆ ಅಗೆದರೆ ದೂರು ದಾಖಲಿಸಿ: ಡಿ.ಎಸ್. ರಮೇಶ್

    ಅನುಮತಿಯಿಲ್ಲದೆ ರಸ್ತೆ ಅಗೆದರೆ ದೂರು ದಾಖಲಿಸಿ: ಡಿ.ಎಸ್. ರಮೇಶ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವಸಿದ್ಧತೆ, ಕೆರೆಗಳ ಸಂರಕ್ಷಣೆ, ರಾಜಕಾಲುವೆಗಳ ನಿರ್ವಹಣೆ, ಒಳಚರಂಡಿ ಸಮಸ್ಯೆಗಳ ಪರಿಹಾರ, ಪ್ರವಾಹ ನಿಯಂತ್ರಣ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆಗಳ ಕುರಿತು ಪ್ರಗತಿ ಪರಿಶೀಲಿಸಲು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆಯನ್ನು ನಡೆಸಿದರು.

    ಸಭೆಯಲ್ಲಿ ಚರ್ಚಿಸಲಾದ ವಿಷಯಗಳು

    ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು

    ಬೆಂಗಳೂರು ಜಲಮಂಡಳಿಯ ಎಸ್.ಟಿ.ಪಿ ಯಿಂದ ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು ಹರಿಸುವ ಸಂಬಂಧ ಈಗಾಗಲೇ ಪೈಪ್ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ರಸ್ತೆ ಹಾನಿಯಾಗದಂತೆ ಓಪನ್ ಕಟಿಂಗ್ ಬದಲಿಗೆ ಟ್ರೆಂಚ್ಲೆಸ್ ಟೆಕ್ನಾಲಜಿ ಬಳಸಿಕೊಂಡು ಕಾಮಗಾರಿ ಕೈಗೊಳ್ಳುವುದಾಗಿ ಜಲಮಂಡಳಿ ತಿಳಿಸಿದ್ದು, ವಿಭಾಗ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರಿಂದ ಅನುಮತಿ ಪಡೆದು ಮುಂದಿನ 20 ದಿನಗಳೊಳಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ಸಂಸ್ಕರಿತ ನೀರು ಹರಿಸಲು ಕ್ರಮವಹಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

    ವೆಂಗಯ್ಯನ ಕೆರೆಗೆ ಎಸ್.ಟಿ. ಪಿಯಿಂದ ಸಂಸ್ಕರಿಸಿದ ನೀರು

    ವೆಂಗಯ್ಯನ ಕೆರೆ ಪ್ರದೇಶದಲ್ಲಿ ತಲಾ 30 ಎಂಎಲ್ಡಿ ಸಾಮರ್ಥ್ಯದ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಎಸ್ಟಿಪಿ ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿದ್ದರೆ ಮತ್ತೊಂದು ನವೀಕರಣ ಹಂತದಲ್ಲಿರುತ್ತದೆ. ಪ್ರಸ್ತುತ ಸಂಸ್ಕರಿತ ನೀರು ಹಾಗೂ ರಾಜಕಾಲುವೆಯಿಂದ ಬರುವ ಅಶುದ್ಧ ನೀರು ಒಂದೇ ಮಾರ್ಗದಲ್ಲಿ ಮಿಶ್ರಣಗೊಂಡು ಕೆರೆಗೆ ಸೇರುತ್ತಿರುವುದರಿಂದ ಮಾಲಿನ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

    ಈ ಹಿನ್ನೆಲೆಯಲ್ಲಿ ಪೈಪ್ಲೈನ್ ಅಳವಡಿಸಲು ಅನುಮತಿ ಪಡೆದು ಸಂಸ್ಕರಿತ ನೀರಿಗೆ ಪ್ರತ್ಯೇಕ ಪೈಪ್ಲೈನ್ ವ್ಯವಸ್ಥೆ ಮಾಡಿ, ಅಶುದ್ಧ ನೀರನ್ನು ಡೈವರ್ಷನ್ ಮೂಲಕ ಹರಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಇನ್ನೂ 20 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

    ದೇವರಬೀಸನಹಳ್ಳಿ ಕೆರೆ ಮತ್ತು ಎಸ್ಟಿಪಿ ನಿರ್ವಹಣೆ

    ದೇವರಬೀಸನಹಳ್ಳಿ ಪ್ರದೇಶದಲ್ಲಿ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, 1.3 ಎಂಎಲ್ಡಿ ಸಾಮರ್ಥ್ಯದ ಘಟಕವನ್ನು ಆದರ್ಶ ವಸತಿ ಸಮುಚ್ಚಯ ಸಂಸ್ಥೆಯು ಸರ್ಕಾರದ ಅನುಮತಿಯೊಂದಿಗೆ ಸರ್ಕಾರಿ ಜಾಗದಲ್ಲಿ ನಿರ್ವಹಿಸಲಾಗುತ್ತಿದೆ. ಮತ್ತೊಂದು 900 ಕೆಎಲ್ಡಿ ಸಾಮರ್ಥ್ಯದ ಎಸ್ಟಿಪಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆ ಅನುಮತಿ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದು, ಪ್ರಮಾಣಪತ್ರ ದೊರೆತ ಬಳಿಕ ವಸತಿ ಸಮುಚ್ಚಯದ ಒಳಚರಂಡಿ ನೀರನ್ನು 900 ಕೆಎಲ್ಡಿ ಘಟಕಕ್ಕೆ ವರ್ಗಾಯಿಸಲಾಗುವುದು. ಇದರಿಂದ ದೇವರಬೀಸನಹಳ್ಳಿ ಗ್ರಾಮದಿಂದ ಕೆರೆಗೆ ಸೇರುತ್ತಿರುವ ಅಶುದ್ಧ ನೀರನ್ನು ಹಾಲಿ ಇರುವ 1.3 ಎಂ.ಎಲ್.ಡಿ ಸಾಮರ್ಥ್ಯದ ಎಸ್.ಟಿ.ಪಿಗೆ ವರ್ಗಾಯಿಸಿ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ರಿಯಲ್ ಟೈಮ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಿ

    ಅಪಾರ್ಟ್ಮೆಂಟ್ಗಳಿಂದ ಸಂಸ್ಕರಿಸಲ್ಪಟ್ಟ ನೀರು ಪ್ರತ್ಯೇಕ ಪೈಪ್ಲೈನ್ ಮೂಲಕ ಕೆರೆಗಳಿಗೆ ಹರಿಯುವಂತೆ ವ್ಯವಸ್ಥೆ ಸಂಬಂಧ ಈಗಾಗಲೇ ಜಲಮಂಡಳಿ ವತಿಯಿದ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದು, ಕೆರೆಗಳಿಗೆ ಹರಿಯುವ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ರಿಯಲ್ ಟೈಮ್ ಸೆನ್ಸರ್ ಆಧಾರಿತ ಮಾನಿಟರಿಂಗ್ ವ್ಯವಸ್ಥೆ ಅಳವಡಿಸುವ ಮೂಲಕ ಕೆರೆಗಳಿಗೆ ಸೇರುವ ನೀರಿನ ಪ್ರಮಾಣ, ಹರಿವು ಹಾಗೂ ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ಒದಗಿಸುವುದು ಮುಖ್ಯ ಎಂದು ಆಯುಕ್ತರು ಸೂಚಿಸಿದರು.

    ಅನಧಿಕೃತ ರಸ್ತೆ ಅಗೆತಕ್ಕೆ ಕಠಿಣ ಎಚ್ಚರಿಕೆ

    ಐಟಿಪಿಎಲ್ ರಸ್ತೆ, ದೇವಸಂದ್ರ ರಸ್ತೆ, ಸರ್ಜಾಪುರ ರಸ್ತೆ ಹಾಗೂ ದೇವರಬೀಸನಹಳ್ಳಿ ಪ್ರದೇಶಗಳಲ್ಲಿ ನಗರ ಪಾಲಿಕೆ ಅನುಮತಿ ಪಡೆಯದೆ ಅನಧಿಕೃತ ರಸ್ತೆ ಅಗೆತ ಪ್ರಕರಣಗಳು ಕಂಡುಬಂದಿದ್ದು, ಹೊಸತಾಗಿ ಡಾಂಬರೀಕರಣಗೊಂಡ ರಸ್ತೆಗಳ ಮಧ್ಯಭಾಗದಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ತಡೆಯಲು ಸೂಚಿಸಿದರು.

    ನಗರ ಪಾಲಿಕೆ ವಿಭಾಗೀಯ ಕಾರ್ಯಪಾಲಕ ಇಂಜಿನಿಯರಿಂದ ಅನುಮತಿ ಪಡೆಯದೆ ರಸ್ತೆ ಅಗೆದು ಕಾಮಗಾರಿ ನಡೆಸುತ್ತಿರುವ ವಿವಿಧ ಇಲಾಖೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಯುಕ್ತರು ಸೂಚಿಸಿದರು. ಇಂತಹ ಪ್ರಕರಣಗಳು ಮುಂದುವರಿದರೆ ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

    ದೇವಸಂದ್ರ ಬಡಾವಣೆ ಪೈಪ್ಲೈನ್ ಅಲೈನ್ಮೆಂಟ್ ಪರಿಶೀಲನೆ

    ದೇವಸಂದ್ರ ಬಡಾವಣೆ ಸಮೀಪದ 900 ಮಿಮೀ ಎಸ್ ಟಿ ಪಿ ಪೈಪ್ಲೈನ್ ಕಾಮಗಾರಿಗೆ ಸಂಬಂಧಿಸಿದ ಭೂಮಾಪನ ಹಾಗೂ ಸರ್ವೆ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಯಿತು.
    ಮಳೆ ನೀರು ಕಾಲುವೆ ಸುಸ್ಥಿಯಲ್ಲಿಡಿ

    ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 225 ಕಿಲೋಮೀಟರ್ ವ್ಯಾಪ್ತಿಯ ಮಳೆ ನೀರು ಕಾಲುವೆ ಜಾಲವಿದ್ದು,125 ಕಿ.ಮೀ ಈಗಾಗಲೇ ಕಾಂಕ್ರೀಟ್ ಕಾಲುವೆ ನಿರ್ಮಿಸಲಾಗಿದೆ. ಬಾಕಿ 100 ಕಿ.ಮೀ ಕಚ್ಚಾ ಕಾಲುವೆಗಳನ್ನು ವಿಶ್ವಬ್ಯಾಂಕ್ ಹಾಗೂ ಸರ್ಕಾರದ ಅನುದಾನದ ಅಡಿಯಲ್ಲಿ ಕಾಲುವೆಗಳ ಅಭಿವೃದ್ಧಿಗ ಬಾಕಿ ಇರುತ್ತದೆ. ಕಾಲುವೆಗಳ ನಿರ್ವಹಣೆ ಕಾಮಗಾರಿಗಳ ಪ್ರಗತಿ ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಕಾಂಕ್ರೀಟ್ ರಾಜಕಾಲುವೆ ಹಾಗೂ ಕಚ್ಚಾ ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಪ್ರತಿದಿನದ ನಿರ್ವಹಣಾ ಕಾಮಗಾರಿ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಅಂಡರ್ ಪಾಸ್ ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ

    ತೂಬರಹಳ್ಳಿ, ಕುಂದಲಹಳ್ಳಿ, ದೇವರಬೀಸನಹಳ್ಳಿ, ಲೌರಿ ಜಂಕ್ಷನ್, ದೊಡ್ಡನೆಕ್ಕುಂದಿ ಹಾಗೂ ಪಣತ್ತೂರು ಅಂಡರ್ಪಾಸ್ ಪ್ರದೇಶಗಳಲ್ಲಿ ನೀರು ನಿಲುಗಡೆ ಉಂಟಾಗಿ ಸಂಚಾರ ಸಮಸ್ಯೆ ಉಂಟಾಗದಂತೆ ಕ್ರಮವಹಿಸುವ ಸಲುವಾಗಿ ಕ್ಯಾಚ್ಪಿಟ್ಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ತೆರವುಗೊಳಿಸಲು ವಿಶೇಷ ತಂಡಗಳನ್ನು ನಿಯೋಜಿಸಿ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು.

    ತುರ್ತು ಸ್ಪಂದನಾ ತಂಡಗಳು ಮತ್ತು ಮಳೆಗಾಲ ಪೂರ್ವಸಿದ್ಧತೆ

    ಮಳೆಗಾಲದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗುವ ಪ್ರದೇಶಗಳಲ್ಲಿ ಉಪವಿಭಾಗ ಮಟ್ಟದ ತುರ್ತು ಸ್ಪಂದನಾ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲು ಹಾಗೂ ಕಂಟ್ರೋಲ್ ರೂಂನಿಂದ ದೂರು ಬಂದ 10 ರಿಂದ 15 ನಿಮಿಷಗಳೊಳಗೆ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

    ತುರ್ತು ಪರಿಸ್ಥಿತಿಗಳಿಗೆ ಅಗತ್ಯವಾದ ಪಂಪ್ಸೆಟ್, ಜೆಸಿಬಿ, ಡಿ-ವಾಟರಿಂಗ್ ಪಂಪ್, ಟಿಪ್ಪರ್, ಟೋಯಿಂಗ್ ರೋಪ್, ಟಾರ್ಪಲಿನ್ ಹಾಗೂ ಇನ್ನಿತರೆ ವಿಪತ್ತು ನಿರ್ವಹಣೆ ಯಂತ್ರೋಪಕರಣಗಳನ್ನು ಸದಾ ಸಿದ್ಧವಾಗಿಡಲು ಕಾರ್ಯಪಾಲಕ ಅಭಿಯಂತರರು ಹಾಗೂ ಅಗ್ನಿ ಶಾಮಕ ಸೂಚಿಸಲಾಯಿತು.

    ರಸ್ತೆ ಬದಿ ತ್ಯಾಜ್ಯ, ಕಟ್ಟಡ ಭಗ್ನಾವಶೇಷ ಹಾಗೂ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆdoor

    ರಸ್ತೆ ಬದಿ ಕಸ ಹಾಗೂ ನಿರ್ಮಾಣ ತ್ಯಾಜ್ಯ ಎಸೆಯುವುದರಿಂದ ಮಳೆ ನೀರು ಹರಿವಿಗೆ ಅಡ್ಡಿಯಾಗುತ್ತಿದ್ದು, ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಸಂಚಾರಿ ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ರಾತ್ರಿ ವೇಳೆ ಗಸ್ತು ಹೆಚ್ಚಿಸಲು ಸೂಚಿಸಿದರು. ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ರಸ್ತೆ ಬದಿ ಹಾಗೂ ಕಾಲುವೆ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಮಳೆಗಾಲಕ್ಕೂ ಮುನ್ನ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಕೊಂಬೆಗಳನ್ನು ಗುರುತಿಸಿ ತಕ್ಷಣವೇ ತೆರವುಗೊಳಿಸುವಂತೆ, ಕತ್ತರಿಸಿದ ಮರಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಬಾರದು ಎಂದು ಆಯುಕ್ತರು ಸೂಚಿಸಿದರು.

    ಬೀದಿ ದೀಪಗಳ ನಿರ್ವಹಣೆ

    ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ಜಂಕ್ಷನ್ಗಳು, ಮುಖ್ಯರಸ್ತೆಗಳು, ಅಂಡರ್ಪಾಸ್ ಗಳು, ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ಹಿಸುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಗತ್ಯವಿರುವ ಕಡೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.

    ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಂಚಾರಿ ಪೊಲೀಸ್ ಇಲಾಖೆ, ಬೆಸ್ಕಾಂ, ಜಲಮಂಡಳಿ, ವಿಪತ್ತು ನಿರ್ವಹಣಾ ವಿಭಾಗ, ಅಗ್ನಿಶಾಮಕ ಇಲಾಖೆ, ಘನ ತ್ಯಾಜ್ಯ ನಿರ್ವಹಣೆ ವಿಭಾಗ, , ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು

  • ಕೂದಲು ಮತ್ತು ರಬ್ಬರ್ ತಿಂದ ಎರಡು ವರ್ಷದ ಮಗುವಿನ ಜೀವ ಉಳಿಸಿದ ಮೆಡಿಕವರ್ ವೈದ್ಯರು.

    ಕೂದಲು ಮತ್ತು ರಬ್ಬರ್ ತಿಂದ ಎರಡು ವರ್ಷದ ಮಗುವಿನ ಜೀವ ಉಳಿಸಿದ ಮೆಡಿಕವರ್ ವೈದ್ಯರು.

    ಬೆಂಗಳೂರು, ವೈಟ್‌ಫೀಲ್ಡ್: ಅಪರೂಪದ ಹಾಗೂ ಜೀವಕ್ಕೆ ಅಪಾಯಕಾರಿಯಾದ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ವರ್ಷದ ಬಾಲಕಿಯ ಜೀವವನ್ನು ಮೆಡಿಕವರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಉಳಿಸಿದ್ದಾರೆ. ಈ ಪ್ರಕರಣದಲ್ಲಿ ಮಕ್ಕಳ ತಜ್ಞೆ ಡಾ ಲೀನತಾ ರೆಡ್ಡಿ ಪ್ರಮುಖ ಪಾತ್ರವಹಿಸಿ ಅಪರೂಪದ “ರಪುಂಜಲ್ ಸಿಂಡ್ರೋಮ್” (Rapunzel Syndrome) ಎಂಬ ಸ್ಥಿತಿಯನ್ನು ಗುರುತಿಸಿ ಚಿಕಿತ್ಸೆ ನೀಡಿದ್ದಾರೆ.

    ಮಗು ಬಾಲ್ಯದಿಂದಲೇ ಕೂದಲು, ರಬ್ಬರ್ ಬ್ಯಾಂಡ್‌ಗಳು ಹಾಗೂ ಬಲೂನ್ ತುಂಡುಗಳಂತಹ ಆಹಾರವಲ್ಲದ ವಸ್ತುಗಳನ್ನು ತಿನ್ನುವ ವಿಚಿತ್ರ ಅಭ್ಯಾಸ ಹೊಂದಿತ್ತು. ಇದರಿಂದ ಹೊಟ್ಟೆಯೊಳಗೆ ದೊಡ್ಡ ಪ್ರಮಾಣದ ಕೂದಲಿನ ಗುಡ್ಡೆ (Trichobezoar) ರೂಪಗೊಂಡು, ಅದು ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ವಿಸ್ತರಿಸಿತ್ತು. ಈ ಅಪರೂಪದ ಸ್ಥಿತಿಗೆ “ರಪುಂಜಲ್ ಸಿಂಡ್ರೋಮ್” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಚಿಕ್ವಕ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಎರಡು ವರ್ಷದ ಮಗುವಿನಲ್ಲಿ ಕಂಡುಬಂದಿರುವುದು ಅತ್ಯಂತ ಅಪರೂಪವಾಗಿದೆ.
    ಕೆಲವು ದಿನಗಳಿಂದ ಮಗುವಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಹಾಗೂ ಆಹಾರ ಸೇವನೆ ಕಡಿಮೆಯಾಗಿತ್ತು. ಇದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ಹರಡಿರುವ ದೊಡ್ಡ ಕೂದಲಿನ ಗುಡ್ಡೆ ಆಹಾರವನ್ನ ಪಚನಗೊಳ್ಳಲು ಮತ್ತು ಸರಾಗವಾಗಿ ಹೊಗಲು ಕಷ್ಟವಾಗುತ್ತಿತ್ತು.

    ಮೊದಲಿಗೆ ಗ್ಯಾಸ್ಟ್ರೋಎಂಟರಾಲಜಿಸ್ಟ್ Dr. Roopesh Kalyan ಎಂಡೋಸ್ಕೋಪಿಯ ಮೂಲಕ ಅದನ್ನು ತೆಗೆಯಲು ಪ್ರಯತ್ನಿಸಿದರು. ಆದರೆ ಗುಡ್ಡೆಯ ಗಾತ್ರ ಮತ್ತು ವ್ಯಾಪ್ತಿ ಹೆಚ್ಚಾಗಿದ್ದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು.

    ಮೆಡಿಕವರ್ ವೈದ್ಯರ ನಾಲ್ಕು ಜನರ ತಂಡ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದರು. ಸುಮಾರು 25 ಸೆಂ.ಮೀ ಉದ್ದ ಮತ್ತು 480 ಗ್ರಾಂ ತೂಕದ ದೊಡ್ಡ ಕೂದಲಿನ ಗುಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದು ಮಗುವಿನ ಜೀವ ಉಳಿಸಲಾಯಿತು.

    ಪ್ರಸ್ತುತ ಮಗು ವೈದ್ಯರ ನಿಗಾದಲ್ಲಿದ್ದು ಆರೋಗ್ಯವಾಗಿ ಚೇತರಿಸಿಕೊಳ್ಳುತ್ತಿದೆ.

    ಡಾ. ಲೀನಾಥ ರೆಡ್ಡಿ ಮಾತನಾಡಿ,“ಚಿಕ್ಕ ಮಕ್ಕಳಲ್ಲಿ ಪಿಕಾ (Pica) ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಹಲವಾರು ಬಾರಿ ಕಡೆಗಣಿಸಲಾಗುತ್ತದೆ. ಪೋಷಕರು ಅದರ ಗಂಭೀರತೆಯನ್ನು ಅರಿಯುವಷ್ಟರಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಇದು ರಪುಂಜಲ್ ಸಿಂಡ್ರೋಮ್‌ನಂತಹ ಅಪಾಯಕಾರಿಯಾದ ಸ್ಥಿತಿಗೆ ತಲುಪಬಹುದು. ಮಕ್ಕಳಲ್ಲಿ ಆಹಾರವಲ್ಲದ ವಸ್ತುಗಳನ್ನು ತಿನ್ನುವ ಅಭ್ಯಾಸ ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ,” ಎಂದು ಹೇಳಿದರು.

    ವೈದ್ಯರ ಪ್ರಕಾರ ಪಿಕಾ ಸಮಸ್ಯೆ ಸಾಮಾನ್ಯವಾಗಿ ಐರನ್ ಕೊರತೆಯ ಅನಿಮಿಯಾ ಸೇರಿದಂತೆ ಪೋಷಕಾಂಶಗಳ ಕೊರತೆಯೊಂದಿಗೆ ಸಂಬಂಧ ಹೊಂದಿರಬಹುದು. ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
    ಈ ಘಟನೆ ಮಕ್ಕಳ ಆಹಾರ ಅಭ್ಯಾಸಗಳ ಬಗ್ಗೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ.

    ಮಗುವಿನ ಕುಟುಂಬಕ್ಕೆ ಪೌಷ್ಟಿಕ ಆಹಾರ ಸಹಾಯ, ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ನಿಯಮಿತ ವೈದ್ಯಕೀಯ ಫಾಲೋ-ಅಪ್ ಸಲಹೆ ನೀಡಲಾಗಿದೆ.