Blog

  • ವೈಟ್ ಫೀಲ್ಡ್ ನ ಶ್ರೀ ರಾಧಾಕೃಷ್ಣ ದೇವಾಲದಲ್ಲಿ ವಿಶೇಷಪೂಜೆ

    ವೈಟ್ ಫೀಲ್ಡ್ ನ ಶ್ರೀ ರಾಧಾಕೃಷ್ಣ ದೇವಾಲದಲ್ಲಿ ವಿಶೇಷಪೂಜೆ

    ಮಹದೇವಪುರ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವೈಟ್ ಫೀಲ್ಡ್ ನ ಬೋರ್ ವೆಲ್ ರಸ್ತೆ ಬಳಿಯ ಶ್ರೀ ರಾಧಾಕೃಷ್ಣ ದೇವಾಲದಲ್ಲಿ ರಾಧಾಕೃಷ್ಣ ಸೇವಾ ಮಂದಿರ ವತಿಯಿಂದ ದೇವರಿಗೆ ವಿಶೇಷಪೂಜೆ ಮಾಡಲಾಯಿತು.

    ರುಕ್ಕಿಣಿ ಸಮೇತ ರಾಧಾ ಕೃಷ್ಣನಿಗೆ ವಿವಿಧ ಬಗೆಯ ಹೂವು ಗಳಿಂದ ಅಲಂಕರಿಸಲಾಗಿತ್ತು. ವೈಟ್ ಫೀಲ್ಡ್, ರಾಮಗೊಂಡನಹಳ್ಳಿ, ಇಮ್ಮಡಿಹಳ್ಳಿ, ನಲ್ಲೂರಹಳ್ಳಿ, ವರ್ತೂರು, ಹಗದೂರು, ಕಾಡುಗುಡಿ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದು ಪುನಿತರಾದರು. ಬಂದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

    ರಾಧಾಕೃಷ್ಣ ಸೇವಾ ಮಂದಿರ ಅಧ್ಯಕ್ಷ ರಾಮಗೊಂಡನಹಳ್ಳಿ ಎಂ.ವೇಣುಗೋಪಾಲ್ ಮಾತನಾಡಿ, ಕಳೆದ 17 ನೇ ವರ್ಷದಿಂದ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಆಜರಿಸಲಾಗುತ್ತಿದ್ದು, ಪ್ರತಿವರ್ಷದಂತೆ ಈ ವರ್ಷವು ದೇವರ ದರ್ಶನಕ್ಕಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು, ರಾತ್ರಿ ಹರಿಕಥೆ ಭಜನೆಗೆ ಏರ್ಪಡಿಸಿಲಾಗಿತ್ತು ಎಂದರು. ಹಳೆಯ ದೇವಸ್ಥಾನ ಚಿಕ್ಕದಾಗಿರುವುದರಿಂದ ನೂತನವಾಗಿ ದೇವಾಲಯ ಜೀರ್ಣೋದ್ಧಾರ ಮಾಡಲಾಗುತ್ತಿದ್ದು ಅಯೋಧ್ಯೆ ರಾಮಂದಿರದ ರಾಮಲಲ್ಲಾ ವಿಗ್ರಹದ ಸೃಷ್ಟಿಕರ್ತ ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ರವರು ಶ್ರೀ ರಾಧಕೃಷ್ಣ ದೇವರ ನೂತನ ವಿಗ್ರಹವನ್ನು ಕೆತ್ತುತ್ತಿದ್ದು ಸಂಪೂರ್ಣವಾಗಿ ಮುಕ್ತಾಯದ ಹಂತದಲ್ಲಿದ್ದು ಮುಂದಿನ ವರ್ಷ ಜನವರಿ ತಿಂಗಳಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ನೂತನ ದೇವಸ್ಥಾನದ ಶಂಕುಸ್ಥಾಪನೆ ನೆರವೇರಲಿದೆ ಎಂದರು.

    ಈ ಸಂದರ್ಭದಲ್ಲಿ ರಾಧಾಕೃಷ್ಣ ಸೇವಾ ಮಂದಿರ ಅಧ್ಯಕ್ಷ ರಾಮಗೊಂಡನಹಳ್ಳಿ ಎಂ.ವೇಣುಗೋಪಾಲ್,ಶಶಿಕಲಾ ವೇಣುಗೋಪಾಲ್, ಎಸ್.ಪಿ. ಶಂಕರ್, ವಕೀಲರಾದ ವಿಜಿಕುಮಾರ್,ಡಿಪಿಐ ರಾಜಣ್ಣ ವಿ. ತೇಜಸ್ ವೇಣುಗೋಪಾಲ್ ದೇವಸ್ಥಾನದ ಪ್ರದಾನ ಅರ್ಚಕರು ಸೇರಿದಂತೆ ಟ್ರಸ್ಟ್ ಸದಸ್ಯರು ಹಾಗೂ ಭಕ್ತಾದಿಗಳು ಇದ್ದರು.

  • ಶ್ರೀ ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಸಂಭ್ರಮದ ಕೃಷ್ಣಜನ್ಮಾಷ್ಟಮಿ.

    ಶ್ರೀ ವೇಣುಗೋಪಾಲ ಸ್ವಾಮಿ ಸನ್ನಿಧಿಯಲ್ಲಿ ಸಂಭ್ರಮದ ಕೃಷ್ಣಜನ್ಮಾಷ್ಟಮಿ.

    ಕೆ.ಆರ್ ಪುರ: ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದ್ದು, ಕೆ.ಆರ್.ಪುರ ಕ್ಷೇತ್ರದ ದೇವಸಂದ್ರ ಗ್ರಾಮದ ಪುರಾತನ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಲಾಗಿತ್ತು.

    ದೇವಸಂದ್ರ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಇಂದು ಭಕ್ತಿ ಭಾವ ಹಾಗೂ ಸಡಗರದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು.

    ದಿವಾಂಗತ ಎ.ಕೃಷ್ಣಪ್ಪ ಅವರ ಕುಟುಂಬ ಮತ್ತು ಸಮುದಾಯದ ಮುಖಂಡರು ಸೇರಿ ದೇವಾಲಯದಲ್ಲಿ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣನಿಗೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮುಂಜಾನೆಯಿಂದಲೇ ವಿಶೇಷ ಪೂಜೆ ಹಾಗೂ ಅಭಿಷೇಕ ನೆರವೇರಿಸಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಾವಿರಾರು ಜನರು ಸರತಿ ಸಾಲಿನಲ್ಲಿ ಆಗಮಿಸಿ ದೇವರ ದರ್ಶನ ಪಡೆದು ತಮ್ಮ ಇಷ್ಟಾರ್ಥಗಳಿಗಾಗಿ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

    ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್‌ ಕುಟುಂಬ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಡಿ.ಕೆ.ಮೋಹನ್ ಡಿಕೆ ಮೋಹನ್ ಬಾಬು,ಮುಖಂಡರಾದ ಡಿಕೆ ದೇವೇಂದ್ರ,ಡಿಕೆ ರಮೇಶ್,ಯುವಮುಖಂಡರಾದ ಚಲಪತಿ,ಚನ್ನಕೇಶವ ಅವರು ಕುಟುಂಬದ ಸಮೇತರಾಗಿ ಆಗಮಿಸಿ ದೇವರಿಗೆ ವಿಶೇಷ ಸೇವೆ ಸಲ್ಲಿಸಿದರು.

    ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೆ.ಆರ್.ಪುರಕ್ಕೆ ರಾಜಕೀಯ ನಾಯಕರ ದಂಡೆ ಆಗಮಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ,ವಿಧಾನ ಪರಿಷತ್ತಿನ ಸಭಾಪತಿ ಸಲೀಂ ಅಹ್ಮದ್‌, ಉಪ ಸಭಾಪತಿ ಉಮಾಶ್ರೀ,ಮಾಜಿ ಸಚಿವ ಆಂಜನೇಯ,ಎಚ್ ನಾಗೇಶ್,ಮತ್ತಿತರು ಪೂರ್ಣಿಮಾ ಶ್ರೀನಿವಾಸ್ ಹಾಗೂ ಡಿಕೆ ಮೋಹನ್ ಬಾಬು ಅವರ ಮನೆಗೆ ಭೇಟಿ ನೀಡಿದರು.

    ಬಳಿಕ ಮಾತನಾಡಿದ ಪೂರ್ಣಿಮಾ ಶ್ರೀನಿವಾಸ್, ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ಅದ್ದೂರಿಯಾಗಿ ಆಚರಿಸಿ ಭಕ್ತಾದಿಗಳಿಗೆ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸುತ್ತಾ ಬಂದಿದ್ದೇವೆ, ಕಾರ್ಯಕ್ರಮದಲ್ಲಿ ಕುಟುಂಬದ ಆಪ್ತರು ರಾಜಕೀಯ ಗಣ್ಯರು, ಹಿತೈಷಿಗಳು ಬಂದು ಭಾಗವಹಿಸಿದ್ದು ಸಂತಸ ತಂದಿದೆ ಎಂದರು.

    ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಬಂದರೆ ನಮ್ಮ ದೇವಸಂದ್ರ ಗ್ರಾಮದಲ್ಲಿ ಹಬ್ಬದ ವಾತಾವರಣ ಇರುತ್ತದೆ. ರಾತ್ರಿ ಗ್ರಾಮದ ಎಲ್ಲಾ ದೇವತೆಗಳ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಈ ಪಲ್ಲಕ್ಕಿಯಲ್ಲಿ ನೂರಕ್ಕೂ ಹೆಚ್ಚು ಗ್ರಾಮದೇವತೆಗಳ ಮೆರವಣಿಗೆ ಮಾಡಲಾಗುತ್ತದೆ ಎಂದರು.ನಮ್ಮ ಗ್ರಾಮವೇ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಸ್ಥರು ಕೂಡ ಈ ದೈವಕಾರ್ಯದಲ್ಲಿ ಭಾಗಿಯಾಗಿರುವುದು ಸಂತೋಷ ತಂದಿದೆ ಎಂದರು.

    ದೇವಾಲಯದಲ್ಲಿ ನಡೆದಿರುವ ಎಲ್ಲಾ ಕಾರ್ಯಕ್ರಮಗಳಲ್ಲಿ ಅಂದರೆ ಮಹಾ ಮಂಗಳಾರತಿ, ಪಂಚಾಮೃತ ಅಭಿಷೇಕ, ಮೆರವಣಿಗೆ, ಪ್ರಸಾಧ ವಿನಿಯೋಗದಲ್ಲಿ ಕೈಜೋಡಿಸಿ ಸಹಕಾರ ನೀಡಿದ್ದಾರೆ. ಭಗವಾನ್ ಶ್ರೀಕೃಷ್ಣ ಪರಮಾತ್ಮನ ಬಾಲಲೀಲೆಗಳನ್ನು ಗ್ರಾಮಸ್ಥರು ಕೂಡಿ ಆಡುವ ಮೂಲಕ ದೇವರಿಗೆ ಪ್ರಿಯರಾಗುವ ಕ್ರಮ ನಿಜಕ್ಕೂ ಮನಸ್ಸಂತೋಷಗೊಳಿಸಲಿದೆ. ಭಗವಂತನ ಶ್ರೀರಕ್ಷೆ ಎಲ್ಲಾ ಜೀವಸಂಕುಲದ ಮೇಲಿರಲಿ, ಮಳೆ ಬೆಳೆ ಚೆನ್ನಾಗಿ ಬಂದು ಸುಖ ಸಮೃದ್ಧಿ ನೆಲೆಸಲಿ ಎಂದು ಆಶಿಸಿದರು.

    ಚಿಕ್ಕ ದೇವಸಂದ್ರ, ಕೆ.ಆರ್.ಪುರ,ಅಯ್ಯಪ್ಪನಗರ, ಬಸವನಪುರ
    ಗಾಯತ್ರಿ ಬಡಾವಣೆ, ರಾಮಮೂರ್ತಿನಗರ, , ಹೂಡಿ, ಭಟ್ಟರಹಳ್ಳಿ, ಮೇಡಹಳ್ಳಿ ಸೇರಿದಂತೆ ಸುತ್ತಮುತ್ತಲಿನ ನಾನಾ ಕಡೆಯಿಂದ ಆಗಮಿಸಿದ ಭಕ್ತರು ಶ್ರೀಕೃಷ್ಣನ ದರ್ಶನ ಪಡೆದು, ಪೂಜೆ, ಅರ್ಚನೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

    ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್, ಮುಖಂಡರಾದ ಚಲಪತಿ, ಡಿಕೆ.ರಮೇಶ್,ಚನ್ನಕೇಶವ, ಮತ್ತಿತರರು ಹಾಜರಿದ್ದರು.

  • ಪತ್ನಿ ಮೇಲಿನ ಕೋಪಕ್ಕೆ 4 ವರ್ಷದ ಮಗುವನ್ನು ನದಿಗೆ ಎಸೆದು ಕೊಲೆಗೈದ ತಂದೆ.

    ಪತ್ನಿ ಮೇಲಿನ ಕೋಪಕ್ಕೆ 4 ವರ್ಷದ ಮಗುವನ್ನು ನದಿಗೆ ಎಸೆದು ಕೊಲೆಗೈದ ತಂದೆ.

    ಕಲಬುರಗಿ: ಪತಿ ಮೇಲಿನ ಕೋಪಕ್ಕೆ ವ್ಯಕ್ತಿಯೊಬ್ಬ 4 ವರ್ಷದ ಮಗುವನ್ನು ನದಿಗೆ ಎಸೆದು ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ.

    ಸೋಮರಾವ್ ಹೂಗಾರ್ ಎಂಬಾತ ಮಗುವನ್ನು ಹತ್ಯೆಗೈದ ಆರೋಪಿ. ಪತ್ನಿ ಕಲ್ಪನಾ ಜೊತೆ ಗಲಾಟೆ ಮಾಡಿಕೊಂಡಿದ್ದ
    ಇದೇ ಕೋಪದಲ್ಲಿ ಮಗು ಗುಂಡೇಶ್‌ನನ್ನು ಎತ್ತಿಕೊಂಡು ಆಟವಾಡಿಸುತ್ತಾ ಕರೆದುಕೊಂಡು ಹೋಗಿ ನಾಗರಾಳ ಜಲಾಶಯಕ್ಕೆ ಎಸೆದಿದ್ದಾನೆ.

    ಈ ವಿಷಯ ತಿಳಿದ ಬಳಿಕ ಗಂಡನ ವಿರುದ್ಧ ಪತ್ನಿ ಕಲ್ಪನಾ ದೂರು ದಾಖಲಿಸಿದ್ದಾಳೆ. ಬಳಿಕ ಪೊಲೀಸರು ಮಗುವಿನ ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಈ ಕುರಿತು ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ

  • ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಣೆ.

    ಕಣ್ಣೀರಿಡುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ಘೋಷಣೆ.

    ಬೆಂಗಳೂರು :ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಡುತ್ತಲೇ ಬಿ.ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಗರ ವಿರುದ್ಧ ಹಿಗ್ಗಾಮುಗ್ಗ ವಾಗ್ಧಾಳಿಯನ್ನು ನಡೆಸಿದರು.

    ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸದನ ನಡೆಯಲಿಕ್ಕೂ ಬಿಡಲಾರದೇ, ರಾಜ್ಯದ ಜ್ವಲ್ವಂತ ಸಮಸ್ಯೆ ಬಗ್ಗೆ ಚರ್ಚೆ ಮಾಡೋದಕ್ಕೂ ಬಿಡದೇ, ಸಂವಿಧಾನ ವಿರೋಧಿಗಳಾದಂತ ವಿರೋಧ ಪಕ್ಷದ ನಾಯಕರಿಗೆ ಕೆಲವು ಮಾತು ಹೇಳಬೇಕೆನಿಸಿದೆ.

    ಕಳೆದ ಉತ್ತರಾಖಾಂಡದಲ್ಲಿ ಶಂಭುಕ ಹತ್ಯೆ ಆದನೋ ಆದರೇ, ಈಗ ಅದು ಸಾಧ್ಯವಿಲ್ಲ. ಅದನ್ನು ರಕ್ಷಣೆ ಮಾಡಲು ನ್ಯಾಯದೇವತೆ ಇದೆ. ಮನುಸ್ಮೃತಿಗಳೆಲ್ಲ ಸೇರಿ ಸದನವನ್ನು ಹಾಳು ಮಾಡಿದ್ರಲ್ಲ. ಶೂದ್ರರು, ದಲಿತರು, ಮಹಿಳೆಯರು, ಆದಿವಾಸಿಗಳು, ಅಲ್ವ ಸಂಖ್ಯಾತರು ಸ್ವತಂತ್ರವಾಗಿ ಬದುಕಲೇ ಬಾರದು ಎಂಬುದು ಬಿಜೆಪಿಯ ವಿರೋಧಪಕ್ಷದವರು ಎಂಬುದಾಗಿ ಕಿಡಿಕಾರಿದರು.
    ವಿರೋಧ ಪಕ್ಷಗಳಿಂದ ಕುತಂತ್ರ ರಾಜಕಾರಣ ಮಾಡುತ್ತಿದೆ. ನೋಟಿಸ್ ಕೊಡಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೇ ಅದನ್ನು ಕೇಳಲಿಲ್ಲ. ರಾಜ್ಯದಲ್ಲಿ ಬರಗಾಲ, ಕೆಪಿಎಸ್ಸಿ ಹಗರಣ, ಕಾವೇರಿ ವಿವಾದ, ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆಗೆ ಸದನದಲ್ಲಿ ಅವಕಾಶವೇ ನೀಡಲಿಲ್ಲ. ವಿನಾಕಾರಣ ವಿರೋಧ ಪಕ್ಷಗಳು ಕುತಂತ್ರ ರಾಜಕಾರಣ ಮಾಡಲಾಗುತ್ತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದರು.
    ವಿಷಯವೇ ಇಲ್ಲದೇ ಪಾದಯಾತ್ರೆಯನ್ನು ಬಿಜೆಪಿಯವರು ಮಾಡಲು ಹೊರಟಿದ್ದಾರೆ. ನಿಮ್ಮನ್ನು ಈ ರಾಜ್ಯದ ಜನರು ನೋಡುತ್ತಿದ್ದಾರೆ. ಇದು ಒಳ್ಳೇಯದಾಗಲ್ಲ. ಒಂದು ಸುಳ್ಳನೇ ವಾಲ್ಮೀಕಿ ನಿಗಮದ ಹಗರಣ ಆಗಿದೆ ಎಂಬುದಾಗಿ ದೊಡ್ಡದು ಮಾಡ್ತಿದ್ದಾರೆ. ಒಬ್ಬ ದಲಿತ, ಆದಿವಾಸಿ ಸಮುದಾಯದವರು ಮೇಲೆ ಬರಬಾರದು ಎಂಬುದಾಗಿ ಹೀಗೆ ಮಾಡುತ್ತಿದ್ದಾರೆ. ನಿಜವಾಗಿಯೂ ನಿಮಗೆ ಒಳ್ಳೇದಾಗಲ್ಲ ಎಂಬುದಾಗಿ ಕಿಡಿಕಾರಿದರು.
    2024ರಲ್ಲಿ ರಾಜೀನಾಮೆ ನೀಡಿದಾಗಲೂ ಪಕ್ಷಕ್ಕೆ ಮುಜುಗರವಾಗಬಾರದು ಎಂಬುದಾಗಿ ರಾಜೀನಾಮೆ ನೀಡಲಾಯಿತು. ಎಸ್‌ಐಟಿ, ಸಿಐಡಿ ಅವರಿಂದ ತನಿಖೆ ನಡೆಸಲಾಯಿತು. ನಮ್ಮ ರಾಜ್ಯದ ಪೊಲೀಸರ ಮೇಲೆ ಗೌರವದಿಂದ ತನಿಖೆ ನಡೆಸಲಾಯಿತು. ನಿಮ್ಮ ಕುತಂತ್ರದ ಕೇಂದ್ರ ಸರ್ಕಾರದ ಕೈಗೊಂಬೆಯಾಗಿರುವಂತ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಗುಡುಗಿದರು.
    ರಾಜ್ಯದ ಜನರನ್ನು ಧಿಕ್ಕು ತಪ್ಪಿಸುವಂತ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಅದಕ್ಕೆ ನಾವು ಬಗ್ಗಲ್ಲ. ನಾವು ಸಂವಿಧಾನಕ್ಕೆ ಗೌರವ ನೀಡುತ್ತೇವೆ. ಸದನದಲ್ಲಿ ಚರ್ಚೆ ಮಾಡದೇ ರಾಜ್ಯಪಾಲರಿಂದ ನಿರ್ದೇಶನ ಕೊಡಿಸುತ್ತೀರಿ. ಅದಕ್ಕೆ ನಾವು ಗೌರವ ಕೊಡುತ್ತೇವೆ. ಕುಮಾರಸ್ವಾಮಿಯವರದ್ದು ಯಾಕೆ ಕಳುಹಿಸಲಿಲ್ಲ. ಜೋಡೆತ್ತುಗಳಾಗಿ ಕೆಲಸ ಮಾಡುತ್ತಿದ್ದೀರಲ್ಲ ಅದಕ್ಕೆ ಕಳುಹಿಸಿಲ್ವ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.

    ವಾಲ್ಮೀಕಿ ನಿಗಮದಲ್ಲಿ ಹಗರಣ ಆಗಿಲ್ಲ. ಅದನ್ನು ಜಗಜ್ಜಾಹಿರ ಮಾಡಿದ್ದೇನೆ. ನಾನು ಹಗರಣದಲ್ಲಿ ಭಾಗಿಯಾಗಿದ್ದೇನೆ ಎಂಬುದಕ್ಕೆ ಸಾಕ್ಷಿ ಏನಿದೆ.? ನನಗೆ ಒಂದು ರೂಪಾಯಿ ಬಂದಿದ್ಯಾ? ಎಂದು ಆಕ್ರೋಶ ಹೊರ ಹಾಕಿದಂತ ಅವರು. ಬಿಜೆಪಿಗರು ಮನಸ್ಮೃತಿವಾದಿಗಳು. ಈಗಾಗಲೇ 100ಕ್ಕೆ 100ರಷ್ಟು ವಾಲ್ಮೀಕಿ ನಿಗಮದ ಹಣ ವಾಪಾಸ್ ಆಗಿದೆ ಎಂದರು.
    ನಾನು ದಲಿತ, ಆದಿವಾಸಿ ಎನ್ನುವ ಕಾರಣಕ್ಕೆ ನನ್ನ ಮೇಲೆ ಬಿಜೆಪಿಗರು ಟಾರ್ಗೆಟ್ ಮಾಡುತ್ತಿದ್ದಾರೆ. ಇದು ಒಳ್ಳೇದಾಗಲ್ಲ. ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಸಚಿವ ಬಿ.ನಾಗೇಂದ್ರ ಅವರು ಮನುವಾದಿಗಳು ಒಂದು ಸುಳ್ಳನ್ನೇ ಹೇಳಿ ಹೇಳಿ ನಿಜ ಮಾಡಲು ಹೊರಟಿದ್ದಾರೆ. ಆದರೇ ನನ್ನಿಂದ ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ಕೇವಲ ಒಂದೇ ಒಂದು ಕಾರಣಕ್ಕೆ, ಮುಖ್ಯಮಂತ್ರಿಗಳ ಅಭಿವೃದ್ಧಿ ಕುಂಠಿತವಾಗಬಾರದು ಎನ್ನುವ ಕಾರಣದಿಂದ, ನಮ್ಮ ವರಿಷ್ಠರಿಗೆ ಮುಜುಗಾರವಾಗಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.

  • ಮಹಿಳಾ ಆಟೋ ಚಾಲನಾ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ.

    ಮಹಿಳಾ ಆಟೋ ಚಾಲನಾ ತರಬೇತಿ ಕೇಂದ್ರಕ್ಕೆ ಚಾಲನೆ ನೀಡಿದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ.

    ಮಹದೇವಪುರ: ಕ್ಷೇತ್ರದ ಯಮಲೂರು ಸಿಜಿಐ ಕಚೇರಿಯಲ್ಲಿ ಬಿ.ಪ್ಯಾಕ್‌ ಹಾಗೂ ಸಿಜಿಐ ವತಿಯಿಂದ ಸ್ವಾವಲಂಬನೆಯ ಜೀವನ ನಡೆಸುವ ಮಹಿಳೆಯರಿಗೆ ಹಾಗೂ ಮಂಗಳಮುಖಿಯರಿಗೆ ಆಟೋ ಚಾಲನೆ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಚಾಲನೆ ನೀಡಿದರು.

    ಆಟೋ ಚಾಲನಾ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕಿ ಮಂಜುಳ ಲಿಂಬಾವಳಿ ಅವರು,
    ನಿರಂತರವಾಗಿ ವೇಗವಾಗಿ ಬೆಳೆಯುತ್ತಿರುವ ಸಮಾಜದಲ್ಲಿ ಮಹಿಳೆಯರು ಹಾಗೂ ಮಂಗಳಮುಖಿಯರು ಕೂಡ ಸಮಾಜದ ಸಮಾನ ಸ್ಥಾನ ಭಾಗವಾಗುವ ನಿಟ್ಟಿನಲ್ಲಿ ಸ್ವಾವಲಂಬನೆಯ ಜೀವನ ನಡೆಸಲು ನೇರವಾಗಲು ಆಟೋ ಚಾಲನೆ ಸೇರಿದಂತೆ ಅನೇಕ ಆಯ್ಕೆಗಳಿದ್ದು, ಇಂದು ಆಟೋ ಚಾಲನೆ ತರಬೇತಿಗೆ ಚಾಲನೆ ನೀಡಲಾಯಿತು. ತರಬೇತಿ ಪಡೆದು ಸ್ವ ಉದ್ಯೋಗ ಮಾಡಿ ಜೀವನ ರೂಪಿಸಿಕೊಳ್ಳಿ ಎಂದು ಎಲ್ಲರಿಗೂ ಶುಭವಾಗಲಿ ಎಂದು ಆಶಿಸಿದರು.

    ಆಟೋ ಚಾಲನೆ ಮಾಡುವ ಮಹಿಳೆಯರಿಗೆ ಸೂಕ್ತ ಶೌಚಾಲಯದ ಕೊರತೆ ಇದೆ. ಕೆಲವೊಮ್ಮೆ ಸ್ವಚ್ಛ ಶೌಚಾಲಯವಿಲ್ಲದೇ ಕಷ್ಟಪಡುತ್ತಾರೆ. ಇವರಿಗಾಗಿಯೇ, ಅಲ್ಲಲ್ಲಿ ಸೂಕ್ತ ಶೌಚಾಲಯ ಸೇರಿದಂತೆ ಮೂಲಸೌಕರ್ಯ ನಿರ್ಮಿಸಿದರೆ, ಈ ಕ್ಷೇತ್ರದಲ್ಲಿ ವೃತ್ತಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಲಿದೆ ಎಂದರು.

    ಮಹದೇವಪುರದಲ್ಲಿ ಐಟಿ ಕ್ಷೇತ್ರಕ್ಕೆ ಹೆಚ್ಚು ಆಪ್ತ. ಐಟಿ ಕ್ಷೇತ್ರಕ್ಕೆ ತೆರಳುವ ಮಹಿಳೆಯರ ಸಂಖ್ಯೆಯೂ ಹೆಚ್ಚು. ರಾತ್ರಿಪಾಳಿಯಲ್ಲಿ ಸುರಕ್ಷಿತವಾಗಿ ತೆರಳಲು ಮಹಿಳಾ ಚಾಲಕಿಯರಿರುವ ಆಟೋ ಹೆಚ್ಚು ಸುರಕ್ಷಿತ, ಹಾಗೆಯೇ, ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಜೀವನ ನಡೆಸುವವರಿಗೂ ಈ ಆಟೋಚಾಲನೆ ಉತ್ತಮ ಆಯ್ಕೆ. ಅವರಿಗಾಗಿಯೇ, ಉಚಿತವಾಗಿ ಚಾಲನೆ ನೀಡುವ ಜೊತೆಗೆ, ಆಟೋ ಸಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
    ಬಿ.ಪ್ಯಾಕ್‌ ಸಿಇಒ ರೇವತಿ ಅಶೋಕ್‌ ಮಾತನಾಡಿ, ಈ ಉಪಕ್ರಮವು ಮಹಿಳೆಯರಿಗೆ ಆಟೋ ಚಾಲನೆ ತರಬೇತಿ ನೀಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಸುಸ್ಥಿರ ಜೀವನೋಪಾಯ ಮತ್ತು ಆರ್ಥಿಕ ಸ್ವಾವಲಂಬನೆಯತ್ತ ಕರೆದೊಯ್ಯುವ ಸಂಪೂರ್ಣ ಮಾರ್ಗವನ್ನು ನಿರ್ಮಿಸುವ ಪ್ರಯತ್ನವಾಗಿದೆ. ಚಾಲನಾ ಕೌಶಲ್ಯದ ಜೊತೆಗೆ ಮಹಿಳೆಯರಿಗೆ ಆರ್ಥಿಕ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ಮೂಲಭೂತ ಇಂಗ್ಲಿಷ್ ಸಂವಹನ, ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಕುರಿತು ತರಬೇತಿ ನೀಡಲಾಗುತ್ತದೆ. ಅಲ್ಲದೆ, ಪರಿಹಾರ ಸಹಾಯವಾಣಿ ಕೇಂದ್ರ ಮತ್ತು ಸಂಚಾರ ನಿರ್ವಹಣಾ ಕಮಾಂಡ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಪ್ರಾಯೋಗಿಕ ಅನುಭವವನ್ನೂ ಒದಗಿಸಲಾಗುತ್ತದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ BPAC ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ರೇವತಿ ಅಶೋಕ್, CGI ನಿರ್ದೇಶಕರು ಶ್ರೀ ಸುಧಾಕರ್ ಪೈ, ಉಪಾಧ್ಯಕ್ಷರು ಪ್ರಣವಿ, ಸಾಗರ್ ಪಟೇಲ್, ಪ್ರಧಾನ ಕಾರ್ಯದರ್ಶಿ ಶ್ರೀ ಲೋಕೇಶ್, ಯಮಲೂರು ವಾರ್ಡ್ ಅಧ್ಯಕ್ಷರು ಶ್ರೀ ಸುದರ್ಶನ್ ಹಾಗೂ ಮುಖಂಡರು ಕಾರ್ಯಕರ್ತರು ಮತ್ತು ತರಬೇತಿ ಪಡೆಯುವ ಆಕಾಂಕ್ಷಿಗಳು ಉಪಸ್ಥಿತರಿದ್ದರು.

  • ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್: ಮುಂಜಾನೆ 4 ಗಂಟೆ  ಬಿರಿಯಾನಿ ಸಿಗಲ್ಲ ಯಾಕೆ ಗೊತ್ತಾ?ಮತ್ತೆ ಎಷ್ಟು ಗಂಟೆಗೆ ಸಿಗುತ್ತೆ..?

    ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್: ಮುಂಜಾನೆ 4 ಗಂಟೆ ಬಿರಿಯಾನಿ ಸಿಗಲ್ಲ ಯಾಕೆ ಗೊತ್ತಾ?ಮತ್ತೆ ಎಷ್ಟು ಗಂಟೆಗೆ ಸಿಗುತ್ತೆ..?

    ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮುಂಜಾನೆ ಸಮಯದಲ್ಲಿ ತೆರೆಯುತ್ತಿದ್ದ ಬಿರಿಯಾನಿ ಸೆಂಟರ್‌ಗಳು ಹಾಗೂ ಕೆಲವು ಹೋಟೆಲ್‌ಗಳ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

    ಮುಂಜಾನೆ 4 ಗಂಟೆಯಿಂದಲೇ ಬಿರಿಯಾನಿ ಸೆಂಟರ್‌ಗಳನ್ನು ತೆರೆಯುತ್ತಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ, ಕೆಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.

    ಇದರ ಜೊತೆಗೆ ಅಪಘಾತ, ಗಲಾಟೆ ಹಾಗೂ ಕಳ್ಳತನದಂತಹ ಘಟನೆಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಮತ್ತು ಬಿರಿಯಾನಿ ಸೆಂಟರ್ ಮಾಲೀಕರ ಸಭೆ ನಡೆಸಿದ್ದು, ಬಿರಿಯಾನಿ ಸೆಂಟರ್‌ಗಳನ್ನು ಬೆಳಗ್ಗೆ 6 ಗಂಟೆಯ ನಂತರವಷ್ಟೇ ತೆರೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
    ಎಸ್‌ಟಿಆರ್ ರಸ್ತೆ ಹಾಗೂ ಜಾಲರಹಳ್ಳಿ ಭಾಗದಲ್ಲಿ ಮುಂಜಾನೆ ಬಿರಿಯಾನಿಗಾಗಿ ಬರುವವರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಮತ್ತು ಕೆಲವು ಅಪಘಾತಗಳು ಸಂಭವಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವದ ವ್ಯಾಪಾರಕ್ಕೆ ಸಮಯದ ನಿರ್ಬಂಧ ವಿಧಿಸಲಾಗಿದೆ.

    ಇನ್ನು ಟೋಲ್ ಗೇಟ್ ಸುತ್ತಮುತ್ತಲಿನ ಅಂಗಡಿಗಳನ್ನು ರಾತ್ರಿ 11 ಗಂಟೆಯ ನಂತರ ತೆರೆಯಬಾರದು, ಹೋಟೆಲ್ ಮತ್ತು ಬಿರಿಯಾನಿ ಸೆಂಟರ್‌ಗಳ ಆವರಣದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಬಾರದು, ಮುಂಜಾನೆ ಬರುವ ಗ್ರಾಹಕರಿಂದ ಗಲಾಟೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಪೊಲೀಸರು ನೀಡಿರುವ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ಹೋಟೆಲ್‌ಗಳು ಮತ್ತು ಬಿರಿಯಾನಿ ಸೆಂಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಹೊಸಕೋಟೆ ಬಳಿ ಲಾರಿ-ಬೈಕ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾ*ವು

    ಹೊಸಕೋಟೆ ಬಳಿ ಲಾರಿ-ಬೈಕ್ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾ*ವು

    ಹೊಸಕೋಟೆ: ನಗರದ ಸಮೀಪದ ಕೊಳತೂರು ಗೇಟ್ ಬಳಿ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್‌ ಸವಾರ ಮೃ*ತಪಟ್ಟಿದ್ದಾರೆ.

    ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತೊರ್ನಹಳ್ಳಿ ನಿವಾಸಿ ಸುಬ್ರಮಣಿ (42) ಮೃ*ತರು. ಸೋಮವಾರ ಬೆಳಗ್ಗೆ 7 ಗಂಟೆಗೆ ಕೋಲಾರದಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕೊಳತೂರು ಗೇಟ್ ಬಳಿ ಅಪಘಾತ ಸಂಭವಿಸಿದೆ.

    ಶ*ವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಸಂಬಂಧ ಹೊಸಕೋಟೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬಿದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ.

    ಬಿದರಹಳ್ಳಿ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ.

    ಮಹದೇವಪುರ:- ವಿದ್ಯಾರ್ಥಿಗಳು ಶಿಸ್ತು, ಶ್ರಮ, ಸಮಯಪ್ರಜ್ಞೆ, ಆತ್ಮವಿಶ್ವಾಸ ಹಾಗೂ ನಿರ್ಭಯತೆ ಬೆಳೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಭವ್ಯ ಭಾರತವನ್ನು ಕಟ್ಟಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣೇಶ್ ಅವರು ತಿಳಿಸಿದರು .

    ಮಹದೇವಪುರ ಕ್ಷೇತ್ರದ ಬಿದರಹಳ್ಳಿಯ ಸರ್ಕಾರಿ ಫ್ರೌಡ ಶಾಲೆ ಆಯೋಜಿಸಿದ್ದ 80 ನೇ ವರ್ಷದ ಸ್ವಾತಂತ್ರ ದಿನಾಚರಣೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು ಭಾರತ ದೇಶದ ಸಂಭ್ರಮಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ, ಅದೆಷ್ಟೋ ಸಾವು ನೋವುಗಳ ಪ್ರತೀಕವಾಗಿ ಸಿಕ್ಕ ಈ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ನಮಗಾಗಿ ಪ್ರಾಣ ಅರ್ಪಿಸಿದ ಮಹಾನ್ ವೀರರನ್ನು ನೆನೆಯುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದರು .

    ಮಕ್ಕಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ದೇಶಕ್ಕೆ ಹಾಗೂ ಸಮಾಜಕ್ಕೆ ಕೀರ್ತಿ ತರುವ ಕಾರ್ಯಮಾಡಬೇಕು ಎಂದು ಹೇಳಿದರು.

    ಭೂನ್ಯಾಯಮಂಡಳಿ ಮಾಜಿ ಸದಸ್ಯ ಹಾಗೂ ಶ್ರೀಚೈತನ್ಯ ಡೆವಲಪರ್ ಮಾಲಿಕ ಬಿ.ಎಸ್.ಮಧುಕುಮಾರ್ ಅವರು ಮಾತನಾಡಿ ಪ್ರತಿವರ್ಷದಂತೆ ನಾನು ಕಲಿತಿರುವ ಶಾಲೆಯ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೆನೆ.ಅದೇ ಈ ವರ್ಷ ಯಾರು ಅತೀ ಹೆಚ್ಚು ಅಂಕ ಪಡೆಯುತ್ತಾರೋ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವುದಾಗಿ ಹೇಳಿದ್ದೆ ಅವರಿಗೆ
    ಈ ವರ್ಷ ಲ್ಯಾಪ್‌ಟಾಪ್ ವಿತರಣೆ ಮಾಡಿ ಸನ್ಮಾನಿಸಲಾಯಿತು ಎಂದು ಹೇಳಿದರು.

    ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ರಾಷ್ಟ್ರಾಭಿಮಾನ ಹಾಗೂ ಸಾಮಾಜಿಕ ಜವಾಬ್ದಾರಿಯ ಮನೋಭಾವ ಬೆಳೆಸುವಲ್ಲಿ ಶಾಲಾ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಭವಿಷ್ಯದಲ್ಲಿ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

    ಗ್ರಾಮದ ಮುಖಂಡರು ಕಳೆದ ಬಾರಿ ಪರಿಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

    ಈ ಸಂದರ್ಭದಲ್ಲಿ ಬಿದರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಬಿ.ಜಿ.ರಾಜೇಶ್, ವರುಣ್ ,ರಾಜ್ಯಪರಿಷತ್ ಸದಸ್ಯ ನಟರಾಜ್,ಮುಖಂಡರಾದ ಚಂದ್ರಶೇಖರ, ಸುನೀಲ್ ಕುಮಾರ್, ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮಸ್ಥರಿದ್ದರು

  • ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ: ಡಿಕೆ ಮೋಹನ್ ಬಾಬು

    ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ: ಡಿಕೆ ಮೋಹನ್ ಬಾಬು

    ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ: ಡಿಕೆ ಮೋಹನ್ ಬಾಬು

    ಕೆ.ಆರ್.ಪುರ: ಕೆಂಚಪ್ಪ ಹಾಗೂ ಲಕ್ಷ್ಮಮ್ಮ ಚಾರಿಟೇಬಲ್ ಟ್ರಸ್ಟ್ ಹಾಗೂ ಕುಟುಂಬದ ವತಿಯಿಂದ ದೇವಸಂದ್ರದ ಬಿವಿಎನ್ ಎಸ್ ಎಸ್ ಶಾಲೆಯ ನೂರಕ್ಕು ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬಡಮಕ್ಕಳಿಗೆ ಶಿಕ್ಷಣ ಶುಲ್ಕ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್ ಹಾಗೂ ಮಾಜಿ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ವಿತರಣೆ ಮಾಡಿದರು.

    ದೇವಸಂದ್ರದ ಬಿವಿಎನ್ಎಚ್ಎಸ್ ಎಸ್ ಶಾಲೆಯಲ್ಲಿ ಏರ್ಪಡಿಸಿದ್ದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ದಲ್ಲಿ ಪ್ರತಿಭಾ ಪುರಸ್ಕಾರ ಮಾಡಿ ಮಾತನಾಡಿದ ಬೆಂಗಳೂರು ಪೂರ್ವ ಜಿಲ್ಲಾ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಟ್ರಸ್ಟ್‌ನ ವತಿಯಿಂದ ಬಡ ಮಕ್ಕಳ ಹಾಗೂ ಪ್ರತಿಭಾನ್ವಿತ ಮಕ್ಕಳ ಅಭಿವೃದ್ಧಿಗೆ ಕೆಂಚಪ್ಪಹಾಗೂ ಲಕ್ಷ್ಮಮ್ಮಚಾರಿಟೇಬಲ್ ಟ್ರಸ್ಟ್ ಹಾಗೂ ಕುಟುಂಬದವರು ಹಲವು ಯೋಜನೆಗಳನ್ನು ರೂಪಿಸಿದ್ದು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ತಿಳಿಸಿದರು

    ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕೇವಲ ಒಂದು ದಿನದ ಸಂಭ್ರಮವಲ್ಲ, ಇದು ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಬಲಿದಾನದ ಫಲ ಎಂದರು.

    ವಿದ್ಯಾರ್ಥಿಗಳು ಬಲಿಷ್ಠವಾದಗ ಮಾತ್ರ ದೇಶ ಬಲಿಷ್ಠವಾಗುತ್ತದೆ.
    ಟೆಕ್ನಾಲಜಿಯಲ್ಲಿ ಬಲಿಷ್ಠ ವಾಗಬೇಕು.ವೈಜ್ಞಾನಿಕವಾಗಿ ಬಲಿಷ್ಠವಾಗಬೇಕು. ನೀವು ದೇಶಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದರೆ ನೀವೆಲ್ಲಾರೂ ಬಲಿಷ್ಠರಾಗಬೇಕು ಆಗ ದೇಶ ಸದೃಢವಾಗುತ್ತೆ ಎಂದು ತಿಳಿಸಿದರು.

    ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಮಾತನಾಡಿ
    ಭಾರತಕ್ಕೆ ಸ್ವಾತಂತ್ರ್ಯವು ರಾಷ್ಟ್ರಭಕ್ತರ ತ್ಯಾಗ ಬಲಿದಾನಗಳಿಂದ ಲಭಿಸಿದೆ. ಇಂತಹ ಘನ ಸ್ವಾತಂತ್ರ್ಯದ ಹಿಂದಿರುವ ವ್ಯಕ್ತಿತ್ವಗಳನ್ನು ಸ್ಮರಿಸುವ ಕೈಂಕರ್ಯಗಳು ಚಿರಸ್ಥಾಯಿಯಾಗಿ ಸದಾ ನಡೆಯುತ್ತಿರಬೇಕು ಎಂದರು.

    ತಂತ್ರಜ್ಞಾನದ ವೇಗದ ಯುಗದಲ್ಲಿ ಮೌಲ್ಯಗಳನ್ನು ಮರೆಯದೇ ಕಾಯ್ದುಕೊಳ್ಳಬೇಕು. ಮಕ್ಕಳಿಗೆ ಸ್ವಾತಂತ್ರ್ಯದ ಹಿಂದಿರುವ ತ್ಯಾಗ ಬಲಿದಾನಗಳ ಪರಿಚಯ ಮಾಡಿಕೊಡುತ್ತಿರಬೇಕು. ವಿಶ್ವಭ್ರಾತೃತ್ವ, ಜಗತ್ತೆಲ್ಲವೂ ಒಂದೇ ಕುಟುಂಬವೆಂಬ ಭಾವನೆ, ಸಮಾನತೆ, ಏಕತೆ, ಸೌಹಾರ್ದತೆ, ಭಾವೈಕ್ಯತೆಗಳು ಹಾಗೂ ಜಗತ್ತಿನ ಸರ್ವರ ಹಿತಚಿಂತನೆ ಇವುಗಳು ಭಾರತದ ಜೀವಾಳ. ಇಂತಹ ಮಹೋನ್ನತ ಚಿಂತನೆಗಳಿಂದಲೇ ಭಾರತವು ಜಗತ್ತಿನಲ್ಲಿ ಗೌರವಯುತ ಸ್ಥಾನಗಳನ್ನು ಗಳಿಸಿದೆ ತಿಳಿಸಿದರು.

    ಈ ಸಂದರ್ಭದಲ್ಲಿ ಅಧ್ಯಕ್ಷೆ ಲಕ್ಷ್ಮಮ್ಮ, ಟ್ರಸ್ಟ್‌ನ ಡಿ.ಕೆ.ರಮೇಶ್,
    ಡಿ.ಕೆ. ರವಿಕುಮಾರ್, ಕಿಶನ್,ನೀಕ್ಷೇಪ್,ಹೃತಿಕ್,ಮೋಹಿತ್ ಇದ್ದರು.

  • ಡಾ. ವಿದ್ಯಾಭೂಷಣ್ ನೇತೃತ್ವದ ‘ಭಜ ಮನ’ ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ!

    ಡಾ. ವಿದ್ಯಾಭೂಷಣ್ ನೇತೃತ್ವದ ‘ಭಜ ಮನ’ ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ!

    • ಜಯನಗರದಲ್ಲಿ ಯಶಸ್ವಿಯಾಗಿ ಜರುಗಿದ ‘ಭಜ ಮನ’ ಗಾಯನ ಕಾರ್ಯಾಗಾರ
    • ವಿದ್ಯಾಭೂಷಣ್ – ಮೇಧಾ ಅವರಿಂದ ಹೊಸ ತಲೆಮಾರಿಗೆ ದಾಸ ಸಾಹಿತ್ಯದ ಮಾರ್ಗದರ್ಶನ
    • ಸಂಗೀತಾಸಕ್ತರಿಗೆ ಸುಜ್ಞಾನಿ ವಿದ್ವಾಂಸರೊಂದಿಗೆ ವೇದಿಕೆ ಹಂಚಿಕೊಳ್ಳುವ ಅಪರೂಪದ ಅವಕಾಶ
    • ಆಗಸ್ಟ್ 8ರಂದು ಎನ್‌ಎಂಕೆಆರ್‌ವಿ ಕಲಾಕ್ಷೇತ್ರದಲ್ಲಿ ಬೃಹತ್ ಸಂಗೀತ ಕಛೇರಿ

    ಬೆಂಗಳೂರು: ‘ಪರಮ್ ಕಲ್ಚರ್’ ಸಂಸ್ಥೆಯು ‘ಹರಿವಂಶ ಗ್ರೂಪ್’ ಮತ್ತು ಜಯನಗರದ ‘ಯುವಕ ಸಂಘ’ದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಭಜ ಮನ’ ಎಂಬ ಎರಡು ದಿನಗಳ ವಿಶೇಷ ಪೂರ್ವ-ಕಛೇರಿ ಗಾಯನ ಕಾರ್ಯಾಗಾರವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.
    ಜಯನಗರದ ಯುವಕ ಸಂಘದಲ್ಲಿ ಆಗಸ್ಟ್ 6 ಮತ್ತು 7 ರಂದು ಸಂಜೆ 6 ರಿಂದ 8 ಗಂಟೆಯವರೆಗೆ ನಡೆದ ಈ ಸಾಂಸ್ಕೃತಿಕ ತರಬೇತಿಯ ನೇತೃತ್ವವನ್ನು ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಿದ್ವಾಂಸ, ಹರಿದಾಸ ಸಾಹಿತ್ಯದ ಖ್ಯಾತನಾಮರಾದ ಡಾ. ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ್ ಅವರು ವಹಿಸಿ, ಭಾಗವಹಿಸಿದ ನೂರಾರು ಸಂಗೀತಾಸಕ್ತರಿಗೆ ಮಾರ್ಗದರ್ಶನ ನೀಡಿದರು. ಅಲ್ಲದೆ, ಆಗಸ್ಟ್ 8ರ ಶನಿವಾರ ಎನ್‌ಎಂಕೆಆರ್‌ವಿ ಕಲಾಕ್ಷೇತ್ರದ ಮಂಗಳ ಮಂಟಪದಲ್ಲಿ ಡಾ.ವಿದ್ಯಾಭೂಷಣ್‌ ಅವರೊಂದಿಗೆ ಶಿಬಿರಾರ್ಥಿಗಳು ವೇದಿಕೆ ಹಂಚಿಕೊಂಡು ಹಾಡಿದ್ದಾರೆ.


    ದಾಸರ ಪದ ಕಲಿತ ಸಂಗೀತ ಪ್ರೇಮಿಗಳು:
    ಈ ವಿಶೇಷ ಶಿರೋಮಣಿಯಲ್ಲಿ ಪಾಲ್ಗೊಂಡಿದ್ದ ಸಂಗೀತ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳಿಗೆ ನೇರವಾಗಿ ಡಾ. ವಿದ್ಯಾಭೂಷಣ್ ಅವರ ಗಾಯನ ಶೈಲಿಯಲ್ಲಿ ದಾಸರಪದಗಳು ಮತ್ತು ಭಜನೆಗಳನ್ನು ಕಲಿಯುವ ಸುವರ್ಣಾವಕಾಶ ದೊರೆಯಿತು. ಇದರೊಂದಿಗೆ ವಿದ್ವಾಂಸರ ನಾಲ್ಕು ದಶಕಗಳ ಸುದೀರ್ಘ ಸಂಗೀತ ಪಯಣ, ಭಕ್ತಿಪೂರ್ವಕ ಗಾಯನದ ತಂತ್ರಗಳು ಹಾಗೂ ಅವರ ಗಾಯನ ಪಟ್ಟುಗಳನ್ನು ಹತ್ತಿರದಿಂದ ತಿಳಿದುಕೊಳ್ಳಲು ವೇದಿಕೆ ಸಾಕ್ಷಿಯಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ಅಭ್ಯಾಸಿಗಳಿಗೆ ವಿಶೇಷ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಗಿತ್ತು.

    ವೇದಿಕೆ ಹಂಚಿಕೊಳ್ಳುವ ಅವಕಾಶ:
    ಎರಡು ದಿನಗಳ ಕಾಲ ನಡೆದ ಈ ತರಬೇತಿ ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಅಭ್ಯಾಸಿಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಪ್ರವರ್ಧಮಾನ ಗಾಯಕರು ಶನಿವಾರ ಎನ್‌ಎಂಕೆಆರ್‌ವಿ ಕಲಾಕ್ಷೇತ್ರದ ಮಂಗಳ ಮಂಟಪದಲ್ಲಿ ಸಂಜೆ ನಡೆದ ಬೃಹತ್ ಸಂಗೀತ ಕಛೇರಿಯಲ್ಲಿ ಸ್ವತಃ ಡಾ. ವಿದ್ಯಾಭೂಷಣ್ ಅವರೊಂದಿಗೇ ವೇದಿಕೆ ಹಂಚಿಕೊಂಡು ಹಾಡುವ ಅಪರೂಪದ ಅವಕಾಶವನ್ನು ಪಡೆದುಕೊಂಡಿದ್ದಾರೆ.

    ಕಳೆದ ನಾಲ್ಕು ದಶಕಗಳಿಂದ ಜಗತ್ತಿನಾದ್ಯಂತ ದಾಸರ ಪದಗಳನ್ನು ಪಸರಿಸಿ, ‘ಸಂಗೀತ ವಿದ್ಯಾ ನಿಧಿ’ ಹಾಗೂ ಗೌರವ ಡಾಕ್ಟರೇಟ್‌ಗಳಿಗೆ ಭಾಜನರಾಗಿರುವ ಡಾ. ವಿದ್ಯಾಭೂಷಣ್ ಅವರು, ‘ಭಜ ಮನ’ ಕಾರ್ಯಾಗಾರಗಳ ಮೂಲಕ ಹೊಸ ತಲೆಮಾರಿನ ಗಾಯಕರಿಗೆ ಭಕ್ತಿಪೂರ್ವಕ ಗಾಯನದ ಪರಂಪರೆಯನ್ನು ಯಶಸ್ವಿಯಾಗಿ ಧಾರೆ ಎರೆದಿದ್ದಾರೆ.