Blog

  • ಲೋಕಸಭೆಯಲ್ಲಿ ʻಮಹಿಳಾ ಮೀಸಲಾತಿ ಬಿಲ್ʼ ತಿರಸ್ಕಾರ: ಮೋದಿ ಸರ್ಕಾರಕ್ಕೆ ಮುಖಭಂಗ.

    ಲೋಕಸಭೆಯಲ್ಲಿ ʻಮಹಿಳಾ ಮೀಸಲಾತಿ ಬಿಲ್ʼ ತಿರಸ್ಕಾರ: ಮೋದಿ ಸರ್ಕಾರಕ್ಕೆ ಮುಖಭಂಗ.

    ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾಗಿದೆ. ಮಹಿಳಾ ಮೀಸಲಾತಿ ಕಾಯ್ದೆಗೆ 131ನೇ ತಿದ್ದುಪಡಿ ತರುವ ಮೂಲಕ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿತ್ತು. ಮತದಾನದ ಮೂಲಕ ಮಸೂದೆ ಅಂಗೀಕರಿಸಲು ನಿರ್ಧರಿಸಲಾಗಿತ್ತು. ಆದ್ರೆ 3ನೇ ಎರಡರಷ್ಟು ಬಹುಮತ ಸಿಗದ ಹಿನ್ನೆಲೆ ಮಸೂದೆಗೆ ಸೋಲಾಗಿದೆ.

    ವಿಪಕ್ಷಗಳ ಹಠದಿಂದಾಗಿ ಮೊದಲು ಮಂಡಿಸಿದ ಮಹಿಳಾ ಮೀಸಲಾತಿ ಬಿಲ್ ಸೋಲು ಕಂಡಿದೆ. ಆದ್ದರಿಂದ ಉಳಿದ 2 ಬಿಲ್‌ಗಳನ್ನೂ ಸರ್ಕಾರ ಹಿಂಪಡೆದಿದೆ. ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ 326 ಮತಗಳ ಅಗತ್ಯವಿತ್ತು (ಬಿಲ್‌ಗೆ 3ನೇ 2ರಷ್ಟು ಬಹುಮತ ಬೇಕಿತ್ತು. ಹಾಗಾಗಿ, ಹಾಜರಿದ್ದ 489 ಸದಸ್ಯರ ಪೈಕಿ 326 ಮತ ಬೇಕಿತ್ತು). ಆದ್ರೆ ಲೋಕಸಭೆಯ 543 ಸದಸ್ಯರ ಪೈಕಿ 489 ಸದಸ್ಯರು (54 ಸದಸ್ಯರು ಅನುಪಸ್ಥಿತಿ) ಮತದಾನದಲ್ಲಿ ಪಾಲ್ಗೊಂಡಿದ್ದರು. ಮಸೂದೆಯ ಪರವಾಗಿ 298 ಸದಸ್ಯರು ಮತ ಚಲಾಯಿಸಿದ್ರೆ, ವಿರುದ್ಧವಾಗಿ 230 ಸದಸ್ಯರು ಚಲಾಯಿಸಿದ್ರು. ಕೊನೆಗೆ 54 ಮತಗಳ ಕೊರತೆಯಿಂದ ಮಸೂದೆಗೆ ಸೋಲಾಯಿತು.

    ವಿಪಕ್ಷಗಳ ಹಠ, ಅಸಹಕಾರದಿಂದಲೇ ಬಿಲ್‌ಗಳಿಗೆ ಸೋಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕಿಡಿಕಾರಿದರು. ಮಸೂದೆ ಸೋಲುತ್ತಿದ್ದಂತೆಯೇ ಸಂಸತ್‌ನ ಹೊರಭಾಗದಲ್ಲಿ ಎನ್‌ಡಿಎ ಸಂಸದರು ಪ್ರತಿಭಟನೆ ನಡೆಸಿದರು. ವಿಪಕ್ಷಗಳ ವಿರುದ್ಧ ಧಿಕ್ಕಾರ ಕೂಗಿದರು. ವಿಪಕ್ಷಗಳು ಮಹಿಳಾ ವಿರೋಧಿಗಳು ಅಂತ ಆಕ್ರೋಶ ಹೊರ ಹಾಕಿದರು.

    ಈ ಮಧ್ಯೆ, ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿ ಮಾಡಿಯೇ ತೀರುತ್ತೇವೆ ಅಂತ ಎನ್‌ಡಿಎ ಸಂಸದರು ಶಪಥ ಮಾಡಿದ್ದಾರೆ. ಇಂದಲ್ಲ ನಾಳೆ ನಾವು ಈ ಮಸೂದೆಯನ್ನು ಜಾರಿಗೊಳಿಸ್ತೇವೆ ಅಂದಿದ್ದಾರೆ.

  • ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್​ ಪೂರೈಕೆ ವ್ಯತ್ಯಯ

    ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್​ ಪೂರೈಕೆ ವ್ಯತ್ಯಯ

    ದೊಡ್ಡಬಳ್ಳಾಪುರ: ನಗರ ಉಪವಿಭಾಗದ ವ್ಯಾಪ್ತಿಗೆ ಬರುವ ವಿವಿಧ ಉಪಕೇಂದ್ರಗಳಲ್ಲಿ ಹೊರಹೊಮ್ಮುತ್ತಿರುವ ಫೀಡರ್​ಗಳ ನಿರ್ವಹಣೆ ಕಾರ್ಯದ ಹಿನ್ನೆಲೆ ಏಪ್ರಿಲ್​ 19ರಂದು ಭಾನುವಾರ ನಗರದ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಡಿಕ್ರಾಸ್​ ವ್ಯಾಪ್ತಿಗೆ ದೊಡ್ಡಬಳ್ಳಾಪುರ ನಗರದ ಗಂಗಾಧರಪುರ, ತಾಲ್ಲೂಕು ಕಚೇರಿ ರಸ್ತೆ, ಡಿಕ್ರಾಸ್​ ಮತ್ತು  ತಾಲ್ಲೂಕಿನ ರಘುನಾಥ ಪುರ ಸ್ಕೌಟ್​ ಕ್ಯಾಂಪ್​ರಸ್ತೆ, ನಾಗದೇನಹಳ್ಳಿ, ಮೋಪುರಹಳ್ಳಿ, ಆದಿನಾರಾಯಣಹೊಸಹಳ್ಳಿ, ಹಮಾಮ್​ ಶಿವಪುರ, ಸೋಣ್ಣಪ್ಪನಹಳ್ಳಿ ಕೋಡಿಹಳ್ಳಿ, ಕೊನಘಟ್ಟ, ಲಿಂಗನಹಳ್ಳಿಗಳಲ್ಲಿ ಏಪ್ರಿಲ್​.19ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ.

  • ಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

    ಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

    ಬೆಂಗಳೂರು: ಪಿಯುಸಿ ಓದುತ್ತಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾಗಿ ಎರಡೂವರೆ ತಿಂಗಳು ಕಳೆದರೂ ಯಾವುದೇ ಸುಳಿವು ಸಿಗದೆ ಪೋಷಕರು ಕಂಗಾಲಾದ ಘಟನೆಯೊಂದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ಸೆಕೆಂಡ್ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ನಾಪತ್ತೆಯಾದ ಅಪ್ರಾಪ್ತೆಯರು. ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ನಾಪತ್ತೆಯಾದ ಈ ಇಬ್ಬರು ಬಾಲಕಿಯರಲ್ಲಿ ಮೊಬೈಲ್ ಇರಲಿಲ್ಲ. ಎಟಿಎಂ ಕಾರ್ಡ್ ಗಳನ್ನು ಬಳಸುತ್ತಿಲ್ಲ. ಯಾವುದೇ ಸ್ನೇಹಿತರ ಅಥವಾ ಕುಟುಂಬಸ್ಥರ ಮನೆಗೂ ಹೋಗಿಲ್ಲ. ಮನೆಯಿಂದ ಹೋಗುವಾಗ ಇಬ್ಬರು ಕೇವಲ 3 ಸಾವಿರ ರೂ ತೆಗೆದುಕೊಂಡು ಹೋಗಿದ್ದಾರೆ. ಅದೇ ಹಣದಲ್ಲಿ ಸುಮಾರು 75 ದಿನ ಹೀಗೇ ಇರಲು ಹೇಗೆ ಸಾಧ್ಯ ಎಂಬ ಯಕ್ಷ ಪ್ರಶ್ನೆ ಕುಟುಂಬಸ್ಥರದ್ದು.

    ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದ್ರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿಯೇ ಬಾಲಕಿಯರ ಎಲ್ಲಾ ಇಷ್ಟದ ಜಾಗಗಳಲ್ಲಿ ಪೊಲೀಸರು ಪತ್ತೆ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿನಿಯರು ಮನೆ ಬಿಟ್ಟು ಹೋಗೋದಕ್ಕೆ ಕೂಡಾ ನಿಖರವಾದ ಕಾರಣ ತಿಳಿದುಬಂದಿಲ್ಲ.

    ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಇರೋದ್ರಿಂದ ಇವರು ಕೈಯಲ್ಲಿ ಆಧಾರ್ ಕಾರ್ಡ್‌ ಇದ್ದು, ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಜನವರಿ 31 ರಂದು ಇಬ್ಬರು ಕೂಡಾ ಮನೆ ಬಿಟ್ಟು ಹೋಗಿದ್ದು, ಬರೋಬ್ಬರಿ ಎರಡೂವರೆ ತಿಂಗಳುಗಳೇ ಕಳೆದಿವೆ. ಹೀಗಾಗಿ ಯುವತಿಯರ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರನ್ನು ಹುಡುಕಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು ಈ ಗಡುವು ಮುಗಿದು ಒಂದು ತಿಂಗಳೇ ಕಳೆದಿದೆ. ಆದರೂ ಈ ಬಾಲಕಿಯರ ಸುಳಿವು ಪತ್ತೆಯಾಗದೇ ಇರೋದು ಪೋಷಕರನ್ನು ಆತಂಕಕ್ಕೆ ತಳ್ಳಿದೆ.

  • ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

    ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

    ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊ*ಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

    ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಗಾಗಲೇ ವಿನಯ್ ಕುಲಕರ್ಣಿ ಸೇರಿದಂತೆ ಆರೋಪಿಗಳನ್ನು ದೋಷಿಯೆಂದು ಘೋಷಿಸಿದ್ದು, ಇಂದು ಬೆಳಗ್ಗೆ ಸುಮಾರು 11:30ರ ವೇಳೆಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದೆ.

    ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ಘೋಷಿಸಲಿದ್ದಾರೆ.

    ದೋಷಿಗಳೆಂದು ತೀರ್ಪು ಹೊರಬಂದ ತಕ್ಷಣ, ಪ್ರಕರಣದ ತನಿಖೆ ನಡೆಸಿದ ಕೇಂದ್ರ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಶಾಸಕ ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲುಗೆ ಸ್ಥಳಾಂತರಿಸಲಾಗಿದೆ.

    2016ರ ಜೂನ್ 16ರಂದು ನಡೆದಿದ್ದ ಈ ಹ*ತ್ಯೆಯಲ್ಲಿ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡರನ್ನು ಕೊ*ಲೆ ಮಾಡಲಾಗಿತ್ತು. ಪ್ರಕರಣವು 2019ರಲ್ಲಿ ಸಿಬಿಐಗೆ ವರ್ಗಾಯಿಸಲ್ಪಟ್ಟಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(ಬಿ) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು. ವಿನಯ್‌ ಕುಲಕರ್ಣಿ, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಆ ಪೈಕಿ 17 ಮಂದಿ ಮೇಲೆ ಅಪರಾಧ ಸಾಭೀತಾಗಿದೆ. 2016ರ ಜೂನ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದ್ದು 10 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ

    2016 ಜೂನ್ 15 ರಂದು ಧಾರವಾಡದ ಸಪ್ತಾಪುರದಲ್ಲಿರುವ ಯೋಗೇಶ್ ಗೌಡ ಅವರದ್ದೇ ಒಡೆತನದ ಉದಯ್ ಜಿಮ್‌ನಲ್ಲಿ ಬೆಳಗಿನ ಜಾವ ಅವರು ದಿನಪತ್ರಿಕೆ ಓದುತ್ತಿದ್ದಾಗ, ಅಲ್ಲಿಗೆ ಬಂದ ದುಷ್ಕರ್ಮಿಗಳ ಗುಂಪೊಂದು ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು.

    ಪ್ರಮುಖ ಆರೋಪಿಗಳು: ಸಂತೋಷ್, ಅಶ್ವತ್ಥ, ಸುನೀಲ್ ನಜ್ಮೀರ್ ಅಹ್ಮದ್, ಹರ್ಷಿತ್, ವಿನಯ್ ಕುಲಕರ್ಣಿ , ಶಿವಾನಂದ್, ಚನ್ನಕೇಶವ, ಬಸವರಾಜ್ ಮುತ್ತಗಿ , ಕೀರ್ತಿ ಕುಮಾರ್, ವಿನಾಯಕ್, ದಿನೇಶ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ ಇಂಡಿ, ಶಿವಾನಂದ್, ವಿಕಾಸ್, ವಾಸುದೇವ, ವಿಕ್ರಂ

  • ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ…!

    ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ…!

    ನೆಲಮಂಗಲ: ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ.

    ಅಡಿಕೆ ತೋಟದ ಪಕ್ಕದಲ್ಲಿ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಸಿಕ್ಕಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ಘಟನೆಯಹಿನ್ನೆಲೆ:

    ಮೃತ ಮಹಿಳೆಯನ್ನು ತುಮಕೂರು ಮೂಲದ ಯಮುನಾ (35) ಎಂದು ಗುರುತಿಸಲಾಗಿದೆ. ಇವರಿಗೆ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರೊಂದಿಗೆ ಮದುವೆ ಆಗಿತ್ತು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ದೊಡ್ಡಬಳ್ಳಾಪುರದಲ್ಲಿ ಆತನೊಂದಿಗೆ ವಾಸವಿದ್ದರು. ನಂತರ ತನ್ನ ತಪ್ಪಿನ ಅರಿವಾಗಿ ಎರಡು ವರ್ಷಗಳ ಹಿಂದೆ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

    ಕಳೆದ ಮಾರ್ಚ್ 21ರಂದು ಯಮುನಾ ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ “ಒಮ್ಮೆ ಭೇಟಿಯಾಗು” ಎಂದು ರಾಘವೇಂದ್ರ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು.

    ಗುರುತುಪತ್ತೆಯಾಗಿದ್ದುಹೇಗೆ?

    ಆದರೆ ಇದೀಗ ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಬಳಿ ಮೂಳೆಗಳು ಪತ್ತೆಯಾಗಿದೆ. ಅದರ ಪಕ್ಕದಲ್ಲೇ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಕೂಡ ಪೊಲೀಸರಿಗೆ ಸಿಕ್ಕಿದೆ. ಇದರ ಆಧಾರದ ಮೇಲೆ ಪೊಲೀಸರು ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಕುಟುಂಬಸ್ಥರು ಅದು ಯಮುನಾ ಅವರದ್ದೇ ಎಂದು ಗುರುತಿಸಿದ್ದಾರೆ.

    ರಾಘವೇಂದ್ರ ಎಂಬಾತನೇ ಯಮುನಾಳನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ದಾಬಸ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ದೊಡ್ಡಬಳ್ಳಾಪುರ; ಏ.19ಕ್ಕೆ ಐತಿಹಾಸಿಕ ಮಹಿಳೆ  ಸಾಸಲು ಚಿನ್ನಮ್ಮ ಉತ್ಸವ, ಲೋಗೋ ಅನಾವರಣ

    ದೊಡ್ಡಬಳ್ಳಾಪುರ; ಏ.19ಕ್ಕೆ ಐತಿಹಾಸಿಕ ಮಹಿಳೆ ಸಾಸಲು ಚಿನ್ನಮ್ಮ ಉತ್ಸವ, ಲೋಗೋ ಅನಾವರಣ

    ದೊಡ್ಡಬಳ್ಳಾಪುರ: ಐತಿಹಾಕಿಸ ಮಹಿಳೆ‌ ಚಿನ್ನಮ್ಮನ ಉತ್ಸವ ಬಹಳ ವರ್ಷಗಳ ಕನಸು ಈಗ ನನಸಾಗು ಭಾಗ್ಯ ಬಂದಿದ್ದು ಏ.19ರಂದು ಸಾಸಲು ಚಿನ್ನಮ್ಮ ಉತ್ಸವ-2026ನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ ಮಾಜಿ ಅಧ್ಯಕ್ಷ ಲಾವಣ್ಯ ನಾಗರಾಜ್ ತಿಳಿಸಿದರು.

    ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು, ಸಾಸಲು ಹೋಬಳಿ ಚಿನ್ನಮ್ಮ ಸಮಿತಿ ವತಿಯಿಂದ ನಡೆಯಲಿರುವ ಸಾಸಲು ಚಿನ್ನಮ್ಮ ಉತ್ಸವವು ಏ. 19ರಂದು ಬೆಳಗ್ಗೆ 8 ಗಂಟೆಗೆ ಪೂಜೆ ಸಲ್ಲಿಸಿ ಬಳಿಕ ವೀರಗಾಸೆ, ಡೊಳ್ಳು ಕುಣಿತ ಜಾನಪದ ಕಲಾ ತಂಡಗಳೊಂದಿಗೆ ಉತ್ಸವ ಚಿಲಕಲ ಬಂಡಿಯಲ್ಲಿ ಮೆರವಣಿಗೆ ಮಾಡುವುದರೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 10 ಕ್ಕೆ ಸರಿಯಾಗಿ ಗ್ರಾಮದ ಅಂಬೇಡ್ಕರ್ ಆಸ್ಪತ್ರೆ ಆವರಣದಲ್ಲಿ ವೇದಿಕೆ‌ ಕಾರ್ಯಕ್ರಮ ಆರಂಭವಾಗಲಿದ್ದು ಈ ಕಾರ್ಯಕ್ರಮವನ್ನು ಸಾಹಿತಿಗಳಾದ ಡಿ.ಕೆ ಚಿತ್ತಯ್ಯ ಪೂಜಾರ್ ಉದ್ಘಾಟನೆ ಮಾಡಲಿದ್ದಾರೆ. ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು  ಅಧ್ಯಕ್ಷ ಪಿ. ಗೋವಿಂದರಾಜು ಅಧ್ಯಕ್ಷತೆ ವಹಿಸಲಿದ್ದಾರೆ.

    ಮಧ್ಯಾಹ್ನ 12 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿರುತ್ತದೆ. ಸಾಸಲು ಹೋಬಳಿ ಕುರಿತು ಚಿಂತನ-ಮಂಥನ  ವಿಚಾರಗೋಷ್ಠಿ ,  ರಾತ್ರಿ 7 ಗಂಟೆಗೆ ಸಾಸಲು ಚೆನ್ನಮ್ಮ ಕುರಿತ ನಾಟಕ  ನಡೆಯಲಿದೆ ಎಂದರು.

    ಇದೇ ವೇದಿಕೆಯಲ್ಲಿ ಜಾನಪದ ವಿದ್ವಾಂಸರಾದ ಸಣ್ಣ ನಾಗಪ್ಪ ಇವರು ಸಾಸಲು ಚಿನ್ನಮ್ಮ ಪರಿಚಯದ ಕಿರುಪುಸ್ತಕ ಬಿಡುಗಡೆ ಮಾಡಲಿದ್ದಾರೆ.  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧೀರಾಜ್ ಮುನಿರಾಜು ಶಾಸಕರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ, ಟಿ.ವೆಂಕಟರಮಣಯ್ಯ ಮಾಜಿ ಶಾಸಕರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ, ಬಿ. ಮುನೇಗೌಡ, ಮಾಜಿ ಅಧ್ಯಕ್ಷರು ಕಿಮ್ಸ್ ಆಸ್ಪತ್ರೆ, ಬೆಂಗಳೂರು ಇವರುಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಸಾಸಲು ಚಿನ್ನಮ್ಮ ಉತ್ಸವ ಸಮಿತಿಯ ಮುಖಂಡರುಗಳಾದ  ವಕೀಲರಾದ  ನರಸಿಂಹಗೌಡ,  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್,  ಗ್ರಾಮಪಂಚಾಯಿತಿ ಸದಸ್ಯ ಪಚ್ಚಾರಹಳ್ಳಿ  ರಮೇಶ್,  ಉಪನ್ಯಾಸಕ ಕೇಶವಮೂರ್ತಿ, ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.

  • ಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

    ಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

    ಮಹದೇವಪುರ: ಕ್ಷೇತ್ರದಲ್ಲಿ ರಸ್ತೆ,ಚರಂಡಿ ಮೂಲಭೂತ ಸೌಕರ್ಯಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ಹೇಳಿದರು

    ಕ್ಷೇತ್ರದ ಭೈರತಿ,ಭೈರತಿ ಬಂಡೆ, ಬೆಳೇಶಿವಾಲೆ, ಬೆಳತೂರು ಕಾಲೋನಿ, ಕುಂಬೇನ ಅಗ್ರಹಾರ ಕೊಡುಗೆಹಳ್ಳಿ , ಅಯ್ಯಪ್ಪ ನಗರ, ಹೂಡಿ,ತಿಗಳರಪಾಳ್ಯದಲ್ಲಿ ರಸ್ತೆ, ಚರಂಡಿ ಸೇರಿ ವಿವಿಧ ಮೂಲಭೂತ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು,

    ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಅನುದಾನ ನೀಡದೆ ಧೋರಣೆಯನ್ನು ಮಾಡುತ್ತಿದ್ದು ಬಂದಿರುವ ಅಲ್ಪಸ್ವಲ್ಪ
    ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.
    ಸಾರ್ವಜನಿಕರಿಗೆ ಬಹುಮುಖ್ಯವಾಗಿ ಬೇಕಿರುವ ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಲ್ಪಿಸುತ್ತೇವೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮನವಿ ಮಾಡಿ ಅನುದಾನ ತಂದು ಕ್ಷೇತ್ರದ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಗುತ್ತಿದಾರರು ಸಾರ್ವಜನಿಕರಿಗೆ ತೊಂದರೆ ಆಗದಂತೆ,ಮಳೆಗಾಲ ಆರಂಭಕ್ಕೂ ಮೊದಲೆ ಕಾಮಗಾರಿ ಪೂರ್ಣಗೊಳಿಸಿ,ಸರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದರು.
    ಶೀಘ್ರ ಕಾಮಗಾರಿಯನ್ನು ಆರಂಭಿಸಿ ಯಾವುದೇ ಲೋಪ ದೋಷಗಳು ಬರದಂತೆ ಪೂರ್ಣಗೊಳಿಸಬೇಕೆಂದು ತಿಳಿಸಿದರು .

    ಈ ವೇಳೆ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮುಖಂಡರಾದ ಆರ್ ರಾಮಾಂಜನೇಯ, ವಾರ್ಡ್ ಅಧ್ಯಕ್ಷರು ಕಾರ್ಯಕರ್ತರು ಇದ್ದರು.

  • 40ರ ಆಂಟಿ ಪ್ರೇಮಕ್ಕೆ ಬಿದ್ದ ಹರೆಯದ ಯುವಕ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಜೋಡಿ!

    40ರ ಆಂಟಿ ಪ್ರೇಮಕ್ಕೆ ಬಿದ್ದ ಹರೆಯದ ಯುವಕ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಜೋಡಿ!

    ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರೀತಿ ಎಂಬುದು ಕುಟುಂಬಗಳ ನಿದ್ದೆ ಗೆಡಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪರಿಚಯ, ಈಗ 21ರ ಯುವಕನನ್ನು 40ರ ವಿಧವೆಯ ಜೊತೆ ಮನೆ ಬಿಟ್ಟು ಓಡಿಹೋಗುವಂತೆ ಮಾಡಿದೆ!

    ಹೌದು…ಇದು ಡಿಜಿಟಲ್ ಕಾಲದ ವಿಚಿತ್ರ ಪ್ರೇಮ ಕಥೆ. ಉತ್ತರ ಪ್ರದೇಶದ ಅಮೋಹಾದ 21 ವರ್ಷದ ಯುವಕನಿಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಾದ 40 ವರ್ಷದ ಮಹಿಳೆಯ ಪರಿಚಯವಾಗುತ್ತದೆ. ಆರಂಭದಲ್ಲಿ ಹಾಯ್, ಹಲೋ ಅಂತ ಶುರುವಾದ ಚಾಟಿಂಗ್, ಕಡೆಗೆ ಬಿಟ್ಟಿರಲಾರದ ಪ್ರೇಮಕ್ಕೆ ತಿರುಗಿದೆ. ತನ್ನ ಮಗನಿಗಿಂತ 19 ವರ್ಷ ಹಿರಿಯವಳಾದ, ಮೂರು ಮಕ್ಕಳ ತಾಯಿಯ ಪ್ರೇಮದ ಜಾಲಕ್ಕೆ ಬಿದ್ದ ಈ ತರುಣ, ಮನೆಯವರಿಗೂ ತಿಳಿಸದೆ ಹಠಾತ್ ನಾಪತ್ತೆಯಾಗಿದ್ದ. ಮಗ ಕಾಣೆಯಾಗಿದ್ದಾನೆಂದು ಗಾಬರಿಗೊಂಡ ತಾಯಿ ಪೊಲೀಸರ ಮೊರೆ ಹೋದಾಗ ಬಯಲಾಗಿದ್ದು ಮಾತ್ರ ಶಾಕಿಂಗ್ ವಿಷಯ!

    ಪೊಲೀಸರು ಹುಡುಕಾಟ ನಡೆಸಿದಾಗ ಆ ಯುವಕ ಆಗ್ರಾದಲ್ಲಿ ಆ 40 ವರ್ಷದ ಮಹಿಳೆಯ ಜೊತೆ ಪತ್ತೆಯಾಗಿದ್ದಾನೆ. ಅಷ್ಟೇ ಅಲ್ಲ, ಇವರಿಬ್ಬರು ಯಾರಿಗೂ ತಿಳಿಯದಂತೆ ದೇವಸ್ಥಾನದಲ್ಲಿ ಮದುವೆಯನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಗನನ್ನು ಮನೆಗೆ ಕರೆದೊಯ್ಯಲು ಬಂದ ತಾಯಿಯ ಎದುರೇ ದೊಡ್ಡ ಹೈಡ್ರಾಮಾ ನಡೆದಿದ್ದು, ಮಗ ಮಾತ್ರ ತನ್ನ ಪ್ರೇಮಿಯನ್ನು ಬಿಟ್ಟು ಬರಲು ಸಿದ್ಧನಿಲ್ಲ.

    ಹೌದು, ಆನ್‌ಲೈನ್‌ನಲ್ಲಿ ಸಿಗುವ ಆಕರ್ಷಣೆ ಜೀವನದ ವಾಸ್ತವಕ್ಕಿಂತ ಭಿನ್ನವಾಗಿರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 19 ವರ್ಷದ ವಯಸ್ಸಿನ ಅಂತರವಿದ್ದರೂ ಸಮಾಜದ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಈ ಜೋಡಿಯ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.

  • ಪರಮ್ ಫೌಂಡೇಶನ್‌ನಿಂದ ನಾಳೆ ಬೆಂಗಳೂರಿನಲ್ಲಿ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಭ್ರಮ

    ಪರಮ್ ಫೌಂಡೇಶನ್‌ನಿಂದ ನಾಳೆ ಬೆಂಗಳೂರಿನಲ್ಲಿ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಭ್ರಮ

    ಪರಮ್ ಫೌಂಡೇಶನ್ ಸಂಸ್ಥೆಯಿಂದ ಅದ್ಧೂರಿ ಆಯೋಜನೆ
    – ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ
    – ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡದ ಪ್ರಸ್ತುತಿ
    – ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಭಾಗಿ
    – ಸಮಕಾಲೀನ ಶೈಲಿಯಲ್ಲಿ ಆಧ್ಯಾತ್ಮಿಕ ಪರಂಪರೆಯ ಗಾಯನ ಸುಧೆ
    – ಜನಪದ, ಶಾಸ್ತ್ರೀಯ ಸಂಗೀತದ ರಸದೌತಣ

    ಬೆಂಗಳೂರು: ರಾಜಧಾನಿಯ ಸಂಗೀತ ಪ್ರಿಯರಿಗಾಗಿ ‘ಪರಮ್ ಫೌಂಡೇಶನ್’ ವತಿಯಿಂದ ‘ತತ್ವ’ ಎಂಬ ವಿಶಿಷ್ಟ ಭಕ್ತಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರಸಿದ್ಧ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 17ರಂದು ಸಂಜೆ 6.15ಕ್ಕೆ ಈ ಸಂಗೀತ ಸಂಜೆ ಆಯೋಜಿಸಲಾಗಿದೆ.

    ‘ನಾದದ ಲಯದಿಂದ ಆನಂದದತ್ತ ಪಯಣ’ (A Journey from Breath to Bliss) ಎಂಬ ಪರಿಕಲ್ಪನೆಯಡಿ ಮೂಡಿಬರುತ್ತಿರುವ ಈ ಗಾಯನ ಸುಧೆಯನ್ನು ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡವು ನಡೆಸಿಕೊಡಲಿದೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಸಮಕಾಲೀನ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ. ವೇದಘೋಷಗಳು, ಶಾಸ್ತ್ರೀಯ ಪ್ರಭಾವ ಹಾಗೂ ಜನಪದ ಧಾಟಿಯನ್ನು ಆಧುನಿಕ ಸಂಗೀತ ಉಪಕರಣಗಳೊಂದಿಗೆ ಇಲ್ಲಿ ಬೆಸೆಯಲಾಗಿದೆ.

    ಉಮೇಶ್ ವಾರ್ಭುವನ್, ಪ್ರದ್ಯುಮ್ನ ಸೊರಬ ಸೇರಿದಂತೆ 15ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಹಾಗೂ ವಾದ್ಯವೃಂದದ ಜೊತೆಗೆ 8 ಮಂದಿಯ ಗಾಯಕ ತಂಡವು ಈ ಸಂಜೆಯ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದೆ. ವಿಶೇಷವಾಗಿ ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಭಾಗವಹಿಸಲಿದ್ದಾರೆ. ಮನಸ್ಸಿಗೆ ನೆಮ್ಮದಿ ಹಾಗೂ ಹೊಸ ಚೈತನ್ಯ ತುಂಬುವ ಈ ಕಲಾ ಸಂಗಮವು, ಪ್ರೇಕ್ಷಕರ ಕಣ್ಮನ ಸೆಳೆಯುವ ಜೊತೆಗೆ ಒಂದು ವಿಶಿಷ್ಟ ಆಧ್ಯಾತ್ಮಿಕ ಅನುಭವವನ್ನು ಉಣಬಡಿಸಲಿದೆ.

    ಏನಿದು ಪರಂಪರಾ?
    “ಪರಮ್ ಕಲ್ಚರ್” ಪ್ರಸ್ತುತಪಡಿಸುವ ‘ಪರಂಪರಾ’ ಸರಣಿ ಬಹು ಜನಪ್ರಿಯವಾಗಿರುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ನಡೆದಿರುವ ಪ್ರತಿಯೊಂದರ ವಿಷಯವಸ್ತುವೂ ವಿಭಿನ್ನವಾಗಿದ್ದು, ಪ್ರೇಕ್ಷಕರಿಂದ ಹಾಗೂ ಕಲಾವಿದರಿಂದ ಪ್ರಶಂಸೆಗೊಳಪಟ್ಟಿದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸೇರಿ ಭರತನಾಟ್ಯ, ಚಿತ್ರಕಲಾ ಪ್ರದರ್ಶನ ಇವೆಲ್ಲ ಕಾರ್ಯಕ್ರಮಗಳ ಜೊತೆಗೆ, ‘ವೀರ ಸಂನ್ಯಾಸಿಯ ಆತ್ಮಗೀತೆ’ ಎಂಬ ಅದ್ಭುತವಾದ ಮಲ್ಟಿಮೀಡಿಯಾ ಪ್ರೊಡಕ್ಷನ್ ಹಾಗೂ ದಾಸವಾಣಿ – ಸಂತವಾಣಿ ಎಂಬ ಸಂಗೀತ ಕಾರ್ಯಾಗಾರವನ್ನೂ ಕೂಡ ಪರಂಪರಾ ಸರಣಿಯಲ್ಲಿ ಪ್ರದರ್ಶಿಸಲ್ಪಟ್ಟಿದೆ.

  • ಇಂದಿನಿಂದ 15 ದಿನ ರಾಜ್ಯದ ಹಲವೆಡೆ ಬಿಸಿ ಗಾಳಿ; ಹವಾಮಾನ ಇಲಾಖೆ ಮುನ್ಸೂಚನೆ

    ಇಂದಿನಿಂದ 15 ದಿನ ರಾಜ್ಯದ ಹಲವೆಡೆ ಬಿಸಿ ಗಾಳಿ; ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರದಿಂದ ಐದು ದಿನ ತಾಪಮಾನ ಮತ್ತಷ್ಟು ಏರಿಕೆಯಾಗುವ ಜತೆಗೆ, ಬಿಸಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಉತ್ತರ ಒಳನಾಡಿನ ಬೀದ‌ರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಗದಗ, ಧಾರವಾಡ, ಬಾಗಲಕೋಟೆ ಮತ್ತು ಕೊಪ್ಪಳ ಜಿಲ್ಲೆಗಳಿಗೆ ಐದು ದಿನಗಳು ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದ್ದು, ಈ ಜಿಲ್ಲೆಗಳಲ್ಲಿ ಬಿಸಿ ಗಾಳಿ ಬೀಸುವ ಸಂಭವವಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಬಿಸಿ ಗಾಳಿ ಬೀಸಲಿದೆ ಎಂದು ಇಲಾಖೆ ತಿಳಿಸಿದೆ.

    ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಒಂದೆರಡು ಕಡೆ ಗುರುವಾರದಿಂದ ಐದು ದಿನ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

    ಬುಧವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ (44 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಅಲ್ಲಿ ಸಾಮಾನ್ಯಕ್ಕಿಂತ 4.1 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ. ವಿಜಯಪುರದಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಹಾಗೂ ರಾಯಚೂರಿನಲ್ಲಿ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗಿದೆ.

    ಬೆಂಗಳೂರಿನಲ್ಲಿ ತಾಪಮಾನ 36.6 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮುಂದಿನ 2 ದಿನಗಳಲ್ಲಿ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದಿದೆ.