Blog

  • ಹಾವೇರಿಯಲ್ಲಿ ಹೂಳು ತೆಗೆಯುವಾಗ ಪುರಾತನ ಬಸವಣ್ಣ ಮೂರ್ತಿ ಪತ್ತೆ

    ಹಾವೇರಿಯಲ್ಲಿ ಹೂಳು ತೆಗೆಯುವಾಗ ಪುರಾತನ ಬಸವಣ್ಣ ಮೂರ್ತಿ ಪತ್ತೆ

    ಹಾವೇರಿ : ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಗ್ರಾಮದ ಬಳಿಯಿರುವ ಬಾಳೆ ಕೆರೆಯಲ್ಲಿ ಹೂಳು ತೆಗೆಯುತ್ತಿದ್ದ ವೇಳೆ ಪುರಾತನ ಕಾಲದ ಬಸವಣ್ಣನ ಮೂರ್ತಿಯೊಂದು ಪತ್ತೆಯಾಗಿದೆ. ಈ ಘಟನೆಯಿಂದ ಗ್ರಾಮಸ್ಥರಲ್ಲಿ ಅಪಾರ ಸಂಭ್ರಮ ಮನೆ ಮಾಡಿದೆ.

    ಯಾವ ರೀತಿ ಪತ್ತೆಯಾಯಿತು?
    ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಫಲವತ್ತಾದ ಮಣ್ಣನ್ನು ಸಾಗಿಸಲು ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯ ಆರಂಭಿಸಿದ್ದರು. ಜೆಸಿಬಿ ಯಂತ್ರದ ಮೂಲಕ ಮಣ್ಣು ಅಗೆಯುತ್ತಿರುವಾಗ, ಯಂತ್ರಕ್ಕೆ ದೊಡ್ಡ ಕಲ್ಲು ಅಡ್ಡಲಾಯಿತು. ಮಣ್ಣು ಹೊರಗೆ ಬರದಿದ್ದಾಗ ಕಾರ್ಮಿಕರು ಕೈಯಿಂದ ಅಗೆದು ನೋಡಿದಾಗ, ಸುಮಾರು 3 ಅಡಿ ಎತ್ತರದ ಪುರಾತನ ಬಸವಣ್ಣ ಮೂರ್ತಿ ಕಂಡುಬಂದಿದೆ. ಮುಂದೆ ಮಣ್ಣು ತೆಗೆಯುವುದನ್ನು ಮುಂದುವರಿಸಿದಾಗ, ಬಸವಣ್ಣನ ವಾಹನವಾದ ನಂದಿ ಮೂರ್ತಿಯೂ ಪತ್ತೆಯಾಗಿದೆ.

    ಮೂರ್ತಿಯ ವಿಶೇಷತೆ
    ಕಲ್ಲಿನಲ್ಲಿ ಕೆತ್ತಲಾದ ಈ ಮೂರ್ತಿಯು ಅಂದಿನ ಶಿಲ್ಪಕಲೆಯ ಸೊಬಗನ್ನು ಪ್ರತಿಬಿಂಬಿಸುತ್ತದೆ. ಬಸವಣ್ಣನ ಮೂರ್ತಿಯಲ್ಲಿ ಲಿಂಗ ಧಾರಣೆ, ಜಪಮಾಲೆ ಮತ್ತು ವಿಶಿಷ್ಟ ಕಿರೀಟದ ವಿನ್ಯಾಸವನ್ನು ಕಾಣಬಹುದು. ನಂದಿ ಮೂರ್ತಿಯೂ ಸಹ ಅಂದವಾಗಿ ಕೆತ್ತಲ್ಪಟ್ಟಿದೆ.

    ಭಕ್ತರ ಪ್ರತಿಕ್ರಿಯೆ
    ಸುದ್ದಿ ಕೇಳಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಭಕ್ತರು ಕೆರೆಯ ಬಳಿಗೆ ಆಗಮಿಸಿದರು. ಮೂರ್ತಿಯನ್ನು ಸ್ವಚ್ಛಗೊಳಿಸಿ, ಹಾಲು, ಹಣ್ಣು, ಹೂವುಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಗ್ರಾಮಸ್ಥರು ಈ ಮೂರ್ತಿಯನ್ನು ಗ್ರಾಮದ ದೇವಸ್ಥಾನದ ಬಳಿ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡಲು ನಿರ್ಧರಿಸಿದ್ದಾರೆ.

    ಕೆರೆಯಲ್ಲಿ ಹೂಳು ತೆಗೆಯುವ ಕಾರ್ಯವನ್ನು ಮತ್ತೆ ಆರಂಭಿಸಲಾಗಿದೆ. ಮತ್ತಷ್ಟು ಪುರಾತನ ವಿಗ್ರಹಗಳು ಅಥವಾ ಐತಿಹಾಸಿಕ ಅವಶೇಷಗಳು ಸಿಗುವ ಸಾಧ್ಯತೆಯಿರುವುದರಿಂದ, ಗ್ರಾಮಸ್ಥರು ಎಚ್ಚರಿಕೆಯಿಂದ ಅಗೆಯುವ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.

  • ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್‌ ಸ್ಥಳದಲ್ಲೇ ಸಾವು

    ಭೀಕರ ರಸ್ತೆ ಅಪಘಾತ; ಚಿತ್ರನಟ ಹರೀಶ್‌ ಸ್ಥಳದಲ್ಲೇ ಸಾವು

    ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಆನೆಕಾಡು ಅರಣ್ಯ ಪ್ರದೇಶದ ಬಳಿ ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಸಹ ಕಲಾವಿದ ಹರೀಶ್ (40) ದಾರುಣವಾಗಿ ಮೃತಪಟ್ಟಿದ್ದಾರೆ.

    ನಿನ್ನೆ ಕೆಲಸ ಮುಗಿಸಿಕೊಂಡು ಕುಶಾಲನಗರದಿಂದ ತಮ್ಮ ಸ್ವಗ್ರಾಮ ಹೊಸಕೋಟೆಗೆ ಕಾರಿನಲ್ಲಿ ತೆರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿ, ಹರೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹರೀಶ್ ಅವರ ಅಕಾಲಿಕ ನಿಧನಕ್ಕೆ ಚಿತ್ರರಂಗದ ಗಣ್ಯರು ಮತ್ತು ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಕೊಡಗಿನ ಸುಂದರ ಪರಿಸರದ ನಡುವೆ ನಡೆದ ಈ ದುರಂತವು ಎಲ್ಲರಲ್ಲೂ ವಿಷಾದ ಮೂಡಿಸಿದೆ

  • ಮನ ಕಲಕುವ ಘಟನೆ : ಕಾಫಿ ತೋಟದಲ್ಲಿ ನವಜಾತ ಶಿಶು ಪತ್ತೆ.!

    ಮನ ಕಲಕುವ ಘಟನೆ : ಕಾಫಿ ತೋಟದಲ್ಲಿ ನವಜಾತ ಶಿಶು ಪತ್ತೆ.!

    ಮಡಿಕೇರಿ: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಅಡಿಕೆ ಹಾಳೆಯಲ್ಲಿ ಸುತ್ತಿಡಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸ್ಥಳೀಯರ ಮಾಹಿತಿ ಮೇರೆಗೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.

    ಅಸ್ವಸ್ಥಗೊಂಡಿದ್ದ ಮಗುವಿಗೆ ಮಡಿಕೇರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಗುವನ್ನು ಬಿಟ್ಟು ಹೋದ ಪೋಷಕರಿಗಾಗಿ ತನಿಖೆ ನಡೆಸುತ್ತಿದ್ದಾರೆ.

    ಜನ್ಮ ನೀಡಿದ ಹೆತ್ತವರೇ ಮಗುವನ್ನು ಅನಾಥವಾಗಿ ಬಿಟ್ಟು ಹೋಗಿರುವ ಕರುಣಾಜನಕ ಘಟನೆಯೊಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೇತ್ರಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟವೊಂದರಲ್ಲಿ ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಹೆಣ್ಣು ಶಿಶುವನ್ನು ಸ್ಥಳೀಯರು ಮತ್ತು ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿದ್ದಾರೆ.

    ಇಂದು (ಏಪ್ರಿಲ್ 11) ಬೇತ್ರಿ ಗ್ರಾಮದ ಕಾಫಿ ತೋಟದಲ್ಲಿ ಮಗುವಿನ ಅಳುವಿನ ಶಬ್ದ ಕೇಳಿದ ಸ್ಥಳೀಯರು ಹೋಗಿ ನೋಡಿದಾಗ, ಅಡಿಕೆ ಹಾಳೆಯಲ್ಲಿ ಸುತ್ತಿ ಮಲಗಿಸಲಾಗಿದ್ದ ನವಜಾತ ಶಿಶು ಕಂಡುಬಂದಿದೆ.

    ತಕ್ಷಣವೇ ಎಚ್ಚೆತ್ತ ಗ್ರಾಮಸ್ಥರು ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಘಟಕದ ಸಿಬ್ಬಂದಿ ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಮಗುವು ಸ್ವಲ್ಪ ಅಸ್ವಸ್ಥಗೊಂಡಿದ್ದರಿಂದ ತಕ್ಷಣವೇ ಮಡಿಕೇರಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ವೈದ್ಯರಿಂದ ಚಿಕಿತ್ಸೆ ಮತ್ತು ಆರೈಕೆ ನೀಡಲಾಗುತ್ತಿದ್ದು, ಶಿಶುವು ಪ್ರಾಣಾಪಾಯದಿಂದ ಪಾರಾಗಿದೆ ಎಂದು ತಿಳಿದು ಬಂದಿದೆ.

    ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವಜಾತ ಶಿಶುವನ್ನು ಕಾಫಿ ತೋಟದಲ್ಲಿ ಬಿಟ್ಟು ಹೋದ ಪಾಪಿ ಪೋಷಕರು ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಇತ್ತೀಚೆಗೆ ಹೆರಿಗೆಯಾದವರ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.

  • ವಾಹನ ಸವಾರರೇ ಗಮನಿಸಿ: ಟೋಲ್ ಪ್ಲಾಜಾಗಳಲ್ಲಿ ಇನ್ಮುಂದೆ ‘ಕ್ಯಾಶ್’ ನಡೆಯಲ್ಲ! ಸಂಪೂರ್ಣ ಕ್ಯಾಶ್‌ಲೆಸ್ ಆಗಲಿವೆ ರಾಷ್ಟ್ರೀಯ ಹೆದ್ದಾರಿಗಳು.

    ವಾಹನ ಸವಾರರೇ ಗಮನಿಸಿ: ಟೋಲ್ ಪ್ಲಾಜಾಗಳಲ್ಲಿ ಇನ್ಮುಂದೆ ‘ಕ್ಯಾಶ್’ ನಡೆಯಲ್ಲ! ಸಂಪೂರ್ಣ ಕ್ಯಾಶ್‌ಲೆಸ್ ಆಗಲಿವೆ ರಾಷ್ಟ್ರೀಯ ಹೆದ್ದಾರಿಗಳು.

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರವನ್ನು ಸುಗಮಗೊಳಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಸಾಲು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಇನ್ಮುಂದೆ ದೇಶದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಕೇಂದ್ರಗಳನ್ನು ಸಂಪೂರ್ಣವಾಗಿ ‘ಕ್ಯಾಶ್‌ಲೆಸ್’ (Cashless) ಮಾಡಲು NHAI (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಸಜ್ಜಾಗಿದೆ.

    ಪ್ರತಿಯೊಂದು ವಾಹನಕ್ಕೂ ಫಾಸ್ಟ್ಯಾಗ್ ಇರುವುದು ಈಗ ಕಡ್ಡಾಯ. ಒಂದು ವೇಳೆ ನಿಮ್ಮ ವಾಹನದಲ್ಲಿ ಫಾಸ್ಟ್ಯಾಗ್ ಇಲ್ಲದಿದ್ದರೆ ಅಥವಾ ಅದರಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೆ, ನೀವು ದುಪ್ಪಟ್ಟು ದಂಡ ಪಾವತಿಸಬೇಕಾಗುತ್ತದೆ.

    ಇನ್ಮುಂದೆ ಟೋಲ್ ಕೇಂದ್ರಗಳಲ್ಲಿ ನಗದು (Cash) ಸ್ವೀಕರಿಸುವ ಕೌಂಟರ್‌ಗಳನ್ನು ಹಂತಹಂತವಾಗಿ ತೆಗೆದುಹಾಕಲಾಗುತ್ತಿದೆ. ಕೇವಲ ಡಿಜಿಟಲ್ ಪಾವತಿ ಅಥವಾ ಫಾಸ್ಟ್ಯಾಗ್ ಮೂಲಕ ಮಾತ್ರ ಹಣ ಕಡಿತವಾಗಲಿದೆ.

    ಮುಂದಿನ ದಿನಗಳಲ್ಲಿ ಟೋಲ್ ಪ್ಲಾಜಾಗಳನ್ನೇ ತೆಗೆದುಹಾಕಿ, ನೀವು ಪ್ರಯಾಣಿಸುವ ಕಿಲೋಮೀಟರ್ ಆಧಾರದ ಮೇಲೆ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುವ ‘ಜಿಪಿಎಸ್ ಟೋಲ್’ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ.

    ಇತ್ತೀಚಿನ ನಿಯಮದಂತೆ ನಿಮ್ಮ ಫಾಸ್ಟ್ಯಾಗ್ ಕೆವೈಸಿ (KYC) ಅಪ್‌ಡೇಟ್ ಆಗಿರಲೇಬೇಕು. ಇಲ್ಲದಿದ್ದರೆ ನಿಮ್ಮ ಟ್ಯಾಗ್ ಬ್ಲಾಕ್ ಆಗುವ ಸಾಧ್ಯತೆ ಇರುತ್ತದೆ.

    ಟೋಲ್ ಕೇಂದ್ರಗಳಲ್ಲಿ ವಾಹನಗಳ ಕಾಯುವ ಸಮಯವನ್ನು ಕಡಿಮೆ ಮಾಡುವುದು ಮತ್ತು ಸಂಚಾರವನ್ನು ಸುಗಮಗೊಳಿಸುವುದು ಈ ನಿಯಮದ ಮುಖ್ಯ ಉದ್ದೇಶವಾಗಿದೆ.

    ಹೆದ್ದಾರಿಯಲ್ಲಿ ಪ್ರಯಾಣಿಸುವವರು ದಂಡದಿಂದ ಪಾರಾಗಲು ಮತ್ತು ಸುಲಭ ಪ್ರಯಾಣಕ್ಕಾಗಿ ತಮ್ಮ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅಳವಡಿಸಿಕೊಳ್ಳುವುದು ಹಾಗೂ ಅದನ್ನು ರೀಚಾರ್ಜ್ ಮಾಡಿಕೊಳ್ಳುವುದು ಉತ್ತಮ.

  • ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳ ರಕ್ಷಣಾ ಘಟಕದಲ್ಲಿದ್ದ ವಿದ್ಯಾರ್ಥಿನಿ ಲಾವಣ್ಯ ಸಾಧನೆ.!

    ತಂದೆ-ತಾಯಿಯನ್ನು ಕಳೆದುಕೊಂಡು ಮಕ್ಕಳ ರಕ್ಷಣಾ ಘಟಕದಲ್ಲಿದ್ದ ವಿದ್ಯಾರ್ಥಿನಿ ಲಾವಣ್ಯ ಸಾಧನೆ.!

    ಚಿಕ್ಕಬಳ್ಳಾಪುರ : ತಂದೆ-ತಾಯಿಯನ್ನು ಕಳೆದುಕೊಂಡು ತನ್ನ 12ರ ವಯಸ್ಸಿನಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದ ಅನಾಥ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.90ರಷ್ಟು ಅಂಕ ಪಡೆದು ಸಾಧನೆ ಮಾಡಿದ್ದಾಳೆ.

    ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರಟಹಳ್ಳಿಯ ಲಾವಣ್ಯ ಎಂಬ ಹುಡುಗಿಯ ತಂದೆ ಶ್ರೀನಿವಾಸ್ 2019ರಲ್ಲಿ ಮೃತಪಟ್ಟಿದ್ದು, 2021ರಲ್ಲಿ ತಾಯಿ ಚಂದ್ರಕಲಾ ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಈಕೆಯ ತಾಯಿಯ ಅಂತ್ಯಸಂಸ್ಕಾರಕ್ಕೆ ಯಾರು ಬರದಿದ್ದಾಗ ಜೆಸಿಬಿ ಬಕೆಟ್‌ನಲ್ಲಿ ಶವ ಸಾಗಿಸಲಾಗಿತ್ತು.

    ಪೋಷಕರನ್ನು ಕಳೆದುಕೊಂಡು ಅನಾಥವಾಗಿದ್ದ ಲಾವಣ್ಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದಳು. ಇಲ್ಲಿಂದಲೇ ಚಿಕ್ಕಬಳ್ಳಾಪುರದ ವಿಶ್ವವಿವೇಕ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಪ್ರಕಟವಾದ ಫಲಿತಾಂಶದಲ್ಲಿ 600ಕ್ಕೆ 541 ಅಂಕ ಪಡೆದು ಸಾಧನೆ ಮಾಡಿದ್ದಾಳೆ.

    ಲಾವಣ್ಯಳಿಗೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನೀಡಿದ ಮಾರ್ಗದರ್ಶನ ಸಹಕರಿಯಾಗಿದೆ. ಜೊತೆಗೆ ಬಾಲ್ಯದಲ್ಲಿ ಎದುರಾದ ಕಷ್ಟಗಳು ಆಕೆಯನ್ನು ಮಾನಸಿಕವಾಗಿ ಗಟ್ಟಿಯಾಗಿಸಿದೆ ಎಂದು ಹೇಳಬಹುದು.

  • ಪ್ರೀತಿಗೆ ಅಂಗವೈಕಲ್ಯ ಅಡ್ಡಬಾರದು :- 3 ಅಡಿ ಎತ್ತರದ ಯುವಕನ  ಕೈ ಹಿಡಿದ 5 ಅಡಿ ಯುವತಿ..!

    ಪ್ರೀತಿಗೆ ಅಂಗವೈಕಲ್ಯ ಅಡ್ಡಬಾರದು :- 3 ಅಡಿ ಎತ್ತರದ ಯುವಕನ ಕೈ ಹಿಡಿದ 5 ಅಡಿ ಯುವತಿ..!

    ಆಂದ್ರಪ್ರದೇಶ: ಪ್ರೀತಿ ಕುರುಡು ಎನ್ನುತ್ತಾರೆ, ಆದರೆ ಆಂಧ್ರಪ್ರದೇಶದ ಈ ಜೋಡಿ ಪ್ರೀತಿ ಎಂದರೆ ಕೇವಲ ಬಾಹ್ಯ ಸೌಂದರ್ಯವಲ್ಲ, ಅದು ಎರಡು ಶುದ್ಧ ಮನಸ್ಸುಗಳ ಮಿಲನ ಎಂಬುದನ್ನು ಜಗತ್ತಿಗೆ ಸಾರಿದ್ದಾರೆ. ಸಮಾಜದ ಹಂಗು, ಧರ್ಮದ ಬೇಲಿ ಮತ್ತು ದೈಹಿಕ ವ್ಯತ್ಯಾಸಗಳನ್ನು ಬದಿಗೊತ್ತಿ, 5 ಅಡಿ ಎತ್ತರದ ಯುವತಿ 3 ಅಡಿ ಎತ್ತರದ ಯುವಕನ ಕೈಹಿಡಿದು ಅಚ್ಚರಿ ಮೂಡಿಸಿದ್ದಾಳೆ.

    9ನೇ ತರಗತಿಯಲ್ಲೇ ಶುರುವಾಗಿತ್ತು ಇವರ ಲವ್ ಸ್ಟೋರಿ!
    ಕೃಷ್ಣಾ ಜಿಲ್ಲೆ, ರಾಜುಪೇಟೆಯ ವೇಮುಲ ಶಶಿ ಮತ್ತು ಅದೇ ಭಾಗದ ಮುಸ್ಲಿಂ ಸಮುದಾಯದ ಯುವತಿಯ ಪ್ರೇಮಕಥೆ ಯಾವುದೋ ಸಿನಿಮಾ ಸ್ಕ್ರಿಪ್ಟ್‌ಗಿಂತ ಕಡಿಮೆಯೇನಿಲ್ಲ. ಇವರಿಬ್ಬರ ಸ್ನೇಹ ಆರಂಭವಾಗಿದ್ದು 9ನೇ ತರಗತಿಯಲ್ಲಿ. ಶಾಲಾ ದಿನಗಳ ಆ ಪುಟ್ಟ ಸ್ನೇಹ ಬೆಳೆದು ದೊಡ್ಡ ಪ್ರೇಮವಾಗಿ ಮಾರ್ಪಟ್ಟಿತ್ತು. ಶಶಿ ಶಾರೀರಿಕವಾಗಿ ಕುಳ್ಳಗಿದ್ದರೂ (Dwarf), ಆತನ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಯುವತಿ ಮನಸೋತಿದ್ದರು.

    ಧರ್ಮ ಮತ್ತು ದೈಹಿಕ ಸ್ಥಿತಿಯ ಸವಾಲು:
    ಈ ಜೋಡಿಯ ಮದುವೆಗೆ ಎರಡು ದೊಡ್ಡ ಅಡೆ ತಡೆಗಳಿದ್ದವು. ಒಂದು ಧರ್ಮದ ಭಿನ್ನತೆ, ಮತ್ತೊಂದು ಶಶಿಯ ದೈಹಿಕ ಎತ್ತರ. “ನೋಡಲು ಸುಂದರವಾಗಿರುವ ನೀನು, ಈ ಕುಳ್ಳಗಿರುವವನನ್ನು ಮದುವೆಯಾದರೆ ಸಮಾಜ ಏನೆಂದುಕೊಂಡೀತು?” ಎಂದು ಮನೆಯವರು ಮತ್ತು ಸಂಬಂಧಿಕರು ತೀವ್ರವಾಗಿ ವಿರೋಧಿಸಿದ್ದರು. ಆದರೆ, “ನನಗೆ ಆತನ ರೂಪ ಮುಖ್ಯವಲ್ಲ, ಗುಣವೇ ಮುಖ್ಯ” ಎಂದು ಪಟ್ಟು ಹಿಡಿದ ಮುಸ್ಲಿಂ ಯುವತಿ ಎಲ್ಲರ ವಿರೋಧದ ನಡುವೆಯೂ ಹಿಂದೂ ಶಶಿಯನ್ನೇ ಜೀವನ ಸಂಗಾತಿಯನ್ನಾಗಿ ಆರಿಸಿಕೊಂಡಿದ್ದಾರೆ.

    ಪ್ರಾಣಭಯದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ ನವಜೋಡಿ:
    ಮನೆಯವರ ವಿರೋಧ ಹೆಚ್ಚಾದಾಗ ಮತ್ತು ಪ್ರಾಣಭಯ ಎದುರಾದಾಗ, ಈ ಜೋಡಿ ಗುಟ್ಟಾಗಿ ಮದುವೆಯಾಗಲು ನಿರ್ಧರಿಸಿದರು. ಮದುವೆಯಾದ ಬಳಿಕ ರಕ್ಷಣೆ ಕೋರಿ ಮಚಲಿಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ತಮಗೆ ಕುಟುಂಬದವರಿಂದ ಅಪಾಯವಿರುವುದಾಗಿ ತಿಳಿಸಿ, ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

    ವಿವರಗಳು:
    ವರನ ಎತ್ತರ: 3 ಅಡಿ (ವೇಮುಲ ಶಶಿ – ಜಿಲ್ಲಾ ನ್ಯಾಯಾಲಯದ ಗುತ್ತಿಗೆ ನೌಕರ).
    ವಧುವಿನ ಎತ್ತರ: 5 ಅಡಿ (ಮೆಡಿಕಲ್ ಶಾಪ್ ಉದ್ಯೋಗಿ).

    ಹಿನ್ನೆಲೆ: 9ನೇ ತರಗತಿಯಿಂದಲೇ ಪ್ರೀತಿಸುತ್ತಿದ್ದ ಜೋಡಿ.

    ವಿಶೇಷತೆ: ಧರ್ಮ ಮತ್ತು ದೈಹಿಕ ನ್ಯೂನತೆಯನ್ನು ಮೀರಿ ಒಂದಾದ ನೈಜ ಪ್ರೇಮಿಗಳು.
    “ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಗುಣವೇ ಮಿಗಿಲು” ಎಂಬುದನ್ನು ಈ ಯುವತಿ ಸಾಬೀತುಪಡಿಸಿದ್ದಾಳೆ.

    ಇಂದಿನ ಆಧುನಿಕ ಜಗತ್ತಿನಲ್ಲಿ ಇವರದ್ದು ನಿಜಕ್ಕೂ ಮಾದರಿ ಪ್ರೇಮ.” – ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ.

    ಸದ್ಯ ಈ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಕೇವಲ ರೂಪ ನೋಡಿ ಪ್ರೀತಿಸುವವರಿಗೆ ಇವರ ಕಥೆ ಒಂದು ದೊಡ್ಡ ಪಾಠದಂತಿದೆ. ದೈಹಿಕ ನ್ಯೂನತೆ ಪ್ರೀತಿಗೆ ಎಂದೂ ಅಡ್ಡಿಯಾಗದು ಎಂದು ಈ ಜೋಡಿ ನಗುನಗುತ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

  • ಏ.12ರಂದು ಈ ಸ್ಥಳಗಳಲ್ಲಿ ವಿದ್ಯುತ್ ಸ್ಥಗಿತ

    ಏ.12ರಂದು ಈ ಸ್ಥಳಗಳಲ್ಲಿ ವಿದ್ಯುತ್ ಸ್ಥಗಿತ

    ದೊಡ್ಡಬಳ್ಳಾಪುರ: ಕೆಐಎಡಿಬಿ ಉಪ ವಿದ್ಯುತ್‌ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು ನಡೆಯುವುದರಿಂದ ಸದರಿ ಈ ಮಾರ್ಗದಲ್ಲಿ ಏ.12ರಂದು ಬೆಳಿಗ್ಗೆ 10:00 ಗಂಟೆ ಇಂದ ಮದ್ಯಾಹ್ನ 02:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕೆಂದು ಬೆಸ್ಕಾಂ ಅ್ದಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯರಸ್ತೆ,, ಸಂಜಯ್‌ ನಗರ, ಭುವನೇಶ್ವರಿನಗರ, ಚೈತನ್ಯನಗರ, ತೇರಿನ ಬೀದಿ, ರಂಗಪ್ಪ ಸರ್ಕಲ್, ಕೆಸಿಪಿ ಸರ್ಕಲ್, ವೀರಾಪುರ, ಗಾಂಧಿನಗರ, ಖಾಸ್‌ಬಾಗ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  • ಸೆಲ್ಫಿ ಕ್ರೇಜ್‌ಗೆ 3 ಬಾಲಕಿಯರು ಬಲಿ: ನೀರಿನಲ್ಲಿ ಮುಳುಗಿದ ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ.!

    ಸೆಲ್ಫಿ ಕ್ರೇಜ್‌ಗೆ 3 ಬಾಲಕಿಯರು ಬಲಿ: ನೀರಿನಲ್ಲಿ ಮುಳುಗಿದ ಕೊನೆಕ್ಷಣ ಕ್ಯಾಮರಾದಲ್ಲಿ ಸೆರೆ.!

    ಆಂಧ್ರಪ್ರದೇಶದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಜಲಪಾತವೊಂದರಲ್ಲಿ ಮೂವರು ಹದಿಹರೆಯದ ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಫೋಟೋ ತೆಗೆಯುತ್ತಿದ್ದಾಗ ಬಂಡೆಯಿಂದ ಆಯತಪ್ಪಿ ನೀರಿಗೆ ಬಿದ್ದು ಈ ದುರಂತ ಸಂಭವಿಸಿದ್ದು, ಅವರ ಕೊನೆಯ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ.

    ಇಲ್ಲಿನ ಹುಕುಂಪೇಟ ಮಂಡಲದ ಬುರ್ಜಾ ಪಂಚಾಯತ್‌ ಬಳಿಯ ಮುಲ್ಲುನ್ಗುಮ್ಮಿ ಎಂಬ ಜಲಪಾತದ ಬಳಿ ಈ ದುರಂತ ಸಂಭವಿಸಿದೆ. ರಜಾ ದಿನವಾಗಿದ್ದರಿಂದ ಜಂಬವಲಸಾ ಗ್ರಾಮದ ಐವರು ಹುಡುಗಿಯರು ಈ ಜಲಪಾತವನ್ನು ನೋಡುವುದಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ನೀರಿನಲ್ಲಿ ಈಜಾಡುತ್ತಾ ಎಂಜಾಯ್ ಮಾಡುತ್ತಿದ್ದಾಗ ಫೋಟೋ ಕ್ಲಿಕ್ಕಿಸಲು ಮುಂದಾಗಿದ್ದು, ಇದೇ ವೇಳೆ ಈ ದುರಂತ ಸಂಭವಿಸಿದೆ.
    ಪೊಲೀಸರ ಪ್ರಕಾರ, ಈ ಹುಡುಗಿಯರು ಸೇತುವೆಯ ಬಳಿಯೇ ಫೋಟೋ ಹಾಗೂ ಸೆಲ್ಫಿ ವೀಡಿಯೋ ಮಾಡಿದ್ದಾರೆ. ಬಳಿಕ ಐವರಲ್ಲಿ ಮೂವರು ಹುಡುಗಿಯರು ಜಲಪಾತದ ಮಧ್ಯೆ ಇರುವ ದೊಡ್ಡ ಬಂಡೆಯೊಂದನ್ನು ಏರಿದ್ದಾರೆ. ಇದೇ ವೇಳೆ ಅವರು ಅಲ್ಲಿಂದ ಆಯತಪ್ಪಿ ನೀರಿಗೆ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಹೋಗಿದ್ದಾರೆ.

    ಅಲ್ಲಿದ್ದ ಸ್ಥಳೀಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ ನೀರಿನ ಹರಿವಿನ ರಭಸಕ್ಕೆ ಸಿಲುಕಿ ಯುವತಿಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಅವರ ಮೃತದೇಹಗಳನ್ನು ನಂತರ ನೀರಿನಿಂದ ಮೇಲೆತ್ತಲಾಗಿದೆ. ಹೀಗೆ ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ಹರೆಯದ ಬಾಲಕಿಯರನ್ನು 17 ವರ್ಷದ ತ್ರಿಶಾ 16 ವರ್ಷದ ರತ್ನಕುಮಾರಿ, ಹಾಗೂ 16 ವರ್ಷದ ಪವಿತ್ರಾ ಎಂದು ಗುರುತಿಸಲಾಗಿದೆ. ಉಳಿದಿಬ್ಬರು ಯುವತಿಯರು ಸುರಕ್ಷಿತವಾಗಿದ್ದಾರೆ.

    ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಈ ಘಟನೆ ಈಗ ಸ್ಥಳೀಯರಲ್ಲಿ ತೀವ್ರ ಕಳವಳ ಮೂಡಿಸಿದೆ. ಘಟನೆ ನಡೆದ ಸ್ಥಳವು ಅಲ್ಲುರಿ ಜಿಲ್ಲೆಯಲ್ಲಿ ಬರುವ ಅತೀ ಸುಂದರವಾದ ಜಲಪಾತವಾಗಿದ್ದು, ಸುಂದರವಾದ ನೈಸರ್ಗಿಕ ದೃಶ್ಯಗಳಿಂದ ಗಮನ ಸೆಳೆಯುತ್ತಿದೆ. ಇಲ್ಲಿ ಈ ಹಿಂದೆಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದಂತಹ ಹಲವು ಘಟನೆಗಳು ನಡೆದಿದ್ದವು.

  • ಪಿಯುಸಿ ಫಲಿತಾಂಶ ದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ: ತಾಯಿಯ ವಿರುದ್ಧ ಸಂಬಂಧಿಕರ ಆರೋಪ!

    ಪಿಯುಸಿ ಫಲಿತಾಂಶ ದಿನವೇ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಶವ ಪತ್ತೆ: ತಾಯಿಯ ವಿರುದ್ಧ ಸಂಬಂಧಿಕರ ಆರೋಪ!

    ಬೆಂಗಳೂರು: ದ್ವೀತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣ ಮನನೊಂದ 17 ವರ್ಷದ ವಿದ್ಯಾರ್ಥಿನಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಾಳದ ಮನೋರಾಯನಪಾಳ್ಯದಲ್ಲಿರುವ ನಡೆದಿದೆ.

    ಮೃತ ವಿದ್ಯಾರ್ಥಿನಿಯನ್ನು ತನುಶ್ರೀ ಎಂದು ಗುರುತಿಸಲಾಗಿದೆ.
    ಈಕೆ ನಗರದ ಖಾಸಗಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರು.ಮೃತ ತನುಶ್ರೀ ಖಾಸಗಿ ಕಾಲೇಜೊಂದರಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದರು. ಗುರುವಾರ ಫಲಿತಾಂಶ ಬಂದಾಗ ತನುಶ್ರೀ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರು. ಅವರ ತಾಯಿ ಆಶಾ ಕೆಲಸಕ್ಕೆ ಹೋಗಿದ್ದರಿಂದ ತನುಶ್ರೀ ಒಬ್ಬರೇ ಇದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಅವರು, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

    ಫಲಿತಾಂಶದ ವಿಚಾರವಾಗಿ ತನುಶ್ರೀ ತನ್ನ ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿದ್ದರು. ಅವರು ಒಬ್ಬರೇ ಇದ್ದಿದ್ದರಿಂದ ಸ್ನೇಹಿತರು ತಮ್ಮ ಬಳಿ ಬರುವಂತೆ ಒತ್ತಾಯಿಸಿದ್ದರು. ಆದರೆ, ಬಳಿಕ ತನುಶ್ರೀ ಕರೆ ಹಾಗೂ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಿಲ್ಲ. ಅನುಮಾನಗೊಂಡ ಸ್ನೇಹಿತರು ಮನೆಗೆ ಧಾವಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ತನುಶ್ರೀ ಸಾವಿನ ಹಿಂದೆ ಅನುಮಾನ:
    ತನುಶ್ರೀ ಸಾವು ನಾನಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ತಾಯಿಯ ಅನೈತಿಕ ಸಂಬಂಧಕ್ಕೆ ಅಪ್ರಾಪ್ತ ಮಗಳ ಬಲಿಯಾಗಿದ್ದಾಳೆ. ಪಿಯುಸಿ ರಿಸಲ್ಟ್ ದಿನವೇ ಮಗಳಿಗೆ ಮುಹೂರ್ತವಿಟ್ಟು ಕೊಲೆ ಮಾಡಿದ್ದಾರೆ ಎಂದು ತನುಶ್ರೀ ತಂದೆಯ ಕಡೆಯ ಸಂಬಂಧಿಕರು ಆರೋಪ ಮಾಡಿದ್ದಾರೆ. ಈ ಹಿಂದೆ ತನುಶ್ರೀ ತಂದೆ ಕೂಡ ಹೆಂಡ್ತಿಯ ಅನೈತಿಕ ಸಂಬಂಧ ಗೊತ್ತಾಗಿಯೇ ಮೃತಪಟ್ಟಿದ್ದರು ಎಂದು ಆರೋಪಿಸಲಾಗಿದೆ.

    ತನುಶ್ರೀ ತಂದೆ 2 ವರ್ಷದ ಹಿಂದೆ ಮೃತಪಟ್ಟಿದ್ದರು. ತನುಶ್ರೀ ತನ್ನ ತಾಯಿಯೊಂದಿಗೆ ವಾಸವಾಗಿದ್ದಳು.ಮಗಳ ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ತಂದೆ ಸಂಬಂಧಿಕರು, ಇದೊಂದು ಆತ್ಮಹತ್ಯೆಯಲ್ಲ, ಇದರಲ್ಲಿ ತಾಯಿಯ ಪಾತ್ರವಿದೆ ಎಂದು ಆರೋಪಿಸಿದ್ದಾರೆ. ಬಾಲಕಿಯ ದೇಹದ ಮೇಲೆ ಗಾಯದ ಗುರುತುಗಳಿವೆಯೆಂದು ಸಂಬಂಧಿಕರು ದೂರಿದ್ದಾರೆ.ಫಲಿತಾಂಶ ಬಂದ ನಂತರ ತಾಯಿ ಮತ್ತು ಮಗಳ ನಡುವೆ ಜಗಳ ನಡೆದಿರಬಹುದು ಅಥವಾ ಮಗಳನ್ನು ಕೊಲೆ ಮಾಡಿ ಆತ್ಮಹತ್ಯೆಯ ನಾಟಕವಾಡಲಾಗುತ್ತಿದೆ ಎಂಬುದು ತಂದೆಯ ಕಡೆಯವರ ಗಂಭೀರ ಆರೋಪವಾಗಿದೆ.

    ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬಾಲಕಿಯ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಯ ನಂತರವಷ್ಟೇ ಇದು ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಸತ್ಯಾಂಶ ಹೊರಬರಬೇಕಿದೆ.

  • ತಂದೆಯ ಮದುವೆಗೂ ಮೊದಲೇ ಶುರುವಾಗಿತ್ತು ನನ್ನ ಕ್ರಿಕೆಟ್ ಕನಸು..

    ತಂದೆಯ ಮದುವೆಗೂ ಮೊದಲೇ ಶುರುವಾಗಿತ್ತು ನನ್ನ ಕ್ರಿಕೆಟ್ ಕನಸು..

    ಯುಪಿ ವಿರುದ್ಧ ನಡೆದ ಅಂಡರ್-19 ಪಂದ್ಯವೊಂದು ನನ್ನ ಲಕ್ ಬದಲಿಸಿತು. ಅದೊಂದು ಲೋ ಸ್ಕೋರಿಂಗ್ ಮ್ಯಾಚ್ ಆಗಿದ್ದರೂ ನಾನು ರನ್ ಗಳಿಸಿದ್ದೆ. ಆ ಕ್ಷಣದಲ್ಲಿ ನನ್ನ ಮಗ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ನನ್ನ ತಂದೆಗೆ ನಂಬಿಕೆ ಬಂದಿತು ಎಂದಿದ್ದಾರೆ.

    ಕೊನೆಯ ಓವರ್‌ಗಳಲ್ಲಿ ಎದುರಾದ ಒತ್ತಡದ ಬಗ್ಗೆ ಮಾತನಾಡಿದ ಅವರು, ಒತ್ತಡ ಯಾವಾಗಲೂ ಇರುತ್ತದೆ. ಆದರೆ ದೇವರು ನಮಗೆ ಇದೊಂದು ಅವಕಾಶ ನೀಡಿದ್ದಾನೆ ಎಂದು ನಾನು ಭಾವಿಸುತ್ತೇನೆ. ನಾನು ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದರೆ ಪಂದ್ಯ ಗೆಲ್ಲಿಸಬಹುದು ಎಂಬ ನಂಬಿಕೆ ನನಗಿತ್ತು. ನನ್ನ ಏರಿಯಾಗೆ ಬಾಲ್ ಬಂದರೆ ಸಿಕ್ಸ‌ರ್ ಎತ್ತುವುದು ಒಂದೇ ನನ್ನ ಪ್ಲಾನ್ ಆಗಿತ್ತು ಎಂದು ತಮ್ಮ ಬ್ಯಾಟಿಂಗ್ ಗುಟ್ಟು ಬಿಟ್ಟುಕೊಟ್ಟರು.

    ನನ್ನ ಕ್ರಿಕೆಟ್ ಪಯಣ ನಿಜವಾಗಿ ಶುರುವಾಗಿದ್ದು ನನ್ನ ತಂದೆಯ ಮದುವೆಗೂ ಮೊದಲು.ನನ್ನ ಮಗ ಕ್ರಿಕೆಟಿಗನಾಗಬೇಕು ಎಂಬುದು ಅವರ ದೊಡ್ಡ ಕನಸಾಗಿತ್ತು. ಆರಂಭದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಅಷ್ಟೇನು ಚೆನ್ನಾಗಿರಲಿಲ್ಲ. ಆದರೂ ನನ್ನ ಕನಸಿಗೆ ತಂದೆ ನೀರೆರೆದರು ಎಂದು ಸ್ಮರಿಸಿದ್ದಾರೆ.ರಾಜಸ್ಥಾನದ ಜುಂಜುನು ಎಂಬ ಸಣ್ಣ ಜಿಲ್ಲೆಯವರಾದ ಮುಕುಲ್, 12-13ನೇ ವಯಸ್ಸಿನಲ್ಲಿ ಕ್ರಿಕೆಟ್ ಆರಂಭಿಸಿದರು. ಸ್ಥಳೀಯವಾಗಿ ಉತ್ತಮ ಅಕಾಡೆಮಿಗಳಿಲ್ಲದ ಕಾರಣ ಜೈಪುರಕ್ಕೆ ಸ್ಥಳಾಂತರಗೊಂಡರು.ಟಿ20 ಕ್ರಿಕೆಟ್‌ನ ವೇಗಕ್ಕೆ ಹೊಂದಿಕೊಳ್ಳಲು ಗುರಗಾಂವ್‌ನಲ್ಲಿ ತಿಂಗಳುಗಟ್ಟಲೆ ಕಠಿಣ ಅಭ್ಯಾಸ ನಡೆಸಿದ್ದನ್ನು ನೆನಪಿಸಿಕೊಂಡಿದ್ದಾರೆ.

    ಸೋಲಿನ ದವಡೆಯಲ್ಲಿದ್ದ ಎಲ್‌ಎಸ್‌ಜಿಗೆ ಮುಕುಲ್ ಆಸರೆ: 
    ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ 182 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ಲಕ್ನೋ ತಂಡ ಒಂದು ಹಂತದಲ್ಲಿ 16 ಓವರ್‌ಗಳಲ್ಲಿ 128 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕ್ರೀಸ್‌ನಲ್ಲಿ ಯಾವುದೇ ಅನುಭವಿ ಬ್ಯಾಟರ್‌ಗಳಿಲ್ಲದ ಕಾರಣ ಕೆಕೆಆರ್ ಸುಲಭವಾಗಿ ಗೆಲ್ಲಲಿದೆ ಎಂದೇ ಭಾವಿಸಲಾಗಿತ್ತು. ಆದರೆ, 17ನೇ ಓವರ್‌ನಿಂದ ಶುರುವಾಗಿದ್ದೇ ಮುಕುಲ್ ಚೌಧರಿ ಎಂಬ ಯುವ ವೇಗಿಯ ಅಬ್ಬರ.ಕೇವಲ 27 ಎಸೆತಗಳನ್ನು ಎದುರಿಸಿದ ಮುಕುಲ್, 7 ಭರ್ಜರಿ ಸಿಕ್ಸರ್ ಹಾಗೂ 2 ಬೌಂಡರಿಗಳ ನೆರವಿನಿಂದ ಅಜೇಯ 54 ರನ್ ಸಿಡಿಸಿದರು. ಅಂತಿಮ ಎಸೆತದಲ್ಲಿ ಗೆಲುವಿನ ರನ್ ಬಾರಿಸಿದ ಬಳಿಕ ಮುಕುಲ್ ಆಕಾಶದತ್ತ ನೋಡಿ ದೇವರಿಗೆ ಧನ್ಯವಾದ ಅರ್ಪಿಸಿದ ರೀತಿ ಮತ್ತು ಅವರ ಸಂಭ್ರಮಾಚರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಗೆಲುವಿನ ಶ್ರೇಯವನ್ನು ಅವರು ತಮ್ಮ ನೆಚ್ಚಿನ ಆಟಗಾರ ಎಂ.ಎಸ್‌ ಧೋನಿಗೆ ಅರ್ಪಿಸಿದರು.

    ಈ ಅದ್ಭುತ ಬ್ಯಾಟಿಂಗ್ ನಂತರ, ಮುಕುಲ್ ಅವರು ಎಂಎಸ್ ಧೋನಿಯಿಂದ ಸ್ಫೂರ್ತಿ ಪಡೆದಿರುವುದಾಗಿ ಬಹಿರಂಗಪಡಿಸಿದರು. “ಎಂಎಸ್ ಧೋನಿ ಪಂದ್ಯಗಳನ್ನು ಹೇಗೆ ಮುಗಿಸುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೆ. ನಾನು ಧೋನಿಯಂತೆ ಬ್ಯಾಟಿಂಗ್ ಮಾಡುತ್ತೇನೆ. ಅವರು ನನ್ನ ವೃತ್ತಿಜೀವನದ ಆರಂಭದಲ್ಲಿ ನನಗೆ ಸ್ಫೂರ್ತಿ ನೀಡಿದರು. ಈ ಗೆಲುವಿನ ಇನಿಂಗ್ಸ್‌ ಅವರಿಗೆ ಅರ್ಪಿಸುತ್ತೇನೆ” ಎಂದು ಪಂದ್ಯದ ಬಳಿಕ ಚೌಧರಿ ಹೇಳಿದರು.