Blog

  • SSLC Result:ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ.

    SSLC Result:ನಾಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ.

    ಬೆಂಗಳೂರು: ರಾಜ್ಯದ ಲಕ್ಷಾಂತರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಯುತ್ತಿದ್ದ ಫಲಿತಾಂಶಕ್ಕೆ ಅಂತಿಮವಾಗಿ ಮುಹೂರ್ತ ನಿಗದಿಯಾಗಿದೆ. ತೃತೀಯ ಭಾಷೆ (ಹಿಂದಿ) ಅಂಕಗಳ ಹಂಚಿಕೆ ವಿಚಾರವಾಗಿ ಸೃಷ್ಟಿಯಾಗಿದ್ದ ಕಾನೂನು ಗೊಂದಲಗಳಿಗೆ ತೆರೆಬಿದ್ದಿದ್ದು, ಗುರುವಾರ ಮಧ್ಯಾಹ್ನ 12 ಗಂಟೆಗೆ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲಿದೆ.

    ಕೋರ್ಟ್ ಆದೇಶದಿಂದ ಫಲಿತಾಂಶ ವಿಳಂಬವಾಗಬಹುದು ಎಂಬ ಆತಂಕ ಪೋಷಕರಲ್ಲಿತ್ತು. ಆದರೆ ಇದಕ್ಕೆ ತೆರೆ ಎಳೆದಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಮಧ್ಯಾಹ್ನ 12 ಗಂಟಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆಯಾಗಲಿದೆ.

    ಯಾವುದೇ ತಾಂತ್ರಿಕ ಅಡ್ಡಿಯಿಲ್ಲ “ಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಈ ವರ್ಷದಿಂದಲೇ ಅಂಕ ನೀಡುವ ಪದ್ಧತಿ ಜಾರಿಯಾಗಿದ್ದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಈ ಕುರಿತು ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಲಾಗಿದೆ. ಅವರ ಸೂಚನೆಯ ಮೇರೆಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಎಸ್ ಎಸ್ ಎಲ್ ಪರೀಕ್ಷೆ 1ರ ಫಲಿತಾಂಶ ಪ್ರಕಟಿಸುವುದಾಗಿ ” ಎಂದು ಸಚಿವರು ತಿಳಿಸಿದ್ದಾರೆ.

    ಫಲಿತಾಂಶ ವೀಕ್ಷಿಸುವುದು ಹೇಗೆ? (ಹಂತ-ಹಂತದ ಮಾಹಿತಿ)
    ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಈ ಕೆಳಗಿನ ಸರಳ ಹಂತಗಳ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು:

    ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:karresults.nic.in ಅಥವಾ kseab.karnataka.gov.in.
    ಲಿಂಕ್ ಆಯ್ಕೆ ಮಾಡಿ: ಮುಖಪುಟದಲ್ಲಿ ಕಾಣುವ ‘SSLC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
    ಮಾಹಿತಿ ನಮೂದಿಸಿ: ನಿಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕವನ್ನು (DOB) ಸರಿಯಾಗಿ ನಮೂದಿಸಿ.
    ಸಲ್ಲಿಸಿ: ‘Submit’ ಬಟನ್ ಒತ್ತಿರಿ.
    ಅಂಕಪಟ್ಟಿ ಪಡೆಯಿರಿ: ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಮೂಡುತ್ತದೆ. ಮುಂದಿನ ದಾಖಲೆಗಾಗಿ ಅದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
    ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು: ವೆಬ್‌ಸೈಟ್ ಮಾತ್ರವಲ್ಲದೆ, ವಿದ್ಯಾರ್ಥಿಗಳು DigiLocker ಮತ್ತು KarnatakaOne ಅಪ್ಲಿಕೇಶನ್ ಮೂಲಕವೂ ಫಲಿತಾಂಶವನ್ನು ಪಡೆಯಬಹುದಾಗಿದೆ.

  • ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಾಶ್ರೀ ವರ್ಗಾವಣೆ ಮಾಡಿ ಸರ್ಕಾರ ಆದೇಶ!

    ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಾಶ್ರೀ ವರ್ಗಾವಣೆ ಮಾಡಿ ಸರ್ಕಾರ ಆದೇಶ!

    ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಶ್ರೀ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಇವರ ಸ್ಥಳಕ್ಕೆ ಮಂಜುನಾಥ್ ಟಿ.ಆರ್ ಕೆ.ಎ.ಎಸ್ ಅವರನ್ನು ನೇಮಿಸಿದೆ.

    ಕಳೆದ ಎರಡು ವರ್ಷಗಳಿಂದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದುರ್ಗಶ್ರೀ ಕೆ.ಎ.ಎಸ್ (ಕಿರಿಯ ಶ್ರೇಣಿ) ಇವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

    ಈ ಆದೇಶ ಪತ್ರದಲ್ಲಿ  ಮಂಜುನಾಥ್ ಅವರನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾವಣೆ ಮಾಡುವ ಮೊದಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಕೆ ಸ್ಥಳ ನಿಯುಕ್ತಿ ಮಾಡಿ ಆದೇಶಿಸಲಾಗಿತ್ತು, ಬಳಿಕ ದೊಡ್ಡಬಳ್ಳಾಪುರ ಉಪವಿಭಾಗ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

  • ತಂಗಿ ತಂಗಿ ಎಂದವ ಜೊತೆ ಸ್ನೇಹಿತನ ಹೆಂಡತಿ ಜೊತೆ ಪರಾರಿ : ಮಂಡ್ಯದಲ್ಲಿ ವಿಚಿತ್ರ ಪ್ರೇಮ ಪುರಾಣ!

    ತಂಗಿ ತಂಗಿ ಎಂದವ ಜೊತೆ ಸ್ನೇಹಿತನ ಹೆಂಡತಿ ಜೊತೆ ಪರಾರಿ : ಮಂಡ್ಯದಲ್ಲಿ ವಿಚಿತ್ರ ಪ್ರೇಮ ಪುರಾಣ!

    ಮಂಡ್ಯ: ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಪತ್ನಿಯೊಬ್ಬಳು ತನ್ನ ಗಂಡನಿಗೆ ಕೈ ಕೊಟ್ಟು, ಆತನ ಆಪ್ತ ಸ್ನೇಹಿತನ ಜೊತೆಯೇ ಓಡಿ ಹೋಗಿ ಎರಡನೇ ಮದುವೆಯಾಗಿರುವ ವಿಲಕ್ಷಣ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ.

    ನಡೆದಿದ್ದೇನು?
    ಬನ್ನಂಗಾಡಿಯ ಆಟೋ ಚಾಲಕ ಸಾಗರ್ ಮತ್ತು ಹರವು ಗ್ರಾಮದ ರಕ್ಷಿತಾ ಕಳೆದ 4-5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೂ ರಕ್ಷಿತಾ ಪಟ್ಟು ಹಿಡಿದು ಸಾಗರ್‌ನನ್ನು ಮದುವೆಯಾಗಿದ್ದಳು. ಆದರೆ, ಈ ಸುಂದರ ಸಂಸಾರಕ್ಕೆ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದು ಸಾಗರ್‌ನ ಬೆಸ್ಟ್ ಫ್ರೆಂಡ್ ಇಂದ್ರ.

    ‘ತಂಗಿ’ ತಂಗಿ ಎಂದವನೇ ತಾಳಿ ಕಟ್ಟಿದ!

    ಇಂದ್ರ ಕೂಡ ಆಟೋ ಚಾಲಕನಾಗಿದ್ದು, ಸಾಗರ್‌ನ ಆತ್ಮೀಯ ಗೆಳೆಯನಾಗಿದ್ದ. ಸಾಗರ್ ಮನೆಗೆ ಹೋದಾಗಲೆಲ್ಲ ರಕ್ಷಿತಾಳನ್ನು “ನನಗೆ ತಂಗಿ ಇಲ್ಲ, ಇವಳೇ ನನ್ನ ತಂಗಿ” ಎಂದು ಎಲ್ಲರ ಮುಂದೆ ನಾಟಕವಾಡುತ್ತಿದ್ದ. ಕಳೆದ ರಕ್ಷಾಬಂಧನದಂದು ಶುಭಕೋರಿ ಅಣ್ಣ-ತಂಗಿಯ ಸಂಬಂಧದ ನಟನೆ ಮಾಡಿದ್ದ ಇಂದ್ರ, ಅಸಲಿಗೆ ರಕ್ಷಿತಾಳೊಂದಿಗೆ ಒಳಗೊಳಗೆ ಪ್ರೇಮ ಸಲ್ಲಾಪ ನಡೆಸುತ್ತಿದ್ದ.

    ಒಡವೆ, ಹಣದೊಂದಿಗೆ ಪರಾರಿ…

    ಇತ್ತೀಚೆಗೆ ರಕ್ಷಿತಾ ಮನೆಯಲ್ಲಿದ್ದ 22 ಗ್ರಾಂ ಚಿನ್ನದ ಒಡವೆ ಮತ್ತು 1 ಲಕ್ಷ ರೂಪಾಯಿ ನಗದು ಹಣವನ್ನು ತೆಗೆದುಕೊಂಡು ಇಂದ್ರನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಅಷ್ಟೇ ಅಲ್ಲದೆ, ಅವರಿಬ್ಬರು ಮದುವೆಯಾಗಿರುವ ಫೋಟೋ ಕಂಡು ಸಾಗರ್ ಕಂಗಾಲಾಗಿದ್ದಾನೆ.

    “ಪ್ರೀತಿಸಿ ಮದುವೆಯಾದವಳು ಹೀಗೆ ದ್ರೋಹ ಮಾಡ್ತಾಳೆ ಅಂದುಕೊಂಡಿರಲಿಲ್ಲ. ನನಗೆ ನ್ಯಾಯ ಬೇಕು, ಅವಳಿಂದ ವಿಚ್ಛೇದನ ಕೊಡಿಸಿ ಮತ್ತು ನನ್ನ ಹಣ-ಒಡವೆ ವಾಪಸ್ ಕೊಡಿಸಿ” ಎಂದು ಸಾಗರ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಬಾಟಮ್ ಲೈನ್: ಕಷ್ಟ ಕಾಲದಲ್ಲಿ ಜೊತೆಗಿರಬೇಕಾದ ಸ್ನೇಹಿತನೇ ಬೆನ್ನಿಗೆ ಚೂರಿ ಹಾಕಿದ್ದು, ಅಣ್ಣ-ತಂಗಿ ಸಂಬಂಧಕ್ಕೂ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ರಾಷ್ಟ್ರೀಯ ಜನಗಣತಿ-2027ರ ಗಣತಿದಾರರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಉಳ್ಳವರಿಗೆ ಸುವರ್ಣ ಅವಕಾಶ: ನೇರ ಸಂದರ್ಶನಕ್ಕೆ ಆಹ್ವಾನ-ಡಿ.ಎಸ್.ರಮೇಶ್

    ರಾಷ್ಟ್ರೀಯ ಜನಗಣತಿ-2027ರ ಗಣತಿದಾರರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಉಳ್ಳವರಿಗೆ ಸುವರ್ಣ ಅವಕಾಶ: ನೇರ ಸಂದರ್ಶನಕ್ಕೆ ಆಹ್ವಾನ-ಡಿ.ಎಸ್.ರಮೇಶ್



    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಜನಗಣತಿ-2027ರ ಮೊದಲನೇ ಹಂತದ ಕಾರ್ಯವಾದ ಮನೆ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಹಾಗೂ ಫೆಬ್ರವರಿ 2027ರಲ್ಲಿನ 2ನೇ ಹಂತದ ಜನಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಹಾಗೂ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಉದ್ದೇಶ ಹೊಂದಿದ್ದು, ರಾಷ್ಟ್ರೀಯ ಮಹತ್ವದ ಈ ಕಾರ್ಯ ನಿರ್ವಹಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸುವ ಸಲುವಾಗಿ ಗಣತಿ ಕಾರ್ಯ ನಿರ್ವಹಿಸಲು ಆಸಕ್ತ ವಿದ್ಯಾರ್ಥಿಗಳು,ಸ್ವಯಂ ಸೇವಕರು, ಪುರುಷರು ಹಾಗೂ ಮಹಿಳೆಯರು ನೇರ ಸಂದರ್ಶನಕ್ಕೆ ಹಾಜರಾಗುವಂತೆ ಪೂರ್ವ ನಗರ ಪಾಲಿಕೆ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿಯಾದ ಡಿ.ಎಸ್.ರಮೇಶ್ ರವರು ಮನವಿ ಮಾಡಿದರು.

    ಆಯ್ಕೆಗೆ ಪರಿಗಣಿಸಲಿರುವ ಗಣತಿದಾರರ ಸಂಖ್ಯೆ, ವಿದ್ಯಾರ್ಹತೆ, ಗೌರವ ಧನ, ಹಾಗೂ ಇನ್ನಿತರೆ ವಿವರ

    * ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ. ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರಬೇಕು.

    * ಆಂಡ್ರಾಯ್ಡ್ 12.0 ತಂತ್ರಾಂಶದೊಂದಿಗೆ 4 ಜಿಬಿ ರ್ಯಾಮ್ ಸಾಮರ್ಥ್ಯದ ಸ್ವಂತ ಮೊಬೈಲ್ ಹೊಂದಿರಬೇಕು.

    * ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಮಹದೇವಪುರ, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರಗಳ ನಿವಾಸಿಗಳಿಗೆ ಹಾಗೂ ಸುತ್ತಮುತ್ತಲಿನ ನಿವಾಸಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

    * ಮೊದಲ ಹಂತದ ಮನೆ ಪಟ್ಟಿ ಮತ್ತು ಮನೆಗಣತಿ ಕಾರ್ಯವು ದಿನಾಂಕ: 15-05-2026 ವರೆಗೆ ನಡೆಯಲಿದ್ದು, ಅಲ್ಲಿಯವರೆಗೆ ರಜಾ ದಿನವೂ ಸೇರಿದಂತೆ ನಿರಂತರವಾಗಿ ಕಾರ್ಯನಿರ್ವಹಿಸಲು ಬದ್ಧರಾಗಿರಬೇಕು.

    * ಭಾರತದ ಜನಗಣತಿ-2027ರ ಜನಗಣತಿ ಮಾರ್ಗಸೂಚಿಯನ್ವಯ ದಿನಾಂಕ: 15-05-2026 ವರೆಗಿನ ಮೊದಲ ಹಂತದ ಗಣತಿ ಕಾರ್ಯಕ್ಕೆ ರೂ.9,000/- (ರೂ. ಒಂಭತ್ತು ಸಾವಿರ ಮಾತ್ರ) ಗೌರವಧನ ನೀಡಲಾಗುವುದು (ಕನಿಷ್ಠ 150-200 ಮನೆಗಳಿಗೆ)

    * ಭಾರತದ ಜನಗಣತಿ-2027ರ 2ನೇ ಹಂತದ ಕಾರ್ಯವು ಫೆಬ್ರವರಿ-2027 ರ ಮಾಹೆಯಲ್ಲಿ ನಡೆಯಲಿದ್ದು, ಸದರಿ ಕಾರ್ಯಕ್ಕೆ ರೂ.16,000/- (ರೂ. ಹದಿನಾರು ಸಾವಿರ ಮಾತ್ರ) ಗೌರವಧನ ನೀಡಲಾಗುವುದು.(150-200 ಮನೆಗಳಿಗೆ ಅಥವಾ 750 ರಿಂದ 800 ಜನಸಂಖ್ಯೆಗೆ)

    * ಈ ಆಯ್ಕೆಯು ಭಾರತದ ಜನಗಣತಿ-2027ರ ಗಣತಿ ಕಾರ್ಯ ನಿರ್ವಹಣೆಗೆ ಮಾತ್ರ ಸೀಮಿತವಾಗಿರುತ್ತದೆ.

    * ಆಯ್ಕೆಯಾದವರಿಗೆ ಕಾರ್ಯ ನಿರ್ವಹಣೆ ಅನುಕೂಲವಾಗಲು ಜನಗಣತಿ ಮೊಬೈಲ್ ಅಪ್ಲಿಕೇಷನ್ ನಲ್ಲಿ ಮಾಹಿತಿ ಪಡೆಯುವ ಹಾಗೂ ಗಣತಿ ಕಾರ್ಯನಿರ್ವಹಣೆ ಬಗ್ಗೆ ಮಾಸ್ಟರ್ ಟೈನರ್ ಗಳಿಂದ ಅಗತ್ಯ ತರಬೇತಿ ನೀಡಲಾಗುವುದು.

    * ಆಯ್ಕೆ ಮಾಡಿಕೊಳ್ಳುವ ಗಣತಿದಾರರ ಸಂಖ್ಯೆ: 1,000 ಗಣತಿದಾರರು.

    * ನೇಮಕಾತಿ ಮಾಡಿಕೊಳ್ಳುವುದು ಪೂರ್ವ ನಗರ ಪಾಲಿಕೆ ಮಾನ್ಯ ಆಯುಕ್ತರ ವಿವೇಚನೆಗೆ ಒಳಪಟ್ಟಿರುತ್ತದೆ.

    ನೇರ ಸಂದರ್ಶನ ದಿನಾಂಕ, ಸಮಯ ಮತ್ತು ಸ್ಥಳ
    * ದಿನಾಂಕ: 24-04-2026 ರಂದು (ಶುಕ್ರವಾರ)
    * ಸಮಯ: ಬೆಳಿಗ್ಗೆ 10.00 ಗಂಟೆಗೆ
    * ಸ್ಥಳ: ನ್ಯೂ ಹಾರಿಜನ್ ಕಾಲೇಜ್ ಆಫ್ ಇಂಜಿನಿಯರಿಂಗ್, ಹೊರವರ್ತುಲ ರಸ್ತೆ, ಮಾರತಹಳ್ಳಿ ಹತ್ತಿರ, ಕಾಡುಬೀಸನಹಳ್ಳಿ ಬೆಂಗಳೂರು-560103
    * ಲೊಕೇಶನ್: https://maps.app.goo.gl/qEUBkfYeWu7iAFaF6?g_st=ac
    ರಾಷ್ಟ್ರೀಯ ಅಭಿವೃದ್ಧಿಗೆ ಪೂರಕವಾದ ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಲು ಜನಗಣತಿ ಅಂಕಿಅಂಶಗಳು ಅತಿಮುಖ್ಯವಾದದ್ದಾಗಿದ್ದು, ಆಸಕ್ತರಾದರು ರಾಷ್ಟ್ರೀಯ ಜನಗಣತಿ 2027ರ ಗಣತಿ ಕಾರ್ಯದಲ್ಲಿ ಗಣತಿದಾರರಾಗಿ ಸೇವೆ ಸಲ್ಲಿಸುವ ಮೂಲಕ ರಾಷ್ಟ್ರ ಸೇವೆಗೆ ಕೈ ಜೋಡಿಸುವಂತೆ ಆಯುಕ್ತರು ಕರೆ ನೀಡಿದರು.

  • ಮುಂಗಾರು ಪೂರ್ವ ಸಿದ್ಧತೆ: ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಕಾಮಗಾರಿಗಳನ್ನ ಶೀಘ್ರವಾಗಿ ಪೂರ್ಣಗೊಳಿಸಲು ಡಿ.ಎಸ್.ರಮೇಶ್ ಸೂಚನೆ

    ಮುಂಗಾರು ಪೂರ್ವ ಸಿದ್ಧತೆ: ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಕಾಮಗಾರಿಗಳನ್ನ ಶೀಘ್ರವಾಗಿ ಪೂರ್ಣಗೊಳಿಸಲು ಡಿ.ಎಸ್.ರಮೇಶ್ ಸೂಚನೆ

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ಪೂರ್ವ ಮುಂಗಾರು ಮತ್ತು ಮುಂಗಾರು ಮಳೆಯ ಸಂದರ್ಭದಲ್ಲಿ ಪ್ರವಾಹ ಪೀಡಿತವಾಗುವ ಸಾಧ್ಯತೆಯಿರುವ ಪ್ರದೇಶಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಈ ಸಂದರ್ಭದಲ್ಲಿ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಮಳೆ ನೀರು ಕಾಲುವೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯ ಕಾಮಗಾರಿಗಳ ಪ್ರಗತಿ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

    ಗೆದ್ದಲಹಳ್ಳಿ ರೈಲ್ವೆ ವೆಂಟ್ ಕಾಮಗಾರಿ ಪರಿಶೀಲನೆ

    ಗೆದ್ದಲಹಳ್ಳಿ ರೈಲ್ವೆ ವೆಂಟ್ ಬಳಿ ನಡೆಯುತ್ತಿರುವ ಪ್ರಮುಖ ಕಾಮಗಾರಿಯನ್ನು ಪರಿಶೀಲಿಸಿದ ಆಯುಕ್ತರು, ರೈಲ್ವೆ ಇಲಾಖೆಯ ಸಮನ್ವಯದೊಂದಿಗೆ ಈಗಾಗಲೇ ಎರಡು ಗರ್ಡರ್‌ಗಳನ್ನು ಅಳವಡಿಸಲಾಗಿರುತ್ತದೆ. ಕಾಸ್ಟಿಂಗ್ ಆಗಿ ಸಿದ್ಧಗೊಂಡಿರುವ ಒಂದು ಕಾಂಕ್ರೀಟ್ ಬಾಕ್ಸನ್ನು ಸುಮಾರು 10 ಮೀಟರ್ ವರೆಗೆ ಪುಶಿಂಗ್ ಕೆಲಸವನ್ನು ಸಹ ನಿರ್ವಹಿಸಲಾಗಿರುತ್ತದೆ. ಎರಡು ಕಾಂಕ್ರೀಟ್ ಬಾಕ್ಸ್ ಗಳ ಪುಶಿಂಗ್ ಕಾರ್ಯವನ್ನು ಮೇ 30ರೊಳಗಾಗಿ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

    ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ

    ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶ್ವಬ್ಯಾಂಕ್ ಅನುದಾನದ ಅಡಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ಕೈಗೊಂಡಿರುವ ಮಳೆ ನೀರು ಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಆಯುಕ್ತರು, ಗುಂಜೂರು ರಾಜಕಾಲುವೆ
    ವರ್ತೂರು ಕೆರೆ ಕೋಡಿ ರಾಜಕಾಲುವೆ, ಮಣಿಪಾಲ್ ಆಸ್ಪತ್ರೆ ಸಮೀಪದ ರಾಜಕಾಲುವೆ, ಯಮಲೂರು (ಎಪ್ಸಿಲಾನ್ ಪ್ರದೇಶ), ಚಳ್ಳಘಟ್ಟ, ಎಸ್‌ಜಿಆರ್ ಡೆಂಟಲ್ ಕಾಲೇಜು ಸಮೀಪ ಹಾಗೂ ಮುನ್ನೇಕೊಳಲು ಪ್ರದೇಶಗಳಲ್ಲಿನ ಮಳೆ ನೀರು ಕಾಲುವೆಗಳನ್ನು ಪರಿಶೀಲಿಸಿದ ಆಯುಕ್ತರು.
    * ಅಭಿವೃದ್ಧಿಗೆ ಮುನ್ನಾ ಮಳೆ ನೀರು ಹರಿವು ಸುಗಮಗೊಳಿಸಲು ಕಚ್ಚಾ ಕಾಲುವೆಯನ್ನು ವ್ಯವಸ್ಥಿತಗೊಳಿಸುವುದು.

    * ಕಾಲುವೆಗಳಲ್ಲಿನ ಹೂಳು, ಮಣ್ಣು, ತ್ಯಾಜ್ಯ ಇತ್ಯಾದಿಗಳನ್ನು ತೆರವುಗೊಳಿಸಿ ಮಳೆ ನೀರಿನ ಸರಾಗ ಹರಿವಿಗೆ ಕ್ರಮವಹಿಸುವುದು.

    * ಕಾರ್ಯದೇಶ ನೀಡಿರುವ ಕಡೆಗಳಲ್ಲಿ ಈ ಕೂಡಲೇ ಅಭಿವೃದ್ಧಿ ಕಾಮಗಾರಿ ಆರಂಭಿಸುವುದು ಹಾಗೂ ಕಾಮಗಾರಿಗೆ ವೇಗ ನೀಡಲು ಸೂಚಿಸಿದರು.

    * ಕಾಲುವೆ ಒತ್ತುವರಿ ಆಗಿರುವ ಸ್ಥಳಗಳಲ್ಲಿ ಒತ್ತುವರಿ ತೆರವುಗೊಳಿಸಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಯಿತು.

    * ಕಾಮಗಾರಿಗಳನ್ನು ವೇಗವಾಗಿ ಮತ್ತು ಗುಣಮಟ್ಟದೊಂದಿಗೆ ಪೂರ್ಣಗೊಳಿಸುವುದು.

    * ಮಳೆಗಾಲದ ಮೊದಲು ಕಾಲುವೆಗಳ ಪ್ರಮುಖ ಸಂಪರ್ಕ ಭಾಗಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವುದು.

    * ಪ್ರವಾಹ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಸೇರಿದಂತೆ ಇನ್ನಿತರೆ ನಿರ್ದೇಶನಗಳನ್ನು ನೀಡಿದರು.

    ಮುಂಗಾರು ಮಳೆಗೂ ಮುನ್ನ ಪ್ರವಾಹ ನಿಯಂತ್ರಣ ಹಾಗೂ ಮಳೆ ನೀರು ನಿರ್ವಹಣೆಗೆ ಅಗತ್ಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಬೆಂಗಳೂರು ಪೂರ್ವ ನಗರ ಪಾಲಿಕೆಯ ಪ್ರಮುಖ ಆದ್ಯತೆಯಾಗಿದ್ದು, ಎಲ್ಲಾ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿ ಪ್ರವಾಹ ಸಮಸ್ಯೆ ತಡೆಯಲು ಹಾಗೂ ಸುರಕ್ಷಿತ ಪರಿಸರ ಒದಗಿಸಲು ಬೆಂಗಳೂರು ಪೂರ್ವ ನಗರ ಪಾಲಿಕೆ ಬದ್ಧವಾಗಿದೆ ಎಂದು ಆಯುಕ್ತರು ತಿಳಿಸಿದರು.

    ಈ ಪರಿಶೀಲನೆ ಸಂದರ್ಭದಲ್ಲಿ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್, ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು (ಯೋಜನಾ ಅನುಷ್ಠಾನ ಘಟಕ) ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

  • ವಿಜೃಂಭಣೆಯಿಂದ ಜರುಗಿದ ಪಂಚಮುಖಿ ಶ್ರೀ ಗಾಯತ್ರಿ ದೇವಿಯ ಅದ್ದೂರಿ ಬ್ರಹ್ಮರಥೋತ್ಸವ.

    ವಿಜೃಂಭಣೆಯಿಂದ ಜರುಗಿದ ಪಂಚಮುಖಿ ಶ್ರೀ ಗಾಯತ್ರಿ ದೇವಿಯ ಅದ್ದೂರಿ ಬ್ರಹ್ಮರಥೋತ್ಸವ.

    ಕೆ.ಆರ್.ಪುರ: ಬಸವನಪುರದ ಗಾಯತ್ರಿ ಬಡಾವಣೆಯ ಶ್ರೀ
    ಗಾಯತ್ರಿ ಮಹಾ ಸಂಸ್ಥಾನ ದೇವಪುರಿದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.

    ಗಾಯತ್ರಿ ದೇವಿಯ 32ನೇ ವರ್ಷದ ಬ್ರಹ್ಮರಥೋತ್ಸವವು ಪ್ರತಿವರ್ಷದಂತೆ ಈ ವರ್ಷವು ಅತ್ಯಂತ ವೈಭವದಿಂದ ನಡೆಯಿತು. 11ದಿನಗಳು ನಡೆಯುವ ಈ ಉತ್ಸವದಲ್ಲಿ ದೇವರಿಗೆ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಹೋಮ ಹಾಗೂ ಮಹಾ ಮಂಗಳಾರತಿ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12.30ಕ್ಕೆ ಭಕ್ತರ ಘೋಷಣೆಗಳ ನಡುವೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಆಗಮಿಸಿದ್ದ ಸಹಸ್ರಾರು ಭಕ್ತರು ಜಯಘೋಷ ಮೊಳಗಿಸಿ ಭಾವ ಪರವಶರಾದರಾಗಿದ್ದಾರೆ.

    ನೂರಾರು ಭಕ್ತರು ಪಂಚಮುಖಿ ಶ್ರೀ ಗಾಯತ್ರಿ ದೇವಿ ಅಮ್ಮನವರ ದರ್ಶನ ಪಡೆದರು. ರಥೋತ್ಸವದಲ್ಲಿ ಡೊಳ್ಳು ಕುಣಿತ, ವೀರಗಾಸೆ ನೃತ್ಯವು ಬ್ರಹ್ಮ ರಥೋತ್ಸವಕ್ಕೆ ಮೆರಗು ನೀಡಿದವು. ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಹರಕೆ ಇಡೇರಿಸಿಕೊಂಡರು.

    ಬಸವನಪುರ,ದೇವಸಂದ್ರ,ಕೆ.ಆರ್.ಪುರ,ಕೃಷ್ಣನಗರ,ಅಯ್ಯಪ್ಪ
    ನಗರ,ಟಿ.ಸಿ.ಪಾಳ್ಯ,ರಾಮಮೂರ್ತಿನಗರ,ಮೇಡಹಳ್ಳಿ,ಹೊರಮಾವು,ವಿಜ್ಞಾನನಗರ ಸೇರಿದಂತೆ ಸುತ್ತಮುತ್ತಲಿನ ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

    ರಥೋತ್ಸವದ ಸಮಯದಲ್ಲಿ ಬಿಸಿಲಿನ ಬೇಗೆಯನ್ನ ನಿವಾರಿಸಲು ರಸ್ತೆಯುದ್ದಕ್ಕೂ ಪಾನಕ ಮಜ್ಜಿಗೆ ನೀಡಲಾಯಿತು.ದೇವಸ್ಥಾನದ ವತಿಯಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಲಾಗಿತ್ತು,ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಬ್ರಹ್ಮರಥೋತ್ಸದಲ್ಲಿ ಭಾಗವಹಿಸಿ, ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು, ಕಾಯಿ, ಜವನ ಅರ್ಪಿಸಿದರು ಎಂದು ಪ್ರಧಾನ ಆರ್ಚಕ ಸುಂದರ ಗಣಪಾಟಿ ಅವರು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್,
    ಡಿ.ಕೆ.ಮೋಹನ್, ಮುಖಂಡರಾದ ಶಿವಕುಮಾರ್,ಉದಯ್ ಕುಮಾರ್, ಕೇಬರ್ ರಾಜು,ಜಾನಿ, ಗ್ರಾಮಸ್ಥರು, ಭಕ್ತಾದಿಗಳು ಭಾಗವಹಿದ್ದರು.

  • ಹೆತ್ತ ತಾಯಿ ಸತ್ತರೂ ಅಂತ್ಯಕ್ರಿಯೆಗೆ ಬರದ ಮಕ್ಕಳು… ಇದು ಕೇವಲ ಒಂದು ಸುದ್ದಿ ಅಲ್ಲ ನಮ್ಮ ಸಮಾಜದ ಹೃದಯವನ್ನೇ ಕದಿಯುವ ನಿಜವಾದ ಕಹಿ ಘಟನೆ

    ಹೆತ್ತ ತಾಯಿ ಸತ್ತರೂ ಅಂತ್ಯಕ್ರಿಯೆಗೆ ಬರದ ಮಕ್ಕಳು… ಇದು ಕೇವಲ ಒಂದು ಸುದ್ದಿ ಅಲ್ಲ ನಮ್ಮ ಸಮಾಜದ ಹೃದಯವನ್ನೇ ಕದಿಯುವ ನಿಜವಾದ ಕಹಿ ಘಟನೆ

    ಬೆಳಗಾವಿ: ಜಿಲ್ಲೆಯ ಶಾಹೂನಗರದಲ್ಲಿ ನಡೆದ ಈ ಅಮಾನವೀಯ ಘಟನೆ ಮಾನವೀಯತೆಯೇ ಸತ್ತುಹೋಗಿತೇ ಎಂಬ ಪ್ರಶ್ನೆಯನ್ನು ಎಬ್ಬಿಸುತ್ತದೆ ಒಂಬತ್ತು ತಿಂಗಳು ಹೊತ್ತು ಜೀವನವನ್ನೇ ಅರ್ಪಿಸಿ ಬೆಳೆಸಿದ ತಾಯಿಯ ಅಂತಿಮ ಕ್ಷಣದಲ್ಲೂ ಜೊತೆಗಿರಲಿಲ್ಲ ಅಂದರೆ ಅದು ಕೇವಲ ನಿರ್ಲಕ್ಷ್ಯವಲ್ಲ ಮನುಷ್ಯತ್ವದ ಸೋಲು.

    ತಾಯಿ ಮೃತಪಟ್ಟ ಸುದ್ದಿ ತಿಳಿಸಿದರೂ “ನೀವೇ ಸುಡಿ” ಎಂದು ಹೇಳಿ ದೂರವಿರುವ ಮಕ್ಕಳು… ಈ ಮಾತುಗಳು ಕೇವಲ ಕಿವಿಗೆ ಬೀಳುವುದಿಲ್ಲ, ಮನಸ್ಸನ್ನೇ ಚೂರುಚೂರು ಮಾಡುತ್ತವೆ. ಹಣ ಸ್ವಾರ್ಥ ಬದುಕಿನ ಓಟ ಇವುಗಳ ಮಧ್ಯೆ ನಾವು ನಮ್ಮ ಬೇರುಗಳನ್ನು ಮರೆಯುತ್ತಿದ್ದೇವೆ ಅನ್ನೋದಕ್ಕೆ ಇದು ನಿಜವಾದ ಉದಾಹರಣೆ

    ಅದೇ ಸಮಯದಲ್ಲಿ ಸಮಾಜದಲ್ಲೀಗೂ ಮಾನವೀಯತೆ ಜೀವಂತವಾಗಿದೆ ಅನ್ನೋದಕ್ಕೆ ಸಾಕ್ಷಿ ಕೆಲವರು ಸಮಾಜಸೇವಕರು ಮುಂದಾಗಿ ಶಂಕರ್ ಪಾಟೀಲ್ ಅವರ ನೇತೃತ್ವದಲ್ಲಿ ಆ ತಾಯಿಗೆ ಗೌರವಯುತ ಅಂತ್ಯಕ್ರಿಯೆ ನೆರವೇರಿಸಿದರು. ಸಂಬಂಧವಿಲ್ಲದವರು ಕರ್ತವ್ಯ ನಿರ್ವಹಿಸಿದರೆ ಸಂಬಂಧ ಇದ್ದವರು ದೂರ ನಿಂತದ್ದು ಎಷ್ಟು ವ್ಯಥೆಯ ವಿಚಾರ.

    ತಾಯಿ ದೇವರು ಅಂತ ಹೇಳುವ ನಾವು, ಆ ದೇವರನ್ನು ಬದುಕಿರುವಾಗಲೇ ಮರೆತುಬಿಟ್ಟರೆ… ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ ಅನ್ನೋದನ್ನು ಯೋಚಿಸುವ ಸಮಯ ಬಂದಿದೆ.

  • ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ:  ಮನೆ ಬೀಗ ಒಡೆದ ಕಳ್ಳರು  ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಎಸ್ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

     ಕಳ್ಳರು ಮನೆಯಲ್ಲಿದ್ದ 10 ಗ್ರಾಂ ಚಿನ್ನದ ಚೈನ್, ತಲಾ 15 ಗ್ರಾಂ ತೂಕದ ಬ್ರೇಸ್ಲೆಟ್ ಮತ್ತು ನೆಕ್ಲೇಸ್, 8 ಗ್ರಾಂ ಉಂಗುರ, ಮೂರು ಜೋಡಿ ಕಾಲುಗೆಜ್ಜೆ ಹಾಗೂ 1 ಲಕ್ಷ 30 ಸಾವಿರ ನಗದು ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • KSRTC ಬಸ್ ಪಲ್ಟಿ!  ಕೂದಲೆಳೆಯ ಅಂತರದಲ್ಲಿ ಪಾರಾದ 40 ಪ್ರಯಾಣಿಕರು…!

    KSRTC ಬಸ್ ಪಲ್ಟಿ! ಕೂದಲೆಳೆಯ ಅಂತರದಲ್ಲಿ ಪಾರಾದ 40 ಪ್ರಯಾಣಿಕರು…!

    ತುಮಕೂರು: ಗುಬ್ಬಿ ತಾಲೂಕಿನ ಕಳ್ಳಿಪಾಳ್ಯದ ಬಳಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಭಾರೀ ದುರಂತ ತಪ್ಪಿದೆ. ಬಸ್‌ನಲ್ಲಿ ಭರ್ತಿಯಾಗಿದ್ದ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ.

    ತಿಪಟೂರು ಡಿಪೋಗೆ ಸೇರಿದ ಈ ಬಸ್ ಹೊಸದುರ್ಗದಿಂದ ಬೆಂಗಳೂರಿನ ಕಡೆಗೆ ತೆರಳುತ್ತಿತ್ತು. ಗುಬ್ಬಿ ಸಮೀಪದ ಕಳ್ಳಿಪಾಳ್ಯದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಯ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

    ಐದಾರು ಪ್ರಯಾಣಿಕರಿಗೆ ಗಂಭೀರ ಗಾಯ ಅಪಘಾತದಲ್ಲಿ ಐದಾರು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 40ಕ್ಕೂ ಹೆಚ್ಚು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರಯಾಣಿಕರ ಪ್ರಕಾರ, ಬಸ್ ಅತಿ ವೇಗವಾಗಿ ಹೋಗುತ್ತಿದ್ದು, ಚಾಲಕನು ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ. ಅಪಘಾತದ ಕಾರಣ ತನಿಖೆ ನಡೆಯುತ್ತಿದೆ. ಪೊಲೀಸರು ಚಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಅಪಘಾತದಿಂದ ರಸ್ತೆ ಸಂಚಾರಕ್ಕೆ ಸ್ವಲ್ಪ ಸಮಯ ಅಡಚಣೆಯಾಗಿದ್ದು, ಪೊಲೀಸ್ ಮತ್ತು ರಸ್ತೆ ಸಾರಿಗೆ ಅಧಿಕಾರಿಗಳು ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

  • ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನ ವಾರಸುದಾರರಿಗೆ ಹಸ್ತಾಂತರ

    ಪ್ರಾಮಾಣಿಕತೆ ಮೆರೆದ ಕೆಎಸ್‌ಆರ್‌ಟಿಸಿ ಸಿಬ್ಬಂದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನ ವಾರಸುದಾರರಿಗೆ ಹಸ್ತಾಂತರ

    ಶಿರಸಿ: ಇಂದಿನ ಕಾಲದಲ್ಲಿ ಪ್ರಾಮಾಣಿಕತೆ ಎನ್ನುವುದು ಅಪರೂಪವಾಗುತ್ತಿರುವಾಗ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿರಸಿ ಸಿಬ್ಬಂದಿಗಳು ತಮಗೆ ಸಿಕ್ಕ ಬೆಲೆಬಾಳುವ ಚಿನ್ನವನ್ನು ವಾರಸುದಾರರಿಗೆ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಅಕ್ಷಯ ತೃತೀಯದ ಪ್ರಯುಕ್ತ ನಾಗವೇಣಿ ಗೌಡ ಅವರು ಶಿರಸಿಯ ಕಾಮಧೇನು ಜ್ಯುವೆಲರ್ಸ್‌ನಲ್ಲಿ 82,000 ರೂ. ಬೆಲೆಬಾಳುವ 5 ಗ್ರಾಂ ಚಿನ್ನದ ಗಟ್ಟಿಯನ್ನು ಖರೀದಿಸಿದ್ದರು. ಬಳಿಕ ಶಿರಸಿ ಕೆಎಚ್‌ಬಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅವರು, ಬಸ್ಸಿನಿಂದ ಇಳಿಯುವಾಗ ಆಕಸ್ಮಿಕವಾಗಿ ಚಿನ್ನವಿದ್ದ ಬ್ಯಾಗನ್ನು ಸೀಟಿನ ಮೇಲೆಯೇ ಮರೆತು ಹೋಗಿದ್ದರು.

    ಬಸ್ಸು ಸಂಚರಿಸುತ್ತಿದ್ದಾಗ ಬ್ಯಾಗ್ ಇರುವುದನ್ನು ಗಮನಿಸಿದ ನಿರ್ವಾಹಕರಾದ ರಮೇಶ್ ನಾಯ್ಕ್ ಹಾಗೂ ಚಾಲಕರಾದ ವೆಂಕಟರಮಣ ನಾಯ್ಕ್ ಮತ್ತು ಅವರು ತಕ್ಷಣ ಅದನ್ನು ಪರಿಶೀಲಿಸಿದ್ದಾರೆ. ಬ್ಯಾಗ್‌ನಲ್ಲಿ ಬೆಲೆಬಾಳುವ ಚಿನ್ನದ ಗಟ್ಟಿ ಇರುವುದನ್ನು ಕಂಡ ಸಿಬ್ಬಂದಿಗಳು, ಅದನ್ನು ಅತ್ಯಂತ ಜವಾಬ್ದಾರಿಯಿಂದ ಕಾಪಾಡಿ ಡಿಪೋಗೆ ತಂದಿದ್ದಾರೆ.

    ಶಿರಸಿ ಬಸ್ ಡಿಪೋದ ಟ್ರಾಫಿಕ್ ಸೂಪರ್ಡೆಂಟ್ ಮಹೇಶ್ ಜೋಗಳೇಕರ್ ಹಾಗೂ ನಿರೀಕ್ಷಕರಾದ ರಘುಪತಿ ನಾಯ್ಕ್ ಅವರ ಸಮಕ್ಷಮದಲ್ಲಿ, ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಚಿನ್ನದ ಬ್ಯಾಗನ್ನು ವಾರಸುದಾರರಾದ ಶಿಕ್ಷಕಿ ನಾಗವೇಣಿ ಗೌಡ ಅವರಿಗೆ ಹಸ್ತಾಂತರಿಸಲಾಯಿತು.

    ಸಾರಿಗೆ ಸಂಸ್ಥೆಯ ಸಿಬ್ಬಂದಿಗಳ ಪ್ರಾಮಾಣಿಕತೆಯಿಂದಾಗಿ ನನ್ನ ವಸ್ತು ಸುರಕ್ಷಿತವಾಗಿ ಮರಳಿ ಸಿಕ್ಕಿದೆ. ಇಂತಹ ಪ್ರಾಮಾಣಿಕ ಕೆಲಸ ನಿಜಕ್ಕೂ ಶ್ಲಾಘನೀಯ, ಎಂದು ಶಿಕ್ಷಕಿ ನಾಗವೇಣಿ ಗೌಡ ಅವರು ತಮ್ಮ ಕೃತಜ್ಞತೆ ಸಲ್ಲಿಸಿದರು.

    ಸಾರ್ವಜನಿಕರು ಸಾರಿಗೆ ಸಿಬ್ಬಂದಿಗಳ ಈ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮೇಲಿನ ನಂಬಿಕೆ ಈ ಘಟನೆಯಿಂದ ಮತ್ತಷ್ಟು ಹೆಚ್ಚಾದಂತಾಗಿದೆ