Category: ಬೆಂಗಳೂರು ನಗರ

  • ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 700ರ ಗಡಿ ಸಮೀಪ: ಅರಣ್ಯ ಇಲಾಖೆ ಅಂದಾಜು

    ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 700ರ ಗಡಿ ಸಮೀಪ: ಅರಣ್ಯ ಇಲಾಖೆ ಅಂದಾಜು


    ಬೆಂಗಳೂರು: ಕರ್ನಾಟಕದಲ್ಲಿ ಹುಲಿಗಳ ಸಂರಕ್ಷಣಾ ಕಾರ್ಯಕ್ಕೆ ದೊಡ್ದ ಮಟ್ಟದ ಫಲ ದೊರೆತಿದ್ದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಇದೀಗ 700ರ ಗಡಿ ದಾಟಿರಬಹುದು ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್ ಮಾಹಿತಿ ನೀಡಿದ್ದಾರೆ.

    ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ 72ನೇ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವನ್ಯಜೀವಿ ಸಂತತಿ ಗಣನೀಯವಾಗಿ ಹೆಚ್ಚುತ್ತಿರುವ ಅಂಶವನ್ನು ಹಂಚಿಕೊಂಡರು.

    72ನೇ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಗಣನೀಯ ಏರಿಕೆ ಕಂಡ ಹುಲಿ ಸಂತತಿ: 2022ರ ರಾಷ್ಟ್ರೀಯ ಹುಲಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ 563 ಹುಲಿಗಳು ದಾಖಲಾಗಿದ್ದವು. ನಂತರ 2023ರ ಅಂದಾಜಿನ ಪ್ರಕಾರ ಈ ಸಂಖ್ಯೆ 650ಕ್ಕೆ ತಲುಪಿತ್ತು. ಪ್ರಸ್ತುತ ರಾಜ್ಯದಲ್ಲಿ ಹುಲಿಗಳ ಆವಾಸಸ್ಥಾನಗಳನ್ನು 51 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಹುಲಿಗಳ ಸಂಖ್ಯೆ 700ರ ಗಡಿ ದಾಟಿದೆ ಎಂದು ಅಂದಾಜಿಸಲಾಗಿದೆ.

    ಹುಲಿ ಸಂತತಿ ವೃದ್ಧಿಯಾಗಿರುವುದು ಹೆಮ್ಮೆಯ ಸಂಗತಿಯಾದರೂ, ಇದರ ಜತೆಯಲ್ಲೇ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲಿನ ಕಾರ್ಯದೊತ್ತಡ ತೀವ್ರವಾಗಿ ಹೆಚ್ಚುತ್ತಿದೆ ಎಂದು ತಿಳಿಸಿದರು.

    ಹೊಸ ಸವಾಲುಗಳು ಮತ್ತು ಮಾನವ-ವನ್ಯಜೀವಿ ಸಂಘರ್ಷ: ಹುಲಿಗಳ ಸಂಖ್ಯೆ ಹೆಚ್ಚಾದಂತೆ ಅವು ತಮ್ಮ ಆವಾಸಸ್ಥಾನಗಳನ್ನು ಹೊಸ ಪ್ರದೇಶಗಳಿಗೂ ವಿಸ್ತರಿಸುತ್ತಿವೆ. ಈ ಹಿಂದೆ ಹುಲಿಗಳ ಸಂಚಾರವೇ ಇಲ್ಲದ ಪ್ರದೇಶಗಳಿಗೂ ಅವು ಕಾಲಿಡುತ್ತಿರುವುದು ಅರಣ್ಯ ಇಲಾಖೆಗೆ ಹೊಸ ರಕ್ಷಣಾ ಸವಾಲುಗಳನ್ನು ಒಡ್ಡಿದೆ.
    ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಹುಲಿಗಳ ದಾಳಿಗೆ ಸುಮಾರು 6,500ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಈ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ, ಹುಲಿಗಳ ಒಟ್ಟು ಆಹಾರ ಸರಪಳಿಯಲ್ಲಿ ಶೇಕಡಾ 30ರಿಂದ 40ರಷ್ಟು ಪಾಲು ಸಾಕು ಜಾನುವಾರುಗಳದ್ದೇ ಆಗಿದೆ ಎಂದು ಅಂದಾಜಿಸಬಹುದಾಗಿದೆ. ಇದು ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕುಮಾರ್ ಪುಷ್ಕರ್ ವಿವರಿಸಿದರು

  • ಪದ್ಮಶ್ರೀ ಪುರಸ್ಕೃತ ಡಾ. ಡಿಬಿಯಾ ಸಾರಥ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ

    ಪದ್ಮಶ್ರೀ ಪುರಸ್ಕೃತ ಡಾ. ಡಿಬಿಯಾ ಸಾರಥ್ಯದಲ್ಲಿ ಸಿಲಿಕಾನ್ ಸಿಟಿಯಲ್ಲಿ ಗರಿಗೆದರಲಿದೆ ಇಂಡೋನೇಷ್ಯಾದ ಬಾಲಿ ಸಂಸ್ಕೃತಿ

    • ಬಾಲಿ–ಬೆಂಗಳೂರು ನಡುವೆ ಸಾಂಸ್ಕೃತಿಕ ಸೇತು

    • ನಗರದಲ್ಲಿ 16 ದಿನಗಳ ಸಾಂಸ್ಕೃತಿಕ ಕಲರವ

    • ಕೆಚಕ್‌ನಿಂದ ಯಕ್ಷಗಾನದವರೆಗೆ ಕಲಾ ಸಂಗಮ

    • ಬಾಲಿಯ ಜೀವಂತ ಪರಂಪರೆ ನಗರದಂಗಳದಲ್ಲಿ

    • ಮೊದಲ ದಿನ ಸಾರ್ವಜನಿಕರಿಗೆ ಉಚಿತ ಪ್ರವೇಶ


    ಬೆಂಗಳೂರು: ಬೆಂಗಳೂರು ಎಂದರೆ ಕೇವಲ ಟೆಕ್ ಸಿಟಿ ಮಾತ್ರವಲ್ಲ, ವಿಭಿನ್ನ ಸಂಸ್ಕೃತಿಗಳು, ಕಲೆಗಳು ಮತ್ತು ಪರಂಪರೆಗಳು ಒಂದೆಡೆ ಮೇಳೈಸುವ ಜೀವಂತ ತಾಣ. ಇದೀಗ ಇದೇ ಬೆಂಗಳೂರಿನ ಅಂಗಳದಲ್ಲಿ ಇಂಡೋನೇಷ್ಯಾದ ಬಾಲಿ ದ್ವೀಪದ ಶ್ರೀಮಂತ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲಿದೆ. ಬಾಲಿಯ ನೃತ್ಯ, ಸಂಗೀತ, ತೊಗಲುಗೊಂಬೆಯಾಟ, ಮುಖವಾಡ ತಯಾರಿ ಸೇರಿದಂತೆ ಅಲ್ಲಿನ ಜೀವಂತ ಕಲಾ ಪರಂಪರೆಗಳನ್ನು ಬೆಂಗಳೂರಿಗರು ನೇರವಾಗಿ ಅನುಭವಿಸುವ ಅಪರೂಪದ ಅವಕಾಶ ಇದೀಗ ಒದಗಿಬಂದಿದೆ.


    ಪರಮ್‌ ಫೌಂಡೇಷನ್‌ ವತಿಯಿಂದ ಆಯೋಜಿಸಲಾಗಿರುವ *‘ಬಾಲಿ ಇನ್‌ ಬೆಂಗಳೂರು’ (BALI IN BENGALURU)* ಸಾಂಸ್ಕೃತಿಕ ಉತ್ಸವ ಅಕ್ಟೋಬರ್‌ 3ರಿಂದ 18ರವರೆಗೆ ನಡೆಯಲಿದೆ. ಒಟ್ಟು 16 ದಿನಗಳ ಕಾಲ ನಗರದ 14 ಪ್ರಮುಖ ಸ್ಥಳಗಳಲ್ಲಿ 16 ಕಾರ್ಯಕ್ರಮಗಳು ನಡೆಯಲಿದ್ದು, ಕಲಾ ಪ್ರದರ್ಶನಗಳ ಜತೆಗೆ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಸಂವಾದ ಮತ್ತು ಕಲಾವಿದರೊಂದಿಗಿನ ನೇರ ಸಂವಹನಕ್ಕೂ ವೇದಿಕೆ ಕಲ್ಪಿಸಲಾಗಿದೆ. ವಿಶೇಷವೆಂದರೆ, ಅಕ್ಟೋಬರ್ 3ರಂದು ಬೆಂಗಳೂರಿನ ಒರಾಯನ್‌ ಮಾಲ್‌ನಲ್ಲಿ ನಡೆಯಲಿರುವ ಉದ್ಘಾಟನಾ ದಿನದ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶಾವಕಾಶವಿದೆ.

    ಇದು ಕೇವಲ ಬಾಲಿಯ ಸಂಸ್ಕೃತಿಯನ್ನು ಬೆಂಗಳೂರಿಗೆ ಪರಿಚಯಿಸುವ ಉತ್ಸವವಷ್ಟೇ ಅಲ್ಲ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಪ್ರಾಚೀನ ಸಾಂಸ್ಕೃತಿಕ ಸಾಮ್ಯತೆ, ರಾಮಾಯಣ ಆಧಾರಿತ ಪುರಾಣ ಕಥನಗಳು ಹಾಗೂ ಉಭಯ ದೇಶಗಳ ಕಲಾ ಸಂಬಂಧಗಳನ್ನು ಮರುಶೋಧಿಸುವ ಸೃಜನಶೀಲ ವಿನಿಮಯವೂ ಆಗಿದೆ.

    *ಬಾಲಿಯಿಂದ ಬೆಂಗಳೂರಿಗೆ ಕಲೆಯ ಪಯಣ:*

    ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಬಾಲಿಯ ಪ್ರಸಿದ್ಧ ‘ಕೆಚಕ್’ (Kecak) ಪ್ರದರ್ಶನವೂ ಒಂದು. ರಾಮಾಯಣದ ಪ್ರಸಂಗಗಳಿಂದ ಪ್ರೇರಣೆ ಪಡೆದಿರುವ ಕೆಚಕ್‌ನಲ್ಲಿ ವಿಶಿಷ್ಟ ಕಂಠಧ್ವನಿ, ಲಯಬದ್ಧ ಚಲನೆ ಮತ್ತು ಸಮೂಹ ಗಾಯನ-ನೃತ್ಯದ ಮೂಲಕ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಡಲಾಗುತ್ತದೆ.


    *ಪದ್ಮಶ್ರೀ ಪುರಸ್ಕೃತ ಡಾ. ಐ. ವಯಾನ್ ಡಿಬಿಯಾ* ಹಾಗೂ ಅವರ ಪರಿಣಿತ ಕಲಾವಿದರ ತಂಡವೇ ನಗರಕ್ಕೆ ಆಗಮಿಸುತ್ತಿದ್ದು, ಬಾಲಿಯ ಪ್ರದರ್ಶನ ಕಲೆಗಳ ಕುರಿತ ತಮ್ಮ ದಶಕಗಳ ಅನುಭವ ಮತ್ತು ಜ್ಞಾನವನ್ನು ಬೆಂಗಳೂರಿನ ಕಲಾಸಕ್ತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಬಾಲಿ ನೃತ್ಯದ ಸೂಕ್ಷ್ಮ ಹಾವಭಾವಗಳು, ಹೆಜ್ಜೆಗಳ ಲಯ ಮತ್ತು ಕಥನ ಶೈಲಿಯನ್ನು ಕೇವಲ ವೀಕ್ಷಿಸುವುದಷ್ಟೇ ಅಲ್ಲದೆ, ಕಾರ್ಯಾಗಾರಗಳ ಮೂಲಕ ಆ ಕಲೆಯ ಆಂತರ್ಯವನ್ನು ಅರ್ಥೈಸಿಕೊಳ್ಳುವ ಅವಕಾಶವೂ ಇರಲಿದೆ.

    *ಕೆಚಕ್‌ನಿಂದ ಗಮೆಲಾನ್‌ವರೆಗೆ…*

    ಬಾಲಿಯ ಸಾಂಪ್ರದಾಯಿಕ ‘ಗಮೆಲಾನ್‌’ ಸಂಗೀತ ಪರಿಚಯಿಸುವ ಕಾರ್ಯಾಗಾರ, ಮುಖವಾಡ ತಯಾರಿಕೆ ಕಮ್ಮಟ, ನೃತ್ಯ ಚಲನೆಯ ತರಬೇತಿ ಹಾಗೂ ಇಂಡೋನೇಷ್ಯಾದ ಸಾಂಪ್ರದಾಯಿಕ ‘ವಾಯಾಂಗ್’ ತೊಗಲುಗೊಂಬೆಯಾಟದ ಪ್ರಾತ್ಯಕ್ಷಿಕೆಗಳು ಉತ್ಸವದ ಮೆರುಗನ್ನು ಹೆಚ್ಚಿಸಲಿವೆ.


    ವಿಶೇಷವೆಂದರೆ, ಇಂಡೋನೇಷ್ಯಾ ಮತ್ತು ಭಾರತದ ತೊಗಲುಗೊಂಬೆಯಾಟ ಪರಂಪರೆಗಳನ್ನು ಪರಸ್ಪರ ಮುಖಾಮುಖಿಯಾಗಿಸುವ ಜಂಟಿ ಪ್ರದರ್ಶನವೂ ನಡೆಯಲಿದೆ. ಹಾಗೆಯೇ ಬಾಲಿಯ ಸಾಂಸ್ಕೃತಿಕ ಪ್ರದರ್ಶನ ಕಲೆಯನ್ನು ನಮ್ಮ ನೆಲದ ಹೆಮ್ಮೆಯ ಯಕ್ಷಗಾನದೊಂದಿಗೆ ಬೆಸೆಯುವ ಅಪೂರ್ವ ಸಹಯೋಗವೂ ಈ ಮಹೋತ್ಸವದ ಕೇಂದ್ರಬಿಂದು. ಹೀಗಾಗಿ ಒಂದೆಡೆ ಬಾಲಿಯ ಕೆಚಕ್‌ನ ಲಯ ಕೇಳಿಬಂದರೆ, ಮತ್ತೊಂದೆಡೆ ಕರ್ನಾಟಕದ ಯಕ್ಷಗಾನದ ಹೆಜ್ಜೆ ಮತ್ತು ಪ್ರಸಂಗಗಳ ಕಥಾವಸ್ತುವಿನೊಂದಿಗೆ ಅದರ ಕಲಾತ್ಮಕ ಸಂವಾದ ನಡೆಯಲಿದೆ.

    *ಪ್ರದರ್ಶನಕ್ಕಷ್ಟೇ ಸೀಮಿತವಲ್ಲ*:

    *‘ಬಾಲಿ ಇನ್‌ ಬೆಂಗಳೂರು’* ಉತ್ಸವದ ಮೂಲ ಆಶಯವೆಂದರೆ ಸಂಸ್ಕೃತಿಯನ್ನು ಕೇವಲ ಪ್ರದರ್ಶನದ ಚೌಕಟ್ಟಿನಲ್ಲಿಡದೆ, ಕಲಿಕೆ, ಸಹಯೋಗ ಮತ್ತು ಸಂವಾದದ ಮೂಲಕ ಜನರ ನಡುವೆ ತರುವುದು. ಬಾಲಿಯ ಕಲಾವಿದರು, ಭಾರತೀಯ ರಂಗಕರ್ಮಿಗಳು, ವಿದ್ಯಾರ್ಥಿಗಳು, ಕಲಾ ಸಂಶೋಧಕರು, ಶಿಕ್ಷಣ ಸಂಸ್ಥೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿವೆ. ಜೊತೆಗೆ ಉಪನ್ಯಾಸಗಳು, ಪ್ರಾತ್ಯಕ್ಷಿಕೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಇಂಡೋನೇಷ್ಯಾ-ಭಾರತೀಯ ಆಹಾರ-ಸಮುದಾಯ ಆಧಾರಿತ ತೊಡಗಿಸಿಕೊಳ್ಳುವಿಕೆಗಳ ಮೂಲಕ ಈ ಸಹಭಾಗಿತ್ವವು ಇನ್ನಷ್ಟು ವಿಸ್ತರಿಸಲಿದೆ. ಒಟ್ಟಿನಲ್ಲಿ, ಬಾಲಿಯ ನೃತ್ಯ, ಸಂಗೀತ ಮತ್ತು ಕಥನ ಪರಂಪರೆಗಳೊಂದಿಗೆ ಕರುನಾಡಿನ ಕಲಾ ಮನಸ್ಸುಗಳು ಬೆರೆಯಲಿರುವ ಈ 16 ದಿನಗಳು ಬೆಂಗಳೂರಿನ ಸಾಂಸ್ಕೃತಿಕ ಕ್ಯಾಲೆಂಡರ್‌ನಲ್ಲಿ ಹೊಸ ಮೈಲಿಗಲ್ಲಾಗಲಿವೆ.

    *ಮೊದಲ ದಿನದ ವಿಶೇಷ:* ಅ. 3ರ ಸಂಜೆ ‘ಕೆಚಕ್’ ನೃತ್ಯ ವೈಭವ

    ಉತ್ಸವದ ಉದ್ಘಾಟನಾ ದಿನವಾದ ಅಕ್ಟೋಬರ್ 3ರ ಸಂಜೆ 6ಕ್ಕೆ ಒರಾಯನ್‌ ಮಾಲ್‌ನಲ್ಲಿ ಬಾಲಿಯ ವಿಶ್ವವಿಖ್ಯಾತ ಕಲಾಪ್ರಕಾರವಾದ ‘ಕೆಚಕ್’ (Kecak) ನೃತ್ಯ ಪ್ರದರ್ಶನ ನಡೆಯಲಿದ್ದು, ಪ್ರಮುಖ ಆಕರ್ಷಣೆಯಾಗಲಿದೆ.

    • *ರಾಮಾಯಣದ ಕಥಾನಕ:* ಜನಪ್ರಿಯವಾಗಿ ‘ರಾಮಾಯಣ ಮಂಕಿ ಚಾಂಟ್’ ಎಂದೇ ಕರೆಯಲಾಗುವ ಕೆಚಕ್, ರಾಮಾಯಣದ ಪ್ರಮುಖ ಪ್ರಸಂಗವನ್ನು ಆಧರಿಸಿದೆ. ಸೀತಾದೇವಿಯನ್ನು ರಕ್ಷಿಸಲು ಶ್ರೀರಾಮ, ಹನುಮಂತ ಮತ್ತು ವಾನರ ಸೇನೆ ನಡೆಸುವ ಸಾಹಸಮಯ ಹೋರಾಟವನ್ನು ರಂಗದ ಮೇಲೆ ಅದ್ಭುತವಾಗಿ ಪ್ರದರ್ಶಿಸಲಾಗುತ್ತದೆ.

    • *ವಾದ್ಯಗಳಿಲ್ಲದ ಕಂಠಧ್ವನಿ ಲಯ:* 20ನೇ ಶತಮಾನದ ಆರಂಭದಲ್ಲಿ ಪ್ರಾಚೀನ ಆಚರಣೆಗಳಿಂದ ರೂಪತಳೆದ ಈ ಕಲೆಯ ವೈಶಿಷ್ಟ್ಯವೆಂದರೆ ಇಲ್ಲಿ ಯಾವುದೇ ವಾದ್ಯ ಪರಿಕರಗಳನ್ನು ಬಳಸುವುದಿಲ್ಲ. ಬದಲಿಗೆ, ವೃತ್ತಾಕಾರದಲ್ಲಿ ಕುಳಿತ ಪುರುಷ ಕಲಾವಿದರು ತಮ್ಮ ಕಂಠದಿಂದಲೇ ಏಕಕಾಲದಲ್ಲಿ ಹೊರಡಿಸುವ “ಚಕ್, ಚಕ್, ಚಕ್” (cak, cak, cak) ಸಮೂಹ ಧ್ವನಿಯೇ ಇಡೀ ಪ್ರದರ್ಶನಕ್ಕೆ ಲಯ ಮತ್ತು ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತದೆ.

    • *ಶಾಸ್ತ್ರೀಯ ಶೈಲಿಯ ನೃತ್ಯ*: ಈ ಹಿನ್ನೆಲೆ ಧ್ವನಿಯ ಲಯಕ್ಕೆ ತಕ್ಕಂತೆ ಬಾಲಿಯ ಶಾಸ್ತ್ರೀಯ ನೃತ್ಯ ಶೈಲಿಯಲ್ಲಿ ಪಾತ್ರಧಾರಿಗಳು ಪ್ರದರ್ಶನ ನೀಡಲಿದ್ದು, ಬಾಲಿಯ ನುರಿತ ತಜ್ಞ ಕಲಾವಿದರು ಅಕ್ಟೋಬರ್ 3ರಂದು ಬೆಂಗಳೂರಿನ ಪ್ರೇಕ್ಷಕರಿಗೆ ಈ ಅಪರೂಪದ ರಸದೌತಣವನ್ನು ಉಣಬಡಿಸಲಿದ್ದಾರೆ. ಒಟ್ಟು 16 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಹಬ್ಬದ ಕುರಿತು ಹೆಚ್ಚಿನ ಮಾಹಿತಿಗಾಗಿ https://bali-in-blr.paramfoundation.org/ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

  • 87 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ  ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಚಾಲನೆ.ಐಟಿಐ ಅಧಿಕಾರಿಗಳಿಂದ ಕಾಮಗಾರಿಗೆ ಅಡ್ಡಿ…!

    87 ಲಕ್ಷ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಚಾಲನೆ.ಐಟಿಐ ಅಧಿಕಾರಿಗಳಿಂದ ಕಾಮಗಾರಿಗೆ ಅಡ್ಡಿ…!

    ಕೆ ಆರ್ ಪುರ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೆ.ಆರ್.ಪುರ ಬಸ್ ನಿಲ್ದಾಣದ 87ಲಕ್ಷ ವೆಚ್ಚದ ನಿರ್ಮಾಣ ಕಾಮಗಾರಿಗೆ ಶಾಸಕ ಬಿ.ಎ.ಬಸವರಾಜ ಅವರು ಚಾಲನೆ ನೀಡಿದರು.

    ಭೂಮಿ ಪೂಜೆ ಮಾಡಿ ನಂತರ ಮಾತನಾಡಿದ ಶಾಸಕ ಬಿ.ಎ.ಬಸವರಾಜ ಅವರು ರಾಜ್ಯ ಸರ್ಕಾರ ಶಾಸಕರಿಗೆ ಅನುದಾನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದು,ಇದು ಅಭಿವೃದ್ಧಿ ಕಾಮಗಾರಿಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

    ಸರ್ಕಾರಿ‌‌ ಆಸ್ಪತ್ರೆ ನಿರ್ಮಾಣವಾಗಿ ವರ್ಷಗಳೆ ಕಳೆದರೂ ಈ ಸರ್ಕಾರಕ್ಕೆ ಉದ್ಘಾಟನೆ ಮಾಡುವಷ್ಟು ಸಮಯವಿಲ್ಲ ಎಂದು ದೂರಿದರು.

    ಬಿಜೆಪಿ ಸರ್ಕಾರ ಇರುವಾಗ ಮೇಲುಸೇತುವೆ ನಿರ್ಮಾಣ ಮಾಡಲು ಬಜೆಟ್‌ ನಲ್ಲಿ ಅನುಮೊದನೆ ಮಾಡಿದ್ದೆ ಆದರೆ ಈ ಸರ್ಕಾರ ಕೈಬಿಟ್ಟಿದೆ ಎಂದರು.

    ಸಂತೆ ಕಾಂಪ್ಲೆಕ್ಸ್ ಕಟ್ಟಡ ನಿರ್ಮಾಣ ಮಾಡಲು 50 ಕೋಟಿ ಅನುದಾನ ತಂದಿದ್ದೆ ಆದರೆ ಯಾರೋ ಕೋರ್ಟಿನಲ್ಲಿ ತಡೆಯಾಜ್ಞೆ ತಂದಿದ್ದಾರೆ ಯಾವುದೇ ಒಂದು ಒಳ್ಳೆಯ ಕೆಲಸ ಮಾಡಲು ಹೋದರು ಅಡೆತಡೆಗಳನ್ನು ತರುತ್ತಾರೆ ಎಂದರು.

    ಕಳೆದ ಮೂರು ವರ್ಷಗಳಲ್ಲಿ ಅನುದಾನಕ್ಕೆ ಅಲೆದಾಡುವ ಪರಿಸ್ಥಿತಿ ಆಗಿದೆ.ನಮ್ಮ ಕ್ಷೇತ್ರಕ್ಕೆ ಸಾವಿರ ಕೋಟಿ ಬೇಕು ಕೊಟ್ಟರೆ ಹಗಲು ರಾತ್ರಿ ನಾನು ನಮ್ಮ ಮುಖಂಡರು ಸೇರಿ ಕೆಲಸ ಮಾಡುತ್ತೇವೆ.ಕೊಟ್ಟಿರುವ ಹಣದಲ್ಲಿ ತುಂಬಾ ಅವಶ್ಯಕತೆ ಇರುವ ಕಾಮಗಾರಿ ಮಾಡಲಾಗುತ್ತದೆ ಎಂದರು.

    ಶಾಸಕರು ಬಸ್ ನಿಲ್ದಾಣಕ್ಕೆ ಪೂಜೆ ಮಾಡಿ ಹೋದ ಐಟಿಐ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಇದು ಐಟಿಐಗೆ ಸೇರಿದ ಜಾಗವಾಗಿದ್ದು ಇಲ್ಲಿ ಯಾವುದೇ ಕಾಮಗಾರಿಯನ್ನು ಮಾಡಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯರಾದ ಶ್ರೀಕಾಂತ್,ಜಯಪ್ರಕಾಶ್, ಮುಖಂಡರಾದ ಕೆ.ಹೇಮಂತ್,ರಾಜೇಂದ್ರ,ಶ್ರೀರಾಮ್,ಶ್ರೀನಿವಾಸ್,
    ಗಿರೀಶ್, ಮಾರುತಿ,ಕೃಷ್ಣ,ಮತ್ತಿತರರು ಇದ್ದರು.

  • ಕೆ.ಆರ್.ಪುರ ವೆಂಗಯ್ಯನ ಕೆರೆ ಅಂಗಳದಲ್ಲಿ ಜಿಮ್ ಉಪಕರಣಗಳ ಅಳವಡಿಕೆ ಮತ್ತು ಆಟದ ಮೈದಾನ ಕಾಮಗಾರಿಗೆ ಚಾಲನೆ.

    ಕೆ.ಆರ್.ಪುರ ವೆಂಗಯ್ಯನ ಕೆರೆ ಅಂಗಳದಲ್ಲಿ ಜಿಮ್ ಉಪಕರಣಗಳ ಅಳವಡಿಕೆ ಮತ್ತು ಆಟದ ಮೈದಾನ ಕಾಮಗಾರಿಗೆ ಚಾಲನೆ.

    ಕೆ.ಆರ್. ಪುರ: ಕೆರೆಗಳು ನಮ್ಮ ಪೂರ್ವಜರು ನೀಡಿರುವ ಬಳುವಳಿಯಾಗಿದ್ದು, ಅವುಗಳ ಸಂರಕ್ಷಣೆ ಅತ್ಯವಶ್ಯಕವಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.

    ಕೆಆರ್ ಪುರದ ಕೆರೆ ಅಂಗಳದಲ್ಲಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಕೆರೆಯಲ್ಲಿ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲು ಅವುಗಳ ಉಳಿವು ಅಗತ್ಯ,ನಮ್ಮ ಕ್ಷೇತ್ರದ ಕೆರೆಗಳ ಪುನಶ್ಚತನಕ್ಕೆ ಒತ್ತು ನೀಡುತ್ತಾ ಬರುತ್ತಿದ್ದೇನೆ ಎಂದರು.

    ಕೆ.ಆರ್.ಪುರ ಕೆರೆ ನಮ್ಮ ಕ್ಷೇತ್ರಕ್ಕೆ ಪ್ರಮುಖ ಕೇಂದ್ರ ಬಿಂದುವಾಗಿದ್ದು, ಈ ಕೆರೆಯನ್ನ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದ್ದು,ಸಾರ್ವಜನಿಕರ ಅನುಕೂಲಕ್ಕೆ ಒಪನ್ ಜಿಮ್ ಮತ್ತು ಮಕ್ಕಳ ಆಟದ ಮೈದಾನ ನಿರ್ಮಾಣ ಮಾಡಲಾಗುತ್ತಿದೆ ಎಂದರು.

    ಮೂರು ಕೋಟಿ ಅನುದಾನದಲ್ಲಿ ನಿರ್ಮಾಣವಾಗಿತ್ತಿರುವ ಈ ಓಪನ್ ಜಿಮ್ ನಲ್ಲಿ ಸಾರ್ವಜನಿಕರು ಉಚಿತವಾಗಿ ವ್ಯಾಯಾಮ ಮಾಡಲು ಅನುಕೂಲವಾಗುವಂತೆ ಗುಣಮಟ್ಟದ ಜಿಮ್ ಉಪಕರಣಗಳನ್ನು ಅಳವಡಿಸಲಾಗುತ್ತದೆ.ಬೆಳಿಗ್ಗೆ ಮತ್ತು ಸಂಜೆ ನಡಿಗೆಗಾಗಿ ಸ್ವಚ್ಛವಾದ ಹಾದಿ ಇರುತ್ತದೆ.ಗಿಡ-ಮರಗಳು ಮತ್ತು ಹಸಿರಿನ ವಾತಾವರಣವಿರುತ್ತದೆ.ಹಾಗೂ ಮಕ್ಕಳಿಗೆ ಜಾರುವೆಂಡೆ , ಜೋಕಾಲಿ ಮತ್ತು ಸುರಕ್ಷಿತ ಆಟಿಕೆಗಳು ಇರುತ್ತವೆ ಎಂದು ತಿಳಿಸಿದರು.

    ಕೆರೆ ಅಂಗಳದಲ್ಲಿ ಅಭಿವೃದ್ಧಿ ಕೆಲಸ ಮಾಡಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿಯನ್ನ ಎಲ್ಲರೂ ಸೇರಿ ಮಾಡಬೇಕು, ನಮ್ಮ ಮನೆ ರೀತಿ ಕೆರೆ ಅಂಗಳವನ್ನು ಸ್ವಚ್ಛ ವಾಗಿಟ್ಟು ಕೊಳ್ಳಬೇಕು ಎಂದು ತಿಳಿದರು.

    ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ವಾರ್ಡ್ ಅಧ್ಯಕ್ಷ ಶಿವಪ್ಪ, ಮುಖಂಡರಾದ ಪಟಾಕಿ ರವಿ, ಮಾಜಿ ಸೈನಿಕ ಶಿವಪ್ಪ, ಕೆ.ಪಿ.ಕೃಷ್ಣ ಮೋಹನ್, ಜೆಸಿಬಿ ಆಂತೋಣಿ, ವೆಂಗಯ್ಯನ ಕೆರೆ ಅಭಿವೃದ್ಧಿ ವೊರಿಯರ್ಸ್ ತಂಡ ಮುಂತಾದವರು ಹಾಜರಿದ್ದರು.

  • ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಕಾರ್ಯಾಚರಣೆ

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಕಾರ್ಯಾಚರಣೆ

    ನವದೆಹಲಿ: ಸೋಮವಾರದಿಂದ ಆರಂಭವಾಗಬೇಕಿದ್ದ ಬ್ಯಾಂಕ್ ನೌಕರರ 3 ದಿನಗಳ ಮುಷ್ಕರವನ್ನು ಭಾನುವಾರ ರಾತ್ರಿ ದಿಢೀರ್ ಮುಂದೂಡಲಾಗಿದೆ. ಭಾರತೀಯ ಬ್ಯಾಂಕುಗಳ ಸಂಘ ಮತ್ತು ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ(ಯುಎಫ್ ಬಿಯು) ನಡುವೆ ರಾತ್ರಿ 9.30ಕ್ಕೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಸಭೆಯಲ್ಲಿ, ಎಲ್ಲಾ ಶನಿವಾರಗಳನ್ನು ರಜಾದಿನವೆಂದು ಘೋಷಿಸುವ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಾಧ್ಯ ಪರ್ಯಾಯಗಳನ್ನು ಪರಿಶೀಲಿಸಿ, ಪಾಲುದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿದೆ. ಸ್ಟೇಲ್ – 4 ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ಅನ್ವಯಿಸುವ ಪಿಎಲ್‌ಐಯೋಜನೆ ಬಗ್ಗೆ ಸರ್ಕಾರಕ್ಕೆ ನೀಡಬೇಕಾದ ತಿದ್ದುಪಡಿ ಪ್ರಸ್ತಾವನೆಗಳ ಪರಿಶೀಲನೆಯೂ ಶೀಘ್ರ ಶುರುವಾಗಲಿದೆ ಎಂದು ಯುಎಫ್‌ಬಿಯು ಪ್ರಕಟಣೆಯಲ್ಲಿ ತಿಳಿಸಿದೆ.

  • ಮೆಡಿಕವರ್ ಆಸ್ಪತ್ರೆ ವತಿಯಿಂದ: ಆರೋಗ್ಯಕರ ಹೃದಯಕ್ಕಾಗಿ  ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್.

    ಮೆಡಿಕವರ್ ಆಸ್ಪತ್ರೆ ವತಿಯಿಂದ: ಆರೋಗ್ಯಕರ ಹೃದಯಕ್ಕಾಗಿ ‘ಲವ್ ಯುವರ್ ಹಾರ್ಟ್ 2.0’ ವಾಕಥಾನ್.

    ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಹೃದಯದ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮೆಡಿಕವರ್ ಆಸ್ಪತ್ರೆ, ಬೆಂಗಳೂರು ವತಿಯಿಂದ ‘Medicover Love Your Heart 2.0 – Walk for a Healthier Heart’ ವಾಕಥಾನ್ ಅನ್ನು ಮೆಡಿಕವರ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಯಿತು.

    ಮೆಡಿಕವರ್ ಆಸ್ಪತ್ರೆಯಿಂದ ಆರಂಭಗೊಂಡ ವಾಕಥಾನ್ ನೆಕ್ಸಸ್ ಶಾಂತನುಕೇತನ್ ಮಾಲ್ ವರೆಗೆ ಸಾಗಿತು. ಮೆಡಿಕವರ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ, ನಿಯಮಿತ ನಡಿಗೆ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಹಿರಿಯ ವೈದ್ಯರು, ವೈಟ್ ಫೀಲ್ಡ್ ಮತ್ತು ಹೂಡಿ ಭಾಗದ ಹಲವು ಅಪಾರ್ಟ್ ಮೆಂಟ್ ನಿವಾಸಿಗಳು, ಹಲವು ಸಂಘಟನೆಗಳು ಮತ್ತು ವಿದ್ಯಾರ್ಧಿಗಳು ಭಾಗಿಯಾಗಿದ್ರು.

    ಈ ಸಂದರ್ಭದಲ್ಲಿ ಮಾತನಾಡಿದ ಮೆಡಿಕವರ್ ಆಸ್ಪತ್ರೆಯ ಪ್ರಾದೇಶಿಕ ನಿರ್ದೇಶಕ ಶ್ರೀ ಸಿದ್ದರೆಡ್ಡಿ ಅವರು,“ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಜೀವನಶೈಲಿಯನ್ನು ಪ್ರತಿದಿನದ ಬದುಕಿನ ಭಾಗವಾಗಿಸಿಕೊಳ್ಳಬೇಕು. ನಿಯಮಿತ ನಡಿಗೆ ಹಾಗೂ ದೈಹಿಕ ಚಟುವಟಿಕೆ, ಸಮತೋಲಿತ ಆಹಾರ, ಒತ್ತಡ ನಿಯಂತ್ರಣ ಮತ್ತು ನಿಯಮಿತ ಆರೋಗ್ಯ ತಪಾಸಣೆಗಳು ಹೃದಯದ ಆರೋಗ್ಯಕ್ಕೆ ಬಹಳ ಮುಖ್ಯ. ‘Medicover Love Your Heart 2.0’ ವಾಕಥಾನ್ ಮೂಲಕ ಜನರಲ್ಲಿ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ಪ್ರತಿಯೊಬ್ಬರೂ ತಮ್ಮ ಆರೋಗ್ಯಕ್ಕಾಗಿ ಸಕ್ರಿಯವಾಗಿ ಹೆಜ್ಜೆ ಇಡಬೇಕು ಎಂಬ ಸಂದೇಶವನ್ನು ನೀಡುತ್ತಿದ್ದೇವೆ,” ಎಂದು ಹೇಳಿದರು.

    ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಭಾರತೀಯ ಅಂಧರ ಕ್ರಿಕೆಟ್ ತಂಡದ ಕೋಚ್ ಡಾ. ಪ್ಯಾಟ್ರಿಕ್ ರಾಜ್‌ಕುಮಾರ್ ಅವರು ಮಾತನಾಡಿ,
    “ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳು ದೇಹವನ್ನು ಮಾತ್ರವಲ್ಲದೆ ಒಟ್ಟಾರೆ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತವೆ. ಪ್ರತಿದಿನದ ಜೀವನದಲ್ಲಿ ನಡಿಗೆಯಂತಹ ಸರಳ ದೈಹಿಕ ಚಟುವಟಿಕೆಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಸಾಧ್ಯ. ಆರೋಗ್ಯಕರ ಹೃದಯಕ್ಕಾಗಿ ಜನರು ಸಕ್ರಿಯ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಮೆಡಿಕವರ್ ಆಸ್ಪತ್ರೆಯ ಈ ವಾಕಥಾನ್ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉತ್ತಮ ಪ್ರಯತ್ನವಾಗಿದೆ,” ಎಂದು ಹೇಳಿದರು.

    ವಾಕಥಾನ್‌ನಲ್ಲಿ ಭಾಗವಹಿಸಿದವರು “Walk • Raise Awareness • Protect Your Heart – ನಡೆಯಿರಿ • ಜಾಗೃತಿ ಮೂಡಿಸಿ • ನಿಮ್ಮ ಹೃದಯವನ್ನು ರಕ್ಷಿಸಿ” ಎಂಬ ಸಂದೇಶವನ್ನು ಸಾರಿದರು.

    ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತ ದೈಹಿಕ ಚಟುವಟಿಕೆ, ಆರೋಗ್ಯಕರ ಆಹಾರ ಪದ್ಧತಿ, ಧೂಮಪಾನದಿಂದ ದೂರವಿರುವುದು, ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವುದು ಹಾಗೂ ಅಗತ್ಯವಿದ್ದಾಗ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯವಾಗಿದೆ.

  • ವಿಶ್ವ ಹೃದಯ ದಿನ: ಪ್ರತಿದಿನ  ಹೃದಯವನ್ನು ರಕ್ಷಿಸಿ ಡಾ. ಎಚ್.ಎಸ್. ನಟರಾಜ್ ಶೆಟ್ಟಿ ಹೆಚ್ಚಿನ ಅರಿವು, ಆರಂಭಿಕ ಪತ್ತೆ ಮತ್ತು ಸಮಗ್ರ ಹೃದಯ ಆರೈಕೆಗೆ ಕರೆ

    ವಿಶ್ವ ಹೃದಯ ದಿನ: ಪ್ರತಿದಿನ ಹೃದಯವನ್ನು ರಕ್ಷಿಸಿ ಡಾ. ಎಚ್.ಎಸ್. ನಟರಾಜ್ ಶೆಟ್ಟಿ ಹೆಚ್ಚಿನ ಅರಿವು, ಆರಂಭಿಕ ಪತ್ತೆ ಮತ್ತು ಸಮಗ್ರ ಹೃದಯ ಆರೈಕೆಗೆ ಕರೆ

    ಪ್ರತಿಯೊಂದು ಹೃದಯ ಬಡಿತವೂ ಮುಖ್ಯ. ಆದರೂ ಹೃದಯ ಸಂಬಂಧಿ ಕಾಯಿಲೆಗಳು ಮೌನವಾಗಿ ಬೆಳೆಯಬಹುದು ಮತ್ತು ಕೆಲವು ಜನರು ಹೃದಯಾಘಾತ, ಪಾರ್ಶ್ವವಾಯು ಅಥವಾ ಇನ್ನೊಂದು ಗಂಭೀರ ತೊಡಕುಗಳ ನಂತರವೇ ತಮ್ಮ ಸ್ಥಿತಿಯನ್ನು ಕಂಡುಕೊಳ್ಳುತ್ತಾರೆ. ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ. ಆರಂಭಿಕ ಹೃದಯ ಸಮಸ್ಯೆ ಪತ್ತೆ ಮತ್ತು ಸಕಾಲಿಕ ಚಿಕಿತ್ಸೆ ನೀಡಿದರೆ ಹೃದಯ ಸಮಸ್ಯೆ ತಡೆಗಟ್ಟಬಹುದು.

    ವಿಶ್ವ ಹೃದಯ ಒಕ್ಕೂಟದ ಜಾಗತಿಕ ನೇತೃತ್ವದಲ್ಲಿ, ವಿಶ್ವ ಹೃದಯ ದಿನವು ಹೃದಯ ಸಂಬಂಧಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಮತ್ತು ವ್ಯಕ್ತಿಗಳು, ಸಮುದಾಯಗಳು ಮತ್ತು ಆರೋಗ್ಯ ವ್ಯವಸ್ಥೆಗಳು ಕ್ರಮ ಕೈಗೊಳ್ಳುವಂತೆ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

    2026 ರ ಅಭಿಯಾನ, “ಡೋಂಟ್ ಮಿಸ್ ಎ ಬೀಟ್”, ಹೃದಯ ಕಾಯಿಲೆಯು ಗಮನಕ್ಕೆ ಬಾರದೆ ಹೋಗಬಹುದು ಎಂದು ಎತ್ತಿ ತೋರಿಸುತ್ತದೆ ಮತ್ತು ಜನರು ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸಲು ಮತ್ತು ಅವರ ಹೃದಯ ಸಂಬಂಧಿ ಆರೋಗ್ಯವನ್ನು ರಕ್ಷಿಸಲು ಪ್ರೋತ್ಸಾಹಿಸುತ್ತದೆ.

    ಅರಿವಿನಿಂದಲೇ ತಡೆಗಟ್ಟುವಿಕೆ ಆರಂಭ

    ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹೃದ್ರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ‘HIV-ಹೃದಯ’ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಎಸ್. ನಟರಾಜ್ ಶೆಟ್ಟಿ ಅವರು, ಕೇವಲ ರೋಗಲಕ್ಷಣಗಳು ಕಾಣಿಸಿಕೊಂಡ ನಂತರವಷ್ಟೇ ಅಲ್ಲದೆ, ಪ್ರತಿದಿನವೂ ಹೃದಯದ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಒತ್ತಿ ಹೇಳುತ್ತಾರೆ.

    “ಹೃದಯಾಘಾತ ಸಂಭವಿಸುವವರೆಗೆ ಕಾಯದೆ, ಜನರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಮೊದಲೇ ಕಾಳಜಿ ವಹಿಸಬೇಕು. ನಿಯಮಿತ ಆರೋಗ್ಯ ತಪಾಸಣೆ, ಆರೋಗ್ಯಕರ ಜೀವನಶೈಲಿ ಮತ್ತು ಸಮಯೋಚಿತ ವೈದ್ಯಕೀಯ ಚಿಕಿತ್ಸೆಯು ಮಹತ್ವದ ಬದಲಾವಣೆಯನ್ನು ತರಬಲ್ಲದು,” ಎಂದು ಅವರು ಹೇಳುತ್ತಾರೆ.

    ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟಗಳ ಬಗ್ಗೆ ಅರಿವು ಹೊಂದುವುದು, ಸಮತೋಲಿತ ಆಹಾರ ಸೇವನೆ, ದೈಹಿಕವಾಗಿ ಸಕ್ರಿಯವಾಗಿರುವುದು, ತಂಬಾಕು ಸೇವನೆಯಿಂದ ದೂರವಿರುವುದು ಮತ್ತು ಸೂಕ್ತ ವೈದ್ಯಕೀಯ ಸಲಹೆಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಅವರು ಸಲಹೆ ನೀಡುತ್ತಾರೆ.

    ಎದೆಭಾರ ಅಥವಾ ಅಸ್ವಸ್ಥತೆ, ಉಸಿರಾಟದ ತೊಂದರೆ, ಅತಿಯಾದ ಬೆವರುವುದು ಅಥವಾ ತೋಳು, ಬೆನ್ನು ಹಾಗೂ ದವಡೆಗೆ ಹರಡುವ ನೋವಿನಂತಹ ಎಚ್ಚರಿಕೆಯ ಲಕ್ಷಣಗಳನ್ನು ಗುರುತಿಸುವುದು ಕೂಡ ಅಷ್ಟೇ ಮುಖ್ಯ. ಇಂತಹ ಲಕ್ಷಣಗಳು ಕಂಡುಬಂದಾಗ, ತಡಮಾಡದೆ ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವುದು ನಿರ್ಣಾಯಕವಾಗಿರುತ್ತದೆ.

    ಒಂದು ದಶಕದ HIV-ಹೃದಯ ಸಂಶೋಧನೆ

    ಡಾ. ಶೆಟ್ಟಿ ಅವರ ವೈದ್ಯಕೀಯ ಮತ್ತು ಸಂಶೋಧನಾ ಕಾರ್ಯದ ಪ್ರಮುಖ ಗಮನವು HIV ಮತ್ತು ಹೃದಯರಕ್ತನಾಳದ ಕಾಯಿಲೆಯ ನಡುವಿನ ಸಂಬಂಧವಾಗಿದೆ. 2013 ರಿಂದ ಆರಂಭಗೊಂಡು, ಅವರು HIV (PLWH) ನೊಂದಿಗೆ ವಾಸಿಸುವ ಜನರಲ್ಲಿ ತೀವ್ರವಾದ ಪರಿಧಮನಿಯ ಸಿಂಡ್ರೋಮ್‌ಗಳು ಮತ್ತು ಇತರ ಹೃದಯ ತೊಡಕುಗಳನ್ನು ಪರೀಕ್ಷಿಸುವ ಮೀಸಲಾದ ಸಂಶೋಧನಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

    ಈ ಕೆಲಸವು ಪರಿಧಮನಿಯ ಅಪಧಮನಿ ಕಾಯಿಲೆ, ಹೃದಯರಕ್ತನಾಳದ ಅಪಾಯಕಾರಿ ಅಂಶಗಳು, ಚಿಕಿತ್ಸಾ ತಂತ್ರಗಳು ಮತ್ತು ದೀರ್ಘಕಾಲೀನ ಫಲಿತಾಂಶಗಳ ಪ್ರಸ್ತುತಿಯನ್ನು ಪರಿಶೀಲಿಸುವ ಗಣನೀಯ ಕ್ಲಿನಿಕಲ್ ಸಮೂಹವಾಗಿ ವಿಕಸನಗೊಂಡಿದೆ. ಅವರ ಸಂಶೋಧನೆಯು HIV ಯೊಂದಿಗೆ ವಾಸಿಸುವ ಜನರಲ್ಲಿ ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿ, ದೀರ್ಘಕಾಲದ ಒಟ್ಟು ಮುಚ್ಚುವಿಕೆ ಮಧ್ಯಸ್ಥಿಕೆಗಳು, ಥ್ರಂಬಸ್ ಆಕಾಂಕ್ಷೆ ಮತ್ತು ತಿರುಗುವಿಕೆಯ ಅಥೆರೆಕ್ಟಮಿ ಸೇರಿದಂತೆ ಸಂಕೀರ್ಣ ಮಧ್ಯಸ್ಥಿಕೆಯ ಕಾರ್ಯವಿಧಾನಗಳನ್ನು ಸಹ ಅನ್ವೇಷಿಸಿದೆ.

    ಈ ಕೆಲಸವು ದೀರ್ಘಕಾಲೀನ HIV ಆರೈಕೆಯ ಹೆಚ್ಚುತ್ತಿರುವ ಪ್ರಮುಖ ಅಂಶವನ್ನು ಪ್ರತಿಬಿಂಬಿಸುತ್ತದೆ. ಪರಿಣಾಮಕಾರಿ ಆಂಟಿರೆಟ್ರೋವೈರಲ್ ಚಿಕಿತ್ಸೆಯು HIV ಅನ್ನು ಅನೇಕ ರೋಗಿಗಳಿಗೆ ದೀರ್ಘಕಾಲದ, ನಿರ್ವಹಿಸಬಹುದಾದ ಸ್ಥಿತಿಯಾಗಿ ಪರಿವರ್ತಿಸಿರುವುದರಿಂದ, ಹೃದಯರಕ್ತನಾಳದ ಕಾಯಿಲೆ ಸೇರಿದಂತೆ ಇತರ ದೀರ್ಘಕಾಲೀನ ಆರೋಗ್ಯ ಸ್ಥಿತಿಗಳತ್ತ ಗಮನವು ಹೆಚ್ಚಾಗಿ ಬದಲಾಗಿದೆ.
    ಭಾರತೀಯ HIV ಸಮೂಹದಲ್ಲಿ ಹೃದಯರಕ್ತನಾಳದ ತೊಂದರೆಗಳ ಕುರಿತು ಡಾ. ಶೆಟ್ಟಿ ಅವರ ಸಂಶೋಧನೆಯನ್ನು TCT 2025 ಸೇರಿದಂತೆ ಅಂತರರಾಷ್ಟ್ರೀಯ ವೈಜ್ಞಾನಿಕ ವೇದಿಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ, ಇದು HIV ಯೊಂದಿಗೆ ವಾಸಿಸುವ ಜನರಲ್ಲಿ ಹೃದಯರಕ್ತನಾಳದ ಕಾಯಿಲೆಯ ವ್ಯಾಪಕ ಚರ್ಚೆಗೆ ಭಾರತದಿಂದ ಕ್ಲಿನಿಕಲ್ ಡೇಟಾವನ್ನು ಕೊಡುಗೆ ನೀಡುತ್ತದೆ.

    ಆಸ್ಪತ್ರೆಯ ಆಚೆ ಹೃದಯ ಆರೈಕೆಯನ್ನು ತೆಗೆದುಕೊಳ್ಳುವುದು

    ಕ್ಲಿನಿಕಲ್ ಅಭ್ಯಾಸ ಮತ್ತು ಸಂಶೋಧನೆಯ ಜೊತೆಗೆ, ಡಾ. ಶೆಟ್ಟಿ ಹೃದಯ ತಪಾಸಣೆ ಮತ್ತು ಚಿಕಿತ್ಸೆಗೆ ಪ್ರವೇಶವನ್ನು ಸುಧಾರಿಸಲು ಸಮುದಾಯ ಸಂಪರ್ಕ ಮತ್ತು ಹೃದ್ರೋಗ ಶಿಬಿರಗಳಲ್ಲಿ ತೊಡಗಿಸಿಕೊಂಡಿದ್ದಾರೆ,

    ವಿಶೇಷವಾಗಿ ಸೌಲಭ್ಯ ವಂಚಿತ ಸಮುದಾಯಗಳಿಗೆ. ಇಂತಹ ಉಪಕ್ರಮಗಳು ಹೃದಯರಕ್ತನಾಳದ ಔಷಧದ ಪ್ರಮುಖ ತತ್ವವನ್ನು ಒತ್ತಿಹೇಳುತ್ತವೆ: ತಡೆಗಟ್ಟುವಿಕೆ ಮತ್ತು ಆರಂಭಿಕ ಪತ್ತೆ ಆಸ್ಪತ್ರೆಗಳಿಗೆ ಸೀಮಿತವಾಗಿರಬಾರದು. ಜಾಗೃತಿ, ತಪಾಸಣೆ, ಸಕಾಲಿಕ ಉಲ್ಲೇಖ ಮತ್ತು ಸೂಕ್ತ ಚಿಕಿತ್ಸೆಗೆ ಪ್ರವೇಶವು ಅವರ ಸಮುದಾಯಗಳ ಜನರನ್ನು ತಲುಪುವ ಅಗತ್ಯವಿದೆ.

    ಸಮಗ್ರ ಹೃದಯ-ಆರೋಗ್ಯ ಮಾದರಿಯ ಕಡೆಗೆ
    ಹೃದಯರಕ್ತನಾಳ ವೈದ್ಯಕೀಯದ ಭವಿಷ್ಯವು ಅನಾರೋಗ್ಯ-ಚಿಕಿತ್ಸಾ ಮಾದರಿಯನ್ನು ಮೀರಿ ಅಪಾಯದ ಮುನ್ಸೂಚನೆ, ತಡೆಗಟ್ಟುವಿಕೆ ಮತ್ತು ಆರಂಭಿಕ ಹಸ್ತಕ್ಷೇಪದ ಕಡೆಗೆ ಸಾಗಬೇಕು.

    ಇದಕ್ಕೆ ಹೃದ್ರೋಗ, ಪ್ರಾಥಮಿಕ ಆರೈಕೆ, ಮಧುಮೇಹಶಾಸ್ತ್ರ, ಸಾಂಕ್ರಾಮಿಕ ರೋಗಗಳು, ಪೋಷಣೆ, ದೈಹಿಕ ಚಟುವಟಿಕೆ, ಸಾರ್ವಜನಿಕ ಆರೋಗ್ಯ, ಡಿಜಿಟಲ್ ಆರೋಗ್ಯ ಮತ್ತು ಸಂಶೋಧನೆಯ ನಡುವೆ ಹೆಚ್ಚಿನ ಸಮನ್ವಯದ ಅಗತ್ಯವಿದೆ. HIV ಯೊಂದಿಗೆ ವಾಸಿಸುವ ಜನರು, ಹಾಗೆಯೇ ಮಧುಮೇಹ, ಅಧಿಕ ರಕ್ತದೊತ್ತಡ, ಮೂತ್ರಪಿಂಡ ಕಾಯಿಲೆ ಮತ್ತು ಇತರ ಹೃದಯರಕ್ತನಾಳದ ಅಪಾಯಕಾರಿ ಅಂಶಗಳಿರುವವರು, ದೀರ್ಘಕಾಲೀನ ಆರೈಕೆಗೆ ಸಮಗ್ರ ವಿಧಾನದಿಂದ ವಿಶೇಷವಾಗಿ ಪ್ರಯೋಜನ ಪಡೆಯಬಹುದು.
    “HIV ಯೊಂದಿಗೆ ವಾಸಿಸುವ ಜನರಿಗೆ, ಹೃದಯ ಆರೋಗ್ಯವು ಸಮಗ್ರ ಆರೈಕೆಯ ಅವಿಭಾಜ್ಯ ಅಂಗವಾಗಿರಬೇಕು” ಎಂದು ಡಾ. ಶೆಟ್ಟಿ ಹೇಳುತ್ತಾರೆ. “ಹೃದಯರಕ್ತನಾಳದ ಕಾಯಿಲೆಯ ಅಪಾಯದಲ್ಲಿರುವ ಪ್ರತಿಯೊಬ್ಬರಿಗೂ ಅದೇ ತತ್ವ ಅನ್ವಯಿಸುತ್ತದೆ – ನಿಮ್ಮ ಅಪಾಯಕಾರಿ ಅಂಶಗಳನ್ನು ತಿಳಿದುಕೊಳ್ಳಿ, ತಡೆಗಟ್ಟುವ ಕ್ರಮಗಳನ್ನು ತೆಗೆದುಕೊಳ್ಳಿ ಮತ್ತು ಎಚ್ಚರಿಕೆ ಚಿಹ್ನೆಗಳು ಕಾಣಿಸಿಕೊಂಡಾಗ ವೈದ್ಯಕೀಯ ಗಮನವನ್ನು ಪಡೆಯಿರಿ.”

    ವಿಶ್ವ ಹೃದಯ ಒಕ್ಕೂಟದ 2026 ಅಭಿಯಾನವು ಚಲನೆ ಮತ್ತು ಆರೋಗ್ಯಕರ ಜೀವನವನ್ನು ಒತ್ತಿಹೇಳುತ್ತದೆ, ಜನರು ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆಯನ್ನು ಸೇರಿಸಿಕೊಳ್ಳಲು ಪ್ರೋತ್ಸಾಹಿಸುತ್ತದೆ.

    ಸಂದೇಶ ಸರಳವಾಗಿದೆ: ಅದು ನಿಮಗೆ ಎಚ್ಚರಿಕೆ ನೀಡುವ ಮೊದಲು ನಿಮ್ಮ ಹೃದಯವನ್ನು ರಕ್ಷಿಸಿ. ಈ ವಿಶ್ವ ಹೃದಯ ದಿನದಂದು, ಪ್ರತಿ ಹೃದಯ ಬಡಿತವು ಆರೋಗ್ಯಕರ ಅಭ್ಯಾಸಗಳನ್ನು ಆಯ್ಕೆ ಮಾಡಲು, ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸಲು, ಮೊದಲೇ ಕಾರ್ಯನಿರ್ವಹಿಸಲು ಮತ್ತು ಹೃದಯ-ಆರೋಗ್ಯಕರ ಸಮಾಜವನ್ನು ನಿರ್ಮಿಸಲು ಸಹಾಯ ಮಾಡಲು ನಿಮಗೆ ನೆನಪಿಸಲಿ.

  • ಜನ ಸಾರ್ವಜನಿಕವಾಗಿ ಬೇಕಾಗಿರುವ ಕೆಲಸಗಳಿಗೆ ಧ್ವನಿ ಎತ್ತಬೇಕು: ಪೂರ್ಣಿಮಾ ಶ್ರೀನಿವಾಸ್

    ಜನ ಸಾರ್ವಜನಿಕವಾಗಿ ಬೇಕಾಗಿರುವ ಕೆಲಸಗಳಿಗೆ ಧ್ವನಿ ಎತ್ತಬೇಕು: ಪೂರ್ಣಿಮಾ ಶ್ರೀನಿವಾಸ್

    ಕೆ.ಆರ್ .ಪುರ: ಗಣೇಶ ದೇವರು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಲ್ಲ ಅದಕ್ಕಾಗಿ ಎಲ್ಲರೂ ಸೇರಿ ಆಚರಿಸುವುದು’ ಎಂದು ಮಾಜಿ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್‌ ತಿಳಿಸಿದರು.

    ಕೆ.ಆರ್. ಪುರ ಸಂತೆಯಲ್ಲಿ ಸಂತೆ ಮಕ್ಕಳು ಎಲ್.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 36 ನೇ ವರ್ಷದ ಗಣೇಶ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

    ‘ಬಾಲಗಂಗಾಧ‌ರ್ ತಿಲಕರು ಸ್ವತಂತ್ರ ಪೂರ್ವದಲ್ಲೇ ಗಣೇಶ ಹಬ್ಬ ಆಚರಿಸಿ ಒಂದಾಗಿಸಿ ಬ್ರಿಟೀಷರ ವಿರುದ್ಧ ಓಡಿಸಿದರು. ಬ್ರಿಟೀಷರ ಮಾದರಿ ನಮ್ಮಲ್ಲೇ ಹುಟ್ಟಿಕೊಂಡಿದ್ದಾರೆ ಅವರನ್ನು ಓಡಿಸಬೇಕು’ ಎಂದು ಹೇಳಿದರು.

    ಹಣಕ್ಕೆ ಕೈ ಚಾಚದೆ ಕಾರ್ಯಕ್ರ ಮಗಳನ್ನು ಮಾಡುತ್ತಿರುವ ಸಂತೆ ಮಕ್ಕಳು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂತೆ ಮಕ್ಕಳ ಗಣೇಶೋತ್ಸವದಲ್ಲಿ ಎಲ್ಲಾ ಧರ್ಮದ ಜನ ಪಾಲ್ಗೊಂಡಿರುವುದು ತುಂಬಾ ಸಂತೋಷ ತಂದಿದೆ ಎಂದರು

    ಸಾರ್ವಜನಿಕವಾಗಿ ಬೇಕಾಗಿರುವ ಕೆಲಸಗಳಿಗೆ ಧ್ವನಿ ಎತ್ತಬೇಕು. ಸ್ಯಾಟಲೈಟ್ ಬಸ್ ನಿಲ್ದಾಣ ಕೇಳಿದ್ದು ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸುತ್ತೇನೆ, ಜಾಗ ಇದೆ ಅಂತ ಹೇಳಿದ್ದಾರೆ ನಮ್ಮ ಪ್ರಯತ್ನ ಮಾಡಿ ಸುತ್ತೇವೆ ಎಂದು ಹೇಳಿದರು.

    ಎ.ಕೃಷ್ಣಪ್ಪ ರವರ ಕನಸು ನನಸಾಗಿಸಲು ನನ್ನ ಕೈಲಾದಷ್ಟು ಪ್ರಯತ್ನ ಪಡುತ್ತೇನೆ ಮುಂದಿನ್ಱ್ ದಿನಗಳಲ್ಲಿ ನಿಮ್ಮ ಸಹಾಯ ಬೇಕು ಎಂದರು.

    ಕೆ ಆರ್ ಪುರ ಜೆ ಸಿ ಅವರು ಸ್ವಚ್ಛತೆಗೆ ಹೆಚ್ಚು ಒತ್ತು ನೀಡುತ್ತಿ ದ್ದಾರೆ. ಸಂತೆಯಲ್ಲಿ ಸಿಮೆಂಟ್ ರಸ್ತೆ ಮಾಡಲು ಎಸ್ಟಿಮೇಟ್ ಮಾಡಿಸಿ ಸರ್ಕಾರ ಗಮನಕ್ಕೆ ತಂದು ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

    ಎಲ್.ಶ್ರೀನಿವಾಸ್ ಮಾತನಾಡಿ, ‘ಕೆ.ಆರ್. ಪುರಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣ ಬೇಕು ಸಾಕಷ್ಟು ಸ್ವಯಂ ಉದ್ಯೋಗ ಸೃಷ್ಟಿಯಾಗಿತ್ತೆ, ಬಸ್ ನಿಲ್ದಾಣ ಆದರೆ ಮಾರ್ಕೆಟ್ ಆಟೋಮಿಟಿಕ್ ಅಭಿವೃದ್ಧಿ ಆಗುತ್ತೆ ‘ಎಂದು ಹೇಳಿದರು.

    ಅ.2 ರಂದು ಬಿಬಿಎ ಪೌರಕಾರ್ಮಿಕರಿಗೆ ಸನ್ಮಾನ ಹಾಗೂ ಅತೀ ಶೀಘ್ರದಲ್ಲೇ ಒಂದು ಸಾವಿರ ಶಿಕ್ಷಕರನ್ನು ಕರೆಸಿ ಗುರುವಂದನಾ ಕಾರ್ಯಕ್ರಮ ಮಾಡುವ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

    ಜಂಟಿ ಆಯುಕ್ತ ಡಾ.ಸುಧಾ ಮಾತನಾಡಿ, ಭಾವೈಕ್ಯತೆಗೆ ಧಕ್ಕೆ ಆಗದಂತೆ ಆಚರಿಸುವ ಹಬ್ಬ ವಿನಾಯಕ ಹಬ್ಬ, ಭಾರತೀಯ ಸಂಸ್ಕೃತಿ ಎತ್ತಿಹಿಡಿಯುವ ಹಬ್ಬ ವಿನಾಯಕ ಉತ್ಸವ ಎಂದು ಹೇಳಿದರು.

    ಐತಿಹಾಸಿಕ ಸಂತೆ ಮಾರುಕಟ್ಟೆ ಇಟ್ಟುಕೊಂಡು ಬಜೆಟ್ ಮಂಡನೆ ಆಗಿದ್ದು, ಪ್ರಾಜೆಕ್ಟ್ ರೆಡಿ ಇದೆ. ನೀವು ಕಟ್ಟಿರುವ ತೆರಿಗೆ ಸಾಕು ಅಭಿವೃದ್ಧಿ ಮಾಡಲು, ನಿರ್ಮಾಣ ಮಾಡಿಕೊಟ್ಟಾಗ ನಿರ್ವಹಣೆ ಮಾಡಿಕೊಳ್ಳಿ ಎಂದರು.

    ಈ ಸಂದರ್ಭದಲ್ಲಿ ಮುಖಂಡ ರಾದ ಚನ್ನ ಕೇಶವ, ನಿಖಿಲ್, ಸಂತೆ ಮಕ್ಕಳು ಮತ್ತಿತರರಿದ್ದರು.

  • ಪಕ್ಷ ಟಿಕೆಟ್ ನೀಡಿದರೆ ಕೆ ಆರ್.ಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಾಗಿದ್ದೇನೆ : ಎನ್‌.ಎಸ್.ನಂದೀಶ್ ರೆಡ್ಡಿ

    ಪಕ್ಷ ಟಿಕೆಟ್ ನೀಡಿದರೆ ಕೆ ಆರ್.ಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಾಗಿದ್ದೇನೆ : ಎನ್‌.ಎಸ್.ನಂದೀಶ್ ರೆಡ್ಡಿ

    ಕೆ.ಆರ್.ಪುರ: ಬಿಜೆಪಿ ಪಕ್ಷ ಅವಕಾಶ ಮಾಡಿಕೊಟ್ಟರೆ ಕೆ.ಆರ್.ಪುರ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೆನೆ ಎಂದು ಮಾಜಿ ಶಾಸಕ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ಎಸ್.ನಂದೀಶ್ ರೆಡ್ಡಿ ಅವರು ತಿಳಿಸಿದರು.

    ಕೆ.ಆರ್.ಪುರದ ಸಂತೆಯಲ್ಲಿ ಸಂತೆ ಮಕ್ಕಳು ಏರ್ಪಡಿಸಿದ್ದ ಗಣೇಶೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೆ.ಆರ್.ಪುರ ಕ್ಷೇತ್ರ ನನ್ನ ಕರ್ಮಭೂಮಿ ಎಂದು ಹೇಳಿದರು.

    ಕ್ಷೇತ್ರದ ಜನತೆ ನನಗೆ ಅತಿಹೆಚ್ಚು ಪ್ರೀತಿ ನೀಡಿದ್ದು,ಅವರ ಪ್ರೀತಿಗೆ ನಾನು ಚಿರಖುಣಿ ಅವರ ಸೇವೆ ಮಾಡಲು ನನಗೆ ಅವಕಾಶ ದೊರೆತರೆ ಸದಾಸಿದ್ಧ ಎಂದು ಹೇಳಿದರು.

    2008 ರ ಅವಧಿಯಲ್ಲಿ ಕ್ಷೇತ್ರಕ್ಕೆ ಕಾವೇರಿ ನೀರು ತಂದರೂ ಇದುವರೆಗೆ ಕ್ಷೇತ್ರದ ಸಂಪೂರ್ಣ ಭಾಗಕ್ಕೆ ನೀರಿನ ವ್ಯವಸ್ಥೆ ಹಾಗೂ ಸುಸಜ್ಜಿತ ನೀರಿನ ಟ್ಯಾಂಕರ್ ನಿರ್ಮಾಣ ಮಾಡಲು ಆಗದೇ ಇರುವುದು ವಿರ್ಪಯಾಸ ಎಂದು ಹೇಳಿದರು.

    ಸರ್ಕಾರಿ ಭೂಮಿಗಳ ರಕ್ಷಣೆಯಾಗದೆ ಭೂಗಳ್ಳರ ಪಾಲಾಗುತ್ತಿದೆ,ಕ್ಷೇತ್ರದ ಜನತೆಗೆ ತೊಂದರೆಯಾದರೆ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ, ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಕೆ ನೀಡಿದರು.

    ಕೆ.ಆರ್.ಪುರದಲ್ಲಿ ನಿಮಾನ್ಸ್ ಆಸ್ಪತ್ರೆ ಸೇರಿದಂತೆ,
    ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಕಾರ್ಯಮಾಡುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ವೀರಣ್ಣ,ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ.ಶ್ರೀನಿವಾಸ್ ಮತ್ತಿತರರು ಇದ್ದರು.

  • ಪ್ರಧಾನಿ ನರೇಂದ್ರ ಮೋದಿ ಜನ್ಮದಿನ : ವಿಶೇಷ ಪೂಜೆ, ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಿದ ಶಾಸಕ‌ ಬೈರತಿ‌ ಬಸವರಾಜ್.

    ಪ್ರಧಾನಿ ನರೇಂದ್ರ ಮೋದಿ ಜನ್ಮದಿನ : ವಿಶೇಷ ಪೂಜೆ, ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಿದ ಶಾಸಕ‌ ಬೈರತಿ‌ ಬಸವರಾಜ್.

    ಕೆ.ಆರ್.ಪುರ: ಪ್ರಧಾನ ಮಂತ್ರಿ‌ ನರೇಂದ್ರ ಮೋದಿಯವರ 76ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೇಡ್ ವಿತರಣೆ ಮಾಡುವುದರ ಮೂಲಕ ಶಾಸಕ ಬೈರತಿ ಬಸವರಾಜ ಚಾಲನೆ ನೀಡಿದರು.

    ನಂತರ ಮಾತನಾಡಿದ ಅವರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಜನಪರ ಯೋಜನೆ ಜಾರಿಗೆ ತರುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ, ವಿಶ್ವದಲ್ಲೇ ನಮ್ಮ ದೇಶದ ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಒಂದು ದಿನ ವಿಶ್ರಮಿಸದೆ ಸದಾ ಕಾಲ ದೇಶದ ಅಭಿವೃದ್ಧಿಗೆ ದುಡಿಯುತ್ತಿರುವ ಮೋದಿ ಅವರ ಜನ್ಮದಿನವನ್ನು ಅನೇಕ ಸೇವಾ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಎಂದು ಆರ್ಥಪೂರ್ಣವಾಗಿ ಆಚರಿಸಲಾಯಿತು ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದು ಅವರ ನೇತೃತ್ವದಲ್ಲಿ ಭಾರತ ದೇಶ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

    ಇಂದು ಸಂಜೆ 6 ರಿಂದ ರಾತ್ರಿ 7 ರೊಳಗೆ ಎಲ್ಲರೂ ಮನೆಯಲ್ಲಿ ದೀಪ ಬೆಳಗುವ ಮೂಲಕ ಕೈಜೋಡಿಸಬೇಕು ಮನವಿ ಮಾಡಿದರು.

    ನರೇಂದ್ರ ಮೋದಿ ಅವರ ಹೆಸರಿನಲ್ಲಿ ಕಟ್ಟೆವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಶಾಸಕರು ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ದೇಶದ ಅಭಿವೃದ್ಧಿ ಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಆವರಣದಲ್ಲಿ ಭಕ್ತಿಭಾವದಿಂದ ಪೂಜಾ ಕಾರ್ಯಕ್ರಮ ನೆರವೇರಿಸ ಲಾಯಿತು. ಜನ್ಮದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹದ ವಾತಾವರಣ ಕಂಡುಬಂದಿತು.

    ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷ ಮುನೇಗೌಡ ಮಾಜಿ ಪಾಲಿಕೆ ಸದಸ್ಯರಾದ ಗೀತಾವಿವೇಕಾನಂದ, ಅಂತೋಣಿ ಸ್ವಾಮಿ,ಶ್ರೀಕಾಂತ್ ಮುಖಂಡರಾದ ಕೆ.ಹೇಂಮತ್,ಜಿಮ್ ರಮೇಶ್ ಗೌಡ,,ಶಿವಪ್ಪ,ಶ್ರೀನಿವಾಸ್,ಗಿರೀಶ್, ಮತ್ತಿತರರು ಇದ್ದರು.