Category: ಅಪರಾಧ ಸುದ್ದಿ

  • 20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ‘ಕಾಮಪಿಶಾಚಿ’ ಅರೆಸ್ಟ್!

    20ಕ್ಕೂ ಹೆಚ್ಚು ಮಹಿಳೆಯರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ‘ಕಾಮಪಿಶಾಚಿ’ ಅರೆಸ್ಟ್!

    ಬೆಂಗಳೂರು: ಸಮಾಜದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದುಕೊಂಡು, ರಕ್ಷಣೆ ನೀಡಬೇಕಾದ ವ್ಯಕ್ತಿಯೇ ಭಕ್ಷಕನಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ರಾಮನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಸದಸ್ಯ ಚಂದ್ರೇಗೌಡ ಎಂಬಾತನನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಈತನ ಮೊಬೈಲ್ ಕೆದಕಿದ ಪೊಲೀಸರಿಗೇ ಶಾಕ್ ಕಾದಿತ್ತು!
    ಆರೋಪಿ ಚಂದ್ರೇಗೌಡ ಕೇವಲ ಒಬ್ಬ ವ್ಯಕ್ತಿಯಲ್ಲ, ಈತ ನಕಲಿ ಐಡಿ ಕಾರ್ಡ್‌ಗಳ ಸರದಾರ. ತಾನು ಪೊಲೀಸ್ ಅಧಿಕಾರಿ, ವಕೀಲ, ಮಾಧ್ಯಮ ಪ್ರತಿನಿಧಿ ಹಾಗೂ ಉಪನ್ಯಾಸಕ ಎಂದು ಸುಳ್ಳು ಹೇಳಿ ಮಹಿಳೆಯರನ್ನು ನಂಬಿಸುತ್ತಿದ್ದ. ಗಂಡನಿಂದ ದೂರವಾಗಿದ್ದ ಮಹಿಳೆಯೊಬ್ಬರಿಗೆ ಮದುವೆಯಾಗುವ ನಾಟಕವಾಡಿ, ಆಕೆಯ ಕೊರಳಿಗೆ ಅರಿಶಿನದ ಕೊಂಬು ಕಟ್ಟಿ ನಂಬಿಸಿದ್ದ.

    ಮೊಬೈಲ್‌ನಲ್ಲಿತ್ತು 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋ!
    ಸಂತ್ರಸ್ತ ಮಹಿಳೆ ಚಂದ್ರೇಗೌಡನ ಮೊಬೈಲ್ ನೋಡಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ. ಮೊಬೈಲ್‌ನಲ್ಲಿ ಬರೋಬ್ಬರಿ 20ಕ್ಕೂ ಹೆಚ್ಚು ಮಹಿಳೆಯರ ಖಾಸಗಿ ಫೋಟೋ ಮತ್ತು ವಿಡಿಯೋಗಳಿದ್ದವು. ಇವುಗಳನ್ನು ಇಟ್ಟುಕೊಂಡು ಮಹಿಳೆಯರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಎನ್ನಲಾಗಿದೆ. ದೂರು ನೀಡಿದ ಮಹಿಳೆಯಿಂದಲೇ ಈತ ಸುಮಾರು 5 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ.

    ಆರೋಪಿಯ ವಿಚಿತ್ರ ವಂಚನೆ ಜಾಲ:
    ದಾಖಲೆ ತಿದ್ದುಪಡಿ: ಸಂತ್ರಸ್ತೆಯ ಮಗಳ ಶಾಲಾ ದಾಖಲೆಗಳಲ್ಲಿ ತನ್ನ ಹೆಸರನ್ನೇ ತಂದೆಯ ಸ್ಥಾನಕ್ಕೆ ಸೇರಿಸಲು ಪ್ರಯತ್ನಿಸಿದ್ದ.
    ನಕಲಿ ಗಂಡ: ಮನೆಯ ಕರಾರು ಪತ್ರದಲ್ಲಿ ತಾನೇ ಗಂಡ ಎಂದು ಬಿಂಬಿಸಿಕೊಂಡಿದ್ದ.
    ತಾಯಿಯ ಬಳಕೆ: ತನ್ನ ತಾಯಿಯನ್ನು ಸಂತ್ರಸ್ತೆಯ ಮನೆಯಲ್ಲೇ ಬಿಟ್ಟು ವರ್ಷಗಟ್ಟಲೆ ಸೇವೆ ಮಾಡಿಸಿಕೊಂಡಿದ್ದ.

    ಮಹಿಳೆಯ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಹನಿ ಟ್ರ್ಯಾಪ್ ಪ್ರಕರಣದಡಿ ಚಂದ್ರೇಗೌಡನನ್ನು ಬಂಧಿಸಿದ್ದಾರೆ.ಆರೋಪಿಯ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದು, ಅದರಲ್ಲಿರುವ ಸಾಕ್ಷ್ಯಗಳು ಕಂಡು ಪೊಲೀಸರೇ ದಂಗಾಗಿದ್ದಾರೆ. ಈತ ಸಿನಿಮಾ ಒಂದರಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದನಂತೆ. ಅದೇ ಫೋಟೋ ಇಟ್ಕೊಂಡು ಮಹಿಳೆಯರಿಗೆ ತಾನೊಬ್ಬ ಪೊಲೀಸ್ ಅಂತಾ ನಂಬಿಸಿ ಮೋಸ ಮಾಡಿದ್ದಾನೆ. ಸದ್ಯ ಈತನಿಂದ ಇನ್ಯಾರಾದರೂ ವಂಚನೆಗೆ ಒಳಗಾಗಿದ್ದಾರಾ ಅನ್ನೋ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.ಒಟ್ಟಿನಲ್ಲಿ ಮಕ್ಕಳ ರಕ್ಷಣೆ ಮಾಡಬೇಕಾದವರೇ ಮಹಿಳೆಯರ ಶೋಷಣೆಗೆ ಇಳಿದಿರೋದು ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ

  • ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂತರ ರೂ.ಮೌಲ್ಯದ ಬೆಳ್ಳಿ ಲೂಟಿ!

    ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂತರ ರೂ.ಮೌಲ್ಯದ ಬೆಳ್ಳಿ ಲೂಟಿ!

    ಬೆಂಗಳೂರು: ಚಿನ್ನ ಮತ್ತು ಬೆಳ್ಳಿಯದರ ಏರಿಕೆಯಾಗುತ್ತಿದ್ದಂತೆ ಕಳ್ಳರು ಮತ್ತೆ ತಮ್ಮ ಕೈಚಳಕ ತೋರಿಸಲು ಶುರುಮಾಡಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯ ಎಂಟನೇ ಮೈಲಿ ಬಳಿಯ ಹಾವನೂರಿನಲ್ಲಿರುವ ಎಂಬಿ ಜ್ಯುವೆಲ್ಲರ್ಸ್ ಮಳಿಗೆಯಲ್ಲಿ ಭೀಕರ ಕಳ್ಳತನ ನಡೆದಿದ್ದು, ಸುಮಾರು 1.20 ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳನ್ನು ಕದೀಮರು ದೋಚಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಅತ್ಯಂತ ಯೋಜಿತವಾಗಿ ಕಳ್ಳತನ ಮಾಡಲಾಗಿದೆ. ಜ್ಯುವೆಲ್ಲರಿ ಶಾಪ್‌ನ ಹಿಂಭಾಗದ ರೂಮ್‌ನ ಬೀಗ ಮುರಿದು ಒಳನುಗ್ಗಿರುವ ಕಳ್ಳರು, ನಂತರ ಗೋಡೆಯನ್ನು ಕೊರೆದು ಮಳಿಗೆಯೊಳಗೆ ಪ್ರವೇಶಿಸಿ ಸುಮಾರು 70 ಕೆಜಿ ಬೆಳ್ಳಿ ವಸ್ತುಗಳ್ಳನ್ನು ಕದ್ದಿದ್ದಾರೆ.

    ಕಳ್ಳತನದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಾಗಲಗುಂಟೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮಳಿಗೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ಕಳ್ಳರು ಗೋಡೆ ಕೊರೆಯಲು ಬಳಸಿದ ವಿಧಾನಗಳನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

    ಸದ್ಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ನಗರದಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿರುವುದು ವ್ಯಾಪಾರಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

  • ರೇಣುಕಾಸ್ವಾಮಿ ಕೊಲೆ ಪ್ರಕರಣ : ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್…

    ರೇಣುಕಾಸ್ವಾಮಿ ಕೊಲೆ ಪ್ರಕರಣ : ಜಾಮೀನು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್…

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎಂಟು ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ, ಇದೀಗ ಜಾಮೀನು ಕೋರಿ ಮತ್ತೊಮ್ಮೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆಯ ವಿಳಂಬವನ್ನು ಪ್ರಮುಖ ಕಾರಣವಾಗಿಟ್ಟುಕೊಂಡು ದರ್ಶನ್ ಈ ಅರ್ಜಿ ಸಲ್ಲಿಸಿದ್ದಾರೆ.

    ಮೇ 4ಕ್ಕೆ ವಿಚಾರಣೆ ನಿಗದಿ…
    ದರ್ಶನ್ ಪರವಾಗಿ ದೇಶದ ಖ್ಯಾತ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಇದರ ವಿಚಾರಣೆಯನ್ನು ಮೇ 4ಕ್ಕೆ ನಿಗದಿಪಡಿಸಿದೆ. ಈ ಹಿಂದೆ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ರದ್ದಾದ ನಂತರ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈಗ ನಿಯಮಿತ ಜಾಮೀನಿಗಾಗಿ ಅವರು ಸುಪ್ರೀಂ ಮೊರೆ ಹೋಗಿದ್ದಾರೆ.

    ಅರ್ಜಿಯಲ್ಲಿನ ಪ್ರಮುಖ ಅಂಶಗಳು:
    ದರ್ಶನ್ ಪರ ವಕೀಲರು ಅರ್ಜಿಯಲ್ಲಿ ಈ ಕೆಳಗಿನ ಅಂಶಗಳನ್ನು ಉಲ್ಲೇಖಿಸಿದ್ದಾರೆ:

    ವಿಚಾರಣೆ ವಿಳಂಬ: ಪ್ರಕರಣದ ವಿಚಾರಣೆ ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಕಳೆದ 8 ತಿಂಗಳಿನಿಂದ ದರ್ಶನ್ ಜೈಲಿನಲ್ಲಿದ್ದರೂ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡಿಲ್ಲ.

    ಸಾಕ್ಷಿಗಳ ಸಂಖ್ಯೆ: ಈ ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಇದುವರೆಗೆ ಕೇವಲ 15 ಸಾಕ್ಷಿಗಳ ವಿಚಾರಣೆ ಮಾತ್ರ ಮುಕ್ತಾಯಗೊಂಡಿದೆ. ಇದೇ ವೇಗದಲ್ಲಿ ವಿಚಾರಣೆ ನಡೆದರೆ ಮುಗಿಯಲು ಬಹಳ ಸಮಯ ಹಿಡಿಯುತ್ತದೆ ಎಂಬುದು ವಾದವಾಗಿದೆ.

    ಸಹಕಾರದ ಭರವಸೆ: ತನಿಖೆ ಮತ್ತು ನ್ಯಾಯಾಲಯದ ಪ್ರಕ್ರಿಯೆಗಳಿಗೆ ದರ್ಶನ್ ಸಂಪೂರ್ಣವಾಗಿ ಸಹಕರಿಸಲಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

    ಜೈಲು ವಾಸ ಮತ್ತು ಕಾನೂನು ಹೋರಾಟ:

    ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್, ಸುದೀರ್ಘ ಕಾಲದಿಂದ ಜೈಲಿನಲ್ಲಿದ್ದಾರೆ. ಈ ಹಿಂದೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೂ ಅವರಿಗೆ ಶಾಶ್ವತ ಜಾಮೀನು ಸಿಕ್ಕಿರಲಿಲ್ಲ. ಇದೀಗ ಸಾಕ್ಷಿಗಳ ವಿಚಾರಣೆಯ ವಿಳಂಬವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಬಿಡುಗಡೆಗೆ ಪ್ರಯತ್ನ ನಡೆಸುತ್ತಿದ್ದಾರೆ.

    ಮೇ 4ರಂದು ನಡೆಯಲಿರುವ ಸುಪ್ರೀಂಕೋರ್ಟ್ ವಿಚಾರಣೆಯು ದರ್ಶನ್ ಅವರ ಭವಿಷ್ಯವನ್ನು ನಿರ್ಧರಿಸಲಿದ್ದು, ಅಭಿಮಾನಿಗಳಲ್ಲಿ ಮತ್ತು ಕಾನೂನು ವಲಯದಲ್ಲಿ ಕುತೂಹಲ ಮೂಡಿಸಿದೆ.

  • ಜಾರ್ಖಂಡ್ ಮೂಲದ ಮಹಿಳೆ ಅನುಮಾನಾಸ್ಪದ ಸಾವು;  ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ!

    ಜಾರ್ಖಂಡ್ ಮೂಲದ ಮಹಿಳೆ ಅನುಮಾನಾಸ್ಪದ ಸಾವು; ಮನೆಯಲ್ಲಿ ಅರೆಕೊಳೆತ ಬೆತ್ತಲೆ ದೇಹ ಪತ್ತೆ!

    ಬೆಂಗಳೂರು, : ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ 34 ವರ್ಷದ ಯುವತಿಯೊಬ್ಬಳ ಮೃತದೇಹ, ಆಕೆಯ ಆಡುಗೋಡಿ ವ್ಯಾಪ್ತಿಯ ಬಾಡಿಗೆ ಮನೆಯಲ್ಲಿ ಅತ್ಯಂತ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೃತ ಯುವತಿಯನ್ನು ಪೂಜಾ ದತ್ತ (34) ಎಂದು ಗುರುತಿಸಲಾಗಿದೆ.

    ಪೂಜಾ ದತ್ತ ಅವರು ಮೂಲತಃ ಜಾರ್ಖಂಡ್‌ನ ಧನಬಾದ್ ಸಮೀಪದ ಹಿರಾಪುರ ನಿವಾಸಿಯಾಗಿದ್ದರು. ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪೂಜಾ ಅವರ ಬಾಡಿಗೆ ಮನೆಯಲ್ಲಿ ಘಟನೆ ನಡೆದಿದೆ.

    ಮನೆಯಿಂದ ಭಾರಿ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲು ಮುರಿದು ನೋಡಿದಾಗ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ. ಪೂಜಾ ದತ್ತ ಅವರ ಮೃತದೇಹ ಸಂಪೂರ್ಣವಾಗಿ ಬೆತ್ತಲೆ ಸ್ಥಿತಿಯಲ್ಲಿ ಮತ್ತು ಅರೆಕೊಳೆತ ಸ್ಥಿತಿಯಲ್ಲಿತ್ತು. ಮೃತದೇಹ ಸಂಪೂರ್ಣ ಕೊಳೆತು ಹೋಗಿದ್ದರಿಂದ ಸಾವು ಸಂಭವಿಸಿ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ.

    ಬೆತ್ತಲೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಮೃತದೇಹ ಕೊಳೆತ ಸ್ಥಿತಿಯಲ್ಲಿರುವುದು ಸಾವಿನ ಕುರಿತು ಭಾರಿ ಅನುಮಾನಗಳನ್ನು ಮೂಡಿಸಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪೂಜಾ ಅವರ ಫೋನ್ ಕರೆಗಳು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ.

    ಬಾಡಿಗೆ ಮನೆ ಮಾಲಕಿ ಜಾನಕಮ್ಮ ಬಿಚ್ಚಿಟ್ಟ ಸ್ಫೋಟಕ ಸತ್ಯ!
    “ಪೂಜಾ ದತ್ತಾ ಕಳೆದ ಮೂರು ವರ್ಷಗಳಿಂದ ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಳು. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈಕೆ ಅವಿವಾಹಿತೆಯಾಗಿದ್ದಳು. ಹೆಚ್ಚಾಗಿ ಹಿಂದಿ ಭಾಷೆಯಲ್ಲೇ ಮಾತನಾಡುತ್ತಿದ್ದಳು.” ಎಂದು ಮಾಲಕಿ ಜಾನಕಮ್ಮ ಹೇಳಿದ್ದಾರೆ. “ಪೂಜಾಳನ್ನು ನೋಡಲು ಓರ್ವ ಯುವಕ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಆತನೊಂದಿಗೆ ಪೂಜಾ ಸದಾ ಜಗಳವಾಡುತ್ತಿದ್ದಳು. ಆದರೆ ಆ ಜಗಳಕ್ಕೆ ಕಾರಣವೇನು ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ.”

    “ಕೊನೆಯ ಬಾರಿಗೆ ನಾನು ಪೂಜಾಳನ್ನು ಕಳೆದ ಗುರುವಾರ ನೋಡಿದ್ದೆ. ಆಕೆ ದಿನಸಿ ಸಾಮಗ್ರಿಗಳನ್ನು ತರಲು ಮೂರನೇ ಮಹಡಿಯಿಂದ ಕೆಳಗಿಳಿದು ಬರುತ್ತಿದ್ದಳು. ಆನಂತರ ಆಕೆ ಕಾಣಿಸಿಕೊಂಡಿರಲಿಲ್ಲ.” “ಇಂದು ಪಕ್ಕದ ಮನೆಯ ಯುವಕರು ಮನೆಯಿಂದ ಭಾರಿ ದುರ್ನಾತ ಬರುತ್ತಿದೆ ಎಂದು ತಿಳಿಸಿದರು. ತಕ್ಷಣ ಬಾಗಿಲು ಒಡೆದು ನೋಡಿದಾಗ ಪೂಜಾ ಬೆತ್ತಲಾಗಿ, ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಮೃತದೇಹ ಸಂಪೂರ್ಣವಾಗಿ ಕೊಳೆತು ಹೋಗಿತ್ತು.” ಎಂದು ಹೇಳಿದ್ದಾರೆ.

    ಮನೆ ಮಾಲಕಿ ಹೇಳಿಕೆಯಂತೆ, ಪೂಜಾ ಜೊತೆ ಜಗಳವಾಡುತ್ತಿದ್ದ ಆ ಯುವಕ ಯಾರು? ಗುರುವಾರದ ನಂತರ ನಡೆದಿದ್ದೇನು? ಎಂಬ ಪ್ರಶ್ನೆಗಳು ಈಗ ಕಾಡುತ್ತಿವೆ. ಬೆತ್ತಲೆ ಸ್ಥಿತಿಯಲ್ಲಿ ರಕ್ತದ ಮಡುವಿನಲ್ಲಿ ಮೃತದೇಹ ಪತ್ತೆಯಾಗಿರುವುದು ಇದು ವ್ಯವಸ್ಥಿತ ಕೊಲೆ ಎಂಬ ಅನುಮಾನವನ್ನು ಬಲಪಡಿಸಿದೆ.

  • ಪತ್ನಿಯ ನಡತೆಯ ಮೇಲೆ ಸಂಶಯ.. ನಡು ರಸ್ತೆಯಲ್ಲೇ ಹಂಡತಿಯ ರಕ್ತ ಹರಿಸಿದ ಗಂಡ.!

    ಪತ್ನಿಯ ನಡತೆಯ ಮೇಲೆ ಸಂಶಯ.. ನಡು ರಸ್ತೆಯಲ್ಲೇ ಹಂಡತಿಯ ರಕ್ತ ಹರಿಸಿದ ಗಂಡ.!

    ಕೆ.ಜಿ.ಎಫ್: ಒಂದು ಕ್ಷಣದ ಕೋಪ ಮತ್ತೆ ಅನುಮಾನ ಏನೆಲ್ಲಾ ಮಾಡುತ್ತೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ..

    ಕೋಲಾರದಲ್ಲಿ ಪತ್ನಿಯ ನಡತೆಯ ಮೇಲೆ ಸಂಶಯ ವ್ಯಕ್ತಪಡಿಸಿದ ಪತಿ ತನ್ನ ಪತ್ನಿಯನ್ನ ಮಚ್ಚಿನಿಂದ ಕೊಚ್ಚಿ ಬ*ರ್ಬರವಾಗಿ ಕೊ*ಲೆ ಮಾಡಿದ್ದಾನೆ. ಘಟನೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದ ಬಳಿ ನಡೆದಿದೆ.

    ಮೃತರನ್ನು ಈಶ್ವರಮ್ಮ ಎಂದು ಗುರುತಿಸಲಾಗಿದ್ದು, ಆರೋಪಿ ಪತಿಯನ್ನು ಆಂಧ್ರಪ್ರದೇಶದ ಪೆದ್ದೂರು ಮೂಲದ ಗೋಪಿನಾಥ ಎಂದು ಗುರುತಿಸಲಾಗಿದೆ. ಈ ದಂಪತಿ ಇತ್ತೀಚೆಗೆ ಕೆಜಿಎಫ್ ತಾಲೂಕಿನ ಚಿನ್ನದ ಗಣಿ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು.

    ಸಂಬಂಧಿಕರ ಭೇಟಿ ಮಾಡಿ ವಾಪಸ್ ಆಗುವ ಸಂದರ್ಭದಲ್ಲಿ ದಾರಿಯುದ್ದಕ್ಕೂ ದಂಪತಿಗಳು ಜಗಳ ಮಾಡಿಕೊಂಡೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ಪತ್ನಿಯ ಶೀಲದ ಮೇಲೆ ಮೊದಲೇ ಶಂಕೆ ಹೊಂದಿದ್ದ ಗೋಪಿನಾಥ, ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡಿದ್ದಾನೆ. ತನ್ನೊಂದಿಗೆ ತಂದಿದ್ದ ಮಚ್ಚಿನಿಂದ ಈಶ್ವರಮ್ಮ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದಾಗಿ ಈಶ್ವರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಆರೋಪಿ ಗೋಪಿನಾಥ್ ವೃತ್ತಿಯಲ್ಲಿ ಟೈಲರ್ ಆಗಿದ್ದು, ಆರೋಪಿಯಿಂದ ಒಂದು ದ್ವಿಚಕ್ರ ವಾಹನ ಹಾಗೂ ಹರಿತವಾದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ.

  • ತಂಗಿ ತಂಗಿ ಎಂದವ ಜೊತೆ ಸ್ನೇಹಿತನ ಹೆಂಡತಿ ಜೊತೆ ಪರಾರಿ : ಮಂಡ್ಯದಲ್ಲಿ ವಿಚಿತ್ರ ಪ್ರೇಮ ಪುರಾಣ!

    ತಂಗಿ ತಂಗಿ ಎಂದವ ಜೊತೆ ಸ್ನೇಹಿತನ ಹೆಂಡತಿ ಜೊತೆ ಪರಾರಿ : ಮಂಡ್ಯದಲ್ಲಿ ವಿಚಿತ್ರ ಪ್ರೇಮ ಪುರಾಣ!

    ಮಂಡ್ಯ: ಪ್ರೀತಿಸಿ ಮದುವೆಯಾದ ಎರಡೇ ವರ್ಷಕ್ಕೆ ಪತ್ನಿಯೊಬ್ಬಳು ತನ್ನ ಗಂಡನಿಗೆ ಕೈ ಕೊಟ್ಟು, ಆತನ ಆಪ್ತ ಸ್ನೇಹಿತನ ಜೊತೆಯೇ ಓಡಿ ಹೋಗಿ ಎರಡನೇ ಮದುವೆಯಾಗಿರುವ ವಿಲಕ್ಷಣ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಬೆಳಕಿಗೆ ಬಂದಿದೆ.

    ನಡೆದಿದ್ದೇನು?
    ಬನ್ನಂಗಾಡಿಯ ಆಟೋ ಚಾಲಕ ಸಾಗರ್ ಮತ್ತು ಹರವು ಗ್ರಾಮದ ರಕ್ಷಿತಾ ಕಳೆದ 4-5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ವಿರೋಧದ ನಡುವೆಯೂ ರಕ್ಷಿತಾ ಪಟ್ಟು ಹಿಡಿದು ಸಾಗರ್‌ನನ್ನು ಮದುವೆಯಾಗಿದ್ದಳು. ಆದರೆ, ಈ ಸುಂದರ ಸಂಸಾರಕ್ಕೆ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದು ಸಾಗರ್‌ನ ಬೆಸ್ಟ್ ಫ್ರೆಂಡ್ ಇಂದ್ರ.

    ‘ತಂಗಿ’ ತಂಗಿ ಎಂದವನೇ ತಾಳಿ ಕಟ್ಟಿದ!

    ಇಂದ್ರ ಕೂಡ ಆಟೋ ಚಾಲಕನಾಗಿದ್ದು, ಸಾಗರ್‌ನ ಆತ್ಮೀಯ ಗೆಳೆಯನಾಗಿದ್ದ. ಸಾಗರ್ ಮನೆಗೆ ಹೋದಾಗಲೆಲ್ಲ ರಕ್ಷಿತಾಳನ್ನು “ನನಗೆ ತಂಗಿ ಇಲ್ಲ, ಇವಳೇ ನನ್ನ ತಂಗಿ” ಎಂದು ಎಲ್ಲರ ಮುಂದೆ ನಾಟಕವಾಡುತ್ತಿದ್ದ. ಕಳೆದ ರಕ್ಷಾಬಂಧನದಂದು ಶುಭಕೋರಿ ಅಣ್ಣ-ತಂಗಿಯ ಸಂಬಂಧದ ನಟನೆ ಮಾಡಿದ್ದ ಇಂದ್ರ, ಅಸಲಿಗೆ ರಕ್ಷಿತಾಳೊಂದಿಗೆ ಒಳಗೊಳಗೆ ಪ್ರೇಮ ಸಲ್ಲಾಪ ನಡೆಸುತ್ತಿದ್ದ.

    ಒಡವೆ, ಹಣದೊಂದಿಗೆ ಪರಾರಿ…

    ಇತ್ತೀಚೆಗೆ ರಕ್ಷಿತಾ ಮನೆಯಲ್ಲಿದ್ದ 22 ಗ್ರಾಂ ಚಿನ್ನದ ಒಡವೆ ಮತ್ತು 1 ಲಕ್ಷ ರೂಪಾಯಿ ನಗದು ಹಣವನ್ನು ತೆಗೆದುಕೊಂಡು ಇಂದ್ರನೊಂದಿಗೆ ಎಸ್ಕೇಪ್ ಆಗಿದ್ದಾಳೆ. ಅಷ್ಟೇ ಅಲ್ಲದೆ, ಅವರಿಬ್ಬರು ಮದುವೆಯಾಗಿರುವ ಫೋಟೋ ಕಂಡು ಸಾಗರ್ ಕಂಗಾಲಾಗಿದ್ದಾನೆ.

    “ಪ್ರೀತಿಸಿ ಮದುವೆಯಾದವಳು ಹೀಗೆ ದ್ರೋಹ ಮಾಡ್ತಾಳೆ ಅಂದುಕೊಂಡಿರಲಿಲ್ಲ. ನನಗೆ ನ್ಯಾಯ ಬೇಕು, ಅವಳಿಂದ ವಿಚ್ಛೇದನ ಕೊಡಿಸಿ ಮತ್ತು ನನ್ನ ಹಣ-ಒಡವೆ ವಾಪಸ್ ಕೊಡಿಸಿ” ಎಂದು ಸಾಗರ್ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

    ಬಾಟಮ್ ಲೈನ್: ಕಷ್ಟ ಕಾಲದಲ್ಲಿ ಜೊತೆಗಿರಬೇಕಾದ ಸ್ನೇಹಿತನೇ ಬೆನ್ನಿಗೆ ಚೂರಿ ಹಾಕಿದ್ದು, ಅಣ್ಣ-ತಂಗಿ ಸಂಬಂಧಕ್ಕೂ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ:  ಮನೆ ಬೀಗ ಒಡೆದ ಕಳ್ಳರು  ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಎಸ್ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

     ಕಳ್ಳರು ಮನೆಯಲ್ಲಿದ್ದ 10 ಗ್ರಾಂ ಚಿನ್ನದ ಚೈನ್, ತಲಾ 15 ಗ್ರಾಂ ತೂಕದ ಬ್ರೇಸ್ಲೆಟ್ ಮತ್ತು ನೆಕ್ಲೇಸ್, 8 ಗ್ರಾಂ ಉಂಗುರ, ಮೂರು ಜೋಡಿ ಕಾಲುಗೆಜ್ಜೆ ಹಾಗೂ 1 ಲಕ್ಷ 30 ಸಾವಿರ ನಗದು ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಪೋಕ್ಸೋ ಕೇಸ್ ಬೆನ್ನಲ್ಲೇ ಯುವಕನ ದುರಂತ ಅಂತ್ಯ! ಪ್ರೀತಿ, ಸಾವು ಮತ್ತು ಅನುಮಾನದ ಸುತ್ತ ಒಂದು ವರದಿ!

    ಪೋಕ್ಸೋ ಕೇಸ್ ಬೆನ್ನಲ್ಲೇ ಯುವಕನ ದುರಂತ ಅಂತ್ಯ! ಪ್ರೀತಿ, ಸಾವು ಮತ್ತು ಅನುಮಾನದ ಸುತ್ತ ಒಂದು ವರದಿ!

    1. ಕಲಬುರಗಿ: ಪ್ರೀತಿ ಎಂಬ ಎರಡಕ್ಷರದ ಮೋಹಕ್ಕೆ ಬಿದ್ದು ಅಪ್ರಾಪ್ತೆಯನ್ನು ವಿವಾಹವಾಗಿದ್ದ ಯುವಕನೊಬ್ಬ, ಈಗ ಶವವಾಗಿ ಪತ್ತೆಯಾಗಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪೋಕ್ಸೋ ಪ್ರಕರಣದ ಸುಳಿಯಲ್ಲಿ ಸಿಲುಕಿ ಜೈಲು ವಾಸ ಅನುಭವಿಸಿ ಹೊರಬಂದಿದ್ದ 26 ವರ್ಷದ ರೇವಣಸಿದ್ದಪ್ಪ ಎಂಬಾತನೇ ಈಗ ಜೀವಾಂತ್ಯ ಕಂಡುಕೊಂಡ ದುರ್ದೈವಿ.

      ಘಟನೆಯ ಹಿನ್ನೆಲೆ ಏನು?

      ಮೃತ ರೇವಣಸಿದ್ದಪ್ಪ ಕಳೆದ ಕೆಲವು ಸಮಯದ ಹಿಂದೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ವಿಷಯ ತಿಳಿದ ಬಾಲಕಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪರಿಣಾಮವಾಗಿ, ರೇವಣಸಿದ್ದಪ್ಪನ ಮೇಲೆ ಪೋಕ್ಸೋ (POCSO) ಕಾಯಿದೆಯಡಿ ಕೇಸ್ ದಾಖಲಾಗಿ ಜೈಲು ಸೇರಿದ್ದ. ಕಳೆದ ಎರಡು ವಾರಗಳ ಹಿಂದೆಯಷ್ಟೇ ಈತ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಬಂದಿದ್ದ.

      ನೋವು ತಂದ ‘ತಾಳಿ’ಯ ಅವಮಾನ!

      ಜೈಲಿನಿಂದ ಹೊರಬಂದ ರೇವಣಸಿದ್ದಪ್ಪನಿಗೆ ಕಾದಿದ್ದು ಮಾತ್ರ ಕಹಿ ಘಟನೆಗಳು. ವರದಿಯ ಪ್ರಕಾರ, ಬಾಲಕಿಯ ಪೋಷಕರು ಆಕೆಯನ್ನು ಕರೆದುಕೊಂಡು ಬಂದು ರೇವಣಸಿದ್ದಪ್ಪ ಕಟ್ಟಿದ್ದ ತಾಳಿಯನ್ನು ಕಿತ್ತು ಆತನ ಮುಖದ ಮೇಲೆಯೇ ಎಸೆದಿದ್ದರಂತೆ. ಈ ಅವಮಾನ ಮತ್ತು ಜನರ ಟೀಕೆಗಳಿಂದ ನೊಂದಿದ್ದ ಈತ, ಇನ್ಸ್ಟಾಗ್ರಾಂನಲ್ಲಿ ತನ್ನದೇ ಫೋಟೋಗೆ “RIP” ಎಂದು ಬರೆದು ಪೋಸ್ಟ್ ಹಾಕುವ ಮೂಲಕ ತನ್ನ ಮಾನಸಿಕ ಸ್ಥಿತಿಯನ್ನು ಹೊರಹಾಕಿದ್ದ.

      ಅಂತಿಮ ಕ್ಷಣಗಳಲ್ಲಿ ಏನಾಯ್ತು?

      ಪರಿಸ್ಥಿತಿ ಹದಗೆಡುತ್ತಿರುವುದನ್ನು ಗಮನಿಸಿದ ಪೋಷಕರು ಆತನನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದರು. ಆದರೂ ಗ್ರಾಮಕ್ಕೆ ಬಂದು ಹೋಗುತ್ತಿದ್ದ ಈತನ ಬಗ್ಗೆ ಊರಿನ ಜನ ಪೋಕ್ಸೋ ಕೇಸ್ ವಿಚಾರವಾಗಿ ಆಡಿಕೊಳ್ಳುತ್ತಿದ್ದ ಮಾತುಗಳು ಆತನನ್ನು ಮತ್ತಷ್ಟು ಕುಗ್ಗಿಸಿರಬಹುದು ಎಂದು ಶಂಕಿಸಲಾಗಿದೆ. ಶೌಚಕ್ಕೆಂದು ಹೋದವನು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

      ಕೊಲೆಯೋ? ಆತ್ಮಹತ್ಯೆಯೋ?

      ಸದ್ಯಕ್ಕೆ ಇದು ಆತ್ಮಹತ್ಯೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, “ಯಾರಾದರೂ ಕೊಲೆ ಮಾಡಿ ಮರಕ್ಕೆ ನೇಣು ಹಾಕಿದ್ದಾರಾ?” ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

      ಗಮನಿಸಿ: ಜೀವನದ ಯಾವುದೇ ಸಮಸ್ಯೆಗಳಿಗೆ ಸಾವು ಪರಿಹಾರವಲ್ಲ. ಮಾನಸಿಕ ಒತ್ತಡವಿದ್ದರೆ ಸಹಾಯವಾಣಿಯನ್ನು ಸಂಪರ್ಕಿಸಿ.

  • ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು, ಪ್ರಿಯಕರನ ಜೊತೆ ಸೇರಿ ಪತಿಯ ಕೊಂದ ಪತ್ನಿ!

    ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು, ಪ್ರಿಯಕರನ ಜೊತೆ ಸೇರಿ ಪತಿಯ ಕೊಂದ ಪತ್ನಿ!

    ಮೈಸೂರು: ಪರ ಪುರುಷನ ಸಹವಾಸ ಮಾಡಿದ ಪತ್ನಿ ತನ್ನ ಪತಿಯನ್ನೇ ಹತ್ಯೆ ಮಾಡಿರುವ ಘೋರ ಘಟನೆಯೊಂದು ಬೆಳಕಿಗೆ ಬಂದಿದೆ.

    ಮೈಸೂರಿನ ಮಾವಿನಹಳ್ಳಿ ಗ್ರಾಮದ ಕುರ್ಣೇಗಾಲ ಹಳ್ಳಿಯ ಜವರಪ್ಪ ಮೃತ ದುರ್ದೈವಿ. ಈತನನ್ನು ಹತ್ಯೆಗೈದ ಆರೋಪದ ಮೇಲೆ ಸಿದ್ದೇಶ್ (32) ಹಾಗೂ ಅಮೃತಾ(26) ಎಂಬುವವರನ್ನು ಬಂಧಿಸಲಾಗಿದೆ.

    ದಂಪತಿಗಳ ನಡುವೆ ಆರಂಭದಲ್ಲಿ ಎಲ್ಲವೂ ಸುಗಮವಾಗಿಯೇ ಇತ್ತು. ಆದರೆ ಕಾಲಕ್ರಮೇಣ ಪತ್ನಿ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಈ ವಿಷಯ ಪತಿಗೆ ತಿಳಿಯುತ್ತಿದ್ದಂತೆಯೇ ಮನೆಯಲ್ಲಿ ಅಶಾಂತಿ ಶುರುವಾಗಿತ್ತು. ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿರುವ ಪತಿಯನ್ನೇ ಮುಗಿಸಲು ಆಕೆ ನಿರ್ಧರಿಸಿದ್ದಳು.
    ತನ್ನ ಪ್ರಿಯಕರನ ಜೊತೆಗೂಡಿ ಪತಿ ನಿದ್ದೆಯಲ್ಲಿದ್ದಾಗ ಅಥವಾ ಆತನಿಗೆ ತಿಳಿಯದಂತೆ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ಕೃತ್ಯ ಎಸಗಿದ ನಂತರ ಪೊಲೀಸರಿಗೆ ಹಾಗೂ ಮನೆಯವರಿಗೆ ಯಾವುದೇ ಅನುಮಾನ ಬರದಂತೆ ನಟಿಸಿದ್ದಳು. ಪತಿಯ ಸಾವನ್ನು ಸಹಜ ಸಾವು ಅಥವಾ ಅಪಘಾತ ಎಂದು ಬಿಂಬಿಸಲು ಆಕೆ ಸಕಲ ಪ್ರಯತ್ನ ಮಾಡಿದ್ದಳು. ಆದರೆ ಪತಿಯ ಅಂತ್ಯಕ್ರಿಯೆಯ ಸಿದ್ಧತೆ ನಡೆಸುವ ವೇಳೆ ಆಕೆಯ ನಡವಳಿಕೆಯಲ್ಲಿ ಕಂಡುಬಂದ ವ್ಯತ್ಯಾಸ ಮತ್ತು ಮೃತದೇಹದ ಮೇಲಿದ್ದ ಅನುಮಾನಾಸ್ಪದ ಗುರುತುಗಳು ಪೊಲೀಸರ ಗಮನ ಸೆಳದಿದ್ದವು.

    ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಮಹಿಳೆ ತತ್ತರಿಸಿದ್ದಾಳೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆಯೇ ತನ್ನ ಅಕ್ರಮ ಸಂಬಂಧವನ್ನು ಮುಚ್ಚಿಡಲು ಮತ್ತು ಪ್ರಿಯಕರನ ಜೊತೆ ಸುಖವಾಗಿರಲು ಈ ಕೃತ್ಯ ಎಸಗಿರುವುದಾಗಿ ಆಕೆ ತಪ್ರೊಪ್ಪಿಕೊಂಡಿದ್ದಾಳೆ. ಪ್ರಸ್ತುತ ಪತ್ನಿ ಮತ್ತು ಆಕೆಗೆ ಸಹಕರಿಸಿದ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.

  • ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ.?

    ಮಹಿಳೆ ಅನುಮಾನಾಸ್ಪದ ಸಾವು – ಪರಸ್ತ್ರೀ ಸಹವಾಸದಿಂದ ಹತ್ಯೆಗೈದ್ನಾ ಪತಿ.?

    ದಾವಣಗೆರೆ: ಮಹಿಳೆಯೊಬ್ಬಳು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯ ರೇಲ್ವೆ ಕ್ವಾಟರ್ಸ್‌ನಲ್ಲಿ ನಡೆದಿದೆ.

    ಸಂಶಯಾಸ್ಪದವಾಗಿ ಸಾವನ್ನಪ್ಪಿದ ಮಹಿಳೆಯನ್ನು ಕಾವ್ಯಾ (26) ಎಂದು ಗುರುತಿಸಲಾಗಿದೆ. ಪತಿ ಮನು ವಿರುದ್ಧ ಪರಸ್ತ್ರೀ ಸಹವಾಸ ಹಾಗೂ ವರದಕ್ಷಿಣೆ ಕಿರುಕುಳ (Dowry Harassment) ನೀಡಿ ಚಿತ್ರಹಿಂಸೆ ನೀಡಿ ಕೊಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

    ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದ ಬಡ ಕುಟುಂಬದ ಕಾವ್ಯಾ ಹಾಗೂ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಮನುಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಮನು ಅಂಚೆ ಇಲಾಖೆಯಲ್ಲಿ ನೌಕರನಾಗಿದ್ದ ಎಂಬ ಕಾರಣಕ್ಕೆ, ಕಾವ್ಯಾ ಪೋಷಕರು ಸಾಲಸೋಲ ಮಾಡಿ 2.50 ಲಕ್ಷ ರೂ. ನಗದು ಮತ್ತು 70 ಗ್ರಾಂ ಚಿನ್ನ ನೀಡಿ ಮದುವೆ ಮಾಡಿದ್ದರು.

    ಶನಿವಾರ (ಏ.18) ಕಾವ್ಯಾ ತನ್ನ ತಾಯಿಯೊಂದಿಗೆ ಮಂತ್ರಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಳು. ಮನೆಯ ಮುಂದೆ ವಾಹನ ನಿಂತು ಎಲ್ಲರೂ ಕಾಯುತ್ತಿದ್ದರು. ಮಧ್ಯಾಹ್ನದಿಂದ ಕಾವ್ಯಾಳ ಫೋನ್ ಸ್ವಿಚ್ ಆಫ್ ಆಗಿತ್ತು. ರಾತ್ರಿ ವೇಳೆ ಮನು ತನ್ನ ಅತ್ತೆಗೆ ಫೋನ್ ಮಾಡಿ ಕಾವ್ಯಾ ಮಾತನಾಡುತ್ತಿಲ್ಲ ಎಂದು ತಿಳಿಸಿದ್ದ. ಇದರಿಂದ ಗಾಬರಿಗೊಂಡ ಸಂಬಂಧಿಕರು ಬಂದು ನೋಡಿದಾಗ ಕಾವ್ಯಾ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಬಿದ್ದಿದ್ದಳು. ಇದಾದ ಬಳಿಕ ಪತಿ ಮನು ಅಲ್ಲಿಂದ ಪರಾರಿಯಾಗಿದ್ದ.

    ಅಸ್ವಸ್ಥಗೊಂಡ ಕಾವ್ಯಾಳನ್ನು ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲೇ ಕೊನೆಯುಸಿರೆಳೆದಿದ್ದಳು. ಇದರಿಂದ ಕಾವ್ಯಾಳ ಕುಟುಂಬಸ್ಥರು ಮನು ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಕಾವ್ಯಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

    ಮನುಗೆ ಮತ್ತೊಬ್ಬ ಮಹಿಳೆಯ ಜೊತೆಗೆ ಅನೈತಿಕ ಸಂಬಂಧವಿತ್ತು ಮತ್ತು ಆತ ಮಾದಕ ವ್ಯಸನಿಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ಕಾವ್ಯಾ ತನ್ನ ಪೋಷಕರಿಗೆ ತಿಳಿಸಿ ಅಳಲು ತೋಡಿಕೊಂಡಿದ್ದಳು. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಆತನ ಅನೈತಿಕ ಸಂಬಂಧದ ಸಾಕ್ಷ್ಯಗಳನ್ನು ಕಾವ್ಯಾ ಒಂದು ಪೆನ್ ಡ್ರೈವ್ ನಲ್ಲಿ ಸಂಗ್ರಹಿಸಿಟ್ಟಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಈ ಪೆನ್ ಡ್ರೈವ್ ಈಗ ಈ ಕೊಲೆ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆಯಿದೆ.

    ನ್ಯಾಯಕ್ಕಾಗಿ ಆಗ್ರಹಿಸಿ ಕಾವ್ಯಾಳ ಸಂಬಂಧಿಕರು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಮಗಳ ಸಾವಿನಿಂದ ತಾಯಿ ಶಶಿಕಲಾ ಪ್ರಜ್ಞೆ ತಪ್ಪಿ ಆಸ್ಪತ್ರೆ ಸೇರಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮನುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.