Category: ಅಪರಾಧ ಸುದ್ದಿ

  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ₹3.57 ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

    ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕ ಅಕ್ರಮವಾಗಿ ಗಾಂಜಾ ಸಾಗಿಸಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾನೆ.

    ಚೆಕ್-ಇನ್ ಬ್ಯಾಗೇಜ್ ತಪಾಸಣೆ ನಡೆಸಿದಾಗ ಆರೋಪಿಯ ಬ್ಯಾಗ್‌ನಲ್ಲಿ ಹೈಡೋಪೋನಿಕ್ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಬೆಂಗಳೂರಲ್ಲಿ ಕಸ ಆಯುವ ವ್ಯಕ್ತಿಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ಅರೆಸ್ಟ್!

    ಬೆಂಗಳೂರಲ್ಲಿ ಕಸ ಆಯುವ ವ್ಯಕ್ತಿಯಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನ : ಆರೋಪಿ ಅರೆಸ್ಟ್!

    ವೈಟ್ ಫೀಲ್ಡ್ : ರಾಜಧಾನಿ ಬೆಂಗಳೂರಿನಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎಲ್ಲಿದೆ ಎಂಬ ಆತಂಕವನ್ನು ಮೂಡಿಸುವಂತಹ ಘಟನೆಯೊಂದು ವರದಿಯಾಗಿದೆ. ಬೆಳ್ಳಂಬೆಳಗ್ಗೆಯೇ ಯುವತಿಯೊಬ್ಬಳ ಮೇಲೆ ಕಾಮುಕನೊಬ್ಬ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿರುವ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

    ಮೂಲಗಳ ಪ್ರಕಾರ, ಸಂತ್ರಸ್ತ ಯುವತಿ ಬೆಂಗಳೂರಿನ ವೈಟ್‌ಫೀಲ್ಡ್ ವ್ಯಾಪ್ತಿಯ ಪೇಯಿಂಗ್ ಗೆಸ್ಟ್ (PG) ಒಂದರಲ್ಲಿ ವಾಸವಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಎಂದಿನಂತೆ ಘಟನೆ ನಡೆದ ದಿನದಂದು ಬೆಳಗಿನ ಜಾವ ವಿದ್ಯಾರ್ಥಿನಿ ಟೀ ಕುಡಿಯಲೆಂದು ಪಿಜಿಯಿಂದ ಹೊರಗೆ ಬಂದು, ಹತ್ತಿರದಲ್ಲೇ ಇದ್ದ ಟೀ ಅಂಗಡಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು.
    ಬೆಳಗಿನ ಜಾವ ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿದ್ದ ಸಮಯವನ್ನು ಹೊಂಚು ಹಾಕಿ ಕಾಯುತ್ತಿದ್ದ ಕಾಮುಕನೊಬ್ಬ, ಯುವತಿ ಒಂಟಿಯಾಗಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ಏಕಾಏಕಿ ಆಕೆಯ ಮೇಲೆ ಮುಗಿಬಿದ್ದ ಆತ, ಯುವತಿಯನ್ನು ಬಲವಂತವಾಗಿ ಎತ್ತಿಕೊಂಡು ನಿರ್ಜನ ಪ್ರದೇಶದ ಕಡೆಗೆ ಒಯ್ದು ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಈ ಹಠಾತ್ ದಾಳಿಯಿಂದ ಯುವತಿ ತೀವ್ರ ಗಾಬರಿಗೊಂಡಿದ್ದಾಳೆ.ಆದರೆ, ಕಂಗಾಲಾಗದೆ ಧೈರ್ಯ ಪ್ರದರ್ಶಿಸಿದ ವಿದ್ಯಾರ್ಥಿನಿ, ಆತನ ಹಿಡಿತದಿಂದ ತಪ್ಪಿಸಿಕೊಳ್ಳಲು ಜೋರಾಗಿ ಕಿರುಚಾಡಲು ಪ್ರಾರಂಭಿಸಿದ್ದಾಳೆ. ಯುವತಿಯ ಆಕ್ರಂದನ ಮತ್ತು ಕಿರುಚಾಟದ ಧ್ವನಿ ಕೇಳಿ ಎಚ್ಚೆತ್ತ ಸುತ್ತಮುತ್ತಲಿನ ಸ್ಥಳೀಯರು ಮತ್ತು ಸಾರ್ವಜನಿಕರು ತಕ್ಷಣವೇ ಧಾವಿಸಿ ಬಂದಿದ್ದಾರೆ. ಜನರು ಜಮಾಯಿಸುತ್ತಿರುವುದನ್ನು ಕಂಡು ಗಾಬರಿಗೊಂಡ ಕಾಮುಕ, ಯುವತಿಯನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಈ ಘಟನೆಯಿಂದ ತೀವ್ರ ಆಘಾತಕ್ಕೊಳಗಾದ ಯುವತಿ ತಕ್ಷಣವೇ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ‘ಸೈಬುಲ್’ ಎಂದು ಗುರುತಿಸಲಾಗಿದ್ದು, ಈತ ರಸ್ತೆ ಬದಿಯಲ್ಲಿ ಕಸ ಆಯುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

    ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತ ಆರೋಪಿ ಸೈಬುಲ್ ರಸ್ತೆ ಬದಿಯಲ್ಲಿ ಬಿದ್ದಿರುವ ಕಸದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಹಾಗೂ ಕಬ್ಬಿಣದ ವಸ್ತುಗಳನ್ನು ಆಯುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮುಂಜಾನೆ ವೇಳೆ ಒಂಟಿ ಯುವತಿ ರಸ್ತೆಯಲ್ಲಿ ಹೋಗುತ್ತಿರುವುದನ್ನು ಕಂಡು ವಿಕೃತ ಬುದ್ಧಿಯಿಂದ ಈ ಕೃತ್ಯಕ್ಕೆ ಕೈ ಹಾಕಿದ್ದಾಗಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ವೈಟ್‌ಫೀಲ್ಡ್ ಪೊಲೀಸರು ಆತನ ಹಿನ್ನೆಲೆಯ ಬಗ್ಗೆ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.

  • ಪೊಲೀಸ್ ವಸತಿ ಗೃಹದಲ್ಲಿ ಯುವತಿ ಆತ್ಮಹತ್ಯೆ: ಪತಿ ಹಾಗೂ ಕುಟುಂಬದ ವಿರುದ್ಧ ದೂರು!

    ಪೊಲೀಸ್ ವಸತಿ ಗೃಹದಲ್ಲಿ ಯುವತಿ ಆತ್ಮಹತ್ಯೆ: ಪತಿ ಹಾಗೂ ಕುಟುಂಬದ ವಿರುದ್ಧ ದೂರು!

    ಕೆ.ಆರ್.ಪುರ ಪೊಲೀಸ್ ವಸತಿ ಗೃಹದಲ್ಲಿ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಜೇಶ್ ಆರಾಧ್ಯ ಅವರ ಪತ್ನಿ ಲಕ್ಷ್ಮೀಪ್ರಿಯಾ (27) ಮೃತ ಮಹಿಳೆ.

    ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ ಅವರಿಗೆ 2023ರಲ್ಲಿ ಮೈಸೂರಿನಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಸದ್ಯ 8 ತಿಂಗಳ ಹಸುಗೂಸಿದೆ.

    ಕೆ.ಆರ್.ಪುರಂನಲ್ಲಿರುವ ಪೊಲೀಸ್ ಕ್ವಾಟ್ರಸ್ನಲ್ಲಿ ಈ ಕುಟುಂಬ ವಾಸವಾಗಿತ್ತು. ನಿನ್ನೆ (ಮೇ 22) ಬೆಳಿಗ್ಗೆ ದಂಪತಿ ನಡುವೆ ಕೌಟುಂಬಿಕ ವಿಷಯಕ್ಕೆ ದೊಡ್ಡ ಜಗಳ ಉಂಟಾಗಿದೆ. “ನನ್ನ ತಂದೆ-ತಾಯಿಗೆ ನೀನು ಸರಿಯಾಗಿ ಮರ್ಯಾದೆ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಗೆ ಬೈದಿದ್ದರು. ಇದೇ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದ ಲಕ್ಷ್ಮೀಪ್ರಿಯಾ, ನಿನ್ನೆ ರಾತ್ರಿ ರಾಜೇಶ್ ರಾತ್ರಿ ಕೆಲಸಕ್ಕೆ ತೆರಳಿದ್ದಾಗ ಇತ್ತ ಕ್ವಾಟ್ರಸ್ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

    ಇನ್ನು ಘಟನೆ ನಡೆದ ಬೆನ್ನಲ್ಲೇ ಮೃತ ಲಕ್ಷ್ಮೀಪ್ರಿಯಾ ಪೋಷಕರು, ರಾಜೇಶ್ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದಾಗಿನಿಂದಲೂ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬ ಸದಸ್ಯರು ಲಕ್ಷ್ಮೀಪ್ರಿಯಾಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು. ನಿನ್ನೆ ನಡೆದ ಜಗಳ ಹಾಗೂ ಈ ಹಿಂದಿನ ಕಿರುಕುಳವೇ ಮಗಳ ಆತ್ಮಹತ್ಯೆಗೆ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

    ಮೃತ ಲಕ್ಷ್ಮೀಪ್ರಿಯಾ ಪೋಷಕರು ನೀಡಿದ ದೂರಿನ ಅನ್ವಯ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ತನಿಖೆ ನಡೆಸಿದ್ದಾರೆ.

  • ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ: ಪ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ನಗರದ ಚೈತನ್ಯನಗರದಲ್ಲಿ ನಡೆದಿದೆ. ಮೃತರನ್ನು ಚೈತನ್ಯನಗರ ನಿವಾಸಿ ಮೀನಾಕ್ಷಿ ಎಂ ಎಂದು ಗುರುತಿಸಲಾಗಿದೆ.

    ಮೇ 22ರಂದು ಸಂಜೆ ಸುಮಾರು 6:30ರ ವೇಳೆಗೆ ಮೀನಾಕ್ಷಿಯವರು ತಮ್ಮ ಮನೆಯಲ್ಲಿ ಫ್ರಿಡ್ಜ್ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

    ತಕ್ಷಣ ಕುಟುಂಬಸ್ಥರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ದೊಡ್ಡಬಳ್ಳಾಪುರ; ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಗಡಿಪಾರು- ರೌಡಿಶೀಟರ್ ಗಳಿಗೆ ಇನ್ಸ್ ಪೆಕ್ಟರ್ ನವೀನ್ ವಾರ್ನಿಂಗ್

    ದೊಡ್ಡಬಳ್ಳಾಪುರ; ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಗಡಿಪಾರು- ರೌಡಿಶೀಟರ್ ಗಳಿಗೆ ಇನ್ಸ್ ಪೆಕ್ಟರ್ ನವೀನ್ ವಾರ್ನಿಂಗ್

    ದೊಡ್ಡಬಳ್ಳಾಪುರ; ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಅಪರಾಧಕೃತ್ಯಗಳಲ್ಲಿ ಭಾಗಿಯಾಗಿ ರೌಡಿಶೀಟರ್  ಪಟ್ಟಿಯಲ್ಲಿರುವವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾ‌ರ್ ಎಂ.ಬಿ ಅವರು ನೀತಿ ಪಾಠದೊಂದಿಗೆ ಖಡಕ್  ಎಚ್ಚರಿಕೆಯನ್ನು ನೀಡಿದರು.

    ನಗರದಲ್ಲಿನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೌಡಿಶೀಟರ್ ಗಳ ಪರೇಡ್ ನಲ್ಲಿ ಅವರು ಮಾತನಾಡಿದರು.

    ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಉತ್ತಮ ನಾಗರಿಕರಾಗಿ ಜೀವನ ಮಾಡಬೇಕು ಎಂದರು.

    ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬೇಕು. ಎಲ್ಲಾರು ಕಾನೂನನ್ನು ಗೌರವಿಸಬೇಕು. ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು ಹೀಗೆ ಮುಂದುವರೆದರೆ ಗಡಿಪಾರು ಮಾಡಲಾಗುವುದು. ಹತ್ತು, ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಬಸ್ಥರು ಗೌರವ ನೀಡುವಷ್ಟು ರೀತಿಯಲ್ಲಿಯಾದರೂ ಜೀವನ ಮಾಡಿ. ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆ ಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ. ಮಾದರಿ ಜೀವನ ನಡೆಸಿದರೆ ರೌಡಿ ಶೀಟರ್ ಬಂದ್ ಮಾಡಲಾಗುವುದು ಎಂದರು.

    ರೌಡಿಗಳಿಗೆ ಸಂಬಂಧಿಸಿದ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ವಾಹನ ದಾಖಲೆಗಳು ಸೇರಿದಂತೆ ಇತರೆ ದಾಖಲಾತಿಗಳನ್ನು ಸಂಗ್ರಹಿಸಬೇಕು. ಸದಾ ರೌಡಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿರಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

    ಈ ವೇಳೆ ಸಬ್ ಇನ್ಸ್ ಪೆಕ್ಟರ್, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

  • ಇನ್‌ಸ್ಟಾಗ್ರಾಮ್ ನಲ್ಲಿ ಅರಳಿದ ಪ್ರೀತಿ, ಲಿವ್-ಇನ್ ಬದುಕು.. ಹೆಣವಾದ ಯುವಕ: ಪರಾರಿಯಾದ ಇಬ್ಬರು ಮಕ್ಕಳ ತಾಯಿ!

    ಇನ್‌ಸ್ಟಾಗ್ರಾಮ್ ನಲ್ಲಿ ಅರಳಿದ ಪ್ರೀತಿ, ಲಿವ್-ಇನ್ ಬದುಕು.. ಹೆಣವಾದ ಯುವಕ: ಪರಾರಿಯಾದ ಇಬ್ಬರು ಮಕ್ಕಳ ತಾಯಿ!

    ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿದೆ. ಸಂಸಾರ, ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಲಿವ್-ಇನ್‌ನಲ್ಲಿದ್ದ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ದುರ್ದೈವಿ. ಈತ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ದಾವಣಗೆರೆ ಮೂಲದ ಮಹಿಳೆಯ ಪರಿಚಯವಾಗಿತ್ತು. ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಇನ್‌ಸ್ಟಾಗ್ರಾಮ್ ಪ್ರೇಮದ ಅಮಲಿನಲ್ಲಿ ಪತಿ ಮತ್ತು ಮಕ್ಕಳನ್ನು ತೊರೆದು ತಿಪ್ಪೇಸ್ವಾಮಿ ಜೊತೆ ಬೆಂಗಳೂರಿಗೆ ಬಂದಿದ್ದಳು.

    ಕಳೆದ ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ ಈ ಜೋಡಿ, ತಾವು ಗಂಡ-ಹೆಂಡತಿ ಎಂದು ನಂಬಿಸಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ, ಸುಂದರವಾಗಿದ್ದ ಈ ಸಂಬಂಧದಲ್ಲಿ ಕೆಲವೇ ದಿನಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.

    ಪತಿ-ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆ, ಇತ್ತೀಚೆಗೆ ತಿಪ್ಪೇಸ್ವಾಮಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದಳಂತೆ. “ನಿನ್ನಿಂದ ನನ್ನ ಮೆಂಟೇನೆನ್ಸ್ (ಖರ್ಚು) ಭರಿಸಲು ಸಾಧ್ಯವಿಲ್ಲ, ನನ್ನನ್ನು ಬಿಟ್ಟುಬಿಡು” ಎಂದು ಆಕೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ.

    ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಗಾಬರಿಯಾದ ಮಹಿಳೆ ನಾಪತ್ತೆಯಾಗಿದ್ದಾಳೆ. ಮಗನ ಸಾವಿಗೆ ಈ ಮಹಿಳೆಯೇ ಕಾರಣ ಎಂದು ತಿಪ್ಪೇಸ್ವಾಮಿ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಕ್ಷಣಿಕ ಸುಖದ ಪ್ರೀತಿ ಮತ್ತು ಸೋಶಿಯಲ್ ಮೀಡಿಯಾ ಮೋಹದ ಹಿಂದೆ ಬಿದ್ದಾಗ ಸುಂದರ ಬದುಕುಗಳು ಹೇಗೆ ಹಳಿ ತಪ್ಪುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

  • ಸಾಲ ಕೊಟ್ಟ ವೃದ್ಧೆಗೆ ಅಪಘಾತ : ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು.!

    ಸಾಲ ಕೊಟ್ಟ ವೃದ್ಧೆಗೆ ಅಪಘಾತ : ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು.!

    ಬೆಂಗಳೂರು: ಹಣಕ್ಕಾಗಿ ಸಾಲ ಕೊಟ್ಟ ಮಹಿಳೆಯನ್ನ ಆಕ್ಸಿಡೆಂಟ್ ಮಾಡಿ ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಮನೆ ಕೀ ಪಡೆದು ಹಣಕ್ಕಾಗಿ ಮನೆಯೆಲ್ಲಾ ಹುಡುಕಾಟ ಮಾಡಿದ ಗ್ಯಾಂಗ್. ಇತ್ತ ಆಕ್ಸಿಡೆಂಟ್ ಆದ ಮಹಿಳೆ ಸಾವನ್ನಪ್ಪಿದ ಬಳಿಕ ಇದು ಆಕ್ಸಿಡೆಂಟ್ ಅಲ್ಲ ಕೊಲೆ ಅಂತಾ ಕನ್ಫರ್ಮ್ ಆಗಿ ಐವರ ಬಂಧನ ಮಾಡಲಾಗಿತ್ತು. ವಿಧಿಯಾಟ ಅಂದ್ರೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ ವೃದ್ದೆಯ ಪೋಸ್ಟ್ ಮಾರ್ಟಂ ದಿನವೇ ಆರೋಪಿ ಪೊಲೀಸ್ ವಶದಲ್ಲಿದ್ದಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

    ಹೌದು. ಕಷ್ಟ ಅಂತ ಹೇಳಿ ಕಾಡಿ ಬೇಡಿ ವೃದ್ಧೆಯ ಬಳಿ ಆತ ಸಾಲ ಪಡೆದಿದ್ದ. ಆದರೆ, ಹಣ ವಾಪಸ್ ನೀಡಿರಲಿಲ್ಲ. ಹಣ ವಾಪಸ್ ಕೊಡುವಂತೆ ಪೀಡಿಸಿದಾಗ ಆತ ಮಾಡಿದ ಕೆಲಸ ನಿಜಕ್ಕೂ ಆಘಾತಾಕಾರಿ. ವೃದ್ಧೆಗೆ ಅಪಘಾತವೆಸಗಿ ಆಕೆಯ ಮನೆಯಲ್ಲೇ ಮತ್ತೆ ಹಣ ದೋಚೋ ಪ್ಲ್ಯಾನ್‌ ಮಾಡಿ ಜೈಲು ಸೇರಿದ ಕಿರಾತಕರ ಕತೆ ಇದು.

    ಆಕೆ ಹೇಳಿ ಕೇಳಿ ಒಂಟಿ ಮಹಿಳೆ. ಜೀವನಕ್ಕೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಒಂದಷ್ಟು ಹಣ ಕೂಡಿಸಿ ಜೀವನ ನಡೆಸ್ತಿದ್ಲು. ಆದ್ರೆ ಹಣಕ್ಕಾಗಿ ಕಿರಾತಕರು ಭರ್ಜರಿ ಪ್ಲಾನ್ ಮಾಡಿ ವೃದ್ಧೆಗೆ ಅಪಘಾತವೆಸಗಿ ಕೊಲೆ ಮಾಡಿದ್ರು. ಪೊಲೀಸರ ತನಿಖೆಯಲ್ಲಿ ಐದು ಮಂದಿ ಗ್ಯಾಂಗ್ ನ ಘನಘೋರ ಕೃತ್ಯ ಬಟಾಬಯಲಾಗಿದೆ.

    ಹಣಕ್ಕಾಗಿ ಮಹಿಳೆಯ ಜೀವವನ್ನೇ ತೆಗೆದು ಐವರು ಕಿರಾತಕರನ್ನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಏಪ್ರಿಲ್‌ 21ರಂದು ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದು ಮಹಿಳೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದರು. ಆದರೆ ಇದು ಕೇವಲ ಅಪಘಾತವಲ್ಲ ಉದ್ದೇಶಪೂರ್ವಕ ಕೊಲೆ ಅಂತಾ ಐವರು ಆರೋಪಿಗಳಾದ ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್, ಯೋಹಾನ್ ನನ್ನ ಬಂಧನ ಮಾಡಲಾಗಿದೆ..

       ಆಕ್ಸಿಡೆಂಟ್, ಕಳ್ಳತನ, ಕೊಲೆ – ತ್ರಿಕೋನ ಕಥೆ

    ರಸ್ತೆಯಲ್ಲಿ ನಡೆದು ಹೋಗ್ತಿದ್ದ ವಿಜಯಲಕ್ಷ್ಮಿಗೆ ರಾಕೇಶ್ ಬೈಕ್ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಅದೇ ವೇಳೆಗೆ ಆಟೋದಲ್ಲಿ ಬಂದ ಪ್ರದೀಪ್, ಯೋಹಾನ್, ಮಂಜುನಾಥ್ ಎಲ್ಲರು ಸೇರಿ ವಿಜಯಲಕ್ಷ್ಮಿಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಈ ವೇಳೆ ಮಂಜುನಾಥ್ ವಿಜಯಲಕ್ಷ್ಮಿ ಪರ್ಸ್ ನಲ್ಲಿದ್ದ ಮನೆ ಕೀ ತೆಗೆದುಕೊಂಡು ನೇರವಾಗಿ ಆಕೆಯ ಮನೆಗೆ ಬಂದು ಹಣ, ಚಿನ್ನಾಭರಣ ಹುಡುಕುತ್ತಿದ್ನಂತೆ. ಅನುಮಾನ ಬಂದ ಅಕ್ಕಪಕ್ಕದ ಮನೆಯವರು ಪ್ರಶ್ನೆ ಮಾಡಿದಾಗ, ವಿಜಯಲಕ್ಷ್ಮಿಗೆ ಆಕ್ಸಿಡೆಂಟ್ ಆಗಿದೆ, ಹೀಗಾಗಿ ಆಕೆ ಆಧಾರ್ ಕಾರ್ಡ್ ಬೇಕಿತ್ತು ಎಂದು ಸುಳ್ಳು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರು ಹೆಚ್ಚು ಪ್ರಶ್ನೆ ಮಾಡಿದಾಗ ಮಂಜುನಾಥ ಅಲ್ಲಿಂದ ಪರಾರಿಯಾಗಿದ್ದಾನೆ.

    ಅತ್ತ ವಿಜಯಲಕ್ಷ್ಮಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿದ್ದು, ಈ ವೇಳೆ ಆರೋಪಿ ರಾಕೇಶ್ ತಾನೇ ವಿಜಯನಗರ ಸಂಚಾರಿ ಪೊಲೀಸರಿಗೆ ದೂರು ಕೊಟ್ಟು, ಪರಿಚಯಸ್ಥ ವಿಜಯಲಕ್ಷ್ಮಿಯನ್ನ ತಾನೇ ಕಾಪಾಡಿದ್ದೇನೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಕ್ರಮ ತೆಗೆದುಕೊಳ್ಳಿ ಅಂತಾ ದೂರು ನೀಡಿದ್ದಾನೆ.

    ಇತ್ತ 2 ದಿನದ ಬಳಿಕ ಘಟನೆಯಲ್ಲಿ ಪೊಲೀಸರಿಗೆ ಅನುಮಾನ ಬಂದಿದ್ದು, ವಿಜಯಲಕ್ಷ್ಮೀ ಮನೆ ಮಾಲೀಕ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಳ್ಳತನ ಯತ್ನದ ದೂರು ನೀಡಿದ್ದಾರೆ. ಈ ಕೇಸ್ ತನಿಖೆಗೆ ಇಳಿದ ಪೊಲೀಸರಿಂದ ಅಸಲಿ ಕಥೆ ಬಯಲಾಗಿದ್ದು, ತನಿಖೆ ವೇಳೆ ಉದ್ದೇಶಪೂರ್ವಕವಾಗಿ ಕೊಲೆ ಎಂಬುದು ಪತ್ತೆಯಾಗಿದೆ‌.

    ಆರೋಪಿ ಚೇತನ್, ವಿಜಯಲಕ್ಷ್ಮಿ ಬಳಿ ಹಣ ಸಾಲ ಪಡೆದಿದ್ದು, ಆಕೆ ಬಳಿ ಇನ್ನು ಹಣ ಇದೆ ಅಂತ ಕಳ್ಳತನಕ್ಕೆ ಸ್ಕೆಚ್ ಹಾಕಿದ್ನಂತೆ. ಇದಕ್ಕಾಗಿ ಪರಿಚಯಸ್ಥ ಮಂಜುನಾಥ್, ಇತರರನ್ನ ಸೇರಿಸಿಕೊಂಡು ಪ್ಲಾನ್ ಮಾಡಿದ್ದಾರೆ. ಪ್ಲಾನ್ ನಂತೆ ಡಿಕ್ಕಿ ಹೊಡೆದು ವಿಜಯಲಕ್ಷ್ಮಿಯನ್ನ ಕೊಲೆ‌ ಮಾಡಿರೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮಹಿಳೆ ಮೃತಳಾದ ಎರಡೇ ದಿನಕ್ಕೆ ಆರೋಪಿ ಮಂಜುನಾಥ್ ಕೂಡ ಅನಾರೋಗ್ಯದಿಂದ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಸಾವನ್ನಪ್ಪಿದ್ದಾನೆ.

    ಸದ್ಯ ಕೊಲೆ ಕೇಸ್ ದಾಖಲಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದು, ವೃದ್ಧೆ ಪೋಸ್ಟ್ ಮಾರ್ಟಂ ದಿನವೇ ಆರೋಪಿಯೊಬ್ಬ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

    ಸಾರಾಂಶ :ಅದಕ್ಕೇ ಹೇಳೋದು ಕರ್ಮ ರಿಟರ್ನ್ಸ್ ಅಂತಾ.. ಒಳ್ಳೇದು ಮಾಡಿದ್ರೆ ಒಳ್ಳೆದು ಬರುತ್ತೆ.. ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ ಸಿಗುತ್ತೆ.

  • ರೈಲಿನಲ್ಲಿ ಸೀಟಿಗಾಗಿ ಜಗಳ : ಇಬ್ಬರಿಗೆ ಚಾಕು ಇರಿತ.!!

    ರೈಲಿನಲ್ಲಿ ಸೀಟಿಗಾಗಿ ಜಗಳ : ಇಬ್ಬರಿಗೆ ಚಾಕು ಇರಿತ.!!

    ಮಂಡ್ಯ: ರೈಲಿನಲ್ಲಿ ಕೇವಲ ಸೀಟಿನ ವಿಚಾರಕ್ಕೆ ಗಲಾಟೆ ನಡೆದಿದ್ದು,ಈ ವೇಳೆ ಇಬ್ಬರಿಗೆ ಚಾಕುವಿನಿಂದ ಇರಿದ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜ-ರಾಣಿ ರೈಲಿನಲ್ಲಿ ಸೀಟಿಗಾಗಿ ನಡೆದ ಗಲಾಟೆ ನಡೆದಿದೆ. ನಂತರ ಇಬ್ಬರಿಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ.

    ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ನಡುವೆ ಸೀಟಿನ ವಿಚಾರಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಈ ವೇಳೆ ತುಮಕೂರು ಮೂಲದ ಶಿವಕುಮಾರ್ ಎಂಬುವರು “ಏಕೆ ಜಗಳ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿದ್ದು, ಈ ಮಾತು ಆರೋಪಿಗಳ ಕೋಪಕ್ಕೆ ಕಾರಣವಾಗಿದೆ.
    ಆರೋಪಿಗಳಾದ ಸುಭಾನ್ ಖುರೇಶಿ, ಶೋಯಬ್ ಮತ್ತು ವಾಸೀಂ ಎಂಬುವರು ಶಿವಕುಮಾರ್ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಮೊದಲು ಸುಭಾನ್ ಖುರೇಶಿ ಚಾಕುವಿನಿಂದ ಶಿವಕುಮಾರ್‌ಗೆ ಇರಿದಿದ್ದು, ನಂತರ ಶೋಯಬ್ ಕೂಡ ಮತ್ತೆ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಈ ಹಲ್ಲೆಯಿಂದ ಶಿವಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಜೀವ ಉಳಿಸಿಕೊಳ್ಳಲು ಶಿವಕುಮಾರ್ ತಕ್ಷಣ ರೈಲಿನ ಎಮರ್ಜೆನ್ಸಿ ಚೈನ್ ಎಳೆದಿದ್ದಾರೆ. ಇದರಿಂದ ರೈಲು ಮದ್ದೂರು ಸಮೀಪ ನಿಂತಿದೆ. ರೈಲು ನಿಂತ ಕೂಡಲೇ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಈ ವೇಳೆ ಅಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರು ಅವರನ್ನು ಹಿಡಿಯಲು ಮುಂದಾಗಿದ್ದಾರೆ.

    ಆರೋಪಿಗಳನ್ನು ಹಿಡಿಯಲು ಹೋದ ಗೇಟ್ ಕೀಪರ್ ಕುಮಾರ್ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ, ಅವರಿಗೂ ಸಹ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಕುಮಾರ್ ಕೂಡ ಗಾಯಗೊಂಡಿದ್ದಾರೆ. ಈ ದೃಶ್ಯವನ್ನು ಕಂಡು ಸಾರ್ವಜನಿಕರು ಆರೋಪಿಗಳನ್ನು ಹಿಡಿದು ಧರ್ಮದೇಟು ನೀಡಿದ್ದಾರೆ.

    ನಂತರ ಸ್ಥಳೀಯರು ಮತ್ತು ಪ್ರಯಾಣಿಕರು ಸೇರಿ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಶಿವಕುಮಾರ್ ಮತ್ತು ಕುಮಾರ್ ಅವರನ್ನು ತಕ್ಷಣ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೊಳಪಡಿಸಲಾಗಿದೆ.

  • ಉಂಡ ಮನೆಗೆ ಕನ್ನ ಹಾಕಿದ ದಂಪತಿ; 14 ಲಕ್ಷ ಹಣ, ಚಿನ್ನ-ಬೆಳ್ಳಿ ಸಹಿತ ಬಂಧನ

    ಉಂಡ ಮನೆಗೆ ಕನ್ನ ಹಾಕಿದ ದಂಪತಿ; 14 ಲಕ್ಷ ಹಣ, ಚಿನ್ನ-ಬೆಳ್ಳಿ ಸಹಿತ ಬಂಧನ

    ಬೆಂಗಳೂರು: ನಗರದಲ್ಲಿ ನಂಬಿಕೆ ದುರುಪಯೋಗಪಡಿಸಿಕೊಂಡ ದಂಪತಿ ಕಳ್ಳತನ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಬ್ಯುಸಿನೆಸ್ ಕಮ್ ಕಂಟ್ರಾಕ್ಟರ್ ಆಗಿರುವ ಮಲ್ಲಿಕಾರ್ಜುನ್ ನಾಯ್ಡು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಕಳ್ಳತನ ನಡೆಸಿರುವುದು ಪತ್ತೆಯಾಗಿದೆ.

    ಐಶ್ವರ್ಯಾ ಮತ್ತು ಮಣಿಕಂಠ ಎಂಬ ದಂಪತಿ ಕಳೆದ ನಾಲ್ಕು ತಿಂಗಳ ಹಿಂದೆ ಮನೆ ಕೆಲಸಕ್ಕಾಗಿ ಸೇರಿಕೊಂಡಿದ್ದು, ಆಗಿನಿಂದಲೇ ಹಂತ ಹಂತವಾಗಿ ಚಿನ್ನ ಮತ್ತು ಹಣ ಕದಿಯುತ್ತಿದ್ದರೆಂದು ತಿಳಿದುಬಂದಿದೆ. ಒಂದೂವರೆ ವರ್ಷದ ಮಗುವಿದ್ದರೂ ಸಹ ಕಳ್ಳತನಕ್ಕೆ ಕೈ ಹಾಕಿದ್ದ ದಂಪತಿ, ಏಪ್ರಿಲ್ 25ರಂದು ಮತ್ತೊಮ್ಮೆ ಮನೆಯಲ್ಲಿ ಇದ್ದ ಚಿನ್ನವನ್ನು ಕದ್ದಿದ್ದಾರೆ.

    ಈ ಹಿನ್ನೆಲೆಯಲ್ಲಿ ಮಾಲೀಕರಿಗೆ ಅನುಮಾನ ಬಂದು ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ಕ್ರಮ ಕೈಗೊಂಡ ಪೊಲೀಸರು ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಪೊಲೀಸರು ದಂಪತಿಯ ಬಳಿ ಸುಮಾರು 14 ಲಕ್ಷ ರೂಪಾಯಿ ನಗದು, 199 ಗ್ರಾಂ ಚಿನ್ನ ಹಾಗೂ 730 ಗ್ರಾಂ ಬೆಳ್ಳಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

  • ಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

    ಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಅಕ್ಕನ ಮಗನನ್ನೇ ಮಗನಂತೆ ಸಾಕಿದ ಮಾವನಿಗೆ ಆತ ಕೊಟ್ಟ ದ್ರೋಹ ಮತ್ತು ಪತ್ನಿಯ ಅನೈತಿಕ ಸಂಬಂಧ, ಕೊನೆಗೆ ಇಬ್ಬರು ಹಸುಗೂಸುಗಳು ಸೇರಿದಂತೆ ಒಟ್ಟು ಮೂವರ ಬಲಿಗೆ ಕಾರಣವಾಗಿದೆ.

    ಮಗನಂತಿದ್ದ ಅಕ್ಕನ ಮಗನೇ ವಿಲನ್!

    ಮೃತ ಶಿವಣ್ಣ ಅವರ ಅಕ್ಕ ಮರಣ ಹೊಂದಿದಾಗ, ಅನಾಥನಾಗಿದ್ದ ಅಕ್ಕನ ಮಗ ಹೇಮಂತ್‌ನನ್ನು ಶಿವಣ್ಣ ತನ್ನ ಮನೆಗೆ ಕರೆತಂದಿದ್ದರು. ಸ್ವಂತ ಮಗನಿಗಿಂತ ಮಿಗಿಲಾಗಿ ಪ್ರೀತಿ ನೀಡಿ, ಆಶ್ರಯ ನೀಡಿ ಸಾಕಿದ್ದರು. ಆದರೆ ಹೇಮಂತ್ ಬೆಳೆಯುತ್ತಾ ತನ್ನನ್ನು ಸಾಕಿದ ಮಾವನ ಸಂಸಾರಕ್ಕೇ ಕೊಳ್ಳಿ ಇಡಲು ಮುಂದಾದ. ಮಾವನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿ, ಆಕೆಯ ಮನಸ್ಸನ್ನು ಪೂರ್ತಿಯಾಗಿ ಬದಲಿಸಿದ್ದ.

    ಹಲವು ಬಾರಿ ನಡೆದ ಸಂಧಾನ:

    ಶಿವಣ್ಣನಿಗೆ ಪತ್ನಿ ಮತ್ತು ಅಕ್ಕನ ಮಗನ ನಡುವಿನ ಅಕ್ರಮ ಸಂಬಂಧದ ವಿಷಯ ತಿಳಿಯುತ್ತಿದ್ದಂತೆ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಒಮ್ಮೆ ಈ ವಿಚಾರವಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆಗ ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿ, ಹೇಮಂತನನ್ನು ಮನೆಯಿಂದ ಹೊರಹಾಕುವಂತೆ ತಿಳಿಸಿ, “ಇನ್ನಾದರೂ ಮಕ್ಕಳಿಗಾಗಿ ಅನ್ಯೋನ್ಯವಾಗಿ ಬದುಕಿ” ಎಂದು ದಂಪತಿಗಳಿಗೆ ಬುದ್ಧಿ ಹೇಳಿ ಒಂದಾಗಿಸಿದ್ದರು.

    ಕ್ಷಮೆ ಕೇಳಿ ನಾಟಕವಾಡಿದ ಪತ್ನಿ:

    ಕೆಲ ದಿನಗಳ ಹಿಂದೆ ಕಾವ್ಯ ತನ್ನ ಪ್ರಿಯಕರ ಹೇಮಂತ್ ಜೊತೆ ಓಡಿ ಹೋಗಿದ್ದಳು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಕರೆತಂದಾಗ, ಪೊಲೀಸರ ಮುಂದೆ ಕಣ್ಣೀರು ಹಾಕಿ, “ನನ್ನಿಂದ ತಪ್ಪಾಗಿದೆ, ಇನ್ನು ಮುಂದೆ ಗಂಡ-ಮಕ್ಕಳ ಜೊತೆ ಚೆನ್ನಾಗಿರುತ್ತೇನೆ” ಎಂದು ನಾಟಕವಾಡಿ ಮನೆಗೆ ಮರಳಿದ್ದಳು. ಪತ್ನಿ ಸುಧಾರಿಸಿಕೊಂಡಳು ಎಂದು ನಂಬಿದ ಶಿವಣ್ಣ ಆಕೆಯನ್ನು ಪ್ರೀತಿಯಿಂದಲೇ ಬರಮಾಡಿಕೊಂಡಿದ್ದರು.

    ಮನೆ ದೋಚಿ ಪರಾರಿಯಾದ ‘ಕಿಲ್ಲರ್’ ಪತ್ನಿ

    ಮನೆಗೆ ಮರಳಿದ ಕಾವ್ಯಳ ಉದ್ದೇಶ ಸುಧಾರಿಸುವುದಾಗಿರಲಿಲ್ಲ. ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ಸಾಧಿಸಿದ ಆಕೆ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತ್ ಜೊತೆ ಓಡಿ ಹೋದಳು. ಸಂಜೆ ಮನೆಗೆ ಬಂದ ಶಿವಣ್ಣನಿಗೆ ಪತ್ನಿಯ ಈ ಎರಡನೇ ದ್ರೋಹ ಅರಗಿಸಿಕೊಳ್ಳಲಾಗಲಿಲ್ಲ.

    ಮಕ್ಕಳನ್ನು ಕೊಂದು ಸಾವಿಗೆ ಶರಣಾದ ತಂದೆ:

    ನಂಬಿದ ಅಕ್ಕನ ಮಗನಿಂದ ದ್ರೋಹ, ಪತ್ನಿಯಿಂದ ಅವಮಾನ ಹಾಗೂ ತಾನು ಮಗನಂತೆ ಸಾಕಿದವನಿಂದಲೇ ಸಂಸಾರ ಹಾಳಾದ ನೋವು ಶಿವಣ್ಣನನ್ನು ಕ್ರೂರ ನಿರ್ಧಾರಕ್ಕೆ ದೂಡಿತು. ತನ್ನಿಬ್ಬರು ಮುದ್ದಾದ ಗಂಡು ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಅವರನ್ನು ಕೈಯಾರೆ ಉಸಿರುಗಟ್ಟಿಸಿ ಸಾಯಿಸಿದರು.
    ಮಕ್ಕಳ ಮೃತದೇಹದ ಪಕ್ಕದಲ್ಲೇ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

    ಗ್ರಾಮದಲ್ಲಿ ಶೋಕಸಾಗರ:

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಅಕ್ರಮ ಸಂಬಂಧ ಮತ್ತು ನಂಬಿಕೆ ದ್ರೋಹವು ಒಂದು ಸುಂದರ ಸಂಸಾರವನ್ನು ಹೇಗೆ ಸ್ಮಶಾನವಾಗಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪರಾರಿಯಾಗಿರುವ ಕಾವ್ಯ ಮತ್ತು ಹೇಮಂತ್‌ಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.