ದೊಡ್ಡಬಳ್ಳಾಪುರ; ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಗಡಿಪಾರು- ರೌಡಿಶೀಟರ್ ಗಳಿಗೆ ಇನ್ಸ್ ಪೆಕ್ಟರ್ ನವೀನ್ ವಾರ್ನಿಂಗ್

ದೊಡ್ಡಬಳ್ಳಾಪುರ; ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗುತ್ತಿದ್ದಂತೆ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಅಪರಾಧಕೃತ್ಯಗಳಲ್ಲಿ ಭಾಗಿಯಾಗಿ ರೌಡಿಶೀಟರ್  ಪಟ್ಟಿಯಲ್ಲಿರುವವರಿಗೆ ಪೊಲೀಸ್ ಇನ್ಸ್ ಪೆಕ್ಟರ್ ಡಾ.ನವೀನ್ ಕುಮಾ‌ರ್ ಎಂ.ಬಿ ಅವರು ನೀತಿ ಪಾಠದೊಂದಿಗೆ ಖಡಕ್  ಎಚ್ಚರಿಕೆಯನ್ನು ನೀಡಿದರು.

ನಗರದಲ್ಲಿನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೌಡಿಶೀಟರ್ ಗಳ ಪರೇಡ್ ನಲ್ಲಿ ಅವರು ಮಾತನಾಡಿದರು.

ರೌಡಿಯಿಸಂ, ಗೂಂಡಾಗಿರಿ, ದೌರ್ಜನ್ಯದಿಂದ ಏನೂ ಪ್ರಯೋಜನವಿಲ್ಲ. ನೆಮ್ಮದಿ ಕಳೆದುಕೊಂಡು, ಕುಟಂಬದಿಂದ ದೂರಾವಾಗಿ ಭಯಭೀತಿಯಲ್ಲಿ ಜೀವನ ಮಾಡಬೇಕಷ್ಟೇ. ಹೀಗಾಗಿ ಅಕ್ರಮ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಉತ್ತಮ ನಾಗರಿಕರಾಗಿ ಜೀವನ ಮಾಡಬೇಕು ಎಂದರು.

ರೌಡಿಯಿಸಂ ಜೀವನವನ್ನು ಹಾಳು ಮಾಡುವುದಲ್ಲದೆ ಜೀವನ ಪರ್ಯಂತ ರೌಡಿಶೀಟರ್ ಪಟ್ಟ ಕಟ್ಟಿಕೊಂಡು ಬದುಕಬೇಕಾಗುತ್ತದೆ. ನೆಮ್ಮದಿ ಜೀವನಕ್ಕಾಗಿ ಕೂಲಿ ಕೆಲಸ ಮಾಡಿದರೂ ಪರವಾಗಿಲ್ಲ ಕುಟುಂಬದೊಂದಿಗೆ ಖುಷಿಯಿಂದ ಜೀವನ ಸಾಗಿಸಬೇಕು. ಎಲ್ಲಾರು ಕಾನೂನನ್ನು ಗೌರವಿಸಬೇಕು. ರೌಡಿ ಚಟುವಟಿಕೆ, ಕಾನೂನು ಬಾಹಿರ ಕೆಲಸಗಳು ಹೀಗೆ ಮುಂದುವರೆದರೆ ಗಡಿಪಾರು ಮಾಡಲಾಗುವುದು. ಹತ್ತು, ಇಪ್ಪತ್ತು ವರ್ಷಗಳಾದರೂ ರೌಡಿಶೀಟರ್ ಪಟ್ಟ ಹೋಗುವುದಿಲ್ಲ. ಕಳ್ಳತನ, ಕೊಲೆ, ದೌರ್ಜನ್ಯ ಮಾಡಿದರೆ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಕಾನೂನು ಬಿಗಿಯಾಗಿದೆ. ಕುಟುಂಬಸ್ಥರು ಗೌರವ ನೀಡುವಷ್ಟು ರೀತಿಯಲ್ಲಿಯಾದರೂ ಜೀವನ ಮಾಡಿ. ಪೊಲೀಸರಿಗೆ ತಿಳಿಯದಂತೆ ಸ್ಥಳ, ಫೋನ್ ನಂಬರ್ ಬದಲಾವಣೆ ಮಾಡಬಾರದು. ಕಾನೂನಿಗೆ ಬೆಲೆ ಕೊಟ್ಟು ಸಮಾಜದಲ್ಲಿ ಒಳ್ಳೆಯವರಾಗಿ ಬದುಕಿ. ಮಾದರಿ ಜೀವನ ನಡೆಸಿದರೆ ರೌಡಿ ಶೀಟರ್ ಬಂದ್ ಮಾಡಲಾಗುವುದು ಎಂದರು.

ರೌಡಿಗಳಿಗೆ ಸಂಬಂಧಿಸಿದ ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ವಾಹನ ದಾಖಲೆಗಳು ಸೇರಿದಂತೆ ಇತರೆ ದಾಖಲಾತಿಗಳನ್ನು ಸಂಗ್ರಹಿಸಬೇಕು. ಸದಾ ರೌಡಿಗಳ ಚಲನವಲನಗಳ ಮೇಲೆ ನಿಗಾ ಇಟ್ಟಿರಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಈ ವೇಳೆ ಸಬ್ ಇನ್ಸ್ ಪೆಕ್ಟರ್, ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *