Author: Dharmaraju

  • ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

    ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣೆ

    ಕೆ.ಆರ್.ಪುರ-ಕ್ಷೇತ್ರದ ಕ್ಯಾಲಸನಹಳ್ಳಿ ಸರ್ಕಾರಿ ಶಾಲೆಯಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಉದ್ಘಾಟಿಸಿದರು.

    ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಮಾಡುವುದರಿಂದ ಬಡ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಬಡಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ
    ಕ್ಯಾಲಸನಹಳ್ಳಿಯ ಸರ್ಕಾರಿ ಶಾಲೆಗೆ ಕಾಂಗ್ರೆಸ್ ಹಿರಿಯ ಮುಖಂಡ ಅಗರ ಆರ್.ಪ್ರಕಾಶ್ ಅವರು ಶುದ್ಧ ನೀರಿನ ಘಟಕವನ್ನು ಕೋಡುಗೆ ನೀಡಿದ್ದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

    ಗ್ರೀನ್ ಹೊರಮಾವು ಅಭಿಯಾನದ ಹಿನ್ನಲೆಯಲ್ಲಿ ಶಾಲೆಯ ಆವರಣದಲ್ಲಿ ಗಿಡ ನೆಡುವ ಕಾರ್ಯ ಮಾಡಲಾಗಿದ್ದು,ಹಸಿರು ಹೊರಮಾವು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ವೆಂಕಟೇಶ್, ಹಿರಿಯ ಮುಖಂಡ ಅಗರ ಆರ್.ಪ್ರಕಾಶ್,ಹೇಮಾವತಿ ಸುರೇಶ್,ವಾರ್ಡನ ಅಧ್ಯಕ್ಷ ಪ್ರಸನ್ನ,ಗೆದ್ದಲಹಳ್ಳಿ ಮುನಿರಾಜು,ಸುಧನ್ವ ಮುಖಂಡರಾದ ಸುನೀಲ್,ರವಿ ಲಕ್ಷ್ಮಣರೆಡ್ಡಿ ಇದ್ದರು.


  • ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ: ಐವರು ಯೋಧರು ಹುತಾತ್ಮಆಘಾತವಾಗಿದೆ.

    ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ: ಐವರು ಯೋಧರು ಹುತಾತ್ಮಆಘಾತವಾಗಿದೆ.

    ಅಸ್ಸಾಂ:ಭಾರತೀಯ ವಾಯುಪಡೆಯ ಎ ಎನ್-32 ಸಾರಿಗೆ ವಿಮಾನ ಪತನಗೊಂಡು ಬೆಂಕಿಗಾಹುತಿಯಾಗಿರುವ ಘಟನೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

    ಅಸ್ಸಾಂನ ಜೋರ್ಹತ್ ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಏಕಾಏಕಿ ವಿಮಾನ ಪತನಗೊಂಡು ಬೆಂಕಿಗಾಹುತಿಯಾಗಿದೆ. ಈ ದುರಂತದಲ್ಲಿ ಐವರು ಯೋಧರು ಸಾವನ್ನಪ್ಪಿದ್ದಾರೆ. ಓರ್ವ ಸಹಪೈಲಟ್ ಬದುಕುಳಿದಿದ್ದಾಅರೆ.

    ವಾಯುಪಡೆ ನಿಲ್ದಾಣದ ಆವರಣದಲ್ಲಿಯೇ ವಿಮಾನ ಪತನಗೊಂಡಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ದುರಂತದಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ. ವಿಮಾನ ದುರಂತದ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗಿದೆ.

    ಈ ದುರ್ಘಟನೆಯಲ್ಲಿ ಮೃತಪಟ್ಟ ಐವರು ಸಿಬ್ಬಂದಿ:
    Prashant Singh (ಸ್ಕ್ವಾಡ್ರನ್ ಲೀಡರ್)
    Shubham Kumar (ಫ್ಲೈಟ್ ಲೆಫ್ಟಿನೆಂಟ್)
    Jitendra Sharma (ಸಾರ್ಜೆಂಟ್)
    Khemaram Kumawat (ಅಗ್ನಿವೀರ್ ವಾಯು)
    Danish Alam (ಅಗ್ನಿವೀರ್ ವಾಯು)

    AN-32 ಒಂದು ಸೋವಿಯತ್ ಯುಗದ ಸಾರಿಗೆ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಪ್ರಮುಖ ಲಾಜಿಸ್ಟಿಕ್ಸ್ ಹಾಗೂ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 1986ರಿಂದ ಭಾರತದಲ್ಲಿ ಸುಮಾರು 22 AN-32 ವಿಮಾನ ಅಪಘಾತಗಳು ಸಂಭವಿಸಿವೆ. 2025ರಲ್ಲಿಯೂ ಇದೇ ಮಾದರಿಯ ವಿಮಾನ ಅಪಘಾತಕ್ಕೀಡಾಗಿತ್ತು. ಆದಾಗ್ಯೂ, ದೇಶದಾದ್ಯಂತ ಸೇನಾ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಿಗೆ ಈ ವಿಮಾನವನ್ನು ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಘಟನೆ, ಕೆಲವು ತಿಂಗಳ ಹಿಂದೆ Sukhoi Su-30MKI ಯುದ್ಧ ವಿಮಾನವು ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಹಾರಾಟದ ವೇಳೆ ಪತನಗೊಂಡಿದ್ದ ಘಟನೆಯ ನಂತರ ಸಂಭವಿಸಿರುವ ಮತ್ತೊಂದು ದೊಡ್ಡ ಆಘಾತವಾಗಿದೆ

    ರಾಜನಾಥ್ ಸಿಂಗ್ ಸಂತಾಪ
    Rajnath Singh ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    “ಜೋರ್ಹಾಟ್‌ನಲ್ಲಿ ಸಂಭವಿಸಿದ AN-32 ವಿಮಾನ ದುರಂತದಲ್ಲಿ ಐವರು ವಾಯುಯೋಧರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಕರ್ತವ್ಯ ನಿರ್ವಹಣೆಯ ವೇಳೆ ಅವರು ನೀಡಿದ ಅತ್ಯುನ್ನತ ತ್ಯಾಗವನ್ನು ದೇಶ ಸದಾ ಹೆಮ್ಮೆಯಿಂದ ಸ್ಮರಿಸಲಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು” ಎಂದು ಅವರು ತಿಳಿಸಿದ್ದಾರೆ.ವಾಯುಪಡೆ ಕೇಂದ್ರದ ಸಮೀಪ ವಾಸಿಸುವ ಸ್ಥಳೀಯ ನಿವಾಸಿಯೊಬ್ಬರು, “ವಿಮಾನದ ಹಿಂಭಾಗ ಕಾಣುತ್ತಿತ್ತು ಮತ್ತು ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿತ್ತು. ವಿಮಾನವು ನಿಶ್ಚಲವಾಗಿತ್ತು. ನಾನು ಅಲ್ಲಿಂದ ದೂರ ಸರಿಯಲು ಆರಂಭಿಸಿದಾಗ ಭಾರೀ ಸ್ಫೋಟ ಸಂಭವಿಸಿತು. ಅದರ ಪ್ರಭಾವದಿಂದ ಇಡೀ ಪ್ರದೇಶವೇ ನಡುಗಿತು” ಎಂದು ಹೇಳಿದ್ದಾರೆ

  • ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ ಡಿವೈಡರ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು

    ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ ಡಿವೈಡರ್‌ಗೆ ಕಾರು ಡಿಕ್ಕಿ: ಇಬ್ಬರು ಸಾವು

    ಹೊಸಕೋಟೆ :- ಅತಿ ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.


    ನಗರದ ಅರೆಬಿಕ್ ಕಾಲೇಜು ಸಮೀಪದ ಪಿಎನ್‌ಟಿ ಕಾಲೋನಿ ನಿವಾಸಿ ಸಾಜೀಯಾ (28) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಕಮ್ಮನಹಳ್ಳಿಯ ನಿವಾಸಿ ರಿಜ್ವಾನ್ (34) ಮೃತಪಟ್ಟವರು.

    ರಿಜ್ವಾನ್ ತನ್ನ ಬೆಂಜ್ ಕಾರಿನಲ್ಲಿ ಸ್ನೇಹಿತೆ ಸಾಜೀಯ ಅವರನ್ನು
    ಕರೆದುಕೊಂಡು ಹೋಟೆಲ್‌ನಲ್ಲಿ ಊಟ ಮಾಡಲು ದೇವನಹಳ್ಳಿ ಕಡೆಗೆ ರಾತ್ರಿ ಹೋಗಿದ್ದಾರೆ.

    ಊಟ ಮುಗಿಸಿಕೊಂಡು ವಾಪಸ್ ತಡರಾತ್ರಿ 12.45 ರ ಸುಮಾರಿನಲ್ಲಿ ನಗರಕ್ಕೆ ಬರುತ್ತಿದ್ದಾಗ ಹೊಸಕೋಟೆ ಸಮೀಪದ ದೊಡ್ಡ ಹುಲ್ಲೂರು ಬಳಿಯ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಅಪ್ಪಳಿಸಿದೆ.

    ಪರಿಣಾಮ ಕಾರಿನೊಳಗಿದ್ದ ಸ್ನೇಹಿತೆ ಸಾಜೀಯಾ ಎಂಬುವವರು ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ರಿಜ್ವಾನ್ ಸೇತುವೆಯಿಂದ 20ಕೈಗೊಂಡಿದ್ದಾರೆ
    ಬಿದ್ದಿದ್ದಾನೆ.

    ಕೆಳಗೆ ನೀರು ಇದ್ದುದ್ದರಿಂದ ಈತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ರಿಜ್ವಾನ್ ಶವ ಪತ್ತೆಯಾಗಿದೆ.

    ಸುದ್ದಿ ತಿಳಿದು ಹೊಸಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

    ಅತಿ ವೇಗ ಹಾಗೂ ಬೇಜವಾಬ್ದಾರಿ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಅಪಘಾತದ ನಿಖರ ಕಾರಣವನ್ನು ತಿಳಿಯಲು ತನಿಖೆ ಮುಂದುವರಿದಿದೆ.


     

  • ಜಯನಗರದಲ್ಲಿ ಸೂರ್ಯಗಾಯತ್ರಿ ಅವರಿಂದ ಸಂಗೀತ ಕಾರ್ಯಾಗಾರ: ಜೂ.12ರಿಂದ 2 ದಿನಗಳ ಅಪೂರ್ವ ಅವಕಾಶ!

    ಜಯನಗರದಲ್ಲಿ ಸೂರ್ಯಗಾಯತ್ರಿ ಅವರಿಂದ ಸಂಗೀತ ಕಾರ್ಯಾಗಾರ: ಜೂ.12ರಿಂದ 2 ದಿನಗಳ ಅಪೂರ್ವ ಅವಕಾಶ!

    • ಸೂರ್ಯಗಾಯತ್ರಿ ಅವರಿಂದ ನೇರ ಸಂಗೀತ ಕಲಿಕೆ

    • ಜೂನ್ 14ರಂದು ವೇದಿಕೆ ಹಂಚಿಕೊಳ್ಳುವ ಅವಕಾಶ

    • ಪರಮ್ ಕಲ್ಚರ್ ಹಾಗೂ ಹರಿವಂಶ ಗ್ರೂಪ್‌ ಸಹಯೋಗ

    • ಪ್ರವೇಶ ದರದಲ್ಲಿ ಉಚಿತ ಕನ್ಸರ್ಟ್ ಪಾಸ್

    ಬೆಂಗಳೂರು: ಕಲಾಭಿಮಾನಿಗಳಿಗೆ ಮತ್ತು ಉದಯೋನ್ಮುಖ ಗಾಯಕರಿಗೆ ಇಲ್ಲೊಂದು ಸುವರ್ಣಾವಕಾಶ ಎದುರಾಗಿದೆ. ‘ಪರಮ್ ಕಲ್ಚರ್’ ಹಾಗೂ ‘ಹರಿವಂಶ ಗ್ರೂಪ್’ ಸಹಯೋಗದೊಂದಿಗೆ ಜಯನಗರದ ಯುವಕ ಸಂಘದಲ್ಲಿ ಜೂನ್ 12 ಮತ್ತು 13ರಂದು ಸಂಜೆ 6 ರಿಂದ 8 ಗಂಟೆಯವರೆಗೆ ಎರಡು ದಿನಗಳ ವಿಶೇಷ ಪ್ರಿ-ಕನ್ಸರ್ಟ್ ಸಂಗೀತ ಕಾರ್ಯಾಗಾರ ‘ಭಜ ಮನ’ವನ್ನು (Pre-Concert workshop) ಹಮ್ಮಿಕೊಳ್ಳಲಾಗಿದೆ. ಜಾಗತಿಕ ಮಟ್ಟದಲ್ಲಿ ಭಕ್ತಿ ಸಂಗೀತದ ಮೂಲಕ ಸನ್ಸೇಷನ್ ಸೃಷ್ಟಿಸಿರುವ ಖ್ಯಾತ ಯುವ ಶಾಸ್ತ್ರೀಯ ಗಾಯಕಿ ಸೂರ್ಯಗಾಯತ್ರಿ ಅವರು ಈ ಕಾರ್ಯಾಗಾರವನ್ನು ಮುನ್ನಡೆಸಲಿದ್ದಾರೆ.


    ಈ ಕಾರ್ಯಾಗಾರದಲ್ಲಿ ಭಾಗವಹಿಸುವ ಆಸಕ್ತರಿಗೆ ಸೂರ್ಯಗಾಯತ್ರಿ ಅವರಿಂದ ನೇರವಾಗಿ ಭಜನೆಗಳು, ದಾಸರಪದಗಳು ಮತ್ತು ಅಭಂಗ್‌ಗಳನ್ನು ಕಲಿಯುವ ಅಪೂರ್ವ ಅವಕಾಶ ಸಿಗಲಿದೆ. ಜೊತೆಗೆ, ಅವರ ಕಲಾ ಜರ್ನಿ ಮತ್ತು ಭಕ್ತಿ ಸಂಗೀತದ ಅನುಭವಗಳನ್ನು ನೇರವಾಗಿ ಅವರಿಂದಲೇ ಕೇಳಿ ತಿಳಿಯಬಹುದು. ಒಟ್ಟು 4 ಗಂಟೆಗಳ ಕಾಲ ನೇರ ಕಲಿಕೆ ಇರಲಿದ್ದು, ಕಲಿಕೆಗೆ ಅಗತ್ಯವಿರುವ ವಿಶೇಷ ಸಾಹಿತ್ಯ ಹಾಗೂ ನೋಟ್ಸ್‌ಗಳನ್ನೂ ಇಲ್ಲಿ ಪಡೆಯಬಹುದಾಗಿದೆ.

    ವೇದಿಕೆ ಹಂಚಿಕೊಳ್ಳುವ ಸುವರ್ಣಾವಕಾಶ:

    ಕಾರ್ಯಾಗಾರವು ಕೇವಲ ಕಲಿಕೆಗೆ ಸೀಮಿತವಾಗಿರದೆ, ಪ್ರದರ್ಶನಕ್ಕೂ ದಾರಿ ಮಾಡಿಕೊಡಲಿದೆ. ಇಲ್ಲಿ ಭಾಗವಹಿಸುವ ಪ್ರತಿಭಾವಂತ ಕಲಾಭಿಮಾನಿಗಳನ್ನು ಜೂನ್ 14ರಂದು ಸಂಜೆ 5 ಗಂಟೆಯಿಂದ ಮೀನಾಕ್ಷಿ ರಂಗಮಂಚದಲ್ಲಿ ನಡೆಯಲಿರುವ ಭವ್ಯ ಲೈವ್ ಕನ್ಸರ್ಟ್‌ನಲ್ಲಿ ಸೂರ್ಯಗಾಯತ್ರಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡಲು ಪರಿಗಣಿಸುವ ಬಂಪರ್ ಚಾನ್ಸ್ ಇರಲಿದೆ.

    ಉಚಿತ ಕನ್ಸರ್ಟ್ ಪಾಸ್ ಲಭ್ಯ:

    ಈ ಕಾರ್ಯಾಗಾರದಲ್ಲಿ ಕೇವಲ ಕಲಿಕೆ ಮಾತ್ರವಲ್ಲದೆ ಹೆಚ್ಚುವರಿ ಸೌಲಭ್ಯಗಳೂ ಸೇರಿವೆ. ಭಾಗವಹಿಸುವ ಪ್ರತಿಯೊಬ್ಬರಿಗೂ ಉಚಿತ ಕಲಿಕಾ ಸಾಮಗ್ರಿಗಳ ಜೊತೆಗೆ ಜೂನ್ 14ರಂದು ನಡೆಯಲಿರುವ ಸೂರ್ಯಗಾಯತ್ರಿ ಅವರ ಭವ್ಯ ಲೈವ್ ಕನ್ಸರ್ಟ್‌ನ ಕಂಪ್ಲಿಮೆಂಟರಿ ಪಾಸ್ ಅನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು.

    ಜಾಗತಿಕ ತಾರೆಯ ಮಾರ್ಗದರ್ಶನ:

    ಸೂರ್ಯಗಾಯತ್ರಿ ಅವರು ಮುಂಬೈನ ಷಣ್ಮುಖಾನಂದ ಸಭಾದಿಂದ ಕಿರಿಯ ವಯಸ್ಸಿನಲ್ಲೇ ಪ್ರತಿಷ್ಠಿತ ಎಂ.ಎಸ್. ಸುಬ್ಬುಲಕ್ಷ್ಮಿ ಫೆಲೋಶಿಪ್ ಪುರಸ್ಕೃತರಾಗಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ 29 ನಗರಗಳ ಯಶಸ್ವಿ ಪ್ರವಾಸ ಮುಗಿಸಿ ಬಂದಿರುವ ಹಾಗೂ ದೇಶ-ವಿದೇಶಗಳಲ್ಲಿ 500ಕ್ಕೂ ಹೆಚ್ಚು ಲೈವ್ ಪ್ರದರ್ಶನಗಳನ್ನು ನೀಡಿದ್ದಾರೆ.

  • ಬೆಳ್ಳಂಬೆಳಗ್ಗೆ ಹೆಬ್ಬಗೋಡಿಯಲ್ಲಿ ಪೊಲೀಸ್ ಫೈರಿಂಗ್: ರೌಡಿಶೀಟರ್ ಕಾಲಿಗೆ ಗುಂಡೇಟು!

    ಬೆಳ್ಳಂಬೆಳಗ್ಗೆ ಹೆಬ್ಬಗೋಡಿಯಲ್ಲಿ ಪೊಲೀಸ್ ಫೈರಿಂಗ್: ರೌಡಿಶೀಟರ್ ಕಾಲಿಗೆ ಗುಂಡೇಟು!

    ಬೆಂಗಳೂರು ನಗರದಲ್ಲಿ ಬೆಳ್ಳಂಬೆಳಗ್ಗೆ ಪೊಲೀಸ್ ಕಾರ್ಯಾಚರಣೆಯ ವೇಳೆ ರೌಡಿಶೀಟರ್ ಒಬ್ಬನಿಗೆ ಕಾಲಿಗೆ ಗುಂಡು ಬಿದ್ದ ಘಟನೆ ನಡೆದಿದೆ.

    ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗೇನಾ ಅಗ್ರಹಾರದ ತೋಪು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಜೀವ (19) ಎಂಬ ರೌಡಿಶೀಟರ್‌ಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಗಾಯಗೊಂಡ ಆರೋಪಿ ಜೀವ (19) ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಪೊಲೀಸರ ಪ್ರಕಾರ, ಕೊ*ಲೆ, ಸುಲಿಗೆ ಹಾಗೂ ದರೋಡೆ ಸೇರಿದಂತೆ ಹಲವು ಗಂಭೀರ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಕಳೆದ ವಾರ ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ನಡೆದ ದರೋಡೆ ಪ್ರಕರಣಗಳಲ್ಲೂ ಈತನ ವಿರುದ್ಧ ಆರೋಪಗಳು ದಾಖಲಾಗಿದ್ದವು.

    ಖಚಿತ ಮಾಹಿತಿಯ ಪಡೆದು ಹೆಬ್ಬಗೋಡಿ ಪೊಲೀಸರು ಬಂಧಿಸಲು ಹೋದ ವೇಳೆ ಆರೋಪಿ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ

    ಈ ಸಂದರ್ಭದಲ್ಲಿ ಸಿಬ್ಬಂದಿ ನಾಗೇಶ್ ಅವರ ಮೇಲೆ ದಾಳಿ ಯತ್ನ ನಡೆದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ.

    ಇನ್ಸ್‌ಪೆಕ್ಟರ್ ಸೋಮಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

  • ದಿನಕ್ಕೆ ₹2,000 ಸಂಪಾದನೆ ಕೇಳಿ ಫಿದಾ ಆದ ಯುವತಿ ; ಆಟೋ ಚಾಲಕನನ್ನೇ ಮದುವೆಯಾಗಲು ನಿರ್ಧಾರ.!

    ದಿನಕ್ಕೆ ₹2,000 ಸಂಪಾದನೆ ಕೇಳಿ ಫಿದಾ ಆದ ಯುವತಿ ; ಆಟೋ ಚಾಲಕನನ್ನೇ ಮದುವೆಯಾಗಲು ನಿರ್ಧಾರ.!

    ಬೆಂಗಳೂರು: ಜಿವನದಲ್ಲಿ ನಾವು ಯಾರನ್ನು ಮದುವೆಯಾಗುತ್ತೇವೆ ಎಂಬುದು ಮುಂಚಿತವಾಗಿ ಯಾರಿಗೂ ತಿಳಿದಿರುವುದಿಲ್ಲ. ಹಿರಿಯರು ಹೇಳುವಂತೆ, “ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ.” ಕೆಲವೊಮ್ಮೆ ವಿಧಿ ಮತ್ತು ಭವಿಷ್ಯ ನಮ್ಮ ಕಲ್ಪನೆಗೂ ಮೀರಿದ ರೀತಿಯಲ್ಲಿ ತಿರುವು ಪಡೆಯುತ್ತವೆ.

    ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ಘಟನೆ ಅದಕ್ಕೆ ಉತ್ತಮ ಉದಾಹರಣೆ.

    ಸಾಮಾನ್ಯವಾಗಿ ಮದುವೆಯ ವಿಷಯ ಬಂದಾಗ ಅನೇಕ ಹುಡುಗಿಯರು ಸಾಫ್ಟ್‌ವೇರ್ ಇಂಜಿನಿಯರ್, ದೊಡ್ಡ ಉದ್ಯಮಿ ಅಥವಾ ಸರ್ಕಾರಿ ಉದ್ಯೋಗಿಯನ್ನೇ ಜೀವನ ಸಂಗಾತಿಯಾಗಿ ಆಯ್ಕೆ ಮಾಡಲು ಬಯಸುತ್ತಾರೆ. ಆದರೆ ಬೆಂಗಳೂರಿನ ಒಬ್ಬ ಯುವತಿ, ಆಟೋ ಪ್ರಯಾಣದ ವೇಳೆ ನಡೆದ ಒಂದು ಚಿಕ್ಕ ಸಂಭಾಷಣೆಯಿಂದ ಪ್ರಭಾವಿತರಾಗಿ ಆಟೋ ಚಾಲಕನನ್ನೇ ತನ್ನ ಪತಿಯಾಗಿ ಆಯ್ಕೆ ಮಾಡಿಕೊಂಡಿದ್ದಾಳೆ!

    ಆಟೋ ಚಾಲಕ ಮತ್ತು ಯುವತಿಯ ಪರಿಚಯ
    • ಹುಡುಗಿಯ ಹೆಸರು: ಕಾವ್ಯ (ಖಾಸಗಿ ಕಂಪನಿಯ ಉದ್ಯೋಗಿ)
    • ಆಟೋ ಚಾಲಕನ ಹೆಸರು: ಮಂಜುನಾಥ್
    • ವಾಸಸ್ಥಳ: ಇಬ್ಬರೂ ಮೂಲತಃ ಕರ್ನಾಟಕದವರಾಗಿದ್ದು, ಪ್ರಸ್ತುತ ಬೆಂಗಳೂರಿನ ಐಟಿ ಕೇಂದ್ರವೆಂದು ಪ್ರಸಿದ್ಧವಾದ ಮಾರತಹಳ್ಳಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

    ಮಂಜುನಾಥ್ ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಚಾಲನೆ ಮಾಡಿ ಪ್ರಾಮಾಣಿಕವಾಗಿ ಜೀವನ ಸಾಗಿಸುತ್ತಿದ್ದಾರೆ.

    ಆಟೋದಲ್ಲಿ ನಡೆದ ಆ ಕುತೂಹಲಕಾರಿ ಮಾತುಕತೆ:
    ಒಂದು ದಿನ ಕಾವ್ಯ ಮಂಜುನಾಥ್ ಅವರ ಆಟೋದಲ್ಲಿ ಪ್ರಯಾಣಿಸಿದರು. ಗಮ್ಯಸ್ಥಾನ ತಲುಪಿದ ನಂತರ ಮಂಜುನಾಥ್ ಪ್ರಯಾಣದ ಬಾಡಿಗೆಯಾಗಿ 200 ರೂಪಾಯಿ ಕೇಳಿದರು. ಹಣ ನೀಡುವಾಗ ಕಾವ್ಯ ಕುತೂಹಲದಿಂದ ಕೇಳಿದರು:

    “ಆಟೋ ಓಡಿಸಿ ದಿನಕ್ಕೆ ಎಷ್ಟು ಸಂಪಾದಿಸುತ್ತೀರಿ?”

    ಇದಕ್ಕೆ ಮಂಜುನಾಥ್ ಪ್ರಾಮಾಣಿಕವಾಗಿ ಉತ್ತರಿಸಿದರು:

    “ರಜೆ ದಿನಗಳು ಮತ್ತು ಇತರೆ ಖರ್ಚುಗಳನ್ನು ಬಿಟ್ಟು ನೋಡಿದರೆ ದಿನಕ್ಕೆ ಸುಮಾರು 2,000 ರೂಪಾಯಿ ಸಂಪಾದಿಸುತ್ತೇನೆ.”

    ಕಾವ್ಯ ಮಾಡಿದ ಲೆಕ್ಕಾಚಾರ

    ಮಂಜುನಾಥ್ ಅವರ ಉತ್ತರ ಕೇಳಿದ ಕಾವ್ಯ ತಕ್ಷಣ ಮನಸ್ಸಿನಲ್ಲಿ ಲೆಕ್ಕ ಹಾಕಲು ಆರಂಭಿಸಿದರು.

    • ದಿನದ ಆದಾಯ: ₹2,000

    • ತಿಂಗಳ ಆದಾಯ (30 ದಿನಗಳಿಗೆ): ಸುಮಾರು ₹60,000

    ಇಂದಿನ ಕಾಲದಲ್ಲಿ ಅನೇಕರು ಇಂಜಿನಿಯರಿಂಗ್ ಅಥವಾ ಪದವಿ ಮುಗಿಸಿ ಕಂಪನಿಗಳಲ್ಲಿ ದಿನರಾತ್ರಿ ದುಡಿದರೂ ₹30,000-₹40,000 ಗಳಿಸಲು ಕಷ್ಟಪಡುತ್ತಾರೆ. ಆದರೆ ಒಬ್ಬ ಆಟೋ ಚಾಲಕ ಸ್ವಂತ ಪರಿಶ್ರಮದಿಂದ ತಿಂಗಳಿಗೆ ₹60,000 ಗಳಿಸುತ್ತಿರುವುದು ಕಾವ್ಯ ಅವರಿಗೆ ತುಂಬಾ ಇಷ್ಟವಾಯಿತು. ಅವರ ಪರಿಶ್ರಮ, ಸ್ವಾವಲಂಬನೆ ಮತ್ತು ಹಣಕಾಸಿನ ಶಿಸ್ತು ಕಾವ್ಯ ಅವರನ್ನು ಆಕರ್ಷಿಸಿತು.

    “ಅಮ್ಮಾ, ನನಗೆ ನನ್ನ ಗಂಡ ಸಿಕ್ಕಿದ್ದಾನೆ!”

    ಆಟೋದಿಂದ ಇಳಿದ ತಕ್ಷಣ ಕಾವ್ಯ ತಮ್ಮ ತಾಯಿಗೆ ಕರೆ ಮಾಡಿ ಹೀಗೆ ಹೇಳಿದರು:

    “ಅಮ್ಮಾ, ಇನ್ನು ನನಗಾಗಿ ವರ ಹುಡುಕುವ ಅಗತ್ಯವಿಲ್ಲ. ನನಗೆ ನನ್ನ ಗಂಡ ಸಿಕ್ಕಿದ್ದಾನೆ!”

    ಮಗಳ ಮಾತು ಕೇಳಿ ತಾಯಿ ಕ್ಷಣಕಾಲ ಆಶ್ಚರ್ಯಚಕಿತರಾದರು. ನಂತರ ಕಾವ್ಯ ಸಂಪೂರ್ಣ ಘಟನೆಯನ್ನು ವಿವರಿಸಿದರು. ಮಂಜುನಾಥ್ ಅವರ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಮತ್ತು ಕೆಲಸದ ಮೇಲಿನ ಗೌರವದ ಬಗ್ಗೆ ಹೇಳಿದರು.

    ಕಾವ್ಯ ಅವರ ಅಭಿಪ್ರಾಯವೇನೆಂದರೆ:

    “ಸ್ವಂತ ಕಾಲಿನ ಮೇಲೆ ನಿಂತು ಪ್ರಾಮಾಣಿಕವಾಗಿ ದುಡಿಯುವ ವ್ಯಕ್ತಿ, ದೊಡ್ಡ ಕನಸುಗಳನ್ನು ಕಾಣುವ ಆದರೆ ಸಾಲದ ಬದುಕು ನಡೆಸುವ ವ್ಯಕ್ತಿಗಿಂತ ಉತ್ತಮ.”

    ಕೆಲಸಕ್ಕೆ ಗೌರವ ಎಂಬ ಸಂದೇಶ

    ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನೇಕರು ಕಾವ್ಯ ಅವರ ಚಿಂತನೆ ಮತ್ತು ನಿರ್ಧಾರವನ್ನು ಪ್ರಶಂಸಿಸಿದ್ದಾರೆ.

    ನೆಟ್ಟಿಗರು ಹೀಗೆ ಪ್ರತಿಕ್ರಿಯಿಸಿದ್ದಾರೆ:

    “ಯಾವುದೇ ಕೆಲಸಕ್ಕೂ ತನ್ನದೇ ಆದ ಗೌರವವಿದೆ. ಸಾಫ್ಟ್‌ವೇರ್ ಉದ್ಯೋಗಿಗಳಷ್ಟೇ ಅಲ್ಲ, ಸ್ವಯಂ ಉದ್ಯೋಗ ಮಾಡುತ್ತಿರುವ ಆಟೋ ಚಾಲಕರೂ ಗೌರವದಿಂದ ಬದುಕಬಹುದು. ಮಂಜುನಾಥ್ ಅದಕ್ಕೆ ಉತ್ತಮ ಉದಾಹರಣೆ.”

    ವಿಧಿ ಯಾವ ರೂಪದಲ್ಲಿ ನಮ್ಮ ಮುಂದೆ ಬರುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಕೇವಲ ₹200 ಬಾಡಿಗೆಯಿಂದ ಆರಂಭವಾದ ಒಂದು ಸಾಮಾನ್ಯ ಮಾತುಕತೆ, ಈಗ ಇಬ್ಬರ ಜೀವನವನ್ನು ಒಂದಾಗಿಸುವ ಸುಂದರ ಕಥೆಯಾಗಿ ಮಾರ್ಪಟ್ಟಿದೆ.ಮಂಜುನಾಥ್ ಮತ್ತು ಕಾವ್ಯ ಅವರ ಈ ಕಥೆ, ಪ್ರಾಮಾಣಿಕ ಪರಿಶ್ರಮಕ್ಕೆ ಸದಾ ಮೌಲ್ಯವಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಈ ಜೋಡಿಯ ಭವಿಷ್ಯ ಸುಖಮಯವಾಗಿರಲಿ ಎಂಬುದು ಎಲ್ಲರ ಆಶಯ

  • ಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

    ಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

    ಕೆ.ಆರ್.ಪುರ : ಮೋದಿ ಅಂತಹ ಅಗ್ರಗಣ್ಯನಾಯಕ ಭಾರತಕ್ಕೆ ಸಿಕ್ಕಿರುವುದು ಭಾರತೀಯರ ಪುಣ್ಯ , ದಶಕಗಳೇ ಕಳೆದರೂ ಮೋದಿ ಆಡಳಿತ ಮುಂದಿನ ಪೀಳಿಗೆಗೆ ಭದ್ರ ಬುನಾದಿ ಎಂದು ಶಾಸಕ‌ ಬೈರತಿ ಬಸವರಾಜ ಅವರು ತಿಳಿಸಿದರು .

    ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12ವರ್ಷ ಪೂರ್ಣ ಗೊಳಿಸಿದ ಹಿನ್ನಲೆಯಲ್ಲಿ ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ರಾಮಮೂರ್ತಿ ನಗರದ ಆಂಜನೇಯ ಸ್ವಾಮಿಗೆ ವಿಷೇಶ ಪೂಜೆ ಸಲ್ಲಿಸಿ, ನಂತರ ದೇವಾಲಯದ ಬಳಿ ಸಂಭ್ರಮಾಚರಣೆ ಮಾಡಿ ಸಾರ್ವಜನಿಕರಿಗೆ ಸಿಹಿ‌ ವಿತರಿಸಿ ಮಾತನಾಡಿದ ಅವರು

    ವಿಶ್ವದಲ್ಲೇ ಭಾರತ ದೇಶವನ್ನು ಅಗ್ರಮಟ್ಟಕ್ಕೆ ತಲುಪಿಸುವಲಿ ದೇಶವನ್ನು ಅಭಿವೃದ್ಧಿಯೆಡೆಗೆ ದಿಟ್ಟ ಹೆಜ್ಜೆ ಇರಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು , ದೇಶದ ಸೈನ್ಯಕ್ಕೆ ಹೊಸ ಸ್ಪರ್ಶನೀಡಿ ವಿಶ್ವದ ಮಟ್ಟದಲ್ಲಿ ಗೌರವ ತಂದುಕೊಟ್ಟು ಬಲಿಷ್ಠವನ್ನಾಗಿ ಮಾಡಿದ ಏಕೈಕ ನಾಯಕರಾಗಿದ್ದಾರೆ ಎಂದು ಹೇಳಿದರು.

    ಶ್ರೀರಾಮನ ಕಾಣುವ ಹಿಂಗಿತ ,ಆತ್ಮನಿರ್ಭರ ಭಾರತ,ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ, ಡಿಜಿಟಲ್ ಇಂಡಿಯಾ ಮುಖಾಂತರ ವಿಶ್ವದಲ್ಲಿ ಕ್ರಾಂತಿ ವಿಶ್ವಮಟ್ಟದಲ್ಲಿ ಸಾಮರಸ್ಯ ನಾಯಕತ್ವ ಹೊಂದಿದ ವಿಶ್ವಗುರು , ನರೇಂದ್ರ ದಾಮೋದರ ದಾಸ್ ಮೋದಿ ಎಂದು ಗುಣಗಾನ ಮಾಡಿದರು.

    ಈ ಸಂದರ್ಭದಲ್ಲಿ ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ,ಎಂಎಲ್ ಡಿಸಿ ಮುನಿರಾಜು, ವಾರ್ಡ್ ನ ಅಧ್ಯಕ್ಷ ರಮೇಶ್ ಗೌಡ,ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಜಿಮ್ ರಮೇಶ್ ಗೌಡ,ಮುಖಂಡರಾದ ಬಾಕ್ಸರ್ ನಾಗರಾಜ್, ನಾಗೇನಹಳ್ಳಿ ಲೋಕೆಶ್,ಸುಗುಮಾರ್,ಶ್ರೀರಾಮ್, ರಾಮು ಮತ್ತಿತರರು ಇದ್ದರು.

  • ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

    ಜೂನ್ 28 ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನ

    ಬೆಂಗಳೂರು: ರಾಜ್ಯದಲ್ಲಿ 0 ಇಂದ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ನೀಡುವ ಉದ್ದೇಶದಿಂದ 2026 ರ ಜೂನ್ 28 ರ ಭಾನುವಾರದಂದು ‘ರಾಷ್ಟ್ರೀಯ ಲಸಿಕಾ ದಿನ (ಪಲ್ಸ್ ಪೋಲಿಯೋ)’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತ್ವಿಕ್ ಪಾಂಡೆ ಅವರು ತಿಳಿಸಿದ್ದಾರೆ.

    ಭಾರತವು ಕಳೆದ 14 ವರ್ಷಗಳಿಗೂ ಮೇಲ್ಪಟ್ಟು ಪೋಲಿಯೊ ಮುಕ್ತ ರಾಷ್ಟ್ರವಾಗಿದ್ದರೂ, ಜಗತ್ತಿನ ಕೆಲವು ಭಾಗಗಳಲ್ಲಿ ಹಾಗೂ ಭಾರತದ ನೆರೆ ರಾಷ್ಟ್ರಗಳಲ್ಲಿ *ವೈಲ್ಡ್ ಪೋಲಿಯೋ ವೈರಸ್* (Wild Polio Virus) ಹರಡುವಿಕೆ ಇನ್ನೂ ಇರುವುದರಿಂದ ಈ ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿದೆ. ಭಾರತ ತಜ್ಞ ಸಲಹಾ ಗುಂಪಿನ ಶಿಫಾರಸ್ಸಿನ ಅನ್ವಯ ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    *ಮೊದಲನೇ ದಿನ ಜೂನ್ 28 ರಂದು ಪೋಲಿಯೋ ಬೂತ್‍ಗಳಲ್ಲಿ ಲಸಿಕೆ ನೀಡಲಾಗುವುದು*. ನಂತರದ *2 ರಿಂದ 3 ದಿನಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ*. ವಲಸಿಗ ಸಮುದಾಯದ ಮಕ್ಕಳು, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳು ಹಾಗೂ ನಗರ ಪ್ರದೇಶದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.

    ಎಲ್ಲಾ ಇಲಾಖೆಗಳ ಸಹಕಾರಕ್ಕೆ ಮನವಿ

    ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳ ಸಹಕಾರವನ್ನು ಬಯಸಿರುವ ಆರೋಗ್ಯ ಇಲಾಖೆಯು, ಹೆಚ್ಚಿನ ಪ್ರಚಾರ ನೀಡಲು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು, ಎಲ್ಲಾ ಮಾಧ್ಯಮಗಳು, ಆಕಾಶವಾಣಿ ಹಾಗೂ ಎಫ್.ಎಮ್ ವಾಹಿನಿಗಳಲ್ಲಿ ಜಿಂಗಲ್ಸ್ ಮೂಲಕ ಈ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

    ಸಾರ್ವಜನಿಕರು ಹಾಗೂ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿಗಳನ್ನು ಹಾಕಿಸಿ ಸಹಕರಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

  • ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ಪರಿಶೀಲನೆ ನಡೆಸಿದ ಶಾಸಕ‌ ಬೈರತಿ ಬಸವರಾಜ್.

    ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ಪರಿಶೀಲನೆ ನಡೆಸಿದ ಶಾಸಕ‌ ಬೈರತಿ ಬಸವರಾಜ್.

    ಕೆ.ಆರ್ ಪುರ: ಕೆ.ಆರ್‌.ಪುರ ಸರ್ಕಾರಿ ಆಸ್ಪತ್ರೆಗೆ ಶಾಸಕ ಬೈರತಿ ಬಸವರಾಜ್ ಭೇಟಿ ನೀಡಿ ಎಲ್ಲಾ ವಾರ್ಡ್ ನ ರೋಗಿಗಳ ಸಮಸ್ಯೆ ಆಲಿಸಿ‌, ಆಸ್ಪತ್ರೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.

    ಬಳಿಕ ಮಾತನಾಡಿದ ಅವರು, ಬಡವರು ಹೆಚ್ಚಾಗಿ ಬರುವ ಸರ್ಕಾರಿ ಆಸ್ಪತ್ರೆಯ ಸ್ಥಿತಿಗತಿ ತಿಳಿಯಲು ಖುದ್ದಾಗಿ ಭೇಟಿ ಕೊಟ್ಟಿದ್ದೇನೆ. ಈ ಆಸ್ಪತ್ರೆಯಲ್ಲಿ ಜನರ ಆರೋಗ್ಯ ಸುಧಾರಿಸಲು ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಬೇಕಿದೆ. ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿ ಕೆಲಸ ಮಾಡಿಸಬೇಕು ಎಂದರು.

    ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಚಿಕಿತ್ಸೆ ಹಾಗೆ ಕೆ.ಆರ್ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಮತ್ತು ಸೌಲಭ್ಯಗಳು ಸಿಗುವಂತೆ ಮಾಡಬೇಕು ಎಂದು ಹೇಳಿದರು.

    100 ಹಾಸಿಗೆಯ ಆಸ್ಪತ್ರೆ ಸಿದ್ಧವಾಗಿ ವರ್ಷಗಳೇ ಕಳೆದರೂ ಜನರ ಉಪಯೋಗಕ್ಕೆ ಬಾರದೇ ಇರುವುದು ಮಾತ್ರ ದುರಾದೃಷ್ಟಕರ ವಿಷಯ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ ಆಂತೋಣಿಸ್ವಾಮಿ, ಮಾಜಿ ನಗರಸಭೆ ಸದಸ್ಯ ಕೇಶವ, ವಾರ್ಡ್ ಅಧ್ಯಕ್ಷ ಶಿವಪ್ಪ ಮುಖಂಡರಾದ ,ಕೆ.ಪಿ ಕೃಷ್ಣ, ರಾಜುಸಿಂಗ್,ಆಸ್ಪತ್ರೆಯ ವೈದ್ಯರು ಮತ್ತಿತರರಿದ್ದರು.

  • ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ಪೌಜಿಯಾ ತರನ್ನುಮ್

    ಪರಿಸರ ಸಂರಕ್ಷಣೆ ನಮ್ಮ ಜೀವನದ ಅವಿಭಾಜ್ಯ ಅಂಗ: ಪೌಜಿಯಾ ತರನ್ನುಮ್

    ಬೆಂ.ಗ್ರಾ.ಜಿಲ್ಲೆ: ನಮ್ಮ ಪರಿಸರವನ್ನು ಸಂರಕ್ಷಿಸುವುದು ಮತ್ತು ಸ್ವಚ್ಛವಾಗಿಡುವುದು ಕೇವಲ ಒಂದು ದಿನದ ಕೆಲಸವಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತೆ ಬಿ. ಪೌಜಿಯಾ ತರನ್ನುಮ್ ಅವರು ಹೇಳಿದರು.

    ದೇವನಹಳ್ಳಿ ತಾಲ್ಲೂಕಿನ ಕುಂದಾಣ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಪ್ರತಿಯೊಬ್ಬರು ಪರಿಸರ ಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಂಡು ಸ್ವಚ್ಛ ಮತ್ತು ಸಮೃದ್ಧ ಪರಿಸರ ನಿರ್ಮಾಣಕ್ಕೆ ಕೈಜೋಡಿಸುವ ಮೂಲಕ ಅರ್ಥಪೂರ್ಣವಾಗಿ ಪರಿಸರ ದಿನಾಚರಣೆಯನ್ನು ಆಚರಿಸೋಣ ಎಂದು ಕರೆ ನೀಡಿದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಿಇಒ ಡಾ. ವಾಸಂತಿ ಅಮರ್ ಅವರು ಮಾತನಾಡಿ, ಈ ಬಾರಿ “ಪ್ರಕೃತಿಯಿಂದ ಪ್ರೇರಣೆ, ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ.” ಎಂಬ ಘೋಷ ವಾಕ್ಯದೊಂದಿಗೆ ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಅತ್ಯುತ್ತಮ ಪರಿಹಾರಗಳನ್ನು ನೀಡುತ್ತದೆ ಎಂದರು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಯೋಜನಾಧಿಕಾರಿ ವಿಠಲ್ ಕಾವ್ಳೆ, ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ತಾಲೂಕು ಪಂಚಾಯಿತಿ ಇಒ ಎನ್. ಮುನಿರಾಜು, ಮಾಜಿ ಸದಸ್ಯರಾದ ಕೆ.ವಿ.ಸ್ವಾಮಿ, ಕ್ಯಾತೇಗೌಡ, ವಿ.ನಾರಾಯಣಸ್ವಾಮಿ, ಅರಣ್ಯ ಉಪ ನಿರ್ದೇಶಕರು, ಕಾರ್ಯ ಪಾಲಕ ಅಧಿಕಾರಿ ಅಭಿಯಂತರರು, ಪಿಡಿಒ ಕುಮಾರ್, ಕಾರ್ಯದರ್ಶಿ ನರೇಶ್, ಸಮಾಜ ಸೇವಕ ಎನ್.ಸಿ.ಪ್ರಕಾಶ್, ಗ್ರಾಪಂ ಮಾಜಿ ಸದಸ್ಯರು, ಮುಖಂಡರು, ವಸತಿ ಶಾಲೆ ಮಕ್ಕಳು ಹಾಗೂ ಗ್ರಾಮಸ್ಥರು ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.