Author: Dharmaraju

  • ಮೆಡಿಕವರ್ ಆಸ್ಪತ್ರೆಯಲ್ಲಿ 61 ವಯಸ್ಸಿನ ವ್ಯಕ್ತಿಗೆ ಯಶಸ್ವಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಶಸ್ತ್ರಚಿಕಿತ್ಸೆ

    ಮೆಡಿಕವರ್ ಆಸ್ಪತ್ರೆಯಲ್ಲಿ 61 ವಯಸ್ಸಿನ ವ್ಯಕ್ತಿಗೆ ಯಶಸ್ವಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಶಸ್ತ್ರಚಿಕಿತ್ಸೆ

    ಬೆಂಗಳೂರು: ಹಲವು ತಿಂಗಳುಗಳಿಂದ ಎಡಗೈ ನೋವು ಹಾಗೂ ಜಂಜಳಿಕೆಯ ಸಮಸ್ಯೆಯಿಂದ ಬಳಲುತ್ತಿದ್ದ 61 ವರ್ಷದ ಶ್ರೀ ಗೋಪಾಲ್ ರೆಡ್ಡಿ ಅವರಿಗೆ ಮೆಡಿಕವರ್ ಆಸ್ಪತ್ರೆಯ ನ್ಯೂರೋಸರ್ಜರಿ ತಜ್ಞರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊಸ ಬದುಕು ನೀಡಿದ್ದಾರೆ.

    ರೋಗಿ ಎಡಗೈ ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಗತ್ಯ ವೈದ್ಯಕೀಯ ಪರೀಕ್ಷೆಗಳು ಹಾಗೂ ಸ್ಕ್ಯಾನಿಂಗ್ ಬಳಿಕ, ಅವರ ಕುತ್ತಿಗೆ ಮತ್ತು ಮೇಲ್ಭಾಗದ ಮೆದುಳುರಜ್ಜುವಿನ (C6-D1) ಭಾಗದಲ್ಲಿ ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಇರುವುದನ್ನು ವೈದ್ಯರು ಪತ್ತೆಹಚ್ಚಿದರು. ಈ ಹಿನ್ನೆಲೆಯಲ್ಲಿ ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಸಲಹೆ ನೀಡಿ ವಾಸ್ತವ ವಿಚಾರ ವಿವರಿಸಿದರು.

    ನಂತರ ಮೆಡಿಕವರ್ ಆಸ್ಪತ್ರೆಯ ಹಿರಿಯ ನ್ಯೂರೋಸರ್ಜನ್ ಮತ್ತು ಸ್ಪೈನ್ ಸರ್ಜನ್ ಡಾ. ಆನಂದ್ ವಿಕೆ ಅವರ ನೇತೃತ್ವದಲ್ಲಿ ಡಾ ಯಶವಂತ್ ಜೊತೆಗೂಡಿ “C6-D1 ಎಪೆಂಡಿಮೊಮಾ ಸ್ಪೈನಲ್ ಕಾರ್ಡ್ ಟ್ಯೂಮರ್ ಎಕ್ಸಿಷನ್” ಎಂಬ ಸೂಕ್ಷ್ಮ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಯಿತು.

    ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಅಗತ್ಯ ಚಿಕಿತ್ಸೆ, ಆಂಟಿಬಯೋಟಿಕ್ಸ್ ಮತ್ತು ಬೆಂಬಲಕಾರಿ ಔಷಧೋಪಚಾರ ನೀಡಲಾಗಿದ್ದು, ಅವರ ಆರೋಗ್ಯದಲ್ಲಿ ಕ್ರಮೇಣ ಸುಧಾರಣೆ ಕಂಡುಬಂದಿದೆ. ಪ್ರಸ್ತುತ ರೋಗಿ ಸ್ಥಿರ ಆರೋಗ್ಯ ಸ್ಥಿತಿಯಲ್ಲಿದ್ದು, ವೈದ್ಯರು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ.

    ಈ ಕುರಿತು ಮಾತನಾಡಿದ ಡಾ. ಆನಂದ್ ವಿಕೆ, “ಸ್ಪೈನಲ್ ಕಾರ್ಡ್ ಟ್ಯೂಮರ್‌ಗಳು ಆರಂಭಿಕ ಹಂತದಲ್ಲೇ ಪತ್ತೆಯಾದರೆ ಯಶಸ್ವಿಯಾಗಿ ಚಿಕಿತ್ಸೆ ನೀಡಲು ಸಾಧ್ಯ. ಕೈಗಳಲ್ಲಿ ನೋವು, ಜಂಜಳಿಕೆ, ದುರ್ಬಲತೆ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ತಜ್ಞರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ” ಎಂದು ತಿಳಿಸಿದ್ದಾರೆ. ಈ ಶಸ್ತ್ರಚಿಕಿತ್ಸೆಯ ಬಗ್ಗೆ ಆಸ್ಪತ್ರೆಯ ರಿಜನಲ್ ಮುಖ್ಯಸ್ಥರಾದ ಕೆ ಸಿದ್ದಾರೆಡ್ಡಿ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿ ಜಿ ಕೃಷ್ಣಮೂರ್ತಿಯವರು ಸಂತಸ ವ್ಯಕ್ತಪಡಿಸಿದರು

  • ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು….!

    ಶತಾಯುಷಿ ತಾಯಿಯ ನಿಧನದ ಸುದ್ದಿ ತಿಳಿದು 75 ವರ್ಷದ ಮಗಳು ಸಾವು….!

    ಬಾಗಲಕೋಟೆ : ಹೆತ್ತ ತಾಯಿಯ ಮಮತೆ ಹಾಗೂ ಮಗಳ ಜನ್ಮಜನ್ಮಾಂತರದ ಅನುಬಂಧಕ್ಕೆ ಸಾಕ್ಷಿಯಾದ ಹೃದಯ ವಿದ್ರಾವಕ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನಲ್ಲಿ ಸಂಭವಿಸಿದೆ. ನೂರು ವಸಂತಗಳನ್ನು ಕಂಡು ಇಹಲೋಕ ತ್ಯಜಿಸಿದ ಶತಾಯುಷಿ ತಾಯಿಯ ಸಾವಿನ ಆಘಾತಕ್ಕೆ ಒಳಗಾಗಿ 76 ವರ್ಷದ ವೃದ್ಧ ಮಗಳು ಕೂಡ ಕೊನೆಯುಸಿರೆಳೆದ ಕರುಣಾಜನಕ ಘಟನೆ ತೋದಲಬಾಗಿ ಗ್ರಾಮದಲ್ಲಿ ನಡೆದಿದೆ..

    ಅಥಣಿ ತಾಲೂಕಿನ ಪಾರ್ಥನಹಳ್ಳಿಯ ನಿವಾಸಿಯಾದ ಗಂಗವ್ವ ಚನ್ನಬಸಪ್ಪ ಪಾರ್ಥನಹಳ್ಳಿ (101 ವರ್ಷ) ಎಂಬ ಶತಾಯುಷಿ ಮಾತೆ ಕಳೆದ ಶುಕ್ರವಾರ ವಯೋಸಹಜ ಕಾರಣಗಳಿಂದಾಗಿ ನಿಧನರಾಗಿದ್ದರು. ತಾಯಿಯ ಸಾವಿನ ವಾರ್ತೆ ತಿಳಿಯುತ್ತಿದ್ದಂತೆಯೇ, ಅಥಣಿಯ ಪಾರ್ಥನಹಳ್ಳಿಯಲ್ಲೇ ವಾಸವಿದ್ದ ಅವರ ಮಗಳು ಹಣಮವ್ವ ರಾಮು ಮುಜ ಗೋಣಿ (76 ವರ್ಷ) ತೀವ್ರ ಆಘಾತಕ್ಕೆ ಒಳಗಾಗಿದ್ದರು.

    ತಮ್ಮ ಹೆತ್ತ ತಾಯಿಯ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹಣಮವ್ವ ಅವರು ಜಮಖಂಡಿ ತಾಲೂಕಿನ ತೋದಲಬಾಗಿ ಗ್ರಾಮಕ್ಕೆ ಧಾವಿಸಿದ್ದರು. ಆದರೆ ಅಲ್ಲಿಗೆ ತಲುಪಿದಾಗ ತಾಯಿಯ ಪಾರ್ಥಿವ ಶರೀರವನ್ನು ಕಂಡು ಅವರ ದುಃಖ ಆಣೆಕಟ್ಟೆ ಒಡೆದಂತೆ ಉಕ್ಕಿ ಹರಿದಿದೆ. ತೀವ್ರ ಮಾನಸಿಕ ಆಘಾತ ಹಾಗೂ ಶೋಕವನ್ನು ತಡೆಯಲಾಗದೆ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅಸುನೀಗಿದ ಹಣಮವ್ವ ಅವರ ಈ ಸಾವು ನೆರೆದಿದ್ದ ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

  • ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ 6 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು.

    ಅಕ್ರಮವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ 6 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು.

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯದ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ಘನತ್ಯಾಜ್ಯವನ್ನು ಸಾಗಿಸಿ ಖಾಲಿ ಜಾಗಗಳಲ್ಲಿ ಸುರಿಯುತ್ತಿದ್ದ ವಾಹನಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 6 ವಾಹನಗಳನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ತಿಳಿಸಿದರು.

    ಪ್ರಕರಣದ ಹಿನ್ನೆಲೆ

    ಪೂರ್ವ ನಗರ ಪಾಲಿಕೆಯ ವಿವಿಧ ಪ್ರದೇಶಗಳ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಿಂದ ಬಲ್ಕ್ ವೇಸ್ಟ್ ಸಂಗ್ರಹಿಸಿ ವಿಲೇವಾರಿ ಮಾಡಲು ಇಕೋ ಸ್ಪೀಯರ್ ವೆಸ್ಟ್ ಸೆಲ್ಯೂಷನ್ ಕಂಪನಿಗೆ ಕಾರ್ಯದೇಶ ನೀಡಿದ್ದು, ನೌಶಾದ್ ಮತ್ತು ಇತರರ ತಂಡ ಕಂಪನಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಬಳಸಿಕೊಂಡು ವಿವಿಧ ಪ್ರದೇಶಗಳಿಂದ ಅನಧಿಕೃತವಾಗಿ ಬಲ್ಕ್ ತ್ಯಾಜ್ಯವನ್ನು ಸಂಗ್ರಹಿಸಿ ಕಾಡುಗೋಡಿ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ ಸಮೀಪದ ಸರ್ವೇ ನಂ.130, 131 ಹಾಗೂ 142ಕ್ಕೆ ಹೊಂದಿಕೊಂಡಿರುವ ದಕ್ಷಿಣ ಪಿನಾಕಿನಿ ನದಿಗೆ ಅಕ್ರಮವಾಗಿ ತ್ಯಾಜ್ಯ ಸುರಿಯಲಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ನಿರಂತರ ನಿಗಾವಹಿಸಿ ಕಾರ್ಯಾಚರಣೆ ಕೈಗೊಂಡಿರುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದರು.

    ಕಾರ್ಯಾಚರಣೆಯಲ್ಲಿ 6-ವಾಹನಗಳು ವಶಕ್ಕೆ

    ಸಾರ್ವಜನಿಕ ದೂರಿನ ಆಧಾರದ ಮೇಲೆ ಇದೇ ಮೇ 29ರಂದು ನಗರ ಪಾಲಿಕೆಯ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯಲು ಸ್ಥಳಕ್ಕೆ ಆಗಮಿಸಿದ್ದ ತ್ಯಾಜ್ಯ ತುಂಬಿರುವ 5 ವಾಹನಗಳನ್ನು ವಶಪಡಿಸಿಕೊಳ್ಳಲಾಯಿತು, ವಾಹನ ಚಾಲಕರು ಸ್ಥಳದಿಂದ ಪರಾರಿಯಾಗಿರುತ್ತಾರೆ ಹಾಗೂ ಇದೇ ಸ್ಥಳದಲ್ಲಿ ಮೇ 30ರಂದು ಮತ್ತೊಂದು ವಾಹನವನ್ನು ವಶಕ್ಕೆ ಪಡೆದುಕೊಂಡಿರಲಾಗಿರುತ್ತದೆ.

    ವಶಪಡಿಸಿಕೊಂಡ ವಾಹನಗಳ ಸಂಖ್ಯೆ

    ನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡ ವಾಹನಗಳ ಸಂಖ್ಯೆ;
    * KA-07-A-398
    * KA-52-B-8275
    * KA-53-A-4649
    * AP-39-VB-6604
    * KA-18-C-6915
    * KA-40-A-4837

    *ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು*

    ನಗರ ಪಾಲಿಕೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಿಂದ ನೀಡಲಾದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದ್ದು, ವಾಹನಗಳ ಮಾಲೀಕರು, ಚಾಲಕರು, ಸಂಬಂಧಪಟ್ಟ ವ್ಯಕ್ತಿಗಳು ಹಾಗೂ ತ್ಯಾಜ್ಯ ಸುರಿಯಲು ಅವಕಾಶ ನೀಡಿದ ಭೂ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ಕಾಡುಗೋಡಿ ಆರಕ್ಷಕ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

    ಅಕ್ರಮ ತ್ಯಾಜ್ಯ ವಿಲೇವಾರಿಯ ವಿರುದ್ಧ ಶೂನ್ಯ ಸಹಿಷ್ಣುತೆ

    ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತರಾದ ಡಿ.ಎಸ್. ರಮೇಶ್ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ತ್ಯಾಜ್ಯ ಸುರಿಯುವ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಗರದ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಧಕ್ಕೆಯುಂಟುಮಾಡುವ ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ನಗರ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ತ್ಯಾಜ್ಯವನ್ನು ಅನಧಿಕೃತ ಸ್ಥಳಗಳಲ್ಲಿ ಸುರಿಯುವುದು, ಖಾಲಿ ಜಾಗಗಳನ್ನು ಕಸದ ತೊಟ್ಟಿಗಳಾಗಿ ಬಳಸುವುದು ಹಾಗೂ ಅಕ್ರಮ ಸಾಗಣೆ ನಡೆಸುವವರ ವಿರುದ್ಧ ದಂಡಾತ್ಮಕ ಹಾಗೂ ಕ್ರಿಮಿನಲ್ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.

    ಸಾರ್ವಜನಿಕರ ಸಹಕಾರಕ್ಕೆ ಮನವಿ

    ನಗರವನ್ನು ಸ್ವಚ್ಛ ಹಾಗೂ ಆರೋಗ್ಯಯುತವಾಗಿಡುವ ನಿಟ್ಟಿನಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಿದ ಆಯುಕ್ತರು, ಅಕ್ರಮವಾಗಿ ತ್ಯಾಜ್ಯ ಸುರಿಯುವ ವಾಹನಗಳು ಅಥವಾ ವ್ಯಕ್ತಿಗಳ ಬಗ್ಗೆ ಮಾಹಿತಿ ದೊರೆತಲ್ಲಿ ತಕ್ಷಣವೇ ನಗರ ಪಾಲಿಕೆಗೆ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.

    ಕಾರ್ಯಾಚರಣೆಯಲ್ಲಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಸಹಾಯ ಪ್ರಧಾನ ವ್ಯವಸ್ಥಾಪಕರು, ಮಾರ್ಷಲ್ ಸೂಪರ್ವೈಸರ್, ವಾರ್ಡ್ ಮಾರ್ಷಲ್ , ಆರೋಗ್ಯ ಪರಿವೀಕ್ಷಕರು ಹಾಗೂ ಇನ್ನಿತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

  • ಬಿಜೆಪಿ ರಾಜ್ಯಾಧ್ಯಕ್ಷ ಸಾರಥಿಯಾಗಿ ಅರವಿಂದ ಲಿಂಬಾವಳಿ ಸೂಕ್ತ ನಾಯಕ..!

    ಬಿಜೆಪಿ ರಾಜ್ಯಾಧ್ಯಕ್ಷ ಸಾರಥಿಯಾಗಿ ಅರವಿಂದ ಲಿಂಬಾವಳಿ ಸೂಕ್ತ ನಾಯಕ..!

    ಮಹದೇವಪುರ: ಐಟಿ ವಲಯ, ಯುವಕರು,ಮಧ್ಯಮ ವರ್ಗ ಮತ್ತು ತಳಮಟ್ಟದ ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತರಬಲ್ಲ ಸಾಮರ್ಥ್ಯ ಅರವಿಂದ ಲಿಂಬಾವಳಿಗೆ ಇದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರು ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇರುವ ನಾಯಕರು ಕರ್ನಾಟಕ ಬಿಜೆಪಿಯಲ್ಲಿ ಮುಂದಿನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತ ಚರ್ಚೆಗಳು ವೇಗ ಪಡೆಯುತ್ತಿವೆ. ಸಂಘಟನಾ ಅನುಭವ, ಆಡಳಿತ ಸಾಮರ್ಥ ಮತ್ತು ತಳಮಟ್ಟದ ಕಾರ್ಯಕರ್ತರೊಂದಿಗೆ ಗಟ್ಟಿಯಾದ ಸಂಪರ್ಕ ಹೊಂದಿರುವ ನಾಯಕರ ಅಗತ್ಯತೆ ಪಕ್ಷದೊಳಗೆ ಹೆಚ್ಚಾಗಿ ಕೇಳಿಬರುತ್ತಿದೆ.

    ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅರವಿಂದ ಲಿಂಬಾವಳಿ, ವಿದ್ಯಾರ್ಥಿ ದಶೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಯುವಕರನ್ನು ಸಂಘಟಿಸುವಲ್ಲಿ, ವಿದ್ಯಾರ್ಥಿ ಚಳವಳಿಗಳನ್ನು ಮುನ್ನಡೆಸುವಲ್ಲಿ ಮತ್ತು ತಳಮಟ್ಟದ ಕಾರ್ಯಕರ್ತರ ಜಾಲ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

    ಬಳಿಕ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅವರು, ನಂತರ ಬಿಜೆಪಿ ರಾಜ್ಯ ಪ್ರಧಾನ
    ಕಾರ್ಯದರ್ಶಿಯಾಗಿ ಸುಮಾರು 16 ವರ್ಷಗಳ ಕಾಲ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರವಹಿಸಿದರು. ತಂತ್ರಗಾರಿಕೆ, ಚುನಾವಣಾ ಕಾರ್ಯಕರ್ತರ ಸಂಘಟನೆ ಮತ್ತು ಪಕ್ಷದ ವಿಸ್ತರಣೆಯಲ್ಲಿ ಲಿಂಬಾವಳಿ ಪ್ರಭಾವಿ ನಾಯಕತ್ವ ತೋರಿದವರು ಎಂದು ವಲಯದಲ್ಲಿ ಪರಿಗಣಿಸಲಾಗಿದೆ.

    ಪಕ್ಷ ಸಂಘಟನೆಯಲ್ಲಿನ ದೀರ್ಘ ಅನುಭವದ ನಂತರ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಲಿಂಬಾವಳಿ, 2008 ಹೊಸದಾಗಿ ರಚನೆಯಾದ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 2013 ಹಾಗೂ 2018 ರಲ್ಲಿಯೂ ಸತತವಾಗಿ ಗೆಲುವು ಸಾಧಿಸಿ ಮೂರು ಅವಧಿಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದರು.

    ಸಚಿವರಾಗಿ ಆಡಳಿತ ಅನುಭವ:

    ಕರ್ನಾಟಕ ಸರ್ಕಾರದಲ್ಲಿ ಉನ್ನತ ಶಿಕ್ಷಣ, ಆರೋಗ್ಯ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವರಾಗಿ ಅರವಿಂದ ಲಿಂಬಾವಳಿ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿ ಸಹಾಯ ಕಾರ್ಯಕ್ರಮಗಳು ಮತ್ತು ಕಾಲೇಜುಗಳ ವಿಸ್ತರಣೆಗೆ ಒತ್ತು ನೀಡಿದರೆ, ಆರೋಗ್ಯ ಇಲಾಖೆಯಲ್ಲಿ ಸಾರ್ವಜನಿಕ ಆರೋಗ್ಯ ಶಿಬಿರಗಳು ಹಾಗೂ ವೈದ್ಯಕೀಯ ಸೇವೆಗಳ ವಿಸ್ತರಣೆಗೆ ಕ್ರಮ ಕೈಗೊಂಡಿದ್ದರು.

    ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ಗಿಡಗಳು ನೆಡುವ ಅಭಿಯಾನ ಮತ್ತು ನಗರ ಹಸಿರು ವಿಸ್ತರಣೆಗೆ ಆದ್ಯತೆ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕನ್ನಡ ಭಾಷೆ, ಸಾಹಿತ್ಯ, ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಕೆಲಸದಲ್ಲೂ ಅವರು ಸಕ್ರಿಯರಾಗಿದ್ದರು.

    ಚುನಾವಣಾ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರ: 2023 ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಪಕ್ಷ ಮಹದೇವಪುರ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದ ಸಂದರ್ಭದ ಲ್ಲಿಯೂ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸು ವಲ್ಲಿ ಲಿಂಬಾವಳಿ ಪ್ರಮುಖ ಪಾತ್ರವಹಿಸಿದರು. ಅವರ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕ್ಷೇತ್ರದಲ್ಲಿ ಅವರ ಸಂಘಟನಾ ಬಲವನ್ನು ತೋರಿಸಿತು.

     ನಗರ ಮತ್ತು ಗ್ರಾಮೀಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ರಾಜಕಾರಣದ ಅನುಭವ, ಆರ್‌ಎಸ್ಎಸ್ ಹಿನ್ನೆಲೆ, ಸಂಘಟನಾ ಹಿಡಿತ, ಸಚಿವ ಅನುಭವ ಹಾಗೂ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಿರುವ ನಾಯಕರ ಅಗತ್ಯ ರಾಜ್ಯ ಬಿಜೆಪಿಗೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    ಇನ್ನೂ ಹಲವಾರು ಕಾರಣಗಳಿಂದ ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜ್ಯಾದ್ಯಕ್ಷರ ಸ್ಥಾನಕ್ಕೆ ಸೂಕ್ತವಾದ ನಾಯಕರು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

  • ಬೆಂಗಳೂರಲ್ಲಿ IPL ಸಂಭ್ರಮಾಚರಣೆಗೆ ಬ್ರೇಕ್: ಈ ಮಾರ್ಗಸೂಚಿ ಪಾಲನೆ ಕಡ್ಡಾಯ,  ನಗರದೆಲ್ಲೆಡೆ ಪೊಲೀಸ್ ಕಣ್ಗಾವಲು.

    ಬೆಂಗಳೂರಲ್ಲಿ IPL ಸಂಭ್ರಮಾಚರಣೆಗೆ ಬ್ರೇಕ್: ಈ ಮಾರ್ಗಸೂಚಿ ಪಾಲನೆ ಕಡ್ಡಾಯ, ನಗರದೆಲ್ಲೆಡೆ ಪೊಲೀಸ್ ಕಣ್ಗಾವಲು.

    ಬೆಂಗಳೂರು: ಟಾಟಾ ಐಪಿಎಲ್ 2026ರ ಮಹತ್ವದ ಫೈನಲ್ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಲಗ್ಗೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಯು ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿಗಳು ಹಾಗೂ ಸಾರ್ವಜನಿಕ ಸಲಹೆಯನ್ನು ಒಳಗೊಂಡ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ

    ದಿನಾಂಕ 31/05/2026 ರಂದು ನಡೆಯಲಿರುವ ಈ ಹೈವೋಲ್ಟೇಜ್ ಫೈನಲ್ ಪಂದ್ಯದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸಬೇಕಾದ ನಿಯಮಗಳು ಈ ಕೆಳಗಿನಂತಿವೆ:

    ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ನಿಷೇಧ

    ವಿಜಯೋತ್ಸವಕ್ಕೆ ಬ್ರೇಕ್: ಫೈನಲ್ ಪಂದ್ಯದ ಫಲಿತಾಂಶ ಪ್ರಕಟವಾದ ನಂತರ ಸಾರ್ವಜನಿಕರು ಯಾವುದೇ ರೀತಿಯಲ್ಲಿ ರಸ್ತೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ (Celebrations) ಮಾಡುವಂತಿಲ್ಲ.

    ಪಟಾಕಿ ನಿಷೇಧ: ಯಾವುದೇ ಕಾರಣಕ್ಕೂ ಪಟಾಕಿಗಳನ್ನು ಸಿಡಿಸುವಂತಿಲ್ಲ ಮತ್ತು ಅಪಾಯಕಾರಿ ವಸ್ತುಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    ಎಲ್‌ಇಡಿ ಸ್ಕ್ರೀನ್ ಹಾಗೂ ಪಂದ್ಯ ಪ್ರಸಾರಕ್ಕೆ ಕಟ್ಟುನಿಟ್ಟಿನ ನಿಯಮ

    ರಸ್ತೆ ಮುಖದ ಸ್ಕ್ರೀನ್‌ಗಳಿಗೆ ಅನುಮತಿ ಇಲ್ಲ: ಸಂಬಂಧಪಟ್ಟ ಅಧಿಕಾರಿಗಳ ಮುನ್ಸೂಚನೆ ಅಥವಾ ಅನುಮತಿಯಿಲ್ಲದೆ ರಸ್ತೆಗಳಿಗೆ ಮುಖಮಾಡಿರುವ ಎಲ್‌ಇಡಿ ವಾಲ್‌ಗಳನ್ನು (LED Walls) ಅಳವಡಿಸುವಂತಿಲ್ಲ. ಈಗಾಗಲೇ ಇರುವ ಎಲ್‌ಇಡಿ ವಾಲ್‌ಗಳಲ್ಲಿ ಪಂದ್ಯವನ್ನು ಪ್ರಸಾರ ಮಾಡುವಂತಿಲ್ಲ.

    ಮcomplexಗಳ ಹೊರಗೆ ಸ್ಕ್ರೀನಿಂಗ್ ಬೇಡ: ಮಾಲ್‌ಗಳು, ಪಬ್‌ಗಳು ಅಥವಾ ಇತರೆ ಸಾರ್ವಜನಿಕ ಸ್ಥಳಗಳ ಹೊರಗಡೆ ಜನರಿಗೆ ಕಾಣಿಸುವ ರೀತಿಯಲ್ಲಿ ದೊಡ್ಡ ಪರದೆ ಅಥವಾ ಸ್ಕ್ರೀನ್‌ಗಳನ್ನು ಹಾಕಿ ಪಂದ್ಯವನ್ನು ಪ್ರಸಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.

    ವಾಹನ ಸವಾರರಿಗೆ ಮತ್ತು ಸಂಚಾರ ನಿಯಮಗಳಿಗೆ ಎಚ್ಚರಿಕೆ

    ಬೈಕ್ ರ್ಯಾಲಿ ಬೇಡ: ಪಂದ್ಯದ ನೆಪದಲ್ಲಿ ಬೈಕ್ ರ್ಯಾಲಿಗಳನ್ನು ನಡೆಸುವುದು, ಅತಿವೇಗದ ಚಾಲನೆ, ವೀಲಿಂಗ್‌ನಂತಹ ಸ್ಟಂಟ್‌ಗಳು, ಕರ್ಕಶ ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ಉಂಟುಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

    ಸಂಚಾರ ಪೊಲೀಸರ ಸೂಚನೆ: ವಾಹನ ಸವಾರರು ಮತ್ತು ಸಾರ್ವಜನಿಕರು ಸಂಚಾರ ಪೊಲೀಸರು (Traffic Police) ನೀಡುವ ಪ್ರತಿಯೊಂದು ಸಲಹೆ ಮತ್ತು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

    ಮದ್ಯಪಾನ ಮತ್ತು ಅಸಭ್ಯ ವರ್ತನೆಗೆ ಕಠಿಣ ಕ್ರಮ

    ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವುದು, ಗಲಾಟೆ ಮಾಡುವುದು ಅಥವಾ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುವುದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.

    ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಪ್ರತಿಯೊಬ್ಬರೂ ಶಾಂತಿ ಮತ್ತು ಶಿಸ್ತನ್ನು ಕಾಪಾಡಿಕೊಳ್ಳಬೇಕು.

    ಸೋಶಿಯಲ್ ಮೀಡಿಯಾ ಮತ್ತು ಇತರೆ ತಂಡಗಳ ಅಭಿಮಾನಿಗಳ ನಿಂದನೆಗೆ ತಡೆ

    ಖಾತೆಗಳ ಮೇಲೆ ನಿಗಾ: ಸಾಮಾಜಿಕ ಜಾಲತಾಣಗಳಲ್ಲಿ (Social Media) ಯಾವುದೇ ರೀತಿಯ ಪ್ರಚೋದನಾತ್ಮಕ ಪೋಸ್ಟ್‌ಗಳು, ದ್ವೇಷಪೂರಿತ ಸಂದೇಶಗಳು ಅಥವಾ ಸುಳ್ಳು ವದಂತಿಗಳನ್ನು ಹರಡಬಾರದು.

    ಅಭಿಮಾನಿಗಳ ನಡುವೆ ಘರ್ಷಣೆಗೆ ಇಳಿಯಬೇಡಿ: ಪಂದ್ಯದ ಫಲಿತಾಂಶ ಏನೇ ಬರಲಿ, ಅದರ ಹೆಸರಿನಲ್ಲಿ ಎದುರಾಳಿ ಅಥವಾ ಇತರೆ ತಂಡಗಳ ಅಭಿಮಾನಿಗಳನ್ನು ಕೆಣಕುವುದು, ಅವಮಾನಿಸುವುದು ಅಥವಾ ಜಗಳಕ್ಕೆ ಕಾರಣವಾಗುವಂತೆ ವರ್ತಿಸುವುದನ್ನು ನಿಷೇಧಿಸಲಾಗಿದೆ.

    ಪೊಲೀಸ್ ಇಲಾಖೆಯ ಮನವಿ

    ನಗರದಲ್ಲಿ ಕಾನೂನು-ಸುವ್ಯವಸ್ಥೆ, ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡುವುದು ಕೇವಲ ಪೊಲೀಸರದ್ದಷ್ಟೇ ಅಲ್ಲ, ಅದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಕರ್ತವ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಜೂನ್ ಐದರಂದು ಡಿಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ..!

    ಜೂನ್ ಐದರಂದು ಡಿಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ..!

    ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯದ ಮುಂದಿನ ಸಾರಥಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

    ತಮ್ಮ ಆಪ್ತ ಜ್ಯೋತಿಷಿಗಳ ಸಲಹೆಯ ಮೇರೆಗೆ ಡಿ.ಕೆ. ಶಿವಕುಮಾರ್ ಅವರು ಮುಂದಿನ ತಿಂಗಳು ಅಂದರೆ ಜೂನ್ 5 ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

    ರಾಜಕೀಯ ಬದಲಾವಣೆಯ ಈ ಹೊತ್ತಿನಲ್ಲಿ, ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಮುಹೂರ್ತದ ಕುರಿತಾದ ಸಂಪೂರ್ಣ ವಿವರಗಳು ಹೀಗಿವೆ:

    ಜೂನ್ 5ರ ಶುಕ್ರವಾರ ಮಧ್ಯಾಹ್ನ ‘ಅಭಿಜಿನ್ ಲಗ್ನ’ದಲ್ಲಿ ಪದಗ್ರಹಣ

    ಭಾವಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಜೂನ್ 5ನೇ ತಾರೀಖಿನ ಶುಕ್ರವಾರದಂದು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಅವರು ಸೋಮವಾರ ಅಥವಾ ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಡಿಕೆಶಿ ಅವರ ಆಪ್ತ ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ವಿಶೇಷ ಸಲಹೆಯಂತೆ, ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಬರಲಿರುವ ಶುಭ ‘ಅಭಿಜಿನ್ ಲಗ್ನ’ದಲ್ಲಿ ಪ್ರಮಾಣ ವಚನ ಸ್ವೀಕರಿಸಲು ದಿನ ನಿಗದಿಪಡಿಸಲಾಗಿದೆ ಎನ್ನಲಾಗಿದೆ.

    ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ವಾಸ್ತು ಬದಲಾವಣೆ: ಎಕ್ಸಿಟ್‌ ಗೇಟ್ ಇನ್ಮುಂದೆ ಎಂಟ್ರಿ ಗೇಟ್!

    ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ವಸತಿ ಗೃಹವಾಗಲಿರುವ ‘ಕುಮಾರಕೃಪಾ ಗೆಸ್ಟ್‌ಹೌಸ್’ನ ಕಲ್ಲು ಬಿಲ್ಡಿಂಗ್‌ನಲ್ಲಿ ಸದ್ಯ ಭರದಿಂದ ನವೀಕರಣ ಕಾರ್ಯಗಳು ಸಾಗುತ್ತಿವೆ. ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ಸಲಹೆಯಂತೆ, ದೇವ ಮೂಲೆಯಿಂದಲೇ ವಸತಿ ಗೃಹಕ್ಕೆ ಪ್ರವೇಶ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಕುಮಾರಕೃಪಾದ ‘ಎಕ್ಸಿಟ್ ಪಾಯಿಂಟ್’ (ಹೊರಹೋಗುವ ದಾರಿ) ಅನ್ನು ಇನ್ಮುಂದೆ ‘ಎಂಟ್ರಿ ಗೇಟ್’ (ಪ್ರವೇಶ ದ್ವಾರ) ಆಗಿ ಬದಲಾಯಿಸಲು ಡಿಕೆಶಿ ಸೂಚಿಸಿದ್ದಾರೆ. ಈಗಾಗಲೇ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರು ಜ್ಯೋತಿಷಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪ್ರಮಾಣ ವಚನ

    ಡಿ.ಕೆ. ಶಿವಕುಮಾರ್ ಅವರು ಕಂಠೀರವ ಕ್ರೀಡಾಂಗಣ ಅಥವಾ ರಾಜ್‌ಭವನದಲ್ಲಿ ಅಲ್ಲದೆ, ವಿಧಾನಸೌಧದ ಭವ್ಯ ಮುಂಭಾಗದ ಮೆಟ್ಟಿಲುಗಳ ಮೇಲೆ (Grand Steps) ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಈ ಭವ್ಯ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸ್ವತಃ ಡಿಕೆಶಿ ಅವರೇ ರಾಜ್ಯ ಮುಖ್ಯ ಕಾರ್ಯದರ್ಶಿಗೆ (Chief Secretary) ದೂರವಾಣಿ ಕರೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹೊಸ ಸಚಿವರು

    ಜೂನ್ 5 ರಂದು ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ, ಅವರೊಂದಿಗೆ ಹೊಸ ಸಂಪುಟದ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಸಚಿವರ ಸಂಖ್ಯೆಯ ಬಗ್ಗೆ ಎರಡು ವಿಭಿನ್ನ ವರದಿಗಳು ಕೇಳಿಬರುತ್ತಿವೆ. ಒಂದು ಮೂಲಗಳ ಪ್ರಕಾರ ಡಿಕೆಶಿ ಜೊತೆಗೆ 7 ಮಂದಿ ಹಿರಿಯ ಮತ್ತು ಅನುಭವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದು ಮೂಲಗಳ ಪ್ರಕಾರ 12 ರಿಂದ 13 ಮಂದಿ ನೂತನ ಸಚಿವರು ಮೊದಲ ಹಂತದಲ್ಲೇ ಕ್ಯಾಬಿನೆಟ್ ಸೇರಲಿದ್ದಾರೆ ಎಂದು ವರದಿಯಾಗಿದೆ.

  • ಬೆಂಗಳೂರಿನಲ್ಲಿ ಸಾಂಸ್ಕೃತಿಕ ಚಿಂತನ-ಮಂಥನ: ‘ಕಲಾ ಸಂವಾದ 5’ ವೇದಿಕೆಯಲ್ಲಿ ‘ಶಾಸ್ತ್ರದಿಂದ ಪ್ರಯೋಗ’ದ ಅನಾವರಣ

    • ಮೀನಾಕ್ಷಿ ರಂಗಮಂಚದಲ್ಲಿ ಅಪರೂಪದ ಕಲಾ ಸಂವಾದ
    • ಪರಮ್‌ ಕಲ್ಚರ್‌ ವತಿಯಿಂದ ನವೀನ ಕಾರ್ಯಕ್ರಮ
    • ಜಾಗತಿಕ ಮಟ್ಟದ ನೃತ್ಯ ರೂಪಕಗಳ ಮರುಸೃಷ್ಟಿ
    • ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಚರ್ಚೆ
    • ನಿರುಪಮಾ ರಾಜೇಂದ್ರ, ಟಿ.ಡಿ.ರಾಜೇಂದ್ರ ಜತೆ ಪ್ರವೀಣ್ ಡಿ.ರಾವ್ ಸಂವಾದ
    • ಅಭಿನವ ಪ್ರೊಡಕ್ಷನ್ಸ್ ಭವ್ಯ ಆಭರಣಗಳ ಪ್ರದರ್ಶನ
    • ‘ಭಾನಿಕಾ’ ಕಲಾಕೃತಿಯ ಸಂಪೂರ್ಣ ಪ್ರದರ್ಶನ ಅನಾವರಣ

    ಬೆಂಗಳೂರು: ಕಲೆ, ಸಂಸ್ಕೃತಿ ಮತ್ತು ಸಮಾಜದ ವಿವಿಧ ಆಯಾಮಗಳನ್ನು ಕಲಾ ಪ್ರದರ್ಶನಗಳ ಮೂಲಕ ಅನ್ವೇಷಿಸುವ ನಿಟ್ಟಿನಲ್ಲಿ ‘ಪರಮ್ ಕಲ್ಚರ್’ ವತಿಯಿಂದ ಮತ್ತೊಂದು ನವೀನ ಕಾರ್ಯಕ್ರಮ ಆಯೋಜನೆಗೊಂಡಿದೆ. ಸಾರ್ವಜನಿಕ ವೇದಿಕೆಯ ಸರಣಿ ಕಾರ್ಯಕ್ರಮಗಳ ಭಾಗವಾಗಿ ‘ಕಲಾ ಸಂವಾದ 05’ ಇದೇ ಮೇ 31ರ ಭಾನುವಾರ ಸಂಜೆ ಬೆಂಗಳೂರಿನ ‘ಮೀನಾಕ್ಷಿ ರಂಗಮಂಚ’ ಸಭಾಂಗಣದಲ್ಲಿ ನಡೆಯಲಿದೆ. ಈ ಬಾರಿಯ ಸಂವಾದವು “ಶಾಸ್ತ್ರದಿಂದ ಪ್ರಯೋಗ: ನಡುವಿನ ಸೃಜನಾತ್ಮಕ ಸೇತು ” (Shastra to Prayoga : The space in between) ಎಂಬ ವಿಶಿಷ್ಟ ವಿಷಯದ ಅಡಿಯಲ್ಲಿ ಮೂಡಿಬರಲಿದ್ದು, ಶಾಸ್ತ್ರೀಯ ನೃತ್ಯವನ್ನು ಕೇವಲ ಪ್ರದರ್ಶನವಾಗಿ ಮಾತ್ರವಲ್ಲದೆ ಕಥಾವಾಚನ ಮತ್ತು ಸಾಂಸ್ಕೃತಿಕ ಆವಿಷ್ಕಾರದ ಪ್ರಭಾವಿ ಮಾಧ್ಯಮವಾಗಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲಿದೆ.

    ನೃತ್ಯ ರೂಪಕಗಳ ಸೃಷ್ಟಿಯ ಒಳನೋಟ
    ವಿಶ್ವದಾದ್ಯಂತ ಅಪಾರ ಪ್ರಶಂಸೆ ಗಳಿಸಿರುವ ‘ಭಾಣಿಕಾ’, ‘ಅಭಿಮನ್ಯು’ ಮತ್ತು ‘ಶಕುಂತಲಾ’ದಂತಹ ಬೃಹತ್ ನೃತ್ಯ ರೂಪಕಗಳ (Large-scale Dance Musicals) ಸೃಷ್ಟಿಯ ಹಿಂದಿರುವ ಕಥೆ, ಚಿತ್ರಕಥೆ, ಸಂಗೀತ, ನೃತ್ಯ ಸಂಯೋಜನೆ, ವೇಷಭೂಷಣ, ರಂಗವಿನ್ಯಾಸ, ಬೆಳಕು ಹಾಗೂ ಧ್ವನಿ ಸಂಯೋಜನೆಯ ರೋಚಕ ಜಗತ್ತನ್ನು ಕಲಾಪ್ರೇಮಿಗಳಿಗೆ ಹತ್ತಿರದಿಂದ ಪರಿಚಯಿಸುವುದು ಈ ಸಂವಾದದ ಮುಖ್ಯ ಉದ್ದೇಶವಾಗಿದೆ.
    ವೇದಿಕೆಯಲ್ಲಿ ದಿಗ್ಗಜರ ಮುಖಾಮುಖಿ
    ಪ್ರಸಿದ್ಧ ಕಲಾ ದಂಪತಿಗಳಾದ ಶ್ರೀಮತಿ ನಿರುಪಮಾ ರಾಜೇಂದ್ರ ಮತ್ತು ಶ್ರೀ ಟಿ.ಡಿ.ರಾಜೇಂದ್ರ ಅವರೊಂದಿಗೆ ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಅವರು ಈ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಈ ಗಂಭೀರ ಚಿಂತನ-ಮಂಥನವನ್ನು ಖ್ಯಾತ ನಟ ಹಾಗೂ ರಂಗಕರ್ಮಿ ಪ್ರಕಾಶ್ ಬೆಳವಾಡಿ ಅವರು ನಿರ್ವಹಣೆ ಮಾಡಲಿದ್ದಾರೆ. ಈ ದಿಗ್ಗಜರು ತಮ್ಮ ಕಲಾತ್ಮಕ ಪ್ರಯಾಣದ ಸವಾಲುಗಳು ಮತ್ತು ಕಲಾ ಸೃಷ್ಟಿಯ ಸೌರಭಗಳ ಬಗ್ಗೆ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ.

    ಅಭಿನವ ಪ್ರೊಡಕ್ಷನ್ಸ್ ವೇಷಭೂಷಣಗಳ ಭವ್ಯ ಪ್ರದರ್ಶನ
    ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸಂಜೆ 6 ಗಂಟೆಯಿಂದಲೇ ‘ಅಭಿನವ ಪ್ರೊಡಕ್ಷನ್ಸ್’ನ ಹೆಮ್ಮೆಯ ಕಲಾಕೃತಿಗಳ ಪ್ರದರ್ಶನ (Exhibition) ಆರಂಭವಾಗಲಿದೆ. ಇದರಲ್ಲಿ ನೃತ್ಯ ರೂಪಕಗಳಿಗೆ ಬಳಸಲಾದ ಭವ್ಯ ವೇಷಭೂಷಣಗಳು (Costumes), ಕಲಾತ್ಮಕ ಕಿರೀಟಗಳು (Headgears) ಮತ್ತು ಅಪರೂಪದ ಆಭರಣಗಳನ್ನು (Accessories) ಕಣ್ತುಂಬಿಕೊಳ್ಳಲು ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

  • ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.

    ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಭಾರಿ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ.

    ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಅಕ್ಷರಶಃ ರೌದ್ರಾವತಾರ ತಾಳಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರಕ್ಕೆ ಜನಜೀವನ ತತ್ತರಿಸಿದ್ದು, ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿವೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆಯು ರಾಜ್ಯದ ಜನತೆಗೆ ಮತ್ತೊಂದು ಪ್ರಮುಖ ಎಚ್ಚರಿಕೆಯನ್ನು ನೀಡಿದ್ದು, ಮೇ 30ರ ತನಕ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.

    ರಾಜ್ಯದ ವಿವಿಧ ಭಾಗಗಳಲ್ಲಿ ಬಿರುಗಾಳಿ ಜೊತೆಗೆ ಆಲಿಕಲ್ಲು ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹವಾಮಾನ ಇಲಾಖೆಯು ಮೇ 27 ರಂದು ಹಲವು ಜಿಲ್ಲೆಗಳಲ್ಲಿ ‘ಯೆಲ್ಲೋ’ ಮತ್ತು ‘ಆರೆಂಜ್’ ಅಲರ್ಟ್ ಘೋಷಿಸಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಓಡಾಡದಂತೆ ಹಾಗೂ ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ.

    ಮೇ 28ರ ವರೆಗೆ ಉತ್ತರ ಒಳನಾಡಿನ ಹಲವೆಡೆ ಭೀಕರ ಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ ಬರೋಬ್ಬರಿ 50 ರಿಂದ 60 ಕಿಲೋಮೀಟರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಮೇ 27 ರಂದು ಇಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು, ‘ಆರೆಂಜ್ ಅಲರ್ಟ್’ ಜಾರಿಯಲ್ಲಿದೆ.ದಕ್ಷಿಣ ಒಳನಾಡಿನ ಭಾಗಗಳಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಸುಂಟರಗಾಳಿ ಬೀಸಲಿದ್ದು, ಮೇ 27 ರಂದು ಭಾರಿ ಮಳೆಯಾಗುವ ಮುನ್ಸೂಚನೆಯೊಂದಿಗೆ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.

    ಇತ್ತ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಮುಂದುವರಿಯಲಿದೆ. ಮೇ 26 ರಿಂದ ಮೇ 30ರ ವರೆಗೆ ಕರಾವಳಿಯ ಬಹುತೇಕ ಕಡೆಗಳಲ್ಲಿ ಗುಡುಗು ಮತ್ತು ಮಿಂಚಿನ ಸಹಿತ ಜೋರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.

    ಇಂದು ಸಂಜೆಯ ವೇಳೆಗೆ ವಾತಾವರಣದಲ್ಲಿ ಭಾಗಶಃ ಮೋಡ ಕವಿಯಲಿದ್ದು, ತಣ್ಣನೆಯ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ತಿಳಿಸಲಾಗಿದೆ.

  • ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಪವರ್ ಪ್ಯಾಕೇಜ್’ ಫಾರ್ಮುಲಾ? ಒಬ್ಬ ಸಿಎಂ ಜೊತೆ ನಾಲ್ವರು ಡಿಸಿಎಂ ಚರ್ಚೆ ಜೋರು!

    ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಪವರ್ ಪ್ಯಾಕೇಜ್’ ಫಾರ್ಮುಲಾ? ಒಬ್ಬ ಸಿಎಂ ಜೊತೆ ನಾಲ್ವರು ಡಿಸಿಎಂ ಚರ್ಚೆ ಜೋರು!


    ಬೆಂಗಳೂರು: ರಾಜ್ಯಾ ರಾಜಕೀಯದಲ್ಲಿ ಭಾರೀ ಬದಲಾವಣೆಯ ಸುಳಿವುಗಳು ಕಾಣಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ರಾಜಕೀಯ ಸಮೀಕರಣ ರೂಪುಗೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಾಧ್ಯತೆಗಳ ನಡುವೆಯೇ, ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ ಹಾಗೂ ನಾಲ್ವರು ಉಪ ಮುಖ್ಯಮಂತ್ರಿಗಳ ನೇಮಕದ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷಗಳು ಮಾತ್ರ ಬಾಕಿ ಇರುವ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ಯಾವುದೇ ರಾಜಕೀಯ ಅಸಮಾಧಾನಕ್ಕೆ ಅವಕಾಶ ನೀಡದಂತೆ ದೊಡ್ಡ ಮಟ್ಟದ ಪವರ್ ಬ್ಯಾಲೆನ್ಸ್ ಫಾರ್ಮುಲಾ ರೂಪಿಸುತ್ತಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಹಾಗೂ ವಿವಿಧ ಸಮುದಾಯ ನಾಯಕರಿಗೆ ಸಮಾನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಬಹು ಉಪ ಮುಖ್ಯಮಂತ್ರಿ ಹುದ್ದೆಗಳ ಚರ್ಚೆ ಮುಂದಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

    ಸಿಎಂ ಸಿದ್ದರಾಮಯ್ಯ ಅವರು ಮೇ 28ರಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಹೊಸ ಮುಖ್ಯಮಂತ್ರಿ ಜೊತೆ ನಾಲ್ವರು ಉಪ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಫಾರ್ಮುಲಾ ಪ್ರಕಾರ ದಲಿತ, ಅಲ್ಪಸಂಖ್ಯಾತ, ಲಿಂಗಾಯತ ಹಾಗೂ ಒಬಿಸಿ ಸಮುದಾಯಗಳಿಂದ ತಲಾ ಒಬ್ಬರನ್ನು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

    ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರ ಹೆಸರುಗಳು ಕೇಳಿಬರುತ್ತಿವೆ.ದೆಹಲಿ ಹೈಕಮಾಂಡ್ ಸಭೆಗಳ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ಕೆಲ ದಿನಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.

  • ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯ : ಅಪ್ರಾಪ್ತ ಬಾಲಕನ‌ ಪ್ರೀತಿಗೆ ಬಿದ್ದ 40 ರ ಮಹಿಳೆ…!

    ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯ : ಅಪ್ರಾಪ್ತ ಬಾಲಕನ‌ ಪ್ರೀತಿಗೆ ಬಿದ್ದ 40 ರ ಮಹಿಳೆ…!

    ಇನ್‌ಸ್ಟಾಗ್ರಾಮ್ ರೀಲ್ಸ್ ಪರಿಚಯ, 14ರ ಬಾಲಕನ ಪ್ರೀತಿಯಲ್ಲಿ ಬಿದ್ದ 4 ಮಕ್ಕಳ ತಾಯಿ! ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ ನಡೆದಿದೆ.

    “ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ” ಎನ್ನುವ ಮಾತನ್ನು ನೀವು ಕೇಳಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಪರಿಚಯವಾದ 14 ವರ್ಷದ ಅಪ್ರಾಪ್ತ ಬಾಲಕನನ್ನು, 40 ವರ್ಷದ ನಾಲ್ಕು ಮಕ್ಕಳ ತಾಯಿಯೊಬ್ಬಳು ಪ್ರೀತಿಸಿ, ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಅಚ್ಚರಿಯ ವಿಷಯವೆಂದರೆ, ಈ ಮಹಿಳೆಯ ಹಿರಿಯ ಮಗನಿಗೆ ಈಗ 19 ವರ್ಷ! ಅಂದರೆ ತನ್ನ ಸ್ವಂತ ಮಗನಿಗಿಂತಲೂ 5 ವರ್ಷ ಚಿಕ್ಕವನಾದ ಬಾಲಕನ ಬೆನ್ನು ಬಿದ್ದು ಈಕೆ ಸುದ್ದಿಯಾಗಿದ್ದಾಳೆ.

    ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಶುರುವಾದ ಲವ್ ಸ್ಟೋರಿ:
    ಮೂಲತಃ ಉತ್ತರ ಪ್ರದೇಶದ ಗೋರಾಖ್‌ಪುರದ ಈ ಮಹಿಳೆಗೆ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಲೈಕ್ ಮಾಡುವ ಮೂಲಕ ತಮಿಳುನಾಡಿನ ಚೆನ್ನೈ ಮೂಲದ 14 ವರ್ಷದ ಬಾಲಕನ ಪರಿಚಯವಾಗಿದೆ. ದಿನಕಳೆದಂತೆ ಇಬ್ಬರ ನಡುವೆ ಚಾಟಿಂಗ್ ಹೆಚ್ಚಾಗಿ, ಇಬ್ಬರೂ ಹತ್ತಿರವಾಗಿದ್ದಾರೆ. ಬಾಲಕ ಪ್ರಸ್ತುತ ತನ್ನ ತಂದೆಯೊಂದಿಗೆ ವಾಸವಾಗಿದ್ದಾನೆ.

    ಕೆಲ ದಿನಗಳ ಬಳಿಕ ಬಾಲಕ ಮಹಿಳೆಯ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ಆಕೆಯನ್ನು ನಿರ್ಲಕ್ಷಿಸಲು ಆರಂಭಿಸಿದ್ದಾನೆ. ಇದರಿಂದ ಕಂಗಾಲಾದ ಮಹಿಳೆ ನೇರವಾಗಿ ನೌತನವಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. “ನಮಗೆ ಈಗಾಗಲೇ ಮದುವೆಯಾಗಿದೆ, ಆದರೆ ಆತ ಈಗ ನನ್ನೊಂದಿಗೆ ಇರಲು ನಿರಾಕರಿಸುತ್ತಿದ್ದಾನೆ” ಎಂದು ಪೊಲೀಸರ ಮುಂದೆ ನಾಟಕವಾಡಿದ್ದಾಳೆ.

    ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಾಲಕ ಮತ್ತು ಮಹಿಳೆಯ ಇಬ್ಬರ ಕಡೆಯವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಮದುವೆಯಾಗಿರುವ ಯಾವುದೇ ದಾಖಲೆಗಳನ್ನು ಒದಗಿಸಲು ಮಹಿಳೆ ವಿಫಲಳಾಗಿದ್ದಾಳೆ.

    ಅಪ್ರಾಪ್ತ ಬಾಲಕನೊಂದಿಗೆ ವಾಸಿಸಲು ಒತ್ತಾಯಿಸಿದರೆ ಪೋಕ್ಸೋ (POCSO) ಕಾಯ್ದೆಯಡಿ ಜೈಲು ಶಿಕ್ಷೆಯಾಗಬಹುದು ಎಂದು ಪೊಲೀಸರು ಎಚ್ಚರಿಸಿದಾಗ ಮಹಿಳೆ ಸುಮ್ಮನಾಗಿದ್ದಾಳೆ.

    ಸದ್ಯ ಇಬ್ಬರ ಕಡೆಯಿಂದಲೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. “ಇನ್ಮುಂದೆ ಪರಸ್ಪರ ಯಾವುದೇ ಸಂಪರ್ಕ ಹೊಂದುವಂತಿಲ್ಲ” ಎಂದು ಪೊಲೀಸರು ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸೋಶಿಯಲ್ ಮೀಡಿಯಾ ಪ್ರೀತಿಯ ಈ ವಿಚಿತ್ರ ಕಥೆ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.