Author: Dharmaraju

  • ಬೇರೆ ಆಸ್ಪತ್ರೆಗಳಲ್ಲಿ ಕೈಚೆಲ್ಲಿದ ಅಪಾಯಕಾರಿ ಪ್ರಕರಣ: ಶಸ್ತ್ರಚಿಕಿತ್ಸೆ ಮೂಲಕ ರೋಗಿಯ ಜೀವ ಉಳಿಸಿದ ಮೆಡಿಕವರ್ ವೈದ್ಯರು.

    ಬೇರೆ ಆಸ್ಪತ್ರೆಗಳಲ್ಲಿ ಕೈಚೆಲ್ಲಿದ ಅಪಾಯಕಾರಿ ಪ್ರಕರಣ: ಶಸ್ತ್ರಚಿಕಿತ್ಸೆ ಮೂಲಕ ರೋಗಿಯ ಜೀವ ಉಳಿಸಿದ ಮೆಡಿಕವರ್ ವೈದ್ಯರು.


    ವೈಟ್‌ಫೀಲ್ಡ್: ಮತ್ತೊಂದು ಆಸ್ಪತ್ರೆಯಲ್ಲಿ ಏಒರ್ಟಿಕ್ ಸ್ಟೆಂಟ್ ಗ್ರಾಫ್ಟಿಂಗ್ ಚಿಕಿತ್ಸೆಗೆ ಒಳಗಾಗಿದ್ದ ರೋಗಿಯೊಬ್ಬರಿಗೆ ನಂತರ ಗಂಭೀರ ಸೋಂಕು ಕಾಣಿಸಿಕೊಂಡು, ಪ್ರಮುಖ ರಕ್ತನಾಳವಾದ ಏಒರ್ಟಾ ಉಬ್ಬುವ ಅಪಾಯಕರ ಸ್ಥಿತಿ ನಿರ್ಮಾಣವಾಗಿತ್ತು. ತೀವ್ರ ಬೆನ್ನುನೋವು ಹಾಗೂ ಜೀವಕ್ಕೆ ಅಪಾಯ ಉಂಟಾಗಿದ್ದ ಹಿನ್ನೆಲೆಯಲ್ಲಿ ಎರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ, ಶಸ್ತ್ರಚಿಕಿತ್ಸೆ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಿಳಿಸಿ ಜೀವಕ್ಕೆ ಹೆಚ್ಚಿನ ನಿರೀಕ್ಷೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಇದಾದ ಬಳಿಕ ರೋಗಿ ಮೆಡಿಕವರ್ ಆಸ್ಪತ್ರೆ, ವೈಟ್‌ಫೀಲ್ಡ್ ಗೆ ಭೇಟಿ ನೀಡಿ ಸಲಹೆ ಪಡೆದರು. ಹಿರಿಯ ಹೃದಯ ತಜ್ಞರು ಹಾಗೂ ಕಾರ್ಡಿಯೋವ್ಯಾಸ್ಕುಲರ್ ಸೈನ್ಸಸ್ ನಿರ್ದೇಶಕರಾದ ಡಾ. ನಾಗ ಶ್ರೀನಿವಾಸ್ ನೇತೃತ್ವದ ತಜ್ಞರ ತಂಡ ರೋಗಿಯ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲು ನಿರ್ಧರಿಸಿತು.

    ವಾಸ್ಕ್ಯುಲರ್ ಶಸ್ತ್ರಚಿಕಿತ್ಸಕರಾದ ಡಾ. ಶ್ರೀರಾಮ್ ಹಾಗೂ ಡಾ. ಅರುಣ್ ರೆಡ್ಡಿ, ಕಾರ್ಡಿಯಾಕ್ ಅನಸ್ತೇಶಿಯಾಲಜಿಸ್ಟ್ ಡಾ. ಪಾಟೀಲ್, ಇಂಟೆನ್ಸಿವ್ ಕೇರ್ ತಜ್ಞೆ ಡಾ. ನಿತ್ಯ ಸೇರಿದಂತೆ ಬಹುಶಾಖಾ ತಜ್ಞರ ತಂಡ ಯಶಸ್ವಿಯಾಗಿ ಸಂಕೀರ್ಣ ಅಬ್ಡೊಮಿನಲ್ ಏಒರ್ಟಿಕ್ ಸ್ಟೆಂಟ್ ಎಕ್ಸ್‌ಪ್ಲಾಂಟೇಶನ್ ಹಾಗೂ ಏಒರ್ಟಿಕ್ ರೀಕನ್ಸ್ಟ್ರಕ್ಷನ್ ಶಸ್ತ್ರಚಿಕಿತ್ಸೆ ನೆರವೇರಿಸಿತು.

    ಈ ಶಸ್ತ್ರಚಿಕಿತ್ಸೆಯಲ್ಲಿ ಹಿಂದೆ ಅಳವಡಿಸಲಾಗಿದ್ದ ಸೋಂಕಿತ ಅಬ್ಡೊಮಿನಲ್ ಏಒರ್ಟಿಕ್ ಸ್ಟೆಂಟ್ ಗ್ರಾಫ್ಟ್ ಅನ್ನು ತೆರವುಗೊಳಿಸಿ, ಹಾನಿಗೊಳಗಾದ ಏಒರ್ಟಾದ ಭಾಗವನ್ನು ಮರುನಿರ್ಮಾಣ ಮಾಡಲಾಯಿತು. ದೇಹದ ಪ್ರಮುಖ ಅಂಗಗಳು ಹಾಗೂ ಕಾಲುಗಳಿಗೆ ರಕ್ತ ಪೂರೈಸುವ ಮುಖ್ಯ ರಕ್ತನಾಳವಾದ ಏಒರ್ಟಾದ ಮೇಲೆ ಮರುಶಸ್ತ್ರಚಿಕಿತ್ಸೆ ನಡೆಸುವುದು ಅತ್ಯಂತ ಸವಾಲಿನದ್ದಾಗಿದ್ದು, ಹೆಚ್ಚಿನ ರಕ್ತಸ್ರಾವ ಹಾಗೂ ಅಂಗಾಂಗ ಹಾನಿಯ ಅಪಾಯವಿರುತ್ತದೆ.

    ತಜ್ಞರ ತಂಡ ಸುಧಾರಿತ ಇಮೇಜಿಂಗ್ ತಂತ್ರಜ್ಞಾನ ಮತ್ತು ವಿಶೇಷ ವಾಸ್ಕ್ಯುಲರ್ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಬಳಸಿ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿ, ರಕ್ತಪ್ರವಾಹವನ್ನು ಸಹಜ ಸ್ಥಿತಿಗೆ ಮರುಸ್ಥಾಪಿಸಿದರು.

    ಶಸ್ತ್ರಚಿಕಿತ್ಸೆಯ ನಂತರ ರೋಗಿ ಉತ್ತಮವಾಗಿ ಚೇತರಿಸಿಕೊಂಡಿದ್ದು, ಪ್ರಸ್ತುತ ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

    ತಜ್ಞರು ಹೇಳುವಂತೆ, ಸಂಕೀರ್ಣ ಏಒರ್ಟಿಕ್ ರೋಗಗಳನ್ನು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಆದ್ದರಿಂದ ಬೇಗನೆ ರೋಗ ಪತ್ತೆ ಹಾಗೂ ವಿಶೇಷ ತಜ್ಞರ ಚಿಕಿತ್ಸೆಯ ಅಗತ್ಯತೆಯನ್ನು ಒತ್ತಿಹೇಳಲಾಗಿದೆ. ಹೈ-ರಿಸ್ಕ್ ಏಒರ್ಟಿಕ್ ಸಮಸ್ಯೆಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಮೆಡಿಕವರ್ ಆಸ್ಪತ್ರೆಯ ಅತ್ಯಾಧುನಿಕ ಹೃದಯ ಹಾಗೂ ರಕ್ತನಾಳ ಚಿಕಿತ್ಸಾ ಸೇವೆಗಳು ಮಹತ್ವದ ಸಾಧನೆ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

    ಈ ವಿಷಯ ಕುರಿತು ಪತ್ರಿಕಾಗೋಷ್ಠಿ ನಡೆಸಿ ಅಪಾಯಕಾರಿ ಹಾಗೂ ಒಂದು ರೋಗಿಯ ಪ್ರಾಣ ಉಳಿಸಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

    ಚಿಕಿತ್ಸೆಯನ್ನ ಪಡೆದ ವ್ಯಕ್ತಿ ಸಹಾ ಮಾತನಾಡಿ ತಮ್ಮ ಜೀವವನ್ನ ಉಳಿಸಿದಲು ಮೆಡಿಕವರ್ ಆಸ್ಪತ್ರೆ ನುರಿತ ವೈದ್ಯರು ಸಾಕಷ್ಟು ಶ್ರಮ ವಹಿಸಿದ್ದಾರೆ. ಈ ದಿನ ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎಂದರು ವೈದರು ನನಗೆ ನೀಡಿರುವ ಮರುಜೀವ ಎಂದರು. ನನಗೆ ಇರುವ ಕಾಯಿಲೆ ಬಗ್ಗೆ ಮೂರು ನಾಲ್ಕು ದೊಡ್ಡ ಆಸ್ಪತ್ರೆಯಲ್ಲಿ ತಿಳಿಸಿದೆ ಆದರೆ ನನ್ನ ಜೀವಕ್ಕೆ ಯಾರು ಗ್ಯಾರಂಟಿ ನೀಡಲಿಲ್ಲ. ನಂತರ ಮೆಡಿಕವರ್ ಆಸ್ಪತ್ರೆ ಭೇಟಿ ನೀಡಿದಾಗ ಇಲ್ಲಿನ ವೈದ್ಯರು ನನ್ನ ಜೀವಕ್ಕೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಚಿಕಿತ್ಸೆ ನೀಡಲು ಭರವಸೆ ನೀಡಿದರು. ಯಶಸ್ವಿಯಾಗಿ ಐದಾರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ನನ್ನ ಜೀವವನ್ನು ಉಳಿಸಿದ್ದಾರೆ ಅವರೆಗೆಲ್ಲಾ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾವುಕರಾದರು.

  • ಅ*ತ್ಯಾಚಾರ ಪ್ರಕರಣ ಮಾಹಿತಿ ಕೊಡುವ ವೇಳೆ ಬಿಕ್ಕಿ ಬಿಕ್ಕಿ ನಗುತ್ತಿದ್ದ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು…

    ಅ*ತ್ಯಾಚಾರ ಪ್ರಕರಣ ಮಾಹಿತಿ ಕೊಡುವ ವೇಳೆ ಬಿಕ್ಕಿ ಬಿಕ್ಕಿ ನಗುತ್ತಿದ್ದ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು…

    ಚೆನ್ನೈ: 10 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಜೋಕ್ ಮಾಡಿ ನಕ್ಕಿದ್ದ ಮೂವರು ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ಮಾಡಿದ ತಮಿಳುನಾಡು ಸಿಎಂ ವಿಜಯ್!

    ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಹತ್ತು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ, ಇಂತಹ ಅತ್ಯಂತ ಸೂಕ್ಷ್ಮ ಹಾಗೂ ದಾರುಣ ಘಟನೆಯ ತನಿಖೆ ನಡೆಸುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮೂವರು ಐಪಿಎಸ್ (IPS) ಅಧಿಕಾರಿಗಳು ನಡೆದುಕೊಂಡ ರೀತಿ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಆ ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspend) ಮಾಡಿ ಆದೇಶಿಸಿದ್ದಾರೆ.

    ಸುಳೂರು ಮೂಲದ 10 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ದಿಢೀರನೆ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಹುಡುಕಾಟ ನಡೆಸಿದ ನಂತರ, ಬಾಲಕಿಯ ಶವವು ಸಮೀಪದ ಕೆರೆಯ ಬಳಿ ಪತ್ತೆಯಾಗಿತ್ತು. ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯನ್ನು ಖಂಡಿಸಿ ಮೃತ ಬಾಲಕಿಯ ಕುಟುಂಬದವರು ಮತ್ತು ಸಾರ್ವಜನಿಕರು ತಕ್ಷಣವೇ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಸ್ಥಳದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು.

    ಬಾಲಕಿಯ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು 33 ವರ್ಷದ ದಿನಗೂಲಿ ಕಾರ್ಮಿಕ ಕಾರ್ತಿಕ್ ಮತ್ತು ಮೋಹನ್‌ರಾಜ್ ಎಂದು ಗುರುತಿಸಲಾಗಿದೆ.

    ಪ್ರಕರಣದ ತನಿಖೆಯ ಪ್ರಗತಿಯನ್ನು ವಿವರಿಸಲು ಪೊಲೀಸ್ ಇಲಾಖೆಯು ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ಈ ವೇಳೆ ವೇದಿಕೆಯಲ್ಲಿದ್ದ ಒಬ್ಬ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರವಾದ ಈ ಕೊಲೆ ಪ್ರಕರಣದ ಬಗ್ಗೆ ಮಾತನಾಡುವಾಗಲೇ ಪರಸ್ಪರ ನಗುತ್ತಾ, ಮುಗುಳ್ನಗುತ್ತಾ ಇರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಪೊಲೀಸರ ವಿರುದ್ಧ ಚಾಟಿ ಬೀಸಿದ್ದಾರೆ.

    “ನೊಂದ ಕುಟುಂಬದ ಗಾಯದ ಮೇಲೆ ಉಪ್ಪು ಸವರುವಂತೆ ಈ ನಾಗರಿಕ ಸೇವಕರು ವರ್ತಿಸಿದ್ದಾರೆ” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕೇಳಿಬಂದಿದೆ.

    ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ:
    ಈ ಅಧಿಕಾರಿಗಳು ನಗುತ್ತಿರುವ ದೃಶ್ಯಗಳು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಮಗು ಸತ್ತಾಗಲೂ ನಿಮಗೆ ಕನಿಷ್ಠ ಮಾನವೀಯತೆ ಇಲ್ಲವೇ? ನೀವೂ ಒಬ್ಬ ಮಹಿಳೆ, ನಿಮಗೂ ಮಕ್ಕಳಿರಬಹುದು. ನಿಮ್ಮ ಸ್ವಂತ ಮಗಳಿಗೆ ಹೀಗಾಗಿದ್ದರೆ ಹೀಗೆಯೇ ನಗುತ್ತಿದ್ದಿರಾ? ಎಂದು ಸಾರ್ವಜನಿಕರು ಆ ಐಜಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

    ತಕ್ಷಣವೇ ಆ್ಯಕ್ಷನ್ ತಗೊಂಡ ಸಿಎಂ ವಿಜಯ್
    ಈ ವಿಷಯ ಮುಖ್ಯಮಂತ್ರಿ ವಿಜಯ್ ಅವರ ಗಮನಕ್ಕೆ ಬರುತ್ತಿದ್ದಂತೆ ಅವರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ತೋರಿದ ಆ ಮೂವರೂ ಐಪಿಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ತಮ್ಮ ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಸಿಎಂ ವಿಜಯ್:”ಪೊಲೀಸರು ಸಾರ್ವಜನಿಕರಿಗೆ ಉತ್ತರದಾಯಿಯಾಗಿರಬೇಕು.” ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವಾಗ ಅಧಿಕಾರಿಗಳು ಗಂಭೀರತೆ ಕಾಯ್ದುಕೊಳ್ಳಬೇಕು.
    “ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ಮೇಲೆ ಯಾವುದೇ ಕರುಣೆ ತೋರಿಸುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.

    ಮುಖ್ಯಮಂತ್ರಿ ವಿಜಯ್ ಅವರ ಈ ತ್ವರಿತ ಮತ್ತು ಕಠಿಣ ನಿರ್ಧಾರಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳೂ ವಿಜಯ್ ಅವರ ಈ ನಡೆಯನ್ನು ನೋಡಿ ಕಲಿಯಬೇಕು ಎಂದು ನೆಟಿಜನ್‌ಗಳು ಕೊಂಡಾಡುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿದ್ದರಿಂದ, ಮುಂದಿನ ದಿನಗಳಲ್ಲಾದರೂ ಪೊಲೀಸರು ಸಾರ್ವಜನಿಕರೊಂದಿಗೆ ಮತ್ತು ಇಂತಹ ಪ್ರಕರಣಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  • ದೇಶಾದ್ಯಂತ ಮತ್ತೆ ಪೆಟ್ರೋಲ್, ಡೀಸೆಲ್ ದರ ₹2.5ಕ್ಕೂ ಹೆಚ್ಚು ಏರಿಕೆ: 10 ದಿನಗಳಲ್ಲಿ 4ನೇ ಬಾರಿ ಶಾಕ್.

    ದೇಶಾದ್ಯಂತ ಮತ್ತೆ ಪೆಟ್ರೋಲ್, ಡೀಸೆಲ್ ದರ ₹2.5ಕ್ಕೂ ಹೆಚ್ಚು ಏರಿಕೆ: 10 ದಿನಗಳಲ್ಲಿ 4ನೇ ಬಾರಿ ಶಾಕ್.

    ಎರಡು ವಾರಗಳ ಅಂತರದಲ್ಲಿ ಸತತವಾಗಿ ಮೂರು ಬಾರಿ ತೈಲ ಬೆಲೆಗಳು ಏರಿಕೆಯಾಗಿ ಜನ ಹೈರಾಣಾಗಿದ್ದು, ಇಂದು ಮತ್ತೆ ಏರಿಕೆ ಆಗುವ ಮೂಲಕ ಜನರಿಗೆ ಮತ್ತೊಮ್ಮೆ ಶಾಕ್ ನೀಡಿದೆ.

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ದರಗಳು ಮತ್ತೆ ದುಬಾರಿಯಾಗಿವೆ.

    ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 2.61 ರೂಪಾಯಿ ಹಾಗೂ ಡೀಸೆಲ್ ಬೆಲೆಯನ್ನು 2.71 ರೂಪಾಯಿಯಷ್ಟು ಹೆಚ್ಚಳ ಮಾಡಿವೆ.
    ಕಳೆದ ಎರಡು ವಾರಗಳಲ್ಲಿ ತೈಲ ದರ ಏರಿಕೆಯಾಗುತ್ತಿರುವುದು ಇದು ನಾಲ್ಕನೇ ಬಾರಿಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

    ಬೆಲೆ ಏರಿಕೆಯ ನಂತರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 102.12 ರೂಪಾಯಿಗೆ ತಲುಪಿದ್ದರೆ, ಡೀಸೆಲ್ ದರ ಲೀಟರ್‌ಗೆ 95.20 ರೂಪಾಯಿಗೆ ಏರಿಕೆಯಾಗಿದೆ.

    ಎಷ್ಟು ಏರಿಕೆಯಾಯಿತು?

    ಹೊಸ ದರಗಳ ಪ್ರಕಾರ

    ಪೆಟ್ರೋಲ್:ಪ್ರತಿ ಲೀಟರ್ಗೆ ಸುಮಾರು ₹3 (ನಗರಾನುಸಾರ ₹2.46 – ₹2.87)

    ಡೀಸೆಲ್:ಪ್ರತಿ ಲೀಟರ್ಗೆ ಸುಮಾರು ₹3 (₹2.57 – ₹2.81)

    CNG:ಪ್ರತಿ ಕೆಜಿಗೆ ₹1 ಏರಿಕೆ (ಇತ್ತೀಚಿನ ದಿನಗಳಲ್ಲಿ 3ನೇ ಬಾರಿ ಏರಿಕೆ, ಒಟ್ಟು ₹4 ಏರಿಕೆ)

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದು ಹಾಗೂ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತ ಕಂಡಿರುವುದೇ ಈ ದರ ಏರಿಕೆಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಇದರಿಂದ ತೈಲ ಆಮದು ವೆಚ್ಚ ಹೆಚ್ಚಾಗಿ, ಸರ್ಕಾರಿ ತೈಲ ಕಂಪನಿಗಳಿಗೆ ಆರ್ಥಿಕ ಒತ್ತಡ ಉಂಟಾಗಿದೆ. ಈ ಹಿನ್ನೆಲೆ ಬೆಲೆ ಏರಿಕೆ ಅನಿವಾರ್ಯವಾಗಿತ್ತು ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ.

    ಇಂಧನ ದರ ಏರಿಕೆಯ ಪರಿಣಾಮ ಕೇವಲ ವಾಹನ ಸವಾರರ ಮೇಲಷ್ಟೇ ಅಲ್ಲ, ಅಗತ್ಯ ವಸ್ತುಗಳ ಬೆಲೆಯ ಮೇಲೂ ಬೀಳುವ ಸಾಧ್ಯತೆ ಇದೆ. ಸಾರಿಗೆ ವೆಚ್ಚ ಹೆಚ್ಚಾದರೆ ತರಕಾರಿ, ಹಣ್ಣು, ದಿನಸಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಬಹುದು.

  • ಪೊಲೀಸ್ ವಸತಿ ಗೃಹದಲ್ಲಿ ಯುವತಿ ಆತ್ಮಹತ್ಯೆ: ಪತಿ ಹಾಗೂ ಕುಟುಂಬದ ವಿರುದ್ಧ ದೂರು!

    ಪೊಲೀಸ್ ವಸತಿ ಗೃಹದಲ್ಲಿ ಯುವತಿ ಆತ್ಮಹತ್ಯೆ: ಪತಿ ಹಾಗೂ ಕುಟುಂಬದ ವಿರುದ್ಧ ದೂರು!

    ಕೆ.ಆರ್.ಪುರ ಪೊಲೀಸ್ ವಸತಿ ಗೃಹದಲ್ಲಿ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಜೇಶ್ ಆರಾಧ್ಯ ಅವರ ಪತ್ನಿ ಲಕ್ಷ್ಮೀಪ್ರಿಯಾ (27) ಮೃತ ಮಹಿಳೆ.

    ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ ಅವರಿಗೆ 2023ರಲ್ಲಿ ಮೈಸೂರಿನಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಸದ್ಯ 8 ತಿಂಗಳ ಹಸುಗೂಸಿದೆ.

    ಕೆ.ಆರ್.ಪುರಂನಲ್ಲಿರುವ ಪೊಲೀಸ್ ಕ್ವಾಟ್ರಸ್ನಲ್ಲಿ ಈ ಕುಟುಂಬ ವಾಸವಾಗಿತ್ತು. ನಿನ್ನೆ (ಮೇ 22) ಬೆಳಿಗ್ಗೆ ದಂಪತಿ ನಡುವೆ ಕೌಟುಂಬಿಕ ವಿಷಯಕ್ಕೆ ದೊಡ್ಡ ಜಗಳ ಉಂಟಾಗಿದೆ. “ನನ್ನ ತಂದೆ-ತಾಯಿಗೆ ನೀನು ಸರಿಯಾಗಿ ಮರ್ಯಾದೆ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಗೆ ಬೈದಿದ್ದರು. ಇದೇ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದ ಲಕ್ಷ್ಮೀಪ್ರಿಯಾ, ನಿನ್ನೆ ರಾತ್ರಿ ರಾಜೇಶ್ ರಾತ್ರಿ ಕೆಲಸಕ್ಕೆ ತೆರಳಿದ್ದಾಗ ಇತ್ತ ಕ್ವಾಟ್ರಸ್ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

    ಇನ್ನು ಘಟನೆ ನಡೆದ ಬೆನ್ನಲ್ಲೇ ಮೃತ ಲಕ್ಷ್ಮೀಪ್ರಿಯಾ ಪೋಷಕರು, ರಾಜೇಶ್ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದಾಗಿನಿಂದಲೂ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬ ಸದಸ್ಯರು ಲಕ್ಷ್ಮೀಪ್ರಿಯಾಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು. ನಿನ್ನೆ ನಡೆದ ಜಗಳ ಹಾಗೂ ಈ ಹಿಂದಿನ ಕಿರುಕುಳವೇ ಮಗಳ ಆತ್ಮಹತ್ಯೆಗೆ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

    ಮೃತ ಲಕ್ಷ್ಮೀಪ್ರಿಯಾ ಪೋಷಕರು ನೀಡಿದ ದೂರಿನ ಅನ್ವಯ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ತನಿಖೆ ನಡೆಸಿದ್ದಾರೆ.

  • ಪಾಕಿಸ್ತಾನ : ಚಲಿಸುತ್ತಿದ್ದ ರೈಲಿನಲ್ಲಿ ಆತಾಹುತಿ ಬಾಂಬ್‌ ದಾಳಿ : 24 ಮಂದಿ ಸಾ*ವು

    ಪಾಕಿಸ್ತಾನ : ಚಲಿಸುತ್ತಿದ್ದ ರೈಲಿನಲ್ಲಿ ಆತಾಹುತಿ ಬಾಂಬ್‌ ದಾಳಿ : 24 ಮಂದಿ ಸಾ*ವು

    ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 24 ಜನರು ಸಾ*ವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಯ ದೃಶ್ಯಗಳು ಮತ್ತು ವರದಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿವೆ.

    ರೈಲು ಕಂಟೋನ್ಮೆಂಟ್‌ನಿಂದ ಹೊರಟು ಕ್ವೆಟ್ಟಾದ ‘ಚೆಮನ್ ಫಾಟಕ್’ (Chaman Phatak) ಪ್ರದೇಶದ ಬಳಿ ಚಲಿಸುತ್ತಿದ್ದಾಗ ಈ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.

    ಹಳಿತಪ್ಪಿದ ಬೋಗಿಗಳು: ಸ್ಫೋಟದ ತೀವ್ರತೆಗೆ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.

    ಸುತ್ತಮುತ್ತಲಿನ ಹಾನಿ: ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದ ಮನೆಗಳ ಕಿಟಕಿಗಳು ಪುಡಿಯಾಗಿದ್ದು, ಅಲ್ಲಿ ಪಾರ್ಕ್ ಮಾಡಲಾಗಿದ್ದ ಹತ್ತಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ದಾಳಿಯ ಹೊಣೆ ಹೊತ್ತ ಬಿಎಲ್‌ಎ (BLA)
    ಸ್ಫೋಟದ ಬೆನ್ನಲ್ಲೇ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಪಾಕಿಸ್ತಾನದ ಮಿಲಿಟರಿ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಸಂಘಟನೆ ಹೇಳಿಕೊಂಡಿದೆ. ಸ್ಫೋಟದ ನಂತರ ಸ್ಥಳದಲ್ಲಿ ಭಾರಿ ಗುಂಡಿನ ಸದ್ದು ಕೂಡ ಕೇಳಿಬಂದಿದೆ.

    ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ರೈಲ್ವೆ ಸಿಬ್ಬಂದಿ ಮತ್ತು ಪಾಕಿಸ್ತಾನಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

  • ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

    ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಪರಿಶೀಲನೆ. ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ:ರಮೇಶ್.ಡಿ.ಎಸ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿ ಹಾಗೂ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ  ಪ್ರಗತಿ ಕುರಿತು ಪೂರ್ವ ನಗರ ಪಾಲಿಕೆ ಆಯುಕ್ತರಾದ ರಮೇಶ್.ಡಿ.ಎಸ್  ರವರು ಸ್ಥಳ ಪರಿಶೀಲನೆ ನಡೆಸಿದರು.

    ರೈಲ್ವೆ ವೆಂಟ್ ಬಾಕಿ 12 ಮೀಟರ್ ಬಾಕ್ಸ್ ಪುಶಿಂಗ್   ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ

    ಗೆದ್ದಲಹಳ್ಳಿ ಸಾಯಿ ಲೇಔಟ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೆ ವೆಂಟ್ ಕಾಮಗಾರಿಯ ಭಾಗವಾಗಿ ಬಾಕಿ ಇರುವ ಸುಮಾರು 12 ಮೀಟರ್ ಬಾಕ್ಸ್ ಪುಶಿಂಗ್ ಕಾಮಗಾರಿಯನ್ನು ಮೇ 31ರೊಳಗೆ ಪೂರ್ಣಗೊಳಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಕಾಮಗಾರಿ ಶೀಘ್ರ ಪೂರ್ಣಗೊಂಡಲ್ಲಿ ತಕ್ಷಣವೇ ರಿಟೈನಿಂಗ್ ವಾಲ್ ನಿರ್ಮಾಣ ಕೈಗೊಂಡು, ರೈಲ್ವೆ ವೆಂಟ್ ಮೂಲಕ ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡುವುದರೊಂದಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಉಂಟಾಗುತ್ತಿದ ನೆರೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗುತ್ತದೆ ಎಂದು ಆಯುಕ್ತರು ಮಾಹಿತಿ ನೀಡಿದರು.

    ಮಳೆ ನೀರು ಕಾಲುವೆಗಳ ಹೂಳು ತೆರವು ಕಾಮಗಾರಿಗಳ ಪರಿಶೀಲನೆ

    ಗೆದ್ದಲಹಳ್ಳಿ ಬಳಿ ರಾಜಕಾಲುವೆಯಲ್ಲಿ  ವಾರ್ಷಿಕ ನಿರ್ವಹಣಾ ಕಾಮಗಾರಿಗಳ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಮಳೆ ನೀರು ಕಾಲುವೆಗಳ ಹೂಳು ತೆರವು ಮತ್ತು ಸ್ವಚ್ಛತಾ ಕಾಮಗಾರಿಗಳ ಪ್ರಗತಿಯನ್ನು ಆಯುಕ್ತರು ಪರಿಶೀಲಿಸಿ ಯುದ್ದೋಪಾದಿಯಲ್ಲಿ ಕಾಲುವೆ ನಿರ್ವಹಣಾ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.

    ಮಳೆಗಾಲದ ಸಂದರ್ಭದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗದಂತೆ ಪ್ರಮುಖ ರಸ್ತೆಗಳ ಎರಡೂ ಬದಿಗಳಿಂದ ಮಳೆ ನೀರು ಕಾಲುವೆಗೆ ಸಂಪರ್ಕ ಕಲ್ಪಿಸುವ ಚರಂಡಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಸರ್ವಜ್ಞನಗರ ಗಡಿಭಾಗದಲ್ಲಿನ ಕಾಮಗಾರಿಗಳ ಪರಿಶೀಲನೆ

    ಪೂರ್ವ ನಗರ ಪಾಲಿಕೆಗೆ ಹೊಂದಿಕೊಂಡಿರುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಗಡಿಯ ಮೇಲ್ಭಾಗದ ಕಾಲುವೆಯಿಂದ ಗೆದ್ದಲಹಳ್ಳಿ ಕಾಲುವೆಗೆ ಸಂಪರ್ಕವಿದ್ದು ಮೇಲ್ಭಾಗದಲ್ಲಿರುವ ಕಾಲುವೆ ಹೂಳು ಕೆಳಭಾಗಕ್ಕೆ ಹರಿದು ಬರುವುದರಿಂದ ನೆರೆ ಪರಿಸ್ಥಿತಿ ಉಂಟಾಗಬಹುದಾಗಿದ್ದು ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾಲುವೆ ನಿರ್ವಹಣಾ ಕಾಮಗಾರಿಗಳನ್ನೂ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

    ಮಳೆಗಾಲದ ಹಿನ್ನೆಲೆಯಲ್ಲಿ ಕಾಲುವೆಗಳಲ್ಲಿನ ಹೂಳು ತೆರವು, ಕಾಲುವೆ ಸ್ವಚ್ಛತೆ ಹಾಗೂ ನಿರ್ವಹಣೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆಗಾಲದ ಪೂರ್ವಸಿದ್ಧತೆಗೆ ಆದ್ಯತೆ ನೀಡಿ

    ಮಳೆಗಾಲ ಆರಂಭಕ್ಕೂ ಮುನ್ನ ಪ್ರವಾಹ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು, ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಮಳೆ ನೀರು ಕಾಲುವೆಗಳ ನಿರ್ವಹಣೆ ಕಾಮಗಾರಿ ಮೂಲಕ ಕಾಲುವೆಗಳಲ್ಲಿನ ಹೂಳು, ತ್ಯಾಜ್ಯ, ಕಳೆ ಗಿಡಗಳನ್ನು ತೆರವು ಮಾಡಿ ಮಳೆ ನೀರು ಸರಾಗವಾಗಿ ಹರಿಯುವಂತೆ ಕಾಲುವೆಗಳ ಸಮರ್ಪಕ ನಿರ್ವಹಣೆಗೆ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಸ್ಥಳ ಪರಿಶೀಲನೆ ವೇಳೆ ಕಾರ್ಯಪಾಲಕ ಅಭಿಯಂತರರಾದ ರಾಘವೇಂದ್ರ ಬಿ.ಎನ್., ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇನ್ನಿತರೆ ಅಧಿಕಾರಿಗಳು ಹಾಜರಿದ್ದರು.

  • ಗುಣಮಟ್ಟದ ಶಿಕ್ಷಣಕ್ಕೆ ಹೊಸ ಭಾಷ್ಯ: ಕೋಗೀಲುನಲ್ಲಿ ನ್ಯೂ ಬಾಲ್ಡ್ ವಿನ್ ಶಾಲೆ ಪ್ರಾರಂಭ

    ಗುಣಮಟ್ಟದ ಶಿಕ್ಷಣಕ್ಕೆ ಹೊಸ ಭಾಷ್ಯ: ಕೋಗೀಲುನಲ್ಲಿ ನ್ಯೂ ಬಾಲ್ಡ್ ವಿನ್ ಶಾಲೆ ಪ್ರಾರಂಭ

    ಬೆಂಗಳೂರು: ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಾ, ಶಿಕ್ಷಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುತ್ತಿರುವ ನ್ಯೂ ಬಾಲ್ಡ್ ವಿನ್ ಶಿಕ್ಷಣ ಸಮೂಹ ಸಂಸ್ಥೆಗಳ 10ನೇ ಶಾಖೆ ಕೋಗೀಲುವಿನಲ್ಲಿ ಪ್ರಾರಂಭಗೊಂಡಿದೆ.

    ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಲೋಕಾರ್ಪಣೆ ಗೊಳಿಸಿ ಪೋಷಕರನ್ನುದ್ದೇಶಿಸಿ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ಟಿ.ವೇಣುಗೋಪಾಲ್ ಮಾತನಾಡಿದರು.
    ವಿದ್ಯೆ ಎಂದಿಗೂ ಸೇವೆಯಾಗಬೇಕೆ ಹೊರತು ವ್ಯಾಪಾರವಾಗಬಾರದು. ಈ ನಿಟ್ಟಿನಲ್ಲಿ ಎಲ್ಲರಿಗೂ ಕೈಗೆಟುಕುವ ದರದಲ್ಲಿ ನಾವು ನ್ಯೂ ಬಾಲ್ಡ್ ವಿನ್ ಅಂತರಾಷ್ಟ್ರೀಯ ಶಾಲೆಯನ್ನು ಕೋಗೀಲುವಿನಲ್ಲಿ ಪ್ರಾರಂಭಿಸಿದ್ದೇವೆ.
    ಮಕ್ಕಳಿಗೆ ಹಸಿರಿನಿಂದ ಕೂಡಿದ ವಿಶಾಲವಾದ ಪರಿಸರ, ಅತ್ಯಾಧುನಿಕ ಕಟ್ಟಡ, ಜಾಗತಿಕ ಪಠ್ಯಕ್ರಮ, ನುರಿತ ಶಿಕ್ಷಕ ವೃಂದ, ಸುಸಜ್ಜಿತ ಕ್ರೀಡಾಂಗಣ,ಡಿಜಿಟಲ್ ಲೈಬ್ರರಿ, ಸ್ಮಾರ್ಟ್ ಕ್ಲಾಸ್ ರೂಮ್ಸ್, ಸುಸಜ್ಜಿತ ಪ್ರಯೋಗಾಲಯ, ಸ್ಕೂಲ್ ಬಸ್ ಸೌಲಭ್ಯ ಜೊತೆಗೆ ಓದಿನ ಜೊತೆಗೆ ಕ್ರೀಡೆ ಮತ್ತು ಕಲೆಗೂ ಇಲ್ಲಿ ಸಮಾನ ಆದ್ಯತೆ ನೀಡುತ್ತೇವೆ ಎಂದರು.

    ಈ ವೇಳೆ ನ್ಯೂ ಬಾಲ್ಡ್ ವಿನ್ ಸಮೂಹ ಸಂಸ್ಥೆಗಳ ಫೈನಾನ್ಸ್ ಡೈರೆಕ್ಟರ್ ಶ್ರೀಮತಿ ಸೌಭಾಗ್ಯವತಿ ವೇಣುಗೋಪಾಲ್, ಮ್ಯಾನೇಜಿಂಗ್ ಡೈರೆಕ್ಟರ್ ಹಂಸ ಕೆ.ವೇಣುಗೋಪಾಲ್, ಸಿಇಒ ಕೀರ್ತಿ ಮಹರಾಜ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.

  • ಅನುಮತಿಯಿಲ್ಲದೆ ರಸ್ತೆ ಅಗೆದರೆ ದೂರು ದಾಖಲಿಸಿ: ಡಿ.ಎಸ್. ರಮೇಶ್

    ಅನುಮತಿಯಿಲ್ಲದೆ ರಸ್ತೆ ಅಗೆದರೆ ದೂರು ದಾಖಲಿಸಿ: ಡಿ.ಎಸ್. ರಮೇಶ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಗಾಲ ಪೂರ್ವಸಿದ್ಧತೆ, ಕೆರೆಗಳ ಸಂರಕ್ಷಣೆ, ರಾಜಕಾಲುವೆಗಳ ನಿರ್ವಹಣೆ, ಒಳಚರಂಡಿ ಸಮಸ್ಯೆಗಳ ಪರಿಹಾರ, ಪ್ರವಾಹ ನಿಯಂತ್ರಣ ಹಾಗೂ ತುರ್ತು ಸ್ಪಂದನಾ ವ್ಯವಸ್ಥೆಗಳ ಕುರಿತು ಪ್ರಗತಿ ಪರಿಶೀಲಿಸಲು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್. ರಮೇಶ್ ರವರು ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆಯನ್ನು ನಡೆಸಿದರು.

    ಸಭೆಯಲ್ಲಿ ಚರ್ಚಿಸಲಾದ ವಿಷಯಗಳು

    ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು

    ಬೆಂಗಳೂರು ಜಲಮಂಡಳಿಯ ಎಸ್.ಟಿ.ಪಿ ಯಿಂದ ಕೌದೇನಹಳ್ಳಿ ಕೆರೆಗೆ ಸಂಸ್ಕರಿತ ನೀರು ಹರಿಸುವ ಸಂಬಂಧ ಈಗಾಗಲೇ ಪೈಪ್ಲೈನ್ ಅಳವಡಿಕೆಗೆ ಸಂಬಂಧಿಸಿದಂತೆ ಜಂಟಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ರಸ್ತೆ ಹಾನಿಯಾಗದಂತೆ ಓಪನ್ ಕಟಿಂಗ್ ಬದಲಿಗೆ ಟ್ರೆಂಚ್ಲೆಸ್ ಟೆಕ್ನಾಲಜಿ ಬಳಸಿಕೊಂಡು ಕಾಮಗಾರಿ ಕೈಗೊಳ್ಳುವುದಾಗಿ ಜಲಮಂಡಳಿ ತಿಳಿಸಿದ್ದು, ವಿಭಾಗ ವ್ಯಾಪ್ತಿಯ ಕಾರ್ಯಪಾಲಕ ಅಭಿಯಂತರಿಂದ ಅನುಮತಿ ಪಡೆದು ಮುಂದಿನ 20 ದಿನಗಳೊಳಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ಕೆರೆಗೆ ಸಂಸ್ಕರಿತ ನೀರು ಹರಿಸಲು ಕ್ರಮವಹಿಸುವಂತೆ ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

    ವೆಂಗಯ್ಯನ ಕೆರೆಗೆ ಎಸ್.ಟಿ. ಪಿಯಿಂದ ಸಂಸ್ಕರಿಸಿದ ನೀರು

    ವೆಂಗಯ್ಯನ ಕೆರೆ ಪ್ರದೇಶದಲ್ಲಿ ತಲಾ 30 ಎಂಎಲ್ಡಿ ಸಾಮರ್ಥ್ಯದ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, ಒಂದು ಎಸ್ಟಿಪಿ ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿದ್ದರೆ ಮತ್ತೊಂದು ನವೀಕರಣ ಹಂತದಲ್ಲಿರುತ್ತದೆ. ಪ್ರಸ್ತುತ ಸಂಸ್ಕರಿತ ನೀರು ಹಾಗೂ ರಾಜಕಾಲುವೆಯಿಂದ ಬರುವ ಅಶುದ್ಧ ನೀರು ಒಂದೇ ಮಾರ್ಗದಲ್ಲಿ ಮಿಶ್ರಣಗೊಂಡು ಕೆರೆಗೆ ಸೇರುತ್ತಿರುವುದರಿಂದ ಮಾಲಿನ್ಯ ಸಮಸ್ಯೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.

    ಈ ಹಿನ್ನೆಲೆಯಲ್ಲಿ ಪೈಪ್ಲೈನ್ ಅಳವಡಿಸಲು ಅನುಮತಿ ಪಡೆದು ಸಂಸ್ಕರಿತ ನೀರಿಗೆ ಪ್ರತ್ಯೇಕ ಪೈಪ್ಲೈನ್ ವ್ಯವಸ್ಥೆ ಮಾಡಿ, ಅಶುದ್ಧ ನೀರನ್ನು ಡೈವರ್ಷನ್ ಮೂಲಕ ಹರಿಸಲು ಕ್ರಮ ಕೈಗೊಳ್ಳುವಂತೆ ಹಾಗೂ ಇನ್ನೂ 20 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.

    ದೇವರಬೀಸನಹಳ್ಳಿ ಕೆರೆ ಮತ್ತು ಎಸ್ಟಿಪಿ ನಿರ್ವಹಣೆ

    ದೇವರಬೀಸನಹಳ್ಳಿ ಪ್ರದೇಶದಲ್ಲಿ ಎರಡು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿದ್ದು, 1.3 ಎಂಎಲ್ಡಿ ಸಾಮರ್ಥ್ಯದ ಘಟಕವನ್ನು ಆದರ್ಶ ವಸತಿ ಸಮುಚ್ಚಯ ಸಂಸ್ಥೆಯು ಸರ್ಕಾರದ ಅನುಮತಿಯೊಂದಿಗೆ ಸರ್ಕಾರಿ ಜಾಗದಲ್ಲಿ ನಿರ್ವಹಿಸಲಾಗುತ್ತಿದೆ. ಮತ್ತೊಂದು 900 ಕೆಎಲ್ಡಿ ಸಾಮರ್ಥ್ಯದ ಎಸ್ಟಿಪಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಾರ್ಯಾಚರಣೆ ಅನುಮತಿ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದು, ಪ್ರಮಾಣಪತ್ರ ದೊರೆತ ಬಳಿಕ ವಸತಿ ಸಮುಚ್ಚಯದ ಒಳಚರಂಡಿ ನೀರನ್ನು 900 ಕೆಎಲ್ಡಿ ಘಟಕಕ್ಕೆ ವರ್ಗಾಯಿಸಲಾಗುವುದು. ಇದರಿಂದ ದೇವರಬೀಸನಹಳ್ಳಿ ಗ್ರಾಮದಿಂದ ಕೆರೆಗೆ ಸೇರುತ್ತಿರುವ ಅಶುದ್ಧ ನೀರನ್ನು ಹಾಲಿ ಇರುವ 1.3 ಎಂ.ಎಲ್.ಡಿ ಸಾಮರ್ಥ್ಯದ ಎಸ್.ಟಿ.ಪಿಗೆ ವರ್ಗಾಯಿಸಿ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

    ರಿಯಲ್ ಟೈಮ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಸಿ

    ಅಪಾರ್ಟ್ಮೆಂಟ್ಗಳಿಂದ ಸಂಸ್ಕರಿಸಲ್ಪಟ್ಟ ನೀರು ಪ್ರತ್ಯೇಕ ಪೈಪ್ಲೈನ್ ಮೂಲಕ ಕೆರೆಗಳಿಗೆ ಹರಿಯುವಂತೆ ವ್ಯವಸ್ಥೆ ಸಂಬಂಧ ಈಗಾಗಲೇ ಜಲಮಂಡಳಿ ವತಿಯಿದ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದು, ಕೆರೆಗಳಿಗೆ ಹರಿಯುವ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ರಿಯಲ್ ಟೈಮ್ ಸೆನ್ಸರ್ ಆಧಾರಿತ ಮಾನಿಟರಿಂಗ್ ವ್ಯವಸ್ಥೆ ಅಳವಡಿಸುವ ಮೂಲಕ ಕೆರೆಗಳಿಗೆ ಸೇರುವ ನೀರಿನ ಪ್ರಮಾಣ, ಹರಿವು ಹಾಗೂ ಗುಣಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿ ಒದಗಿಸುವುದು ಮುಖ್ಯ ಎಂದು ಆಯುಕ್ತರು ಸೂಚಿಸಿದರು.

    ಅನಧಿಕೃತ ರಸ್ತೆ ಅಗೆತಕ್ಕೆ ಕಠಿಣ ಎಚ್ಚರಿಕೆ

    ಐಟಿಪಿಎಲ್ ರಸ್ತೆ, ದೇವಸಂದ್ರ ರಸ್ತೆ, ಸರ್ಜಾಪುರ ರಸ್ತೆ ಹಾಗೂ ದೇವರಬೀಸನಹಳ್ಳಿ ಪ್ರದೇಶಗಳಲ್ಲಿ ನಗರ ಪಾಲಿಕೆ ಅನುಮತಿ ಪಡೆಯದೆ ಅನಧಿಕೃತ ರಸ್ತೆ ಅಗೆತ ಪ್ರಕರಣಗಳು ಕಂಡುಬಂದಿದ್ದು, ಹೊಸತಾಗಿ ಡಾಂಬರೀಕರಣಗೊಂಡ ರಸ್ತೆಗಳ ಮಧ್ಯಭಾಗದಲ್ಲಿ ರಸ್ತೆ ಅಗೆದು ಕಾಮಗಾರಿ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದ್ದು, ಇಂತಹ ಪ್ರಕರಣಗಳನ್ನು ಕಟ್ಟುನಿಟ್ಟಾಗಿ ತಡೆಯಲು ಸೂಚಿಸಿದರು.

    ನಗರ ಪಾಲಿಕೆ ವಿಭಾಗೀಯ ಕಾರ್ಯಪಾಲಕ ಇಂಜಿನಿಯರಿಂದ ಅನುಮತಿ ಪಡೆಯದೆ ರಸ್ತೆ ಅಗೆದು ಕಾಮಗಾರಿ ನಡೆಸುತ್ತಿರುವ ವಿವಿಧ ಇಲಾಖೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಯುಕ್ತರು ಸೂಚಿಸಿದರು. ಇಂತಹ ಪ್ರಕರಣಗಳು ಮುಂದುವರಿದರೆ ಎಫ್ಐಆರ್ ದಾಖಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

    ದೇವಸಂದ್ರ ಬಡಾವಣೆ ಪೈಪ್ಲೈನ್ ಅಲೈನ್ಮೆಂಟ್ ಪರಿಶೀಲನೆ

    ದೇವಸಂದ್ರ ಬಡಾವಣೆ ಸಮೀಪದ 900 ಮಿಮೀ ಎಸ್ ಟಿ ಪಿ ಪೈಪ್ಲೈನ್ ಕಾಮಗಾರಿಗೆ ಸಂಬಂಧಿಸಿದ ಭೂಮಾಪನ ಹಾಗೂ ಸರ್ವೆ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚಿಸಲಾಯಿತು.
    ಮಳೆ ನೀರು ಕಾಲುವೆ ಸುಸ್ಥಿಯಲ್ಲಿಡಿ

    ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 225 ಕಿಲೋಮೀಟರ್ ವ್ಯಾಪ್ತಿಯ ಮಳೆ ನೀರು ಕಾಲುವೆ ಜಾಲವಿದ್ದು,125 ಕಿ.ಮೀ ಈಗಾಗಲೇ ಕಾಂಕ್ರೀಟ್ ಕಾಲುವೆ ನಿರ್ಮಿಸಲಾಗಿದೆ. ಬಾಕಿ 100 ಕಿ.ಮೀ ಕಚ್ಚಾ ಕಾಲುವೆಗಳನ್ನು ವಿಶ್ವಬ್ಯಾಂಕ್ ಹಾಗೂ ಸರ್ಕಾರದ ಅನುದಾನದ ಅಡಿಯಲ್ಲಿ ಕಾಲುವೆಗಳ ಅಭಿವೃದ್ಧಿಗ ಬಾಕಿ ಇರುತ್ತದೆ. ಕಾಲುವೆಗಳ ನಿರ್ವಹಣೆ ಕಾಮಗಾರಿಗಳ ಪ್ರಗತಿ ನಿಧಾನವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಕಾಂಕ್ರೀಟ್ ರಾಜಕಾಲುವೆ ಹಾಗೂ ಕಚ್ಚಾ ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಪ್ರತಿದಿನದ ನಿರ್ವಹಣಾ ಕಾಮಗಾರಿ ವರದಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಅಂಡರ್ ಪಾಸ್ ನಲ್ಲಿ ನೀರು ನಿಲ್ಲದಂತೆ ಕ್ರಮವಹಿಸಿ

    ತೂಬರಹಳ್ಳಿ, ಕುಂದಲಹಳ್ಳಿ, ದೇವರಬೀಸನಹಳ್ಳಿ, ಲೌರಿ ಜಂಕ್ಷನ್, ದೊಡ್ಡನೆಕ್ಕುಂದಿ ಹಾಗೂ ಪಣತ್ತೂರು ಅಂಡರ್ಪಾಸ್ ಪ್ರದೇಶಗಳಲ್ಲಿ ನೀರು ನಿಲುಗಡೆ ಉಂಟಾಗಿ ಸಂಚಾರ ಸಮಸ್ಯೆ ಉಂಟಾಗದಂತೆ ಕ್ರಮವಹಿಸುವ ಸಲುವಾಗಿ ಕ್ಯಾಚ್ಪಿಟ್ಗಳಲ್ಲಿ ಪ್ಲಾಸ್ಟಿಕ್ ಹಾಗೂ ತ್ಯಾಜ್ಯ ತೆರವುಗೊಳಿಸಲು ವಿಶೇಷ ತಂಡಗಳನ್ನು ನಿಯೋಜಿಸಿ ನಿರಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು.

    ತುರ್ತು ಸ್ಪಂದನಾ ತಂಡಗಳು ಮತ್ತು ಮಳೆಗಾಲ ಪೂರ್ವಸಿದ್ಧತೆ

    ಮಳೆಗಾಲದಲ್ಲಿ ನೀರು ನಿಲುಗಡೆ ಸಮಸ್ಯೆ ಉಂಟಾಗುವ ಪ್ರದೇಶಗಳಲ್ಲಿ ಉಪವಿಭಾಗ ಮಟ್ಟದ ತುರ್ತು ಸ್ಪಂದನಾ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲು ಹಾಗೂ ಕಂಟ್ರೋಲ್ ರೂಂನಿಂದ ದೂರು ಬಂದ 10 ರಿಂದ 15 ನಿಮಿಷಗಳೊಳಗೆ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

    ತುರ್ತು ಪರಿಸ್ಥಿತಿಗಳಿಗೆ ಅಗತ್ಯವಾದ ಪಂಪ್ಸೆಟ್, ಜೆಸಿಬಿ, ಡಿ-ವಾಟರಿಂಗ್ ಪಂಪ್, ಟಿಪ್ಪರ್, ಟೋಯಿಂಗ್ ರೋಪ್, ಟಾರ್ಪಲಿನ್ ಹಾಗೂ ಇನ್ನಿತರೆ ವಿಪತ್ತು ನಿರ್ವಹಣೆ ಯಂತ್ರೋಪಕರಣಗಳನ್ನು ಸದಾ ಸಿದ್ಧವಾಗಿಡಲು ಕಾರ್ಯಪಾಲಕ ಅಭಿಯಂತರರು ಹಾಗೂ ಅಗ್ನಿ ಶಾಮಕ ಸೂಚಿಸಲಾಯಿತು.

    ರಸ್ತೆ ಬದಿ ತ್ಯಾಜ್ಯ, ಕಟ್ಟಡ ಭಗ್ನಾವಶೇಷ ಹಾಗೂ ಅಪಾಯಕಾರಿ ಮರಗಳ ತೆರವು ಕಾರ್ಯಾಚರಣೆdoor

    ರಸ್ತೆ ಬದಿ ಕಸ ಹಾಗೂ ನಿರ್ಮಾಣ ತ್ಯಾಜ್ಯ ಎಸೆಯುವುದರಿಂದ ಮಳೆ ನೀರು ಹರಿವಿಗೆ ಅಡ್ಡಿಯಾಗುತ್ತಿದ್ದು, ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಸಂಚಾರಿ ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ರಾತ್ರಿ ವೇಳೆ ಗಸ್ತು ಹೆಚ್ಚಿಸಲು ಸೂಚಿಸಿದರು. ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು, ರಸ್ತೆ ಬದಿ ಹಾಗೂ ಕಾಲುವೆ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಮಳೆಗಾಲಕ್ಕೂ ಮುನ್ನ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಹಾಗೂ ಕೊಂಬೆಗಳನ್ನು ಗುರುತಿಸಿ ತಕ್ಷಣವೇ ತೆರವುಗೊಳಿಸುವಂತೆ, ಕತ್ತರಿಸಿದ ಮರಗಳನ್ನು ರಸ್ತೆ ಬದಿಯಲ್ಲಿ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಬಾರದು ಎಂದು ಆಯುಕ್ತರು ಸೂಚಿಸಿದರು.

    ಬೀದಿ ದೀಪಗಳ ನಿರ್ವಹಣೆ

    ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಪ್ರಮುಖ ಜಂಕ್ಷನ್ಗಳು, ಮುಖ್ಯರಸ್ತೆಗಳು, ಅಂಡರ್ಪಾಸ್ ಗಳು, ಬೀದಿ ದೀಪಗಳು ಸರಿಯಾಗಿ ಕಾರ್ಯನಿರ್ಹಿಸುವ ಬಗ್ಗೆ ಖಾತ್ರಿ ಪಡಿಸಿಕೊಂಡು ಅಗತ್ಯವಿರುವ ಕಡೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.

    ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಸಂಚಾರಿ ಪೊಲೀಸ್ ಇಲಾಖೆ, ಬೆಸ್ಕಾಂ, ಜಲಮಂಡಳಿ, ವಿಪತ್ತು ನಿರ್ವಹಣಾ ವಿಭಾಗ, ಅಗ್ನಿಶಾಮಕ ಇಲಾಖೆ, ಘನ ತ್ಯಾಜ್ಯ ನಿರ್ವಹಣೆ ವಿಭಾಗ, , ಅರಣ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು

  • ಕೂದಲು ಮತ್ತು ರಬ್ಬರ್ ತಿಂದ ಎರಡು ವರ್ಷದ ಮಗುವಿನ ಜೀವ ಉಳಿಸಿದ ಮೆಡಿಕವರ್ ವೈದ್ಯರು.

    ಕೂದಲು ಮತ್ತು ರಬ್ಬರ್ ತಿಂದ ಎರಡು ವರ್ಷದ ಮಗುವಿನ ಜೀವ ಉಳಿಸಿದ ಮೆಡಿಕವರ್ ವೈದ್ಯರು.

    ಬೆಂಗಳೂರು, ವೈಟ್‌ಫೀಲ್ಡ್: ಅಪರೂಪದ ಹಾಗೂ ಜೀವಕ್ಕೆ ಅಪಾಯಕಾರಿಯಾದ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ ಎರಡು ವರ್ಷದ ಬಾಲಕಿಯ ಜೀವವನ್ನು ಮೆಡಿಕವರ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಉಳಿಸಿದ್ದಾರೆ. ಈ ಪ್ರಕರಣದಲ್ಲಿ ಮಕ್ಕಳ ತಜ್ಞೆ ಡಾ ಲೀನತಾ ರೆಡ್ಡಿ ಪ್ರಮುಖ ಪಾತ್ರವಹಿಸಿ ಅಪರೂಪದ “ರಪುಂಜಲ್ ಸಿಂಡ್ರೋಮ್” (Rapunzel Syndrome) ಎಂಬ ಸ್ಥಿತಿಯನ್ನು ಗುರುತಿಸಿ ಚಿಕಿತ್ಸೆ ನೀಡಿದ್ದಾರೆ.

    ಮಗು ಬಾಲ್ಯದಿಂದಲೇ ಕೂದಲು, ರಬ್ಬರ್ ಬ್ಯಾಂಡ್‌ಗಳು ಹಾಗೂ ಬಲೂನ್ ತುಂಡುಗಳಂತಹ ಆಹಾರವಲ್ಲದ ವಸ್ತುಗಳನ್ನು ತಿನ್ನುವ ವಿಚಿತ್ರ ಅಭ್ಯಾಸ ಹೊಂದಿತ್ತು. ಇದರಿಂದ ಹೊಟ್ಟೆಯೊಳಗೆ ದೊಡ್ಡ ಪ್ರಮಾಣದ ಕೂದಲಿನ ಗುಡ್ಡೆ (Trichobezoar) ರೂಪಗೊಂಡು, ಅದು ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ವಿಸ್ತರಿಸಿತ್ತು. ಈ ಅಪರೂಪದ ಸ್ಥಿತಿಗೆ “ರಪುಂಜಲ್ ಸಿಂಡ್ರೋಮ್” ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇದು ಚಿಕ್ವಕ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಎರಡು ವರ್ಷದ ಮಗುವಿನಲ್ಲಿ ಕಂಡುಬಂದಿರುವುದು ಅತ್ಯಂತ ಅಪರೂಪವಾಗಿದೆ.
    ಕೆಲವು ದಿನಗಳಿಂದ ಮಗುವಿಗೆ ತೀವ್ರ ಹೊಟ್ಟೆನೋವು, ನಿರಂತರ ವಾಂತಿ ಹಾಗೂ ಆಹಾರ ಸೇವನೆ ಕಡಿಮೆಯಾಗಿತ್ತು. ಇದರಿಂದ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದರು. ವೈದ್ಯಕೀಯ ತಪಾಸಣೆಯಲ್ಲಿ ಹೊಟ್ಟೆಯಿಂದ ಸಣ್ಣ ಆಂತ್ರದವರೆಗೆ ಹರಡಿರುವ ದೊಡ್ಡ ಕೂದಲಿನ ಗುಡ್ಡೆ ಆಹಾರವನ್ನ ಪಚನಗೊಳ್ಳಲು ಮತ್ತು ಸರಾಗವಾಗಿ ಹೊಗಲು ಕಷ್ಟವಾಗುತ್ತಿತ್ತು.

    ಮೊದಲಿಗೆ ಗ್ಯಾಸ್ಟ್ರೋಎಂಟರಾಲಜಿಸ್ಟ್ Dr. Roopesh Kalyan ಎಂಡೋಸ್ಕೋಪಿಯ ಮೂಲಕ ಅದನ್ನು ತೆಗೆಯಲು ಪ್ರಯತ್ನಿಸಿದರು. ಆದರೆ ಗುಡ್ಡೆಯ ಗಾತ್ರ ಮತ್ತು ವ್ಯಾಪ್ತಿ ಹೆಚ್ಚಾಗಿದ್ದರಿಂದ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು.

    ಮೆಡಿಕವರ್ ವೈದ್ಯರ ನಾಲ್ಕು ಜನರ ತಂಡ ಲ್ಯಾಪರೋಸ್ಕೊಪಿಕ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿದರು. ಸುಮಾರು 25 ಸೆಂ.ಮೀ ಉದ್ದ ಮತ್ತು 480 ಗ್ರಾಂ ತೂಕದ ದೊಡ್ಡ ಕೂದಲಿನ ಗುಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದು ಮಗುವಿನ ಜೀವ ಉಳಿಸಲಾಯಿತು.

    ಪ್ರಸ್ತುತ ಮಗು ವೈದ್ಯರ ನಿಗಾದಲ್ಲಿದ್ದು ಆರೋಗ್ಯವಾಗಿ ಚೇತರಿಸಿಕೊಳ್ಳುತ್ತಿದೆ.

    ಡಾ. ಲೀನಾಥ ರೆಡ್ಡಿ ಮಾತನಾಡಿ,“ಚಿಕ್ಕ ಮಕ್ಕಳಲ್ಲಿ ಪಿಕಾ (Pica) ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಹಲವಾರು ಬಾರಿ ಕಡೆಗಣಿಸಲಾಗುತ್ತದೆ. ಪೋಷಕರು ಅದರ ಗಂಭೀರತೆಯನ್ನು ಅರಿಯುವಷ್ಟರಲ್ಲಿ ಗಂಭೀರ ಸಮಸ್ಯೆಗಳು ಉಂಟಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಇದು ರಪುಂಜಲ್ ಸಿಂಡ್ರೋಮ್‌ನಂತಹ ಅಪಾಯಕಾರಿಯಾದ ಸ್ಥಿತಿಗೆ ತಲುಪಬಹುದು. ಮಕ್ಕಳಲ್ಲಿ ಆಹಾರವಲ್ಲದ ವಸ್ತುಗಳನ್ನು ತಿನ್ನುವ ಅಭ್ಯಾಸ ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ,” ಎಂದು ಹೇಳಿದರು.

    ವೈದ್ಯರ ಪ್ರಕಾರ ಪಿಕಾ ಸಮಸ್ಯೆ ಸಾಮಾನ್ಯವಾಗಿ ಐರನ್ ಕೊರತೆಯ ಅನಿಮಿಯಾ ಸೇರಿದಂತೆ ಪೋಷಕಾಂಶಗಳ ಕೊರತೆಯೊಂದಿಗೆ ಸಂಬಂಧ ಹೊಂದಿರಬಹುದು. ಸಮಯಕ್ಕೆ ಸರಿಯಾದ ಚಿಕಿತ್ಸೆ ದೊರೆಯದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
    ಈ ಘಟನೆ ಮಕ್ಕಳ ಆಹಾರ ಅಭ್ಯಾಸಗಳ ಬಗ್ಗೆ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ.

    ಮಗುವಿನ ಕುಟುಂಬಕ್ಕೆ ಪೌಷ್ಟಿಕ ಆಹಾರ ಸಹಾಯ, ಮನೋವೈದ್ಯಕೀಯ ಮೌಲ್ಯಮಾಪನ ಹಾಗೂ ನಿಯಮಿತ ವೈದ್ಯಕೀಯ ಫಾಲೋ-ಅಪ್ ಸಲಹೆ ನೀಡಲಾಗಿದೆ.

  • ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ ಬೈರತಿ ಬಸವರಾಜ್.

    ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಕಾರ್ಯ ಶ್ಲಾಘನೀಯ ಬೈರತಿ ಬಸವರಾಜ್.

    ಕೆ.ಆರ್.ಪುರ: ಬಡಮಕ್ಕಳ ಶಿಕ್ಷಣಕ್ಕೆ ಪ್ರತಿಭಾ ಪುರಸ್ಕಾರದ ಮೂಲಕ ಆರ್ಥಿಕ ಸಹಾಯ ಮಾಡುವ ಕಾರ್ಯ ಶ್ಲಾಘನೀಯ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.

    ಕೆ.ಆರ್.ಪುರ ಹಾಗೂ ಆನಂದ ಪುರ ವಾರ್ಡನ ಪ್ರತಿಭಾನ್ವಿತ ಮಕ್ಕಳಿಗೆ ಸಮಾಜ ಸೇವಕ ಕೆ.ಹೆಂಮತ್( ಚಿನ್ನಿ) ಅವರ ತಾಯಿ ಸರಸ್ವತಮ್ಮ ಅವರ 65ನೇ‌ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಿ, ಉತ್ತಮ ಭವಿಷ್ಯ ನಿರ್ಮಾಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಅಗತ್ಯ ಎಂದರು.

    ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 15 ಸಾವಿರ,ಶೇ.90ಅಂಕ ಪಡೆದವರಿಗೆ 10ಸಾವಿರ ನೀಡುವ ಮೂಲಕ ಮುಂದಿನ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದಾರೆ ಎಂದು ತಿಳಿಸಿದರು.

    ಸಮಾಜಮುಖಿ ಕಾರ್ಯಗಳ ಮೂಲಕ ಸಮಾಜಕ್ಕೆ ಸೇವೆ ಮಾಡುತ್ತಿರುವ ಹೆಂಮತ್ ಕಾರ್ಯ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ ಎಂದು ಹೇಳಿದರು.

    ಆಯೋಜಕ ಕೆ.ಹೆಂಮತ್ ಅವರು ಮಾತನಾಡಿ ನನ್ನ ತಾಯಿ ಸರಸ್ವತಮ್ಮ ಅವರ ಹುಟ್ಟುಹಬ್ಬ ವನ್ನು ಜನೋಪಕಾರಿ ಆಚರಣೆ ಮಾಡುವ ಉದ್ದೇಶದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಶೇ.95 ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ 15 ಸಾವಿರ,ಶೇ.90ಅಂಕ ಪಡೆದವರಿಗೆ 10ಸಾವಿರ ಅಂತೆ 82 ಮಕ್ಕಳಿಗೆ ವಿತರಣೆ ಮಾಡಲಾಗಿದೆ,ಸರ್ಕಾರಿ ಶಾಲೆಯ ಮಕ್ಕಳಿಗೆ 600 ಬ್ಯಾಗ್ ನೋಟ್ ಪುಸ್ತಕ ಹಾಗೂ 7ನೇ ತರಗತಿ ಮಕ್ಕಳಿಗೂ ಪ್ರತಿಭಾಪುರಸ್ಕಾರ ನೀಡಲಾಗಿದೆ ಎಂದು ತಿಳಿಸಿದರು.

    ಕೆ.ಆರ್.ಪುರ ಸುತ್ತ ಮುತ್ತ ಇರುವ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲೆ ಆರಂಭವಾದ ಬಳಿಕ 1 ಸಾವಿರ ಬ್ಯಾಗ್ ಗಳನ್ನ ನೀಡಲಾಗುವುದು ಎಂದು ತಿಳಿಸಿದರು.

    ಈ ಕಾರ್ಯಕ್ರಮದಲ್ಲಿ ನ್ಯೂಬಾಲ್ಡ್ ವಿನ್ ಶಾಲೆಯ ಅಧ್ಯಕ್ಷ ವೇಣುಗೋಪಾಲ, ಬ್ರಹ್ಮನ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ,ಮಾಜಿ ಪಾಲಿಕೆ ಸದಸ್ಯರಾದ ಗೀತಾವಿವೇಕಾನಂದ,ಎಸ್.ಜಿ.ನಾಗರಾಜ್, ಎಸ್.ಎಸ್.ಪ್ರಸಾದ್,ಮಂಜುಳಾದೇವಿ ಮುಖಂಡರಾದ ಮೋಹನ್,ಗೌರಮ್ಮ, ಶ್ರೀರಾಮುಲು,ಉಮಾಶಂಕರ್,ಶಿವಪ್ಪ,ಗಿರೀಶ್ ಬಾಬು,ಜಗದೀಶ್ ಇದ್ದರು.