Author: Dharmaraju

  • ಇನ್‌ಸ್ಟಾಗ್ರಾಮ್ ನಲ್ಲಿ ಅರಳಿದ ಪ್ರೀತಿ, ಲಿವ್-ಇನ್ ಬದುಕು.. ಹೆಣವಾದ ಯುವಕ: ಪರಾರಿಯಾದ ಇಬ್ಬರು ಮಕ್ಕಳ ತಾಯಿ!

    ಇನ್‌ಸ್ಟಾಗ್ರಾಮ್ ನಲ್ಲಿ ಅರಳಿದ ಪ್ರೀತಿ, ಲಿವ್-ಇನ್ ಬದುಕು.. ಹೆಣವಾದ ಯುವಕ: ಪರಾರಿಯಾದ ಇಬ್ಬರು ಮಕ್ಕಳ ತಾಯಿ!

    ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೇಮಕಥೆಯೊಂದು ದುರಂತ ಅಂತ್ಯ ಕಂಡಿದೆ. ಸಂಸಾರ, ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಲಿವ್-ಇನ್‌ನಲ್ಲಿದ್ದ ಮಹಿಳೆಯ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ.

    ಚಿತ್ರದುರ್ಗ ಮೂಲದ ತಿಪ್ಪೇಸ್ವಾಮಿ (28) ಮೃತ ದುರ್ದೈವಿ. ಈತ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ದಾವಣಗೆರೆ ಮೂಲದ ಮಹಿಳೆಯ ಪರಿಚಯವಾಗಿತ್ತು. ಆಕೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಇನ್‌ಸ್ಟಾಗ್ರಾಮ್ ಪ್ರೇಮದ ಅಮಲಿನಲ್ಲಿ ಪತಿ ಮತ್ತು ಮಕ್ಕಳನ್ನು ತೊರೆದು ತಿಪ್ಪೇಸ್ವಾಮಿ ಜೊತೆ ಬೆಂಗಳೂರಿಗೆ ಬಂದಿದ್ದಳು.

    ಕಳೆದ ಎರಡು ತಿಂಗಳ ಹಿಂದಷ್ಟೇ ಬೆಂಗಳೂರಿನ ಶ್ರೀಗಂಧ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದ ಈ ಜೋಡಿ, ತಾವು ಗಂಡ-ಹೆಂಡತಿ ಎಂದು ನಂಬಿಸಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆದರೆ, ಸುಂದರವಾಗಿದ್ದ ಈ ಸಂಬಂಧದಲ್ಲಿ ಕೆಲವೇ ದಿನಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು.

    ಪತಿ-ಮಕ್ಕಳನ್ನು ಬಿಟ್ಟು ಬಂದಿದ್ದ ಮಹಿಳೆ, ಇತ್ತೀಚೆಗೆ ತಿಪ್ಪೇಸ್ವಾಮಿಗೆ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದಳಂತೆ. “ನಿನ್ನಿಂದ ನನ್ನ ಮೆಂಟೇನೆನ್ಸ್ (ಖರ್ಚು) ಭರಿಸಲು ಸಾಧ್ಯವಿಲ್ಲ, ನನ್ನನ್ನು ಬಿಟ್ಟುಬಿಡು” ಎಂದು ಆಕೆ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಮನೆಯಲ್ಲೇ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾನೆ.

    ಯುವಕ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಗಾಬರಿಯಾದ ಮಹಿಳೆ ನಾಪತ್ತೆಯಾಗಿದ್ದಾಳೆ. ಮಗನ ಸಾವಿಗೆ ಈ ಮಹಿಳೆಯೇ ಕಾರಣ ಎಂದು ತಿಪ್ಪೇಸ್ವಾಮಿ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಕ್ಷಣಿಕ ಸುಖದ ಪ್ರೀತಿ ಮತ್ತು ಸೋಶಿಯಲ್ ಮೀಡಿಯಾ ಮೋಹದ ಹಿಂದೆ ಬಿದ್ದಾಗ ಸುಂದರ ಬದುಕುಗಳು ಹೇಗೆ ಹಳಿ ತಪ್ಪುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.

  • IFS ಫಲಿತಾಂಶ ಪ್ರಕಟ: ಅಥಣಿಯ ರೈತನ ಮಗ ದೇಶಕ್ಕೆ ಫಸ್ಟ್ ರ‍್ಯಾಂಕ್.

    IFS ಫಲಿತಾಂಶ ಪ್ರಕಟ: ಅಥಣಿಯ ರೈತನ ಮಗ ದೇಶಕ್ಕೆ ಫಸ್ಟ್ ರ‍್ಯಾಂಕ್.

    ಬೆಂಗಳೂರು: ಕೇಂದ್ರ ಲೋಕಸೇವಾ ಆಯೋಗವು ಭಾರತೀಯ ಅರಣ್ಯ ಸೇವೆ (ಇಂಡಿಯನ್ ಫಾರೆಸ್ಟ್ ಸರ್ವೀಸ್) ಪರೀಕ್ಷೆಯ ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದ್ದು, ಕನ್ನಡಿಗನಿಗೆ ಪ್ರಥಮ ರ‍್ಯಾಂಕ್ ಲಭಿಸಿದೆ.

    ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ ಬಸವರಾಜ್ ದರೇಪ್ಪ ಕೆಂಪವಾಡ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಸಾಮಾನ್ಯ ರೈತನ ಮಗನ ಅದ್ವಿತೀಯ ಸಾಧನೆಗೆ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ.

    ಸತತ ಪರಿಶ್ರಮದಿಂದ ಬಸವರಾಜ್ ಅವರು ಕೇವಲ ತಮ್ಮ ಎರಡನೇ ಪ್ರಯತ್ನದಲ್ಲಿಯೇ ಟಾಪರ್ ಆಗಿದ್ದಾರೆ. ಇವರ ಅಪ್ರತಿಮ ಸಾಧನೆಯಿಂದ ಕುಟುಂಬಸ್ಥರಲ್ಲಿ ಹಾಗೂ ಸವದಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

    ಸಾಮಾನ್ಯ ರೈತನ ಪುತ್ರನಾಗಿರುವ ಬಸವರಾಜ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಸವದಿ ಗ್ರಾಮದಲ್ಲೇ ಪೂರೈಸಿದ್ದರು. ಬಳಿಕ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮುಂದಿನ ವಿದ್ಯಾಭ್ಯಾಸ ಮುಗಿಸಿ ನಂತರ ಶಿರಸಿಯ ಕಾಲೇಜಿನಲ್ಲಿ ಪದವಿ ವ್ಯಾಸಂಗ ಪಡೆದರು. ಪದವಿ ನಂತರ ಬೆಂಗಳೂರಿನಲ್ಲಿ ಯುಪಿಎಸ್ಸಿ ಪರೀಕ್ಷೆಗಾಗಿ ಕಠಿಣ ಸಿದ್ಧತೆ ನಡೆಸಿದ್ದರು

  • ಮಹೀಂದ್ರಾ ಥಾರ್ ಹರಿದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು.!!!

    ಮಹೀಂದ್ರಾ ಥಾರ್ ಹರಿದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು.!!!

    ರಾಯಚೂರು: ಮಹೀಂದ್ರಾ ಥಾರ್ ಹರಿದು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ಘಟನೆ ನಡೆದಿದೆ.

    ಅರಗಿನಮರ ಕ್ಯಾಂಪ್‌ನ ವಿದ್ಯಾರ್ಥಿನಿ ಭೂಮಿಕಾ (17) ಮೃತ ದುರ್ದೈವಿ. ಮೇಘನಾ, ಮಹೇಶ್ವರಿ, ಜಹೀದಾ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯರು.

    ಕಾಲೇಜು ಮುಗಿದು ವಿದ್ಯಾರ್ಥಿನಿಯರು ಮನೆಗೆ ತೆರಳುತ್ತಿದ್ದರು, ಈ ವೇಳೆ ರಿವರ್ಸ್ ತೆಗೆದುಕೊಳ್ಳುವಾಗ ಚಾಲಕನ ಅಜಾಗೂರಕತೆಯಿಂದ ವಾಹನ ವಿದ್ಯಾರ್ಥಿನಿಯರ ಮೇಲೆ ಹರಿದಿದೆ. ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇನ್ನೂ ಮೂವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸದ್ಯ ಸಿಂಧನೂರು ಸಂಚಾರ ಠಾಣೆ ಪೊಲೀಸರು ವಾಹನ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ವಿದ್ಯಾರ್ಥಿನಿಯರಿಗೆ ಖಾಸಗಿ ಆಸ್ಪತ್ರೆ ಚಿಕಿತ್ಸೆ ಮುಂದುವರಿದಿದೆ. ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

  • ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ. ಕ್ಷೇತ್ರದಲ್ಲಿ ಪೂರ್ವಸಿದ್ಧತಾ ಸಭೆ

    ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ. ಕ್ಷೇತ್ರದಲ್ಲಿ ಪೂರ್ವಸಿದ್ಧತಾ ಸಭೆ

    ಮಹದೇವಪುರ: ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ವತಿಯಿಂದ ಮಾರತ್ತಹಳ್ಳಿಯ ಎಸ್‌.ಬಿ.ಆರ್. ಪ್ಯಾಲೆಸ್‌ನಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಉಪಸ್ಥಿತಿಯಲ್ಲಿ ಪೂರ್ವಸಿದ್ಧತಾ ಸಭೆ ನಡೆಯಿತು.

    ಈ ವೇಳೆ ಮಾತನಾಡಿದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಅವರು, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಇದೇ ಮೇ 10ರಂದು ನಡೆಯಲಿರುವ 45ನೇ ವಾರ್ಷಿಕೋತ್ಸವ ಹಾಗೂ ಶ್ರೀ ರವಿಶಂಕರ್ ಗುರೂಜಿಯ ವರ 70ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.


    ಪ್ರಧಾನಮಂತ್ರಿಯವರ ಭೇಟಿಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕ್ಷೇತ್ರದ ಎಲ್ಲಾ ವಾರ್ಡ್ ಮಟ್ಟದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು. ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲ ಎರಡೂ ಮಂಡಲಗಳ
    ವಾರ್ಡ್ ಅಧ್ಯಕ್ಷರುಗಳು ಹಾಗೂ ಎಲ್ಲಾ ಮುಖಂಡರುಗಳು ಜನರನ್ನು ಸೇರಿಸುವ ಜವಾಬ್ದಾರಿ ಹೊತ್ತು ಕಾರ್ಯನಿರ್ವಹಿಸಬೇಕು ಎಂದರು.

    ಸಮರ್ಪಕವಾಗಿ ಪ್ರತಿಯೊಬ್ಬರೂ ತಮಗೆ ನೀಡಿರುವ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

    ನಗರ ಮಂಡಲ ಅಧ್ಯಕ್ಷ ಎನ್.ಆರ್. ಶ್ರೀಧರ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಎಚ್.ಎಸ್. ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್, ಮುಖಂಡರಾದ ಲೋಕನಾಥ್ ರೆಡ್ಡಿ, ಯಮಲೂರು ಲೋಕೇಶ್, ಬೈರತಿ ಕುಮಾರ್, ನಾಗೇಶ್ ರೆಡ್ಡಿ, ಕೆ.ವಿ. ನಾಗರಾಜ್, ಮಂಜುನಾಥ್, ಇತರರು ಉಪಸ್ಥಿತರಿದ್ದರು

  • ಬಿಎಸ್ ವೈ ರನ್ನ ಕೆಳಗಿಳಿಸಿದವರೇ ಅವರ ಅಭಿಮಾನೋತ್ಸವ ಮಾಡುತ್ತಿದ್ದಾರೆಂದ ಸಚಿವ ಸತೀಶ್‌ ಜಾರಕಿಹೊಳಿ

    ಬಿಎಸ್ ವೈ ರನ್ನ ಕೆಳಗಿಳಿಸಿದವರೇ ಅವರ ಅಭಿಮಾನೋತ್ಸವ ಮಾಡುತ್ತಿದ್ದಾರೆಂದ ಸಚಿವ ಸತೀಶ್‌ ಜಾರಕಿಹೊಳಿ

    ದಾವಣಗೆರೆ: ರಾಜ್ಯ ರಾಜಕಾರಣದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣದ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿರುವ ‘ಅಭಿಮಾನೋತ್ಸವ’ ಕಾರ್ಯಕ್ರಮದ ಕುರಿತು ಸಚಿವ ಸತೀಶ್ ಜಾರಕಿಹೊಳಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

    ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದವರೇ ಇಂದು ಅವರ ಅಭಿಮಾನೋತ್ಸವ ಮಾಡುತ್ತಿರುವುದು ರಾಜಕೀಯ ವಿಪರ್ಯಾಸ ಎಂದು ಅವರು ಲೇವಡಿ ಮಾಡಿದ್ದಾರೆ. “ಬಿಜೆಪಿಯಲ್ಲಿ ಬಿಎಸ್‌ವೈ ಅವರನ್ನು ಮೂಲೆಗುಂಪು ಮಾಡಿದವರು ಮತ್ತು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದವರೇ ಇಂದು ಅವರ ಹೆಸರಿನಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದು ಕೇವಲ ಚುನಾವಣಾ ಗಿಮಿಕ್” ಎಂದು ಟೀಕಿಸಿದ್ದಾರೆ.

    ಹೈಕಮಾಂಡ್ ಹೇಳಿದರೆ ಐದು ವರ್ಷವೂ ನಾನೇ ಸಿಎಂ ಆಗಿರುತ್ತೇನೆ ಎಂಬ ಸಿದ್ದರಾಮಯ್ಯನವರ ಹೆಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯನವರು ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಪದೇ ಪದೇ ಚರ್ಚೆ ಮಾಡುವ ಅಗತ್ಯವಿಲ್ಲ.ಹೈಕಮಾಂಡ್ ನಿರ್ಧಾರವೇ ಅಂತಿಮ, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ ಎಂದು ತಿಳಿಸಿದ್ದಾರೆ

  • ಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ: 20 ಪ್ರಯಾಣಿಕರ ಜೀವ ಉಳಿಸಿ ಪ್ರಾಣ ಬಿಟ್ಟ ಚಾಲಕ.

    ಬಸ್ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ: 20 ಪ್ರಯಾಣಿಕರ ಜೀವ ಉಳಿಸಿ ಪ್ರಾಣ ಬಿಟ್ಟ ಚಾಲಕ.

    ಮಡಿಕೇರಿ: ಚಲಿಸುತ್ತಿದ್ದ ಬಸ್‌ನಲ್ಲೇ ಚಾಲಕನಿಗೆ ಹೃದಯಾಘಾತ ಸಂಭವಿಸಿ ಸ್ಥಳದಲ್ಲೇ ಮೃತಪಟ್ಟ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ 20 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಮೃತರನ್ನು ಬೆಂಗಳೂರು ಮೂಲದ ಶಿವಕುಮಾರ್ (50) ಎಂದು ಗುರುತಿಸಲಾಗಿದೆ. ಮಡಿಕೇರಿಯಿಂದ ಸುಳ್ಯದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಇಂದು ಮುಂಜಾನೆ 4:45ರ ಸುಮಾರಿಗೆ ತಾಳತ್ತಮನೆ ತಲುಪಿದಾಗ ಈ ಘಟನೆ ಸಂಭವಿಸಿದೆ. ಚಾಲನೆ ಮಾಡುತ್ತಿದ್ದಾಗಲೇ ಶಿವಕುಮಾರ್ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯ ಬಲಬದಿಯ ದರೆಗೆ (ಗುಡ್ಡದ ಅಂಚು) ಢಿಕ್ಕಿ ಹೊಡೆದು ವಾಲಿ ನಿಂತಿದೆ.ಬಸ್ ವೇಗವಾಗಿ ಚಲಿಸುತ್ತಿದ್ದರೂ ದೊಡ್ಡ ಮಟ್ಟದ ಅನಾಹುತ ಸಂಭವಿಸದೆ, ದರೆಗೆ ತಾಗಿ ನಿಂತಿದ್ದರಿಂದ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ಘಟನೆ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಶಿವಕುಮಾರ್ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ಚಾಮರಾಜನಗರ : ಹೇರ್ ಕಟಿಂಗ್ ಸಲೂನ್‌ನಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!

    ಚಾಮರಾಜನಗರ : ಹೇರ್ ಕಟಿಂಗ್ ಸಲೂನ್‌ನಲ್ಲಿ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!

    ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಗ್ರಾಮದಲ್ಲಿ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ನಡೆದಿದೆ. ಇಲ್ಲಿನ ದೇವರಾಜ್ ಎಂಬುವವರ ಸಲೂನ್‌ಗೆ ಮಂಗವೊಂದು ಬಂದು, ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡು ಎಲ್ಲರ ಗಮನ ಸೆಳೆದಿದೆ.

    ದಿನನಿತ್ಯ ಸಲೂನ್ ಬಳಿ ಬರುತ್ತಿದ್ದ ಈ ಮಂಗ, ಒಳಗೆ ಬಂದು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಿತ್ತು. ಎಷ್ಟೇ ಗದರಿಸಿದರೂ ಕ್ಷೌರಿಕನ ಕೆಲಸ ಮುಗಿಯುವ ವರೆಗೂ ಅಲ್ಲಿಂದ ಕದಲುತ್ತಿರಲಿಲ್ಲ. ಮಂಗನ ಈ ನಡೆ ಗಮನಿಸಿದ ಸಲೂನ್ ಮಾಲೀಕ ದೇವರಾಜ್, ಪ್ರೀತಿಯಿಂದ ಅದರ ತಲೆ ಬಾಚಿದ್ದಾರೆ.

    ಬಳಿಕ ಕೇಶ ವಿನ್ಯಾಸ ಮಾಡುವಂತೆ ನಟಿಸಿ ತಲೆ ಬಾಚಿದಾಗ, ಮಂಗ ಯಾವುದೇ ಗಲಾಟೆ ಮಾಡದೆ ಗಂಭೀರವಾಗಿ ಕುಳಿತು ಕೇಶ ವಿನ್ಯಾಸ ಮಾಡಿಸಿಕೊಂಡಿದೆ. ಪ್ರಾಣಿ ಮತ್ತು ಮನುಷ್ಯನ ನಡುವಿನ ಈ ಅಪರೂಪದ ಸ್ನೇಹದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  • ಸಾಲ ಕೊಟ್ಟ ವೃದ್ಧೆಗೆ ಅಪಘಾತ : ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು.!

    ಸಾಲ ಕೊಟ್ಟ ವೃದ್ಧೆಗೆ ಅಪಘಾತ : ಮಹಿಳೆ ಮೃತಪಟ್ಟ 2 ದಿನಕ್ಕೆ ಕೊಲೆ ಆರೋಪಿ ಅನಾರೋಗ್ಯದಿಂದ ಸಾವು.!

    ಬೆಂಗಳೂರು: ಹಣಕ್ಕಾಗಿ ಸಾಲ ಕೊಟ್ಟ ಮಹಿಳೆಯನ್ನ ಆಕ್ಸಿಡೆಂಟ್ ಮಾಡಿ ಆಸ್ಪತ್ರೆಗೆ ಸೇರಿಸುವ ನೆಪದಲ್ಲಿ ಮನೆ ಕೀ ಪಡೆದು ಹಣಕ್ಕಾಗಿ ಮನೆಯೆಲ್ಲಾ ಹುಡುಕಾಟ ಮಾಡಿದ ಗ್ಯಾಂಗ್. ಇತ್ತ ಆಕ್ಸಿಡೆಂಟ್ ಆದ ಮಹಿಳೆ ಸಾವನ್ನಪ್ಪಿದ ಬಳಿಕ ಇದು ಆಕ್ಸಿಡೆಂಟ್ ಅಲ್ಲ ಕೊಲೆ ಅಂತಾ ಕನ್ಫರ್ಮ್ ಆಗಿ ಐವರ ಬಂಧನ ಮಾಡಲಾಗಿತ್ತು. ವಿಧಿಯಾಟ ಅಂದ್ರೆ ಆಕ್ಸಿಡೆಂಟ್ ಆಗಿ ಸಾವನ್ನಪ್ಪಿದ ವೃದ್ದೆಯ ಪೋಸ್ಟ್ ಮಾರ್ಟಂ ದಿನವೇ ಆರೋಪಿ ಪೊಲೀಸ್ ವಶದಲ್ಲಿದ್ದಾಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

    ಹೌದು. ಕಷ್ಟ ಅಂತ ಹೇಳಿ ಕಾಡಿ ಬೇಡಿ ವೃದ್ಧೆಯ ಬಳಿ ಆತ ಸಾಲ ಪಡೆದಿದ್ದ. ಆದರೆ, ಹಣ ವಾಪಸ್ ನೀಡಿರಲಿಲ್ಲ. ಹಣ ವಾಪಸ್ ಕೊಡುವಂತೆ ಪೀಡಿಸಿದಾಗ ಆತ ಮಾಡಿದ ಕೆಲಸ ನಿಜಕ್ಕೂ ಆಘಾತಾಕಾರಿ. ವೃದ್ಧೆಗೆ ಅಪಘಾತವೆಸಗಿ ಆಕೆಯ ಮನೆಯಲ್ಲೇ ಮತ್ತೆ ಹಣ ದೋಚೋ ಪ್ಲ್ಯಾನ್‌ ಮಾಡಿ ಜೈಲು ಸೇರಿದ ಕಿರಾತಕರ ಕತೆ ಇದು.

    ಆಕೆ ಹೇಳಿ ಕೇಳಿ ಒಂಟಿ ಮಹಿಳೆ. ಜೀವನಕ್ಕೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ಒಂದಷ್ಟು ಹಣ ಕೂಡಿಸಿ ಜೀವನ ನಡೆಸ್ತಿದ್ಲು. ಆದ್ರೆ ಹಣಕ್ಕಾಗಿ ಕಿರಾತಕರು ಭರ್ಜರಿ ಪ್ಲಾನ್ ಮಾಡಿ ವೃದ್ಧೆಗೆ ಅಪಘಾತವೆಸಗಿ ಕೊಲೆ ಮಾಡಿದ್ರು. ಪೊಲೀಸರ ತನಿಖೆಯಲ್ಲಿ ಐದು ಮಂದಿ ಗ್ಯಾಂಗ್ ನ ಘನಘೋರ ಕೃತ್ಯ ಬಟಾಬಯಲಾಗಿದೆ.

    ಹಣಕ್ಕಾಗಿ ಮಹಿಳೆಯ ಜೀವವನ್ನೇ ತೆಗೆದು ಐವರು ಕಿರಾತಕರನ್ನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಏಪ್ರಿಲ್‌ 21ರಂದು ಕುರುಬರಹಳ್ಳಿಯ ಪೈಪ್ ಲೇನ್ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದು ಮಹಿಳೆ ವಿಜಯಲಕ್ಷ್ಮಿ ಸಾವನ್ನಪ್ಪಿದ್ದರು. ಆದರೆ ಇದು ಕೇವಲ ಅಪಘಾತವಲ್ಲ ಉದ್ದೇಶಪೂರ್ವಕ ಕೊಲೆ ಅಂತಾ ಐವರು ಆರೋಪಿಗಳಾದ ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್, ಯೋಹಾನ್ ನನ್ನ ಬಂಧನ ಮಾಡಲಾಗಿದೆ..

       ಆಕ್ಸಿಡೆಂಟ್, ಕಳ್ಳತನ, ಕೊಲೆ – ತ್ರಿಕೋನ ಕಥೆ

    ರಸ್ತೆಯಲ್ಲಿ ನಡೆದು ಹೋಗ್ತಿದ್ದ ವಿಜಯಲಕ್ಷ್ಮಿಗೆ ರಾಕೇಶ್ ಬೈಕ್ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದ. ಅದೇ ವೇಳೆಗೆ ಆಟೋದಲ್ಲಿ ಬಂದ ಪ್ರದೀಪ್, ಯೋಹಾನ್, ಮಂಜುನಾಥ್ ಎಲ್ಲರು ಸೇರಿ ವಿಜಯಲಕ್ಷ್ಮಿಯನ್ನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

    ಈ ವೇಳೆ ಮಂಜುನಾಥ್ ವಿಜಯಲಕ್ಷ್ಮಿ ಪರ್ಸ್ ನಲ್ಲಿದ್ದ ಮನೆ ಕೀ ತೆಗೆದುಕೊಂಡು ನೇರವಾಗಿ ಆಕೆಯ ಮನೆಗೆ ಬಂದು ಹಣ, ಚಿನ್ನಾಭರಣ ಹುಡುಕುತ್ತಿದ್ನಂತೆ. ಅನುಮಾನ ಬಂದ ಅಕ್ಕಪಕ್ಕದ ಮನೆಯವರು ಪ್ರಶ್ನೆ ಮಾಡಿದಾಗ, ವಿಜಯಲಕ್ಷ್ಮಿಗೆ ಆಕ್ಸಿಡೆಂಟ್ ಆಗಿದೆ, ಹೀಗಾಗಿ ಆಕೆ ಆಧಾರ್ ಕಾರ್ಡ್ ಬೇಕಿತ್ತು ಎಂದು ಸುಳ್ಳು ಹೇಳಿದ್ದಾರೆ. ಅಕ್ಕಪಕ್ಕದ ಮನೆಯವರು ಹೆಚ್ಚು ಪ್ರಶ್ನೆ ಮಾಡಿದಾಗ ಮಂಜುನಾಥ ಅಲ್ಲಿಂದ ಪರಾರಿಯಾಗಿದ್ದಾನೆ.

    ಅತ್ತ ವಿಜಯಲಕ್ಷ್ಮಿ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿದ್ದು, ಈ ವೇಳೆ ಆರೋಪಿ ರಾಕೇಶ್ ತಾನೇ ವಿಜಯನಗರ ಸಂಚಾರಿ ಪೊಲೀಸರಿಗೆ ದೂರು ಕೊಟ್ಟು, ಪರಿಚಯಸ್ಥ ವಿಜಯಲಕ್ಷ್ಮಿಯನ್ನ ತಾನೇ ಕಾಪಾಡಿದ್ದೇನೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಕ್ರಮ ತೆಗೆದುಕೊಳ್ಳಿ ಅಂತಾ ದೂರು ನೀಡಿದ್ದಾನೆ.

    ಇತ್ತ 2 ದಿನದ ಬಳಿಕ ಘಟನೆಯಲ್ಲಿ ಪೊಲೀಸರಿಗೆ ಅನುಮಾನ ಬಂದಿದ್ದು, ವಿಜಯಲಕ್ಷ್ಮೀ ಮನೆ ಮಾಲೀಕ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕಳ್ಳತನ ಯತ್ನದ ದೂರು ನೀಡಿದ್ದಾರೆ. ಈ ಕೇಸ್ ತನಿಖೆಗೆ ಇಳಿದ ಪೊಲೀಸರಿಂದ ಅಸಲಿ ಕಥೆ ಬಯಲಾಗಿದ್ದು, ತನಿಖೆ ವೇಳೆ ಉದ್ದೇಶಪೂರ್ವಕವಾಗಿ ಕೊಲೆ ಎಂಬುದು ಪತ್ತೆಯಾಗಿದೆ‌.

    ಆರೋಪಿ ಚೇತನ್, ವಿಜಯಲಕ್ಷ್ಮಿ ಬಳಿ ಹಣ ಸಾಲ ಪಡೆದಿದ್ದು, ಆಕೆ ಬಳಿ ಇನ್ನು ಹಣ ಇದೆ ಅಂತ ಕಳ್ಳತನಕ್ಕೆ ಸ್ಕೆಚ್ ಹಾಕಿದ್ನಂತೆ. ಇದಕ್ಕಾಗಿ ಪರಿಚಯಸ್ಥ ಮಂಜುನಾಥ್, ಇತರರನ್ನ ಸೇರಿಸಿಕೊಂಡು ಪ್ಲಾನ್ ಮಾಡಿದ್ದಾರೆ. ಪ್ಲಾನ್ ನಂತೆ ಡಿಕ್ಕಿ ಹೊಡೆದು ವಿಜಯಲಕ್ಷ್ಮಿಯನ್ನ ಕೊಲೆ‌ ಮಾಡಿರೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮಹಿಳೆ ಮೃತಳಾದ ಎರಡೇ ದಿನಕ್ಕೆ ಆರೋಪಿ ಮಂಜುನಾಥ್ ಕೂಡ ಅನಾರೋಗ್ಯದಿಂದ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಸಾವನ್ನಪ್ಪಿದ್ದಾನೆ.

    ಸದ್ಯ ಕೊಲೆ ಕೇಸ್ ದಾಖಲಿಸಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ತನಿಖೆ ಮುಂದುವರಿಸಿದ್ದು, ವೃದ್ಧೆ ಪೋಸ್ಟ್ ಮಾರ್ಟಂ ದಿನವೇ ಆರೋಪಿಯೊಬ್ಬ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

    ಸಾರಾಂಶ :ಅದಕ್ಕೇ ಹೇಳೋದು ಕರ್ಮ ರಿಟರ್ನ್ಸ್ ಅಂತಾ.. ಒಳ್ಳೇದು ಮಾಡಿದ್ರೆ ಒಳ್ಳೆದು ಬರುತ್ತೆ.. ಕೆಟ್ಟದ್ದು ಮಾಡಿದ್ರೆ ಕೆಟ್ಟದ್ದೇ ಸಿಗುತ್ತೆ.

  • ಇಂದಿನ ರಾಶಿಭವಿಷ್ಯ – 08 ಮೇ 2026.ಯಾವ ರಾಶಿಗೆ ಅನುಕೂಲ.ಯಾವ ರಾಶಿಗೆ ಲಾಭ.

    ಇಂದಿನ ರಾಶಿಭವಿಷ್ಯ – 08 ಮೇ 2026.ಯಾವ ರಾಶಿಗೆ ಅನುಕೂಲ.ಯಾವ ರಾಶಿಗೆ ಲಾಭ.

    ಇಂದಿನ ಪಂಚಾಂಗ – 08 ಮೇ 2026, ಶುಕ್ರವಾರ
    ವೈಶಾಖ ಮಾಸ
    ಸಂವತ್ಸರ: ಪರಾಭವ
    ಆಯನ: ಉತ್ತರಾಯಣ
    ಋತು: ವಸಂತ ಋತು
    ಮಾಸ: ವೈಶಾಖ ಮಾಸ
    ಪಕ್ಷ: ಕೃಷ್ಣ ಪಕ್ಷ

    ತಿಥಿ
    ಅಷ್ಟಮಿ ತಿಥಿ – ಮಧ್ಯಾಹ್ನದವರೆಗೆ
    ನಂತರ ನವಮಿ ತಿಥಿ ಆರಂಭ

    ನಕ್ಷತ್ರ
    ಶ್ರವಣ ನಕ್ಷತ್ರ – ಸಂಜೆವರೆಗೆ
    ನಂತರ ಧನಿಷ್ಠ ನಕ್ಷತ್ರ

    ಯೋಗ
    ಸಿದ್ಧಿ ಯೋಗ

    ಕರಣ
    ಬವ ಕರಣ
    ನಂತರ ಬಾಲವ ಕರಣ

    ಸೂರ್ಯೋದಯ / ಸೂರ್ಯಾಸ್ತ
    ಸೂರ್ಯೋದಯ: ಬೆಳಿಗ್ಗೆ 5:56
    ಸೂರ್ಯಾಸ್ತ: ಸಂಜೆ 6:34

    ಶುಭ ಸಮಯ
    ಅಭಿಜಿತ್ ಮುಹೂರ್ತ: ಮಧ್ಯಾಹ್ನ 11:50 ರಿಂದ 12:42
    ಅಮೃತ ಕಾಲ: ಸಂಜೆ ವೇಳೆಯಲ್ಲಿ ಶುಭ
    —
    ಅಶುಭ ಸಮಯ
    ರಾಹುಕಾಲ: ಬೆಳಿಗ್ಗೆ 10:30 ರಿಂದ 12:00
    ಯಮಗಂಡ ಕಾಲ: ಮಧ್ಯಾಹ್ನ 3:00 ರಿಂದ 4:30
    ಗುಳಿಕ ಕಾಲ: ಬೆಳಿಗ್ಗೆ 7:30 ರಿಂದ 9:00
    —

    ಇಂದಿನ ವಿಶೇಷ:
    ಇಂದು ದೇವರ ಆರಾಧನೆ, ಪೂಜೆ, ಧಾರ್ಮಿಕ ಕಾರ್ಯಗಳಿಗೆ ಉತ್ತಮ ದಿನ. ಕುಟುಂಬದೊಂದಿಗೆ ಸಮಯ ಕಳೆಯಲು ಹಾಗೂ ಹೊಸ ಯೋಜನೆಗಳನ್ನು ಆರಂಭಿಸಲು ಸಾಮಾನ್ಯವಾಗಿ ಅನುಕೂಲಕರ ದಿನವಾಗಿದೆ.

    ಇಂದಿನ ಶುಭ ಬಣ್ಣ: ಬಿಳಿ
    ಇಂದಿನ ಶುಭ ಸಂಖ್ಯೆ: 6

    ಮೇಷ (Aries)
    ಇಂದು ಕೆಲಸಗಳಲ್ಲಿ ವೇಗ ಹೆಚ್ಚಾಗುತ್ತದೆ. ಹಿಂದೆ ನಿಂತಿದ್ದ ಕೆಲಸಗಳು ಮತ್ತೆ ಚಲನೆ ಪಡೆಯಬಹುದು. ಉದ್ಯೋಗದಲ್ಲಿರುವವರಿಗೆ ಹಿರಿಯರಿಂದ ಒಳ್ಳೆಯ ಮಾತು ಸಿಗಬಹುದು. ಹಣಕಾಸಿನ ವಿಷಯದಲ್ಲಿ ಖರ್ಚು ಹೆಚ್ಚಾದರೂ ಅಗತ್ಯಕ್ಕೆ ತಕ್ಕಂತೆ ಹಣ ಸಿಗುತ್ತದೆ. ಕುಟುಂಬದಲ್ಲಿ ಸಣ್ಣ ಮಾತಿನ ಭಿನ್ನಾಭಿಪ್ರಾಯಗಳು ಉಂಟಾಗಬಹುದು, ಆದರೆ ಸಂಜೆ ವೇಳೆಗೆ ಶಾಂತಿ ಬರುತ್ತದೆ. ಆರೋಗ್ಯದಲ್ಲಿ ತಲೆನೋವು ಅಥವಾ ದಣಿವು ಕಾಣಿಸಬಹುದು.
    ಶುಭ ಬಣ್ಣ: ಕೆಂಪು
    ಶುಭ ಸಂಖ್ಯೆ: 9

    ವೃಷಭ (Taurus)

    ಮನಸ್ಸಿನಲ್ಲಿ ಗೊಂದಲ ಇದ್ದರೂ ಇಂದು ನಿರ್ಧಾರಗಳನ್ನು ಶಾಂತವಾಗಿ ತೆಗೆದುಕೊಳ್ಳುವುದು ಮುಖ್ಯ. ವ್ಯವಹಾರದಲ್ಲಿ ಹೊಸ ಅವಕಾಶಗಳು ಕಾಣಿಸಬಹುದು. ಹಳೆಯ ಸ್ನೇಹಿತರಿಂದ ಸಹಾಯ ಸಿಗುವ ಸಾಧ್ಯತೆ ಇದೆ. ಕುಟುಂಬದವರ ಜೊತೆ ಸಮಯ ಕಳೆಯುವುದು ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಅನಾವಶ್ಯಕ ಖರ್ಚು ತಪ್ಪಿಸಿ.
    ಶುಭ ಬಣ್ಣ: ಬಿಳಿ
    ಶುಭ ಸಂಖ್ಯೆ: 6

    ಮಿಥುನ (Gemini)

    ಇಂದು ಮಾತಿನ ಮೂಲಕ ಲಾಭ ಪಡೆಯುವ ದಿನ. ನಿಮ್ಮ ಮಾತು ಮತ್ತು ಬುದ್ಧಿವಂತಿಕೆ ಇತರರನ್ನು ಆಕರ್ಷಿಸುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಬರಬಹುದು. ಪ್ರೀತಿಯ ವಿಷಯದಲ್ಲಿ ಸ್ಪಷ್ಟತೆ ಅಗತ್ಯ. ಆರೋಗ್ಯದಲ್ಲಿ ಅಜೀರ್ಣ ಸಮಸ್ಯೆ ಕಾಣಿಸಬಹುದು.
    ಶುಭ ಬಣ್ಣ: ಹಸಿರು
    ಶುಭ ಸಂಖ್ಯೆ: 5

    ಕಟಕ (Cancer)

    ಕುಟುಂಬದ ವಿಷಯಗಳು ಇಂದು ಮುಖ್ಯವಾಗಿರುತ್ತವೆ. ಮನೆಯಲ್ಲಿ ಶುಭಕಾರ್ಯದ ಚರ್ಚೆ ನಡೆಯಬಹುದು. ಉದ್ಯೋಗದಲ್ಲಿರುವವರು ಒತ್ತಡ ಅನುಭವಿಸಬಹುದು. ಸಹೋದ್ಯೋಗಿಗಳೊಂದಿಗೆ ಜಾಗ್ರತೆ ಅಗತ್ಯ. ಹಣದ ವಿಚಾರದಲ್ಲಿ ಲಾಭ ಇದ್ದರೂ ಸಾಲ ಕೊಡಬೇಡಿ. ರಾತ್ರಿ ಸಮಯದಲ್ಲಿ ಒಳ್ಳೆಯ ಸುದ್ದಿ ಸಿಗಬಹುದು.
    ಶುಭ ಬಣ್ಣ: ಬೆಳ್ಳಿ ಬಣ್ಣ
    ಶುಭ ಸಂಖ್ಯೆ: 2

    ಸಿಂಹ (Leo)

    ನಿಮ್ಮ ಆತ್ಮವಿಶ್ವಾಸ ಇಂದು ಹೆಚ್ಚು ಇರುತ್ತದೆ. ಹೊಸ ಕೆಲಸ ಆರಂಭಿಸಲು ಉತ್ತಮ ದಿನ. ರಾಜಕೀಯ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಹೆಸರು ಬರುತ್ತದೆ. ದಾಂಪತ್ಯ ಜೀವನದಲ್ಲಿ ಸಣ್ಣ ಅಸಮಾಧಾನ ಇರಬಹುದು. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ.
    ಶುಭ ಬಣ್ಣ: ಬಂಗಾರದ ಬಣ್ಣ
    ಶುಭ ಸಂಖ್ಯೆ: 1

    ಕನ್ಯಾ (Virgo)

    ಇಂದು ಸಹನೆಯಿಂದ ನಡೆದುಕೊಳ್ಳುವುದು ಮುಖ್ಯ. ಕೆಲಸಗಳಲ್ಲಿ ನಿಧಾನಗತಿ ಇದ್ದರೂ ಕೊನೆಗೆ ಫಲ ಸಿಗುತ್ತದೆ. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಿ. ಹಣಕಾಸಿನಲ್ಲಿ ಉಳಿವು ಮಾಡುವ ಯೋಚನೆ ಉತ್ತಮ ಫಲ ನೀಡುತ್ತದೆ. ಮಕ್ಕಳಿಂದ ಸಂತೋಷ ಸಿಗಬಹುದು.
    ಶುಭ ಬಣ್ಣ: ಹಸಿರು
    ಶುಭ ಸಂಖ್ಯೆ: 7

    ತುಲಾ (Libra)

    ಇಂದು ನಿಮಗೆ ಸಾಮಾಜಿಕ ಗೌರವ ಹೆಚ್ಚಾಗುವ ಸಾಧ್ಯತೆ ಇದೆ. ಹೊಸ ಪರಿಚಯಗಳು ಭವಿಷ್ಯದಲ್ಲಿ ಉಪಯೋಗಕ್ಕೆ ಬರಬಹುದು. ವ್ಯವಹಾರದಲ್ಲಿ ಉತ್ತಮ ಲಾಭ ಸಿಗಬಹುದು. ಪ್ರೇಮ ಜೀವನದಲ್ಲಿ ಸಂತೋಷದ ಕ್ಷಣಗಳು ಎದುರಾಗುತ್ತವೆ. ಅನಾವಶ್ಯಕ ಚಿಂತೆ ಬಿಡಿ.
    ಶುಭ ಬಣ್ಣ: ನೀಲಿ
    ಶುಭ ಸಂಖ್ಯೆ: 6

    ವೃಶ್ಚಿಕ (Scorpio)

    ಇಂದು ಭಾವನೆಗಳನ್ನು ನಿಯಂತ್ರಿಸುವುದು ಅಗತ್ಯ. ಕೋಪದಿಂದ ಸಂಬಂಧ ಹಾಳಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಪರ್ಧೆ ಹೆಚ್ಚಾಗಬಹುದು. ಹಣಕಾಸಿನಲ್ಲಿ ಉತ್ತಮ ಅವಕಾಶ ಸಿಗಬಹುದು. ಹಳೆಯ ಸಮಸ್ಯೆಗೆ ಪರಿಹಾರ ದೊರೆಯುವ ಸೂಚನೆ ಇದೆ.

    ಶುಭ ಬಣ್ಣ: ಕೆಂಪು
    ಶುಭ ಸಂಖ್ಯೆ: 8

    ಧನುಸ್ಸು (Sagittarius)

    ಪ್ರಯಾಣ ಯೋಗ ಕಾಣಿಸುತ್ತದೆ. ದೂರದ ವ್ಯಕ್ತಿಗಳಿಂದ ಲಾಭ ಸಿಗಬಹುದು. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಕೆಲಸದಲ್ಲಿ ಹೊಸ ಯೋಜನೆ ಆರಂಭಿಸಬಹುದು. ಆರೋಗ್ಯದಲ್ಲಿ ಸಾಮಾನ್ಯ ದಣಿವು ಕಾಣಿಸಬಹುದು. ದೇವರ ಆರಾಧನೆ ಮನಸ್ಸಿಗೆ ಶಾಂತಿ ನೀಡುತ್ತದೆ.
    ಶುಭ ಬಣ್ಣ: ಹಳದಿ
    ಶುಭ ಸಂಖ್ಯೆ: 3

    ಮಕರ (Capricorn)

    ಇಂದು ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ. ಹೂಡಿಕೆ ಮಾಡುವ ಮೊದಲು ಯೋಚಿಸಿ. ಕುಟುಂಬದ ಹಿರಿಯರ ಸಲಹೆ ಉಪಯೋಗಕ್ಕೆ ಬರುತ್ತದೆ. ಉದ್ಯೋಗದಲ್ಲಿ ಶ್ರಮ ಹೆಚ್ಚಾದರೂ ಫಲ ತಡವಾಗಿ ಸಿಗಬಹುದು. ರಾತ್ರಿ ವೇಳೆಗೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
    ಶುಭ ಬಣ್ಣ: ಕಪ್ಪು
    ಶುಭ ಸಂಖ್ಯೆ: 4

    ಕುಂಭ (Aquarius)

    ಹೊಸ ಜನರ ಪರಿಚಯದಿಂದ ಲಾಭವಾಗಬಹುದು. ವ್ಯವಹಾರದಲ್ಲಿ ಒಪ್ಪಂದಗಳು ಸಾಧ್ಯ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಆರೋಗ್ಯದಲ್ಲಿ ಚರ್ಮ ಸಂಬಂಧಿತ ಸಣ್ಣ ಸಮಸ್ಯೆ ಕಾಣಿಸಬಹುದು.
    ಶುಭ ಬಣ್ಣ: ಆಕಾಶ ನೀಲಿ
    ಶುಭ ಸಂಖ್ಯೆ: 8

    ಮೀನ (Pisces)

    ಇಂದು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಬಹುದು. ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಹಣಕಾಸಿನಲ್ಲಿ ನಿಧಾನವಾಗಿ ಸುಧಾರಣೆ ಕಾಣಿಸುತ್ತದೆ. ಕುಟುಂಬದವರ ಬೆಂಬಲ ಉತ್ತಮವಾಗಿರುತ್ತದೆ. ಮನಸ್ಸಿನ ಒತ್ತಡ ಕಡಿಮೆಯಾಗುತ್ತದೆ.
    ಶುಭ ಬಣ್ಣ: ಹಳದಿ
    ಶುಭ ಸಂಖ್ಯೆ: 3

  • ಒಂಟಿ ಮಹಿಳೆಯಂತೆ ನಿಂತು 40 ಕಾಮುಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮಿಷನರ್…

    ಒಂಟಿ ಮಹಿಳೆಯಂತೆ ನಿಂತು 40 ಕಾಮುಕರಿಗೆ ಬಿಸಿ ಮುಟ್ಟಿಸಿದ ಪೊಲೀಸ್ ಕಮಿಷನರ್…

    ಹೈದರಾಬಾದ್: ಸಿನೆಮಾದಲ್ಲಿ ಹಿರೋಗಳು ವೇಷ ಮರೆಸಿಕೊಂಡು ಬಂದು ವಿಲನ್‌ಗಳಿಗೆ ಪಾಠ ಕಲಿಸುವುದನ್ನು ನಾವು ನೋಡಿದ್ದೇವೆ. ಆದರೆ ಹೈದರಾಬಾದ್‌ನಲ್ಲಿ ಅಂತಹದ್ದೇ ಒಂದು ನೈಜ ಘಟನೆ ನಡೆದಿದೆ. ಮಲ್ಕಾಜ್‌ಗಿರಿ ಪೊಲೀಸ್ ಆಯುಕ್ತೆ ಸುಮತಿ ಐಪಿಎಸ್ ಅವರು ಮಧ್ಯರಾತ್ರಿ ರಸ್ತೆಗಿಳಿದು, ಮಹಿಳೆಯರ ಸುರಕ್ಷತೆಯನ್ನು ಪ್ರಶ್ನಿಸುವ ಗೂಂಡಾಗಳಿಗೆ ಮರೆಯಲಾಗದ ಶಾಕ್ ಟ್ರೀಟ್ಮೆಂಟ್ ನೀಡಿದ್ದಾರೆ.
    ಮಲ್ಕಾಜ್‌ಗಿರಿ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಕಾರ್ಯಪ್ರವೃತ್ತರಾದ ಸುಮತಿ ಅವರು, ನಗರದಲ್ಲಿ ಮಹಿಳೆಯರು ರಾತ್ರಿ ವೇಳೆ ಎಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ತಿಳಿಯಲು ನಿರ್ಧರಿಸಿದರು. ಯಾವುದೇ ಭದ್ರತೆಯಿಲ್ಲದೆ, ಒಬ್ಬ ಸಾಮಾನ್ಯ ಮಹಿಳೆಯಂತೆ ಸಾಧಾರಣ ಉಡುಪಿನಲ್ಲಿ ರಾತ್ರಿ 12 ಗಂಟೆಗೆ ದಿಲ್‌ಸುಖ್‌ನಗರದ ಬಸ್ ನಿಲ್ದಾಣಕ್ಕೆ ಬಂದು ನಿಂತರು.

    ರಾತ್ರಿ 12ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ಸುಮತಿ ಅವರು ಒಬ್ಬಂಟಿಯಾಗಿ ನಿಂತಿದ್ದರು. ಈ ವೇಳೆ ಅಲ್ಲಿಗೆ ಬಂದ ಸುಮಾರು 40ಕ್ಕೂ ಹೆಚ್ಚು ಕಿಡಿಗೇಡಿಗಳು (ಅದರಲ್ಲೂ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು) ಮದ್ಯ ಹಾಗೂ ಗಾಂಜಾ ಅಮಲಿನಲ್ಲಿ ಅಸಭ್ಯವಾಗಿ ವರ್ತಿಸಲು ಆರಂಭಿಸಿದರು. ಬೈಕ್‌ಗಳನ್ನು ಅಡ್ಡಗಟ್ಟುವುದು, ಅಶ್ಲೀಲವಾಗಿ ಮಾತನಾಡಿಸುವುದು ಮತ್ತು ಕಿರುಕುಳ ನೀಡುವ ಮೂಲಕ ತಮ್ಮ ವಿಕೃತಿ ಮೆರೆದರು. ಆದರೆ, ಕಿಂಚಿತ್ತೂ ಧೈರ್ಯಗುಂದದ ಸುಮತಿ ಅವರು ಸದ್ದಿಲ್ಲದೆ ಎಲ್ಲವನ್ನೂ ಗಮನಿಸುತ್ತಾ ಆ ಕಿಡಿಗೇಡಿಗಳ ಮುಖಚಹರೆಯನ್ನು ಗುರುತು ಹಾಕಿಕೊಳ್ಳುತ್ತಿದ್ದರು.

    ಸತ್ಯ ತಿಳಿದು ಬೆಚ್ಚಿಬಿದ್ದ ‘ರೋಡ್ ರೋಮಿಯೋಗಳು’:
    ಬೆಳಗಿನ ಜಾವ ಸುಮಾರು 3:30ಕ್ಕೆ ಪೊಲೀಸ್ ಗಸ್ತು ವಾಹನ ಸ್ಥಳಕ್ಕೆ ಬಂದಿತು. ವಾಹನದಿಂದ ಇಳಿದ ಸಬ್ ಇನ್ಸ್‌ಪೆಕ್ಟರ್ ಅವರು ಅಲ್ಲಿ ನಿಂತಿದ್ದ ಮಹಿಳೆಗೆ ಸಲ್ಯೂಟ್ ಹೊಡೆದಾಗ, ಅಲ್ಲಿದ್ದ ಗೂಂಡಾಗಳಿಗೆ ಸಿಡಿಲು ಬಡಿದಂತಾಯಿತು! ತಾವು ಇಷ್ಟೊತ್ತು ಕಿರುಕುಳ ನೀಡಿದ್ದು ಒಬ್ಬ ಸಾಮಾನ್ಯ ಮಹಿಳೆಗಲ್ಲ, ಬದಲಾಗಿ ಸ್ವತಃ ಪೊಲೀಸ್ ಕಮಿಷನರ್‌ಗೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಆದರೆ ಅಷ್ಟರಲ್ಲೇ ಪೊಲೀಸರು ಎಲ್ಲರನ್ನೂ ಸುತ್ತುವರೆದು ವಶಕ್ಕೆ ಪಡೆದಿದ್ದರು.

    ಬಂಧಿತ 40 ಮಂದಿಗೂ ಸರಿಯಾದ ಶಿಕ್ಷೆ ನೀಡಿದ ಸುಮತಿ ಅವರು, ಕಠಿಣ ಮಾತುಗಳಲ್ಲಿ ಬುದ್ಧಿವಾದ ಹೇಳಿದರು:
    “ರಸ್ತೆಯಲ್ಲಿ ಒಬ್ಬಂಟಿ ಮಹಿಳೆಯನ್ನು ಕಂಡಾಗ ಅವಳಿಗೆ ಸಹಾಯ ಮಾಡುವುದನ್ನು ಕಲಿಯಿರಿ, ಅಸಭ್ಯವಾಗಿ ವರ್ತಿಸುವುದಲ್ಲ. ನಿಮ್ಮ ಬದುಕು ಮತ್ತು ವೃತ್ತಿಜೀವನದ ಬಗ್ಗೆ ಗಮನಹರಿಸಿ. ಗಾಂಜಾ-ಮದ್ಯದ ವ್ಯಸನಕ್ಕೆ ಬಿದ್ದು ಜೀವನ ಹಾಳುಮಾಡಿಕೊಂಡರೆ ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಗ್ಯಾರಂಟಿ.”

    ಐಪಿಎಸ್ ಅಧಿಕಾರಿ ಸುಮತಿ ಅವರಿಗೆ ಇಂತಹ ಸಾಹಸಗಳು ಹೊಸತಲ್ಲ. 2001ರಲ್ಲಿ ಡಿಎಸ್‌ಪಿಯಾಗಿದ್ದಾಗ ಅವರು ಕಾಜಿಪೇಟೆ ರೈಲು ನಿಲ್ದಾಣದಲ್ಲೂ ಇದೇ ರೀತಿ ವೇಷ ಮರೆಸಿಕೊಂಡು ಕಾರ್ಯಾಚರಣೆ ನಡೆಸಿ ಸುದ್ದಿಯಾಗಿದ್ದರು. ಈಗ ಕಮಿಷನರ್ ಆಗಿ ತಮ್ಮ ಮೊದಲ ದಿನವೇ ಅಖಾಡಕ್ಕಿಳಿದು ಮಹಿಳೆಯರ ರಕ್ಷಣೆಗೆ ನಿಂತಿರುವ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಈ ಘಟನೆಯು ರಾತ್ರಿ ವೇಳೆ ಗಸ್ತು ತಿರುಗದ ಪೊಲೀಸ್ ವ್ಯವಸ್ಥೆಯ ವೈಫಲ್ಯವನ್ನೂ ಎತ್ತಿ ತೋರಿಸಿದ್ದು, ಇನ್ನು ಮುಂದೆ ನಗರದಲ್ಲಿ ಪೊಲೀಸ್ ಕಣ್ಗಾವಲು ಇನ್ನಷ್ಟು ಬಿಗಿಯಾಗಲಿದೆ ಎಂಬ ಸಂದೇಶವನ್ನು ರವಾನಿಸಿದೆ.