Blog

  • ಪತ್ರಕರ್ತ ಪ್ರದೀಪ್ ಕುಮಾರ್ ಆರ್  ಗೆ  ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್)  ಪದವಿ

    ಪತ್ರಕರ್ತ ಪ್ರದೀಪ್ ಕುಮಾರ್ ಆರ್ ಗೆ ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್) ಪದವಿ

    ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪತ್ರಕರ್ತ ಪ್ರದೀಪ್ ಕುಮಾರ್ ಆರ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಮಲ್ಟಿ ಮೀಡಿಯ ಎಂಬ ವಿಷಯದಲ್ಲಿ  ಮಂಡಿಸಿದ ಮಹಾ ಪ್ರಬಂಧಕ್ಕೆ ಅಮೇರಿಕಾದ ಬೋಸ್ಟನ್ ಇಂಪೀರಿಯಲ್ ವಿಶ್ವವಿದ್ಯಾಲಯದಿಂದ ಇಂದು ಗೋವಾದಲ್ಲಿ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ  ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್)  ಪದವಿ ಪ್ರಧಾನ ಮಾಡಲಾಯಿತು.

    ಪ್ರದೀಪ್ ಕುಮಾರ್ ರವರು ಹಲವು ವರ್ಷಗಳಿಂದ ದೊಡ್ಡಬಳ್ಳಾಪುರ ತಾಲ್ಲೂಕು ವರದಿಗಾರರಾಗಿ ಹಲವು ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ  ಕರ್ತವ್ಯ ನಿರ್ವಹಿಸಿದ್ದು ಸದ್ಯ ಹೊಸದಿಗಂತ ದಿನಪತ್ರಿಕೆಯಲ್ಲಿ  ತಾಲ್ಲೂಕು ವರದಿಗಾರರಾಗಿದ್ದಾರೆ. ಇದೀಗ ಅವರು ಮಂಡಿಸಿರುವ ಮಹಾ ಪ್ರಬಂಧಕ್ಕೆ ಅಮೇರಿಕಾದ ಬೋಸ್ಟನ್ ಇಂಪೀರಿಯಲ್ ವಿಶ್ವವಿದ್ಯಾಲಯದಿಂದ  ಗೋವಾದಲ್ಲಿ ನಡೆದ ವಿಶ್ವ ವಿದ್ಯಾಲಯದ ಘಟಿಕೋತ್ಸವದಲ್ಲಿ  ಡಾಕ್ಟರ್ ಆಫ್ ಲೆಟರ್ಸ್ (ಡಿ.ಲಿಟ್)  ಪದವಿ ಪಡೆದಿದ್ದಾರೆ.

    ಈ ಸಂದರ್ಭದಲ್ಲಿ ಬೆಳಗಾವಿಯ ಶ್ರೀ ಸದ್ಗುರು ಭಾವು ಮಹಾರಾಜ್,  ಆರ್ಥಿಕ ತಜ್ಞರಾದ ಡಾ ಎಂ ಆರ್ ರಂಗನಾಥ ಸೇರಿದಂತೆ  ಅನೇಕ‌ ಗಣ್ಯರು ಇದ್ದರು.

  • ತಾವರೆಕೆರೆ ರಾಮೇಶ್ವರ: ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ:ಸಿಎಂ ಸಿದ್ದರಾಮಯ್ಯ

    ತಾವರೆಕೆರೆ ರಾಮೇಶ್ವರ: ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ:ಸಿಎಂ ಸಿದ್ದರಾಮಯ್ಯ

    ಹೊಸಕೋಟೆ ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

    ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಶ್ರೀ ರಾಮೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಮನುಷ್ಯನು ತನ್ನ ದೈನಂದಿನ ಜೀವನದಲ್ಲಿ ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು. ಪೂರ್ವಿಕರು ನೀಡಿದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಸಾಗಿಸುವ ಜವಾಬ್ದಾರಿ ನಮ್ಮದೆ ಎಂದು ಹೇಳಿದರು.

    ತಾವರೆಕೆರೆ ರಾಮೇಶ್ವರ ಜಾತ್ರೆಗೆ ತಾವು ಎರಡು ಬಾರಿ ಬಂದಿದ್ದು, ಎರಡೂ ಬಾರಿ ಮುಖ್ಯಮಂತ್ರಿಯಾಗಿಯೇ ಬಂದಿರುವುದು ದೇವರ ಕೃಪೆಯ ಫಲ ಎಂದು ಹೇಳಿದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನಗೆ ಈ ಮಟ್ಟಕ್ಕೆ ಬರಲು ದೇವರ ಆಶೀರ್ವಾದ ಹಾಗೂ ಜನರ ಪ್ರೀತಿ ಕಾರಣವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ವಿವಿಧ ಧರ್ಮದ ಜನರು ಇದ್ದಾರೆ. ಯಾರೂ ಯಾರನ್ನೂ ದ್ವೇಷಿಸಬಾರದು. ಪರಸ್ಪರ ಪ್ರೀತಿ ಮತ್ತು ಸೌಹಾರ್ದದಿಂದ ಬದುಕಬೇಕು. ಪ್ರತಿಯೊಂದು ಜಾತಿ, ಧರ್ಮವನ್ನೂ ನಾನು ಗೌರವಿಸುತ್ತೇನೆ ಎಂದು ಹೇಳಿದರು.

    ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಮಾತನಾಡಿ, ತಾವರೆಕೆರೆ ರಾಮೇಶ್ವರ ಸ್ವಾಮಿ ನಮ್ಮ ಮನೆ ದೇವರಾಗಿದ್ದು, ಪ್ರತಿ 11 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವುದು ನಮ್ಮ ಭಾಗ್ಯದ ಸಂಗತಿ ಎಂದರು. ದೇವರ ಆಶೀರ್ವಾದದಿಂದ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.

    ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ರಾಮೇಶ್ವರ ಜಾತ್ರೆ ತಾಲ್ಲೂಕಿನ ಎಲ್ಲಾ ಸಮುದಾಯದ ಜನರಿಗೆ ದೊಡ್ಡ ಹಬ್ಬವಾಗಿದೆ. ಜಾತ್ರೆ ನಿಮಿತ್ತ ದೇವಾಲಯದ ರಸ್ತೆಯನ್ನು ₹1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನ ದೊರೆತಿದ್ದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೊತ್ತೂರು ಮಂಜುನಾಥ್, ಕೆವೈ ನಂಜೇಗೌಡ, ಎಸ್.ಆರ್. ವಿಶ್ವನಾಥ್, ಮಾಜಿ ಶಾಸಕ ವತೂರು ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

  • RCB vs CSK ಟಿಕೆಟ್ ಆಮಿಷ: ಇನ್ಸ್ಟಾ ಪೋಸ್ಟ್ ನಂಬಿ 1.46 ಲಕ್ಷ ಕಳೆದುಕೊಂಡ ಟೆಕ್ಕಿ

    RCB vs CSK ಟಿಕೆಟ್ ಆಮಿಷ: ಇನ್ಸ್ಟಾ ಪೋಸ್ಟ್ ನಂಬಿ 1.46 ಲಕ್ಷ ಕಳೆದುಕೊಂಡ ಟೆಕ್ಕಿ

    ಬೆಂಗಳೂರು: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೊನ ಪಂದ್ಯದ ಟಿಕೆಟ್‌ ಅನ್ನು ಪಡೆಯಲು ಹೋದ ಟೆಕ್ಕಿಯೊಬ್ಬರಿಗೆ ಪಂಗನಾಮ ಹಾಕಲಾಗಿದೆ.

    ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB vs CSK ಐಪಿಎಲ್ ಪಂದ್ಯಕ್ಕೆ ಸಂಬಂಧಿಸಿದಂತೆ ಬಿ.ನಾರಾಯಣಪುರ ನಿವಾಸಿಯಾದ 25 ವರ್ಷದ ಟೆಕ್ಕಿ ಒಬ್ಬರು ಆನ್‌ಲೈನ್ ಮೋಸಕ್ಕೆ ಒಳಗಾಗಿ 1.46 ಲಕ್ಷ ರೂ. ಕಳೆದುಕೊಂಡಿದ್ದರ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿ ಟಿಕೆಟ್ ಮಾರಾಟಗಾರನಂತೆ ನಟಿಸಿ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ.

    ತನ್ನನ್ನು ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಹಿರಿಯ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಪರಿಚಯಿಸಿಕೊಂಡ ಆರೋಪಿಯು, ಐಪಿಎಲ್ ಪಂದ್ಯಕ್ಕೆ ಟಿಕೆಟ್‌ಗಳ ಜೊತೆಗೆ ಊಟದ ಕೂಪನ್‌ಗಳು ಮತ್ತು ವಿಶೇಷ ಸೌಲಭ್ಯಗಳನ್ನು ಒದಗಿಸುವುದಾಗಿ ನಂಬಿಕೆ ಮೂಡಿಸಿದ್ದ. ಆರಂಭದಲ್ಲಿ ಎರಡು ಟಿಕೆಟ್‌ಗಳಿಗೆ 3,700 ರೂ. ದರ ನಿಗದಿ ಮಾಡಿದ್ದರೂ, ನಂತರ ಭದ್ರತಾ ಠೇವಣಿ, ಹೆಚ್ಚುವರಿ ಐಡಿ ಕಾರ್ಡ್ ಹಾಗೂ ಫುಡ್ ಕೂಪನ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ಕೇಳಿದ್ದ. ಪಂದ್ಯದ ದಿನ ಗೇಟ್ ನಂ.10 ಬಳಿ ಬರಲು ಹೇಳಿ, ನಕಲಿ ಇಮೇಲ್ ದೃಢೀಕರಣವನ್ನೂ ಕಳುಹಿಸಿದ್ದ ಎಂದು ನೊಂದ ವ್ಯಕ್ತಿ ಹೇಳಿದ್ದಾರೆ.

    ಹಣ ಪಾವತಿಯ ನಂತರ, ವಂಚಕನು ಟೆಕ್ಕಿಗೆ ಸ್ಟೇಡಿಯಂನ ಗೇಟ್ ಸಂಖ್ಯೆ 10ರ ಬಳಿ ಬರಲು ಸೂಚಿಸಿದ್ದಾನೆ. ಅಲ್ಲಿಗೆ ತಲುಪಿದಾಗ, ಟೆಕ್ಕಿ ಕನಿಷ್ಠ ದರದ ಟಿಕೆಟ್‌ಗಳನ್ನು ಕೇಳಿದ್ದಾರೆ. ಆದರೆ, ವಂಚಕನು ಕೂಪನ್‌ಗಳು ಮತ್ತು ಭದ್ರತಾ ಠೇವಣಿ ಹೆಸರಿನಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡಿದ್ದಾನೆ. ಬೇರೆ ಬೇರೆ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹ 1.46 ಲಕ್ಷ ರೂ. ಹಣವನ್ನು ಟೆಕ್ಕಿಯಿಂದ ವರ್ಗಾಯಿಸಿಕೊಂಡಿದ್ದಾನೆ.

    ವಂಚನೆ ಬಳಿಕ ಟೆಕ್ಕಿ, ತಕ್ಷಣವೇ ಸೈಬರ್ ಕಂಟ್ರೋಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

  • ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

    ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

    ಬೆಂ.ಗ್ರಾ.ಜಿಲ್ಲೆ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ|| ಬಾಬು ಜಗಜೀವನ ರಾಂ ರವರ 119ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹಾಗೂ ಅತಿಥಿಗಳು  ಡಾ.  ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

    ಇಂದು  ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿ ಆಚರಿಸಲಾಯಿತು.

    ಡಾ. ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರ, ಶೋಷಿತ ವರ್ಗಗಳ ನಾಯಕ, ಮಾಜಿ ಉಪ ಪ್ರಧಾನಿ ಮತ್ತು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ದಲಿತ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಇವರ ಜನ್ಮದಿನವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿನವಾಗಿ ಏಪ್ರಿಲ್ 05 ರಂದು ಆಚರಿಸಲಾಗುತ್ತದೆ.

     ಡಾ.ಬಾಬು ಜಗಜೀವನ ರಾಮ್ ಅವರು ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ. ತಳಸಮುದಾಯದ ಜನರಿಗೆ ಸಂವಿಧಾನಬದ್ಧ ನ್ಯಾಯ ದೊರಕಿಸಲು ಹೋರಾಡಿದರು.ಅವರ ದಕ್ಷ ಆಡಳಿತದಿಂದ ನಮ್ಮ ಮುಂದೆ  ಅವರು ಆದರ್ಶಪ್ರಾಯರಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ವಿನೂತನ, ಅಮೋಘ ಸೇವೆಗೆ ದೇಶ ಅವರನ್ನು ‘ಹಸಿರು ಕ್ರಾಂತಿಯ ಹರಿಕಾರ’ ಎಂದೇ ಕರೆಯಿತು. ಇಂದು ಭವಿಷ್ಯದ ಭಾರತಕ್ಕೆ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿ. ಪಂ. ಉಪಕಾರ್ಯದರ್ಶಿ ಶಿವಕುಮಾರ್,  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪ್ರೇಮಾ, ಸರ್ಕಾರಿ ಕಾಲೇಜಿನ ಉಪ ನಿರ್ದೇಶಕಿ (ಪ್ರ) ಸುನಿತಾ ಡಿ.ಎಸ್ , ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • LPG ಗ್ಯಾಸ್ ಟ್ರಬಲ್; ಕೆಲಸ ಕಳೆದುಕೊಂಡು ನಗರಗಳಿಂದ ತವರಿನತ್ತ ಹೊರಟ ಲಕ್ಷಾಂತರ ಕಾರ್ಮಿಕರು

    LPG ಗ್ಯಾಸ್ ಟ್ರಬಲ್; ಕೆಲಸ ಕಳೆದುಕೊಂಡು ನಗರಗಳಿಂದ ತವರಿನತ್ತ ಹೊರಟ ಲಕ್ಷಾಂತರ ಕಾರ್ಮಿಕರು

    ಬೆಂಗಳೂರು: ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಕ್ಕೆ ತೆರಳುವ ರೈಲುಗಳು ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ. ಮುಂಬೈನಲ್ಲಂತು ಉತ್ತರಭಾರತದ ದಿನಗೂಲಿ ನೌಕರರು ಹೆಚ್ಚಿನ ಪ್ರಮಾಣದಲ್ಲಿದ್ದು, ಅವರಲ್ಲಿ ಹೆಚ್ಚಿನವರು ಊರಿಗೆ ವಾಪಸಾಗುತ್ತಿದ್ದಾರೆ.

    ಮಧ್ಯಪ್ರಾಚ್ಯ ಸಂಘರ್ಷ ಹಿನ್ನೆಲೆಯಲ್ಲಿ ದೇಶಾದ್ಯಂತ ಸೃಷ್ಟಿಯಾಗಿರುವ ಎಲ್‌ಪಿಜಿ ಬಿಕ್ಕಟ್ಟು ಇದೀಗ ವಲಸೆ ಕಾರ್ಮಿಕರ ಮೇಲೂ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ಹೋಟೆಲ್‌ಗಳು ಸೇರಿ ಎಲ್‌ಪಿಜಿಯನ್ನೇ ಅವಲಂಬಿಸಿರುವ ಉದ್ದಿಮೆಗಳು ತಾತ್ಕಾಲಿಕವಾಗಿ ಬಾಗಿಲು ಹಾಕುತ್ತಿರುವ ಹಿನ್ನೆಲೆಯಲ್ಲಿ ಇದನ್ನೇ ನಂಬಿಕೊಂಡು ಮೆಟ್ರೋ ನಗರಗಳಲ್ಲಿ ಬದುಕು ಕಟ್ಟಿಕೊಂಡಿರುವ ವಲಸೆ ಕಾರ್ಮಿಕರು ಇದೀಗ ಅನಿವಾರ್ಯವಾಗಿ ತಮ್ಮೂರಿನತ್ತ ಮುಖಮಾಡುತ್ತಿದ್ದಾರೆ

    ಬೆಂಗಳೂರು, ಮುಂಬೈ, ದೆಹಲಿ ಸೇರಿದಂತೆ ದೇಶದ ಬಹುತೇಕ ಪ್ರಮುಖ ನಗರಗಳಲ್ಲಿ ಹೋಟೆಲ್‌ಗಳು, ಡಾಬಾಗಳು, ಹೋಟೆಲ್‌ಗಳು ಬಿಹಾರ ಮತ್ತಿತರ ಕಡೆಯಿಂದ ಆಗಮಿಸುವ ವಲಸೆ ಕಾರ್ಮಿಕರನ್ನೇ ಅವಲಂಬಿಸಿವೆ. ಗ್ಯಾಸ್‌ ದರ ಹೆಚ್ಚಳ ಹಾಗೂ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಹೆಚ್ಚಿನ ರಸ್ತೆ ಬದಿ ತಿಂಡಿ-ತಿನಿಸು ಅಂಗಡಿಗಳು, ಕೆಲ ಹೋಟೆಲ್‌ಗಳು ಬಾಗಿಲು ಹಾಕಿವೆ. ಇದರಿಂದಾಗಿ ಇವುಗಳನ್ನೇ ನಂಬಿಕೊಂಡ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ.

    ಹೋಟೆಲ್‌ ಕೆಲಸ ಇಲ್ಲದಿದ್ದರೆ ಬೇರೆ ಕೆಲಸವನ್ನಾದರೂ ಮಾಡೋಣ ಅಂದ್ರೆ ಮನೆಯಲ್ಲಿ ಅಡುಗೆ ಮಾಡಿಕೊಳ್ಳಲಾದರೂ ಗ್ಯಾಸ್‌ ಬೇಕೇ ಬೇಕು. ಅಲ್ಲದೆ ದಿನ ಬಳಕೆಯ ವಸ್ತುಗಳ ಬೆಲೆಗಳೂ ಏರಿಕೆಯಾಗುತ್ತಿವೆ. ಹೀಗಾಗಿ ನಾವು ಕೆಲಕಾಲ ಊರಿಗೆ ವಾಪಸಾಗಲು ನಿರ್ಧರಿದ್ದೇವೆ ಎಂದು ಕೆಲ ಕಾರ್ಮಿಕರು ಹೇಳಿಕೊಂಡಿದ್ದಾರೆ.

    ಹೀಗಾಗಿ ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಕ್ಕೆ ತೆರಳುವ ರೈಲುಗಳು ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ. ಮುಂಬೈನಲ್ಲಂತು ಉತ್ತರಭಾರತದ ದಿನಗೂಲಿ ನೌಕರರು ಹೆಚ್ಚಿನ ಪ್ರಮಾಣದಲ್ಲಿದ್ದು, ಅವರಲ್ಲಿ ಹೆಚ್ಚಿನವರು ಊರಿಗೆ ವಾಪಸಾಗುತ್ತಿದ್ದಾರೆ. ಊರಲ್ಲಾದರೆ ಕಟ್ಟಿಗೆ ಬಳಸಿಯಾದರೂ ಅಡುಗೆ ಮಾಡಿ ಬದುಕಬಹುದು, ಈ ಮಹಾನಗರದಲ್ಲಿ ಅದೂ ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ.

    ಕಳೆದೊಂದು ತಿಂಗಳಿಂದ ಗುಜರಾತ್‌ನ ಸೂರತ್‌ನಿಂದ ಸುಮಾರು 1.5 ಲಕ್ಷ ಮಂದಿ, ಪಂಜಾಬ್‌ನಲ್ಲಿ ಸುಮಾರು 50 ಸಾವಿರ ವಲಸೆ ಕಾರ್ಮಿಕರು ಊರಿಗೆ ವಾಪಸಾಗಿದ್ದಾರೆ ಎನ್ನಲಾಗಿದೆ.

  • ಜಾತಿ ಎಂಬ ವಿರೋಧಕ್ಕೆ ಬಲಿಯಾದ ನವಜೋಡಿ: ಪ್ರೀತಿ ಗೆಲ್ಲಬೇಕಾದ ಕಡೆ ಸಾವಿನ ಅಟ್ಟಹಾಸ!

    ಜಾತಿ ಎಂಬ ವಿರೋಧಕ್ಕೆ ಬಲಿಯಾದ ನವಜೋಡಿ: ಪ್ರೀತಿ ಗೆಲ್ಲಬೇಕಾದ ಕಡೆ ಸಾವಿನ ಅಟ್ಟಹಾಸ!

    ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮನೆಯವರ ವಿರೋಧ ಎದುರಿಸಲಾಗದೆ, ಪ್ರೀತಿಸಿ ಮದುವೆಯಾಗಿದ್ದ ನವದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಘಟನೆಯ ವಿವರ:
    ಅನುಮೂಲ ರಾಕೇಶ್ ರೆಡ್ಡಿ (25) ಮತ್ತು ತರಿಗೊಪ್ಪುಲ ಹರಿಕಾ (22) ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಹೈದರಾಬಾದ್‌ನಲ್ಲಿದ್ದ ಈ ಜೋಡಿ ಮೂರು ತಿಂಗಳ ಹಿಂದೆಯಷ್ಟೇ ತಮ್ಮ ಹಳ್ಳಿಗೆ ಮರಳಿದ್ದರು. ಆದರೆ ಹರಿಕಾ ಬೇರೆ ಜಾತಿಗೆ ಸೇರಿದವಳು ಎಂಬ ಕಾರಣಕ್ಕೆ ರಾಕೇಶ್ ಪೋಷಕರು ಈ ಮದುವೆಯನ್ನು ತೀವ್ರವಾಗಿ ವಿರೋಧಿಸಿದ್ದರು.

    ಸರಣಿ ಆತ್ಮಹತ್ಯೆ:
    ಮನೆಯವರ ನಿರಂತರ ವಿರೋಧ ಮತ್ತು ತಿರಸ್ಕಾರದಿಂದ ಮನನೊಂದ ರಾಕೇಶ್ ರೆಡ್ಡಿ, ಮಾರ್ಚ್ 28 ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 30 ರಂದು ಅವರು ಕೊನೆಯುಸಿರೆಳೆದರು. ತನ್ನನ್ನು ನಂಬಿ ಬಂದ ಪತಿಯ ಅಗಲಿಕೆಯನ್ನು ಸಹಿಸಲಾರದ ಹರಿಕಾ, ಏಪ್ರಿಲ್ 2 ರಂದು ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಕಹಿ ಸತ್ಯ:
    ಈ ಹಿಂದೆ ಹರಿಕಾ ಆತ್ಮಹತ್ಯೆಗೆ ಯತ್ನಿಸಿದಾಗ ಪೊಲೀಸರು ಮಧ್ಯಸ್ಥಿಕೆ ವಹಿಸಿ ಬುದ್ಧಿವಾದ ಹೇಳಿದ್ದರು. ಪೊಲೀಸರ ಒತ್ತಡಕ್ಕೆ ಮಣಿದು ರಾಕೇಶ್ ಪೋಷಕರು ಮದುವೆಗೆ ಒಪ್ಪಿಕೊಂಡಿದ್ದರೂ, ಮನಸ್ಸಿನಿಂದ ಅವರನ್ನು ಸ್ವೀಕರಿಸಿರಲಿಲ್ಲ. ಕೊನೆಗೆ ಈ ಸಾಮಾಜಿಕ ವ್ಯವಸ್ಥೆ ಮತ್ತು ಮನೆಯವರ ಹಠಮಾರಿತನ ಎರಡು ಜೀವಗಳನ್ನು ಬಲಿಪಡೆದಿದೆ.

    ಜಾತಿ-ಧರ್ಮಗಳಿಗಿಂತ ಮನುಷ್ಯತ್ವ ದೊಡ್ಡದು ಎಂದು ಸಾರುವ ಕಾಲದಲ್ಲೂ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ದುರಂತ.

  • ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಮತ್ತೊಂದು ಲೆಕ್ಕ; ವರ್ಕೌಟ್ ಶುರು ಮಾಡಿದ ಗಿಲ್ಲಿ ನಟ.!

    ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಮತ್ತೊಂದು ಲೆಕ್ಕ; ವರ್ಕೌಟ್ ಶುರು ಮಾಡಿದ ಗಿಲ್ಲಿ ನಟ.!

    ಬಿಗ್ ಬಾಸ್ ಕನ್ನಡ 12 ವಿಜೇತ ಗಿಲ್ಲಿ ನಟ ಜಿಮ್ ನಲ್ಲಿ ಈಗ ತಮ್ಮ ದೇಹದಂಡನೆ (ವರ್ಕೌಟ್) ಆರಂಭಿಸಿದ್ದಾರೆ. ಸದಾ ಫಿಟ್‌ನೆಸ್ ಬಗ್ಗೆ ಅಷ್ಟಾಗಿ ಗಮನ ಹರಿಸದ ಗಿಲ್ಲಿ, ಈಗ ಜಿಮ್‌ನಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ. ಇದು ಅವರು ಹೀರೋ ಆಗಿ ಸ್ಯಾಂಡಲ್‌ವುಡ್‌ಗೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಗಿಲ್ಲಿಗೆ ನಿರ್ದೇಶನದತ್ತ ಹೆಚ್ಚಿನ ಆಸಕ್ತಿ ಇರುವುದು ವಿಶೇಷ.

    ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಗೆದ್ದ ಬಳಿಕ ಅಪಾರ ಜನಪ್ರಿಯತೆ ಪಡೆದುಕೊಂಡರು. ಅವರಿಗೆ ಇನ್ಸ್ಟಾಗ್ರಾಮ್ ಅಲ್ಲಿ 2.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಬಿಗ್ ಬಾಸ್ಗೆ ಬಂದ ಸ್ಪರ್ಧಿಯೊಬ್ಬರು ಇಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದು ಇದೇ ಮೊದಲು. ಈಗ ಗಿಲ್ಲಿ ನಟ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎಂಬ ಕುತೂಹಲ ಮೂಡಿದೆ. ಏಕೆಂದರೆ ಅವರು ಜಿಮ್ನಲ್ಲಿ ವರ್ಕೌಟ್ ಶುರು ಮಾಡಿದ್ದಾರೆ.

    ಗಿಲ್ಲಿ ನಟ ಅವರು ತಮ್ಮ ಫಿಟ್ನೆಸ್ಗೆ ಎಂದಿಗೂ ಪ್ರಾಮುಖ್ಯತೆ ಕೊಟ್ಟವರಲ್ಲ. ಅದೇ ರೀತಿ ಸ್ಟೈಲ್ ಬಗ್ಗೆಯೂ ಅವರು ಗಮನ ಹರಿಸಿದವರಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರು ಕೇವಲ ಒಂದು ಶಾರ್ಟ್ಸ್, ಬನಿಯನ್ ಹಾಕಿ ಓಡಾಡುತ್ತಿದ್ದರು. ತಲೆಕೂದಲು ಬಾಚಿಕೊಳ್ಳುತ್ತಾ ಇರಲಿಲ್ಲ. ಹೊರಗೆ ಯಾವ ರೀತಿ ಇದ್ದೀನೋ ಅದೇ ರೀತಿ ಬಿಗ್ ಬಾಸ್ ಮನೆಯಲ್ಲೂ ಇದ್ಧೇನೆ ಎಂದು ಗಿಲ್ಲಿ ಹೇಳುತ್ತಿದ್ದರು.

    ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ಅವರು ಜಿಮ್ ಅಲ್ಲಿ ವರ್ಕೌಟ್ ಮಾಡುವ ಪ್ರಯತ್ನ ಮಾಡಿದ್ದರು. ‘ವರ್ಕೌಟ್ ಮಾಡೋ. ಫಿಟ್ ಆಗಿರ್ತೀಯಾ’ ಎಂದು ರಘು ಅವರು ಅನೇಕ ಬಾರಿ ಗಿಲ್ಲಿಗೆ ಹೇಳಿದ್ದು ಇದೆ. ಇದನ್ನು ಗಿಲ್ಲಿ ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಬಿಗ್ ಬಾಸ್ ಮನೆಯಿಂದ ಬಂದ ಬಳಿಕ ಈ ವಿಷಯದಲ್ಲಿ ಸೀರಿಯಸ್ ಆದಂತೆ ಇದೆ.

    ಈಗ ಫಿಟ್ನೆಸ್ ಟ್ರೇನರ್ ಕೌಶಿಕ್ ಗೌಡ ಅವರು ಗಿಲ್ಲಿ ವರ್ಕೌಟ್ ಮಾಡುತ್ತಿರುವ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಭರ್ಜರಿಯಾಗಿ ವರ್ಕೌಟ್ ಮಾಡುತ್ತಿದ್ದಾರೆ. ಗಿಲ್ಲಿಗೆ ಫಿಟ್ನೆಸ್ ಬಗ್ಗೆ ಕಾಳಜಿ ಬಂದಿದ್ದು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ‘ಇಲ್ಲಿವರೆಗೆ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

    ಗಿಲ್ಲಿ ವರ್ಕೌಟ್ ಆರಂಭಿಸಿದ್ದು ನೋಡಿ ಅವರು ಹೀರೋ ಆಗಿ ಬಡ್ತಿ ಪಡೆಯುತ್ತಿದ್ದಾರಾ ಎನ್ನುವ ಕುತೂಹಲವೂ ಮೂಡಿದೆ. ಅವರಿಗೆ ಹೀರೋ ಆಗುವುದಕ್ಕಿಂತ, ನಿರ್ದೇಶನದಲ್ಲಿ ಸಾಕಷ್ಟು ಆಸಕ್ತಿ ಇದೆ.

  • ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

    ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

    ಬೆಂ.ಗ್ರಾ.ಜಿಲ್ಲೆ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ|| ಬಾಬು ಜಗಜೀವನ ರಾಂ ರವರ 119ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹಾಗೂ ಅತಿಥಿಗಳು ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

    ಇಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿ ಆಚರಿಸಲಾಯಿತು.

    ಡಾ. ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರ, ಶೋಷಿತ ವರ್ಗಗಳ ನಾಯಕ, ಮಾಜಿ ಉಪ ಪ್ರಧಾನಿ ಮತ್ತು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ದಲಿತ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಇವರ ಜನ್ಮದಿನವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿನವಾಗಿ ಏಪ್ರಿಲ್ 05 ರಂದು ಆಚರಿಸಲಾಗುತ್ತದೆ.

    ಡಾ.ಬಾಬು ಜಗಜೀವನ ರಾಮ್ ಅವರು ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ. ತಳಸಮುದಾಯದ ಜನರಿಗೆ ಸಂವಿಧಾನಬದ್ಧ ನ್ಯಾಯ ದೊರಕಿಸಲು ಹೋರಾಡಿದರು.ಅವರ ದಕ್ಷ ಆಡಳಿತದಿಂದ ನಮ್ಮ ಮುಂದೆ ಅವರು ಆದರ್ಶಪ್ರಾಯರಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ವಿನೂತನ, ಅಮೋಘ ಸೇವೆಗೆ ದೇಶ ಅವರನ್ನು ‘ಹಸಿರು ಕ್ರಾಂತಿಯ ಹರಿಕಾರ’ ಎಂದೇ ಕರೆಯಿತು. ಇಂದು ಭವಿಷ್ಯದ ಭಾರತಕ್ಕೆ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿ. ಪಂ. ಉಪಕಾರ್ಯದರ್ಶಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪ್ರೇಮಾ, ಸರ್ಕಾರಿ ಕಾಲೇಜಿನ ಉಪ ನಿರ್ದೇಶಕಿ (ಪ್ರ) ಸುನಿತಾ ಡಿ.ಎಸ್ , ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆಗೈದ ಆಸಾಮಿಗಳು

    ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಕೊಲೆಗೈದ ಆಸಾಮಿಗಳು

    ವರ್ತೂರು: ಬೆಂಗಳೂರಿನ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪರಿಚಿತ ವ್ಯಕ್ತಿಗಳು ಕ್ರೂರವಾಗಿ ಕೊಲೆಗೈದ ಘಟನೆ ಬಳಗೆರೆ ಮುಖ್ಯರಸ್ತೆಯ ಸ್ಕಂದ ಎಲಿನಾ ಅಪಾರ್ಟ್ಮೆಂಟ್ ಮುಂಭಾಗದ ಪಾದಚಾರಿ ಮಾರ್ಗದಲ್ಲಿ ನಡೆದಿದೆ.

    ರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಘಟನೆ ಸಂಭವಿಸಿರುವುದಾಗಿ ತಿಳಿದುಬಂದಿದೆ.

    ದಲಾ ರಾಮ್ ಎಂಬಾತ ಈ ದುರಂತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದು, ಅಪರಿಚಿತ ವ್ಯಕ್ತಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

    ದಲಾರಾಮ್‌ ತಪ್ಪಿಸಿಕೊಳ್ಳಲು ಸ್ವಲ್ಪ ದೂರ ಓಡಿದ್ದು ಸಾಧ್ಯವಾಗದೇ ಫುಟ್‌ಪಾತ್‌ನಲ್ಲಿ ಕುಸಿದು ಬಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ.ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಯುವಕನನ್ನು ಯಾರು, ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾರೆಂಬುವುದು ಸದ್ಯಕ್ಕೆ ತಿಳಿದುಬಂದಿಲ್ಲ. ಪೊಲೀಸರು ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಕೆಎಸ್ಆರ್ಟಿಸಿ ಮತ್ತು-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 40 ಮಂದಿಗೆ ಗಾಯ.!

    ಕೆಎಸ್ಆರ್ಟಿಸಿ ಮತ್ತು-ಖಾಸಗಿ ಬಸ್ ಮುಖಾಮುಖಿ ಡಿಕ್ಕಿ; 40 ಮಂದಿಗೆ ಗಾಯ.!

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕೊಳಗಿಬೀಸ್ ಎಂಬಲ್ಲಿ ಎರಡು ಬಸ್‌ಗಳ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದಾಗಿ ಬಸ್ಸಿನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ.

    ಎಲ್ಲಿ ಅಪಘಾತ ಆಗಿದ್ದು..?

    ಶಿರಸಿ-ಕುಮಟಾ ರಸ್ತೆಯ ಕೊಳಗಿಬೀಸ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಭಟ್ಕಳದಿಂದ ಬಾಗಲಕೋಟೆ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ಮತ್ತು ಶಿರಸಿಯಿಂದ ಕುಮಟಾ ಕಡೆಗೆ ಹೊರಟಿದ್ದ ಖಾಸಗಿ ಬಸ್ ಮುಖಾಮುಖಿ ಡಿಕ್ಕಿಯಾದವು. ರಸ್ತೆಯ ತಿರುವಿನಲ್ಲೇ ಈ ಅಪಘಾತ ಸಂಭವಿಸಿದೆ.

    ಎರಡೂ ಬಸ್‌ಗಳು ವೇಗವಾಗಿ ಬಂದಿದ್ದು, ಬಸ್‌ಗಳ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಗಾಜುಗಳು ಚೂರುಚೂರಾಗಿ ರಸ್ತೆಯ ಮೇಲೆ ಬಿದ್ದಿವೆ. ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡು ಚೀರಾಡುತ್ತಿದ್ದರು.

    ರಕ್ಷಣಾ ಕಾರ್ಯಾಚರಣೆ

    ಘಟನೆ ನಡೆದ ತಕ್ಷಣ ಸ್ಥಳೀಯರು ಓಡಿಬಂದು ಗಾಯಾಳುಗಳ ರಕ್ಷಣೆಗೆ ಮುಂದಾದರು. ತಕ್ಷಣವೇ ಆಂಬ್ಯುಲೆನ್ಸ್ ಮತ್ತು ಖಾಸಗಿ ವಾಹನಗಳ ಮೂಲಕ ಎಲ್ಲಾ ಗಾಯಾಳುಗಳನ್ನು ಶಿರಸಿ ತಾಲೂಕು ಆಸ್ಪತ್ರೆಗೆ ರವಾನಿಸಲಾಯಿತು. ಕೆಲವು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರನ್ನು ಉತ್ತರ ಕನ್ನಡದ ದೊಡ್ಡ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.

    ಸಂಚಾರ ಅಸ್ತವ್ಯಸ್ತ

    ರಸ್ತೆಯ ಮಧ್ಯದಲ್ಲೇ ಎರಡೂ ಬಸ್‌ಗಳು ಸಿಲುಕಿಕೊಂಡಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿತ್ತು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದರು.

    ಅಪಘಾತಕ್ಕೆ ಕಾರಣವೇನು?

    ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

    ಗಾಯಾಳುಗಳ ವಿವರ

    ಗಾಯಾಳುಗಳಲ್ಲಿ ಹೆಚ್ಚಿನವರು ಸ್ಥಳೀಯ ಪ್ರಯಾಣಿಕರು. ಕೆಲವರು ಪ್ರವಾಸಿಗರು. ಇಬ್ಬರು ಬಸ್ ಚಾಲಕರು ಸಹ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರ ಕುಟುಂಬದವರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.