Blog

  • ಇಬ್ಬರ ಜೀವ ತಿಂದ 9 ಪೊಲೀಸ್​ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ಕೊಡಿಸಿದ ಧೈರ್ಯವಂತೆ

    ಇಬ್ಬರ ಜೀವ ತಿಂದ 9 ಪೊಲೀಸ್​ ಅಧಿಕಾರಿಗಳಿಗೆ ಗಲ್ಲುಶಿಕ್ಷೆ ಕೊಡಿಸಿದ ಧೈರ್ಯವಂತೆ

    ತಮಿಳುನಾಡಿನ ತೂತುಕುಡಿ ಜಿಲ್ಲೆಯ ಸಾತಂಕುಳಂ ಪೊಲೀಸ್ ಠಾಣೆ ಲಾಕಪ್ ಡೆತ್ ಪ್ರಕರಣದಲ್ಲಿ ಒಂಬತ್ತು ಪೊಲೀಸರನ್ನು ಗಲ್ಲಿಗೇರಿಸಲು ಕಾರಣರಾದ ಪ್ರಮುಖ ಸಾಕ್ಷಿ ಹೆಡ್ ಕಾನ್ಸ್ಟೇಬಲ್ ರೇವತಿ .

    ಒಂದು ಪ್ರಕರಣದಲ್ಲಿ ಸಾಕ್ಷಿಯೊಬ್ಬರು ವ್ಯವಸ್ಥೆಗಿಂತ ಹೇಗೆ ದೊಡ್ಡವರಾಗಬಹುದು ಎಂಬುದಕ್ಕೆ ಅದ್ಭುತ ಉದಾಹರಣೆ. 2020ರಲ್ಲಿ ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ನಡೆದ ಇಬ್ಬರ ಲಾಕಪ್ ಡೆತ್ ಕೇಸ್ನಲ್ಲಿ 9 ಪೊಲೀಸ್ ಅಧಿಕಾರಿಗಳಿಗೆ ಕಡೆಗೂ ಮಧುರೈ ಕೋರ್ಟ್ ಗಲ್ಲು ಶಿಕ್ಷೆ ತೀರ್ಪು ಘೋಷಿಸಿದೆ. 6 ವರ್ಷಗಳಿಂದ ಬಂಧನದಲ್ಲಿದ್ದ ಆರೋಪಿ ಖಾಕಿಗಳ ವಿರುದ್ಧ ನ್ಯಾಯಾಲಯ ನೀಡಿದ ಐತಿಹಾಸಿಕ ತೀರ್ಪಿಗೆ ಸದ್ಯ ದೇಶದ ಜನತೆ ತಲೆಬಾಗಿದ್ದಾರೆ.

    ಘಟನೆಯ ನಂತರ ಠಾಣೆಯಲ್ಲಿ ನಡೆದ ಪರಿಸ್ಥಿತಿಯೆಂದರೆ, ನಡೆದ ಘಟನೆ ಹೊರಬರದಂತೆ ನೋಡಿಕೊಳ್ಳಲು ಹೆಚ್ಚು ಒತ್ತಡವಿತ್ತು. ಸಾಕ್ಷ್ಯಗಳನ್ನು ಅಳಿಸಬೇಕು, ಸಂಪೂರ್ಣ ಕಥೆಯನ್ನು ಬದಲಾಯಿಸಬೇಕು.ಇವು ಮುಖ್ಯ ಗುರಿಗಳಾದವು.

    ಇಂತಹ ಸಮಯದಲ್ಲಿ, ಬಹುತೇಕ ಪೊಲೀಸ್ ಅಧಿಕಾರಿಗಳು ಮೌನವಾಗಿರುವುದು ಸುರಕ್ಷಿತವೆಂದು ಪರಿಗಣಿಸುತ್ತಾರೆ. ರೇವತಿ ಆ ಆಯ್ಕೆಯನ್ನು ತೆಗೆದುಕೊಳ್ಳಲಿಲ್ಲ. ಆಕೆಗೆ , ಅದು ಕೇವಲ ಕರ್ತವ್ಯದ ವಿಷಯವಾಗಿರಲಿಲ್ಲ … ತನ್ನ ಕಣ್ಣೆದುರೇ ನಡೆದ ದೌರ್ಜನ್ಯಕ್ಕೆ ಪ್ರತಿಭಟಿಸುವ ಧೈರ್ಯ ಇತ್ತು.

    ಒಂದು ಕಡೆ ಸಹ ಸಿಬ್ಬಂದಿ … ಮತ್ತೊಂದೆಡೆ ಉನ್ನತ ಅಧಿಕಾರಿಗಳ ಒತ್ತಡ … ಅಂತಹ ಪರಿಸ್ಥಿತಿಯಲ್ಲಿ ವ್ಯವಸ್ಥೆಯ ವಿರುದ್ಧ ನಿಲ್ಲುವುದು ಸಣ್ಣ ವಿಷಯವಲ್ಲ. ಆದರೂ ಆಕೆ ಹಿಂದೆ ಸರಿಯಲಿಲ್ಲ. ನ್ಯಾಯಧೀಶರ ಮುಂದೆ ಆಕೆಯ ಹೇಳಿಕೆ ಎಲ್ಲವೂ ಆ ಪ್ರಕರಣದ ದಿಕ್ಕನ್ನು ಬದಲಾಯಿಸಿತು. ಅದು ಕೇವಲ ಹೇಳಿಕೆಯಾಗಿರಲಿಲ್ಲ… ಆ ಕರಾಳ ರಾತ್ರಿ ನಡೆದ ಭಯಾನಕ ಕೃತ್ಯದ ಸ್ಪಷ್ಟ ಚಿತ್ರಣವಾಗಿತ್ತು.

    ಪೊಲೀಸರು ಠಾಣೆಯನ್ನು ಸ್ವಚ್ಛಗೊಳಿಸಿ ಸಾಕ್ಷ್ಯಗಳನ್ನು ಅಳಿಸಿ ಹಾಕಿದ್ದರೂ, ಗೋಡೆಗಳ ಮೂಲೆಗಳಲ್ಲಿ ಮತ್ತು ಮೇಜುಗಳ ಕೆಳಗೆ ಉಳಿದಿದ್ದ ರಕ್ತದ ಕಲೆಗಳನ್ನು ಆಕೆ ಚತುರತೆಯಿಂದ ಗುರುತಿಸಿ ನ್ಯಾಯಧೀಶರಿಗೆ ತೋರಿಸಿದ್ದು. ಆ ರಕ್ತದ ಕಲೆಗಳು ಆರೋಪಿಗಳ ಅಪರಾಧವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

    ಸಿಸಿಟಿವಿ ದೃಶ್ಯಾವಳಿಗಳು ನಾಶಮಾಡಿದ್ದರೂ, ಆಕೆಗೆ ನೆನಪಿರುವ ಘಟನೆಗಳ ಸಮಯವನ್ನು ಒಟ್ಟುಗೂಡಿಸಿ, ತನಿಖೆಗೆ ದಿಕ್ಸೂಚಿಯಾಗಿದ್ದು.

    ಇದು ಸಾಮಾನ್ಯ ವಿಷಯವಲ್ಲ. ಒಂದೇ ಇಲಾಖೆಯ ತನ್ನ ಸಹ ಉದ್ಯೋಗಿಗಳ ವಿರುದ್ಧ ಸತ್ಯವನ್ನು ಹೇಳುವುದು ಬಹಳ ದೊಡ್ಡ ನಿರ್ಧಾರವಾಗಿತ್ತು. ಆದರೆ ಆಕೆ ಹಿಂದೆ ಸರಿಯಲಿಲ್ಲ.
    ರೇವತಿ ಹೇಳಿದ ಮಾತಿನ ಆಧಾರದ ಮೇಲೆ ಪ್ರಕರಣವನ್ನು ಬಲಪಡಿಸಲಾಯಿತು. ನ್ಯಾಯಾಲಯವು ಆಕೆಯ ಸುರಕ್ಷತೆಯ ಮೇಲೆಯೂ ಗಮನಹರಿಸಿ ವಿಶೇಷ ರಕ್ಷಣೆ ನೀಡಿತು.

    ಸಾತಂಕುಳಂ ಪ್ರಕರಣದಲ್ಲಿ ನ್ಯಾಯ ಸಿಗಲು ಹಲವು ಕಾರಣಗಳಿರಬಹುದು.ಆದರೆ ಸತ್ಯ ಹೊರಬರಲು ಕಾರಣವಾದ ಒಂದೇ ಒಂದು ಹೆಸರು-ರೇವತಿ.

    ಬಹುಶಃ ಭಾರತದ ಇತಿಹಾಸದಲ್ಲಿ ಇಷ್ಟೊಂದು ಪೊಲೀಸರಿಗೆ ಮರಣದಂಡನೆ ವಿಧಿಸಲಾಗಿರುವ ವಿಶೇಷ ಪ್ರಕರಣ ಇದು! ವಿಶ್ವದಲ್ಲೇ ಮೊದಲನೆಯದು ಎಂಬುದು ಆಶ್ಚರ್ಯವೇನಿಲ್ಲ.
    ಬಡವರಿಗೆ ಬದುಕುವ ಹಕ್ಕಿಲ್ಲ ಎಂಬಂತೆ ವರ್ತಿಸುವ ಪೊಲೀಸರಿಗೆ ಒಂದು ದೊಡ್ಡ ಎಚ್ಚರಿಕೆ.

    ಮಧುರೈ ಸೆಷನ್ಸ್ ನ್ಯಾಯಾಲಯದ ತೀರ್ಪು ಮರುಭೂಮಿಯಲ್ಲಿ ಒಂದು ಓಯಸಿಸ್ ಆಗಿದೆ. ಉನ್ನತ ನ್ಯಾಯಾಲಯಗಳು ಸಹ ಈ ತೀರ್ಪನ್ನು ಬಲಪಡಿಸಲಿ ಎಂದು ಆಶಿಸೋಣ.ನಾಗರಿಕ ಹಕ್ಕುಗಳ ಉಲ್ಲಂಘನೆಯನ್ನು ನಿಲ್ಲಿಸಬೇಕು.

  • ಬಸವೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆ: ಬಸವಣ್ಣನವರ ತತ್ವಗಳು ಸರ್ವಕಾಲಿಕ: ಸಚಿವ ಈಶ್ವರ ಖಂಡ್ರೆ

    ಬಸವೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆ: ಬಸವಣ್ಣನವರ ತತ್ವಗಳು ಸರ್ವಕಾಲಿಕ: ಸಚಿವ ಈಶ್ವರ ಖಂಡ್ರೆ

    ಬೆಂ.ಗ್ರಾ.ಜಿಲ್ಲೆ: ಸಮಸಮಾಜದ ನಿರ್ಮಾಣಕ್ಕೆ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಬಸವ ತತ್ವಗಳ ಪ್ರಚಾರ, ಪ್ರಸಾರ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬಸವೇಶ್ವರ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ದೇವನಹಳ್ಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ನಡೆದ ವಿಶ್ವಗುರು ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ ಜಗತ್ತಿನಲ್ಲಿ ಕ್ರಾಂತಿ ಆಗಿದೆ. ಆದರೆ ಸರ್ವರ ಸಮಾನತೆಗಾಗಿ ಯಾವುದಾದರೂ ಕ್ರಾಂತಿ ನಡೆದಿದ್ದರೆ ಅದು ಕಲ್ಯಾಣದ ಕ್ರಾಂತಿ ಮಾತ್ರ ಎಂದು ಹೇಳಿದರು.

    12ನೇ ಶತಮಾನದಲ್ಲಿ ಮನುಷ್ಯರನ್ನು ಮನುಷ್ಯರಂತೆ ಕಾಣುತ್ತಿರಲಿಲ್ಲ. ಮೌಢ್ಯತೆ, ಅನಕ್ಷರತೆ ಇದ್ದು ಹೆಣ್ಣಿಗೆ ಸಮಾನತೆ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆಯ ತಳಹದಿಯ ಮೇಲೆ ಬಲಿಷ್ಠ ಸುಂದರ ಸಮಾಜದ ನಿರ್ಮಾಣಕ್ಕೆ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕತೆಯ ತಳಹದಿಯ ಮೇಲೆ ಕ್ರಾಂತಿ ನಡೆಯಿತು. ಶ್ರೇಣಿರಹಿತ, ವರ್ಗರಹಿತ, ಲಿಂಗಭೇದ ರಹಿತ ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಶ್ರಮಿಸಿದರು ಎಂದರು.

    ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳಿನ ಕಲ್ಪನೆಯನ್ನು ನೀಡಿ, ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ ಸ್ಥಾಪಿಸಿದರು. ಅಲ್ಲಿ 770 ವಿವಿಧ ವೃತ್ತಿಯ, ವಿವಿಧ ಸಮುದಾಯದ ಅಮರಗಣಂಗಳು ಪಾಲ್ಗೊಳ್ಳುತ್ತಿದ್ದರು. ಅವರೆಲ್ಲರೂ ವಚನಗಳನ್ನು ರಚಿಸಿದ್ದಾರೆ. ಪ್ರಜಾಪ್ರಭುತ್ವದ ಪರಿಕಲ್ಪನೆಗೆ ತಳಹದಿಯಾದ ಅನುಭವ ಮಂಟಪ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿದೆ ಎಂದರು. ಇತ್ತೀಚೆಗೆ ಆಧುನಿಕ ಅನುಭವ ಮಂಟಪ ಕಾಮಗಾರಿಗೆ 105 ಕೋಟಿ ಬಿಡುಗಡೆ ಮಾಡುವುದರೊಂದಿಗೆ ಈವರೆಗೆ 280 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷದೊಳಗೆ ಇದರ ಲೋಕಾರ್ಪಣೆ ಮಾಡಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಾರ್ಯಮಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವಣ್ಣನವರ ಚಿಂತನೆಗಳನ್ನು ಚಿಕ್ಕ ವಯಸ್ಸಿನಲ್ಲೆ ಮನಗಂಡು ಮೈಗೂಡಿಸಿಕೊಂಡೆ, ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರ ಬಗ್ಗೆ ಹೆಚ್ಚಿನ ಪಾಠ ಕಲಿತು ಆ ದಾರಿಯಲ್ಲೆ ನಡೆಯುವಂತ ಕೆಲಸ ಮಾಡುತ್ತಿದ್ದೇನೆ. ಎಲ್ಲ ದೇವರುಗಳಿಗಿಂತ ಮೇಲು ದೇವರು ಬಸವಣ್ಣನವರು, 12 ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮಾಜದ ಸುಧಾರಣೆ, ಮಾನವತವಾದವನ್ನು ಪ್ರತಿಪಾದಿಸಿದಂತಹ ಮಹಾನ್ ಚೇತನ ಬಸವಣ್ಣನವರು, ಅವರ ವಚನಗಳು, ಆದರ್ಶಗಳು, ಕಾಯಕ ನಿಷ್ಟೆ ಎಂದೆಂದಿಗೂ ಶಾಶ್ವತ ಎಂದು ಹೇಳಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಕೆ ಸುಧಾಕರ್ ಮಾತನಾಡಿ ಬಸವಣ್ಣನವರು ಕಾಯಕವೇ ಕೈಲಾಸವೆಂದರು. ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ನೀಡಿದ ಮಹಾನ್ ದಾರ್ಶನಿಕ ಬಸವಣ್ಣ ಅವರ ಆದರ್ಶಗಳು ನಮ್ಮ ಸಮಾಜಕ್ಕೆ ಸದಾ ದಾರಿದೀಪವಾಗಿವೆ. ವಚನಗಳನ್ನು ಬರೆಯುವುದರ ಜೊತೆಗೆ ವಚನದಲ್ಲಿರುವಂತೆ ಪಾಲಿಸಿದ್ದರು. ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕು. ಪ್ರತಿದಿನದ ಮಾಡುವ ಕೆಲಸದಲ್ಲಿ ಬಸವಣ್ಣನವರನ್ನು ಕಾಣಬೇಕು. ಬಸವಣ್ಣನವರು ಆಚರಣೆಗೆ ತಂದ ದಾಸೋಹವು ಈಗ ತ್ರಿವಿಧವಾದ ಶಿಕ್ಷಣ, ಆರೋಗ್ಯ, ಅನ್ನ ದಾಸೋಹಗಳಾಗಿ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ.

    ಪ್ರತಿಮೆ ವಿಶೇಷತೆ:

    ಜಿಲ್ಲಾಡಳಿತ ಭವನ ಆವರಣದಲ್ಲಿ ಲೋಕಾರ್ಪಣೆಗೊಂಡ ಬಸವಣ್ಣ ಅವರ ಪ್ರತಿಮೆಯಲ್ಲಿ ಮಂಟಪ 28 ಅಡಿ. ಕಂಚಿನ ಪ್ರತಿಮೆ 5 ಅಡಿ ಉದ್ದವಾಗಿದ್ದು 450 ಕೆಜಿ ಕಂಚು ಬಳಕೆ ಮಾಡಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

    ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಪಾಲಪನಹಳ್ಳಿ ಮಠದ ಶ್ರೀ ಸಿದ್ದರಾಜುಸ್ವಾಮಿಗಳು, ಐದನೇ ಹಣಕಾಸು ಆಯೋಗದ ಅಧ್ಯಕ್ಷರಾದ ನಾರಾಯಣಸ್ವಾಮಿ, ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ, ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ಜಗಜ್ಯೋತಿ ಬಸವೇಶ್ವರ ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕಸ್ಟಡಿಯಲ್ಲಿದ್ದ ತಂದೆ-ಮಗ ಸಾವು, 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

    ಕಸ್ಟಡಿಯಲ್ಲಿದ್ದ ತಂದೆ-ಮಗ ಸಾವು, 9 ಪೊಲೀಸರಿಗೆ ಮರಣದಂಡನೆ ವಿಧಿಸಿದ ನ್ಯಾಯಾಲಯ

    ಮಧುರೈ (ತಮಿಳುನಾಡು): ದೇಶವನ್ನೇ ಬೆಚ್ಚಿಬೀಳಿಸಿದ್ದ ತೂತ್ತುಕುಡಿಯ ಶಾಂತನ್‌ಕುಲಂನಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾಗಲೇ ತಂದೆ, ಮಗ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಸೋಮವಾರ 9 ಪೊಲೀಸರಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.

    ಆರು ವರ್ಷಗಳ ಹಿಂದೆ ನಡೆದಿದ್ದ ಘಟನೆಯಲ್ಲಿ ವ್ಯಾಪಾರಿ ಪಿ. ಜಯರಾಜ್ ಮತ್ತು ಅವರ ಪುತ್ರ ಜೆ.ಬೆನಿಕ್ಸ್ ಪೊಲೀಸ್ ಚಿತ್ರಹಿಂಸೆಗೆ ಬಲಿಯಾಗಿದ್ದರು.

    ಸಿಬಿಐ ಈ ಪ್ರಕರಣದ ತನಿಖೆ ನಡೆಸಿತ್ತು, ಇದೀಗ ಮಧುರೈ ಜಿಲ್ಲಾ ನ್ಯಾಯಾಲಯ ಮಹತ್ವದ ಈ ತೀರ್ಪು ನೀಡಿದೆ.

    ಪ್ರಕರಣದ ಹಿನ್ನೆಲೆ;

    ಮೊಬೈಲ್ ಫೋನ್ ಮಾರಾಟದ ಅಂಗಡಿ ನಡೆಸುತ್ತಿದ್ದ ಜಯರಾಜ್, ಮಗ ಬೆನಿಕ್ಸ್ ಲಾಕ್‌ಡೌನ್ ನಿಯಮ ಉಲ್ಲಂಘಿಸಿ, ನಿಗದಿತ ಅವಧಿ ಮೀರಿ ವ್ಯಾಪಾರ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಜೂನ್ 19, 2020ರಂದು ಪೊಲೀಸರು ಅವರನ್ನು ಬಂಧಿಸಿದ್ದರು.

    ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಅವರಿಗೆ ಗಂಭೀರವಾದ ಗಾಯಗಳಾಗಿದ್ದವು. ಹೀಗಾಗಿ ಕೋವಿಲ್‌ಪಟ್ಟಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಜೂನ್ 23ರಂದು ಮೃತಪಟ್ಟರು. ಪೊಲೀಸರು ನೀಡಿದ ಚಿತ್ರಹಿಂಸೆಯಿಂದಾಗಿ ತಂದೆ, ಮಗ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬದವರು ಆರೋಪಿಸಿದ್ದರು.

    ಈ ಘಟನೆಗೆ ತಮಿಳುನಾಡು ಮಾತ್ರವಲ್ಲದೇ ದೇಶದಾದ್ಯಂತ ವ್ಯಾಪಕ ಆಕೋಶ ವ್ಯಕ್ತವಾಗಿತ್ತು.

  • ನೆಲದ ಮೇಲೆ ನಿದ್ದೆ, ಎಳನೀರು ಸೇವನೆ: ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಸರಳತೆಗೆ ಫ್ಯಾನ್ಸ್ ಫಿದಾ!

    ನೆಲದ ಮೇಲೆ ನಿದ್ದೆ, ಎಳನೀರು ಸೇವನೆ: ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ ಸರಳತೆಗೆ ಫ್ಯಾನ್ಸ್ ಫಿದಾ!

    ಬೆಂಗಳೂರು: ಕನ್ನಡ ಚಿತ್ರರಂಗದಿಂದ ಬಾಲಿವುಡ್‌ವರೆಗೆ ನಟ, ನಿರ್ದೇಶಕ ಹಾಗೂ ನೃತ್ಯ ನಿರ್ದೇಶಕರಾಗಿ ಪಾರುಪತ್ಯ ಮೆರೆದಿರುವ ಪ್ರಭುದೇವ ಅವರು ತಮ್ಮ ಸರಳ ಜೀವನದ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ನಟನಾಗಿದ್ದರೂ, ಪ್ರಭುದೇವ ಅವರು ಸಾಮಾನ್ಯ ಬಟ್ಟೆ ಧರಿಸಿ, ಯಾವುದೇ ಹಮ್ಮಿಲ್ಲದೆ ನೆಲದ ಮೇಲೆ ಕುಳಿತು ಎಳನೀರು ಕುಡಿಯುತ್ತಿರುವುದು ವಿಡಿಯೋದಲ್ಲಿದೆ.

    ಅಷ್ಟೇ ಅಲ್ಲದೆ, ಐಷಾರಾಮಿ ಹಾಸಿಗೆ ಅಥವಾ ದಿಂಬಿನ ಹಂಗಿಲ್ಲದೆ ಬರಿ ನೆಲದ ಮೇಲೆ ಮಲಗಿಕೊಂಡಿರುವ ದೃಶ್ಯ ಅಭಿಮಾನಿಗಳ ಹೃದಯ ಗೆದ್ದಿದೆ. “ಎಷ್ಟೇ ಎತ್ತರಕ್ಕೆ ಬೆಳೆದರೂ ಬೇರು ಮರೆಯಬಾರದು ಎಂಬುದು ಪ್ರಭುದೇವ ಅವರನ್ನು ನೋಡಿ ಕಲಿಯಬೇಕು” ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

  • ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು:  ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

    ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು: ದೊಣ್ಣೆಯಿಂದ ಹೊಡೆದು ಕೊಂದೇ ಬಿಟ್ಟ ದುರುಳ.!

    ಕೋಲಾರ: :- ಮಧ್ಯಪಾನ ಮಾಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ ಮಲಗಿದ್ದವನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದಲ್ಲಿ ನಡೆದಿದೆ.

    ವೆಂಕಟೇಶ್ (50) ಕೊಲೆಯಾದ ವ್ಯಕ್ತಿ. ರಘು ಕೊಲೆಗೈದ ಆರೋಪಿ. ಕುಡಿಯಬೇಡ ಎಂದು ಬುದ್ದಿವಾದ ಹೇಳಿದ್ದಕ್ಕೆ ವೆಂಕಟೇಶ್‌ನನ್ನು ಆರೋಪಿ ರಘು ಕೊಲೆಗೈದಿದ್ದಾನೆ.

    ಸಂಜೆಯಾದ್ರೆ ಕುಡಿದು ಕೈಯಲ್ಲಿ ದೊಣ್ಣೆ ಹಿಡಿದು ಆರೋಪಿ ರಘು ಓಡಾಡ್ತಿದ್ದ. ಆರೋಪಿಯ ವರ್ತನೆಯಿಂದ ದೇವರಾಯಸಮುದ್ರ ಗ್ರಾಮಸ್ಥರು ಬೇಸತ್ತಿದ್ದರು ಎಂದು ಹೇಳಲಾಗಿದೆ.

    ವೆಂಕಟೇಶ್ ಕೊಲೆಗೈದ ನಂತರ ದೊಣ್ಣೆಕೋಲು ಬಿಸಾಡಿ ಆರೋಪಿ ರಘು ಹೋಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಆರೋಪಿಯನ್ನ ಮುಳಬಾಗಿಲು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

  • ಇದು ಚರಿತ್ರೆ ಸೃಷ್ಟಿಸೋ ಅವತಾರ: ಸಿನೆಮಾ ದಿಗ್ಗಜರ ಮಾರ್ಗದರ್ಶನದಲ್ಲಿ ಹದಿಹರೆಯದವರಿಗೆ ಅನಿಮೇಷನ್ ಶಿಕ್ಷಣ

    ಇದು ಚರಿತ್ರೆ ಸೃಷ್ಟಿಸೋ ಅವತಾರ: ಸಿನೆಮಾ ದಿಗ್ಗಜರ ಮಾರ್ಗದರ್ಶನದಲ್ಲಿ ಹದಿಹರೆಯದವರಿಗೆ ಅನಿಮೇಷನ್ ಶಿಕ್ಷಣ

    • ಅನಿಮೇಷನ್ ಸಿನಿಮಾ ಕಲಿಯಲು ಇಲ್ಲಿದೆ ಅವಕಾಶ
    • ಕಥೆಗಳಿಗೆ ಹೊಸ ಟ್ವಿಸ್ಟ್ ನೀಡಲಿರುವ ಮಕ್ಕಳು
    • ಸೆಲೆಬ್ರಿಟಿ ತಜ್ಞರೊಂದಿಗೆ ಅರಳಲಿ ನಿಮ್ಮ ಪ್ರತಿಭೆ
    • ಪರಮ್‌ ಫೌಂಡೇಶನ್‌ನಿಂದ ವಿನೂತನ ಬೇಸಿಗೆ ಶಿಬಿರ

    ಬೆಂಗಳೂರು:ನಿಮ್ಮ ಮಗುವಿನಲ್ಲಿರುವ ಸೃಜನಶೀಲತೆಗೆ ಸಿನೆಮಾ ಲೋಕದ ದಿಗ್ಗಜರ ಮಾರ್ಗದರ್ಶನ ಸಿಕ್ಕರೆ ಹೇಗಿರುತ್ತದೆ? ಅಂತಹ ಒಂದು ಅದ್ಭುತ ಅವಕಾಶವನ್ನು *ʻಪರಮ್‌ ಫೌಂಡೇಶನ್* ‘ ಇದೀಗ ಹದಿಹರೆಯದವರಿಗಾಗಿ (11-16 ವರ್ಷ) ತಂದಿದೆ. ಕೇವಲ ತಾಂತ್ರಿಕ ಕಲಿಕೆಯಲ್ಲದೆ, ಹಳೆಯ ನೀತಿ ಕಥೆಗಳಿಗೆ ಆಧುನಿಕ ಸಮಾಜದ ಸವಾಲುಗಳನ್ನು ಬೆರೆಸಿ ಕಿರುಚಿತ್ರ ತಯಾರಿಸುವ ವಿನೂತನ ‘ಸ್ಟಾಪ್ ಮೋಷನ್ ಅನಿಮೇಷನ್’ ಶಿಬಿರ ಏಪ್ರಿಲ್ 20ರಿಂದ ಆರಂಭವಾಗಲಿದೆ. ಈ ಶಿಬಿರದ ಅತ್ಯಂತ ದೊಡ್ಡ ಆಕರ್ಷಣೆಯೆಂದರೆ ಚಿತ್ರರಂಗ ಹಾಗೂ *ಕಲಾ ಲೋಕದ ಖ್ಯಾತನಾಮರಾದ ರಘು ದೀಕ್ಷಿತ್ (ಸಂಗೀತ), ಎಂ.ಡಿ. ಪಲ್ಲವಿ ಮತ್ತು ಶ್ವೇತಾ (ಧ್ವನಿ ಸಂಯೋಜನೆ), ಕಾರ್ತಿಕ್ ಸರಗೂರು (ದೃಶ್ಯಕಾವ್ಯ) ಹಾಗೂ ಸಿದ್ಧಾರ್ಥ್ ಭರತ್ (ವಿಜ್ಞಾನ)* ಅವರು ವಿದ್ಯಾರ್ಥಿಗಳ ಜೊತೆ ನೇರವಾಗಿ ಸಂವಾದ ನಡೆಸಿ ಮಾರ್ಗದರ್ಶನ ನೀಡುವುದು.

    ಯಾವ್ಯಾವ ಸೆಲೆಬ್ರಿಟಿಯಿಂದ ಏನು ಕಲಿಕೆ?

    • ರಘು ದೀಕ್ಷಿತ್: ತಮ್ಮ ವಿಶಿಷ್ಟ ಸಂಗೀತದ ಮೂಲಕ ಸಿನೆಮಾದಲ್ಲಿ ಭಾವನೆಗಳನ್ನು (Sound & Mood) ತುಂಬುವ ಕಲೆ ಕಲಿಸಲಿದ್ದಾರೆ.

    • ಎಂ.ಡಿ. ಪಲ್ಲವಿ ಮತ್ತು ಶ್ವೇತಾ: ಕಥೆಯ ಪಾತ್ರಗಳಿಗೆ ಪ್ರಾಣ ತುಂಬುವ ಧ್ವನಿ ಸಂಯೋಜನೆ (Voice & Performance) ಕುರಿತು ತರಬೇತಿ ನೀಡಲಿದ್ದಾರೆ.

    • ಕಾರ್ತಿಕ್ ಸರಗೂರು: ದೃಶ್ಯಕಾವ್ಯವನ್ನು ಕಟ್ಟಿಕೊಡುವ ಪರಿ ಹಾಗೂ ಇತಿಹಾಸದ ಮಹತ್ವವನ್ನು (Visual Storytelling) ವಿವರಿಸಲಿದ್ದಾರೆ.

    • ಸಿದ್ಧಾರ್ಥ್ ಭರತ್: ಅನಿಮೇಷನ್‌ನಲ್ಲಿ ವಿಜ್ಞಾನದ ಆವಿಷ್ಕಾರಗಳನ್ನು (Science in Art) ಹೇಗೆ ಅಳವಡಿಸಬಹುದು ಎಂಬ ವಿಭಿನ್ನ ನೋಟ ನೀಡಲಿದ್ದಾರೆ.

    • ರಾಬಿನ್ ಸ್ಟ್ಯಾಪ್ಲಿ: ಅಮೆರಿಕದ ರಾಷ್ಟ್ರೀಯ ಅನಿಮೇಷನ್ ವಸ್ತುಸಂಗ್ರಹಾಲಯದ ರಾಬಿನ್ ಸ್ಟ್ಯಾಪ್ಲಿ ಅವರು ಕೂಡ ಈ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.

    ಮೂರು ವಾರಗಳ ರೋಚಕ ಸಿನೆಮಾ ಪಯಣ:

    ವಾರ 1 (ಫೌಂಡೇಶನ್): ಈ ಹಂತವು ಅನಿಮೇಷನ್ ಕ್ಷೇತ್ರಕ್ಕೆ ಪದಾರ್ಪಣೆ ಮಾಡಲು ಭದ್ರ ಬುನಾದಿಯನ್ನು ಹಾಕಿಕೊಡಲಿದೆ. ಇಲ್ಲಿ ವಿದ್ಯಾರ್ಥಿಗಳು ಸ್ಟಾಪ್ ಮೋಷನ್ ಅನಿಮೇಷನ್‌ನ ಮೂಲಭೂತ ತತ್ವಗಳನ್ನು ಅತ್ಯಂತ ಆಳವಾಗಿ ಕಲಿಯಲಿದ್ದಾರೆ. ಕೇವಲ ಡಿಜಿಟಲ್ ಜಗತ್ತಷ್ಟೇ ಅಲ್ಲದೆ, ಫ್ಲಿಪ್‌ಬುಕ್ ಮತ್ತು ಫೆನಾಕಿಸ್ಟೋಸ್ಕೋಪ್‌ಗಳಂತಹ ಸಾಂಪ್ರದಾಯಿಕ ಅನಿಮೇಷನ್ ತಂತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸಲಿದ್ದಾರೆ. ಅಷ್ಟೇ ಅಲ್ಲದೆ, ವಸ್ತು ಆಧಾರಿತ (Object-based) ಅನಿಮೇಷನ್‌ಗೆ ಅಗತ್ಯವಿರುವ ಭೌತಿಕ ಪರಿಸರ ಮತ್ತು DIY ಸ್ಟುಡಿಯೋವನ್ನು ತಾವೇ ಸ್ವತಃ ನಿರ್ಮಿಸುವ ತಾಂತ್ರಿಕ ಕಲೆಯನ್ನು ಇಲ್ಲಿ ಮೈಗೂಡಿಸಿಕೊಳ್ಳಲಿದ್ದಾರೆ.

    ವಾರ 2 (ಮೆಂಟರ್‌ಶಿಪ್): ಈ ವಾರವು ಕಥಾವಸ್ತು ಮತ್ತು ಸೃಜನಶೀಲತೆಗೆ ಮೀಸಲಾಗಿದ್ದು, ಮೇಲಿನ ಸೆಲೆಬ್ರಿಟಿ ತಜ್ಞರೊಂದಿಗೆ ನೇರ ಸಂವಾದಗಳು ನಡೆಯಲಿವೆ. ರಘು ದೀಕ್ಷಿತ್, ಎಂ.ಡಿ. ಪಲ್ಲವಿ ಮತ್ತು ಕಾರ್ತಿಕ್ ಸರಗೂರು ಅವರಂತಹ ದಿಗ್ಗಜರು ಕಥೆಯ ಭಾವನೆಗಳು, ಧ್ವನಿ ಮತ್ತು ದೃಶ್ಯ ರೂಪಕಗಳ ಕುರಿತು ಸ್ಫೂರ್ತಿ ನೀಡಲಿದ್ದಾರೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಹಳೆಯ ನೀತಿ ಕಥೆಗಳಿಗೆ ಆಧುನಿಕ ‘ಟ್ವಿಸ್ಟ್’ ನೀಡಿ ಸ್ಕ್ರಿಪ್ಟ್ ಸಿದ್ಧಪಡಿಸಲಿದ್ದಾರೆ. ವಿಜ್ಞಾನ ತಜ್ಞರ ಜೊತೆಗಿನ ಚರ್ಚೆಗಳು ಈ ಕಥೆಗಳಲ್ಲಿ ನಾವೀನ್ಯತೆ ತುಂಬಲು ಸಹಾಯ ಮಾಡಲಿವೆ.

    ವಾರ 3 (ಫೈನಲ್ ಕಟ್): ಇದು ಅಂತಿಮ ಚಿತ್ರೀಕರಣ ಮತ್ತು ಸಂಕಲನದ ಹಂತ. ಚಿತ್ರೀಕರಣಗೊಂಡ ನೂರಾರು ಫ್ರೇಮ್‌ಗಳನ್ನು ಒಟ್ಟುಗೂಡಿಸಿ ಸಿನೆಮಾದ ರೂಪ ನೀಡುವ ಸಂಕೀರ್ಣವಾದ ‘ಪೋಸ್ಟ್-ಪ್ರೊಡಕ್ಷನ್’ ಕೆಲಸಗಳು ಇಲ್ಲಿ ನಡೆಯುತ್ತವೆ. ಸೌಂಡ್ ಡಿಸೈನ್ ಮತ್ತು ಅಂತಿಮ ಎಡಿಟಿಂಗ್ ಮೂಲಕ ವಿದ್ಯಾರ್ಥಿಗಳು ತಯಾರಿಸಿದ ಕಲ್ಪನೆಗಳು ಒಂದು ಪರಿಪೂರ್ಣವಾದ ಫೀಚರ್ ಫಿಲ್ಮ್ ರೂಪ ಪಡೆದು ಪ್ರದರ್ಶನಕ್ಕೆ ಸಿದ್ಧವಾಗಲಿವೆ.

    ವಿವರಗಳು ಮತ್ತು ಸಮಯ:
    • ಆಯೋಜನೆ: ಪರಮ್ ಫೌಂಡೇಶನ್
    • ದಿನಾಂಕ: ಏಪ್ರಿಲ್ 20ರಿಂದ ಮೇ 8
    • ಸಮಯ: ಸೋಮವಾರದಿಂದ ಶುಕ್ರವಾರ, ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ (ತಜ್ಞರ ಸೆಷನ್ ಬೆಳಗ್ಗೆ 11 ರಿಂದ 12 ರವರೆಗೆ).
    • ಸ್ಥಳ: ParSEC ಗ್ಯಾಲರಿ, ಜಯನಗರ, ಬೆಂಗಳೂರು.

    ಮೇ 9ರಂದು ನಡೆಯಲಿರುವ ಗ್ರ್ಯಾಂಡ್ ಶೋಕೇಸ್‌ನಲ್ಲಿ ಪೋಷಕರು, ಪ್ರೇಕ್ಷಕರ ಸಮ್ಮುಖದಲ್ಲಿ ಮಕ್ಕಳೇ ಸಿದ್ಧಪಡಿಸಿದ ಈ ಅದ್ಭುತ ಕಿರುಚಿತ್ರಗಳನ್ನು ಪ್ರದರ್ಶಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ: Paramfoundation.org ಹಾಗೂ 84312 66867 ಸಂಪರ್ಕಿಸಬಹುದು

  • ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

    ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

    ಬೆಂ.ಗ್ರಾ.ಜಿಲ್ಲೆ; 2026-27 ನೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ(ಆಂಗ್ಲ ಮಾಧ್ಯಮ)ಗೆ ಸೇರಲು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

    ಅರ್ಜಿ ನಮೂನೆ ಮತ್ತು ವಿವರಗಳನ್ನು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಛೇರಿ ಸಮಾಜ ಕಲ್ಯಾಣ ಇಲಾಖೆ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಹಾಗೂ ನೆಲಮಂಗಲ ತಾಲೂಕುಗಳಲ್ಲಿ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 5 ಕೊನೆಯ ದಿನ.

    ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂ.ಸಂ. 080-29787448 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಸ್ನೇಹಿತನ ಮದುವೆಗೆ ಹೋದಾಗಲೇ: ನದಿ ನೀರಿನಲ್ಲಿ ಮುಳುಗಿ ಐಟಿ ಉದ್ಯೋಗಿ ಸಾವು

    ಸ್ನೇಹಿತನ ಮದುವೆಗೆ ಹೋದಾಗಲೇ: ನದಿ ನೀರಿನಲ್ಲಿ ಮುಳುಗಿ ಐಟಿ ಉದ್ಯೋಗಿ ಸಾವು

    ಚಿಕ್ಕಮಗಳೂರು: ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬನ್ನೂರು ಗ್ರಾಮದ ಬಳಿ ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತ ಯುವಕನನ್ನು ಗದಗ ಮೂಲದ, ಬೆಂಗಳೂರಿನ ಖಾಸಗಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ (27) ಎಂದು ಗುರುತಿಸಲಾಗಿದೆ.

    ಅಭಿಷೇಕ್ ಅವರು ತಮ್ಮ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಸ್ನೇಹಿತರ ಜತೆ ಸೇರಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಸ್ಥಳೀಯ ಹೋಂ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ ಇವರು, ಇಂದು ಬೆಳಿಗ್ಗೆ ಭದ್ರಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ನಾಪತ್ತೆಯಾಗಿದ್ದರು.

    ಯುವಕ ನಾಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯ ನಂತರ, ಬನ್ನೂರು ಗ್ರಾಮದ ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ. ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ಈ ಘಟನೆ ತೀವ್ರ ಶೋಕವನ್ನುಂಟು ಮಾಡಿದೆ. ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

  • ಒಂದೇ ದಿನ ಮೃತಪಟ್ಟ ಪತಿ-ಪತ್ನಿ : ಅನಾಥರಾದ ಮೂವರು ಮಕ್ಕಳು ; ಶೋಕ ಸಾಗರದಲ್ಲಿ ಮುಳುಗಿದ ಇಡೀ ಗ್ರಾಮ

    ಒಂದೇ ದಿನ ಮೃತಪಟ್ಟ ಪತಿ-ಪತ್ನಿ : ಅನಾಥರಾದ ಮೂವರು ಮಕ್ಕಳು ; ಶೋಕ ಸಾಗರದಲ್ಲಿ ಮುಳುಗಿದ ಇಡೀ ಗ್ರಾಮ

    ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವ ದಾರುಣ ಘಟನೆ ಸಂಭವಿಸಿದ್ದು, ಪತಿ, ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ.

    ಮಧುರಾ ಕರೆಪ್ಪ ಮಾದರ (30) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

    ಇನ್ನೊಂದೆಡೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆತಂಕಗೊಂಡ ಪತಿ ಕರೆಪ್ಪ ಗಂಗಪ್ಪ ಮಾದರ (36) ಅವರು ತಕ್ಷಣ ಆಸ್ಪತ್ರೆಗೆ ತೆರಳಲು ಹೊರಟಿದ್ದರು. ಆದರೆ ವಿಧಿಯಾಟವೆನ್ನುವಂತೆ, ಮಾರ್ಗಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದಾರೆ. ಒಂದೇ ದಿನದಲ್ಲಿ ಪತಿ, ಪತ್ನಿ ಇಬ್ಬರೂ ಸಾವಿಗೀಡಾದ ಈ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

    ಈ ದಂಪತಿಗಳು ಕಳೆದ 9 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಇವರಿಗೆ ಒಂದು ಹೆಣ್ಣು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಪೋಷಕರನ್ನು ಒಂದೇ ದಿನ ಕಳೆದುಕೊಂಡಿರುವ ಈ ಮೂವರು ಮಕ್ಕಳ ಸ್ಥಿತಿ ಕರುಣಾಜನಕವಾಗಿದ್ದು, ಕುಟುಂಬದವರಲ್ಲದೇ ಗ್ರಾಮಸ್ಥರ ಮನಸ್ಸನ್ನೂ ಮಿಡಿಯುವಂತಾಗಿದೆ.

    ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬೈಲಹೊಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ದುರಂತ ಘಟನೆ ಅರವಳ್ಳಿ ಗ್ರಾಮದಲ್ಲಿ ಗಂಭೀರ ಶೋಕದ ವಾತಾವರಣ ನಿರ್ಮಾಣ ಮಾಡಿದ್ದು, ಮೃತರ ಕುಟುಂಬಕ್ಕೆ ಗ್ರಾಮಸ್ಥರು ಸಂತಾಪ ಸೂಚಿಸುತ್ತಿದ್ದಾರೆ.

  • ಸಿಗರೇಟ್‌ ವಿಚಾರಕ್ಕೆ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹ*ತ್ಯೆ

    ಸಿಗರೇಟ್‌ ವಿಚಾರಕ್ಕೆ ಗ್ಯಾಂಗ್‌ವಾರ್‌, ಮದ್ದೂರಿನಲ್ಲಿ ರೌಡಿಶೀಟರ್‌ ಬರ್ಬರ ಹ*ತ್ಯೆ

    ಮಂಡ್ಯ:-ಕ್ಷುಲ್ಲಕ ವಿಚಾರಕ್ಕೆ ಎರಡು ಯುವಕರ ಗುಂಪುಗಳ ನಡುವೆ ನಡೆದ ಗಲಾಟೆ ಓರ್ವನ ಕೊ*ಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆ ಮದ್ದೂರಿನ ಹೊಳೆ ಆಂಜನೇಯ ರಸ್ತೆಯ ಪಟೇಲ್ ಸಾಮಿಲ್ ಬಳಿ ನಡೆದಿದೆ.

    ಕ್ಷುಲ್ಲಕ ಕಾರಣಕ್ಕೆ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸಿಗರೇಟ್‌ ವಿಚಾರವಾಗಿ ಎದ್ದ ತಗಾದೆ ಎರಡು ಗುಂಪುಗಳ ನಡುವೆ ಬಡಿದಾಟಕ್ಕೆ ತಿರುಗಿದ್ದು, ಇದರಲ್ಲಿ ರೌಡಿ ಶೀಟರ್, ಮರಳಿಗ ಗ್ರಾಮದ ಯಶ್ವಂತ್ @ಕಜ್ಜಿ ಅಭಿ ಎಂಬಾತನನ್ನು ಕೊಲೆ ಮಾಡಲಾಗಿದೆ. ಗೊರವನಹಳ್ಳಿ ಗ್ರಾಮದ ದರ್ಶನ್, ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ.
    ಇಬ್ಬರಿಗೂ ಮಂಡ್ಯ ಮಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆ ಬಳಿಕ ಸ್ಥಳಕ್ಕೆ ಮಂಡ್ಯ ಎಸ್ಪಿ ಶೋಭಾರಾಣಿ ಭೇಟಿ, ಪರಿಶೀಲನೆ ನಡೆದಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.