Blog

  • ಹೊಸದಾಗಿ ಡಾಂಬರೀಕರಣಗೊಂಡ ರಸ್ತೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ: ಲೋಖಂಡೆ ಸ್ನೇಹಲ್ ಸುಧಾಕರ್

    ಹೊಸದಾಗಿ ಡಾಂಬರೀಕರಣಗೊಂಡ ರಸ್ತೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ: ಲೋಖಂಡೆ ಸ್ನೇಹಲ್ ಸುಧಾಕರ್

    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ಕುಸಿತ, ರಸ್ತೆ ಗುಂಡಿಗಳ ದುರಸ್ತಿ, ಮಳೆನೀರು ಚರಂಡಿ, ಒಳಚರಂಡಿ ವ್ಯವಸ್ಥೆ, ಮ್ಯಾನ್‌ಹೋಲ್‌ಗಳ ಅಳವಡಿಕೆ ಮತ್ತು ಮ್ಯಾನ್‌ಹೋಲ್‌ಗಳ ಮಟ್ಟ ಸರಿಪಡಿಸುವಿಕೆ ಹಾಗೂ ಜಲಮಂಡಳಿ, ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಕುರಿತು ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ರಸ್ತೆ ಪುನಃಸ್ಥಾಪನೆ ಸಭೆ ನಡೆಯಿತು.

    ಸಭೆಯಲ್ಲಿ ಈ ಹಿಂದೆ ನೀಡಿದ್ದ ನಿರ್ದೇಶನಗಳ ಅನುಷ್ಠಾನ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಅಪರ ಆಯುಕ್ತರು, ಸೂಚನೆಗಳ ಪಾಲನೆಯಲ್ಲಿ ವಿಳಂಬ ತೋರಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಎಲ್ಲಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.


    ರಸ್ತೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ

    ಹೊಸದಾಗಿ ಡಾಂಬರೀಕರಣಗೊಂಡ ರಸ್ತೆಗಳನ್ನು ಕನಿಷ್ಠ ಒಂದು ವರ್ಷದವರೆಗೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಸೀಗೆಹಳ್ಳಿ, ಬಸವನಪುರ ಹಾಗೂ ಹೊರವರ್ತುಲ ರಸ್ತೆ (ಉಡುಪಿ ಸನ್ನಿಧಿ ಹೋಟೆಲ್ ಬಳಿ), ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು ಮುಖ್ಯ ರಸ್ತೆ, ದೇವರಬೀಸನಹಳ್ಳಿಯಲ್ಲಿ ಜಲಮಂಡಳಿಯಿಂದ ರಸ್ತೆ ಅಗೆದಿರುವ ಸ್ಥಳಗಳನ್ನು ತಕ್ಷಣವೇ ದುರಸ್ತಿಪಡಿಸಿ ಪಾಲಿಕೆಗೆ ವರದಿ ಸಲ್ಲಿಸಲು ಸೂಚಿಸಲಾಯಿತು. ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳು ಹಾಗೂ ರಸ್ತೆ ಕುಸಿತದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ರಸ್ತೆ ಅಗೆತದಿಂದ ಹಾನಿಗೊಳಗಾಗಿರುವ ಸ್ಥಳಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ರಸ್ತೆ ಮರುಸ್ಥಾಪನೆ ಕಾರ್ಯ ಕೈಗೊಳ್ಳಬೇಕು. ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದರ ಜೊತೆಗೆ, ಕಾಮಗಾರಿ ಪೂರ್ಣಗೊಂಡ ನಂತರ ಮತ್ತೆ ರಸ್ತೆ ಕುಸಿಯದಂತೆ ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಏಜೆನ್ಸಿಯಿಂದ ವೆಚ್ಚ ವಸೂಲಿ ಮಾಡಿ ರಸ್ತೆ ಪುನಃಸ್ಥಾಪಿಸಿ*

    ನೆಕ್ಸಸ್ ಮಾಲ್ ಮುಂಭಾಗದಲ್ಲಿ ಚರಂಡಿ ಸಂಪರ್ಕದಿಂದ ನೀರು ಹಿಮ್ಮುಖವಾಗಿ ಹರಿಯುತ್ತಿದ್ದು, ಸೂಕ್ತ ಇಳಿಜಾರಿನೊಂದಿಗೆ ಮರುಸಂಪರ್ಕ ಕಲ್ಪಿಸಲು ಸೂಚಿಸಲಾಯಿತು. ಕಳಪೆ ಕಾಮಗಾರಿ ನಡೆಸಿದ ಏಜೆನ್ಸಿಯಿಂದ ವೆಚ್ಚ ವಸೂಲಿ ಮಾಡಿ ಪಾಲಿಕೆಯಿಂದಲೇ ರಸ್ತೆ ಪುನಃಸ್ಥಾಪಿಸುವಂತೆ ಅಪರ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ವಿರುದ್ಧ ಕಾನೂನು ಕ್ರಮ

    ಕೆಪಿಟಿಸಿಎಲ್‌ 220 ಕೆ.ವಿ ಟ್ರಾನ್ಸ್ ಮಿಷನ್ ಲೈನ್ ಕಾರಿಡಾರ್‌ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳ ವಿರುದ್ಧ ಜಂಟಿ ತಂಡದಿಂದ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬೆಸ್ಕಾಂ ಕೇಬಲ್ ಅಳವಡಿಕೆ ವೇಳೆ ಜಲಮಂಡಳಿ ಕೊಳವೆ ಮಾರ್ಗಗಳಿಗೆ ಹಾನಿಯಾಗದಂತೆ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳು ಜಂಟಿ ಸಮನ್ವಯ ಸಾಧಿಸಬೇಕು. ವರ್ತೂರು ಕೋಡಿ ರಸ್ತೆಯಲ್ಲಿ ರಸ್ತೆ ಕುಸಿತ ತಡೆಯಲು ಹಾಗೂ ಡಾಂಬರೀಕರಣದ ನಂತರ ರಸ್ತೆ ಅಗೆಯುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

    ಮಳೆನೀರು ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ

    ಕಾಮಧೇನು ನಗರ ಹಾಗೂ ಹೈಡ್ರೋಸೈಟ್ ಕಾರಿಡಾರ್ – ವರ್ತೂರು ರಸ್ತೆ ಜಂಕ್ಷನ್‌ನಲ್ಲಿ ಪದೇ ಪದೆ ಮಳೆನೀರು ನಿಲುಗಡೆ ಸಮಸ್ಯೆ ಎದುರಾಗುತ್ತಿದೆ. ಜಲಮಂಡಳಿ, ಬಿ-ಸ್ಮೈಲ್ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಜಂಟಿ ಪರಿಶೀಲನೆ ನಡೆಸಿ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು. ಪ್ರಿಕಾಸ್ಟ್ ಮ್ಯಾನ್‌ಹೋಲ್‌ಗಳ ಅಳವಡಿಕೆ, ಮ್ಯಾನ್‌ಹೋಲ್‌ಗಳ ಮಟ್ಟ ಸರಿಪಡಿಸುವುದು ಮತ್ತು ರಸ್ತೆ ಮೇಲ್ಮೈಗೆ ಸಮನಾಗಿ ಅಳವಡಿಸುವ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ವರ್ತೂರು ಕೋಡಿ – ಬಳಗೆರೆ ಸಿವೇಜ್ ಟ್ರೀಟ್‌ಮೆಂಟ್ ಪ್ಲಾಂಟ್ (STP) ಬಳಿ ರಾಜಕಾಲುವೆ ಗಡಿಯನ್ನು ಗುರುತಿಸಬೇಕು. ಮಳೆನೀರು ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

    ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ

    ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ರಸ್ತೆ ಕಟಿಂಗ್, ನೀರು ಸೋರಿಕೆ, ಒಳಚರಂಡಿ ಹಾಗೂ ರಸ್ತೆ ಮರುಸ್ಥಾಪನೆಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳಿಗೆ ಅಗತ್ಯವಿರುವ ಅನುಮತಿಗಳು, ತಾಂತ್ರಿಕ ಪರಿಶೀಲನೆ ಹಾಗೂ ಇತರೆ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

    ಕಾಮಗಾರಿಗಳ ಪ್ರಗತಿ ವರದಿ ಸಲ್ಲಿಸಲು ಸೂಚನೆ

    ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ, ಕಾಮಗಾರಿಗಳ ಅನುಷ್ಠಾನದಲ್ಲಿನ ಅಡಚಣೆಗಳನ್ನು ನಿವಾರಿಸಬೇಕು. ಬಾಕಿ ಇರುವ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಶೀಲನೆಯಲ್ಲಿ ಗುರುತಿಸಲಾದ ಸಮಸ್ಯೆಗಳ ಕುರಿತು ಕೈಗೊಂಡ ಕ್ರಮಗಳು, ಬಾಕಿ ಉಳಿದಿರುವ ಕೆಲಸಗಳು ಹಾಗೂ ಅವುಗಳ ಪೂರ್ಣಗೊಳಿಸುವಿಕೆಯ ಕಾಲಮಿತಿಯ ವಿವರಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಬೇಕು ಎಂದು ಅಪರ ಆಯುಕ್ತರು ನಿರ್ದೇಶನ ನೀಡಿದರು.

    ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಕ್ರಮ

    ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸುವ ಪ್ರಸ್ತಾವನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕರ ಅನುಕೂಲ, ಸುಗಮ ಸಂಚಾರ, ರಸ್ತೆ ಸಂಪರ್ಕ ಸುಧಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಖಾಸಗಿ ರಸ್ತೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪರ್ಯಾಯ ಸಂಪರ್ಕ ರಸ್ತೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದು, ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸುವ ಮೊದಲು ನಗರ ಯೋಜನಾ ಇಲಾಖೆಯ ಪೂರ್ವಾನುಮತಿ ಪಡೆಯುವುದು ಹಾಗೂ ತಾಂತ್ರಿಕ ಪರಿಶೀಲನೆ ನಡೆಸಿ ನಿಯಮಗಳು ಮತ್ತು ಮಾರ್ಗಸೂಚಿಗಳಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಅಪರ ಆಯುಕ್ತರು ಸೂಚಿಸಿದರು.

    ಬಾಕಿ ಇರುವ ಸಿಸಿಎಂಎಸ್ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ

    ಇದೇ ವೇಳೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಸಿಎಂಎಸ್ ತಂತ್ರಾಂಶದಲ್ಲಿ ದಾಖಲಾಗಿರುವ ನ್ಯಾಯಾಲಯದ ಪ್ರಕರಣಗಳ ಪ್ರಗತಿ, ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಸೂಕ್ತ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಅಧಿಕಾರಿಗಳ ಲಾಗಿನ್‌ನಲ್ಲಿ ಬಾಕಿ ಇರುವ ದೂರುಗಳು, ವಿವಿಧ ಇಲಾಖೆಗಳ ನ್ಯಾಯಾಲಯದ ಪ್ರಕರಣಗಳ ಪ್ರಸ್ತುತ ಸ್ಥಿತಿ, ಪ್ರಕರಣಗಳ ಹಂತವಾರು ಪ್ರಗತಿ, ಪ್ಯಾರಾವಾರು ಟಿಪ್ಪಣಿಗಳ ಸಿದ್ಧತೆ ಹಾಗೂ ಅಗತ್ಯ ದಾಖಲೆಗಳನ್ನು ವಕೀಲರಿಗೆ ಸಲ್ಲಿಸುವ ಕುರಿತು ಚರ್ಚಿಸಿ, ಪ್ರಕರಣಗಳ ನಿರ್ವಹಣೆಯಲ್ಲಿ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.

    ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ, ಕೆಪಿಟಿಸಿಎಲ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ವಿಭಾಗ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

  • 35 ಎಸೆತಗಳಲ್ಲಿ ಶತಕ ; ಅಭಿಷೇಕ್ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ!ನ್ಯೂಜಿಲೆಂಡ್ ನೆಲದಲ್ಲೇ T20 ಸರಣಿ ಗೆದ್ದ ಭಾರತ!

    35 ಎಸೆತಗಳಲ್ಲಿ ಶತಕ ; ಅಭಿಷೇಕ್ ಅಬ್ಬರಕ್ಕೆ ನ್ಯೂಜಿಲೆಂಡ್ ತತ್ತರ!ನ್ಯೂಜಿಲೆಂಡ್ ನೆಲದಲ್ಲೇ T20 ಸರಣಿ ಗೆದ್ದ ಭಾರತ!

    ವೆಲ್ಲಿಂಗ್ಟನ್: ಇಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಗಳಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಅಕ್ಷರಶಃ ನ್ಯೂಜಿಲೆಂಡ್ ಬೌಲರ್ ಗಳಿಗೆ ಚಳಿಜ್ವರ ಬರುವಂತೆ ಮಾಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು.

    ಈ ಮೊತ್ತ ನೋಡಿ ಎಲ್ಲರೂ ದೊಡ್ಡ ಮೊತ್ತವೇ ಪೇರಿಸಿದೆ ಎಂದುಕೊಂಡಿದ್ದರು. ಆದರೆ ಟೀಂ ಇಂಡಿಯಾ ಓಪನರ್ ಗಳಾದ ಅಭಿಷೇಕ್ ಶರ್ಮಾ-ವೈಭವ್ ಸೂರ್ಯವಂಶಿ ಇದನ್ನು ಜುಜುಬಿ ಮೊತ್ತದಂತೆ ಮಾಡಿಬಿಟ್ಟರು.

    ಗಲ್ಲಿ ಕ್ರಿಕೆಟ್ ನಲ್ಲಿ ಆಡುವ ರೀತಿಯಲ್ಲಿ ನ್ಯೂಜಿಲೆಂಡ್ ಬೌಲರ್ ಗಳ ಮೇಲೆ ನಿರ್ದಯವಾಗಿ ಇಬ್ಬರೂ ಬ್ಯಾಟ್ ಪ್ರಹಾರ ನಡೆಸಿದರು. ಅಭಿಷೇಕ್ ಕೇವಲ 35 ಎಸೆತಗಳಲ್ಲಿ ಶತಕ ಪೂರ್ತಿ ಮಾಡಿದರೆ ವೈಭವ್ ಸೂರ್ಯವಂಶಿ 19 ಎಸೆತಗಳಿಂದ 45 ರನ್ ಚಚ್ಚಿದರು. ಇದರಲ್ಲಿ ತಲಾ 4 ಬೌಂಡರಿ ಹಾಗೂ ಸಿಕ್ಸರ್ ಸೇರಿತ್ತು. ಅಭಿಷೇಕ್ ಇನಿಂಗ್ಸ್ ಇಂದು ಹೈಲೈಟ್ ಆಗಿತ್ತು. ಕೇವಲ 38 ಎಸೆತ ಎದುರಿಸಿದ ಅವರು 11 ಸಿಕ್ಸರ್, 9 ಬೌಂಡರಿ ನೆರವಿನಿಂದ 113 ರನ್ ಗಳಿಸಿ ಔಟಾದರು.

    ಇಬ್ಬರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಭಾರತ 10 ಓವರ್ ಆಗುವಷ್ಟರಲ್ಲಿ 178 ರನ್ ಗಳಿಸಿತ್ತು! ಸ್ಕೋರ್ ಕಾರ್ಡ್ ನೋಡಿದ ಪ್ರೇಕ್ಷಕರು ನಿಜಕ್ಕೂ ಶಾಕ್ ಆಗುವಂತಿತ್ತು ಇವರ ಬ್ಯಾಟಿಂಗ್. ಅಂತಿಮವಾಗಿ ಭಾರತ ಕೇವಲ 13.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ರನ್ ಗಳಿಸಿ ಭರ್ಜರಿ 6 ವಿಕೆಟ್ ಗಳ ಗೆಲುವು ಸಾಧಿಸಿತು.

  • ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ- ಅಪರ ಜಿಲ್ಲಾಧಿಕಾರಿ  ಸೈಯಿದಾ ಆಯಿಷಾ

    ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ- ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ

    ಬೆಂ.ಗ್ರಾ. ಜಿಲ್ಲೆ:ಯುವಜನರು ಮಹರ್ಷಿ ವಾಲ್ಮೀಕಿ ಅವರ ಜೀವನದಿಂದ ಸ್ಫೂರ್ತಿ ಪಡೆದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ. ಶಿಕ್ಷಣದಿಂದ ವ್ಯಕ್ತಿಯ ಜೀವನ ಮಾತ್ರವಲ್ಲ, ಇಡೀ ಸಮಾಜದ ಅಭಿವೃದ್ಧಿಯೂ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ತಿಳಿಸಿದರು.

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

    ಮಹರ್ಷಿ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಅವರು ರಚಿಸಿದ ರಾಮಾಯಣ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಮಹಾಕಾವ್ಯವಾಗಿದೆ. ರಾಮಾಯಣವು ಶ್ರೀರಾಮನ ಜೀವನ, ಸೀತಾಮಾತೆಯ ತ್ಯಾಗ, ಲಕ್ಷ್ಮಣನ ಸೇವಾಭಾವ ಮತ್ತು ಹನುಮಂತನ ಭಕ್ತಿಯನ್ನು ತಿಳಿಸುವುದರ ಜೊತೆಗೆ ಸತ್ಯ, ಧರ್ಮ, ಕರ್ತವ್ಯ ಮತ್ತು ನ್ಯಾಯದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.

    ವಾಲ್ಮೀಕಿ ಅವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ಮನುಷ್ಯನು ತನ್ನ ಹಿಂದಿನ ಜೀವನದಲ್ಲಿ ಏನೇ ಆಗಿರಲಿ, ತನ್ನ ಪ್ರಯತ್ನ, ಜ್ಞಾನ ಮತ್ತು ಸತ್ಕಾರ್ಯಗಳ ಮೂಲಕ ಮಹಾನ್ ವ್ಯಕ್ತಿಯಾಗಬಹುದು. ಜೀವನದಲ್ಲಿ ಬದಲಾವಣೆ ಸಾಧ್ಯ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರ ಕಥೆ ಒಂದು ಪ್ರೇರಣೆಯಾಗಿದೆ ಎಂದರು.

    ಮಹರ್ಷಿ ವಾಲ್ಮೀಕಿ ಅವರು ಕೇವಲ ಒಬ್ಬ ಕವಿಯಲ್ಲ, ಅವರು ಜ್ಞಾನ, ಮಾನವೀಯತೆ, ಸಮಾನತೆ ಮತ್ತು ಸತ್ಯದ ಪ್ರತೀಕವಾಗಿದ್ದಾರೆ. ಅವರು ತಮ್ಮ ಜ್ಞಾನ ಮತ್ತು ಸಾಹಿತ್ಯದ ಮೂಲಕ ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿಸಿದರು. ಮನುಷ್ಯನ ಶ್ರೇಷ್ಠತೆ ಅವನ ಜನ್ಮದಿಂದ ನಿರ್ಧಾರವಾಗುವುದಿಲ್ಲ; ಅವನ ಗುಣ, ನಡತೆ, ಜ್ಞಾನ ಮತ್ತು ಕಾರ್ಯಗಳಿಂದ ನಿರ್ಧಾರವಾಗುತ್ತದೆ ಎಂಬ ಸಂದೇಶವನ್ನು ಅವರ ಜೀವನದಿಂದ ನಾವು ಪಡೆಯಬಹುದು ಎಂದು ತಿಳಿಸಿದರು.

    ಇಂದಿನ ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಅತ್ಯಂತ ಪ್ರಸ್ತುತವಾಗಿವೆ. ಸಮಾಜದಲ್ಲಿ ಜಾತಿ-ಮತಗಳ ಭೇದಭಾವವನ್ನು ಮರೆತು, ಎಲ್ಲರೂ ಸಮಾನರು ಎಂಬ ಭಾವನೆಯಿಂದ ಬದುಕಬೇಕು. ಬಡವರು, ದುರ್ಬಲರು ಮತ್ತು ಹಿಂದುಳಿದವರನ್ನು ಗೌರವಿಸಬೇಕು. ಸತ್ಯದ ಹಾದಿಯಲ್ಲಿ ನಡೆಯಬೇಕು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು.

    ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವುದು ಎಂದರೆ ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದು ಮಾತ್ರವಲ್ಲ; ಅವರು ಸಾರಿದ ಸತ್ಯ, ಧರ್ಮ, ಜ್ಞಾನ ಮತ್ತು ಮಾನವೀಯತೆಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು.

    ಈ ಪವಿತ್ರ ದಿನದಂದು ನಾವೆಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವ, ಪರಸ್ಪರ ಗೌರವಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಕಲ್ಪ ಮಾಡೋಣ ಎಂದರು.

    ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ವಾಲ್ಮೀಕಿ ರಾಮಾಯಣವು ಉತ್ತಮ ಆಡಳಿತ ವ್ಯವಸ್ಥೆಯನ್ನು ಸಮಾಜಕ್ಕೆ ಕೊಡುಗೆ ನೀಡುವುದರ ಜೊತೆಗೆ ಶ್ರೀರಾಮನ ಜೀವನ, ಸೀತಾಮಾತೆಯ ಪತಿವ್ರತಾ ಧರ್ಮ, ಲಕ್ಷ್ಮಣನ ಸಹೋದರತ್ವ ಮತ್ತು ಹನುಮಂತನ ಸ್ವಾಮಿನಿಷ್ಠೆ ಸತ್ಯ, ಧರ್ಮ, ಕರ್ತವ್ಯ ಮತ್ತು ನ್ಯಾಯದ ಮಹತ್ವವನ್ನು ತಿಳಿಸುತ್ತದೆ. ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ ತತ್ವ, ಆದರ್ಶ, ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

    ಸೂಲಿಬೆಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಸುಬ್ರಮಣಿ ಅವರು ಉಪನ್ಯಾಸ ನೀಡಿ ಮಹರ್ಷಿ ವಾಲ್ಮೀಕಿ ಅವರು ಕೇವಲ ಕವಿ ಅಷ್ಟೇ ಆಗಿರಲಿಲ್ಲ, ಅವರು ಮಹಾನ್ ತಪಸ್ವಿ, ಮಹಾನ್ ಜ್ಞಾನಿ, ಸಮಾಜಕ್ಕೆ ಮಾರ್ಗದರ್ಶನ ನೀಡಿದಂತಹ ಗುರು ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕ ಎಂದರು.
    ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ಎಂದು ಹೆಸರಾದಂತಹ ಮಹರ್ಷಿ ವಾಲ್ಮೀಕಿ ಅವರು ಮುಖ್ಯವಾಗಿ ರಾಮಾಯಣ ಮಹಾಕಾವ್ಯವನ್ನು ಕೊಟ್ಟಿದ್ದಾರೆ.

    ರಾಮಾಯಣ ಮಹಾಕಾವ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರಸ್ತಾಪನೆ ಮಾಡಿದ್ದಾರೆ. ಆ ಮಾನವೀಯ ಮೌಲ್ಯಗಳನ್ನು ಪ್ರಸ್ತಾಪನೆ ಮಾಡುತ್ತಾ ಅವರು ರಾಮಾಯಣ ಕೃತಿಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

    ಮನುಷ್ಯನ ಜೀವನ ಈಗ ಹೇಗಿದೆ, ಹಿಂದೆ ಹೇಗಿತ್ತು ಅನ್ನೋದು ತುಂಬಾ ಮುಖ್ಯ ಅಲ್ಲ. ಆದರೆ ಮುಂದಿನ ಜೀವನ ಹೇಗೆ ಪರಿವರ್ತನೆ ಆಗುವುದು ಅನ್ನೋದು ತುಂಬಾ ಮುಖ್ಯ ಅದಕ್ಕೆ ಉತ್ತಮ ಉದಾಹರಣೆ ಮಹರ್ಷಿ ವಾಲ್ಮೀಕಿ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ , ಬಹುಮಾನ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪಾಂಡುರಂಗ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ವಾಲ್ಮೀಕಿ ಅವರು ಆದರ್ಶ ಬದುಕಿನ ಸಂದೇಶ ಸಾರಿದ ಮಹಾನ್ ಋಷಿಗಳು: ಶಾಸಕ ಬೈರತಿ ಬಸವರಾಜ

    ಕೆ.ಆರ್.ಪುರ: ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಇಂದಿನ ಸಮಾಜಕ್ಕೂ ದಾರಿದೀಪವಾಗಿವೆ. ಅವರು ಜಗತ್ತಿಗೆ ಸಾರಿದ ಸತ್ಯ, ಧರ್ಮ, ನ್ಯಾಯ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಬೈರತಿ ಬಸವರಾಜ ಅವರು ತಿಳಿಸಿದರು.

    ಕ್ಷೇತ್ರದ ತಾಲ್ಲೂಕು ಕಚೇರಿ ಆವರಣದಲ್ಲಿ ಪೂರ್ವ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದರು.ಜನಾಂಗದವರು ಒಟ್ಟಿಗೆ ಇದ್ದು ಕಾರ್ಯಕ್ರಮವನ್ನು ದೊಡ್ಡದಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.

    ಮಹರ್ಷಿ ವಾಲ್ಮೀಕಿ ಅವರು ಕೇವಲ ರಾಮಾಯಣದ ಕರ್ತೃಗಳಲ್ಲ, ಮಾನವೀಯ ಮೌಲ್ಯಗಳು, ಧರ್ಮ, ನ್ಯಾಯ, ತ್ಯಾಗ, ಕರ್ತವ್ಯ ಪ್ರಜ್ಞೆ ಹಾಗೂ ಆದರ್ಶ ಬದುಕಿನ ಸಂದೇಶ ಸಾರಿದ ಮಹಾನ್ ಋಷಿಗಳು. ಅವರ ಜೀವನ ಮತ್ತು ಸಾಹಿತ್ಯ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ. ರಾಮಾಯಣದ ಮೂಲಕ ಮಾನವ ಸಂಬಂಧಗಳ ಮಹತ್ವ, ಕುಟುಂಬದ ಮೌಲ್ಯಗಳು, ಸತ್ಯನಿಷ್ಠೆ ಹಾಗೂ ಧರ್ಮದ ಹಾದಿಯಲ್ಲಿ ನಡೆಯುವ ಪ್ರೇರಣೆಯನ್ನು ಅವರು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು.

    ಮಹರ್ಷಿ ವಾಲ್ಮೀಕಿ ಅವರ ಬದುಕು ನಮಗೆ ಒಂದು ಮಹತ್ವದ ಸಂದೇಶ ನೀಡುತ್ತದೆ. ಬದಲಾವಣೆ ಮತ್ತು ಆತ್ಮಪರಿವರ್ತನೆಯ ಮೂಲಕ ಪ್ರತಿಯೊಬ್ಬರೂ ಉನ್ನತ ಸಾಧನೆ ಮಾಡಬಹುದು ಎಂದರು.

    ವಾಲ್ಮೀಕಿ ಭವನಕ್ಕೆ ಹಾಗೂ ಪುತ್ಥಳಿ ನಿರ್ಮಾನಕ್ಕೆ ಜಾಗ ಗುರುತಿಸಿಕೊಡಿ ಎಂದು ಜನಾಂಗದ ಮುಖಂಡರು ಮನವಿ ಮಾಡಿಕೊಂಡಾಗ ನಮ್ಮ ಬಿಜೆಪಿ ಸರ್ಕಾರ ಬಂದ ಕೂಡಲೇ ನಿಮಗೆ ಜಾಗ ಗುರುತಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ನಂತರ ಮುಂದಿನ ವರ್ಷದೊಳಗೆ ವಾಲ್ಮೀಕಿ ಜನಾಂಗಕ್ಕೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಸಮೂದಾಯ ಭವನಕ್ಕೆ ಜಾಗ ಗುರ್ತಿಸಿಕೊಡುವಂತೆ ತಹಶಿಲ್ದಾರ ಬಳಿ ಮನವಿ ಮಾಡಿದರು.ಸಾಕಷ್ಟು ಬಾರಿ ಪತ್ರಗಳನ್ನ ನೀಡಲಾಗಿದೆ.ಮುಂದಿನ ವರ್ಷದೊಳಗೆ ಜಾಗ ನಿಗಧಿಯಾಗಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಆಂತೋಣಿಸ್ವಾಮಿ ವಾರ್ಡ್ ಅಧ್ಯಕ್ಷ ಶಿವಪ್ಪ, ಶಂಕರ್, ಬೆಂಗಳೂರು ಪೂರ್ವ ತಾಲ್ಲೂಕು ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ನಾಗರಾಜ್, ಸಮಾಜದ ಮುಖಂಡರಾದ ಕಟ್ಟು ಗೊಲ್ಲಹಳ್ಳಿ ಶಿವಕುಮಾ‌ರ್, ಎಂ. ಮಂಜುನಾಥ್, ಈಶ್ವರಾನಂದ ಸ್ವಾಮೀಜಿ, ಉಪಾಧ್ಯಕ್ಷ ಅಜಯ್, ಕಾರ್ಯದರ್ಶಿ ಶಾಂತಕುಮಾ‌ರ್, ಯತೀಶ್ ಕುಮಾರ್, ಮುಖಂಡರಾದ ದುಶ್ಯಂತ್, ದೇವರಾಜ್, ಎಲ್. ಮಂಜುನಾಥ್, ಡೀಸಲ್ ಮಂಜುನಾಥ್, ಪೊಲೀಸ್ ನಾರಾಯಣಪ್ಪ ಮಾಜಿ ಅಧ್ಯಕ್ಷ ವೆಂಕಟೇಶ್, ಶೈಲ, ಗೋಪಿನಾಥ್, ಸಿ.ನಾಗೇಶ್ ಮತ್ತಿತರರು ಹಾಜರಿದ್ದರು.



  • ಈ ಡಿಜಿಟಲ್ ದಸರಾ ಉತ್ಸವಕ್ಕೆ ಚಾಲನೆ.

    ಈ ಡಿಜಿಟಲ್ ದಸರಾ ಉತ್ಸವಕ್ಕೆ ಚಾಲನೆ.

    ಬೆಂಗಳೂರು: ಯುವ ದಸರ ಅಂಗವಾಗಿ ಜಯ ನಗರ ಯುವಪಥದಲ್ಲಿ ಭಾನುವಾರ ಅಣ್ಣಯ್ಯ ಹಾಲ್ ನಲ್ಲಿ ಶಕ್ತಿ ಉತ್ಸವ ಉದ್ಘಾಟನೆಗೊಂಡಿತು.

    ಪರಮ್ ಹಿಸ್ಟರಿ ಪ್ರಸ್ತುತ ಪಡಿಸುತ್ತಿರುವ ಈ ಡಿಜಿಟಲ್ ದಸರಾ ಉತ್ಸವವನ್ನು ಮೈಸೂರು ರಾಜಮನೆತನದ ಕಾಮಾಕ್ಷಿ ದೇವಿ ವಡೆಯರ್ ಹಾಗೂ ದಾರ್ಶಿಕ ಕುಮಾರಿ ಉದ್ಘಾಟಿಸಿದರು. ಪರಮ್ ಹಿಸ್ಟರಿ ನಿರ್ದೇಶಕ ಸಂತೋಷ್ ಜಿ ಆರ್ ಉಪಸ್ಥಿತರಿದ್ದರು.

    ಡಿಜಿಟಲ್ ರೂಪದಲ್ಲಿ ಭಾರತದ ಕ್ಷಾತ್ರ ವನ್ನು ವಿವಿಧ ರೂಪಗಳಲ್ಲಿ ಪ್ರಸ್ತುತ ಪಡಿಸಿರುವ ರೀತಿಯನ್ನು ರಾಜಕುಮಾರಿ ಪ್ರಶಂಸಿಸಿದರು. ಭಾರತದ ಪರಂಪರೆಯನ್ನು ಯುವ ಜನಕ್ಕೆ ಆಸಕ್ತಿಕರ ವಾಗಿ ತಲುಪಿಸುವುದಕ್ಕೆ ಇದೇ ಸೂಕ್ತ ಮಾರ್ಗ ಎಂದು ಹೇಳಿದರು. ಮಹಾನವಮಿ ದಿಬ್ಬ ದ ಮರುಸೃಷ್ಟಿ ಯನ್ನು ವಿಶೇಷವಾಗಿ ಪ್ರಶಂಸಿದ ಅವರು, ಮೈಸೂರು ದಸರಾ ಮೂಲ ಇದೇ ಆಗಿದೆ ಎಂದು ನೆನಪಿಸಿಕೊಂಡರು.

    ಭಾರತದ ಕ್ಷಾತ್ರ ವನ್ನು ಇಮ್ಮೆರ್ಸಿವ್ ಮತ್ತು ಸಂದರ್ಶಕರೇ ಮಾಡಿ ನೋಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿರುವ ಈ ಡಿಜಿಟಲ್ ದಸರಾ ಈ ತಿಂಗಳ 21ರ ವರೆಗೆ ಸಾರ್ವಜನಿಕ ಮುಕ್ತವಾಗಿದೆ

  • ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಿಸಿ ರಾಷ್ಟ್ರಪತಿ ಆದೇಶ

    ಕರ್ನಾಟಕ ಸೇರಿ 6 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಿಸಿ ರಾಷ್ಟ್ರಪತಿ ಆದೇಶ

    ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ ಹಾಗೂ ಮಾಜಿ ಸಂಸದೆ ಸುಧಾ ಯಾದವ್ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.

    ಇದರೊಂದಿಗೆ ಸುಧಾ ಯಾದವ್ ಅವರು ಕರ್ನಾಟಕದ ಇತಿಹಾಸದಲ್ಲಿ ರಾಜ್ಯಪಾಲ ಹುದ್ದೆಗೇರಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಈ ಹಿಂದೆ 1999ರ ಡಿಸೆಂಬರ್‌ನಿಂದ 2002ರ ಆಗಸ್ಟ್‌ವರೆಗೆ ವಿ.ಎಸ್. ರಮಾದೇವಿ ಅವರು ರಾಜ್ಯದ ಪ್ರಥಮ ಮಹಿಳಾ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ರಾಜ್ಯಪಾಲರಾಗಿರುವ ಥಾವರ್‌ಚಂದ್ ಗೆಹಲೋತ್ ಅವರು 2021ರ ಜುಲೈ 11ರಂದು ಅಧಿಕಾರ ವಹಿಸಿಕೊಂಡಿದ್ದರು.
    ಸುಧಾ ಯಾದವ್ ಅವರ ಹಿನ್ನೆಲೆ:
    ಹರಿಯಾಣ ಮೂಲದ 60 ವರ್ಷದ ಸುಧಾ ಯಾದವ್ ಅವರು ರಸಾಯನವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಅದೇ ವಿಷಯದಲ್ಲಿ ರೂರ್ಕಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಇವರು ಬಿಎಸ್‌ಎಫ್‌ನ ಡೆಪ್ಯುಟಿ ಕಮಾಂಡೆಂಟ್ ಆಗಿದ್ದ ಸುಖ್‌ಬೀರ್ ಸಿಂಗ್ ಯಾದವ್ ಅವರ ಧರ್ಮಪತ್ನಿ. ಸುಖ್‌ಬೀರ್ ಸಿಂಗ್ ಅವರು 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು.
    ಇತರ ರಾಜ್ಯಗಳಿಗೂ ನೂತನ ರಾಜ್ಯಪಾಲರ ನೇಮಕ:
    ಕರ್ನಾಟಕದ ಜೊತೆಗೆ ಇತರ ಐದು ರಾಜ್ಯಗಳಿಗೂ ನೂತನ ರಾಜ್ಯಪಾಲರನ್ನು ರಾಷ್ಟ್ರಪತಿ ಭವನ ನೇಮಿಸಿದೆ. ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿಗೆ, ಸಿಕ್ಕಿಂ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳಕ್ಕೆ ಹಾಗೂ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಸಿಕ್ಕಿಂನ ನೂತನ ರಾಜ್ಯಪಾಲರನ್ನಾಗಿ ವರ್ಗಾಯಿಸಲಾಗಿದೆ.

    ಜಾರ್ಖಂಡ್ ಹಿರಿಯ ನಾಯಕ ಬೃಜ್ ಮೋಹನ್ ರಾಮ್ ಅವರನ್ನು ಒಡಿಶಾ ರಾಜ್ಯಪಾಲರನ್ನಾಗಿ ಹಾಗೂ ಧರ್ಮಸಿಂಗ್ ರಾವತ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಈ ಎಲ್ಲಾ ನೇಮಕಾತಿಗಳು ಅವರು ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಜಾರಿಗೆ ಬರಲಿವೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

  • ಸ್ತುತಿ‌ ಕ್ಲಿನಿಕ್‌ನಲ್ಲಿ‌ ಉಚಿತ ಆರೋಗ್ಯ‌ ಶಿಬಿರ ಶಾಸಕ ಬೈರತಿ ಬಸವರಾಜ ಚಾಲನೆ.

    ಸ್ತುತಿ‌ ಕ್ಲಿನಿಕ್‌ನಲ್ಲಿ‌ ಉಚಿತ ಆರೋಗ್ಯ‌ ಶಿಬಿರ ಶಾಸಕ ಬೈರತಿ ಬಸವರಾಜ ಚಾಲನೆ.

    ಕೆಆರ್ ಪುರ: ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕ ಬೈರತಿ ಬಸವರಾಜ ಅವರು ಹೇಳಿದರು

    ಬಸವನಪುರ ಮುಖ್ಯರಸ್ತೆಯ ಸ್ತುತಿ ಕ್ಲಿನಿಕರ ಮತ್ತು ಫಿಸಿಯೋ ಕೇರ್ ನಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ರೋಗಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಬಸವನಪುರ ಸುತ್ತಮುತ್ತಲಿನ ಗ್ರಾಮದ ಜನರು ಈ ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು. ಆರೋಗ್ಯವಂತ ದೇಶ ನಿರ್ಮಾಣಕ್ಕೆ ಆರೋಗ್ಯವಂತ ಸಮಾಜ ಮುಖ್ಯ ಎಂದು ತಿಳಿಸಿದರು.

    ಸ್ತುತಿ ಕ್ಲಿನಿಕ್ ನ ವೈದ್ಯರಾದ ಡಾ.ಅಕ್ಷಿತಾ ಮಾತನಾಡಿ, ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ಈ ಶಿಬಿರ ನಡೆಯಲಿದ್ದು ಸುತ್ತಮುತ್ತಲಿನ ಬಡಾವಣೆಗಳ ಜನರು ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಹೇಳಿದರು.

    ಸಾಮಾನ್ಯ ರೋಗಗಳು, ಮಧುಮೇಹ, ಮೂಳೆ ಸಂಬಂಧಿತ, ಫಿಸಿಯೋ ತಪಾಸಣೆ, ಉಚಿತ ಸಮಗ್ರ ಆರೋಗ್ಯ ಸಲಹೆ, ಒಂದು ಉಚಿತ ಫಿಸಿಯೋಥೆರಪಿ ಚಿಕಿತ್ಸೆ ಒಳಗೊಂಡಿದೆ ಎಂದು ಹೇಳಿದರು.

    ಲಯನ್ಸ್ ಕ್ಲಬ್ ಅನುಗ್ರಹ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ರಕ್ತದಾನ ಮಾಡಿ ಜೀವ ಉಳಿಸಿ ಎಂದು ಹೇಳಿದರು.

    ಈ ‌ಸಂದರ್ಭದಲ್ಲಿ ಕ್ಲಿನಿಕ್ ನ ವೈದ್ಯರಾದ ಡಾ.ಅಕ್ಷಿತಾ, ಡಾ.ನಾಗೇಶ್, ಡಾ.ರಾಜೇಂದ್ರಕುಮಾರ್ , ಮಾರ್ಟಿನ್ ಬಾಬು, ಕ್ಷೇತ್ರ ಪ್ರ.ಕಾರ್ಯದರ್ಶಿ ಶ್ರೀರಾಮುಲು, ವಾರ್ಡ್ ಅಧ್ಯಕ್ಷರಾದ ಉದಯ್ ಕುಮಾರ್, ಡಿ.ಹೆಚ್.ರಮೇಶ್ , ಮುಖಂಡರಾದ ಖರೀಂಪಾಷ,ಬಸವನಪುರ ಗೋವಿಂದಸ್ವಾಮಿ, ಸಿಸಿ ಸುರೇಶ್, ಚಿಕ್ಕ ಮಾದಯ್ಯ ಮತ್ತಿತರರಿದ್ದರು.

  • ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 700ರ ಗಡಿ ಸಮೀಪ: ಅರಣ್ಯ ಇಲಾಖೆ ಅಂದಾಜು

    ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ 700ರ ಗಡಿ ಸಮೀಪ: ಅರಣ್ಯ ಇಲಾಖೆ ಅಂದಾಜು


    ಬೆಂಗಳೂರು: ಕರ್ನಾಟಕದಲ್ಲಿ ಹುಲಿಗಳ ಸಂರಕ್ಷಣಾ ಕಾರ್ಯಕ್ಕೆ ದೊಡ್ದ ಮಟ್ಟದ ಫಲ ದೊರೆತಿದ್ದು, ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಇದೀಗ 700ರ ಗಡಿ ದಾಟಿರಬಹುದು ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್ ಮಾಹಿತಿ ನೀಡಿದ್ದಾರೆ.

    ನಗರದಲ್ಲಿ ಗುರುವಾರ ಆಯೋಜಿಸಲಾಗಿದ್ದ 72ನೇ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವನ್ಯಜೀವಿ ಸಂತತಿ ಗಣನೀಯವಾಗಿ ಹೆಚ್ಚುತ್ತಿರುವ ಅಂಶವನ್ನು ಹಂಚಿಕೊಂಡರು.

    72ನೇ ವನ್ಯಜೀವಿ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಗಣನೀಯ ಏರಿಕೆ ಕಂಡ ಹುಲಿ ಸಂತತಿ: 2022ರ ರಾಷ್ಟ್ರೀಯ ಹುಲಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ 563 ಹುಲಿಗಳು ದಾಖಲಾಗಿದ್ದವು. ನಂತರ 2023ರ ಅಂದಾಜಿನ ಪ್ರಕಾರ ಈ ಸಂಖ್ಯೆ 650ಕ್ಕೆ ತಲುಪಿತ್ತು. ಪ್ರಸ್ತುತ ರಾಜ್ಯದಲ್ಲಿ ಹುಲಿಗಳ ಆವಾಸಸ್ಥಾನಗಳನ್ನು 51 ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಇತ್ತೀಚಿನ ಬೆಳವಣಿಗೆಗಳ ಪ್ರಕಾರ ರಾಜ್ಯದಲ್ಲಿ ಒಟ್ಟು ಹುಲಿಗಳ ಸಂಖ್ಯೆ 700ರ ಗಡಿ ದಾಟಿದೆ ಎಂದು ಅಂದಾಜಿಸಲಾಗಿದೆ.

    ಹುಲಿ ಸಂತತಿ ವೃದ್ಧಿಯಾಗಿರುವುದು ಹೆಮ್ಮೆಯ ಸಂಗತಿಯಾದರೂ, ಇದರ ಜತೆಯಲ್ಲೇ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲಿನ ಕಾರ್ಯದೊತ್ತಡ ತೀವ್ರವಾಗಿ ಹೆಚ್ಚುತ್ತಿದೆ ಎಂದು ತಿಳಿಸಿದರು.

    ಹೊಸ ಸವಾಲುಗಳು ಮತ್ತು ಮಾನವ-ವನ್ಯಜೀವಿ ಸಂಘರ್ಷ: ಹುಲಿಗಳ ಸಂಖ್ಯೆ ಹೆಚ್ಚಾದಂತೆ ಅವು ತಮ್ಮ ಆವಾಸಸ್ಥಾನಗಳನ್ನು ಹೊಸ ಪ್ರದೇಶಗಳಿಗೂ ವಿಸ್ತರಿಸುತ್ತಿವೆ. ಈ ಹಿಂದೆ ಹುಲಿಗಳ ಸಂಚಾರವೇ ಇಲ್ಲದ ಪ್ರದೇಶಗಳಿಗೂ ಅವು ಕಾಲಿಡುತ್ತಿರುವುದು ಅರಣ್ಯ ಇಲಾಖೆಗೆ ಹೊಸ ರಕ್ಷಣಾ ಸವಾಲುಗಳನ್ನು ಒಡ್ಡಿದೆ.
    ಇದಲ್ಲದೆ, ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಹುಲಿಗಳ ದಾಳಿಗೆ ಸುಮಾರು 6,500ಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಈ ಅಂಕಿ-ಅಂಶಗಳನ್ನು ಪರಿಶೀಲಿಸಿದಾಗ, ಹುಲಿಗಳ ಒಟ್ಟು ಆಹಾರ ಸರಪಳಿಯಲ್ಲಿ ಶೇಕಡಾ 30ರಿಂದ 40ರಷ್ಟು ಪಾಲು ಸಾಕು ಜಾನುವಾರುಗಳದ್ದೇ ಆಗಿದೆ ಎಂದು ಅಂದಾಜಿಸಬಹುದಾಗಿದೆ. ಇದು ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕುಮಾರ್ ಪುಷ್ಕರ್ ವಿವರಿಸಿದರು

  • ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್‌ ದಿಢೀರ್ ಭೇಟಿ;ಕರ್ತವ್ಯ ಲೋಪ: ದೇವನಹಳ್ಳಿ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯ ಅಧಿಕಾರಿ ಅಮಾನತು

    ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್‌ ದಿಢೀರ್ ಭೇಟಿ;ಕರ್ತವ್ಯ ಲೋಪ: ದೇವನಹಳ್ಳಿ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯ ಅಧಿಕಾರಿ ಅಮಾನತು

    ದೇವನಹಳ್ಳಿ: ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ಧೋರಣೆ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ದೇವನಹಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿಗಳು, ದಾಖಲೆಗಳ ಕೊಠಡಿಯಲ್ಲಿ (ರೆಕಾರ್ಡ್ ರೂಮ್) ದತ್ತಾಂಶ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ಗಂಭೀರ ಲೋಪವೆಸಗಿದ ಅಧಿಕಾರಿಯನ್ನು ಸ್ಥಳದಲ್ಲೇ ಅಮಾನತುಗೊಳಿಸಲು ಆದೇಶಿಸಿದರು.

    ದಾಖಲೆಗಳ ಕೊಠಡಿ ಪರಿಶೀಲನೆ: ಅಧಿಕಾರಿ ಅಮಾನತಿಗೆ ಆದೇಶ:
    ತಾಲೂಕು ಕಚೇರಿಯ ವಿವಿಧ ವಿಭಾಗಗಳಿಗೆ ಅನಿರೀಕ್ಷಿತವಾಗಿ ತೆರಳಿದ ಡಾ. ಜಿ. ಪರಮೇಶ್ವರ್, ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ರೆಕಾರ್ಡ್ ರೂಮ್‌ನಲ್ಲಿ ಕಂದಾಯ ದಾಖಲೆಗಳನ್ನು ಸಮರ್ಪಕವಾಗಿ ಇಡದಿರುವುದು ಹಾಗೂ ದತ್ತಾಂಶ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕರ್ತವ್ಯಲೋಪವೆಸಗಿದ ಸಂಬಂಧಪಟ್ಟ ಅಭಿಲೇಖಾಲಯ(ದಾಖಲೆ ಕೊಠಡಿ) ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

    “ಕಂದಾಯ ದಾಖಲೆಗಳು ಜನಸಾಮಾನ್ಯರ ಆಸ್ತಿ ಮತ್ತು ಹಕ್ಕುಗಳ ಜೀವಾಳ. ಸ್ವಾತಂತ್ರ್ಯಪೂರ್ವದ ಮೂಲ ದಾಖಲೆಗಳೂ ಇಲ್ಲಿವೆ. ಒಂದು ದಾಖಲೆ ನಾಶವಾದರೂ ಬಡ ಕುಟುಂಬಗಳು ಬೀದಿಗೆ ಬೀಳುತ್ತವೆ. ದಾಖಲೆಗಳ ರಕ್ಷಣೆ ಹಾಗೂ ಡಿಜಿಟಲೀಕರಣಕ್ಕೆ ಮೊದಲ ಆದ್ಯತೆ ನೀಡಬೇಕು,” ಎಂದು ತಹಶೀಲ್ದಾರ್ ಹಾಗೂ ಭೂದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಗೋಮಾಳ ಒತ್ತುವರಿ, ನಕಲಿ ದಾಖಲೆ ಸೃಷ್ಟಿಗೆ ಬೀಳಲಿದೆ ಬ್ರೇಕ್:
    ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಭೂಮಿಯ ಮೌಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಕಲಿ ದಾಖಲೆ ಸೃಷ್ಟಿ, ಆಸ್ತಿ ವಂಚನೆ ಹಾಗೂ ಅಕ್ರಮ ಖಾತೆ ಬದಲಾವಣೆ ತಡೆಗೆ ತಂತ್ರಜ್ಞಾನ ಆಧಾರಿತ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದರು. ಬಿಲ್ಡರ್‌ಗಳು ಸೇರಿದಂತೆ ಪ್ರಭಾವಿಗಳು ಸರ್ಕಾರಿ ಗೋಮಾಳ ಜಮೀನುಗಳನ್ನು ಒತ್ತುವರಿ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು. ಇದಕ್ಕೆ ಸಾಥ್ ನೀಡುವ ಅಧಿಕಾರಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಉಪ ನೋಂದಣಾಧಿಕಾರಿ ಕಚೇರಿಗೆ ನೂತನ ಕಟ್ಟಡ:
    ಸ್ಥಳಾಭಾವ ಎದುರಿಸುತ್ತಿರುವ ದೇವನಹಳ್ಳಿ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಗೆ ನೂತನ ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿಗಳು ಸೂಕ್ತ ಜಾಗ ಗುರುತಿಸಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಕಚೇರಿ ಸೌಲಭ್ಯಗಳಿಗಿಂತ ಜನರ ಆಸ್ತಿ ನೋಂದಣಿ ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದಕ್ಕೆ ಈ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

    ಬರ ಪರಿಹಾರ: ಪ್ರತಿ ಕ್ಷೇತ್ರಕ್ಕೆ 1 ಕೋಟಿ ಅನುದಾನ:
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರು ಹಾಗೂ ತುರ್ತು ಪರಿಹಾರ ಕಾರ್ಯಗಳಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 9 ಕೋಟಿ ಅನುದಾನ ಲಭ್ಯವಿದೆ. ರಾಜ್ಯದ 50 ಲಕ್ಷ ರೈತರಿಗೆ ಮೊದಲ ಕಂತಿನ ಬೆಳೆ ನಷ್ಟ ಪರಿಹಾರವಾಗಿ 1,250 ಕೋಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

  • ಕೆ.ಆರ್.ಪುರ ಕ್ಷೇತ್ರ ಅಭಿವೃದ್ಧಿಯಲ್ಲಿ ಕುಂಠಿತ: ಕೋಟಿ ಕೋಟಿ ಅನುದಾನ ಎಲ್ಲಿಗೆ ಹೋಯಿತು:ಡಿ.ಕೆ.ಮೋಹನ್

    ಕೆ.ಆರ್.ಪುರ ಕ್ಷೇತ್ರ ಅಭಿವೃದ್ಧಿಯಲ್ಲಿ ಕುಂಠಿತ: ಕೋಟಿ ಕೋಟಿ ಅನುದಾನ ಎಲ್ಲಿಗೆ ಹೋಯಿತು:ಡಿ.ಕೆ.ಮೋಹನ್

    ಕೆ.ಆರ್.ಪುರ: ಕೆ.ಆರ್.ಪುರ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಪರಿಹರಿಸಲು ಶಾಸಕ ಬೈರತಿ ಬಸವರಾಜ ವಿಫಲಾಗಿದ್ದಾರೆ ಎಂದು ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಅವರು ಆರೋಪಿಸಿದರು.

    ಕ್ಷೇತ್ರದ ದೇವಸಂದ್ರದ ಗೃಹಕಚೇರಿಯಲ್ಲಿ ಏರ್ಪಡಿಸಿದ್ದ ಮಾಧ್ಯಮಗೊಷ್ಥಿಯಲ್ಲಿ ಮಾತನಾಡಿದ ಅವರು ಮೂರು ಬಾರಿ ಶಾಸಕ ಹಾಗೂ ಒಂದು ಬಾರಿ ಸಚಿವರಾದರೂ ಒಂದು ಮೇಲು ಸೇತುವೆ ಸೇರಿದಂತೆ ಶಾಶ್ವತ ಯೋಜನೆ ನೀಡುವಲ್ಲಿ ವಿಫಲರಾಗಿದ್ದಾರೆ. ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದ್ದಾರೆ ಎಂದು ದೂರಿದರು.

    ಕೆ.ಆರ್.ಪುರ ಜಿಆರ್ ಟಿ ಯಿಂದ ಟಿ ಸಿ.ಪಾಳ್ಯದವರೆಗೆ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತದೆ.ವಾಹನ ಸವರರು ಪರದಾಡುತ್ತಿದ್ದಾರೆ.ಈ ಭಾಗದಲ್ಲಿ ಸರ್ವಿಸ್ ರಸ್ತೆ ಮಾಡಲು ಶಾಸಕರಿಗೆ ಆಗಲಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು .

    ಐದು ನೂರು ಕೋಟಿ ಯಿಂದ ಸಾವಿರ ಕೋಟಿ ಅನುದಾನ ಸರ್ಕಾರ ಕೊಡಲಿ ಅಭಿವೃದ್ಧಿ ಮಾಡಿತ್ತೇವೆ ಎಂದು ಹೇಳಿದ್ದ ಶಾಸಕರ ಮಾತಿಗೆ ಅಷ್ಟು ದುಡ್ಡುಕೊಟ್ಟರೆ ಲೂಟಿ ಮಾಡಲು ಹಗಲು ರಾತ್ರಿ ರಸ್ತೆಯಲ್ಲಿ ಕೆಲಸ ಮಾಡುತ್ತಾರ ಎಂದು ಪ್ರಶ್ನೆ ಮಾಡಿದರು. ಇಷ್ಟು ವರ್ಷ ಶಾಸಕರಾಗಿದ್ದಾರೆ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರು.ಶಾಸಕರು ಮತ್ತು ಅವರ ಪಟ್ಟಲಾಂ ಸೇರಿಕೊಂಡು ಬರಿ ಲೂಟಿ ಮಾಡಿದ್ದಾರೆ ಅಷ್ಟೇ, 4500 ಕೋಟಿ ಅನುದಾನ ಕ್ಷೇತ್ರಕ್ಕೆ ಬಂದಿದೆ ಆ ಹಣವೆಲ್ಲಾ ಏನಾಯಿತು. ಸಮಯ ಬಂದಾಗ ಎಲ್ಲಾ ದಾಖಲೆಗಳನ್ನ ಬಿಡುಗಡೆ ಮಾಡಲಾಗುವುದು ಎಂದು ಶಾಸಕರ ವಿರುದ್ದ ಗುಡಿಗಿದರು.

    ಕೆ.ಆರ್ ಪುರದಿಂದ ಹೊಸಕೋಟೆಯವರೆಗೆ ಮೆಟ್ರೋ ರೈಲು ಡಿಪಿಆರ್ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ ಇದು ಶರತ್ ಬಚ್ಚೇಗೌಡರ ಹೋರಾಟ,ಮನವಿಗೆ ಸರ್ಕಾರ ಸ್ಪಂದಿಸಿದೆ ಅವರಿಗೆ ಅಭಿನಂದನಗಳನ್ನ ತಿಳಿಸಿದರು.

    ಹದಿಮೂರು ವರ್ಷಗಳಿಂದ ಶಾಸಕರಾಗಿ ಈ ಕ್ಷೇತ್ರದಲ್ಲಿದ್ದಾರೆ ಯಾವತ್ತಾದರು ಒಂದು ದಿನ ಶಾಸಕರಾಗಲೀ,ಸಂಸದರಾಗಲೀ ನಮ್ಮ ಭಾಗಕ್ಕೆ ಮೆಟ್ರೋ ಬೇಕು ಎಂತ ಕೇಳಿದ್ದರಾ ಎಂದರು.

    ಕೆಳೆದ ಬಾರಿ ಬಿಜೆಪಿ ಸರ್ಕಾರ ಇತ್ತು ಸಚಿವರಾಗಿಯೂ ಇದ್ದರು,ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ ಒಂದೇ ಒಂದು ಸಾರಿ ಮೆಟ್ರೋ ಬೇಕು ಅಂತ ಹೋರಾಟ ಮಾಡಿದ್ದರಾ ಎಂದು ಕೇಳಿದರು.

    ವಿಶೇಷ ಮತ ಪರಿಷ್ಕರಣೆಯನ್ನು ಸಮರ್ಪಕವಾಗಿ ಮಾಡಲು ವಿಫಲರಾಗಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಒತ್ತಾಯಿಸಿದರು. ಪೂರ್ವ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ತೊಂದರೆಗಳು ಆಗಿವೆ. ಫಾರ್ಮ್ 7 ಅಕ್ರಮ ಬಳಕೆ ಹಾಗೂ ಮತದಾರರ ಪಟ್ಟಿ ತಿರುಚುವಿಕೆ ವಿಚಾರವಾಗಿ ಗಂಭೀರ ಆರೋಪಗಳನ್ನು ಮಾಡಿದರು.

    ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಕ್ಷೇತ್ರದಲ್ಲಿ 1.75 ಮತ್ತು ಮಹದೇವಪುರ ಕ್ಷೇತ್ರದಲ್ಲಿ 1.71 ಲಕ್ಷ ಮತದಾರರಿಗೆ ಅನಾಮಲೀಸ್ ಅಂತ ಮಾಡಿ ನೋಟೀಸ್ ನೀಡಿದ್ದಾರೆ. ಈ ಮತದಾರರು ಕ್ಷೇತ್ರದಲ್ಲಿ ವಾಸವಿದ್ದರೂ ಮ್ಯಾಪಿಂಗ್ ಇಲ್ಲ. ದಾಖಲೆ ಸರಿಯಿಲ್ಲ ಎಂದು ಖ್ಯಾತೆ ತೆಗಿದಿದ್ದಾರೆ. ಅರ್ಜಿ ಸಂಖ್ಯೆ 6 ಹೆಸರಿನಲ್ಲಿ ಅವ್ಯಾವಹರ ನಡೆಯುತ್ತಿದೆ ಎಂದರು.

    ಕಾಂಗ್ರೆಸ್ ಬೆಂಬಲಿಗರು ಮತ್ತು ಮತದಾರರ ಹೆಸರುಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಅಳಿಸಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.

    ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ನಾಗೇಶ್,ಬ್ಲಾಕ್ ಅಧ್ಯಕ್ಷರಾದ ಸಿ.ವೆಂಕಟೇಶ್,ಅರುಳಪ್ಪ,ಕೊದಂಡರಾಮ ಗ್ಯಾರಂಟಿ ಅಧ್ಯಕ್ಷ ಜಯರಾಮ್ ಇದ್ದರು.