Category: ರಾಜಕೀಯ ‌ಸುದ್ದಿ

  • ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ: ಸರ್ಕಾರ

    ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ: ಸರ್ಕಾರ

    ಗೃಹಲಕ್ಷ್ಮಿ ಯೋಜನೆಯ ನೂರಾರು ಕೋಟಿ ರು. ಅನರ್ಹರ ಖಾತೆಗೆ ಹೋಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಆಹ್ವಾನಿಸುತ್ತಿದ್ದು, ಇದೇ ರೀತಿ ‘ಗೃಹ ಜ್ಯೋತಿ’ ದುರ್ಬಳಕೆ ತಡೆಯಲು ಮತ್ತೊಮ್ಮೆ ಅರ್ಜಿ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಶನಿವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ರಾಜ್ಯ ಮಟ್ಟದ ಪ್ರಗತಿ ಪರಿಶೀಲನೆ ಸಭೆನಡೆಸಿದ ಅವರು, ಗ್ಯಾರಂಟಿಗಳ ದುರ್ಬಳಕೆ ತಡೆಯುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಪಂಚ ಗ್ಯಾರಂಟಿಗಳಲ್ಲೂ ದುರ್ಬಳಕೆ, ಸೋರಿಕೆ ತಡೆಯಬೇಕು. ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಎರಡೂ ಯೋಜನೆಗಳಿಗೂ ಹೊಸದಾಗಿ ಅರ್ಜಿ ಪಡೆಯಬೇಕು. ಆ ಮೂಲಕ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದ್ದಾರೆ.

    ಗೃಹಬಳಕೆ ಹೆಸರಿನಲ್ಲಿ ಪಡೆದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಅದನ್ನು ಅಂಗಡಿಗಳ ಬಳಕೆಗೂ ಪಡೆಯುತ್ತಿದ್ದಾರೆ, ಇನ್ನು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಹಲವರು ಸಾವನ್ನಪ್ಪಿದ್ದರು ಅವರ ಖಾತೆಗೆ ಹಣ ಜಮೆಯಾಗುತ್ತಿದೆ. ಈ ಎಲ್ಲಾ ಗೊಂದಲಗಳನ್ನು ಸರಿಪಡಿಸುವ ಬಗ್ಗೆ ಕ್ರಮಕ್ಕೆ ಸೂಚಿಸಿದರು.

    ಗೃಹಲಕ್ಷ್ಮಿ ನಿಲ್ಲಿಸಲ್ಲ;

    ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಲ್ಲಿ ಕೆಲವರು ನಿಧನರಾಗಿದ್ದಾರೆ. ಅವರ ಹೆಸರಲ್ಲಿ ಬೇರೆಯವರು 100 ಕೋಟಿ ರು.ಗೂ ಹೆಚ್ಚು ಹಣ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅರ್ಹ ಫಲಾನು ಭವಿಗಳಿಗೆ ಯೋಜನೆ ತಲುಪುತ್ತಿದೆಯೇ, ಇಲ್ಲವೇ ಎಂದು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.

    ಮತದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಇಲ್ಲ;

    ಮತದಾನದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ, ಪಿಂಚಣಿ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಎಸ್‌ಐಆರ್‌ ಪ್ರಕ್ರಿಯ ವೇಳೆ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಹೋಗಿ ಮತದಾರರಿಗೆ ಮಾರ್ಗದರ್ಶನ ನೀಡುವ ಜತೆಗೆ ಮತದಾನದ ಹಕ್ಕು ಪಡೆಯಲು ಅಗತ್ಯರುವ ಎಲ್ಲಾ ದಾಖಲೆಗಳನ್ನು ಜನರಿಗೆ ಒದಗಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶನಿವಾರ ಅವರು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯಲ್ಲಿ ಈ ಮಾತು ಹೇಳಿದರು.

  • ಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

    ಮೋದಿ ಸರ್ಕಾರಕ್ಕೆ 12 ವರ್ಷ, ಕೆ.ಆರ್.ಪುರ ಕ್ಷೇತ್ರದಲ್ಲಿ ಕಾರ್ಯಕರ್ತರ ಹರ್ಷ

    ಕೆ.ಆರ್.ಪುರ : ಮೋದಿ ಅಂತಹ ಅಗ್ರಗಣ್ಯನಾಯಕ ಭಾರತಕ್ಕೆ ಸಿಕ್ಕಿರುವುದು ಭಾರತೀಯರ ಪುಣ್ಯ , ದಶಕಗಳೇ ಕಳೆದರೂ ಮೋದಿ ಆಡಳಿತ ಮುಂದಿನ ಪೀಳಿಗೆಗೆ ಭದ್ರ ಬುನಾದಿ ಎಂದು ಶಾಸಕ‌ ಬೈರತಿ ಬಸವರಾಜ ಅವರು ತಿಳಿಸಿದರು .

    ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 12ವರ್ಷ ಪೂರ್ಣ ಗೊಳಿಸಿದ ಹಿನ್ನಲೆಯಲ್ಲಿ ಶಾಸಕ ಬೈರತಿ ಬಸವರಾಜ ಅವರ ನೇತೃತ್ವದಲ್ಲಿ ರಾಮಮೂರ್ತಿ ನಗರದ ಆಂಜನೇಯ ಸ್ವಾಮಿಗೆ ವಿಷೇಶ ಪೂಜೆ ಸಲ್ಲಿಸಿ, ನಂತರ ದೇವಾಲಯದ ಬಳಿ ಸಂಭ್ರಮಾಚರಣೆ ಮಾಡಿ ಸಾರ್ವಜನಿಕರಿಗೆ ಸಿಹಿ‌ ವಿತರಿಸಿ ಮಾತನಾಡಿದ ಅವರು

    ವಿಶ್ವದಲ್ಲೇ ಭಾರತ ದೇಶವನ್ನು ಅಗ್ರಮಟ್ಟಕ್ಕೆ ತಲುಪಿಸುವಲಿ ದೇಶವನ್ನು ಅಭಿವೃದ್ಧಿಯೆಡೆಗೆ ದಿಟ್ಟ ಹೆಜ್ಜೆ ಇರಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು , ದೇಶದ ಸೈನ್ಯಕ್ಕೆ ಹೊಸ ಸ್ಪರ್ಶನೀಡಿ ವಿಶ್ವದ ಮಟ್ಟದಲ್ಲಿ ಗೌರವ ತಂದುಕೊಟ್ಟು ಬಲಿಷ್ಠವನ್ನಾಗಿ ಮಾಡಿದ ಏಕೈಕ ನಾಯಕರಾಗಿದ್ದಾರೆ ಎಂದು ಹೇಳಿದರು.

    ಶ್ರೀರಾಮನ ಕಾಣುವ ಹಿಂಗಿತ ,ಆತ್ಮನಿರ್ಭರ ಭಾರತ,ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ, ಡಿಜಿಟಲ್ ಇಂಡಿಯಾ ಮುಖಾಂತರ ವಿಶ್ವದಲ್ಲಿ ಕ್ರಾಂತಿ ವಿಶ್ವಮಟ್ಟದಲ್ಲಿ ಸಾಮರಸ್ಯ ನಾಯಕತ್ವ ಹೊಂದಿದ ವಿಶ್ವಗುರು , ನರೇಂದ್ರ ದಾಮೋದರ ದಾಸ್ ಮೋದಿ ಎಂದು ಗುಣಗಾನ ಮಾಡಿದರು.

    ಈ ಸಂದರ್ಭದಲ್ಲಿ ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌಡ,ಎಂಎಲ್ ಡಿಸಿ ಮುನಿರಾಜು, ವಾರ್ಡ್ ನ ಅಧ್ಯಕ್ಷ ರಮೇಶ್ ಗೌಡ,ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಜಿಮ್ ರಮೇಶ್ ಗೌಡ,ಮುಖಂಡರಾದ ಬಾಕ್ಸರ್ ನಾಗರಾಜ್, ನಾಗೇನಹಳ್ಳಿ ಲೋಕೆಶ್,ಸುಗುಮಾರ್,ಶ್ರೀರಾಮ್, ರಾಮು ಮತ್ತಿತರರು ಇದ್ದರು.

  • ಸಿಎಂ ಡಿಕೆಶಿ ಮನೆಯ ಬಳಿ ನಿಂಬೆಹಣ್ಣು, ನಾಟಿ ಕೋಳಿ ಕತ್ತು ಕೊಯ್ದು ವಾಮಾಚಾರ ಶಂಕೆ!

    ಸಿಎಂ ಡಿಕೆಶಿ ಮನೆಯ ಬಳಿ ನಿಂಬೆಹಣ್ಣು, ನಾಟಿ ಕೋಳಿ ಕತ್ತು ಕೊಯ್ದು ವಾಮಾಚಾರ ಶಂಕೆ!

    ಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಯ ಬಳಿ ಮೂರು ನಿಂಬೆಹಣ್ಣು ಹಾಗೂ ನಾಟಿ ಕೋಳಿಯ ಕತ್ತು ಕೊಯ್ದು ಹಾಕಿರುವುದು ಭಾನುವಾರ ಮಧ್ಯಾಹ್ನ ಪತ್ತೆಯಾಗಿತ್ತು ವಾಮಾಚಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಮುಖ್ಯಮಂತ್ರಿ ಮನೆಯ ಬಳಿ ಕೂಡು ರಸ್ತೆಯಿದ್ದು (ಜಿಬಿಎ ಮೈದಾನದ ಎದುರು) ಆ ರಸ್ತೆಯ ಬದಿಯಲ್ಲಿ ವೃತ್ತಾಕಾರ ಹಾಕಿ ನಾಟಿ ಕೋಳಿಯೊಂದನ್ನು ಕೊಯ್ದು ಹಾಕಲಾಗಿತ್ತು. ಅದರ ಪಕ್ಕದಲ್ಲೇ ನಿಂಬೆಹಣ್ಣನ್ನು ಹಾಕಲಾಗಿತ್ತು. ಕೋಳಿ ತಲೆಯನ್ನು ನಾಯಿ ಎತ್ತಿಕೊಂಡು ಹೋಗಿದೆ. ಆ ಮಾರ್ಗದಲ್ಲಿ ತೆರಳಿದ ವಾಹನ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ಕುತೂಹಲದಿಂದ ವೀಕ್ಷಿಸಿ ಹೋಗುತ್ತಿದ್ದರು.

    ‘ವಾಮಾಚಾರ ನಡೆಸಲಾಗಿದೆ’ ಎಂದು ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಕೋಳಿಯನ್ನು ಸ್ಥಳದಿಂದ ತೆಗೆದು ಹಾಕಲಾಗಿದೆ. ಶನಿವಾರ ತಡರಾತ್ರಿ ಕಿಡಿಗೇಡಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆ ಮಾರ್ಗದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದೇವೆ. ಕೃತ್ಯ ಎಸಗಿದವರ ಸುಳಿವು ಇನ್ನೂ ಪತ್ತೆಯಾಗಿಲ್ಲ’ ಎಂದು ಪೊಲೀಸರು ಹೇಳಿದರು.

  • ಆತ್ಮಸಾಕ್ಷಿಗೆ ಧಕ್ಕೆಯಾಗಿರುವುದರಿಂದ ರಾಜೀನಾಮೆ ನೀಡಿದ್ದೇನೆ : ರಾಮಲಿಂಗಾರೆಡ್ಡಿ

    ಆತ್ಮಸಾಕ್ಷಿಗೆ ಧಕ್ಕೆಯಾಗಿರುವುದರಿಂದ ರಾಜೀನಾಮೆ ನೀಡಿದ್ದೇನೆ : ರಾಮಲಿಂಗಾರೆಡ್ಡಿ

    ಬೆಂಗಳೂರು:ರಾಜ್ಯದ ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ಡಿಕೆ ಶಿವಕುಮಾರ್ ತಮ್ಮ ಸಂಪುಟದ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ ಕೆಲವೇ ಗಂಟೆಗಳಲ್ಲಿ ಸರ್ಕಾರಕ್ಕೆ ಮೊದಲ ರಾಜಕೀಯ ಹಿನ್ನಡೆ ಎದುರಾಗಿದೆ.

    ತಮಗೆ ನಿರೀಕ್ಷಿಸಿದ್ದ ಬೆಂಗಳೂರು ಅಭಿವೃದ್ಧಿ ಸಂಬಂಧಿತ ಖಾತೆ ನೀಡದಿರುವುದರಿಂದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಸಚಿವ ರಾಮಲಿಂಗಾ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾತೆ ಹಂಚಿಕೆ ಕುರಿತು ಅಸಮಾಧಾನಗೊಂಡ ಅವರು ಇಂದು ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

    ಡಿಕೆ ಶಿವಕುಮಾರ್ ನೇತೃತ್ವದ ಹೊಸ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಯಾದ ತಕ್ಷಣವೇ ಪ್ರಮುಖ ಸಚಿವರೊಬ್ಬರು ರಾಜೀನಾಮೆ ಘೋಷಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆಳವಣಿಗೆ ಸರ್ಕಾರದ ಮುಂದಿನ ರಾಜಕೀಯ ನಡೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.

  • ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು..!

    ಸತೀಶ್ ಜಾರಕಿಹೊಳಿ ಭೇಟಿ ಮಾಡಿದ 21 ಮಠಾಧೀಶರು..!


    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ಮತ್ತು ಸಂಪುಟ ಪುನಾರಚನೆಯ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಇಂದು ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಯಿತು. ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಸುಮಾರು 21 ಮಂದಿ ಸ್ವಾಮೀಜಿಗಳು ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ.

    ಸ್ವಾಮೀಜಿಗಳ ದಂಡು, ರಾಜಕೀಯ ಚರ್ಚೆ: ಬೆಂಗಳೂರಿನ ಸತೀಶ್ ಜಾರಕಿಹೊಳಿ ಅವರ ಅಧಿಕೃತ ಸರ್ಕಾರಿ ನಿವಾಸಕ್ಕೆ ಆಗಮಿಸಿದ ಬೋವಿ ಮಠ, ವಾಲ್ಮೀಕಿ ಪೀಠ, ಕುರುಬ ಮತ್ತು ಮಡಿವಾಳ ಸಮುದಾಯ ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳ 21 ಮಠಾಧೀಶರು, ಸಚಿವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಈ ಭೇಟಿಯು ಕೇವಲ ಸೌಜನ್ಯದ ಭೇಟಿಯಾಗಿರದೆ, ರಾಜ್ಯ ರಾಜಕಾರಣದಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಕುರಿತಾದ ಗಂಭೀರ ಚರ್ಚೆಯಾಗಿತ್ತು ಎಂದು ತಿಳಿದುಬಂದಿದೆ.

    ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಗ್ರಹ: ಮೂಲಗಳ ಪ್ರಕಾರ, ಈ ಬಾರಿಯ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದ ಪ್ರಭಾವಿ ನಾಯಕರಿಗೆ ನೀಡಬೇಕು ಎಂಬ ಒಕ್ಕೊರಲ ಒತ್ತಾಯವನ್ನು ಸ್ವಾಮೀಜಿಗಳು ಸಚಿವರ ಮುಂದಿಟ್ಟಿದ್ದಾರೆ. ಅದರಲ್ಲೂ ಸತೀಶ್ ಜಾರಕಿಹೊಳಿ ಅವರು ಈ ಸ್ಥಾನಕ್ಕೆ ಅರ್ಹರಾಗಿದ್ದು, ಅವರಿಗೆ ಹೈಕಮಾಂಡ್ ಮೇಲೆ ಒತ್ತಡ ಹೇರಲು ಬೆಂಬಲ ನೀಡುವುದಾಗಿ ಸ್ವಾಮೀಜಿಗಳು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಜೊತೆಗೆ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಸಕರಿಗೆ ಹೆಚ್ಚಿನ ಪ್ರಾತಿನಿಧ್ಯ ಮತ್ತು ಪ್ರಮುಖ ಖಾತೆಗಳನ್ನು ನೀಡುವ ಬಗ್ಗೆಯೂ ಚರ್ಚೆ ನಡೆದಿದೆ.

    ಸಿದ್ದರಾಮಯ್ಯ ಭೇಟಿಗೆ ತೆರಳಿದ ಮಠಾಧೀಶರು: ಸತೀಶ್ ಜಾರಕಿಹೊಳಿ ಅವರೊಂದಿಗೆ ಪ್ರಾಥಮಿಕ ಚರ್ಚೆ ಮುಗಿಸಿದ ಸ್ವಾಮೀಜಿಗಳ ತಂಡ, ಅಲ್ಲಿಂದ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಭೇಟಿ ಮಾಡಲು ತೆರಳಿದೆ.

    ಸಿದ್ದರಾಮಯ್ಯ ಅವರ ಮುಂದೆಯೂ ಇದೇ ಬೇಡಿಕೆಗಳನ್ನು ಮಂಡಿಸಲು ಸ್ವಾಮೀಜಿಗಳು ಸಜ್ಜಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ಆಂತರಿಕ ರಾಜಕೀಯದಲ್ಲಿ ಸಂಚಲನ ಮೂಡಿದ್ದು, ಕೆಪಿಸಿಸಿ ಅಧ್ಯಕ್ಷ ಪಟ್ಟದ ರೇಸ್ ಮತ್ತಷ್ಟು ಕುತೂಹಲ ಕೆರಳಿಸಿದೆ. ಒಟ್ಟಾರೆಯಾಗಿ, ಸತೀಶ್ ಜಾರಕಿಹೊಳಿ ಅವರ ಹಿಂದೆ ದಲಿತ ಮತ್ತು ಹಿಂದುಳಿದ ವರ್ಗಗಳ ಮಠಾಧೀಶರು ಒಗ್ಗಟ್ಟಾಗಿ ನಿಂತಿರುವುದು, ಪಕ್ಷದ ಹೈಕಮಾಂಡ್‌ಗೆ ಒಂದು ಬಲವಾದ ಸಂದೇಶ ರವಾನಿಸಿದಂತಾಗಿದೆ.

  • ಬಿಜೆಪಿ ರಾಜ್ಯಾಧ್ಯಕ್ಷ ಸಾರಥಿಯಾಗಿ ಅರವಿಂದ ಲಿಂಬಾವಳಿ ಸೂಕ್ತ ನಾಯಕ..!

    ಬಿಜೆಪಿ ರಾಜ್ಯಾಧ್ಯಕ್ಷ ಸಾರಥಿಯಾಗಿ ಅರವಿಂದ ಲಿಂಬಾವಳಿ ಸೂಕ್ತ ನಾಯಕ..!

    ಮಹದೇವಪುರ: ಐಟಿ ವಲಯ, ಯುವಕರು,ಮಧ್ಯಮ ವರ್ಗ ಮತ್ತು ತಳಮಟ್ಟದ ಕಾರ್ಯಕರ್ತರನ್ನು ಒಂದೇ ವೇದಿಕೆಗೆ ತರಬಲ್ಲ ಸಾಮರ್ಥ್ಯ ಅರವಿಂದ ಲಿಂಬಾವಳಿಗೆ ಇದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರು ರಾಜ್ಯ ರಾಜಕಾರಣದಲ್ಲಿ ಇನ್ನಷ್ಟು ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇರುವ ನಾಯಕರು ಕರ್ನಾಟಕ ಬಿಜೆಪಿಯಲ್ಲಿ ಮುಂದಿನ ರಾಜ್ಯಾಧ್ಯಕ್ಷರ ಆಯ್ಕೆ ಕುರಿತ ಚರ್ಚೆಗಳು ವೇಗ ಪಡೆಯುತ್ತಿವೆ. ಸಂಘಟನಾ ಅನುಭವ, ಆಡಳಿತ ಸಾಮರ್ಥ ಮತ್ತು ತಳಮಟ್ಟದ ಕಾರ್ಯಕರ್ತರೊಂದಿಗೆ ಗಟ್ಟಿಯಾದ ಸಂಪರ್ಕ ಹೊಂದಿರುವ ನಾಯಕರ ಅಗತ್ಯತೆ ಪಕ್ಷದೊಳಗೆ ಹೆಚ್ಚಾಗಿ ಕೇಳಿಬರುತ್ತಿದೆ.

    ಬಾಲ್ಯದಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಅರವಿಂದ ಲಿಂಬಾವಳಿ, ವಿದ್ಯಾರ್ಥಿ ದಶೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಯುವಕರನ್ನು ಸಂಘಟಿಸುವಲ್ಲಿ, ವಿದ್ಯಾರ್ಥಿ ಚಳವಳಿಗಳನ್ನು ಮುನ್ನಡೆಸುವಲ್ಲಿ ಮತ್ತು ತಳಮಟ್ಟದ ಕಾರ್ಯಕರ್ತರ ಜಾಲ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

    ಬಳಿಕ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅವರು, ನಂತರ ಬಿಜೆಪಿ ರಾಜ್ಯ ಪ್ರಧಾನ
    ಕಾರ್ಯದರ್ಶಿಯಾಗಿ ಸುಮಾರು 16 ವರ್ಷಗಳ ಕಾಲ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರವಹಿಸಿದರು. ತಂತ್ರಗಾರಿಕೆ, ಚುನಾವಣಾ ಕಾರ್ಯಕರ್ತರ ಸಂಘಟನೆ ಮತ್ತು ಪಕ್ಷದ ವಿಸ್ತರಣೆಯಲ್ಲಿ ಲಿಂಬಾವಳಿ ಪ್ರಭಾವಿ ನಾಯಕತ್ವ ತೋರಿದವರು ಎಂದು ವಲಯದಲ್ಲಿ ಪರಿಗಣಿಸಲಾಗಿದೆ.

    ಪಕ್ಷ ಸಂಘಟನೆಯಲ್ಲಿನ ದೀರ್ಘ ಅನುಭವದ ನಂತರ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ ಲಿಂಬಾವಳಿ, 2008 ಹೊಸದಾಗಿ ರಚನೆಯಾದ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 2013 ಹಾಗೂ 2018 ರಲ್ಲಿಯೂ ಸತತವಾಗಿ ಗೆಲುವು ಸಾಧಿಸಿ ಮೂರು ಅವಧಿಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದರು.

    ಸಚಿವರಾಗಿ ಆಡಳಿತ ಅನುಭವ:

    ಕರ್ನಾಟಕ ಸರ್ಕಾರದಲ್ಲಿ ಉನ್ನತ ಶಿಕ್ಷಣ, ಆರೋಗ್ಯ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವರಾಗಿ ಅರವಿಂದ ಲಿಂಬಾವಳಿ ಕಾರ್ಯನಿರ್ವಹಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ, ವಿದ್ಯಾರ್ಥಿ ಸಹಾಯ ಕಾರ್ಯಕ್ರಮಗಳು ಮತ್ತು ಕಾಲೇಜುಗಳ ವಿಸ್ತರಣೆಗೆ ಒತ್ತು ನೀಡಿದರೆ, ಆರೋಗ್ಯ ಇಲಾಖೆಯಲ್ಲಿ ಸಾರ್ವಜನಿಕ ಆರೋಗ್ಯ ಶಿಬಿರಗಳು ಹಾಗೂ ವೈದ್ಯಕೀಯ ಸೇವೆಗಳ ವಿಸ್ತರಣೆಗೆ ಕ್ರಮ ಕೈಗೊಂಡಿದ್ದರು.

    ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ, ಗಿಡಗಳು ನೆಡುವ ಅಭಿಯಾನ ಮತ್ತು ನಗರ ಹಸಿರು ವಿಸ್ತರಣೆಗೆ ಆದ್ಯತೆ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಕನ್ನಡ ಭಾಷೆ, ಸಾಹಿತ್ಯ, ಕಲಾವಿದರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುವ ಕೆಲಸದಲ್ಲೂ ಅವರು ಸಕ್ರಿಯರಾಗಿದ್ದರು.

    ಚುನಾವಣಾ ತಂತ್ರಗಾರಿಕೆಯಲ್ಲಿ ಪ್ರಮುಖ ಪಾತ್ರ: 2023 ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಪಕ್ಷ ಮಹದೇವಪುರ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಿದ ಸಂದರ್ಭದ ಲ್ಲಿಯೂ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸು ವಲ್ಲಿ ಲಿಂಬಾವಳಿ ಪ್ರಮುಖ ಪಾತ್ರವಹಿಸಿದರು. ಅವರ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಕ್ಷೇತ್ರದಲ್ಲಿ ಅವರ ಸಂಘಟನಾ ಬಲವನ್ನು ತೋರಿಸಿತು.

     ನಗರ ಮತ್ತು ಗ್ರಾಮೀಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರವಿಂದ ಲಿಂಬಾವಳಿ ರಾಜಕಾರಣದ ಅನುಭವ, ಆರ್‌ಎಸ್ಎಸ್ ಹಿನ್ನೆಲೆ, ಸಂಘಟನಾ ಹಿಡಿತ, ಸಚಿವ ಅನುಭವ ಹಾಗೂ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಹೊಂದಿರುವ ನಾಯಕರ ಅಗತ್ಯ ರಾಜ್ಯ ಬಿಜೆಪಿಗೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

    ಇನ್ನೂ ಹಲವಾರು ಕಾರಣಗಳಿಂದ ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜ್ಯಾದ್ಯಕ್ಷರ ಸ್ಥಾನಕ್ಕೆ ಸೂಕ್ತವಾದ ನಾಯಕರು ಎಂಬ ಮಾತು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

  • ಜೂನ್ ಐದರಂದು ಡಿಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ..!

    ಜೂನ್ ಐದರಂದು ಡಿಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ..!

    ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ರಾಜ್ಯದ ಮುಂದಿನ ಸಾರಥಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

    ತಮ್ಮ ಆಪ್ತ ಜ್ಯೋತಿಷಿಗಳ ಸಲಹೆಯ ಮೇರೆಗೆ ಡಿ.ಕೆ. ಶಿವಕುಮಾರ್ ಅವರು ಮುಂದಿನ ತಿಂಗಳು ಅಂದರೆ ಜೂನ್ 5 ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

    ರಾಜಕೀಯ ಬದಲಾವಣೆಯ ಈ ಹೊತ್ತಿನಲ್ಲಿ, ಪ್ರಮಾಣ ವಚನ ಕಾರ್ಯಕ್ರಮ ಹಾಗೂ ಮುಹೂರ್ತದ ಕುರಿತಾದ ಸಂಪೂರ್ಣ ವಿವರಗಳು ಹೀಗಿವೆ:

    ಜೂನ್ 5ರ ಶುಕ್ರವಾರ ಮಧ್ಯಾಹ್ನ ‘ಅಭಿಜಿನ್ ಲಗ್ನ’ದಲ್ಲಿ ಪದಗ್ರಹಣ

    ಭಾವಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಜೂನ್ 5ನೇ ತಾರೀಖಿನ ಶುಕ್ರವಾರದಂದು ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಅವರು ಸೋಮವಾರ ಅಥವಾ ಬುಧವಾರದಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ, ಡಿಕೆಶಿ ಅವರ ಆಪ್ತ ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ವಿಶೇಷ ಸಲಹೆಯಂತೆ, ಶುಕ್ರವಾರ ಮಧ್ಯಾಹ್ನ 12.30 ಕ್ಕೆ ಬರಲಿರುವ ಶುಭ ‘ಅಭಿಜಿನ್ ಲಗ್ನ’ದಲ್ಲಿ ಪ್ರಮಾಣ ವಚನ ಸ್ವೀಕರಿಸಲು ದಿನ ನಿಗದಿಪಡಿಸಲಾಗಿದೆ ಎನ್ನಲಾಗಿದೆ.

    ಕುಮಾರಕೃಪಾ ಗೆಸ್ಟ್‌ಹೌಸ್‌ನಲ್ಲಿ ವಾಸ್ತು ಬದಲಾವಣೆ: ಎಕ್ಸಿಟ್‌ ಗೇಟ್ ಇನ್ಮುಂದೆ ಎಂಟ್ರಿ ಗೇಟ್!

    ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರ ಅಧಿಕೃತ ಸರ್ಕಾರಿ ವಸತಿ ಗೃಹವಾಗಲಿರುವ ‘ಕುಮಾರಕೃಪಾ ಗೆಸ್ಟ್‌ಹೌಸ್’ನ ಕಲ್ಲು ಬಿಲ್ಡಿಂಗ್‌ನಲ್ಲಿ ಸದ್ಯ ಭರದಿಂದ ನವೀಕರಣ ಕಾರ್ಯಗಳು ಸಾಗುತ್ತಿವೆ. ಜ್ಯೋತಿಷಿ ಡಾ. ಬಿ.ಪಿ. ಆರಾಧ್ಯ ಅವರ ಸಲಹೆಯಂತೆ, ದೇವ ಮೂಲೆಯಿಂದಲೇ ವಸತಿ ಗೃಹಕ್ಕೆ ಪ್ರವೇಶ ಮಾಡಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಹಿಂದಿನ ಕುಮಾರಕೃಪಾದ ‘ಎಕ್ಸಿಟ್ ಪಾಯಿಂಟ್’ (ಹೊರಹೋಗುವ ದಾರಿ) ಅನ್ನು ಇನ್ಮುಂದೆ ‘ಎಂಟ್ರಿ ಗೇಟ್’ (ಪ್ರವೇಶ ದ್ವಾರ) ಆಗಿ ಬದಲಾಯಿಸಲು ಡಿಕೆಶಿ ಸೂಚಿಸಿದ್ದಾರೆ. ಈಗಾಗಲೇ ಅವರ ಆಪ್ತ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್ ಅವರು ಜ್ಯೋತಿಷಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಪ್ರಮಾಣ ವಚನ

    ಡಿ.ಕೆ. ಶಿವಕುಮಾರ್ ಅವರು ಕಂಠೀರವ ಕ್ರೀಡಾಂಗಣ ಅಥವಾ ರಾಜ್‌ಭವನದಲ್ಲಿ ಅಲ್ಲದೆ, ವಿಧಾನಸೌಧದ ಭವ್ಯ ಮುಂಭಾಗದ ಮೆಟ್ಟಿಲುಗಳ ಮೇಲೆ (Grand Steps) ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಈ ಭವ್ಯ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸ್ವತಃ ಡಿಕೆಶಿ ಅವರೇ ರಾಜ್ಯ ಮುಖ್ಯ ಕಾರ್ಯದರ್ಶಿಗೆ (Chief Secretary) ದೂರವಾಣಿ ಕರೆ ಮಾಡಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಡಿಕೆಶಿ ಜೊತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಹೊಸ ಸಚಿವರು

    ಜೂನ್ 5 ರಂದು ಕೇವಲ ಮುಖ್ಯಮಂತ್ರಿ ಮಾತ್ರವಲ್ಲದೆ, ಅವರೊಂದಿಗೆ ಹೊಸ ಸಂಪುಟದ ಸಚಿವರೂ ಸಹ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಸಚಿವರ ಸಂಖ್ಯೆಯ ಬಗ್ಗೆ ಎರಡು ವಿಭಿನ್ನ ವರದಿಗಳು ಕೇಳಿಬರುತ್ತಿವೆ. ಒಂದು ಮೂಲಗಳ ಪ್ರಕಾರ ಡಿಕೆಶಿ ಜೊತೆಗೆ 7 ಮಂದಿ ಹಿರಿಯ ಮತ್ತು ಅನುಭವಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದರೆ, ಮತ್ತೊಂದು ಮೂಲಗಳ ಪ್ರಕಾರ 12 ರಿಂದ 13 ಮಂದಿ ನೂತನ ಸಚಿವರು ಮೊದಲ ಹಂತದಲ್ಲೇ ಕ್ಯಾಬಿನೆಟ್ ಸೇರಲಿದ್ದಾರೆ ಎಂದು ವರದಿಯಾಗಿದೆ.

  • ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಪವರ್ ಪ್ಯಾಕೇಜ್’ ಫಾರ್ಮುಲಾ? ಒಬ್ಬ ಸಿಎಂ ಜೊತೆ ನಾಲ್ವರು ಡಿಸಿಎಂ ಚರ್ಚೆ ಜೋರು!

    ಕರ್ನಾಟಕ ಕಾಂಗ್ರೆಸ್‌ನಲ್ಲಿ ‘ಪವರ್ ಪ್ಯಾಕೇಜ್’ ಫಾರ್ಮುಲಾ? ಒಬ್ಬ ಸಿಎಂ ಜೊತೆ ನಾಲ್ವರು ಡಿಸಿಎಂ ಚರ್ಚೆ ಜೋರು!


    ಬೆಂಗಳೂರು: ರಾಜ್ಯಾ ರಾಜಕೀಯದಲ್ಲಿ ಭಾರೀ ಬದಲಾವಣೆಯ ಸುಳಿವುಗಳು ಕಾಣಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಹೊಸ ರಾಜಕೀಯ ಸಮೀಕರಣ ರೂಪುಗೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರುವ ಸಾಧ್ಯತೆಗಳ ನಡುವೆಯೇ, ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ ಹಾಗೂ ನಾಲ್ವರು ಉಪ ಮುಖ್ಯಮಂತ್ರಿಗಳ ನೇಮಕದ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

    ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೆರಡು ವರ್ಷಗಳು ಮಾತ್ರ ಬಾಕಿ ಇರುವ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ಯಾವುದೇ ರಾಜಕೀಯ ಅಸಮಾಧಾನಕ್ಕೆ ಅವಕಾಶ ನೀಡದಂತೆ ದೊಡ್ಡ ಮಟ್ಟದ ಪವರ್ ಬ್ಯಾಲೆನ್ಸ್ ಫಾರ್ಮುಲಾ ರೂಪಿಸುತ್ತಿದೆ ಎನ್ನಲಾಗುತ್ತಿದೆ. ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಹಾಗೂ ವಿವಿಧ ಸಮುದಾಯ ನಾಯಕರಿಗೆ ಸಮಾನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಬಹು ಉಪ ಮುಖ್ಯಮಂತ್ರಿ ಹುದ್ದೆಗಳ ಚರ್ಚೆ ಮುಂದಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

    ಸಿಎಂ ಸಿದ್ದರಾಮಯ್ಯ ಅವರು ಮೇ 28ರಂದು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಇದೇ ವೇಳೆ ಹೊಸ ಮುಖ್ಯಮಂತ್ರಿ ಜೊತೆ ನಾಲ್ವರು ಉಪ ಮುಖ್ಯಮಂತ್ರಿಗಳು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಫಾರ್ಮುಲಾ ಪ್ರಕಾರ ದಲಿತ, ಅಲ್ಪಸಂಖ್ಯಾತ, ಲಿಂಗಾಯತ ಹಾಗೂ ಒಬಿಸಿ ಸಮುದಾಯಗಳಿಂದ ತಲಾ ಒಬ್ಬರನ್ನು ಉಪ ಮುಖ್ಯಮಂತ್ರಿಗಳಾಗಿ ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ ಮಾತುಕತೆಗಳು ಇನ್ನೂ ಆರಂಭಿಕ ಹಂತದಲ್ಲಿದ್ದು, ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

    ಉಪ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ ಹಾಗೂ ಜಿ. ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ಕಾಂಗ್ರೆಸ್ ನಾಯಕರ ಹೆಸರುಗಳು ಕೇಳಿಬರುತ್ತಿವೆ.ದೆಹಲಿ ಹೈಕಮಾಂಡ್ ಸಭೆಗಳ ಬಳಿಕ ರಾಜ್ಯ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ಕೆಲ ದಿನಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.

  • ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಪ್ರದೀಪ್ ಈಶ್ವರ್ : “ಮಗು ಅಳದೇ ತಾಯಿ ಊಟ ಮಾಡಿಸಲ್ಲ” ಎಂದ ಶಾಸಕ!

    ಸಚಿವ ಸ್ಥಾನಕ್ಕಾಗಿ ದೆಹಲಿಗೆ ದೌಡಾಯಿಸಿದ ಪ್ರದೀಪ್ ಈಶ್ವರ್ : “ಮಗು ಅಳದೇ ತಾಯಿ ಊಟ ಮಾಡಿಸಲ್ಲ” ಎಂದ ಶಾಸಕ!

    ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆಯ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ತಮ್ಮ ಸಚಿವ ಸ್ಥಾನದ ಆಕಾಂಕ್ಷೆಯನ್ನು ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ. ಈ ಸಂಬಂಧ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಅವರು ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ಕುತೂಹಲ ಮೂಡಿಸಿದೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್, “ರಾಜಕೀಯದಲ್ಲಿ ಇರುವ ಯಾರಿಗಾದರೂ ಅಧಿಕಾರ ಪಡೆಯುವ ಹಂಬಲ ಇರುವುದು ಸಹಜ. ಮಗು ಅಳದಿದ್ದರೆ ತಾಯಿ ಕೂಡ ಕೈತುತ್ತು ನೀಡಲ್ಲ, ಹಾಗೆಯೇ ನಾವು ಕೇಳದಿದ್ದರೆ ಮಂತ್ರಿ ಸ್ಥಾನ ಸಿಗಲ್ಲ. ಅದಕ್ಕಾಗಿಯೇ ನಾನು ಹೈಕಮಾಂಡ್ ಬಳಿ ಸಚಿವ ಸ್ಥಾನ ಕೇಳಲು ದೆಹಲಿಗೆ ಹೋಗುತ್ತಿದ್ದೇನೆ” ಎಂದು ತಮ್ಮದೇ ಶೈಲಿಯಲ್ಲಿ ಮಾರ್ಮಿಕವಾಗಿ ಉತ್ತರಿಸಿದರು.

    ನೀಟ್ (NEET) ಅಕ್ರಮದ ಬಗ್ಗೆ ಆಕ್ರೋಶ
    ಇದೇ ವೇಳೆ ದೇಶಾದ್ಯಂತ ಸದ್ದು ಮಾಡುತ್ತಿರುವ ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    “ಸುಮಾರು 25 ಲಕ್ಷ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗುತ್ತಿದೆ. ಪೇಪರ್ ಲೀಕ್‌ನಿಂದಾಗಿ ದಕ್ಷಿಣ ಭಾರತದ ವಿದ್ಯಾರ್ಥಿಗಳು ಮಾನಸಿಕವಾಗಿ ಕುಗ್ಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.

    ರಾಷ್ಟ್ರ ಮಟ್ಟದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲು ಯಾರ ವೈಫಲ್ಯ ಕಾರಣ ಎಂದು ಪ್ರಶ್ನಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದರು.

    ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಶಾಸಕ
    ಕರ್ನಾಟಕದ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ ಪ್ರದೀಪ್ ಈಶ್ವರ್, “ವಿದ್ಯಾರ್ಥಿಗಳೇ ಯಾರೂ ಭಯಪಡಬೇಡಿ. ಮರು ಪರೀಕ್ಷೆ ನಡೆದರೂ ಮತ್ತೆ ಫೀಸ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಶ್ರಮಕ್ಕೆ ಖಂಡಿತ ನ್ಯಾಯ ಸಿಗಲಿದೆ, ಮಾನಸಿಕವಾಗಿ ಸಿದ್ಧರಾಗಿರಿ” ಎಂದು ಕರೆ ನೀಡಿದರು.

    ಒಂದು ಕಡೆ ಮಂತ್ರಿಗಿರಿಗಾಗಿ ಹೈಕಮಾಂಡ್ ಮೆಟ್ಟಿಲೇರಲು ಸಜ್ಜಾಗಿರುವ ಪ್ರದೀಪ್ ಈಶ್ವರ್, ಇನ್ನೊಂದೆಡೆ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವ ಮೂಲಕ ಗಮನ ಸೆಳೆದಿದ್ದಾರೆ


  • ಬಾಗಲಕೋಟೆಯಲ್ಲಿ ಜಯ ಸಾಧಿಸಿದ ಕಾಂಗ್ರೆಸ್: ಹೆಚ್.ವೈ ಮೇಟಿ ಪುತ್ರ ಉಮೇಶ್ ಮೇಟಿಗೆ ಗೆಲುವು.!!

    ಬಾಗಲಕೋಟೆಯಲ್ಲಿ ಜಯ ಸಾಧಿಸಿದ ಕಾಂಗ್ರೆಸ್: ಹೆಚ್.ವೈ ಮೇಟಿ ಪುತ್ರ ಉಮೇಶ್ ಮೇಟಿಗೆ ಗೆಲುವು.!!

    ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. ದಿವಂಗತ ಶಾಸಕ ಹೆಚ್.ವೈ. ಮೇಟಿ ಅವರ ಪುತ್ರರಾಗಿರುವ ಇವರು, ಬಿಜೆಪಿಯ ಅನುಭವಿ ನಾಯಕ ವೀರಣ್ಣ ಚರಂತಿಮಠ ಅವರನ್ನು ಸೋಲಿಸುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ವಶದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಮತ ಎಣಿಕೆಯ ಅಂಕಿ-ಅಂಶಗಳು ಮತ್ತು ಮುಖ್ಯಾಂಶಗಳು ಇಲ್ಲಿವೆ :

    ಬಾಗಲಕೋಟೆ ಫಲಿತಾಂಶದ ಮುಖ್ಯಾಂಶಗಳು:

    ಅಧಿಕೃತ ಗೆಲುವು: ಪ್ರತಿ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಉಮೇಶ್ ಮೇಟಿ ಅವರು ಅಂತಿಮವಾಗಿ ದಿಗ್ವಿಜಯ ಸಾಧಿಸಿದ್ದಾರೆ.

    ಮತಗಳ ವಿವರ (19ನೇ ಸುತ್ತಿನ ಅಂತ್ಯಕ್ಕೆ):

    ಉಮೇಶ್ ಮೇಟಿ (ಕಾಂಗ್ರೆಸ್) : 73,715 ಮತಗಳು.

    ವೀರಣ್ಣ ಚರಂತಿಮಠ (ಬಿಜೆಪಿ) : 60,697 ಮತಗಳು.

    ಗೆಲುವಿನ ಅಂತರ : ಸುಮಾರು 13,025ಕ್ಕೂ ಹೆಚ್ಚು ಮತಗಳ ಅಂತರದಿಂದ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

    ಸತತ ಮುನ್ನಡೆ : 1 ರಿಂದ 20ನೇ ಸುತ್ತಿನವರೆಗೂ ಪ್ರತಿ ಹಂತದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸುವ ಮೂಲಕ ಕ್ಷೇತ್ರದಾದ್ಯಂತ ‘ಕೈ’ ಹವಾ ಇರುವುದನ್ನು ಸಾಬೀತುಪಡಿಸಿದ್ದಾರೆ.

    ಸಂಭ್ರಮಾಚರಣೆ :
    ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆ ಬಾಗಲಕೋಟೆಯ ಮತ ಎಣಿಕೆ ಕೇಂದ್ರದ ಹೊರಗೆ ಮತ್ತು ಕ್ಷೇತ್ರದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಗುಲಾಲ್ ಎರಚುತ್ತಾ ಸಂಭ್ರಮಿಸಿದ್ದಾರೆ. ತಂದೆಯ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಮಗನೇ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವುದು ಮೇಟಿ ಕುಟುಂಬದಲ್ಲಿ ಸಂತಸ ತಂದಿದೆ.

    ಬಾಗಲಕೋಟೆ ಜೊತೆಗೆ ದಾವಣಗೆರೆ ದಕ್ಷಿಣದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮುನ್ನಡೆ ಸಾಧಿಸುತ್ತಿದ್ದು, ಕರ್ನಾಟಕದ ಎರಡೂ ಉಪಚುನಾವಣಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿದೆ.