Category: ಬೆಂಗಳೂರು ಗ್ರಾಮಾಂತರ

  • ದೊಡ್ಡಬಳ್ಳಾಪುರ: ನಗರಸಭಾ ಅಧ್ಯಕ್ಷೆ ಸುಮಿತ್ರ ಅವರ ಪತಿ ಆನಂದ್ ನಿಧನ, ಇಂದು ಅಂತ್ಯಕ್ರಿಯೆ

    ದೊಡ್ಡಬಳ್ಳಾಪುರ: ನಗರಸಭಾ ಅಧ್ಯಕ್ಷೆ ಸುಮಿತ್ರ ಅವರ ಪತಿ ಆನಂದ್ ನಿಧನ, ಇಂದು ಅಂತ್ಯಕ್ರಿಯೆ

    ದೊಡ್ಡಬಳ್ಳಾಪುರ; ನಗರಸಭಾ ಅಧ್ಯಕ್ಷೆ ಸುಮಿತ್ರ ಅವರ ಪತಿ ಆನಂದ್ ಅವರು ಕಳೆದ ರಾತ್ರಿ ನಿಧನ ಹೊಂದಿದ್ದಾರೆ.

    ಅನಾರೋಗ್ಯದ ಹಿನ್ನೆಲೆ ಆನಂದ್ ಅವರು ಏಪ್ರಿಲ್ 25ರಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ. ಬಿಜೆಪಿ ಮುಖಂಡರಾದ ಇವರು ಡಿಕ್ರಾಸ್, ಮುತ್ಸಂದ್ರ ಸುತ್ತಮುತ್ತ ತಮ್ಮ ಕೆಲಸಗಳ ಮೂಲಕ ಜನಮೆಚ್ಚುಗೆ ಪಡೆದಿದ್ದರು.

    ಇಂದು ಮಧ್ಯಾಹ್ನ 3 ಗಂಟೆಯ ನಂತರ ಅವರ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇವರ ನಿಧನಕ್ಕೆ ನಗರಸಭಾ ಸದಸ್ಯರು ಸೇರಿದಂತೆ ಹಲವು ಮುಖಂಡರು ಕಂಬನಿ ಮಿಡಿದಿದ್ದಾರೆ.

  • ದೊಡ್ಡಬಳ್ಳಾಪುರ ಜೆಡಿಎಸ್ ಅಧ್ಯಕ್ಷರಾಗಿ ಹರೀಶ್ ಗೌಡ ನೇಮಕ

    ದೊಡ್ಡಬಳ್ಳಾಪುರ ಜೆಡಿಎಸ್ ಅಧ್ಯಕ್ಷರಾಗಿ ಹರೀಶ್ ಗೌಡ ನೇಮಕ

    ಬೆಂಗಳೂರು: ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತಾದಳ (ಜಾತ್ಯತೀತ) ಪಕ್ಷದ ಅಧ್ಯಕ್ಷರಾಗಿ ಹರೀಶ್ ಗೌಡ ಅವರನ್ನು ನೇಮಕ ಮಾಡಲಾಗಿದೆ.

    ಜಿಲ್ಲಾಧ್ಯಕ್ಷ ಕೆ.ವಿ. ಮಂಜುನಾಥ್ ಹಾಗೂ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ ಅವರು ಈ ಕುರಿತು ಆದೇಶ ಹೊರಡಿಸಿದ್ದು, ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬಂದಿದೆ.

    ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಿ, ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿತವಾಗಿ ಬಲಪಡಿಸುವಲ್ಲಿ ಹರೀಶ್ ಗೌಡ ಅವರು ಪ್ರಮುಖ ಪಾತ್ರವಹಿಸುವರೆಂಬ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.

    ನೂತನ ಅಧ್ಯಕ್ಷರಿಗೆ ಪಕ್ಷದ ಹಿರಿಯರು, ಕಾರ್ಯಕರ್ತರು ಮತ್ತು ಬೆಂಬಲಿಗರು ಅಭಿನಂದನೆಗಳನ್ನು ತಿಳಿಸಿದ್ದಾರೆ.

  • ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ,ಶೇಕಡ 95.62 ರಷ್ಟು ಫಲಿತಾಂಶ

    ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ,ಶೇಕಡ 95.62 ರಷ್ಟು ಫಲಿತಾಂಶ

    ಬೆಂ. ಗ್ರಾ. ಜಿಲ್ಲೆ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 95.62% ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಹನ್ನೊಂದನೇ ಸ್ಥಾನ ಪಡೆದುಕೊಂಡಿದೆ.

    ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯ ಒಟ್ಟು 278 ಪ್ರೌಢಶಾಲೆಗಳಲ್ಲಿನ ಒಟ್ಟು 13,083 ವಿದ್ಯಾರ್ಥಿಗಳ ಹಾಜರಾಗಿದ್ದು, 12,510 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ 95.62 ರಷ್ಟು ಫಲಿತಾಂಶ ಪಡೆದಿದ್ದಾರೆ.

    ಒಟ್ಟು 6639 ಬಾಲಕರು ಹಾಜರಾಗಿದ್ದು 6247 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 94.10 ರಷ್ಟು ಫಲಿತಾಂಶ ಪಡೆದಿದ್ದಾರೆ. 6444 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 6263 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ 97.19 ರಷ್ಟು ಫಲಿತಾಂಶ ದೊರಕಿದೆ.

    ನಗರ ಪ್ರದೇಶದ 4775 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 4496 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 94.16 ರಷ್ಟು ಫಲಿತಾಂಶ ದೊರೆತಿದೆ.

    ಗ್ರಾಮೀಣ ಪ್ರದೇಶದ 8308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8014 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 96.46 ರಷ್ಟು ಫಲಿತಾಂಶ ಸಿಕ್ಕಿದೆ.

    *ತಾಲ್ಲೂಕು ವಾರು ಫಲಿತಾಂಶ*
    *ದೇವನಹಳ್ಳಿ*
    * ಹಾಜರಾದವರು-3091
    ಉತ್ತೀರ್ಣರಾದವರು-2956
    ಶೇಕಡ: 95.63%

    *ದೊಡ್ಡಬಳ್ಳಾಪುರ*
    * ಹಾಜರಾದವರು-3553
    ಉತ್ತೀರ್ಣರಾದವರು-3416
    ಶೇಕಡ: 96.14%

    *ಹೊಸಕೋಟೆ*
    * ಹಾಜರಾದವರು-3578
    ಉತ್ತೀರ್ಣರಾದವರು-3479
    ಶೇಕಡ: 97.23%

    *ನೆಲಮಂಗಲ*
    * ಹಾಜರಾದವರು-2861
    ಉತ್ತೀರ್ಣರಾದವರು-2659
    ಶೇಕಡ:92.94%

    *ಶಾಲಾವಾರು ಫಲಿತಾಂಶ*
    * ಸರ್ಕಾರಿ ಶಾಲೆ-94.35%
    * ಅನುದಾನಿತ-90.14%
    * ಅನುದಾನ ರಹಿತ-98.27%

    *625 ಕ್ಕೆ 622 ಅಂಕ ಪಡೆದ ಜಿಲ್ಲೆಯ ಮೂವರು ಟಾಪರ್ ಗಳು*

    1. ಹೇಮ ಜಿ. ಹೆಚ್, ಡಾ. ಬಿ.ಆರ್ ಅಂಬೇಡ್ಕರ್ ಹೆಣ್ಣು ಮಕ್ಕಳ ವಸತಿ ಶಾಲೆ. ಮಧುರೆ ದೊಡ್ಡಬಳ್ಳಾಪುರ.
    2. ವಿಷ್ಣು ರೆಡ್ಡಿ. ಪಿ, ನ್ಯೂ ಹಾರಿಜನ್ ಶಾಲೆ, ಹೊಸಕೋಟೆ ತಾಲ್ಲೂಕು.
    3. ಸಹನಾ.ಎ, ಲಿಟ್ಲ್ ಮಾಸ್ಟರ್ ಆಂಗ್ಲ ಶಾಲೆ, ಕಂಟನಕುಂಟೆ, ದೊಡ್ಡಬಳ್ಳಾಪುರ ತಾಲ್ಲೂಕು.

  • ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಾಶ್ರೀ ವರ್ಗಾವಣೆ ಮಾಡಿ ಸರ್ಕಾರ ಆದೇಶ!

    ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಾಶ್ರೀ ವರ್ಗಾವಣೆ ಮಾಡಿ ಸರ್ಕಾರ ಆದೇಶ!

    ದೊಡ್ಡಬಳ್ಳಾಪುರ; ಉಪವಿಭಾಗಾಧಿಕಾರಿ ದುರ್ಗಶ್ರೀ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು ಇವರ ಸ್ಥಳಕ್ಕೆ ಮಂಜುನಾಥ್ ಟಿ.ಆರ್ ಕೆ.ಎ.ಎಸ್ ಅವರನ್ನು ನೇಮಿಸಿದೆ.

    ಕಳೆದ ಎರಡು ವರ್ಷಗಳಿಂದ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ದುರ್ಗಶ್ರೀ ಕೆ.ಎ.ಎಸ್ (ಕಿರಿಯ ಶ್ರೇಣಿ) ಇವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರದಿ ಮಾಡಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ.

    ಈ ಆದೇಶ ಪತ್ರದಲ್ಲಿ  ಮಂಜುನಾಥ್ ಅವರನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾವಣೆ ಮಾಡುವ ಮೊದಲು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಕೆ ಸ್ಥಳ ನಿಯುಕ್ತಿ ಮಾಡಿ ಆದೇಶಿಸಲಾಗಿತ್ತು, ಬಳಿಕ ದೊಡ್ಡಬಳ್ಳಾಪುರ ಉಪವಿಭಾಗ ಕಚೇರಿಗೆ ವರ್ಗಾವಣೆ ಮಾಡಲಾಗಿದೆ.

  • ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ; ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣ ದೋಚಿ ಪರಾರಿ

    ದೊಡ್ಡಬಳ್ಳಾಪುರ:  ಮನೆ ಬೀಗ ಒಡೆದ ಕಳ್ಳರು  ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ, ನಗದು ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಎಸ್ ನಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

     ಕಳ್ಳರು ಮನೆಯಲ್ಲಿದ್ದ 10 ಗ್ರಾಂ ಚಿನ್ನದ ಚೈನ್, ತಲಾ 15 ಗ್ರಾಂ ತೂಕದ ಬ್ರೇಸ್ಲೆಟ್ ಮತ್ತು ನೆಕ್ಲೇಸ್, 8 ಗ್ರಾಂ ಉಂಗುರ, ಮೂರು ಜೋಡಿ ಕಾಲುಗೆಜ್ಜೆ ಹಾಗೂ 1 ಲಕ್ಷ 30 ಸಾವಿರ ನಗದು ನಗದು ದೋಚಿ ಎಸ್ಕೇಪ್ ಆಗಿದ್ದಾರೆ.

    ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಬಸವಣ್ಣ ಜಾತ್ಯತೀತ ನಾಯಕ; ಅವರ ತತ್ವಗಳು ದೇಶವನ್ನು ಜಾತ್ಯತೀತ ಪಥದಲ್ಲಿ ಬೆಳೆಸಿವೆ

    ಬಸವಣ್ಣ ಜಾತ್ಯತೀತ ನಾಯಕ; ಅವರ ತತ್ವಗಳು ದೇಶವನ್ನು ಜಾತ್ಯತೀತ ಪಥದಲ್ಲಿ ಬೆಳೆಸಿವೆ

    ದೊಡ್ಡಬಳ್ಳಾಪುರ: ಜಗಜ್ಯೋತಿ ಬಸವಣ್ಣ ಜಾತ್ಯತೀತ ನಾಯಕ. 12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡುವುದರ ಮೂಲಕ ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡಿದ ಮಹಾನಾಯಕ ಬಸವಣ್ಣ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

    ತಾಲೂಕಿನ ತೂಬಗೆರೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    “ಬಸವಣ್ಣನವರ ತತ್ವ-ಆದರ್ಶಗಳನ್ನು ಪ್ರತಿಯೊಂದು ಸಮಾಜ ಪಾಲನೆ ಮಾಡುತ್ತಿರುವುದರಿಂದಲೇ ನಮ್ಮ ದೇಶ ಜಾತ್ಯತೀತ ಪಥದಲ್ಲಿ ಹೆಮ್ಮರವಾಗಿ ಬೆಳೆದಿದೆ,” ಎಂದರು.

    ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಉದಯ ಆರಾಧ್ಯ ಮಾತನಾಡಿ, “ ಶಿವನ ವಾಹನ ನಂದಿ ಹುಟ್ಟಿದ ದಿನವೇ ಬಸವ ಜಯಂತಿ, ಆದ್ದರಿಂದ ಈ ದಿನ ಹಸು-ಎತ್ತುಗಳನ್ನು ಪೂಜಿಸಿ ವಿಶೇಷ ಭಕ್ಷಗಳನ್ನು ನೀಡುವುದರ ಮೂಲಕ ಆಚರಿಸಬೇಕು ಎಂದು ಬಸವ ತತ್ವ ವಿರೋಧಿಗಳು ಜನಸಾಮಾನ್ಯರಲ್ಲಿ ಮೌಢ್ಯ ಬಿತ್ತಿದ್ದಾರೆ. ಬಸವಣ್ಣನವರ ವಿಚಾರಧಾರೆಗಳು ತಲುಪಬಾರದು ಎಂಬ ವ್ಯವಸ್ಥಿತ ಹುನ್ನಾರ ಈ ಮೌಢ್ಯದ ಹಿಂದಿದೆ.

    ನಿಜವಾದ ಬಸವ ಜಯಂತಿ ಎಂದರೆ ತಮ್ಮ ಮನೆಯ ಹಸುಗಳು, ಎತ್ತುಗಳನ್ನು ಪೂಜಿಸುವುದರ ಜೊತೆಗೆ, ಮನುಷ್ಯ ಮನುಷ್ಯರ ನಡುವೆ ವರ್ಣ, ಜಾತಿ, ಲಿಂಗ ಭೇದ ಬೇರೂರಿದ್ದ ಕಾಲದಲ್ಲಿ ಸಮಾನತೆ, ಸಹೋದರತೆ ಮತ್ತು ಶಾಂತಿಯನ್ನು ಆಧ್ಯಾತ್ಮಿಕ ಪ್ರಜಾಪ್ರಭುತ್ವದ ಮೂಲಕ ಅನುಷ್ಠಾನಗೊಳಿಸಲು ಮುಂದಾದ ಮಹಾ ಮಾನವತಾವಾದಿ ಬಸವಣ್ಣ ಮತ್ತು ಅವರ ವಿಚಾರಧಾರೆಗಳನ್ನು ನೆನೆಯುವ ದಿನವಾಗಬೇಕು. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮೌಢ್ಯ ತೊಲಗಿಸಿ ವೈಚಾರಿಕತೆ ಬೆಳೆಸಿಕೊಂಡು ಇತರರಲ್ಲಿ ಅದನ್ನು ಮೂಡಿಸುವುದೇ ಬಸವಣ್ಣನವರಿಗೆ ನಾವು ಸಲ್ಲಿಸಬಹುದಾದ ದೊಡ್ಡ ಗೌರವ,” ಎಂದು ಅಭಿಪ್ರಾಯಪಟ್ಟರು.

    ಪಟ್ಟಣದ ಬಸ್ ನಿಲ್ದಾಣದಲ್ಲಿ ವಿಶೇಷ ಮಂಟಪದಲ್ಲಿ ಬಸವಮೂರ್ತಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಪ್ರಸಾದ ವಿತರಣೆ ಮಾಡಲಾಯಿತು.

    ವಾದ್ಯಮೇಳದೊಂದಿಗೆ ಆರತಿ ಹಿಡಿದ ಮಹಿಳೆಯರು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ಸ್ವಾಮಿಗೆ ಆರತಿ ಸಲ್ಲಿಸಿದರು. ನೂರಾರು ಭಕ್ತರು ಬಸವೇಶ್ವರ ದೇವಾಲಯದಲ್ಲಿ ಬಸವಮೂರ್ತಿಗೆ ವಿಶೇಷ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಿ ಭಕ್ತಿಭಾವ ಮೆರೆದರು. ಆಗಮಿಸಿದ ಭಕ್ತರಿಗೆ ಪಾನಕ ಹಾಗೂ ಕೋಸಂಬರಿ ವಿತರಿಸಲಾಯಿತು.

    ವಿಶೇಷ ಪೂಜಾ ಕಾರ್ಯಕ್ರಮಗಳ ಬಳಿಕ ಸಂಜೆ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು. ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆದವು.

    ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅರವಿಂದ್, ತಾಲೂಕು ಸೊಸೈಟಿ ನಿರ್ದೇಶಕ ಪುರುಷೋತ್ತಮ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಎಚ್.ಎ., ಜೆಡಿಎಸ್ ಹೋಬಳಿ ಅಧ್ಯಕ್ಷ ಜಗನ್ನಾಥ್, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಮುಖಂಡರಾದ ಬಚ್ಚಹಳ್ಳಿ ನಾಗರಾಜು, ಮುದ್ದಣ್ಣ, ನಾಗೇನಹಳ್ಳಿ ನಾಗರಾಜು, ಹಳ್ಳಿ ರೈತ ಅಂಬರೀಶ್, ಸ್ಥಳೀಯ ಮುಖಂಡರಾದ ವೆಂಕಟೇಶ್ ಟಿ.ವಿ., ಮುನಿಕೃಷ್ಣಪ್ಪ, ಕನಕದಾಸ, ಸುಬ್ರಹ್ಮಣ್ಯ, ಗಂಗರಾಜು, ಶ್ರೀಧರ, ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ್ ಗೌಡರ್, ಎಸ್ ಎಲ್ ಆರ್ ಎಸ್ ಶಾಲೆ ಮುಖ್ಯ ಶಿಕ್ಷಕ ನಾಗರಾಜು, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ಮಹಾನಂದ ಆರಾಧ್ಯ, ಸದಾನಂದಯ್ಯ, ಚಂದ್ರು, ಉದಯ ಆರಾಧ್ಯ ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್​ ಪೂರೈಕೆ ವ್ಯತ್ಯಯ

    ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ನಾಳೆ ವಿದ್ಯುತ್​ ಪೂರೈಕೆ ವ್ಯತ್ಯಯ

    ದೊಡ್ಡಬಳ್ಳಾಪುರ: ನಗರ ಉಪವಿಭಾಗದ ವ್ಯಾಪ್ತಿಗೆ ಬರುವ ವಿವಿಧ ಉಪಕೇಂದ್ರಗಳಲ್ಲಿ ಹೊರಹೊಮ್ಮುತ್ತಿರುವ ಫೀಡರ್​ಗಳ ನಿರ್ವಹಣೆ ಕಾರ್ಯದ ಹಿನ್ನೆಲೆ ಏಪ್ರಿಲ್​ 19ರಂದು ಭಾನುವಾರ ನಗರದ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಡಿಕ್ರಾಸ್​ ವ್ಯಾಪ್ತಿಗೆ ದೊಡ್ಡಬಳ್ಳಾಪುರ ನಗರದ ಗಂಗಾಧರಪುರ, ತಾಲ್ಲೂಕು ಕಚೇರಿ ರಸ್ತೆ, ಡಿಕ್ರಾಸ್​ ಮತ್ತು  ತಾಲ್ಲೂಕಿನ ರಘುನಾಥ ಪುರ ಸ್ಕೌಟ್​ ಕ್ಯಾಂಪ್​ರಸ್ತೆ, ನಾಗದೇನಹಳ್ಳಿ, ಮೋಪುರಹಳ್ಳಿ, ಆದಿನಾರಾಯಣಹೊಸಹಳ್ಳಿ, ಹಮಾಮ್​ ಶಿವಪುರ, ಸೋಣ್ಣಪ್ಪನಹಳ್ಳಿ ಕೋಡಿಹಳ್ಳಿ, ಕೊನಘಟ್ಟ, ಲಿಂಗನಹಳ್ಳಿಗಳಲ್ಲಿ ಏಪ್ರಿಲ್​.19ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ.

  • ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ…!

    ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ…!

    ನೆಲಮಂಗಲ: ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ.

    ಅಡಿಕೆ ತೋಟದ ಪಕ್ಕದಲ್ಲಿ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಸಿಕ್ಕಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ಘಟನೆಯಹಿನ್ನೆಲೆ:

    ಮೃತ ಮಹಿಳೆಯನ್ನು ತುಮಕೂರು ಮೂಲದ ಯಮುನಾ (35) ಎಂದು ಗುರುತಿಸಲಾಗಿದೆ. ಇವರಿಗೆ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರೊಂದಿಗೆ ಮದುವೆ ಆಗಿತ್ತು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ದೊಡ್ಡಬಳ್ಳಾಪುರದಲ್ಲಿ ಆತನೊಂದಿಗೆ ವಾಸವಿದ್ದರು. ನಂತರ ತನ್ನ ತಪ್ಪಿನ ಅರಿವಾಗಿ ಎರಡು ವರ್ಷಗಳ ಹಿಂದೆ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

    ಕಳೆದ ಮಾರ್ಚ್ 21ರಂದು ಯಮುನಾ ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ “ಒಮ್ಮೆ ಭೇಟಿಯಾಗು” ಎಂದು ರಾಘವೇಂದ್ರ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು.

    ಗುರುತುಪತ್ತೆಯಾಗಿದ್ದುಹೇಗೆ?

    ಆದರೆ ಇದೀಗ ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಬಳಿ ಮೂಳೆಗಳು ಪತ್ತೆಯಾಗಿದೆ. ಅದರ ಪಕ್ಕದಲ್ಲೇ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಕೂಡ ಪೊಲೀಸರಿಗೆ ಸಿಕ್ಕಿದೆ. ಇದರ ಆಧಾರದ ಮೇಲೆ ಪೊಲೀಸರು ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಕುಟುಂಬಸ್ಥರು ಅದು ಯಮುನಾ ಅವರದ್ದೇ ಎಂದು ಗುರುತಿಸಿದ್ದಾರೆ.

    ರಾಘವೇಂದ್ರ ಎಂಬಾತನೇ ಯಮುನಾಳನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ದಾಬಸ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ದೊಡ್ಡಬಳ್ಳಾಪುರ; ಏ.19ಕ್ಕೆ ಐತಿಹಾಸಿಕ ಮಹಿಳೆ  ಸಾಸಲು ಚಿನ್ನಮ್ಮ ಉತ್ಸವ, ಲೋಗೋ ಅನಾವರಣ

    ದೊಡ್ಡಬಳ್ಳಾಪುರ; ಏ.19ಕ್ಕೆ ಐತಿಹಾಸಿಕ ಮಹಿಳೆ ಸಾಸಲು ಚಿನ್ನಮ್ಮ ಉತ್ಸವ, ಲೋಗೋ ಅನಾವರಣ

    ದೊಡ್ಡಬಳ್ಳಾಪುರ: ಐತಿಹಾಕಿಸ ಮಹಿಳೆ‌ ಚಿನ್ನಮ್ಮನ ಉತ್ಸವ ಬಹಳ ವರ್ಷಗಳ ಕನಸು ಈಗ ನನಸಾಗು ಭಾಗ್ಯ ಬಂದಿದ್ದು ಏ.19ರಂದು ಸಾಸಲು ಚಿನ್ನಮ್ಮ ಉತ್ಸವ-2026ನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ ಮಾಜಿ ಅಧ್ಯಕ್ಷ ಲಾವಣ್ಯ ನಾಗರಾಜ್ ತಿಳಿಸಿದರು.

    ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಉತ್ಸವದ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು, ಸಾಸಲು ಹೋಬಳಿ ಚಿನ್ನಮ್ಮ ಸಮಿತಿ ವತಿಯಿಂದ ನಡೆಯಲಿರುವ ಸಾಸಲು ಚಿನ್ನಮ್ಮ ಉತ್ಸವವು ಏ. 19ರಂದು ಬೆಳಗ್ಗೆ 8 ಗಂಟೆಗೆ ಪೂಜೆ ಸಲ್ಲಿಸಿ ಬಳಿಕ ವೀರಗಾಸೆ, ಡೊಳ್ಳು ಕುಣಿತ ಜಾನಪದ ಕಲಾ ತಂಡಗಳೊಂದಿಗೆ ಉತ್ಸವ ಚಿಲಕಲ ಬಂಡಿಯಲ್ಲಿ ಮೆರವಣಿಗೆ ಮಾಡುವುದರೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 10 ಕ್ಕೆ ಸರಿಯಾಗಿ ಗ್ರಾಮದ ಅಂಬೇಡ್ಕರ್ ಆಸ್ಪತ್ರೆ ಆವರಣದಲ್ಲಿ ವೇದಿಕೆ‌ ಕಾರ್ಯಕ್ರಮ ಆರಂಭವಾಗಲಿದ್ದು ಈ ಕಾರ್ಯಕ್ರಮವನ್ನು ಸಾಹಿತಿಗಳಾದ ಡಿ.ಕೆ ಚಿತ್ತಯ್ಯ ಪೂಜಾರ್ ಉದ್ಘಾಟನೆ ಮಾಡಲಿದ್ದಾರೆ. ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು  ಅಧ್ಯಕ್ಷ ಪಿ. ಗೋವಿಂದರಾಜು ಅಧ್ಯಕ್ಷತೆ ವಹಿಸಲಿದ್ದಾರೆ.

    ಮಧ್ಯಾಹ್ನ 12 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿರುತ್ತದೆ. ಸಾಸಲು ಹೋಬಳಿ ಕುರಿತು ಚಿಂತನ-ಮಂಥನ  ವಿಚಾರಗೋಷ್ಠಿ ,  ರಾತ್ರಿ 7 ಗಂಟೆಗೆ ಸಾಸಲು ಚೆನ್ನಮ್ಮ ಕುರಿತ ನಾಟಕ  ನಡೆಯಲಿದೆ ಎಂದರು.

    ಇದೇ ವೇದಿಕೆಯಲ್ಲಿ ಜಾನಪದ ವಿದ್ವಾಂಸರಾದ ಸಣ್ಣ ನಾಗಪ್ಪ ಇವರು ಸಾಸಲು ಚಿನ್ನಮ್ಮ ಪರಿಚಯದ ಕಿರುಪುಸ್ತಕ ಬಿಡುಗಡೆ ಮಾಡಲಿದ್ದಾರೆ.  ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಧೀರಾಜ್ ಮುನಿರಾಜು ಶಾಸಕರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ, ಟಿ.ವೆಂಕಟರಮಣಯ್ಯ ಮಾಜಿ ಶಾಸಕರು, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ, ಬಿ. ಮುನೇಗೌಡ, ಮಾಜಿ ಅಧ್ಯಕ್ಷರು ಕಿಮ್ಸ್ ಆಸ್ಪತ್ರೆ, ಬೆಂಗಳೂರು ಇವರುಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ  ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಹೋಬಳಿ ಕಸಾಪ ಘಟಕದ ಅಧ್ಯಕ್ಷ ಜಿ.ಎಂ.ನಾಗರಾಜು, ಸಾಸಲು ಚಿನ್ನಮ್ಮ ಉತ್ಸವ ಸಮಿತಿಯ ಮುಖಂಡರುಗಳಾದ  ವಕೀಲರಾದ  ನರಸಿಂಹಗೌಡ,  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್,  ಗ್ರಾಮಪಂಚಾಯಿತಿ ಸದಸ್ಯ ಪಚ್ಚಾರಹಳ್ಳಿ  ರಮೇಶ್,  ಉಪನ್ಯಾಸಕ ಕೇಶವಮೂರ್ತಿ, ಚಂದ್ರಶೇಖರ್ ಮುಂತಾದವರು ಭಾಗವಹಿಸಿದ್ದರು.

  • ಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ

    ಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ

    ದೊಡ್ಡಬಳ್ಳಾಪುರ: ಪ್ರಪಂಚದ ಎಲ್ಲ ದೇಶಗಳಿಂದ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ, ಪ್ರತಿ ಪ್ರಜೆಯೂ ಸುಖಮಯವಾದ ಜೀವನವನ್ನು ನಡೆಸಲು ಸಾಧ್ಯವಾಗಿರುವುದು ಅಂಬೇಡ್ಕರ್ ರವರ ಕೊಡುಗೆಯಾಗಿ ನೀಡಿರುವ ಸಂವಿಧಾನದಿಂದ ಎಂದು ಕೊಂಗಾಡಿಯಪ್ಪ ಕಾನೂನು ವಿದ್ಯಾಲಯ ಪ್ರಾಂಶುಪಾಲರಾದ ವೆಂಕಟೇಶ್ ರೆಡ್ಡಿ ಎಂದು ಹೇಳಿದರು.

    ನಗರದ ಕೊಂಗಾಡಿಯಪ್ಪ ಎಲ್ ಎಲ್ ಬಿ ಕಾಲೇಜಿನಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು,

    ಶಿಕ್ಷಣ, ಸಂಘಟನೆ, ಹೋರಾಟ ಇವುಗಳು ತಮ್ಮ ಹಕ್ಕನ್ನು ಪಡೆದುಕೊಳ್ಳಲು ಅನುಸರಿಸಬೇಕಾದ ಮಾನದಂಡಗಳು, ಪ್ರಪಂಚ ಎಲ್ಲ ದೇಶಗಳಲ್ಲೂ ಗೌರವಿಸಲ್ಪಡುವ ಏಕೈಕ ವ್ಯಕ್ತಿ ಎಂದರೆ ಅದು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಂಬುದು ನಮ್ಮ ಹೆಮ್ಮ ಎಂದರು.

    ದೊಡ್ಡಬಳ್ಳಾಪುರ ವಕೀಲರ ಸಂಘದ ಅಧ್ಯಕ್ಷರಾದ ರೇಣುಕ ಮೂರ್ತಿ ಮಾತನಾಡಿ,  ಮೈಸೂರು ಸಂಸ್ಥಾನದ ಸಂವಿಧಾನ ರಚನಾ ಕರಡು ಸಮಿತಿಯಲ್ಲಿ ದೊಡ್ಡಬಳ್ಳಾಪುರದವರೇ ಆದ ಟಿ.ಎಸ್ ಸಿದ್ದಲಿಂಗಯ್ಯನವರು ಭಾಗವಹಿಸಿದ್ದರು ಎಂದರೇ ಅದು ನಮ್ಮ ತಾಲೂಕಿನ ಹೆಮ್ಮೆ, ಭವಿಷ್ಯದಲ್ಲಿ ಉತ್ತಮ ವಕೀಲರಾಗಬೇಕಾದರೇ ನ್ಯಾಯಾಲಯದಲ್ಲಿ ದಿನದ ಬಹುತೇಕ ಸಮಯವನ್ನು ಕಳೆಯಬೇಕು, ಇತ್ತೀಚಿನ ದಿನಗಳಲ್ಲಿ ಕೇವಲ ಪಾರ್ಟ್ ಟೈಂ ಜಾಬ್ ರೀತಿಯಲ್ಲಿ ವಕೀಲರು ವರ್ತಿಸುತ್ತಿದ್ದಾರೆ, ಆದ್ದರಿಂದ ಸಂವಿಧಾನದ ಬಗ್ಗೆ ಆಳವಾದ ಜ್ಙಾನವನ್ನು ಪಡೆದುಕೊಂಡರಷ್ಟೆ ಯಾವುದೇ ನ್ಯಾಯಾಲಯದಲ್ಲಿ ವಾದ ಮಾಡಿ ಜಯಿಸಲು ಸಾಧ್ಯವಾಗುತ್ತದೆ ಎಂದು ಹಿತನುಡಿಗಳ್ಳನ್ನಾಡಿದರು.

    ಈ ವೇಳೆ ಶ್ರೀ ಕೊಂಗಾಡಿಯಪ್ಪ ವಿದ್ಯಾಸಂಸ್ಥೆ (ರಿ)ಯ ಅಧ್ಯಕ್ಷರಾದ ರಾಮಶೆಟ್ಟಿ, ಉಪಾಧ್ಯಕ್ಷ ಪಿ.ವಿ. ಶ್ರೀನಿವಾಸಮೂರ್ತಿ, ಗೌರವ ಕಾರ್ಯದರ್ಶಿ ಎಸ್. ಪ್ರಕಾಶ್, ಸಹ ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರು, ನಿವೃತ್ತ ಪ್ರಾಂಶುಪಾಲರಾದ ಮಹಬಲೇಶ್ವರ್, ಬಿಇಡಿ ಪ್ರಾಂಶುಪಾಲರಾದ ಮಂಜುನಾಥ್, ಪ್ರೌಢಶಾಲೆ ಪ್ರಾಂಶುಪಾಲರಾದ ಕಂಬದ ರಂಗಯ್ಯ, ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲರಾದ ಭಾಸ್ಕರ್, ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗಿಯಾಗಿದ್ದರು.