Category: ಬೆಂಗಳೂರು ಗ್ರಾಮಾಂತರ

  • ಬೆಂ. ಗ್ರಾ. ಜಿಲ್ಲೆಯಲ್ಲಿ 8,04,534 ಮತದಾರರು,ಮಹಿಳಾ ಮತದಾರರೆ ಹೆಚ್ಚು: ಅರ್ಹ ಮತದಾರರನ್ನು ಕೈಬಿಟ್ಟಿಲ್ಲ ಡಿಸಿ ಅನುರಾಧ ಸ್ಪಷ್ಟನೆ.

    ಬೆಂ. ಗ್ರಾ. ಜಿಲ್ಲೆಯಲ್ಲಿ 8,04,534 ಮತದಾರರು,ಮಹಿಳಾ ಮತದಾರರೆ ಹೆಚ್ಚು: ಅರ್ಹ ಮತದಾರರನ್ನು ಕೈಬಿಟ್ಟಿಲ್ಲ ಡಿಸಿ ಅನುರಾಧ ಸ್ಪಷ್ಟನೆ.

    ಬೆಂ.ಗ್ರಾ. ಜಿಲ್ಲೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ತಿಳಿಸಿದರು.

    ಇಂದು ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಅಂತಿಮ ಮತದಾರ ಪಟ್ಟಿ ಪ್ರಕಟಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್ಐಆರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ನಡೆದಿದ್ದು ಅಂತಿಮ ಮತದಾರರ ಪಟ್ಟಿಯಲ್ಲಿ 3,95,473 ಪುರುಷ ಮತದಾರರು, 4,09,001 ಮಹಿಳಾ ಮತದಾರರು ಹಾಗೂ 60 ಇತರೆ ಮತದಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 8,04,534 ಮತದಾರರಿದ್ದಾರೆ.

    ವಿಧಾನಸಭಾ ಕ್ಷೇತ್ರವಾರು ಮಾಹಿತಿ

    1. ಹೊಸಕೋಟೆ ವಿಧಾನಸಭಾ ಕ್ಷೇತ್ರ- 1,08,430 ಪುರುಷರು, 1,11,757 ಮಹಿಳೆಯರು ಹಾಗೂ 4 ಇತರೆ ಮತದಾರರು ಸೇರಿದಂತೆ 2,20,191 ಮತದಾರರಿದ್ದಾರೆ.

    2. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 97,048 ಪುರುಷರು, 99,918 ಮಹಿಳೆಯರು ಹಾಗೂ 11 ಇತರೆ ಮತದಾರರು ಸೇರಿದಂತೆ 1,96,977 ಮತದಾರರಿದ್ದಾರೆ.

    3. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 95,589 ಪುರುಷರು, 98,740 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದಂತೆ 1,94,330 ಮತದಾರರಿದ್ದಾರೆ.

    4. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 94,406 ಪುರುಷರು, 98,586 ಮಹಿಳೆಯರು ಹಾಗೂ 44 ಇತರೆ ಮತದಾರರು ಸೇರಿದಂತೆ 1,93,036 ಮತದಾರರಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.

    3814 ಮತದಾರರ ಡಿಲಿಟ್

    ಎಸ್ಐಆರ್ ಪ್ರಕ್ರಿಯೆಯಲ್ಲಿ ಐವರು ಮೃತರು, 1,716 ಶಾಶ್ವತ ವಲಸೆ ಹೋಗಿರುತ್ತಾರೆ, 2,093 ಇತರೆಡೆ ನೋಂದಣಿ ಆಗಿರುವವರು ಸೇರಿ 3814 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.

    ಎಸ್ಐಆರ್ ಪ್ರಕ್ರಿಯೆಯಡಿ ನೋ ಮ್ಯಾಪಿಂಗ್ ಹಾಗೂ ಅನಾಮಲಿಸ್ (2002ಕ್ಕೆ ಮ್ಯಾಪಿಂಗ್ನಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳು) ಒಳಗೊಂಡಂತೆ 56349 ಮತದಾರರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗಿದೆ.

    18-19 ವರ್ಷ ವಯಸ್ಸಿನ 14,568 ಮತದಾರರಿದ್ದಾರೆ, 8,604 ಮಂದಿ 85 ವರ್ಷಕ್ಕೂ ಮೇಲ್ಪಟ್ಟ ಮತದಾರರಿದ್ದಾರೆ. 12,151 ವಿಶೇಷಚೇತನ ಮತದಾರರಿದ್ದಾರೆ. 06 ಎನ್ಆರ್ಐ (ಅನಿವಾಸಿ ಭಾರತೀಯ) ಮತದಾರರಿದ್ದಾರೆ.. 108 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. 3,95,473 ಪುರುಷ ಮತದಾರರಿದ್ದು, 4,09,061 ಮಹಿಳಾ ಮತದಾರರಿದ್ದಾರೆ. ಜನಸಂಖ್ಯೆಗನುಗುಣವಾಗಿ 1034 ಲಿಂಗಾನುಪಾತ ಇದೆ ಎಂದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 04 ಮತಕ್ಷೇತ್ರಗಳಲ್ಲಿ ನಡೆದ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ-2026 ಸಂಬಂಧ, ಎಲ್ಲಾ ಪ್ರಕ್ರಿಯೆ, ಪ್ರಗತಿ ಕುರಿತ ವಿವರಗಳನ್ನು ಹಾಗೂ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಅಧಿಕೃತ ವೆಬ್ ಸೈಟ್ https://voters.eci.gov.in/ & https://bangalorerural.nic.in/ ಮೂಲಕ ಪರಿಶೀಲಸಬಹುದು ಹಾಗೂ ಮತದಾರರ ಪಟ್ಟಿಯನ್ನು ಡೌನ್ ಮಾಡಿಕೊಳ್ಳಬಹುದು ಜೊತೆಗೆ ಎಲ್ಲಾ ಮತದಾರರ ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಪ್ರಚೂರ ಪಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವ ಅರ್ಹ ಮತದಾರರು ಸೇರ್ಪಡೆಗೆ ನಮೂನೆ-6ರ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

    ಪತ್ರಿಕಾ ಗೋಷ್ಠಿಯಲ್ಲಿ ಸಿಇಓ ಡಾ. ವಾಸಂತಿ ಅಮರ್, ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಎಸಿ ಮಂಜುನಾಥ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶಿವ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಅಶೋಕ್ ಕುಮಾರ್ ಡಿ,ತಾಲ್ಲೂಕು ಮತದಾರರ ನೋಂದಣಾಧಿಕಾರಿಗಳು, ಚುನಾವಣೆ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

  • ಹೊಸಕೋಟೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ 26 ಸಾವಿರ ಮತದಾರರ ಹೆಸರು ಡಿಲೀಟ್.

    ಹೊಸಕೋಟೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ 26 ಸಾವಿರ ಮತದಾರರ ಹೆಸರು ಡಿಲೀಟ್.

    ಹೊಸಕೋಟೆ :ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅನರ್ಹ ಮತದಾರರನ್ನು ತೆಗೆದುಹಾಕುವುದರ ಜತೆಗೆ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಾಲೂಕು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ತಿಳಿಸಿದರು.

    ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‌ಐಆರ್ ಪ್ರಕ್ರಿಯೆಯ ಅಂತಿಮ ಹಂತ ತಲುಪಿದ್ದು, ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ವಿತರಿಸಲಾಗಿದೆ. ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಕ್ಷೇತ್ರದಲ್ಲಿ 246156ಇದ್ದ ಮತದಾರರ ಸಂಖ್ಯೆ ಸುಮಾರು 25950 ಮತದಾರರು ಡಿಲೀಟ್ ಆಗಿ 220206ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದರು.

    ಗೈರು, ಮೃತ, ಸ್ಥಳಾಂತರಗೊಂಡ ಹಾಗೂ ದ್ವಂದ್ವ ಮತದಾರರ ಪರಿಶೀಲನೆ ಕ್ಷೇತ್ರದಲ್ಲಿ ವಾಸವಿಲ್ಲದ ಮತದಾರರು, ಮೃತಪಟ್ಟಿದ್ದರೂ ಪಟ್ಟಿಯಲ್ಲಿ ಹೆಸರು ಉಳಿದಿರುವವರು, ಬೇರೆಡೆಗೆ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರನ್ನು ಗುರುತಿಸಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

    ಉದ್ಯೋಗ, ಕಾರ್ಖಾನೆ ಹಾಗೂ ವಿವಿಧ ಯೋಜನೆಗಳ ಕೆಲಸಗಳ ನಿಮಿತ್ತ ಬೇರೆ ರಾಜ್ಯಗಳಿಂದ ಬಂದಿದ್ದ ಅನೇಕರು ಕೆಲವು ವರ್ಷಗಳ ಬಳಿಕ ತಮ್ಮ ಊರುಗಳಿಗೆ ಮರಳಿದ್ದಾರೆ. ಇಂತಹವರ ಹೆಸರುಗಳು ಕ್ಷೇತ್ರದ ಪಟ್ಟಿಯಲ್ಲಿ ಮುಂದುವರಿದಿರುವ ಸಾಧ್ಯತೆಯನ್ನು ಪರಿಶೀಲಿಸಿ, ಗೈರು ಮತದಾರರ ವಿವರಗಳನ್ನು ದೃಢೀಕರಿಸಲಾಗಿದೆ ಎಂದು ಹೇಳುದರು.

    ಅದೇ ರೀತಿ ಮೃತಪಟ್ಟವರ ಮಾಹಿತಿಯನ್ನು ಪರಿಶೀಲಿಸಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಬೇರೆ ಊರು ಅಥವಾ ರಾಜ್ಯಗಳಿಗೆ ಸ್ಥಳಾಂತರಗೊಂಡವರ ವಿವರಗಳನ್ನು ಪರಿಶೀಲಿಸಲಾಗಿದೆ. ದ್ವಂದ್ವ ನೋಂದಣಿಯನ್ನು ತಡೆಗಟ್ಟಲು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿರುವವರನ್ನೂ ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

    ಅಂತಿಮ ಪಟ್ಟಿಯಲ್ಲಿ 2.20 ಲಕ್ಷ ಮತದಾರರು

    ಕ್ಷೇತ್ರದಲ್ಲಿ ಮ್ಯಾಪಿಂಗ್, ಕರಡು ಮತದಾರರ ಪಟ್ಟಿ ಪ್ರಕಟಣೆ, ದಾಖಲೆಗಳ ಪರಿಶೀಲನೆ, ಲಾಜಿಕಲ್ ವ್ಯತ್ಯಾಸಗಳು ಹಾಗೂ ಮ್ಯಾಪಿಂಗ್ ಆಗದ ಪ್ರಕರಣಗಳ ಪರಿಶೀಲನೆ ಸೇರಿದಂತೆ ವಿವಿಧ ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಹೊಸ ಮತದಾರರ ಸೇರ್ಪಡೆ, ಹೆಸರುಗಳ ತಿದ್ದುಪಡಿ ಮತ್ತು ತೆಗೆದುಹಾಕುವಿಕೆಗಾಗಿ ನಿಗದಿಪಡಿಸಿರುವ ನಮೂನೆಗಳ ಮೂಲಕ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 220206 ಮತದಾರರು ಉಳಿದಿದ್ದಾರೆ. ಪುರುಷರು: 108430 ಮಹಿಳೆಯರು: 111757, ತೃತೀಯ ಲಿಂಗದವರು: 4, ಸಾಮಾನ್ಯ ಮತದಾರರ ಒಟ್ಟು: 220191 ಇದರೊಂದಿಗೆ 15 ಸೇವಾ ಮತದಾರರನ್ನು ಸೇರಿಸಿ ಒಟ್ಟು 220206 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ತಿಳಿಸಿದರು.

    85 ವರ್ಷ ಮೇಲ್ಪಟ್ಟ ಮತದಾರರು: ಕ್ಷೇತ್ರದಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 2187ಮತದಾರರಿದ್ದಾರೆ. ಇವರಲ್ಲಿ 1043 ಪುರುಷರು ಹಾಗೂ 1144 ಮಹಿಳೆಯರು ಇದ್ದಾರೆ.

    ವಿಶೇಷ ಚೇತನ ಮತದಾರರು: ಕ್ಷೇತ್ರದಲ್ಲಿ ವಿಶೇಷ ಚೇತನ ಮತದಾರರ ಸಂಖ್ಯೆಯೂ ಗಮನಾರ್ಹವಾಗಿದೆ. ಒಟ್ಟು 3338 ವಿಶೇಷ ಚೇತನ ಮತದಾರರಿದ್ದು, ಇವರಲ್ಲಿ 1838 ಪುರುಷರು ಹಾಗೂ 1504 ಮಹಿಳೆಯರು ಇದ್ದಾರೆ.

    298ಮತಗಟ್ಟೆಗಳ ಸ್ಥಾಪನೆ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 288 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 51 ಹಾಗೂ ಗ್ರಾಮೀಣ ಪ್ರದೇಶದಲ್ಲಿ 247 ಮತಗಟ್ಟೆಗಳಿವೆ ಎಂದು ತಿಳಿಸಿದರು.

    ಅರ್ಹ ಮತದಾರರು ಆತಂಕಪಡುವ ಅಗತ್ಯವಿಲ್ಲ

    ಯಾವುದೇ ಅರ್ಹ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಸಂಬಂಧಪಟ್ಟ ದಾಖಲೆಗಳು ಹಾಗೂ ವಯಸ್ಸಿನ ಪುರಾವೆಯನ್ನು ಸಲ್ಲಿಸಿ ನಮೂನೆ-೬ರ ಮೂಲಕ ಅರ್ಜಿ ಸಲ್ಲಿಸಿದರೆ, ನಿಯಮಾನುಸಾರ ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಮತದಾರರ ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ತಿಳಿಸಿದರು.

    ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ವ್ಯವಸ್ಥಾಪಕ ಬಸವರಾಜ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಜರಿದ್ದರು.

  • ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ- ಅಪರ ಜಿಲ್ಲಾಧಿಕಾರಿ  ಸೈಯಿದಾ ಆಯಿಷಾ

    ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ- ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ

    ಬೆಂ.ಗ್ರಾ. ಜಿಲ್ಲೆ:ಯುವಜನರು ಮಹರ್ಷಿ ವಾಲ್ಮೀಕಿ ಅವರ ಜೀವನದಿಂದ ಸ್ಫೂರ್ತಿ ಪಡೆದು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಜ್ಞಾನವೇ ಮನುಷ್ಯನ ನಿಜವಾದ ಶಕ್ತಿ. ಶಿಕ್ಷಣದಿಂದ ವ್ಯಕ್ತಿಯ ಜೀವನ ಮಾತ್ರವಲ್ಲ, ಇಡೀ ಸಮಾಜದ ಅಭಿವೃದ್ಧಿಯೂ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ತಿಳಿಸಿದರು.

    ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

    ಮಹರ್ಷಿ ವಾಲ್ಮೀಕಿ ಅವರನ್ನು ಆದಿಕವಿ ಎಂದು ಕರೆಯಲಾಗುತ್ತದೆ. ಅವರು ರಚಿಸಿದ ರಾಮಾಯಣ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅಮೂಲ್ಯ ಮಹಾಕಾವ್ಯವಾಗಿದೆ. ರಾಮಾಯಣವು ಶ್ರೀರಾಮನ ಜೀವನ, ಸೀತಾಮಾತೆಯ ತ್ಯಾಗ, ಲಕ್ಷ್ಮಣನ ಸೇವಾಭಾವ ಮತ್ತು ಹನುಮಂತನ ಭಕ್ತಿಯನ್ನು ತಿಳಿಸುವುದರ ಜೊತೆಗೆ ಸತ್ಯ, ಧರ್ಮ, ಕರ್ತವ್ಯ ಮತ್ತು ನ್ಯಾಯದ ಮಹತ್ವವನ್ನು ಸಾರುತ್ತದೆ ಎಂದು ಹೇಳಿದರು.

    ವಾಲ್ಮೀಕಿ ಅವರ ಜೀವನ ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತದೆ. ಮನುಷ್ಯನು ತನ್ನ ಹಿಂದಿನ ಜೀವನದಲ್ಲಿ ಏನೇ ಆಗಿರಲಿ, ತನ್ನ ಪ್ರಯತ್ನ, ಜ್ಞಾನ ಮತ್ತು ಸತ್ಕಾರ್ಯಗಳ ಮೂಲಕ ಮಹಾನ್ ವ್ಯಕ್ತಿಯಾಗಬಹುದು. ಜೀವನದಲ್ಲಿ ಬದಲಾವಣೆ ಸಾಧ್ಯ ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರ ಕಥೆ ಒಂದು ಪ್ರೇರಣೆಯಾಗಿದೆ ಎಂದರು.

    ಮಹರ್ಷಿ ವಾಲ್ಮೀಕಿ ಅವರು ಕೇವಲ ಒಬ್ಬ ಕವಿಯಲ್ಲ, ಅವರು ಜ್ಞಾನ, ಮಾನವೀಯತೆ, ಸಮಾನತೆ ಮತ್ತು ಸತ್ಯದ ಪ್ರತೀಕವಾಗಿದ್ದಾರೆ. ಅವರು ತಮ್ಮ ಜ್ಞಾನ ಮತ್ತು ಸಾಹಿತ್ಯದ ಮೂಲಕ ಸಮಾಜಕ್ಕೆ ಉತ್ತಮ ಮಾರ್ಗವನ್ನು ತೋರಿಸಿದರು. ಮನುಷ್ಯನ ಶ್ರೇಷ್ಠತೆ ಅವನ ಜನ್ಮದಿಂದ ನಿರ್ಧಾರವಾಗುವುದಿಲ್ಲ; ಅವನ ಗುಣ, ನಡತೆ, ಜ್ಞಾನ ಮತ್ತು ಕಾರ್ಯಗಳಿಂದ ನಿರ್ಧಾರವಾಗುತ್ತದೆ ಎಂಬ ಸಂದೇಶವನ್ನು ಅವರ ಜೀವನದಿಂದ ನಾವು ಪಡೆಯಬಹುದು ಎಂದು ತಿಳಿಸಿದರು.

    ಇಂದಿನ ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಅತ್ಯಂತ ಪ್ರಸ್ತುತವಾಗಿವೆ. ಸಮಾಜದಲ್ಲಿ ಜಾತಿ-ಮತಗಳ ಭೇದಭಾವವನ್ನು ಮರೆತು, ಎಲ್ಲರೂ ಸಮಾನರು ಎಂಬ ಭಾವನೆಯಿಂದ ಬದುಕಬೇಕು. ಬಡವರು, ದುರ್ಬಲರು ಮತ್ತು ಹಿಂದುಳಿದವರನ್ನು ಗೌರವಿಸಬೇಕು. ಸತ್ಯದ ಹಾದಿಯಲ್ಲಿ ನಡೆಯಬೇಕು ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು.

    ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವುದು ಎಂದರೆ ಕೇವಲ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದು ಮಾತ್ರವಲ್ಲ; ಅವರು ಸಾರಿದ ಸತ್ಯ, ಧರ್ಮ, ಜ್ಞಾನ ಮತ್ತು ಮಾನವೀಯತೆಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿದೆ ಎಂದು ತಿಳಿಸಿದರು.

    ಈ ಪವಿತ್ರ ದಿನದಂದು ನಾವೆಲ್ಲರೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವ, ಪರಸ್ಪರ ಗೌರವಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಂಕಲ್ಪ ಮಾಡೋಣ ಎಂದರು.

    ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್ ಮಾತನಾಡಿ ವಾಲ್ಮೀಕಿ ರಾಮಾಯಣವು ಉತ್ತಮ ಆಡಳಿತ ವ್ಯವಸ್ಥೆಯನ್ನು ಸಮಾಜಕ್ಕೆ ಕೊಡುಗೆ ನೀಡುವುದರ ಜೊತೆಗೆ ಶ್ರೀರಾಮನ ಜೀವನ, ಸೀತಾಮಾತೆಯ ಪತಿವ್ರತಾ ಧರ್ಮ, ಲಕ್ಷ್ಮಣನ ಸಹೋದರತ್ವ ಮತ್ತು ಹನುಮಂತನ ಸ್ವಾಮಿನಿಷ್ಠೆ ಸತ್ಯ, ಧರ್ಮ, ಕರ್ತವ್ಯ ಮತ್ತು ನ್ಯಾಯದ ಮಹತ್ವವನ್ನು ತಿಳಿಸುತ್ತದೆ. ಸಮಾಜದಲ್ಲಿ ಮಹರ್ಷಿ ವಾಲ್ಮೀಕಿ ತತ್ವ, ಆದರ್ಶ, ಮೌಲ್ಯಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.

    ಸೂಲಿಬೆಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಸುಬ್ರಮಣಿ ಅವರು ಉಪನ್ಯಾಸ ನೀಡಿ ಮಹರ್ಷಿ ವಾಲ್ಮೀಕಿ ಅವರು ಕೇವಲ ಕವಿ ಅಷ್ಟೇ ಆಗಿರಲಿಲ್ಲ, ಅವರು ಮಹಾನ್ ತಪಸ್ವಿ, ಮಹಾನ್ ಜ್ಞಾನಿ, ಸಮಾಜಕ್ಕೆ ಮಾರ್ಗದರ್ಶನ ನೀಡಿದಂತಹ ಗುರು ಮತ್ತು ಮಾನವೀಯ ಮೌಲ್ಯಗಳ ಪ್ರತಿಪಾದಕ ಎಂದರು.
    ಸಂಸ್ಕೃತ ಸಾಹಿತ್ಯಕ್ಕೆ ಆದಿಕವಿ ಎಂದು ಹೆಸರಾದಂತಹ ಮಹರ್ಷಿ ವಾಲ್ಮೀಕಿ ಅವರು ಮುಖ್ಯವಾಗಿ ರಾಮಾಯಣ ಮಹಾಕಾವ್ಯವನ್ನು ಕೊಟ್ಟಿದ್ದಾರೆ.

    ರಾಮಾಯಣ ಮಹಾಕಾವ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರಸ್ತಾಪನೆ ಮಾಡಿದ್ದಾರೆ. ಆ ಮಾನವೀಯ ಮೌಲ್ಯಗಳನ್ನು ಪ್ರಸ್ತಾಪನೆ ಮಾಡುತ್ತಾ ಅವರು ರಾಮಾಯಣ ಕೃತಿಯನ್ನು ಕೊಟ್ಟಿದ್ದಾರೆ ಎಂದು ತಿಳಿಸಿದರು.

    ಮನುಷ್ಯನ ಜೀವನ ಈಗ ಹೇಗಿದೆ, ಹಿಂದೆ ಹೇಗಿತ್ತು ಅನ್ನೋದು ತುಂಬಾ ಮುಖ್ಯ ಅಲ್ಲ. ಆದರೆ ಮುಂದಿನ ಜೀವನ ಹೇಗೆ ಪರಿವರ್ತನೆ ಆಗುವುದು ಅನ್ನೋದು ತುಂಬಾ ಮುಖ್ಯ ಅದಕ್ಕೆ ಉತ್ತಮ ಉದಾಹರಣೆ ಮಹರ್ಷಿ ವಾಲ್ಮೀಕಿ ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ 2025-26ನೇ ಸಾಲಿನ ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ , ಬಹುಮಾನ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ರಾಮಕೃಷ್ಣಯ್ಯ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪಾಂಡುರಂಗ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

  • ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್‌ ದಿಢೀರ್ ಭೇಟಿ;ಕರ್ತವ್ಯ ಲೋಪ: ದೇವನಹಳ್ಳಿ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯ ಅಧಿಕಾರಿ ಅಮಾನತು

    ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್‌ ದಿಢೀರ್ ಭೇಟಿ;ಕರ್ತವ್ಯ ಲೋಪ: ದೇವನಹಳ್ಳಿ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯ ಅಧಿಕಾರಿ ಅಮಾನತು

    ದೇವನಹಳ್ಳಿ: ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ಧೋರಣೆ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ದೇವನಹಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿಗಳು, ದಾಖಲೆಗಳ ಕೊಠಡಿಯಲ್ಲಿ (ರೆಕಾರ್ಡ್ ರೂಮ್) ದತ್ತಾಂಶ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ಗಂಭೀರ ಲೋಪವೆಸಗಿದ ಅಧಿಕಾರಿಯನ್ನು ಸ್ಥಳದಲ್ಲೇ ಅಮಾನತುಗೊಳಿಸಲು ಆದೇಶಿಸಿದರು.

    ದಾಖಲೆಗಳ ಕೊಠಡಿ ಪರಿಶೀಲನೆ: ಅಧಿಕಾರಿ ಅಮಾನತಿಗೆ ಆದೇಶ:
    ತಾಲೂಕು ಕಚೇರಿಯ ವಿವಿಧ ವಿಭಾಗಗಳಿಗೆ ಅನಿರೀಕ್ಷಿತವಾಗಿ ತೆರಳಿದ ಡಾ. ಜಿ. ಪರಮೇಶ್ವರ್, ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ರೆಕಾರ್ಡ್ ರೂಮ್‌ನಲ್ಲಿ ಕಂದಾಯ ದಾಖಲೆಗಳನ್ನು ಸಮರ್ಪಕವಾಗಿ ಇಡದಿರುವುದು ಹಾಗೂ ದತ್ತಾಂಶ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕರ್ತವ್ಯಲೋಪವೆಸಗಿದ ಸಂಬಂಧಪಟ್ಟ ಅಭಿಲೇಖಾಲಯ(ದಾಖಲೆ ಕೊಠಡಿ) ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

    “ಕಂದಾಯ ದಾಖಲೆಗಳು ಜನಸಾಮಾನ್ಯರ ಆಸ್ತಿ ಮತ್ತು ಹಕ್ಕುಗಳ ಜೀವಾಳ. ಸ್ವಾತಂತ್ರ್ಯಪೂರ್ವದ ಮೂಲ ದಾಖಲೆಗಳೂ ಇಲ್ಲಿವೆ. ಒಂದು ದಾಖಲೆ ನಾಶವಾದರೂ ಬಡ ಕುಟುಂಬಗಳು ಬೀದಿಗೆ ಬೀಳುತ್ತವೆ. ದಾಖಲೆಗಳ ರಕ್ಷಣೆ ಹಾಗೂ ಡಿಜಿಟಲೀಕರಣಕ್ಕೆ ಮೊದಲ ಆದ್ಯತೆ ನೀಡಬೇಕು,” ಎಂದು ತಹಶೀಲ್ದಾರ್ ಹಾಗೂ ಭೂದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಗೋಮಾಳ ಒತ್ತುವರಿ, ನಕಲಿ ದಾಖಲೆ ಸೃಷ್ಟಿಗೆ ಬೀಳಲಿದೆ ಬ್ರೇಕ್:
    ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಭೂಮಿಯ ಮೌಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಕಲಿ ದಾಖಲೆ ಸೃಷ್ಟಿ, ಆಸ್ತಿ ವಂಚನೆ ಹಾಗೂ ಅಕ್ರಮ ಖಾತೆ ಬದಲಾವಣೆ ತಡೆಗೆ ತಂತ್ರಜ್ಞಾನ ಆಧಾರಿತ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದರು. ಬಿಲ್ಡರ್‌ಗಳು ಸೇರಿದಂತೆ ಪ್ರಭಾವಿಗಳು ಸರ್ಕಾರಿ ಗೋಮಾಳ ಜಮೀನುಗಳನ್ನು ಒತ್ತುವರಿ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು. ಇದಕ್ಕೆ ಸಾಥ್ ನೀಡುವ ಅಧಿಕಾರಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಉಪ ನೋಂದಣಾಧಿಕಾರಿ ಕಚೇರಿಗೆ ನೂತನ ಕಟ್ಟಡ:
    ಸ್ಥಳಾಭಾವ ಎದುರಿಸುತ್ತಿರುವ ದೇವನಹಳ್ಳಿ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಗೆ ನೂತನ ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿಗಳು ಸೂಕ್ತ ಜಾಗ ಗುರುತಿಸಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಕಚೇರಿ ಸೌಲಭ್ಯಗಳಿಗಿಂತ ಜನರ ಆಸ್ತಿ ನೋಂದಣಿ ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದಕ್ಕೆ ಈ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

    ಬರ ಪರಿಹಾರ: ಪ್ರತಿ ಕ್ಷೇತ್ರಕ್ಕೆ 1 ಕೋಟಿ ಅನುದಾನ:
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರು ಹಾಗೂ ತುರ್ತು ಪರಿಹಾರ ಕಾರ್ಯಗಳಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 9 ಕೋಟಿ ಅನುದಾನ ಲಭ್ಯವಿದೆ. ರಾಜ್ಯದ 50 ಲಕ್ಷ ರೈತರಿಗೆ ಮೊದಲ ಕಂತಿನ ಬೆಳೆ ನಷ್ಟ ಪರಿಹಾರವಾಗಿ 1,250 ಕೋಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

  • ಶಿಕ್ಷಕರ ಕ್ಷೇತ್ರ ಚುನಾವಣೆ; ಎನ್ ಡಿ ಎ ಅಭ್ಯರ್ಥಿ ಗೆಲುವು ಖಚಿತ, ಗೆಲುವಿನ ತಂತ್ರಗಾರಿಕೆ ಸಿದ್ದವಾಗಿದೆ- ಶಾಸಕ ಧೀರಜ್

    ಶಿಕ್ಷಕರ ಕ್ಷೇತ್ರ ಚುನಾವಣೆ; ಎನ್ ಡಿ ಎ ಅಭ್ಯರ್ಥಿ ಗೆಲುವು ಖಚಿತ, ಗೆಲುವಿನ ತಂತ್ರಗಾರಿಕೆ ಸಿದ್ದವಾಗಿದೆ- ಶಾಸಕ ಧೀರಜ್

    ದೊಡ್ಡಬಳ್ಳಾಪುರ; ಅಧಿಕಾರದ ದುರುಪಯೋಗ ಮತ್ತು ಅಕ್ರಮಗಳಿಂದ ಕಳೆದ ಬಾರಿ ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಈ ಬಾರಿ ಅದು ನಡೆಯೊಲ್ಲ ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಉತ್ತಮ ಅವಕಾಶ ತಾಲ್ಲೂಕಿನಲ್ಲಿ ಇದೆ ಎಂದು ಶಾಸಕ ಧೀರಜ್ ತಿಳಿಸಿದರು.

    ನಗರದ ಶಾಸಕರ ನಿವಾಸದಲ್ಲಿ ಮಂಗಳವಾರ ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪರ ಪತ್ರಿಕಾಗೋಷ್ಟಿ ನಡೆಸಿ ಅವರು ಮಾತನಾಡಿದರು.

    ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದಿಂದ ಎ.ಪಿ. ರಂಗನಾಥ್ ಅವರು ಎನ್‌ಡಿಎ  ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅಕ್ಟೋಬರ್ 23 ರಂದು ಚುನಾವಣೆ ನಡೆಯಲಿದೆ, ಕಳೆದ ಬಾರಿ ಅಧಿಕಾರದ ದುರುಪಯೋಗ ಮತ್ತು ಅಕ್ರಮಗಳಿಂದ ಬೆಂಗಳೂರು ಗ್ರಾಮಾಂತರ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಈ ಬಾರಿ ಅದು ನಡೆಯೊಲ್ಲ ಎನ್ ಡಿಎ ಅಭ್ಯರ್ಥಿ ಗೆಲುವಿಗೆ ಉತ್ತಮ ಅವಕಾಶ ಮತ್ತು ವಾತಾವರಣ ತಾಲ್ಲೂಕಿನಲ್ಲಿ ಇದೆ ಎನ್ ಡಿಎ ಅಭ್ಯರ್ಥಿಯ ಗೆಲುವಿಗೆ ಚುನಾವಣಾ ತಂತ್ರಗಾರಿಕೆ ಸಹ ಮುಂಚೂಣಿಯಲ್ಲಿರುತ್ತದೆ ಎಂದರು.

    ಎ.ಪಿ. ರಂಗನಾಥ್ ರವರು ಹಿಂದಿನ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದರೂ ಸಹ ಕ್ಷೇತ್ರದ ಶಿಕ್ಷರ ಜೊತೆಗೆ ಉತ್ತಮ ಸಂಪರ್ಕದಲ್ಲೆ ಇದ್ದಾರೆ. ಆದರೆ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಲದಿಂದ ಗೆಲುವು ಖಚಿತ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

    ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಂದ ಒಟ್ಟು ಸುಮಾರು 750 ಮತಗಳಿದ್ದು, ಪ್ರತಿಯೊಬ್ಬ ಮತದಾರರನ್ನೂ ವೈಯಕ್ತಿಕವಾಗಿ ಭೇಟಿ ಮಾಡಿ ಬೆಂಬಲ ಕೋರಲು ತೀರ್ಮಾನಿಸಲಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ಒಮ್ಮತದ ಬಲವಿರುವುದರಿಂದ ಹೆಚ್ಚಿನ ಮತಗಳು ಕ್ರೋಢೀಕರಣಗೊಳ್ಳುವ ಸಾಧ್ಯತೆಯಿದೆ.

    ಶಿಕ್ಷಕರ ಕ್ಷೇತ್ರದ ಈ ಚುನಾವಣೆಯು ಅಕ್ಟೋಬರ್ 23 ರಂದು ನಿಗದಿಯಾಗಿದೆ ಈ ಸಂದರ್ಭದಲ್ಲಿ ದಸರ ರಜೆಗಳು ಬರುವುದರಿಂದ ಶಿಕ್ಷರುಗಳು ರಜೆ ಸುತ್ತಾಟದ ಜೊತೆಗೆ ಅಭ್ಯರ್ಥಿ ಗೆಲುವಿಗೆ ಮತದಾನದ ಜವಾಬ್ದಾರಿಯನ್ನು ಸಹ ಮರೆಯಬಾರದು ಎಂದು ಶಾಸಕರು ಎಚ್ಚರಿಸಿದರು.

    ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡ, ನಾಗೇಶ್, ಮುದ್ದಣ್ಣ, ನಗರಸಭಾ ಉಪಾಧ್ಯಕ್ಷ ಬಂತಿ ವೆಂಕಟೇಶ್, ನಗರಸಭಾ ಸದಸ್ಯ ತಾ.ನ ಪ್ರಭುದೇವ್, ವಡ್ಡರಹಳ್ಳಿ ರವಿ, ಮುಖಂಡರಾದ ಅಂಜನೇಗೌಡ,  ಸೇರಿದಂತೆ ಹಾಗೂ ಮುಖಂಡರಾದ ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಭಾನುವಾರ ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ಭಾನುವಾರ ವಿದ್ಯುತ್ ಪೂರೈಕೆ ಸ್ಥಗಿತ

    ದೊಡ್ಡಬಳ್ಳಾಪುರ ನಗರ ಸೇರಿದಂತೆ ತಾಲ್ಲೂಕಿನ ಹಲವು ಭಾಗಗಳಲ್ಲಿ ಸೆ.27ರ ಭಾನುವಾರ ವಿದ್ಯುತ್ ಪೂರೈಕೆ ಸ್ಥಗಿತ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅಪೆರಲ್ ಪಾರ್ಕ್ ಉಪ ವಿದ್ಯುತ್ ಕೇಂದ್ರದ ಫೀಡರ್‌ನ ಮಾರ್ಗಗಳಲ್ಲಿ ಬೆಳಿಗ್ಗೆ 10:00 ಗಂಟೆ ಇಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯವಿರುತ್ತದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕಾಗಿ ಕೋರಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ರೈಲ್ವೆ ಸ್ಟೇಷನ್, ಮುತ್ತೂರು, ಸಿದ್ದೇನಾಯಕನಹಳ್ಳಿ, ಎಂ.ಎ.ಪ್ರಕಾಶ್ ಲೇಔಟ್, ಎಂ.ಜಿ.ಗಾರ್ಡನ್ ಲೇಔಟ್, ಸದಾಶಿವನಗರ ಲೇಔಟ್, ಸರ್ವಜ್ಞನಗರ, ಖಾಸ್‌ಬಾಗ್, ಚಂದ್ರಶೇಖರಪುರ, ಶ್ರೀನಗರ, ಸೌಂಟ್ ಕ್ಯಾಂಪ್ ರಸ್ತೆ, ರಘುನಾಥಪುರ, ಬಾಶೆಟ್ಟಿಹಳ್ಳಿ, ತಮ್ಮಶೆಟ್ಟಿಹಳ್ಳಿ, ಎಲ್‌&ಟಿ ಕಾರ್ಖಾನೆ, ಇಂಡೇನ ಇಂಡಿಯಾ, ಇಟಾಚಿ ಕಾರ್ಖಾನೆ, ಸಂಧ್ಯಾ ಫಾರಂ, ಐಸಿ ಫ್ರೆಷ್, ರಾಜಶ್ರೀ ಕಂಫರ್ಟ್, ಕೈಗಾರಿಕಾ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

  • ಬೆಳ್ಳಂಬೆಳಗ್ಗೆ ಅಪಘಾತ, ಓರ್ವ ಸಾವು

    ಬೆಳ್ಳಂಬೆಳಗ್ಗೆ ಅಪಘಾತ, ಓರ್ವ ಸಾವು

    ದೊಡ್ಡಬಳ್ಳಾಪುರ: ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ-ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

    ಮೃತರನ್ನು ಮಾಕಳಿ ಗ್ರಾಮದ ಗಂಗರಾಜು (34) ಎಂದು ಗುರುತಿಸಲಾಗಿದೆ. ಅವರು ಮಾಕಳಿ ಬೆಟ್ಟದಲ್ಲಿ ಟ್ರಕ್ಕಿಂಗ್ ಗೈಡ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೆಲಸದ ನಿಮಿತ್ತ ಬೆಳಗ್ಗೆ ಮನೆಯಿಂದ ಬರುವ ವೇಳೆ, ಗೌರಿಬಿದನೂರು ಕಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್ ಇವರ ಬೈಕ್ ಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಡಿಕ್ಕಿಯ ರಭಸಕ್ಕೆ ಎರಡೂ ಬೈಕ್‌ಗಳು ಜಖಂಗೊಂಡಿದ್ದು, ಗಂಗರಾಜು ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನ ಸವಾರನ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನೆ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ದೊಡ್ಡಬಳ್ಳಾಪುರ ನಗರದಲ್ಲಿ ಸೆ.26 ರಂದು ವಿದ್ಯುತ್​ ಸ್ಥಗಿತ

    ದೊಡ್ಡಬಳ್ಳಾಪುರ ನಗರದಲ್ಲಿ ಸೆ.26 ರಂದು ವಿದ್ಯುತ್​ ಸ್ಥಗಿತ

    ದೊಡ್ಡಬಳ್ಳಾಪುರ ನಗರದ ಪ್ರಮುಖ ಭಾಗಗಳಲ್ಲಿ ಸೆ.26ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಡಿ.ಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ DF1-Local-2 ಫೀಡರ್‌ನ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಈ ಫೀಡರ್‌ನ ಮಾರ್ಗಗಳಲ್ಲಿ ಬೆಳಿಗ್ಗೆ 10:00 ರಿಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

    ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು:

    ಕೋರ್ಟ್ ರಸ್ತೆ, ಮಾರುತಿನಗರ, ಭಗತ್‌ಸಿಂಗ್ ಸ್ಟೇಡಿಯಂ, ಪೋಸ್ಟ್ ಆಫೀಸ್, ತಾಲ್ಲೂಕು ಆಫೀಸ್ ಸರ್ಕಲ್, ನಗರಸಭೆ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆ ಉಂಟಾಗಲಿದೆ. (ಕೊನಯ ಕ್ಷಣದ ಬದಲಾವಣೆ ಹೊರತುಪಡಿಸಿ).

  • ಲಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಸಾವು

    ಲಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಸಾವು

    ದೊಡ್ಡಬಳ್ಳಾಪುರ: ನಿಂತಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹುಲಿಕುಂಟೆ ಟೋಲ್ ಸಮೀಪದ ಚಿಕ್ಕಲಯ್ಯನಪಾಳ್ಯ ಬಳಿ ಇಂದು ಬೆಳಗ್ಗೆ ನಡೆದಿದೆ.

    ಅಪಘಾತದಲ್ಲಿ ದೊಡ್ಡಬೆಳವಂಗಲ ಸಮೀಪದ ಅಜ್ಜನಕಟ್ಟೆ ಗ್ರಾಮದ ಚಂದನ್ ಎಚ್ (23) ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಚೇತನ್ ಎಂಬ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜಗಳಿಗೆ ನಿಗಮದಿಂದ ಅರ್ಜಿ ಆಹ್ವಾನ

    ಗಂಗಾ ಕಲ್ಯಾಣ ಸೇರಿದಂತೆ ವಿವಿಧ ಯೋಜಗಳಿಗೆ ನಿಗಮದಿಂದ ಅರ್ಜಿ ಆಹ್ವಾನ

    ಬೆಂ.ಗ್ರಾ ಜಿಲ್ಲೆ ; ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿನಲ್ಲಿ ಸ್ವಯಂ-ಉದ್ಯೋಗ ನೇರಸಾಲ ಯೋಜನೆ, ಬ್ಯಾಂಕ್ಗಳ ಸಹಯೋಗದೊಂದಿಗೆ ಆರ್ಯವೈಶ್ಯ ಆಹಾರ ವಾಹಿನಿ/ವಾಹಿನಿ ಯೋಜನೆ, ವಾಸವಿ ಗಂಗಾ ಕಲ್ಯಾಣ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಆನ್ ಲೈನ್ ವಿಳಾಸ https//kacdc.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ಅಕ್ಟೋಬರ್ 15, 2026.

    ಹೆಚ್ಚಿನ ವಿವರಗಳಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ 9448451111/9611612302 ಹಾಗೂ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ(ನಿ), ನಂ.101, ಜಿಲ್ಲಾಡಳಿಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋ, ದೇವನಹಳ್ಳಿ ತಾಲ್ಲೂಕು – 562110 ಸಂಪರ್ಕಿಸಲು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.