Author: Raghavendra H A

  • ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

    ಜಿಲ್ಲಾಡಳಿತ ಭವನದಲ್ಲಿ ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ

    ಬೆಂ.ಗ್ರಾ.ಜಿಲ್ಲೆ: ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪ ಪ್ರಧಾನಿಗಳಾದ ಡಾ|| ಬಾಬು ಜಗಜೀವನ ರಾಂ ರವರ 119ನೇ ಜನ್ಮ ದಿನಾಚರಣೆಯ ಅಂಗವಾಗಿ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ಹಾಗೂ ಅತಿಥಿಗಳು  ಡಾ.  ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.

    ಇಂದು  ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಡಾ. ಬಾಬು ಜಗಜೀವನ್ ರಾಂ ಅವರ ಜಯಂತಿ ಆಚರಿಸಲಾಯಿತು.

    ಡಾ. ಬಾಬು ಜಗಜೀವನ್ ರಾಮ್ ಅವರು ಭಾರತದ ಸ್ವಾತಂತ್ರ್ಯ ಹೋರಾಟಗಾರ, ಶೋಷಿತ ವರ್ಗಗಳ ನಾಯಕ, ಮಾಜಿ ಉಪ ಪ್ರಧಾನಿ ಮತ್ತು ಹಸಿರು ಕ್ರಾಂತಿಯ ಹರಿಕಾರರಾಗಿದ್ದಾರೆ. ದಲಿತ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಇವರ ಜನ್ಮದಿನವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಿನವಾಗಿ ಏಪ್ರಿಲ್ 05 ರಂದು ಆಚರಿಸಲಾಗುತ್ತದೆ.

     ಡಾ.ಬಾಬು ಜಗಜೀವನ ರಾಮ್ ಅವರು ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ. ತಳಸಮುದಾಯದ ಜನರಿಗೆ ಸಂವಿಧಾನಬದ್ಧ ನ್ಯಾಯ ದೊರಕಿಸಲು ಹೋರಾಡಿದರು.ಅವರ ದಕ್ಷ ಆಡಳಿತದಿಂದ ನಮ್ಮ ಮುಂದೆ  ಅವರು ಆದರ್ಶಪ್ರಾಯರಾಗಿದ್ದಾರೆ. ಕೃಷಿ ಸಚಿವರಾಗಿ ಅವರು ಮಾಡಿದ ವಿನೂತನ, ಅಮೋಘ ಸೇವೆಗೆ ದೇಶ ಅವರನ್ನು ‘ಹಸಿರು ಕ್ರಾಂತಿಯ ಹರಿಕಾರ’ ಎಂದೇ ಕರೆಯಿತು. ಇಂದು ಭವಿಷ್ಯದ ಭಾರತಕ್ಕೆ ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ, ಜಿ. ಪಂ. ಉಪಕಾರ್ಯದರ್ಶಿ ಶಿವಕುಮಾರ್,  ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಪ್ರೇಮಾ, ಸರ್ಕಾರಿ ಕಾಲೇಜಿನ ಉಪ ನಿರ್ದೇಶಕಿ (ಪ್ರ) ಸುನಿತಾ ಡಿ.ಎಸ್ , ವಿವಿಧ ಸಮುದಾಯದ ಮುಖಂಡರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ; ನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ನಗರಸಭಾ ಸದಸ್ಯ ರಾಜೀನಾಮೆ, ಬಿಜೆಪಿ ಪಕ್ಷಕ್ಕೆ ಮುಜುಗರ ತಂದ ಲೆಟರ್ ಹೆಡ್

    ದೊಡ್ಡಬಳ್ಳಾಪುರ; ನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ನಗರಸಭಾ ಸದಸ್ಯ ರಾಜೀನಾಮೆ, ಬಿಜೆಪಿ ಪಕ್ಷಕ್ಕೆ ಮುಜುಗರ ತಂದ ಲೆಟರ್ ಹೆಡ್

    ದೊಡ್ಡಬಳ್ಳಾಪುರ : ನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ, ಬಿಜೆಪಿ ಪಕ್ಷದ ನಗರಸಭಾ ಸದಸ್ಯರಾದ ಎಸ್ ಪದ್ಮನಾಭ ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು ಇದಕ್ಕೆ ಪೂರಕವಾದ ಲೆಟರ್ ಹೆಡ್ ಸಾಕ್ಷಿಯಾಗಿ ನಿಂತಿದೆ.

    ನಗರದ ಬಸವೇಶ್ವರ ನಗರದ 2 ನೇ ವಾರ್ಡ್ ಸದಸ್ಯರಾಗಿ ಚುನಾಯಿತರಾಗಿದ್ದ ಎಸ್ ಪದ್ಮನಾಭ ಅವರು ಜಿಲ್ಲಾಧಿಕಾರಿಗಳಿಗೆ ತಮ್ಮ ಲೆಟರ್ ಹೆಡ್ ಮುಖಾಂತರ  ರಾಜೀನಾಮೆ ನೀಡಿದ್ದಾರೆ ಎನ್ನಲಾದ ಪತ್ರದಲ್ಲಿ ಸ್ವ ಇಚ್ಚೆಯಿಂದ ರಾಜಿನಾಮೆ ನೀಡಲಾಗುತ್ತಿದ್ದು ಇದನ್ನು ಸ್ವೀಕರಿಸಬೇಕೆಂದು ಮನವಿ ಮಾಡಿದ್ದಾರೆ.

    ಎಸ್.ಪದ್ಮನಾಭ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ಲೇಟರ್ ನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿ ನಂತರ ಡಿಲಿಟ್ ಮಾಡಿದ್ದಾರೆ, ಫೋನ್ ಸಹ ಸಂಪರ್ಕಕ್ಕೆ ಸಿಗಗುತ್ತಿಲ್ಲ. ರಾಜೀನಾಮೆ ಲೇಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾಕಷ್ಟು ಕುತೂಹಲವನ್ನುಂಟು ಮಾಡಿದೆ. ಇದರೊಂದಿಗೆ ದೊಡ್ಡಬಳ್ಳಾಪುರ ಜಿಜೆಪಿ ಪಕ್ಷದಲ್ಲಿ ಆಂತರಿಕ ಕಲಹಗಳು ಉಂಟಾಗಿದ್ದು ಎಲ್ಲವೂ ಸರಿ ಇಲ್ಲ ಎಂಬುದು ತಿಳಿದುಬರುತ್ತಿದೆ.

  • ಕಾರ್ಯಕ್ರಮದ ನಡುವೆ ತೀವ್ರ ಅಸ್ವಸ್ಥ: ಕುಸಿದುಬಿದ್ದ ನ್ಯಾ. ಸಂತೋಷ್ ಹೆಗ್ಡೆ Video

    ಕಾರ್ಯಕ್ರಮದ ನಡುವೆ ತೀವ್ರ ಅಸ್ವಸ್ಥ: ಕುಸಿದುಬಿದ್ದ ನ್ಯಾ. ಸಂತೋಷ್ ಹೆಗ್ಡೆ Video

    ಬೆಂಗಳೂರು: ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ನ್ಯಾ. ಸಂತೋಷ್ ಹೆಗ್ಡೆ ಅವರು ವೇದಿಕೆ ಮೇಲಿದ್ದಾಗ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.

     ಅಸ್ವಸ್ಥಗೊಂಡ ಸಂತೋಷ್ ಹೆಗ್ಡೆ ಅವರನ್ನು ಕೂಡಲೇ ಹೈಗ್ರೌಂಡ್ಸ್ ಠಾಣೆಯ ಬಳಿ ಇರುವ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಐಸಿಯು ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

     

     ಸ್ಕೌಟ್ಸ್& ಗೈಡ್ಸ್ ಆಯುಕ್ತ ಪಿಜಿಆರ್ ಸಿಂಧ್ಯಾ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನ್ಯಾ. ಸಂತೋಷ್ ಹೆಗ್ಡೆ ಭಾಷಣ ಮಾಡುತ್ತಿದ್ದರು. ಭಾಷಣ ಮುಕ್ತಾಯಗೊಳಿಸಿ ಕುಳಿತುಕೊಳ್ಳಬೇಕಾದರೆ ದಿಢೀರ್ ಕುಸಿದು ಬಿದ್ದರು. ತಕ್ಷಣವೇ ವೇದಿಕೆ ಮೇಲಿದ್ದ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಸ್ಪೀಕರ್ ಯುಟಿ ಖಾದರ್ ಅವರೂ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಂತೋಷ್ ಹೆಗ್ಡೆ ಅವರು ಅಸ್ವಸ್ಥಗೊಳುತ್ತಿದ್ದಂತೆಯೇ ಖಾದರ್ ಅವರ ಕಾರಿನಲ್ಲಿ ನಿವೃತ್ತ ಲೋಕಾಯುಕ್ತರನ್ನು ಅಸ್ಪತ್ರೆಗೆ ಕರೆದೊಯ್ಯಲಾಯಿತು.

  • ದೊಡ್ಡಬಳ್ಳಾಪುರ: ಬೈಕ್ ಅಪಘಾತ, ಮಹಿಳೆಯ ಕಾಲು ಮುರಿತ, ಆಸ್ಪತ್ರೆಗೆ ದಾಖಲು

    ದೊಡ್ಡಬಳ್ಳಾಪುರ: ಬೈಕ್ ಅಪಘಾತ, ಮಹಿಳೆಯ ಕಾಲು ಮುರಿತ, ಆಸ್ಪತ್ರೆಗೆ ದಾಖಲು

    ದೊಡ್ಡಬಳ್ಳಾಪುರ:ವೇಗವಾಗಿ ಬಂದ ಬೈಕ್ ಮಹಿಳೆಗೆ ಗುದ್ದಿದ ಪರಿಣಾಮ ಮಹಿಳೆಯ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಾಲನಜೋಗಿಹಳ್ಳಿ ಮುಖ್ಯರಸ್ತೆಯಲ್ಲಿ ಇಂದು ನಡೆದಿದೆ.

    ಮಜಾನ್ ಬಿ (55) ಗಾಯಗೊಂಡ ಮಹಿಳೆ ಎನ್ನಲಾಗಿದೆ. ಪಾಲನಜೋಗಿಹಳ್ಳಿ ಬಳಿ ಆಟೋಗಾಗಿ ಕಾಯುತ್ತಿದ್ದ ಮಜಾನ್ ಬಿ (55) ರವರಿಗೆ ವೇಗವಾಗಿ ಬಂದ ಬೈಕ್ ರಸ್ತೆ ಬದಿ ನಿಂತಿದ್ದ ಆಟೋ ಮತ್ತು ಮಹಿಳೆಗೆ ಡಿಕ್ಕಿ ಹೊಡೆದಿದೆ ಇದರ ಪರಿಣಾಮ ಮಹಿಳೆಯ ಕಾಲು ಮುರಿದಿದೆ.

    ಎರಡು ದಿನಗಳ ಹೊಂದೆಯಷ್ಟೆ ಇದೇ ರಸ್ತೆಯಲ್ಲಿ KSRTC ಬಸ್ ಮತ್ತು ಬೈಕ್ ಸವಾರನ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೆ ಬೈಕ್ ಸವಾರ ಸಾವನ್ನಪ್ಪಿದ್ದ, ಇಂದು ಕೂಡ ಅಪಘಾತ ಸಂಭವಿಸಿದ್ದು ಮಹಿಳೆಯೊಬ್ಬರು ಕಾಲು ಮುರಿದುಕೊಂಡಿದ್ದಾರೆ.

  • ದೊಡ್ಡಬಳ್ಳಾಪುರ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಅಪಘಾತ, ವ್ಯಕ್ತಿ ಸ್ಥಳದಲ್ಲೆ ಸಾವು

    ದೊಡ್ಡಬಳ್ಳಾಪುರ: ಸಾರಿಗೆ ಬಸ್ ಮತ್ತು ಬೈಕ್ ನಡುವೆ ಅಪಘಾತ, ವ್ಯಕ್ತಿ ಸ್ಥಳದಲ್ಲೆ ಸಾವು

    ದೊಡ್ಡಬಳ್ಳಾಪುರ: ತಾಲ್ಲೂಕಿನ ಪಾಲನಜೋಗಿಹಳ್ಳಿ ಬಳಿ ಕೆಎಸ್ಆರ್ ಟಿಸಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

    ಮೃತನು ಪಾಲನಜೋಗಿಹಳ್ಳಿ ನಿವಾಸಿ 29 ವರ್ಷದ  ಪುರುಷೋತ್ತಮ ಎಂದು ತಿಳಿದುಬಂದಿದೆ. ಅಪಘಾತದಿಂದ ತೀವ್ರ ರಕ್ತಸ್ರಾವಗೊಂಡ ವ್ಯಕ್ತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಮೂಲಗಳು ಮಾಹಿತಿ ನೀಡಿದೆ.

    ಹಿಂದೂಪುರದಿಂದ ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದ KA-40, F-1407 ನಂಬರ್ ಪ್ಲೇಟುಳ್ಳ ಬಸನ್ನು ಓವರ್ ಟೇಕ್ ಮಾಡಲು ಮುಂದಾದ ಬೈಕ್ ಸವಾರ ಬಸ್ ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕೆ ಅಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

  • ಪ್ರಯಾಣಿಕರ ಮೇಲೆ ನುಗ್ಗಿ ಬಂದ ಬಸ್​, ಮಗು ಸ್ಥಳದಲ್ಲೇ ಸಾವು

    ಪ್ರಯಾಣಿಕರ ಮೇಲೆ ನುಗ್ಗಿ ಬಂದ ಬಸ್​, ಮಗು ಸ್ಥಳದಲ್ಲೇ ಸಾವು

    ಹಾವೇರಿ: ಹಾವೇರಿ ನಗರ ಬಸ್ ನಿಲ್ದಾಣದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಬಸ್ ಗಾಗಿ ಕಾದಿದ್ದವರ ಮೇಲೆಯೇ ಸರ್ಕಾರಿ ಬಸ್ ಹರಿದಿದೆ.

    ಇಂದು (ಏಪ್ರಿಲ್ 1) ಮುಂಜಾನೆ ಈ ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಮೇಲೆ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ನುಗ್ಗಿದೆ.

    ಪರಿಣಾಮ ಈ ಘಟನೆಯಲ್ಲಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಂತೆಯೇ 2 ವರ್ಷದ ಪುಟ್ಟ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

    ಮೂಲಗಳ ಪ್ರಕಾರ ಬೆಳಗ್ಗೆ ಸುಮಾರು 7 ಗಂಟೆಯ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನವೇ ಘಟನೆಗೆ ಕಾರಣ ಎಂಬುದು ತಿಳಿದುಬಂದಿದೆ.

    ಪ್ಲಾಟ್ ಫಾರ್ಮ್ ನಲ್ಲಿ ನಿಲ್ಲಬೇಕಿದ್ದ ಬಸ್ ಏಕಾಏಕಿ ಪ್ಲಾಟ್ ಫಾರ್ಮ್ ದಾಟಿ ಅಲ್ಲಿ ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ.

    ಈ ಅಪಘಾತದಲ್ಲಿ ಕೇವಲ ಮಗು ಮಾತ್ರವಲ್ಲದೆ, ಬಂಕಾಪುರ ಪಟ್ಟಣದ ನಿವಾಸಿಗಳಾದ ವಾಸುದೇವ (44), ಹರ್ಷಾ (6) ಹಾಗೂ ಕಾವ್ಯಾಂಜಲಿ (39) ಎಂಬುವವರಿಗೂ ಗಂಭೀರ ಗಾಯಗಳಾಗಿವೆ.

    ಇವರೆಲ್ಲರೂ ಸದ್ಯ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯಲ್ಲಿ ಗಾಯಗೊಂಡಿದ್ದ 2 ವರ್ಷದ ಪುಟ್ಟ ಮಗು ಹಜರತ್ ಅಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.

    ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅಪಘಾತದ ಭೀಕರತೆಯನ್ನು ಸಾರಿ ಹೇಳುತ್ತಿವೆ. ಸಾರ್ವಜನಿಕರು ಚಾಲಕನ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಇಂದಿನಿಂದ ಹೊಸ ದುಬಾರಿ ದುನಿಯಾ: ಏ.1ರಿಂದ ಏನೇನು ಬದಲಾವಣೆ? ಇಲ್ಲಿದೆ ಮಾಹಿತಿ

    ಇಂದಿನಿಂದ ಹೊಸ ದುಬಾರಿ ದುನಿಯಾ: ಏ.1ರಿಂದ ಏನೇನು ಬದಲಾವಣೆ? ಇಲ್ಲಿದೆ ಮಾಹಿತಿ

    ದೆಹಲಿ/ ಬೆಂಗಳೂರು: ಏಪ್ರಿಲ್ 1 ಹೊಸ ಆರ್ಥಿಕ ವರ್ಷ ಆರಂಭವಾಗುವ ದಿನ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಬೆಲೆ ಏರಿಕೆ ಪ್ರಸ್ತಾಪಗಳು ಬುಧವಾರದಿಂದಲೇ ಜಾರಿಯಾಗಲಿದೆ. ಇದರೊಂದಿಗೆ ಕೊಲ್ಲಿ ಯುದ್ಧದ ಕಾರಣ ಇನ್ನಷ್ಟು ವಸ್ತುಗಳು ದುಬಾರಿಯಾಗಲಿದ್ದು ಜನರನ್ನು ಸಂಕಷ್ಟಕ್ಕೀಡು ಮಾಡುವ ನಿರೀಕ್ಷೆ ಇದೆ.

    ಆರ್ಥಿಕ ವರ್ಷದ ಮೊದಲ ದಿನದಿಂದಲೇ ರಾಜ್ಯ ದಲ್ಲಿ ವಾಣಿಜ್ಯ ಬಳಕೆಯ ವಿದ್ಯುತ್ ಮತ್ತು ರಾಷ್ಟ್ರೀ ಯ ಹೆದ್ದಾರಿಗಳಲ್ಲಿ ಟೋಲ್ ಏರಿಕೆಯಾಗಲಿದೆ. ಬೆಂಗಳೂರು ನಗರದಲ್ಲಿ ನೀರಿನ ದರವೂ ಏರಿಕೆಯಾಗಲಿದೆ. ಕೇಂದ್ರ ಸರಕಾರ ಗೃಹಬಳಕೆ ಸಿಲಿಂಡ‌ರ್ ದರವನ್ನು ಈಗಾಗಲೇ ಏರಿಸಿದ್ದು, ಯುದ್ಧ ಮುಂದುವರಿದರೆ ಉಳಿದ ಪೆಟ್ರೋಲಿಯಂ ಉತ್ಪನ್ನಗಳ ದರವನ್ನೂ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಖಾಸಗಿ ಇಂಧನ ಕಂಪನಿಗಳು ಈಗಾಗಲೇ ದರ ಏರಿಸಿದ್ದು ಪೆಟ್ರೋಲ್ ದರ 100ರ ಗಡಿ ದಾಟಿದೆ.

    ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದ್ದು, ಕಾರುಗಳಿಗೆ 5ರಿಂದ 10 ರು. ಟೋಲ್ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆಯ ವಾಹನಗಳು 15ರಿಂದ 40 ರು. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ವಾರ್ಷಿಕ ಪಾಸ್ ದರವನ್ನು 2026-27ನೇ ಸಾಲಿಗೆ 75 ರೂ. ಹೆಚ್ಚಳ ಮಾಡಿ ಹೊರಡಿಸಿದ ಅಧಿಸೂಚನೆ ಕೂಡ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ವಾರ್ಷಿಕ ಪಾಸ್ ದರವು 3,000ರಿಂದ 3,075 ರು.ಗಳಿಗೆ ಏರಿಕೆಯಾಗಲಿದೆ. ನೀರು, ವಿದ್ಯುತ್‌ ದರ ಪರಿಷ್ಕರಣೆ: ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀರಿನ ದರವನ್ನು ಶೇ.3ರಷ್ಟು ಹೆಚ್ಚಳ ಮಾಡಲಿದ್ದು, ಇದರಿಂದ ಬೆಂಗಳೂರಿಗರಿಗೆ ಮತ್ತೊಂದು ಹೊರೆ ಬೀಳಲಿದೆ.

    ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಎಸ್ಕಾಂಗಳ ಒತ್ತಾಯಕ್ಕೆ ಮಣಿದು 2025-26ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಇದರಿಂದ ಹೊಸ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಸಿಲಿಂಡ‌ರ್ ಕೊರತೆ, ನೀರು ಮತ್ತು ವಿದ್ಯುತ್‌ ದರ ಏರಿಕೆ ಹಿನ್ನೆಲೆಯಲ್ಲಿ ಹೊಟೇಲ್ ಮಾಲೀಕರೂ ದರ ಏರಿಸುವ ಸಾಧ್ಯತೆ ಇದೆ. ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಕಬ್ಬಿಣ, ಉಕ್ಕು, ಸಿಮೆಂಟ್ ಮತ್ತಿತರ ಮೂಲ ಸೌಕಯ್ಯ ಉತ್ಪನ್ನಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿವೆ. ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇದೇ ವೇಳೆ ಅಟೋ ಮೊಬೈಲ್ ಉದ್ದಿಮೆಗಳು ಏಪ್ರಿಲ್ ಒಂದರಿಂದ ದ್ವಿಚಕ್ರ ಮತ್ತು ಕಾರುಗಳ ಬೆಲೆ ಏರಿಸುವುದಾಗಿ ಈಗಾಗಲೇ ಪ್ರಕಟಿಸಿವೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ದರದಲ್ಲೂ ಏರಿಕೆ ನಿಶ್ಚಿತವಾಗಿದೆ. ಬಿಟುಮೆನ್ ಕೊರತೆಯಿಂದ ದೇಶದ ರಸ್ತೆ ಕಾಮಗಾರಿಗಳೂ ವಿಳಂಬವಾಗಲಿದ್ದು ಕಾಮಗಾರಿ ಮೊತ್ತ ಏರುವ ಸಾಧ್ಯತೆ ಇದೆ.

    ಏ.1ರಿಂದ ಏನೇನು ಬದಲಾವಣೆ?

    1. ಟೋಲ್‌ಗಳಲ್ಲಿ ಇನ್ನು ಮುಂದೆ ನಗದು ಪಾವತಿ ಸಂಪೂರ್ಣ  ಸ್ಥಗಿತ
    2. ಹೋಟೆಲ್‌ಗಳಲ್ಲಿ ಬಿಲ್ ಪಾವತಿ ಲಕ್ಷ ರು ದಾಟಿದರೆ ಪ್ಯಾನ್ ಕಡ್ಡಾಯ
    3. ರೈಲು ಹೊರಡುವ 8 ಗಂಟೆಗೆ ಮುನ್ನ ಮುಂಗಡ ಟಿಕೆಟ್ ರದ್ದುಪಡಿಸಿದರೆ ರೀಫಂಡ್ ಇಲ್ಲ
    4. ಶೇ.50 ಹೆಚ್‌ಆರ್‌ಎ ಸೌಲಭ್ಯದ ನಗರಗಳ ಪಟ್ಟಿಗೆ ಬೆಂಗಳೂರು ಸೇರ್ಪಡೆ
    5. ಉದ್ಯೋಗಿಯ ಮೂಲ ವೇತನ, ಒಟ್ಟು ವೇತನದ (ಸಿಟಿಸಿ) ಕನಿಷ್ಠ ಶೇ.50 ಕಡ್ಡಾಯ
    6. ಹೊಸ ಆದಾಯ ತೆರಿಗೆ ಕಾಯಿದೆ ಜಾರಿ, ತೆರಿಗೆ ವಂಚನೆ ತಡೆಗೆ ಮತ್ತಷ್ಟು ಕ್ರಮ
    7. ಬ್ಯಾಂಕ್‌ಗಳಲ್ಲಿ ವಾರ್ಷಿಕ 10 ಲಕ್ಷ ಒಳಗಿನ ಹಣ ಠೇವಣಿಗೆ ಪ್ಯಾನ್ ಅಗತ್ಯವಿಲ್ಲ.
  • ಇಂದಿನಿಂದ ರಾಜ್ಯದಲ್ಲಿ ಮಳೆ, ಹಲವೆಡೆ Yellow ಅಲರ್ಟ್ ಘೋಷಣೆ

    ಇಂದಿನಿಂದ ರಾಜ್ಯದಲ್ಲಿ ಮಳೆ, ಹಲವೆಡೆ Yellow ಅಲರ್ಟ್ ಘೋಷಣೆ

    ಬೆಂಗಳೂರು: ರಾಜ್ಯದ ಹಲವೆಡೆ ಬುಧವಾರ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ‘ಯೆಲ್ಲೋ ಅಲರ್ಟ್‌’ ನೀಡಿದೆ.

    ಹಲವು ಜಿಲ್ಲೆಗಳಲ್ಲಿ ಗಾಳಿ ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ. ಬೀದ‌ರ್, ಕಲಬುರಗಿ, ಯಾದಗಿರಿ, ರಾಯಚೂರು, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಸಂಭವ ಇದೆ.

    ಬೆಂಗಳೂರು ಮತ್ತು ಗ್ರಾಮಾಂತರದಲ್ಲಿ  ಮೋಡ ಕವಿದ ವಾತಾವರಣ ಇರಲಿದ್ದು, ಹಲವು ಪ್ರದೇಶಗಳಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಇಲಾಖೆ ತಿಳಿಸಿದೆ.

    ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದಲ್ಲಿ 3 ಸೆಂ.ಮೀ, ಕೊಪ್ಪದಲ್ಲಿ 1 ಸೆಂ.ಮೀ, ಭದ್ರಾವತಿ, ಶಿವಮೊಗ್ಗದಲ್ಲಿ ತಲಾ 1 ಸೆಂ.ಮೀ. ಮಳೆ ದಾಖಲಾಗಿದೆ.

  • ದೊಡ್ಡಬಳ್ಳಾಪುರ ನಗರಾಭಿವೃದ್ಧಿಗೆ  87 ಕೋಟಿ ಗಾತ್ರದ ಬಜೆಟ್  ಮಂಡನೆ; 1.62 ಕೋಟಿ ಉಳಿತಾಯ ಬಜೆಟ್

    ದೊಡ್ಡಬಳ್ಳಾಪುರ ನಗರಾಭಿವೃದ್ಧಿಗೆ  87 ಕೋಟಿ ಗಾತ್ರದ ಬಜೆಟ್  ಮಂಡನೆ; 1.62 ಕೋಟಿ ಉಳಿತಾಯ ಬಜೆಟ್

    ದೊಡ್ಡಬಳ್ಳಾಪುರ; ನಗರಾಭಿವೃದ್ದಿಗಾಗಿ 2026-27ನೇ ಸಾಲಿನ ಬಜೆಟ್ ನಲ್ಲಿ ಒಟ್ಟು 87 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಲಾಗುತ್ತಿದ್ದು ಈ ಪೈಕಿ ಒಟ್ಟು 1.62 ಕೋಟಿ ಗಾತ್ರದ ಉಳಿತಾಯ ಬಜೆಟ್ ಇದಾಗಿದೆ ಎಂದು ನಗರಸಭಾ ಅಧ್ಯಕ್ಷರಾದ ಸುಮಿತ್ರ ಆನಂದ್ ಅವರು ತಿಳಿಸಿದರು.

    ನಗರಸಭೆ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಮಂಡನೆ ಸಭೆಯಲ್ಲಿ ಮಾತನಾಡಿದ ಅವರು 87.83 ಕೋಟಿ ಬಜೆಟ್ ನಲ್ಲಿ ಖರ್ಚನ್ನು 86.20 ಕೋಟಿ ಎಂದು ಅಂದಾಜಿಸಲಾಗಿದ್ದು, 1.62 ಕೋಟಿ ಉಳಿತಾಯದ ಬಜೆಟ್ ನ್ನು ಇಂದು ಮಂಡನೆ ಮಾಡಲಾಗಿದೆ. ನಗರಸಭೆಯ ಆದಾಯ ಮೂಲಗಳಿಗೆ ಒತ್ತು ನೀಡಿ, ನಗರ  ಸ್ವಚ್ಛತೆಗೆ ಆದ್ಯತೆ ನೀಡಿ ಜ್ವಲಂತ ಸಮಸ್ಯೆಗಳಿಗೆ  ಸ್ಪಂದಿಸುವ ಬಜೆಟ್ ಮಂಡಿಸಲಾಗಿದೆ. ನಾಗರೀಕರ ಸಮಸ್ಯೆಗಳನ್ನು  ಪರಿಹರಿಸುವಲ್ಲಿ ನಗರದ ಆದಾಯ ತೆರಿಗೆ, ಸರಕಾರದ ಅನುದಾನಗಳ ಮೂಲಕ ಮೂಲ ಸೌಕರ್ಯ ಒದಗಿಸುವ ಜತೆಗೆ ಅಭಿವೃದ್ದಿಗೂ ಕೂಡ ಆದ್ಯತೆ ನೀಡಲಾಗಿದೆ ಎಂದರು.

    ನಗರದ ನೈರ್ಮಲ್ಯಕ್ಕೆ ಬಜೆಟ್‌ನಲ್ಲಿ ಅನುದಾನ:

    ನಗರದ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡಿ, ಸಂರಕ್ಷಿಸುವ ಸಲುವಾಗಿ ಮತ್ತು ಉದ್ಯಾನವನಗಳ ಅಭಿವೃದ್ಧಿಗಾಗಿ ರೂ.2 ಕೋಟಿ ಮತ್ತು ಉದ್ಯಾನವನಗಳ ನಿರ್ವಹಣೆಗಾಗಿ ರೂ.20 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಸುಂದರ, ಸ್ವಚ್ಛ ಹಾಗೂ ನಿರ್ಮಲ ನಗರವನ್ನಾಗಿಸುವ ದೃಷ್ಟಿಯಿಂದ ನಗರ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾರ್ಯಗಳಿಗೆ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆ ಕಾಮಗಾರಿಗಳಿಗಾಗಿ 4.10 ಕೋಟಿ ರೂಗಳನ್ನು ಮೀಸಲಿಡಲಾಗಿದೆ. ನಗರ ವ್ಯಾಪ್ತಿಯಲ್ಲಿ ಹೊಸದಾಗಿ ಸಿ ಮತ್ತು ಡಿ ಕಸ ಸಂಸ್ಕರಣಾ ಘಟಕ ಹಾಗೂ ಒಣಕಸ ವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಮತ್ತು ಪಾರಂಪರಿಕ ತ್ಯಾಜ್ಯ ವಿಲೆವಾರಿಗಾಗಿ 3.27 ಕೋಟಿ ಅನುದಾನ. ಸ್ವಚ್ಚ ಭಾರತ್ ಮಿಷನ್-2 ಯೋಜನೆಯಲ್ಲಿ ವಡ್ಡರಪಾಳ್ಯದಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಗ್ರಹವಾಗಿರುವ 46,000 ಟನ್ ಪಾರಂಪರಿಕ ತ್ಯಾಜ್ಯವನ್ನು ವಿಲೇವಾರಿಗಾಗಿ 4.77 ಕೋಟಿ ಅನುದಾನವನ್ನು ನಿಗದಿ ಮಾಡಲಾಗಿದೆ.

    ಬಜೆಟ್‌ನಲ್ಲಿ ಮಿನಿ ಮಾರುಕಟ್ಟೆ ಘೋಷಣೆ:

    ನಗರಸಭೆ ಬಜೆಟ್‌ನಲ್ಲಿ ಕೆ.ಆರ್ ಮಾರುಕಟ್ಟೆ ಮಳಿಗೆಗಳ ನಿರ್ಮಾಣಕ್ಕಾಗಿ 3 ಕೋಟಿ ಅನುದಾನ ಅಂದಾಜಿಸಲಾಗಿದೆ. ಸ್ಮಾರ್ಟ್ ಮಾರುಕಟ್ಟೆ ಮತ್ತು ಫುಡ್ ಕೋರ್ಟ್ಗಳ ನಿರ್ಮಾಣಕ್ಕೆ 3 ಕೋಟಿ. ನೇಕಾರರ ಭವನ  ನಿರ್ಮಿಸಲು 10 ಲಕ್ಷ, ನಗರಸಭಾ ಕಚೇರಿಯ ಹಾಗೂ ಡಾ. ರಾಜಕುಮಾರ್ ಕಲಾಮಂದಿರದ ಮೇಲ್ಚಾವಣಿಯಲ್ಲಿ ಸೋಲಾರ್ ಅಳವಡಿಕೆಗೆ 60 ಲಕ್ಷ ರೂ.ಅನುದಾನ ರೊಚ್ಚು ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಸ್ವಾಧೀನಕ್ಕಾಗಿ  2.50 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ.

    10,000 ಕುಡಿಯುವ ನೀರಿನ ನಳ ಸಂಪರ್ಕ:

    ನಗರದ ಜನರಿಗೆ ಗುಣಮಟ್ಟದ ಕುಡಿಯುವ ನೀರನ್ನು ಒದಗಿಸಲು ಸುಮಾರು 10,000 ಕುಡಿಯುವ ನೀರಿನ ನಳ ಸಂಪರ್ಕವನ್ನು ಸಾರ್ವಜನಿಕರಿಗೆ ಒದಗಿಸಲು ಅಮೃತ 2.0 ಯೋಜನೆಯಡಿಯಲ್ಲಿ 10 ಕೋಟಿಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವ ಯೋಜನೆ ಹೊಂದಲಾಗಿದೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಫ್ರೋತ್ಸಾಹ ಧನ ನೀಡಲು 10 ಲಕ್ಷ ಅನುದಾನ ಮೀಸಲಿಡಲಾಗಿದೆ.

    ನಗರದ ಒಳಚರಂಡಿ ರೊಚ್ಚು ನೀರನ್ನು ಅಧುನಿಕ ರೀತಿಯಲ್ಲಿ ಸಂಸ್ಕರಿಸಿ ಶುದ್ದೀಕರಿಸಲು ಎಸ್.ಟಿ.ಪಿ ನಿರ್ಮಾಣಕ್ಕೆ 4.77 ಕೋಟಿ ಅನುದಾನ ತೆಗೆದಿಡಲಾಗಿದೆ.

    ಈ ಬಾರಿ 87 ಕೋಟಿಗಳಷ್ಟು ಭಾರಿ ಬಜೆಟ್ ನ್ನು ಮಂಡಣೆ ಮಾಡಲಾಗಿದ್ದು ಈ ಬಾರಿಯಾದರೂ 95.5 ರಷ್ಟು ಪರಿಶಿಷ್ಟ ಜನಾಂಗದವರೇ ಇರುವ ನಮ್ಮ ಕಚೇರಿಪಾಳ್ಯ ವಾರ್ಡ್ ಗೆ ಶೇ.24.10% ರ ಅನುದಾನದಲ್ಲಿ ಹೆಚ್ಚನ ಹಣವನ್ನು ಬಿಡುಗಡೆ ಮಾಡಿ ನಮ್ಮ ವಾರ್ಡ್ ಅಭಿವೃದ್ದಿಗೆ ಸಹಕರಿಸಬೇಕು.

    -ರೂಪಿಣಿ ಮಂಜುನಾಥ್.ಟಿ ಕಾಂಗ್ರೆಸ್ ಸದಸ್ಯರು.

     

    ದೂರದೃಷ್ಟಿ ಇಲ್ಲದೆ ವಾಸ್ತವಕ್ಕೆ ದೂರವಾದ ಬಜೆಟ್. ಹಿಂದಿನ ವರ್ಷದ ಘೋಷಣೆಗಳು ಕಾರ್ಯಗತವಾಗಿಲ್ಲ. ಒಟ್ಟಾರೆ ನಿರಾಶಾಯದಾಯಕ ಬಜೆಟ್ ಆಗಿದೆ .

     

    – ಚಂದ್ರಮೋಹನ್, ಕಾಂಗ್ರೆಸ್ ಸದಸ್ಯ.

    ಈ ಬಾರಿ ದೊಡ್ಡಬಳ್ಳಾಪುರ ನಗರಸಭೆಯ 87 ಕೋಟಿ ಬಜೆಟ್ ಮಂಡಿಸಲಾಗಿದೆ. ಈ ಬಗ್ಗೆ ತೃಪ್ತಿಕರವಾಗಿದೆ. ಸರಕಾರದ ಹೆಚ್ಚಿನ ಅನುದಾನ ನೀಡಬೇಕು. ತೆರಿಗೂ ಕೂಡ ಸಮಪರ್ಕವಾಗಿ ಸಂಗ್ರಹಿಸಬೇಕು.

    – ಮಲ್ಲೇಶ್ | ಉಪಾಧ್ಯಕ್ಷ, ದೊಡ್ಡಬಳ್ಳಾಪುರ ನಗರಸಭೆ.

    ಈ ವೇಳೆ ಪೌರಾಯುಕ್ತ ಕಾರ್ತಿಕೇಶ್ವರ, ಉಪಾಧ್ಯಕ್ಷ ಮಲ್ಲೇಶ, ಸದಸ್ಯರಾದ ಪದ್ಮನಾಭ, ಶಿವು, ತ.‌ನ ಪ್ರಭುದೇವ, ಎಂಜಿ ಶ್ರೀನಿವಾಸ್, ರವಿ, ಹಂಸಪ್ರಿಯ,  ಸುಧಾರಾಣಿ, ಕಾಂತರಾಜು, ನಾಗರತ್ನಮ್ಮ, ಇಂದ್ರಾಣಿ, ಅಖಿಲೇಶ್,  ನಾಗರಾಜು, ನಾಗವೇಣಿ, ಸುರೇಶ್,ನವೀನ್, ಕೆ. ಮಂಜುಳ, ಪ್ರಭಾ ಸೇರಿದಂತೆ ಅಧಿಕಾರಿಗಳು ಮತ್ತಿತ್ತರರು ಇದ್ದರು.

  • ದೊಡ್ಡಬಳ್ಳಾಪುರ: ಜಮೀನಿಗೆ ಫೆನ್ಸಿಂಗ್ ಹಾಕುವ ವಿಚಾರ: ಎರಡು ಗುಂಪುಗಳ ನಡುವೆ ಮಾರಾಮಾರಿ

    ದೊಡ್ಡಬಳ್ಳಾಪುರ: ಜಮೀನಿಗೆ ಫೆನ್ಸಿಂಗ್ ಹಾಕುವ ವಿಚಾರ: ಎರಡು ಗುಂಪುಗಳ ನಡುವೆ ಮಾರಾಮಾರಿ

    ದೊಡ್ಡಬಳ್ಳಾಪುರ: ಜಮೀನಿಗೆ ಫೆನ್ಸಿಂಗ್ ಹಾಕುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಕಣ್ಣಿಗೆ ಕಾರದಪುಡಿ ಎರಚಿ ದೊಣ್ಣೆಗಳಿಂದ ಹಲ್ಲೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ದಡಘಟ್ಟುಮಡಗು ಗ್ರಾಮದಲ್ಲಿ  ಇಂದು ನಡೆದಿದೆ.

    ವಕೀಲ ಪ್ರತಾಪ್ ಸೇರಿದಂತೆ ಹಲವರ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆದಿದೆ. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

    ಈ ಘಟನೆ ಸಂಬಂಧ ಹೊಸಹಳ್ಳಿ ಪೊಲೀಸರು ಗಂಗಾಧರ (A1), ಲೋಕೇಶ್ (A2), ಲಿಂಗರಾಜ್ (A3), ರಕ್ಷಿತ್ (A4), ರವಿಚಂದ್ರ (A5) ಸೇರಿದಂತೆ ಒಟ್ಟು 19 ಜನರನ್ನು ಆರೋಪಿಗಳಾಗಿ ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.