Author: Raghavendra H A

  • ದೊಡ್ಡಬಳ್ಳಾಪುರ; ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಆನಂದ್ ರಾಜೀನಾಮೆ, ಜಿಲ್ಲಾಧಿಕಾರಿಗಳಿಂದ ಅಂಗೀಕಾರ

    ದೊಡ್ಡಬಳ್ಳಾಪುರ; ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಆನಂದ್ ರಾಜೀನಾಮೆ, ಜಿಲ್ಲಾಧಿಕಾರಿಗಳಿಂದ ಅಂಗೀಕಾರ

    ದೊಡ್ಡಬಳ್ಳಾಪುರ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರ ಆನಂದ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಜಿಲ್ಲಾಧಿಕಾರಿಗಳು ಅಂಗೀಕರಿಸಿದ್ದಾರೆ.

    ವೈಯಕ್ತಿಕ ಕಾರಣಗಳಿಂದ ಅಧ್ಯಕ್ಷೆಯಾಗಿ ಮುಂದುವರಿದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ, ಯಾವುದೇ ಒತ್ತಡಕ್ಕೆ ಮಣಿಯದೆ ಸ್ವಇಚ್ಛೆಯಿಂದ ಜೂನ್ 1ರಂದು ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸಲ್ಲಿಸಿದ ದಿನಾಂಕದಿಂದ ಹತ್ತು ದಿನಗಳ ಅವಧಿಯೊಳಗೆ ಅದನ್ನು ಹಿಂಪಡೆಯುವ ಅವಕಾಶವಿದ್ದು, ಜೂನ್ 10ರೊಳಗೆ ಸುಮಿತ್ರಾ ಅವರು ತಮ್ಮ ರಾಜೀನಾಮೆಯನ್ನು ಹಿಂಪಡೆಯದ ಹಿನ್ನೆಲೆ ಜಿಲ್ಲಾಧಿಕಾರಿಗಳಾದ ಡಾ.ಕೆ.ಅನುರಾಧ ಅವರು ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.

  • ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ: ಸರ್ಕಾರ

    ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮತ್ತೆ ಅರ್ಜಿ ಸಲ್ಲಿಕೆ ಕಡ್ಡಾಯ: ಸರ್ಕಾರ

    ಗೃಹಲಕ್ಷ್ಮಿ ಯೋಜನೆಯ ನೂರಾರು ಕೋಟಿ ರು. ಅನರ್ಹರ ಖಾತೆಗೆ ಹೋಗಿದೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಗೆ ಮರು ಅರ್ಜಿ ಆಹ್ವಾನಿಸುತ್ತಿದ್ದು, ಇದೇ ರೀತಿ ‘ಗೃಹ ಜ್ಯೋತಿ’ ದುರ್ಬಳಕೆ ತಡೆಯಲು ಮತ್ತೊಮ್ಮೆ ಅರ್ಜಿ ಪಡೆಯುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

    ಶನಿವಾರ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಓಗಳು, ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ರಾಜ್ಯ ಮಟ್ಟದ ಪ್ರಗತಿ ಪರಿಶೀಲನೆ ಸಭೆನಡೆಸಿದ ಅವರು, ಗ್ಯಾರಂಟಿಗಳ ದುರ್ಬಳಕೆ ತಡೆಯುವ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಪಂಚ ಗ್ಯಾರಂಟಿಗಳಲ್ಲೂ ದುರ್ಬಳಕೆ, ಸೋರಿಕೆ ತಡೆಯಬೇಕು. ಅರ್ಹರಿಗೆ ಮಾತ್ರ ಯೋಜನೆ ಲಾಭ ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಎರಡೂ ಯೋಜನೆಗಳಿಗೂ ಹೊಸದಾಗಿ ಅರ್ಜಿ ಪಡೆಯಬೇಕು. ಆ ಮೂಲಕ ಅನರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದ್ದಾರೆ.

    ಗೃಹಬಳಕೆ ಹೆಸರಿನಲ್ಲಿ ಪಡೆದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಅದನ್ನು ಅಂಗಡಿಗಳ ಬಳಕೆಗೂ ಪಡೆಯುತ್ತಿದ್ದಾರೆ, ಇನ್ನು ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪೈಕಿ ಹಲವರು ಸಾವನ್ನಪ್ಪಿದ್ದರು ಅವರ ಖಾತೆಗೆ ಹಣ ಜಮೆಯಾಗುತ್ತಿದೆ. ಈ ಎಲ್ಲಾ ಗೊಂದಲಗಳನ್ನು ಸರಿಪಡಿಸುವ ಬಗ್ಗೆ ಕ್ರಮಕ್ಕೆ ಸೂಚಿಸಿದರು.

    ಗೃಹಲಕ್ಷ್ಮಿ ನಿಲ್ಲಿಸಲ್ಲ;

    ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಲ್ಲಿ ಕೆಲವರು ನಿಧನರಾಗಿದ್ದಾರೆ. ಅವರ ಹೆಸರಲ್ಲಿ ಬೇರೆಯವರು 100 ಕೋಟಿ ರು.ಗೂ ಹೆಚ್ಚು ಹಣ ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ ಅರ್ಹ ಫಲಾನು ಭವಿಗಳಿಗೆ ಯೋಜನೆ ತಲುಪುತ್ತಿದೆಯೇ, ಇಲ್ಲವೇ ಎಂದು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.

    ಮತದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ ಇಲ್ಲ;

    ಮತದಾನದ ಹಕ್ಕು ಇಲ್ಲದಿದ್ದರೆ ಗ್ಯಾರಂಟಿ, ಪಿಂಚಣಿ ಸೇರಿದಂತೆ ಯಾವುದೇ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಹೀಗಾಗಿ ಎಸ್‌ಐಆರ್‌ ಪ್ರಕ್ರಿಯ ವೇಳೆ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯ್ತಿಗೆ ಹೋಗಿ ಮತದಾರರಿಗೆ ಮಾರ್ಗದರ್ಶನ ನೀಡುವ ಜತೆಗೆ ಮತದಾನದ ಹಕ್ಕು ಪಡೆಯಲು ಅಗತ್ಯರುವ ಎಲ್ಲಾ ದಾಖಲೆಗಳನ್ನು ಜನರಿಗೆ ಒದಗಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಶನಿವಾರ ಅವರು ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯಲ್ಲಿ ಈ ಮಾತು ಹೇಳಿದರು.

  • ದೊಡ್ಡಬಳ್ಳಾಪುರ; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು, ಜಮೀನು ಮಾಲೀಕನ ವಿರುದ್ದ ಎಫ್ ಐಆರ್ ದಾಖಲು

    ದೊಡ್ಡಬಳ್ಳಾಪುರ; ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು, ಜಮೀನು ಮಾಲೀಕನ ವಿರುದ್ದ ಎಫ್ ಐಆರ್ ದಾಖಲು

    ದೊಡ್ಡಬಳ್ಳಾಪುರ; ತಾಲ್ಲೂಕು ತೊಗರೀಘಟ್ಟ ಗ್ರಾಮದಲ್ಲಿನ ಕೃಷಿಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವನ್ನಪ್ಪಿರುವ ಧಾರುಣ ಘಟನೆ ಇಂದು ನಡೆದಿದೆ.

    ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಸವಿತಾ ಮತ್ತು ಮುನಿರಾಜು ದಂಪತಿಯ ಮಗಳು 11ವರ್ಷದ ದಕ್ಷ, ಹಾಗೂ ಆಶಾ ಮತ್ತು ಪ್ರದೀಪ್ ದಂಪತಿಯ ಮಗ 4 ವರ್ಷದ ಧನುಷ್ ಎಂದು ಗುರುತಿಸಲಾಗಿದೆ. ಗುರುಮೂರ್ತಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ನಿರ್ಮಿಸಿದ ಕೃಷಿ ಹೋಂಡದಲ್ಲಿ ಈ ಘಟನೆ ನಡೆದಿದೆ.

    ಕೃಷಿ ಹೊಂಡಕ್ಕೆ ಸರಿಯಾಗಿ ಭದ್ರತೆ ಮಾಡದೆ ಇಬ್ಬರು ಮಕ್ಕಳ ಸಾವಿಗೆ ಕಾರಣರಾದ ಗುರುಮೂರ್ತಿ ವಿರುದ್ಧ 106 BNS ರೀತಿಯ ಪ್ರಕರಣ ದಾಖಲಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಡಾ.ಎಂ.ಬಿ ನವೀನ್ ಕುಮಾರ್ ರವರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  • ದೊಡ್ಡಬಳ್ಳಾಪುರ; ಗಾಂಜಾ ಮಾರಾಟಗಾರನ ಬಂಧನ, 6 ಕೆಜಿ 126 ಗ್ರಾಂ ಗಾಂಜಾ ವಶಕ್ಕೆ ಪಡೆದ ಪೊಲೀಸ್

    ದೊಡ್ಡಬಳ್ಳಾಪುರ; ಗಾಂಜಾ ಮಾರಾಟಗಾರನ ಬಂಧನ, 6 ಕೆಜಿ 126 ಗ್ರಾಂ ಗಾಂಜಾ ವಶಕ್ಕೆ ಪಡೆದ ಪೊಲೀಸ್

    ದೊಡ್ಡಬಳ್ಳಾಪುರ: 6 ಕೆಜಿ 126 ಗ್ರಾಂ ಒಣ ಗಾಂಜಾವನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಯುವಕನೊಬ್ಬನನ್ನು ದೊಡ್ಡಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತನನ್ನು ಉತ್ತರಪ್ರದೇಶ ಮುರಾಬಾದ್ ಮೂಲದ 23 ವರ್ಷದ ಮುಷರಫ್ ಅಲಿ ಎಂದು ಗುರುತಿಸಲಾಗಿದ್ದು, ದೊಡ್ಡಬಳ್ಳಾಪುರ ನಗರದ ಅರ್ಕಾವತಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು ಎನ್ನಲಾಗಿದೆ.

    ಆರೋಪಿಯು ನಗರದಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶದಿಂದ ದೊಡ್ಡಬಳ್ಳಾಪುರಕ್ಕೆ ಒಣ ಗಾಂಜಾವನ್ನು ತಂದು ತನ್ನ ಮನೆಯಲ್ಲಿ ಶೇಖರಿಸಿಟ್ಟಿದ್ದ, ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಬಂಧಿತನಿಂದ 6 ಕೆಜಿ 126 ಗ್ರಾಂ ಅಕ್ರಮ ಒಣ ಗಾಂಜಾ ಜೊತೆಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ದೊಡ್ಡಬಳ್ಳಾಪುರ ಮಾಜಿ ಶಾಸಕ ಆರ್.ಜಿ ವೆಂಕಟಾಚಲಯ್ಯ ವಿಧಿವಶ

    ದೊಡ್ಡಬಳ್ಳಾಪುರ ಮಾಜಿ ಶಾಸಕ ಆರ್.ಜಿ ವೆಂಕಟಾಚಲಯ್ಯ ವಿಧಿವಶ

    ದೊಡ್ಡಬಳ್ಳಾಪುರ; ಮಾಜಿ ಶಾಸಕ, ಹಿರಿಯ ರಾಜಕಾರಣಿ ಆರ್.ಜಿ ವೆಂಕಟಚಲಯ್ಯ ರವರು ಇಂದು ಮುಂಜಾನೆ ವಯೋಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದಿದ್ದಾರೆ. ಮೃತರಿಗೆ 90ವರ್ಷ ವಯಸ್ಸಾಗಿತ್ತು,

    ಮೃತರ ಅಂತ್ಯಕ್ರಿಯೆಗೂ ಮುನ್ನ ಇವರ ಪಾರ್ಥಿವ ಶರೀರವನ್ನು ದೊಡ್ಡಬಳ್ಳಾಪುರ ತೇರದ ವಾಹನ ಮುಖಾಂತರ 11 ಗಂಟೆಗೆ ಬಾಶೆಟ್ಟಿಹಳ್ಳಿ, ರೈಲ್ವೇಸ್ಟೆಷನ್, ರಂಗಪ್ಪ ಸರ್ಕಲ್, ತೇರಿನ ಬೀದಿ, ಕೊಂಗಾಡಿಯಪ್ಪ ಕಾಲೇಜು ಮುಖ್ಯ ರಸ್ತೆ, ಇಸ್ಲಾಂಪುರ, ತಾಲೂಕ್ ಆಫೀಸ್ ಸರ್ಕಲ್, ಮಾರ್ಕೆಟ್ (ಬಸ್ ಸ್ಟಾಂಡ್ ) ಡಿಕ್ರಾಸ್, ಟಿ.ಬಿ. ಸರ್ಕಲ್,ಬಸವ ಭವನ ಮಾರ್ಗವಾಗಿ ಅವರ ಸ್ವಗ್ರಾಮ ಹಣಬೆ ಗ್ರಾಮದಲ್ಲಿ ಸಂಜೆ ಅವರ ಪಾರ್ಥಿವ ಶರಿವರವನ್ನು ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ಆಪ್ತ ಮೂಲಗಳು ತಿಳಿಸಿದೆ.

  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ₹3.57 ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

    ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕ ಅಕ್ರಮವಾಗಿ ಗಾಂಜಾ ಸಾಗಿಸಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾನೆ.

    ಚೆಕ್-ಇನ್ ಬ್ಯಾಗೇಜ್ ತಪಾಸಣೆ ನಡೆಸಿದಾಗ ಆರೋಪಿಯ ಬ್ಯಾಗ್‌ನಲ್ಲಿ ಹೈಡೋಪೋನಿಕ್ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಸಿಎಂ ಡಿಕೆಶಿ ಮನೆಯ ಬಳಿ ನಿಂಬೆಹಣ್ಣು, ನಾಟಿ ಕೋಳಿ ಕತ್ತು ಕೊಯ್ದು ವಾಮಾಚಾರ ಶಂಕೆ!

    ಸಿಎಂ ಡಿಕೆಶಿ ಮನೆಯ ಬಳಿ ನಿಂಬೆಹಣ್ಣು, ನಾಟಿ ಕೋಳಿ ಕತ್ತು ಕೊಯ್ದು ವಾಮಾಚಾರ ಶಂಕೆ!

    ಸಿಎಂ ಡಿ.ಕೆ.ಶಿವಕುಮಾರ್ ಅವರ ಮನೆಯ ಬಳಿ ಮೂರು ನಿಂಬೆಹಣ್ಣು ಹಾಗೂ ನಾಟಿ ಕೋಳಿಯ ಕತ್ತು ಕೊಯ್ದು ಹಾಕಿರುವುದು ಭಾನುವಾರ ಮಧ್ಯಾಹ್ನ ಪತ್ತೆಯಾಗಿತ್ತು ವಾಮಾಚಾರ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

    ಮುಖ್ಯಮಂತ್ರಿ ಮನೆಯ ಬಳಿ ಕೂಡು ರಸ್ತೆಯಿದ್ದು (ಜಿಬಿಎ ಮೈದಾನದ ಎದುರು) ಆ ರಸ್ತೆಯ ಬದಿಯಲ್ಲಿ ವೃತ್ತಾಕಾರ ಹಾಕಿ ನಾಟಿ ಕೋಳಿಯೊಂದನ್ನು ಕೊಯ್ದು ಹಾಕಲಾಗಿತ್ತು. ಅದರ ಪಕ್ಕದಲ್ಲೇ ನಿಂಬೆಹಣ್ಣನ್ನು ಹಾಕಲಾಗಿತ್ತು. ಕೋಳಿ ತಲೆಯನ್ನು ನಾಯಿ ಎತ್ತಿಕೊಂಡು ಹೋಗಿದೆ. ಆ ಮಾರ್ಗದಲ್ಲಿ ತೆರಳಿದ ವಾಹನ ಚಾಲಕರು ಹಾಗೂ ದ್ವಿಚಕ್ರ ವಾಹನ ಸವಾರರು ಕುತೂಹಲದಿಂದ ವೀಕ್ಷಿಸಿ ಹೋಗುತ್ತಿದ್ದರು.

    ‘ವಾಮಾಚಾರ ನಡೆಸಲಾಗಿದೆ’ ಎಂದು ಸ್ಥಳೀಯರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಕೋಳಿಯನ್ನು ಸ್ಥಳದಿಂದ ತೆಗೆದು ಹಾಕಲಾಗಿದೆ. ಶನಿವಾರ ತಡರಾತ್ರಿ ಕಿಡಿಗೇಡಿಗಳು ಕೃತ್ಯ ಎಸಗಿರುವ ಸಾಧ್ಯತೆ ಇದೆ. ಆ ಮಾರ್ಗದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದೇವೆ. ಕೃತ್ಯ ಎಸಗಿದವರ ಸುಳಿವು ಇನ್ನೂ ಪತ್ತೆಯಾಗಿಲ್ಲ’ ಎಂದು ಪೊಲೀಸರು ಹೇಳಿದರು.

  • ದೊಡ್ಡಬಳ್ಳಾಪುರ; ಸಮಯಕ್ಕೆ ಬಾರದ ಸಾರಿಗೆ ಬಸ್, ವಿದ್ಯಾರ್ಥಿಗಳ ಪರದಾಟ, ಬಸ್ ತಡೆದು ಪ್ರತಿಭಟನೆ

    ದೊಡ್ಡಬಳ್ಳಾಪುರ; ಸಮಯಕ್ಕೆ ಬಾರದ ಸಾರಿಗೆ ಬಸ್, ವಿದ್ಯಾರ್ಥಿಗಳ ಪರದಾಟ, ಬಸ್ ತಡೆದು ಪ್ರತಿಭಟನೆ

    ದೊಡ್ಡಬಳ್ಳಾಪುರ; ಮತ್ತೆ ಮುಂದುವರೆದ ಬಸ್ ಸಮಸ್ಯೆ ವಿದ್ಯಾರ್ಥಿಗಳ ಪರದಾಟ, ಶಾಲಾ ಕಾಲೇಜುಗಳಿಗೆ ಹೋಗಲು ಬಸ್ ಗಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳು ಸಾರಿಗೆ ಬಸ್ ಗಳು ಸಮಯಕ್ಕೆ ಅರಿಯಾಗಿ ಬಾರದ ಹಿನ್ನೆಲೆ ವಿದ್ಯಾರ್ಥಿಗಳು ಬಸ್ ತಡೆದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ತಾಲ್ಲೂಕಿನ ಉಜ್ಜಿನಿ ಹೊಸಹಳ್ಳಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ, ಪ್ರತಿನಿತ್ಯ ಬೆಳಗ್ಗೆ 8 ಗಂಟೆಗೆ ಉಜ್ಜಿನಿ ನಿಲ್ದಾಣಕ್ಕೆ ಬರಬೇಕಾಗಿದ್ದ ಬಸ್ ಇಂದು 9ಗಂಟೆಗೆ ಬಂದಿದ್ದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಉಜ್ಜಿನಿ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ತೆರಳುವ ಬಸ್ ನಿತ್ಯ 8ಗಂಟೆಗೆ ಬರಬೇಕಾಗಿತ್ತು ಆದರೇ 9ಗಂಟೆಗೆ ಬಂದ ಕಾರಣ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆ, ಕಾಲೇಜುಗಳಿಗೆ ತಡವಾಗಿ ಹೋಗುತ್ತಿದ್ದಾರೆ ಇದರಿಂದ ಶಿಕ್ಷಕರು ಮತ್ತು ಪ್ರಾಂಶುಪಾರಿಂದ ನಿತ್ಯ ಬೈಗುಳ ತಿನ್ನಬೇಕಾಗುತ್ತಿದೆ. ಈ ಮಾರ್ಗದಿಂದ ಸುಮಾರು ಮೂರು ಬಸ್ ಗಳಷ್ಟು ವಿದ್ಯಾರ್ಥಿಗಳು ದೊಡ್ಡಬಳ್ಳಾಪುರಕ್ಕೆ ಬೇರೆ ಬೇರೆ ಶಾಲಾಕಾಲೇಜುಗಳಿಗೆ ತೆರಳುತ್ತಿದ್ದಾರೆ. ನಿತ್ಯ ಇದೇ ರೀತಿಯಾದರೆ ಹೇಗೆ ಎಂದು ವಿದ್ಯಾರ್ಥಿಗಳು ಪೋಷಕರು ರೊಚ್ಚಿಗೆದ್ದು ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ ಸ್ಥಳಕ್ಕೆ ಡಿಪೋ ಮ್ಯಾನೇಜರ್ ಬರಬೇಕು ಸರಿಯಾದ ಸಮಯಕ್ಕೆ ಬಸ್ ಬಿಡುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.

     

  • ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ, ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆ

    ಮುಂಗಾರು ಮಳೆ ಆರಂಭಕ್ಕೆ ಕ್ಷಣಗಣನೆ, ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆ

    ಮುಂಗಾರು ಆರಂಭದ ಮುನ್ಸೂಚನೆಯಾಗಿ ಕೇರಳದಾದ್ಯಂತ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆಯು ವಿವಿಧ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್‌’ (Yellow Alert) ಘೋಷಿಸಿದೆ.

    ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರವಾಹ ಅಥವಾ ನೀರು ನಿಲ್ಲುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಲು ಹೇಳಲಾಗಿದೆ. ಗುಡುಗು, ಮಿಂಚು ಮತ್ತು ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಸಲಾಗಿದೆ.

    ಭಾರತೀಯ ಹವಾಮಾನ ಇಲಾಖೆಯ (IMD) ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಮುಂಗಾರು ಮಾರುತಗಳು ಮೇ 26ರ ಸುಮಾರಿಗೆ ಕೇರಳ ಕರಾವಳಿಯನ್ನು ಪ್ರವೇಶಿಸುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಮುಂಗಾರು ಜೂನ್ 1 ರಂದು ಕೇರಳಕ್ಕೆ ಆಗಮಿಸುವುದು ವಾಡಿಕೆ. ಆದರೆ ಈ ಬಾರಿ ಸುಮಾರು ಒಂದು ವಾರ ಮುಂಚಿತವಾಗಿಯೇ ಆಗಮಿಸುತ್ತಿದೆ.

    ಮುಂಗಾರು ಮಾರುತಗಳು ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಆಗ್ನೆಯ ಅರಬ್ಬಿ ಸಮುದ್ರದ ಭಾಗಗಳನ್ನು ಆವರಿಸಿಕೊಂಡಿವೆ. ಕೇರಳದತ್ತ ವೇಗವಾಗಿ ಮುನ್ನುಗ್ಗುತ್ತಿವೆ.

    ಪ್ರಸ್ತುತ ಕೇರಳದಾದ್ಯಂತ ವ್ಯಾಪಕವಾಗಿ ಗುಡುಗು ಸಹಿತ ಮಳೆಯಾಗುತ್ತಿದೆ. ಮುಂದಿನ 5 ದಿನಗಳ ಕಾಲ ಭಾರಿ ಮಳೆ (7 ರಿಂದ 11 ಸೆಂ.ಮೀ) ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD ) ತಿಳಿಸಿದೆ. ಲಕ್ಷದ್ವೀಪ ಮತ್ತು ಕೇರಳದ ಕರಾವಳಿ ತೀರಗಳಲ್ಲಿ ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಕಡಲು ಆರ್ಭಟಿಸುತ್ತಿದೆ. ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

    ಮುಂಗಾರು ಬೇಗನೇ ಆರಂಭವಾಗುತ್ತಿದ್ದರೂ, ಈ ವರ್ಷ ‘ಎಲ್ ನಿನೋ’ (El Nino) ಪ್ರಭಾವದ ಸಾಧ್ಯತೆ ಇರುವುದರಿಂದ ದೇಶದಲ್ಲಿ ಒಟ್ಟಾರೆ ಮುಂಗಾರು ಮಳೆ ಸಾಮಾನ್ಯಕ್ಕಿಂತ ಕೊಂಚ ಕಡಿಮೆ (ದೀರ್ಘಾವಧಿ ಸರಾಸರಿಯ ಶೇ. 92 ರಿಂದ 94 ರಷ್ಟು) ಇರಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

  • ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ; ಫ್ರಿಡ್ಜ್ ಕ್ಲೀನ್ ಮಾಡುವಾಗ ಕರೆಂಟ್ ಶಾಕ್, ಮಹಿಳೆ ಸಾವು

    ದೊಡ್ಡಬಳ್ಳಾಪುರ: ಪ್ರಿಡ್ಜ್ ಸ್ವಚ್ಛಗೊಳಿಸುತ್ತಿದ್ದವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆ ದೊಡ್ಡಬಳ್ಳಾಪುರ ನಗರದ ಚೈತನ್ಯನಗರದಲ್ಲಿ ನಡೆದಿದೆ. ಮೃತರನ್ನು ಚೈತನ್ಯನಗರ ನಿವಾಸಿ ಮೀನಾಕ್ಷಿ ಎಂ ಎಂದು ಗುರುತಿಸಲಾಗಿದೆ.

    ಮೇ 22ರಂದು ಸಂಜೆ ಸುಮಾರು 6:30ರ ವೇಳೆಗೆ ಮೀನಾಕ್ಷಿಯವರು ತಮ್ಮ ಮನೆಯಲ್ಲಿ ಫ್ರಿಡ್ಜ್ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡು ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

    ತಕ್ಷಣ ಕುಟುಂಬಸ್ಥರು ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

    ಘಟನೆ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.