Author: Dharmaraju

  • 105 ಅಡಿಗೆ ತಲುಪಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ:ಮಂಡ್ಯ ರೈತರಲ್ಲಿ ಹೆಚ್ಚಿದ ನಿರೀಕ್ಷೆ

    105 ಅಡಿಗೆ ತಲುಪಿದ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ:ಮಂಡ್ಯ ರೈತರಲ್ಲಿ ಹೆಚ್ಚಿದ ನಿರೀಕ್ಷೆ

    ಮಂಡ್ಯ:ರಾಜ್ಯದಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು,ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡಿದ್ದು, ಕಾವೇರಿ ಕೊಳ್ಳದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಡ್ಯಾಂಗಳಲ್ಲಿಯೂ ನೀರಿನ ಮಟ್ಟ ಸ್ಥಿರವಾಗಿ ಏರಿಕೆಯಾಗುತ್ತಿದೆ.

    ಸದ್ಯ ಕಾವೇರಿ ಕೊಳ್ಳದ ಪ್ರಮುಖ ಡ್ಯಾಂ ಕೆಆರ್‌ಎಸ್‌ನಲ್ಲಿ ಇಂದಿನ ನೀರಿನ ಮಟ್ಟ 105.10 ಅಡಿಯಷ್ಟಿದೆ (ಗರಿಷ್ಠ ಮಟ್ಟ: 124.80 ಅಡಿ). 49.452 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಪ್ರಸ್ತುತ 27.077 ಟಿಎಂಸಿ ನೀರು ಸಂಗ್ರಹವಿದ್ದು, 19,275 ಕ್ಯೂಸೆಕ್ ಒಳಹರಿವು ಮತ್ತು 1,985 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.

    ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 81 ಅಡಿಗೆ ಕುಸಿದಿದ್ದಾಗ, ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ರೈತರಿಗೆ ಕಠಿಣ ಸೂಚನೆಯೊಂದನ್ನು ನೀಡಿತ್ತು. ಯಾವುದೇ ಹೊಸ ಬೆಳೆ ಬಿತ್ತನೆ ಮಾಡಬೇಡಿ, ಕುಡಿಯುವ ನೀರಿಗೆ ಆದ್ಯತೆ ನೀಡಬೇಕಾಗಿದೆ ಎಂದು ರೈತರನ್ನು ಕೈ ಕಟ್ಟಿ ಹಾಕಿತ್ತು. ಆದರೆ ಈಗ ಜಲಾನಯನ ಪ್ರದೇಶ ಹಾಗೂ ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿದೆ.

    ಕೆಆರ್‌ಎಸ್‌ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರ ಪರಿಣಾಮ ಡ್ಯಾಂ ನೀರಿನ ಮಟ್ಟ ಭರಪೂರ 105 ಅಡಿ ತಲುಪಿದೆ.

    ಕಾವೇರಿ ಜಲಾನಯನ ಪ್ರದೇಶದಲ್ಲಿ ಸದ್ಯ ಮಳೆ ಚುರುಕುಗೊಂಡ ಬೆನ್ನಲ್ಲೇ, ಸಕ್ಕರೆ ನಾಡು ಮಂಡ್ಯದ ರೈತರ ಮೊಗದಲ್ಲಿ ಹೊಸ ಭರವಸೆ ಮೂಡಿದೆ. ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಈಗ 105 ಅಡಿಗೆ ಏರಿಕೆಯಾಗಿದ್ದು, ಮುಂಗಾರು ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕೆಂದು ಮಂಡ್ಯ ಜಿಲ್ಲೆಯ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಡ್ಯಾಂನ ನೀರಿನ ಮಟ್ಟ 105 ಅಡಿಗೆ ಏರಿಕೆಯಾಗುತ್ತಿದ್ದಂತೆ ಮಂಡ್ಯ ಜಿಲ್ಲೆಯ ರೈತರು ಕೃಷಿ ಚಟುವಟಿಕೆಗೆ ಸಜ್ಜಾಗುತ್ತಿದ್ದಾರೆ. ಮುಂಗಾರು ಹಂಗಾಮಿನ ಹೊಸ ಬೆಳೆಗೆ ಕೂಡಲೇ ನಾಲೆಗಳಿಗೆ ನೀರು ಹರಿಸುವುದಾಗಿ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ.

    ಬಿತ್ತನೆಗೆ ಇದು ಸೂಕ್ತ ಸಮಯವಾಗಿದ್ದು, ಸರ್ಕಾರ ತಡ ಮಾಡಿದರೆ ಕೈಗೆ ಬಂದ ಬೆಳೆ ಬಾಯಿಗೆ ಬಾರದಂತಾಗುತ್ತದೆ ಎಂಬುದು ರೈತರ ಆತಂಕವಾಗಿದೆ.

    ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ

    ಕೆಆರ್‌ಎಸ್ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 124.80 ಇಂದಿನ ಮಟ್ಟ: 102.09, ಒಳಹರಿವು: 32,048, ಹೊರಹರಿವು: 1,821 ಕ್ಯೂಸೆಕ್

    ಹಾರಂಗಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,859, 20໖ : 2,857.01, 20: 11,645, ಹೊರಹರಿವು: 10,750 ಕ್ಯೂಸೆಕ್

    ಕಬಿನಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,284.00, ໖ : 2282.59, : 31,746, ಹೊರಹರಿವು: 27000 ಕ್ಯೂಸೆಕ್

    ಹೇಮಾವತಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,922, ಇಂದಿನ ಮಟ್ಟ: 2911.75, ಒಳಹರಿವು: 12,859, ಹೊರಹರಿವು: 500 ಕ್ಯೂಸೆಕ್

    ಲಿಂಗನಮಕ್ಕಿ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 1,819, ໖ : 1,784.70, 0): 59,203, ಹೊರಹರಿವು: 761 ಕ್ಯೂಸೆಕ್

    ಸೂಪಾ ಜಲಾಶಯ:- ಗರಿಷ್ಠ ಮಟ್ಟ (ಮೀ.ಗಳಲ್ಲಿ): 564, ಇಂದಿನ ಮಟ್ಟ: 540.30, ಒಳಹರಿವು: 44,062, ಹೊರಹರಿವು: 0 ಕ್ಯೂಸೆಕ್

    ಮಾಣಿ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 595, ಇಂದಿನ ಮಟ್ಟ: 582.78, ಒಳಹರಿವು: 10,003, ಹೊರಹರಿವು: 0

    ತುಂಗಭದ್ರಾ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 1,633,  ಇಂದಿನ ಮಟ್ಟ: 1,613.16, 2: 57,785, ಹೊರಹರಿವು: 1,390

    ಮಲಪ್ರಭಾ ಜಲಾಶಯ:– ಗರಿಷ್ಠ ಮಟ್ಟ (ಅಡಿಗಳಲ್ಲಿ): 2,079.50, ಇಂದಿನ ಮಟ್ಟ: 2,060.60, 20: 11,703, ಹೊರಹರಿವು: 1,194,

    ಘಟಪ್ರಭಾ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 2,175, ಇಂದಿನ ಮಟ್ಟ: 2,158.33, 2: 20,782, ಹೊರಹರಿವು: 1,765

    ತುಂಗಾ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 588.24, 2 : 586.83, 2: 86,123, ಹೊರಹರಿವು: 89,503

    ಭದ್ರಾ ಜಲಾಶಯ:- ಗರಿಷ್ಠ ಮಟ್ಟ (ಅಡಿಗಳಲ್ಲಿ): 186,ಇಂದಿನ ಮಟ್ಟ: 163.6, : 36,103, ಹೊರಹರಿವು: 189

    ಆಲಮಟ್ಟಿ ಜಲಾಶಯ:- ಗರಿಷ್ಠ ಮಟ್ಟ (ಮೀ.ಗಳಲ್ಲಿ): 519,60, ಇಂದಿನ ಮಟ್ಟ: 518.94, : 1,25,855, : 1,50,000

    ನಾರಾಯಣಪುರ ಜಲಾಶಯ:- ಗರಿಷ್ಠ ಮಟ್ಟ (ಮೀ. ಗಳಲ್ಲಿ): 492.25,ಇಂದಿನ ಮಟ್ಟ:491.40, 2: 1,30,000, : 1,55,144

  • ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಡಾ. ವಿದ್ಯಾಭೂಷಣ್ ಅವರೊಂದಿಗೆ ‘ಭಜ ಮನ’ ಸಂಗೀತ ಸಂಭ್ರಮ

    ಹೊಸ ತಲೆಮಾರಿಗೆ ದಾಸಸಾಹಿತ್ಯದ ಪರಂಪರೆ: ಡಾ. ವಿದ್ಯಾಭೂಷಣ್ ಅವರೊಂದಿಗೆ ‘ಭಜ ಮನ’ ಸಂಗೀತ ಸಂಭ್ರಮ

    • ಆಗಸ್ಟ್ 6, 7ಕ್ಕೆ ಜಯನಗರದಲ್ಲಿ ‘ಭಜ ಮನ’ ಗಾಯನ ಕಾರ್ಯಾಗಾರ
    • ವಿದ್ಯಾಭೂಷಣ್-ಮೇಧಾ ಅವರಿಂದ ದಾಸರಪದಗಳ ಮಾರ್ಗದರ್ಶನ
    • ಸಂಗೀತ ಪ್ರೇಮಿಗಳಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ
    • ಆಗಸ್ಟ್ 8ರಂದು ಬೃಹತ್ ಸಂಗೀತ ಕಛೇರಿ

    ಬೆಂಗಳೂರು: ‘ಪರಮ್ ಕಲ್ಚರ್’, ‘ಹರಿವಂಶ ಗ್ರೂಪ್’ ಮತ್ತು ‘ಯುವಕ ಸಂಘ’ದ ಸಹಯೋಗದೊಂದಿಗೆ ‘ಭಜ ಮನ’ ಎಂಬ ಎರಡು ದಿನಗಳ ವಿಶೇಷ ಕಛೇರಿ-ಪೂರ್ವ (Pre-Concert) ಗಾಯನ ಕಾರ್ಯಾಗಾರವನ್ನು ಜಯನಗರದ ‘ಯುವಕ ಸಂಘ’ದಲ್ಲಿ ಆಗಸ್ಟ್ 6 ಮತ್ತು 7 ರಂದು ಸಂಜೆ 6 ರಿಂದ 8 ಗಂಟೆಯವರೆಗೆ ಆಯೋಜಿಸಿದೆ. ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಿದ್ವಾಂಸ ಹಾಗೂ ಹರಿದಾಸ ಸಾಹಿತ್ಯದ ಖ್ಯಾತನಾಮರಾದ ಡಾ.ವಿದ್ಯಾಭೂಷಣ ಮತ್ತು ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರು ಈ ಸಾಂಸ್ಕೃತಿಕ ತರಬೇತಿಯ ನೇತೃತ್ವ ವಹಿಸಲಿದ್ದಾರೆ.

    ಈ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಸಂಗೀತ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳಿಗೆ ಕಲಾವಿದರಿಂದ ನೇರವಾಗಿ ದಾಸರಪದಗಳು ಹಾಗೂ ಭಜನೆಗಳನ್ನು ಕಲಿಯುವ ಸುವರ್ಣಾವಕಾಶ ದೊರೆಯಲಿದೆ. ಇದರೊಂದಿಗೆ ವಿದ್ವಾಂಸರ ಸುದೀರ್ಘ ಸಂಗೀತ ಪಯಣ, ಭಕ್ತಿಪೂರ್ವಕ ಗಾಯನದ ಶೈಲಿ ಮತ್ತು ಅವರ ಅನುಭವಗಳ ಕುರಿತು ಹತ್ತಿರದಿಂದ ತಿಳಿಯಬಹುದಾಗಿದೆ. ಈ ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಲು ಮತ್ತು ಪ್ರವೇಶಾವಕಾಶ ಪಡೆಯಲು ‘ಬುಕ್‌ಮೈಶೋ’ ನಲ್ಲಿ (BookMyShow) ಅವಕಾಶ ಕಲ್ಪಿಸಲಾಗಿದೆ.

    ವಿಶೇಷ ತರಬೇತಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಸುವರ್ಣಾವಕಾಶ
    ಒಟ್ಟು ನಾಲ್ಕು ಗಂಟೆಗಳ ಕಾಲ ನಡೆಯುವ ಈ ಕಾರ್ಯಾಗಾರದಲ್ಲಿ ವಿಶೇಷ ಕಲಿಕಾ ಸಾಮಗ್ರಿಗಳನ್ನು ನೀಡಲಾಗುವುದು. ಜೊತೆಗೆ, ಕಾರ್ಯಾಗಾರದಲ್ಲಿ ಉತ್ತಮ ಪ್ರದರ್ಶನ ನೀಡುವ ಅಭ್ಯಾಸಿಗಳನ್ನು ಆಯ್ಕೆ ಮಾಡಿ, ಆಗಸ್ಟ್ 8 ರಂದು ಎನ್‌ಎಂಕೆಆರ್‌ವಿ ಕಲಾಕ್ಷೇತ್ರದ ಮಂಗಳ ಮಂಟಪದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಮುಖ್ಯ ಕಛೇರಿಯಲ್ಲಿ ಡಾ. ವಿದ್ಯಾಭೂಷಣ ಅವರೊಂದಿಗೆ ವೇದಿಕೆ ಹಂಚಿಕೊಂಡು ಹಾಡುವ ಅಪರೂಪದ ಅವಕಾಶವನ್ನು ಕಲ್ಪಿಸಿಕೊಡಲಾಗುತ್ತದೆ.

    ನಾಲ್ಕು ದಶಕಗಳ ಸಂಗೀತ ಪಯಣದ ಹರಿದಾಸ ಸಾಹಿತ್ಯದ ಕೊಂಡಿ
    ಕಳೆದ ನಾಲ್ಕು ದಶಕಗಳಿಂದ ದಾಸರ ಪದಗಳನ್ನು ಜಗತ್ತಿನಾದ್ಯಂತ ಪಸರಿಸಿರುವ ಡಾ. ವಿದ್ಯಾಭೂಷಣ ಅವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಹಾಗೂ ‘ಸಂಗೀತ ವಿದ್ಯಾ ನಿಧಿ’ ಬಿರುದಾಂಕಿತರಾಗಿದ್ದಾರೆ. 100ಕ್ಕೂ ಹೆಚ್ಚು ಆಲ್ಬಮ್‌ಗಳ ಮೂಲಕ ಹರಿದಾಸ ಸಾಹಿತ್ಯವನ್ನು ಮನೆಮನಗಳಿಗೆ ತಲುಪಿಸಿರುವ ಅವರು, ಇದೀಗ ಹೊಸ ತಲೆಮಾರಿನ ಗಾಯಕರಿಗೆ ಭಕ್ತಿಪೂರ್ವಕ ಗಾಯನದ ಪರಂಪರೆಯನ್ನು ಧಾರೆ ಎರೆಯಲು ‘ಭಜ ಮನ’ ಮೂಲಕ ಮುಂಚೂಣಿಯಲ್ಲಿದ್ದಾರೆ.

  • ಸಂಘಟನ್‌ ಸೃಜನ್‌ ಅಭಿಯಾನದಿಂದ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ.

    ಸಂಘಟನ್‌ ಸೃಜನ್‌ ಅಭಿಯಾನದಿಂದ ಕಾರ್ಯಕರ್ತರ ಅಭಿಪ್ರಾಯಕ್ಕೆ ಆದ್ಯತೆ.

    ಕೆ.ಆರ್.ಪುರ: ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಬಲಿಷ್ಠವಾಗಿ ಕಟ್ಟುವ ಉದ್ದೇಶದಿಂದ ರಾಜ್ಯಾದ್ಯಂತ ಸಂಘಟನ್ ಸೃಜನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಸಂಘಟನೆ ಪ್ರಜಾಸತ್ತಾತ್ಮಕ ರೀತಿಯಲ್ಲಿ ಮತ್ತಷ್ಟು ಸದೃಢಗೊಳ್ಳಬೇಕಿದೆ ಎಂದು ಎಐಸಿಸಿ ವೀಕ್ಷಕರಾದ ಟೋನಿ ಚಮ್ಮನಿ ತಿಳಿಸಿದರು.

    ಕೆ.ಆರ್. ಪುರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಂಘಟನ್ ಸೃಜನ ಅಭಿಯಾನ ಸಭೆಯಲ್ಲಿ ಅವರು ಮಾತನಾಡಿದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ಹಾಗೂ ಪ್ರಜಾಸತ್ತಾತ್ಮಕವಾಗಿ ನಡೆಯಲಿದೆ. ಪಕ್ಷದ ಪದಾಧಿಕಾರಿಗಳು ಮತ್ತು ಮುಖಂಡರ ವೈಯಕ್ತಿಕ ಅಭಿಪ್ರಾಯಗಳನ್ನು ಗೌರವದಿಂದ ಆಲಿಸಿ, ಅವುಗಳನ್ನು ರಾಷ್ಟ್ರೀಯ ನಾಯಕತ್ವಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಆಗಸ್ಟ್ 31ರೊಳಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪೂರ್ಣಗೊಳ್ಳಲಿದ್ದು, ಸಂಘಟನೆಯ ಬಲವರ್ಧನೆಗೆ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಈ ಉದ್ದೇಶದಿಂದ ಸಂಘಟನಾ ಸೃಜನ್ ಅಭಿಯಾನದ ಮೂಲಕ ಮಹದೇವಪುರ ಹಾಗೂ ಕೆ.ಆರ್.ಪುರ ಕ್ಷೇತ್ರಗಳ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯಲಾಗುತ್ತದೆ ಎಂದು ಹೇಳಿದರು.

    ಬ್ಲಾಕ್ ಅಧ್ಯಕ್ಷರ ಕಚೇರಿಯಲ್ಲಿ ಒಬ್ಬೊಬ್ಬರನ್ನೇ ನೇರ ವಾಗಿ ಮಾತನಾಡಿಸಿ ಅವರ ಅಭಿಪ್ರಾಯ ಪಡೆದು ವರದಿ ಯನ್ನು ಎಐಸಿಸಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು

    ಮಾಜಿ ಸಚಿವ ಡಾ.ಸುಧಾಕರ್ ಮಾತನಾಡಿ,ದುಡಿಯುವವರು ಒಬ್ಬರು, ಅಧಿಕಾರ ಅನುಭವಿಸುವವರು ಮತ್ತೊಬ್ಬರು ಎಂಬಂತಾಗಬಾರದು ಎನ್ನುವ ಕಾರಣಕ್ಕೆ ಪಕ್ಷ ಸಂಘಟನೆಯಲ್ಲಿ ಸೃಜನಾತ್ಮಕವಾಗಿ ತೊಡಗಿಸಿಕೊಂಡವರನ್ನು ಇಂತಹ ಸಭೆಗಳ ಮೂಲಕ ಗುರುತಿಸಿ ಪಕ್ಷದ ವರಿಷ್ಠರಿಗೆ ವರದಿ ನೀಡಲಾಗುತ್ತದೆ. ಆಗಸ್ಟ್ ಅಂತ್ಯದ ಒಳಗೆ ಜಿಲ್ಲೆ, ತಾಲ್ಲೂಕು ಘಟಕದ ಅಧ್ಯಕ್ಷರ ಆಯ್ಕೆ ನಡೆಯಲಿದೆ’ ಎಂದು ಅವರು ತಿಳಿಸಿದರು.

    ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ಜಿಬಿಎ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್‌ ಬಾಬು, ಮಾಜಿ ಸಚಿವ ನಾಗೇಶ್, ಪರಿಶಿಷ್ಟ ಪಂಗಡದ ರಾಜ್ಯಾಧ್ಯಕ್ಷ ಧರ್ಮಸೇನ, ಕೆಪಿಸಿಸಿ ಪ್ರ.ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್, ಕೆಪಿಸಿಸಿ ಸದಸ್ಯರಾದ ಮಾರತ್ತಹಳ್ಳಿ ಜಯರಾಂರೆಡ್ಡಿ, ಜ್ಯೋತಿಪುರ ಚಂದ್ರು, ಬ್ಲಾಕ್ ಅಧ್ಯಕ್ಷರಾದ ಕಣ್ಣೂರು ನಾರಾಯಣಸ್ವಾಮಿ, ಮಯಾಂಕ್ ಬಾಬು, ಶ್ರೀನಿವಾಸ್ ರೆಡ್ಡಿ ಮುಖಂಡರಾದ ಜಾಯ್ಸನ್ ಬಾಲರಾಜ್ ಪಟೇಲ್ ಸೇರಿದಂತೆ ಇತರರು ಇದ್ದರು.

  • ಕೋಟಿ ಕೋಟಿ ಅನುದಾನ ಎಲ್ಲಿ..? ಆರು ವರ್ಷ ಕಳೆದರೂ ಪೂರ್ಣಗೊಳ್ಳದ ಬಸವನಪುರ ಉದ್ಯಾನವನ

    ಕೋಟಿ ಕೋಟಿ ಅನುದಾನ ಎಲ್ಲಿ..? ಆರು ವರ್ಷ ಕಳೆದರೂ ಪೂರ್ಣಗೊಳ್ಳದ ಬಸವನಪುರ ಉದ್ಯಾನವನ

    ಕೆ ಆರ್ ಪುರ: ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ ನ ಬಸವನಪುರ ಗ್ರಾಮದ ಉದ್ಯಾನವನದ ದುಸ್ಥಿತಿ ಹೇಳತೀರದಾಗಿದೆ. ಸುಮಾರು 4 ನಾಲ್ಕು ಎಕರೆ ಪ್ರದೇಶದಲ್ಲಿ 6 ಕೋಟಿ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಕೇವಲ ವಿದ್ಯುತ್ ಕಂಬಗಳು, ಒಂದು ಕಡೆ ಕಾಂಪೌಂಡ್ ಗೋಡೆ , ಹಾಗೂ ವಾಕಿಂಗ್ ಟ್ರ್ಯಾಕ್ ಬಿಟ್ಟು ಬೇರೆನೂ ನಿರ್ಮಾಣವಾಗಿಲ್ಲ.

    ಇಪ್ಪತ್ತು ವರ್ಷಗಳ ಹಿಂದೆ ಈ ಜಾಗದಲ್ಲಿ ಬೃಹತ್ ಕಲ್ಲುಕ್ವಾರಿ ಇತ್ತು, ಅದನ್ನು ಸಂಪೂರ್ಣವಾಗಿ ಮುಚ್ಚಿ ಉದ್ಯಾನವನ ನಿರ್ಮಾಣಕ್ಕೆ ಅಂದಿನ ಶಾಸಕ ನಂದೀಶರೆಡ್ಡಿ ಅಡಿಗಲ್ಲು ಹಾಕಿದ್ದರು, ತದನಂತರ ಈಗಿನ ಶಾಸಕ ಬಿ.ಎ.ಬಸವರಾಜ ಆಡಳಿತದಲ್ಲಿ ಎರಡು ಬಾರಿ ಅನುದಾನ ದೊರೆತರೂ ಅಭಿವೃದ್ದಿ ಮಾತ್ರ ಆಗಲಿಲ್ಲ, ಕೋಟಿಗಟ್ಟಲೆ ಅನುದಾನ ಕಾಗದದ ಮೇಲೆ ಮಾತ್ರ ಉಳಿದು, ವಾಸ್ತವದಲ್ಲಿ ಉದ್ಯಾನವು ದುಃಸ್ಥಿತಿಯಲ್ಲಿದೆ, ಅಭಿವೃದ್ಧಿ ಹೆಸರಲ್ಲಿ ಬಿಡುಗಡೆಯಾದ ಕೋಟಿ ರೂಪಾಯಿ ಹಣ ಸಾರ್ವಜನಿಕರಿಗೆ ತಲುಪುತ್ತಿಲ್ಲ. ಯಾವುದೇ ಅಭಿವೃದ್ದಿ ಮಾಡದೇ ಆರು ವರ್ಷಗಳೆ ಕಳೆದಿದ್ದು .ಕೋಟಿ ಕೋಟಿ ಹಣ ಗುಳುಂ ಆಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
    ಈಗ ಉದ್ಯಾನದ ಸ್ಥಿತಿ ಅನೈತಿಕ ಚಟುವಟಿಕೆಗಳ ತಾಣ, ಅನಧಿಕೃತ ವಾಹನಗಳ ಪಾರ್ಕಿಂಗ್, ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ, ಉದ್ಯಾನದ ಒಳಗಡೆ ಮತ್ತು ಸುತ್ತಮುತ್ತ ಕಸ ಎಸೆಯುತ್ತಿದ್ದರೂ ಸ್ವಚ್ಛತೆ ಮಾಡುತ್ತಿಲ್ಲ, ಸಾಲದ್ದಕ್ಕೆ ಕಿಡಿಗೇಡಿಗಳು ಕಸಕ್ಕೆ ಬೆಂಕಿಇಟ್ಟು ಸುತ್ತಮುತ್ತ ವಾತಾವರಣವನ್ನು ಹಾಳು ಗೆಡವಿದ್ದಾರೆ. ಹಾಕಿರುವ ವಿದ್ಯುತ್ ಕಂಬಗಳು ಹಾನಿಯಾಗಿದೆ. ಪಾರ್ಕ್ ನಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸಿ ವಾಕಿಂಗ್ ಟ್ರ್ಯಾಕ್ ಗಳು ಅಲ್ಲಲ್ಲಿ ಹಾಳಾಗಿದ್ದು, ಅರೆಬರೆ ಕಾಮಗಾರಿ ಆಗಿದೆ.

    ಸ್ಥಳಿಯ ನಿವಾಸಿಗಳ ವಾಹನ ನಿಲುಗಡೆಗೆ ಸೀಮಿತವಾದ ಉದ್ಯಾನವನ:

    ಗ್ರಾಮದ ನಿವಾಸಿಗಳ ಕಾರು ಮತ್ತು ಲಾರಿಗಳಿಗೆ ಪಾರ್ಕಿಂಗ್ ಸ್ಥಳಗಳಾಗಿ ಉದ್ಯಾನವನವು ಮಾರ್ಪಟ್ಟಿದೆ. ವಿಪರ್ಯಾಸವೆಂದರೆ ಲಾರಿ ಮಾಲಿಕರು ಉದ್ಯಾನವನವನ್ನ ಕಲ್ಲು ಅನ್ ಲೋಡ್ ಮಾಡುವ ಸ್ಥಳಗಳಾಗಿ ಬದಲಾಯಿಸಿ ಕೊಂಡಿದ್ದಾರೆ.ಈ ಅಕ್ರಮಗಳನ್ನ ಯಾವೊಬ್ಬ ಜನಪ್ರತಿನಿಧಿಗಳಾಗಲೀ… ಅಧಿಕಾರಿಗಳಾಗಲೀ ಇವರ ದರ್ಬಾರನ್ನ ಕೇಳುವವರಿಲ್ಲದಾಗಿದೆ.

    ಗುತ್ತಿಗೆದಾರರು ಮತ್ತು ಸ್ಥಳೀಯ ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿದೆ. ಕಾಮಗಾರಿ ಮುಗಿದಿದೆ ಎಂದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆಯೇ ಹಣ ಬಿಡುಗಡೆ ಮಾಡುತ್ತಾರೆ ಇದರಿಂದ ನಿವಾಸಿಗಳಿಗೆ ಸಿಗಬೇಕಾದ ಹಸಿರು ವಲಯ ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿದೆ.

    ವಿಶಾಲವಾದ ಉದ್ಯಾನವನವನ್ನ ಅಭಿವೃದ್ಧಿ ಮಾಡಲು ದಶಕಗಳೆ ಕಳೆದಿವೆ ಆದರೆ ಸಂಪೂರ್ಣ ಕೆಲಸ ಮಾತ್ರ ಮುಗಿದಿಲ್ಲ. ಉತ್ತಮ ಪಾರ್ಕ್ ನಿಂದ ಸ್ಥಳೀಯರ ವಾಯು ವಿಹಾರ, ಮಕ್ಕಳ ಆಟೋಟಕ್ಕೆ ಅನುಕೂಲ ಆಗಲಿದೆ. ಏನನ್ನೂ ಮಾಡದಿರುವುದರಿಂದ ಉದ್ಯಾನ ಪಾಳು ಬಿದ್ದಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ.

    ಬಾಲಕೃಷ್ಣ ಮಾಜಿ ನಗರಸಭೆ ಸದಸ್ಯ.

    ಈ ಉದ್ಯಾನವನ ಜಾಗವನ್ನು ಸಹ ಯಾರೋ ಖಾಸಗಿಯವರು ನುಂಗಿ ನೀರು ಕುಡಿಯಲು ಬಂದಿದ್ದರು ಆದರೆ ನಾವು ಹೋರಾಟ ಮಾಡಿದಕ್ಕೆ ಇವತ್ತು ಈ ಪಾರ್ಕ್ ಉಳಿದುಕೊಂಡಿದೆ.ಆರು ಕೋಟಿ ಹಣ ಬಿಡುಗಡೆಯಾಗಿದೆ. ಯಾವ ಕೆಲಸನೂ ಪೂರ್ಣಗೊಂಡಿಲ್ಲ.ಕಳೆದ ಆರು ವರ್ಷಗಳಿಂದ ಕಾಮಗಾರಿ ನಿಲ್ಲಿಸಲಾಗಿದೆ.ಪಾರ್ಕ್ ಆಗಿದೆ ಅಂತ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಆದರೆ ಏನೇನು ಕೆಲಸ ಆಗಿಲ್ಲ .ಪಾರ್ಕ್ ನಲ್ಲಿ ಕಸ ಹಾಕುವುದು,ಪುಂಡರು ರಾತ್ರಿ ವೇಳೆಯಲ್ಲಿ ಮದ್ಯಪಾನ ಮಾಡುವ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಆದಷ್ಟು ಬೇಗ ಪಾರ್ಕನ್ನ ಸಾರ್ವಜನಿಕ ಉಪಯೋಗಕ್ಕೆ ಅನುಕೂಲ ವಾಗುವಂತೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.”

    ಜಿಬಿಎ ಅಧಿಕಾರಿಗಳು ಇನ್ನಾದರೂ ಈ ಪಾರ್ಕ್ ನ ಅಭಿವೃದ್ಧಿಗೆ ಗಮನ ಅರಿಸಿ ಸಾರ್ವಜನಿಕ ಅನೂಕೂಲ ಆಗುವಂತೆ ಮಾಡಬೇಕು ಎಂದು ಗ್ರಾಮಸ್ಥರ ಒತ್ತಾಯ ಮಾಡುತ್ತಿದ್ದಾರೆ.

  • ಸಂಗೀತ, ನೃತ್ಯ ಸಿರಿಯ ವೈಭವ: ಕಣ್ಮನ ಸೆಳೆದ ‘ಪರಮ್ ವಿಹಾರ’ ಆವೃತ್ತಿ-14

    ಸಂಗೀತ, ನೃತ್ಯ ಸಿರಿಯ ವೈಭವ: ಕಣ್ಮನ ಸೆಳೆದ ‘ಪರಮ್ ವಿಹಾರ’ ಆವೃತ್ತಿ-14

    • ಜಯನಗರದ ಸನಾತನ ಕಲಾಕ್ಷೇತ್ರದಲ್ಲಿ ಯಶಸ್ವಿ ಕಾರ್ಯಕ್ರಮ
    • ಉದಯೋನ್ಮುಖ ಕಲಾವಿದರ ವೈವಿಧ್ಯಮಯ ಕಲಾ ಸಂಗಮ
    • ಸಂಜೆ ರಂಜಿಸಿದ ವಾಯೊಲಿನ್ ಸಾಂಸ್ಕೃತಿಕ ನಾದಲಹರಿ
    • ಭಾವ-ರಸ ಮೂಡಿಸಿದ ಮನಮೋಹಕ ಭರತನಾಟ್ಯ ರೂಪಕ
    • 70ಕ್ಕೂ ಹೆಚ್ಚು ಕಲಾಪ್ರೇಮಿಗಳ ಸಮ್ಮುಖದಲ್ಲಿ ಸಂಗೀತ-ನೃತ್ಯದ ಸಂಭ್ರಮ

    ಬೆಂಗಳೂರು: ರಾಜಧಾನಿಯ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲೊಂದಾದ ಜಯನಗರದ ‘ಸನಾತನ ಕಲಾಕ್ಷೇತ್ರ’ದಲ್ಲಿ ‘ಪರಮ್ ಕಲ್ಚರ್’ ವತಿಯಿಂದ ಆಯೋಜಿಸಲಾಗಿದ್ದ ‘ಪರಮ್ ವಿಹಾರ’ ಸಾಂಸ್ಕೃತಿಕ ಸರಣಿಯ 14ನೇ ಆವೃತ್ತಿಯ ಕಾರ್ಯಕ್ರಮವು ಜುಲೈ 26ರ ಭಾನುವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

    ಪ್ರತಿ ತಿಂಗಳ ನಾಲ್ಕನೇ ಭಾನುವಾರ ನಡೆಯುವ ಈ ವೈಶಿಷ್ಟ್ಯಪೂರ್ಣ ಸಾಂಸ್ಕೃತಿಕ ಸರಣಿಯಲ್ಲಿ ಈ ಬಾರಿಯೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಲಾಗಿತ್ತು. ಸುಮಾರು 70ಕ್ಕೂ ಹೆಚ್ಚು ಕಲಾಪ್ರೇಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ, ಯುವ ಪ್ರತಿಭೆಗಳ ಪ್ರದರ್ಶನವನ್ನು ಕಣ್ಣುಂಬಿಕೊಂಡು ಪ್ರೋತ್ಸಾಹಿಸಿದರು.

    ನಾದಲಹರಿ ಮತ್ತು ನೃತ್ಯ ವೈಭವ:
    ಕಾರ್ಯಕ್ರಮದ ಮೊದಲಾರ್ಧದಲ್ಲಿ ಕುಮಾರಿ ಮಾಲವಿ ಗುರುಪ್ರಸನ್ನ ಮತ್ತು ಕುಮಾರಿ ಪ್ರಣವಿ ಗುರುಪ್ರಸನ್ನ ಅವರ ವಾಯೊಲಿನ್ ಜುಗಲ್‌ಬಂದಿ ಸೇರಿದ್ದ ಸಭಿಕರ ಮನಸೂರೆಗೊಂಡಿತು. ಇವರಿಗೆ ಮೃದಂಗದಲ್ಲಿ ಕೃಷ್ಣ ವೇದಾಂತ ಹಾಗೂ ಮೋರ್ಸಿಂಗ್‌ನಲ್ಲಿ ಲಿಖಿತ್ ಕೆ.ಎಂ. ನೀಡಿದ ಸೊಗಸಾದ ಪಕ್ಕವಾದ್ಯವು ಈ ಪ್ರದರ್ಶನದ ಕಳೆಯನ್ನು ಮತ್ತಷ್ಟು ಹೆಚ್ಚಿಸಿತು.

    ಬಳಿಕ ಕಾರ್ಯಕ್ರಮದ ದ್ವಿತೀಯಾರ್ಧದಲ್ಲಿ ಗುರು ಶ್ರೀಮತಿ ಡಾ. ನಾಗರಾಜನ್ ಅವರ ಶಿಷ್ಯವೃಂದದಿಂದ ಮೂಡಿಬಂದ ಭರತನಾಟ್ಯ ನೃತ್ಯರೂಪಕವು ಪ್ರೇಕ್ಷಕರ ಕಣ್ಮನ ಸೆಳೆಯಿತು. ಭಾರತೀಯ ಶಾಸ್ತ್ರೀಯ ನೃತ್ಯದ ಸಾಂಪ್ರದಾಯಿಕ ಶೈಲಿ ಮತ್ತು ನಯನಮನೋಹರ ಅಭಿನಯವು ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು.

    ಹೊಸ ತಲೆಮಾರಿನ ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ, ಭಾರತೀಯ ಸಾಂಪ್ರದಾಯಿಕ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ‘ಪರಮ್ ಕಲ್ಚರ್’ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ ಈ ಪ್ರಯತ್ನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು.

  • ಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡ ಕ್ಯಾನ್ಸರ್‌ನ ಯಶಸ್ವಿ ಚಿಕಿತ್ಸೆ

    ಮೆಡಿಕವರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಕೀಹೋಲ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡ ಕ್ಯಾನ್ಸರ್‌ನ ಯಶಸ್ವಿ ಚಿಕಿತ್ಸೆ

    ವೈಟ್ ಫೀಲ್ಡ್: ಬೆಂಗಳೂರಿನ ಮೆಡಿಕವರ್ ಆಸ್ಪತ್ರೆಯ ತಜ್ಞ ವೈದ್ಯರ ತಂಡವು 48 ವರ್ಷದ ಮಹಿಳೆಯೊಬ್ಬರಿಗೆ ಮೂತ್ರಪಿಂಡದ ಕ್ಯಾನ್ಸರ್ (Renal Cell Carcinoma) ಸೇರಿದಂತೆ ಹಲವು ಗಂಭೀರ ಆರೋಗ್ಯ ಸಮಸ್ಯೆಗಳ ನಡುವೆಯೂ ಅತ್ಯಾಧುನಿಕ ಮಿನಿಮಲಿ ಇನ್ವೇಸಿವ್ ರ್ಯಾಡಿಕಲ್ ನೆಫ್ರೆಕ್ಟಮಿ (Keyhole Radical Nephrectomy) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿ ರೋಗಿಗೆ ಹೊಸ ಜೀವನ ನೀಡಿದೆ.

    ರೋಗಿಯು ಹಲವು ತಿಂಗಳುಗಳಿಂದ ಮೂತ್ರದಲ್ಲಿ ರಕ್ತಸ್ರಾವ (Chronic Hematuria), ಕುತ್ತಿಗೆಯಲ್ಲಿ ಗಡ್ಡೆ, ಅಧಿಕ ರಕ್ತದೊತ್ತಡ, ತೀವ್ರ ರಕ್ತಹೀನತೆ ಹಾಗೂ ಹೊಟ್ಟೆ ಭಾಗದಲ್ಲಿ ನೋವಿನಿಂದ ಬಳಲುತ್ತಿದ್ದರು. ಪರೀಕ್ಷೆಗಳ ವೇಳೆ ಎಡ ಮೂತ್ರಪಿಂಡದಲ್ಲಿ ಸುಮಾರು 7 ಸೆಂ.ಮೀ. ಗಾತ್ರದ ಗಡ್ಡೆ ಪತ್ತೆಯಾಗಿದ್ದು, ಅದು ರೆನಲ್ ಸೆಲ್ ಕಾರ್ಸಿನೋಮಾ (ಮೂತ್ರಪಿಂಡದ ಕ್ಯಾನ್ಸರ್) ಎಂದು ದೃಢಪಟ್ಟಿತು. ಜೊತೆಗೆ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಡೈಲೇಟೆಡ್ ಕಾರ್ಡಿಯೋಮಯೋಪತಿ, ಬಲಭಾಗದ ಥೈರಾಯ್ಡ್ ಗಡ್ಡೆ ಹಾಗೂ ಗರ್ಭಾಶಯದ ಅಡಿನೋಮಿಯೋಸಿಸ್ ಸಮಸ್ಯೆಗಳೂ ಕಂಡುಬಂದಿದ್ದವು.

    ಮೊದಲ ಹಂತದಲ್ಲಿ ರೋಗಿಯ ರಕ್ತದೊತ್ತಡ, ರಕ್ತಹೀನತೆ ಹಾಗೂ ಹೃದಯದ ಸ್ಥಿತಿಯನ್ನು ನಿಯಂತ್ರಿಸಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೃದಯ ತಜ್ಞರು ಸೇರಿದಂತೆ ವಿವಿಧ ವಿಭಾಗಗಳ ವೈದ್ಯರ ಸಮನ್ವಯದೊಂದಿಗೆ ಶಸ್ತ್ರಚಿಕಿತ್ಸೆಗೆ ಸಿದ್ಧಗೊಳಿಸಿ, ಡಾ. ಪ್ರಮೋದ್ ಎಸ್. ಡಾ ಟಿ ಜೆ ಪ್ರದೀಪ್ ಕುಮಾರ್ ನೇತೃತ್ವದಲ್ಲಿ ಅತ್ಯಾಧುನಿಕ ಕೀಹೋಲ್ ತಂತ್ರಜ್ಞಾನ ಬಳಸಿ ಮೂತ್ರಪಿಂಡವನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು.

    ಶಸ್ತ್ರಚಿಕಿತ್ಸೆಯ ನಂತರ ರೋಗಿಯ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬಂದಿದ್ದು, ಯಾವುದೇ ಗಂಭೀರ ತೊಂದರೆಗಳಿಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಕುರಿತು ಮಾತನಾಡಿದ ರೋಗಿ ಪಟ್ಚಿ ಪದ್ಮಜಾ ಮೆಡಿಕವರ್ ವೈದ್ಯರಿಂದ ಇಂದು ನನ್ನ ಜೀವ ಉಳಿದು ನಾನು ಮತ್ತು ನಮ್ಮ ಕುಟುಂಬ ನಿಮ್ಮ ಮುಂದೆ ಬಂದಿದ್ದೆವೆ. ಆಸ್ಪತ್ರೆಗೆ ಬಂದಾಗ ನಮ್ಮಲ್ಲಿ ತುಂಬಾ ಭಯದ ವಾತಾವರಣ ಇತ್ತು ಮತ್ತು ಆರ್ಥಿಕವಾಗಿಯೂ ನಾವು ಸದೃಢರಾಗಿರಲಿಲ್ಲ. ಆದರೆ ಇಲ್ಲಿರುವ ವೈದ್ಯರ ತಂಡ ಮತ್ತು ಆಡಳಿತ ಮಂಡಳಿ ನೀಡಿದ ಭರವಸೆಗೆ ಒಪ್ಪಿಕೊಂಡು ಚಿಕಿತ್ಸೆ ಪಡೆದು ಇಂದು ನಿಮ್ಮ ಮುಂದಿದ್ದೆವೆ ಎಂದು ಭಾವನಾತ್ಮಕವಾಗಿ ತಮ್ಮ ಮನದಾಳದ ಮಾತನಾಡಿದರು.

    ಇನ್ನು ಈ ಕುರಿತು ಮಾತನಾಡಿದ ಡಾ. ಪ್ರಮೋದ್ ಎಸ್. ಯೂರಾಲಜಿಸ್ಟ್ ಮತ್ತು ರೋಬೋಟಿಕ್ ಸರ್ಜನ್, “ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಬೆನ್ನು ಅಥವಾ ಹೊಟ್ಟೆ ಭಾಗದಲ್ಲಿ ನಿರಂತರ ನೋವು, ಕಾರಣವಿಲ್ಲದೆ ತೂಕ ಇಳಿಯುವುದು ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಆರಂಭಿಕ ಹಂತದಲ್ಲೇ ರೋಗ ಪತ್ತೆಯಾದರೆ ಅತ್ಯಾಧುನಿಕ ಕೀಹೋಲ್ ಅಥವಾ ರೋಬೋಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಸುರಕ್ಷಿತವಾಗಿ ಚಿಕಿತ್ಸೆ ನೀಡಿ ಉತ್ತಮ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.

    ಇನ್ನು ಮೆಡಿಕವರ ಆಸ್ಪತ್ರೆಯ ಮುಖ್ಯಸ್ಥರಾದ ಸಿದ್ದಾರೆಡ್ಡಿ ಮಾತನಾಡಿ ಮೆಡಿಕವರ್ ಆಸ್ಪತ್ರೆ ಅತ್ಯಾಧುನಿಕ ತಂತ್ರಜ್ಞಾನ, ಅನುಭವಿ ತಜ್ಞ ವೈದ್ಯರ ತಂಡ ಹಾಗೂ ಬಹುಶಾಖಾ ಚಿಕಿತ್ಸಾ ವ್ಯವಸ್ಥೆಯ ಮೂಲಕ ಸಂಕೀರ್ಣ ಮೂತ್ರಪಿಂಡದ ಕ್ಯಾನ್ಸರ್ ಪ್ರಕರಣಗಳಿಗೂ ಸಮಗ್ರ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡುತ್ತಿದೆ ಎಂದು ಹರ್ಷವ್ಯಕ್ತಪಡಿಸಿದರು.

  • ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ವಿದ್ಯಾರ್ಥಿಗಳ ಧ್ವನಿ ಜಾಗೃತಿ ಸಮಾವೇಶ

    ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ವಿದ್ಯಾರ್ಥಿಗಳ ಧ್ವನಿ ಜಾಗೃತಿ ಸಮಾವೇಶ

    ಕೆ.ಆರ್.ಪುರ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲ ಒಂದು ಕೋಟಿ ಪರಿಹಾರ ನೀಡುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಕೆಪಿಸಿಸಿ ಅಧ್ಯಕ್ಷ ಬಿ‌.ಕೆ.ಹರಿಪ್ರಸಾದ್ ಹೇಳಿದರು.

    ಕೆ.ಆರ್.ಪುರದ ದೇವಸಂದ್ರದಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿಗಳ ಧ್ವನಿ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

    ನೀಟ್ ಪ್ರೆಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಆತ್ಮ ಸ್ಥೈರ್ಯ ಕಳೆದುಕೊಂಡು ತಮ್ಮ ಭವಿಷ್ಯದ ಆತಂಕದಿಂದ ಇಪ್ಪತ್ತೆರಡು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಪ್ರೆಶ್ನೆ ಪತ್ರಿಕೆ ಸೋರಿಕೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿ ಮುಳುಗಿದೆ. ಸುಮಾರು 152 ಪ್ರಶ್ನೆ ಪತ್ರಿಕೆ ಸೋರಿಕೆಯಾದರೂ ಯಾವುದೇ ನಾಚಿಕೆ ಮಾನ ಮರ್ಯಾದೆ ಇಲ್ಲದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಧಟತನ ಹೇಳಿಕೆ ನೀಡುತ್ತ ಬಂದಿರುವುದು ನಾಚಿಕೆ ಗೇಡಿನ ಸಂಗತಿ ಎಂದರು.



    ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಯುವಕರು ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವವನ್ನು ಉಳಿಸಲು ಉಜ್ವಲ ಭವಿಷ್ಯ ಕಾಪಾಡುವ ಸಲುವಾಗಿ ಎಲ್ಲಾ ರೀತಿಯ ಹೋರಾಟ ಮಾಡಿದ ನಂತರ ನೈತಿಕ ಹೋಣೆ ಹೊತ್ತು ರಾಜೀನಾಮೆ ನೀಡಿರುವುದು ಯುವ ಸಮುದಾಯಕ್ಕೆ ಇದು ಬಹುದೊಡ್ಡ ಕೊಡುಗೆಯಾಗಿದೆ. ವಿದ್ಯಾರ್ಥಿಗಳ ಮೇಲೆ ಅಶುರ್ವಾಯು, ಗೋಲಿಬಾರ್, ಲಾಠಿ ಮಾಡಿದಂತಹ ಅಮಿತ್ ಷಾ ಕೂಡ ರಾಜೀನಾಮೆ ನೀಡಬೇಕು. ಭವಿಷ್ಯದ ವಿದ್ಯಾರ್ಥಿಗಳ ಬೆಂಬಲಕ್ಕೆ ಸದಾ ಕಾಂಗ್ರೆಸ್ ಬೆಂಬಲವಾಗಿ ನಿಲ್ಲಲಿದೆ. ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಕುಗ್ಗಬಾರದು ಎಂದು ಅವರ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೇವೆ ಎಂದರು.

    ಹೋರಾಟ ಮಾಡಿದ ಯುವಕರು ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಪೆಲೆಟ್ ಗನ್ ನಿಂದ ಹಲ್ಲೆಯಿಂದ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದಾರೆ. ಕೈ ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಗಾಯಳುಗಳಿಗೂ ಪರಿಹಾರ ನೀಡಬೇಕು. ಸಾವಿರಾರು ವಿದ್ಯಾರ್ಥಿಗಳ ಮೇಲೆ ಪೋಲಿಸರು ಎಫ್ ಐಆರ್ ದಾಖಲು ಮಾಡಿದ್ದಾರೆ. ಎಫ್ಐಆರ್ ಹಿಂಪಡೆಯಬೇಕು. ಪ್ರಜಾಪ್ರಭುತ್ವದಲ್ಲಿ ಹೋರಾಟ ನಮ್ಮ ಸಂವಿಧಾನದ ಹಕ್ಕು. ನಮ್ಮ ಹಕ್ಕನ್ನು ಕಸಿಯುವ ಶಕ್ತಿಯನ್ನು ಸೋಲಿಸುವ ಕೆಲಸ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂಧರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ದತ್ತಾ, ಬೆಂಗಳೂರು ಪೂರ್ವ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು,ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ ಗೌಡ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಮೇಡಹಳ್ಳಿ ರಾಖಿ, ಅಗರ ಪ್ರಕಾಶ್, ಅರಳಪ್ಪ ಇದ್ದರು.

  • 7 ತಿಂಗಳ ಹಸುಗೂಸಿನ ಮುಂದೆಯೇ ತಾಯಿ ಆತ್ಮಹ*ತ್ಯೆ!

    7 ತಿಂಗಳ ಹಸುಗೂಸಿನ ಮುಂದೆಯೇ ತಾಯಿ ಆತ್ಮಹ*ತ್ಯೆ!

    ಆನೇಕಲ್‌ : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು 7 ತಿಂಗಳ ಹಸುಗೂಸಿನ ಮುಂದೆಯೇ ತಾಯಿ ಆತ್ಮಹ*ತ್ಯೆಗೆ ಶರಣಾಗಿರುವ ದಾರುಣ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಯಸಂದ್ರದಲ್ಲಿ ನಡೆದಿದೆ.

    ಸಾನಿಕ ಗೌಡ ಆತ್ಮಹ*ತ್ಯೆಗೆ ಶರಣಾದ ದುರ್ದೈವಿ. ಚಿಕ್ಕಮಗಳೂರು ಮೂಲದ ಶರಣ್ ಗೌಡ ಎಂಬುವವರನ್ನು ಸಾನಿಕ ಗೌಡ ಕಳೆದ ಒಂದು ವರ್ಷ ನಾಲ್ಕು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

    ಬಾಣಂತನಕ್ಕಾಗಿ ತವರು ಮನೆಗೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ.

    ಪತಿ ಶರಣ್ ಗೌಡ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪ ಕೇಳಿಬಂದಿದ್ದು, ಪ್ರಿಯತಮೆಯೊಂದಿಗೆ ಮಾತನಾಡಿರುವ ವಿಡಿಯೋವನ್ನು ಪತ್ನಿಗೆ ಕಳುಹಿಸಿದ್ದ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಬೇಸತ್ತಿದ್ದ ಸಾನಿಕ ಗೌಡ, ಪತಿ ಶರಣ್‌ಗೆ ವಿಡಿಯೋ ಕಾಲ್ ಮಾಡಿ ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ತವರು ಮನೆಯಲ್ಲೇ ಫ್ಯಾನ್‌ಗೆ ನೇ*ಣು ಬಿಗಿದುಕೊಂಡು ಆತ್ಮಹ*ತ್ಯೆಗೆ ಶರಣಾಗಿದ್ದಾರೆ.

    ಘಟನೆ ಕುರಿತು ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ಪರಪ್ಪನ ಅಗ್ರಹಾರ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಅಕ್ರಮ ಹಪ್ತಾ ವಸೂಲಿಗೆ  ಕಡಿವಾಣ ಹಾಕಿ: ಕೆ ಆರ್.ಪುರ ಸಂತೆ ವ್ಯಾಪಾರಸ್ಥರಿಂದ ಪ್ರತಿಭಟನೆ

    ಅಕ್ರಮ ಹಪ್ತಾ ವಸೂಲಿಗೆ ಕಡಿವಾಣ ಹಾಕಿ: ಕೆ ಆರ್.ಪುರ ಸಂತೆ ವ್ಯಾಪಾರಸ್ಥರಿಂದ ಪ್ರತಿಭಟನೆ

    ಕೆ.ಆರ್.ಪುರ:ಕೆ ಆರ್ ಪುರ ಸಂತೆ ಮಾರುಕಟ್ಟೆ ಹಾಗೂ ಮಾರುಕಟ್ಟೆಯಿಂದ ಎರಡು ಕಿಲೋಮೀಟರ್ ವರೆಗೆ ಜಿಬಿಎ ಅಧಿಕಾರಿಗಳ ಕುಮ್ಮಕ್ಕಿನಿಂದ ಗುತ್ತಿಗೆದಾರ ವ್ಯಾಪಾರಸ್ಥರಿಂದ ಹಪ್ತ ವಸೂಲತಿ ಮಾಡುತ್ತಿದ್ದು,ಇದನ್ನು ನಿಲ್ಲಿಸುವಂತೆ ಒತ್ತಾಯಿಸಿ ಕೆ.ಆರ್.ಪುರದ ಸಂತೆ ಬಳಿ ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಸದಸ್ಯರು ಸಂತೆ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.

    ಅಕ್ರಮ ವಸೂಲಿಗೆ ಕಡಿವಾಣ ಹಾಕಬೇಕು, ಜಿಬಿಎ ಷರತ್ತುಗಳನ್ನು ಉಲ್ಲಂಘಿಸಿದ್ದು ಕೂಡಲೆ ಗುತ್ತಿಗೆಯನ್ನು ರದ್ದು ಗೊಳಿಸಿ ಅವರ ಮುಂಗಡ ಹಣವನ್ನು ಮುಟ್ಟು ಗೋಲು ಹಾಕಿಕೊಂಡು ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಬಿಎ ಮಹದೇವಪುರ ವಲಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್.ಹಾಗು ಕೆ.ಆರ್.ಪುರ ವಲಯ ಜಂಟಿ ಆಯಕ್ತರಾದ ಡಾ.ಸುಧಾ ಸ್ವಪ್ನ ರವರಿಗೆ ಮನವಿ ಸಲ್ಲಿಸಿದರು.

    ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎಲೆ.ಶ್ರೀನಿವಾಸ್ ಮಾತನಾಡಿ ಜಿಬಿಎ ಅಧಿಕಾರಿಗಳ ಕುಮ್ಮಕ್ಕಿನ ರಸ್ತೆ ಬದಿ ಅಕ್ರಮವಾಗಿ ವ್ಯಾಪಾರ ನಡಿತ್ತಿದ್ದಾರೆ,ಸಂತೆ ಜಾಗವನ್ನು ಹೊರತುಪಡಿಸಿ ಸಿಕ್ಕ ಸಿಕ್ಕ ಕಡೆ ಅಕ್ರಮ ಸುಂಕ ವಸೂಲಿ ಮಾಡುತ್ತಿದ್ದಾರೆಂದು ಆರೋಪಿಸಿದರು.

    ಕೆ.ಆರ್ ಪುರ ಸಂತೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿರುವ ನ್ಯಾಯಾಲಯ ಆದೇಶವನ್ನು ಉಲ್ಲಂಘಿಸಿ ಅಂಗಡಿ ಮಳಗೆಗಳನ್ನು ಅಕ್ರಮವಾಗಿ ದ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ

    ಕೆ.ಆರ್ ಪುರ ಸಂತೆಯಲ್ಲಿ ಯಾವುದೇ ರೀತಿಯ ಕಟ್ಟಡ ನಿರ್ಮಾಣ ಹಾಗೂ ಅಂಗಡಿ ತೆರವು ಮಾಡದಂತೆ ಈಗಿನ‌ ಗುತ್ತಿಗೆದಾರ ಅಂಜನಮೂರ್ತಿ ಸ್ವತಃ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯ ಯಥಸ್ಥಿತಿ ಕಾಪಾಡಲು ಆದೇಶಿಸಿದೆ, ಆದರೆ ದಾವೆ ಹೂಡಿರುವ ವ್ಯಕ್ತಿ ನ್ಯಾಯಾಲಯ ಅದೇಶವನ್ನು ಉಲ್ಲಂಘಿಸಿ ಅಂಗಡಿಗಳನ್ನು ದ್ವಂಸಗೊಳಿಸಿರುತ್ತಾನೆ ಎಂದು ಆರೋಪಿಸಿದರು.

    ನಗರದಲ್ಲಿ ಫುಟ್ ಪಾತ್ ತೆರವು ಕಾರ್ಯಾಚರಣೆ ನಡೆದಿದೆ, ಇದರ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ ಆದರೆ ಕೆ.ಆರ್ ಪುರ ಭಾಗದಲ್ಲಿ ಸಂತೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಾರೆ ಈ ಬಗ್ಗೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು ಮಾತ್ರ ಯಾಕೆ ಮೌನವಾಗಿದ್ದಾರೆ
    ಎಂದು ಪ್ರಶ್ನೆಮಾಡಿದರು.

    ರಸ್ತೆ ಸಂಚಾರದ ಜವಾಬ್ದಾರಿ ಟ್ರಾಫಿಕ್ ಇಲಾಖೆಗೆ ಸೇರಿದ್ದು, ಯಾವುದೇ ಕಾರಣಕ್ಕೂ ರಸ್ತೆ ಮೇಲೆ ಅಂಗಡಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

    ಗುತ್ತಿಗೆದಾರನ ಜೊತೆ ಜಿಬಿಎ ಅಧಿಕಾರಿಗಳು, ಸಂಚಾರಿ ಪೊಲೀಸರು ಶಾಮೀಲಾಗಿ ಪ್ರತಿ ತಿಂಗಳು ಅವರಿಂದ ಲಂಚದ ರೂಪದಲ್ಲಿ ಮಮೂಲಿ ಪಡೆದು ಇಲ್ಲಿ ನಡೆಯುವ ಎಲ್ಲಾ ಅಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಈ‌ ಹಿಂದೆ ಸಂತೆ ಜಾಗದಲ್ಲಿ ಸುಂಕ ವಸೂಲಿ ಸಂಬಂಧ ಜಂಟಿ ಆಯುಕ್ತರ ಸಮ್ಮುಖದಲ್ಲಿ ಅಳತೆ ಮಾಡಲಾಗಿದೆ, ಅದರಲ್ಲಿ 1.20 ಕಿಲೋ ಮೀಟರ್ ಬದಲು 3 ಕಿಲೋ ಮೀಟರ್ ನಷ್ಟು ವ್ಯಾಪ್ತಿ ಮೀರಿ ಪುಂಡ ಪೊಕರಿಗಳಿಂದ ಆಗುತ್ತಿರುವ ಅಕ್ರಮ ವಸೂಲಿ ಕಾರ್ಯವನ್ನು ತಪ್ಪಿಸಬೇಕು ಎಂದು ಹೇಳಿದರು.

    ತೆರವು ಮಾಡಿದ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಮಾಡದೆ
    ಅವರನ್ನ ಬೀದಿಗೆ ತಲ್ಲಿದ್ದಾರೆ ಎಂದು ಆರೋಪಿಸಿದರು.

  • ಜುಲೈ 25 ರಂದು ರಾಷ್ಟ್ರೀಯ ಭೋವಿ ಜನೋತ್ಸವ

    ಜುಲೈ 25 ರಂದು ರಾಷ್ಟ್ರೀಯ ಭೋವಿ ಜನೋತ್ಸವ

    ಕೆ.ಆರ್.ಪುರ: ಚಿತ್ರದುರ್ಗದ ಭೋವಿ ಗುರು ಪೀಠದ ಆವರಣದಲ್ಲಿ ಜುಲೈ 25 ರಂದು ರಾಷ್ಟ್ರೀಯ ಮಟ್ಟದ ಭೋವಿ ಜನೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಓಡ್ ಕಮ್ಯೂನಿಟಿ ಕೌನ್ಸಿಲ್ ಆಫ್ ಇಂಡಿಯಾ ಇಂಟರ್‌ನ್ಯಾಷನಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಿಟಾಚಿ ಮಂಜುನಾಥ್ ಅವರು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಗುರು ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ 17ನೇ ಪಟ್ಟಾಭಿಷೇಕದ ಮಹೋತ್ಸವ, ದೀಕ್ಷೆಯ 28ನೇ ಮಹೋತ್ಸವ, 40 ಜನ್ಮ ವರ್ಧಂತ್ಯುತ್ಸವ, ಪಿಯುಸಿಯಲ್ಲಿ ಶೇಕಡಾ 90 ಕ್ಕೂ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ, ಪ್ರೋತ್ಸಾಹಧನ ವಿತರಣೆ, ಉಚಿತ ಸಾಮೂಹಿಕ ವಿವಾಹ, ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

    ಜಿ.ಪರಮೇಶ್ವರ್ ಮುಖ್ಯ ಅತಿಥಿ ಗಳಾಗಿ ಆಗಮಿಸಲಿದ್ದಾರೆ ಎಂದರು. ಎಚ್.ವಿ.ವೆಂಕಟೇಶ್, ಶಿವರಾಜ ತಂಗಡಗಿ, ಮಾನಪ್ಪ ವಜ್ಜಲ್, ಎಂ. ಚಂದ್ರಪ್ಪ, ಎಸ್.ರಘು, ಮಂಜುಳಾ ಅರವಿಂದ ಲಿಂಬಾವಳಿ, ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ರಾಮಪ್ಪ, ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು, ರವಿಕುಮಾರ್ ಉಪಸ್ಥಿತರಿರುವರು. ಮಾಜಿ ಸಚಿವ ಅರವಿಂದ ಲಿಂಬಾವಳಿ ಅಧ್ಯಕ್ಷತೆ ವಹಿಸುವರು.

    40ಕ್ಕೂ ಹೆಚ್ಚು ವಿವಿಧ ಮಠಗಳ ಪೀಠಾಧ್ಯಕ್ಷರು, ರಾಷ್ಟ್ರೀಯ ಮಟ್ಟದ ಭೋವಿ ಜನಾಂಗದ ನಾಯಕರು, ಮಾಜಿ ಶಾಸಕರು ಭಾಗವಹಿಸುವರು ಇದೇ ವೇಳೆ ಸಮುದಾಯ ಅಭಿವೃದ್ಧಿಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದರು. ಓಡ್ ಕಮ್ಯೂನಿಟಿ ಕೌನ್ಸಿಲ್ ಆಫ್ ಇಂಡಿಯಾ ಇಂಟ‌ನ್ಯಾಷನಲ್ ರಾಷ್ಟ್ರೀಯ ಕಾರ್ಯದರ್ಶಿ ಮಾಕಳಿ ಎಚ್.ಪಿಯ

    ಸಮಾವೇಶ ದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಭಾಗವಹಿಸಲಿದ್ದು, ಎಲ್ಲರಿಗೂ ತಿಂಡಿ. ಊಟದ ವ್ಯವಸ್ಥೆ ಮಾಡಲಾಗಿದೆ. ಈ ಸಮಾವೇಶದ ಮೂಲಕ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಸಚಿವ ಸಂಪುಟದಲ್ಲಿ ಭೋವಿ ಜನಾಂಗದ ಇಬ್ಬರಿಗೆ ಸ್ನಾನ, ವಿಧಾನ ಪರಿಷತ್, ನಿಗಮ ಮಂಡಳಿಗಳಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದರಾದ ಜನಾರ್ಧನಸ್ವಾಮಿ, ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಮುನಿಮಾರಪ್ಪ, ಜಯ ರಾಮು, ಕನಕರಾಜು, ಹೇಮಂತ್, ಸೌಭಾಗ್ಯ, ರುಕ್ಕಿಣಿ, ಮೈಸೂರು ನಾರಾಯಣಸ್ವಾಮಿ, ಎಸ್‌ಡಿಡಿಪಿ ಚಂದ್ರಪ್ಪ ಮುಂತಾದವರು ಹಾಜರಿದ್ದರು.