ಮಹದೇವಪುರ: ಶವಸಂಸ್ಕಾರಕ್ಕೆ ಸೂಕ್ತ ಸ್ಮಶಾನವಿಲ್ಲದ ಕಾರಣ ಬೆಂಗಳೂರು ಪೂರ್ವ ತಾಲ್ಲೂಕಿನ ಪಣತ್ತೂರು ದಿನ್ನೆಯ ಸ್ಥಳೀಯರು ಪಣತ್ತೂರು ಟ್ರೀಪಾರ್ಕ್ ಮುಂಭಾಗದಲ್ಲೇ ಶವವನ್ನಿಟ್ಟು ಅರಣ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಬೆಂಗಳೂರು ಪೂರ್ವ ತಾಲ್ಲೂಕಿನ ವರ್ತೂರು ಹೋಬಳಿಯ ಪಣತ್ತೂರು ಗ್ರಾಮದ ಸರ್ವೆ ನಂ. 52 ರಲ್ಲಿ ಒಟ್ಟು 33.12 ಎಕರೆ ಸರ್ಕಾರಿ ಗೋಮಾಳವಿದ್ದು, ಇದರಲ್ಲಿ ಆದಿಪರಾಶಕ್ತಿ ದೇವಸ್ಥಾನಕ್ಕೆ, ಆಟದ ಮೈದಾನಕ್ಕೆ ಹಾಗೂ ಸಾರ್ವಜನಿಕ ರಸ್ತೆ ಬಳಕೆಗೆ ಜಮೀನು ಮೀಸಲಿಡಲಾಗಿದೆ.
ಆದರೆ ನೂರಾರು ವರ್ಷಗಳಿಂದ ಪೂರ್ವಜರು ಶವಸಂಸ್ಕಾರಕ್ಕಾಗಿ ಬಳಸುತ್ತಿದ್ದ ಜಾಗದಲ್ಲಿ ಕನಿಷ್ಠ 2-3 ಎಕರೆ ಜಾಗವನ್ನು ರುದ್ರಭೂಮಿಗಾಗಿ ಮೀಸಲಿಡಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಬೆಂಗಳೂರು ನಗರ ಜಿಲ್ಲಾ ಸಂಚಾಲಕ ಗೋವಿಂದ್ ಕುಮಾರ್ ಅವರು ಆಗ್ರಹಿಸಿದರು.

“ಅನೇಕ ಕಡೆಗಳಲ್ಲಿ ದಲಿತ ಸಮುದಾಯದವರಿಗೆ ಅಂತ್ಯಸಂಸ್ಕಾರ ಮಾಡಲು ಸೂಕ್ತ ಜಾಗವಿಲ್ಲ. ಇದ್ದ ಅಲ್ಪ ಜಾಗವನ್ನೂ ಅರಣ್ಯ ಇಲಾಖೆ ಆಕ್ರಮಿಸಿಕೊಂಡು ಅಂತ್ಯಕ್ರಿಯೆಗೆ ಅವಕಾಶ ನೀಡುತ್ತಿಲ್ಲ” ಎಂದು ಅವರು ಆರೋಪಿಸಿದರು.
ಪಾರ್ಕ್ ಲೋಕಾರ್ಪಣೆ ಆದಾಗಲೂ ಸಹ ನಾಲ್ಕೈದು ಜನ ಬಂಡವಾಳಶಾಹಿಗಳ ಶವ ಸಂಸ್ಕಾರ ಮಾಡಲು ಅರಣ್ಯ ಇಲಾಖೆ ಅನುಮತಿ ನೀಡಿದರು. ಆದರೇ ಬಡವರು, ದಿನದಲಿತರಂಬ ಕಾರಣಕ್ಕೆ ಶವಸಂಸ್ಕಾರಕ್ಕೆ ಅಡ್ಡಿಪಡಿಸಿ ಸಂಜೆವರಿಗೂ ಶವವನ್ನಿಟ್ಟು ಪ್ರತಿಭಟಿಸಿದರು, ಮನವಿ ಮಾಡಿದರು, ಸತ್ತವರ ಕುಟುಂಬದವರ ದುಃಖವನ್ನು ಸಹ ಅರ್ಥಮಾಡಿಕೊಳ್ಳದೆ, ಶವವನ್ನು ಒಳಗೆ ಬಿಡದೆ ಪಕ್ಕದ ಊರಿಗೆ ಹೋಗಿ ಶವಸಂಸ್ಕಾರ ಮಾಡುವಂತಹ ಪರಿಸ್ಥಿತಿ ಎದುರಾಯಿತು.
ಈ ಸಂಬಂಧ ಜಿಲ್ಲಾಧಿಕಾರಿಗಳು, ಕಂದಾಯ ಮತ್ತು ಅರಣ್ಯಾಧಿಕಾರಿಗಳು, ಸಚಿವರು, ಶಾಸಕರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ತಹಶೀಲ್ದಾರ್ ಅಥವಾ ಜಿಲ್ಲಾಡಳಿತದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ರುದ್ರಭೂಮಿಗೆ ಜಾಗ ನಿಗದಿಪಡಿಸಬೇಕು ಅಥವಾ ಹೊಸ ಜಾಗ ಮಂಜೂರು ಮಾಡುವ ಭರವಸೆ ನೀಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬೆಂ. ಪೂ ತಾ ಸಂಘಟನಾ ಸಂಚಾಲಕರು, ಪಣತ್ತೂರು ದಿನ್ನೆ ಕೆ. ಮಂಜು, ಬಳಗೆರೆ ಪಾಪಣ್ಣ, ಸ್ಥಳೀಯರಾದ ಗಂಗಧಾರ್, ಬಳಗೆರೆ ಶಿವರಾಜ್, ರಮೇಶ್, ವರ್ತೂರು ಮಾದೇಶ್, ಮೋಹನ್ ಗೌಡ, ಮೂರ್ತಿ ಗೌಡ, ಮುನೇಶ್, ಜಿ ಎಸ್.ಎಂ ಮುನಿರಾಜು, ವೆಂಕಟಸ್ವಾಮಿ, ಗ್ರಾಮಸ್ಥರು ಮತ್ತಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Leave a Reply