Blog

  • ಮುತ್ಯಾಲಮ್ಮ ದೇವಿ ಜಾತ್ರೆಗೆ ಡೇಟ್ ಫಿಕ್ಸ್, ಇಂದು ನಡೆದ ಸಭೆಯಲ್ಲಿ ಮುಖಂಡರಿಂದ ತೀರ್ಮಾನ

    ಮುತ್ಯಾಲಮ್ಮ ದೇವಿ ಜಾತ್ರೆಗೆ ಡೇಟ್ ಫಿಕ್ಸ್, ಇಂದು ನಡೆದ ಸಭೆಯಲ್ಲಿ ಮುಖಂಡರಿಂದ ತೀರ್ಮಾನ

    ದೊಡ್ಡಬಳ್ಳಾಪುರ: ಇತಿಹಾಸ ಪ್ರಸಿದ್ದ ಗ್ರಾಮ ದೇವತೆ ಶ್ರೀ ಮುತ್ಯಾಲಮ್ಮ ದೇವಿ ಜಾತ್ರಾ ಮಹೋತ್ಸವವನ್ನು ಏಪ್ರಿಲ್ ನಲ್ಲಿ ನಡೆಸಲು ದೇವಾಲಯ ಆಡಳಿತ ಮಂಡಳಿ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ಸುತ್ತೂರುಗಳ ಮುಖಂಡರು ತೀರ್ಮಾನಿಸಿದ್ದಾರೆ.

    ನಗರದ ಮುತ್ಯಾಲಮ್ಮ ದೇವಾಲಯದ ಆವರಣದಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅರದಂತೆ ಏಪ್ರಿಲ್ 28ರಂದು ಮಂಗಳವಾರ ರಥೋತ್ಸವ, ಆರತಿಗಳು ಮತ್ತು ಏಪ್ರಿಲ್ 29 ರಂದು ಬುಧವಾರ ಹಗಲು ಪರಿಷೆಯನ್ನು ಪ್ರತಿವರ್ಷದಂತೆ ಈ ವರ್ಷವು ವಿಜೃಂಭಣೆಯಿಂದ ನೆರವೇರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ.

    ಜಾತ್ರ ನಿಗಧಿ ಮಾಡುವ  ಸಭೆಯಲ್ಲಿ ಶ್ರೀ ಮುತ್ಯಾಲಮ್ಮ ಸೇವಾ ಸಮಿತಿ ದತ್ತಿಯ ಅಧ್ಯಕ್ಷರಾದ ಎಚ್ ಹನುಮಂತು, ಗೌರವಾದ್ಯಕ್ಷರಾದ ಡಿ.ಬಿ.ಹನುಮಂತ ರಾವ್, ಉಪಾಧ್ಯಕ್ಷರಾದ ಕೆ. ನಾಗೇಶ್, ಕಾರ್ಯದರ್ಶಿ ಅರ್. ಪ್ರಭಾಕರ್, ಖಜಾಂಜಿ ಜೆ.ವೈ.ಮಲ್ಲಪ್ಪ,  ಕಾರ್ಯಾಧ್ಯಕ್ಷರು ಡಿ.ಎನ್ ತಿಮ್ಮರಾಜು, ಸಂಘಟನಾ ಕಾರ್ಯದರ್ಶಿ ಜೆ.ಕುಮಾರ್, ಅಪ್ಪಿ ವೆಂಕಟೇಶ್, ನಗರಸಭಾ ಸದಸ್ಯರಾದ ಟಿ.ಮಂಜುನಾಥ್, ಜಂಟಿ ಕಾರ್ಯದರ್ಶಿ, ಟಿ.ಗೋವಿಂದರಾಜು, ಪ್ರಧಾನ ಅರ್ಚಕರಾದ ಎಚ್.ಅನಂತ ಟ್ರಸ್ಟಿಗಳು ಹಾಗೂ ಏಳೂರ ಗ್ರಾಮಸ್ಥರು ಶಾಂತಿನಗರ  ಸಾಂಸ್ಕೃತಿಕ ಕಲಾಸಂಘದ ಪದಾಧಿಕಾರಿಗಳು, ಏಳೂರಿನ ಗ್ರಾಮಗಳಾದ ದರ್ಗಾಜೋಗಿಹಳ್ಳಿ, ರೋಜಿಪುರ, ಕುರುಬರಹಳ್ಳಿ,ಶಾಂತಿನಗರ, ನಾಗಸಂದ್ರ, ಕೊಡಿಗೇಹಳ್ಳಿ, ರೋಜಿಪುರ, ಕಛೇರಿಪಾಳ್ಯ ಸೇರಿದಂತೆ ನಗರ ಹಾಗೂ ತಾಲೂಕಿನ ಗ್ರಾಮಸ್ಥರು ಭಕ್ತಾದಿಗಳು ಭಾಗವಹಿಸಿದ್ದರು.

  • ಜನ ಸಹಯೋಗ್ ಸಂಘಟನೆ ವತಿಯಿಂದ ಶ್ರೀರಾಮ ನವಮಿ ರಥಯಾತ್ರೆ.. ಬೀದಿ ಬೀದಿಗಳಲ್ಲಿ ಜೈ ಶ್ರೀರಾಮ್ ಘೋಷಣೆ.

    ಮಹದೇವಪುರ: ಮಹದೇವಪುರ: ಶ್ರೀ ರಾಮನವಮಿ ಅಂಗವಾಗಿ ಹೂಡಿ ಗ್ರಾಮದಲ್ಲಿ ಜನ ಸಹಯೋಗ ಸಂಘಟನೆ ಕಾರ್ಯಕರ್ತರು ಶ್ರೀ ರಾಮನ ಮೂರ್ತಿಯನ್ನು ತೆರೆದ ಪಲ್ಲಕ್ಕಿ ವಾಹನದಲ್ಲಿಟ್ಟುಕೊಂಡು ಶ್ರೀ ರಾಮನಿಗೆ ಜೈ ಕಾರ ಹಾಕುತ್ತಾ ಸಾವಿರಾರು ಯುವಕರು ಬೈಕ್ ರ್ಯಾಲಿ ಕೈಗೊಳ್ಳುವ ಮೂಲಕ ಅದ್ದೂರಿಯಾಗಿ ಶ್ರೀ ರಾಮನ ರಥಯಾತ್ರೆ ನಡೆಸಿದರು.

    ಮೊದಲಿಗೆ ಹೂಡಿ ಸ್ಪೋರ್ಟ್ಸ್ ಕ್ಲಬ್ ಬಳಿಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ವಿಷೇಶ ಪೂಜೆ ಸಲ್ಲಿಸಿ ಶ್ರೀ ರಾಮನ ರಥಯಾತ್ರೆಗೆ ಚಾಲನೆ ನೀಡಿದರು.

    ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು, ಮರ್ಯಾದೆ ಪುರುಷೋತ್ತಮ ಶ್ರೀರಾಮಚಂದ್ರರ ಆದರ್ಶಗಳು ಸಮಾಜಕ್ಕೆ ದಾರಿ ತೋರಿಸುವಂತಿವೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಜನ ಸಹಯೋಗ್ ಸಂಘಟನ್ ಅಧ್ಯಕ್ಷ ಬೀರ್ ಬಹದ್ದೂರ್ ಸಿಂಗ್, ಕಳೆದ ಎಂಟು ವರ್ಷಗಳಿಂದ ಶ್ರೀರಾಮನವಮಿ ಆಚರಣೆಯನ್ನು ಭವ್ಯವಾಗಿ ನಡೆಸಿಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದರು.

    ಶೋಭಾಯಾತ್ರೆಯು ಹೂಡಿ ಪ್ರದೇಶದಿಂದ ಪ್ರಾರಂಭವಾಗಿ ತಿಗಳರಪಾಳ್ಯ, ರಾಜಪಾಳ್ಯ, ಐಟಿಪಿಎಲ್, ವೈಟ್‌ಫೀಲ್ಡ್, ವರ್ತೂರು ಕೊಡಿ, ಕುಂದಲಹಳ್ಳಿ ಗೇಟ್,ಮಾರತಹಳ್ಳಿ, ಟಿನ್ ಫ್ಯಾಕ್ಟರಿ, ಕೆ.ಆರ್.ಪುರಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿತು.

    ಈ ವೇಳೆ ನೂರಾರು ಯುವಕರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಭಕ್ತಿಪೂರ್ವಕವಾಗಿ ಪಾಲ್ಗೊಂಡರು.
    ಅಲ್ಲಲ್ಲಿ ಮಜ್ಜಿಗೆ, ಪಾನಕ, ಕಮೂಲಕರಿ ವಿತರಣೆ ಮಾಡಲಾಯಿತು.

    ಕಾರ್ಯಕ್ರಮದಲ್ಲಿ ಮಹದೇವಪುರ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ ಗ್ರಾಮಾಂತರ ಅಧ್ಯಕ್ಷ ಹೂಡಿ ಪಿಳ್ಳಪ್ಪ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಎಲ್. ರಾಜೇಶ್
    ಸಂಘದ ಉಪಾಧ್ಯಕ್ಷರಾದ ರಾಜೇಶ್ ಕುಮಾರ್,
    ಸುನೀಲ್ ಸಿಂಗ್, ಪ್ರಭಾರಿ ಸಂತೋಷ್ ಚೌಧರಿ, ಪಂಕಜ್ ಠಾಕೂರ್, ಹಾಗೂ ಸಂಘಟನೆಯ ಇತರೆ ಸದಸ್ಯರು ಹಾಜರಿದ್ದರು.

  • ಅಬಕಾರಿ ಇಲಾಖಾ ಅಧಿಕಾರಿಳಿಂದ 111 ಕೆ.ಜಿ ಗಾಂಜಾ ನಾಶ

    ಅಬಕಾರಿ ಇಲಾಖಾ ಅಧಿಕಾರಿಳಿಂದ 111 ಕೆ.ಜಿ ಗಾಂಜಾ ನಾಶ

    ಬೆಂ.ಗ್ರಾ.ಜಿಲ್ಲೆ : ಜಿಲ್ಲೆಯಲ್ಲಿ ಅಬಕಾರಿ ಇಲಾಖಾ ವತಿಯಿಂದ ವಿವಿಧ 47 ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ 111.355 ಕೆ.ಜಿ ಗಾಂಜಾವನ್ನು ಬೆಂಗಳೂರು ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತರ (ಜಾ&ತ) ಅಧ್ಯಕ್ಷತೆಯಲ್ಲಿ ಸೆಂಚುರಿ ರೀಫೈನರೀಸ್ ಪ್ರೈ.ಲಿಮಿಟೆಡ್, ಫ್ಲ್ಯಾಟ್ ನಂ.17A & B, KIADB ಇಂಡಸ್ಟ್ರಿಯಲ್ ಏರಿಯಾ, ಹೊಸಕೋಟೆ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಾಶಪಡಿಸಲಾಗಿದೆ.

    ಈ ಸಂಧರ್ಭದಲ್ಲಿ ಗ್ರಾಮಾಂತರ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಡಾ.ಸಿ ಎಚ್ ಬಾಲಕೃಷ್ಣ, ಗ್ರಾಮಾಂತರ ಅಬಕಾರಿ ಉಪ ಆಯುಕ್ತರಾದ ಎಂ ರವೀಂದ್ರ, ಚಿಕ್ಕಬಳ್ಳಾಪುರ ಅಬಕಾರಿ ಉಪ ಆಯುಕ್ತರಾದ ಜಿ.ಪಿ ನರೇಂದ್ರ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲೆ ಅಬಕಾರಿ ಉಪ ಆಯುಕ್ತ ಎಸ್ ಬಸವರಾಜ್, ತುಮಕೂರು ಜಿಲ್ಲೆ ಅಬಕಾರಿ ಉಪ ಆಯುಕ್ತರಾದ ಭರತೇಶ್ ಸೇರಿದಂತೆ ಅಬಕಾರಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

  • ದೊಡ್ಡಬಳ್ಳಾಪುರ: ಮಹಿಳೆಗೆ ಕೋಳಿ ಸಾಗಿಸುವ ವಾಹನ ಡಿಕ್ಕಿ, ಮಹಿಳೆ ಸಾವು, ಡ್ರೈವರ್ ಪೊಲೀಸರಿಗೆ ಶರಣು

    ದೊಡ್ಡಬಳ್ಳಾಪುರ: ಮಹಿಳೆಗೆ ಕೋಳಿ ಸಾಗಿಸುವ ವಾಹನ ಡಿಕ್ಕಿ, ಮಹಿಳೆ ಸಾವು, ಡ್ರೈವರ್ ಪೊಲೀಸರಿಗೆ ಶರಣು

    ದೊಡ್ಡಬಳ್ಳಾಪುರ: ಕೋಳಿ ಸಾಗಿಸುವ ವಾಹನವೊಂದು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೂ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಹಮಾಮ್ ಗೇಟ್ ಬಳಿ ಮಾ.26ರ ಗುರುವಾರ ರಾತ್ರಿ 9.ಗಂಟೆ ಸುಮಾರಿಗೆ ನಡೆದಿದೆ.

    ಮೃತರನ್ನು ಲಕ್ಷ್ಮೀದೇವಮ್ಮ (60)ವರ್ಷ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯು ಕೋಲಾರ ಮೂಲದವರಾಗಿದ್ದು ದೊಡ್ಡಬಳ್ಳಾಪುರದಲ್ಲಿ ನೆಲೆಸಿದ್ದರು ಎಂದು ತಿಳಿದುಬಂದಿದೆ.

    ಅಪಘಾತವೆಸಗಿದ ಡ್ರೈವರ್ ಭಯಭೀತನಾಗಿ ನೇರವಾಗಿ  ನಗರ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

  • ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಹುಂಡಿ ಎಣಿಕೆ: 39 ಲಕ್ಷಕ್ಕು ಅಧಿಕ ಮೊತ್ತದ ಕಾಣಿಕೆ ಸಂಗ್ರಹ

    ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಹುಂಡಿ ಎಣಿಕೆ: 39 ಲಕ್ಷಕ್ಕು ಅಧಿಕ ಮೊತ್ತದ ಕಾಣಿಕೆ ಸಂಗ್ರಹ

    ದೊಡ್ಡಬಳ್ಳಾಪುರ; ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಇಂದು ನಡೆದ ಕಾಣಿಕೆ ಹುಂಡಿ ಎಣಿಕೆ ಕಾರ್ಯದಲ್ಲಿ 39.49,549 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

    ಗುರುವಾರ ಹುಂಡಿಯಲ್ಲಿ ಸಂಗ್ರಹವಾಗಿದ್ದ ಕಾಣಿಕೆ ಹಣವನ್ನು ಎಣಿಕೆ ಮಾಡಲಾಯಿತು. ಹುಂಡಿಯಲ್ಲಿ 39.49,549 ನಗದು, 04 ಗ್ರಾಂ ಚಿನ್ನ, 830 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

    ಹುಂಡಿ ಎಣಿಕೆ ಕಾರ್ಯದಲ್ಲಿ ದೇವಾಲಯದ ಕಾರ್ಯದರ್ಶಿ ಹಾಗೂ ಉಪ ಆಯುಕ್ತ ಪಿ. ದಿನೇಶ್, ದೇವಾಲಯದ ಉಪ ಕಾರ್ಯದರ್ಶಿ ಜಿ.ಜೆ .ಹೇಮಾವತಿ, ಪ್ರಧಾನ ಅರ್ಚಕ ಗುರುರಾಜ್ ಶರ್ಮ, ಸೂಪರ್ ಡೆಂಟ್ ಪ್ರಮೋದ್, ಪ್ರಾಧಿಕಾರ ಸದಸ್ಯರಾದ ಜೆ.ಎನ್.ರಂಗಪ್ಪ, ಎಸ್, ರವಿ, ಲಕ್ಷ್ಮನಾಯಕ್, ಆರ್. ವಿ.ಮಹೇಶ್, ಕುಮಾ‌ರ್, ಹೇಮಲತಾ ರಮೇಶ್, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ದೇವಾಲಯಕ್ಕೆ ಬಂದ ಭಕ್ತಾದಿಗಳ ಸಮ್ಮುಖದಲ್ಲಿ ಹುಂಡಿ ಎಣಿಕೆ ಮಾಡಲಾಯಿತು.

  • ದೊಡ್ಡಬಳ್ಳಾಪುರ: 40 ಎಕರೆ ಬೆಳೆಗೆ ಬೆಂಕಿ, ಸುಟ್ಟು ಕರಕಲಾದ ಮರ ಗಿಡಗಳು

    ದೊಡ್ಡಬಳ್ಳಾಪುರ: 40 ಎಕರೆ ಬೆಳೆಗೆ ಬೆಂಕಿ, ಸುಟ್ಟು ಕರಕಲಾದ ಮರ ಗಿಡಗಳು

    ದೊಡ್ಡಬಳ್ಳಾಪುರ: ತಾಲ್ಲೂಕಿನ ಆರೂಢಿ ಗ್ರಾಮದ ಹೊರವಲಯದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸುಮಾರು 40ಕ್ಕೂ ಹೆಚ್ಚು ಎಕರೆ ಜಮೀನನಲ್ಲಿ ಸಮೃದ್ದವಾಗಿ ಬೆಳೆದುನಿಂತಿದ್ದ  ಅಡಿಗೆ, ತೆಂಗು, ಜಮ್ಮು ನೇರಳೆ ಗಿಡಗಳು ಸಂಪುರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಇಂದು ನಡೆದಿದೆ.

    ಈ ಜಮಿನು ಬೆಂಗಳೂರು ಮೂಲದ ನಾಗರಾಜು ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಘಟನೆಯಿಂದ ಸುಮಾರು 48 ಎಕರೆ ಜಮೀನಲ್ಲಿ ಬೆಳೆಯಲಾಗಿದ್ದ 20 ಎಕರೆ ಮಾವು, ತೆಂಗು, ಅಡಿಕೆ, 28 ಎಕರೆ ಜಮ್ಮು ನೇರಳೆ ಮರಗಳು, ಅಡಿಕೆ ಗಿಡಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

    ಅಲ್ಲದೆ 5 ಲಕ್ಷ ಮೌಲ್ಯದ ಹನಿ ನೀರಾವರಿ ಘಟಕಕ್ಕೆ ಅಳವಡಿಸಿದ್ದ ಪೈಪ್ ಲೈನ್ ಸುಟ್ಟು ಭಸ್ಮವಾಗಿದೆ.  ಬೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯ ಆರೋಪಿಸಿದ್ದಾರೆ. ಬೆಂಕಿಯನ್ನು ನಂದಿಸಲು ಅಗ್ನಿ ಶಾಮಕ ದಳದ ಸಹಾಯವಾಣಿಗೆ ಕರೆ ಮಾಡಿದರು ಸಂಪರ್ಕ ಸಾಧ್ಯವಾಗಿಲ್ಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಭಯೋತ್ಪಾದಕರ ನಂಟು ಆರೋಪ: ಬಳ್ಳಾರಿಯ ಯುವಕ ಸೇರಿ ದೇಶಾದ್ಯಂತ 12 ಮಂದಿ ಬಂಧನ

    ಬಳ್ಳಾರಿ: ಮೂಲಭೂತವಾದದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಹಾಗೂ ಭಯೋತ್ಪಾದಕರ ನಂಟು ಶಂಕೆ ಹಿನ್ನೆಲೆಯಲ್ಲಿ ಬಳ್ಳಾರಿ ಮೂಲದ ಓರ್ವ ಯುವಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ 12 ಮಂದಿಯನ್ನು ಆಂಧ್ರಪ್ರದೇಶದ ವಿಜಯವಾಡ ಪೊಲೀಸರು ಬಂಧಿಸಿದ್ದಾರೆ.

    ಬಳ್ಳಾರಿ ನಗರದ ಅಬ್ದುಲ್ ಸಲಾಮ್ (36) ರಾಜ್ಯದಲ್ಲಿ ಅರೆಸ್ಟ್ ಆಗಿರುವ ಆರೋಪಿ. ಕರ್ನಾಟಕ ಸೇರಿದಂತೆ ಆಂಧ್ರ, ಬಿಹಾರ, ಮಹಾರಾಷ್ಟ್ರ ಒಳಗೊಂಡು ವಿವಿಧ ರಾಜ್ಯಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

    ಅಬ್ದುಲ್ ಸಲಾಮ್ ಕುರಿತ ಖಚಿತ ಮಾಹಿತಿ ಆಧರಿಸಿ ಬಳ್ಳಾರಿಗೆ ಬಂದಿದ್ದ ಆಂಧ್ರ ಪ್ರದೇಶ ಪೊಲೀಸರು, ಕೌಲ್ ಬಜಾರ್ ಪೊಲೀಸ್ ಠಾಣೆಯ ಸಿಬ್ಬಂದಿ ನೆರವಿನೊಂದಿಗೆ ಅಬ್ದುಲ್ ಸಲಾಮ್ ನನ್ನು ಬಂಧಿಸಿದ್ದಾರೆ. ಪಂಚನಾಮೆ ಬಳಿಕ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆ ಆಂಧ್ರ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

    ಸಾಮಾಜಿಕ ಮಾಧ್ಯಮದಲ್ಲಿ ಉಗ್ರವಾದ ಹರಡುವುದು ಮತ್ತು ಭಯೋತ್ಪದನಾ ಸಂಘಟನೆಗಳ ನಂಟು ಹೊಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಈ ಬಗ್ಗೆ ಮಾರ್ಚ್ 23ರಂದು ವಿಜಯವಾಡ ಟೌನ್ ಠಾಣೆಯಲ್ಲಿ FIR ದಾಖಲಿಸಿ ತನಿಖೆ ಆರಂಭಿಸಿದ್ದರು.

    ಸರ್ಚ್ ವಾರೆಂಟ್ ಪಡೆದು ಕಾರ್ಯಾಚರಣೆಗಿಳಿದಿದ್ದ ಖಾಕಿ ಟೀಂ, ವಿಜಯವಾಡದ ವಿಂಚ್‌ಪೇಟ್ನಲ್ಲಿ ಪ್ರಮುಖ ಅರೋಪಿ ಮೊಹಮ್ಮದ್ ರೆಹಮತುಲ್ಲಾ ಷರೀಫ್ (23) ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಸಾಮಾಜಿಕ ಮಾಧ್ಯಮಗಳ ಮೂಲಕ ಸಿದ್ದಾಂತ ಮತ್ತು ಮೂಲಭೂತವಾದಿ ಐಎಸ್‌ಐಎಸ್ ಸಂಘಟನೆಗಳ ವಿಚಾರಧಾರೆ ಪ್ರಚಾರ ನಿರತರ ಬಗ್ಗೆ ಆತ ನೀಡಿದ್ದ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ 12 ಮಂದಿಯನ್ನು ಬಂಧಿಸಲಾಗಿದೆ.

    ತನಿಖೆಯಲ್ಲಿ ತಿಳಿದುಬಂದಂತೆ, ಅಲ್ ಮಾಲಿಕ್ ಇಸ್ಲಾಮಿಕ್ ಯೂತ್ ಎಂಬ ಗುಂಪನ್ನು ರಚಿಸಿ ಯುವಕರನ್ನ ಜಿಹಾದ್‌ಗೆ ಪ್ರೇರೆಪಿಸುವುದಕ್ಕೂ ಪ್ರಯತ್ನಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳ ಮೂಲಕ ಅತಿರೇಕದ ವಿಷಯಗಳನ್ನು ಹಂಚಿಕೊಂಡು ತಮ್ಮ ಜಾಲವನ್ನು ವಿಸ್ತರಿಸಿದ್ದರು. ಈ ಗುಂಪು ಬಿಹಾರ, ದೆಹಲಿ, ಪಶ್ಚಿಮ ಬಂಗಾಳ, ರಾಜಸ್ಥಾನ, ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿ ಕಾರ್ಯಚಟುವಟಿಕೆ ನಡೆಸುತ್ತಿತ್ತು ಎನ್ನಲಾಗಿದೆ.wish

  • ಪೂರ್ವ ತಾಲೂಕು ಪತ್ರಕರ್ತರ ಭವನಕ್ಕೆ ಒತ್ತಾಯ: ಆಯುಕ್ತರಿಂದ ಭರವಸೆ.

    ಮಹದೇವಪುರ :- ಬೆಂಗಳೂರು ಈಸ್ಟ್ ತಾಲೂಕು ಮೀಡಿಯಾ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

    ಬೆಂಗಳೂರು ಪೂರ್ವ ತಾಲೂಕಿನ ಪತ್ರಕರ್ತರು ಕಳೆದ 20 ವರ್ಷಗಳಿಂದ ದಿನಪತ್ರಿಕೆ, ಸಂಜೆ ಪತ್ರಿಕೆ ಹಾಗೂ ಸುದ್ದಿ ವಾಹಿನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವರ ಕ್ಷೇಮಾಭಿವೃದ್ಧಿಗಾಗಿ ವಿಶೇಷ ನಿಧಿ ಮೀಸಲಿಡುವಂತೆ ಒತ್ತಾಯಿಸಿದರು.

    ಆರೋಗ್ಯ ಚಿಕಿತ್ಸಾ ವೆಚ್ಚ, ಪತ್ರಕರ್ತರ ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಸುಮಾರು 1 ಕೋಟಿ ರೂ. ನಿಧಿ ಮೀಸಲಿಡಬೇಕೆಂದು ಮನವಿ ಸಲ್ಲಿಸಿದರು.

    ಇದಲ್ಲದೆ, ಈ ಭಾಗದಲ್ಲಿ ಪತ್ರಕರ್ತರಿಗಾಗಿ ಪತ್ರಕರ್ತರ ಭವನ ಇಲ್ಲದಿರುವುದರಿಂದ ಕೆ.ಆರ್ ಪುರಂ ವಲಯ ಕಚೇರಿ ಆವರಣದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವಂತೆ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

    ಮನವಿಗೆ ಸ್ಪಂದಿಸಿದ ಗ್ರೇಟರ್ ಬೆಂಗಳೂರು ಅಥಾರಿಟಿ ಪೂರ್ವ ಆಯುಕ್ತ ಡಿ.ಎಸ್. ರಮೇಶ್ ಅವರು, ಪತ್ರಕರ್ತರ ಭವನ ನಿರ್ಮಾಣಕ್ಕಾಗಿ ಸೂಕ್ತ ಸ್ಥಳ ಗುರುತಿಸಿ ಕಟ್ಟಡ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಜೊತೆಗೆ, ಪತ್ರಕರ್ತರ ಆರೋಗ್ಯ ರಕ್ಷಣೆಗೆ ನಿಧಿ ಮೀಸಲಿಡಲಾಗುವುದು ಎಂದು ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಬೆಂಗಳೂರು ಪೂರ್ವ ತಾಲೂಕು ಪತ್ರಕರ್ತರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

  • The All Karnataka Farmers and Traders’ Federation has continued its campaign to stop roll call at the fair and make way for vehicles

    ಕೆ.ಆರ್.ಪುರ: ಸಂತೆ ಪ್ರದೇಶದ ರಸ್ತೆಯನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿರುವುದರಿಂದ ಭಾರಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು, ತಕ್ಷಣವೇ ರಸ್ತೆ ತೆರವುಗೊಳಿಸಿ ಸಂಚಾರ ಸುಗಮಗೊಳಿಸುವಂತೆ ರೈತ ಸಂಘದ ಮುಖಂಡ ಎಲೆ ಶ್ರೀನಿವಾಸ್ ಆಗ್ರಹಿಸಿದ್ದಾರೆ.

    ಕೆ.ಆರ್.ಪುರ ಸಂತೆಯಲ್ಲಿ ವ್ಯಾಪಾರಿಗಳೊಂದಿಗೆ ಗೋಣಿಚೀಲಗಳನ್ನು ವಸ್ತ್ರದಂತೆ ಧರಿಸಿ ವಿಭಿನ್ನ ಪ್ರತಿಭಟನೆ ಹಮ್ಮಿಕೊಂಡಿದ್ದರು.

    ಈ ಕುರಿತು ಮಾತನಾಡಿದ ಅವರು, ಎಂ.ಎಸ್. ಬಿಲ್ಡಿಂಗ್ ಬಳಿಯ ಸಂಚಾರಿ ವಿಭಾಗದ ಜಂಟಿ ಆಯುಕ್ತರಿಗೆ ಕಾಲ್ನಡಿಗೆ ಮೂಲಕ ತೆರಳಿ ಮನವಿ ಸಲ್ಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

    ಸಂತೆ ಮುಂದೆ ರಸ್ತೆಯನ್ನು ಅರ್ಧಕ್ಕೆ ಮುಚ್ಚಿ ಸುಂಕದ ಹೆಸರಿನಲ್ಲಿ ದಿನಕ್ಕೆ ಸುಮಾರು 50,000 ರಿಂದ 60,000 ವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಈ ಆಕ್ರಮಣದಿಂದ ಆಂಬುಲೆನ್ಸ್ ಸೇರಿದಂತೆ ತುರ್ತು ಸೇವೆ ವಾಹನಗಳಿಗೂ ಸರಿಯಾಗಿ ದಾರಿ ಬಿಡುತ್ತಿಲ್ಲ. ಬೆಳಗಿನ ಸಮಯದಲ್ಲಿ ಕೇವಲ 500-600 ಮೀಟರ್ ದೂರ ಸಾಗಲು
    10 ರಿಂದ 15 ನಿಮಿಷ ಸಮಯ ಬೇಕಾಗುತ್ತಿದೆ ಎಂದು ವ್ಯಕ್ತಪಡಿಸಿದರು.

    ಮಾರ್ಕೆಟ್ ವ್ಯಾಪಾರಿಗಳು ರಸ್ತೆ ಬ್ಲಾಕ್ ಮಾಡುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು , ಈ ಸಮಸ್ಯೆ ಕುರಿತು ಕಳೆದ ಎರಡು ತಿಂಗಳಿನಿಂದ ಕೆಳಮಟ್ಟದ ಅಧಿಕಾರಿಗಳಿಂದ ಹಿಡಿದು ಮೇಲಧಿಕಾರಿಗಳವರೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು.

    ಮಾಧ್ಯಮದ ಗಮನಕ್ಕೆ ವಿಷಯ ಬಂದ ನಂತರ ಸಂಚಾರಿ ಹಿರಿಯ ಅಧಿಕಾರಿಗಳು ಬಂದು ಪರಿಶೀಲನೆ ನಂತರ ಸ್ವಲ್ಪ ಮಟ್ಟಿಗೆ ರಸ್ತೆ ಸ್ವಚ್ಛವಾಗಿರುವುದು ಗಮನಾರ್ಹವಾದರೂ, ಇದನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

    ರಸ್ತೆ ಸಂಚಾರದ ಜವಾಬ್ದಾರಿ ಟ್ರಾಫಿಕ್ ಇಲಾಖೆಗೆ ಸೇರಿದ್ದು, ಯಾವುದೇ ಕಾರಣಕ್ಕೂ ರಸ್ತೆ ಮೇಲೆ ಅಂಗಡಿಗಳನ್ನು ಇಡಲು ಅವಕಾಶ ನೀಡಬಾರದು ಎಂದು ಹೇಳಿದರು.
    ಬಿಬಿಎಂಪಿ ಅಧಿಕಾರಿಗಳು ಕೂಡ ಅಂಗಡಿಗಳನ್ನು ಒಳಭಾಗಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

    ಸಾರ್ವಜನಿಕರು ಸಹ ಸಹಕಾರ ನೀಡಿ ಮುಕ್ತ ಸಂಚಾರಕ್ಕೆ ಸಹಕರಿಸಬೇಕು ಎಂದು ಕೋರಿದರು.
    ಇನ್ನೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದಿದ್ದಲ್ಲಿ, ಮುಂದಿನ ಒಂದು ವಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದರು.

  • ಹೊಸಕೋಟೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ

    ಹೊಸಕೋಟೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ

    ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ‘ವಿಜ್ಞಾನ ವಸ್ತು ಪ್ರದರ್ಶನ’ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಎಂದು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಅಜಯ್ ಕುಮಾರ್ ಅಳಗೇಶನ್ ಅವರು ಹೇಳಿದರು.

    ಹೊಸಕೋಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ವತಿಯಿಂದ ಆಯೋಜಿಸಿದ್ದ ”ವಿಜ್ಞಾನ ವಸ್ತು ಪ್ರದರ್ಶನ” ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ‘ನ್ಯಾನೋ ತಂತ್ರಜ್ಞಾನ’ ಕ್ಷೇತ್ರದಲ್ಲಿ ಕೆಲಸದ ಅನುಭವ ಹಂಚಿಕೊಂಡು, ನ್ಯಾನೋ ಎಂದರೆ ಎಷ್ಟು ಚಿಕ್ಕದು ಗೊತ್ತೇ? ನಮ್ಮ ತಲೆಯ ಕೂದಲಿನ ಎಳೆಯನ್ನು ಲಕ್ಷ ಪಟ್ಟು ಸೀಳಿದರೆ ಸಿಗುವಷ್ಟು ಸೂಕ್ಷ್ಮವಾದ ವಸ್ತುಗಳ ಬಗ್ಗೆ ಇವರು ಸಂಶೋಧನೆಯನ್ನು ವಿವರಿಸಿದರು.

    “ವಿಜ್ಞಾನವು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗಬಾರದು, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನವನ್ನು ಸುಲಭಗೊಳಿಸಬೇಕು” ಎಂದರು.

    ತಮ್ಮ ಸಂಶೋಧನಾ ಕ್ಷೇತ್ರವಾದ ನ್ಯಾನೋ ತಂತ್ರಜ್ಞಾನ ಮತ್ತು ಶಕ್ತಿ ಸಂರಕ್ಷಣೆ (Energy Harvesting) ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಇರುವ ಅವಕಾಶಗಳನ್ನು ಪರಿಚಯಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಚಂದ್ರಪ್ಪ ಬೇಗೂರು ಅವರು ವಹಿಸಿದ್ದರು.

    ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ನ್ಯಾನೋ ಸೆನ್ಸರ್‌ಗಳು ಧರಿಸಬಹುದಾದ ಆರೋಗ್ಯ ಸಂವೇದಕಗಳ ಮಾದರಿಗಳು. ಮತ್ತು ಸ್ಮಾರ್ಟ್ ಕೃಷಿ: ಮಣ್ಣಿನ ತೇವಾಂಶ ಮತ್ತು ಸ್ವಯಂಚಾಲಿತ ನೀರಾವರಿ ಪದ್ಧತಿ. ಹಾಗೂ ಪರಿಸರ ಸ್ನೇಹಿ ಇಂಧನ: ಹೈಡ್ರೋಜನ್ ಕಾರುಗಳು ಮತ್ತು ಸೌರಶಕ್ತಿ ಚಾಲಿತ ಗೃಹೋಪಯೋಗಿ ಉಪಕರಣಗಳು. ಮತ್ತು ತ್ಯಾಜ್ಯ ನಿರ್ವಹಣೆ: ಪ್ಲಾಸ್ಟಿಕ್ ಮುಕ್ತ ಪರಿಸರ ಮತ್ತು ಕಸದಿಂದ ರಸ ಮಾಡುವ ತಂತ್ರಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು.

    ಕಾರ್ಯಕ್ರಮದಲ್ಲಿ ಡಾ. ದಿನೇಶ್, ಮಂಜುನಾಥ್, ಉಮೇಶ್ ರೆಡ್ಡಿ, ವಿಶ್ವೇಶ್ವರಯ್ಯ ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.