Blog

  • ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಉದ್ಘಾಟನೆ.

    ದೊಡ್ಡಬಳ್ಳಾಪುರದಲ್ಲಿ 100 ಹಾಸಿಗೆಗಳ ಇಎಸ್ಐಸಿ ಆಸ್ಪತ್ರೆ ಉದ್ಘಾಟನೆ.

    ಬೆಂ.ಗ್ರಾ. ಜಿಲ್ಲೆ: ಶ್ರಮಿಕ ವರ್ಗದವರು ಹಾಗೂ ಅವರ ಅವಲಂಬಿತರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಇಎಸ್ಐಸಿ ಆಸ್ಪತ್ರೆಯು ವರದಾನವಾಗಲಿದೆ. ಎಲ್ಲಾ ಕಾರ್ಮಿಕರು ವೈದ್ಯಕೀಯ ಸೇವೆಯ ಸದುಪಯೋಗ ಪಡೆಯಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಅವರು ಹೇಳಿದರು.

    ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ 100 ಹಾಸಿಗೆ ಸಾಮರ್ಥ್ಯದ ಇಎಸ್ಐಸಿ ಆಸ್ಪತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

    ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯೇ ಕೇಂದ್ರ ಸರ್ಕಾರದ ಮೂಲಮಂತ್ರವಾಗಿದ್ದು, ದೊಡ್ಡಬಳ್ಳಾಪುರದಲ್ಲಿ ಸುಮಾರು 101 ಕೋಟಿ ರೂ. ವೆಚ್ಚದಲ್ಲಿ ಇಎಸ್ಐಸಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಜತೆಗೆ ಬಳ್ಳಾರಿಯಲ್ಲಿ ಸುಮಾರು 1.5 ಲಕ್ಷ ಜವಳಿ ಕಾರ್ಮಿಕರಿಗಾಗಿ ₹150 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಇಎಸ್‌ಐಸಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರವು ಕಾರ್ಮಿಕರ ಘನತೆ ಮತ್ತು ಅವರಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಅಚಲ ಬದ್ಧತೆಯನ್ನು ಹೊಂದಿದೆ ಎಂದರು.

    ಕೇಂದ್ರ ಸರ್ಕಾರವು ಇಎಸ್‌ಐಸಿ ಆಸ್ಪತ್ರೆ ಮೂಲಕ
    ಕಾರ್ಮಿಕರಿಗೆ ಆರ್ಥಿಕ ಹೊರೆ ತಗ್ಗಿಸಿ ಗುಣಮಟ್ಟದ ಉಚಿತ ಆರೋಗ್ಯ ಸೇವೆ ಹಾಗೂ ಹೊಸ ಕಾರ್ಮಿಕ ಸಂಹಿತೆಯಡಿ ಲಿಂಗ ತಾರತಮ್ಯವಿಲ್ಲದೇ ಸಮಾನ ಕೆಲಸಕ್ಕೆ ಸಮಾನ ವೇತನ ಸಹ‌ ನೀಡುತ್ತಿದ್ದೇವೆ ತಿಳಿಸಿದರು.

    *ದೇಶಾದಲ್ಲಿ 20 ಇಎಸ್ಐಸಿ ಮೆಡಿಕಲ್ ಕಾಲೇಜು ಸ್ಥಾಪನೆ*

    ದೇಶಾದ್ಯಂತ 20 ಇಎಸ್‌ಐಸಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸುವ ಮೂಲಕ ಕಾರ್ಮಿಕರ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಚಿಕಿತ್ಸೆಯ ಭರವಸೆ ನೀಡಲಾಗಿದೆ.
    ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಮಿಕರ ಮಕ್ಕಳಿಗಾಗಿ ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಜಾರಿಗೆ ತರಲಾಗಿರುವ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳು ಖಾಸಗಿ ವಲಯದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಮತ್ತು ನೇಮಕಾತಿ ಪತ್ರದ ಖಾತರಿ ಒದಗಿಸುತ್ತವೆ. ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ 40 ವರ್ಷ ದಾಟಿದ ಪ್ರತಿಯೊಬ್ಬ ಕಾರ್ಮಿಕನಿಗೂ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ಕಡ್ಡಾಯಗೊಳಿಸಲಾಗಿದೆ. ಇದರ ಉದ್ದೇಶ ರೋಗಗಳನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಕಾರ್ಮಿಕರ ಜೀವ ರಕ್ಷಣೆಗೆ ಒತ್ತು ನೀಡಲಾಗಿದೆ ಎಂದು ಸಚಿವರು ಹೇಳಿದರು.

    ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಇಂದು ಸುಮಾರು 101 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಇಎಸ್ಐಸಿ ಆಸ್ಪತ್ರೆ ನಿರ್ಮಿಸಲಾಗಿದ್ದು, ದೊಡ್ಡಬಳ್ಳಾಪುರ ಭಾಗದಲ್ಲಿ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಈ ಹಿಂದೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿಗೆ ಅಲೆದಾಡುವ ಪರಿಸ್ಥಿತಿ ಇತ್ತು. ಈಗ ಕಾರ್ಮಿಕರಿಗೆ ಇಲ್ಲಿಯೇ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ದೊರೆಯಲಿದೆ. ಪ್ರಸ್ತುತ ಈ ಆಸ್ಪತ್ರೆಗೆ 9 ಜನ ತಜ್ಞ ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ಸದ್ಯಕ್ಕೆ ಇದು ರಾಜಾಜಿನಗರ ಆಸ್ಪತ್ರೆಯ ಮೇಲ್ವಿಚಾರಣೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದರು.

    ದೇಶಾದ್ಯಂತ ಇರುವ 15 ಕೋಟಿ ಕಾರ್ಮಿಕರು ಮತ್ತು ಅವರ ಕುಟುಂಬದವರಿಗೆ ಗುಣಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ದೇಶದ ಇಎಸ್ಐಸಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರಸ್ತುತ 1,550 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ ವಿಶೇಷವಾಗಿ ಕಾರ್ಮಿಕರ ಮಕ್ಕಳಿಗಾಗಿ 702 ಸೀಟುಗಳನ್ನು ಮೀಸಲಿಡಲಾಗಿದೆ. ಮುಂಬರುವ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ನಿರ್ವಹಿಸಲ್ಪಡುವ ಇಂತಹ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಸಚಿವರು ತಿಳಿಸಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಮತಕ್ಷೇತದ ಸಂಸದರಾದ ಡಾ. ಕೆ.ಸುಧಾಕರ ಅವರು ಮಾತನಾಡಿ, ಇಎಸ್ಐಸಿ ಆಸ್ಪತ್ರೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದೆ. ದೊಡ್ಡಬಳ್ಳಾಪುರದ ಇಎಸ್ಐಸಿ ಆಸ್ಪತ್ರೆಯು ಐದು ಎಕರೆ ವಿಶಾಲವಾದ ಜಾಗದಲ್ಲಿ ನಿರ್ಮಾಣವಾಗಿದ್ದು, ಕಾರ್ಮಿಕರಿಗೆ ಗುಣಮಟ್ಟದ ವೈದ್ಯಕೀಯ ಒದಗಿಸಲಿದೆ. ಈ ಭಾಗದಲ್ಲಿ 5 ಲಕ್ಷ ಕಾರ್ಮಿಕರು ಇದ್ದು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಜಿಲ್ಲೆಯ ಕಾರ್ಮಿಕರು ಸಹ ವೈದ್ಯಕೀಯ ಸೇವೆ ಪಡೆಯಲು ಸಹಕಾರಿಯಾಗಲಿದೆ ಎಂದರು.

    ವೈದ್ಯರು ದಯಾ ಶಕ್ತಿಯಿಂದ ಕಾರ್ಮಿಕ ವರ್ಗಕ್ಕೆ ಅನಾರೋಗ್ಯ ವಾಸಿ ಮಾಡಿ ಆರೋಗ್ಯ ಸೇವೆ ಒದಗಿಸುವ ಮೂಲಕ ಕಾರ್ಮಿಕರ
    ಕಣ್ಣಿರು ಒರೆಸುವ ಒಳ್ಳೆಯ ಸೇವಾ ಕೆಲಸ ಆಗಬೇಕು ಎಂದು ಹೇಳಿದರು.

    ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು ಅವರು ಮಾತನಾಡಿ, ಜಿಲ್ಲೆಯಲ್ಲಿ ಕಾರ್ಮಿಕರ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ಇಲ್ಲಿ ನೂರಾರು ಕಾರ್ಖಾನೆಗಳು, ಕಂಪನಿ ಸ್ಥಾಪನೆಯಾಗಿದ್ದು, ಅವುಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ಇಎಸ್ಐಸಿ ಆಸ್ಪತ್ರೆಯು ವೈದ್ಯಕೀಯ ಸೇವೆಗೆ ಅನುಕೂಲವಾಗಲಿದೆ. ಅದರಲ್ಲೂ ದೂರದ ರಾಜ್ಯಗಳು, ಜಿಲ್ಲೆಗಳಿಂದ ವಲಸೆ ಕಾರ್ಮಿಕರಿಗಂತು ಸಹಕಾರಿಯಾಗಲಿದೆ ಎಂದು ಹೇಳಿದರು.

    ಇದೇ ವೇಳೆ ವರ್ಚುವಲ್ ಮೂಲಕ ಬಳ್ಳಾರಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಹಾಸಿಗೆಗಳ ಇ.ಎಸ್.ಐ.ಸಿ ಆಸ್ಪತ್ರೆಗೆ ಶಂಕುಸ್ಥಾಪನೆಯನ್ನು ನೆರವೇರಿಸಿದರು‌.

    ಕಾರ್ಯಕ್ರಮದಲ್ಲಿ ಇ.ಎಸ್.ಐ.ಸಿ. ಯೋಜನೆಯಡಿ ಅವಲಂಬಿತ ಭತ್ಯೆ, ಶಾಶ್ವತ ಅಂಗವೈಕಲ್ಯ ಭತ್ಯೆ, ಮಾತೃತ್ವ ಭತ್ಯೆಯ ಫಲಾನುಭವಿಗಳಿಗೆ ನಗದು ಸೌಲಭ್ಯದ ಚೆಕ್ ಗಳನ್ನು ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ವೈದ್ಯಕೀಯ ಆಯುಕ್ತರಾದ ಡಾ.ಆರ್ ಶ್ರೀನಿವಾಸ್, ಬಾಶೇಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರೇಮ ಕುಮಾರ್, ಇಎಸ್ಐಸಿ ಆಸ್ಪತ್ರೆ ವೈದ್ಯರು, ಸಿಬ್ಬಂದಿಗಳು, ಗಣ್ಯರು ಉಪಸ್ಥಿತರಿದ್ದರು.

  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ  ಮಹಿಳಾ ಪೊಲೀಸ್ ಅಧಿಕಾರಿ ಎಸ್ಪಿ ಲಾವಣ್ಯ ಸಾವು.!!!

    ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿ ಎಸ್ಪಿ ಲಾವಣ್ಯ ಸಾವು.!!!

    ಬೆಂಗಳೂರು: ಕ್ಯಾನ್ಸರ್‌ ನಿಂದ ಬಳಲುತ್ತಿದ್ದ ಎಸ್ಪಿ ಲಾವಣ್ಯ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

    ಬೆಸ್ಕಾಂ ವಿಜಿಲೆನ್ಸ್ ನಲ್ಲಿ ಎಸ್ಪಿಯಾಗಿದ್ದ ಲಾವಣ್ಯಅವರು ಕೊಲೊನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು,ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ನ 2:30 ರ ಸುಮಾರಿಗೆ ಸಾವನ್ನಪ್ಪಿದ್ದಾರೆ. ಮೃತರು 10 ವರ್ಷದ ಗಂಡು ಮಗು ಹಾಗೂ 3 ವರ್ಷದ ಹೆಣ್ಣುವನ್ನು ಅಗಲಿದ್ದಾರೆ.

    ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ದೊಡ್ಡಗಂಜೂರು ಗ್ರಾಮದವರಾದ ಲಾವಣ್ಯ ಅವರು 2010 ರ ಬ್ಯಾಚ್‌ನ ಕೆಎಸ್‌ಪಿಎಸ್ ಅಧಿಕಾರಿಯಾಗಿದ್ದರು 2023 ರಿಂದ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ..

    ಮಂಡ್ಯ ಮತ್ತು ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷರಾಗಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿನಲ್ಲಿ ಇಂಟಲಿಜೆನ್ಸ್ ಮತ್ತು ಡಿಸಿಆರ್‌ಇ ಎಸ್ಪಿ ಆಗಿ ಕೆಲಸ ಮಾಡಿದ್ದಾರೆ.

    ಇತ್ತೀಚೆಗಷ್ಟೇ ವಿದ್ಯಾರಣ್ಯಪುರದಲ್ಲಿರುವ ನಿವಾಸಕ್ಕೆ ಎರಡು ತಿಂಗಳ ಹಿಂದೆ DG&IGP ಡಾ. ಎಂ.ಎ ಸಲೀಂ ಭೇಟಿ ನೀಡಿ ಧೈರ್ಯ ತುಂಬಿದ್ದರು. ಚೇತರಿಸಿಕೊಳ್ಳುವಂತೆ ಹಾರೈಸಿ ಕುಟುಂಬದವರಿಗೂ ಸಹ ಧೈರ್ಯ ತುಂಬಿ ಬಂದಿದ್ದರು.

    ಮೃತರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ದೊಡ್ಡಗಂಜೂರಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಯುವ ಅಧಿಕಾರಿಯ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ದಕ್ಷ ಅಧಿಕಾರಿಯ ಅಗಲಿಕೆಯಿಂದ ಪೊಲೀಸ್ ಇಲಾಖೆಗೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ

  • ಮೇ 3, 2026, ಭಾನುವಾರದ ಪಂಚಾಂಗ ಮತ್ತು ರಾಶಿ ಭವಿಷ್ಯದ ವಿವರಗಳು ಇಲ್ಲಿವೆ:

    ಮೇ 3, 2026, ಭಾನುವಾರದ ಪಂಚಾಂಗ ಮತ್ತು ರಾಶಿ ಭವಿಷ್ಯದ ವಿವರಗಳು ಇಲ್ಲಿವೆ:

    ಇಂದಿನ ಪಂಚಾಂಗ:
    ಸಂವತ್ಸರ: ಪರಾಭವ ಸಂವತ್ಸರ
    ಅಯನ: ಉತ್ತರಾಯಣ
    ಋತು: ವಸಂತ ಋತು
    ಮಾಸ: ವೈಶಾಖ ಮಾಸ
    ಪಕ್ಷ: ಕೃಷ್ಣ ಪಕ್ಷ
    ತಿಥಿ: ದ್ವಿತೀಯಾ (ಬೆಳಿಗ್ಗೆಯವರೆಗೆ, ನಂತರ ತೃತೀಯಾ)
    ನಕ್ಷತ್ರ: ಅನುರಾಧಾ ನಕ್ಷತ್ರ
    ಯೋಗ: ವರಿಯಾನ್
    ಕರಣ: ತೈತಿಲ
    ರಾಹುಕಾಲ: ಸಂಜೆ 04:30 ರಿಂದ 06:00 ರವರೆಗೆ
    ಗುಳಿಕಕಾಲ: ಮಧ್ಯಾಹ್ನ 03:00 ರಿಂದ 04:30 ರವರೆಗೆ
    ಯಮಗಂಡಕಾಲ: ಮಧ್ಯಾಹ್ನ 12:00 ರಿಂದ 01:30 ರವರೆಗೆ

    ದಿನದ ರಾಶಿ ಭವಿಷ್ಯ:-

    ಮೇಷ:
    ಇಂದು ನಿಮಗೆ ಮಿಶ್ರ ಫಲ ಇರಲಿದೆ. ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ. ಅನಗತ್ಯ ಖರ್ಚುಗಳ ಬಗ್ಗೆ ಗಮನವಿರಲಿ. ಕುಟುಂಬದವರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ.

    ವೃಷಭ:
    ಆರ್ಥಿಕವಾಗಿ ಇಂದು ಲಾಭದಾಯಕ ದಿನ. ಹಳೆಯ ಹೂಡಿಕೆಗಳಿಂದ ಲಾಭ ಸಿಗಲಿದೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.

    ಮಿಥುನ:
    ವೃತ್ತಿಜೀವನದಲ್ಲಿ ಹೊಸ ಅವಕಾಶಗಳು ಲಭ್ಯವಾಗಲಿವೆ. ಸೃಜನಶೀಲ ಕೆಲಸಗಳಿಗೆ ಇಂದು ಉತ್ತಮ ಸಮಯ. ಹಿರಿಯರ ಮಾರ್ಗದರ್ಶನ ನಿಮಗೆ ಪ್ರಯೋಜನಕಾರಿಯಾಗಲಿದೆ.

    ಕರ್ಕಾಟಕ:
    ಮನಸ್ಸಿನಲ್ಲಿ ಸಣ್ಣಪುಟ್ಟ ಆತಂಕಗಳಿದ್ದರೂ, ಕೆಲಸಗಳು ಸುಗಮವಾಗಿ ಸಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ದೂರದ ಪ್ರಯಾಣದ ಯೋಜನೆ ಹಾಕಿಕೊಳ್ಳುವ ಸಾಧ್ಯತೆ ಇದೆ.

    ಸಿಂಹ:
    ಇಂದು ಸ್ವಲ್ಪ ಜಾಗರೂಕತೆಯಿಂದ ಇರಬೇಕು. ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ವಾದ-ವಿವಾದಗಳು ಉಂಟಾಗಬಹುದು. ವಾಹನ ಚಾಲನೆಯಲ್ಲಿ ಎಚ್ಚರವಿರಲಿ.

    ಕನ್ಯಾ:
    ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರುತ್ತದೆ. ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ಹೊಸ ವಸ್ತುಗಳ ಖರೀದಿಗೆ ಮನಸ್ಸು ಮಾಡುವಿರಿ.

    ತುಲಾ:
    ಶತ್ರುಗಳ ಮೇಲೆ ಜಯ ಸಾಧಿಸುವಿರಿ. ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ ಕಂಡುಬರಲಿದೆ. ಕೆಲಸದ ಒತ್ತಡ ಹೆಚ್ಚಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ.

    ವೃಶ್ಚಿಕ:
    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ.

    ಧನುಸ್ಸು:
    ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮನೆ ಅಥವಾ ಆಸ್ತಿ ಖರೀದಿಯ ವಿಚಾರದಲ್ಲಿ ಚರ್ಚೆಗಳು ನಡೆಯಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ.

    ಮಕರ:
    ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಿರಲಿದೆ. ಕೈಗೆತ್ತಿಕೊಂಡ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸುವಿರಿ. ಸಣ್ಣ ಪ್ರವಾಸ ಮಾಡುವ ಸಾಧ್ಯತೆ ಇದೆ.

    ಕುಂಭ:
    ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆ ಇದೆ. ಆರ್ಥಿಕ ಸ್ಥಿತಿ ಭದ್ರವಾಗಿರಲಿದೆ. ನಿಮ್ಮ ಮಧುರ ಸಂಭಾಷಣೆಯಿಂದ ಎಲ್ಲರ ಮನ ಗೆಲ್ಲುವಿರಿ.

    ಮೀನ:
    ಇಂದು ನಿಮಗೆ ಉತ್ಸಾಹಭರಿತ ದಿನ. ಹೊಸ ಯೋಜನೆಗಳನ್ನು ಆರಂಭಿಸಲು ಇದು ಸುಸಮಯ. ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಾನಸಿಕ ನೆಮ್ಮದಿ ದೊರೆಯಲಿದೆ.

  • ಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

    ಬೇರೆಯವನ ಜೊತೆ ಓಡಿ ಹೋದ ಪತ್ನಿ : ಇಬ್ಬರು ಮಕ್ಕಳನ್ನು ಕೊಂದು ನೇಣಿಗೆ ಶರಣಾದ ಪತಿ.

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ನಡೆದ ಈ ಘಟನೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಿದೆ. ಅಕ್ಕನ ಮಗನನ್ನೇ ಮಗನಂತೆ ಸಾಕಿದ ಮಾವನಿಗೆ ಆತ ಕೊಟ್ಟ ದ್ರೋಹ ಮತ್ತು ಪತ್ನಿಯ ಅನೈತಿಕ ಸಂಬಂಧ, ಕೊನೆಗೆ ಇಬ್ಬರು ಹಸುಗೂಸುಗಳು ಸೇರಿದಂತೆ ಒಟ್ಟು ಮೂವರ ಬಲಿಗೆ ಕಾರಣವಾಗಿದೆ.

    ಮಗನಂತಿದ್ದ ಅಕ್ಕನ ಮಗನೇ ವಿಲನ್!

    ಮೃತ ಶಿವಣ್ಣ ಅವರ ಅಕ್ಕ ಮರಣ ಹೊಂದಿದಾಗ, ಅನಾಥನಾಗಿದ್ದ ಅಕ್ಕನ ಮಗ ಹೇಮಂತ್‌ನನ್ನು ಶಿವಣ್ಣ ತನ್ನ ಮನೆಗೆ ಕರೆತಂದಿದ್ದರು. ಸ್ವಂತ ಮಗನಿಗಿಂತ ಮಿಗಿಲಾಗಿ ಪ್ರೀತಿ ನೀಡಿ, ಆಶ್ರಯ ನೀಡಿ ಸಾಕಿದ್ದರು. ಆದರೆ ಹೇಮಂತ್ ಬೆಳೆಯುತ್ತಾ ತನ್ನನ್ನು ಸಾಕಿದ ಮಾವನ ಸಂಸಾರಕ್ಕೇ ಕೊಳ್ಳಿ ಇಡಲು ಮುಂದಾದ. ಮಾವನ ಪತ್ನಿ ಕಾವ್ಯ ಜೊತೆ ಅಕ್ರಮ ಸಂಬಂಧ ಬೆಳೆಸಿ, ಆಕೆಯ ಮನಸ್ಸನ್ನು ಪೂರ್ತಿಯಾಗಿ ಬದಲಿಸಿದ್ದ.

    ಹಲವು ಬಾರಿ ನಡೆದ ಸಂಧಾನ:

    ಶಿವಣ್ಣನಿಗೆ ಪತ್ನಿ ಮತ್ತು ಅಕ್ಕನ ಮಗನ ನಡುವಿನ ಅಕ್ರಮ ಸಂಬಂಧದ ವಿಷಯ ತಿಳಿಯುತ್ತಿದ್ದಂತೆ ಅವರು ತೀವ್ರ ಆಘಾತಕ್ಕೊಳಗಾಗಿದ್ದರು. ಒಮ್ಮೆ ಈ ವಿಚಾರವಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದರು. ಆಗ ಗ್ರಾಮದ ಹಿರಿಯರು ಪಂಚಾಯಿತಿ ನಡೆಸಿ, ಹೇಮಂತನನ್ನು ಮನೆಯಿಂದ ಹೊರಹಾಕುವಂತೆ ತಿಳಿಸಿ, “ಇನ್ನಾದರೂ ಮಕ್ಕಳಿಗಾಗಿ ಅನ್ಯೋನ್ಯವಾಗಿ ಬದುಕಿ” ಎಂದು ದಂಪತಿಗಳಿಗೆ ಬುದ್ಧಿ ಹೇಳಿ ಒಂದಾಗಿಸಿದ್ದರು.

    ಕ್ಷಮೆ ಕೇಳಿ ನಾಟಕವಾಡಿದ ಪತ್ನಿ:

    ಕೆಲ ದಿನಗಳ ಹಿಂದೆ ಕಾವ್ಯ ತನ್ನ ಪ್ರಿಯಕರ ಹೇಮಂತ್ ಜೊತೆ ಓಡಿ ಹೋಗಿದ್ದಳು. ಈ ಬಗ್ಗೆ ಶಿವಣ್ಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಕರೆತಂದಾಗ, ಪೊಲೀಸರ ಮುಂದೆ ಕಣ್ಣೀರು ಹಾಕಿ, “ನನ್ನಿಂದ ತಪ್ಪಾಗಿದೆ, ಇನ್ನು ಮುಂದೆ ಗಂಡ-ಮಕ್ಕಳ ಜೊತೆ ಚೆನ್ನಾಗಿರುತ್ತೇನೆ” ಎಂದು ನಾಟಕವಾಡಿ ಮನೆಗೆ ಮರಳಿದ್ದಳು. ಪತ್ನಿ ಸುಧಾರಿಸಿಕೊಂಡಳು ಎಂದು ನಂಬಿದ ಶಿವಣ್ಣ ಆಕೆಯನ್ನು ಪ್ರೀತಿಯಿಂದಲೇ ಬರಮಾಡಿಕೊಂಡಿದ್ದರು.

    ಮನೆ ದೋಚಿ ಪರಾರಿಯಾದ ‘ಕಿಲ್ಲರ್’ ಪತ್ನಿ

    ಮನೆಗೆ ಮರಳಿದ ಕಾವ್ಯಳ ಉದ್ದೇಶ ಸುಧಾರಿಸುವುದಾಗಿರಲಿಲ್ಲ. ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ಸಮಯ ಸಾಧಿಸಿದ ಆಕೆ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಮತ್ತೆ ಅದೇ ಹೇಮಂತ್ ಜೊತೆ ಓಡಿ ಹೋದಳು. ಸಂಜೆ ಮನೆಗೆ ಬಂದ ಶಿವಣ್ಣನಿಗೆ ಪತ್ನಿಯ ಈ ಎರಡನೇ ದ್ರೋಹ ಅರಗಿಸಿಕೊಳ್ಳಲಾಗಲಿಲ್ಲ.

    ಮಕ್ಕಳನ್ನು ಕೊಂದು ಸಾವಿಗೆ ಶರಣಾದ ತಂದೆ:

    ನಂಬಿದ ಅಕ್ಕನ ಮಗನಿಂದ ದ್ರೋಹ, ಪತ್ನಿಯಿಂದ ಅವಮಾನ ಹಾಗೂ ತಾನು ಮಗನಂತೆ ಸಾಕಿದವನಿಂದಲೇ ಸಂಸಾರ ಹಾಳಾದ ನೋವು ಶಿವಣ್ಣನನ್ನು ಕ್ರೂರ ನಿರ್ಧಾರಕ್ಕೆ ದೂಡಿತು. ತನ್ನಿಬ್ಬರು ಮುದ್ದಾದ ಗಂಡು ಮಕ್ಕಳಾದ ಜೀವನ್ (10) ಮತ್ತು ಪ್ರಾಣೇಶ್ (5) ಅವರನ್ನು ಕೈಯಾರೆ ಉಸಿರುಗಟ್ಟಿಸಿ ಸಾಯಿಸಿದರು.
    ಮಕ್ಕಳ ಮೃತದೇಹದ ಪಕ್ಕದಲ್ಲೇ ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.

    ಗ್ರಾಮದಲ್ಲಿ ಶೋಕಸಾಗರ:

    ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಂದು ಅಕ್ರಮ ಸಂಬಂಧ ಮತ್ತು ನಂಬಿಕೆ ದ್ರೋಹವು ಒಂದು ಸುಂದರ ಸಂಸಾರವನ್ನು ಹೇಗೆ ಸ್ಮಶಾನವಾಗಿಸಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಪರಾರಿಯಾಗಿರುವ ಕಾವ್ಯ ಮತ್ತು ಹೇಮಂತ್‌ಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

  • ತಂದೆಯಾದ ನಟ ಡಾಲಿ ಧನಂಜಯ : ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಧನ್ಯತಾ.!

    ತಂದೆಯಾದ ನಟ ಡಾಲಿ ಧನಂಜಯ : ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ ಧನ್ಯತಾ.!

    ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟ ಡಾಲಿ ಧನಂಜಯ್ ಮತ್ತು ಅವರ ಪತ್ನಿ ಡಾ. ಧನ್ಯತಾ ಅವರ ಕುಟುಂಬದಲ್ಲಿ ಸಂತಸದ ಹೊಳೆ ಹರಿದಿದೆ. ಈ ದಂಪತಿಗೆ ಗಂಡು ಮಗುವಿನ ಜನನವಾಗಿದ್ದು, ಕುಟುಂಬದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

    ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಾ. ಧನ್ಯತಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಸುರಕ್ಷಿತವಾಗಿ ನಡೆದಿದ್ದು ತಾಯಿ ಹಾಗೂ ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಸಂತಸದ ಸುದ್ದಿಯೊಂದಿಗೆ ಕುಟುಂಬದ ಸದಸ್ಯರು ಮತ್ತು ಆಪ್ತರು ಸಂತೋಷದಲ್ಲಿ ಮುಳುಗಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ:

    ನಟ ಡಾಲಿ ಧನಂಜಯ್ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಮಗುವಿನ ಕೈ ಹಿಡಿದಿರುವ ಹೃದಯಸ್ಪರ್ಶಿ ಚಿತ್ರವನ್ನು ಪೋಸ್ಟ್ ಮಾಡಿದ್ದು, “ನಮ್ಮ ಮನೆಗೆ ಪುಟ್ಟ ಅತಿಥಿ ಬಂದಿದ್ದಾನೆ” ಎಂಬ ರೀತಿಯ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಸಾವಿರಾರು ಲೈಕ್‌ಗಳು ಹಾಗೂ ಕಾಮೆಂಟ್‌ಗಳು ಹರಿದುಬಂದಿವೆ.

    ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು “ಡಾಲಿ ಸರ್‌ಗೆ ಅಭಿನಂದನೆಗಳು”, “ಪುಟ್ಟ ಡಾಲಿಗೆ ಸ್ವಾಗತ”, “ತಂದೆಯಾದ ಕ್ಷಣ ಅತ್ಯಂತ ವಿಶೇಷ” ಎಂಬಂತಹ ಕಾಮೆಂಟ್‌ಗಳನ್ನು ಹಾಕಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಸಹೋದ್ಯೋಗಿಗಳು ಹಾಗೂ ಹಲವು ಸೆಲೆಬ್ರಿಟಿಗಳು ಕೂಡಾ ದಂಪತಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

    ಕಳೆದ ಫೆಬ್ರವರಿಯಲ್ಲಿ ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಡಾಲಿ ಧನಂಜಯ್ ಮತ್ತು ಧನ್ಯತಾ ದಂಪತಿ, ಈಗ ಪೋಷಕರಾಗಿದ್ದಾರೆ. ಅಂದಿನಿಂದಲೇ ಅಭಿಮಾನಿಗಳು ಈ ದಂಪತಿಯ ಜೀವನದಲ್ಲಿ ಹೊಸ ಸದಸ್ಯನ ಆಗಮನಕ್ಕಾಗಿ ಕಾಯುತ್ತಿದ್ದಿದ್ದರು. ಇದೀಗ ಆ ನಿರೀಕ್ಷೆಗೆ ಸಂತಸದ ಅಂತ್ಯ ದೊರೆತಿದೆ.

    ಡಾಲಿ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ಪಾತ್ರಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ‘ಡಾಲಿ’ ಎಂಬ ಹೆಸರಿನಿಂದಲೇ ಜನಪ್ರಿಯರಾಗಿರುವ ಅವರು, ತಮ್ಮ ಅಭಿನಯ ಶೈಲಿಯಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.

  • ಹೊಸಕೋಟೆ ರಥೋತ್ಸವ ಸಂಭ್ರಮ: ನೂತನ ರಥವೇರಿದ ಅವಿಮುಕ್ತೇಶ್ವರ.

    ಹೊಸಕೋಟೆ ರಥೋತ್ಸವ ಸಂಭ್ರಮ: ನೂತನ ರಥವೇರಿದ ಅವಿಮುಕ್ತೇಶ್ವರ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದಿರುವ ಹೊಸಕೋಟೆ ಶ್ರೀ ಅವಿಮುಕೇಶ್ವರಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಹಸ್ರಾರು ಸಂಖ್ಯೆ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ನಡೆಯಿತು.

    ಬೆಂಡಿಗಾನಹಳ್ಳಿ ಕುಟುಂಬದಿಂದ ನೂತನವಾಗಿ ನಿರ್ಮಿಸಿದ ರಥಕ್ಕೆ ನಗರದ ಬಸವೇಶ್ವರ ಸರ್ಕಲ್ ಬಳಿ ಮುಂಜನೆಯಿಂದಲೇ ಎಲ್ಲೆಡೆಯಿಂದ ಆಗಮಿಸಿದ ಭಕ್ತರು ತೆಂಗಿನಕಾಯಿ ಹೊಡೆಸಿ, ಆರತಿ ಬೆಳಗಿ ರಥದ ಗಾಲಿಗೆ(ಚಕ್ರ) ಉಪ್ಪು ಮತ್ತು ಮೆಣಸು ಸುರಿದು ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಸಲ್ಲಿಸಿದರು.

    ನಂತರ ಅವಿಮುಕ್ತೆಶ್ವರ ದೇವಾಲಯದಿಂದ ಅವಿಮುಕ್ತೆಶ್ವರಸ್ವಾಮಿ ಮತ್ತು ಬಾಲ ತ್ರಿಪುರ ಸುಂದರಿ ದೇವಿಯ ಉತ್ಸವ ಮೂರ್ತಿಗಳನ್ನು ಮಧ್ಯಾನ್ಹ 1 ಗಂಟೆಗೆ ತೇರು ಇರುವ ಬಸವೇಶ್ವರ ವೃತ್ತದ ವರೆಗೆ ತರಲಾಯಿತು. ವೀರ ಕುಮಾರರ ಅಲಗು ಸೇವೆಯೊಂದಿಗೆ ಪೂಜಾರಿ ಕಿರಣ್ ಹೂವಿನ ಕರಗ ಹೊತ್ತು ರಥ ಪ್ರದಕ್ಷಿಣೆ ಹಾಕಿದರು. ಗೋವಿಂದಾ…ಗೋವಿಂದಾ..ಎಂಬ ಝೇಂಕಾರ ಪ್ರತಿಧ್ವನಿಸಿತು..

    ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ , ಅವಿಮುಕ್ತಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಬ್ರೌಪದಮ್ಮ ಕರಗ ಮಹೋತ್ಸವ ಒಟ್ಟಿಗೆ ಸೇರಿ ಆಚರಿಸುವ ಹಬ್ಬವಾಗಿದೆ. 1904ರಿಂದ ಹೊಸಕೋಟೆಯಲ್ಲಿ ನಿರಂತರವಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ. ರಥೋತ್ಸವವು ತನ್ನದೇ ಆದ ಇತಿಹಾಸ ಹೊಂದಿದೆ.

    ಕಳೆದ ಬಾರಿ ಕೊಟ್ಟ ಮಾತಿನಂತೆ ನಮ್ಮ ಕುಟುಂಬದಿಂದಲೆ ಸುಮಾರು 2.5 ಕೋಟಿ ವೆಚ್ಚದಲ್ಲಿ ಹೊಸ ರಥವನ್ನು ಕೊಡುಗೆ ಕೊಟ್ಟು, ಈ ಬಾರಿ ಹೊಸ ರಥದಲ್ಲಿ ಬ್ರಹ್ಮರಥೋತ್ಸವ ಆಚರಣೆ ಮಾಡಲಾಗುತ್ತಿದೆ. ಇದು ರಥೋತ್ಸವಕ್ಕೆ ಹೊಸ ಮೆರಗು ನೀಡಿದೆ ಎಂದರು.

    ಹೊಸಕೋಟೆ ಬ್ರಹ್ಮರಥೋತ್ಸವಕ್ಕೆ ಬೆಂಡಿಗಾನಹಳ್ಳಿ ಕುಟುಂಬದವರು ಮಾಡಿಸಿಕೊಟ್ಟಿರುವ ನೂತನ ತೇರು ವೀಕ್ಷಣೆಗೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದಿದ್ದರು. ಸಾವಿರಾರು ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ರಥಕ್ಕೆ ಉಪ್ಪು ಮತ್ತು ಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಉತ್ಸವ ಮೂರ್ತಿಗಳನ್ನು ರಥದಲ್ಲಿಟ್ಟು ಎಳೆಯಲು ಚಾಲನೆ ನೀಡಲಾಯಿತು. ಉರಿ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ರಥದೊಂದಿಗೆ ಸಂಭ್ರಮದಿಂದ ಹೆಜ್ಜೆ ಹಾಕಿದರು. ಅವರ ಉತ್ವಕ್ಕೆ ಸುಡು ಬಿಸಿಲು ಅಡ್ಡಿಯಾಗಲಿಲ್ಲ

    ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ವೀರಗಾಸೆ, ಡೊಲ್ಲುಕುಣಿತ, ಬೊಂಬೆ ಕುಣಿತ ಸೇರಿ ಹಲವು ಕಲಾ ತಂಡಗಳು ವಿವಿಧ ತಮಟೆ ವಾದ್ಯ ತಂಡಗಳು ಉತ್ಸವಕ್ಕೆ ಮೆರಗು ನೀಡಿದವು. ಲಕ್ಷಾಂತರ ಭಕ್ತರು ಪಾಲ್ಗೊಂಡ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬೀಸಿಗೆ ಬೇಗೆ ತಣಿಸಲು ಮಜ್ಜಿಗೆ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.

    ಇತಿಹಾಸ ಪ್ರಸಿದ್ದ ರಥೋತ್ಸವದಲ್ಲಿ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ರಥೋತ್ಸವ ಆಚರಣೆ ಸಮಿತಿ ಕನ್ವಿನರ್ ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ,ವಿ ಬೈರೇಗೌಡ, ಪ್ರಧಾನ ಅರ್ಚಕ ರವಿಕುಮಾರ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಸುಬ್ಬರಾಜ್, ಮುಖಂಡರಾದ ಸಿ. ಜಯರಾಜ್, ಸುಭಾಷ್ ಗೌಡ, ಸದಾನಂದ್ ಸೇರಿ ಹಲವು ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

  • ಬಾಕ್ಸಾಫೀಸ್‌ನಲ್ಲಿ ‘ಕೆಡಿ’ ಅಬ್ಬರ: ಧ್ರುವ ಸರ್ಜಾ ಚಿತ್ರಕ್ಕೆ ಸ್ಯಾಂಡಲ್‌ವುಡ್ ಫುಲ್ ಸಪೋರ್ಟ್!

    ಬಾಕ್ಸಾಫೀಸ್‌ನಲ್ಲಿ ‘ಕೆಡಿ’ ಅಬ್ಬರ: ಧ್ರುವ ಸರ್ಜಾ ಚಿತ್ರಕ್ಕೆ ಸ್ಯಾಂಡಲ್‌ವುಡ್ ಫುಲ್ ಸಪೋರ್ಟ್!

    ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ‘ಕೆಡಿ’ (KD – The Devil) ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಏಪ್ರಿಲ್ 30ರಂದು ಅದ್ಧೂರಿಯಾಗಿ ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಾತ್ರವಲ್ಲದೆ, ಇಡೀ ಚಿತ್ರರಂಗದಿಂದಲೇ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ.

    ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳಿಗೆ ಇತರೆ ಕಲಾವಿದರು ಬೆಂಬಲ ನೀಡುವುದುಂಟು, ಆದರೆ ‘ಕೆಡಿ’ ವಿಷಯದಲ್ಲಿ ಇಡೀ ಸ್ಯಾಂಡಲ್‌ವುಡ್ ಒಂದಾಗಿ ನಿಂತಿದೆ. ಎ.ಪಿ. ಅರ್ಜುನ್, ತರುಣ್ ಸುಧೀರ್, ಧನಂಜಯ್, ಡಾರ್ಲಿಂಗ್ ಕೃಷ್ಣ, ರಾಗಿಣಿ ದ್ವಿವೇದಿ, ದೀಕ್ಷಿತ್ ಶೆಟ್ಟಿ ಹಾಗೂ ಚಂದನ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಸೋಶಿಯಲ್ ಮೀಡಿಯಾ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಸೆಲೆಬ್ರಿಟಿಗಳ ಈ ಓಪನ್ ಸಪೋರ್ಟ್ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ.

    ನಿರ್ದೇಶಕ ಜೋಗಿ ಪ್ರೇಮ್ ಅವರು ಕೇವಲ ಆಕ್ಷನ್ ಮಾತ್ರವಲ್ಲದೆ, ಕಥೆಯಲ್ಲಿ ಎಮೋಷನಲ್ ಮತ್ತು ಸೆಂಟಿಮೆಂಟ್ ಮಿಶ್ರಣ ಮಾಡಿರುವುದು ಪ್ರೇಕ್ಷಕರಿಗೆ ಕನೆಕ್ಟ್ ಆಗಿದೆ. ಅರ್ಜುನ್ ಜನ್ಯ ಸಂಗೀತದ ಹಾಡುಗಳು ಈಗಾಗಲೇ ವೈರಲ್ ಆಗಿದ್ದು, ಥಿಯೇಟರ್‌ನಲ್ಲಿ ಅಭಿಮಾನಿಗಳು ಹಾಡುಗಳಿಗೆ ಸಖತ್ ಸ್ಟೆಪ್ ಹಾಕುತ್ತಿದ್ದಾರೆ.

    KVN ಪ್ರೊಡಕ್ಷನ್ಸ್ ಅಡಿಯಲ್ಲಿ ಹೈ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಮೊದಲ ದಿನದಿಂದಲೇ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಇಂದು ಮತ್ತು ನಾಳೆ ವೀಕೆಂಡ್ ರಜೆ ಇರುವುದರಿಂದ ಚಿತ್ರದ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

    ಕನ್ನಡದಲ್ಲಿ ಸದ್ದು ಮಾಡುತ್ತಿರುವ ‘ಕೆಡಿ’ ಶೀಘ್ರದಲ್ಲೇ ಬೇರೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಸ್ಯಾಂಡಲ್‌ವುಡ್‌ನ ಈ ಒಗ್ಗಟ್ಟು ಮತ್ತು ಧ್ರುವ ಸರ್ಜಾ ಅವರ ಮಾಸ್ ಅವತಾರ ನೋಡಿದರೆ, ಸಿನಿಮಾ ದೊಡ್ಡ ಮಟ್ಟದ ಹಿಟ್ ಆಗುವುದು ಖಚಿತ ಎನ್ನಲಾಗುತ್ತಿದೆ.

  • ಸಂಭ್ರಮ ಸಡಗರದಿಂದ ಜರುಗಿದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ.

    ಸಂಭ್ರಮ ಸಡಗರದಿಂದ ಜರುಗಿದ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ಬ್ರಹ್ಮರಥೋತ್ಸವ.

    ಮಹದೇವಪುರ: ಹೂಡಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ ಭಕ್ತರ ಜಯ ಘೋಷದೊಂದಿಗೆ ವಿಜೃಂಭಣೆಯಿಂದ ನೆರವೇರಿತು.

    ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು.

    ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಮೆರವಣಿಗೆಯಲ್ಲಿ ತಂದು ಅಲಂಕೃತ ರಥದಲ್ಲಿ ಬೆಳಿಗ್ಗೆ 10.30ಕ್ಕೆ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಲಾಯಿತು. ಪೂಜಾರಿಗಳು ರಥದಲ್ಲಿ ಮತ್ತೊಮ್ಮೆ ಪೂಜೆ ಸಲ್ಲಿಸಿದ ಬಳಿಕ ದೇವಾಲಯದ ಸೇವಾ ಮಂಡಳಿ ಸದಸ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು. ಹೂಡಿ ಗ್ರಾಮದ ಪ್ರಮುಖ ಬೀದಿಯಲ್ಲಿ ರಥವನ್ನ ಗ್ರಾಮಸ್ಥರು ಭಕ್ತಿಭಾವದಿಂದ ಎಳೆದರು.

    ರಥಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣು, ದವನ, ಹೂ ಮುಂತಾದ ಮಂಗಳಕರ ವಸ್ತುಗಳನ್ನು ಅರ್ಪಿಸಿ ಹರಕೆ ತೀರಿಸಿದರು.
    ರಥದ ಮುಂದೆ ಸಿಂಗಾರಗೊಂಡ ಎತ್ತುಗಳ ಬಂಡಿ, ಕಂಸಾಳೆ, ಡೊಳ್ಳು ಕುಣಿತ, ತಮಟೆ ಹಾಗೂ ಮಂಗಳವಾದ್ಯಗಳ ನಾದ ರಥೋತ್ಸವಕ್ಕೆ ಮೆರೆಗನ್ನು‌ ನೀಡಿತು.

    ಹೂಡಿ, ತಿಗಳರಪಾಳ್ಯ, ರಾಜಪಾಳ್ಯ, ಅಯ್ಯಪ್ಪನಗರ, ಕಾವೇರಿ ನಗರ, ಗರುಡಾಚಾರ್ ಪಾಳ್ಯ, ಮಹದೇವಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು.

    ಭಕ್ತರಿಗಾಗಿ ಅನ್ನದಾಸೋಹ, ಪಾನಕ ಹಾಗೂ ಮಜ್ಜಿಗೆ ವಿತರಣೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲರೂ ಅದನ್ನು ಸವಿದು ಧಾರ್ಮಿಕ ಉತ್ಸವವನ್ನು ಸಾರ್ಥಕಗೊಳಿಸಿದರು.

    ಐದು ದಿನಗಳ ಕಾಲ ನಡೆಯುವ ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದ್ದು, ಜನರಲ್ಲಿ ಸಂತಸ ಮತ್ತು ಉತ್ಸಾಹ ತುಂಬಿದವು. ಗ್ರಾಮಸ್ಥರು ಹಾಗೂ ಭಕ್ತರು ಉತ್ಸವವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿದರು.

    ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಾಲಯ ಸಮಿತಿಯ ಪದಾಧಿಕಾರಿಗಳಾದ ಹೆಚ್.ಟಿ. ಶ್ರೀನಿವಾಸ್ ರೆಡ್ಡಿ, ಹೆಚ್.ಎಸ್. ಪಿಳ್ಳಪ್ಪ, ಮಂಜುನಾಥ್, ಹೆಚ್.ಎನ್. ಮೋಹನ್ ರೆಡ್ಡಿ, ಅನೂಪ್ ಕುಮಾರ್, ಓಂ ಶಕ್ತಿ ಶ್ರೀನಿವಾಸ್ ರೆಡ್ಡಿ, ವಿಶ್ವನಾಥ್ ರೆಡ್ಡಿ,ಆಂಜಿನಪ್ಪ, ನರೇಂದ್ರ ಬಾಬು, ವಿಜಯ್ ಗೌಡ, ಮಹೇಶ್ ಗೌಡ, ಪವನ್ ಶೆಟ್ಟಿ, ಪವನ್ ರೆಡ್ಡಿ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

  • ಸಾವು ಕೂಡ ಬೇರ್ಪಡಿಸಲಿಲ್ಲ ತಾಯಿ-ಮಗುವಿನ ಪ್ರೀತಿ: ಜಬಲ್ಪುರ ಬೋಟ್ ದುರಂತದ ಈ ಫೋಟೋ ನೋಡಿದರೆ ಕಣ್ಣೀರು ಗ್ಯಾರಂಟಿ!

    ಸಾವು ಕೂಡ ಬೇರ್ಪಡಿಸಲಿಲ್ಲ ತಾಯಿ-ಮಗುವಿನ ಪ್ರೀತಿ: ಜಬಲ್ಪುರ ಬೋಟ್ ದುರಂತದ ಈ ಫೋಟೋ ನೋಡಿದರೆ ಕಣ್ಣೀರು ಗ್ಯಾರಂಟಿ!

    ಜಬಲ್ಪುರ: ಮಧ್ಯಪ್ರದೇಶದ ಜಬಲ್ಪುರದ ಬಾರ್ಗಿ ಡ್ಯಾಮ್‌ನಲ್ಲಿ ನಡೆದ ಭೀಕರ ಬೋಟ್ ದುರಂತವು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ 9 ಮಂದಿ ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಚರಣೆಯ ವೇಳೆ ಕಂಡುಬಂದ ಒಂದು ದೃಶ್ಯ ಮಾತ್ರ ಕಲ್ಲು ಹೃದಯವನ್ನೂ ಕರಗಿಸುವಂತಿದೆ.

    ಮಗುವನ್ನು ಎದೆಗಪ್ಪಿಕೊಂಡೇ ಶವವಾದ ತಾಯಿ!
    ದುರಂತ ಸಂಭವಿಸಿದ ನರ್ಮದಾ ನದಿಯಿಂದ ಶವಗಳನ್ನು ಹೊರತೆಗೆಯುವಾಗ ದೆಹಲಿ ಮೂಲದ ತಾಯಿಯೊಬ್ಬಳು ತನ್ನ ಪುಟ್ಟ ಮಗುವನ್ನು ಎದೆಗೆ ಗಟ್ಟಿಯಾಗಿ ಅಪ್ಪಿಕೊಂಡ ಸ್ಥಿತಿಯಲ್ಲೇ ಪತ್ತೆಯಾಗಿದ್ದಾಳೆ. ಸಾವು ಎದುರಾದ ಕ್ಷಣದಲ್ಲೂ ತನ್ನ ಮಗುವನ್ನು ಹೇಗಾದರೂ ಮಾಡಿ ಬದುಕಿಸಬೇಕೆಂಬ ತಾಯಿಯ ಆ ಹಂಬಲ ಈ ಫೋಟೋದಲ್ಲಿ ಎದ್ದು ಕಾಣುತ್ತಿದೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, “ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದು ನೆಟ್ಟಿಗರು ಕಂಬನಿ ಮಿಡಿಯುತ್ತಿದ್ದಾರೆ.

    ಲೈಫ್ ಜಾಕೆಟ್ ಇದ್ದರೂ ಬದುಕಲಿಲ್ಲ ಏಕೆ?
    ಈ ತಾಯಿ-ಮಗು ಇಬ್ಬರೂ ಒಂದೇ ಲೈಫ್ ಜಾಕೆಟ್ ಧರಿಸಿದ್ದರು. ಆದರೂ ಅವರು ಬದುಕಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ, ಬೋಟ್ ಮಗುಚಿದಾಗ ಅವರು ಬೋಟ್‌ನ ಕ್ಯಾಬಿನ್ ಒಳಭಾಗದಲ್ಲಿ ಸಿಲುಕಿಕೊಂಡಿದ್ದರು. ಕ್ಯಾಬಿನ್ ಬಾಗಿಲು ತೆರೆಯಲಾಗದೆ ನೀರಿನಿಂದ ಮೇಲೆ ಬರಲು ಸಾಧ್ಯವಾಗದೆ ಉಸಿರುಗಟ್ಟಿ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ.

    ದುರಂತದ ವಿವರಗಳು:
    ಸ್ಥಳ: ಬಾರ್ಗಿ ಡ್ಯಾಮ್, ಜಬಲ್ಪುರ (ಮಧ್ಯಪ್ರದೇಶ).
    ಸಾವಿನ ಸಂಖ್ಯೆ: ಇದುವರೆಗೆ 9 ಮಂದಿ ಮೃತಪಟ್ಟಿದ್ದು, 17 ಜನರನ್ನು ರಕ್ಷಿಸಲಾಗಿದೆ.

    ಕಾರಣ: ಸಾಮರ್ಥ್ಯಕ್ಕಿಂತ ಹೆಚ್ಚು ಪ್ರವಾಸಿಗರನ್ನು ತುಂಬಿಸಿಕೊಂಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
    ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಿಸಿದ್ದಾರೆ.

    ಪ್ರವಾಸೋದ್ಯಮ ಸಚಿವ ಧರ್ಮೇಂದ್ರ ಭಾವ್ ಸಿಂಗ್ ಲೋಧಿ ಅವರು ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

  • ತಳ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯ – ಸ್ವಾಮೀಜಿಗಳ ಅಭಿಪ್ರಾಯ

    ತಳ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಅಗತ್ಯ – ಸ್ವಾಮೀಜಿಗಳ ಅಭಿಪ್ರಾಯ

    ದಾವಣಗೆರೆ : ದೇವಾಲಯ ಪ್ರವೇಶದಂತಹ ಮೂಲಭೂತ ಹಕ್ಕುಗಳಿಗೂ ತಡೆ ಎದುರಾಗಿ ದೌರ್ಜನ್ಯಗಳು ನಡೆಯುವಾಗ ತಳ ಸಮುದಾಯಗಳು ಸಹಜವಾಗಿ ಮತಾಂತರದ ಮೂಲಕ ಪ್ರತಿರೋಧ ವ್ಯಕ್ತಪಡಿಸುತ್ತವೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.

    ಪ್ರಬಲ ವರ್ಗಗಳು ತಳ ಸಮುದಾಯಗಳನ್ನು ಸಮಾನವಾಗಿ ಅಪ್ಪಿಕೊಂಡಿದ್ದರೆ ಇಂತಹ ಪರಿಸ್ಥಿತಿ ಉದ್ಭವಿಸದೇ ಇರ್ತಿತ್ತೇ ಎಂದು ಅವರು ಅಭಿಪ್ರಾಯಪಟ್ಟರು.

    ಯರಗುಂಟೆ ಗ್ರಾಮದಲ್ಲಿ ಕುಂಚಿಟಿಗ ಸಮಾಜದಿಂದ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅವರ ಪೂರ್ವಾಶ್ರಮದ ಪಾಲಕರಿಗೆ ಮನೆ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಮತಾಂತರವು ಸೂಕ್ಷ್ಮ ವಿಚಾರವಾಗಿದ್ದು, ಅದರ ಹಿಂದೆ ಇರುವ ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ದೌರ್ಜನ್ಯವನ್ನೇ ನೆಪವನ್ನಾಗಿ ಮಾಡಿಕೊಂಡು ಕೆಲವರು ಮತಾಂತರಗೊಳ್ಳುತ್ತಿರುವುದೂ ಇದೆ; ಆದರೆ ಆಸೆ-ಆಮಿಷಗಳು ಸೇರಿದಂತೆ ಹಲವು ಕಾರಣಗಳು ಇದಕ್ಕೆ ಕಾರಣವಾಗುತ್ತಿವೆ. ಮುಖ್ಯವಾಹಿನಿಯಲ್ಲಿರುವವರು ತಳ ಸಮುದಾಯಗಳನ್ನು ಜೊತೆಗೂಡಿಸಿಕೊಂಡು ಸಾಗಿದರೆ ಈ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ಅವರು ಹೇಳಿದರು.

    ಹಿಂದಿನ ದಿನಗಳಲ್ಲಿ ತಳ ಸಮುದಾಯದವರಿಗೆ ಧಾರ್ಮಿಕ ಸಂಸ್ಥೆಗಳ ನಿರ್ವಹಣೆಯಲ್ಲಿ ಅವಕಾಶ ದೊರಕಿದ್ದರೆ, ಇಂದಿನ ಮತಾಂತರದ ಸಮಸ್ಯೆ ಇಷ್ಟು ತೀವ್ರವಾಗಿರುತ್ತಿರಲಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಯಾವುದೇ ಸಮಸ್ಯೆ ಎದುರಾದರೂ ಭಾರತೀಯ ಮೌಲ್ಯಗಳನ್ನು ಬಿಟ್ಟು ಹೋಗಬಾರದು ಎಂಬುದು ಮಠಾಧೀಶರ ಆಶಯವೆಂದು ಹೇಳಿದರು.ಸನಾತನ ಧರ್ಮಕ್ಕೆ ಹೊರಗಿನ ಧರ್ಮಗಳಿಂದ ಅಪಾಯವಿಲ್ಲ, ಆದರೆ ಧಾರ್ಮಿಕ ಅಸಮತೋಲನವೇ ದೊಡ್ಡ ಸವಾಲು ಎಂದು ಪತ್ರಕರ್ತ ರವಿ ಹೆಗಡೆ ಕಳವಳ ವ್ಯಕ್ತಪಡಿಸಿದರು. ಮೇಲು-ಕೀಳು ಎಂಬ ಭೇದಭಾವ ಮುಂದುವರಿದರೆ ಧರ್ಮಕ್ಕೆ ಅಪಾಯ ಹೆಚ್ಚುತ್ತದೆ ಎಂದರು.

    ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಎಲ್ಲ ಮಠಾಧೀಶರು ಪ್ರಯತ್ನಿಸಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಮನವಿ ಮಾಡಿದರು.

    ಜಾತಿ ವ್ಯವಸ್ಥೆಯೇ ಹಿಂದೂ ಧರ್ಮಕ್ಕೆ ದೊಡ್ಡ ಸವಾಲಾಗಿದ್ದು, ರಾಜಕೀಯದಲ್ಲಿಯೂ ಅದರ ದುರುಪಯೋಗವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.ಜಾತೀಯತೆಯ ಅನುಭವಗಳನ್ನು ಸ್ವತಃ ನಾವು ಎದುರಿಸಿದ್ದೇವೆ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿ, ಇಂತಹ ಸ್ಥಿತಿ ಯಾರಿಗೂ ಎದುರಾಗಬಾರದು ಎಂದರು.

    ಕಾರ್ಯಕ್ರಮದಲ್ಲಿ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು