Category: Uncategorized

  • ಅಕ್ರಮ ಜಾನುವಾರು ಸಾಗಾಟ 18 ಜಾನುವಾರುಗಳು ವಶಕ್ಕೆ, ಓರ್ವನ ಬಂಧನ

    ಅಕ್ರಮ ಜಾನುವಾರು ಸಾಗಾಟ 18 ಜಾನುವಾರುಗಳು ವಶಕ್ಕೆ, ಓರ್ವನ ಬಂಧನ

    ಕಡಬ : ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿರುವ ಕಡಬ ಠಾಣಾ ಪೊಲೀಸರು ಸುಮಾರು 18 ಜಾನುವಾರುಗಳನ್ನು ಅಮಾನುಷವಾಗಿ ಸಾಗಿಸಲಾಗುತ್ತಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದಾರೆ‌.

    ಶುಕ್ರವಾರ ಬೆಳಗಿನ ಜಾವ ಹಾಸನದಿಂದ ಕೇರಳ ಕಡೆಗೆ ಕಂಟೇನರ್ ವಾಹನ ಒಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಕಡಬದ ಕನ್ವರೆ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿದ ಕಡಬ ಠಾಣಾ ಸಬ್ ಇನ್ಸ್‌ಪೆಕ್ಟರ್ ಜಂಬೂರಾಜ್ ಮಹಾಜನ್ ನೇತೃತ್ವದ ಪೊಲೀಸರ ತಂಡ ಓರ್ವನನ್ನು ಬಂಧಿಸಿದ್ದು ಮತ್ತೋರ್ವ ಪರಾರಿಯಾಗಿದ್ದಾನೆ.

    ಕಂಟೇನರ್ ನಲ್ಲಿ ಸುಮಾರು 18 ಜಾನುವಾರುಗಳನ್ನು ಅಮಾನುಷವಾಗಿ ಸಾಗಾಟ ಮಾಡಲಾಗುತ್ತಿರುವುದು ಕಂಡುಬಂದಿದೆ. ಬಂಧಿತ ಆರೋಪಿಯನ್ನು ಹೊಸೂರು ಮೂಲದ ಅಕ್ರಮ್ ಪಾಷಾ ಎಂದು ಗುರುತಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

  • ಇಂದಿನಿಂದ ಹೊಸ ದುಬಾರಿ ದುನಿಯಾ: ಏ.1ರಿಂದ ಏನೇನು ಬದಲಾವಣೆ? ಇಲ್ಲಿದೆ ಮಾಹಿತಿ

    ಇಂದಿನಿಂದ ಹೊಸ ದುಬಾರಿ ದುನಿಯಾ: ಏ.1ರಿಂದ ಏನೇನು ಬದಲಾವಣೆ? ಇಲ್ಲಿದೆ ಮಾಹಿತಿ

    ದೆಹಲಿ/ ಬೆಂಗಳೂರು: ಏಪ್ರಿಲ್ 1 ಹೊಸ ಆರ್ಥಿಕ ವರ್ಷ ಆರಂಭವಾಗುವ ದಿನ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಬೆಲೆ ಏರಿಕೆ ಪ್ರಸ್ತಾಪಗಳು ಬುಧವಾರದಿಂದಲೇ ಜಾರಿಯಾಗಲಿದೆ. ಇದರೊಂದಿಗೆ ಕೊಲ್ಲಿ ಯುದ್ಧದ ಕಾರಣ ಇನ್ನಷ್ಟು ವಸ್ತುಗಳು ದುಬಾರಿಯಾಗಲಿದ್ದು ಜನರನ್ನು ಸಂಕಷ್ಟಕ್ಕೀಡು ಮಾಡುವ ನಿರೀಕ್ಷೆ ಇದೆ.

    ಆರ್ಥಿಕ ವರ್ಷದ ಮೊದಲ ದಿನದಿಂದಲೇ ರಾಜ್ಯ ದಲ್ಲಿ ವಾಣಿಜ್ಯ ಬಳಕೆಯ ವಿದ್ಯುತ್ ಮತ್ತು ರಾಷ್ಟ್ರೀ ಯ ಹೆದ್ದಾರಿಗಳಲ್ಲಿ ಟೋಲ್ ಏರಿಕೆಯಾಗಲಿದೆ. ಬೆಂಗಳೂರು ನಗರದಲ್ಲಿ ನೀರಿನ ದರವೂ ಏರಿಕೆಯಾಗಲಿದೆ. ಕೇಂದ್ರ ಸರಕಾರ ಗೃಹಬಳಕೆ ಸಿಲಿಂಡ‌ರ್ ದರವನ್ನು ಈಗಾಗಲೇ ಏರಿಸಿದ್ದು, ಯುದ್ಧ ಮುಂದುವರಿದರೆ ಉಳಿದ ಪೆಟ್ರೋಲಿಯಂ ಉತ್ಪನ್ನಗಳ ದರವನ್ನೂ ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಖಾಸಗಿ ಇಂಧನ ಕಂಪನಿಗಳು ಈಗಾಗಲೇ ದರ ಏರಿಸಿದ್ದು ಪೆಟ್ರೋಲ್ ದರ 100ರ ಗಡಿ ದಾಟಿದೆ.

    ರಾಜ್ಯದ ಟೋಲ್ ಪ್ಲಾಜಾಗಳಲ್ಲಿ ಶೇ.3 ರಿಂದ 5ರಷ್ಟು ಟೋಲ್ ದರ ಏರಿಕೆಯಾಗಲಿದ್ದು, ಕಾರುಗಳಿಗೆ 5ರಿಂದ 10 ರು. ಟೋಲ್ ಹೆಚ್ಚಳವಾಗಲಿದೆ. ವಾಣಿಜ್ಯ ಬಳಕೆಯ ವಾಹನಗಳು 15ರಿಂದ 40 ರು. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತನ್ನ ವಾರ್ಷಿಕ ಪಾಸ್ ದರವನ್ನು 2026-27ನೇ ಸಾಲಿಗೆ 75 ರೂ. ಹೆಚ್ಚಳ ಮಾಡಿ ಹೊರಡಿಸಿದ ಅಧಿಸೂಚನೆ ಕೂಡ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ವಾರ್ಷಿಕ ಪಾಸ್ ದರವು 3,000ರಿಂದ 3,075 ರು.ಗಳಿಗೆ ಏರಿಕೆಯಾಗಲಿದೆ. ನೀರು, ವಿದ್ಯುತ್‌ ದರ ಪರಿಷ್ಕರಣೆ: ಬೆಂಗಳೂರು ನೀರು ಸರಬರಾಜು, ಒಳಚರಂಡಿ ಮಂಡಳಿ ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀರಿನ ದರವನ್ನು ಶೇ.3ರಷ್ಟು ಹೆಚ್ಚಳ ಮಾಡಲಿದ್ದು, ಇದರಿಂದ ಬೆಂಗಳೂರಿಗರಿಗೆ ಮತ್ತೊಂದು ಹೊರೆ ಬೀಳಲಿದೆ.

    ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಎಸ್ಕಾಂಗಳ ಒತ್ತಾಯಕ್ಕೆ ಮಣಿದು 2025-26ನೇ ಸಾಲಿಗೆ ಪೂರ್ವಾನ್ವಯವಾಗುವಂತೆ ವಿದ್ಯುತ್ ದರ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಇದರಿಂದ ಹೊಸ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳು ಮತ್ತು ವಾಣಿಜ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಸಿಲಿಂಡ‌ರ್ ಕೊರತೆ, ನೀರು ಮತ್ತು ವಿದ್ಯುತ್‌ ದರ ಏರಿಕೆ ಹಿನ್ನೆಲೆಯಲ್ಲಿ ಹೊಟೇಲ್ ಮಾಲೀಕರೂ ದರ ಏರಿಸುವ ಸಾಧ್ಯತೆ ಇದೆ. ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲಿ ಕಬ್ಬಿಣ, ಉಕ್ಕು, ಸಿಮೆಂಟ್ ಮತ್ತಿತರ ಮೂಲ ಸೌಕಯ್ಯ ಉತ್ಪನ್ನಗಳ ಬೆಲೆಯಲ್ಲೂ ಏರಿಕೆ ಕಂಡು ಬಂದಿವೆ. ಪ್ಲಾಸ್ಟಿಕ್ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಿದೆ. ಇದೇ ವೇಳೆ ಅಟೋ ಮೊಬೈಲ್ ಉದ್ದಿಮೆಗಳು ಏಪ್ರಿಲ್ ಒಂದರಿಂದ ದ್ವಿಚಕ್ರ ಮತ್ತು ಕಾರುಗಳ ಬೆಲೆ ಏರಿಸುವುದಾಗಿ ಈಗಾಗಲೇ ಪ್ರಕಟಿಸಿವೆ. ಎಲೆಕ್ಟ್ರಾನಿಕ್ ಉತ್ಪನ್ನಗಳ ದರದಲ್ಲೂ ಏರಿಕೆ ನಿಶ್ಚಿತವಾಗಿದೆ. ಬಿಟುಮೆನ್ ಕೊರತೆಯಿಂದ ದೇಶದ ರಸ್ತೆ ಕಾಮಗಾರಿಗಳೂ ವಿಳಂಬವಾಗಲಿದ್ದು ಕಾಮಗಾರಿ ಮೊತ್ತ ಏರುವ ಸಾಧ್ಯತೆ ಇದೆ.

    ಏ.1ರಿಂದ ಏನೇನು ಬದಲಾವಣೆ?

    1. ಟೋಲ್‌ಗಳಲ್ಲಿ ಇನ್ನು ಮುಂದೆ ನಗದು ಪಾವತಿ ಸಂಪೂರ್ಣ  ಸ್ಥಗಿತ
    2. ಹೋಟೆಲ್‌ಗಳಲ್ಲಿ ಬಿಲ್ ಪಾವತಿ ಲಕ್ಷ ರು ದಾಟಿದರೆ ಪ್ಯಾನ್ ಕಡ್ಡಾಯ
    3. ರೈಲು ಹೊರಡುವ 8 ಗಂಟೆಗೆ ಮುನ್ನ ಮುಂಗಡ ಟಿಕೆಟ್ ರದ್ದುಪಡಿಸಿದರೆ ರೀಫಂಡ್ ಇಲ್ಲ
    4. ಶೇ.50 ಹೆಚ್‌ಆರ್‌ಎ ಸೌಲಭ್ಯದ ನಗರಗಳ ಪಟ್ಟಿಗೆ ಬೆಂಗಳೂರು ಸೇರ್ಪಡೆ
    5. ಉದ್ಯೋಗಿಯ ಮೂಲ ವೇತನ, ಒಟ್ಟು ವೇತನದ (ಸಿಟಿಸಿ) ಕನಿಷ್ಠ ಶೇ.50 ಕಡ್ಡಾಯ
    6. ಹೊಸ ಆದಾಯ ತೆರಿಗೆ ಕಾಯಿದೆ ಜಾರಿ, ತೆರಿಗೆ ವಂಚನೆ ತಡೆಗೆ ಮತ್ತಷ್ಟು ಕ್ರಮ
    7. ಬ್ಯಾಂಕ್‌ಗಳಲ್ಲಿ ವಾರ್ಷಿಕ 10 ಲಕ್ಷ ಒಳಗಿನ ಹಣ ಠೇವಣಿಗೆ ಪ್ಯಾನ್ ಅಗತ್ಯವಿಲ್ಲ.
  • ಬಸವನಪುರ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಭಕ್ತಿಭಾವದ ರಾಮನವಮಿ ಆಚರಣೆ.

    ಬಸವನಪುರ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಭಕ್ತಿಭಾವದ ರಾಮನವಮಿ ಆಚರಣೆ.

    ಕೆ.ಆರ್.ಪುರ: ಶ್ರೀ ರಾಮನವಮಿ ಪ್ರಯುಕ್ತ ಕ್ಷೇತ್ರದ ವಿವಿಧೆಡೆ ರಾಮನವಮಿ ಭಕ್ತಿ-ಭಾವದಿಂದ ಜರುಗಿತು. ಬಸವನಪುರ ಅಭಯ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಮತ್ತಿತರ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನಕ್ಕೆ ಭಕ್ತರು ಬೆಳಿಗ್ಗೆಯಿಂದಲೇ ಕುಟುಂಬ ಸಮೇತ ಭೇಟಿ ನೀಡಿ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

    ಆಂಜನೇಯ ಸ್ವಾಮಿಗೆ ಬಂಗಾರ ಲೇಪಿತ ವಜ್ರಾಂಗಿ ಕವಚ ಅಲಂಕಾರ,ದಿಂಡು ಹೂವಿನ ಅಲಂಕಾರದಿಂದ ಆಂಜನೇಯ ಸ್ವಾಮಿಯು ಕಂಗೊಳಿಸುತ್ತಿತ್ತು, ಮುಂಜಾನೆಯೇ ಅಭಿಷೇಕ, ಹೋಮ ಹವನ, ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು.

    ಬಸವನಪುರ ಸುತ್ತಮುತ್ತಲಿನ ಗ್ರಾಮಗಳಾದ ಗಾಯಿತ್ರಿ ಬಡವಣೆ,ಅಜೀತ್ ಲೇಔಟ್, ವಿಜಯಬ್ಯಾಂಕ್ ಕಾಲೋನಿ, ಸ್ವತಂತ್ರನಗರ,ಅಯ್ಯಪ್ಪ ನಗರ,ಪ್ರಿಯದರ್ಶಿನಿ ಬಡಾವಣೆ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಪಡೆದರು.

    ಬೆಳಗ್ಗೆ ಮಹಾಮಂಗಳಾರತಿ ಮಾಡಿ ಪಾನಕ,ಮಜ್ಜಿಗೆ, ಕೋಸಂಬರಿ ಮತ್ತು ಸಾವಿರಾರು ಜನರಿಗೆ ಪ್ರಸಾದ ವಿನಿಯೋಗ ನಡೆಯಿತು. ರಸ್ತೆಯಲ್ಲಿ ಸಂಚರಿಸುವ ನೂರಾರು ಜನ ಹಾಗೂ ವಾಹನ ಸವಾರರು ಪ್ರಸಾದವನ್ನ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು.

    ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ್,ಗೋವಿಂದ,ಗಂಗಧರ್,ವೆಂಕಟಪ್ಪ,ಕುಪ್ಪಸ್ವಾಮಿ, ಮುನಿಸ್ವಾಮಿ ರೆಡ್ಡಿ, ನಾರಯಣಸ್ವಾಮಿ,ವಿ ಮಂಜುನಾಥ್, ವಿ.ಸುಭ್ರಮಣಿ,ಗಂಗು,ವಿಜಿ ಪ್ರತಾಪ್,,ಮೋಹನ್ ಮತ್ತಿತರರು ಇದ್ದರು.

  • ಧುರಂಧರ್ 2 ಎದುರು ಸೋಲಲಿಲ್ಲ ಸಣ್ಣ ಸಿನಿಮಾಗಳು! ಲವ್ ಮಾಕ್ಟೇಲ್ 3ಗೆ ಜೈ ಎಂದ ಕನ್ನಡ ಪ್ರೇಕ್ಷಕರು

    ಧುರಂಧರ್ 2 ಎದುರು ಸೋಲಲಿಲ್ಲ ಸಣ್ಣ ಸಿನಿಮಾಗಳು! ಲವ್ ಮಾಕ್ಟೇಲ್ 3ಗೆ ಜೈ ಎಂದ ಕನ್ನಡ ಪ್ರೇಕ್ಷಕರು

    ಬೆಂಗಳೂರು: ದೊಡ್ಡ ಸಿನಿಮಾಗಳು ತೆರೆಗೆ ಬಂದಾಗ ಸಣ್ಣ ಸಿನಿಮಾಗಳು ರಿಲೀಸ್ ಮಾಡಲು ಹಿಂದೇಟು ಹಾಕಲಾಗುತ್ತೆ.. ಸ್ಕ್ರೀನ್ ಸಿಗೋದಿಲ್ಲ ಅನ್ನೋದು ಒಂದು ಕಾರಣವಾದ್ರೆ ನೋಡುಗರು ದೊಡ್ಡ ದೊಡ್ಡ ಸಿನಿಮಾಗಳ ಅಲೆಯಲ್ಲಿ ಸಣ್ಣ ಸಿನಿಮಾಗಳು ಕೊಚ್ಚಿ ಹೋಗಬಹುದು ಎಂಬುದು ಇನ್ನೊಂದು ಆತಂಕ.

    ಅದ್ರೀಗ ಧುರಂಧರ್2 ಸುನಾಮಿಯ ಮುಂದೆಯೂ ಸೌತ್ ನ ಸಣ್ಣ ಸಿನಿಮಾಗಳು ಅಥವಾ ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದ ಸಿನಿಮಾಗಳು ಹೇಳಿಕೊಳ್ಳುವಂತಹ ಬಜೆಟ್ ಇಲ್ಲದ ಸಿನಿಮಾಗಳು ದೊಡ್ಡ ಸೌಂಡ್ ಮಾಡ್ತಿವೆ.

    ಲವ್ ಮಾಕ್ಟೇಲ್ಗೆ ಗುಡ್ ರೆಸ್ಪಾನ್ಸ್

    ಧುರಂಧರ್2 ಎದುರು ಬಂದ ನಮ್ಮ ಕನ್ನಡದ ಸಿನಿಮಾ ಲವ್ ಮಾಕ್ಟೇಲ್3 ಸಿನಿಮಾ ತನ್ನ ಎಮೋಷನಲ್ ಕಂಟೆಂಟ್ ಮೂಲಕವೇ ಪ್ರೇಕ್ಷಕರನ್ನ ಥಿಯೇಟರ್ ನತ್ತ ಸೆಳೆಯುತ್ತಿದೆ. ಡಾರ್ಲಿಂಗ್ ಕೃಷ್ಣ ನಿರ್ಮಿಸಿ, ನಿರ್ದೇಶನ ಮಾಡುವುದರ ಜೊತೆ ನಟನೆ ಮಾಡಿರೋ ಈ ಸಿನಿಮಾ ಯಾವುದೇ ಪ್ರಚಾರವಿಲ್ಲದೆ ತೆರೆಗೆ ಬಂತು.

    ಸದ್ದು ಗದ್ದಲವಿಲ್ಲದೆ ಬಂದಿದ್ದು ನೋಡಿ ಯಾರಿಗೂ ಗೊತ್ತಾಗಲ್ಲ.. ಜನರನ್ನ ಸೆಳೆಯೋದಿಲ್ಲ ಅಂತ್ಲೇ ಎಲ್ಲರೂ ಭಾವಿಸಿದ್ರು.. ಆದ್ರೀಗ ಈ ಸಿನಿಮಾ ಸಕ್ಸಸ್ ನತ್ತ ಸಾಗಿದೆ. ಮೊದಲ ಮೂರು ದಿನಗಳಲ್ಲಿ 6 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿರೋ ಲವ್ ಮಾಕ್ಟೇಲ್3 ಸಿನಿಮಾ 2026ರಲ್ಲಿ ಇಲ್ಲಿಯವರೆಗೂ ಬಂದಿರೋ ಕನ್ನಡ ಸಿನಿಮಾಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

    ಮುಂದಿನ ದಿನಗಳಲ್ಲಿ ಈ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಒಳ್ಳೆಯ ಸಿನಿಮಾ ಮಾಡುದ್ರೆ ಜನ ಬರ್ತಾರೆ ಎಂಬ ಮಾತು ಮತ್ತೊಮ್ಮೆ ಲವ್ ಮಾಕ್ಟೇಲ್3 ಸಿನಿಮಾ ಮೂಲಕ ನಿರೂಪಿತವಾಗಿದೆ.

    ತಮಿಳಿನ ಯೂಥ್ ಕೂಡಾ ಕ್ಲಿಕ್ ಆಯ್ತು

    ಇನ್ನು ತಮಿಳಿನಲ್ಲಿ ಯೂಥ್ ಎಂಬ ಸಿನಿಮಾ ಬಂದಿದೆ.. ಕೆನ್ ಕರುಣಾಕರನ್ ನಿರ್ದೇಶನದ ಈ ಸಿನಿಮಾದ ಕಮಿಂಗ್ ಏಜ್ ರೊಮ್ಯಾಂಟಿಕ್ ಲವ್ ಸ್ಟೋರಿ ಅಂತ್ಲೇ ಕರೆಸಿಕೊಳ್ತಾ ಇದ್ದು, ಕಾಲಿವುಡ್ ಬಾಕ್ಸಾಫೀಸ್ ಚಿಂದಿ ಉಡಾಯಿಸ್ತಾ ಇದೆ.

    ಸಿಲಂಬರಸನ್ ಅಭಿಮಾನಿಯೊಬ್ಬನ ಸುತ್ತ ಸುತ್ತುವ ಕಥೆ ಸಖತ್ ಎಂಟರ್ ಟೈನಿಂಗ್ ಆಗಿದ್ದು, ಈ ಸಿನಿಮಾ ನೋಡಲು ಚಿತ್ರ ಪ್ರೇಮಿಗಳು ಮುಗಿ ಬೀಳ್ತಾ ಇದ್ದಾರೆ.. ಈ ಸಿನಿಮಾ ಮೊದಲ ಮೂರು ದಿನಗಳು 10 ಕೋಟಿಗೂ ಅಧಿಕ ಮೊತ್ತವನ್ನ ಗಳಿಸಿದೆ.. ಆ ಮೂಲಕ ಸೂಪರ್ ಹಿಟ್ ಎಂಬ ಟ್ಯಾಗ್ ಪಡ್ಕೊಂಡಿದೆ.

    ಇದಿಷ್ಟೇ ಅಲ್ಲದೆ ಮಲಯಾಳಂನಲ್ಲಿ ಆಡು3 ಎಂಬ ಸಿನಿಮಾ ಸಹ ಉಗಾದಿ ಪ್ರಯುಕ್ತ ತೆರೆಗೆ ಬಂದಿದೆ. ಇದು ಆಡು2 ಸಿನಿಮಾದ ಪ್ರಾಂಚೈಸಿ ಆಗಿದ್ದು ಈ ಸಿನಿಮಾಗೂ ಸಹ ಅದ್ಭುತ ರೆಸ್ಪಾನ್ಸ್ ಸಿಕ್ತಾ ಇದೆ. ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಆಗಿದ್ದು, ಚಿತ್ರರಸಿಕರು ಹೊಟ್ಟೆ ಉಣ್ಣಾಗುವಷ್ಟು ನಗುತ್ತಾ ಥಿಯೇಟರ್ ನಿಂದ ಆಚೆ ಬರ್ತಾ ಇದ್ದಾರೆ.

    ಉಸ್ತಾದ್ ಭಗತ್ ಸಿಂಗ್

    ಈ ಮೂರು ಸ್ಮಾಲ್ ಬಜೆಟ್ ಸಿನಿಮಾಗಳ ಜೊತೆ ತೆಲುಗಿನ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಸಹ ರಿಲೀಸ್ ಆಗಿದೆ. ಇದು ಪವನ್ ಕಲ್ಯಾಣ್ ನಟನೆಯ ಸಿನಿಮಾ. ಅದೇ ಮಾಮೂಲಿ ಮಾಸ್ ಮಸಾಲೆ ಸಿನಿಮಾ. ಜೊತೆಗೆ ರಿಮೇಕ್ ಎಂಬ ಹಣೆ ಪಟ್ಟಿ ಬೇರೆ.. ಹೀಗಾಗಿ ಫ್ರೆಶ್ ನೆಸ್ ಬಯಸೋ ಚಿತ್ರರಸಿಕರು ಈ ಚಿತ್ರವನ್ನ ಸಾರಸಗಟಾಗಿ ತಿರಸ್ಕರಿಸಿದ್ದಾರೆ.

    ತೆಲುಗು ನೆಲದಲ್ಲಿ ಒಂದು ಮಟ್ಟಿಗೆ ಒಳ್ಳೆಯ ಓಪನಿಂಗ್ ಪಡ್ಕೊಂಡಿರೋ ಈ ಸಿನಿಮಾ ಪವನ್ ಫ್ಯಾನ್ಸ್ ಬಿಟ್ಟು ನಾರ್ಮಲ್ ಆಡಿಯೆನ್ಸ್ ನ ಇಂಪ್ರೆಸ್ ಮಾಡಿಲ್ಲ.. ಒಟ್ಟಾರೆ ಪ್ಯಾನ್ ಇಂಡಿಯಾ ಯುಗ.. ಕೋಟಿ ಕೋಟಿ ಬಜೆಟ್… ವಿ.ಎಫ್.ಎಕ್ಸ್.. ದೊಡ್ಡ ಸ್ಟಾರ್ ಕಾಸ್ಟ್ ಇದ್ರೆ ಮಾತ್ರ ಜನ ಬರೋದು ಎಂಬ ಮಾತು ಮತ್ತೆ ಮತ್ತೆ ಸುಳ್ಳಾಗ್ತಿದೆ.. ಇನ್ಮೇಲಾದ್ರೂ ಕಥೆಗೆ ಅವಶ್ಯಕತೆ ಇಲ್ಲ ಅಂದ್ರೆ? ಪ್ಯಾನ್ ಇಂಡಿಯಾ ಮಾಡಬೇಕು ಎಂಬ ಹುಚ್ಚಿಗೆ ಬಿದ್ದು ಪ್ಯಾನ್ ಇಂಡಿಯಾ ಮಾಡೋರು ಪಾಠ ಕಲಿಯಲಿ.