ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡ ನೋವು ಅಭಿಮಾನಿಗಳ (Fans) ಮನಸ್ಸಿನಲ್ಲಿ ಇಂದಿಗೂ ಹಸಿರಾಗಿದೆ. 2021ರ ಅಕ್ಟೋಬರ್ 29ರಂದು ಹೃದಯಾಘಾತದಿಂದ (Heart Arrack) ಅವರು ಅಕಾಲಿಕವಾಗಿ ಮೃತಪಟ್ಟ ಸುದ್ದಿ ಇಡೀ ಕರ್ನಾಟಕವನ್ನು ದಿಗ್ಭ್ರಮೆಗೊಳಿಸಿತ್ತು.

ಅಂದು ಬೆಳಗ್ಗೆ ಎಂದಿನಂತೆ ವ್ಯಾಯಾಮಕ್ಕೆ ತೆರಳಿದ್ದ ಅಪ್ಪು, ಕೆಲವೇ ಗಂಟೆಗಳಲ್ಲಿ ಇಹಲೋಕ ತ್ಯಜಿಸಿದ್ದರು. ಆರೋಗ್ಯವಾಗಿದ್ದಂತೆ ಕಾಣುತ್ತಿದ್ದ ಪುನೀತ್ ಅವರಿಗೆ ಅಂದು ಏನಾಗಿತ್ತು? ಅವರ ಕೊನೆಯ ದಿನದ ಘಟನೆಗಳು ಹೇಗೆ ನಡೆದಿದ್ದವು? ಪುನೀತ್ ರಾಜ್‌ಕುಮಾರ್ ಅವರ ಕೊನೆಯ ದಿನದ ಘಟನೆಗಳನ್ನು ಕಾಲಾನುಕ್ರಮದಲ್ಲಿ ಮೆಲುಕು ಹಾಕಿದರೆ, ಅಂದು ನಡೆದ ಬೆಳವಣಿಗೆಗಳು ಎಷ್ಟು ವೇಗವಾಗಿ ಸಾಗಿದ್ದವು ಎಂಬುದು ತಿಳಿಯುತ್ತದೆ.

2021ರ ಅಕ್ಟೋಬರ್ 29ರಂದು ಬೆಳಗ್ಗೆ ಪುನೀತ್ ರಾಜ್‌ಕುಮಾರ್ ಎಂದಿನಂತೆ ಜಿಮ್‌ನಲ್ಲಿ ವ್ಯಾಯಾಮ ಮಾಡಿದ್ದರು. ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ನೀಡುತ್ತಿದ್ದ ಅವರು, ವ್ಯಾಯಾಮದ ಬಳಿಕ ಅಸ್ವಸ್ಥತೆ ಅನುಭವಿಸಿದ್ದರು. ಬಳಿಕ ತಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಿದ್ದರು. ವೈದ್ಯರು ಪರೀಕ್ಷೆ ನಡೆಸಿದಾಗ ಹೃದಯಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಯ ಲಕ್ಷಣಗಳು ಕಂಡುಬಂದಿದ್ದವು. ತಕ್ಷಣ ಆಸ್ಪತ್ರೆಗೆ ತೆರಳುವಂತೆ ವೈದ್ಯರು ಸೂಚಿಸಿದ್ದರು.

ಇದಾದ ಬಳಿಕ ಪುನೀತ್ ಅವರನ್ನು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬೆಳಗ್ಗೆ ಸುಮಾರು 11.40ಕ್ಕೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ವೈದ್ಯಕೀಯ ತಂಡ ತಕ್ಷಣ ತುರ್ತು ಚಿಕಿತ್ಸೆ ಆರಂಭಿಸಿ, ಅವರ ಜೀವ ಉಳಿಸಲು ಸತತ ಪ್ರಯತ್ನ ನಡೆಸಿತು.

ಆದರೆ, ವೈದ್ಯರ ಎಲ್ಲ ಪ್ರಯತ್ನಗಳ ಹೊರತಾಗಿಯೂ ಪುನೀತ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಅಂದು ಮಧ್ಯಾಹ್ನ 2.30ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ಆಸ್ಪತ್ರೆ ಘೋಷಿಸಿತು. ಕೇವಲ 46ನೇ ವಯಸ್ಸಿನಲ್ಲಿ ಅಪ್ಪು ಅಗಲಿದ ಸುದ್ದಿ ಕನ್ನಡಿಗರಿಗೆ ನಂಬಲಾಗದ ಆಘಾತ ನೀಡಿತ್ತು.

ಪುನೀತ್ ನಿಧನದ ಸುದ್ದಿ ಹರಡುತ್ತಿದ್ದಂತೆ ಆಸ್ಪತ್ರೆಯ ಬಳಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದರು. ತಮ್ಮ ನೆಚ್ಚಿನ ನಟನ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು.

ನಟನೆಯ ಮೂಲಕ ಜನರ ಮನಗೆದ್ದಿದ್ದ ಪುನೀತ್ ರಾಜ್‌ಕುಮಾರ್, ಸರಳ ವ್ಯಕ್ತಿತ್ವ ಮತ್ತು ಸಮಾಜಮುಖಿ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದರು. ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿತು. ವರ್ಷಗಳು ಕಳೆದರೂ ಅವರ ಸಿನಿಮಾಗಳು, ಹಾಡುಗಳು ಮತ್ತು ಜನಪರ ಕಾರ್ಯಗಳು ಅಭಿಮಾನಿಗಳ ಮನಸ್ಸಿನಲ್ಲಿ ಅವರನ್ನು ಜೀವಂತವಾಗಿರಿಸಿವೆ.

ಅಂದು ಬೆಳಗ್ಗೆ ವ್ಯಾಯಾಮಕ್ಕೆ ತೆರಳಿದ್ದ ಅಪ್ಪು, ಮಧ್ಯಾಹ್ನದ ವೇಳೆಗೆ ನಮ್ಮನ್ನೆಲ್ಲ ಅಗಲುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಅದಕ್ಕಾಗಿಯೇ ಅಕ್ಟೋಬರ್ 29 ಕನ್ನಡಿಗರ ಪಾಲಿಗೆ ಮರೆಯಲಾಗದ ದಿನವಾಗಿ ಉಳಿದಿದೆ.








ಸಾನ್ವಿ ಅವರ ಫೋಟೋಗೆ ಕಮೆಂಟ್ ಮಾಡಿರುವ ಹಲವಾರು ನೆಟ್ಟಿಗರು, ದೈವಿಕ ಶ್ರದ್ಧೆಯ ವಿಷಯದಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



