Category: ಹೊಸಕೋಟೆ

  • ಬೆಂ. ಗ್ರಾ. ಜಿಲ್ಲೆಯಲ್ಲಿ 8,04,534 ಮತದಾರರು,ಮಹಿಳಾ ಮತದಾರರೆ ಹೆಚ್ಚು: ಅರ್ಹ ಮತದಾರರನ್ನು ಕೈಬಿಟ್ಟಿಲ್ಲ ಡಿಸಿ ಅನುರಾಧ ಸ್ಪಷ್ಟನೆ.

    ಬೆಂ. ಗ್ರಾ. ಜಿಲ್ಲೆಯಲ್ಲಿ 8,04,534 ಮತದಾರರು,ಮಹಿಳಾ ಮತದಾರರೆ ಹೆಚ್ಚು: ಅರ್ಹ ಮತದಾರರನ್ನು ಕೈಬಿಟ್ಟಿಲ್ಲ ಡಿಸಿ ಅನುರಾಧ ಸ್ಪಷ್ಟನೆ.

    ಬೆಂ.ಗ್ರಾ. ಜಿಲ್ಲೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ತಿಳಿಸಿದರು.

    ಇಂದು ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಅಂತಿಮ ಮತದಾರ ಪಟ್ಟಿ ಪ್ರಕಟಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್ಐಆರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ನಡೆದಿದ್ದು ಅಂತಿಮ ಮತದಾರರ ಪಟ್ಟಿಯಲ್ಲಿ 3,95,473 ಪುರುಷ ಮತದಾರರು, 4,09,001 ಮಹಿಳಾ ಮತದಾರರು ಹಾಗೂ 60 ಇತರೆ ಮತದಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 8,04,534 ಮತದಾರರಿದ್ದಾರೆ.

    ವಿಧಾನಸಭಾ ಕ್ಷೇತ್ರವಾರು ಮಾಹಿತಿ

    1. ಹೊಸಕೋಟೆ ವಿಧಾನಸಭಾ ಕ್ಷೇತ್ರ- 1,08,430 ಪುರುಷರು, 1,11,757 ಮಹಿಳೆಯರು ಹಾಗೂ 4 ಇತರೆ ಮತದಾರರು ಸೇರಿದಂತೆ 2,20,191 ಮತದಾರರಿದ್ದಾರೆ.

    2. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 97,048 ಪುರುಷರು, 99,918 ಮಹಿಳೆಯರು ಹಾಗೂ 11 ಇತರೆ ಮತದಾರರು ಸೇರಿದಂತೆ 1,96,977 ಮತದಾರರಿದ್ದಾರೆ.

    3. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 95,589 ಪುರುಷರು, 98,740 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದಂತೆ 1,94,330 ಮತದಾರರಿದ್ದಾರೆ.

    4. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 94,406 ಪುರುಷರು, 98,586 ಮಹಿಳೆಯರು ಹಾಗೂ 44 ಇತರೆ ಮತದಾರರು ಸೇರಿದಂತೆ 1,93,036 ಮತದಾರರಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.

    3814 ಮತದಾರರ ಡಿಲಿಟ್

    ಎಸ್ಐಆರ್ ಪ್ರಕ್ರಿಯೆಯಲ್ಲಿ ಐವರು ಮೃತರು, 1,716 ಶಾಶ್ವತ ವಲಸೆ ಹೋಗಿರುತ್ತಾರೆ, 2,093 ಇತರೆಡೆ ನೋಂದಣಿ ಆಗಿರುವವರು ಸೇರಿ 3814 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.

    ಎಸ್ಐಆರ್ ಪ್ರಕ್ರಿಯೆಯಡಿ ನೋ ಮ್ಯಾಪಿಂಗ್ ಹಾಗೂ ಅನಾಮಲಿಸ್ (2002ಕ್ಕೆ ಮ್ಯಾಪಿಂಗ್ನಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳು) ಒಳಗೊಂಡಂತೆ 56349 ಮತದಾರರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗಿದೆ.

    18-19 ವರ್ಷ ವಯಸ್ಸಿನ 14,568 ಮತದಾರರಿದ್ದಾರೆ, 8,604 ಮಂದಿ 85 ವರ್ಷಕ್ಕೂ ಮೇಲ್ಪಟ್ಟ ಮತದಾರರಿದ್ದಾರೆ. 12,151 ವಿಶೇಷಚೇತನ ಮತದಾರರಿದ್ದಾರೆ. 06 ಎನ್ಆರ್ಐ (ಅನಿವಾಸಿ ಭಾರತೀಯ) ಮತದಾರರಿದ್ದಾರೆ.. 108 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. 3,95,473 ಪುರುಷ ಮತದಾರರಿದ್ದು, 4,09,061 ಮಹಿಳಾ ಮತದಾರರಿದ್ದಾರೆ. ಜನಸಂಖ್ಯೆಗನುಗುಣವಾಗಿ 1034 ಲಿಂಗಾನುಪಾತ ಇದೆ ಎಂದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 04 ಮತಕ್ಷೇತ್ರಗಳಲ್ಲಿ ನಡೆದ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ-2026 ಸಂಬಂಧ, ಎಲ್ಲಾ ಪ್ರಕ್ರಿಯೆ, ಪ್ರಗತಿ ಕುರಿತ ವಿವರಗಳನ್ನು ಹಾಗೂ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಅಧಿಕೃತ ವೆಬ್ ಸೈಟ್ https://voters.eci.gov.in/ & https://bangalorerural.nic.in/ ಮೂಲಕ ಪರಿಶೀಲಸಬಹುದು ಹಾಗೂ ಮತದಾರರ ಪಟ್ಟಿಯನ್ನು ಡೌನ್ ಮಾಡಿಕೊಳ್ಳಬಹುದು ಜೊತೆಗೆ ಎಲ್ಲಾ ಮತದಾರರ ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಪ್ರಚೂರ ಪಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವ ಅರ್ಹ ಮತದಾರರು ಸೇರ್ಪಡೆಗೆ ನಮೂನೆ-6ರ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

    ಪತ್ರಿಕಾ ಗೋಷ್ಠಿಯಲ್ಲಿ ಸಿಇಓ ಡಾ. ವಾಸಂತಿ ಅಮರ್, ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಎಸಿ ಮಂಜುನಾಥ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶಿವ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಅಶೋಕ್ ಕುಮಾರ್ ಡಿ,ತಾಲ್ಲೂಕು ಮತದಾರರ ನೋಂದಣಾಧಿಕಾರಿಗಳು, ಚುನಾವಣೆ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

  • ಹೊಸಕೋಟೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ 26 ಸಾವಿರ ಮತದಾರರ ಹೆಸರು ಡಿಲೀಟ್.

    ಹೊಸಕೋಟೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ 26 ಸಾವಿರ ಮತದಾರರ ಹೆಸರು ಡಿಲೀಟ್.

    ಹೊಸಕೋಟೆ :ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದಿಂದ ಕೈಗೊಂಡಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಅನರ್ಹ ಮತದಾರರನ್ನು ತೆಗೆದುಹಾಕುವುದರ ಜತೆಗೆ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಾಲೂಕು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ತಿಳಿಸಿದರು.

    ನಗರದ ತಾಲೂಕು ಪಂಚಾಯತ್ ಆವರಣದಲ್ಲಿ ನಡೆದ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು ಎಸ್‌ಐಆರ್ ಪ್ರಕ್ರಿಯೆಯ ಅಂತಿಮ ಹಂತ ತಲುಪಿದ್ದು, ಕ್ಷೇತ್ರದ ಅಂತಿಮ ಮತದಾರರ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಖಂಡರು, ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ವಿತರಿಸಲಾಗಿದೆ. ವಿವಿಧ ಹಂತಗಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಕ್ಷೇತ್ರದಲ್ಲಿ 246156ಇದ್ದ ಮತದಾರರ ಸಂಖ್ಯೆ ಸುಮಾರು 25950 ಮತದಾರರು ಡಿಲೀಟ್ ಆಗಿ 220206ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದರು.

    ಗೈರು, ಮೃತ, ಸ್ಥಳಾಂತರಗೊಂಡ ಹಾಗೂ ದ್ವಂದ್ವ ಮತದಾರರ ಪರಿಶೀಲನೆ ಕ್ಷೇತ್ರದಲ್ಲಿ ವಾಸವಿಲ್ಲದ ಮತದಾರರು, ಮೃತಪಟ್ಟಿದ್ದರೂ ಪಟ್ಟಿಯಲ್ಲಿ ಹೆಸರು ಉಳಿದಿರುವವರು, ಬೇರೆಡೆಗೆ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರನ್ನು ಗುರುತಿಸಿ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

    ಉದ್ಯೋಗ, ಕಾರ್ಖಾನೆ ಹಾಗೂ ವಿವಿಧ ಯೋಜನೆಗಳ ಕೆಲಸಗಳ ನಿಮಿತ್ತ ಬೇರೆ ರಾಜ್ಯಗಳಿಂದ ಬಂದಿದ್ದ ಅನೇಕರು ಕೆಲವು ವರ್ಷಗಳ ಬಳಿಕ ತಮ್ಮ ಊರುಗಳಿಗೆ ಮರಳಿದ್ದಾರೆ. ಇಂತಹವರ ಹೆಸರುಗಳು ಕ್ಷೇತ್ರದ ಪಟ್ಟಿಯಲ್ಲಿ ಮುಂದುವರಿದಿರುವ ಸಾಧ್ಯತೆಯನ್ನು ಪರಿಶೀಲಿಸಿ, ಗೈರು ಮತದಾರರ ವಿವರಗಳನ್ನು ದೃಢೀಕರಿಸಲಾಗಿದೆ ಎಂದು ಹೇಳುದರು.

    ಅದೇ ರೀತಿ ಮೃತಪಟ್ಟವರ ಮಾಹಿತಿಯನ್ನು ಪರಿಶೀಲಿಸಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಬೇರೆ ಊರು ಅಥವಾ ರಾಜ್ಯಗಳಿಗೆ ಸ್ಥಳಾಂತರಗೊಂಡವರ ವಿವರಗಳನ್ನು ಪರಿಶೀಲಿಸಲಾಗಿದೆ. ದ್ವಂದ್ವ ನೋಂದಣಿಯನ್ನು ತಡೆಗಟ್ಟಲು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರು ಹೊಂದಿರುವವರನ್ನೂ ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

    ಅಂತಿಮ ಪಟ್ಟಿಯಲ್ಲಿ 2.20 ಲಕ್ಷ ಮತದಾರರು

    ಕ್ಷೇತ್ರದಲ್ಲಿ ಮ್ಯಾಪಿಂಗ್, ಕರಡು ಮತದಾರರ ಪಟ್ಟಿ ಪ್ರಕಟಣೆ, ದಾಖಲೆಗಳ ಪರಿಶೀಲನೆ, ಲಾಜಿಕಲ್ ವ್ಯತ್ಯಾಸಗಳು ಹಾಗೂ ಮ್ಯಾಪಿಂಗ್ ಆಗದ ಪ್ರಕರಣಗಳ ಪರಿಶೀಲನೆ ಸೇರಿದಂತೆ ವಿವಿಧ ಹಂತಗಳನ್ನು ಪೂರ್ಣಗೊಳಿಸಲಾಗಿದೆ. ಹೊಸ ಮತದಾರರ ಸೇರ್ಪಡೆ, ಹೆಸರುಗಳ ತಿದ್ದುಪಡಿ ಮತ್ತು ತೆಗೆದುಹಾಕುವಿಕೆಗಾಗಿ ನಿಗದಿಪಡಿಸಿರುವ ನಮೂನೆಗಳ ಮೂಲಕ ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟು 220206 ಮತದಾರರು ಉಳಿದಿದ್ದಾರೆ. ಪುರುಷರು: 108430 ಮಹಿಳೆಯರು: 111757, ತೃತೀಯ ಲಿಂಗದವರು: 4, ಸಾಮಾನ್ಯ ಮತದಾರರ ಒಟ್ಟು: 220191 ಇದರೊಂದಿಗೆ 15 ಸೇವಾ ಮತದಾರರನ್ನು ಸೇರಿಸಿ ಒಟ್ಟು 220206 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ ಎಂದು ತಿಳಿಸಿದರು.

    85 ವರ್ಷ ಮೇಲ್ಪಟ್ಟ ಮತದಾರರು: ಕ್ಷೇತ್ರದಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಒಟ್ಟು 2187ಮತದಾರರಿದ್ದಾರೆ. ಇವರಲ್ಲಿ 1043 ಪುರುಷರು ಹಾಗೂ 1144 ಮಹಿಳೆಯರು ಇದ್ದಾರೆ.

    ವಿಶೇಷ ಚೇತನ ಮತದಾರರು: ಕ್ಷೇತ್ರದಲ್ಲಿ ವಿಶೇಷ ಚೇತನ ಮತದಾರರ ಸಂಖ್ಯೆಯೂ ಗಮನಾರ್ಹವಾಗಿದೆ. ಒಟ್ಟು 3338 ವಿಶೇಷ ಚೇತನ ಮತದಾರರಿದ್ದು, ಇವರಲ್ಲಿ 1838 ಪುರುಷರು ಹಾಗೂ 1504 ಮಹಿಳೆಯರು ಇದ್ದಾರೆ.

    298ಮತಗಟ್ಟೆಗಳ ಸ್ಥಾಪನೆ: ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 288 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 51 ಹಾಗೂ ಗ್ರಾಮೀಣ ಪ್ರದೇಶದಲ್ಲಿ 247 ಮತಗಟ್ಟೆಗಳಿವೆ ಎಂದು ತಿಳಿಸಿದರು.

    ಅರ್ಹ ಮತದಾರರು ಆತಂಕಪಡುವ ಅಗತ್ಯವಿಲ್ಲ

    ಯಾವುದೇ ಅರ್ಹ ಮತದಾರರ ಹೆಸರು ಅಂತಿಮ ಪಟ್ಟಿಯಲ್ಲಿ ಸೇರ್ಪಡೆಯಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಸಂಬಂಧಪಟ್ಟ ದಾಖಲೆಗಳು ಹಾಗೂ ವಯಸ್ಸಿನ ಪುರಾವೆಯನ್ನು ಸಲ್ಲಿಸಿ ನಮೂನೆ-೬ರ ಮೂಲಕ ಅರ್ಜಿ ಸಲ್ಲಿಸಿದರೆ, ನಿಯಮಾನುಸಾರ ಪರಿಶೀಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಮತದಾರರ ಸೇರ್ಪಡೆ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ ಎಂದು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ತಿಳಿಸಿದರು.

    ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ವ್ಯವಸ್ಥಾಪಕ ಬಸವರಾಜ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಜರಿದ್ದರು.

  • ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್: ಮುಂಜಾನೆ 4 ಗಂಟೆ  ಬಿರಿಯಾನಿ ಸಿಗಲ್ಲ ಯಾಕೆ ಗೊತ್ತಾ?ಮತ್ತೆ ಎಷ್ಟು ಗಂಟೆಗೆ ಸಿಗುತ್ತೆ..?

    ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್: ಮುಂಜಾನೆ 4 ಗಂಟೆ ಬಿರಿಯಾನಿ ಸಿಗಲ್ಲ ಯಾಕೆ ಗೊತ್ತಾ?ಮತ್ತೆ ಎಷ್ಟು ಗಂಟೆಗೆ ಸಿಗುತ್ತೆ..?

    ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮುಂಜಾನೆ ಸಮಯದಲ್ಲಿ ತೆರೆಯುತ್ತಿದ್ದ ಬಿರಿಯಾನಿ ಸೆಂಟರ್‌ಗಳು ಹಾಗೂ ಕೆಲವು ಹೋಟೆಲ್‌ಗಳ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

    ಮುಂಜಾನೆ 4 ಗಂಟೆಯಿಂದಲೇ ಬಿರಿಯಾನಿ ಸೆಂಟರ್‌ಗಳನ್ನು ತೆರೆಯುತ್ತಿರುವುದರಿಂದ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿ, ಕೆಲವೆಡೆ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.

    ಇದರ ಜೊತೆಗೆ ಅಪಘಾತ, ಗಲಾಟೆ ಹಾಗೂ ಕಳ್ಳತನದಂತಹ ಘಟನೆಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಹೋಟೆಲ್ ಮತ್ತು ಬಿರಿಯಾನಿ ಸೆಂಟರ್ ಮಾಲೀಕರ ಸಭೆ ನಡೆಸಿದ್ದು, ಬಿರಿಯಾನಿ ಸೆಂಟರ್‌ಗಳನ್ನು ಬೆಳಗ್ಗೆ 6 ಗಂಟೆಯ ನಂತರವಷ್ಟೇ ತೆರೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
    ಎಸ್‌ಟಿಆರ್ ರಸ್ತೆ ಹಾಗೂ ಜಾಲರಹಳ್ಳಿ ಭಾಗದಲ್ಲಿ ಮುಂಜಾನೆ ಬಿರಿಯಾನಿಗಾಗಿ ಬರುವವರಿಂದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಮತ್ತು ಕೆಲವು ಅಪಘಾತಗಳು ಸಂಭವಿಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಿನ ಜಾವದ ವ್ಯಾಪಾರಕ್ಕೆ ಸಮಯದ ನಿರ್ಬಂಧ ವಿಧಿಸಲಾಗಿದೆ.

    ಇನ್ನು ಟೋಲ್ ಗೇಟ್ ಸುತ್ತಮುತ್ತಲಿನ ಅಂಗಡಿಗಳನ್ನು ರಾತ್ರಿ 11 ಗಂಟೆಯ ನಂತರ ತೆರೆಯಬಾರದು, ಹೋಟೆಲ್ ಮತ್ತು ಬಿರಿಯಾನಿ ಸೆಂಟರ್‌ಗಳ ಆವರಣದಲ್ಲಿ ಮದ್ಯಪಾನಕ್ಕೆ ಅವಕಾಶ ನೀಡಬಾರದು, ಮುಂಜಾನೆ ಬರುವ ಗ್ರಾಹಕರಿಂದ ಗಲಾಟೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಪೊಲೀಸರು ನೀಡಿರುವ ನಿಯಮಗಳನ್ನು ಉಲ್ಲಂಘಿಸಿದರೆ ಅಂತಹ ಹೋಟೆಲ್‌ಗಳು ಮತ್ತು ಬಿರಿಯಾನಿ ಸೆಂಟರ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

  • ಹೊಸಕೋಟೆ ರಥೋತ್ಸವ ಸಂಭ್ರಮ: ನೂತನ ರಥವೇರಿದ ಅವಿಮುಕ್ತೇಶ್ವರ.

    ಹೊಸಕೋಟೆ ರಥೋತ್ಸವ ಸಂಭ್ರಮ: ನೂತನ ರಥವೇರಿದ ಅವಿಮುಕ್ತೇಶ್ವರ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಐತಿಹಾಸಿಕ ಮಹತ್ವವನ್ನು ಪಡೆದಿರುವ ಹೊಸಕೋಟೆ ಶ್ರೀ ಅವಿಮುಕೇಶ್ವರಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ಸಹಸ್ರಾರು ಸಂಖ್ಯೆ ಭಕ್ತ ಸಮೂಹದ ನಡುವೆ ಅದ್ಧೂರಿಯಾಗಿ ನಡೆಯಿತು.

    ಬೆಂಡಿಗಾನಹಳ್ಳಿ ಕುಟುಂಬದಿಂದ ನೂತನವಾಗಿ ನಿರ್ಮಿಸಿದ ರಥಕ್ಕೆ ನಗರದ ಬಸವೇಶ್ವರ ಸರ್ಕಲ್ ಬಳಿ ಮುಂಜನೆಯಿಂದಲೇ ಎಲ್ಲೆಡೆಯಿಂದ ಆಗಮಿಸಿದ ಭಕ್ತರು ತೆಂಗಿನಕಾಯಿ ಹೊಡೆಸಿ, ಆರತಿ ಬೆಳಗಿ ರಥದ ಗಾಲಿಗೆ(ಚಕ್ರ) ಉಪ್ಪು ಮತ್ತು ಮೆಣಸು ಸುರಿದು ಪ್ರದಕ್ಷಿಣೆ ಹಾಕಿ ಪ್ರಾರ್ಥನೆ ಸಲ್ಲಿಸಿದರು.

    ನಂತರ ಅವಿಮುಕ್ತೆಶ್ವರ ದೇವಾಲಯದಿಂದ ಅವಿಮುಕ್ತೆಶ್ವರಸ್ವಾಮಿ ಮತ್ತು ಬಾಲ ತ್ರಿಪುರ ಸುಂದರಿ ದೇವಿಯ ಉತ್ಸವ ಮೂರ್ತಿಗಳನ್ನು ಮಧ್ಯಾನ್ಹ 1 ಗಂಟೆಗೆ ತೇರು ಇರುವ ಬಸವೇಶ್ವರ ವೃತ್ತದ ವರೆಗೆ ತರಲಾಯಿತು. ವೀರ ಕುಮಾರರ ಅಲಗು ಸೇವೆಯೊಂದಿಗೆ ಪೂಜಾರಿ ಕಿರಣ್ ಹೂವಿನ ಕರಗ ಹೊತ್ತು ರಥ ಪ್ರದಕ್ಷಿಣೆ ಹಾಕಿದರು. ಗೋವಿಂದಾ…ಗೋವಿಂದಾ..ಎಂಬ ಝೇಂಕಾರ ಪ್ರತಿಧ್ವನಿಸಿತು..

    ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಶರತ್ ಬಚ್ಚೇಗೌಡ , ಅವಿಮುಕ್ತಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಬ್ರೌಪದಮ್ಮ ಕರಗ ಮಹೋತ್ಸವ ಒಟ್ಟಿಗೆ ಸೇರಿ ಆಚರಿಸುವ ಹಬ್ಬವಾಗಿದೆ. 1904ರಿಂದ ಹೊಸಕೋಟೆಯಲ್ಲಿ ನಿರಂತರವಾಗಿ ಆಚರಣೆ ಮಾಡಿಕೊಂಡು ಬರಲಾಗಿದೆ. ರಥೋತ್ಸವವು ತನ್ನದೇ ಆದ ಇತಿಹಾಸ ಹೊಂದಿದೆ.

    ಕಳೆದ ಬಾರಿ ಕೊಟ್ಟ ಮಾತಿನಂತೆ ನಮ್ಮ ಕುಟುಂಬದಿಂದಲೆ ಸುಮಾರು 2.5 ಕೋಟಿ ವೆಚ್ಚದಲ್ಲಿ ಹೊಸ ರಥವನ್ನು ಕೊಡುಗೆ ಕೊಟ್ಟು, ಈ ಬಾರಿ ಹೊಸ ರಥದಲ್ಲಿ ಬ್ರಹ್ಮರಥೋತ್ಸವ ಆಚರಣೆ ಮಾಡಲಾಗುತ್ತಿದೆ. ಇದು ರಥೋತ್ಸವಕ್ಕೆ ಹೊಸ ಮೆರಗು ನೀಡಿದೆ ಎಂದರು.

    ಹೊಸಕೋಟೆ ಬ್ರಹ್ಮರಥೋತ್ಸವಕ್ಕೆ ಬೆಂಡಿಗಾನಹಳ್ಳಿ ಕುಟುಂಬದವರು ಮಾಡಿಸಿಕೊಟ್ಟಿರುವ ನೂತನ ತೇರು ವೀಕ್ಷಣೆಗೆ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದಿದ್ದರು. ಸಾವಿರಾರು ಮಹಿಳೆಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ರಥಕ್ಕೆ ಉಪ್ಪು ಮತ್ತು ಹಣ್ಣು, ದವನ ಎಸೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಉತ್ಸವ ಮೂರ್ತಿಗಳನ್ನು ರಥದಲ್ಲಿಟ್ಟು ಎಳೆಯಲು ಚಾಲನೆ ನೀಡಲಾಯಿತು. ಉರಿ ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ರಥದೊಂದಿಗೆ ಸಂಭ್ರಮದಿಂದ ಹೆಜ್ಜೆ ಹಾಕಿದರು. ಅವರ ಉತ್ವಕ್ಕೆ ಸುಡು ಬಿಸಿಲು ಅಡ್ಡಿಯಾಗಲಿಲ್ಲ

    ಅವಿಮುಕ್ತೇಶ್ವರ ಬ್ರಹ್ಮರಥೋತ್ಸವದಲ್ಲಿ ವೀರಗಾಸೆ, ಡೊಲ್ಲುಕುಣಿತ, ಬೊಂಬೆ ಕುಣಿತ ಸೇರಿ ಹಲವು ಕಲಾ ತಂಡಗಳು ವಿವಿಧ ತಮಟೆ ವಾದ್ಯ ತಂಡಗಳು ಉತ್ಸವಕ್ಕೆ ಮೆರಗು ನೀಡಿದವು. ಲಕ್ಷಾಂತರ ಭಕ್ತರು ಪಾಲ್ಗೊಂಡ ಈ ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬೀಸಿಗೆ ಬೇಗೆ ತಣಿಸಲು ಮಜ್ಜಿಗೆ ಹಾಗೂ ನೀರಿನ ಬಾಟಲಿ ವಿತರಿಸಲಾಯಿತು.

    ಇತಿಹಾಸ ಪ್ರಸಿದ್ದ ರಥೋತ್ಸವದಲ್ಲಿ ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ರಥೋತ್ಸವ ಆಚರಣೆ ಸಮಿತಿ ಕನ್ವಿನರ್ ಕೇಶವಮೂರ್ತಿ, ತಹಸೀಲ್ದಾರ್ ಸೋಮಶೇಖರ್, ತಾಪಂ ಕಾರ್ಯನಿರ್ವಹಣಾಧಿಕಾರಿ ಮುನಿಯಪ್ಪ, ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ,ವಿ ಬೈರೇಗೌಡ, ಪ್ರಧಾನ ಅರ್ಚಕ ರವಿಕುಮಾರ್, ಯೋಜನಾ ಪ್ರಾಧಿಕಾರದ ನಿರ್ದೇಶಕ ಸುಬ್ಬರಾಜ್, ಮುಖಂಡರಾದ ಸಿ. ಜಯರಾಜ್, ಸುಭಾಷ್ ಗೌಡ, ಸದಾನಂದ್ ಸೇರಿ ಹಲವು ಮುಖಂಡರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

  • ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ,ಶೇಕಡ 95.62 ರಷ್ಟು ಫಲಿತಾಂಶ

    ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ,ಶೇಕಡ 95.62 ರಷ್ಟು ಫಲಿತಾಂಶ

    ಬೆಂ. ಗ್ರಾ. ಜಿಲ್ಲೆ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 95.62% ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಹನ್ನೊಂದನೇ ಸ್ಥಾನ ಪಡೆದುಕೊಂಡಿದೆ.

    ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯ ಒಟ್ಟು 278 ಪ್ರೌಢಶಾಲೆಗಳಲ್ಲಿನ ಒಟ್ಟು 13,083 ವಿದ್ಯಾರ್ಥಿಗಳ ಹಾಜರಾಗಿದ್ದು, 12,510 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ 95.62 ರಷ್ಟು ಫಲಿತಾಂಶ ಪಡೆದಿದ್ದಾರೆ.

    ಒಟ್ಟು 6639 ಬಾಲಕರು ಹಾಜರಾಗಿದ್ದು 6247 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 94.10 ರಷ್ಟು ಫಲಿತಾಂಶ ಪಡೆದಿದ್ದಾರೆ. 6444 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 6263 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ 97.19 ರಷ್ಟು ಫಲಿತಾಂಶ ದೊರಕಿದೆ.

    ನಗರ ಪ್ರದೇಶದ 4775 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 4496 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 94.16 ರಷ್ಟು ಫಲಿತಾಂಶ ದೊರೆತಿದೆ.

    ಗ್ರಾಮೀಣ ಪ್ರದೇಶದ 8308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8014 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 96.46 ರಷ್ಟು ಫಲಿತಾಂಶ ಸಿಕ್ಕಿದೆ.

    *ತಾಲ್ಲೂಕು ವಾರು ಫಲಿತಾಂಶ*
    *ದೇವನಹಳ್ಳಿ*
    * ಹಾಜರಾದವರು-3091
    ಉತ್ತೀರ್ಣರಾದವರು-2956
    ಶೇಕಡ: 95.63%

    *ದೊಡ್ಡಬಳ್ಳಾಪುರ*
    * ಹಾಜರಾದವರು-3553
    ಉತ್ತೀರ್ಣರಾದವರು-3416
    ಶೇಕಡ: 96.14%

    *ಹೊಸಕೋಟೆ*
    * ಹಾಜರಾದವರು-3578
    ಉತ್ತೀರ್ಣರಾದವರು-3479
    ಶೇಕಡ: 97.23%

    *ನೆಲಮಂಗಲ*
    * ಹಾಜರಾದವರು-2861
    ಉತ್ತೀರ್ಣರಾದವರು-2659
    ಶೇಕಡ:92.94%

    *ಶಾಲಾವಾರು ಫಲಿತಾಂಶ*
    * ಸರ್ಕಾರಿ ಶಾಲೆ-94.35%
    * ಅನುದಾನಿತ-90.14%
    * ಅನುದಾನ ರಹಿತ-98.27%

    *625 ಕ್ಕೆ 622 ಅಂಕ ಪಡೆದ ಜಿಲ್ಲೆಯ ಮೂವರು ಟಾಪರ್ ಗಳು*

    1. ಹೇಮ ಜಿ. ಹೆಚ್, ಡಾ. ಬಿ.ಆರ್ ಅಂಬೇಡ್ಕರ್ ಹೆಣ್ಣು ಮಕ್ಕಳ ವಸತಿ ಶಾಲೆ. ಮಧುರೆ ದೊಡ್ಡಬಳ್ಳಾಪುರ.
    2. ವಿಷ್ಣು ರೆಡ್ಡಿ. ಪಿ, ನ್ಯೂ ಹಾರಿಜನ್ ಶಾಲೆ, ಹೊಸಕೋಟೆ ತಾಲ್ಲೂಕು.
    3. ಸಹನಾ.ಎ, ಲಿಟ್ಲ್ ಮಾಸ್ಟರ್ ಆಂಗ್ಲ ಶಾಲೆ, ಕಂಟನಕುಂಟೆ, ದೊಡ್ಡಬಳ್ಳಾಪುರ ತಾಲ್ಲೂಕು.

  • ತಾವರೆಕೆರೆ ರಾಮೇಶ್ವರ: ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ:ಸಿಎಂ ಸಿದ್ದರಾಮಯ್ಯ

    ತಾವರೆಕೆರೆ ರಾಮೇಶ್ವರ: ದೇವರ ಆಶೀರ್ವಾದದಿಂದಲೇ ಎರಡು ಬಾರಿ ಸಿಎಂ ಆಗಿದ್ದೇನೆ:ಸಿಎಂ ಸಿದ್ದರಾಮಯ್ಯ

    ಹೊಸಕೋಟೆ ನಮ್ಮ ಮನೆ ದೇವರಾದ ರಾಮೇಶ್ವರ–ಸಿದ್ದೇಶ್ವರ ಸ್ವಾಮಿಗಳ ಆಶೀರ್ವಾದದಿಂದಲೇ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಹಾಗೂ ಎರಡು ಬಾರಿ ವಿಪಕ್ಷ ನಾಯಕನಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

    ಹೊಸಕೋಟೆ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ನಡೆದ ಶ್ರೀ ರಾಮೇಶ್ವರ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಮನುಷ್ಯನು ತನ್ನ ದೈನಂದಿನ ಜೀವನದಲ್ಲಿ ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು. ಪೂರ್ವಿಕರು ನೀಡಿದ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಸಾಗಿಸುವ ಜವಾಬ್ದಾರಿ ನಮ್ಮದೆ ಎಂದು ಹೇಳಿದರು.

    ತಾವರೆಕೆರೆ ರಾಮೇಶ್ವರ ಜಾತ್ರೆಗೆ ತಾವು ಎರಡು ಬಾರಿ ಬಂದಿದ್ದು, ಎರಡೂ ಬಾರಿ ಮುಖ್ಯಮಂತ್ರಿಯಾಗಿಯೇ ಬಂದಿರುವುದು ದೇವರ ಕೃಪೆಯ ಫಲ ಎಂದು ಹೇಳಿದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ನನಗೆ ಈ ಮಟ್ಟಕ್ಕೆ ಬರಲು ದೇವರ ಆಶೀರ್ವಾದ ಹಾಗೂ ಜನರ ಪ್ರೀತಿ ಕಾರಣವಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ವಿವಿಧ ಧರ್ಮದ ಜನರು ಇದ್ದಾರೆ. ಯಾರೂ ಯಾರನ್ನೂ ದ್ವೇಷಿಸಬಾರದು. ಪರಸ್ಪರ ಪ್ರೀತಿ ಮತ್ತು ಸೌಹಾರ್ದದಿಂದ ಬದುಕಬೇಕು. ಪ್ರತಿಯೊಂದು ಜಾತಿ, ಧರ್ಮವನ್ನೂ ನಾನು ಗೌರವಿಸುತ್ತೇನೆ ಎಂದು ಹೇಳಿದರು.

    ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್ ಮಾತನಾಡಿ, ತಾವರೆಕೆರೆ ರಾಮೇಶ್ವರ ಸ್ವಾಮಿ ನಮ್ಮ ಮನೆ ದೇವರಾಗಿದ್ದು, ಪ್ರತಿ 11 ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಈ ಬಾರಿ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮಕ್ಕೆ ಆಗಮಿಸಿರುವುದು ನಮ್ಮ ಭಾಗ್ಯದ ಸಂಗತಿ ಎಂದರು. ದೇವರ ಆಶೀರ್ವಾದದಿಂದ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಲು ಸಾಧ್ಯವಾಗಿದೆ ಎಂದು ಹೇಳಿದರು.

    ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಧಾರ್ಮಿಕ ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ರಾಮೇಶ್ವರ ಜಾತ್ರೆ ತಾಲ್ಲೂಕಿನ ಎಲ್ಲಾ ಸಮುದಾಯದ ಜನರಿಗೆ ದೊಡ್ಡ ಹಬ್ಬವಾಗಿದೆ. ಜಾತ್ರೆ ನಿಮಿತ್ತ ದೇವಾಲಯದ ರಸ್ತೆಯನ್ನು ₹1.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರದಿಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿ ಅನುದಾನ ದೊರೆತಿದ್ದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹಾಗೂ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕ ಕೊತ್ತೂರು ಮಂಜುನಾಥ್, ಕೆವೈ ನಂಜೇಗೌಡ, ಎಸ್.ಆರ್. ವಿಶ್ವನಾಥ್, ಮಾಜಿ ಶಾಸಕ ವತೂರು ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು

  • ಹೊಸಕೋಟೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ

    ಹೊಸಕೋಟೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ; ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಬೆಳೆಸಲು ಉತ್ತಮ ವೇದಿಕೆ: ಡಾ. ಅಜಯ್ ಕುಮಾರ್ ಅಳಗೇಶನ

    ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆಯನ್ನು ಬೆಳೆಸಲು ‘ವಿಜ್ಞಾನ ವಸ್ತು ಪ್ರದರ್ಶನ’ ಕಾರ್ಯಕ್ರಮ ಅತ್ಯುತ್ತಮ ವೇದಿಕೆ ಎಂದು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಅಜಯ್ ಕುಮಾರ್ ಅಳಗೇಶನ್ ಅವರು ಹೇಳಿದರು.

    ಹೊಸಕೋಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ವತಿಯಿಂದ ಆಯೋಜಿಸಿದ್ದ ”ವಿಜ್ಞಾನ ವಸ್ತು ಪ್ರದರ್ಶನ” ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ‘ನ್ಯಾನೋ ತಂತ್ರಜ್ಞಾನ’ ಕ್ಷೇತ್ರದಲ್ಲಿ ಕೆಲಸದ ಅನುಭವ ಹಂಚಿಕೊಂಡು, ನ್ಯಾನೋ ಎಂದರೆ ಎಷ್ಟು ಚಿಕ್ಕದು ಗೊತ್ತೇ? ನಮ್ಮ ತಲೆಯ ಕೂದಲಿನ ಎಳೆಯನ್ನು ಲಕ್ಷ ಪಟ್ಟು ಸೀಳಿದರೆ ಸಿಗುವಷ್ಟು ಸೂಕ್ಷ್ಮವಾದ ವಸ್ತುಗಳ ಬಗ್ಗೆ ಇವರು ಸಂಶೋಧನೆಯನ್ನು ವಿವರಿಸಿದರು.

    “ವಿಜ್ಞಾನವು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗಬಾರದು, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನವನ್ನು ಸುಲಭಗೊಳಿಸಬೇಕು” ಎಂದರು.

    ತಮ್ಮ ಸಂಶೋಧನಾ ಕ್ಷೇತ್ರವಾದ ನ್ಯಾನೋ ತಂತ್ರಜ್ಞಾನ ಮತ್ತು ಶಕ್ತಿ ಸಂರಕ್ಷಣೆ (Energy Harvesting) ಕುರಿತು ವಿದ್ಯಾರ್ಥಿಗಳಿಗೆ ಸರಳವಾಗಿ ವಿವರಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಇರುವ ಅವಕಾಶಗಳನ್ನು ಪರಿಚಯಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರಾಮಚಂದ್ರಪ್ಪ ಬೇಗೂರು ಅವರು ವಹಿಸಿದ್ದರು.

    ಕಾಲೇಜಿನ ಬಿಎಸ್‌ಸಿ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಅವುಗಳಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ ನ್ಯಾನೋ ಸೆನ್ಸರ್‌ಗಳು ಧರಿಸಬಹುದಾದ ಆರೋಗ್ಯ ಸಂವೇದಕಗಳ ಮಾದರಿಗಳು. ಮತ್ತು ಸ್ಮಾರ್ಟ್ ಕೃಷಿ: ಮಣ್ಣಿನ ತೇವಾಂಶ ಮತ್ತು ಸ್ವಯಂಚಾಲಿತ ನೀರಾವರಿ ಪದ್ಧತಿ. ಹಾಗೂ ಪರಿಸರ ಸ್ನೇಹಿ ಇಂಧನ: ಹೈಡ್ರೋಜನ್ ಕಾರುಗಳು ಮತ್ತು ಸೌರಶಕ್ತಿ ಚಾಲಿತ ಗೃಹೋಪಯೋಗಿ ಉಪಕರಣಗಳು. ಮತ್ತು ತ್ಯಾಜ್ಯ ನಿರ್ವಹಣೆ: ಪ್ಲಾಸ್ಟಿಕ್ ಮುಕ್ತ ಪರಿಸರ ಮತ್ತು ಕಸದಿಂದ ರಸ ಮಾಡುವ ತಂತ್ರಜ್ಞಾನದ ಮಾದರಿಗಳನ್ನು ಪ್ರದರ್ಶಿಸಿದರು.

    ಕಾರ್ಯಕ್ರಮದಲ್ಲಿ ಡಾ. ದಿನೇಶ್, ಮಂಜುನಾಥ್, ಉಮೇಶ್ ರೆಡ್ಡಿ, ವಿಶ್ವೇಶ್ವರಯ್ಯ ಸೇರಿದಂತೆ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದರು.