Category: ದೇವನಹಳ್ಳಿ,

  • ಬೆಂ. ಗ್ರಾ. ಜಿಲ್ಲೆಯಲ್ಲಿ 8,04,534 ಮತದಾರರು,ಮಹಿಳಾ ಮತದಾರರೆ ಹೆಚ್ಚು: ಅರ್ಹ ಮತದಾರರನ್ನು ಕೈಬಿಟ್ಟಿಲ್ಲ ಡಿಸಿ ಅನುರಾಧ ಸ್ಪಷ್ಟನೆ.

    ಬೆಂ. ಗ್ರಾ. ಜಿಲ್ಲೆಯಲ್ಲಿ 8,04,534 ಮತದಾರರು,ಮಹಿಳಾ ಮತದಾರರೆ ಹೆಚ್ಚು: ಅರ್ಹ ಮತದಾರರನ್ನು ಕೈಬಿಟ್ಟಿಲ್ಲ ಡಿಸಿ ಅನುರಾಧ ಸ್ಪಷ್ಟನೆ.

    ಬೆಂ.ಗ್ರಾ. ಜಿಲ್ಲೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಯುಲ್ಲಿ 8,04,534 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಎನ್ ಅನುರಾಧ ಅವರು ತಿಳಿಸಿದರು.

    ಇಂದು ಜಿಲ್ಲಾಡಳಿತ ಭವನದ ನ್ಯಾಯಾಲಯ ಸಭಾಂಗಣದಲ್ಲಿ ಅಂತಿಮ ಮತದಾರ ಪಟ್ಟಿ ಪ್ರಕಟಕ್ಕೆ ಸಂಬಂಧಿಸಿದಂತೆ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್ಐಆರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ನಡೆದಿದ್ದು ಅಂತಿಮ ಮತದಾರರ ಪಟ್ಟಿಯಲ್ಲಿ 3,95,473 ಪುರುಷ ಮತದಾರರು, 4,09,001 ಮಹಿಳಾ ಮತದಾರರು ಹಾಗೂ 60 ಇತರೆ ಮತದಾರರು ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ 8,04,534 ಮತದಾರರಿದ್ದಾರೆ.

    ವಿಧಾನಸಭಾ ಕ್ಷೇತ್ರವಾರು ಮಾಹಿತಿ

    1. ಹೊಸಕೋಟೆ ವಿಧಾನಸಭಾ ಕ್ಷೇತ್ರ- 1,08,430 ಪುರುಷರು, 1,11,757 ಮಹಿಳೆಯರು ಹಾಗೂ 4 ಇತರೆ ಮತದಾರರು ಸೇರಿದಂತೆ 2,20,191 ಮತದಾರರಿದ್ದಾರೆ.

    2. ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 97,048 ಪುರುಷರು, 99,918 ಮಹಿಳೆಯರು ಹಾಗೂ 11 ಇತರೆ ಮತದಾರರು ಸೇರಿದಂತೆ 1,96,977 ಮತದಾರರಿದ್ದಾರೆ.

    3. ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 95,589 ಪುರುಷರು, 98,740 ಮಹಿಳೆಯರು ಹಾಗೂ 1 ಇತರೆ ಮತದಾರರು ಸೇರಿದಂತೆ 1,94,330 ಮತದಾರರಿದ್ದಾರೆ.

    4. ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 94,406 ಪುರುಷರು, 98,586 ಮಹಿಳೆಯರು ಹಾಗೂ 44 ಇತರೆ ಮತದಾರರು ಸೇರಿದಂತೆ 1,93,036 ಮತದಾರರಿದ್ದಾರೆ ಎಂದು ಡಿಸಿ ಮಾಹಿತಿ ನೀಡಿದರು.

    3814 ಮತದಾರರ ಡಿಲಿಟ್

    ಎಸ್ಐಆರ್ ಪ್ರಕ್ರಿಯೆಯಲ್ಲಿ ಐವರು ಮೃತರು, 1,716 ಶಾಶ್ವತ ವಲಸೆ ಹೋಗಿರುತ್ತಾರೆ, 2,093 ಇತರೆಡೆ ನೋಂದಣಿ ಆಗಿರುವವರು ಸೇರಿ 3814 ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.

    ಎಸ್ಐಆರ್ ಪ್ರಕ್ರಿಯೆಯಡಿ ನೋ ಮ್ಯಾಪಿಂಗ್ ಹಾಗೂ ಅನಾಮಲಿಸ್ (2002ಕ್ಕೆ ಮ್ಯಾಪಿಂಗ್ನಲ್ಲಿ ವ್ಯತ್ಯಾಸ ಕಂಡುಬಂದ ಪ್ರಕರಣಗಳು) ಒಳಗೊಂಡಂತೆ 56349 ಮತದಾರರಿಗೆ ನೋಟೀಸ್ ನೀಡಿ ವಿಚಾರಣೆ ನಡೆಸಲಾಗಿದೆ.

    18-19 ವರ್ಷ ವಯಸ್ಸಿನ 14,568 ಮತದಾರರಿದ್ದಾರೆ, 8,604 ಮಂದಿ 85 ವರ್ಷಕ್ಕೂ ಮೇಲ್ಪಟ್ಟ ಮತದಾರರಿದ್ದಾರೆ. 12,151 ವಿಶೇಷಚೇತನ ಮತದಾರರಿದ್ದಾರೆ. 06 ಎನ್ಆರ್ಐ (ಅನಿವಾಸಿ ಭಾರತೀಯ) ಮತದಾರರಿದ್ದಾರೆ.. 108 ಸೇವಾ ಮತದಾರರಿದ್ದಾರೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ ಮತದಾರರ ಲಿಂಗಾನುಪಾತದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. 3,95,473 ಪುರುಷ ಮತದಾರರಿದ್ದು, 4,09,061 ಮಹಿಳಾ ಮತದಾರರಿದ್ದಾರೆ. ಜನಸಂಖ್ಯೆಗನುಗುಣವಾಗಿ 1034 ಲಿಂಗಾನುಪಾತ ಇದೆ ಎಂದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 04 ಮತಕ್ಷೇತ್ರಗಳಲ್ಲಿ ನಡೆದ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ-2026 ಸಂಬಂಧ, ಎಲ್ಲಾ ಪ್ರಕ್ರಿಯೆ, ಪ್ರಗತಿ ಕುರಿತ ವಿವರಗಳನ್ನು ಹಾಗೂ ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿ ಇರುವುದನ್ನು ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾ ಅಧಿಕೃತ ವೆಬ್ ಸೈಟ್ https://voters.eci.gov.in/ & https://bangalorerural.nic.in/ ಮೂಲಕ ಪರಿಶೀಲಸಬಹುದು ಹಾಗೂ ಮತದಾರರ ಪಟ್ಟಿಯನ್ನು ಡೌನ್ ಮಾಡಿಕೊಳ್ಳಬಹುದು ಜೊತೆಗೆ ಎಲ್ಲಾ ಮತದಾರರ ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಪ್ರಚೂರ ಪಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವ ಅರ್ಹ ಮತದಾರರು ಸೇರ್ಪಡೆಗೆ ನಮೂನೆ-6ರ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದರು.

    ಪತ್ರಿಕಾ ಗೋಷ್ಠಿಯಲ್ಲಿ ಸಿಇಓ ಡಾ. ವಾಸಂತಿ ಅಮರ್, ಅಪರ ಜಿಲ್ಲಾಧಿಕಾರಿ ಸೈಯಿದಾ ಅಯಿಷಾ, ಎಸಿ ಮಂಜುನಾಥ್, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಶಿವ ಕುಮಾರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಅಶೋಕ್ ಕುಮಾರ್ ಡಿ,ತಾಲ್ಲೂಕು ಮತದಾರರ ನೋಂದಣಾಧಿಕಾರಿಗಳು, ಚುನಾವಣೆ ಶಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

  • ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್‌ ದಿಢೀರ್ ಭೇಟಿ;ಕರ್ತವ್ಯ ಲೋಪ: ದೇವನಹಳ್ಳಿ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯ ಅಧಿಕಾರಿ ಅಮಾನತು

    ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ಡಿಸಿಎಂ ಪರಮೇಶ್ವರ್‌ ದಿಢೀರ್ ಭೇಟಿ;ಕರ್ತವ್ಯ ಲೋಪ: ದೇವನಹಳ್ಳಿ ತಹಶೀಲ್ದಾರ್‌ ಕಚೇರಿ ಅಭಿಲೇಖಾಲಯ ಅಧಿಕಾರಿ ಅಮಾನತು

    ದೇವನಹಳ್ಳಿ: ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ಧೋರಣೆ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ದೇವನಹಳ್ಳಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿಗಳು, ದಾಖಲೆಗಳ ಕೊಠಡಿಯಲ್ಲಿ (ರೆಕಾರ್ಡ್ ರೂಮ್) ದತ್ತಾಂಶ ಹಾಗೂ ಕಂದಾಯ ದಾಖಲೆಗಳ ನಿರ್ವಹಣೆಯಲ್ಲಿ ಗಂಭೀರ ಲೋಪವೆಸಗಿದ ಅಧಿಕಾರಿಯನ್ನು ಸ್ಥಳದಲ್ಲೇ ಅಮಾನತುಗೊಳಿಸಲು ಆದೇಶಿಸಿದರು.

    ದಾಖಲೆಗಳ ಕೊಠಡಿ ಪರಿಶೀಲನೆ: ಅಧಿಕಾರಿ ಅಮಾನತಿಗೆ ಆದೇಶ:
    ತಾಲೂಕು ಕಚೇರಿಯ ವಿವಿಧ ವಿಭಾಗಗಳಿಗೆ ಅನಿರೀಕ್ಷಿತವಾಗಿ ತೆರಳಿದ ಡಾ. ಜಿ. ಪರಮೇಶ್ವರ್, ಸಾರ್ವಜನಿಕರ ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಖುದ್ದಾಗಿ ಪರಿಶೀಲಿಸಿದರು. ಈ ವೇಳೆ ರೆಕಾರ್ಡ್ ರೂಮ್‌ನಲ್ಲಿ ಕಂದಾಯ ದಾಖಲೆಗಳನ್ನು ಸಮರ್ಪಕವಾಗಿ ಇಡದಿರುವುದು ಹಾಗೂ ದತ್ತಾಂಶ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಕರ್ತವ್ಯಲೋಪವೆಸಗಿದ ಸಂಬಂಧಪಟ್ಟ ಅಭಿಲೇಖಾಲಯ(ದಾಖಲೆ ಕೊಠಡಿ) ಸಿಬ್ಬಂದಿಯೊಬ್ಬರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

    “ಕಂದಾಯ ದಾಖಲೆಗಳು ಜನಸಾಮಾನ್ಯರ ಆಸ್ತಿ ಮತ್ತು ಹಕ್ಕುಗಳ ಜೀವಾಳ. ಸ್ವಾತಂತ್ರ್ಯಪೂರ್ವದ ಮೂಲ ದಾಖಲೆಗಳೂ ಇಲ್ಲಿವೆ. ಒಂದು ದಾಖಲೆ ನಾಶವಾದರೂ ಬಡ ಕುಟುಂಬಗಳು ಬೀದಿಗೆ ಬೀಳುತ್ತವೆ. ದಾಖಲೆಗಳ ರಕ್ಷಣೆ ಹಾಗೂ ಡಿಜಿಟಲೀಕರಣಕ್ಕೆ ಮೊದಲ ಆದ್ಯತೆ ನೀಡಬೇಕು,” ಎಂದು ತಹಶೀಲ್ದಾರ್ ಹಾಗೂ ಭೂದಾಖಲೆಗಳ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಗೋಮಾಳ ಒತ್ತುವರಿ, ನಕಲಿ ದಾಖಲೆ ಸೃಷ್ಟಿಗೆ ಬೀಳಲಿದೆ ಬ್ರೇಕ್:
    ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಭೂಮಿಯ ಮೌಲ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಕಲಿ ದಾಖಲೆ ಸೃಷ್ಟಿ, ಆಸ್ತಿ ವಂಚನೆ ಹಾಗೂ ಅಕ್ರಮ ಖಾತೆ ಬದಲಾವಣೆ ತಡೆಗೆ ತಂತ್ರಜ್ಞಾನ ಆಧಾರಿತ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಸ್ಪಷ್ಟಪಡಿಸಿದರು. ಬಿಲ್ಡರ್‌ಗಳು ಸೇರಿದಂತೆ ಪ್ರಭಾವಿಗಳು ಸರ್ಕಾರಿ ಗೋಮಾಳ ಜಮೀನುಗಳನ್ನು ಒತ್ತುವರಿ ಮಾಡಿದ್ದರೆ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು. ಇದಕ್ಕೆ ಸಾಥ್ ನೀಡುವ ಅಧಿಕಾರಿಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

    ಉಪ ನೋಂದಣಾಧಿಕಾರಿ ಕಚೇರಿಗೆ ನೂತನ ಕಟ್ಟಡ:
    ಸ್ಥಳಾಭಾವ ಎದುರಿಸುತ್ತಿರುವ ದೇವನಹಳ್ಳಿ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಚೇರಿಗೆ ನೂತನ ಕಟ್ಟಡ ನಿರ್ಮಿಸಲು ಜಿಲ್ಲಾಧಿಕಾರಿಗಳು ಸೂಕ್ತ ಜಾಗ ಗುರುತಿಸಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗಲಿದೆ. ಕಚೇರಿ ಸೌಲಭ್ಯಗಳಿಗಿಂತ ಜನರ ಆಸ್ತಿ ನೋಂದಣಿ ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದಕ್ಕೆ ಈ ಕಟ್ಟಡದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದರು.

    ಬರ ಪರಿಹಾರ: ಪ್ರತಿ ಕ್ಷೇತ್ರಕ್ಕೆ 1 ಕೋಟಿ ಅನುದಾನ:
    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರು ಹಾಗೂ ತುರ್ತು ಪರಿಹಾರ ಕಾರ್ಯಗಳಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಬಿಡುಗಡೆ ಮಾಡಲಾಗಿದ್ದು, ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 9 ಕೋಟಿ ಅನುದಾನ ಲಭ್ಯವಿದೆ. ರಾಜ್ಯದ 50 ಲಕ್ಷ ರೈತರಿಗೆ ಮೊದಲ ಕಂತಿನ ಬೆಳೆ ನಷ್ಟ ಪರಿಹಾರವಾಗಿ 1,250 ಕೋಟಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

  • ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 3.75ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾ ಅಕ್ರಮ ಸಾಗಾಟ, ವಶಕ್ಕೆ ಪಡೆದ ಅಧಿಕಾರಿಗಳು

    ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ ₹3.57 ಕೋಟಿ ಮೌಲ್ಯದ 10.20 ಕೆ.ಜಿ ಗಾಂಜಾವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ.

    ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕ ಅಕ್ರಮವಾಗಿ ಗಾಂಜಾ ಸಾಗಿಸಲು ಯತ್ನಿಸಿದಾಗ ಸಿಕ್ಕಿಬಿದ್ದಿದ್ದಾನೆ.

    ಚೆಕ್-ಇನ್ ಬ್ಯಾಗೇಜ್ ತಪಾಸಣೆ ನಡೆಸಿದಾಗ ಆರೋಪಿಯ ಬ್ಯಾಗ್‌ನಲ್ಲಿ ಹೈಡೋಪೋನಿಕ್ ಗಾಂಜಾ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

    ಜಿಟಿಟಿಸಿ ಕೇಂದ್ರದಲ್ಲಿ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಆಹ್ವಾನ

    ಬೆಂ. ಗ್ರಾಮಾಂತರ : ದೇವನಹಳ್ಳಿ ತಾಲ್ಲೂಕು ಚನ್ನರಾಯಪ್ಪಟಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ದಲ್ಲಿ ಅತ್ಯುನ್ನತ ಡಿಪ್ಲೊಮಾ ಕೋರ್ಸ್ ಗಳ ಪ್ರವೇಶಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

    ಈ ಕೇಂದ್ರದಲ್ಲಿ ಡಿಪ್ಲೋಮಾ ಇನ್ ಟೂಲ್ & ಡೈಮೇಕಿಂಗ್ (DTDM), ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ (DMCH), ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ (DEEE), ಡಿಪ್ಲೋಮಾ ಇನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ & ಮಷೀನ್ ಲರ್ನಿಂಗ್ (DAI & ML) ಈ 04 ವಿಭಾಗದ ಡಿಪ್ಲೋಮಾ ಕೋರ್ಸ್ ಗಳು ಲಭ್ಯವಿದೆ.

    ಡಿಪ್ಲೊಮಾ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಲು ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು. ಪಿಯುಸಿ ಮತ್ತು ಐಟಿಐ ಪಾಸಾದ ವಿದ್ಯಾರ್ಥಿಗಳಿಗೆ ಎರಡನೇಯ ವರ್ಷಕ್ಕೆ ನೇರ ಪ್ರವೇಶವಿರುತ್ತದೆ. ಈ ಡಿಪ್ಲೋಮಾ ಕೋರ್ಸ್ ಗಳ ಅವಧಿ 3+1 ವರ್ಷ. ಅರ್ಜಿ ಸಲ್ಲಿಸಲು ಮೇ 10 ಕೊನೆಯ ದಿನವಾಗಿದ್ದು ಅರ್ಜಿಯನ್ನು https://gttc.karnataka.gov.in ವೆಬ್ಸೈಟ್ ಮೂಲಕ ಸಲ್ಲಿಸಬಹುದು.

    ಹೆಚ್ಚಿನ ಮಾಹಿತಿಗಾಗಿ 9036144417, 9686268737, 9980956422 ಅಥವಾ ಜಿಟಿಟಿಸಿ, ದೇವನಹಳ್ಳಿ ಕಾಲೇಜಿಗೆ ಖುದ್ದಾಗಿ ಭೇಟಿ ನೀಡಬಹುದು ಎಂದು ಜಿಟಿಟಿಸಿ ಕೇಂದ್ರದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

  • ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ,ಶೇಕಡ 95.62 ರಷ್ಟು ಫಲಿತಾಂಶ

    ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 11ನೇ ಸ್ಥಾನ,ಶೇಕಡ 95.62 ರಷ್ಟು ಫಲಿತಾಂಶ

    ಬೆಂ. ಗ್ರಾ. ಜಿಲ್ಲೆ: 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಶೇ. 95.62% ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ ಹನ್ನೊಂದನೇ ಸ್ಥಾನ ಪಡೆದುಕೊಂಡಿದೆ.

    ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯ ಒಟ್ಟು 278 ಪ್ರೌಢಶಾಲೆಗಳಲ್ಲಿನ ಒಟ್ಟು 13,083 ವಿದ್ಯಾರ್ಥಿಗಳ ಹಾಜರಾಗಿದ್ದು, 12,510 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ 95.62 ರಷ್ಟು ಫಲಿತಾಂಶ ಪಡೆದಿದ್ದಾರೆ.

    ಒಟ್ಟು 6639 ಬಾಲಕರು ಹಾಜರಾಗಿದ್ದು 6247 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 94.10 ರಷ್ಟು ಫಲಿತಾಂಶ ಪಡೆದಿದ್ದಾರೆ. 6444 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 6263 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ 97.19 ರಷ್ಟು ಫಲಿತಾಂಶ ದೊರಕಿದೆ.

    ನಗರ ಪ್ರದೇಶದ 4775 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 4496 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 94.16 ರಷ್ಟು ಫಲಿತಾಂಶ ದೊರೆತಿದೆ.

    ಗ್ರಾಮೀಣ ಪ್ರದೇಶದ 8308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8014 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 96.46 ರಷ್ಟು ಫಲಿತಾಂಶ ಸಿಕ್ಕಿದೆ.

    *ತಾಲ್ಲೂಕು ವಾರು ಫಲಿತಾಂಶ*
    *ದೇವನಹಳ್ಳಿ*
    * ಹಾಜರಾದವರು-3091
    ಉತ್ತೀರ್ಣರಾದವರು-2956
    ಶೇಕಡ: 95.63%

    *ದೊಡ್ಡಬಳ್ಳಾಪುರ*
    * ಹಾಜರಾದವರು-3553
    ಉತ್ತೀರ್ಣರಾದವರು-3416
    ಶೇಕಡ: 96.14%

    *ಹೊಸಕೋಟೆ*
    * ಹಾಜರಾದವರು-3578
    ಉತ್ತೀರ್ಣರಾದವರು-3479
    ಶೇಕಡ: 97.23%

    *ನೆಲಮಂಗಲ*
    * ಹಾಜರಾದವರು-2861
    ಉತ್ತೀರ್ಣರಾದವರು-2659
    ಶೇಕಡ:92.94%

    *ಶಾಲಾವಾರು ಫಲಿತಾಂಶ*
    * ಸರ್ಕಾರಿ ಶಾಲೆ-94.35%
    * ಅನುದಾನಿತ-90.14%
    * ಅನುದಾನ ರಹಿತ-98.27%

    *625 ಕ್ಕೆ 622 ಅಂಕ ಪಡೆದ ಜಿಲ್ಲೆಯ ಮೂವರು ಟಾಪರ್ ಗಳು*

    1. ಹೇಮ ಜಿ. ಹೆಚ್, ಡಾ. ಬಿ.ಆರ್ ಅಂಬೇಡ್ಕರ್ ಹೆಣ್ಣು ಮಕ್ಕಳ ವಸತಿ ಶಾಲೆ. ಮಧುರೆ ದೊಡ್ಡಬಳ್ಳಾಪುರ.
    2. ವಿಷ್ಣು ರೆಡ್ಡಿ. ಪಿ, ನ್ಯೂ ಹಾರಿಜನ್ ಶಾಲೆ, ಹೊಸಕೋಟೆ ತಾಲ್ಲೂಕು.
    3. ಸಹನಾ.ಎ, ಲಿಟ್ಲ್ ಮಾಸ್ಟರ್ ಆಂಗ್ಲ ಶಾಲೆ, ಕಂಟನಕುಂಟೆ, ದೊಡ್ಡಬಳ್ಳಾಪುರ ತಾಲ್ಲೂಕು.

  • ಬಸವೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆ: ಬಸವಣ್ಣನವರ ತತ್ವಗಳು ಸರ್ವಕಾಲಿಕ: ಸಚಿವ ಈಶ್ವರ ಖಂಡ್ರೆ

    ಬಸವೇಶ್ವರರ ಕಂಚಿನ ಪ್ರತಿಮೆ ಲೋಕಾರ್ಪಣೆ: ಬಸವಣ್ಣನವರ ತತ್ವಗಳು ಸರ್ವಕಾಲಿಕ: ಸಚಿವ ಈಶ್ವರ ಖಂಡ್ರೆ

    ಬೆಂ.ಗ್ರಾ.ಜಿಲ್ಲೆ: ಸಮಸಮಾಜದ ನಿರ್ಮಾಣಕ್ಕೆ ಕ್ರಾಂತಿಯನ್ನೇ ಮಾಡಿದ ಬಸವಣ್ಣನವರ ತತ್ವಾದರ್ಶಗಳು ಸಾರ್ವಕಾಲಿಕವಾಗಿದ್ದು, ಬಸವ ತತ್ವಗಳ ಪ್ರಚಾರ, ಪ್ರಸಾರ ಇಂದಿನ ಅಗತ್ಯವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಬಸವೇಶ್ವರ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ದೇವನಹಳ್ಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಂದು ನಡೆದ ವಿಶ್ವಗುರು ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ ಜಗತ್ತಿನಲ್ಲಿ ಕ್ರಾಂತಿ ಆಗಿದೆ. ಆದರೆ ಸರ್ವರ ಸಮಾನತೆಗಾಗಿ ಯಾವುದಾದರೂ ಕ್ರಾಂತಿ ನಡೆದಿದ್ದರೆ ಅದು ಕಲ್ಯಾಣದ ಕ್ರಾಂತಿ ಮಾತ್ರ ಎಂದು ಹೇಳಿದರು.

    12ನೇ ಶತಮಾನದಲ್ಲಿ ಮನುಷ್ಯರನ್ನು ಮನುಷ್ಯರಂತೆ ಕಾಣುತ್ತಿರಲಿಲ್ಲ. ಮೌಢ್ಯತೆ, ಅನಕ್ಷರತೆ ಇದ್ದು ಹೆಣ್ಣಿಗೆ ಸಮಾನತೆ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ಸ್ವಾತಂತ್ರ್ಯ, ಸಮಾನತೆ, ಕಾಯಕ, ದಾಸೋಹ, ಸಹೋದರತ್ವ, ಸಹಬಾಳ್ವೆಯ ತಳಹದಿಯ ಮೇಲೆ ಬಲಿಷ್ಠ ಸುಂದರ ಸಮಾಜದ ನಿರ್ಮಾಣಕ್ಕೆ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ವೈಚಾರಿಕ ಮತ್ತು ವೈಜ್ಞಾನಿಕತೆಯ ತಳಹದಿಯ ಮೇಲೆ ಕ್ರಾಂತಿ ನಡೆಯಿತು. ಶ್ರೇಣಿರಹಿತ, ವರ್ಗರಹಿತ, ಲಿಂಗಭೇದ ರಹಿತ ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ಶ್ರಮಿಸಿದರು ಎಂದರು.

    ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳಿನ ಕಲ್ಪನೆಯನ್ನು ನೀಡಿ, ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪ ಸ್ಥಾಪಿಸಿದರು. ಅಲ್ಲಿ 770 ವಿವಿಧ ವೃತ್ತಿಯ, ವಿವಿಧ ಸಮುದಾಯದ ಅಮರಗಣಂಗಳು ಪಾಲ್ಗೊಳ್ಳುತ್ತಿದ್ದರು. ಅವರೆಲ್ಲರೂ ವಚನಗಳನ್ನು ರಚಿಸಿದ್ದಾರೆ. ಪ್ರಜಾಪ್ರಭುತ್ವದ ಪರಿಕಲ್ಪನೆಗೆ ತಳಹದಿಯಾದ ಅನುಭವ ಮಂಟಪ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿದೆ ಎಂದರು. ಇತ್ತೀಚೆಗೆ ಆಧುನಿಕ ಅನುಭವ ಮಂಟಪ ಕಾಮಗಾರಿಗೆ 105 ಕೋಟಿ ಬಿಡುಗಡೆ ಮಾಡುವುದರೊಂದಿಗೆ ಈವರೆಗೆ 280 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಪ್ರಸ್ತುತ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷದೊಳಗೆ ಇದರ ಲೋಕಾರ್ಪಣೆ ಮಾಡಲಾಗುವುದು ಎಂದರು.

    ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಕಾರ್ಯಮಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವಣ್ಣನವರ ಚಿಂತನೆಗಳನ್ನು ಚಿಕ್ಕ ವಯಸ್ಸಿನಲ್ಲೆ ಮನಗಂಡು ಮೈಗೂಡಿಸಿಕೊಂಡೆ, ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್ ಅವರ ಬಗ್ಗೆ ಹೆಚ್ಚಿನ ಪಾಠ ಕಲಿತು ಆ ದಾರಿಯಲ್ಲೆ ನಡೆಯುವಂತ ಕೆಲಸ ಮಾಡುತ್ತಿದ್ದೇನೆ. ಎಲ್ಲ ದೇವರುಗಳಿಗಿಂತ ಮೇಲು ದೇವರು ಬಸವಣ್ಣನವರು, 12 ನೇ ಶತಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮಾಜದ ಸುಧಾರಣೆ, ಮಾನವತವಾದವನ್ನು ಪ್ರತಿಪಾದಿಸಿದಂತಹ ಮಹಾನ್ ಚೇತನ ಬಸವಣ್ಣನವರು, ಅವರ ವಚನಗಳು, ಆದರ್ಶಗಳು, ಕಾಯಕ ನಿಷ್ಟೆ ಎಂದೆಂದಿಗೂ ಶಾಶ್ವತ ಎಂದು ಹೇಳಿದರು.

    ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಕೆ ಸುಧಾಕರ್ ಮಾತನಾಡಿ ಬಸವಣ್ಣನವರು ಕಾಯಕವೇ ಕೈಲಾಸವೆಂದರು. ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶವನ್ನು ನೀಡಿದ ಮಹಾನ್ ದಾರ್ಶನಿಕ ಬಸವಣ್ಣ ಅವರ ಆದರ್ಶಗಳು ನಮ್ಮ ಸಮಾಜಕ್ಕೆ ಸದಾ ದಾರಿದೀಪವಾಗಿವೆ. ವಚನಗಳನ್ನು ಬರೆಯುವುದರ ಜೊತೆಗೆ ವಚನದಲ್ಲಿರುವಂತೆ ಪಾಲಿಸಿದ್ದರು. ಬಸವಣ್ಣನವರ ಆದರ್ಶಗಳನ್ನು ಪಾಲಿಸಬೇಕು. ಪ್ರತಿದಿನದ ಮಾಡುವ ಕೆಲಸದಲ್ಲಿ ಬಸವಣ್ಣನವರನ್ನು ಕಾಣಬೇಕು. ಬಸವಣ್ಣನವರು ಆಚರಣೆಗೆ ತಂದ ದಾಸೋಹವು ಈಗ ತ್ರಿವಿಧವಾದ ಶಿಕ್ಷಣ, ಆರೋಗ್ಯ, ಅನ್ನ ದಾಸೋಹಗಳಾಗಿ ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದಿದೆ.

    ಪ್ರತಿಮೆ ವಿಶೇಷತೆ:

    ಜಿಲ್ಲಾಡಳಿತ ಭವನ ಆವರಣದಲ್ಲಿ ಲೋಕಾರ್ಪಣೆಗೊಂಡ ಬಸವಣ್ಣ ಅವರ ಪ್ರತಿಮೆಯಲ್ಲಿ ಮಂಟಪ 28 ಅಡಿ. ಕಂಚಿನ ಪ್ರತಿಮೆ 5 ಅಡಿ ಉದ್ದವಾಗಿದ್ದು 450 ಕೆಜಿ ಕಂಚು ಬಳಕೆ ಮಾಡಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

    ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಪಾಲಪನಹಳ್ಳಿ ಮಠದ ಶ್ರೀ ಸಿದ್ದರಾಜುಸ್ವಾಮಿಗಳು, ಐದನೇ ಹಣಕಾಸು ಆಯೋಗದ ಅಧ್ಯಕ್ಷರಾದ ನಾರಾಯಣಸ್ವಾಮಿ, ಹೊಸಕೋಟೆ ಶಾಸಕರಾದ ಶರತ್ ಬಚ್ಚೇಗೌಡ, ದೊಡ್ಡಬಳ್ಳಾಪುರ ಶಾಸಕರಾದ ಧೀರಜ್ ಮುನಿರಾಜು, ಜಿಲ್ಲಾಧಿಕಾರಿ ಡಾ ಕೆ.ಎನ್ ಅನುರಾಧ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ರಾಜಣ್ಣ, ಜಗಜ್ಯೋತಿ ಬಸವೇಶ್ವರ ಪ್ರತಿಮೆ ನಿರ್ಮಾಣ ಸಮಿತಿ ಅಧ್ಯಕ್ಷರು, ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.