Category: ದೇಶ/ವಿದೇಶ

  • ಬಂಗಾಳಕೊಲ್ಲಿಯಲ್ಲಿ ಅರ್ನಬ್ ಚಂಡಮಾರುತ’: ಒಡಿಶಾದಲ್ಲಿ ಶಾಲೆಗಳಿಗೆ ರಜೆ

    ಬಂಗಾಳಕೊಲ್ಲಿಯಲ್ಲಿ ಅರ್ನಬ್ ಚಂಡಮಾರುತ’: ಒಡಿಶಾದಲ್ಲಿ ಶಾಲೆಗಳಿಗೆ ರಜೆ

    ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಬ್’ ಚಂಡಮಾರುತ ಮಂಗಳವಾರ ಬೆಳಗ್ಗೆ ಅತ್ಯಂತ ತೀವ್ರ ಚಂಡಮಾರುತವಾಗಿ ಬಲಗೊಂಡಿದ್ದು, ಅಕ್ಟೋಬರ್ 28ರ ಬುಧವಾರ ಬೆಳಗ್ಗೆ ಪುದುಚೇರಿಯ ಯಾನಂ ಸಮೀಪ ಭೂಕುಸಿತ ಸಂಭವಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಪೂರ್ವ ಕರಾವಳಿಯ ರಾಜ್ಯಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ.

    ಗಂಟೆಗೆ 115ರಿಂದ 125 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದ್ದು, ಗಾಳಿಯ ವೇಗ ಕೆಲವೊಮ್ಮೆ ಗಂಟೆಗೆ 140 ಕಿ.ಮೀ.ವರೆಗೆ ತಲುಪಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಜನರ ಸ್ಥಳಾಂತರ, ಅಪಾಯದ ಪ್ರದೇಶಗಳಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಹಾಗೂ ರಕ್ಷಣಾ ತಂಡಗಳ ನಿಯೋಜನೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

    ಮಂಗಳವಾರ ಬೆಳಗಿನ ಜಾವ 2.30ರ ವೇಳೆಗೆ ಚಂಡಮಾರುತವು ಬಂಗಾಳ ಕೊಲ್ಲಿಯ ಪಶ್ಚಿಮ-ಮಧ್ಯ ಭಾಗದಲ್ಲಿ ಕೇಂದ್ರೀಕೃತವಾಗಿತ್ತು. ಹಿಂದಿನ ಆರು ಗಂಟೆಗಳಲ್ಲಿ ಗಂಟೆಗೆ ಸುಮಾರು 25 ಕಿ.ಮೀ. ವೇಗದಲ್ಲಿ ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಚಲಿಸಿತ್ತು.

    ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಮಂಗಳವಾರ ಸಂಜೆಯವರೆಗೆ ಇದೇ ದಿಕ್ಕಿನಲ್ಲಿ ಚಲಿಸಲಿರುವ ಚಂಡಮಾರುತ ಬಳಿಕ ವಾಯವ್ಯ ದಿಕ್ಕಿಗೆ ತಿರುಗಿ ಆಂಧ್ರಪ್ರದೇಶದ ಕರಾವಳಿ ಹಾಗೂ ಯಾನಂ ಸಮೀಪ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.

    ಕೇಂದ್ರ ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್‌ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ ಸಭೆಯಲ್ಲಿ ಸಿದ್ಧತಾ ಕ್ರಮಗಳನ್ನು ಪರಿಶೀಲಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಭಾರತೀಯ ರೈಲ್ವೆ 53 ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

    ಚಂಡಮಾರುತದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ರಾಜ್ಯದ ಸಿದ್ದತೆಗಳನ್ನು ಪರಿಶೀಲಿಸಿ, ಜನರಿಗೆ ಸಕಾಲದಲ್ಲಿ ಎಚ್ಚರಿಕೆ ನೀಡುವಂತೆ ಹಾಗೂ ಹಾನಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಪರಿಣಾಮ ಎದುರಿಸಬಹುದಾದ ಪ್ರದೇಶಗಳಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಡಲತೀರಗಳನ್ನು ಮುಚ್ಚಲಾಗಿದ್ದು, ಮಂಗಳವಾರ ಮಧ್ಯಾಹ್ನದಿಂದ ಕರಾವಳಿ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲು ಸಿದ್ಧತೆ ನಡೆಸಲಾಗಿದೆ.

    ಚೆನ್ನೈನಲ್ಲಿ ಅಲೆಗಳ ಅವಾಂತರ

    ಮಂಗಳವಾರ ರಾತ್ರಿ ಚೆನ್ನೈನ ಪಕ್ಕದಲ್ಲಿರುವ ಎನ್ನೋರ್‌ ನಲ್ಲಿ ಹಠಾತ್ ಸಮುದ್ರ ಅಲೆಗಳು, ಸುರಕ್ಷತಾ ತಡೆಗೋಡೆಗಳನ್ನು ದಾಟಿ ರಭಸದಿಂದ ಅಪ್ಪಳಿಸುತ್ತಿವೆ. ಸಮುದ್ರ ಕಿನಾರೆಯ ವಸತಿ ಪ್ರದೇಶಗಳಿಗೆ ಸಮುದ್ರದ ನೀರು ನುಗ್ಗುತ್ತಿರುವ ದೃಶ್ಯಗಳು ಮೇಲ್ನೋಟಕ್ಕೆ ಕಾಣಿಸಿಕೊಂಡಿರುವುದು ಆತಂಕದ ಸಂಗತಿಯಾಗಿದೆ. ಎನ್ನೋರ್ ಬೀಚ್‌ ನಲ್ಲಿ ಬಲವಾದ ಅಲೆಗಳು ಅಪ್ಪಳಿಸಿದ್ದು ಚೆನ್ನೈನ ಭಾರತಿಯಾರ್ ನಗರದ ಮುಖ್ಯ ರಸ್ತೆ ಪ್ರವಾಹ ಸದೃಶ್ಯವಾಗಿದೆ. ಈ ನೆರೆಯಲ್ಲಿ ಹಲವಾರು ರಸ್ತೆಬದಿ ನಿಲ್ಲಿಸಿದ್ದ ಬೈಕ್‌ಗಳು ಕೊಚ್ಚಿ ಹೋಗಿವೆ. ಅನೇಕ ಅಂಗಡಿ ಮುಂಗಟ್ಟುಗಳು ನಾಶವಾಗಿವೆ. ಈ ರಸ್ತೆಯಲ್ಲಿ ಪ್ರಯಾಣ ಮಾಡುವುದು ಅಪಾಯಕಾರಿಯಾಗಿದ್ದು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ರಸ್ತೆಯನ್ನು ಬಂದ್ ಮಾಡಿದ್ದಾರೆ. ರಾತ್ರಿ 11.30ರ ಸುಮಾರಿಗೆ ಎನ್ನೋರ್ ಬಳಿ ಸಮುದ್ರವು ಶಾಂತಗೊಂಡಿದ್ದು ಬಾಧಿತ ಪ್ರದೇಶಗಳಲ್ಲಿರುವ ಜನರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ.

  • ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಕಾರ್ಯಾಚರಣೆ

    ಬ್ಯಾಂಕ್ ಮುಷ್ಕರ ಮುಂದೂಡಿಕೆ, ಎಂದಿನಂತೆ ಬ್ಯಾಂಕ್ ಕಾರ್ಯಾಚರಣೆ

    ನವದೆಹಲಿ: ಸೋಮವಾರದಿಂದ ಆರಂಭವಾಗಬೇಕಿದ್ದ ಬ್ಯಾಂಕ್ ನೌಕರರ 3 ದಿನಗಳ ಮುಷ್ಕರವನ್ನು ಭಾನುವಾರ ರಾತ್ರಿ ದಿಢೀರ್ ಮುಂದೂಡಲಾಗಿದೆ. ಭಾರತೀಯ ಬ್ಯಾಂಕುಗಳ ಸಂಘ ಮತ್ತು ಬ್ಯಾಂಕ್ ಯೂನಿಯನ್‌ಗಳ ಸಂಯುಕ್ತ ವೇದಿಕೆ(ಯುಎಫ್ ಬಿಯು) ನಡುವೆ ರಾತ್ರಿ 9.30ಕ್ಕೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಸಭೆಯಲ್ಲಿ, ಎಲ್ಲಾ ಶನಿವಾರಗಳನ್ನು ರಜಾದಿನವೆಂದು ಘೋಷಿಸುವ ಬಗ್ಗೆ ಚರ್ಚಿಸಲು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿಯು ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಸಾಧ್ಯ ಪರ್ಯಾಯಗಳನ್ನು ಪರಿಶೀಲಿಸಿ, ಪಾಲುದಾರರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿದೆ. ಸ್ಟೇಲ್ – 4 ಮತ್ತು ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ ಅನ್ವಯಿಸುವ ಪಿಎಲ್‌ಐಯೋಜನೆ ಬಗ್ಗೆ ಸರ್ಕಾರಕ್ಕೆ ನೀಡಬೇಕಾದ ತಿದ್ದುಪಡಿ ಪ್ರಸ್ತಾವನೆಗಳ ಪರಿಶೀಲನೆಯೂ ಶೀಘ್ರ ಶುರುವಾಗಲಿದೆ ಎಂದು ಯುಎಫ್‌ಬಿಯು ಪ್ರಕಟಣೆಯಲ್ಲಿ ತಿಳಿಸಿದೆ.

  • ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ: ಐವರು ಯೋಧರು ಹುತಾತ್ಮಆಘಾತವಾಗಿದೆ.

    ಭಾರತೀಯ ವಾಯುಪಡೆಯ ಎಎನ್-32 ವಿಮಾನ ಪತನ: ಐವರು ಯೋಧರು ಹುತಾತ್ಮಆಘಾತವಾಗಿದೆ.

    ಅಸ್ಸಾಂ:ಭಾರತೀಯ ವಾಯುಪಡೆಯ ಎ ಎನ್-32 ಸಾರಿಗೆ ವಿಮಾನ ಪತನಗೊಂಡು ಬೆಂಕಿಗಾಹುತಿಯಾಗಿರುವ ಘಟನೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

    ಅಸ್ಸಾಂನ ಜೋರ್ಹತ್ ನಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಆಗುವ ವೇಳೆ ಏಕಾಏಕಿ ವಿಮಾನ ಪತನಗೊಂಡು ಬೆಂಕಿಗಾಹುತಿಯಾಗಿದೆ. ಈ ದುರಂತದಲ್ಲಿ ಐವರು ಯೋಧರು ಸಾವನ್ನಪ್ಪಿದ್ದಾರೆ. ಓರ್ವ ಸಹಪೈಲಟ್ ಬದುಕುಳಿದಿದ್ದಾಅರೆ.

    ವಾಯುಪಡೆ ನಿಲ್ದಾಣದ ಆವರಣದಲ್ಲಿಯೇ ವಿಮಾನ ಪತನಗೊಂಡಿದೆ. ವಿಮಾನ ಪತನಕ್ಕೆ ಕಾರಣ ತಿಳಿದುಬಂದಿಲ್ಲ. ಆದರೆ ದುರಂತದಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ ದೃಢಪಡಿಸಿದೆ. ವಿಮಾನ ದುರಂತದ ಬಗ್ಗೆ ಉನ್ನತ ತನಿಖೆಗೆ ಆದೇಶಿಸಲಾಗಿದೆ.

    ಈ ದುರ್ಘಟನೆಯಲ್ಲಿ ಮೃತಪಟ್ಟ ಐವರು ಸಿಬ್ಬಂದಿ:
    Prashant Singh (ಸ್ಕ್ವಾಡ್ರನ್ ಲೀಡರ್)
    Shubham Kumar (ಫ್ಲೈಟ್ ಲೆಫ್ಟಿನೆಂಟ್)
    Jitendra Sharma (ಸಾರ್ಜೆಂಟ್)
    Khemaram Kumawat (ಅಗ್ನಿವೀರ್ ವಾಯು)
    Danish Alam (ಅಗ್ನಿವೀರ್ ವಾಯು)

    AN-32 ಒಂದು ಸೋವಿಯತ್ ಯುಗದ ಸಾರಿಗೆ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಪ್ರಮುಖ ಲಾಜಿಸ್ಟಿಕ್ಸ್ ಹಾಗೂ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 1986ರಿಂದ ಭಾರತದಲ್ಲಿ ಸುಮಾರು 22 AN-32 ವಿಮಾನ ಅಪಘಾತಗಳು ಸಂಭವಿಸಿವೆ. 2025ರಲ್ಲಿಯೂ ಇದೇ ಮಾದರಿಯ ವಿಮಾನ ಅಪಘಾತಕ್ಕೀಡಾಗಿತ್ತು. ಆದಾಗ್ಯೂ, ದೇಶದಾದ್ಯಂತ ಸೇನಾ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಿಗೆ ಈ ವಿಮಾನವನ್ನು ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಘಟನೆ, ಕೆಲವು ತಿಂಗಳ ಹಿಂದೆ Sukhoi Su-30MKI ಯುದ್ಧ ವಿಮಾನವು ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಹಾರಾಟದ ವೇಳೆ ಪತನಗೊಂಡಿದ್ದ ಘಟನೆಯ ನಂತರ ಸಂಭವಿಸಿರುವ ಮತ್ತೊಂದು ದೊಡ್ಡ ಆಘಾತವಾಗಿದೆ

    ರಾಜನಾಥ್ ಸಿಂಗ್ ಸಂತಾಪ
    Rajnath Singh ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
    “ಜೋರ್ಹಾಟ್‌ನಲ್ಲಿ ಸಂಭವಿಸಿದ AN-32 ವಿಮಾನ ದುರಂತದಲ್ಲಿ ಐವರು ವಾಯುಯೋಧರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಕರ್ತವ್ಯ ನಿರ್ವಹಣೆಯ ವೇಳೆ ಅವರು ನೀಡಿದ ಅತ್ಯುನ್ನತ ತ್ಯಾಗವನ್ನು ದೇಶ ಸದಾ ಹೆಮ್ಮೆಯಿಂದ ಸ್ಮರಿಸಲಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು” ಎಂದು ಅವರು ತಿಳಿಸಿದ್ದಾರೆ.ವಾಯುಪಡೆ ಕೇಂದ್ರದ ಸಮೀಪ ವಾಸಿಸುವ ಸ್ಥಳೀಯ ನಿವಾಸಿಯೊಬ್ಬರು, “ವಿಮಾನದ ಹಿಂಭಾಗ ಕಾಣುತ್ತಿತ್ತು ಮತ್ತು ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿತ್ತು. ವಿಮಾನವು ನಿಶ್ಚಲವಾಗಿತ್ತು. ನಾನು ಅಲ್ಲಿಂದ ದೂರ ಸರಿಯಲು ಆರಂಭಿಸಿದಾಗ ಭಾರೀ ಸ್ಫೋಟ ಸಂಭವಿಸಿತು. ಅದರ ಪ್ರಭಾವದಿಂದ ಇಡೀ ಪ್ರದೇಶವೇ ನಡುಗಿತು” ಎಂದು ಹೇಳಿದ್ದಾರೆ

  • ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟ‌ರ್ ಅಪಘಾತದಲ್ಲಿ ಕೇರಳ ಮೂಲದ ನವವರ ಸಾವು, ವಧು ಪಾರು!

    ಮದುವೆಯಾಗಿ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟ‌ರ್ ಅಪಘಾತದಲ್ಲಿ ಕೇರಳ ಮೂಲದ ನವವರ ಸಾವು, ವಧು ಪಾರು!

    ಅಮೆರಿಕದ ಜಾರ್ಜಿಯಾದಲ್ಲಿ, ಕೇರಳ ಮೂಲದ ನವದಂಪತಿ ಜೆಸ್ನಿ ಮತ್ತು ಡೇವ್ ಫಿಜಿ ಅವರ ವಿವಾಹದ ಕೆಲವೇ ಗಂಟೆಗಳಲ್ಲಿ ಹೆಲಿಕಾಪ್ಟರ್ ದುರಂತ ಸಂಭವಿಸಿದೆ. ಮಳೆ ಮತ್ತು ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟ‌ರ್ ಪತನಗೊಂಡ ಪರಿಣಾಮ 25 ವರ್ಷದ ವರ ಡೇವ್ ಫಿಜಿ ಮತ್ತು ಹೆಲಿಕಾಪ್ಟ‌ರ್ ಪೈಲಟ್ ಮೃತಪಟ್ಟಿದ್ದಾರೆ.

    ತೀವ್ರ ಗಾಯಗಳಾಗಿದ್ದರೂ, ನವವಧು ಜೆಸ್ನಿ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು ಐದು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಅವರನ್ನು ಹೊರತೆಗೆಯಲಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಕೇರಳ ಮೂಲದ ಈ ದಂಪತಿ ವಿವಾಹವು ಡಾಸನ್‌ವಿಲ್ಲೆಯ ದಿ ರೆವೆರೆ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್‌ ಡಾಸನ್‌ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.
    ದಟ್ಟವಾದ ಕಾಡಿನ ಕಾರಣದಿಂದಾಗಿ ರಕ್ಷಣಾ ಕಾರ್ಯಾಚರಣೆ ಅತ್ಯಂತ ಸವಾಲಾಗಿತ್ತು. ಸುಮಾರು ಐದು ಗಂಟೆಗಳ ಕಾಲ ಅವಶೇಷಗಳು ಮತ್ತು ಬಿದ್ದ ಮರಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ನವವಧು ಜೆಸ್ನಿಯನ್ನು ರಕ್ಷಣಾ ಸಿಬ್ಬಂದಿ ಆಫ್‌‍-ರೋಡ್‌ ವಾಹನಗಳ ಸಹಾಯದಿಂದ ಅತ್ಯಂತ ಶ್ರಮಪಟ್ಟು ಹೊರತೆಗೆದಿದ್ದಾರೆ.

    ವೃತ್ತಿಯಲ್ಲಿ ನರ್ಸ್‌ ಆಗಿರುವ ಜೆಸ್ನಿಗೆ ದೇಹದಾದ್ಯಂತ ತೀವ್ರ ಗಾಯಗಳಾಗಿದ್ದರೂ, ಯಾವುದೇ ಮೂಳೆ ಮುರಿತ ಸಂಭವಿಸದೆ ಬದುಕುಳಿದಿರುವುದು ವೈದ್ಯಕೀಯ ಪವಾಡವೇ ಸರಿ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ತನಿಖೆ ಆರಂಭ ನಾಲ್ಕು ದಶಕಗಳಿಂದ ಅತ್ಯುತ್ತಮ ಸುರಕ್ಷತಾ ದಾಖಲೆ ಹೊಂದಿದ್ದ ಪ್ರೆಸ್ಟೀಜ್‌ ಹೆಲಿಕಾಪ್ಟರ್ಸ್‌ ಸಂಸ್ಥೆಗೆ ಸೇರಿದ ರಾಬಿನ್ಸನ್‌ 66 ಹೆಲಿಕಾಪ್ಟರ್‌ ಇದಾಗಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ಆರಂಭಿಸಿದೆ. ಇನ್ನು 30 ದಿನಗಳಲ್ಲಿ ಇದರ ಪ್ರಾಥಮಿಕ ವರದಿ ಹೊರಬರಲಿದೆ.

    ಈ ಭೀಕರ ಹೆಲಿಕಾಪ್ಟರ್‌ ಅಪಘಾತದಲ್ಲಿ ಡೆಲ್ಟಾ ಏರ್‌ಲೈನ್ಸ್ ನಲ್ಲಿ ಪೈಲಟ್‌ ಆಗಿದ್ದ ಡೇವ್‌ ಫಿಜಿ ಮೃತಪಟ್ಟಿದ್ದರೆ, ನವವಧು ಜೆಸ್ನಿ ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಕೇರಳ ಮೂಲದ ಈ ದಂಪತಿ ವಿವಾಹವು ಡಾಸನ್‌ವಿಲ್ಲೆಯ ದಿ ರೆವೆರೆ ಕಲ್ಯಾಣ ಮಂಟಪದಲ್ಲಿ ನೂರಾರು ಅತಿಥಿಗಳ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ನೆರವೇರಿತ್ತು. ವಿವಾಹದ ಬಳಿಕ ದಂಪತಿ ಹೋಟೆಲ್‌ಗೆ ತೆರಳಲು ಹೆಲಿಕಾಪ್ಟರ್‌ ಏರಿದ್ದರು. ಆದರೆ, ಮಳೆ ಮತ್ತು ದಟ್ಟವಾದ ಮಂಜಿನ ಕಾರಣದಿಂದಾಗಿ ಗೋಚರತೆ ಕಡಿಮೆಯಾಗಿ, ಹೆಲಿಕಾಪ್ಟರ್‌ ಡಾಸನ್‌ವಿಲ್ಲೆಯ ದಟ್ಟ ಅರಣ್ಯ ಹಾಗೂ ಪರ್ವತ ಪ್ರದೇಶದಲ್ಲಿ ಪತನಗೊಂಡಿದೆ.

  • ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯ : ಅಪ್ರಾಪ್ತ ಬಾಲಕನ‌ ಪ್ರೀತಿಗೆ ಬಿದ್ದ 40 ರ ಮಹಿಳೆ…!

    ಇನ್‌ಸ್ಟಾಗ್ರಾಮ್ ನಲ್ಲಿ ಪರಿಚಯ : ಅಪ್ರಾಪ್ತ ಬಾಲಕನ‌ ಪ್ರೀತಿಗೆ ಬಿದ್ದ 40 ರ ಮಹಿಳೆ…!

    ಇನ್‌ಸ್ಟಾಗ್ರಾಮ್ ರೀಲ್ಸ್ ಪರಿಚಯ, 14ರ ಬಾಲಕನ ಪ್ರೀತಿಯಲ್ಲಿ ಬಿದ್ದ 4 ಮಕ್ಕಳ ತಾಯಿ! ಪೊಲೀಸ್ ಠಾಣೆ ಮೆಟ್ಟಿಲೇರಿದ ವಿಚಿತ್ರ ಪ್ರಕರಣ ನಡೆದಿದೆ.

    “ಪ್ರೀತಿಗೆ ಕಣ್ಣಿಲ್ಲ, ವಯಸ್ಸಿನ ಮಿತಿಯಿಲ್ಲ” ಎನ್ನುವ ಮಾತನ್ನು ನೀವು ಕೇಳಿರಬಹುದು. ಆದರೆ ಉತ್ತರ ಪ್ರದೇಶದಲ್ಲಿ ನಡೆದಿರುವ ಈ ಘಟನೆ ಮಾತ್ರ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಪರಿಚಯವಾದ 14 ವರ್ಷದ ಅಪ್ರಾಪ್ತ ಬಾಲಕನನ್ನು, 40 ವರ್ಷದ ನಾಲ್ಕು ಮಕ್ಕಳ ತಾಯಿಯೊಬ್ಬಳು ಪ್ರೀತಿಸಿ, ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

    ಅಚ್ಚರಿಯ ವಿಷಯವೆಂದರೆ, ಈ ಮಹಿಳೆಯ ಹಿರಿಯ ಮಗನಿಗೆ ಈಗ 19 ವರ್ಷ! ಅಂದರೆ ತನ್ನ ಸ್ವಂತ ಮಗನಿಗಿಂತಲೂ 5 ವರ್ಷ ಚಿಕ್ಕವನಾದ ಬಾಲಕನ ಬೆನ್ನು ಬಿದ್ದು ಈಕೆ ಸುದ್ದಿಯಾಗಿದ್ದಾಳೆ.

    ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಶುರುವಾದ ಲವ್ ಸ್ಟೋರಿ:
    ಮೂಲತಃ ಉತ್ತರ ಪ್ರದೇಶದ ಗೋರಾಖ್‌ಪುರದ ಈ ಮಹಿಳೆಗೆ ಇನ್‌ಸ್ಟಾಗ್ರಾಮ್ ರೀಲ್ಸ್‌ಗೆ ಲೈಕ್ ಮಾಡುವ ಮೂಲಕ ತಮಿಳುನಾಡಿನ ಚೆನ್ನೈ ಮೂಲದ 14 ವರ್ಷದ ಬಾಲಕನ ಪರಿಚಯವಾಗಿದೆ. ದಿನಕಳೆದಂತೆ ಇಬ್ಬರ ನಡುವೆ ಚಾಟಿಂಗ್ ಹೆಚ್ಚಾಗಿ, ಇಬ್ಬರೂ ಹತ್ತಿರವಾಗಿದ್ದಾರೆ. ಬಾಲಕ ಪ್ರಸ್ತುತ ತನ್ನ ತಂದೆಯೊಂದಿಗೆ ವಾಸವಾಗಿದ್ದಾನೆ.

    ಕೆಲ ದಿನಗಳ ಬಳಿಕ ಬಾಲಕ ಮಹಿಳೆಯ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿ, ಆಕೆಯನ್ನು ನಿರ್ಲಕ್ಷಿಸಲು ಆರಂಭಿಸಿದ್ದಾನೆ. ಇದರಿಂದ ಕಂಗಾಲಾದ ಮಹಿಳೆ ನೇರವಾಗಿ ನೌತನವಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. “ನಮಗೆ ಈಗಾಗಲೇ ಮದುವೆಯಾಗಿದೆ, ಆದರೆ ಆತ ಈಗ ನನ್ನೊಂದಿಗೆ ಇರಲು ನಿರಾಕರಿಸುತ್ತಿದ್ದಾನೆ” ಎಂದು ಪೊಲೀಸರ ಮುಂದೆ ನಾಟಕವಾಡಿದ್ದಾಳೆ.

    ತನಿಖೆ ಕೈಗೆತ್ತಿಕೊಂಡ ಪೊಲೀಸರು ಬಾಲಕ ಮತ್ತು ಮಹಿಳೆಯ ಇಬ್ಬರ ಕಡೆಯವರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಮದುವೆಯಾಗಿರುವ ಯಾವುದೇ ದಾಖಲೆಗಳನ್ನು ಒದಗಿಸಲು ಮಹಿಳೆ ವಿಫಲಳಾಗಿದ್ದಾಳೆ.

    ಅಪ್ರಾಪ್ತ ಬಾಲಕನೊಂದಿಗೆ ವಾಸಿಸಲು ಒತ್ತಾಯಿಸಿದರೆ ಪೋಕ್ಸೋ (POCSO) ಕಾಯ್ದೆಯಡಿ ಜೈಲು ಶಿಕ್ಷೆಯಾಗಬಹುದು ಎಂದು ಪೊಲೀಸರು ಎಚ್ಚರಿಸಿದಾಗ ಮಹಿಳೆ ಸುಮ್ಮನಾಗಿದ್ದಾಳೆ.

    ಸದ್ಯ ಇಬ್ಬರ ಕಡೆಯಿಂದಲೂ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. “ಇನ್ಮುಂದೆ ಪರಸ್ಪರ ಯಾವುದೇ ಸಂಪರ್ಕ ಹೊಂದುವಂತಿಲ್ಲ” ಎಂದು ಪೊಲೀಸರು ಇಬ್ಬರಿಗೂ ಖಡಕ್ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಸೋಶಿಯಲ್ ಮೀಡಿಯಾ ಪ್ರೀತಿಯ ಈ ವಿಚಿತ್ರ ಕಥೆ ಸದ್ಯ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

  • ಅ*ತ್ಯಾಚಾರ ಪ್ರಕರಣ ಮಾಹಿತಿ ಕೊಡುವ ವೇಳೆ ಬಿಕ್ಕಿ ಬಿಕ್ಕಿ ನಗುತ್ತಿದ್ದ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು…

    ಅ*ತ್ಯಾಚಾರ ಪ್ರಕರಣ ಮಾಹಿತಿ ಕೊಡುವ ವೇಳೆ ಬಿಕ್ಕಿ ಬಿಕ್ಕಿ ನಗುತ್ತಿದ್ದ ಮೂವರು ಪೊಲೀಸ್ ಅಧಿಕಾರಿಗಳ ಅಮಾನತು…

    ಚೆನ್ನೈ: 10 ವರ್ಷದ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಜೋಕ್ ಮಾಡಿ ನಕ್ಕಿದ್ದ ಮೂವರು ಐಪಿಎಸ್ ಅಧಿಕಾರಿಗಳ ಸಸ್ಪೆಂಡ್ ಮಾಡಿದ ತಮಿಳುನಾಡು ಸಿಎಂ ವಿಜಯ್!

    ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಹತ್ತು ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಆದರೆ, ಇಂತಹ ಅತ್ಯಂತ ಸೂಕ್ಷ್ಮ ಹಾಗೂ ದಾರುಣ ಘಟನೆಯ ತನಿಖೆ ನಡೆಸುವಾಗ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮೂವರು ಐಪಿಎಸ್ (IPS) ಅಧಿಕಾರಿಗಳು ನಡೆದುಕೊಂಡ ರೀತಿ ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ಆ ಮೂವರನ್ನೂ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು (Suspend) ಮಾಡಿ ಆದೇಶಿಸಿದ್ದಾರೆ.

    ಸುಳೂರು ಮೂಲದ 10 ವರ್ಷದ ಬಾಲಕಿಯೊಬ್ಬಳು ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ದಿಢೀರನೆ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಹುಡುಕಾಟ ನಡೆಸಿದ ನಂತರ, ಬಾಲಕಿಯ ಶವವು ಸಮೀಪದ ಕೆರೆಯ ಬಳಿ ಪತ್ತೆಯಾಗಿತ್ತು. ಬಾಲಕಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆಯನ್ನು ಖಂಡಿಸಿ ಮೃತ ಬಾಲಕಿಯ ಕುಟುಂಬದವರು ಮತ್ತು ಸಾರ್ವಜನಿಕರು ತಕ್ಷಣವೇ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಸ್ಥಳದಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದರು.

    ಬಾಲಕಿಯ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು 33 ವರ್ಷದ ದಿನಗೂಲಿ ಕಾರ್ಮಿಕ ಕಾರ್ತಿಕ್ ಮತ್ತು ಮೋಹನ್‌ರಾಜ್ ಎಂದು ಗುರುತಿಸಲಾಗಿದೆ.

    ಪ್ರಕರಣದ ತನಿಖೆಯ ಪ್ರಗತಿಯನ್ನು ವಿವರಿಸಲು ಪೊಲೀಸ್ ಇಲಾಖೆಯು ಪತ್ರಿಕಾಗೋಷ್ಠಿ ಹಮ್ಮಿಕೊಂಡಿತ್ತು. ಈ ವೇಳೆ ವೇದಿಕೆಯಲ್ಲಿದ್ದ ಒಬ್ಬ ಮಹಿಳಾ ಅಧಿಕಾರಿ ಸೇರಿದಂತೆ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಗಂಭೀರವಾದ ಈ ಕೊಲೆ ಪ್ರಕರಣದ ಬಗ್ಗೆ ಮಾತನಾಡುವಾಗಲೇ ಪರಸ್ಪರ ನಗುತ್ತಾ, ಮುಗುಳ್ನಗುತ್ತಾ ಇರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯಗಳ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ಪೊಲೀಸರ ವಿರುದ್ಧ ಚಾಟಿ ಬೀಸಿದ್ದಾರೆ.

    “ನೊಂದ ಕುಟುಂಬದ ಗಾಯದ ಮೇಲೆ ಉಪ್ಪು ಸವರುವಂತೆ ಈ ನಾಗರಿಕ ಸೇವಕರು ವರ್ತಿಸಿದ್ದಾರೆ” ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯ ಕೇಳಿಬಂದಿದೆ.

    ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ:
    ಈ ಅಧಿಕಾರಿಗಳು ನಗುತ್ತಿರುವ ದೃಶ್ಯಗಳು ಮಾಧ್ಯಮಗಳು ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಭಾರಿ ಆಕ್ರೋಶ ವ್ಯಕ್ತಪಡಿಸಿದರು. ಒಂದು ಮಗು ಸತ್ತಾಗಲೂ ನಿಮಗೆ ಕನಿಷ್ಠ ಮಾನವೀಯತೆ ಇಲ್ಲವೇ? ನೀವೂ ಒಬ್ಬ ಮಹಿಳೆ, ನಿಮಗೂ ಮಕ್ಕಳಿರಬಹುದು. ನಿಮ್ಮ ಸ್ವಂತ ಮಗಳಿಗೆ ಹೀಗಾಗಿದ್ದರೆ ಹೀಗೆಯೇ ನಗುತ್ತಿದ್ದಿರಾ? ಎಂದು ಸಾರ್ವಜನಿಕರು ಆ ಐಜಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

    ತಕ್ಷಣವೇ ಆ್ಯಕ್ಷನ್ ತಗೊಂಡ ಸಿಎಂ ವಿಜಯ್
    ಈ ವಿಷಯ ಮುಖ್ಯಮಂತ್ರಿ ವಿಜಯ್ ಅವರ ಗಮನಕ್ಕೆ ಬರುತ್ತಿದ್ದಂತೆ ಅವರು ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನ ತೋರಿದ ಆ ಮೂವರೂ ಐಪಿಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.

    ಈ ಕುರಿತು ತಮ್ಮ ಟ್ವಿಟರ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿರುವ ಸಿಎಂ ವಿಜಯ್:”ಪೊಲೀಸರು ಸಾರ್ವಜನಿಕರಿಗೆ ಉತ್ತರದಾಯಿಯಾಗಿರಬೇಕು.” ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವಾಗ ಅಧಿಕಾರಿಗಳು ಗಂಭೀರತೆ ಕಾಯ್ದುಕೊಳ್ಳಬೇಕು.
    “ಬೇಜವಾಬ್ದಾರಿಯಿಂದ ವರ್ತಿಸುವ ಅಧಿಕಾರಿಗಳ ಮೇಲೆ ಯಾವುದೇ ಕರುಣೆ ತೋರಿಸುವ ಪ್ರಶ್ನೆಯೇ ಇಲ್ಲ” ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.

    ಮುಖ್ಯಮಂತ್ರಿ ವಿಜಯ್ ಅವರ ಈ ತ್ವರಿತ ಮತ್ತು ಕಠಿಣ ನಿರ್ಧಾರಕ್ಕೆ ದೇಶಾದ್ಯಂತ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬೇರೆ ರಾಜ್ಯಗಳ ಮುಖ್ಯಮಂತ್ರಿಗಳೂ ವಿಜಯ್ ಅವರ ಈ ನಡೆಯನ್ನು ನೋಡಿ ಕಲಿಯಬೇಕು ಎಂದು ನೆಟಿಜನ್‌ಗಳು ಕೊಂಡಾಡುತ್ತಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಿದ್ದರಿಂದ, ಮುಂದಿನ ದಿನಗಳಲ್ಲಾದರೂ ಪೊಲೀಸರು ಸಾರ್ವಜನಿಕರೊಂದಿಗೆ ಮತ್ತು ಇಂತಹ ಪ್ರಕರಣಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕಲಿಯುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

  • ಪಾಕಿಸ್ತಾನ : ಚಲಿಸುತ್ತಿದ್ದ ರೈಲಿನಲ್ಲಿ ಆತಾಹುತಿ ಬಾಂಬ್‌ ದಾಳಿ : 24 ಮಂದಿ ಸಾ*ವು

    ಪಾಕಿಸ್ತಾನ : ಚಲಿಸುತ್ತಿದ್ದ ರೈಲಿನಲ್ಲಿ ಆತಾಹುತಿ ಬಾಂಬ್‌ ದಾಳಿ : 24 ಮಂದಿ ಸಾ*ವು

    ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚಲಿಸುತ್ತಿದ್ದ ರೈಲಿನಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 24 ಜನರು ಸಾ*ವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಈ ಘಟನೆಯ ದೃಶ್ಯಗಳು ಮತ್ತು ವರದಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿವೆ.

    ರೈಲು ಕಂಟೋನ್ಮೆಂಟ್‌ನಿಂದ ಹೊರಟು ಕ್ವೆಟ್ಟಾದ ‘ಚೆಮನ್ ಫಾಟಕ್’ (Chaman Phatak) ಪ್ರದೇಶದ ಬಳಿ ಚಲಿಸುತ್ತಿದ್ದಾಗ ಈ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.

    ಹಳಿತಪ್ಪಿದ ಬೋಗಿಗಳು: ಸ್ಫೋಟದ ತೀವ್ರತೆಗೆ ರೈಲಿನ ಹಲವು ಬೋಗಿಗಳು ಹಳಿತಪ್ಪಿದ್ದು, ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ.

    ಸುತ್ತಮುತ್ತಲಿನ ಹಾನಿ: ರೈಲ್ವೆ ಟ್ರ್ಯಾಕ್ ಪಕ್ಕದಲ್ಲಿದ್ದ ಮನೆಗಳ ಕಿಟಕಿಗಳು ಪುಡಿಯಾಗಿದ್ದು, ಅಲ್ಲಿ ಪಾರ್ಕ್ ಮಾಡಲಾಗಿದ್ದ ಹತ್ತಾರು ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ದಾಳಿಯ ಹೊಣೆ ಹೊತ್ತ ಬಿಎಲ್‌ಎ (BLA)
    ಸ್ಫೋಟದ ಬೆನ್ನಲ್ಲೇ ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಬಲೂಚ್ ಲಿಬರೇಶನ್ ಆರ್ಮಿ (Baloch Liberation Army) ಈ ಕೃತ್ಯದ ಹೊಣೆಯನ್ನು ಹೊತ್ತುಕೊಂಡಿದೆ. ಪಾಕಿಸ್ತಾನದ ಮಿಲಿಟರಿ ಸಿಬ್ಬಂದಿಯನ್ನೇ ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಸಂಘಟನೆ ಹೇಳಿಕೊಂಡಿದೆ. ಸ್ಫೋಟದ ನಂತರ ಸ್ಥಳದಲ್ಲಿ ಭಾರಿ ಗುಂಡಿನ ಸದ್ದು ಕೂಡ ಕೇಳಿಬಂದಿದೆ.

    ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು, ರೈಲ್ವೆ ಸಿಬ್ಬಂದಿ ಮತ್ತು ಪಾಕಿಸ್ತಾನಿ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

  • 14 ವರ್ಷದ ಬಾಲಕಿ ಮೇಲೆ ಚರ್ಚ್ ಫಾದರ್ ನಿಂದ ಲೈಂಗಿಕ ದೌರ್ಜನ್ಯ. ಗರ್ಭಿಣಿಯಾದ ಬಾಲಕಿ..!

    14 ವರ್ಷದ ಬಾಲಕಿ ಮೇಲೆ ಚರ್ಚ್ ಫಾದರ್ ನಿಂದ ಲೈಂಗಿಕ ದೌರ್ಜನ್ಯ. ಗರ್ಭಿಣಿಯಾದ ಬಾಲಕಿ..!

    ದೈವ ಭಕ್ತಿಯ ಹೆಸರಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕಾಮವರಪುಕೋಟ ಮಂಡಲದಲ್ಲಿ ಬೆಳಕಿಗೆ ಬಂದಿದೆ.

    ಕಳ್ಳಚೆರುವು ಪ್ರದೇಶದ ಚೌಟಪಲ್ಲಿ ರಾಂಬಾಬು ಎಂಬ ಪಾದ್ರಿ, ತನ್ನ ಬಳಿಗೆ ಪ್ರಾರ್ಥನೆಗಾಗಿ ಬರುತ್ತಿದ್ದ ಬಡ ಕುಟುಂಬದ 14 ವರ್ಷದ ಬಾಲಕಿಯ ಮೇಲೆ ಕಣ್ಣು ಹಾಕಿದ್ದಾನೆ.

    ದೇವರಿಗೆ ಪ್ರಾರ್ಥನೆ ಸಲ್ಲಿಸುವ ನೆಪದಲ್ಲಿ ಬಾಲಕಿಯನ್ನು ಪುಸಲಾಯಿಸಿ ಸತತವಾಗಿ ಅತ್ಯಾ#ರ ಎಸಗಿದ್ದಾನೆ.
    ಈ ವಿಷಯವನ್ನು ಯಾರಿಗಾದರೂ ಹೇಳಿದರೆ ದೇವರು ಶಪಿಸುತ್ತಾನೆ ಎಂದು ಬಾಲಕಿಯನ್ನು ಹೆದರಿಸಿದ್ದರಿಂದ, ಭಯಗೊಂಡ ಬಾಲಕಿ ಇಷ್ಟು ದಿನ ಮೌನವಾಗಿದ್ದಳು ಎಂದು ತಿಳಿದುಬಂದಿದೆ.

    ಬಾಲಕಿ ಗರ್ಭಿಣಿಯಾಗಿರುವುದನ್ನು ಗಮನಿಸಿದ ಪಾಸ್ಟರ್, ತನ್ನ ಪಾಪಕೃತ್ಯ ಹೊರಬೀಳುವ ಭಯದಿಂದ ಬಾಲಕಿಗೆ ಅತಿಯಾದ ಪ್ರಮಾಣದಲ್ಲಿ ಗರ್ಭನಿರೋಧಕ ಮಾತ್ರೆಗಳನ್ನು ನೀಡಿದ್ದಾನೆ. ಮಾತ್ರೆಗಳ ಅಡ್ಡಪರಿಣಾಮದಿಂದ ಬಾಲಕಿಗೆ ತೀವ್ರ ರಕ್ತಸ್ರಾವವಾಗಿ ಆರೋಗ್ಯ ಕ್ಷೀಣಿಸಿದೆ. ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯಕೀಯ ತಪಾಸಣೆಯಲ್ಲಿ ಅಸಲಿ ವಿಷಯ ಬಯಲಾಗಿದೆ.

    ಸದ್ಯ ಬಾಲಕಿ ಏಲೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ತಡಿಕಲಪುಡಿ ಎಸ್‌ಐ ವಲ್ಲಿಪದ್ಮ ಅವರು ಆರೋಪಿ ಪಾಸ್ಟರ್ ರಾಂಬಾಬು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸಿ)

  • ಕಾರು ಅಪಘಾತ :  ತೆಲುಗು ಚಿತ್ರ ನಟ ಭರತ್ ಕಾಂತ್ ನಿಧನ.!!

    ಕಾರು ಅಪಘಾತ : ತೆಲುಗು ಚಿತ್ರ ನಟ ಭರತ್ ಕಾಂತ್ ನಿಧನ.!!


    ತೆಲುಗು ಚಿತ್ರರಂಗಕ್ಕೆ ದೊಡ್ಡ ಆಘಾತ. ಉದಯೋನ್ಮುಖ ನಟ ಭರತ್ ಕಾಂತ್ (31) ಅವರು ಹೈದರಾಬಾದ್‌ನ ಹೊರವರ್ತುಲ ರಸ್ತೆಯಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. ಅಪಘಾತದಲ್ಲಿ ಅವರೊಂದಿಗೆ ಪ್ರಯಾಣಿಸುತ್ತಿದ್ದ ಸಿನಿಮಾಟೋಗ್ರಾಫರ್ ಸಾಯಿ ತ್ರಿಲೋಕ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

    ಅದಿಬಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಸಿಟ್ ನಂ. 12 ಬಳಿ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಭರತ್ ಕಾಂತ್ ಮತ್ತು ಸಾಯಿ ತ್ರಿಲೋಕ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಟ್ರಕ್‌ಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಭರತ್ ಕಾಂತ್ ಯಾರು?

    ಭರತ್ ಕಾಂತ್ ಅವರು ‘ಗ್ರಾಮಂ’, ‘ಟೆನೆಂಟ್’ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ‘ಗೀತಾಂಜಲಿ’ ಮತ್ತು ‘ಪಾರ್ವತಿ ಪರಮೇಶ್ವರಲು’ ಸೇರಿದಂತೆ ಜನಪ್ರಿಯ ವೆಬ್ ಸರಣಿಗಳಲ್ಲಿ ನಟಿಸಿ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದರು.

    ಆಶು ರೆಡ್ಡಿ ಭಾವುಕ ಪ್ರತಿಕ್ರಿಯೆ : ಭರತ್ ಅವರ ಆಪ್ತ ಗೆಳತಿ ಮತ್ತು ನಟಿ ಆಶು ರೆಡ್ಡಿ ಅವರು ಈ ಸುದ್ದಿಯಿಂದ ತೀವ್ರ ದಿಗ್ಭ್ರಾಂತರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಭರತ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು, “ನನ್ನ ಆತ್ಮೀಯ ಗೆಳೆಯ, ನನ್ನ ಎಮರ್ಜೆನ್ಸಿ ಕಾಂಟ್ಯಾಕ್ಟ್. ನಿನ್ನ ನಗು ಯಾವಾಗಲೂ ನೆನಪಿರುತ್ತದೆ” ಎಂದು ಭಾವುಕರಾಗಿ ಬರೆದಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಶಂಕಿಸಿದ್ದಾರೆ. ಮೃತರ ದೇಹಗಳನ್ನು ಉಸ್ಮಾನಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಭರತ್ ಕಾಂತ್ ಅವರ ಅಕಾಲಿಕ ನಿಧನಕ್ಕೆ ತೆಲುಗು ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.

  • ತಮಿಳುನಾಡಿನಲ್ಲಿ ದಳಪತಿ ಇನ್ ಆಕ್ಟಿವ್.ಉಚಿತ ವಿದ್ಯುತ್ ಯೋಜನೆಗೆ ಸಹಿ ಹಾಕಿದ ನೂತನ ಸಿಎಂ ವಿಜಯ್.

    ತಮಿಳುನಾಡಿನಲ್ಲಿ ದಳಪತಿ ಇನ್ ಆಕ್ಟಿವ್.ಉಚಿತ ವಿದ್ಯುತ್ ಯೋಜನೆಗೆ ಸಹಿ ಹಾಕಿದ ನೂತನ ಸಿಎಂ ವಿಜಯ್.

    ತಮಿಳುನಾಡಿನಲ್ಲಿ ಇಂದಿನಿಂದ ದಳಪತಿ ವಿಜಯ್ ಯುಗಾರಂಭವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ವಿಜಯ್, ತಾನು ಜನರಿಗೆ ನೀಡಿದ ಭರವಸೆ, ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಅಂಶಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ.

    ಅದರಂತೆ ನೂತನ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆಯೇ ವಿಜಯ್, ರಾಜ್ಯದ ಜನತೆಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದ್ದಾರೆ. ಗೃಹ ವಿದ್ಯುತ್ ಗ್ರಾಹಕರ ಹಿತದೃಷ್ಟಿಯಿಂದ ಎರಡು ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಮಹತ್ವದ ಯೋಜನೆಗೆ ಸಹಿ ಹಾಕಿದ್ದಾರೆ.

    ಸಾರ್ವಜನಿಕರ ಸಮ್ಮುಖದಲ್ಲೇ ಈ ಐತಿಹಾಸಿಕ ಆದೇಶಕ್ಕೆ ವಿಜಯ್ ಮೊದಲ ಸಹಿ ಹಾಕಿದ್ದಾರೆ. ಈ ಮೂಲಕ ತಮ್ಮ ಆಡಳಿತದ ಆರಂಭದಲ್ಲೇ ಜನಪರ ಕಲ್ಯಾಣ ಯೋಜನೆಗಳಿಗೆ ಆದ್ಯತೆ ನೀಡುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

    ರಾಜ್ಯದ ಜನತೆಯನ್ನುದ್ದೇಶಿಸಿ ಸಿಎಂ ವಿಜಯ್ ಮೊದಲ ಮಾತು:
    ತಮಿಳುನಾಡಿನ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ, ತಮಿಳಿಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್, ತಮ್ಮ ಗೆಲುವನ್ನು ಇಡೀ ತಮಿಳುನಾಡಿನ ಜನತೆಗೆ ಅರ್ಪಿಸಿದ್ದಾರೆ. ಇದು ನನ್ನೊಬ್ಬನ ಗೆಲುವಲ್ಲ, ನಿಮ್ಮೆಲ್ಲರ ಗೆಲುವು. ಇಂದಿನಿಂದ ನಿಜವಾದ ಜಾತ್ಯಾತೀತ, ಸಮಾಜವಾದಿ ಆಡಳಿತ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

    ಚೆನ್ನೈ ನ ನೆಹರು ಕ್ರೀಡಾಂಗಣದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಇದು ನನ್ನ ಗೆಲುವಲ್ಲ ಜನತೆಯ ಗೆಲುವು. ಈ ಪ್ರಕ್ರಿಯೆಯಲ್ಲಿ ನಾನು ಅನುಭವಿಸಿದ ಅವಮಾನ ಪಕ್ಕಕ್ಕಿಡುತ್ತೇನೆ. ನನ್ನಿಂದಾಗಿ ಅವಮಾನ ಅನುಭವಿಸಿದ ಎಲ್ಲರೂ ನನ್ನವರೇ. ನಿಮ್ಮೆಲ್ಲರಿಂದಲೇ ನಾನಿಂದು ಮುಖ್ಯಮಂತ್ರಿಯಾಗಿದ್ದೇನೆ. ನಿಮ್ಮೆಲ್ಲರಿಗೂ ಕೋಟಿ ಕೋಟಿ ನಮನಗಳು ಎಂದರು.

    ಕಾಂಗ್ರೆಸ್ ನಾಯಕ, ನನ್ನ ಸಹೋದರ ರಾಹುಲ್ ಗಾಂಧಿಯವರಿಗೂ ಧನ್ಯವಾದ. ವಿಸಿಕೆ ಹಾಗೂ ಎಡಪಕ್ಷಗಳ ನಾಯಕರಿಗೂ ಧನ್ಯವಾದ. ಈ ಸಂದರ್ಭದಲ್ಲಿ ನನ್ನ ಜೊತೆ ಇರುವ ಎಲ್ಲರಿಗೂ ಧನ್ಯವಾದ. ಎಲ್ಲರೂ ಆತ್ಮವಿಶ್ವಾದಿಂದ ಇರಿ ಗೆಲುವು ನಮ್ಮದೇ ಆಗಲಿದೆ. ಇಷ್ಟು ಕೋಟಿ ಜನರು ನನ್ನೊಂದಿಗೆ ಇರುವಾಗ ನಾನು ಯಾವುದಕ್ಕೂ ಹೆದರುವುದಿಲ್ಲ. ಏನೇ ಸಮಸ್ಯೆ ಬಂದರೂ ಎದುರಿಸುತ್ತೇನೆ ಎಂದು ತಿಳಿಸಿದ್ದಾರೆ.

    ನಾನು ಕೊಟ್ಟಿರುವ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸುತ್ತೇನೆ. ನನಗೆ ಸ್ವಲ್ಪ ಕಾಲಾವಾಕಾಶಗಳನ್ನು ಕೊಡಿ. 10 ಲಕ್ಷ ಕೋಟಿ ಸಾಲವನ್ನು ನನ್ನ ಮೇಲೆ ಹೊರಿಸಿದ್ದಾರೆ. ಹಿಂದಿನ ಎಂ.ಕೆ.ಸ್ಟಾಲಿನ್ ಸರ್ಕಾರ ರಾಜ್ಯದ ಖಜಾನೆಯನ್ನು ಖಾಲಿ ಮಾಡಿದೆ. ತಮಿಳುನಾಡು ಆರ್ಥಿಕವಾಗಿ ದುಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ನಾನು ಬಂದಿದ್ದೇನೆ. ರಾಜ್ಯದ ಆರ್ಥಿಕತೆ ಬಗ್ಗೆ ಶ್ವೇತಪತ್ರ ಹೊರಡಿಸುತ್ತೇನೆ ಎಂದು ಹೇಳಿದರು.

    ರಾಜ್ಯದಲ್ಲಿ ಪಾರದರ್ಶಕವಾಗಿ ಆಡಳಿತ ನಡೆಸಲಾಗುವುದು. ಇನ್ಮುಂದೆ ಆಡಳಿತದಲ್ಲಿ ಯಾವುದೇ ಮುಚ್ಚು ಮರೆ ಇರುವುದಿಲ್ಲ. ಪ್ರಣಾಳಿಕೆಯಲ್ಲಿ ಘೋಷಿಸಿರುವ ಎಲ್ಲಾ ಅಂಶಗಳನ್ನು ಈಡೇರಿಸಲಾಗುವುದು ಎಂದು ತಿಳಿಸಿದರು.