Author: Dharmaraju

  • ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಕೊಲೆಗೆ ಯತ್ನ ಪ್ರಕರಣ; ರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

    ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ, ಕೊಲೆಗೆ ಯತ್ನ ಪ್ರಕರಣ; ರೋಪಿಗಳಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

    ದೊಡ್ಡಬಳ್ಳಾಪುರ; (ಪ್ರಭಾ, ಮಾ.24 ); ದಸ್ತಗಿರಿಗೆ ಮುಂದಾದ ಪೊಲೀಸರ ಮೇಲೆ ಚಾಕುವಿನಿಂದ ಚುಚ್ಚಿ, ಹಲ್ಲೆಮಾಡಿ ಕೊಲೆಗೆ ಯತ್ನಿಸಿದ್ದ ಇಬ್ಬರು ಆರೋಪಿಗಳಿಗೆ ದೊಡ್ಡಬಳ್ಳಾಪುರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.

    ಕೊಲೆಗೆ ಯತ್ನಿಸಿದ ಆರೋಪಿಗಳು ಹೇಮಂತ್, ಸೋನು ಎಂದು ತಿಳಿದುಬಂದಿದೆ. ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ದ ಡಕಾಯಿತಿ ಮತ್ತು ಕೊಲೆ ಆರೋಪದಡಿ ಪ್ರಕರಣ ದಾಖಲಾಗಿತ್ತು, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರ ತಂಡ ರಚನೆ ಮಾಡಲಾಗಿತ್ತು. ಅದರಂತೆ  ದಿನಾಂಕ: 10.09.2020 ರಂದು ಸಂಜೆ 5.55 ಗಂಟೆಯಲ್ಲಿ ಆರೋಪಿಗಳಾದ ಹೇಮಂತ್ ಕುಮಾರ್ ಹಾಗೂ ಸೋನು ರವರುಗಳು ಕೆಎ-03-ಎಂಸಿ-6915 ಚವರ್ಲೆಟ್ ಕಾರಿನಲ್ಲಿ ದೊಡ್ಡಬಳ್ಳಾಪುರ – ಡಾಬಸ್ ಪೇಟೆ ಮೂಲಕ ತುಮಕೂರು ಕಡೆಗೆ ಹೋಗುತ್ತಿರುತ್ತಾರೆಂದು ಈ ಖಚಿತ ಮಾಹಿತಿ ಮೇರೆಗೆ ಪೊಲೀಸರು ಸರ್ಕಾರಿ ವಾಹನಗಳಲ್ಲಿ ಕೊಡಿಗೇಹಳ್ಳಿ ಕಡೆಯಿಂದ ಆರೋಪಿಗಳನ್ನು ಹಿಂಬಾಲಿಸಿಕೊಂಡು ಬಂದು ಕೆಸ್ತೂರು ಗ್ರಾಮದ ಬಳಿ ಬಂಡಿಜಾಡು ರಸ್ತೆಯಲ್ಲಿ ಆರೋಪಿಗಳ ಕಾರನ್ನು ಅಡ್ಡ ಹಾಕಿ ದಸ್ತಗಿರಿ ಮಾಡಲು ಹೋದಾಗ ಇಬ್ಬರೂ ಆರೋಪಿಗಳು ಕೈಗಳಲ್ಲಿ ಚಾಕುಗಳನ್ನು ಹಿಡಿದುಕೊಂಡು ಬಂದು ಹತ್ತಿರ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಾ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಿಡಿದುಕೊಳ್ಳಲು ಹೋದ ಪೊಲೀಸರಿಗೆ ಚಾಕುವಿನಿಂದ ಚುಚ್ಚಿ ಹಲ್ಲೆಮಾಡಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದದ್ದರು. ಈ ಸಂಬಂಧ ಆರೋಪಿಗಳ ವಿರುದ್ಧ ಅಂದಿನ ತನಿಖಾಧಿಕಾರಿಗಳಾಗಿದ್ದ ಪೊಲೀಸ್ ಇನ್ಸೆಕ್ಟರ್ ಕುಮಾರ್ ಎ.ವಿ ರವರು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

    ಈ ಪ್ರಕರಣವು ನಗರದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪೀಠವು  ಎಸ್.ಸಿ.ನಂ:10003/2021 ರಂತೆ ವಿಚಾರಣೆ ನಡೆಸಿತ್ತು, ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ. ಟಿ.ಎನ್ ನಟರಾಜ ರವರು ವಾದ ಮಂಡಿಸಿದ್ದರು. ಪ್ರಕರಣದಲ್ಲಿ ಆರೋಪಿತರು ಅಪರಾಧ ಎಸಗಿರುವುದು ಸಾಭೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ. ನಿರ್ಮಲ. ಕೆ ರವರು ಮಾರ್ಚ್ 23 ರಂದು ರಂದು ಪ್ರಕರಣದ ಇಬ್ಬರೂ ಆರೋಪಿತರಿಗೆ ಐ.ಪಿ.ಸಿ ಕಲಂ;307 ರ ಅಪರಾಧಕ್ಕಾಗಿ 10 ವರ್ಷಗಳ ಕಠಿಣ ಕಾರಾಗೃಹ ವಾಸ ಹಾಗೂ ತಲಾ 10,000/- ರೂ ದಂಡ, ಐ.ಪಿ.ಸಿ ಕಲಂ;332 ರ ಅಪರಾಧಕ್ಕಾಗಿ 3 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ ತಲಾ 5,000/- ರೂ ದಂಡ ಮತ್ತು ಐ.ಪಿ.ಸಿ ಕಲಂ; 353 ಅಪರಾಧಕ್ಕಾಗಿ 2 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

  • ಅವೈಜ್ಞಾನಿಕ ಒಳಮೀಸಲಾತಿ ಜಾರಿ,ನಾಗಮೋಹನ ದಾಸ್ ವರದಿ ತಿರಸ್ಕಾರಕ್ಕೆ ಆಗ್ರಹ,ಮಾ 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ.

    ಅವೈಜ್ಞಾನಿಕ ಒಳಮೀಸಲಾತಿ ಜಾರಿ,ನಾಗಮೋಹನ ದಾಸ್ ವರದಿ ತಿರಸ್ಕಾರಕ್ಕೆ ಆಗ್ರಹ,ಮಾ 25 ರಂದು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ.

    ದೊಡ್ಡಬಳ್ಳಾಪುರ: ನಿ.ನ್ಯಾ.ನಾಗಮೋಹನ್ ದಾಸ್ ಆಯೋಗದ ಒಳಮೀಸಲಾತಿ ವರದಿಯು ಸಂಪೂರ್ಣವಾಗಿ ಅವೈಜ್ಙಾನಿಕವಾಗಿದ್ದು ಪರಿಶಿಷ್ಟ (ಬಲಗೈ)ಜಾತಿಗೆ ತುಂಬಲಾಗದ ನಷ್ಟನ್ನುಂಟು ಮಾಡುತ್ತಿದೆ, ಆದ್ದರಿಂದ ಒಳಮೀಸಲಾತಿ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಹೋರಾಟಕ್ಕೆ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ನರೇಶ ಮನವಿ ಮಾಡಿಕೊಂಡರು.

    ಕಛೇರಿಪಾಳ್ಯದ ಸಾವಿರಕಣ್ಣಮ್ಮ ದೇವಸ್ಥಾನದ ಆವರಣದಲ್ಲಿ ಛಲವಾದಿ ಮಹಾಸಭಾ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್‌ದಾಸ್ ರವರ ಅಧ್ಯಕ್ಷತೆಯಲ್ಲಿ ಒಳಮೀಸಲಾತಿ ಏಕ ಸದಸ್ಯ ವಿಚಾರಣಾ ಆಯೋಗವನ್ನು ನೇಮಕ ಮಾಡಿ ಸಮೀಕ್ಷೆ ನಡೆಸಿ ವರದಿಯನ್ನು ಪಡೆದು ಸಚಿವ ಸಂಪುಟದಲ್ಲಿ ನಿರ್ಣಯ ಕೈಗೊಂಡು ನೇರ ನೇಮಕಾತಿಗೆ ಸಂಬಂಧಿಸಿದಂತೆ ಹೊರಡಿಸಿರುವ ಆದೇಶವು ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಮರಣ ಶಾಸನವಾಗಿದೆ ಎಂದರು.

    ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ನೀಡಿರುವ ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷವಾತದಿಂದ ಕೂಡಿರುವ ವರದಿಯನ್ನು ರಾಜ್ಯ ಸರ್ಕಾರವು ತಿರಸ್ಕರಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿಅಂಶಗಳೊಂದಿಗೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ರವರ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡಿ ವ್ಯತ್ಯಾಸಗಳು ಕಂಡುಬಂದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳಬೇಕು ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರವು ಯಾವುದೇ ಮಾನದಂಡವನ್ನು ಅನುಸರಿಸದೇ ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು ಎಂದು ಅಗ್ರಹಿಸಿದರು.

    ಕಚೇರಿಪಾಳ್ಯ  ವಾರ್ಡ್ ಮುಖಂಡರಾದ ಮಂಜುನಾಥ್.ಟಿ ರವರು ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರು ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸದೇ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಗತ್ಯ ಅಂಕಿಅಂಶಗಳನ್ನು ಕ್ರೂಢೀಕರಿಸದೇ ಒಂದು ಜಾತಿಯನ್ನು ಒಲೈಸಲು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆಯನ್ನು 14 ಭಾಗಗಳಾಗಿ ವಿಂಗಡಿಸಿ ದಾರಿತಪ್ಪಿಸಿದ್ದಾರೆ. ಈ ವರದಿಯನ್ವಯ ರಾಜ್ಯ ಸರ್ಕಾವು ಪರಿಶಿಷ್ಟ ಜಾತಿಯ ಬಲಗೈ ಸಮುದಾಯವನ್ನು ಗ್ರೂಪ್- ‘ಬಿ’ಗೆ ಸೇರಿಸುವುದರ ಮೂಲಕ ಯಾವುದೇ ಉನ್ನತ ಹುದ್ದೆಗಳು ಹೊಲಯ/ಛಲವಾದಿ ಬಲಗೈ ಸಮುದಾಯಕ್ಕೆ ಸಿಗದಂತೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿರುವುದು ಖಂಡನೀಯ ಎಂದರು.

    ಈ ವೇಳೆ ಮುಖಂಡರಾದ ತಿಮ್ಮರಾಯಪ್ಪ, ರಮೇಶ, ಗೂಳ್ಯ ಹನುಮಣ್ಣ, ಮುನಿರಾಜು, ವಡ್ಡರಹಳ್ಳಿ ರಾಜಗೋಪಾಲ್, ಕೊನಘಟ್ಟ ರಾಮಾಂಜಿನಪ್ಪ, ಮಧುಸೂಧನ್, ಮಂಜುನಾಥ್, ಶ್ರೀನಿವಾಸ್, ಆದಿ, ದೇವರಾಜ್, ಅನಿ, ಶ್ರೀನಿವಾಸ್, ಮದ್ದೂರಪ್ಪ, ಲೋಕೇಶ್, ಮಲ್ಲೇಶ, ಶಿವಶಂಕರ್, ತಮ್ಮಯ್ಯ, ಅನಂತ, ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

    ಪ್ರಜಾಭಾರತ್ ನ್ಯೂಸ್ ವಾಟ್ಸಪ್ ಗ್ರೂಪ್ ಸೇರಲು ಈ👇 ಲಿಂಕ್ ಕ್ಲಿಕ್ ಮಾಡಿ
    Follow this link to join my WhatsApp group: https://chat.whatsapp.com/Fj6L4Eak7N994zl2QHSpHK?mode=gi_t

  • ಉಪ ಚುನಾವಣೆ: ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32.50 ಲಕ್ಷ ಹಣ ವಶ..!

    ಉಪ ಚುನಾವಣೆ: ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32.50 ಲಕ್ಷ ಹಣ ವಶ..!

    ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಹಣ ಸಾಗಾಟ ತಡೆಯಲು ಸ್ಥಾಪಿಸಲಾಗಿರುವ ಬಾಗಲಕೋಟೆ ಜಿಲ್ಲೆಯ ಹೊನ್ನಾಕಟ್ಟಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

    ವಾಹನ ತಪಾಸಣೆಯ ಸಮಯದಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 32.50 ಲಕ್ಷ ರೂಪಾಯಿ ನಗದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಹಣವು ರಾಯಚೂರು ಮೂಲದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಇದನ್ನು ರಾಯಚೂರಿನಿಂದ ಬೆಳಗಾವಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

    ಚೆಕ್‌ಪೋಸ್ಟ್‌ನಲ್ಲಿ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಇಷ್ಟೊಂದು ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆಗಳು ಅಥವಾ ಸಮರ್ಥನೀಯ ಪುರಾವೆಗಳು ಇಲ್ಲದಿರುವುದು ಕಂಡುಬಂದಿದೆ.

    ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣವೇ ಸಂಪೂರ್ಣ ಹಣವನ್ನು ಜಪ್ತಿ ಮಾಡಿದ್ದು ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ.

  • ಜಯನಗರದಲ್ಲಿ ಸಾಂಸ್ಕೃತಿಕ ಸೌರಭ: ‘ಪರಮ್ ವಿಹಾರ’ ವೇದಿಕೆಯಲ್ಲಿ ಮೇಳೈಸಿದ ಗಾನ-ನೃತ್ಯ ವೈಭವ

    ಜಯನಗರದಲ್ಲಿ ಸಾಂಸ್ಕೃತಿಕ ಸೌರಭ: ‘ಪರಮ್ ವಿಹಾರ’ ವೇದಿಕೆಯಲ್ಲಿ ಮೇಳೈಸಿದ ಗಾನ-ನೃತ್ಯ ವೈಭವ


    • ಪರಮ್ ವಿಹಾರದಲ್ಲಿ ಉದಯೋನ್ಮುಖ ಕಲಾವಿದರ ಅನಾವರಣ
    • ಮಾನ್ಯ ಮಂಜುನಾಥ್ ಗಾಯನಕ್ಕೆ ಶ್ರೋತೃಗಳು ಫಿದಾ
    • ಮನಸೂರೆಗೊಂಡ ಶ್ರೀನಿಧಿ ರಾಮಸ್ವಾಮಿ ನೃತ್ಯ ಪ್ರದರ್ಶನ
    • ಪಟ್ಟಾಭಿರಾಮ ಸೇವಾ ಮಂಡಳಿಯಲ್ಲಿ ಮೇಳೈಸಿದ ಶಾಸ್ತ್ರೀಯ ನಾದ
    • ಗಾನ-ನೃತ್ಯ ಸಂಗಮಕ್ಕೆ ಬೆಂಗಳೂರು ಕಲಾಪ್ರೇಮಿಗಳ ಸಾಕ್ಷಿ
    • ಪರಮ್ ಫೌಂಡೇಶನ್‌ನ ಪರಮ್‌ ವಿಹಾರ ಹತ್ತನೇ ಸರಣಿ ಯಶಸ್ವಿ

    ಬೆಂಗಳೂರು: ಇಲ್ಲಿನ ಜಯನಗರದಲ್ಲಿರುವ ಪಟ್ಟಾಭಿರಾಮ ಸೇವಾ ಮಂಡಳಿಯ ಸಭಾಂಗಣವು ಭಾನುವಾರ ಸಂಜೆ ಒಂದು ಅಪರೂಪದ ಕಲಾ ದರ್ಶನಕ್ಕೆ ಸಾಕ್ಷಿಯಾಯಿತು. ‘ಪರಮ್ ಫೌಂಡೇಶನ್’ ವತಿಯಿಂದ ಆಯೋಜಿಸಲಾಗಿದ್ದ ‘ಪರಮ್ ವಿಹಾರ-10’ ಕಾರ್ಯಕ್ರಮವು ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಘಮವನ್ನು ಪಸರಿಸಿ, ಸೇರಿದ್ದ ಕಲಾಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸುವ ಈ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು.

    *ಮನಸೂರೆಗೊಂಡ ಮಾನ್ಯ ಮಂಜುನಾಥ್ ಕಂಠಸಿರಿ*
    ಕಾರ್ಯಕ್ರಮದ ಆರಂಭದಲ್ಲಿ ಕುಮಾರಿ ಮಾನ್ಯ ಮಂಜುನಾಥ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ಸಭಿಕರನ್ನು ಮಂತ್ರಮುಗ್ಧಗೊಳಿಸಿತು. ತಮ್ಮ ಸುಶ್ರಾವ್ಯ ಕಂಠದಿಂದ ವಿವಿಧ ರಾಗಗಳನ್ನು ಪ್ರಸ್ತುತಪಡಿಸಿದ ಅವರು, ಲಯಬದ್ಧ ಗಾಯನದ ಮೂಲಕ ಗಮನ ಸೆಳೆದರು. ಇವರಿಗೆ ಮೃದಂಗದಲ್ಲಿ ವಿದ್ವಾನ್ ಸುಮಧುರ್ ಅನೂರ್ ಹಾಗೂ ಪಿಟೀಲಿನಲ್ಲಿ ವಿದ್ವಾನ್ ರಾಘವೇಂದ್ರ ಡಿ.ಆರ್. ಅವರು ಅತ್ಯುತ್ತಮ ಸಾಥ್ ನೀಡುವ ಮೂಲಕ ಸಂಗೀತ ಕಛೇರಿಯ ರಂಗನ್ನು ಹೆಚ್ಚಿಸಿದರು. ವಾದ್ಯಗಳ ನಾದ ಮತ್ತು ಗಾಯನದ ಸಮನ್ವಯವು ಶ್ರೋತೃಗಳಿಗೆ ಹಿತವಾದ ಅನುಭವ ನೀಡಿತು.

    *ಶ್ರೀನಿಧಿ ರಾಮಸ್ವಾಮಿ ಅವರ ನೃತ್ಯ ವೈಭವ*
    ಗಾಯನದ ನಂತರ ನಡೆದ ಕುಮಾರಿ ಶ್ರೀನಿಧಿ ರಾಮಸ್ವಾಮಿ ಅವರ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನವು ಸಭೆಯ ಕಣ್ಮಣಿಯಾಯಿತು. ಸಾಂಪ್ರದಾಯಿಕ ನೃತ್ಯ ಪ್ರಕಾರದ ಘನತೆ ಮತ್ತು ಲಾಸ್ಯವನ್ನು ತಮ್ಮ ಅಭಿನಯದ ಮೂಲಕ ಶ್ರೀನಿಧಿಯವರು ತೆರೆದಿಟ್ಟರು. ಅವರ ಹಾವಭಾವಗಳು ಹಾಗೂ ಪಾದಚಲನೆಯು ಶಾಸ್ತ್ರೀಯ ನೃತ್ಯದ ಶಿಸ್ತನ್ನು ಸಾರುತ್ತಿತ್ತು. ರಂಗದ ಮೇಲಿನ ಅವರ ಪ್ರತಿಯೊಂದು ಭಂಗಿಯೂ ಕಲಾಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಯಿತು.

    *ಪರಮ್‌ನಿಂದ 10ನೇ ಆವೃತ್ತಿ ಕಾರ್ಯಕ್ರಮ*
    ಪರಮ್ ಫೌಂಡೇಶನ್‌ನ ಈ 10ನೇ ಆವೃತ್ತಿಯು ಹೊಸ ತಲೆಮಾರಿನ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ದೊಡ್ಡ ಯಶಸ್ಸು ಕಂಡಿದೆ. ಸಂಜೆ 6 ಗಂಟೆಯಿಂದ ಆರಂಭವಾದ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ನಾನಾ ಭಾಗಗಳಿಂದ ಬಂದಿದ್ದ ಸಂಗೀತ ಮತ್ತು ನೃತ್ಯ ಆಸಕ್ತರು ಕಲಾವಿದರನ್ನು ಹುರಿದುಂಬಿಸಿದರು.

  • ಧುರಂಧರ್ 2 ಎದುರು ಸೋಲಲಿಲ್ಲ ಸಣ್ಣ ಸಿನಿಮಾಗಳು! ಲವ್ ಮಾಕ್ಟೇಲ್ 3ಗೆ ಜೈ ಎಂದ ಕನ್ನಡ ಪ್ರೇಕ್ಷಕರು

    ಧುರಂಧರ್ 2 ಎದುರು ಸೋಲಲಿಲ್ಲ ಸಣ್ಣ ಸಿನಿಮಾಗಳು! ಲವ್ ಮಾಕ್ಟೇಲ್ 3ಗೆ ಜೈ ಎಂದ ಕನ್ನಡ ಪ್ರೇಕ್ಷಕರು

    ಬೆಂಗಳೂರು: ದೊಡ್ಡ ಸಿನಿಮಾಗಳು ತೆರೆಗೆ ಬಂದಾಗ ಸಣ್ಣ ಸಿನಿಮಾಗಳು ರಿಲೀಸ್ ಮಾಡಲು ಹಿಂದೇಟು ಹಾಕಲಾಗುತ್ತೆ.. ಸ್ಕ್ರೀನ್ ಸಿಗೋದಿಲ್ಲ ಅನ್ನೋದು ಒಂದು ಕಾರಣವಾದ್ರೆ ನೋಡುಗರು ದೊಡ್ಡ ದೊಡ್ಡ ಸಿನಿಮಾಗಳ ಅಲೆಯಲ್ಲಿ ಸಣ್ಣ ಸಿನಿಮಾಗಳು ಕೊಚ್ಚಿ ಹೋಗಬಹುದು ಎಂಬುದು ಇನ್ನೊಂದು ಆತಂಕ.

    ಅದ್ರೀಗ ಧುರಂಧರ್2 ಸುನಾಮಿಯ ಮುಂದೆಯೂ ಸೌತ್ ನ ಸಣ್ಣ ಸಿನಿಮಾಗಳು ಅಥವಾ ದೊಡ್ಡ ಸ್ಟಾರ್ ಕಾಸ್ಟ್ ಇಲ್ಲದ ಸಿನಿಮಾಗಳು ಹೇಳಿಕೊಳ್ಳುವಂತಹ ಬಜೆಟ್ ಇಲ್ಲದ ಸಿನಿಮಾಗಳು ದೊಡ್ಡ ಸೌಂಡ್ ಮಾಡ್ತಿವೆ.

    ಲವ್ ಮಾಕ್ಟೇಲ್ಗೆ ಗುಡ್ ರೆಸ್ಪಾನ್ಸ್

    ಧುರಂಧರ್2 ಎದುರು ಬಂದ ನಮ್ಮ ಕನ್ನಡದ ಸಿನಿಮಾ ಲವ್ ಮಾಕ್ಟೇಲ್3 ಸಿನಿಮಾ ತನ್ನ ಎಮೋಷನಲ್ ಕಂಟೆಂಟ್ ಮೂಲಕವೇ ಪ್ರೇಕ್ಷಕರನ್ನ ಥಿಯೇಟರ್ ನತ್ತ ಸೆಳೆಯುತ್ತಿದೆ. ಡಾರ್ಲಿಂಗ್ ಕೃಷ್ಣ ನಿರ್ಮಿಸಿ, ನಿರ್ದೇಶನ ಮಾಡುವುದರ ಜೊತೆ ನಟನೆ ಮಾಡಿರೋ ಈ ಸಿನಿಮಾ ಯಾವುದೇ ಪ್ರಚಾರವಿಲ್ಲದೆ ತೆರೆಗೆ ಬಂತು.

    ಸದ್ದು ಗದ್ದಲವಿಲ್ಲದೆ ಬಂದಿದ್ದು ನೋಡಿ ಯಾರಿಗೂ ಗೊತ್ತಾಗಲ್ಲ.. ಜನರನ್ನ ಸೆಳೆಯೋದಿಲ್ಲ ಅಂತ್ಲೇ ಎಲ್ಲರೂ ಭಾವಿಸಿದ್ರು.. ಆದ್ರೀಗ ಈ ಸಿನಿಮಾ ಸಕ್ಸಸ್ ನತ್ತ ಸಾಗಿದೆ. ಮೊದಲ ಮೂರು ದಿನಗಳಲ್ಲಿ 6 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿರೋ ಲವ್ ಮಾಕ್ಟೇಲ್3 ಸಿನಿಮಾ 2026ರಲ್ಲಿ ಇಲ್ಲಿಯವರೆಗೂ ಬಂದಿರೋ ಕನ್ನಡ ಸಿನಿಮಾಗಳಲ್ಲಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿ ಹೊರಹೊಮ್ಮಿದೆ.

    ಮುಂದಿನ ದಿನಗಳಲ್ಲಿ ಈ ಸಿನಿಮಾದ ಗಳಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಒಳ್ಳೆಯ ಸಿನಿಮಾ ಮಾಡುದ್ರೆ ಜನ ಬರ್ತಾರೆ ಎಂಬ ಮಾತು ಮತ್ತೊಮ್ಮೆ ಲವ್ ಮಾಕ್ಟೇಲ್3 ಸಿನಿಮಾ ಮೂಲಕ ನಿರೂಪಿತವಾಗಿದೆ.

    ತಮಿಳಿನ ಯೂಥ್ ಕೂಡಾ ಕ್ಲಿಕ್ ಆಯ್ತು

    ಇನ್ನು ತಮಿಳಿನಲ್ಲಿ ಯೂಥ್ ಎಂಬ ಸಿನಿಮಾ ಬಂದಿದೆ.. ಕೆನ್ ಕರುಣಾಕರನ್ ನಿರ್ದೇಶನದ ಈ ಸಿನಿಮಾದ ಕಮಿಂಗ್ ಏಜ್ ರೊಮ್ಯಾಂಟಿಕ್ ಲವ್ ಸ್ಟೋರಿ ಅಂತ್ಲೇ ಕರೆಸಿಕೊಳ್ತಾ ಇದ್ದು, ಕಾಲಿವುಡ್ ಬಾಕ್ಸಾಫೀಸ್ ಚಿಂದಿ ಉಡಾಯಿಸ್ತಾ ಇದೆ.

    ಸಿಲಂಬರಸನ್ ಅಭಿಮಾನಿಯೊಬ್ಬನ ಸುತ್ತ ಸುತ್ತುವ ಕಥೆ ಸಖತ್ ಎಂಟರ್ ಟೈನಿಂಗ್ ಆಗಿದ್ದು, ಈ ಸಿನಿಮಾ ನೋಡಲು ಚಿತ್ರ ಪ್ರೇಮಿಗಳು ಮುಗಿ ಬೀಳ್ತಾ ಇದ್ದಾರೆ.. ಈ ಸಿನಿಮಾ ಮೊದಲ ಮೂರು ದಿನಗಳು 10 ಕೋಟಿಗೂ ಅಧಿಕ ಮೊತ್ತವನ್ನ ಗಳಿಸಿದೆ.. ಆ ಮೂಲಕ ಸೂಪರ್ ಹಿಟ್ ಎಂಬ ಟ್ಯಾಗ್ ಪಡ್ಕೊಂಡಿದೆ.

    ಇದಿಷ್ಟೇ ಅಲ್ಲದೆ ಮಲಯಾಳಂನಲ್ಲಿ ಆಡು3 ಎಂಬ ಸಿನಿಮಾ ಸಹ ಉಗಾದಿ ಪ್ರಯುಕ್ತ ತೆರೆಗೆ ಬಂದಿದೆ. ಇದು ಆಡು2 ಸಿನಿಮಾದ ಪ್ರಾಂಚೈಸಿ ಆಗಿದ್ದು ಈ ಸಿನಿಮಾಗೂ ಸಹ ಅದ್ಭುತ ರೆಸ್ಪಾನ್ಸ್ ಸಿಕ್ತಾ ಇದೆ. ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಆಗಿದ್ದು, ಚಿತ್ರರಸಿಕರು ಹೊಟ್ಟೆ ಉಣ್ಣಾಗುವಷ್ಟು ನಗುತ್ತಾ ಥಿಯೇಟರ್ ನಿಂದ ಆಚೆ ಬರ್ತಾ ಇದ್ದಾರೆ.

    ಉಸ್ತಾದ್ ಭಗತ್ ಸಿಂಗ್

    ಈ ಮೂರು ಸ್ಮಾಲ್ ಬಜೆಟ್ ಸಿನಿಮಾಗಳ ಜೊತೆ ತೆಲುಗಿನ ಉಸ್ತಾದ್ ಭಗತ್ ಸಿಂಗ್ ಸಿನಿಮಾ ಸಹ ರಿಲೀಸ್ ಆಗಿದೆ. ಇದು ಪವನ್ ಕಲ್ಯಾಣ್ ನಟನೆಯ ಸಿನಿಮಾ. ಅದೇ ಮಾಮೂಲಿ ಮಾಸ್ ಮಸಾಲೆ ಸಿನಿಮಾ. ಜೊತೆಗೆ ರಿಮೇಕ್ ಎಂಬ ಹಣೆ ಪಟ್ಟಿ ಬೇರೆ.. ಹೀಗಾಗಿ ಫ್ರೆಶ್ ನೆಸ್ ಬಯಸೋ ಚಿತ್ರರಸಿಕರು ಈ ಚಿತ್ರವನ್ನ ಸಾರಸಗಟಾಗಿ ತಿರಸ್ಕರಿಸಿದ್ದಾರೆ.

    ತೆಲುಗು ನೆಲದಲ್ಲಿ ಒಂದು ಮಟ್ಟಿಗೆ ಒಳ್ಳೆಯ ಓಪನಿಂಗ್ ಪಡ್ಕೊಂಡಿರೋ ಈ ಸಿನಿಮಾ ಪವನ್ ಫ್ಯಾನ್ಸ್ ಬಿಟ್ಟು ನಾರ್ಮಲ್ ಆಡಿಯೆನ್ಸ್ ನ ಇಂಪ್ರೆಸ್ ಮಾಡಿಲ್ಲ.. ಒಟ್ಟಾರೆ ಪ್ಯಾನ್ ಇಂಡಿಯಾ ಯುಗ.. ಕೋಟಿ ಕೋಟಿ ಬಜೆಟ್… ವಿ.ಎಫ್.ಎಕ್ಸ್.. ದೊಡ್ಡ ಸ್ಟಾರ್ ಕಾಸ್ಟ್ ಇದ್ರೆ ಮಾತ್ರ ಜನ ಬರೋದು ಎಂಬ ಮಾತು ಮತ್ತೆ ಮತ್ತೆ ಸುಳ್ಳಾಗ್ತಿದೆ.. ಇನ್ಮೇಲಾದ್ರೂ ಕಥೆಗೆ ಅವಶ್ಯಕತೆ ಇಲ್ಲ ಅಂದ್ರೆ? ಪ್ಯಾನ್ ಇಂಡಿಯಾ ಮಾಡಬೇಕು ಎಂಬ ಹುಚ್ಚಿಗೆ ಬಿದ್ದು ಪ್ಯಾನ್ ಇಂಡಿಯಾ ಮಾಡೋರು ಪಾಠ ಕಲಿಯಲಿ.

  • ದೇವನಹಳ್ಳಿ: ಕಾಶಿ ಯಾತ್ರೆಗೆ ತೆರಳುತ್ತಿದ್ದ ಮೂವರು ಮಹಿಳೆಯರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ದೇವನಹಳ್ಳಿ: ಕಾಶಿ ಯಾತ್ರೆಗೆ ತೆರಳುತ್ತಿದ್ದ ಮೂವರು ಮಹಿಳೆಯರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ದೇವನಹಳ್ಳಿ: ಕಾಶಿ ಯಾತ್ರೆಗೆ ತೆರಳುತ್ತಿದ್ದ ಮೂವರು ಮಹಿಳೆಯರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದ ರಾಣಿ ಕ್ರಾಸ್ ಬಳಿ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

    ಟಿ.ಟಿ ವಾಹನದಲ್ಲಿದ್ದ ಒಟ್ಟು 15 ಮಂದಿ ಪೈಕಿ ಉಳಿದವರು ಗಂಭೀರವಾಗಿ ಗಾಯಗೊಂಡಿದ್ದು ದೇವನಹಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ 6ಕ್ಕೆ ಕಾಶಿಗೆ ಹೋಗಲು ವಿಮಾನ ಏರಲು ತಿಪಟೂರಿನಿಂದ ರಾತ್ರಿ 10ಕ್ಕೆ ಟಿ.ಟಿ ವಾಹನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದರು.

    ಹೈವೆಯಿಂದ ಸರ್ವೀಸ್ ರಸ್ತೆಗೆ‌ ಬರುತ್ತಿದ್ದ ಟಿಟಿಗೆ ಲಾರಿ ಡಿಕ್ಕಿಯಾದ ಪರಿಣಾಮ ವಾಹನದಲ್ಲಿದ್ದ 15 ಮಂದಿ ಪೈಕಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತಿಪಟೂರಿನ ವಿದ್ಯಾನಗರ ಜಯಮ್ಮ (65), ಯಶೋಧಮ್ಮ (60) ಮತ್ತು ಗಂಗಾ (40) ಮೃತರು ಎಂದು ಗುರ್ತಿಸಲಾಗಿದೆ.

    ಟಿಟಿ ವಾಹನ ಚಾಲಕ ಸೇರಿದಂತೆ 8 ಜನರಿಗೆ ಅಪಘಾತದಲ್ಲಿ ಗಾಯಗಳಾಗಿವೆ. ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಂಪಮ್ಮ‌ ಅವರ ಸ್ಥಿತಿ ಗಂಭೀರವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    ಗೂಗಲ್ ಮ್ಯಾಪ್ ತೋರಿಸಿದ್ದ ತಿರುವು ತಪ್ಪಿಸಿಕೊಂಡ ಕಾರಣ ಮುಂದಕ್ಕೆ ಹೋಗಿ ಯೂ-ಟರ್ನ್ ಪಡೆಯಲು ಪ್ರಯತ್ನಿಸಿದಾಗ ಲಾರಿಯೊಂದಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
    ದೇವನಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

  • ಬಯಸಿದ ಹೆಣ್ಣಿಗಾಗಿ ಒಡಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ ಅಣ್ಣ.!

    ಬಯಸಿದ ಹೆಣ್ಣಿಗಾಗಿ ಒಡಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ ಅಣ್ಣ.!

    ಗದಗ: ಜಿಲ್ಲೆಯ ನರಗುಂದ ತಾಲೂಕಿನ ಹಿರೆಕೊಪ್ಪ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಒಂದು ಹೆಣ್ಣಿಗಾಗಿ ಒಡ ಹುಟ್ಟಿದ ಸಹೋದರನನ್ನೆ ಅಣ್ಣನು ಕೊಲೆ ಮಾಡಿದ ಘಟನೆ ಕಳೆದ ಮಾ.17 ರಂದು ಮಂಗಳವಾರ ಬೆಳಗಿನ ಜಾವದಲ್ಲಿ ನಡೆದಿದೆ.

    ಫಕ್ಕೀರಪ್ಪ ಎಂಬ ಯುವಕನು ಕೊಲೆಗೀಡಾದ ದುರ್ಧೈವಿಯಾಗಿದ್ದು ಈತನ ಸಹೋದರ ಅಶೋಕ ಎಂಬಾತನು ಕೊಲೆ ಮಾಡಿದ ಪಾಪಿ ಅಣ್ಣನಾಗಿದ್ದಾನೆ.

    ಮನೆಯಲ್ಲಿ ಇವರ ತಂದೆ-ತಾಯಿಗಳು ಈ ಇಬ್ಬರು ಮಕ್ಕಳ ಮದುವೆ ಮಾಡಬೇಕು ಎಂದು ಕನಸು ಹೊಂದಿರುತ್ತಾರೆ.ಪೋಷಕರ ಇಚ್ಚೆಯಂತೆ ಅಣ್ಣ-ತಮ್ಮ ಈ ಇಬ್ಬರೂ ಯುವಕರು ಕನ್ಯಾ ನೋಡಿ ಬಂದಿದ್ದಾರೆ.

    ಅಣ್ಣನಿಗೆ ತಮ್ಮನು ನೋಡಿ ಬಂದ ಹುಡುಗಿಯ ಮೇಲೆ ಕಣ್ಣು ಬಿದ್ದಿದೆ. ಹೀಗಾಗಿ ಆ ಹುಡುಗಿಯನ್ನು ಮದುವೆ ಆಗಲು ತಮ್ಮನು ಅಡ್ಡಿ ಆಗುತ್ತಾನೆ ಎಂದು ತಿಳಿದು ಪಾಪಿ ಅಶೋಕನು ತನ್ನ ಒಡ ಹುಟ್ಟಿದ ತಮ್ಮನನ್ನೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

    ತದನಂತರ ಈತನೆ ಸ್ವತ: ಪೋಲೀಸರಿಗೆ ಕರೆ ಮಾಡಿ ಯಾರೋ ಕಿಡಿಗೇಡಿಗಳು ನನ್ನ ತಮ್ಮನನ್ನು ಹೊಡೆದು ಸಾಯಿಸಿದ್ದಾರೆ ಎಂದು ಮಾಹಿತಿ ನೀಡುವ ಮೂಲಕ ಸುಳ್ಳು ಕಥೆಯನ್ನು ಕಟ್ಟಿದ್ದಾನೆ.

    ಆರೋಪಿಯ ಹೇಳಿಕೆಯಿಂದ ಅನುಮಾನಗೊಂಡ ಪೋಲೀಸರು ಡಾಗ್ ಸ್ಕ್ವಾಡ್ ಜೊತೆ ಘಟನೆಯ ಸ್ಥಳಕ್ಕೆ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸಿದ್ದಾರೆ.

    ಈ ವೇಳೆ ನಾಯಿಯು ನೇರವಾಗಿ ಅಶೋಕನ ಬಳಿ ಬಂದು ನಿಂತಿದೆ.ಈ ಹಿನ್ನಲೆಯಲ್ಲಿ ಪೋಲೀಸರು ಕೂಡಲೆ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.

    ಪೋಲೀಸರ ತನಿಖೆಯ ಸಂದರ್ಭದಲ್ಲಿ ಹುಡುಗಿಯ ವಿಚಾರವಾಗಿ ಫಕ್ಕೀರಪ್ಪನನ್ನು ಕೊಲೆ ಮಾಡಿರುವುದಾಗಿ ಆರೋಪಿ ಅಶೋಕನು ಒಪ್ಪಿಕೊಂಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.

  • ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯ ನೆಮ್ಮದಿಯಿಂದ ಬದಕಲು ಸಾಧ್ಯ

    ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯ ನೆಮ್ಮದಿಯಿಂದ ಬದಕಲು ಸಾಧ್ಯ

    ಹಾನಗಲ್ : ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನುಷ್ಯ ನೆಮ್ಮದಿಯಿಂದ ಬದಕಲು ಸಾಧ್ಯ ರೋಗ ಮುಕ್ತ ಜೀವನಶೈಲಿ ನಮ್ಮ ಸಂತೋಷದ ಬದುಕಿಗೆ ದಾರಿದೀಪವಾಗಬಲ್ಲದು ಆರೋಗ್ಯ ಮತ್ತು ಸಂತೋಷ ಸಾಧಿಸುವುದು ಮಾತ್ರ ಸಾಧ್ಯ ಎಂದು ಹೋತನಹಳ್ಳಿ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಹೇಳಿದರು.

    ತಾಲೂಕಿನ ಅರಳೇಶ್ವರ ಗ್ರಾಮದ ದೇವಸ್ಥಾನದ ಕಲಾ ಭವನದ ಆವರಣದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಒಂಭತ್ತು ದಿನಗಳ ಆಧ್ಯಾತ್ಮಿಕ ಪ್ರವಚನ ಪ್ರಾರಂಭವಾದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಗುರುವಾರ ಅವರು ಮಾತನಾಡಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮನಸ್ಸು ಅತ್ಯಂತ ಮಹತ್ವವಾದ ಸಾಧನ. ನಮ್ಮ ಬದುಕು ಬದುಕಿನ ಕಲೆ ಎಲ್ಲವೂ ಮನಸ್ಸಿನ ಮೇಲೆ ಅವಲಂಬಿತ. ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಜನರಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಿಸುವ ಕೆಲಸ ಮಾಡಬೇಕು. ಜಗತ್ತಿನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. ವಚನ ಸಾಹಿತ್ಯವು ಕೇವಲ ಒಂದು ಧರ್ಮಕ್ಕೆ ಸೀಮತವಾಗಿರದೆ. ಅವುಗಳ ಮಾನವ ಬದುಕಿಗೆ ದಿಕ್ಸೂಚಿಯಾಗಿವೆ ಎಂದರು.

    ಈ ವೇಳೆಯಲ್ಲಿ ಪೂಜ್ಯ ಶ್ರೀ ವೀರಬಸವ ಅಸಂಗಿ, ಸಂಗೀತ ಸೇವೆ ಮಂಜುನಾಥ ಗದಗ ಗವಾಯಿ, ತಬಲಾ ಸೇವೆ ಪ್ರಶಾಂತಕುಮಾರ ಕೋಗಳಿ, ಹಾಗೂ ಗ್ರಾಮದ ದೇವಸ್ಥಾನದ ಕಮೀಟಿಯವರು ಮತ್ತು ಊರಿನ ಗ್ರಾಮಸ್ಥರು ಇದ್ದರು.

  • ಕುದುರೆಮುಖ ಕಾಡ್ಗಿಚ್ಚು, ಪಶುವೈದ್ಯೆ ಸಾವು: ಅರಣ್ಯ ಸಚಿವರಿಂದ ತುರ್ತು ಸಭೆ: ತನಿಖೆಗೆ ಆದೇಶ, 30 ಲಕ್ಷ ಪರಿಹಾರ ಘೋಷಣೆ

    ಕುದುರೆಮುಖ ಕಾಡ್ಗಿಚ್ಚು, ಪಶುವೈದ್ಯೆ ಸಾವು: ಅರಣ್ಯ ಸಚಿವರಿಂದ ತುರ್ತು ಸಭೆ: ತನಿಖೆಗೆ ಆದೇಶ, 30 ಲಕ್ಷ ಪರಿಹಾರ ಘೋಷಣೆ

    ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ 25ಕ್ಕೂ ಹೆಚ್ಚು ಕಡೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ, ಮಂಗಳೂರು ವಿಭಾಗದ ಅರಣ್ಯಾಧಿಕಾರಿ ಮರಿಯಪ್ಪ ಕರಿಕಳನ್ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಿದ್ದಾರೆ.

    ಬೆಂಗಳೂರಿನ ತಮ್ಮ ಅಧಿಕೃತ ನಿವಾಸದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅವರು, ಕೆಲವರು ಮೂಢನಂಬಿಕೆಯಿಂದ ಮತ್ತು ಕೆಲವು ಕಿಡಿಗೇಡಿಗಳು ಕಾಡಿಗೆ ಬೆಂಕಿ ಕೊಟ್ಟಿದ್ದಾರೆ ಮತ್ತು ಕಾಡ್ಗಿಚ್ಚು ವೀಕ್ಷಕರ(Fire watchers) ಕೊರತೆಯೂ ಈ ಅನಾಹುತಕ್ಕೆ ಕಾರಣ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮದ ಶಿಫಾರಸಿನೊಂದಿಗೆ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಸೂಚಿಸಿದರು.

    ಕುದುರೆಮುಖ ಅರಣ್ಯದೊಳಗಿರುವ ಕೆಲವು ನಿವಾಸಿಗಳು ಸ್ವಯಂ ಪ್ರೇರಿತವಾಗಿ ಹೊರಬರಲು ಇಚ್ಛಿಸಿದ್ದು, ಈ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸಿ, ಕಾಂಪಾ ನಿಧಿಯಿಂದ ಅರಣ್ಯ ವಾಸಿಗಳ ಸ್ಥಳಾಂತರ ಕುರಿತಂತೆ ವಾರ್ಷಿಕ ಕ್ರಿಯಾಯೋಜನೆಯಲ್ಲಿ ಸೇರಿಸಿ ತಕ್ಷಣವೇ ಕಡತದಲ್ಲಿ ಸಲ್ಲಿಸುವಂತೆಯೂ ಸೂಚಿಸಿದರು.

    ಯಾರಾದರೂ ಉದ್ದೇಶಪೂರ್ವಕವಾಗಿ ಕಾಡಿಗೆ ಬೆಂಕಿ ಹಚ್ಚಿದ್ದರೆ ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ ಈಶ್ವರ ಖಂಡ್ರೆ, ಅಧಿಕಾರಿ ಮತ್ತು ಸಿಬ್ಬಂದಿಯ ಲೋಪವಿದ್ದರೆ ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡುವಂತೆ ತಿಳಿಸಿದರು.

    ಯುವ ವೈದ್ಯೆ ಸಾವಿಗೆ ಸಂತಾಪ:

    ಶಿವಮೊಗ್ಗದ ಮೃಗಾಲಯದಲ್ಲಿ 27 ವರ್ಷದ ಯುವ ಪಶುವೈದ್ಯೆ ನೀರಾನೆ ದಾಳಿಯಿಂದ ಮೃತಪಟ್ಟಿರುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಿದ ಸಚಿವರು, ಯಾವುದೇ ಸಿಬ್ಬಂದಿ ಅಥವಾ ಪಶುವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಪ್ರಮಾಣಿತ ಮಾನದಂಡ(SOP) ಪಾಲಿಸುವಂತೆ ಸ್ಪಷ್ಟ ಸೂಚನೆ ನೀಡಲು ತಿಳಿಸಿದರು.

    ಈ ಸಾವು ಅತ್ಯಂತ ನೋವು ತಂದಿದೆ. ಈ ದುಃಖದ ಸಮಯದಲ್ಲಿ ಸರ್ಕಾರ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. 30 ಲಕ್ಷ ರೂ. ಪರಿಹಾರ ನೀಡಲು ಸಚಿವರು ಸೂಚಿಸಿದರು.

    ಪ್ರಕರಣ ಕುರಿತಂತೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ಮಾಡಿಸಿ 7 ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆಯೂ ಸಚಿವರು ನಿರ್ದೇಶನ ನೀಡಿದರು.

    ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್ ಪಾಲ್ಗೊಂಡಿದ್ದರು.

  • ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

    ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಬಡ ಜನರಿಗೆ ರೇಷನ್ ಕಿಟ್ ವಿತರಣೆ ಮಾಡಿದ ಡಿಕೆ ಹರೀಶ್

    ಕೆ.ಆರ್.ಪುರ:- ಬಡವರ ಸಮಗ್ರ ಬೆಳವಣಿಗೆಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹೆಚ್ಚು ಸಹಕಾರಿಯಾಗಿದೆ ಎಂದು
    ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ‌.ಮೋಹನ್ ಅವರು ತಿಳಿಸಿದರು.

    ಕೆ.ಆರ್.ಪುರ ಕ್ಷೇತ್ರದ ಕೃಷ್ಣನಗರ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರ ನೇತೃತ್ವದಲ್ಲಿ ಏರ್ಪಡಿಸಿದ್ದ ಯುಗಾದಿ ಹಾಗೂ ರಂಜಾನ್ ಪ್ರಯುಕ್ತ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ಅವಕಾಶ ದೊರೆತಿದೆ ಅಲ್ಲದೆ,ಮೂಲಭೂತ ಸೌಕರ್ಯಗಳನ್ನು ಪಡೆಯಲು ಅನುಕೂಲವಾಗಿದೆ ಎಂದು ನುಡಿದರು.

    ಯುವ ನಾಯಕರು ಸಮಾಜದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ತನ್ನದೆ ಆದ ಕೊಡುಗೆ ನೀಡುವಂತೆ ಸಲಹೆ ನೀಡಿದರು. ಕೃಷ್ಣನಗರ ವಾರ್ಡನ ಜಿಬಿಎ ಆಕಾಂಕ್ಷಿ ಡಿ.ಕೆ.ಹರೀಶ್ ಅವರು ಮಾತನಾಡಿ ಯುಗಾದಿ ಹಾಗೂ ರಂಜಾನ್ ಗಾಗಿ ಬಡವರಿಗೆ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಸೇವಾ ಕಾರ್ಯಗಳತ್ತ ಗಮನ ಹರಿಸಿದ್ದೆನೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಆಯೋಜಕ ಡಿ.ಕೆ.ಹರೀಶ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರುಳಪ್ಪ, ಮುಖಂಡರಾದ ಚನ್ನಕೇಶವ, ಬಾಲಕೃಷ್ಣ, ಆಂಜಿನಪ್ಪ, ಎಸ್ ಎಲ್ .ವಿ.ವೆಂಕಟೇಶ್, ಭರತ್, ರಾಜಹಂಸ, ಪ್ರವೀಣ್,ಸಂತೋಷ್  ಮತ್ತಿತರರಿದ್ದರು.