Author: Dharmaraju

  • ಅನಧಿಕೃತ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ: ಡಿ. ಎಸ್. ರಮೇಶ್

    ಅನಧಿಕೃತ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ: ಡಿ. ಎಸ್. ರಮೇಶ್


    ಮಹದೇವಪುರ: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳ ಅಂದವನ್ನು ಕಾಪಾಡುವ ಹಾಗೂ ಸುರಕ್ಷಿತ ನಗರ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಏಪ್ರಿಲ್ 5 ರಿಂದ ಏಪ್ರಿಲ್ 13ರವರೆಗೆ ಫ್ಲೆಕ್ಸ್, ಬಂಟಿಂಗ್ಸ್, ಬ್ಯಾನರ್ಗಳು, ಫಲಕಗಳು ಸೇರಿದಂತೆ ಅನಧಿಕೃತ ಜಾಹೀರಾತು ಗಳನ್ನು ತೆರವುಗೊಳಿಸಲು ವಿಶೇಷ ಅಭಿಯಾನ ನಡೆಸಲಾಗುವುದು ಎಂದು ಆಯುಕ್ತರಾದ ಡಿ. ಎಸ್. ರಮೇಶ್ ರವರು ತಿಳಿಸಿದರು.

    ವಿಶೇಷ ತಂಡಗಳ ರಚನೆ
    ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿಯಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪ್ರತಿ ವಲಯದಲ್ಲೂ ಕಾರ್ಯಪಾಲಕ ಅಭಿಯಂತರರ ನೇತೃತ್ವದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಹಾಯಕ ಅಭಿಯಂತರರು, ಮಾರ್ಷಲ್ಗಳು ಹಾಗೂ ಪ್ರಹರಿ ತಂಡವನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದ್ದು ಅದರಂತೆ ದಿನನಿತ್ಯ ಗುರಿ ನಿಗದಿ ಪಡಿಸಿಕೊಂಡು ಪ್ರತಿನಿತ್ಯ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ವಲಯವಾರು ಸಂಕ್ಷಿಪ್ತ ಕಾರ್ಯಾಚರಣೆ ವಿವರ
    ಕೆ.ಆರ್.ಪುರಂ ವಲಯ ವ್ಯಾಪ್ತಿಯ ಹೊರಮಾವು, ರಾಮಮೂರ್ತಿನಗರ, ವಿಜಿನಾಪುರ, ಬಸವನಪುರ, ದೇವಸಂದ್ರ, ಎ.ನಾರಾಯಣಪುರ, ವಿಜ್ಞಾನನಗರ ಹಾಗೂ ಎಚ್ಎಎಲ್ ವಿಮಾನ ನಿಲ್ದಾಣ ಪ್ರದೇಶಗಳಲ್ಲಿ ವ್ಯಾಪಕ ಕಾರ್ಯಾಚರಣೆ ನಡೆಸಿ 812 ಫ್ಲೆಕ್ಸ್ಗಳನ್ನು ತೆರವುಗೊಳಿಸಲಾಯಿತು.

    ಮಹದೇವಪುರ ವಲಯ ವ್ಯಾಪ್ತಿಯ ಹೂಡಿ, ಗರುಡಾಚಾರ್ ಪಾಳ್ಯ, ಕಾಡುಗೋಡಿ, ಹಗದೂರು, ದೊಡ್ಡ ನೆಕ್ಕುಂದಿ, ಮಾರತಹಳ್ಳಿ, ವರ್ತೂರು ಹಾಗೂ ಬೆಳ್ಳಂದೂರು ಪ್ರದೇಶಗಳಲ್ಲಿ ವಿಶೇಷ ತಂಡಗಳ ಮೂಲಕ ತೀವ್ರ ಅಭಿಯಾನ ನಡೆಸಿ 1060 ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸಲಾಯಿತು.

    ಕೆ.ಆರ್.ಪುರಂ ಮತ್ತು ಮಹದೇವಪುರ ವಲಯಗಳಲ್ಲಿ ಏಪ್ರಿಲ್ 5 ರಿಂದ 7ರವರೆಗೆ ನಡೆದ ವ್ಯಾಪಕ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು, ಕಾಲುವೆ ಪ್ರದೇಶಗಳು ಹಾಗೂ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಅಳವಡಿಸಲಾಗಿದ್ದ 1872ಕ್ಕೂ ಹೆಚ್ಚಿನ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಗಳನ್ನು ತೆರವುಗೊಳಿಸಲಾಯಿತು ಎಂದು ಆಯುಕ್ತರು ತಿಳಿಸಿದರು.

    ಕಾನೂನು ಕ್ರಮದ ಎಚ್ಚರಿಕೆ
    ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವುದನ್ನು ಪ್ರತಿಬಿಂಬಿಸುವ ಕಾಯ್ದೆ ಅಡಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸುವುದು ದಂಡನೀಯ ಅಪರಾಧವಾಗಿದ್ದು ಅನಧಿಕೃತ ಫ್ಲೆಕ್ಸ್ ಅಳವಡಿಸಿ ನಿಯಮ ಉಲ್ಲಂಘಿಸಿದ ವ್ಯಕ್ತಿಗಳು/ಸಂಸ್ಥೆಗಳ ವಿರುದ್ಧ ದಂಡ ವಿಧಿಸಲು ಹಾಗೂ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.

    ಸಾರ್ವಜನಿಕರಲ್ಲಿ ಮನವಿ

    ಈ ವಿಶೇಷ ಅಭಿಯಾನವು ನಗರದಲ್ಲಿನ ಅಕ್ರಮ ಜಾಹೀರಾತುಗಳನ್ನು ನಿಯಂತ್ರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಜಾಹೀರಾತು ಫಲಕಗಳನ್ನು ಅಳವಡಿಸುವ ಮೊದಲು ನಗರ ಪಾಲಿಕೆಯಿಂದ ಅಗತ್ಯ ಅನುಮತಿಯನ್ನು ಪಡೆಯಬೇಕು, ನಗರ ಸೌಂದರ್ಯ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ಸಹಕರಿಸಲು, ಶಿಸ್ತು ಕಾಪಾಡಲು ಬದ್ಧರಾಗುವಂತೆ ಹಾಗೂ ಅನಧಿಕೃತವಾಗಿ ಫ್ಲೆಕ್ಸ್ ಬ್ಯಾನರ್ಗಳನ್ನು ಅಳವಡಿಸುವುದನ್ನು ತಪ್ಪಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • ಸಾಮಜಿಕ ಮಾಧ್ಯಮದಲ್ಲಿ ಪರಿಚಯ ಮಾಡಿಕೊಂಡು : ಮಹಿಳೆಯರ ಬ್ಲಾಕ್ ಮೇಲ್ -ಚಿನ್ನಾಭರಣ ಸಹಿತ ಆರೋಪಿಗಳನ್ನ ಬಂಧಿಸಿದ ಪೊಲೀಸರು…!!

    ಸಾಮಜಿಕ ಮಾಧ್ಯಮದಲ್ಲಿ ಪರಿಚಯ ಮಾಡಿಕೊಂಡು : ಮಹಿಳೆಯರ ಬ್ಲಾಕ್ ಮೇಲ್ -ಚಿನ್ನಾಭರಣ ಸಹಿತ ಆರೋಪಿಗಳನ್ನ ಬಂಧಿಸಿದ ಪೊಲೀಸರು…!!

    ಕೆಆರ್.ಪುರ : ಮಹಿಳೆಯ ನಗ್ನ ಪೋಟೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನ ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.

    ಒಂದೂವರೆ ವರ್ಷದ ಹಿಂದೆ ಸ್ನ್ಯಾಪ್ ಚಾಟ್ ಮೂಲಕ ಮಹಿಳೆಗೆ ಪರಿಚಯವಾಗಿದ್ದ ಆರೋಪಿಗಳು, ನಂತರ ನಂಬರ್ ಎಕ್ಸ್ಚೆಂಜ್ ಮಾಡಿಕೊಂಡು ಕಾಲ್ ಮಾಡೋದು, ಚಾಟ್ ಮಾಡೋದು ಮಾಡ್ತಿದ್ರು. ವಾಟ್ಸ್ ಆ್ಯಪ್ ವಿಡಿಯೋ ಕಾಲ್ ವೇಳೆ ಸ್ಕ್ರೀನ್ ಶಾಟ್ ತಗೆದಿಟ್ಟುಕೊಂಡು ಬೆದರಿಕೆ ಹಾಕಿದ್ರು. ನಿನ್ನ ಗಂಡ, ಫ್ಯಾಮಿಲಿ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವೀಡಿಯೋ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕ್ತಿದ್ರು. ಬ್ಲಾಕ್ ಮೇಲ್ ಮಾಡಿ ಹಂತ ಹಂತವಾಗಿ ಚಿನ್ನಾಭರಣ ಕೂಡ ಪಡೆದಿದ್ದರು. ಆರೋಪಿಗಳ ಕಾಟಕ್ಕೆ ಬೇಸತ್ತು ಮಹಿಳೆ ಗಂಡನ ಗಮನಕ್ಕೆ ತಂದಿದ್ದರು. ಬಳಿಕ ಕೆಆರ್ ಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದರು. ‌

    ಕಾರ್ಯಾಚರಣೆ ನಡೆಸಿದ ಪೊಲೀಸರು ಆಂಧ್ರಪ್ರದೇಶದ ಚೆನ್ನೂರು ಮಹೇಶ್, ವನ್ನೂರು ಸ್ವಾಮಿ ಎಂಬ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 571 ಗ್ರಾಂ ಚಿನ್ನಾಭರಣ,25 ಲಕ್ಷ ಕ್ಯಾಶ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೊಬೈಲ್ ನಲ್ಲಿ ಹಲವು ಮಹಿಳೆಯರು, ಯುವತಿಯರ ಫೋಟೋ, ವಿಡಿಯೋಗಳ ಪತ್ತೆಯಾಗಿದೆ.

  • ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು : ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ.

    ವಿಚ್ಛೇದನ ಬಯಸಿದ ಪತ್ನಿಗೆ ಮಚ್ಚಿನೇಟು : ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ.

    ತುಮಕೂರು:- ಡಿವೋರ್ಸ್‌ ಕೊಡು ಎಂದು ಕೇಳುತ್ತಿದ್ದ ಪತ್ನಿಗೆ ಗಂಡ ಮಚ್ಚಿನೇಟು ಕೊಟ್ಟು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಟೆಯಲ್ಲಿ ನಡೆದಿದೆ.

    ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ನಾಗಮಣಿ ಹಾಗೂ ಮಾರುತಿ ಕಳೆದ 15 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮೊದಲೆಲ್ಲಾ ಸಂಸಾರ ಚೆನ್ನಾಗಿಯೇ ಇತ್ತು. ಮದುವೆ ವೇಳೆ ನಾಗವೇಣಿಗೆ ಯಾವುದೇ ಕೆಲಸ ಇರಲಿಲ್ಲ. ಇವರಿಬ್ಬರ ದಾಂಪತ್ಯದ ಫಲವಾಗಿ ಇಬ್ಬರು ಮುದ್ದಾದ ಮಕ್ಕಳೂ ಇವೆ. ಗಂಡ ಗಾರೆ ಕೆಲಸ ಮಾಡ್ಕೊಂಡು ಜೀವನ ನಡೆಸ್ತಿದ್ದ. ಈ ಮಧ್ಯೆ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಸಿಕ್ಕಿತ್ತು. ಈ ಕೆಲಸ ಸಿಕ್ಕ ನಂತರ ಗಂಡ ಹೆಂಡತಿ ಮಧ್ಯೆ ಬಿರುಗಾಳಿ ಶುರುವಾಗಿದ್ದು.

    ಯಾವಾಗ ನಾಗಮಣಿಗೆ ಸರ್ಕಾರಿ ನರ್ಸ್ ಕೆಲಸ ಒಲಿದು ಬಂತೋ ಅಂದಿನಿಂದ ಆಕೆಯ ಜೀವನ ಶೈಲಿಯೇ ಬದಲಾಗಿತ್ತು ಎಂಬ ಆರೋಪವಿದೆ. ಗಂಡನಿಂದ ವಿಚ್ಛೇದನ ಪಡೆಯೋದಕ್ಕೆ ನಾಗವೇಣಿ ಮುಂದಾಗಿದ್ದಳು ಎಂದು ಆರೋಪಿಸಲಾಗಿದೆ‌. ಈ ಮಧ್ಯೆ ಗಂಡ ಮಾರುತಿ ತನ್ನ ಪತ್ನಿ ಯಾರದ್ದೋ ಜೊತೆಗೆ ಸಂಬಂಧ ಇಟ್ಕೊಂಡಿದ್ದಾಳೆ ಅನ್ನೋ ಅನುಮಾನಕ್ಕೆ ಬಿದ್ದಿದ್ದ. ಹೀಗಾಗಿ ಜಗಳ ಶುರುವಾಗ್ತಿದ್ದಂತೆ ಪೊಲೀಸ್‌ ಠಾಣೆ ಮೆಟ್ಟಿಲನ್ನೂ ಏರಿದ್ರು.

    ಮೊನ್ನೆ ಗಂಡನ ಜೊತೆಗಿದ್ದ ಮಕ್ಕಳನ್ನು ನೋಡೋದಕ್ಕೆ ನಾಗವೇಣಿ ಹೋಗಿದ್ದಾಳೆ. ಈ ವೇಳೆ ಗಂಡ ಹೆಂಡ್ತಿ ಮಧ್ಯೆ ಮತ್ತೆ ಜಗಳ ಶುರುವಾಗಿದೆ. ಸಿಟ್ಟಿಗೆದ್ದು ಪತ್ನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

  • ಯಲಹಂಕ ಹಾಸ್ಟೆಲ್ ಹಿಂಭಾಗದಲ್ಲಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳು ಅರೆಸ್ಟ್.

    ಯಲಹಂಕ ಹಾಸ್ಟೆಲ್ ಹಿಂಭಾಗದಲ್ಲಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳು ಅರೆಸ್ಟ್.

    ಬೆಂಗಳೂರು: ಯಲಹಂಕ ಉಪನಗರದ ಬಾಯ್ಸ್ ಹಾಸ್ಟೆಲ್ ಹಿನ್ನಭಾಗದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

    ಅವರ ಬಳಿ 10.5 ಲಕ್ಷ ರೂ. ಮೌಲ್ಯದ 21 ಕೆಜಿ ಗಾಂಜಾ ವಶಪಡಿಸಲಾಗಿದೆ.

    ಪೊಲೀಸರು ತಿಳಿಸಿರುವಂತೆ, ಇಬ್ಬರೂ ಹಾಸ್ಟೆಲ್ ಹಿನ್ನಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ, ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಆರೋಪಿಗಳು ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತರಿಸಿ, ಸ್ಥಳೀಯವಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು.

    ಆರೋಪಿಗಳನ್ನ ಗುರುತಿಸಲಾಗಿದ್ದು, ಮೊಹಮ್ಮದ್ ನಿಶಾದ್ (24) ಮರಸಂದ್ರದ ನಿವಾಸಿಯಾಗಿದ್ದು, ಮೂಲತಃ ಕೇರಳದ ಕೊಜಿಕೋಡ್‌ ನ ಮುಕ್ಕಂ ನಿವಾಸಿ, ಆದೇಶ್ ಪಿ. ದಿಲೀಪ್ (19), ಮಾರಸಂದ್ರದಲ್ಲಿ ವಾಸವಾಗಿದ್ದು ಈತನೂ ಸಹ ಕೇರಳದ ತ್ರಿಶೂರಿನ ಕಟ್ಟೂರಿನವರಾಗಿದ್ದರು.

    ಆರೋಪಿಗಳನ್ನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಹೆಚ್ಚಿನ ತನಿಖೆಯನ್ನ ಪೊಲೀಸರು ಮುಂದುವರೆಸಿದ್ದಾರೆ.

  • ನಾಳೆ ದ್ವಿತೀಯ ಪಿಯುಸಿ ರಿಸಲ್ಟ್: ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ.

    ನಾಳೆ ದ್ವಿತೀಯ ಪಿಯುಸಿ ರಿಸಲ್ಟ್: ವೆಬ್‌ಸೈಟ್‌ನಲ್ಲಿ ಫಲಿತಾಂಶ ಲಭ್ಯ.

    ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುದಿನಗಳ ನಿರೀಕ್ಷೆ ಕೊನೆಗೂ ಅಂತ್ಯಗೊಳ್ಳಲಿದೆ. ನಾಳೆ (ಏಪ್ರಿಲ್ 9) ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದ್ದು, ಈ ಕುರಿತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತ ಮಾಹಿತಿ ನೀಡಿದ್ದಾರೆ.

    ಈಗಾಗಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಫಲಿತಾಂಶ ಪ್ರಕಟಣೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಫಲಿತಾಂಶವು ಅತ್ಯುತ್ತಮವಾಗಿ ಬರಲಿದೆ ಎಂದು ಸಚಿವ ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಫಲಿತಾಂಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

    ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದವು. ಒಟ್ಟು 1,217 ಪರೀಕ್ಷಾ ಕೇಂದ್ರಗಳಲ್ಲಿ 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೀಗ ತಮ್ಮ ಭವಿಷ್ಯದ ಅಂಕಪಟ್ಟಿಗಾಗಿ ಕಾಯುತ್ತಿದ್ದಾರೆ. ಯಾವುದೇ ಲೋಪದೋಷವಿಲ್ಲದೆ ಅತ್ಯಂತ ಪಾರದರ್ಶಕವಾಗಿ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಮಂಡಳಿ ಫಲಿತಾಂಶ ನೀಡಲು ಸರ್ವ ಸನ್ನದ್ಧವಾಗಿದೆ.

    ಫಲಿತಾಂಶ ಆನ್ಲೈನ್ನಲ್ಲಿ ನೋಡುವುದು ಹೇಗೆ?

    ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಮೊಬೈಲ್‌ನಲ್ಲೇ ರಿಸಲ್ಟ್ ನೋಡಬಹುದು:

    ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಅಧಿಕೃತ ವೆಬ್‌ಸೈಟ್ karresults.nic.in ಗೆ ಲಾಗ್ ಇನ್ ಆಗಿ.

    ಲಿಂಕ್ ಕ್ಲಿಕ್ ಮಾಡಿ: ಮುಖಪುಟದಲ್ಲಿ ಕಾಣುವ ‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

    ಮಾಹಿತಿ ಭರ್ತಿ ಮಾಡಿ: ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಿಖರವಾಗಿ ನಮೂದಿಸಿ.

    ಸಲ್ಲಿಸಿ: ಮಾಹಿತಿ ಭರ್ತಿ ಮಾಡಿದ ನಂತರ ‘Submit’ ಬಟನ್ ಒತ್ತಿರಿ.

    ಡೌನ್‌ಲೋಡ್ ಮಾಡಿ: ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸಲಿದೆ. ಭವಿಷ್ಯದ ಬಳಕೆಗಾಗಿ ಇದನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.

    ಫಲಿತಾಂಶದ ಮುನ್ನ ಉಂಟಾಗುವ ಭಯ, ಒತ್ತಡ ಸಹಜ. ಆದರೆ ಅದನ್ನು ಮನಸ್ಸಿನಲ್ಲಿ ತುಂಬಿಸಿಕೊಳ್ಳಬಾರದು. ಫಲ ಏನೇ ಬಂದರೂ ಶಾಂತವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

  • ವೈಭವಯುತವಾಗಿ ಜರುಗಿದ  ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮ.

    ವೈಭವಯುತವಾಗಿ ಜರುಗಿದ ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರಮ.

    ಮಹದೇವಪುರ: ಬೆಂಗಳೂರು ಪೂರ್ವ ತಾಲ್ಲೂಕು ಮಹದೇವಪುರ ಕ್ಷೇತ್ರದ ಕಾಡುಗುಡಿ ಗ್ರಾಮದಲ್ಲಿ ಬ್ರಹ್ಮ ರಥೋತ್ಸವಕ್ಕೆ ಮಾಜಿ ಲೋಕಸಭಾ ಸದಸ್ಯ ಎಸ್. ಮುನಿಸ್ವಾಮಿ ಚಾಲನೆ ನೀಡಿದರು.

    ರಥೋತ್ಸವದ ನಿಮಿತ್ತ ದೇವರಿಗೆ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು. ಶ್ರೀ ಪ್ರಸನ್ನ ನಂಜುಂಡೇಶ್ವರ ಸ್ವಾಮಿ
    ಉತ್ಸವ ಮೂರ್ತಿಯನ್ನು ‌ಪಲ್ಲಕ್ಕಿಯಲ್ಲಿ ಹೊತ್ತು ಸಕಲ ವಾದ್ಯಗಳೊಂದಿಗೆ ತಂದು ರಥಕ್ಕೆ ಪ್ರದಕ್ಷಿಣೆ ಹಾಕಿಸಿ, ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಜಾತ್ರಾ ಮಹೊತ್ಸವದಲ್ಲಿ ಕಂಸಾಳೆ, ಡೊಳ್ಳುಕುಣಿತ, ತಮಟೆ, ಮಂಗಳವಾದ್ಯದ ತಂಡಗಳು ಮೆರವಣಿಗೆ ನಡೆದ ಬೀದಿಯುದ್ದಕ್ಕೂ ಪ್ರದರ್ಶನಗೊಂಡು ನೇರೆದಿದ್ದ ಭಕ್ತರಿಗೆ ಆಕರ್ಷಣೆಯಾಗಿತ್ತು.

    ನೂರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಪರವಶತೆಯನ್ನು ವ್ಯಕ್ತಪಡಿಸಿದರು.ಶ್ರದ್ದೆ ಭಕ್ತಿಯಿಂದ ದೇವರನ್ನು ಪೂಜಿಸಿ ಹರಕೆ ಮಾಡಿಕೊಂಡರೆ ಭಗವಂತ ಈಡೇರಿಸುತ್ತಾನೆ ಎಂಬ ಪ್ರತೀತಿಯಿದೆ, ಸಂಜೆ ಗ್ರಾಮದ ದೇವರುಗಳ ಪಲ್ಲಕ್ಕಿ ಉತ್ಸವ, ಸಂಗೀತ ಸಂಜೆ, ರಸಮಂಜರಿ ಮತ್ತಿತರರ ಕಾರ್ಯಕ್ರಗಳು ಜರುಗಿದವು.

    ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ರಥಕ್ಕೆ ಬಾಳೆಹಣ್ಣು, ದವನ, ಹೂ, ಉಪ್ಪು ಮತ್ತಿತರರ ಮಂಗಳಕರ ವಸ್ತುಗಳನ್ನು ರಥಕ್ಕೆ ಅರ್ಪಿಸಿ ಹರಕೆ ಸಲ್ಲಿಸಿದರು. ರಥವು ಸಾಗುತ್ತಿದ್ದಂತೆ ಗ್ರಾಮದ ಪ್ರತಿ ಮನೆ ಮನೆಯವರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಪೂಜೆ ಸಲ್ಲಿಸಿದರು.

    ಗ್ರಾಮಸ್ಥರಿಂದ ಮುದ್ದೆ ಕಾಳುಸಾರು,ಬೆಲ್ಲದ ಪಾಯಾಸ ಪಾಯಸದ ಭೋಜನ ಸವಿದು ದೇವರ ಕೃಪೆಗೆ ಪಾತ್ರರಾದರು.ಅಲ್ಲಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.

    ಪಟ್ಟಂದೂರು ಅಗ್ರಹಾರ, ಬೆಳತೂರು, ಬೆಳತ್ತೂರು ಕಾಲೋನಿ, ಚನ್ನಸಂದ್ರ, ನಾಗೊಂಡಹಳ್ಳಿ, ಕುಂಬೇನ ಅಗ್ರಹಾರ ಸೇರಿದಂತೆ ಕಾಡುಗುಡಿ ಸುತ್ತಮುತ್ತಲಿನ ಭಕ್ತಾದಿಗಳು ಬ್ರಹ್ಮ
    ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.


    ದೇಗುಲದ ಸುತ್ತಲು ತಲೆ ಎತ್ತಿದ್ದ ಪೂಜಾ ಸಾಮಗ್ರಿ, ತಿಂಡಿ ತಿನಿಸು, ಆಟಿಕೆ ವಸ್ತುಗಳ ಮಾರಾಟ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಹಣ್ಣು, ತಂಪುಪಾನೀಯ ಸೇರಿದಂತೆ ವಿವಿಧ ಬಗೆಯ ಮಳಿಗೆಗಳಲ್ಲಿ ವ್ಯಾಪಾರ ಜೋರಾಗಿ ಕಂಡುಬಂತು. ಬುರಗು,ಸಿಹಿ ಮತ್ತು ಕುರುಕಲು ತಿಂಡಿ ತಿನಿಸುಗಳ ವ್ಯಾಪಾರ ಜೋರಾಗಿ ಕಂಡುಬಂತು. ಬಿಸಿಲ ಧಗೆಯಿಂದ ಹೊಟ್ಟೆ ತಣ್ಣನೆ ಮಾಡಲು ಭಕ್ತರು ಐಸ್‌ ಕ್ರೀಂ, ಜ್ಯೂಸ್, ಕಲ್ಲಂಗಡಿ ಹಣ್ಣು ಮತ್ತು ಕಬ್ಬಿನ ಹಾಲಿನ ಮೊರೆ ಹೋಗುತ್ತಿದ್ದರು.

    ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣರೆಡ್ಡಿ, ಬೆಳತೂರು ಯಲ್ಲಪ್ಪ,ರಾಮಾಂಜಿನಯ್ಯ,ಶಾಮ್ ಸುಂದರ್ ಮತ್ತಿತರರು ಇದ್ದರು

  • ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ : ವದಂತಿಗಳಿಗೆ ಕಿವಿಗೊಡಬೇಡಿ-  ಸಾರ್ವಜನಿಕರಿಗೆ ಕರೆ

    ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ : ವದಂತಿಗಳಿಗೆ ಕಿವಿಗೊಡಬೇಡಿ- ಸಾರ್ವಜನಿಕರಿಗೆ ಕರೆ

    ಬೆಂಗಳೂರು:- ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್‌ಗಳಲ್ಲಿ ಅನಿಲದ ದಾಸ್ತಾನು ಕೊರತೆಯಿದೆ ಎಂಬ ತಪ್ಪು ಮಾಹಿತಿಯ ಆಧಾರದ ಮೇಲೆ, ಕಳೆದ ಕೆಲವು ದಿನಗಳಿಂದ ಆಟೋ ಮಾಲೀಕರು ಮತ್ತು ಚಾಲಕರು ಬಂಕ್‌ಗಳ ಮುಂದೆ ಸುದೀರ್ಘ ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಅಂಶ ಸರ್ಕಾರದ ಗಮನಕ್ಕೆ ಬಂದಿದೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಕೇವಲ ವದಂತಿಗಳಾಗಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಸ್ಪಷ್ಟಪಡಿಸಿದೆ.

    ಕೆಲವು ಖಾಸಗಿ ಆಟೋ ಗ್ಯಾಸ್ ಸರಬರಾಜು ಸಂಸ್ಥೆಗಳಲ್ಲಿ ಮಾತ್ರ ಅಲ್ಪಮಟ್ಟಿನ ಕೊರತೆ ಕಂಡುಬಂದಿದ್ದು, ಇದನ್ನು ಸರಿಪಡಿಸಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ IOC (ಇಂಡಿಯನ್ ಆಯಿಲ್), BPC (ಭಾರತ್ ಪೆಟ್ರೋಲಿಯಂ) ಮತ್ತು HPC (ಹಿಂದೂಸ್ತಾನ್ ಪೆಟ್ರೋಲಿಯಂ) ಮೂಲಕ ಹೆಚ್ಚಿನ ಪ್ರಮಾಣದ ಅನಿಲವನ್ನು ಪೂರೈಕೆ ಮಾಡಲಾಗುತ್ತಿದೆ.

    ಹಿಂದೆ ಈ ಮೂರು ಸಂಸ್ಥೆಗಳು ಸರಾಸರಿ 56.67 ಮೆಟ್ರಿಕ್ ಟನ್ ಆಟೋ ಗ್ಯಾಸ್ ಅನ್ನು ಸರಬರಾಜು ಮಾಡುತ್ತಿದ್ದವು. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಸರಬರಾಜು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಸದ್ಯ ಪ್ರತಿದಿನ ಸರಾಸರಿ 83.58 ಮೆಟ್ರಿಕ್ ಟನ್ ಗ್ಯಾಸ್ ಅನ್ನು ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪೂರೈಸಲಾಗುತ್ತಿದೆ.

    ಕಳೆದ ಐದು ದಿನಗಳ ಪೂರೈಕೆ ವಿವರ

    ಕಳೆದ ಏಪ್ರಿಲ್ 2 ರಿಂದ ಏಪ್ರಿಲ್ 6 ರವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ, ಪೂರೈಕೆಯಲ್ಲಿ ಸ್ಥಿರತೆ ಇರುವುದು ಕಂಡುಬರುತ್ತದೆ. ಏಪ್ರಿಲ್ 2 ರಂದು 87.78 ಮೆಟ್ರಿಕ್ ಟನ್, ಏಪ್ರಿಲ್ 3 ರಂದು 86.05 ಮೆಟ್ರಿಕ್ ಟನ್, ಏಪ್ರಿಲ್ 4 ರಂದು 84.80 ಮೆಟ್ರಿಕ್ ಟನ್, ಏಪ್ರಿಲ್ 5 ರಂದು ಗರಿಷ್ಠ 94.11 ಮೆಟ್ರಿಕ್ ಟನ್ ಹಾಗೂ ಏಪ್ರಿಲ್ 6 ರಂದು 83.58 ಮೆಟ್ರಿಕ್ ಟನ್ ಅನಿಲವನ್ನು ಈ ಮೂರು ಪ್ರಮುಖ ಸಂಸ್ಥೆಗಳು ಯಶಸ್ವಿಯಾಗಿ ಪೂರೈಕೆ ಮಾಡಿವೆ.

    ಆದ್ದರಿಂದ, ರಾಜ್ಯದ ಆಟೋ ಮಾಲೀಕರು ಮತ್ತು ಚಾಲಕರು ಇಂತಹ ಯಾವುದೇ ಸುಳ್ಳು ವದಂತಿಗಳನ್ನು ನಂಬಬಾರದು ಮತ್ತು ಆತಂಕಕ್ಕೊಳಗಾಗಿ ಬಂಕ್‌ಗಳ ಮುಂದೆ ಸಾಲುಗಟ್ಟಿ ನಿಲ್ಲಬಾರದು ಎಂದು ಸರ್ಕಾರ ಮನವಿ ಮಾಡಿದೆ. ಅನಿಲ ಪೂರೈಕೆ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

  • ಬೆಂಗಳೂರು ಏರ್‌ಪೋರ್ಟ್‌ನಲ್ಲಿ 5 ಕೋಟಿ ಚಿನ್ನ ವಶ: ಐವರು ಬಂಧನ

    ಬೆಂಗಳೂರು ಏರ್‌ಪೋರ್ಟ್‌ನಲ್ಲಿ 5 ಕೋಟಿ ಚಿನ್ನ ವಶ: ಐವರು ಬಂಧನ

    ಬೆಂಗಳೂರು:ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5 ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು DRI ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.

    ಏರ್ಪೋರ್ಟ್ ನ ಟರ್ಮಿನಲ್ -2 ರ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕಳ್ಳಸಾಗಣೆಯ ಗ್ಯಾಂಗ್‌ ಚಿನ್ನವನ್ನು ಕಳ್ಳಸಾಗಣೆ ಮಾಡಲು ಮುಂದಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ಐವರು ಆರೋಪಿಗಳನ್ನು ಪರಿಶೀಲನೆ ನಡೆಸಿ ಅವರಿಂದ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 3 ಕೆಜಿ 356 ಗ್ರಾಂ ಶುದ್ಧ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ..

    ಪ್ರಾಥಮಿಕ ತನಿಖೆಯ ವೇಳೆ ಗಡಿಯಾಚೆಗಿನ ಕಳ್ಳಸಾಗಣೆಯ ಸಿಂಡಿಕೇಟ್‌ನ ಭಾಗವಾಗಿದೆ ಎಂದು ಕಂಡು ಬಂದಿದೆ. ಇದರಲ್ಲಿ ವಿದೇಶಿಯರು-ಬಾಂಗ್ಲಾದೇಶಿ ಪ್ರಜೆಗಳು ಇರುವ ಶಂಕೆ ಇದೆ. ಈ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಪ್ರಮುಖ ಕಿಂಗ್‌ಪಿನ್‌ಗಳು ಹಾಗೂ ಈ ನೆಟ್‌ವರ್ಕ್ ಅನ್ನು ಪತ್ತೆ ಹಚ್ಚಲು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬಾಂಗ್ಲಾದೇಶದ ಪ್ರಜೆಗಳು ಸ್ಥಳೀಯರ ಸಹಕಾರದೊಂದಿಗೆ ಚಿನ್ನ ಕಳ್ಳಸಾಗಣೆ ಮಾಡಲು ಮುಂದಾಗಿದ್ದರು. ಅದರಂತೆ ಚಿನ್ನವನ್ನು ದೇಹದ ವಿವಿಧ ಅಂಗಗಳಲ್ಲಿ ಮರೆಮಾಚಿಕೊಂಡು ಶೌಚಾಲಯಗಳು ಮತ್ತು ಧೂಮಪಾನ ವಲಯಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಪಾಸ್‌ಕೋಡ್ ಬಳಸಿಕೊಂಡು ಕಸ್ಟಮ್ಸ್ ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನವನ್ನು ವರ್ಗಾಯಿಸಲು ಮುಂದಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ಲೋಕಾಯುಕ್ತ ದಾಳಿ : ಬಳ್ಳಾರಿ ಮೀನುಗಾರಿಕೆ ಅಧಿಕಾರಿ ಶಿವಣ್ಣ ಮನೆಯಲ್ಲಿ ಸೈಟ್, ಜಮೀನು, ಚಿನ್ನ ಪತ್ತೆ

    ಲೋಕಾಯುಕ್ತ ದಾಳಿ : ಬಳ್ಳಾರಿ ಮೀನುಗಾರಿಕೆ ಅಧಿಕಾರಿ ಶಿವಣ್ಣ ಮನೆಯಲ್ಲಿ ಸೈಟ್, ಜಮೀನು, ಚಿನ್ನ ಪತ್ತೆ

    ಬಳ್ಳಾರಿ:-ಬಳ್ಳಾರಿಯಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಶಿವಣ್ಣನ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.

    ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣ ಅವರ ಮನೆ, ಕಚೇರಿ ಮತ್ತು ಸರ್ಕಾರಿ ಬೊಲೆರೋ ವಾಹನದ ಮೇಲೆ ಏಪ್ರಿಲ್ 7ರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

    ಪತ್ತೆಯಾದ ಅಕ್ರಮ ಆಸ್ತಿಗಳ ವಿವರ:
    ಜಮೀನು: ವಿವಿಧೆಡೆ ಒಟ್ಟು 44 ಎಕರೆ ಕೃಷಿ ಭೂಮಿ
    ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್‍ಗಳು
    ಮನೆಗಳು: ಬಳ್ಳಾರಿ ನಗರದಲ್ಲಿ 3 ಸುಸಜ್ಜಿತ ಮನೆಗಳು
    ನಗದು: ಮನೆಯಲ್ಲಿ 8.5 ಲಕ್ಷ ರೂಪಾಯಿ + ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂಪಾಯಿ
    ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ
    ವಾಹನಗಳು: 3 ದ್ವಿಚಕ್ರ ವಾಹನಗಳು

    ಇದಲ್ಲದೆ, ಬೊಲೆರೋ ವಾಹನದಲ್ಲಿ ರಹಸ್ಯ ಕಡತಗಳು ಮತ್ತು ಬೇನಾಮಿ ಆಸ್ತಿಗಳ ಸಂಬಂಧಿ ದಾಖಲೆಗಳು ಸಿಕ್ಕಿವೆ.

    ಲೋಕಾಯುಕ್ತ ತಂಡವು ಹೆಚ್ಚಿನ ತನಿಖೆಯನ್ನು ಮುಂದುವರಿಸಿದೆ.
    ಭ್ರಷ್ಟಾಚಾರದ ಆರೋಪ ಶಿವಣ್ಣ ಅವರು ತಮ್ಮ ಅಧಿಕಾರದ ದುರ್ಬಳಕೆ ಮಾಡಿ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಆರೋಪಗಳು ದೂರುಗಳಲ್ಲಿ ಇದ್ದವು. ಲೋಕಾಯುಕ್ತ ಅಧಿಕಾರಿಗಳು ಈ ಆಸ್ತಿಗಳ ಮೂಲವನ್ನು ಪತ್ತೆಹಚ್ಚುವ ಕೆಲಸವನ್ನು ತೀವ್ರಗೊಳಿಸಿದ್ದಾರೆ.

  • ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಚಾಲನೆ.

    ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಚಾಲನೆ.

    ಮಹದೇವಪುರ: ಕ್ಷೇತ್ರದ ವರ್ತೂರು ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರವನ್ನು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ನೇತೃತ್ವದಲ್ಲಿ ನೆರವೇರಿಸಲಾಯಿತು.

    ರಸ್ತೆ ಅಗಲೀಕರಣ ತೆರವುಗೊಳಿಸಲಾದ ದೇವಾಲಯಗಳು, ಮಸೀದಿಗಳು ಹಾಗೂ ಶಾಲಾ ಕಟ್ಟಡಗಳನ್ನು ಪುನರ್ ನಿರ್ಮಾಣ ಮಾಡುವ ಕಾಮಗಾರಿಗಳಿಗೆ ಶಾಸಕರು ಸ್ಥಳೀಯ ಮುಖಂಡರುಗಳೊಂದಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಶ್ರೀರಾಮ ದೇವಸ್ಥಾನ (ಗುಂಜೂರು), ಶ್ರೀ ದೌಪದಮ್ಮಧರ್ಮರಾಯಸ್ವಾಮಿ ದೇವಸ್ಥಾನದ ಆರ್ಚ್‌ ನಿರ್ಮಾಣ, ಯಮಲೂರು ಕೊಡಿ ಶ್ರೀ ದುಗ್ಗಲಮ್ಮ ದೇವಿ ದೇವಸ್ಥಾನ ನಿರ್ಮಾಣ ಸೇರಿದಂತೆ ಹಲವಾರು ಧಾರ್ಮಿಕ ಸ್ಥಳಗಳ ನಿರ್ಮಾಣ ಹಾಗೂ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಜೊತೆಗೆ ವರ್ತೂರು ಹಾಗೂ ಬೆಳ್ಳಂದೂರು ಮಸೀದಿ ನಿರ್ಮಾಣಕ್ಕೂಶಂಕುಸ್ಥಾಪನೆ ಮಾಡಲಾಯಿತು.

    ವರ್ತೂರು ಜೂನಿಯ‌ರ್ ಕಾಲೇಜು ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಯ ಹೊಸ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ವರ್ತೂರು ಹೊಸ ಮಾರ್ಕೆಟ್ನ ಉಳಿಕೆ ಕಾಮಗಾರಿಗಳು ಹಾಗೂ ವರ್ತೂರು-ಸೋರಹುಣಸೆ ರಸ್ತೆಯ ಅಭಿವೃದ್ಧಿಗೂ ಚಾಲನೆ ನೀಡಲಾಗಿದೆ.

    ಈ ಸಂದರ್ಭದಲ್ಲಿ ಶಾಸಕಿ ಮಂಜುಳಾ ಲಿಂಬಾವಳಿ ಮಾತನಾಡಿ ವರ್ತೂರು ಮುಖ್ಯರಸ್ತೆ ಅಗಲೀಕರಣ ಯೋಜನೆಯ ಭಾಗವಾಗಿ ಕೆಲವು ದೇವಸ್ಥಾನಗಳು, ಮಸೀದಿಗಳು, ಶಾಲೆ ಹಾಗೂ ಕಾಲೇಜು ಕಟ್ಟಡಗಳನ್ನು ಸ್ಥಳಾಂತರಿಸಬೇಕಾಗಿತ್ತು. ಇದಕ್ಕಾಗಿ ಸಿಎಸ್‌ಆ‌ರ್ ಅನುದಾನದಡಿ ಪ್ರೆಸ್ಟೀಜ್ ಸಂಸ್ಥೆ ಮುಂದಾಗಿ ನೂತನ ಕಟ್ಟಡಗಳನ್ನು ನಿರ್ಮಿಸುತ್ತಿದೆ.ಸಾರ್ವಜನಿಕರ ಅನುಕೂಲವಾಗುವಂತೆ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾರ್ಯವೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ನಗರ ಮಂಡಲ ಅಧ್ಯಕ್ಷ ಶ್ರೀಧ‌ರ್ ರೆಡ್ಡಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಎಲ್. ರಾಜೇಶ್ ಮುಖಂಡರಾದ ಮನೋಹರ್‌ರೆಡ್ಡಿ, ಮಹೇಂದ್ರಮೋದಿ,ವರ್ತೂರು ಶ್ರೀಧರ್, ರಾಜಾ ರೆಡ್ಡಿ,ವಿ.ಪಿ.ರಕ್ಷೀತ್,ರಾಜೇಶ್,ವೆಂಕಟೇಶ್ ಉಪಸ್ಥಿತರಿದ್ದರು

    ಸರ್ಕಾರಿ ಪ್ರಾಥಮಿಕ ಶಾಲೆಯ ಹೊಸ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ