Author: Dharmaraju

  • ಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

    ಮೊಬೈಲ್ ಇಲ್ಲ, ಎಟಿಎಂ ಬಳಸ್ತಿಲ್ಲ, ಮಿಸ್ಸಿಂಗ್ ಆಗಿ ಎರಡೂವರೆ ತಿಂಗಳಾದ್ರೂ ಈ ಬಾಲಕಿಯರು ಮತ್ತೆ ಎಲ್ಲಿ ಹೋದ್ರು..?

    ಬೆಂಗಳೂರು: ಪಿಯುಸಿ ಓದುತ್ತಿದ್ದ ಇಬ್ಬರು ಬಾಲಕಿಯರು ನಾಪತ್ತೆಯಾಗಿ ಎರಡೂವರೆ ತಿಂಗಳು ಕಳೆದರೂ ಯಾವುದೇ ಸುಳಿವು ಸಿಗದೆ ಪೋಷಕರು ಕಂಗಾಲಾದ ಘಟನೆಯೊಂದು ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿದೆ. ಸೆಕೆಂಡ್ ಪಿಯುಸಿ ಓದುತ್ತಿದ್ದ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ನಾಪತ್ತೆಯಾದ ಅಪ್ರಾಪ್ತೆಯರು. ಇವರಿಗಾಗಿ ಮುಂಬೈ, ಚೆನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ, ಮೈಸೂರು ಸೇರಿದಂತೆ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

    ನಾಪತ್ತೆಯಾದ ಈ ಇಬ್ಬರು ಬಾಲಕಿಯರಲ್ಲಿ ಮೊಬೈಲ್ ಇರಲಿಲ್ಲ. ಎಟಿಎಂ ಕಾರ್ಡ್ ಗಳನ್ನು ಬಳಸುತ್ತಿಲ್ಲ. ಯಾವುದೇ ಸ್ನೇಹಿತರ ಅಥವಾ ಕುಟುಂಬಸ್ಥರ ಮನೆಗೂ ಹೋಗಿಲ್ಲ. ಮನೆಯಿಂದ ಹೋಗುವಾಗ ಇಬ್ಬರು ಕೇವಲ 3 ಸಾವಿರ ರೂ ತೆಗೆದುಕೊಂಡು ಹೋಗಿದ್ದಾರೆ. ಅದೇ ಹಣದಲ್ಲಿ ಸುಮಾರು 75 ದಿನ ಹೀಗೇ ಇರಲು ಹೇಗೆ ಸಾಧ್ಯ ಎಂಬ ಯಕ್ಷ ಪ್ರಶ್ನೆ ಕುಟುಂಬಸ್ಥರದ್ದು.

    ಇವರು ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದವರೆಗೂ ಹೋಗಿದ್ದ ಸುಳಿವು ಸಿಕ್ಕಿತ್ತು. ಆದರೆ ಅಲ್ಲಿಗೆ ಹೋಗುವಷ್ಟರಲ್ಲಿ ಇವರು ಅಲ್ಲಿಂದಲೂ ನಾಪತ್ತೆಯಾಗಿದ್ದರು. ಅಲ್ಲಿಂದ ಎಲ್ಲಿ ಹೋದ್ರು ಅನ್ನೋದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕುಟುಂಬಸ್ಥರು ಕೊಟ್ಟ ಮಾಹಿತಿ ಆಧರಿಸಿಯೇ ಬಾಲಕಿಯರ ಎಲ್ಲಾ ಇಷ್ಟದ ಜಾಗಗಳಲ್ಲಿ ಪೊಲೀಸರು ಪತ್ತೆ ಕಾರ್ಯ ನಡೆಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿನಿಯರು ಮನೆ ಬಿಟ್ಟು ಹೋಗೋದಕ್ಕೆ ಕೂಡಾ ನಿಖರವಾದ ಕಾರಣ ತಿಳಿದುಬಂದಿಲ್ಲ.

    ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಇರೋದ್ರಿಂದ ಇವರು ಕೈಯಲ್ಲಿ ಆಧಾರ್ ಕಾರ್ಡ್‌ ಇದ್ದು, ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಜನವರಿ 31 ರಂದು ಇಬ್ಬರು ಕೂಡಾ ಮನೆ ಬಿಟ್ಟು ಹೋಗಿದ್ದು, ಬರೋಬ್ಬರಿ ಎರಡೂವರೆ ತಿಂಗಳುಗಳೇ ಕಳೆದಿವೆ. ಹೀಗಾಗಿ ಯುವತಿಯರ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರನ್ನು ಹುಡುಕಲು ಪೊಲೀಸರಿಗೆ ಒಂದು ವಾರದ ಕಾಲಾವಕಾಶ ನೀಡಿದ್ದು ಈ ಗಡುವು ಮುಗಿದು ಒಂದು ತಿಂಗಳೇ ಕಳೆದಿದೆ. ಆದರೂ ಈ ಬಾಲಕಿಯರ ಸುಳಿವು ಪತ್ತೆಯಾಗದೇ ಇರೋದು ಪೋಷಕರನ್ನು ಆತಂಕಕ್ಕೆ ತಳ್ಳಿದೆ.

  • ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

    ಯೋಗೇಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 17 ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟ

    ಬೆಂಗಳೂರು : ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊ*ಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ.

    ಈ ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಗಾಗಲೇ ವಿನಯ್ ಕುಲಕರ್ಣಿ ಸೇರಿದಂತೆ ಆರೋಪಿಗಳನ್ನು ದೋಷಿಯೆಂದು ಘೋಷಿಸಿದ್ದು, ಇಂದು ಬೆಳಗ್ಗೆ ಸುಮಾರು 11:30ರ ವೇಳೆಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿದೆ.

    ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ಘೋಷಿಸಲಿದ್ದಾರೆ.

    ದೋಷಿಗಳೆಂದು ತೀರ್ಪು ಹೊರಬಂದ ತಕ್ಷಣ, ಪ್ರಕರಣದ ತನಿಖೆ ನಡೆಸಿದ ಕೇಂದ್ರ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಶಾಸಕ ವಿನಯ್ ಕುಲಕರ್ಣಿ ಸೇರಿ 17 ಮಂದಿಯನ್ನು ಪರಪ್ಪನ ಅಗ್ರಹಾರ ಜೈಲುಗೆ ಸ್ಥಳಾಂತರಿಸಲಾಗಿದೆ.

    2016ರ ಜೂನ್ 16ರಂದು ನಡೆದಿದ್ದ ಈ ಹ*ತ್ಯೆಯಲ್ಲಿ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡರನ್ನು ಕೊ*ಲೆ ಮಾಡಲಾಗಿತ್ತು. ಪ್ರಕರಣವು 2019ರಲ್ಲಿ ಸಿಬಿಐಗೆ ವರ್ಗಾಯಿಸಲ್ಪಟ್ಟಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್120(ಬಿ) ಜೊತೆಗೆ 302, 217, 201, 143, 147, 148 ಜೊತೆಗೆ 149, ಶಸ್ತ್ರಾಸ್ತ್ರ ಕಾಯಿದೆ ಸೆಕ್ಷನ್ 25 ಜೊತೆಗೆ 3, 5, 8, 29 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್‌ 13(2) ಜೊತೆಗೆ 13(1)(ಡಿ) ಅಡಿ ಆರೋಪ ಪಟ್ಟಿ ಸಲ್ಲಿಸಿತ್ತು. ವಿನಯ್‌ ಕುಲಕರ್ಣಿ, ಇಬ್ಬರು ಪೊಲೀಸರು ಸೇರಿದಂತೆ ಒಟ್ಟು 21 ಆರೋಪಿಗಳನ್ನು ಆರೋಪ ಪಟ್ಟಿಯಲ್ಲಿ ಹೆಸರಿಸಲಾಗಿತ್ತು. ಆ ಪೈಕಿ 17 ಮಂದಿ ಮೇಲೆ ಅಪರಾಧ ಸಾಭೀತಾಗಿದೆ. 2016ರ ಜೂನ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಇದಾಗಿದ್ದು 10 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ತೀರ್ಪು ಪ್ರಕಟವಾಗಿದೆ

    2016 ಜೂನ್ 15 ರಂದು ಧಾರವಾಡದ ಸಪ್ತಾಪುರದಲ್ಲಿರುವ ಯೋಗೇಶ್ ಗೌಡ ಅವರದ್ದೇ ಒಡೆತನದ ಉದಯ್ ಜಿಮ್‌ನಲ್ಲಿ ಬೆಳಗಿನ ಜಾವ ಅವರು ದಿನಪತ್ರಿಕೆ ಓದುತ್ತಿದ್ದಾಗ, ಅಲ್ಲಿಗೆ ಬಂದ ದುಷ್ಕರ್ಮಿಗಳ ಗುಂಪೊಂದು ಅವರ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿತ್ತು.

    ಪ್ರಮುಖ ಆರೋಪಿಗಳು: ಸಂತೋಷ್, ಅಶ್ವತ್ಥ, ಸುನೀಲ್ ನಜ್ಮೀರ್ ಅಹ್ಮದ್, ಹರ್ಷಿತ್, ವಿನಯ್ ಕುಲಕರ್ಣಿ , ಶಿವಾನಂದ್, ಚನ್ನಕೇಶವ, ಬಸವರಾಜ್ ಮುತ್ತಗಿ , ಕೀರ್ತಿ ಕುಮಾರ್, ವಿನಾಯಕ್, ದಿನೇಶ್, ಶಹನವಾಜ್, ನೂತನ್, ಹರ್ಷಿತ್, ಚಂದ್ರಶೇಖರ ಇಂಡಿ, ಶಿವಾನಂದ್, ವಿಕಾಸ್, ವಾಸುದೇವ, ವಿಕ್ರಂ

  • ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ…!

    ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪತ್ತೆ…!

    ನೆಲಮಂಗಲ: ಕಳೆದ ಕೆಲವು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ನೆಲಮಂಗಲ ತಾಲೂಕಿನ ಗಡಿ ಗ್ರಾಮವಾದ ಹಳೇ ನಿಜಗಲ್‌ನಲ್ಲಿ ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ.

    ಅಡಿಕೆ ತೋಟದ ಪಕ್ಕದಲ್ಲಿ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆಗಳು ಸಿಕ್ಕಿದ್ದು, ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.

    ಘಟನೆಯಹಿನ್ನೆಲೆ:

    ಮೃತ ಮಹಿಳೆಯನ್ನು ತುಮಕೂರು ಮೂಲದ ಯಮುನಾ (35) ಎಂದು ಗುರುತಿಸಲಾಗಿದೆ. ಇವರಿಗೆ 19 ವರ್ಷಗಳ ಹಿಂದೆ ಮಲ್ಲಿಕಾರ್ಜುನ್ ಎಂಬುವವರೊಂದಿಗೆ ಮದುವೆ ಆಗಿತ್ತು, ಇಬ್ಬರು ಮಕ್ಕಳಿದ್ದಾರೆ. ಆದರೆ, ಎಂಟು ವರ್ಷಗಳ ಹಿಂದೆ ರಾಘವೇಂದ್ರ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಯಮುನಾ, ಪತಿಯನ್ನು ಬಿಟ್ಟು ಐದು ವರ್ಷಗಳ ಕಾಲ ದೊಡ್ಡಬಳ್ಳಾಪುರದಲ್ಲಿ ಆತನೊಂದಿಗೆ ವಾಸವಿದ್ದರು. ನಂತರ ತನ್ನ ತಪ್ಪಿನ ಅರಿವಾಗಿ ಎರಡು ವರ್ಷಗಳ ಹಿಂದೆ ಮರಳಿ ಪತಿಯ ಮನೆಗೆ ಬಂದು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

    ಕಳೆದ ಮಾರ್ಚ್ 21ರಂದು ಯಮುನಾ ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ “ಒಮ್ಮೆ ಭೇಟಿಯಾಗು” ಎಂದು ರಾಘವೇಂದ್ರ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಆತನನ್ನು ಭೇಟಿ ಮಾಡಲು ಹೋದ ಯಮುನಾ ಅಂದಿನಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಟುಂಬಸ್ಥರು ತುಮಕೂರು ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನೂ ದಾಖಲಿಸಿದ್ದರು.

    ಗುರುತುಪತ್ತೆಯಾಗಿದ್ದುಹೇಗೆ?

    ಆದರೆ ಇದೀಗ ಹಳೇ ನಿಜಗಲ್ ಗ್ರಾಮದ ಅಡಿಕೆ ತೋಟದ ಬಳಿ ಮೂಳೆಗಳು ಪತ್ತೆಯಾಗಿದೆ. ಅದರ ಪಕ್ಕದಲ್ಲೇ ಮಹಿಳೆಯ ಬ್ಯಾಗ್ ಹಾಗೂ ಐಡಿ ಕಾರ್ಡ್ ಕೂಡ ಪೊಲೀಸರಿಗೆ ಸಿಕ್ಕಿದೆ. ಇದರ ಆಧಾರದ ಮೇಲೆ ಪೊಲೀಸರು ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಕುಟುಂಬಸ್ಥರು ಅದು ಯಮುನಾ ಅವರದ್ದೇ ಎಂದು ಗುರುತಿಸಿದ್ದಾರೆ.

    ರಾಘವೇಂದ್ರ ಎಂಬಾತನೇ ಯಮುನಾಳನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ತೋಟದ ಬಳಿ ಎಸೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ದಾಬಸ್‌ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.

  • ಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

    ಕ್ಷೇತ್ರದಲ್ಲಿ ಗುಣಮಟ್ಟ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ

    ಮಹದೇವಪುರ: ಕ್ಷೇತ್ರದಲ್ಲಿ ರಸ್ತೆ,ಚರಂಡಿ ಮೂಲಭೂತ ಸೌಕರ್ಯಗಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿಯವರು ಹೇಳಿದರು

    ಕ್ಷೇತ್ರದ ಭೈರತಿ,ಭೈರತಿ ಬಂಡೆ, ಬೆಳೇಶಿವಾಲೆ, ಬೆಳತೂರು ಕಾಲೋನಿ, ಕುಂಬೇನ ಅಗ್ರಹಾರ ಕೊಡುಗೆಹಳ್ಳಿ , ಅಯ್ಯಪ್ಪ ನಗರ, ಹೂಡಿ,ತಿಗಳರಪಾಳ್ಯದಲ್ಲಿ ರಸ್ತೆ, ಚರಂಡಿ ಸೇರಿ ವಿವಿಧ ಮೂಲಭೂತ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು,

    ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ಅನುದಾನ ನೀಡದೆ ಧೋರಣೆಯನ್ನು ಮಾಡುತ್ತಿದ್ದು ಬಂದಿರುವ ಅಲ್ಪಸ್ವಲ್ಪ
    ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.
    ಸಾರ್ವಜನಿಕರಿಗೆ ಬಹುಮುಖ್ಯವಾಗಿ ಬೇಕಿರುವ ರಸ್ತೆ ಚರಂಡಿ ಸೇರಿದಂತೆ ವಿವಿಧ ಅಭಿವೃದ್ಧಿ ಕಲ್ಪಿಸುತ್ತೇವೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಮನವಿ ಮಾಡಿ ಅನುದಾನ ತಂದು ಕ್ಷೇತ್ರದ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದರು.

    ಗುತ್ತಿದಾರರು ಸಾರ್ವಜನಿಕರಿಗೆ ತೊಂದರೆ ಆಗದಂತೆ,ಮಳೆಗಾಲ ಆರಂಭಕ್ಕೂ ಮೊದಲೆ ಕಾಮಗಾರಿ ಪೂರ್ಣಗೊಳಿಸಿ,ಸರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದರು.
    ಶೀಘ್ರ ಕಾಮಗಾರಿಯನ್ನು ಆರಂಭಿಸಿ ಯಾವುದೇ ಲೋಪ ದೋಷಗಳು ಬರದಂತೆ ಪೂರ್ಣಗೊಳಿಸಬೇಕೆಂದು ತಿಳಿಸಿದರು .

    ಈ ವೇಳೆ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮುಖಂಡರಾದ ಆರ್ ರಾಮಾಂಜನೇಯ, ವಾರ್ಡ್ ಅಧ್ಯಕ್ಷರು ಕಾರ್ಯಕರ್ತರು ಇದ್ದರು.

  • 40ರ ಆಂಟಿ ಪ್ರೇಮಕ್ಕೆ ಬಿದ್ದ ಹರೆಯದ ಯುವಕ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಜೋಡಿ!

    40ರ ಆಂಟಿ ಪ್ರೇಮಕ್ಕೆ ಬಿದ್ದ ಹರೆಯದ ಯುವಕ, ಮನೆ ಬಿಟ್ಟು ಓಡಿ ಹೋಗಿ ಮದುವೆಯಾದ ಜೋಡಿ!

    ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಈ ಪ್ರೀತಿ ಎಂಬುದು ಕುಟುಂಬಗಳ ನಿದ್ದೆ ಗೆಡಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪರಿಚಯ, ಈಗ 21ರ ಯುವಕನನ್ನು 40ರ ವಿಧವೆಯ ಜೊತೆ ಮನೆ ಬಿಟ್ಟು ಓಡಿಹೋಗುವಂತೆ ಮಾಡಿದೆ!

    ಹೌದು…ಇದು ಡಿಜಿಟಲ್ ಕಾಲದ ವಿಚಿತ್ರ ಪ್ರೇಮ ಕಥೆ. ಉತ್ತರ ಪ್ರದೇಶದ ಅಮೋಹಾದ 21 ವರ್ಷದ ಯುವಕನಿಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಾದ 40 ವರ್ಷದ ಮಹಿಳೆಯ ಪರಿಚಯವಾಗುತ್ತದೆ. ಆರಂಭದಲ್ಲಿ ಹಾಯ್, ಹಲೋ ಅಂತ ಶುರುವಾದ ಚಾಟಿಂಗ್, ಕಡೆಗೆ ಬಿಟ್ಟಿರಲಾರದ ಪ್ರೇಮಕ್ಕೆ ತಿರುಗಿದೆ. ತನ್ನ ಮಗನಿಗಿಂತ 19 ವರ್ಷ ಹಿರಿಯವಳಾದ, ಮೂರು ಮಕ್ಕಳ ತಾಯಿಯ ಪ್ರೇಮದ ಜಾಲಕ್ಕೆ ಬಿದ್ದ ಈ ತರುಣ, ಮನೆಯವರಿಗೂ ತಿಳಿಸದೆ ಹಠಾತ್ ನಾಪತ್ತೆಯಾಗಿದ್ದ. ಮಗ ಕಾಣೆಯಾಗಿದ್ದಾನೆಂದು ಗಾಬರಿಗೊಂಡ ತಾಯಿ ಪೊಲೀಸರ ಮೊರೆ ಹೋದಾಗ ಬಯಲಾಗಿದ್ದು ಮಾತ್ರ ಶಾಕಿಂಗ್ ವಿಷಯ!

    ಪೊಲೀಸರು ಹುಡುಕಾಟ ನಡೆಸಿದಾಗ ಆ ಯುವಕ ಆಗ್ರಾದಲ್ಲಿ ಆ 40 ವರ್ಷದ ಮಹಿಳೆಯ ಜೊತೆ ಪತ್ತೆಯಾಗಿದ್ದಾನೆ. ಅಷ್ಟೇ ಅಲ್ಲ, ಇವರಿಬ್ಬರು ಯಾರಿಗೂ ತಿಳಿಯದಂತೆ ದೇವಸ್ಥಾನದಲ್ಲಿ ಮದುವೆಯನ್ನೂ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮಗನನ್ನು ಮನೆಗೆ ಕರೆದೊಯ್ಯಲು ಬಂದ ತಾಯಿಯ ಎದುರೇ ದೊಡ್ಡ ಹೈಡ್ರಾಮಾ ನಡೆದಿದ್ದು, ಮಗ ಮಾತ್ರ ತನ್ನ ಪ್ರೇಮಿಯನ್ನು ಬಿಟ್ಟು ಬರಲು ಸಿದ್ಧನಿಲ್ಲ.

    ಹೌದು, ಆನ್‌ಲೈನ್‌ನಲ್ಲಿ ಸಿಗುವ ಆಕರ್ಷಣೆ ಜೀವನದ ವಾಸ್ತವಕ್ಕಿಂತ ಭಿನ್ನವಾಗಿರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. 19 ವರ್ಷದ ವಯಸ್ಸಿನ ಅಂತರವಿದ್ದರೂ ಸಮಾಜದ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಈ ಜೋಡಿಯ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ.

  • ಪರಮ್ ಫೌಂಡೇಶನ್‌ನಿಂದ ನಾಳೆ ಬೆಂಗಳೂರಿನಲ್ಲಿ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಭ್ರಮ

    ಪರಮ್ ಫೌಂಡೇಶನ್‌ನಿಂದ ನಾಳೆ ಬೆಂಗಳೂರಿನಲ್ಲಿ ‘ತತ್ವ’ ಭಕ್ತಿ ಫ್ಯೂಷನ್ ಸಂಗೀತ ಸಂಭ್ರಮ

    ಪರಮ್ ಫೌಂಡೇಶನ್ ಸಂಸ್ಥೆಯಿಂದ ಅದ್ಧೂರಿ ಆಯೋಜನೆ
    – ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಕಾರ್ಯಕ್ರಮ
    – ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡದ ಪ್ರಸ್ತುತಿ
    – ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಭಾಗಿ
    – ಸಮಕಾಲೀನ ಶೈಲಿಯಲ್ಲಿ ಆಧ್ಯಾತ್ಮಿಕ ಪರಂಪರೆಯ ಗಾಯನ ಸುಧೆ
    – ಜನಪದ, ಶಾಸ್ತ್ರೀಯ ಸಂಗೀತದ ರಸದೌತಣ

    ಬೆಂಗಳೂರು: ರಾಜಧಾನಿಯ ಸಂಗೀತ ಪ್ರಿಯರಿಗಾಗಿ ‘ಪರಮ್ ಫೌಂಡೇಶನ್’ ವತಿಯಿಂದ ‘ತತ್ವ’ ಎಂಬ ವಿಶಿಷ್ಟ ಭಕ್ತಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರಸಿದ್ಧ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 17ರಂದು ಸಂಜೆ 6.15ಕ್ಕೆ ಈ ಸಂಗೀತ ಸಂಜೆ ಆಯೋಜಿಸಲಾಗಿದೆ.

    ‘ನಾದದ ಲಯದಿಂದ ಆನಂದದತ್ತ ಪಯಣ’ (A Journey from Breath to Bliss) ಎಂಬ ಪರಿಕಲ್ಪನೆಯಡಿ ಮೂಡಿಬರುತ್ತಿರುವ ಈ ಗಾಯನ ಸುಧೆಯನ್ನು ಅರುಂಧತಿ ವಸಿಷ್ಠ ಮತ್ತು ವರುಣ್ ಪ್ರದೀಪ್ ತಂಡವು ನಡೆಸಿಕೊಡಲಿದೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಸಮಕಾಲೀನ ಶೈಲಿಯಲ್ಲಿ ಪ್ರಸ್ತುತಪಡಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯವಾಗಿದೆ. ವೇದಘೋಷಗಳು, ಶಾಸ್ತ್ರೀಯ ಪ್ರಭಾವ ಹಾಗೂ ಜನಪದ ಧಾಟಿಯನ್ನು ಆಧುನಿಕ ಸಂಗೀತ ಉಪಕರಣಗಳೊಂದಿಗೆ ಇಲ್ಲಿ ಬೆಸೆಯಲಾಗಿದೆ.

    ಉಮೇಶ್ ವಾರ್ಭುವನ್, ಪ್ರದ್ಯುಮ್ನ ಸೊರಬ ಸೇರಿದಂತೆ 15ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರು ಹಾಗೂ ವಾದ್ಯವೃಂದದ ಜೊತೆಗೆ 8 ಮಂದಿಯ ಗಾಯಕ ತಂಡವು ಈ ಸಂಜೆಯ ಕಾರ್ಯಕ್ರಮಕ್ಕೆ ಕಳೆ ಕಟ್ಟಲಿದೆ. ವಿಶೇಷವಾಗಿ ಖ್ಯಾತ ಕಲಾವಿದರಾದ ಪ್ರವೀಣ್ ಡಿ. ರಾವ್ ಹಾಗೂ ಮಂಜುನಾಥ್ ಸತ್ಯಶೀಲ್ ಭಾಗವಹಿಸಲಿದ್ದಾರೆ. ಮನಸ್ಸಿಗೆ ನೆಮ್ಮದಿ ಹಾಗೂ ಹೊಸ ಚೈತನ್ಯ ತುಂಬುವ ಈ ಕಲಾ ಸಂಗಮವು, ಪ್ರೇಕ್ಷಕರ ಕಣ್ಮನ ಸೆಳೆಯುವ ಜೊತೆಗೆ ಒಂದು ವಿಶಿಷ್ಟ ಆಧ್ಯಾತ್ಮಿಕ ಅನುಭವವನ್ನು ಉಣಬಡಿಸಲಿದೆ.

    ಏನಿದು ಪರಂಪರಾ?
    “ಪರಮ್ ಕಲ್ಚರ್” ಪ್ರಸ್ತುತಪಡಿಸುವ ‘ಪರಂಪರಾ’ ಸರಣಿ ಬಹು ಜನಪ್ರಿಯವಾಗಿರುವಂತಹ ಕಾರ್ಯಕ್ರಮವಾಗಿದೆ. ಈಗಾಗಲೇ ನಡೆದಿರುವ ಪ್ರತಿಯೊಂದರ ವಿಷಯವಸ್ತುವೂ ವಿಭಿನ್ನವಾಗಿದ್ದು, ಪ್ರೇಕ್ಷಕರಿಂದ ಹಾಗೂ ಕಲಾವಿದರಿಂದ ಪ್ರಶಂಸೆಗೊಳಪಟ್ಟಿದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಸೇರಿ ಭರತನಾಟ್ಯ, ಚಿತ್ರಕಲಾ ಪ್ರದರ್ಶನ ಇವೆಲ್ಲ ಕಾರ್ಯಕ್ರಮಗಳ ಜೊತೆಗೆ, ‘ವೀರ ಸಂನ್ಯಾಸಿಯ ಆತ್ಮಗೀತೆ’ ಎಂಬ ಅದ್ಭುತವಾದ ಮಲ್ಟಿಮೀಡಿಯಾ ಪ್ರೊಡಕ್ಷನ್ ಹಾಗೂ ದಾಸವಾಣಿ – ಸಂತವಾಣಿ ಎಂಬ ಸಂಗೀತ ಕಾರ್ಯಾಗಾರವನ್ನೂ ಕೂಡ ಪರಂಪರಾ ಸರಣಿಯಲ್ಲಿ ಪ್ರದರ್ಶಿಸಲ್ಪಟ್ಟಿದೆ.

  • ಮೆಡಿಕವರ್ ಆಸ್ಪತ್ರೆಯಿಂದ ಎಲ್ಲಾ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಉಚಿತ ಎರಡನೇ ಅಭಿಪ್ರಾಯ ಅಭಿಯಾನ ಪ್ರಾರಂಭ.

    ಮೆಡಿಕವರ್ ಆಸ್ಪತ್ರೆಯಿಂದ ಎಲ್ಲಾ ಪ್ರಮುಖ ಆರೋಗ್ಯ ಸಮಸ್ಯೆಗಳಿಗೆ ಉಚಿತ ಎರಡನೇ ಅಭಿಪ್ರಾಯ ಅಭಿಯಾನ ಪ್ರಾರಂಭ.

    ವೈಟ್ ಫೀಲ್ಡ್: ಇಂದಿನ ಜೀವನಶೈಲಿ ಮತ್ತು ಅತಿಯಾದ ಮಾನಸಿಕ ಒತ್ತಡದ ಇಂದಿನ ದಿನಗಳಲ್ಲಿ, ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅನೇಕ ಬಾರಿ ಆತುರದಲ್ಲಿ ಅಥವಾ ಗೊಂದಲದಲ್ಲಿ ತೆಗೆದುಕೊಳ್ಳಲಾಗುತ್ತದೆ. ಈ ಗಂಭೀರ ಅಂಶವನ್ನು ಪರಿಗಣಿಸಿ, ಬೆಂಗಳೂರಿನ ವೈಟ್‌ಫೀಲ್ಡ್ ರಸ್ತೆಯಲ್ಲಿರುವ ಮೆಡಿಕವರ್ ಆಸ್ಪತ್ರೆಯು ‘ಉಚಿತ ಎರಡನೇ ಅಭಿಪ್ರಾಯ’ (Free Second Opinion) ಪದ್ದತಿಯನ್ನ ಪ್ರಾರಂಭಿಸಿದೆ.

    ಇದರ ವಿಶೇಷತೆ ಏನೆಂದರೆ, ಈ ಸೌಲಭ್ಯವು ಕೇವಲ ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಸೀಮಿತವಾಗಿರದೆ, ಎಲ್ಲಾ ರೀತಿಯ ವೈದ್ಯಕೀಯ ಪರಿಸ್ಥಿತಿಗಳಿಗೂ ಅನ್ವಯಿಸುತ್ತದೆ.

    ಹೃದ್ರೋಗ (Cardiology), ನರರೋಗ (Neurology), ಮೂಳೆಚಿಕಿತ್ಸೆ (Orthopaedics), ದೀರ್ಘಕಾಲದ ಕಾಯಿಲೆಗಳು ಮತ್ತು ತಡೆಗಟ್ಟುವ ಆರೈಕೆ ಸೇರಿದಂತೆ ವಿವಿಧ ವೈದ್ಯಕೀಯ ಸಮಸ್ಯೆಗಳ ಬಗ್ಗೆ ರೋಗಿಗಳು ಮರುಚಿಂತನೆ ನಡೆಸಿ, ಆತ್ಮವಿಶ್ವಾಸದಿಂದ ಸರಿಯಾದ ಚಿಕಿತ್ಸಾ ಕ್ರಮವನ್ನು ಆಯ್ಕೆ ಮಾಡಿಕೊಳ್ಳಲು ಈ ಅಭಿಯಾನವು ಸಹಕಾರಿಯಾಗಲಿದೆ.

    RJ ರಾಪಿಡ್ ರಶ್ಮಿ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ವೇಗದ ಜೀವನ ಶೈಲಿಯಲ್ಲಿ ಜಾಗೃತಿ ಮತ್ತು ಸಕಾಲಿಕ ವೈದ್ಯಕೀಯ ಮಾರ್ಗದರ್ಶನ ಎಷ್ಟು ಮುಖ್ಯ ಎಂಬುದನ್ನು ಒತ್ತಿ ಹೇಳಿದರು.

    ಇತ್ತೀಚಿನ ದಿನಗಳಲ್ಲಿ ಎರಡನೇ ಅಭಿಪ್ರಾಯ ಪಡೆಯುವುದು ಸಾಮಾನ್ಯವಾಗಿದೆ. ಕ್ಯಾನ್ಸರ್‌ನಂತಹ ಕಾಯಿಲೆ ಅಥವಾ ಹೆಚ್ಚಿನ ವೆಚ್ಚದ ಅಗತ್ಯವಿರುವ ಯಾವುದೇ ದೀರ್ಘಕಾಲದ ಕಾಯಿಲೆ ಇರುವುದು ಪತ್ತೆಯಾದಾಗ ಅಥವಾ ಯೋಜಿತ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದಾಗ, ತಜ್ಞರಿಂದ ಮತ್ತೊಂದು ಪಕ್ಷಪಾತವಿಲ್ಲದ ಅಭಿಪ್ರಾಯವನ್ನು ಪಡೆಯುವುದು ಯಾವಾಗಲೂ ಒಳ್ಳೆಯದು ಎಂದರು.

    ಮೆಡಿಕವರ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾದ ಸಂಜಯ್ ಪ್ರಸಾದ್ ಹೆಗ್ಡೆ ಮಾತನಾಡಿ, “ಬೆಂಗಳೂರಿನಂತಹ ಮಹಾನಗರಗಳಲ್ಲಿ, ವಿಶೇಷವಾಗಿ ತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ಅತಿಯಾದ ಅಂತರ್ಜಾಲ ಸಂಶೋಧನೆಯಿಂದಾಗಿ ಗೊಂದಲಕ್ಕೊಳಗಾಗುತ್ತಾರೆ ಅಥವಾ ಚಿಕಿತ್ಸೆಯ ನಿರ್ಧಾರಗಳನ್ನು ವಿಳಂಬ ಮಾಡುತ್ತಾರೆ. ತಜ್ಞರಿಂದ ಪಡೆಯುವ ಎರಡನೇ ಅಭಿಪ್ರಾಯವು ವೈದ್ಯಕೀಯ ಸ್ಪಷ್ಟತೆಯನ್ನು ನೀಡುತ್ತದೆ, ರೋಗಿಯ ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ಸುರಕ್ಷಿತ ಹಾಗೂ ಕಡಿಮೆ ಆಕ್ರಮಣಕಾರಿ (Minimally Invasive) ಚಿಕಿತ್ಸಾ ಮಾರ್ಗಗಳನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ,” ಎಂದು ತಿಳಿಸಿದರು.

    ಅಧ್ಯಯನ ಇಲ್ಲದವರಿಂದ ಅನಗತ್ಯ ಮಾಹಿತಿ (Information Overload), ಅಂತರ್ಜಾಲದ ಅರೆಬರೆ ಮಾಹಿತಿ ಮತ್ತು ನೈಜ ವೈದ್ಯಕೀಯ ಸಲಹೆಯ ನಡುವಿನ ಅಂತರವನ್ನು ಕಡಿಮೆ ಮಾಡುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ರೋಗಿಗಳು ವಿವಿಧ ವಿಭಾಗಗಳ ಅನುಭವಿ ತಜ್ಞರನ್ನು ಸಂಪರ್ಕಿಸಿ, ತಮ್ಮ ರೋಗನಿರ್ಣಯ ಮತ್ತು ಲಭ್ಯವಿರುವ ಚಿಕಿತ್ಸಾ ಆಯ್ಕೆಗಳ ಬಗ್ಗೆ ಸಮಗ್ರ ತಿಳುವಳಿಕೆಯನ್ನು ಪಡೆಯಬಹುದು.

    ಕಾರ್ಯಕ್ರಮದಲ್ಲಿ ಮೆಡಿಕವರ್ ಆಸ್ಪತ್ರೆಯ ಪ್ರದೇಶಿಕೆ ನಿರ್ದೇಶಕರಾದ ಸಿದ್ಧ ರೆಡ್ಡಿ. ಕೆ, ಕೇಂದ್ರದ ಮುಖ್ಯಸ್ಥ ಕ್ರಿಷ್ಣ ಮೂರ್ತಿ. ಜಿ, ಮೂತ್ರಶಾಸ್ತ್ರಜ್ಞ ಡಾಕ್ಟರ್ ದಿಲೀಪ್ ಜೊತೆಗೆ ವಿದ್ಯಾರ ಬಳಗವು ಉಪಸ್ಥಿತರಿದ್ದರು.

    ಪ್ರಮುಖ ಮಾಹಿತಿ:

    ಈ ಸೌಲಭ್ಯವು ಮೇ 31, 2026 ರವರೆಗೆ ಲಭ್ಯವಿರುತ್ತದೆ.
    ಉದ್ದೇಶ: ಯಾವುದೇ ಒತ್ತಡ ಅಥವಾ ಅನಿಶ್ಚಿತತೆಯಿಲ್ಲದೆ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸುವುದು.

    ಮೆಡಿಕವರ್ ಆಸ್ಪತ್ರೆಯು ರೋಗಿ-ಕೇಂದ್ರಿತ ಆರೈಕೆಗೆ (Patient-centric care) ಬದ್ಧವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಚಿಕಿತ್ಸೆಯನ್ನು ಆರಂಭಿಸುವ ಮೊದಲು ಸಂಪೂರ್ಣ ಸ್ಪಷ್ಟತೆ ಮತ್ತು ವಿಶ್ವಾಸವನ್ನು ಹೊಂದಿರುವುದನ್ನು ಖಚಿತಪಡಿಸುತ್ತದೆ.

    ಅಪಾಯಿಂಟ್‌ಮೆಂಟ್‌ಗಳಿಗಾಗಿ ಸಂಪರ್ಕಿಸಿ: 040-6833 4455

  • ಮಹದೇವಪುರ ಗ್ರಾಮಾಂತರ ಮಂಡಲ ವತಿಯಿಂದ ಅಂಬೇಡ್ಕ‌ರ್ ಅವರ 135 ನೇ ಜಯಂತಿ ಆಚರಣೆ.

    ಮಹದೇವಪುರ ಗ್ರಾಮಾಂತರ ಮಂಡಲ ವತಿಯಿಂದ ಅಂಬೇಡ್ಕ‌ರ್ ಅವರ 135 ನೇ ಜಯಂತಿ ಆಚರಣೆ.

    ಮಹದೇವಪುರ: ಅಸ್ಪೃಶ್ಯತೆ, ಅಸಮಾನತೆ, ಶೋಷಣೆಗಳನ್ನು ಹೋಗಲಾಡಿಸಿ ಸಮ ಸಮಾಜ ನಿರ್ಮಾಣಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನಿರಂತರವಾಗಿ ಹೋರಾಟ ನಡೆಸಿದ ಮಹಾನ್ ಮಾನವತಾವಾದಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಗ್ರಾಮಾಂತರ ಮಂಡಲ ವತಿಯಿಂದ ನಡೆದ ಅಂಬೇಡ್ಕ‌ರ್ ಅವರ 135 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಸಂವಿಧಾನವೆಂಬ ಶ್ರೇಷ್ಠ ಗ್ರಂಥವನ್ನು ನೀಡಿದ ಅಂಬೇಡ್ಕರ್ ಅವರ ಜೀವನವೇ ನಮಗೆಲ್ಲರಿಗೂ ಆದರ್ಶ ಮತ್ತು ಮಾದರಿ. ಅಂಬೇಡ್ಕರ್ ಕಂಡ ಕನಸು ಸಮಾನ ಸಮಾಜ ನಿರ್ಮಾಣದತ್ತ ನಾವೆಲ್ಲರೂ ಕೈಜೋಡಿಸೋಣ ಎಂದರು.

    ಬಾಲ್ಯದಲ್ಲಿಯೇ ಶೋಷಣೆ, ಅಸ್ಪೃಶ್ಯತೆ, ಅವಮಾನ, ಹಿಂಸೆ, ಸಂಕಟಗಳನ್ನು ಅನುಭವಿಸಿದ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣದಿಂದ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯ ಎನ್ನುವುದನ್ನು ಮನಗಂಡು ಪ್ರತಿಯೊಬ್ಬರಿಗೂ ಸಂವಿಧಾನದಲ್ಲಿ ಶಿಕ್ಷಣವನ್ನು ಒಂದು ಹಕ್ಕನ್ನಾಗಿ ನೀಡಿದ್ದಾರೆಂದು ತಿಳಿಸಿದರು.

    ರಾಷ್ಟ್ರ ಕಂಡ ಶ್ರೇಷ್ಠ ವ್ಯಕ್ತಿತ್ವ ಅಂಬೇಡ್ಕರ್ ಅವರ ಹಾಗೂ ಬಾಬು ಜಗಜೀವನ್ ರಾವ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದೇವೆ. ಬಾಬಾ ಸಾಹೇಬರು ಸಮಾಜದಲ್ಲಿ ಸಮಾನತೆಗಾಗಿ ಹೋರಾಡಿದ ಧೀಮಂತ ನಾಯಕರು ಎಂದರು.

    ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೂಡಿ ಪಿಳ್ಳಪ್ಪ, ಮಾಜಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್, ಎಸ್ ಸಿ ಮೋರ್ಚಾ ಅಧ್ಯಕ್ಷ ಆದೂರು ಮುನಿರಾಜು, ಮುಖಂಡರಾದ ಮಾರಪ್ಪ, ಜ್ಯೋತಿಪುರ ವೇಣು, ಕಣ್ಣೂರು ಅಶೋಕ್, ಎಲ್.ರಾಜೇಶ್, ಬಿದರಹಳ್ಳಿ ರಾಜೇಶ್, ಕೆ.ವಿ. ನಾಗರಾಜ್, ಬೈರತಿ ರಮೇಶ್, ಕೆಂಪೇಗೌಡ, ಕೆ.ಡಿ.ವೆಂಕಟೇಶ್ ಮತ್ತಿತರರಿದ್ದರು.

  • 14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾಯಿ ಆತ್ಮಹತ್ಯೆಗೆ ಶರಣು!

    14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾಯಿ ಆತ್ಮಹತ್ಯೆಗೆ ಶರಣು!

    14 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದು, ತಾಯಿ ಆತ್ಮಹತ್ಯೆಗೆ ಶರಣು!

    ವೈಟ್ ಫೀಲ್ಡ್: ಮಹಿಳೆಯೊಬ್ಬರು ತನ್ನ 14 ವರ್ಷದ ಮುದ್ದಾದ ಮಗಳನ್ನು ಉಸಿರು ಕಟ್ಟಿ ಕೊಲೆ ಮಾಡಿ, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿಯಲ್ಲಿ ನಡೆದಿದೆ.

    ಬೆಂಗಳೂರಿನ ವೈಟ್ ಫೀಲ್ಡ್ ಬಳಿಯ ಇಮ್ಮಡಿಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. 14 ವರ್ಷದ ಮಗಳು ಕಾರುಣ್ಯಳನ್ನು ತಾಯಿ ಸುವರ್ಣ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಗೆ ತಾಯಿ-ಮಗಳ ಮೃತದೇಹ ರವಾನಿಸಲಾಗಿದೆ.

    ಮೃತ ಸುವರ್ಣ ಗಂಡ ಚಂದ್ರಶೇಖರ್ಗೆ ಇತ್ತೀಚೆಗೆ ಹಾರ್ಟ್ ಟ್ರಾನ್ಸ್‌ಪ್ಲಾಂಟ್ ಆಗಿತ್ತು, ಖರ್ಚು ವೆಚ್ಚಕ್ಕೆ ಹಣಕಾಸು ಕೊರತೆ ಉಂಟಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಮಾನಸಿಕವಾಗಿ ಕುಗ್ಗಿದ್ದ ಸುವರ್ಣ ಮಗಳನ್ನು ಕೊಂದು ನೇಣಿಗೆ ಶರಣಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಘಟನೆ ಬಗ್ಗೆ ಮೃತ ಸುವರ್ಣ ಅಕ್ಕ ಉಷಾ ಅವರು ಈ ಬಗ್ಗೆ ಮಾತನಾಡಿ, ಹಣಕಾಸು ವಿಚಾರಕ್ಕೆ ಸುವರ್ಣ ಬೇಜಾರಾಗಿ ಖಿನ್ನತೆಗೆ ಒಳಗಾಗಿದ್ದಳು, ನಮ್ಮ ಮನೆ ಅತ್ತಿಬೆಲೆಗೆ ಫ್ರೀ ಬಸ್ಸ್ ಟಿಕೆಟ್‌ನಲ್ಲಿ ಬರುತ್ತಿದ್ದಳು. ಹಣಕಾಸು ಬಗ್ಗೆ ನನಗೆ ಆಗಾಗ್ಗೆ ಹೇಳುತ್ತಿದ್ದಳು, ಇದೇ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಮಗಳನ್ನು ಸಾಯಿಸಿದ್ದು ತುಂಬಾ ಬೇಜಾರಾಗಿದೆ. ಇದರ ಬಗ್ಗೆ ತನಿಖೆ ಆಗಬೇಕು ಎಂದು ಮೃತ ಸುವರ್ಣ ಅಕ್ಕ ಉಷಾ ಆಗ್ರಹಿಸಿದ್ದಾರೆ.

  • ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಇಬ್ಬರು ಮಹಿಳೆಯರು.!

    ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿ ಪ್ರಾಣಬಿಟ್ಟ ಇಬ್ಬರು ಮಹಿಳೆಯರು.!

    ಕೋಲಾರ: ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಕೋಲಾರ ಹೊರವಲಯದ ಅರಹಳ್ಳಿ ಕೆರೆಯಲ್ಲಿ ನಡೆದಿದೆ.

    ಮೃತರನ್ನು ಕೋಲಾರ ನಗರದ ನಿಸಾರ್ ನಗರದ ಮೊಹಮದಿ (25) ಹಾಗೂ ಬೆಂಗಳೂರಿನ ಸಲ್ಮಾ (26) ಎಂದು ಗುರುತಿಸಲಾಗಿದೆ. ಮಕ್ಕಳೊಂದಿಗೆ ಕೆರೆಗೆ ಬಟ್ಟೆ ತೊಳೆಯಲು ಮಹಿಳೆಯರು ಬಂದಿದ್ದರು. ಈ ವೇಳೆ ಆಟವಾಡುತ್ತಾ ಮಕ್ಕಳು ನೀರಿನಲ್ಲಿ ಮುಳುಗುವ ಹಂತದಲ್ಲಿದ್ದರು. ತಕ್ಷಣ ನೀರಿಗಿಳಿದ ಮೊಹಮದಿ ಮಕ್ಕಳನ್ನು ರಕ್ಷಿಸಿದ್ದಾಳೆ.

    ಮಕ್ಕಳನ್ನು ರಕ್ಷಿಸಿದ ಬಳಿಕ ಆಕೆ ನೀರಿನಲ್ಲಿ ಮುಳುಗಲು ಆರಂಭಿಸಿದ್ದಾಳೆ. ಆಗ ರಕ್ಷಣೆಗೆ ತೆರಳಿದ ಸಲ್ಮಾ ಸಹ ನೀರಿನಲ್ಲಿ ಮುಳುಗಿದ್ದಾಳೆ. ಇದನ್ನು ಕಂಡ ಸ್ಥಳೀಯರು ರಕ್ಷಣೆಗೆ ಬರುವುದರೊಳಗೆ ಇಬ್ಬರು ಜಲಸಮಾಧಿಯಾಗಿದ್ದಾರೆ.

    ಮೊಹಮದಿ ಮನೆಯಲ್ಲಿ ಮದುವೆ ಇದ್ದ ಕಾರಣ ಸಲ್ಮಾ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

    ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ