ಪೊಲೀಸ್ ವಸತಿ ಗೃಹದಲ್ಲಿ ಯುವತಿ ಆತ್ಮಹತ್ಯೆ: ಪತಿ ಹಾಗೂ ಕುಟುಂಬದ ವಿರುದ್ಧ ದೂರು!

ಕೆ.ಆರ್.ಪುರ ಪೊಲೀಸ್ ವಸತಿ ಗೃಹದಲ್ಲಿ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೆಚ್‌ಎಎಲ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ರಾಜೇಶ್ ಆರಾಧ್ಯ ಅವರ ಪತ್ನಿ ಲಕ್ಷ್ಮೀಪ್ರಿಯಾ (27) ಮೃತ ಮಹಿಳೆ.

ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರಾಜೇಶ್ ಆರಾಧ್ಯ ಮತ್ತು ಲಕ್ಷ್ಮೀಪ್ರಿಯಾ ಅವರಿಗೆ 2023ರಲ್ಲಿ ಮೈಸೂರಿನಲ್ಲಿ ವಿವಾಹವಾಗಿತ್ತು. ಈ ದಂಪತಿಗೆ ಸದ್ಯ 8 ತಿಂಗಳ ಹಸುಗೂಸಿದೆ.

ಕೆ.ಆರ್.ಪುರಂನಲ್ಲಿರುವ ಪೊಲೀಸ್ ಕ್ವಾಟ್ರಸ್ನಲ್ಲಿ ಈ ಕುಟುಂಬ ವಾಸವಾಗಿತ್ತು. ನಿನ್ನೆ (ಮೇ 22) ಬೆಳಿಗ್ಗೆ ದಂಪತಿ ನಡುವೆ ಕೌಟುಂಬಿಕ ವಿಷಯಕ್ಕೆ ದೊಡ್ಡ ಜಗಳ ಉಂಟಾಗಿದೆ. “ನನ್ನ ತಂದೆ-ತಾಯಿಗೆ ನೀನು ಸರಿಯಾಗಿ ಮರ್ಯಾದೆ ಕೊಡುವುದಿಲ್ಲ” ಎಂದು ಪತಿ ರಾಜೇಶ್ ಪತ್ನಿಗೆ ಬೈದಿದ್ದರು. ಇದೇ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದ ಲಕ್ಷ್ಮೀಪ್ರಿಯಾ, ನಿನ್ನೆ ರಾತ್ರಿ ರಾಜೇಶ್ ರಾತ್ರಿ ಕೆಲಸಕ್ಕೆ ತೆರಳಿದ್ದಾಗ ಇತ್ತ ಕ್ವಾಟ್ರಸ್ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.

ಇನ್ನು ಘಟನೆ ನಡೆದ ಬೆನ್ನಲ್ಲೇ ಮೃತ ಲಕ್ಷ್ಮೀಪ್ರಿಯಾ ಪೋಷಕರು, ರಾಜೇಶ್ ಮತ್ತು ಅವರ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾದಾಗಿನಿಂದಲೂ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬ ಸದಸ್ಯರು ಲಕ್ಷ್ಮೀಪ್ರಿಯಾಗೆ ವರದಕ್ಷಿಣೆಗಾಗಿ ಮಾನಸಿಕ ಹಾಗೂ ದೈಹಿಕವಾಗಿ ತೀವ್ರ ಹಿಂಸೆ ನೀಡುತ್ತಿದ್ದರು. ನಿನ್ನೆ ನಡೆದ ಜಗಳ ಹಾಗೂ ಈ ಹಿಂದಿನ ಕಿರುಕುಳವೇ ಮಗಳ ಆತ್ಮಹತ್ಯೆಗೆ ನೇರ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಮೃತ ಲಕ್ಷ್ಮೀಪ್ರಿಯಾ ಪೋಷಕರು ನೀಡಿದ ದೂರಿನ ಅನ್ವಯ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪತಿ ರಾಜೇಶ್ ಆರಾಧ್ಯ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಸದ್ಯ ತನಿಖೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *